ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ ದಳಗಳನ್ನು ಕಟ್ಟಲಾಗುತ್ತಿದೆ. ಈ ದಳದ ಸೈನಿಕನಾಗಿ ನಮೂರನ್ನು ಕಾಯುವಾಗ ಕೇಳಿದ ಕೆಲವು ಮಾತುಗಳನ್ನು ಇಲ್ಲಿ ಸಂಗ್ರಹಿಸಿ ಕೊಟ್ಟಿದ್ದೇನೆ. ಓದುಗರಿಗೆ ಇದೂ ಒಂದು ಕತೆ ಎನಿಸೀತೆಂದು ಭಾವಿಸಿದ್ದೇನೆ.
೧
“ನೋಡು! ನಾಲ್ಕೂ ಮಕ್ಕಳನ್ನ ಸಂಬಾಳಿಸಿಕೊಂಡು, ನಾಲ್ಕು ದಿನ ಮರ್ಯಾದಿಯಿಂದ ಸಂಸಾರ ಮಾಡಿ ಹೋಗೋದಕ್ಕೂ ಬಹಳ ಬುದ್ದಿವಂತಿಕಿ ಬೇಕಾಗ್ತಽದ. ಮನೆಗೆ ಹಿರಿಯಳಾದ ನೀನೂ ದಿನಾ ಬೆಳಗಾದರೆ ಜಗಳಾಡತ ಕೂತರ, ನಾ ಯಾವ ಗಿಡಕ್ಕ ಜೋತಾಡಲಿ?”
“ನಿಮ್ಮ ಮುಂದ ಮಾತನಾಡುವ ಮಾತಽ ಉಳಿಯಲಿಲ್ಲ. ಸಂಸಾರದೊಳಗ ಬರುವ ತೊಡಕು-ತೊಂದರೆಗಳನ್ನು ಹೇಳಿದರೆ, ನೀವು ಹಗ್ಗಾ ತಕೊ೦ಡು ಗಿಡಕ್ಕಽ ಹೋಗತೇನು ಅಂತೀರಿ. ನಾ ಏನೂ ಹೇಳಽಬಾರದೂ ಅ೦ತಿರೋ ಹ್ಯಾಂಗ?”
“ಹೇಳಲ್ಲ; ಹೇಳಲಿಕ್ಕೆ ಯಾರ ಬ್ಯಾಡ ಅ೦ತಾರ? ಮನಿಯೊಳಗ ನಾಲ್ಕು ಮಂದಿ ತಿನ್ನವರಿದ್ದಾರ, ಹೆಂಗಸರು ನಾಲ್ಕು ಮಂದಿ ಮಾಡವರಿದ್ದಾರೆ. ಇಷ್ಟಕ ದಿನಾ ಬೆಳಗಾದರ ಜಗಳ. ನಗ-ನಗತ ಹೇಳಿ, ಸೊಸೆಯಂದಿರಿಂದ ಕೆಲಸಾ ಮಾಡಿಸೋದ ಅದ. ಹೌದ ಅನ್ನಿಸಿ ಕೊಂಡು ನಾಲ್ಕ ದಿನಾ ಸಂಸಾರಮಾಡಿ ಹೋಗೋದ ಅದ. ಹತ್ತಸಲ ಹೇಳಿದರೂ ಇಷ್ಟು ತಿಳಿವೊಲ್ದು ನಿನಗ. ಹ್ಯಾಂಗ ಮೂರಿಪ್ಪತ್ತು ವರ್ಷದ ಮುದಿಕಿಯಾದಿಯೋ ಏನೋ!”
“ನಿಮ್ಮ ಕೂಡ ದಿನಾ ಬೆಳಗಾದರ ನಾನೂ ಹೊಲಕ್ಕಽ ಬರತೇನಿ ನಡೆಯಿರಿ! ಅವರಽ ಏನ ಮಾಡಿಕೊಳ್ಳತಾರ ಮಾಡಿಕೊಳ್ಳಲಿ. ಹ್ಯಾಂಗೂ ಹಿರಿಯರು ತೋಡಿದ ಭಾವಿ ಅದ. ಅಲ್ಲೇ ನಂದೂ ಒ೦ದು ಸೀರೀ ಒರಸಿ, ಒಣಗಿಸಿಕೊಳ್ಳತೇನಿ, ಏನ ಮನಿಯಿಂದ ಪಲ್ಲೆ ರೊಟ್ಟಿ ತಂದು ಕೊಟ್ಟಾರು, ಅದನ್ನ ತಿಂದು ಕೊಡತೇನಿ. ಕುಸುಮಾನ ಕೂಡ ಇನ್ನ ನಾಲ್ಕ ದಿನಾನೂ ಕೂಡಿ ಇರೋದಕ್ಕೆ ನನಗೆ ಆಗದು. ಮನಿಗೆ ಬಂದು ಇನ್ನೂ ಆರು ತಿಂಗಳು ಆಗಿಲ್ಲ, ಇಷ್ಟರಲ್ಲೇ ಮನಿಯವರೊಳಗ ಎರಡ ಎಣಿಸಿದರ ಹ್ಯಾಂಗ ನಡೆಯಬೇಕು ಸಂಸಾರ? ಈಕಿಯ ಗಂಡ ಒಬ್ಬನ ಮನಿಯೊಳಗೆ ಉಣ್ಣುವವ ಇರತಾನ? ಬೆಳಿಗ್ಗೆದ್ದು ನಿನ್ನ ಗ೦ಡನಿಗೆ ರೊಟ್ಟಿ ಕಟ್ಟಿ ಕೊಡೂ ಅಂತ ಹೇಳಿ ಕಳಿಸಿದರ, ಗಡಿಗಿಯೊ ಆಗಿನ ಕೆನೆಮೊಸರನ್ನೆಲ್ಲಾ ಒಬ್ಬನಿಗೇ ಹಾಕಿ ಕಟ್ಟಿ ಕೊಡುವುದಾ? ಉಳಿದ ಮೂರು ಮಂದಿ ಮಕ್ಕಳಿಗೆ ನಾ ಏನ ಬುತ್ತಿ ತುಂಬಿ ಕೊಡಬೇಕು? ನೀವು ಹೇಳರಿ! ಉಳಿದ ಸೊಸೆಯಂದಿರೂ ಹಾಲಿಗೆ ಹೆಪ್ಪು ಹಾಕಿದ್ಧ೦ಗ ಮುಖ ಮಾಡಿಕೊಂಡು ಇರತಾರ ಅವರು, ನೆರಿಮನೀ ಹೆಂಗಸರ ಮಾತ ಕೇಳಿ, ಜಗಳಕ್ಕೆ ನಿಲ್ಲತಾರ. ಹಿಂಗಽ ಏನಾದರೂ ಕಾರಣ ಆಗಿ, ದಿನಾ ಮನಿಯೊಳಗ ಜಗಳ ಜಗಳ! ಅದಕ್ಕೆಲ್ಲಾ ನಿನ್ನ ಸಣ್ಣ ಸೊಸಿ ಕುಸುಮಾನ ಕಾರಣ, ಮೊನ್ನೆ ಬಚ್ಚಲದೊಳಗಿನ ನನ್ನ ಸೀರಿನಽ ಒ೦ದು ಮರತು ಹ್ಯಾಂಗ ಒಗೆಯಲಿಕ್ಕೆ ಹೊಕತಾಳ ಆಕಿ? ಅಲ್ಲೇ ಗೂಟದ ಮ್ಯಾಗ ಇದ್ದ ತನ್ನ ಗಂಡನ ದೋತರಾ ಮರಿಯಲಿಲ್ಲಾ? ಎಲ್ಲಾ ಇದ್ದದ್ದು ಆಕಿಯ ಕಡೆ ಕಾಣಿ ನೋಡು!”
“ಹೀ೦ಗಿದ್ದರ ಪೇಟಿಯೊಳಗಿನ ಮನಿ ಹ್ಯಾಂಗೂ ತೆರವಽ ಅದ ಅಲ್ಲಿ ಆ ಗಂಡ-ಹೆಂಡರನ್ನು ಇಟ್ಟು ಬಿಡೋಣ. ಏನು ಎರಡು ಚೀಲ ಜೋಳಾ ಕಾಳೂ ಒಯ್ದ ಒಗದರ ಆಯ್ತು. ಕುದಿಸಿ ತಿನ್ನತಾರ.. ತೋಟಕ್ಕೆ ದುಡಿಯಲಿಕ್ಕೆ ಬರತಾರ ದಿನಾ ಬೆಳಗಾದರ ಈ ಕಟಕಟೀ ಬೇಡ.”
“ಉಳಿದವರೂ ಹಾಂಗೇ ಬೇಡವರಲ್ಲ?”
“ಅವರೇನ ಬೇಡತಾರ? ಇವನ ಮದನಿ ಮೊನ್ನೆ ಆಗೇದ. ಈಗಿನ ಹುಡುಗರು! ಕೂಡಿ ನಗಬೇಕೂ ಕಲೀಬೇಕೂ ಅಂತಾವ. ಮನಿಯೊಳಗ ನಾಲ್ಕು ಮಂದಿಯೊಳಗ ಸಾಧಿಸೋದಿಲ್ಲ. ಅದಕ್ಕಽ ಇದೆಲ್ಲಾ ತಂಟೆ. ಆ ಮನಿಯೊಳಗ ನಾಲ್ಕು ದಿನಾ ಇರಲಿ. ನಮ್ಮ ಬಾಬೂಗಽ ಬೇಕಾದಂಗ ಕಾಣ್ತಽದ. ಮೊನ್ನೆ ಮನಿಗೆ ಮಲಗಲಿಕ್ಕೆ ಬರುವದರ ಸಲುವಾಗಿ, ತೋಟದೊಳಗ ತನ್ನ ಅಣನ ಕೂಡಾ ನ್ಯಾಯ ಹೂಡಿದ್ದ.”
“ಅದೆಲ್ಲಾ ಎಯ್ತು; ಈಗಿನ ಹುಡುಗರು! ಮನೀ ಬೇರೆ ಮಾಡಿ ಕೊಟ್ಟರ ತೀರೇ ಹೊಯ್ತು. ನಾಳೆ ತೋಟದ ಕಡೆಗೆ ಹಾಯ್ದರ ನನ್ನ ಕೇಳು!”
“ಮನಿಯೊಳಗ ಕೂತು ಹೊಟ್ಟಿಗೇನ ಮಾಡತಾರ?”
“ಬಂದಾನಲ್ಲಾ ನಿನ್ನ ಮಗಾ ಒಬ್ಬ! ಸೊಸೀ ಏನೂ ಬರೂದಿಲ್ಲ ಬಿಡೋದಿಲ್ಲ.”
“ಮನಿಯೊಳಗಽ ಇರಲಿ, ಒಂದು ಎಮ್ಮೀ ಸಂಬಾಳಿಸಿದರ ಸಾಕು, ಅವರ ಬಾಗಿಲೊಳಗ ಒಯ್ದು ಕಟ್ಟಿ ಬಿಡತೇನ ಎಮ್ಮೀನ. ಎಲ್ಲಿಯಾದರೂ ದುಡದಽ ತಿನ್ನೊದ ಅಲ್ಲ?”
“ನೋಡರಿ; ನಿಮಗ ತಿಳಿದಂತೆ ಮಾಡಿರಿ. ಬೇರೆ ಇಟ್ಟರ, ಅವರೇನೂ ನಮ್ಮ ಹಿಡಿತದೊಳಗ ಉಳಿಯೂದಿಲ್ಲ…”
“ಎರಡೂ ಮನಿಯ ಕಡೆ ನಿನ್ನ ಲಕ್ಷ ಇರಬೇಕಲ್ಲ ಮತ್ತೆ! ನಾನೂ ಮಧ್ಯಾಹ್ನ ಅಲ್ಲೇ ಹೋಗಿ ಕೂಡಬೇಕು, ಹೀ೦ಗಽ ಏನಾದರೂ ಮಾಡಿ, ಮನೆತನದೊಳಗಿನ ತೊಡಕು ಬಿಡಿಸಿದರ ಆಯ್ತು….”
“ಆ ಮನಿಯೊಳಗ ಇಡುವದಕ್ಕಿಂತಾ ತೋಟದೊಳಗಽ ಒಯ್ದು ಇಟ್ಟರ ನೆಟ್ಟಗಲ್ಲ?
ಅಲ್ಲಿಯೂ ಬೇರೆ ಇಬ್ಬರನ್ನು ಇಡತೇನಿ. ಇನ್ನ ಎಲ್ಲಾರೂ ಒತ್ತಟ್ಟಿಗೇ ಇದ್ದೇವು ಅಂದರ ನಡೆಯೋದಿಲ್ಲ ಮನಿತನ. ಹತ್ತು ಮನಿತನ ಕೂಡಿ ಒತ್ತಟ್ಟಿಗೆ ಇದ್ದ ವೇಳೆ ಹೊತ್ತಿನೊಳಗ ಉಪಯೋಗ ಆಗ್ತಽ ದಂತ, ನಮ್ಮ ಹಿರಿಯರು ಹಳ್ಳೀ, ಊರೂ ಅ೦ತ ಕಟ್ಟಿಕೊಂಡರು. ಅದಽ ಹಳ್ಳಿಯೊಳಗ, ನಾಲ್ಕು ಜನರ ಒ೦ದು ಸ೦ಸಾರಾನ ಒ೦ದಾಗಿ ಇರಲಿಕ್ಕೆ ಕೊಡುವದಿಲ್ಲಾ ಈ ಜನ. ಇಂಥವರೊಳಗ ತಿಳಿಯದ ಹುಡುಗರನ್ನ ಕಟ್ಟಿಕೊಂಡು ಮರ್ಯಾದಿಯಿಂದ ಜಗದೊಳಗ ಬಾಳಬೇಕಾಗೇದ. ‘ಈಸಬೇಕು ಇದ್ದು ಜೈಸಬೇಕು’ ಅಂತ ದಾಸರ ಹಾಡು ಇಲ್ಲಽ? ನಮ್ಮಂಥವರ ಪಾಡ ನೋಡೇ ಹಾಡಿದ್ದದು!
ಮಾತಿನ ಮುಡಿಯೊಡನೆ ನಿಟ್ಟುಸಿರೊಂದು ಕೇಳಬಂದಿತು. ಏನೋ ಮನೆಯ ಹಿರಿಯರು- ಸಿದ್ದಪ್ಪ, ಸಾತವ್ವ-ಮಾತನಾಡುತ್ತಿದ್ದಾರೆ. ಮನೆತನ ಹೋಳಾಗಿರಬಾರದು, ಹೋಳಾದಂತೆ ಜನರಿಗೂ ಕಂಡಿರಬಾರದು, ಮಕ್ಕಳು ಮಾತ್ರ ಬೇರೆಬೇರೆಯಾಗಿ ನಿಂತು, ಜಗಳವಿಲ್ಲದೆ ಬಾಳಿರ ಬೇಕು-ಎನ್ನುವ ಯೋಜನೆಯನ್ನು ಹೂಡುತ್ತಲಿದ್ದಾರೆ. ಮಕ್ಕಳಿಗೆ ಹೊಸ ವ್ಯವಸ್ಥೆಗಳನ್ನು ಮಾಡಿ ಕೊಡುವಾಗ, ಹಿರಿಯರಿಗೆ ಇರುಳು ಎರಡು ಹೊಡೆದರೂ ಕಣ್ಣಿಗೆ ನಿದ್ರೆ ಎಲ್ಲಿಂದ ಬಂದೀತು? ‘ಒ೦ದು ಮನೆತನದ ಹೊಣೆ ಹೊತ್ತ ಹೆತ್ತವರಿಗೆ ಈ ಸಮಸ್ಯೆಯಾದರೆ, ದೇಶದ ಹೊಣೆ ಹೊತ್ತಿರುವ ಹಿರಿಯರ ಗತಿ ಏನು?’ ಎಂದು ವಿಚಾರಿಸುತ್ತ, ಕತ್ತಲೆಯಲ್ಲಿ ನಾನು ಮುಂದಿನ ಓಣಿಗೆ ಸಾಗಿದೆ. ನಾಯಿಗಳು ದೂರದಲ್ಲಿ `ಒವ್’ ಎಂದು ಬೊಗಳುವ ಸದ್ದು ಕೇಳಿಸುತ್ತಿತ್ತು.
೨
ವಾರದಲ್ಲಿ ಒಂದು ದಿನ ನಾನು ಊರಲ್ಲಿ ಕಾವಲಿಗೆ ತಿರುಗಬೇಕಾಗುತ್ತಿತ್ತು. ಈ ವಾರ ಪೇಟೆಯ ಓಣಿಯನ್ನು ಕಾಯುವ ಹೊಣೆಯು ನನ್ನ ಮೇಲೆ ಬಿದ್ದಿತು. ಕೊತವಾಲನ ಆಜ್ಞೆಯಾದತ್ತ ನಾವು ಹೋಗ ಬೇಕಾಗುವುದು.
ಈಗಾಗಲೇ ಹನ್ನೆರೆಡು ಹೊಡೆದು ಹೋಗಿದ್ದಿತು. ಆದರೂ ಒಂದು ಕಿರುಮನೆಯ ಕಿಟಕಿಯಿಂದ ಬೆಳಕು ಹರಿದು ಹೊರಗೆ ಬರಲು ಯತ್ನಿಸುತ್ತಿದ್ದಿತು. `ಇಂಥ ಕಂಟ್ರೋಲಿನ ದಿನದಲ್ಲಿ ಇನ್ನೂ ಯಾರು ದೀಪ ಉರಿಸುತ್ತಿದ್ದಾರಪ್ಪ!’ ಎಂದುಕೊಂಡು, ಆ ಮನೆಯ ಸಮೀಪಕ್ಕೆ ಸಾಗಿದೆ. ಒಳಗೆ ಹೊಸ ದಂಪತಿಗಳ ಸರಸ-ವಿರಸ ಸಾಗಿದೆ.
“ನಾಳೆ ಒಂದು ದಿನ ನೀವು ತೋಟಕ್ಕೆ ಹೋಗದಿದ್ದರೆ ನಡಿಯೂದಿಲ್ಲಾ?”
“ಮನಿಯೊಳಗ ಏನು ಕೆಲಸ?”
“ಕೆಲಸ ಇದ್ದರನಽ ಇರಬೇಕೇನು?” ಸ್ವಲ್ಪ ತಡೆದು “ದಿನಾ ಬೆಳಗಾದರ ನೀವು ತೋಟದೊಳಗ, ನಾ ಮನಿಯೊಳಗ! ನನಗ ಹೊತ್ತರೆ ಹ್ಯಾ೦ಗ ಹೋಗಬೇಕ? ಎಮ್ಮಿ-ನಾನು, ನಾನು-ಎಮ್ಮಿ ಜೋಡಿ ಆಗಿದೇವಿ….”
“ನೀನೂ ತೋಟಕ್ಕ ಬರತಽ ಇರಲ್ಲ!”
“ನಾ ಮತ್ತ ಅವರೊಳಗಽ ಬರಲಿ ಏನ ಮಗ ತಿಕ್ಕತ?”
“ನೀ ಹೀ೦ಗ ತಿಳಕೊ೦ಡರ ನಾ ಏನ ಮಾಡಲಿ?”
“ಒಂದು ದಿನಾ ತೋಟಕ್ಕೆ ಹೋಗಬೇಕು, ಎರಡು ದಿನಾ ಮನಿಯೊಳಗ ಇರಬೇಕು; ಇರೂದಿಲ್ಲೇನ ಮಂದೀ ಗಂಡಸರೆಲ್ಲಾ….?”
“ತೋಟದ ಕೆಲಸ ಹನ್ನೆರಡು ತಿ೦ಗಳೂ ಇರತಽದ, ಅಣ್ಣಂದಿರೆಲ್ಲಾ ದುಡಿಯುವಾಗ, ನಾ ಮನಿಯೊಳಗ ಹ್ಯಾಂಗ ಕೂಡಲಿ?”
“ಅವರಿಗೆನ ಮನಿಯೊಳಗ ಇರಲಿಕ್ಕೆ ಬ್ಯಾಡಾ ಅಂತೀರೇನು ನೀವು?”
“ಹಾಂಗ ಹ್ಯಾಂಗ ಆದೀತು?”
“ನನಗೇನ ಜೀವ ರಮಿಸೂದಿಲ್ಲ ಹೋಗರಿ!”
ಸ್ವಲ್ಪ ಹೊತ್ತು ನೀರವ, ನಿಶ್ಯಬ್ದ
“ಯಾಕ ಮಾತನಾಡವೊಲ್ಲಿರಿ?”
ಸಣ್ಣ ಗೋರಿಕೆಯ ಸದ್ದು,
“ಕಣ್ಣು ಮುಚ್ಚಿದಿರೇನು?”
ಆ೦ಽ?”
“ಹಗಲೀ ತೋಟ, ರಾತ್ರೀ ನಿದ್ದಿ…..”
“ಇಂದ ಕೆಲಸ ಬಹಳ ಇತ್ತು ತೋಟದೊಳಗ….?”
“ಎ೦ದ ಇರೂದಿಲ್ಲ? ನನ್ನ ನಾಳೆ ತವರು ಮನೆಗೆ ಕಳಿಸಿ, ನೀವು ತೋಟದೊಳಗಽ ಇರು ಹೋಗರಿ!”
“ಯಾಕ?”
“ಎಷ್ಟು ಸಾರೆ ಹೇಳಲಿ, “ನನಗ ಹೊತ್ತಽ ಹೊಗದು’ ಅಂತ…”
“ಮಧ್ಯಾನ್ನ ಅವ್ವನ ಹತ್ತಿರ ಹೋಗಿ ಕೂಡಬೇಕು….”
“ನೀವು ನೀವು ತೋಟದೊಳಗಽ….”
ಈ ದಂಪತಿಗಳ ತೊಡಕನ್ನು ಬಿಡಿಸುವುದು ನನ್ನ೦ಥವನಿಗಂತೂ ಸಾಧ್ಯವಿಲ್ಲವೆಂದು ತೋರಿತು. ಬಾಬುರಾಜನೊಡನೆ ಬೇರೆ ಮನೆಯಲ್ಲಿ ನಿಂತು ಸುಖವಾಗಿ ಬಾಳಬಯಸಿದ ಕುಸುಮಳ ಮುಗ್ಧಜೀವ, ಈಗ ಮತ್ತೆ ಪತಿಯ ಸತತ ಸಹವಾಸಕ್ಕಾಗಿ ಕಾತರಿಸುತ್ತಿದೆ. ನಾಲ್ಕು ಜನರೊಡನೆ ಇದ್ದಾಗ ಸಿಕ್ಕದ ಸುಖ, ಒಬ್ಬಳೇ ಇದ್ದರೂ ದೊರಕದಾಗಿದೆ, ಪತಿಯ ಜೊತೆಯಲ್ಲಿ ದುಡಿಯುವ ವಿಚಾರಕ್ಕೆ ಅವಳ ಮನಸ್ಸು ಒಪ್ಪದಾಗಿದೆ, ತನ್ನೊಡನೆ ಪತಿಯೂ ಕೆಲಸವಿಲ್ಲದೆ ಕಾಲಕಳೆಯಲಿ-ಎನ್ನುವ ಬಯಕೆಯೇ ಪ್ರಬಲವಾಗಿದೆ. ಬಾಬುರಾಜನು ಅಣ್ಣಂದಿರೊಡನೆ ಅಡವಿಯಲ್ಲಿ ದುಡಿಯದೆ ಬದುಕಲಾರ. ಎಂದ ಮೇಲೆ, ಈ ತೊಡಕು ಬಿಡುವುದೆಂತು?
ದೇಶದ ಬಾಳಿನಲ್ಲೂ ಅನೇಕ ತೊಡಕುಗಳುಂಟು, ನಾಡು ಹೋಳಾಯಿತು. ಹೋಳಾಗಿಯೂ ಸುಖದಲ್ಲಿ ಬಾಳದಾಯಿತು. ಬೇರೆಯಾಗಿ ನಿಂತು ಸುಖ ಪಡೆಯುವೆವೆನ್ನುವ ಪಾಕಿಸ್ತಾನಿಗಳು, ತಿರುಗಿ ಹಿಂದುಸ್ತಾನದ ರಾಜಕೀಯರಂಗದಲ್ಲಿ ಕೈ ಹಾಕುವರು. ಒಳ್ಳೆಯ ರೀತಿಯಿಂದ ಬಾಳ ಬೇಕೆನ್ನುವ ದೇಶಕ್ಕೂ ಅಡ್ಡಿಯನ್ನು ಒಡ್ಡುವರು. ದೇಶದ ಮುಂದಿರುವ ಇಂಥ ಸಮಸ್ಯೆಗಳನ್ನೇ ಇಲ್ಲಿ ಮನೆ-ಮನೆಯಲ್ಲಿಯೂ ಕಾಣುತ್ತೇವಲ್ಲ!
ಒಂದಾಗಿ ಬಾಳುವ ಭಾರತೀಯ ಸಂಸ್ಕೃತಿಯೆ ನಷ್ಟವಾಯಿತೆ? ಪ್ರಶ್ನೆ ಪ್ರಶ್ನೆಯಾಗಿಯೇ ನನ್ನ ಮುಂದೆ ಉಳಿಯಿತು. ಮೆಲ್ಲನೆ ಅಲ್ಲಿಂದ ನಡೆದೆ. ನನ್ನ ಹೆಜ್ಜೆಯ ಸದ್ದಿಗೆ ಕೈಯೊಳಗಿನ ಬಡಿಗೆಯ ಸಪ್ಪುಳ ತಾಳ ಹಾಕುತ್ತಲಿತ್ತು. ಕತ್ತಲೆಯಲ್ಲಿ ಎಡವಿ ಮುಗ್ಗರಿಸಿದಾಗ ಆ ತಾಳ ತಪ್ಪುವುದು ಏಳುತ್ತ ಕತ್ತಲೆಯ ದಾರಿಯಲ್ಲಿ ಮುಂದೆ ಸಾಗಿದೆ.
೩
“ಯಾಕ, ಸಿಟ್ಟೇನ ನನ್ನ ಮ್ಯಾಲ?”
“ಸಿಟ್ಟ ಮಾಡಲಿಕ್ಕೆ ನನ್ನದೇನು ಅಧಿಕಾರ ನಡೀತದ ನಿಮ್ಮ ಮ್ಯಾಲ?”
“ನಿನ್ನ ಮ್ಯಾಲ ನಂದು, ನನ್ನ ಮ್ಯಾಲ ನಿಂದು ಅಧಿಕಾರ ನಡದಽ ನಡೀತಽದ ಎಂದ ಮುದಿವಿ ಆಗಿದೇವೋ ಅ೦ದೇ ಆ ಅಧಿಕಾರ ಇಬ್ಬರಿಗೂ ಬಂದಽದ.”
“ನಿಮಗಷ್ಟಽ ಬ೦ದದ, ಸಿಕ್ಕಗಿಕ್ಕಾಗಗ ಮನಿಗೆ ಬರಲಿಕ್ಕೆ! ಸಣ್ಣವರಾಗಿ ನೋಡರಿ….ಅವರು ಪೇಟೆಯೊಳಗಿನ ಮನಿ ಹಿಡಕೊಂಡು ಕೂತರು! ಹತ್ತೆಂಟು ವರ್ಷ ಜನ್ಮಾ ಮಾಡಿದೆವು; ಇನ್ನೂ ನಮಗ ಸ್ವತಂತ್ರ ಹಾಸಿಗಿ-ಹೊದಿಕಿನೂ ಇಲ್ಲ. ನೀವೂ ಒಬ್ಬರು ಗಂಡಸರಽ?”
“ಇಲ್ಲಽ; ತೋಟದೊಳಗ ಗುಡಿಸಲಾ ಕಟ್ಟಿ ಆಯಿತಂದರ ಹೋಗೋಣಲ್ಲ, ಅಲ್ಲೇ ಇರಲಿಕ್ಕೆ.”
“ನಾವ್ಯಾಕ ಗುಡಿಸಲಿನೊಳಗೆ ಇರಬೇಕು?”
“ಉಳಿದವರು ಹೋಗಲಿ; ನಾವು ಮನಿಯೊಳಗ ಇರೋಣ ಬಾ.”
“ಮುದುಕಿಯೊಬ್ಬಾಕಿ ಇರುವಾಕೇ ಅಲ್ಲಾ, ನಮ್ಮ ಸುತ್ತಽ.”
“ಊರೊಳಗಽ ಸಣ್ಣ ಮಗನ ಮನೀ ಅದ. ಅಲ್ಲಿ ಹೋಗ್ತಾಳ ಇಲ್ಲ್ಯೂ ಇರತಾಳು. ಆಕೇದು ಏನ ಹೇಳತಿ?”
“ಆ ಕಟಕಟಿ ನನ್ನಿ೦ದ ತಾಳೋದಽ ಆಗದು.”
“ಈಗೇಕ ಬ್ಯಾರೇನಽ ಆಗಲಿಕ್ಕೆ ನಿಂತೇವೇನ ಇಷ್ಟೆಲ್ಲಾ ವಿಚಾರ ಮಾಡಲಿಕ್ಕೆ? ನಮ್ಮ ಅಪ್ಪ ಅಪ್ಪ ಇರುವ ತನಕಾ ಇಂಥಾದ ಏನೂ ನಡೆಯದಿಲ್ಲ ನೋಡು ಎಲ್ಲಾದರೂ ನಾಲ್ಕು ರೊಟ್ಟೀಸುಟ್ಟು ತಿನ್ನೋದು ಅದ; ದುಡಿಯೋದು ಅದ. ಈಽಗ ಒಂದೆರಡು ವರ್ಷದೊಳಗೆ ನಮ್ಮ ಮನಿತನಾ ಒಂದು ರೂಪಕ್ಕ ಬಂದಽದ. ನಮ್ಮ ಮನಿತನದ ಸ್ಥಿತಿ ಗತಿ ನೋಡೋದು ಬಿಟ್ಟು, ನಮ್ಮ ನಮ್ಮ ಸುಖಾನಽ ನೋಡಿದರೆ ಹ್ಯಾಂಗ? ಅಪ್ಪ ಎಲ್ಲಿ ಇರೂ ಆ೦ತ ಹೇಳತಾನು ಅಲ್ಲಿ ಇರತೇನ ನಾ. ಅಂವ ಮನಿತನದ ಸಲುವಾಗಿ ಏನ ಮಾಡ ಅನ್ನತಾನು ಅದನ್ನ ಮಾಡತೇನು. ನಾವಽ ನಾಲ್ಕು ಮಂದಿ ಅಡ್ಡಾತಿಡ್ಡಾ ನಡದ ಮ್ಯಾಲ, ಹಿರೇರ ಆಗಿ ಅವರೇನು ಮಾಡತಾರು? ನಿನ್ನ ಮಾತ ಕೇಳಿ ನಾನೂ ಇನ್ನ ಜಗಳಾ ಹೂಡಲಿ? ಅಪ್ಪನಿಗೆ ಎಲ್ಲಾ ತಿಳಿತಽದ, ತಿಂಗಳೊಪ್ಪತ್ತಿನೊಳಗಽ ಎಲ್ಲರಿಗೂ ವ್ಯವಸ್ಥಾ ಮಾಡಿಕೊಡತಾನ.”
“ನಿಮ್ಮ ಹಡಿದವರಽ ಹೇಳಿದ್ಹಂಗ ಕೇಳ್ತಿ ಇರೋದು ಆದರ, ನನ್ನ ಯಾಕ ಮದಿವೀ ಮಾಡಿಕೋಬೇಕು?”
“ಯಾಕಽ ಮೈ ಗುದು ಗುದು ಅನ್ನಲಿಕ್ಕೆ ಹತ್ತೇದ ಏನ?”
ಈ ಸಂವಾದವನ್ನು ಕೇಳಿದಾಗ, ನನ್ನ ಕಣ್ಣೆದುರಿಗೆ ಕುಸುಮಾ-ಬಾಬುರಾಜರ ಚಿತ್ರ ಸುಳಿಯಿತು. ಕಳೆದ ಕೆಲವು ವಾರಗಳ ಹಿಂದೆ ಅವರ ಮಾತು-ಕತೆಗಳೂ ಕಿವಿಯ ಮೇಲೆ ಬಿದ್ದಿದ್ದುವು. ಇದು ಅಣ್ಣನ ದಾಂಪತ್ಯ ಜೀವನ, ಅದು ತಮ್ಮನ ದಾಂಪತ್ಯ ಜೀವನ! ಎರಡರಲ್ಲೂ ನೆಲಮುಗಿಲುಗಳಷ್ಟು ಅಂತರ. ಆದರೂ ಎರಡೂ ಜೋಡಿಗಳ ಎದುರಿಗೆ ಇರುವ ಸಮಸ್ಯೆ ಮತ್ರ ಒಂದೇ ಆಗಿದೆ. ಯಾರು ಯಾರ ವಲವಿನಂತೆ ಬಾಳಬೇಕು? ಸತಿಯು ಪತಿಯೇ ಪರದೈವವೆನ್ನ ಬೇಕೋ! ಪತಿಯು ಸತಿಯೇ ಪರದೈವವೆಂದು ಬಾಳ ಬೇಕೋ? ಇಬ್ಬರೂ ನಡುವಿನ ದಾರಿಯೊಂದನ್ನು ಹಿಡಿದರೆ ಸಂಸಾರ ಸುಖಕರವಾದೀತಲ್ಲ!
ಇದೇ ವಿಚಾರದ ಗಾಳಿಯಲ್ಲಿ ಸಿಕ್ಕು, ಅದಾವಾಗಲೋ ನಾನು ಪೇಟೆಯ ಓಣಿಗೆ ಬಂದಿದ್ದೆ. ಅಲ್ಲಿ ಕುಸುಮಳ ಮಾತನ್ನು ಕೇಳಿ ತಡೆದು ನಿಲ್ಲುವಂತಾಯಿತು. ಮುಂದಿನ ಮಾತುಗಳನ್ನು ಕೇಳಿಯೇ ಹೋಗಬೇಕೆಂದು ಕೂತೂಹಲ ಕೆರಳಿತು. ಮತ್ತೆರಡು ಹೆಜ್ಜೆ ಮುಂದೆ ಹೋಗಿ ಕಿವಿಗೊಟ್ಟು ಕೇಳತೊಡಗಿದೆ:
“ಎಷ್ಟ ಆದರೂ ಆ ಅಂಗಡೀ ರಾಮುನಕಿಂತ ಈ ದೀಪಚಂದ ಸಾವುಕಾರ ಒಳ್ಳೆಯವ ನೋಡಿರಿ!”
“ರಾಮಪ್ಪಗ ವ್ಯಾಪಾರ ಮಾಡಿ ಏನು ಗೊತ್ತು? ದೀಪಚಂದ ಸಾವುಕಾರ ಅದರೊಳಗ ನುರಿತವ….”
“ಮೊನ್ನೆ ರಾಮೂನಲ್ಲೆ ಎರಡು ದುಡ್ಡಿನ ಜೀರಿಗೀ ತ೦ದರ, ನಾಲ್ಕಽ ಕಾಳ ಕೊಟ್ಟ. ಇಂದ ದೀಪಚ೦ದರ ಅಂಗಡಿಗೆ ಹೋದರ, ಒ೦ದು ದುಡ್ಡಿಗೇ ಅದಕ್ಕಿಂತಾ ಹೆಚ್ಚಿಗೆ ಕೊಟ್ಟರು! ಎಲ್ಲಾ ಗಿರಾಕಿ ಬಿಟ್ಟು, ನನ್ನ ನೋಡಿದ ಕೂಡಲೆ, ಮೊದಲ ‘ಏನ ಬೇಕು?’ ಅಂತ ಕೇಳತಾರ. ಮನಿಯೊಳಗ ನೀವು ಇರುವದಿಲ್ಲ. ಅದಕ್ಕೆ ನಾನಽ ಅಂಗಡಿಗೆ ಹೋಗಬೇಕಾಗ್ತಽದ
ಅ೦ಬೂದೆಲ್ಲ ಅವರಿಗೆ ಗೊತ್ತ ನೋಡರಿ!”
ಮುಂದೆ ಬಾಬುರಾಜನ ಬಾಯಿಂದ ಮಾತುಗಳೇನೂ ಹೊರಡಲಿಲ್ಲ. ಹಗಲೆಲ್ಲ ಹೊಲದಲ್ಲಿ ದುಡಿದ ಅವನಿಗೆ ನಿದ್ರೆ ಆವರಿಸಿರಬೇಕು, ಕುಸುಮಳೂ ಸುಮ್ಮನಾದಳು.
ಸ್ವಲ್ಪ ಹೊತ್ತಿನ ಮೇಲೆ `ಉಫ್’ ಎಂದು ಊದಿದ ಸದ್ದೊಂದು ಕೇಳಬಂತು, ದೀಪ ಆರಿತು. ಆ ಕಿರುಮನೆಯ ಕಿಟಕಿಯೊಳಗಿ೦ದ ಕತ್ತಲೆಯು ಹರಿದು ಬಂದು, ಹೊರಗಿನ ಕತ್ತಲೆಯೊಡನೆ ಸೇರಿ ಒಂದಾಯಿತು!
೪
ಕೆಲವು ದಿನಗಳು ಉರುಳಿದವು. ಈಗ ನಮ್ಮೂರಿಗೆ ಕಳ್ಳರ ಕಾಟವಿಲ್ಲ. ಗ್ರಾಮಸರಂಕ್ಷಕ ದಳದ ಫಲವಿದು. ಊರ ಜನರೆಲ್ಲ ಚಿಂತೆಯಿಲ್ಲದೆ ನಿದ್ರೆ ಮಾಡುತ್ತಿರುವರು. ಆದರೂ ನಮ್ಮ ಕಾರ್ಯವನ್ನು ನಾವು ನಿಲ್ಲಿಸಿಲ್ಲ. ಹಾಗೇ ಊರಲ್ಲಿ ಇರುಳು ತಿರುಗುವವು.
ಇಂದು ಹುಣ್ಣಿವೆ. ಎಲ್ಲೆಡೆಗೂ ಹಿಟ್ಟು ಚೆಲ್ಲಿದಂತೆ ಬೆಳದಿಂಗಳು. ಸ್ವಲ್ಪ ತಡಮಾಡಿ, ಒಂದು ಸುತ್ತು ಊರಲ್ಲಿ ತಿರುಗಿ ಬಂದರಾಯಿತೆಂದು ಯೋಚಿಸಿ, ಒಂದು ಗಂಟೆಯಾದ ಮೇಲೆ ಚಾವಡಿಯಿಂದ ಹೊರಟೆವು.
ಒಬ್ಬೊಬ್ಬರು ಒಂದೊಂದು ಓಣಿಯನ್ನು ಸೇರಿದೆವು.
ಆ ದಿನ ನಾನು ಕೇಳಿದ ಮಾತುಗಳಿವು:
“ಮೂರೂ ಮಂದಿ ಸೊಸೊಂದಿರಕ್ಕಿಂತಾ ಕುಸುಮಾನ ಕೈಯ ಅಡಿಗೆಗೆ ಸ್ವಾದ ಹೆಚ್ಚ ನೋಡು!”
ಸಿದ್ದ ಹೆಂಡತಿಗೆ ಹೇಳಿದ.
“ಹೂಂ! ಅಂತಾ ಸಾಮಾನ ಹಾಕ್ತಾಳು, ಆಗದ ಏನಮಾಡ್ತಽದ?“
“ಇಲ್ಲಾ; ಅಡಗಿ ಮಾಡುವ ಹದಾ ಸಿಕ್ಕಽದ ಏಳ ಪೋರಿಗೆ….”
“ಹೋದಾಗ ಸವಿ ಸವಿ ಇಷ್ಟ ತಿನಲಿಕ್ಕೆ ಮಾಡಿ ಹಾಕ್ತಾಳ ಕಾಣದ, ಹೊಗಳ್ತೀ ಆಯ್ತು ಸಣ್ಣ ಸೊಸಿನ್ನ. ಅದೂ ತಿಳಿಯೂದಿಲ್ಲ, ಇದೂ ತಿಳಿಯೋದಿಲ್ಲ….”
“ತಿಳದಾಕಿ ಬಹಾಳ ನೀ! ನೋಡು ಹೋಗಿ ಆಕೆಯ ಮನಿ ಎಷ್ಟು ಶಿಸ್ತಯ ಅದ. ಈ ತಿಂಗಳದೊಳಗ ಅತ್ತ ಹೋಗೀದಿ ಏನ ನೀ?” ಮತ್ತೂ ಸಿದ್ದ ಸೊಸೆಯನ್ನು ಹೊಗಳಿದ.
“ನಾ ಯಾತಕ್ಕ ಹೋಗಲಿಕ್ಕೆ ಹೋಗಲಿ? ನಮ್ಮಂಥ ಮುದಿಕೇರು ಅವರಿಗೆ ಕಾಲ್ತೊಡಕ ಆಗ್ತೇವಿ” ತುಸು ತಡೆದು “ಕಸಬಿಣೇರ ಮನೀ ಹಾಂಗ ಎದುರಿಗೆ ಕನ್ನಡೀ ಏನ ಹಚ್ಚಿದಾಳ, ತಿದ್ದಿ ತೀಡಿ ಕೂದಲಾ ಏನ ಹಿಕ್ಕತಾಳ! ಹಣೀ ಮ್ಯಾಲಿನ ಕುಂಕುಮ ಅಂತ, ನನ್ನ ಮುಂದ ದಿಟ್ಟಗಿ ಕಾಣದಽ ಇಲ್ಲಂತ. ನಾ ಯಾತಕ್ಕೆ ಇದನ್ನೆಲ್ಲಾ ನೋಡ್ಲಾಕ ಹೋಗ್ಲಿ? ನೆರಿಮನಿಯವರು ಬಂದು ಹೇಳೋದ್ನಽ ಕೇಳೆತೇನು… ಈಗ ನಿನ್ನ ಮನೀ ಕಾರಬಾರ ಎಲ್ಲಾ ದೀಪಚಂದ ಸಾವುಕಾರ ಮಾಡುವವ ಆಗಿದಾನ. ಮೊನ್ನೆ ರಾತ್ರಿ ನಮ್ಮ ಬಾಬೂನ ಕರಕೊಂಡ, ಯಾವ ಊರಿಗೋ ಸಿನಿಮಾಕ್ಕ ಹೋಗಿದ್ದಂತ. ಸಾವಕಾರ್ರ ಮೈತರಕಿ ಆದ ಮ್ಯಾಲ, ಅವರಿಗೆ ಯಾವ ಕೊರತಿ? ಅವರ ಮನಿಗೆ ಇವರು ಹೋಗತಾರ, ಇವರ ಮನಿಗೆ ಅವರು ಬರತಾರ……… ನಿನ್ನ ಸೊಸೀ ಚೊಚ್ಚಲ ಬಸಿರು ಇದ್ದಾಳಂತ; ಸಾವಕಾರ ಮನ್ಯಾವರು ಊಟಕ್ಕೆ ಮಾಡುವರು ಇದ್ದಾರಂತ!”
“ನಿನ್ನ ಸೊಸೇದ ನೆಟ್ಟಗ ಆದರ ನಿನಗೇನ ಕಟ್ಟೇನು?”
“ನೆಟ್ಟಗಽ ಆಗೋದಿದ್ದರ ಚಲೋನಽ ಆಯ್ತಲ್ಲ! ಹಾದಿ ಬೀದಿಯೊಳಗೆ ಗಂಡಸು ಆಗಿ ಹೆಂಗಸರನ್ನ ಏನ ಮಾತಾಡಿಸೋದ ಆದು?”
“ಯಾರು?”
“ನಿನ್ನ ಸೊಸೀನಽ ಮಾತಾಡಸತಾನ ದೀಪಚ೦ದ ಸಾವಕಾರ…. ತಿಳಿತೂ? ಮೈತರಕಿ ಇದ್ದರ ಗಂಡಸರ ಪೂರ್ತಿ ಇರಬೇಕು. ಅದೂ ಹೊರಗಿನ ಹೊರಗಽ… ಮನಿಯೊಳಗ ಉಪಯೋಗ ಇಲ್ಲ….. ನಿನ್ನ ಮಗಾ ಆದರೂ ಏನ? ಸಾವಕಾರನ್ನ ಕರದು ಮನ್ಯಾಗ ಚಹಾ ಕುಡಿ ಸೋದೇನ, ನಗೋದೇನ ಕೆಲಿಯೋದೇನ. ಎಲ್ಲಾ ನಿಮಗಽ ಚಂದ ಕಾಣ್ತದ. ಮತ್ತ ಅನ್ನುವವರ ನಾವಽ ಕೆಟ್ಟ…..
“ಕೂಡಿ ಸಾಲೀ ಕಲಿತವರು, ಈಗಿನ ಹುಡುಗರು… ಅವರದು ಬ್ಯಾರೇನಽ ಆಗ್ತದ. ನಮ್ಮದು ಬ್ಯಾರೆ ಇತ್ತು. ನಮ್ಮಂತನಽ ಇರೂ ಅ೦ದರ ಇರೂದಿಲ್ಲ ಅವರು….ಅದೆಲ್ಲಾ ಮಾಡಿಕೊಂಡು, ತೋಟದೊಳಗ ಬಂದ ಕೆಲಸಾನೂ ಮಾಡತಾನೋ ಇಲ್ಲೋ? ಸಾಕು! ಹ್ಯಾಂಗ ಯಾಕ ಇರವೊಲ್ಲರವರು!”
“ನಮ್ಮ ಹುಡುಗ ಮಳ್ಳ; ನಾಲ್ಕು ಮಂದಿ ಕೂಡಿ ನಮ್ಮ ತಲಿಗೆ ಏನಾದರೂ ತ೦ದಾರೂ ಅನ್ನ ತೇನೂ. ಅಬರೂ ಅನ್ನೋದು ಎಷ್ಟ ಇರತದ?”
“ಹಾಗೇನ ಅಗ್ತದ ಬಿಡು!”
“ಆದಮ್ಯಾಲಽ ನೀವೆಲ್ಲಾ ಜೀವಾ ಕೊಡಲಿಕ್ಕೆ ಓಡಾಡುವವರು, ಮೊದಲಽ ಎಚ್ಚರಕಿಯಿಂದ ಇದರ ಹ್ಯಾಂಗ?”
“ಈಗ ಏನ ಆಗೇದ? ಅವರವರು ಶಿಸ್ಽತ ಇದ್ದಾರ. ಹಿಂಗಽ ಇರುವಾಗ ದೇವರು ನಮ್ಮ ಕಣ್ಣ ಮುಚ್ಚಿದರ ಆಯ್ತು. ಬರುವಾಗ ಸಂಗಡ ಏನ ತಂದಿಲ್ಲ, ಹೋಗುವಾಗ ಏನ ಒಯೂದಿಲ್ಲ. ನೀನಽ ಒಯ್ಯೂವಾಕಿ ಇದ್ದರ ಏನೋ ಮತ್ತ!”
“ನಾನುಽ ನಾಡಹೊರತ ಆಗೇನಿ, ನಿಮ್ಮೆಲ್ಲರಿಗೂ!”
“ಸಾಕು, ಮಲಗಿನ್ನ; ಮೂಡಲ ಹರೀತಽ ಬಂತು.”
ಸಿದ್ದಪ್ಪ ಸಾತವ್ವನಿಗೆ ಕಣ್ಣು ಮುಚ್ಚಲಿಕ್ಕೆ ಹೇಳಿದ. ತಾನೂ ಕಣ್ಣು ಮುಚ್ಚಿದ.
ಊರು ಕಾಯುವ ಹೊಣೆ ಹೊತ್ತ ನನಗೆಲ್ಲಿ ನಿದ್ರೆ? ಬೆಳದಿಂಗಳಲ್ಲಿ ಮುಂದೆ ಸಾಗಿದೆ. ಹಾಗೆಯೇ ನನ್ನ ಮನಸ್ಸು- ಅಂದಿನ ಕುಸುಮಳ ಮಾತು, ಇಂದಿನ ಸಾತವ್ವನ ಮಾತಿನ ಹಿಂದಿರುವ ಭಾವಗಳನ್ನು ಹೊಂದಿಸಿಟ್ಟು, ಏನೇನೋ ಕಲ್ಪಿಸಹತ್ತಿತು.
ಸುತ್ತಲೂ ಬೆಳದಿಂಗಳು ಬೆಳ್ಳಗೆ ಬಿದ್ದಿತ್ತು! ಬಹುದೂರದಲ್ಲಿ ಆಕಾಶದಲ್ಲೊಂದು ಕಪ್ಪು ಮೋಡ ಬೆಳೆದು ದೊಡ್ಡದಾಗುತ್ತಲಿತ್ತು!
೫
ನಾಲ್ಕೆಂಟು ತಿಂಗಳುಗಳು ಜಾರಿದುವು. ಸುಗ್ಗಿಯ ಸಮಯ ಬಂತು. ಈಗ ಹಗಲು ಹೊತ್ತಿನಲ್ಲೂ ಊರಲ್ಲಿ ಜನ ಇರದು. ಅದರಿಂದ
ಹಗಲಿರುಳೂ ಊರ ಕಡೆಗೆ ನಾವು ಲಕ್ಷ್ಯ ಹಾಕಬೇಕಾಯಿತು ಈಗೀಗ ಹೊರಗಿನ ಕಳ್ಳರಿಗಿ೦ತ ಊರೊಳಗಿನ ಕಳ್ಳರ ಕಾಟವೇ ಹೆಚ್ಚಾಗಿದ್ದಿತು. ನೆರೆಮನೆಯ ಕಳ್ಳನನ್ನು ಹಿಡಿಯುವುದು- ತಡೆಯುವುದು- ಬಹಳ ಕಷ್ಟಕರ. ಹಗಲಿನಲ್ಲಿಯೂ ಚಿಕ್ಕ ಪುಟ್ಟ ಕಳವುಗಳಿಗೆ ಆರಂಭವಾಗಿದ್ದಿತು. ಅದಕ್ಕಾಗಿ ಗ್ರಾಮ ಸಂರಕ್ಷಕ ದಳದವರು, ಇಳಿಹೊತ್ತಿನಲ್ಲಿಯೂ ಒಮೊಮ್ಮೆ ಊರಲ್ಲಿ ಸುತ್ತಾಡಿ ಬರಬೇಕಾಗುತ್ತಿದ್ದಿತು. ಸಣ್ಣ ಸಣ್ಣ ಓಣಿಗಳಲ್ಲಿಯೇ ಹೆಚ್ಚಾಗಿ ಹಾಯಬೇಕಾಗುತ್ತಿದ್ದಿತು. ಕಳವುಗಳಾಗುವುದು ಅಲ್ಲಿಯೇ ಹೆಚ್ಚು.
ಇಂದು ಮಧ್ಯಾಹ್ನದ ಮೂರು ಗಂಟೆಗೆ ಊರೆಲ್ಲ ತಿರುಗಿ ಪೇಟೆಯ ಓಣಿಗೆ ಬ೦ದೆ. ಬಾಬುರಾಜನ ಮನೆಯಲ್ಲಿ ನಾಲ್ಕು ಮನೆಯ ಜನರು ಕೂಡಿದ೦ತೆ ಕ೦ಡಿತು. ಅಲ್ಲಿಯೇ ಹೋಗುತ್ತಿರುವ ದೀಪಚಂದ ನನ್ನನ್ನು ಕರೆದ. ಅವನ ಕೈಯಲ್ಲಿ ‘ರಾಣೀ ಛಾಪಿ’ನ ಚಹದ ಪುಡಿಯೊಂದಿತ್ತು. ನನಗೂ ಚಹದ ಆಶೆಯಾಯಿತು. ಹಿ೦ಬಾಲಿಸಿದೆ.
ಪಡಸಾಲೆಯಲ್ಲಿ ಕಂಬಳಿ ಹಾಸಿತ್ತು. ಅದರ ಮೇಲೆ ಸಿದ್ದಪ್ಪ ಕುಳಿತಿದ್ದ. ನರೆಮನೆಯ ಹೆಂಗಸರೂ ಇದ್ದರು. ಒಳಗೆ ಕುಸುಮಳ ತವರು ಮನೆಯ ಹೆಂಗಸರಿರಬೇಕು. ಅವರು ತಮ್ಮತಮ್ಮಲ್ಲಿ ಸಾವಕಾಶವಾಗಿ ನಗುತ್ತಿದ್ದರು, ಮಾತಾಡುತ್ತಿದ್ದರು. ಕುಸುಮಾ ತನ್ನವರಿಗೆ ಹೇಳುತ್ತಿದ್ದಳು.
“ವೇಳೆ ಹೊತ್ತಿನೊಳಗ ಆಗುವವರೆಂದರೆ ಇವರೊಬ್ಬರಽ ತಾಯಿಯಾ ಊರಾಗ. ಇಷ್ಟ ಸಾವಕಾರಕಿ ಇದ್ದರೂ ಎಳ್ಳಷ್ಟೂ ಗರ್ವಿತಿ ಇಲ್ಲ ನೋಡು. ಒಮ್ಮೊಮ್ಮೆ ಅಂಗಡಿಯಿಂದ ಸಾಮಾನೂ ಮನಿಗೆ ತಂದು ಮುಟ್ಟಿಸತಾರ.”
“ಸಿದ್ದಪ್ಪನ ಸ್ವಾರಿ, ಯಾಕೋ ಊರ ಕಡೆ ಬಂದದಽಲ್ಲ?” ಎಂದು ಕೇಳುತ್ತ ನಾನು ಕಂಬಳಿಯ ಮೇಲೆ ಹೋಗಿ ಕುಳಿತೆ.
“ಮೊಮ್ಮಗನ್ನ ನೋಡಿ ಹೋಗಬೇಕಂತ ಬಂದಾನ. ಇಲ್ಲಾದರ ಅವನಿಗೆಲ್ಲಿ ಸವಡು?”
“ಅದಽ ಅಂತೇನಿ.”
“ಎಲ್ಲಾ ಅಡವೀ ಜನಾ ಇದು. ಊರಂದರ ಇವರಿಗೆ ಬೇಸರು ನೋಡು. ಬಾಬನೂ ಹಿ೦ಗಽ! ತನ್ನ ತೋಟ ಆಯ್ತು, ತಾ ಆಯ್ತು. ಮನಿಯ ಕಡೆಗೆ ವ್ಯವಸ್ಥಾ ನೋಡೋದಽ ಇಲ್ಲಂದರ ಏನದು? ಇಷ್ಟು ಗಳಿಸಿ ಎಲ್ಲಿ ಇಡತಾರ ಅಂತೇನಿ ನಾ” ಅಢ್ಯತೆಯಿಂದ ದೀಪ
ಚಂದ ಹೇಳತೊಡಗಿದ.
“ಹಗಲೀ ರಾತ್ರಿ ದುಡಿದರೂ ಹೊಟ್ಟೆ ತುಂಬವೊಲ್ದು. ಗಳಿಸೋದ ಹೇಳತಾನ ಸಾವುಕಾರ!” ಸಿದ್ದಪ್ಪ ಕೆಮ್ಮುತ್ತ ನುಡಿದ.
ಇಷ್ಟರಲ್ಲಿ ಒಳಗಿನಿಂದ ಚಹ ತಂದು ಬಾಬುರಾಜ ಕೊಟ್ಟ. ಎಲ್ಲರೂ ಕುಡಿದೆವು. ಜೊತೆಗೆ ಕುಸುಮಾ ತನ್ನ ಮಗನನ್ನು ತಂದು ಮಾವನ ತೊಡೆಯ ಮೇಲೆ ಹಾಕಿ ಹೋದಳು.
“ಹಿ೦ದ ತೊಟ್ಟಲೊಳಗೆ ಹಾಕುವ ದಿನ ನೋಡಿದ್ದೆ; ಕತ್ತಲಿಯೊಳಗ ನೆಟ್ಟಗೆ ಕಾಣಿಸಿರಲ್ಲಿಲ್ಲ.”
ಸಿದ್ದ ಮೊಮ್ಮಗನ ಮುಖವನ್ನು ನೋಡುತ್ತ ಹೇಳಿದ,
“ಇಂದಽರ ಬೆಳಕಿನೊಳಗ ನೋಡಲ್ಲ!” ನೆರೆಮನೆಯವಳೊಬ್ಬಳು ಅಂದಳು.
“ಸಣ್ಣ ಮಗಾ ಸಣ್ಣ ಮಗಾ ಅಂತಿದ್ದಿ. ಅವನ ಜನ್ಮಾನೂ ದಂಡಿಗೆ ಹಚ್ಚಿದಿಲ್ಲೋ? ಇನ್ನ ನೀ ಸಾಯಲಿಕ್ಕೇನೂ ಹರಕತ್ತ ಇಲ್ಲ ಸಿದ್ದಪ್ಪಾ!”
ಇನ್ನೊಬ್ಬ ಮುದುಕಿಯ ಪ್ರಮಾಣ ಪತ್ರವಿದು.
“ಮೊಮ್ಮಗ ಹುಟ್ಟಿದ ಕೂಡಲೆ ಕೊಲ್ಲಲಿಕ್ಕೇ ನಿಂತೆಲ್ಲ ನೀ?” ದೀಪಚಂದ ನಡುವೆ ಮಾತು ಸೇರಿಸಿದ.
“ಕೂಸನ್ನ ಮೊದಲ ನೋಡತೀರೋ, ಏನ ಮಾತಾಡತೀರ್ಯೋ? ಯಾವುದರೇ ಒ೦ದು ಮಾಡಿರಿ ಮೊದಲ!”
ಕುಸುಮಳ ತಾಯಿ ಒಳಗಿನಿಂದ ಸ್ವಲ್ಪ ಬಿರುಸಾಗಿ ನುಡಿದಳು “ನೋಡಿ ಆಯ್ತಲ್ಲ!”
ಸಿದ್ದಪ್ಪ ಎರಡೇ ಶಬ್ದ ಉಚ್ಚರಿಸಿದ ದೀಪಚಂದನ ಮುಖದ ಕಡೆಗೊಮ್ಮೆ, ಕೂಸಿನ ಮುಖದ ಕಡೆಗೊಮ್ಮೆ ನೋಡಿದ.
“ಅವ್ವಾ-ಅಪ್ಪನನ್ನೇನ ಹೊತ್ತಿಲ್ಲಪ್ಪಾ ಹುಡುಗ!” ಒಬ್ಬಳ ಅ೦ದಳು.
“ಇವರ ಮನಿತನದೊಳಗ ಯಾರ ಮುಖವನ್ನೂ ತರಲಿಲ್ಲ ಹುಡುಗ.”
“ಎಲ್ಲೀದೋ ಹೊಸ ಮುಖಾನಽ ಹೊತ್ತಾನ.”
“ಯಾರ ಮೊಕಾ ಯಾಕ ತರವಲ್ದು, ಚೆಲುವ ಆದ ಇಲ್ಲೋ ಹುಡುಗ? ಸಾಕು. ಎಂಥಾದರ ಮಂಗ್ಯಾನ ಮೋತೀದು ಹುಟ್ಟಿದ್ದರ ಏನು ಮಾಡೋದು ತಾಯಿ!”
ಒಬ್ಬೊಬ್ಬರು ಒಂದೊಂದು ತೆರನಾಡಿದರು. ಸಿದ್ದಪ್ಪ ತುಟಿ ಎರಡು ಮಾಡಲಿಲ್ಲ. ಮೊಮ್ಮಗನನ್ನು ನೋಡಿದಾಗ, ಅವನ ಮುಖ ಅರಳುವ ಬದಲು ಬಾಡಿ ಹೋಯಿತು. ಎಲ್ಲರೂ ತನಗೇ ಚುಚ್ಚಿ ಚುಚ್ಚಿ ಮಾತಾಡಿದಂತೆ ಭಾಸವಾಯಿತವನಿಗೆ. ಮುಖ ಕೆಳಗೆ ಹಕಿದ.
೬
ಅ೦ದಿನ ಇರುಳು. ಅಮಾವಾಸ್ಯೆಯ ಕಗ್ಗತ್ತಲು ಊರನ್ನೆಲ್ಲ ಮುತ್ತಿದೆ. ನಾವು ಓಣಿ-ಓಣಿಗಳಲ್ಲೆಲ್ಲ ಸುತ್ತಿ, ಒಳ್ಳೇ ಎಚ್ಚರದಿಂದ ಊರನ್ನು ಕಾಯುತ್ತಿದ್ದೇನೆ. ನನ್ನ ಮುಂದೆ ಮುಂದೆ ಯಾರೋ ಇಬ್ಬರು ಮಾತಾಡುತ್ತ ನಡೆದಂತೆ ತೋರಿತು. ಸ್ವಲ್ಪ ಅವಸರದಿಂದ ಸಾಗಿ ಅವರ ಬೆನ್ನು ಹತ್ತಿದೆ. ಅವರಲ್ಲಿ ನಡೆದ ಮಾತುಗಳು ಹೀಗಿದ್ದುವು:
“ಹುಡುಗ ಹುಟ್ಟಿದ ವೇಳೆಯೇ ಕೆಟ್ಟ!”
“ಅದೆಲ್ಲಾ ಸುಳ್ಳು; ಸಿದ್ದಪ್ಪ ಅಬರುದಾರ ಮನುಷ್ಯ. ಮಧ್ಯಾಹ್ನ ಮೊಮ್ಮಗನ ಮುಖಾ ನೋಡಿದ ಕೂಡಲೇ ಅವನಿಗೇ ಅನಿಸಿರಬೇಕು….
“ದೀಪಚಂದನೂ ಆಗ ಅಲ್ಲೇ ಇದ್ದ೦ತಲ್ಲ….”
“ಯಾವಾಗ ಇರೂದಿಲ್ಲ ಅಂವ?”
“ಅದಕ್ಕಽ ನೋಡೋ, ಮಂದಿಗೆ ಮುಖ ತೋರಿಸಬಾರದ೦ತ ಮುದುಕ ತೋಟದೊಳಗ ಹೋದವನಽ ಗಿಡಕ್ಕ ಉರಲು ಹಾಡಿ ಕೊಂಡಿದಾನ….”
“ಮರ್ಯಾದಿವಂತರ ಮಾತಽ ಹೀ೦ಗ!”
“ಎಂಥಾ ಕತೆ ಆಗಿ ಹೋಯ್ತಪ್ಪಾ ಊರೊಳಗ?”
ಇವರ ಮಾತು ಆಯ್ತು. ಅವರ ಕತೆಯಾಯಿತು. ಗ್ರಾಮ ಸಂರಕ್ಷಕ ದಳದವರಿಗೆ ಇದೂ ಗೊತ್ತಿತ್ತು! ಮುಂದೇನು?
ಪ್ರಶ್ನೆ ಪ್ರಶ್ನೆಯಾಗಿಯೇ ಇನ್ನೂ ನನ್ನ ತಲೆಯಲ್ಲಿ ಉಳಿದಿದೆ! ಮುದಕ ಸತ್ತು ಹೋದರೂ ಮೊಮ್ಮಗ ಅವನ ಮೊಮ್ಮಗನಾಗಿಯೇ, ಅವನ ವಂಶವೃದ್ದಿಗಾಗಿಯೆ ಬೆಳೆಯುತ್ತಲಿದೆ.
*****


















