ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು ಎತ್ತಿ ಎತ್ತಿ ಅಜ್ಜಿಗೆ ಸಹಾಯ ಮಾಡುತ್ತಿತ್ತು. ಆ ಸಂಜೆ ಸೂರ್ಯ ಮುಳುಗಲು ಇನ್ನೂ ಒಂದೆರಡೂ ತಾಸು ಬಾಕಿ ಇತ್ತು. ಊರಿನ ದನಕರುಗಳು ಮೇಯ್ದು ಮೆಲ್ಲಗೆ ಮನೆ ಹಾದಿ ಹಿಡಿದಿದ್ದವು. ಪಡುವಣ ಸೂರ್ಯ ತೆಂಗಿನ ಗಂಗಳ ನೆರಳನ್ನು ಮನೆಯ ಮಾಡಿಗೆ ಅಂಗಳಕ್ಕೆ ಹಾಯಸಿದ್ದ. ಒಳಗೆ ಒಲೆಯ ಮೇಲೆ ಕೊಚ್ಚಕ್ಕಿ ಗಂಜಿ ಮೆಲ್ಲಗೆ ರಾತ್ರಿ ಊಟಕ್ಕೆ ಪುಟ್ಟ ಪಾತ್ರೆಯಲ್ಲಿ ಕುದಿಯುತ್ತಿತ್ತು. ಬಕೆಟ್ಟಿನಲ್ಲಿ ನೀರು ತುಂಬಿಕೊಂಡು ಬಂದ ಚೆಂದು ತೆಂಗಿನ ಕಟ್ಟೆಯ ಮೇಲಿನ ಹಾಸುಗಲ್ಲಿನ ಮೇಲೆ ಕುಳಿತು ಕಾಡಿಗೆ ಹಿಡಿದು ಕಪ್ಪಾದ ಅಡುಗೆ ಮನೆಯ ಡಬ್ಬಿಗಳನ್ನು ಬಟ್ಟೆ ಒಗೆಯುವ ಸೋಪಿನಿಂದ ಉಜ್ಜಿ ಉಜ್ಜಿ ತೊಳೆಯತೊಡಗಿದಳು. ಮೂರು ಸಂಜೆಯ ಹತಾಶೆಯ ಭಾವಕ್ಕೋ ತನ್ನ ಈಗಿನ ಪರಿಸ್ಥಿತಿಗೆ ಅಂಗಳದಲ್ಲಿ ಆಡುತ್ತಿದ್ದ ಮಗಳನ್ನು ಕಂಡು ಅವಳ ಕಣ್ಣಲ್ಲಿ ಪಟಪಟನೆ ಹನಿಗಳು ಉದುರಿದವು. ಮುಳುಗುವ ಸೂರ್ಯ ಮಂಕಾದ. ಹಾಡಿಗುಡ್ಡೆ ಸಂಜೆಯ ಮೌನದೊಳಗೆ ಒಂದಾಯಿತು. ಹೇಳಲಾಗದ ದಣಿವು ಅವಳ ಎದೆಯೊಳಗೆ ಇಳಿಯಿತು. ಅವಳು ತಿಕ್ಕಿದ ಡಬ್ಬಿಗಳನ್ನು ಮತ್ತೆ ಮತ್ತೆ ತಿಕ್ಕಿದಳು.
ಬಾಬು ಬೊಂಬಾಯಿಗೆ ಹೋಗಿ ತಿಂಗಳಾಗಿತ್ತು. ಅಲ್ಲಿಂದ ಯಾವ ಕಾಗದವೂ ಗೆಳೆಯ ಭೈರಿವಿನ ಫೋನಿಗೆ ಯಾವ ಕರೆಯೂ ಬಂದಿರಲಿಲ್ಲ. ಚಂದ್ರಾವತಿ ಇದ್ದ ಸಂತೆಯಲ್ಲಿಯೇ ಈ ಒಂದು ತಿಂಗಳು ಗಂಜಿ ಬೇಯಿಸಿದಳು. ಮಗಳು ಗುಡ್ಡೆಯ ಆಚೆಬದಿಯ ಶಾಲೆಗೆ ಹೋಗುತ್ತಿದ್ದಳು. ಮಧ್ಯಾನ್ಹ ಮಗಳಿಗೆ ಶಾಲೆಯಲ್ಲಿ ಬಿಸಿಊಟ ಸಿಗುತ್ತಿತ್ತು. ಅವಳು ರಾತ್ರಿ ಮಾತ್ರ ಗಂಜಿ ಕಾಯಿಸುತ್ತಿದ್ದಳು. ಹಾಡಿಯ ಸೊನೆಯ ಮಾವಿನ ಕಾಯಿಯ ಹೋಳುಗಳನ್ನು ಉಪ್ಪು ಹಾಕಿ ಕಲಿಸಿಡುತ್ತಿದ್ದಳು. ಅಂವ ಹೀಂಗೆ ಹೋಗಿ ಒಂದು ನೌಕರಿ ಅಂತ ಸಿಕ್ಕರೆ ಸಾಕು, ತಪ್ಪದೇ ಹಣ ಕಳುಹಿಸುತ್ತೇನೆ ಹೆದರಬೇಡ ಅಂತ ಹೇಳಿ ಹೋಗಿದ್ದ. ಚಂದೂವಿಗೆ ಬಾಬುವಿನೊಂದಿಗೆ ಪ್ರೀತಿಸಿ ಅವನೊಟ್ಟಿಗೆ ಓಡಿ ಹೋಗಿ ಧರ್ಮಸ್ಥಳದಲ್ಲಿ ಮದುವೆ ಆದ ದಿನವೇ ಈಗಲೂ ಮನದಲ್ಲಿ ಹಸಿರಾಗಿ ಕುಳಿತಿದೆ. ಎಷ್ಟೊಂದು ಕನಸುಗಳ ಹೊತ್ತು ಅವನ ಹಿಂದೆ ಓಡಿ ಬಂದಿದ್ದೆ. ಎಸ್.ಎಸ್.ಎಲ್.ಸಿ.ಮುಗಿದು ವರ್ಷವಾಗಿತ್ತು ತಾನು ಮುಂದೆ ಓದುವುದಕ್ಕೆ ಆಗಲಾದಕ್ಕೆ ದೂರದ ಕುಂದಾಪುರಕ್ಕೆ ಕಾಲೇಜಿಗೆ ಸೇರಲಾಗದಕ್ಕೆ ಚಂದ್ರಾವತಿ ಹೊಲಿಗೆ ಕ್ಲಾಸಿನ ಹಾದಿ ಹಿಡಿದಿದ್ದಳು. ಅಪ್ಪಯ್ಯ ಪುರೋಹಿತರಾಗಿದ್ದರು. ಚೂರು ಗದ್ದೆ ತೆಂಗಿನ ತೋಟಗಳಿದ್ದವು. ತಮ್ಮ ಚಿಕ್ಕವ ಓದುತ್ತಿದ್ದ ಚಂದ್ರಾವತಿ ಶಾಲೆಗೆ ಹೋಗುವ ಮುನ್ನ ಇಡೀ ಮನೆ ಕಸಗುಡಿಸಿ, ಒರಿಸಿ, ದೇವರ ಪಾತ್ರೆಗಳನ್ನು ಹುಣಸೆ ಹಣ್ಣಿನಿಂದ ತಿಕ್ಕಿ ತಿಕ್ಕಿ ತೊಳೆದು, ಬೆಳಿಗ್ಗೆ ಅಮ್ಮ ಮಾಡಿಕೊಟ್ಟ ತಿಂಡಿ ತಿಂದು, ಅವನ್ನೆ ಡಬ್ಬಿಯಲ್ಲಿ ತುಂಬಿಕೊಂಡು ಪಕ್ಕದ ಊರಿನಲ್ಲಿರುವ ಹೈಸ್ಕೂಲಿಗೆ ಹಾಡಿ, ಹೊಳೆದಾಟಿ ಹೋಗಿ ಬರುತ್ತಿದ್ದಳು. ದಿನಾಲೂ ಶಾಲೆಗೆ ಹೋಗುವ ಮುಂಚೆ ಅವಳಪ್ಪಯ್ಯ ದೇವರ ಮುಂದೆ ಕುಳಿತು, ಮಂತ್ರಗಳನ್ನು ಜೋರಾಗಿ ಉದುರಿಸುತ್ತಿದ್ದರು. ಊದಿನ ಕಡ್ಡಿಯ ವಾಸನೆಯನ್ನು ಎದೆಯಲ್ಲಿ ಇರಿಸಿಕೊಂಡು ಚಂದ್ರಾವತಿ ಪಕ್ಕದ ಮನೆಯ ಮಕ್ಕಳೊಡನೆ ಹೈಸ್ಕೂಲಿನ ಹಾದಿ ತುಳಿಯುತ್ತಿದ್ದಳು. ಹಾಡಿಗುಡ್ಡೇ ದಾಟಿ ಹೋಗುವಾಗ ಪ್ರತಿದಿನ ಎರಡು ತುಂಟ ಕಣ್ಣುಗಳು ಅವಳನ್ನು ಹಿಂಬಾಲಿಸುತ್ತಿದ್ದವು. ಹದಿನಾರರ ವಯಸ್ಸು ಅವಳು ಪುಲಕಿತಗೊಳ್ಳುತ್ತಿದ್ದಳು. ಒಮ್ಮೊಮ್ಮೆ ಗೇರುಹಣ್ಣು ಹೆಕ್ಕುವ ನೆಪದಲ್ಲಿ ಚಂದ್ರಾವತಿ ಗೆಳತಿಯರ ಗುಂಪಿನಿಂದ ಹಿಂದೆ ಉಳಿಯುತ್ತಿದ್ದಳು. ಹಾಡಿಗುಡ್ಡೇ ಆ ಗಂಡಿನ ಮೋರೆಯಲ್ಲಿ ತುಂಟತನ ಲಾಸ್ಯವಾಡುತ್ತಿತ್ತು.
ಬಾಬು ಶೇರೆಗಾರ್ತಿ ಬೀರಮ್ಮನ ಮಗಸಾಲೆ ಅರ್ಧಕ್ಕೆ ಮುಗಿಸಿ ಕೂಲಿಕೆಲಸಕ್ಕೆ ಹೋಗುತ್ತಿದ್ದ. ಹಾಡಿಗುಡ್ಡೆಯ ಮೇಲೆ ಒಂದು ಮಣ್ಣಿನ ಗೋಡೆಗಳ ಹಂಚಿನ ಮನೆ ಅವರಿಬ್ಬರು ತಾಯಿ ಮಗನ ಪಾಲಿಗಿತ್ತು. ನಾಲ್ಕಾರು ತೆಂಗಿನ ಮರಗಳನ್ನು ನೆಟ್ಟಿದ್ದರು. ಬಾಬು ನಾಟಾ ಕಡಿಯಲು ಕಟ್ಟಿಗೆ ಡಿಪೋಕ್ಕೆ ಹೋಗುತ್ತಿದ್ದ. ಆಗಲೇ ಹದಿನೆಂಟು ದಾಟಿತ್ತು. ಚಂದ್ರಾವತಿ ಶಾಲೆಗೆ ಹೋಗುವ ಸಮಯದಲ್ಲಿಯೇ ಅವನು ಕಟ್ಟಿಗೆ ಡಿಪೋಗೆ ಹೋಗುತ್ತಿದ್ದ. ನೋಡಲು ಸುಂದರವಾಗಿದ್ದ. ಚಂದ್ರಾವತಿ ದಿನಾಲೂ ಅವನ ಮುಖನೋಡಿ ಮುಗುಳ್ನಗೆ ನಗುತ್ತಿದ್ದಳು. ಜೊತೆಯಲ್ಲಿದ್ದವರ ಗಮನಕ್ಕೆ ಇದು ಬರಲೇ ಇಲ್ಲ. ಅವರು ತಮ್ಮ ಪಾಡಿಗೆ ತಾವೆ ನಗುತ್ತ ಶಾಲೆಯ ಕಡೆ ಮುಖ ಮಾಡುತ್ತಿದ್ದರು.
ಚಂದ್ರಾವತಿಗೆ ಬಾಬುವಿನಲ್ಲಿ ಏನೋ ಒಂದು ಆಕರ್ಷಣೆ ಉಂಟಾಗಿತ್ತು. ಅವನನ್ನು ನೋಡಿದ ತಕ್ಷಣ ಅವಳ ಮನಸ್ಸಿನಲ್ಲಿ ರೇಡಿಯೋದಲ್ಲಿ ಕೇಳಿ ಬರುತ್ತಿದ್ದ ಚಿತ್ರಗೀತೆಗಳು ಮಂಡೆಯಲ್ಲಿ ಮೂಡುತ್ತಿದ್ದವು. ಹಾಡಿಗುಡ್ಡೆಯ ಹಸಿರು ಮರಗಳೆಲ್ಲವೂ ತಾಳದಂತೆ ಗಾಳಿಗೆ ವಾಲುತ್ತಿದ್ದವು. ಕಿಸ್ಕಕಾರ ಹೂ ಹಣ್ಣು ನಾಚಿಕೆಯಿಂದ ಕೆಂಪಗೆ ಕಂಗೊಳಿಸುತ್ತಿದ್ದವು. ಹುಡುಗಿಯರ ಸಾಲು ಮುಂದೆ ಮುಂದೆ ಬಾಬು ಊಟದ ಡಬ್ಬಿ ಹಿಡಿದು ಹಿಂಹಿಂದೆ ಹೋಗುತ್ತಿದ್ದ. ಒಮ್ಮೊಮ್ಮೆ ಚಂದ್ರಾವತಿಯೇ ಮೈ ಮೇಲೆ ಬಿದ್ದು ಕೆಲಸಕ್ಕೆ ಹೊರಟರಾ ಅಂತ ಮಾತನಾಡಿಸುತ್ತಿದ್ದಳು. ದಿನಾ ಮುಖಾಮುಖಿ ಆಗುವ ಅವರಿಬ್ಬರಲ್ಲಿ ಒಂದು ಸೆಳೆತ ಪ್ರಾರಂಭವಾಯ್ತು. ಬಾಬುವಿನ ಹದಿಹರೆಯದ ಸೆಳೆತದ ಕನಸುಗಳು ವಾಸ್ತವವಾಗಿ ತುಂಬ ದೂರ ಇದ್ದವು. ಚಂದ್ರಾವತಿ ಚಂಚಲೆ ಆದಳು. ಅವಳಮ್ಮ ಶಾಲೆಗೆ ಹೋಗುವಾಗ ಅವಳನ್ನು ದಿನಾಲು ಎಚ್ಚರಿಸುತ್ತಿದ್ದಳು. “ಶಾಲೆ ಬಿಟ್ಟ ಮೇಲೆ ಅಲ್ಲಿ ಇಲ್ಲಿ ಸುತ್ತಾಡಬೇಡಿ ಸೀದಾ ಮನೆಗೆ ಬನ್ನಿ, ಅಪ್ಪಯ್ಯನಿಗೆ ನೀನು ತಡಮಾಡಿ ಬರುವುದು ಸೇರುವುದಿಲ್ಲ. ಅವರು ಕಟ್ಟಾ ಬ್ರಾಹ್ಮಣ ನೀನು ಅದು ಇದು ಅಂತ ತಡಮಾಡಿ ಕತ್ತಲೆ ಮಾಡಿಕೊಂಡು ಮನೆಗೆ ಬರಬೇಡ.” ಅಮ್ಮನ ಉಪದೇಶಗಳನ್ನು ಒಂದನ್ನೂ ಕಿವಿಯ ಒಳಗೆ ಹಾಕಿಕೊಳ್ಳದ ಚಂದ್ರಾವತಿ ಇವತ್ತು ಲೆಕ್ಕ ಬಿಡಿಸಲಿಕ್ಕೆ ಶಾರದೆ ಮನೆಗೆ ಹೋಗಿದ್ದೆ, ನೋಟ್ಸ್ ಬರೆದುಕೊಳ್ಳಲು ವಿದ್ಯಾಳ ಮನೆಗೆ ಹೋಗಿದ್ದೆ ಅಂತಾ ಒಂದರ ಮೇಲೊಂದು ಸುಳ್ಳುಗಳನ್ನು ಹೇಳುತ್ತಿದ್ದಳು. ಗೆಳತಿಯರನ್ನು ಇಲ್ಲದ ನೆಪಹೇಳಿ ಅವರಿಂದ ತಪ್ಪಿಸಿಕೊಳ್ಳುತ್ತಿದ್ದಳು. ಮೆಲ್ಲಗೆ ಬಾಬುವಿನ ಜೊತೆ ಹರಟೆ ಹಾಡಿಗುಡ್ಡೆ ದಾಟಿ ಬರುವ ಜೊತೆ ಎಲ್ಲವೂ ಬಿಡಿಸಲಾಗದ ಬಂಧಗಳಾದವು.
ಒಮ್ಮೆ ಚಂದ್ರಾವತಿಯ ಅಮ್ಮನ ಕಿವಿಗೆ ಅವಳ ಬಾಬುವಿನ ಜೊತೆ ಸ್ನೇಹದಿಂದ ಇರುವ ಸುಳಿವು ಸಿಕ್ಕಿ ಮನೆಯಲ್ಲಿ ಅವಳನ್ನು ತರಾಟೆಗೆ ತೆಗೆದುಕೊಂಡಿದ್ದಳು. “ಹೊಗಮ್ಮಾ ಯಾರ್‍ಯಾರ ಮಾತು ಕೇಳಿ ಸುಮ್ಮನೆ ತಲೆ ಕೆಡಿಸಿಕೊಳ್ಳಬೇಡ ಈ ಸಲ ನಾನು ಎಸ್.ಎಸ್. ಎಲ್.ಸಿ. ಚೆನ್ನಾಗಿ ಅಭ್ಯಾಸ ಮಾಡಬೇಕೆಂದು ನಾನು ಒದ್ದಾಡಕ ಹತ್ತೀನಿ. ನಿನೊಬ್ಬಳು ಸುಮ್ಮನೆ ನನಗೆ ಕಿರಿಕಿರಿ ಮಾಡ್ತಿ” ಅಂತ ಅವಳಮ್ಮನ ಬಾಯಿ ಮುಚ್ಚಿಸಿದ್ದಳು. ಅವಳು ತಾಯಿಯ ಕಳಕಳಿಯನ್ನು ಅರ್ಥ ಮಾಡಿಕೊಳ್ಳದ ವಯಸ್ಸಿನಲ್ಲಿದ್ದಳು. ಆ ವಯಸ್ಸಿಗೆ ಸಹಜವಾದ ಸ್ವೇಚ್ಛಾಚಾರ ಚಂದ್ರಾವತಿಯಲ್ಲಿದ್ದು ಅವಳು ಬಾಬು ಒಬ್ಬನೇ ತನ್ನನ್ನು ಇಷ್ಟಪಡುವವನು ಎಂಬ ಭಾವ ಆಳವಾಗಿ ಅವಳಲ್ಲಿ ಬೇರೂರಿತ್ತು. ಮಾತಿನಲ್ಲಿ ಚುರುಕಾದ ಬಾಬು ಚಂದ್ರಾವತಿಯನ್ನು ತನ್ನ ಮನಸ್ಸಿನೊಳಗೆ ಸೆಳೆದು ಇಳಿಸಿಕೊಂಡುಬಿಟ್ಟ. ದಿನಾಲೂ ಅವರಿಬ್ಬರ ಅಪಕ್ವ ಹರಟೆಗೆ ಹಾಡಿಗುಡ್ಡೆಯ ಮರಗಿಡಗಳು ಸಾಕ್ಷಿಯಾದವು. ಬಾಬು ಕೆಲಸದಿಂದ ಹಿಂದುರಿಗಿ ಬರುವಾಗ ತನ್ನ ಊಟದ ಡಬ್ಬಿಯಲ್ಲಿ ಐಸ್ ಕ್ಯಾಂಡಿ ಇಟ್ಟುಕೊಂಡು ಬಂದು ಹಾಡಿಯ ದಾರಿಯಲ್ಲಿ ಅವಳಿಗೆ ಕೊಡುತ್ತಿದ್ದ, ಅವರಿಬ್ಬರೂ ಐಸ್ ಕ್ಯಾಂಡಿಯನ್ನು ಚಪ್ಪರಿಸುತ್ತ ವಿಚಿತ್ರ ಸಂತೋಷದ ಅಲೆಗಳಲ್ಲಿ ತೇಲುತ್ತಿದ್ದರು. ವೃತ್ತಾಂತಗಳು (ಕೂಲಾಗೆ) ಕೂಲ್ ಆಗಿ ಇದ್ದವು. ಬರಬರುತ್ತ ಹಾಟ್ ಆದವು, ಇಬ್ಬರಲ್ಲೂ ಒಂಥರಾ ಹಪಾಹಪಿ ಹುಟ್ಟಿಕೊಂಡಿತು. ಹಾಡಿಗುಡ್ಡೆಯ ಪ್ರಕರಣ ಹಪಹಪಿಯೂ ಚಂದ್ರಾವತಿ ಅಪ್ಪನ ನಜರಿಗೆ ಬರಲೇ ಇಲ್ಲ. ಅವರಿಬ್ಬರ ಹತ್ತಿರದನಂಟು ಮಾತುಕತೆ ಓದುತ್ತಿದ್ದ ಚಂದ್ರಾವತಿಯ ಲಕ್ಷವನ್ನೆಲ್ಲಾ ಅಲಕ್ಷ್ಯ ಮಾಡಿ ಅವಳು ಸಾದಾ ತರಗತಿಯಲ್ಲಿ ಎಸ್.ಎಸ್.ಎಲ್.ಸಿ. ಪಾಸು ಮಾಡಿದಳು. ಅಪ್ಪಯ್ಯ ಎಸ್.ಎಸ್.ಎಲ್.ಸಿ. ಸಾದಾ ಪಾಸಾಗಿದ್ದಕ್ಕೆ ಅವಳನ್ನು ಕುಂದಾಪುರದ ಕಾಲೇಜಿಗೆ ಸೇರಿಸಲು ಆಗುವುದಿಲ್ಲವೆಂದು ಸೀದಾ ಬೆಣೆಮನಿಯ ಶಾರದೆಯ ಹತ್ತಿರ ಹೊಲಿಗೆ ಕ್ಲಾಸಿಗೆ ಹಚ್ಚಿದರು. ಚಂದ್ರಾವತಿ ಈಗಂತೂ ರೆಕ್ಕೆ ಬಿಚ್ಚಿದ ಹಕ್ಕಿಯಂತಾದಳು. ಯಾವ ಗೆಳತಿಯರೂ ಅವಳನ್ನು ಹಿಂಬಾಲಿಸುತ್ತಿರಲಿಲ್ಲ. ಹಾಡಿಯ ಗುಡ್ಡೆಯ ಮೌನದಲ್ಲಿ ಬೀಸುವ ಬಿರುಗಾಳಿಗೆ ಅವಳು ಮುಖ ಒಡ್ಡಿ ಚಲುಸುತ್ತಿದ್ದಳು. ಮನದ ಮೂಲೆಯಲ್ಲಿ ಜೇನುಗೂಡು ಕಟ್ಟಿದ್ದಳು. ಬಾಬು ನಿರಂತರವಾಗಿ ಅವಳನ್ನು ಹಿಂಬಾಲಿಸುತ್ತಿದ್ದ. ಅವಳ ಲೋಕ. ರಮ್ಯಲೋಕವಾಯ್ತು. ಆದರೆ ಹೊಲಿಗೆಯನ್ನು ಬಹಳ ನಿಷ್ಠೆಯಿಂದ ಕಲಿಯುತ್ತಿದ್ದಳು. ಆಕಾಶದ ಬಿಳಿ ಮೋಡಗಳ ಮದ್ಯೆಯ ಸೂರ್ಯನಬಿಸಿಲು ಅವಳನ್ನು ಆ ದಾರಿ ಸವೆಯುವಾಗ ಮತ್ತಿಷ್ಟು ಕೆಂಪಾಗಿಸುತ್ತಿದ್ದ ಚಂದ್ರಾವತಿಯ ಗೆಳತನದಲ್ಲಿ ಇಪ್ಪತ್ತರ ಹರೆಯದ ಬಾಬು ಬದುಕಿನ ಹಂದರದ ಕನಸು ಕಟ್ಟತೊಡಗಿದ. ಹೊಲಿಗೆ ಕ್ಲಾಸು ಅವರಿಬ್ಬರನ್ನೂ ಇನ್ನೂ ಹತ್ತಿರ ತಂದಿತು. ಹಾಡಿಯ ಕಿಸ್ಕಕಾರ ಹಣ್ಣುಗಳೆಲ್ಲಾ ಇವರಿಬ್ಬರ ಜೋಡಿಯನ್ನು ನೋಡಿ ಕಿಸಕ್ಕನೆ ನಗುತ್ತಿದ್ದವು. ಒಂದು ಮುಗ್ಧ ನವುರಾದ ಪ್ರೇಮ ಆ ಹಾಡಿಗುಡ್ಡೆಯಲ್ಲಿ ಚಿಗುರೊಡೆದು ಮರವಾಯ್ತು. ಚಂದ್ರಾವತಿ ಹದಿನೇಳು ದಾಟಿದ್ದಳು, ಬಾಬು ಅವಳನ್ನು ಚೆಂದೂ ಎಂದು ಕರೆಯತೊಡಗಿದ, ಬಾಬುನ ಅಮ್ಮ ಇದನ್ನು ವಿರೋಧಿಸಿದಳು. ಬಾಬು ಕಿವಿಕೊಡಲಿಲ್ಲ.
ಚೆಂದು ಆ ಗುಡಿಸಿನಂತಹ ಮನೆಯಲ್ಲಿ ಚಂದ್ರನ ಬೆಳಕು ಮಾಡಿನಿಂದ ನೆಲದ ಮೇಲೆ ಪಸರಿಸದ್ದು ನೋಡುತ್ತ ಮಗಳನ್ನು ಪಕ್ಕದಲ್ಲಿ ತಬ್ಬಿ ಮಲಗಿದತಿದ್ದು, ತನ್ನ ಮತ್ತು ಬಾಬುವಿನ ಸಂಬಂಧ ಕುದುರಿದ್ದ ಬಗ್ಗೆ ತನು ಅಪ್ಪಯ್ಯ ಅಮ್ಮನನ್ನು ಬಿಟ್ಟು ಬಾಬುವಿನ ಹಿಂದೆ ಓಡಿ ಹೋದದ್ದು, ಧರ್ಮಸ್ಥಳದಲ್ಲಿ ಮದುವೆ ಆಗಿದ್ದು, ಈ ಮಾಡು ಹಂಚಿನ ಮನೆಗೆ ಕಾಲಿರಿಸಿದ್ದು, ಬಾಬುವಿನ ಅಬ್ಬೇ ಒರಲಿದ್ದು ಮತ್ತೆ ಇಬ್ಬರನ್ನೂ ಸಾಯಂಕಾಲ ಮನೆಯೊಳಗೆ ಪ್ರೀತಿಯಿಂದ ಕರೆದಿದ್ದು ಆ ರಾತ್ರಿ ತನಗೆ ಒಗ್ಗದ ಮೀನಿನ ಸಾರಿನಲ್ಲಿ ಅನ್ನ ಕಲಿಸಿ ಬಿಟ್ಟಿದ್ದು ನಾಳೆಯಿಂದ ನಿನಗೆ ಬೇಕಾದ ಹಾಗೆ ಅದಕಿ ಕುಚ್ಚು ಅಂತ ಬಾಬುವಿನ ಅಬ್ಬೇ ಹೇಳಿದ್ದು, ಆ ಮನೆಯ ಈಚಲು ಚಾಪೆಯ ಮೇಲೆ ಬಾಬುವಿನೊಟ್ಟಿಗೆ ಮಲಗಿ ರಾತ್ರಿ ಕಳೆದದ್ದು, ಇಡೀ ರಾತ್ರಿ ಬಿಕ್ಕುತ್ತಿದ್ದ ತನ್ನನ್ನು ಬಾಬು ಸಂತೈಸಿದ್ದು, ಎಲ್ಲವೂ ಸಿನೇಮಾ ರೀಲುಗಳಂತೆ ಅವಳ ಮನಸ್ಸಿನಲ್ಲಿ ಹಾಯ್ದು ಹೋದವು. ನಾನು ನಡೆದು ಬಂದ ದಾರಿಯ ಇನ್ನೊಂದು ತುದಿಯಲ್ಲಿ ಅಪ್ಪಯ್ಯ ಅಮ್ಮ-ತಮ್ಮ ಮಸುಕಾಗಿ ಅವಳಿಗೆ ಗೋಚರಿಸಿದರು. ಮೊದ ಮೊದಲು ಬಾಬುವಿನ ಮನೆಗೆ ಹೊಂದಿಕೊಳ್ಳಲು ಹೈರಾಣ ಆದಳು. ನಂತರ ಅದೇ ಬದುಕನ್ನು ತನ್ನ ಸೆರಗಿಗೆ ಕಟ್ಟಿಕೊಂಡಳು. ಮಗಳು ಕೇಳುತ್ತಿದ್ದಳು ಅಪ್ಪ ಯಾವಾಗ ಬರುತ್ತಾನೆ ಎಂದು ಚಂದೂಗೆ ಮಗಳ ಪ್ರಶ್ನೆಗೆ ಉತ್ತರ ಕೊಡುವುದೇ ಕಷ್ಟವಾತು. ಬಾಬು ಬೊಂಬಾಯಿಗೆ ಹೋಗಿ ತಿಂಗಳ ಮೇಲಾಗಿತ್ತು. ಅವಳಿಗೆ ಅಪ್ಪನೊಂದಿಗೆ ಶಾಲೆಯಿಂದ ಬಂದ ಕೂಡಲೇ ಆಟ ಆಡುವುದು ಇಷ್ಟವಾಗಿತ್ತು. ಬಾಬು ಮಗಳು ಹುಟ್ಟಿ ವರ್ಷಕ್ಕೆ ಬಾಬುವಿನ ಅಬ್ಬೆ ದಮ್ಮ ಹೆಚ್ಚಾಗಿ ತೀರಿಕೊಂಡಿದ್ದಳು. ಪುಟ್ಟ ಮಗಳು ಬಾಬುವಿನ ಹೆಗಲಿಗೇರಿಕೊಂಡಳು. ಅವನು ಕಟ್ಟಿಗೆಯ ಅಡ್ಡೆಗೆ ಹೋಗುವವರೆಗೆ ಮಗಳನ್ನು ಸಂಭಾಳಿಸುತ್ತಿದ್ದ. ಚಂದೂ ಅವನಿಗೆ ಅಡುಗೆ ಮಾಡಿ ಬುತ್ತಿ ಕಟ್ಟಿಕೊಡುತ್ತಿದ್ದಳು. ಆದಾಯ ಸಂಸಾರಕ್ಕೆ ಸಾಗುತ್ತಿರಲಿಲ್ಲ. ಕೆಲಸದ ಮಧ್ಯೆ ಚಂದೂ ಅವರಿವರ ರವಿಕೆ ಲಂಗಗಳನ್ನು ಹೊಲೆಯುತ್ತಿದ್ದಳು. ತಾನು ಹೊಲಿಗೆ ಕಲಿತ ಮಹಿಳಾ ಸಮಾಜದಿಂದ ಕಂತಿನ ಮೇಲೆ ಮಶೀನು ಖರೀದಿಸಿದ್ದಳು. ಒಮ್ಮೆ ಒಮ್ಮೆ ಅವಳಿಗೆ ತನ್ನಪ್ಪಯ್ಯನ ಮನೆಯ ಹಿತವಾದ ಊಟ ಕೊರತೆ ಇಲ್ಲದ ಬದುಕು ನೆನಪಾಗುತ್ತಿತ್ತು. ಆಗೆಲ್ಲಾ ಕಣ್ಣೀರೂ ತುಂಬಿ ಬಂದು ಅವಳು ತೆಂಗಿನ ಕಟ್ಟೆಯ ಬಳಿಗೆ ಹೋಗಿ ಅಳುತ್ತಿದ್ದಳು. ರಾತ್ರಿಯ ದಟ್ಟ ನೀರವತೆಯಲ್ಲಿ ಚಾಪೆಯ ಮೇಲೆ ಮಲಗಿ ಬಿಕ್ಕುತ್ತಿದ್ದಳು. ಹೊರಗಡೆ ಬೇರೆಯ ಸದ್ದುಗಳಾಗುತ್ತಿದ್ದವು. ಒಂದು ಅವಳನ್ನು ಆವರಿಸುತ್ತಿತ್ತು.
ತೊಳೆದ ಡಬ್ಬಿಗಳನ್ನು ಮತ್ತು ಪಾತ್ರೆಗಳನ್ನು ಒಂದು ಬುಟ್ಟಿಯಲ್ಲಿ ತುಂಬಿ ಚಂದೂ ಮನೆಯ ಒಳ ಬಂದಳು ಒಲೆಯ ಮೇಲೆ ಕೊಚ್ಚಕ್ಕಿ ಗಂಜಿ ಕುಡಿಯುತ್ತಿತ್ತು. ಗಂಜಿಯ ಪರಿಮಳ ಇಡೀ ಮನೆಯನ್ನು ಆವರಿಸಿತ್ತು. ಆ ಸೆರೆಗಾರರ ಮನೆಯಲ್ಲಿ ತಾನೇ ತಂದಿಟ್ಟುಕೊಂಡ ಪುಟ್ಟ ಗಣಪತಿಯ ಮುಂದೆ ಒಂದೂ ದೀಪ ಬೆಳಗಿದಳು. ಮೂರು ಸಂಜೆಯ ಕತ್ತಲಿನ ದಿಗಿಲು ಮೆಲ್ಲನೆ ಸರಿದಂತೆ ಅನಿಸಿತು. ಅವಳು ಚಂದೂನ ವಿಚಾರ ಬೇಗ ತಿಳಿಯಲಿ ದೇವರೇ ಎಂದು ಪ್ರಾರ್ಥಿಸಿದಳು. ಮಗಳು ಶಾಲೆಯ ಚೀಲ ನೋಟು ಪುಸ್ತಕಗಳನ್ನು ಹರವಿಕೊಂಡು ಸುಮ್ಮನೆ ಕುಳಿತಿದ್ದಳು. ಅವಳಿಗೆ ಮಗಳು ಹೀಗೆ ಮಂಕಾಗಿ ಕುಳಿತಿದೂ ಕಂಡು ದುಃಖ ಒತ್ತರಿಸಿ ಬಂತು. ದೇವರ ಮುಂದಿನಿಂದ ಸೀದಾ ಮಗಳು ಪಕ್ಕದಲ್ಲಿ ಬಂದು ಕುಳಿತುಕೊಂಡು, ಈ ದಿನ ಶಾಲೆಯಲ್ಲಿ ಏನು ಬರೆಯಲು ಕೊಟ್ಟಿದ್ದಾರೆ ಎಂದು ವಿಚಾರಿಸಿದಳು.
ಮೆಲ್ಲಗೆ ಮಗಳು ಕೈಗೆ ಪೆನ್ಸಿಲ್ಲು ಕೊಟ್ಟು ಮಗ್ಗಿಯನ್ನು ಬಾಯಿಂದ ಹೇಳಿ ಬರೆಯಿಸತೊಡಗಿದಳು. ಮಧ್ಯೆ ಮಧ್ಯೆ ಬೊಂಬಾಯಿಯಲ್ಲಿ ಬಾಬುವಿಗೆ ಕೆಲಸ ಸಿಕ್ಕಿತೋ ಹೇಗೆ ಎಂದು ಆಲೋಚನೆ ಬರುತ್ತಿತ್ತು. ರಾತ್ರಿಯ ಚೀರುಂಡೆಗಳು ಶಬ್ದ ಮಾಡತೊಡಗಿದವು. ಲೈಟು ಇರದ ಆ ಮನೆಯಲ್ಲಿ ಕಂದೀಲು ಬೆಳಕಲ್ಲಿ ಚಂದೂ ಮಗಳಿಗೆ ಪಾಠ ಹೇಳುವಾಗ ಅವಳಪ್ಪ ಅಮ್ಮ ಓದು ಓದು ಅಂತ ಹೇಳಿದ ಕಾಳಜಿಗಳು ಧುತ್ತನೆ ಅವಳನ್ನು ಆವರಿಸಿದವು. ಆ ಹಾಡಿಗುಡ್ಡೆಯ ಒಂಟಿ ಮನೆಯಲ್ಲಿ ಚ೦ದೂ ಒಂಟಿ ಮಿಂಚುಹುಳುವಿನಂತೆ ತನ್ನ ಬದುಕಿಗೆ ತಾನೇ ಬೆಳಕು ಹುಡುಕತೊಡಗಿದಳು. ಓಡಿಹೋಗಿ ಮದುವೆಯಾದ ಹೊಸದು, ಮನೆ ನೆನಪಾದರೂ ಬಾಬುವಿನ ಪ್ರೀತಿ ಈ ಒಂಟಿಮನೆಯಲ್ಲಿ ಅವಳು ಅವರೊಟ್ಟಿಗೆ ಹೊಂದಿಕೊಳ್ಳುವಂತೆ ಮಾಡಿತ್ತು. ಅನ್ನ ಸಾರು ಪಲ್ಯಗಳ ರಗಳೆ ಇಲ್ಲದೇ ಬರೀ ಗಂಜಿ ಮೀನಿನ ಸಾರು ಅಬ್ಬೆ ಮಗನ ಆಹಾರವಾಗಿತ್ತು. ಯಾವಾಗ ಬಾಬುವಿನ ಚಂದ್ರಾವತಿ ಉರ್ಫ್ ಚೆಂದು ಸಾರಿಗೆ ಹೇಸಿಕೊಳ್ಳತೊಡಗಿದಳೋ, ಬಾಬು ಮನೆಯ ಮಡಿಕೆಯಲ್ಲಿ ಬೇಳೆಸಾರು ಮಾಡುವಂತೆ ಅಬ್ಬೆಗೆ ಕೇಳಿಕೊಂಡನು. ಮೀನಿನ ಸಾರು ಉಂಡ ನಾಲಿಗೆ ಆಗಾಗ ಮೀನು ಬಯಸುತ್ತಿತ್ತು. ಮೀನಿನ ಸಾರು ಮಾಡುವ ದಿವಸ ಎಲ್ಲರಲ್ಲೂ ದ್ವಂದ್ವ, ಪ್ರತಿ ಜೀವಿಗೂ ಅನ್ವಯಿಸುವ ಒಂದು ಸರಳ ಸೂತ್ರ ಅವರು ಕಂಡುಕೊಂಡರು. ಮೀನಿನ ಸಾರನ್ನು ಅಂಗಳದ ಹಟ್ಟಿಯಲ್ಲಿರುವ ಒಲೆಯ ಮೇಲೆ ಅದಕ್ಕೆಂದೇ ಮೀಸಲಾಗಿರುವ ಮಡಿಕೆಯಲ್ಲಿ ಅಬ್ಬೆ-ಮಗ ಮಾಡಿಕೊಂಡು ಉಣ್ಣುತ್ತಿದ್ದರು. ಬದುಕಬೇಕಾದ ಅನಿವಾರ್‍ಯತೆಯಲ್ಲಿ ಬಾಬು ಮೀನಿನ ಸಾರು ಉಂಡ ದಿವಸ ಚಂದೂವಿನಿಂದ ದೂರ ಇರುತ್ತಿದ್ದ. ಇದು ಯಾವುದೇ ಮಾತುಗಳಿಲ್ಲದೇ ಮೌನದಲ್ಲಿ ಒಂದಾದ ಒಪ್ಪಂದವಾಗಿತ್ತು.
ಎಲ್ಲವೂ ಕನಸಿನಂತೆ ನಡೆದುಹೋಯ್ತು. ಚಂದ್ರಾವತಿಯ ಅಪ್ಪಯ್ಯ-ಅಮ್ಮರಿಗೆ ಮಗಳು ಹೀಗೆ ಅನ್ಯ ಜಾತಿಯರೊಡನೆ ಓಡಿ ಹೋಗಿದ್ದು, ತಮ್ಮ ಪುರೋಹಿತ ಮನೆತನಕ್ಕೆ ಕಳಂಕ ಎಂದು ಭಾವಿಸಿ ಅಪ್ಪಿ ತಪ್ಪಿ ಅವಳನ್ನು ಅವರು ಯಾವುದೇ ಸಂದರ್ಭದಲ್ಲಿ ಭೇಟಿ ಮಾಡಲಿಲ್ಲ. ಮಗಳೆಂಬ ಮೋಹ ತೋರಿಸಲಿಲ್ಲ. ಆದರೆ ಮೂರು ಮೈಲಾಚೆ ಇರುವ ಹಾಡಿಗುಡ್ಡೆಯಲ್ಲಿ ಇದ್ದ ಚಂದ್ರಾವತಿಗೆ ಬರೀ ಮನೆಯದೇ ನೆನಪು. ಬಾಬುವಿನ ಮನಸ್ಸಿನ ಮನೆಯ ವಾತಾವರಣಕ್ಕೂ ತನ್ನ ಮನೆಯ, ತಾನು ಹುಟ್ಟಿ ಬೆಳೆದ ಮನೆಯ ವಾತಾವರಣಕ್ಕೂ ಮುಗಿಲು-ನೆಲಗಳ ಅಂತರವಿತ್ತು. ಹೃದಯದ ಕರೆಗೆ ಓಗೊಟ್ಟ ತಾನು ತೆಗೆದುಕೊಂಡ ನಿರ್ಧಾರ ಸರಿಯಾದದ್ದು ಅಂತ ಅವಳು ಭಾವಿಸಿದ್ದಳು. ಬಾಬುವಿನ ಆರ್ತವಾದ ರೀತಿ ಅವಳನ್ನು ಅವನೆಡೆಗೆ ಸಂಪೂರ್ಣವಾಗಿ ಸೆಳೆದುಬಿಟ್ಟಿತ್ತು. ಬದುಕಿನಲ್ಲಿ ಆರ್ತತೆ ಬೇಕು. ಆರ್ತತೆ, ಆಸಕ್ತಿ, ಹಗಲುಗನಸು ಎಲ್ಲವೂ ಮುಖ್ಯ. ಅದಿಲ್ಲದಿದ್ದರೆ ಜೀವನ ಅರ್ಥಹೀನ. ಬಾಬು ಪುಟಿಯುವ ಜೀವ ಜಲದ ಝರಿಯಲ್ಲಿ ಅವಳನ್ನು ಮೀಯಿಸಿದ್ದ. ಕೆಲವು ಪದ್ಧತಿಗಳನ್ನು ಅನುಷ್ಠಾನಕ್ಕೆ ತರಲು ತೊಂದರೆ ಎನಿಸಿದರೂ ಚಂದ್ರಾವತಿ, ತನ್ನ ನೆರಳನ್ನೇ ಹಿಂಬಾಲಿಸಿದಳು. ಬಾಬು ಎಲ್ಲಾ ವಿಷಯಗಳನ್ನು ಹೆಂಡತಿಗೆ ಒಪ್ಪಿಸುತ್ತಿದ್ದ. ಬದಲಾವಣೆ ಬದುಕು ಆದರೂ ತಾನು ಭದ್ರ ಅಂತ ಅವಳಿಗೆ ಅನಿಸಿತು. ನಿಶ್ಯಬ್ದವಾದ ನೆಲದಲ್ಲಿ ಕೂತ ಚಂದುವಿಗೆ ಅದೊಂದು ಬೇರೆ ಲೋಕವೇ ಆಗಿಹೋಗಿತ್ತು. ಹಟ್ಟಿಯಲ್ಲಿದ್ದ ದನಕರುಗಳು ಬಾಯಿ ಮಾಡದೇ ಸುಮ್ಮನೆ ಸದ್ದಿಲ್ಲದೇ ಮುಲುಕಾಡುತ್ತಿದ್ದವು. ಮಗಳು ಶಾಲೆಗೆ ಹೋಗಿದ್ದಳು. ಆ ದಿನದವರೆಗೆ ಎಲ್ಲ ಹೊಲಿಗೆಯ ಕೆಲಸವೂ ಮುಗಿದಿತ್ತು. ಚಂದೂವಿಗೆ ಕೂತುಕೂತು ಸಾಕಾಗಿಹೋಯ್ತು ಬಾಬುವಿನ ಸುದ್ದಿ ತಿಳಿಯದೇ ಅವಳು ಕಂಗಾಲಾಗಿದ್ದಳು. ಅವಳು ಅವನ ಗೆಳೆಯ ಭೈರುವಿಗೆ ಫೋನು ಮಾಡಿರಬಾರದೇಕೆ? ಒಂದು ಸಲ ಹೋಗಿ ವಿಚಾರಿಸಿಕೊಂಡು ಬಂದರಾಯ್ತು ಅಂತ ಮನೆಯ ಮುಂಬಾಲಿಗೆ ಬೀಗ ಜಡಿದು ಎರಡು ಕಿ.ಮೀ. ದೂರದ ಅಮವಾಸೆ ಬೈಲಲ್ಲಿರುವ ಭೈರುವಿನ ಮನೆಕಡೆ ಹೆಜ್ಜೆಹಾಕತೊಡಗಿದಳು. ಹಾಡಿಗುಡ್ಡೆಯಿಂದ ಅಮವಾಸ ಬೈಲುವರೆಗೆ ಹೋಗುವ ದಾರಿ ಮಣ್ಣಿನದಾರಿ. ಹಳ್ಳದಿಣ್ಣೆ ಕೊರಕಲು ಆರಿ ಸರಳವಾದ ವೇಗದ ನಡಿಗೆ ಆ ದಾರಿಯಲ್ಲಿ ಸಾಗುವುದು ಕಷ್ಟಸಾಧ್ಯವಾಗಿತ್ತು. ಆ ದಟ್ಟವಾದ ಹಾಡಿಯ ದಾರಿಯಲ್ಲಿ ಹಳ್ಳ ಹರಿಯುತ್ತಿತ್ತು. ದರಲೆಗಳಿಂದ ಮುಚ್ಚಿದ ಹೊಂಡಗಳಲ್ಲಿ ಹಕ್ಕಿಗಳು ನೀರು ಕುಡಿಯಲೆಂದೋ ಸ್ನಾನ ಮಾಡಲೆಂದೂ ಹಾರಿಬಂದು ಬುಳಕ್ಕನೆ ಮುಳಗಿ ಗಿಡ ಮರದ ಸಂದಿಗಳಲ್ಲಿ ಹಾರಿಹೋಗುತ್ತಿದ್ದವು. ಆ ಏಕಾಂತದ ಬಿಸಿಲು ನೆರಳುಗಳ ದಾರಿ ಚಂದ್ರಾವತಿಗೆ ಒಂಥರಾ ಯಾವುದೋ ಧ್ಯಾನದ ಲೋಕದೊಳಗೆ ಕರೆದುಕೊಂಡಂತೆ ಆಗಿತ್ತು. ಈ ದಿನ ಹೊಸನೋಟ ಎಂಬಂತೆ ಚಂದ್ರಾವತಿ ಅವುಗಳನ್ನೆಲ್ಲಾ ನೋಡಿದಳು. ಪುಟ್ಟ ಕಾಲುದಾರಿ ಗೆರೆ ಎಳೆದಿತ್ತು. ಅಲ್ಲಲ್ಲಿ ದಾರಿಯ ಮೇಲೆ ಒಣಗಿದ ದರಲೆಗಳು ಬಿದ್ದಿದ್ದವು. ಸೂರ್ಯ ನಡುನೆತ್ತಿಯ ಮೇಲಿದ್ದರೂ ಬಿಸಿಲಿನ ತಾಪವಿರಲಿಲ್ಲ. ಆ ನೆರಳು ಬೆಳಕಿನ ಏಕಾಂತದ ಕಾಲುದಾರಿ ಏನೋ ಒಂದು ಒಳದಾರಿಯನ್ನು ಚಂದ್ರಾವತಿಯ ಎದೆಯಲ್ಲಿ ಸ್ಥಾಪಿಸಿಬಿಟ್ಟಿತು. ಅವಳು ಹಗುರಾಗಿ ಯಾವ ಒಜ್ಜೆಗಳನ್ನೂ ಹೇಳಿಕೊಳ್ಳದೇ ನಡೆದಳು. ಅದು ಬದುಕಿನ ದಾರಿಯ ಹುಡುಕಾಟವಾಗಿತ್ತು.
ಹಾಡಿ ಮುಗಿದ ಕಡೆ ಗದ್ದೆಗಳು ಪ್ರಾರಂಭವಾದವು. ಅವಳು ಗದ್ದೇ ಅಂಚಿನಲ್ಲಿ ನಡೆದು ನಾಲ್ಕಾರು ಗದ್ದೆಗಳ ದಾಟಿ ಗದ್ದೇ ಬಯಲಲ್ಲಿರುವ ಭೈರುವಿನ ಮನೆ ಅಂಗಳಕೆ ಬಂದು ನಿಂತಳು. ಆಗ ಮಧ್ಯಾನ್ಹ ಹನ್ನೆರಡು ಗಂಟೆ, ಕರೀ ನಾಯಿಯೊಂದು ಇವಳನ್ನು ಕಂಡೊಡನೆ ಬೊಗಳತೊಡಗಿತು. ಅಂಗಳದಲ್ಲಿ ಯಾರೂ ಇರಲಿಲ್ಲ. ಮಾಡಿನ ಮನೆಯೊಳಗಿಂದ ಮೀನು ಕುದಿಸುವ ಸಾರಿಗೆ ವಾಸನೆ ಅವಳ ಉಸಿರಿನಲ್ಲಿ ತುಂಬಿಕೊಂಡಿತು. ಅವಳು ಭೈರುವಿನ ಹೆಸರಿಡಿದು ಕೂಗಿದಳು. ಭೈರುವಿನ ಅಬ್ಬೆ ಹೊರಬಂದು ಚಂದೂವನ್ನು ನೋಡಿ ಜಗಲಿಗೆ ಬರಲು ಕರೆದಳು. ಅವಳು ಜಗಲಿಯ ಮೇಲೆ ಬಂದು ಕುಳಿತಾಗ ಒಂದು ಚೆಂಬು ನೀರು, ಒಂದು ತುಂಡು ಬೆಲ್ಲ ಹಿಡಿದು ಬಂದಳು. ಬಾಯಾರಿಕೆ ಆಗಿದ್ದರೂ ಚಂದು ಮೀನಿನ ವಾಸನೆಗೆ ನೀರು ಕುಡಿಯಲಿಲ್ಲ. “ಭೈರು ಮನೆಯಲ್ಲಿ ಇಲ್ಲವಾ? ಬಾಬು ಬೊಂಬಾಯಿಗೆ ಹೋಗಿ ತಿಂಗಳಾಯ್ತು. ಏನೂ ವಿಷಯ ತಿಳಿಯಲಿಲ್ಲ. ಭೈರುವಿಗೆ ಫೋನು ಮಾಡಿರಬಹುದೆಂದು ವಿಚಾರಿಸಿಕೊಳ್ಳುವಂತೆ ಬಂದೆ. ಎಲ್ಲಿ ಹೋಗಿದ್ದಾನೆ.”
“ಅಂವ ಪ್ಯಾಟೆ ಬದಿಗೆ ಹೋಗಿದ್ದಾನೆ. ಬಾಬುವಿನಿಂದ ಯಾವ ಫೋನು ಭೈರುಗೆ ಬಂದಂತೆ ನಾ ಕಾಣೆ. ಬಂದಿದ್ದರೆ ಅಂವ ಹೇಳುತ್ತಿದ್ದ. ನೀ ಗಾಬರಿ ಆಗಬೇಡ. ಅಂತಹ ಏನಾದರೂ ಅರ್ಜಂಟ್ ಕೆಲಸವಿದ್ದರೆ ಹೇಳಿಕಳಿಸು. ಭೈರುವನ್ನು ಮನೆಹತ್ರ ಕಳುಹಿಸುತ್ತೇನೆ. ಮನೆಯಲ್ಲಿ ಸಂಜೆ ಸಾಮಾನು, ಉಪ್ಪು ಹುಳಿ ಇದೆಯೋ ಹೇಗೆ”
ಭೈರುವಿನ ಅಬ್ಬೆ ಕಕ್ಕುಲತೆಯಿಂದ ಕೇಳಿದಾಗ ಚಂದ್ರಾವತಿಗೆ ದುಃಖ ಕೊರಳು ತುಂಬಿ ಬಂದಿತು. “ಇಲ್ಲ, ಹೊಲಿಗೆ ದುಡ್ಡು ಬರುತ್ತೆ. ಅದರಲ್ಲಿ ಸಂಭಾಳಿಸುತ್ತೀನಿ. ಇನ್ನೊಂದು ಸಲ ಭೈರು ಪೇಟೆಗೆ ಹೋದರೆ ಸ್ವಲ್ಪ ಸಾಮಾನು ತಂದುಕೊಡಲು ಹೇಳಿ” ಅಂತ ಹೇಳಿ ದುಗುಡ ಭಾವದಿಂದ ಚಂದ್ರಾವತಿ ಗದ್ದೆಯ ಬಯಲಿಗೆ ಇಳಿದಳು. ಹಾಡಿಯ ದಾರಿ ಆ ಮಧ್ಯಾನ್ಹ ಅವಳು ಏಕಾಂಗಿಯಾಗಿ ಕಳವಳದ ಆತಂಕದಲ್ಲಿ ಕ್ರಮಿಸುವಾಗ ಆಗಾಗ ಬೇರೆ ಬೇರೆ ಹಕ್ಕಿಗಳು ಉಲಿಯುವುದು ಕೇಳಿಸತೊಡಗಿತು. ಅವಳಿಗೆ ಹಕ್ಕಿಗಳ ಹಾಡು ತನಗೆ ಸಮಾಧಾನ ಹೇಳುವಂತೆ ಅನಿಸಿತು. ಮನೆಗೆ ಬಂದವಳೇ ಗಂಜಿಊಟ ಮಾಡಿ ಪಾತ್ರೆಗಳನ್ನು ತೆಂಗಿನಕಟ್ಟೆಗೆ ಹಾಕಿ ಸುಮ್ಮನೆ ಚಾಪೆಯ ಮೇಲೆ ಉರುಳಿದಳು. ಯಾಕೋ ಅವಳಿಗೆ ಆ ಮಧ್ಯಾನ್ಹ ಅಪ್ಪ ಅಮ್ಮ ತುಂಬಾ ನೆನಪಾದರು.
ಇದಾದ ಎಂಟು ದಿವಸಕ್ಕೆ ಭೈರು ಒಂದು ಹೊಸ ಸುದ್ದಿಯೊಂದಿಗೆ ಬಂದ. ಬಾಬುವಿನಿಂದ ಫೋನು ಬಂದಿತ್ತು. ಅಂವ ಬೊಂಬಾಯಿಯಲ್ಲಿ ಹಡಗೊಂದರಲ್ಲಿ ಕೂಲಿಯಾಗಿ ಕೆಲಸಕ್ಕೆ ಸೇರಿದ್ದಾನೆ. ಮುಂದಿನ ತಿಂಗಳು ಸಂಬಳವಾದ ನಂತರ ಮನೆಗೆ ಹಣ ಕಳಿಸುವೆ ಅಂತ ತಿಳಿಸಿದ್ದ. ತಿಂಗಳಿಗೆ ಆರು ಸಾವಿರ ಬೀಳುತ್ತದೆ. ಚಂದ್ರಾವತಿಗೆ ಯಾವ ಚಿಂತೆಯನ್ನು ಮಾಡಬಾರದೆಂದು ತಿಳಿಸಿದ್ದ. ಮಗಳನ್ನು ತಪ್ಪದೇ ಶಾಲೆಗೆ ಕಳಿಸುವಂತೆ ಆದೇಶಿಸಿದ್ದ. ಭೈರು ತಂದ ಸುದ್ದಿಯಿಂದ ಚಂದ್ರಾವತಿಗೆ ಎದೆಯ ಮೇಲೆ ಕುಳಿತ ಹೆಬ್ಬಂಡೆ ಸರಿದ ಹಾಗೆ ಆಯ್ತು. ಬಾಬುವಿನದೊಂದು ನಿಚ್ಚಳ ಕೆಲಸ ಮತ್ತು ಸಂಬಳ ದೊರೆಯುವಂತಾದರೆ ಬದುಕು ಇನ್ನಷ್ಟು ಅರಳೀತು ಎಂಬುದು ಅವಳ ಆಲೋಚನೆ. ಹೇಗಾದರೂ ತಾನು ಹೊಕೆಗೆ ಹೊಲೆಯುತ್ತೇನೆ. ಈ ಜೀವನವನ್ನು ಸರಳೀಕರಿಸಿದರೆ ಸಾಕು. ಚಂದ್ರಾವತಿ ಬಾಬುವಿನ ಕೆಲಸದ ಸುದ್ದಿಯಿಂದ ಹಗುರಾಗಿ ಮನೆ ತುಂಬ ಓಡಾಡಿದಳು. ಅವಳಿಗೆ ರಾತ್ರಿ ಎಷ್ಟೊಂದು ಕನಸುಗಳು ಒಳಗೊಳಗೆ ಅವಳು ರೆಕ್ಕೆಬಿಚ್ಚಿ ಹಾರಾಡಿದಳು. ಆ ರಾತ್ರಿ ಅವಳು ತುಂಬ ನಿದ್ರೆ ತೆಗೆದಳು.
ಒಂದು ತಿಂಗಳವರೆಗೆ ಚಂದ್ರಾವತಿ ತನ್ನ ಹೊಲಿಗೆಯ ಚೂರು-ಪಾರು ಹಣದಿಂದ ಮನೆಯಲ್ಲಿ ಕೂಳು ಬೇಯಿಸಿದಳು. ಬೆಳಿಗ್ಗೆ ಗಂಜಿ ಊಟ ಮಾಡಿಸಿ ಮಗಳನ್ನು ಗುಡ್ಡೇ ಆಚೆ ಇರುವ ಶಾಲೆಗೆ ತಪ್ಪದೇ ಕಳುಹಿಸಿ ಬರುತ್ತಿದ್ದಳು. ಬಂದು ಮನೆ ಸ್ವಚ್ಛ ಮಾಡಿ ಅಂಗಳದಲ್ಲಿರುವ ಮಲ್ಲಿಗೆ, ಸೇವಂತಿಗೆ, ಅಬ್ಬಲಿಗೆ ಗಿಡಗಳಿಗೆ ಪ್ರೀತಿಯಿಂದ ಭಾವಿಯಿಂದ ನೀರು ಸೇದಿ ಹಾಕುತ್ತಿದ್ದಳು. ಆ ಪುಟ್ಟ ಅಂಗಳದ ತುಂಬೆಲ್ಲಾ ರಾಶಿ ರಾಶಿ ಹೂಗಳು ಅರಳುತ್ತಿದ್ದವು. ದಿನಾಲೂ ಮಗಳ ಜಡೆಗೆ ಅವಳು ತಪ್ಪದೇ ಹೂ ಮುಡಿಸುತ್ತಿದ್ದಳು. ಬಚ್ಚಲು ಮನೆಗೆ ಬಾವಿಯಿಂದ ನೀರು ಸೇದಿ, ಸ್ನಾನ ಮಾಡಿ, ಬಟ್ಟೆ ಒಗೆದು, ಏನಾದರೂ ಒಂದು ಪದಾರ್ಥ ಮಾಡಿ ಮಧ್ಯಾಹ್ನದ ಊಟ ಮುಗಿಸಿ, ಒಂದರ್‍ಧ ಗಂಟೆ ಕೋಳಿನಿದ್ದೆ ತೆಗೆದು, ಮಗಳು ಬರುವವರೆಗೆ ತನಗೆ ಹೊಲಿಯಲು ಬಂದ ರವಿಕೆ-ಲಂಗಗಳನ್ನು, ಪ್ರಾಕುಗಳನ್ನು ಹೊಲಿಯುತ್ತ ಕೂಡುತ್ತಿದ್ದಳು. ಶಾಲೆಯಿಂದ ಮಗಳು ಮನೆಗೆ ಬಂದ ನಂತರ ತಾಯಿ ಮಗಳಿಬ್ಬರೂ ಅಂಗಳದಲ್ಲಿ ಪುಟ್ಟ ಪುಟ್ಟ ಆಟ ಆಡುತ್ತಿದ್ದರು. ಶಾಲೆಗೆ ಕಳುಹಿಸುವುದು ಚಂದ್ರಾವತಿಯ ಕೆಲಸವಾದರೆ, ಅಲ್ಲೇ ಸ್ವಲ್ಪ ದೂರದಲ್ಲಿರುವ ಗುಟ್ಟೇ ವಕ್ಕಲಿನ ಸರೋಜ ಎರಡೂ ಮಕ್ಕಳನ್ನು ಶಾಲೆಯಿಂದ ಕರೆತರುತ್ತಿದ್ದಳು. ಮಕ್ಕಳಿಬ್ಬರೂ ಒಂದೇ ತರಗತಿಯಲ್ಲಿ ಓದುತ್ತಿದ್ದರು. ಚಂದ್ರಾವತಿ ದೂರದ ಬೊಂಬಾಯಿಯಲ್ಲಿರುವ ಬಾಬುವಿನ ಬಗ್ಗೆ ತಲೆಯಲ್ಲಿ ಆಲೋಚನೆ ಮಾಡುತ್ತ, ಸೂರ್ಯ ಕಂತಿದಾಗ ಮಗಳೊಡನೆ ಒಳಗೆ ಬಂದು ಕಂದೀಲು ಪಾವು ಒರಸಿ ದೀಪ ಹಚ್ಚುತ್ತಿದ್ದಳು. ಮಗಳಿಗೆ ಶಾಲೆಯಲ್ಲಿ ಹೇಳಿದ ಪಾಠಗಳನ್ನು ಓದಿಸುತ್ತಿದ್ದಳು. ರಾತ್ರಿ ಬಿಸಿ ಗಂಜಿ ಊಟದೊಂದಿಗೆ ತಾಯಿ ಮಗಳಿಬ್ಬರೂ ಚಾಪೆಯ ಮೇಲೆ ಒರಗುತ್ತಿದ್ದರು. ರಾತ್ರಿಯೆಲ್ಲಾ ಚಂದ್ರಾವತಿಗೆ ಕನಸು. ಹಡಗಿನಲ್ಲಿ ಕುಳಿತು ಬಾಬು ದೊಡ್ಡ ದೊಡ್ಡ ಸಮುದ್ರದ ತೆರೆಯದಾಟಿ ಕಣ್ಣಿಗೆ ಕಾಣದಂತಹ ದೂರದಲ್ಲಿ ತೇಲಿ ಹೋದಂತೆ, ಇವಳು ಸಮುದ್ರದ ದಡದಲ್ಲಿ ನಿಂತ ಅವನನ್ನು ಕೂಗಿಯೇ ಕೂಗಿದಂತೆ, ಇಡೀ ಸಮುದ್ರದ ನೀರು ಒಮ್ಮಿಂದೊಮ್ಮೆಲೇ ಕಪ್ಪಾಗಿ ಯಾವ ತೆರೆಯೂ ಏಳದಂತೆ, ಈ ನಡುವೆ ಬಾಬುವಿದ್ದ ಹಡಗು ಎಲ್ಲೋ ಮುಳುಗಿಹೋದಂತೆ, ತಾನು ಈ ಜಗತ್ತಿನಲ್ಲಿ ಯಾರೂ ಕೇಳದ ಒಂಟಿಯಂತೆ, ಕಾಲಿಟ್ಟಲ್ಲಿ ರಾಡಿ ಹೇಸಿಗೆ ತುಂಬಿ ನಡೆಯಲು ಆಗದಂತೆ ಚಂದ್ರಾವತಿ ಮೇಲಿಂದ ಮೇಲೆ ಕನಸು ಕಂಡಳು. ಬಾಬು ದುಡಿಯದಿದ್ದರೆ ಅಷ್ಟೇ ಹೋಯ್ತು, ಸುಸೂತ್ರವಾಗಿ ಊರಿಗೆ ಮರಳಿ ಬಂದರೆ ಸಾಕು ಎಂಬಂತೆ ಚಂದ್ರಾವತಿ ತನ್ನ ಪುಟ್ಟ ಗಣಪತಿಯಲ್ಲಿ ಪ್ರಾರ್ಥಿಸಿಕೊಂಡಳು. ಬಾಬು ಬೊಂಬಾಯಿಗೆ ಹೋಗಿ ಎರಡು ತಿಂಗಳಾಗುತ್ತ ಬಂತು ಚಂದ್ರಾವತಿಯ ಕಣ್ಣುಗಳು ಅವನ ಪತ್ರದ, ಮನಿಯಾರ್ಡರಿನ ದಾರಿ ಕಂಡು ಕಂಡು ಸೋತವು. ಹೇಳಲಾಗದ ಒಂಟಿತನ, ಭಯ ಅವಳನ್ನು ಆವರಿಸಿಬಿಟ್ಟಿತು. ಮಗಳನ್ನು ಏನೇನೋ ವಿಚಾರದಲ್ಲಿ ಶಾಲೆಗೆ ಕಳುಹಿಸಿ ಬರುತ್ತಿದ್ದಳು. ಯಂತ್ರದಂತೆ ಗೆಳತಿ ತನ್ನ ಮಗಳ ಜೊತೆ ಇವಳ ಮಗಳನ್ನೂ ಶಾಲೆಯಿಂದ ವಾಪಸ್ಸು ಕರೆತರುತ್ತಿದ್ದಳು. ಹದಿನೈದು ದಿವಸಕ್ಕೊಮ್ಮೆ ಭೈರು ಕುಂದಾಪುರ ಸಂತೆಯಿಂದ ಅವಳು ಹೇಳಿದ ಸಾಮಾನುಗಳನ್ನು ತನ್ನ ಸೈಕಲ್ಲಿನ ಮೇಲೆ ಹೇರಿಕೊಂಡು ಹಾಡಿಗುಡ್ಡೆಗೆ ಬಂದು ಕೊಡುತ್ತಿದ್ದ. ಅವಳು ಚಂದ್ರಾವತಿ ಸುತ್ತಲಿನ ದೂರ ಹತ್ತಿರದ ಎಲ್ಲಾ ಮನೆಗಳಿಗೆ ಎಡತಾಕಿ ಹೊಲೆಯುವ ಅರಿವೆಯನ್ನು ತರುತ್ತಿದ್ದಳು, ಆದರೆ ಅನವರತ ಯಾರು ಬಟ್ಟೆ ಹೊಲೆಸುತ್ತಾರೆ. ಭೈರು ಕುಂದಾಪುರ ಪೇಟೆಯಲ್ಲಿ ಒಂದು ಟೇಲರ್ ಅಂಗಡಿಯಿಂದ ಲಂಗದ ಬಟ್ಟೆಗಳನ್ನು ತಂದು ಕೊಟ್ಟು ಅವುಗಳನ್ನು ಪೇಟೆಗೆ ಹೋಗುವಾಗ ಒಯ್ದು ಬಂದ ಕಾಸಿನಲ್ಲಿ ಅವಳಿಗೆ ಮತ್ತು ಅವಳ ಮಗಳಿಗೆ ಜೀವನಕ್ಕೆ ಬೇಕಾದ ಸಾಮಾನುಗಳನ್ನು ತಂದುಕೊಡುತ್ತಿದ್ದ. ಚಂದ್ರಾವತಿ ನೂರು ಬಾರಿ ಭೈರುವಿನ ಉಪಕಾರವನ್ನು ಅವನ ಮುಂದೆಯೇ ಹೊಗುಳುತ್ತಿದ್ದಳು. ನೀನೊಬ್ಬನಿರದಿದ್ದರೆ ನನಗೆ ಯಾರು ಗತಿ ಅಂತ ಹಲಬುತ್ತಿದ್ದಳು. ರಾತ್ರಿಗಳು ಜಡವಾಗಹತ್ತಿದವು. ಭೈರುವಿನ ಫೋನಿಗೆ ಬಾಬುವಿನಿಂದ ಯಾವುದೇ ಕರೆ ಬಂದಿಲ್ಲ. ಹಡಗಿನ ಮಾಲೀಕನ ನಂಬರು ಬಾಬು ಕೊಟ್ಟಿದ್ದ. ಆ ನಂಬರಿಗೆ ಫೋನ ಮಾಡಿದರೆ ಫೋನು ರಿಂಗಾಗುತ್ತಿತ್ತು, ಆದರೆ ಯಾರೂ ಫೋನೆತ್ತಿ ಮಾತನಾಡುತ್ತಿರಲಿಲ್ಲ.
ಮನೆ ಮುಂದೆ ಬೆಳೆದ ಹೀರೇ ಬೆಂಡೆ ಸೊಪ್ಪು ಸದೆಗಳನ್ನು ಚಂದ್ರಾವತಿ ಆಜೂಬಾಜು ಅವರಿಗೆ ಮಾರುತ್ತಿದ್ದಳು, ಹೊಲಿಗೆ ಹೊಲೆಯುತ್ತಿದ್ದಳು, ರೇಷನ್ನಿನಿಂದ ಅಕ್ಕಿ ಸಕ್ಕರೆ ತರುತ್ತಿದ್ದಳು. ಆದಷ್ಟು ಬೇಗ ಹಗಲಲ್ಲೇ ಗಂಜಿ ಕುದಿಸಿ ರಾತ್ರಿ ಒಂದೇ ಚಿಂಣಿ ಉರಿಸುತ್ತಿದ್ದಳು. ಅವಳಿಗೆ ಬಾಬು ಹೀಗೆ ಒಮ್ಮಿಂದೊಮ್ಮಲೇ ಅಷ್ಟೊಂದು ದೂರ ಹೋಗುತ್ತಾನೆ ಅಂತ ಅನಿಸಿರಲಿಲ್ಲ. ಊರಮನೆ ಬದಿಯಲ್ಲಿ ಎಷ್ಟು ದುಡಿದರೂ ಅಷ್ಟೇ, ಬೊಂಬಾಯಿಯಲ್ಲಿ ನೂರೆಂಟು ತರಹದ ಕೆಲಸಗಳಿರುತ್ತವೆ. ಈಗ ಕೈ-ಕಾಲು ಗಟ್ಟಿ ಇದ್ದಾಗಲೇ ನಾಲ್ಕು ಕಾಸು ಮಾಡಿಕೊಳ್ಳೋಣ. ಊರಮನೆ ಸಂಬಳ ಗಂಜಿಗೆ ಇದ್ರೆ ಉಪ್ಪಿಗಿಲ್ಲ. ಹಾಂಗಂತ ಎಷ್ಟು ದಿವಸ ಹೊರಳಾಡುವುದು. ನೀನು ಗಟ್ಟಿ ಧೈರ್ಯಮಾಡಿ ಸ್ವಲ್ಪ ದಿವಸ ಇರು ನಾನು ಹೇಂಗೆ ಸಂಪಾದಿಸಿ ಕಳುಸ್ತೀನಿ ನೋಡು ಅಂತ ಚಂದ್ರಾವತಿಯನ್ನು ರಮಿಸಿ ಬಾಬು ಬೊಂಬಾಯಿಗೆ ಹೋಗಿದ್ದ. ಬಾಬುವಿನ ಮೌನ ಅವಳನ್ನು ಒಳಗೊಳಗೆ ಸುಡತೊಡಗಿತು. ಇಷ್ಟಾದರೂ ಚಂದ್ರಾವತಿಯ ತಂದೆ ತಾಯಿ ಅಪ್ಪಿತಪ್ಪಿಯೂ ಅವಳ ಬಗ್ಗೆ ವಿಚಾರಿಸಲಿಲ್ಲ. ಅವಳಿಗೆ ಅಪ್ಪಯ್ಯ ಅಮ್ಮ ತುಂಬ ನೆನಪಾಗುತ್ತಿದ್ದರು. ತಾನುಂಡ ಒಳ್ಳೆಯ ಊಟ ಆಗಾಗ ನೆನಪಾಗುತ್ತಿತ್ತು. ಮನೆಯಲ್ಲಿ ಹಬ್ಬ ಹುಣ್ಣಿಮೆಯ ಸಡಗರ ಭಕ್ಷ ಭೋಜನಗಳು ಪ್ರಪಂಚವನ್ನೇ ಮರೆಸುವ ಹಾಗಿರುತ್ತಿತ್ತು. ಈ ಗದ್ದೆಗಳ ಮಧ್ಯೆಯೇ ಮಣ್ಣು ಸೋಗೆಯ ಮನೆ ಅವಳನ್ನು ಒಮ್ಮೊಮ್ಮೆ ಒಳಗೊಳಗೆ ಕೊರಗುವಂತೆ ಮಾಡುತ್ತಿತ್ತು. ಅಪ್ಪಯ್ಯನ ಮನೆಯ ವಿಶಾಲವಾದ ಮನೆ ಅಂಗಳ, ಉಪ್ಪರಿಗೆ ಎಲ್ಲವೂ ಅವಳಿಗೆ ನೆನಪಿಗೆ ಬರುತ್ತಿದ್ದವು. ಹೈಸ್ಕೂಲಿಗೆ ಹೋಗುವ ದಿವಸಗಳಲ್ಲಿ ಚಂದ್ರಾವತಿ ಇಡೀ ಮನೆಯನ್ನು ತಿಕ್ಕಿ ತಿಕ್ಕಿ ಒರೆಸುತ್ತಿದ್ದಳು. ನೆಲ ತುಂಬಾ ಕೆಂಪಾಗಿ ಹೊಳೆಯುತ್ತಿತ್ತು. ಬಾಬುವಿನ ಬಿಡಾರದ ಮುಂದಿನ ಪುಟ್ಟ ಅಂಗಳವನ್ನು ಚಂದ್ರಾವತಿ ವಾರಕ್ಕೊಮ್ಮೆ ತಪ್ಪದೇ ಸೆಗಣಿಯಿಂದ ಸಾರಿಸುತ್ತಿದ್ದಳು. ಮನೆಯ ಮುಂದಿದ್ದ ತೆಂಗಿನ ಗರಿ ಬಿದ್ದಾಗಲೊಮ್ಮೆ ಮಡೆ ಹೆಣೆದು, ಮನೆಯ ಸುತ್ತಲಿನ ಮಣ್ಣಿನ ಗೋಡೆಗೆ ಮಳೆ ನೀರು ಸಿಡಿಯದಂತೆ ಕಟ್ಟುತ್ತಿದ್ದಳು. ಬಾಬು ಒಮ್ಮೊಮ್ಮೆ ಅವಳ ಅಚ್ಚುಕಟ್ಟುತನಕ್ಕೆ ಬೆರಗಾಗುತ್ತಿದ್ದ. ಮನೆಯ ಸಣ್ಣಪಟ್ಟ ಎಲ್ಲಾ ಪಾತ್ರೆಗಳು ಥಳಥಳ ಹೊಳೆಯುತ್ತಿದ್ದವು. ಆದರೆ ಬಾಬು ಬೊಂಬಾಯಿಗೆ ಹೋದ ಮೇಲೆ ಏಕಾಂಗಿತನ, ಆತಂಕ, ಭಯ ಅವಳಲ್ಲಿ ಮನೆ ಮಾಡಿತ್ತು. ಅವಳು ಮನೆಯ ಒಪ್ಪ ಓರಣದ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ.
ಬಾಬು ಹೋಗಿ ಆರು ತಿಂಗಳಾಗುತ್ತ ಬಂದಿತು. ಆಷಾಢದ ತಣ್ಣನೆಯ ಗಾಳಿ ಚಂದ್ರಾವತಿಯ ಮೈಮನವನ್ನು ನಡುಗಿಸುತ್ತಿದ್ದವು. ನೆಲ ಮುಗಿಲು ಒಂದಾದ ಹಾಗೆ ಮಳೆ, ಅಂತಹ ಬಿರುಮಳೆಯಲ್ಲೂ ಚಂದ್ರಾವತಿ ಸೊಂಯನೆ ಬೀಸುವ ಗಾಳಿಯಲ್ಲಿ ಮಗಳನ್ನು ಶಾಲೆಗೆ ಬಿಟ್ಟು ಬರುತ್ತಿದ್ದಳು. ಭೈರುವಿನ ಮನೆಕಡೆ ಹೋಗಲು ಮಳೆ ಬಿಡಲಿಲ್ಲ. ಮಳೆಗಾಲಕ್ಕೆ ಬೇಕಾಗುವ ಎಲ್ಲಾ ಸಾಮಾನುಗಳನ್ನು ಚಂದ್ರಾವತಿ ಭೈರುವಿನಿಂದ ತರಿಸಿ ಇಟ್ಟುಕೊಂಡಿದ್ದಳು. ಭೈರು ಮನೆಕಡೆ ಬರದೇ ತಿಂಗಳ ಮೇಲಾಯ್ತು. ಬಾಬು ಪ್ರಾಮಾಣಿಕನಾಗಿದ್ದ. ಬೊಂಬಾಯಿಗೆ ಹೋದ ಮೇಲೆ ತಪ್ಪದೇ ಹಣ ಕಳುಹಿಸುತ್ತೇನೆ ಎಂದು ಹೇಳಿದ್ದ. ಹೊಸ ಹಡುಗಿನ ಕೆಲಸ, ಏರುಪೇರಾಗಿರಬಹುದು. ಒಂದು ಸಲ ಕಟ್ಟೆಹಕ್ಕಲಿನ ಪೋಸ್ಟು ಆಫೀಸಿಗೆ ಹೋಗಿ ವಿಚಾರಿಸಿದರೆ ಹೇಗೆ ಎಂಬ ಆಲೋಚನೆ ಹೊಳೆಯಿತು. ಯಾವ ಫೋನು ನಂಬರು, ವಿಳಾಸ ಪತ್ತಾವನ್ನು ಬಾಬು ಈವರೆಗೆ ಕಳುಹಿಸಿಯೇ ಇಲ್ಲ. ಏನಾದರೂ ಆಗಲಿ ಪೋಸ್ಟ್ ಆಫೀಸಿಗೆ ಹೋಗಿ ವಿಚಾರಿಸಿಕೊಂಡು ಬಂದರಾಯ್ತು ಎಂದು ಅವಳು ಬಿರುಮಳೆಯಲಿ ಕಟ್ಟೆಹಕ್ಕಲಿನೆಡೆಗೆ ಸಾಗಿದಳು. ಅವಳಿಗೆ ಅಲ್ಲಿ ಯಾವ ಉತ್ತರಗಳೂ ಸಿಗಲಿಲ್ಲ. ನಿರಾಶೆಯಿಂದ ಹಿಂದಿರುಗಿದಳು. ಮಳೆ ಒಂದೇ ಸಮನೇ ಹೊಯ್ಯುತ್ತಿತ್ತು. ಚಂದ್ರಾವತಿ ತುಂಬ ಚಿಂತಿತಳಾದಳು, ಅವಳ ಬಳಿಯಿದ್ದ ಪುಟ್ಟ ರೇಡಿಯೋ ಕೂಡ ಕರಕರ ಶಬ್ದ ಮಾಡುತ್ತ ವಾರ್ತೆಗಳನ್ನು ಪ್ರಸಾರ ಮಾಡುತ್ತಿತ್ತು. ಮುಂಬೈ ಕರಾವಳಿಯಲ್ಲೂ ಭಾರಿ ಮಳೆ ಅಂತ ಸುದ್ದಿ ಅವಳು ಕೇಳಿದ್ದಳು. ಬರೀ ಬಾಬುವಿನದೇ ಚಿಂತೆ ಅವಳಿಗೆ. ರಾತ್ರಿಯೆಲ್ಲಾ ಚಳಿಗೆ ಮಗಳನ್ನು ತಬ್ಬಿ ಕಣ್ಣು ತೆರೆದೇ ಮಲಗುತ್ತಿದ್ದಳು. ಹಂಚಿನ ಮೇಲೆ ಬೀಳುವ ಬಿರು ಹನಿಗಳು ಒಂಥರಾ ಶಬ್ದಗಳನ್ನು ಹುಟ್ಟು ಹಾಕುತ್ತಿತ್ತು. ಜೋರಾಗಿ ಗಾಳಿ ಬೀಸಿದಾಗ ಮಣ್ಣಿನ ಗೋಡೆಗುಂಟ ಕಟ್ಟಿದ ಮಡಲುಗಳು ಕೂಡ ಪಟಪಟ ಬಡಿದುಕೊಳ್ಳುತ್ತಿದ್ದವು. ಅವಳಿಗೆ ಹಗಲು ರಾತ್ರಿ ಎಂಬುದು ಅರಿವಿಗೆ ಬರದಂತೆ ತಲೆತುಂಬಾ ಮೈತುಂಬಾ ಚಿಂತೆಗಳು ಹಚ್ಚಕೊಂಡವು.
ಅಂತಹ ಬಿರು ಮಳೆಯಲ್ಲಿಯೇ ಭೈರು ಅವಳ ಮನೆಕಡೆ ಬಂದ. ಸೈಕಲ್‌ನ್ನು ಅಂಗಳದಲ್ಲಿ ನಿಲ್ಲಿಸಿ ಮಳೆಗೆ ತೋಯ್ದ ರೇನ್‌ಕೋಟನ್ನು ಅಲ್ಲಿಯೇ ಕಾಣುವ ಉದ್ದಕೋಲಿಗೆ ಸಿಕ್ಕಿಸಿ, ಅಕ್ಕಾ ಅನ್ನುತ್ತ ಮನೆಯ ಒಳಗಡೆ ಬಂದ. ಚಂದ್ರಾವತಿ ಮಗಳನ್ನು ಆಗತಾನೆ ಶಾಲೆಗೆ ಸೇರಿಸಿ ಬಂದಿದ್ದಳು. ಒಲೆಯ ಮೇಲೆ ಆ ಮಧ್ಯಾನ್ಹದ ಗಂಜಿ ಕುದಿಯುತ್ತಿತ್ತು. ಒರಲಮುಂದೆ ಕಾಯಿತುರಿ ತುರಿದು ಇಟ್ಟಿದ್ದಳು. ಭೈರುವಿನ ಮುಖ ಕಂಡೊಡನೆ ಚಂದ್ರಾವತಿಗೆ ಗಾಬರಿಯಾಯಿತು. ಅವನು ತುಂಬ ಗಾಬರಿಗೊಂಡಂತೆ ಅನಿಸಿತು. ಒಂದೆಡೆ ಬಾಬುವಿನ ಸುದ್ದಿ ತಿಳಿಯದೇ ಕಂಗಾಲಾದ ಚಂದ್ರಾವತಿ ಉಮ್ಮಳಿಸುವ ದುಃಖದಲ್ಲಿ ಭೈರುವಿಗೆ ಯಾಂತ್ರಿಕವಾಗಿ ಕೂಡಲು ಹೇಳುವಂತೆ ಚಾಪೆ ಹಾಸಿದಳು. ಕೂಡಲು ಹೇಳದೆಯೇ ಭೈರು ಅದರ ಮೇಲೆ ಕುಳಿತು ಹೇಳತೊಡಗಿದ.
“ಅಕ್ಕಾ ಒಂದು ಆಘಾತಕಾರಿ ಸುದ್ದಿ, ಬಾಬು ಮತ್ತು ಅವನ ಸಂಗಡಿಗರು ಹಡಗಿನಲ್ಲಿ ಸಾಗಿಸಲು ಕಳ್ಳ ಮಾಲು ತರಲು ನಾಡ ದೋಣಿಯಲ್ಲಿ ಕಡಲಿನ ಮಧ್ಯೆಗೆ ಈಗ ಎರಡು ತಿಂಗಳ ಮುಂದೆ ಹೋಗಿದ್ದರು. ದೋಣಿ ಹುಟ್ಟು ಹಾಕುವವ ಹೊಸಬನಂತೆ ತೋರುತ್ತದೆ. ಅವರು ಸಮುದ್ರ ಮಧ್ಯೆಯಲ್ಲಿ ದಾರಿತಪ್ಪಿ ಗಡಿದಾಟಿ ಬೇರೆ ಗಡಿಯ ಪ್ರದೇಶಕ್ಕೆ ಹೋದರಂತೆ, ಅಲ್ಲಿನ ಕಸ್ಟಮ್ ಆಫೀಸರ್ ಇವರುಗಳು ಭಯೋತ್ಪಾದಕರು ಮತ್ತು ಬೇಹುಗಾರಿಕೆ ಮಾಡುವವರು ಎಂದು ಅವರನ್ನು ಬಂಧಿಸಿ ಜೈಲಿನಲ್ಲಿ ಇರಿಸಿದ್ದಾರಂತೆ. ಅದೂ ಪಾಕಿಸ್ತಾನದ ಜೈಲು, ಇನ್ನು ಅವರನ್ನು ಹೇಗೆ ಬಿಡುಗಡೆ ಮಾಡಿಸುವುದು ಅಂತ ಹಡಗಿನ ಮಾಲೀಕ ತಿಳಿಸಿದ. ಸರಕಾರವೇ ಮಧ್ಯಸ್ತಿಕೆಗೆ ಬಂದರೆ ಅವರು ಪಾರಾಗುತ್ತಾರೆ. ಇಲ್ಲದಿದ್ದರೆ ದೇವರೇ ಗತಿ, ನಿನಗೆ ಎಂತಹ ಪರಿಸ್ಥಿತಿ ಬಂತಕ್ಕ” ಬಾಬು ಹೇಳುತ್ತಲೇ ಹೋದ ಕಡಲಾಚೆಯವರ ಪಾಡನ್ನು ನೆನೆಸುತ್ತ ಕಡಲೀಚಿಗೆ ಚಂದ್ರಾವತಿ ಬೆಪ್ಪಾಗಿ ನಿಂತುಬಿಟ್ಟಳು. ಕಡಲು ಒಂದೇ ಸಮನೆ ಮೊರೆಯುತ್ತಿತ್ತು.
*****


















