ಮೊದಮೊದಲೆಲ್ಲ ಈ ಮೋಡಗಳೊಳಗೆ
ಬರೀ ಕಾವಿಧರಿಸಿ ಕಮಂಡಲ ಹಿಡಿದು
ಋಷಿ ಮುನಿಗಳ ಸಮೂಹವೇ ಬಂದಂತಾಗಿ
ಭೂ ಲೋಕದವರಿಗೆ ನೀರು ಸಿಂಪಡಿಸಿ
ಸತ್ತವರನು ಉಳಿಸಿ ಆಶೀರ್ವದಿಸುವವರು ಕಾಣಿಸುತ್ತಿದ್ದರು-
ನಂತರ ನಂತರ ಬುದ್ಧ, ಗಾಂಧಿ, ಹೀಗೆ ಹೀಗೆ-
ತತ್ವ ಚಿಂತನೆಗಳ ಹೊತ್ತಿಗೆಗಳ ಹಿಡಿದು
ಸಮಾಜೋದ್ಧಾರ ಮಾನವೀಯತೆಯ ಬೀಜಗಳ
ಮಂತ್ರ ಉಚ್ಚರಿಸುತ, ಎಚ್ಚರಿಸುತ
ಬರುವುದಾ ನೋಡತೊಡಗಿದೆ.
ಈಗೀಗ ಈ ಮೋಡಗಳೊಳಗೆ
ಕೋಟು, ಟೈ ಧರಿಸಿದ ಜಾಗತೀಕರಣದ ಜನ
ಕೈಯಲಿ ನೊರೆ ತುಂಬಿದ ಗ್ಲಾಸು ಹಿಡಿದು
ಹೆಣ್ಣುಗಳ ಸೊಂಟ ಬಳಸಿ ಆಯುಧಗಳ ಮಾರಾಟ ಮಾಡುತ
ನಾಟಕೀಯತೆಯ ಮೋಡಿ ಬೆರೆಸಿ
ಜಗತ್ತನ್ನೇ ಕಬಳಿಸಿ ತೀರುವೆನೆನ್ನುವ
ಹುನ್ನಾರದ ಹುಡಿ ಸಿಂಪಡಿಸುವುದ ಕಾಣುತಿರುವೆ.
ಕಮಂಡಲದ ಪವಿತ್ರ ಪ್ರೋಕ್ಷಣೆಗೂ-
ನೊರೆತುಂಬಿದ ಹಳದಿ ಗ್ಲಾಸಿಗೂ-
ಚಿಂತನೆಗಳ ಹೊತ್ತಿಗೆಗೂ-
ಮೋಡಗಳು ಒಮ್ಮೊಮ್ಮೆ ಬೆದರಿ
ಮಿಂಚು, ಗುಡುಗು, ಸಿಡಿಲುಗಳಾಗಿ ಏನೇನೋ ಮಾತನಾಡುತ್ತವೆ.
*****
Latest posts by ಲತಾ ಗುತ್ತಿ (see all)
- ತಲೆದಿಂಬು - December 28, 2020
- ಟಚ್ - December 21, 2020
- ದೇವರಾಣೆ ಮಾಡಿ? - December 14, 2020