ಲಿಂಗಮ್ಮನ ವಚನಗಳು – ೧೨

ಬ್ರಹ್ಮಾಂಡದಲ್ಲಿ ಹುಟ್ಟಿದವರೆಲ್ಲ
ಭವಬಂಧನಕ್ಕೊಳಗಾದರಯ್ಯ.
ನಿಮ್ಮ ನಂಬಿದ ಸದ್ಭಕ್ತಮಹೇಶ್ವರರು
ಭವಬಂಧನವನೆ ಹಿಂಗಿ
ಮರಣ ಬಾಧೆಯನೆ ಗೆದ್ದು,
ಕರಣಿಂಗಳ ಸುಟ್ಟು,
ಅರಿವ ಮನವ ನಿಲಿಸಿ,
ಆನಲ ಪವನ ಗುಣವರತು,
ಜನನಮರಣ ವಿರಹಿತವಾದ
ಶರಣರ ಭವಭಾರಿಗಳೆತ್ತ ಬಲ್ಲರು
ನಿಮ್ಮ ನೆಲೆಯ ಅಪ್ಪಣಪ್ರಿಯ ಚನ್ನಬಸವಣ್ಣಾ.
*****

ಸಂಗ್ರಹ: ರಾ|| ಸಾ|| ಫ. ಗು. ಹಳಕಟ್ಟಿ

ಕೀಲಿಕರಣ: ಕಿಶೋರ್‍ ಚಂದ್ರ

ಫ್ಲುಟೋಯ್

ಹರೆಯುವ ನೀರೊಳಗೆ ಬಣ್ಣದ ನೆರಳು
‘ಫ್ಲುಟೋಯ್‌ ಚಿಗುರುಗಳು’
ಎಸಳು ಎಳೆಯಾಗಿ, ಎಲೆಗಳಾಗಿ
ಹೂವಾಗಿ ಪರಿಮಳ ಕುಡಿದು
ಮತ್ತೇರಿ ತೂರಿ ಬಂದು ಚುಂಬಿಸಿ
ಪುಳಕಿಸಿ ಮುದಕೊಟ್ಟು
ಭಾವನೆಗಳ ಗರಿಗೆದರಿಸಿ ತೇಲಿಸುತಿವೆ.

ತಿಳಿ ನೀಲಿ ಹೊಳೆ ತಟಗಳಲಿ
ಪರ್ವತ ಶ್ರೇಣಿಗಳಲಿ
ಇಡಿ ದಿನವೂ ಹೊಚ್ಚ ಹೊಸತನ
ತುಷಾರ ಸಿಂಚನದಡಿಯಲಿ
ಪ್ರಶಾಂತ ಹಚ್ಚ ಹಸಿರು
ಬಣ್ಣದೊಳಗೆ ಮುಳಿಗೆದ್ದು
ಸಿಂಪಡಿಸುವ ಚಿಟ್ಟೆಗಳು,
ಕಾಮನ ಬಿಲ್ಲಿನೊಂದಿಗೆ
ಹೂವು ಗಿಡಬಳ್ಳಿಗಳ
ಬಣ್ಣಗಳ ಸ್ಪರ್ಧೆ ಚರ್ಚೆ
ಚಿಲಿಪಿಲಿಸುವ
ಅನಾಮಿಕ ಹಕ್ಕಿಗಳು
ಕುಶಲೋಪಚರಿಸುತ್ತಿವೆ.

ತುಷಾರ ಸಿಂಚನದೊಳಗೆ
ಹಸಿರಾಗಿ ಎಸಳಾಗಿ ಹೊರಬರುತ್ತಿದ್ದಂತೆಯೇ
ಎಳೆ ಬಿಸಿಲಿಗೆ ನಾಚಿ
ಕೆನ್ನೆ ಕೆಂಪೇರಿಸಿಕೊಂಡರೆ
ಸಂಜೆ ನವಿಲಾಗಿ ನರ್ತಿಸುವ
ಮೃದು ಚೆಲುವಿನ
ಮೋಹಕ ಬಣ್ಣದ
ಅನಂತ ರೂಪಧಾರೆ ‘ಫ್ಲುಟೋಯ್‌’ ಕಂಡು
ಭಾವನೆಗಳು ಪ್ರತಿಫಲಿಸುವಾಗ
ಕಣ್ಣುಗಳಿಂದಲೇ ಇಡಿಯಾದ
ನಿಸರ್ಗಕ್ಕೆ ಮುತ್ತಿಸಿ
ಮಳೆಬಿಲ್ಲಿನಡೆಗೆ ಹಾರುತ್ತಿದೆ.
(ಯೂರೋಪ ತುಂಬೆಲ್ಲ ಈ ‘ಫ್ಲುಟೋಯ್‌’ ಗಿಡಗಳು ಅವುಗಳ ವರ್ಣರಂಜಿತ ಎಲೆಗಳು ಅರಸಿಕರನ್ನು ಬಡಿದೆಬ್ಬಿಸುವಂತಿವೆ)
*****

ಕೀಲಿಕರಣ: ಎಮ್ ಎನ್ ಎಸ್ ರಾವ್

ತಾರೆ-ಗರಿಕೆ

ತಾರೆ ಬೆಳಗುತಲಿತ್ತು ಆಗಸದಿ ನಗುನಗುತ
ಹುಲ್ಲು ಗರಿಕೆಯದೊಂದು ನೆಲದಿ ನಿಂತು
ಮೇಲೆ ನೋಡುತಲವಳ ಬೆಳಕು ಬಿನ್ನಾಣಗಳ
ಕಂಡು ಬೆರಗಾಗುತಲಿ ಕರೆಯಿತಿಂತು!

“ಬಾರೆನ್ನ ಮನದನ್ನೆ-ತಾರಕೆಯೆ ಬಾರೆನ್ನ
ಮನದ ಚಿಂತೆಯನಳಿಸಿ ಶಾಂತಿ ನೀಡು.”
ಗರಿಕೆ ವಿರಹದಿ ಸೊರಗಿ ಬಾರೆಂದು ಕರೆಯುತಿರೆ
ತಾರೆ ಗರ್ವದಿ ಕುಳಿತು ನಗುತಲಿತ್ತು!

“ನಾನು ಆಗಸದಾಕೆ, ನೀನು ಭೂಮಿಯ ಕ್ರಿಮಿಯು
ನನ್ನ ಉನ್ನತ ದೇಶ ತೊರೆದು ಬರಲೆ!
ಹುಚ್ಚ!  ನನ್ನೊಲವನ್ನು ಬೇಡುವೊಡೆ ನೀ ಮೂರ್ಖ!
ನಿನಗಾಗಿ ಸೌಂದರ್ಯ ಉರುಳಿಸುವುದೆ?”

ಎನುತ ಯೌವನದಲ್ಲಿ ತಾರೆ ಗರ್ವದ ಭರದಿ
ಹುಲ್ಲುಗರಿಕೆಯ ಒಲವ ಹಂಗಿಸಿರಲು
ಗರಿಕೆ ತನ್ನೆದೆಯೊಲವು ಬಾಡಿಹೋದುದ ಕಂಡು
ವಿರಹದಲಿ ಒಲವಿನೊಲು ಬಾಡಿಹೋಯ್ತು!
*****

ಕೀಲಿಕರಣ: ಕಿಶೋರ್‍ ಚಂದ್ರ

ಹೊಸತು

ಪ್ರಿಯ ಸಖಿ,

ಸದಾ ಕಾಲ ಹೊಸ ಹೊಸದಕ್ಕಾಗಿ ತುಡಿಯುವುದು ಮನುಷ್ಯನ ಸಹಜ ಗುಣ. ‘ಬದಲಾವಣೆ ಬಾಳಿನೊಗ್ಗರಣೆ’ ಎನ್ನುತ್ತದೆ ನಮ್ಮ ನಾಣ್ಣುಡಿ. ಕವಿಗಳೂ ಇದಕ್ಕೆ ಹೊರತಲ್ಲ. ಹಿಂದಿನ ಕವಿಗಳು ಹೇಳಿಬಿಟ್ಟಿದ್ದನ್ನೇ ಮತ್ತೆ ಮತ್ತೆ ಹೇಳುತ್ತಿದ್ದೇನೆ ಎನ್ನಿಸಿದಾಗ ಹೊಸತನಕ್ಕಾಗಿ ಹುಡುಕಾಡುತ್ತಾ ತಳಮಳಿಸುವ ಕವಿಯ ಸ್ಥಿತಿ ಹೇಗಿರುತ್ತದೆ? ಕವಿ ಗೋಪಾಲಕೃಷ್ಣ ಅಡಿಗರು ತಮ್ಮ ‘ನನ್ನ ನುಡಿ’ ಎಂಬ ಕವನದಲ್ಲಿ ಹೀಗೆ ಹೇಳುತ್ತಾರೆ.
ಚಂದ್ರಸೂರ್ಯರ ನೆರವಿನಿಂದೇ ಬೆಳಗುವಳೀ
ವಸುಂಧರೆಗದೆಂದು ಬಹುದೋ ಸ್ವಯಂದೀಪಕತೆ!
ಅವರಿವರ ನುಡಿಗಳನು ಕದ್ದು ಮರುನುಡಿಗೊಡುವ
ದೆಸೆಗಳೇ ನಿಮಗೆಂದು ಬಹುದು ಮೀಸಲು ನಿನದ?
ಭೂಮಿಯ ಅಸ್ತಿತ್ವವಿರುವುದೇ ಚಂದ್ರಸೂರ್ಯರಿಂದ. ಅವರಿಲ್ಲದೇ ಬೆಳಗಬಲ್ಲ ಸ್ವಯಂದೀಪಕತೆ ಭೂಮಿಗೆ ಬರುವುದು ಯಾವಾಗ? ಅವರಿವರು ಉಪಯೋಗಿಸಿ ಬಿಟ್ಟ ಪದಗಳು, ವಸ್ತು, ಶೈಲಿ, ತಂತ್ರಗಳನ್ನೇ ಕದ್ದು ಮತ್ತೆ ತಾನೂ ಅದನ್ನೇ ಹೇಳುವಂತಹಾ ಅವಸ್ಥೆಯಿಂದ ಬಿಡುಗಡೆ ಹೊಂದಿ ತನ್ನದೇ ‘ಸ್ವಂತ’ ಸ್ವರವನ್ನು ಹೊರಡಿಸುವ ಗಳಿಗೆ ಬರುವುದೆಂದು? ಎಂದುಕೊಳ್ಳುತ್ತಾರೆ. ಈ ಸ್ಥಿತಿಯಲ್ಲಿದ್ದು ನೊಂದ ಕವಿ ತಮ್ಮ ಕವನದ ಕೊನೆಯಲ್ಲಿ.
ಅನ್ಯರೊರೆದುದನೆ ಬರೆದುದನೆ ನಾಬರೆಬರೆದು
ಬಿನ್ನಗಾಗಿದೆ ಮನವು; ಬಗೆಯೊಳಗನೇ ತೆರೆದು
ನನ್ನ ನುಡಿಯೊಳೆ ಬಣ್ಣಬಣ್ಣದಲಿ ಬಣ್ಣಿಸುವ
ಪನ್ನತಿಕೆ ಬರುವತನಕ ನನ್ನ ಬಾಳಿದು ನರಕ!
ಎನ್ನುತ್ತಾರೆ. ಬೇರೆಯವರು ಹೇಳಿದ್ದು, ಬರೆದದ್ದೇ ನಾನೂ ಬರೆಬರೆದು ನನ್ನ ಮನಸ್ಸು ಕ್ಷುದ್ರವಾಗಿದೆ. ನನ್ನ ಮನಸ್ಸಿನಾಳಗಳನ್ನು ತೆರೆದು ‘ನನ್ನದೇ ನುಡಿಯಲ್ಲಿ ವಿಭಿನ್ನ ಬಗೆಗಳಲ್ಲಿ ಬಣ್ಣಿಸುವಂತಾ ಎತ್ತರ ದೊರಕುವವರೆಗೆ ನನ್ನ ಬಾಳಿದು ನರಕ! ಎಂದಿದ್ದಾರೆ ಕವಿ.

ಸಖಿ, ಹೊಸತನ್ನು ಹುಡುಕುವುದು, ಹೊಸತನ್ನೇ ಬರೆಯುವುದು ಅದರಲ್ಲಿಯೇ ಸಾಧಿಸುವುಮ, ಹೊಸತನ್ನು ಸಮೂಹ ಒಪ್ಪಿಕೊಳ್ಳುವಂತೆ ಮಾಡುವುಮ ಎಲ್ಲವೂ ಕಷ್ಟವೇ, ಆದರೆ ಹೊಸತಿಗಾಗಿ ಸದಾ ತುಡಿಯುವ ಕವಿಗೆ ಅದಕ್ಕಿಂತಾ ಕಷ್ಟ ಕೊಡುವುದು ಎಂದರೆ ಅವರಿವರು ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುವುದು! ಬರೆಯುವುದು! ಅಲ್ಲವೇ ಸಖಿ?
*****

ಕೀಲಿಕರಣ: ಎಮ್ ಎನ್ ಎಸ್ ರಾವ್

ಸರ್ಕಸ್ ನೋಡ್ಬಂದೆ

Circus
ಅಪ್ಪ ನಿನ್ನೆ ಸರ್ಕಸ್ ತೋರ್ಸೋಕ್
ಕರ್ಕೊಂಡು ಹೋಗಿದ್ರು
ಏನ್ ಮಜಾ! ಟೆಂಟ್ ಭರ್ತಿ
ಜನ ಸೇರಿದ್ರು

ಸರ್ಕಸ್ ಮಾಡೋ ಜನಗಳ್ ಜೊತೆ
ಪ್ರಾಣೀನೂ ಇದ್ವು,
ಮಂಗ ಕುದುರೆ ನಾಯಿ ಕರಡಿ
ಎಲ್ಲಾ ಸೇರಿದ್ವು.

ಚಾರ್ಲಿ ತಲೆಮೇಲ್ ಹತ್ತಿ ಕೋತಿ
ಲಾಗ ಹಾಕ್ಬಿಡ್ತು,
ಅವನ ಕೊಳವಿ ಟೋಪಿ ಎಗರ್‍ಸಿ
ತಾನೇ ಹಾಕ್ಕೊಂಡ್ತು.

ಕುದುರೆ ಬೆನ್ನನ್ ಹತ್ತಿ ನಾಯಿ
ಬೌ ಬೌ ಬೊಗಳ್ತು,
ಕುದುರೆ ಅದನ್ನ ರಿಂಗ್ ಸುತ್ತ
ಎತ್ಕೊಂಡ್ ಓಡ್ಹೋಯ್ತು

ಮಂಗ ಕರಡೀನ್ ಮುದ್ ಮಾಡ್ತು
ಅದರ್ ಬೆನ್ನೀಗ್ ಕೈ ಹಾಕ್ತು
ಕೂದಲು ಕೆದರಿ, ಹೇನು ಹೆಕ್ಕಿ
ಬಾಯಿಗ್ ಹಾಕ್ಕೊಂಡ್ ತಿಂದ್ಬಿಡ್ತು!
*****

ಕೀಲಿಕರಣ: ಶ್ರೀಮತಿ ನವ್ಯಾ ಮೂರ್ತಿ

ದೀಪಾವಳಿ

ನಕ್ಕಂತೆ ಇರುವ ಸಿರಿಮೊಗವೆ! -ಅದಕೆ
ತಕ್ಕಂತೆ ಇರುವ ಕಣ್‌ಬೆಳಕೆ!-
ನಿಂತಂತೆ ಕಾಣುವ ನಿರಾತಂಕ ದೀಪವೆ!
ಅಂತರಂಗದ ಜೀವ ನದಿಯೆ!

ನಕ್ಕಂತೆ ಇರುವ ಸಿರಿಮೊಗವೆ! -ಹೂಗೆನ್ನೆ-
ಗುಕ್ಕುವಂತಿರುವ ನೊರೆಹಾಲೆ!
ತಂತಿಯಲಿ ಇಂಪು ಹರಿದಂತೆ ಈ ಮನೆಯೊಳಗೆ
ಸಂತಸವ ನೆಲೆಯಾದ ಚೆಲುವೆ!

ನಕ್ಕಂತೆ ಇರುವ ಸಿರಿಮೊಗವೆ! -ಚೆಂದುಟಿಗೆ
ಚಿಮ್ಮಿಬಹ ವೀಣೆಯೊಳದನಿಯೆ!
ತುಂಬು ಹೆರಳಲಿ ಹಿಡಿದ ಹಂಬಲದ ಹೊಸ ಹೂವೆ,
ಅಲ್ಲೆಲ್ಲ ನಿನ್ನ ಪರಿಮಳವೆ!

ದೀಪವನು ಹಚ್ಚಿ ಬಹ ಹೆಣ್ಣೆ! -ಆ ಬೆರಳೆ
ಮಿಂಚಿನಲಿ ಬಳ್ಳಿ ಬರೆದಂತೆ.
ಹಣತೆಗಳ ನಡುವೆ ಹೊಂಬೆರಳು ಹರಿದಾಡುತಿದೆ
ವೀಣೆಯಲಿ ಬೆರಳು ಬರುವಂತೆ.

ಎಷ್ಟೊಂದು ತಾರೆಗಳು ಮೇಲೆ, ಗಗನದಲಿ!-
ಎಷ್ಟೊಂದು ಬೆಳಕು ಭೂಮಿಯಲಿ!
ಹಬ್ಬದಲಿ ತೊಳೆದಿಟ್ಟ ಈ ಬದುಕೆ ಬೆಳಕಾಗಿ
ಹೂವಾಯ್ತು ನಿನ್ನ ಪ್ರೇಮದಲಿ.

ಹಣತೆಯನು ಹಚ್ಚಿ ಬಿಡು, ಬಾಗಿಲಲಿ ಇಟ್ಟು ಬಿಡು;
ನಿನ್ನಿಂದ ದೀಪಾವಳಿ.
ಬರುವ ಸಡಗರದಲ್ಲೆ ಮುತ್ತೊಂದ ಕೊಟ್ಟು ಬಿಡು,
ಕೊಡೆನೆಂಡು ನಗುತ ಹೇಳಿ.
*****

ಕೀಲಿಕರಣ: ಎಮ್ ಎನ್ ಎಸ್ ರಾವ್

ಕನ್ನಡದ ಏಳಿಗೆ

ಕನ್ನಡದ ತಿಳಿನೀರ ನಾನೊಂದು ಬೊಗಸೆಯಲಿ
ಕುಡಿದು ನೋಡಿದೆನದರ ಸವಿಯನ್ನು ನಾನೊ;
ಕುಡಿಕುಡಿದು ಮುದವಾಂತು ನಲ್ಗಬ್ಬ ಸಾರವನು
ಬಾಯ್ದುದಿಯೊಳನವರತ ಇರಿಸಲೆಳಸಿದೆನೊ!

ಎಷ್ಟು ತತ್ವದ ಗೀತ?  ಎಷ್ಟು ಮೋಹದ ಮಾತು?
ವಚನರಾಶಿಯ ಸಾರ, ಪುರಾಣಗಳ ಮೇಳ!
ಗದ್ಯ ಪದ್ಯದ ವಾದ, ಶರಣ ಹಾಡಿನ ನಾದ;
ಕನ್ನಡಾಂಬೆಯ ಕೊರಳ ಮುತ್ತುಮಣಿ ಮಾಲಾ-

ವೃತ್ತಕಂದಗಳೋಟ, ಚಂಪುಕಾವ್ಯದ ಕೂಟ,
‘ಝೇಂಕರಿಪ ಷಟ್ಪದಿ’ಗಳಾ ವೇಗ ಮಾರ್ಗ;
ಶಾಸ್ತ್ರಗ್ರಂಥದ ಸಾಲು, ವ್ಯಾಕರಣಗಳ ಬಾಳು,
ಹಾಸು ಹೊಕ್ಕಾಗಿಯೇ ತಾಳಿ ಬಾಳಿದೆ ಕೇಳ!

ದಾಸ ಪದಗಳು ಹರಡಿ ಹಳ್ಳಿ ಜನಗಳು ಉಬ್ಬಿ
ಲಾವಣಿಗಳಾ ದನಿಯ ಇಂಪಿನಿಂ ಹಿಗ್ಗಿ;
ಹೊಸಕವನ ಕೊಳದ ದನಿ, ಶ್ರೋತೃಗಳ ಬಿಲ್ಲದನಿ,
ಕನ್ನಡದ ಹಲತರದಲೇಳಿಗೆಯ ಸುಗ್ಗಿ!

ದಶಮಾನ ಶತವಾಗಿ, ಶತಮಾನ ದಶವಾಗಿ
ತಿಳಿನೀರ ಬುಗ್ಗೆಯದು ಎಷ್ಟು ಸಿಹಿ ಚೆಲುವು!
ತಿಳಿಯದಿಹ ಕವಿವರ್ಯರೇಸು ಜನ ಏತರದಿ
ಕನ್ನಡದ ತೋಟದಲಿ ಬೆಳೆಸಿದರು ಹೂವು!!

ಆಳಿದರು ಚೋಳ ಚಾಳುಕ್ಯ ಗಂಗ ಕದಂಬ
ವಿಜಯನಗರದ ರಾಜ್ಯ ವೈಭವದ ಗೂಡು;
ನೃಪತುಂಗ ಪಂಪರೂ ಪೊನ್ನರನ್ನರ ತಂಡ
ಗುಣವರ್ಮ ಆ ಜನ್ನ ನಾಗಚಂದ್ರರ ದಂಡು.

ಲಕ್ಷಣವ ಸಾರಿದ ಸಾಳ್ವ ಭಟ್ಟಾಕಳಂಕರು
ಕೇಶಿರಾಜರದಂತು ನಾಗವರ್ಮರದೊ!
ತಾಯಂದಿರಾ ಕಂತಿ ಅಕ್ಕದೇವಿಯರಿಹರು
ಕನ್ನಡಿತಿ ಹೊನ್ನಮ್ಮ ಕವಿಕೋಕಿಲವಳೊ!

ಮಧ್ಯಯುಗ ಬಸವಣ್ಣ ರಾಘವಾಂಕರ ಸಾಲು
ವ್ಯಾಸಕುವರನ ಒಂದು ಭಾರತದ ಹಾಡೊ;
ಪದ್ಮರಸ ಲಕ್ಷ್ಮೇಶ ತಿಮ್ಮಕವಿ ಹರಿಹರರು
ಕವಿವರರು ಅಗಣಿತವೆ ಕನ್ನಡದ ಬಾಳೊ!

ಷಡಕ್ಷರಿಯ ಬಿರುನುಡಿಯು, ಮುದ್ದಣನ ಇನಿವಾತು
ಕನಕಾಪುರಂದರರ ಲಲ್ಲೆ ಹಾಡಿನ ನುಣ್ಪು;
ಕೃಷ್ಣರಾಜರ ಸೇವೆ, ತಿರುಮಲಾರ್‍ಯರ ಸೊಲ್ಲು
ಒಡನಾಡಿ ಬಳೆಯಿತೊ ಕನ್ನಡದ ಹುರುಪು

ನೃಸಿಂಹ ಅಳಸಿಂಗರ ವಿದ್ವತ್ಸೇವೆಯ ಮೇರೆ
ಬಸಪ್ಪಶಾಸ್ತ್ರಿಗಳೊ ಪಂಜೇ ಶ್ರೀಕಂಠರು!
ಹಲವಾರು ನುಡಿಸೇವೆ ಸ್ಪೂರ್ತಿಯಿಕ್ಕಿದ ಜನವೆ
ಕಣ್ಮುಂದು ನಿಲ್ಲುವರು ಇನ್ನು ಬಾಳುವರು!

ಕನ್ನಡದ ಕರ್ಣಾಟಕಿಂದು ಅಂದಿನದಂತೆ
ಒಂದಾಗಿ ಇಲ್ಲವೆಂದೊಕ್ಕೊರಲ ಕೂಗು,
ಒಂದಾಪ ಸವಿಗನಸು ಕಾಣಲಿವೆ ಅದರಂತೆ
ನುಡಿಸೇವೆ ವೃಂದದಾ ಉತ್ಸುಕದ ದಂಡು!

ಮೈಸೂರು ಮಂಗ್ಳೂರು ಧಾರ್ವಾಡ ಎಂದೆಂದು
ಸೀಮಾ ಮಹತ್ವವನು ಕೊಟ್ಟು ಮೂಲೆಯೊಳಿರಿಸಿ,
ಕನ್ನಡಾಂಬೆಯ ಕುವರರಂದಿನಾ ಪ್ರಭೆಯೊಂದು
ಮಾಸಿಹೋಗಿದೆ ಇಂದು ಚೈತನ್ಯವಳಿಸಿ!

ಕವನಗಳ ಕಂತೆಗಳು, ಸಣ್ಣ ಕಥೆ ಬೊಂತೆಗಳು,
ಹಲಕಾದಂಬರಿಗಳೂ ತುಂಬುವುದು ಹಿತವೆ!
ಭಾಷಾಭಿಮಾನವೂ ಸ್ವಜನಾನುರಾಗವೂ
ಬಳೆಯುತ್ತಿವೆ ಜನರಲ್ಲಿ ಫಲಬಿಟ್ಟಿವೆ!!
*     *     *

ನನ್ನಿಚ್ಚೆ, ನನ್ಗನಸು, ನನ್ನೊಲುಮೆ ಇದು ಒಂದು-
ಕನ್ನಡವು ಭಾರತದ ಹಸುಗೂಸಂತಿರದೆ;
ಮುನ್ನಡೆವೆ ಮುನ್ನೋಡ್ವ ಘನಭಾಷೆಯೆಂದೆನಿಸಿ
ಬಾಳಲೆಂಬುವ ಕಾಂಕ್ಷೆ ಮುನ್ನಿಟ್ಟು ನಡೆವೆ!
*****

ಕೀಲಿಕರಣ: ಕಿಶೋರ್‍ ಚಂದ್ರ

ಲಿಂಗಮ್ಮನ ವಚನಗಳು – ೧೧

ನಿಶ್ಚಿಂತನಿರಾಳದಲ್ಲಿ ಆಡುವ ಮಹಾದೇವನ
ಕರ್ತೃವೆಂದರಿದ ಕಾರಣದಿಂದ,
ತತ್ವವೆಂಬುದನರಿದು ಮನವ
ನಿಶ್ಚಿಂತವ ಮಾಡಿ,
ನಿಜಸುಖದಲ್ಲಿ ನಿಂದು,
ಕತ್ತಲೆಯ ಹರಿಯಿಸಿ,
ತಮವ ಹಿಂಗಿಸಿ, ವ್ಯಾಕುಲವನಳಿದು,
ನಿರಾಕುಳದಲ್ಲಿ ನಿಂದು,
ಬೇಕುಬೇಡೆಂಬುಭಯವಳಿದು,
ಲೋಕದ ಹಂಗ ಹರಿದು,
ತಾನು ವಿವೇಕಿಯಾಗಿ ನಿಂದು,
ಮುಂದೆ ನೋಡಿದರೆ, ಜ್ಯೋತಿಯ
ಬೆಳಗ ಕಾಣಬಹುದೆಂದರು.
ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ.
*****

ಸಂಗ್ರಹ: ರಾ|| ಸಾ|| ಫ. ಗು. ಹಳಕಟ್ಟಿ

ಕೀಲಿಕರಣ: ಕಿಶೋರ್‍ ಚಂದ್ರ

ಬ್ರಿಟೀಷ್ ಕಡಲ್ಗಾಲುವೆಯಲ್ಲಿ

ಅಲೆ ಅಲೆಗಳು ಎಳೆದು
ಮುದ್ದಿಸುತ ಮುನ್ನುಗ್ಗುವ
ಹಡಗಿನ ಅಂಚಿಗೆ ನಾನೊರಗಿ ನಿಂತಿದ್ದೆ.
ತುಂತುರ ಮಳೆಗೆ
ಹೊಯ್ದಾಟದ ಹಡಗಿನ ಗಮ್ಮತ್ತಿಗೆ
ಮೈಯೆಲ್ಲಾ ಕಚಗುಳಿಯಾಗುತ್ತಿತ್ತು
ದೂರದ ದೀಪಸ್ತಂಭ
ಸರಹದ್ದಿನ ಭವ್ಯ ಮಹಲುಗಳು
ಸರಕು ಹಡಗುಗಳ ಓಡಾಟ
ಮಂಜು ಮೋಡಗಳೊಳಗೆ
ತೂಗಾಡುವ Sea gullಗಳ
ಸಿನೀಕ್ ದೃಶ್ಯದಲ್ಲಿ
ಕಾಲುವೆಯ ತಣ್ಣನೆಯ ನೀರಿನ
ಕೊರೆಯುವ ಚಳಿಯಲ್ಲಿ ತೇಲಾಡುತ್ತಿದ್ದೆ.
ದ್ವೀಪಗಳಗುಂಟ ಹೊರಳುವಾಗ
ಬಾಲ್ಯದ ಚಂದಮಾಮ ಕಥೆಗಳು
ಏಳು ಸಮುದ್ರದಾಟಿ
ರಾಜಕುಮಾರಿ ಕರೆತರುವ
ರಾಜಕುಮಾರನ ಸಾಹಸಗಳಿಗೆ,
ಮೈ ನವಿರೆಬ್ಬಸಿದ ಆ ಬಾಲೀಶಕ್ಕೆ
ಆ ಆನಂದಕ್ಕೆ, ಮೈ ಮನ
ಹಗುರಾಗಿಸಿಕೊಂಡು
ನಗುತ್ತಲೇ ಈಚೆ ಹೊರಳುವಾಗ
ಪಕ್ಕದ ಸ್ಪ್ಯಾನಿಷ್‌ ಗುಂಪು
ಪ್ಲ್ಯಾಶ್ ಮಾಡಿಕೊಳ್ಳುತ್ತದೆ
ಪುಂಖಾನು ಪುಂಖವಾಗಿ ಮೋಡಗಳು
ಆಕಾಶದಲ್ಲಿ ತೇಲುತ್ತಲೇ ಇವೆ.
ಕೊರೆವ ಮಂಜು
ಎದೆ ನಡಗುವ ಕಡಲುಬ್ಬರಗಳಲ್ಲೂ
ಜಲ ಕನ್ಯೆಯಾಗಿ (mermaid)
ದ್ವೀಪಗಳು ಹೊಕ್ಕು
ಸಂಶಯದ- ಕಟ್ಟುಕಥೆಗಳ
ಬಲೆಗಳೆಳೆದು ಎಳೆಯ ಬಾಲೀಷ
ವಿಜ್ಞಾನಗಳಿಗೆ ವಸ್ತುವಾಗಿಸಿ
ಅನಂತಕ್ಕೇರಿಸುವ; ಸಮುದ್ರದಾಳದ
ಕೊಳವೆ ಮಾರ್ಗದಲ್ಲಿ
(ಇಂಗ್ಲೆಂಡು ಪ್ರಾನ್ಸ್‌ಗಳ ನಡುವೆ)
ಓದಾಡುವ ರೈಲು ಕಾರುಗಳಲ್ಲೆಲ್ಲ
ಓಡಾಡಿಸುವ ಯೋಜನೆ.
ಓರಿಯೆಂಟ್ ಫೆರ್ರಿ ಮುನ್ನುಗ್ಗುತ್ತಿದೆ.
ಕಡಲಂಚು ಅಂಚುಗಳಿಗೆ
ಪೂರ್ವ ಸಿದ್ಧತೆಗಳಿಲ್ಲದೆಯೂ
ಮನಸ್ಸು ಅಂಟಿಕೊಳ್ಳುತ್ತದೆ.
ತುಂತುರ ಮಳೆಗೆ
ಸೂರ್ಯನ ಕಿರಣಗಳು ಸ್ಫಟಿಕಗಳಾಗಿ
ತಲೆ ತುಂಬ ಮೆತ್ತಿ
ವಜ್ರ ಮುಕುಟಗಳಾಗುತ್ತವೆ
ಬ್ರಿಟೀಷ್ ಕಡಲ್ಗಾಲುವೆಯ
ರಾಣಿಯಾಗಿ ನನ್ನ
ಕಾಲರ್ ಸರಿಪಡಿಸಿಕೊಳ್ಳುತ್ತ
ಫೆರ್ರಿ ಮೇಲೆ ಗಂಭೀರ ಹೆಜ್ಜಿಯಿಂದ
ಓಡಾಡಿ ವಜ್ರಮುಕುಟಗಳನ್ನು
ಮುಟ್ಟುತ್ತ ಮುದ್ದಿಸುತ್ತ
ಪ್ಯಾರಿ ನಗರ ಪ್ಯಾರಿಸ್ಸಿಗೆ ಹೆಜ್ಜೆ ಊರಿದೆ.
(ಇಂಗ್ಲೆಂಡಿನಿಂದ ಪ್ರಾನ್ಸ್‌ಗೆ ಹೋಗುವಾಗ ಓರಿಯಂಟ್ ಫೆರ್ರಿಯಿಂದ(ಹಡಗು) ನೋಡಿದ ಅನಿಸಿದ ಆನಂದಿಸಿದ ದೃಶ್ಯ)
*****

ಕೀಲಿಕರಣ: ಎಮ್ ಎನ್ ಎಸ್ ರಾವ್

ರೈತರ ಹಾಡು

ದುಡಿಯುತಿಹರೂ ನಾವೆ
ಮಡಿಯುತಿಹರೂ ನಾವೆ

ಜಗಕೆ ಅನ್ನವ ನೀಡುತಿಹರು ನಾವೆ!
ತುತ್ತೊಂದು ಅನ್ನವನು ಬೇಡುತಿಹೆವು!
ನಿಮಗಾಗಿ ಜೀವನವ ಸವೆಸುತಿಹೆವು!

ಮೈಯ ದಂಡಿಪರಾವು
ರಕ್ತ ಹರಿಸುವರಾವು

ದಿನವು ಜನ್ಮವ ತೇಯುತಿಹರು ನಾವು!
ಧನಿಕರಿಗೆ ಹೊನ್ನ ಬಣ ಕೂಡಿಸಿಹೆವು
ಕುರುಡುಕಾಸಿನ ಭಿಕ್ಷೆ ಬೇಡುತಿಹೆವು!

ಭುವಿಯನುಳುವವರಾವು
ಭುವಿಗೆ ಉರುಳುವರಾವು

ಕಾಳ ಕೆತ್ತಿತ ಮಡಿವ ರೈತರಾವು
ತುತ್ತಿಲ್ಲದೆಯೆ ಹೆಣದ ರಾಸಿ ಬಿದ್ದಿಹುದು!
ಕಳಿತ ಹೆಣ, ಕೊಳೆತ ಹೆಣ-ಕೇಳ್ವರಾರು!

ಹಣದ ಕಣಜಗಳಾವು
ಹೆಣದ ವಂಶಜರಾವು

ಸಾವಿಲ್ಲದಿಹ ಅಮರ ಪ್ರೇತವಾವು
ಜೀವವಿಲ್ಲದ ಬರಿಯ ಮೂಳೆ ಮೂಟೆಗಳು!
ಹೊಟ್ಟೆ ಹಸಿವಿನ ಕೊರಗ ಕ್ರಾಂತಿಯೂಟೆಗಳು!
*****

ಕೀಲಿಕರಣ: ಕಿಶೋರ್‍ ಚಂದ್ರ