ಮೌನರಾಗ

ಮೌನರಾಗ

ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ ಇಂಗಿತ ಅವರಿಗೆ ತಿಳಿಯುತ್ತಿರಲಿಲ್ಲ. ಒಬ್ಬನೇ ಮಗನಾದ ಸುಧೀರನಿಗೆ ಮದುವೆ ಮಾಡಿ ಸೊಸೆಯನ್ನು ಮನೆತುಂಬಿಸಿಕೊಳ್ಳುವ ಆಶೆ ಅವರಿಬ್ಬರದು. ಸುಧೀರನಿಗೆ ಹುಡುಗಿ ಹುಡುಕಿ ಮಾಡುವ ಸಂಪ್ರದಾಯಬದ್ದ ಮದುವೆ ಬಗ್ಗೆ ನಂಬಿಕೆ ಇರಲಿಲ್ಲ. ಎಂ ಎನ್ ಸಿ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದ ಸುಧೀರನಿಗೆ ದೊಡ್ಡ ಹುದ್ದೆ ಕೈತುಂಬ ಸಂಬಳ, ಸ್ಪುರದ್ರೂಪ, ಸದ್ಗುಣ ಸಕಲವೂ ಇದ್ದವು. ಇಷ್ಟಿದ್ದು ಮದುವೆ ಮುಂದೆ ಹೋಗುತ್ತಿರುವುದೇ ತಂದೆ ತಾಯಿಗೆ ಸಹಿಸಲಾರದಾಗಿತ್ತು. ವಯಸ್ಸಾಗುತ್ತಾ ಬರುತ್ತಿದ್ದ ಅವರಿಗೆ, ಮಗನ ಮದುವೆ, ಮೊಮ್ಮಕ್ಕಳು ನೋಡುವ ಕಾತುರವಿದ್ದಿತು.

ಅವರಿಗೆ ಇದ್ದ ಒಂದೇ ಮುಖ್ಯವಾದ ಕೆಲಸವೆಂದರೆ ಬಂಧು ವರ್ಗದವರಲ್ಲಿ ಸ್ನೇಹಿತರಲ್ಲಿ ಸುಧೀರನಿಗೆ ಸರಿಹೊಂದುವ ಜೋಡಿಯಾಗುವ ಹೆಣ್ಣು ಸಿಗುವುದೇ ಎಂದು. ಇಷ್ಟೇ ಅಲ್ಲದೆ ಅವರು ಮಧ್ಯಾಹ್ನದ ವೇಳೆಯಲ್ಲಿ ನಿದ್ರೆ ಮಾಡುವುದನ್ನು ಬಿಟ್ಟು ಬೆಂಗಳೂರಿನಲ್ಲಿರುವ ವಧೂವರ ಅನ್ವೇಷಣಾ ಕೇಂದ್ರಗಳಿಗೆ ಹೋಗಿ ತಮ್ಮ ಮಗನ ಜಾತಕ ಫೋಟೋಗಳನ್ನು ನೋಂದಾಯಿಸಿ ಲಗತ್ತಿಸಿ ಬರುತ್ತಿದ್ದರು.

ಹೆಣ್ಣಿನ ತಂದೆ ತಾಯಿಗಳಿಂದ ಪತ್ರಗಳು ಬಂದು ಹೆಣ್ಣಿನ ಸಂದರ್ಶನಕ್ಕೆ ಏರ್‍ಪಾಡು ಮಾಡಬೇಕೆಂದಾಗ ಸುಧೀರ ನುಸುಳಿಕೊಂಡು ಮುಂದೆ ಹಾಕುತ್ತಿದ್ದ.

“ಅಮ್ಮಾ! ನೀವ್ಯಾಕೆ ಹುಡುಗಿ ನೋಡೋ ಕಷ್ಟ ತೆಗೆದುಕೊಳ್ಳುತ್ತೀರಾ ? ನೀವು ನಿಮ್ಮ ಆರೋಗ್ಯ ನೋಡಿಕೊಂಡು ಆರಾಮವಾಗಿರಿ” ಎನ್ನುತ್ತಿದ್ದ.

“ನೀನು ಹೀಗೆ ಅಂದರೆ ಹ್ಯಾಗೆ ? ಹುಡುಗೀನ ನೋಡಿ ನಿನಗೆ ಮದುವೆ ಮಾಡುವುದು ನಮ್ಮ ಕರ್ತವ್ಯ ಅಲ್ಲವೇ ?” ಅನ್ನುತ್ತಿದ್ದರು ತಾಯಿ.

“ನಿನ್ನ ತಾಯಿ ಆರೋಗ್ಯಾನು ಅಷ್ಟು ಸರಿಯಿಲ್ಲ, ಬೇಗ ನೀನು ಮದುವೆಯಾದರೆ ಅವಳ ಬಯಕೆ ತೀರಿ ಮನೆ ತುಂಬಿ ಬರುವ ಸೊಸೆಯಿಂದ ಅವಳ ಮನವೂ ತುಂಬುತ್ತದೆ” ಎಂದು ಪುಷ್ಟಿಕರಿಸುತ್ತಿದ್ದರು ರಂಗರಾಯರು.

“ನೀವಿಬ್ಬರೂ ನನ್ನ ನಕ್ಷತ್ರಿಕರ ಹಾಗೆ ಹಿಡಿದುಬಿಟ್ಟಿದ್ದೀರಿ. ಮದುವೆ ಆಗೋನು ನಾನು ಹುಡುಗೀನ ನಾನೇ ಹುಡುಕಿಕೊಳ್ಳುತ್ತೇನೆ. ನೀವು ಯಾವ ಪ್ರಯತ್ನಾನೂ ಮಾಡಬೇಡಿ ಎನ್ನುತ್ತಿದ್ದ” ಸುಧೀರ್.

“ನೋಡು! ಮೈಸೂರಿನಿಂದ ಅಪ್ಪ ಬರೆದಿರುವ ಕಾಗದ. ಒಬ್ಬಳೇ ಮಗಳಂತೆ, ಕೋಟಿಗಟ್ಟಲೆ ಆಸ್ತಿ ಇದೆಯಂತೆ. ಮಗಳು ಎಂ ಬಿ ಬಿ ಎಸ್ ಓದಿ ಎಂ ಡಿ ಮಾಡುತ್ತಿದ್ದಾಳಂತೆ. ಇದಕ್ಕಿಂತ ಒಳ್ಳೆಯ ಹುಡುಗಿ ನನಗೆ ಸಿಗುತ್ತಾಳಪ್ಪ ಸುಧೀರ್?” ಅಂತ ತಂದೆ ಕೇಳಿದರು.

“ಅಪ್ಪಾ! ನನಗೆ ವೈದ್ಯಕೀಯ ವೃತ್ತಿಯಲ್ಲಿ ತೊಡಗಿರುವ ಹುಡುಗಿ ಬೇಡ ನನ್ನ ಆಶೆ ಆಕಾಂಕ್ಷೆಗಳು ಬೇರೆ. ನನಗೆ ಹುಡುಗಿ ತಂದೆಯ ಆಸ್ತಿಪಾಸ್ತಿ ಬಂಗಲೆ ಕಾರು ಬೇಡ. ನನಗೆ ಬೇಕಾದಷ್ಟು ಪ್ರೀತಿಯಿಂದ ಬಾಳ್ವೆ ಮಾಡುವ ಹುಡುಗಿ, ಅವಳು ಸರಳವಾಗಿದ್ದು ಸುಂದರಿಯಾಗಿದ್ದು ನನ್ನ ಅವಳ ಬಾಳು ಬೆಸದುಕೊಂಡುಹೋದರೆ ಸಾಕು. ಅವಳಲ್ಲಿ ಏನು ಕೊರತೆಗಳಿದ್ದರೂ ಪರವಾಯಿಲ್ಲ, ನೀವು ಹೇಳುವ ಯಾವುದನ್ನು ನಾನು ಬೇಕು ಎಂದು ಆಶೆಪಟ್ಟಿಲ್ಲ” ಎಂದು ಕಡ್ಡಿ ಮುರಿದ ಹಾಗೆ ಸುಧೀರ್ ತಂದೆಗೆ ಹೇಳಿಬಿಟ್ಟ.

“ನಿನ್ನದು ಏನು ಪ್ಲಾನ್? ಯಾರಾದರು ಹುಡುಗಿ ನಿನ್ನ ಮನಸ್ಸಿನಲ್ಲಿದೆಯಾ? ಹೇಳು. ನಮಗೂ ಸರಿಹೋದರೆ ಮದುವೆ ಮಾಡಿಬಿಡೋಣ” ಅಂದರು ರಂಗರಾಯರು.

“ಅಪ್ಪಾ! ನಾನು ಹುಡುಗಿ ಶೋಧದಲ್ಲಿದ್ದೇನೆ. ಇಂಟರ್‌ನೆಟ್ ಜಾಲದಲ್ಲಿ ಶಾದಿ.ಕಾಮ್‌ನಲ್ಲಿ ಬೇಕಾದಷ್ಟು ಜಾಹಿರಾತುಗಳು ಬರುತ್ತವೆ. ನನ್ನ ವಿವರಗಳನ್ನು ಅದರಲ್ಲಿ ದಾಖಲಾಗಿಸಿರುವೆ. ನಾನು ವ್ಯವಹಾರ ಮಾಡುತ್ತಿರುವೆ. ಯಾವುದಾದರೂ ಎಲ್ಲ ರೀತಿಯಲ್ಲಿ ಒಪ್ಪಿಗೆಯಾದರೆ ನಾನು ನಿಮಗೆ ತಿಳಿಸುವೆ. ನೀವು ಅಷ್ಟರವರೆಗೂ ಸುಮ್ಮನೆ ಶಾಂತವಾಗಿರಿ” ಎಂದು ಒಂದು ತೀರ್‍ಮಾನದ ಮಾತನ್ನು ಮಂಡಿಸಿದ.

ವಯಸ್ಸಾದ ತಂದೆತಾಯಿಗೆ ಅವನ ಮಾತುಗಳು ಬಲು ವಿಚಿತ್ರವಾಗಿ ಕಂಡವು. ಸೀತಮ್ಮನಿಗಂತು ಅಂತರ್‌ಜಾಲದ ವಿಷಯದ ಗಂಧವೇ ಇರಲಿಲ್ಲ. ಏನೋ ತಾನು ಎಂದೂ ಕೇಳಿ ಅರಿಯದ ಇಂತಹುದರಲ್ಲಿ ಹುಡುಗಿ ಹುಡುಕುವುದೇ ? ಇದರಲ್ಲಿ ಎಷ್ಟು ಸತ್ಯಾಂಶವಿರುತ್ತೆ? ಇದನ್ನು ಎಷ್ಟರ ಮಟ್ಟಿಗೆ ನಂಬಬಹುದು? ಇದರಲ್ಲಿ ಕಪಟ, ಮೋಸವಿರುವುದಿಲ್ಲವೇ ? ಎಂಬ ನೂರಾರು ಶಂಕೆಗಳು ಆಕೆಯ ಮನದಲ್ಲಿ ತುಮುಲವಾಗಿ ಎದ್ದವು. ಕುಲ, ಗೋತ್ರ, ವಂಶ, ನಡುವಳಿಕೆ ಜನ, ಅವರ ಸೌಹಾರ್ದ್ಯ, ಹೊಂದಾಣಿಕೆ, ಅಂತಸ್ತು ಅಂತ ನೋಡುತ್ತಿದ್ದ ಸೀತಮ್ಮನ ಕಾಲಕ್ಕು ಈಗಿನ ಕಾಲಕ್ಕು ಬಹಳ ಅಜಗಜಾಂತರ ವಿದ್ದಿತು. ಸೀತಮ್ಮನ ತಂದೆ ಇಂತಹುದೆಲ್ಲಾ ನೋಡಿಯೇ ರಂಗರಾಯರೊಂದಿಗೆ ಅವರ ಮದುವೆ ಮಾಡಿದ್ದರು. ಅವರ ಜೀವನದಲ್ಲಿ ಸಾಕಷ್ಟು ವಿಭಿನ್ನತೆಯಿದ್ದರೂ ಕೆಲವು ಸಾಮ್ಯತೆಗಳು ಅವರನ್ನು ಮದುವೆಯನ್ನು ಬಿಗಿ ಸೂತ್ರದಲ್ಲಿ ಬಂಧಿಸಿತ್ತು. ಅವರ ಬಾಳಿನ ರಥಕ್ಕೆ ಅವರೇ ಸಾರಥಿಯಾಗಿದ್ದರು. ಅವರು ಏನಿದ್ದರೂ ಅವರನ್ನು ಹಿಂಬಾಲಿಸುವ ಛಾಯೆಯಾಗಿದ್ದರು.

ಇಂದಿನ ಆಧುನಿಕ ವಿದ್ಯಾವಂತ ಹುಡುಗಿ ಈ ರೀತಿ ಇರಲು ಸಾಧ್ಯವಿಲ್ಲವೆಂಬುದನ್ನು ಅವರು ಮನಗಂಡಿದ್ದರು. ಮಹಿಳಾ ಸ್ವಾತಂತ್ರ್ಯ, ಸಮಾನ ಹಕ್ಕು ಬಾಧ್ಯತೆ, ಉದ್ಯೋಗಸ್ಥ ಮಹಿಳೆಯ ಹಣಕಾಸಿನ ನಿಲುವು ಎಲ್ಲವೂ ತಮ್ಮ ಕಾಲದಕ್ಕಿಂತ ಬಹಳ ವಿಭಿನ್ನವಾದುದೆಂಬ ಅರಿವು ಆಕೆಗೆ ಇದ್ದಿತು. ಹಾಗಾಗಿ ತಮ್ಮ ಮಗನ ಆಶೆ ಆಕಾಂಕ್ಷೆಗಳಿಗೆ ಜೋತುಬಿದ್ದು ಬರುವ ಸೊಸೆ ಮನೆ ತುಂಬಿದರೆ ಸಾಕೆಂದು ಹಲುಬಿಕೊಳ್ಳುತಿದ್ದರು. ಮನೆಯಲ್ಲಿ ಸಂತಸ ತುಂಬುವ ಮದುವೆ ಶುಭ ಸಮಾರಂಭ ಆದಷ್ಟು ಶೀಘ್ರವಾಗಿ ಆಗಲೆಂದು ಕಂಡ ದೈವಕ್ಕೆ ಬೇಡಿಕೊಳ್ಳುತ್ತಿದ್ದರು. ತಮ್ಮ ಗೆಳತಿಯರು ಹೇಳಿದ ವ್ರತಗಳನ್ನು ಮಾಡುತ್ತಿದ್ದರು.

ಇತ್ತೀಚೆಗೆ ಸುಧೀರ ಒಂದು ರೀತಿ ಹೆಚ್ಚು ಮಾತಾಡುತ್ತಿರಲಿಲ್ಲ, ಮೌನವಾಗಿರುವ ಅವನ ಮನವನ್ನು ಏನೋ ಕಾಡುತ್ತಿದೆ ಎಂದು ತಂದೆ ತಾಯಿ ಇಬ್ಬರಿಗೂ ಅನ್ನಿಸಿತು. ಧೈರ್ಯ ಮಾಡಿ ರಂಗರಾಯರು ಕೇಳಿಯೇ ಬಿಟ್ಟರು: “ಏನಪ್ಪ, ಸುಧೀರ ! ನಿನ್ನ ಮನಸ್ಸಿನಲ್ಲಿ ಏನೋ ಹೇಳಲಾರದ ವಿಷಯ ಬಚ್ಚಿಟ್ಟುಕೊಂಡಂತೆ ಇದೆ. ಹೇಳು ನಮಗಾದರೆ ನಾವೇನಾದರೂ ಮಾಡೋಣ” ಅಂದರು. ಸುಧೀರ ತಂದೆ ತಾಯಿಗೆ ತಾನು ಶಾದಿ.ಕಾಮ್‌ನಲ್ಲಿ ಹುಡುಗಿಯನ್ನು ಹುಡುಕುತ್ತಿರುವುದಾಗಿ ಮಾತ್ರ ಹೇಳಿದ್ದ. “ಏನಾದರು ನಿರ್ಧಾರ ಮಾಡಿದರೆ ನಿಮ್ಮ ಒಪ್ಪಿಗೆ ಇರುತ್ತದೆ ತಾನೇ?” ಎಂದು ಕೇಳಿದ.

“ನಿನ್ನ ಇಷ್ಟವೇ ನಮ್ಮ ಇಷ್ಟ” ಎಂದು ನೂರುಪಟ್ಟು ನಂಬಿಕೆ ಕೊಟ್ಟರು ಸುಧೀರನಿಗೆ ಒಳಗೊಳಗೆ ಶಂಕೆ ಇತ್ತು. ಇದಕ್ಕೆ ಬಲವಾದ ಕಾರಣವೂ ಇತ್ತು.

ಇಂಟರ್‌ನೆಟ್ ಜಾಲದಲ್ಲಿ ಶಾದಿ.ಕಾಂ ನಲ್ಲಿ ಸಂಗಾತಿಯನ್ನು ಹುಡುಕುವಾಗ ಅವನ ಮನಸ್ಸಿಗೆ ಹತ್ತಿರವಾದವಳು ಕೋಲಕ್ಕಾತ್ತಾದ ಶಿಲ್ಪ. ಅವಳು ಮುಚ್ಚು ಮರೆಯಿಲ್ಲದೆ ತನ್ನ ಆಸೆ, ಆಕಾಂಕ್ಷೆ, ಕನಸು, ಆದರ್ಶ ಹಾಗೂ ತನ್ನ ನ್ಯೂನತೆಗಳನ್ನು ನಮೂದಿಸಿದ್ದಳು. ಕನ್ನಡಿಯಂತಹ ಅವಳ ಹೃದಯಕ್ಕೆ ಸುಧೀರ್ ಮಾರುಹೋಗಿದ್ದ. ಶಿಲ್ಪಗೆ ಇದ್ದ ದೊಡ್ಡ ವೈಕಲ್ಯವೆಂದರೆ ಆಕೆ ಶ್ರವಣ ವಾಕ್ ವಿಕಲ ಚೇತನಳು ಎಂಬುದು ತನ್ನ ತಂದೆ ತಾಯಿ ಶಿಲ್ಪಾಳನ್ನು ಸ್ವೀಕರಿಸುತ್ತಾರೋ ಇಲ್ಲವೋ ಎಂಬ ಶಂಕೆ ಸುಧೀರನಿಗಿತ್ತು. ಈಗ ಆರು ತಿಂಗಳಿಂದ ಸುಧೀರ್ ಶಿಲ್ಪಳೊಡನೆ ಇ-ಮೇಯಿಲ್ ಮತ್ತು ಮೊಬೈಲಿನ ಸಂದೇಶಗಳ ಮೂಲಕ ಒಬ್ಬರನ್ನೊಬ್ಬರು ಅರಿತಿದ್ದರು. ಅವಳ ವ್ಯಕ್ತಿತ್ವದಲ್ಲಿ ಅವಳ ಪ್ರೀತಿಯಲ್ಲಿ ಸುಧೀರನಿಗೆ ಯಾವ ಕೊರತೆ ಕಾಣಲಿಲ್ಲ. ಅವಳು ಡಿಸೈನ್‌ನಲ್ಲಿ ಉನ್ನತ ಡಿಗ್ರಿ ಪಡೆದು ದೊಡ್ಡ ದೊಡ್ಡ ಮ್ಯೂರಲ್ಸ್ಗಳನ್ನು ಹೋಟೇಲ್, ಆಫೀಸ್ ಹಾಗೂ ಪಾರ್ಕುಗಳಿಗೆ ಮಾಡಿದ್ದಳು. ಮಧ್ಯಮ ವರ್ಗದ ಕುಟುಂಬದಿಂದ ಬಂದ ಶಿಲ್ಪ ಅತ್ಯಂತ ವಿನಯ, ಮುಗ್ಧ, ಮಧುರ ಸರಳ ಸ್ವಭಾವದವಳಾಗಿದ್ದಳು. ಅವಳು ತನಗೆ ಸರಿಯಾದ ಸಂಗಾತಿ ಎಂಬ ದೃಢ ನಿಶ್ಚಯ ಸುಧೀರನಲ್ಲಿ ಮೂಡಿತ್ತು. ಶಿಲ್ಪ ಒಬ್ಬ ಸ್ನೇಹಿತೆಯಂತೆ ಸುಧೀರನ ಜೊತೆ ವ್ಯವಹರಿಸುತ್ತಿದ್ದಳು. ನಿಜಕ್ಕೂ ಅವಳಿಗೆ ಆತ ತನ್ನನ್ನು ಪ್ರೀತಿಸುತ್ತಾನೆ ಎಂಬ ಅರಿವು ಅವಳಿಗೆ ಇರಲಿಲ್ಲ. ಮುಂದೆ ತನ್ನಂತಹ ವಿಕಲ ಚೇತನಳನ್ನು ಮದುವೆಯಾಗುವನೆಂಬ ಭರವಸೆಯೂ ಇರಲಿಲ್ಲ. ಇದುವರೆಗೂ ಅವರಿಬ್ಬರೂ ಒಬ್ಬರನ್ನೊಬ್ಬರು ಎದುರು ಬದಿರಿನಲ್ಲಿ ನೋಡಿದ್ದಿಲ್ಲ, ಶಿಲ್ಪಳಿಗೆ ಸುಧೀರನ ಪ್ರೇಮ ಪಲ್ಲವಿಯನ್ನು ಕೇಳಿಸಿಕೊಳ್ಳುವ ಕಿವಿಯಿರಲಿಲ್ಲವಾದರೂ ಸ್ನೇಹವನ್ನು ಸ್ಪಂದಿಸುವ ಹೃದಯ ಅವಳಿಗಿದ್ದಿತು.

ಪತ್ರ, ಮೊಬೈಲ್ ಸಂದೇಶ ರವಾನಿಸಿಕೊಂಡು ಬೆಳೆದ ಭಾವನೆಗಳು ಒಬ್ಬರನ್ನೊಬ್ಬರು ಸಂಧಿಸುವ ಘಳಿಗೆಯನ್ನು ತಂದೊಡ್ಡಿತು.

ಒಬ್ಬರನ್ನೊಬ್ಬರು ಫೋಟೋಗಳಲ್ಲಿ ನೋಡಿ ಮೆಚ್ಚಿಕೊಂಡಿದ್ದರು. ಅವರು ಮುಖತಃ ಪರಸ್ಪರ ನೋಡುವ ಕಣ್ಣಿನ ಮಿಲನ, ಹೃದಯ ಸ್ಪಂದನಕ್ಕಾಗಿ ಕಾಯುತ್ತಿದ್ದರು.

ಸುಧೀರ್, ಶಿಲ್ಪಾಳನ್ನು ಬರಹೇಳಿದಾಗ ಅವಳು, ತನ್ನ ತಂದೆ ತಾಯಿಯೊಂದಿಗೆ ಬೆಂಗಳೂರಿಗೆ ಬಂದಳು. ಒಂದು ಪ್ರತಿಷ್ಟಿತ ಹೋಟೇಲಿನಲ್ಲಿ ಇಳಿದುಕೊಂಡರು. ಭಾನುವಾರ ಮಧ್ಯಾಹ್ನ ಕಬ್ಬನ್ ಪಾರ್ಕಿನಲ್ಲಿ ಸಂಧಿಸುವ ಯೋಜನೆ ಮಾಡಿಕೊಂಡಿದ್ದರು. ಅದರಂತೆ ಸುಧೀರ್ ಕಬ್ಬನ್ ಪಾರ್ಕಿಗೆ ಒಂದು ಘಂಟೆ ಮೊದಲೇ ಬಂದು ತನ್ನ ಪ್ರೇಯಸಿಯ ಮುಖಾಮುಖಿ ಸಮಾಗಮಕ್ಕಾಗಿ ಕಾಯುತ್ತಿದ್ದ ಅವನಲ್ಲಿ ಎಲ್ಲಿಲ್ಲದ ಕಾತುರತೆ ಇತ್ತು. ಯಾವ ಜನ್ಮದ ಗೆಳತಿಯನ್ನೊ ಸಂಧಿಸುವಂತೆ ಅನಿಸುತಿತ್ತು. ದೂರದಲ್ಲಿದ್ದು ಬಾಯಿ ಬಿಟ್ಟು ಮಾತನಾಡದೆಯು, ಬರಿ ಪತ್ರ ವ್ಯವಹಾರ ಸಂದೇಶಗಳಿಂದ ಬಾಂಧವ್ಯ ಬಹಳ ಬಲಗೊಂಡಿತ್ತು. ಸುಧೀರ್ ಶಿಲ್ಪಳನ್ನು ಸಂಧಿಸುವ ಮುನ್ನ ಅವಳನ್ನು ಪೂರ್ಣ ಅರ್ಥವಿಸಿಕೊಳ್ಳಲು ನಾಲ್ಕಾರು ದಿನದಲ್ಲಿ ಅಮೆರಿಕನ್ ಸೈನ್ ಭಾಷೆಯನ್ನು ಕಲಿತಿದ್ದ. ತಾವು ಭೇಟಿಯಾದಾಗ ಶಿಲ್ಪ ಸೈನ್ ಭಾಷೆಯಲ್ಲಿ ಮಾತನಾಡಿದರೆ ಅದನ್ನು ತಾನು ಅರಿತುಕೊಂಡು ಉತ್ತರಿಸಲು ಸಿದ್ಧನಾಗಿದ್ದ. ಅವನು ಶಿಲ್ಗಳ ಪ್ರೀತಿಯ ಯಶಸ್ಸಿಗಾಗಿ ಅವನು ಮಾಡಿದ ಮಹತ್ವದ ಪ್ರಯತ್ನ ಇದಾಗಿತ್ತು.

ಕಬ್ಬನ್ ಪಾರ್ಕಿನ ದೊಡ್ಡ ಮರಗಳಿಂದ ತಣ್ಣನೆ ಗಾಳಿ ಬೀಸುತಿತ್ತು. ಹಸಿರು ಹುಲ್ಲಿನಲ್ಲಿ ಹುಡುಗರು ಆಡುತ್ತಿದ್ದರು. ಅರಳಿದ ಹೂಗಳಲ್ಲಿ ದುಂಬಿಗಳು ಹಾರಾಡುತ್ತಿದವು. ಅವರಿಗೆ ಅಲ್ಲಿ ಓಡಾಡುವ ಜನರ ಪರಿವೆ ಇರಲಿಲ್ಲ. ತನ್ನ ಪ್ರೇಯಸಿಯ ಹೆಜ್ಜೆ ಎಲ್ಲಿಂದ ಕೇಳಿ ಬರುವುದೋ ಎಂದು ಕಾತುರನಾಗಿ ಅತ್ತ ಇತ್ತ ನೋಡುತ್ತಿದ್ದ.

ಸಂಜೆ ಸೂರ್ಯನ ಪ್ರಖರತೆ ಕಡಿಮೆಯಾಗಿ ಆಗಸದಲ್ಲಿ ಬೆಳ್ಳಿ ಮೋಡಗಳು ತೇಲುತ್ತಿದ್ದವು. ಸುಧೀರನಿಗೆ ಸ್ವಲ್ಪ ಆತಂಕವಾಗುವುದರೊಳಗೆ ಶಿಲ್ಪ ಆಧುನಿಕ ಮಹಿಳೆಯ ಉಡುಪು ಧರಿಸಿ ತನ್ನ ಎರಡು ಪಕ್ಕದಲ್ಲಿ ತನ್ನ ತಂದೆ ತಾಯಿಯರನ್ನು ಕರೆದುಕೊಂಡು ಸುಧೀರ ಕುಳಿತಿರುವ ಕಲ್ಲು ಬೆಂಚಿಗೆ ಬಂದು ಕುಳಿತಳು. ಶಿಲ್ಪ ಸೈನ್ ಭಾಷೆಯಲ್ಲಿ “ಇವರು ತನ್ನ ಜನ್ಮದಾತರು” ಎಂದು ಹೇಳಿದಳು. ತನ್ನ ಮುದ್ದಾದ ಮುಖದಲ್ಲಿ ಮುಗುಳು ನಗೆಯನ್ನು ಹೊತ್ತು ಬಂಗಾಲಿಯವರಾದ ಶಿಲ್ಪಳ ತಂದೆ ಆಂಗ್ಲ ಭಾಷೆಯಲ್ಲಿ ತಮ್ಮ ಹಾಗೂ ಪತ್ನಿಯ ಪರಿಚಯ ಮಾಡಿಸಿದರು. ಅವರು ಸರ್ಕಾರಿ ದೊಡ್ಡ ಹುದ್ದೆಯಲ್ಲಿದ್ದು ಈಗ ನಿವೃತ್ತಿಯಾಗಿರುವುದಾಗಿ ಹೇಳಿದರು. ತಮ್ಮ ಮಗಳಿಗೆ ಯಾವುದೋ ಕಿವಿಯ ಹುಟ್ಟು ದೋಷದಿಂದ ಕಿವುಡಾಗಿ ಮಾತು ಬಾರದಿರುವುದನ್ನು ಸ್ಪಷ್ಟವಾಗಿ ಹೇಳಿದರು. ಕಿವಿಯ ದೋಷ ನಿವಾರಿಸಲು ಯಾವುದೋ ಕ್ಲಿಷ್ಟವಾದ ಆಪರೇಷನ್ ಮಾಡುವ ಮೂಲಕ ಮತ್ತೆ ಅವಳಿಗೆ ಶ್ರಾವ್ಯ ಶಕ್ತಿ ಬಂದರೂ ಬರಬಹುದೆಂದು ವೈದ್ಯರಿತ್ತ ಆಶಾಕಿರಣದ ಬಗ್ಗೆಯು ಹೇಳಿದರು. ಆದರೆ ಅದು ಭಾರತದಲ್ಲಿರದ ಕಾರಣ ಅವರು ಇದುವರೆಗೂ ಏನೂ ಮಾಡಲಾಗಿರಲಿಲ್ಲ. ಅಮೆರಿಕಾ, ಇಂಗ್ಲೆಂಡು ದೇಶಗಳಲ್ಲಿ ಇಂತಹ ವೈಕಲ್ಯವನ್ನು ಸರಿಪಡಿಸುವ ಸಾಧನಗಳಿವೆ ಎಂದು ಹೇಳಿದರು.

ಶಿಲ್ಪಳ ತಂದೆ ತಾಯಿಯ ಕಳವಳ, ಮನೋವೇದನೆ ಅರಿತ ಸುಧೀರ.

“ಈಗ ಶಿಲ್ಪ ಯಾವ ವಿಧದಲ್ಲಿ ಕಡಿಮೆಯಿದ್ದಾಳೆ ? ಅವಳು ವಿದ್ಯಾವಂತೆ, ಸುಂದರಿ ಹಾಗೂ ತನ್ನ ಭಾವನೆಗಳನ್ನು ಸ್ಪಷ್ಟವಾಗಿ ಸೈನ್ ಭಾಷೆಯಲ್ಲಿ ತಿಳಿಸಬಲ್ಲಳು. ಅದರ ಬಗ್ಗೆ ನೀವು ಯೋಚಿಸಬೇಡಿ, ದೈವ ಕೃಪೆಯಿದ್ದರೆ ಅಮೆರಿಕಾಗೆ ಹೋಗಿ ಸರಿಯಾಗುವದೆಂಬ ಧೈರ್ಯ ನನಗಿದೆ” ಎಂದ.

ಸುಧೀರನ ಮಾತುಗಳಿಂದ ಶಿಲ್ಪಳ ತಂದೆ ತಾಯಿಗೆ ಬಹಳಷ್ಟು ನೆಮ್ಮದಿಯಾಯಿತು.

“ನೀವುಗಳು ಕೋಲಕೊತ್ತಾದಿಂದ ಇಲ್ಲಿಯವರೆಗೂ ಬರುವ ಅವಶ್ಯವೇನಿತ್ತು?”

“ಇದು ನಿನ್ನಲ್ಲಿ ನಂಬಿಕೆಯಿಲ್ಲದೆ ನಾವು ಬರಲಿಲ್ಲ, ನಿಮ್ಮ ತಂದೆ ತಾಯಿಯವರನ್ನ ನೋಡಿ ಸಂಧಿಸಿ ನಮ್ಮ ಶಿಲ್ಪಳು ಅವರಿಗೂ ಒಪ್ಪಿಗೆಯೇ ಎಂದು ಅರಿಯಲು ಬಂದಿದ್ದೇವೆ” ಎಂದರು.

ಮಗಳ ವೈಕಲ್ಯತೆ ಅವರನ್ನು ಬಹಳಷ್ಟು ನಿರಾಶಾವಾದಿಗಳನ್ನಾಗಿ ಮಾಡಿತ್ತು. ಹುಡುಗ ಒಪ್ಪಿದರೂ ಅವನ ತಂದೆ ತಾಯಿ ಮೂಕ ಸೊಸೆಯನ್ನು ಮನೆ ತುಂಬಿಸಿಕೊಳ್ಳುವರೇ? ಎಂಬ ಶಂಕೆ ಇತ್ತು.

“ನಾನು ನಮ್ಮ ತಂದೆ ತಾಯಿಯನ್ನು ಒಪ್ಪಿಸುವೆ” ಎಂದು ಸುಧೀರ ಅವರಿಗೆ ಆಶ್ವಾಸನೆಕೊಟ್ಟು, ಅವರನ್ನು ಹೋಟೆಲಿಗೆ ಬಿಟ್ಟು ಬಂದ. ಶಿಲ್ಪ ಬಾಬ್ ಕತ್ತರಿಸಿಕೊಂಡ ಕೇಶಾಲಂಕರಣ, ಅವಳು ಧರಿಸಿದ ಜೀನ್ಸ್ ಮತ್ತು ಟಾಪ್ ಅವಳ ಅಭಿರುಚಿಯನ್ನು ಸಾರುತ್ತಿದ್ದವು. ಅವಳನ್ನು ಬೀಳ್ಕೊಡುವಾಗ ಅವಳ ಪ್ರತಿಬಿಂಬ ಇವನ ಕಣ್ಣಿನಲ್ಲಿ ಉಳಿಯಿತು. ಅವಳ ಪ್ರೀತಿಯ ಪ್ರತಿಮೆ ಅವನ ಹೃದಯದಲ್ಲಿ ಪ್ರತಿಷ್ಠಾಪಿತವಾಯಿತು. ಅವರಿಬ್ಬರನ್ನು ಪ್ರೀತಿಯಲ್ಲಿ ಬಂಧಿಸಿರುವಂತೆ ಅನಿಸಿತು.

ಮನೆಗೆ ಬಂದ ಸುಧೀರ್ ಅಂದು ಬಲು ಕಷ್ಟಪಟ್ಟು ತಂದೆ ತಾಯಿಯು ಮುಂದೆ ತನ್ನ ಮನದ ಇಂಗಿತವನ್ನು, ಶಿಲ್ಪಾಳ ವೈಕಲ್ಯವನ್ನು ಸ್ಪಷ್ಟಪಡಿಸಿದ. ಒಮ್ಮಿಂದೊಮ್ಮಿಗೆ ಅವರಿಗೆ ಗರಬಡಿದಂತಾಯಿತು. ಇಷ್ಟು ವರ್ಷ ತಾವೆಷ್ಟೇ ಪ್ರಯತ್ನ ಮಾಡಿದರೂ ಎಷ್ಟೇ ಒಳ್ಳೆಯ ವಂಶಸ್ಥ ಸಂಬಂಧಗಳು ಬಂದಿದ್ದರೂ, ಅದು ಯಾವುದಕ್ಕೂ ಸುಧೀರ ಸ್ಪಂದಿಸಿರಲಿಲ್ಲ, ಅವರಿಗೆ ಇದಾವುದೋ ಸಿನಿಮಾ ಕಥೆಯಂತೆ ತೋರಿತು. ಎಷ್ಟೋ ಬಾರಿ ಹಿರಿಯರು ನಿಶ್ಚಯಿಸಿದ ಮದುವೆಗಳು ಮುರಿದುಬಿದ್ದ ಸಂದರ್ಭಗಳಿವೆ. ಸುಧೀರನ ನಿರ್ಣಯಕ್ಕೆ ಅವರು ಯಾವ ರೀತಿಯಲ್ಲೂ ಉತ್ತರಿಸದಾದರು. ಪ್ರೀತಿ ಪ್ರಣಯ ಪ್ರೇಮ ಅಂತ ಮಾಡಿಕೊಳ್ಳುವ ಮದುವೆಗಳು ಡಿವೋರ್ಸಿನಲ್ಲಿ ಕೊನೆ ಕಾಣುತ್ತವೆ. ಇನ್ನೂ ಇಂಟರ್‌ನೆಟ್ ಜಾಲದ ಮದುವೆ ಯಾವ ಆಧಾರದ ಮೇಲೆ ನಿಂತಾವು ? ಎಂದು ಶಂಕಿಸಿದರು. ಅದರಲ್ಲಿ ಬಿಗಿ ಭದ್ರತೆ ಇದೆಯೇ? ಎಂಬುದು ಅವರ ಪಾಲಿನ ನುಂಗದ ತುತ್ತಾಗಿತ್ತು.

“ಅಪ್ಪಾ ! ಅಮ್ಮ! ನಿಮ್ಮ ಮನಸ್ಸಿನಲ್ಲಿ ಆಗುತ್ತಿರುವ ಹೊಯ್ದಾಟವನ್ನು ನಾನು ಅರ್ಥನೂ ಮಾಡಿಕೊಳ್ಳಬಲ್ಲೆ. ನಿಮಗೆ ಇರುವ ಎಲ್ಲಾ ಸಂಶಯಗಳನ್ನು ಶಿಲ್ಪಳ ತಂದೆತಾಯಿ ಜೊತೆ ಮಾತನಾಡಿ ನಿವಾರಿಸಿಕೊಳ್ಳಿ. ನಿಮ್ಮ ಮನಸ್ಸಿಗೂ ಶಿಲ್ಪ ಖಂಡಿತ ಒಪ್ಪಿಗೆಯಾಗುತ್ತಾಳೆ” ಎಂದ ಸುಧೀರ.

ಆ ದಿನ ಸಂಜೆ ಶಿಲ್ಪ ಮತ್ತು ಅವರ ತಂದೆ ತಾಯಿಯರು ಸುಧೀರನ ತಂದೆ ತಾಯಿಯನ್ನು ಭೇಟಿಯಾಗಲು ಬಂದರು. ಭಾಷೆ, ಸಂಪ್ರದಾಯ, ಸಂಸ್ಕೃತಿಯಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸಗಳಿದ್ದರೂ ಮೂಲತಃ ಮಾನವತ್ವದ ಸುಸಂಸ್ಕೃತಿ ಅವರಲ್ಲಿತ್ತು. ಇಂದು ಶಿಲ್ಪ ಸೀರೆಯುಟ್ಟು ಮುದ್ದು ಗೌರಿಯಂತೆ ಕಾಣುತ್ತಿದ್ದಳು. ಹಣೆಗೆ ತಿಲಕ, ಕತ್ತರಿಸಿದ ಕೂದಲನ್ನು ಪೋನಿ ಟೇಲ್ ಕಟ್ಟಿ ಮಲ್ಲಿಗೆ ಮುಡಿದು, ಕೈಗೆ ಬಳೆ, ಕತ್ತಿಗೆ ಮಿನುಗುವ ಬಂಗಾರದ ಸರ ಅವಳ ಮುಖಕ್ಕೆ ಕಾಂತಿ ಕೊಟ್ಟಿತ್ತು. ಅವಳ ಮೃದು ಸ್ವಭಾವ ಅವಳ ನಯ, ವಿನಯ ಎಲ್ಲವೂ ಕ್ಷಣಾರ್ಧದಲ್ಲಿ ಸುಧೀರನ ತಂದೆತಾಯಿಗಳಿಗೆ ಹಿಡಿಸಿತು. “ಅವಳಿಗಾಗಿಯೇ ಇಷ್ಟುದಿನ ಕಾದಿದ್ದೆವು” ಎಂಬಂತೆ ಅವರು ಒಪ್ಪಿಗೆ ಇತ್ತರು.

ಎರಡು ತಿಂಗಳು ಕಾದು ಶ್ರಾವಣ ಬಂದೊಡನೆ ಗುರುಹಿರಿಯರು ನಿಶ್ಚಯಿಸಿದ ಅವರ ಮದುವೆ ಜರಗಿಯೇ ಹೋಯಿತು. ಶಿಲ್ಪಳ ಅದೃಷ್ಟವೋ, ಸುಧೀರನ ಭಾವ ವೈಶಾಲ್ಯವೋ, ತಂದೆ ತಾಯಿಯರ ಸ್ವೀಕೃತಿಯೋ, ಇಲ್ಲ ಅವರಿಬ್ಬರ ಋಣಾನುಬಂಧವೋ ಅವರ ಮದುವೆ ಶಾಸ್ತ್ರೋಕ್ತವಾಗಿ ನಡೆದುಹೋಯಿತು.

ಆಕೆ ಶ್ರವಣ, ವಾಕ್ ವಿಕಲ ಚೇತನಳಾದರೂ ಅವರ ಪ್ರೇಮಕ್ಕೆ ವೈಕಲ್ಯವಿರಲಿಲ್ಲ ಹೀಗಾಗಿ ಅವರು ಸತಿಪತಿಗಳಾದರು.

ಶಾದಿ.ಡಾಟ್ ಕಾಂ. ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶುಕ್ರವಾರ ಸುಧೀರ್ ಶಿಲ್ಪಳನ್ನು ಅಭಿನಂದಿಸಲಾಯಿತು.

ಆ ಸಂಧರ್ಭದಲ್ಲಿ ಸುಧೀರ್ ತನ್ನ ಮನ ಬಿಚ್ಚಿ ಮಾತಾಡಿದ. “ಮೊದಲು ಅವಳು ಹೇಗೋ ಏನೋ ಎಂಬ ತಳಮಳ ಇದ್ದೇ ಇತ್ತು. ಆದರೆ ಅವಳನ್ನು ಭೇಟಿಯಾದಾಗ ಹಾಗನ್ನಿಸಲಿಲ್ಲ ಅವಳು ನನ್ನ ಮೇಲಿರಿಸಿದ್ದ ಪ್ರೀತಿ, ನಂಬಿಕೆ ಅವಳ ವೈಕಲ್ಯವನ್ನು ಮರೆಮಾಚಿತ್ತು” ಎಂದು ನುಡಿದಾಗ ಜನರು ಅವನ ಭಾವನೆಗೆ ಸಂವೇದಿಸಿದರು. ಈಗ ಮದುವೆಯಾಗಿ ಹತ್ತು ತಿಂಗಳುಗಳಾಗಿವೆ. ಅವರು ಒಬ್ಬರನ್ನೊಬ್ಬರು ಅರಿತುಕೊಂಡು ಹೊಂದಿಕೊಂಡಿದ್ದಾರೆ.

ವಿಕಲಚೇತನಳೆಂದು ತಿಳಿದಿದ್ದರೂ ನನ್ನನ್ನು ಮದುವೆ ಆಗಿದ್ದು ನಿಜಕ್ಕೂ ಅದೃಷ್ಟ. ನಾನು ಈಗ ನನ್ನ ಪತಿಯೊಂದಿಗೆ ಸುಖವಾಗಿದ್ದೇನೆ ಎಂದು ಕೈಸನ್ನೆಯ ಮೂಲಕವೇ ತಿಳಿಸಿದ್ದಳು ಶಿಲ್ಪ.

ಮಾರನೆಯ ದಿನ ಆಂಗ್ಲ ಹಾಗೂ ಕನ್ನಡ ದಿನಪತ್ರಿಕೆಗಳಲ್ಲಿ ‘ಇದು ಯಾವುದೋ ಸಿನಿಮಾ ಕಥೆಯಲ್ಲ, ಶಾದಿ ಡಾಟ್ ಕಾಂ ಮೂಲಕ ಸಂಗಾತಿ ಆರಿಸುತ್ತಿದ್ದ ಸುಧೀರ್ ಹಾಗೂ ಶಿಲ್ಪರವರ ನೈಜಕಥೆ, ಇಂಟರ್ ನೆಟ್ ಲವ್-ಮದುವೆ ಯಶಸ್ವಿ ಆಗಲಾರದು ಎಂಬ ಸಾರ್ವಜನಿಕರ ಭಾವನೆ ಸುಳ್ಳಾಗಿಸಿದ ಈ ಜೋಡಿ ಇಂದು ತಮ್ಮ ದಾಂಪತ್ಯ ದೀವಿಗೆ ಬೆಳಗಿದ “ಮೌನರಾಗ” ಹಾಡಿ ನಲಿದಿದ್ದಾರೆ, ಅನುರಾಗದ ಹೊಳೆ ಹರಿಸಿದ್ದಾರೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಣ್ಣ
Next post ಆಸೆಗಳು

ಸಣ್ಣ ಕತೆ

 • ಹನುಮಂತನ ಕಥೆ

  ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

 • ಹುಟ್ಟು

  ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

 • ಲೋಕೋಪಕಾರ!

  ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

 • ಆ ರಾತ್ರಿ

  ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

 • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

  ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…