ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿಂಚು, ಬೆನ್ನ ಹಿಂದೆಯೇ ಬೆಚ್ಚಿಬೀಳಿಸುವ ಗುಡುಗುಗಳಿಂದಾಗಿ ನಿದ್ದೆ ಮಾಡಲೂ ಸಾಧ್ಯವಿರಲಿಲ್ಲ. ಅಪ್ಪನ ಕೋಣೆಯತ್ತ ಆಸೆಯಿಂದ ನೋಡಿದಳು ಸಾವಿತ್ರಿ. ತನಗೆ ಮತ್ತು ಉಗ್ಗವನಿಗೆ ಸೋರುವ ಚಾವಡಿ ಕೊಟ್ಟು ಬೆಚ್ಚಗೆ ಚಿಕ್ಕಮ್ಮನೊಟ್ಟಿಗೆ ಅಲ್ಲಿ ಮಲಗಿರುವ ಅಪ್ಪ ಕೆಟ್ಟವನೆನಿಸಿತು. ಉಗ್ಗವನೂ ನಡುಗುವುದು ಗಮನಕ್ಕೆ ಬಂದಾಗ ಕಂಬಳಿಯನ್ನು ಅಜ್ಜಿಗೆ ಹೊದಿಸಿ ತಾನು ಉಗ್ಗವನ ಕಾಲುಗಳೆಡೆಯಲ್ಲಿ ಸೇರಿಕೊಂಡಳು. ಮುದುಕಿ ಬೆಚ್ಚಗಾಗಲು ಮೊಮ್ಮಗಳನ್ನು ಗಟ್ಟಿಯಾಗಿ ಅಪ್ಪಿಕೊಂಡಿತು. ಈಗ ಸ್ವಲ್ಪ ಮೈ ಬೆಚ್ಚಗಾದಂತಾಗಿ ಹಾಯೆನಿಸಿತು ಸಾವಿತ್ರಿಗೆ.
ಚಿಕ್ಕಮ್ಮ ಮತ್ತು ಅಪ್ಪ ಇಬ್ಬರೇ ಯಾಕೆ ಬೇರೆ ಕೋಣೆಯಲ್ಲಿ ಮಲಗುವುದೆಂದು ಅವಳಿಗೆ ಇನ್ನೂ ಅರ್ಥವಾಗಿರಲಿಲ್ಲ. ಪಕ್ಕದ ಮನೆಯ ನಾಗವೇಣಿಯಲ್ಲಿ ಕೇಳಿದಾಗ ಅವಳು ಕಿಸಕ್ಕನೆ ನಕ್ಕು ಓಡಿ ಹೋಗಿದ್ದಳು. ತಾಯಿ ಸತ್ತ ತಾರುಣ್ಯದಲ್ಲಿ “ನಾ ಅಪ್ಪನೊಟ್ಟಿಗೆ ಮಲಗಿನೆ” ಎಂದು ಸಾವಿತ್ರಿ ಹಠ ಹಿಡಿಯುತ್ತಿದ್ದುದುಂಟು. ಅಪ್ಪ ಅದಕ್ಕೆ ಒಪ್ಪುತ್ತಿರಲಿಲ್ಲ. ತನ್ನ ಸ್ಥಾನವನ್ನು ಹೊಸಬಳಾದ ಚಿಕ್ಕಮ್ಮ ಆಕ್ರಮಿಸಿಕೊಂಡಾಗ ಅಸಾಧ್ಯವಾದ ಕೋಪ ಬಂದಿತ್ತು ಸಾವಿತ್ರಿಗೆ. ಆದರೆ ಉಗ್ಗವ ದಿನಾ ರಾಜಕುಮಾರರ, ಭೂತಗಳ, ಕಾಗೆಗುಬ್ಬಿಗಳ ಕತೆ ಹೇಳಿ ಅಪ್ಪನನ್ನು ದೂರ ಮಾಡಿಸಿದ್ದಳು. ಮತ್ತೆಂದೂ ಅವಳಿಗೆ ಅಪ್ಪನೊಟ್ಟಿಗೆ ಮಲಗಬೇಕೆಂದು ಅನ್ನಿಸಿರಲಿಲ್ಲ. “ಅಪ್ಪ ಇಷ್ಟು ಒಳ್ಳೆ ಕತೆ ಕೇಳುದರ ಬುಟ್ಟು ಅಲ್ಲಿ ಕೋಣೆ ಒಳ್ಗೆ ಹೇಂಗೆ ಮಲಗಿಕೊಂಡೊಳನೋ” ಎಂದು ಅಪ್ಪನ ಬೆಪ್ಪುತನಕ್ಕೆ ಸಾವಿತ್ರಿ ಆಶ್ಚರ್‍ಯ ಪಡುತ್ತಿರುತ್ತಾಳೆ.
ಸತ್ತುಹೋದ ಅಮ್ಮನ ನೆನಪು ಅವಳಿಗೆ ಆಗುತ್ತಿರಲಿಲ್ಲ. ಯಾರಾದರೂ ಹೇಳಿದಾಗ ಮನಸ್ಸಿನಲ್ಲಿ ಅಮ್ಮನ ಚಿತ್ರವನ್ನು ಮೂಡಿಸಲು ಯತ್ನಿಸಿ ಸೋಲುತ್ತಿದ್ದಳು. “ಪಾಪ! ಅವ್ವ ಇಲ್ಲದ ತಬ್ಲಿ. ಚಿಕ್ಕವ್ವ ಎಷ್ಟು ತೊಂದರೆ ಕೊಟ್ಟವೆನೋ ಏನೋ” ಎಂದು ಅಕ್ಕಪಕ್ಕದ ಹೆಂಗಸರು ಇವಳಿಗೆ ಕೇಳಿಸುವಂತೆ ಹೇಳುವಾಗ ಸಾವಿತ್ರಿಗೆ ಆಶ್ಚರ್‍ಯವಾಗುತ್ತದೆ. ಚಿಕ್ಕಮ್ಮ ಕೆಟ್ಟವಳೆಂದು ಒಮ್ಮೆಯೂ ಸಾವಿತ್ರಿಗೆ ಅನಿಸಿದ್ದಿಲ್ಲ. ಅವಳಿಗೆ ಚಿಕ್ಕಮ್ಮ ಬೈದದ್ದಿಲ್ಲ, ಹೊಡೆದದ್ದಿಲ್ಲ. ಜತೆಯಲ್ಲಿ ಮಲಗಬೇಡ ಎಂದದ್ದೂ ಇಲ್ಲ. ತಿಂಡಿ ಬೇಕಾದಷ್ಟು ಕೊಡ್ತಾಳೆ. ಪ್ರೀತೀನೂ ಮಾಡ್ತಾಳೆ. ಹಾಗೆ ನೋಡಿದರೆ ಅಪ್ಪನೇ ಕೆಟ್ಟೋನು. ಜತೆಯಲ್ಲಿ ಮಲಗಲಿಕ್ಕೆ ಬಿಡುವುದಿಲ್ಲ. ಬೇಡ ಈ ಉಗ್ಗವನೇ ಸಾಕು. ಒಳ್ಳೆಯ ಕತೆ ಹೇಳ್ತಾಳೆ. ತಲೆ ಬಾಚಿ ಹೇನು ಹೆಕ್ಕುತ್ತಾಳೆ. ಒಟ್ಟಿಗೆ ಮಲಗಿಸಿಕೊಳ್ತಾಳೆ. ಇನ್ನೇನು ಬೇಕು?
ಮಳೆ ಸುರಿಯುತ್ತಿದ್ದಂತೆ ಅವಳಿಗೆ ಅಪ್ಪ ಮೊನ್ನೆ ಹೇಳಿದ ಮಾತುಗಳು ನೆನಪಿಗೆ ಬರುತ್ತವೆ: “ಸಾವಿತ್ರಿಗೆ ಒಂದು ಮೊದುವೆ ಬೇಗ ಮಾಡ್ಸೋಕು.” ಸಾವಿತ್ರಿ ಊರಲ್ಲಿ ನಡೆಯುವ ಮದುವೆಗಳನ್ನು ನೋಡಿದ್ದಳು. ಹೊಸಾ ಲಂಗ ಹಾಕಿ, ಹೋಳಿಗೆ ತಿಂದು, ಪಾಯಸ ಕುಡಿದು ಲಾಗ ಹಾಕಿದ್ದಳು. ಆದರೆ ಮದುವೆಯಾಗುವುದು ಯಾಕೆಂದು ಮಾತ್ರ ಗೊತ್ತಿರಲಿಲ್ಲ. ಅಪ್ಪನ ಮಾತುಗಳನ್ನು ನೆನಪಿಸುತ್ತಾ ಉಗ್ಗವನಲ್ಲಿ ಕೇಳಿದಳು: “ಉಗ್ಗವ ಮೊದುವೆ ಆದು ಯಾಕೆ?”
ಉಗ್ಗವ ನಗುತ್ತಾ ಉತ್ತರಿಸಿದಳು : “ಕೂಸೀನ ಹೆರೀಕ್ಕೆ”. ಸಾವಿತ್ರಿಗೆ ಇನ್ನಷ್ಟು ಕುತೂಹಲ. ಮಗುವನ್ನು ಹೆರುವುದು ಹ್ಯಾಗಪ್ಪಾ ಎಂದರಿಯದೆ ಉಗ್ಗವನನ್ನೇ ಕೇಳಿದಳು. ಸಿಟ್ಟುಗೊಂಡ ಮುದುಕಿ “ಇಸ್ಸಿ. ಇದರೆಲ್ಲಾ ಕೇಳಿಕೆ ಬೊತ್ತು ಪುಟ್ಟಾ” ಎಂದಳು. ಯಾಕೆಂದು ಕೇಳಿದರೆ ಉಗ್ಗವ ಸಿಟ್ಟಾದಾಳೆಂದು ಹೆದರಿ ಸಾವಿತ್ರಿ ಸುಮ್ಮನಾದಳು.
ಹಿಂದಿನ ದಿನ ನೆರೆಮನೆಯ ನಾಗವೇಣಿ ಸಿಕ್ಕಾಗ “ನೋಡು ನಾಗೂ. ನಂಗೆ ಮೊದುವೆ ಮಾಡುವೆ ಗಡ. ಮೊದುವೆ ಆದು ಯಾಕೆನೇ?” ಎಂದು ಕೇಳಿದಳು. ಅದಕ್ಕೆ ನಾಗವೇಣಿ ಸೇಲೆ ಮಾಡುತ್ತಾ “ಎಂಥಾ ಬೋಳಿನೆ ನೀ! ಒಳ್ಳೆ ಗಂಡ ಸಿಕ್ಕಿರೆ ನಿಂಗೆ ಹೇಂಗೆ ಚಿನ್ನದ ಚೈನ್ ಹಾಕಿ ಸೀರೆ ಉಡ್ಸಿ ಊರಿಡೀ ಮೆರ್‍ಸಿದೆ ನೋಡ್” ಎಂದಿದ್ದಳು.
ಸಾವಿತ್ರಿಗೆ ದಿಗಿಲಾಯಿತು. ನಾಗವೇಣಿಯ ಕೈ ಹಿಡಿದುಕೊಂಡು ಗಾಬರಿಯಿಂದ ಕೇಳಿದಳು: “ಅಂದ್ರೆ ಮೊದುವೆ ಆದ ಮೇಲೆ ನಾ ಗಂಡನ ಒಟ್ಟಿಗೆನೇ ಹೋಕೊ?”
“ಊಂ ಮತ್ತೆ” ರಾಗವಾಗಿ ಹೇಳುತ್ತಾ ತನ್ನ ಜೆಡೆಯನ್ನು ಕೈಗೆ ಸುತ್ತಿಕೊಳ್ಳುತ್ತಾ ನಾಗವೇಣಿ “ನಿಂಗೆ ಗೊತ್ತಾಕಿಲ್ಲೆ. ನೀ ಬರೀ ಹೆಡ್ಡಿನೆ” ಅಂದಿದ್ದಳು.
ಅಪ್ಪನಿಗೆ ನನ್ನನ್ನು ಕಂಡರೆ ಆಗೋದಿಲ್ಲ. ಅದಕ್ಕೇ ಬೇಗ ಮದುವೆ ಮಾಡಿಸಿ ಮನೆಯಿಂದ ಓಡಿಸಿ ಬಿಡೋಣಾಂತ ಯೋಚನೆ ಎಂದುಕೊಂಡು ಅವಳಿಗೆ ಅಳು ಬಂದಿತ್ತು. ಅಳು ದನಿಯಲ್ಲೇ “ನಾಗೂ ನಾ ಮೊದ್ವೇನೆ ಆದ್ಲೆನೆ” ಎಂದಳು. ಅದಕ್ಕೆ ನಾಗವೇಣಿ ಕಿಸಕ್ಕನೆ ನಗುತ್ತಾ “ಈಗ ಬೇಡಂತ ಹೇಳೀಯ. ನಾಳೆ ಒಳ್ಳೆ ಗಂಡ ಸಿಕ್ಕಿರೆ ಮತ್ತೆ ನಮ್ಮ ನೆಂಪು ಸ ನಿಂಗೆ ಇರಿಕಿಲೆ. ಮೊದುವೆ ಆದ ಮೇಲೆ ಅವನೊಟ್ಟಿಗೆನೇ…. ”
ನಾಗವೇಣಿಯ ಮಾತುಗಳನ್ನೆಲ್ಲಾ ಕೇಳುವ ಸಹನೆಯಿರಲಿಲ್ಲ ಸಾವಿತ್ರಿಗೆ. ಅಲ್ಲಿಂದ ನೇರವಾಗಿ ಉಗ್ಗವನ ಬಳಿಗೆ ಬಂದು “ಉಗ್ಗವ, ನಾ ಮೊದುವೆ ಆದ್ಲೆ. ಅಪ್ಪಂಗೆ ನನ್ನ ಮೇಲೆ ಹಂಞಸ ಪ್ರೀತಿ ಇಲ್ಲೆ. ಅದ್ಕೆ ನನ್ನ ಬೇಗ ಮೊದ್ವೆ ಮಾಡ್ಸಿ ಮನೆಂದ ಹೊರಗೆ ಹಾಕೊಮೂಂತ ಒಳೊ” ಎಂದಳು ಅಳುತ್ತಾ. “ಬೇಡ ಪುಟ್ಟಿ. ನಿಂಗೆ ಮೊದುವೆ ಮಾಡಿಕೆ ನಾ ಬುಡ್ದುಲೆ” ಎಂದು ಉಗ್ಗವ ಸಂತೈಸಿದ್ದಳು. ಆಮೇಲೆ ಮೇಗಣ ಮೊನೀನ ಮೋಟು ಗೂಡೆಗೆ ಮೊದುವೆ ಉಟ್ಟುಗಡಾ ಎಂದು ರಾಗವಾಗಿ ಹಾಡಿ ಸಾವಿತ್ರಿಗೆ ನಿದ್ದೆ ಬರುವಂತೆ ಮಾಡಿದ್ದಳು.
ಮಳೆ ಇನ್ನೂ ಸುರಿಯುತ್ತಲೇ ಇತ್ತು. ಉಗ್ಗವನ ಮೈಯ ಶಾಖ ಹಿತವಾಗುತ್ತಿದ್ದಂತೆ ಸಾವಿತ್ರಿಗೆ ನಾಗವೇಣಿಯ ಅಣ್ಣ ರಾಮಕೃಷ್ಣನ ನೆನಪಾಯಿತು. ಬಹಳ ಒಳ್ಳೆಯವ. ಚಿಕ್ಕಂದಿನಿಂದಲೂ ಕೂಡಿ ಆಡಿ ಬೆಳೆದವರು. ಸುಳ್ಯದಲ್ಲಿ ಕಾಲೇಜು ಓದುತ್ತಿದ್ದಾನೆ. ಮನೆಗೆ ಬಂದಾಗಲೆಲ್ಲಾ ಇವಳಲ್ಲಿ ತುಂಬಾ ಮಾತಾಡುತ್ತಾನೆ. ಮದುವೆ ಆಗಲೇ ಬೇಕೂಂತಾದರೆ ರಾಮಕೃಷ್ಣನನ್ನೇ ಆಗುವುದು. ಆಗ ಮನೆಯಿಂದ ದೂರ ಹೋಗಬೇಕಾಗಿಲ್ಲ. ಆಗಲೇ ಅದನ್ನು ಉಗ್ಗವನಿಗೆ ಹೇಳಿ ಬಿಡಬೇಕೆನಿಸಿತು: “ಉಗ್ಗವ ನಾ ಮೊದುವೆ ಆಗಿಯೇ ಆಕೋ.”
“ಹ್ಞೂಂ ಪುಟ್ಟಾ. ಎಲ್ಲೊವೂ ಮೊದುವೆ ಆಗಿಯೇ ಆಕು.” ಉಗ್ಗವ ನಗುತ್ತಾ ಉತ್ತರಿಸಿದಳು.
“ಹಾಂಗಾರೆ ನಾ ನಾಗೂನ ಅಣ್ಣನ್ನೇ ಮೊದುವೆ ಆನೆ”. ಅವಳ ಮೊದ್ದುತನ ನೋಡಿ ಉಗ್ಗವನಿಗೆ ಮತ್ತೊಮ್ಮೆ ನಗು ಬಂತು.
“ಆತ್ ಪುಟ್ಟಾ. ಅವನ್ನೇ ಆದಿಯಾನ? ಆದು” ಎಂದಳು ಉಗ್ಗವ ಸಾವಿತ್ರಿಗೆ ಬೇಸರವಾಗದಿರಲಿ ಎಂದು.
ಉಗ್ಗವ ತನ್ನ ಮಾತಿಗೆ ಸಮ್ಮತಿ ಸೂಚಿಸಿದುದನ್ನು ನೋಡಿ ಸಂತೋಷಗೊಂಡ ಸಾವಿತ್ರಿ “ಉಗ್ಗವ ನೀವು ಎಸ್ಟ್ ಒಳ್ಳೆಯೋವು” ಎಂದಳು.
ಉಗ್ಗವನಿಗೆ ಒರಗಿಕೊಂಡಿದ್ದಂತೆ ಅವಳ ಮನದಲ್ಲಿ ಮೂಸೆ ಸುಳಿದ. ನುಣ್ಣಗೆ ಮಂಡೆ ಬೋಳಿಸಿಕೊಳ್ಳುವ ಮೂಸೆ ಯಾವಾಗಲೂ ಕಂಬಯಿ ಉಟ್ಟುಕೊಂಡಿರುತ್ತಿದ್ದ. ಅವನು ಅಷ್ಟು ದೂರದಲ್ಲಿರುವಾಗಲೇ ಮೀನಿನ ವಾಸನೆ ಮೂಗಿಗೆ ರಾಚುತ್ತಿತ್ತು. ಅವಳಿಗಿಂತ ಸ್ವಲ್ಪ ದೊಡ್ಡವನಾದ ಮೂಸೆ ಕಂಡಾಗಲೆಲ್ಲಾ ಕಣ್ಣು ಹೊಡೆದು “ಬಂದಿಯನಾ?” ಎಂದು ಕೇಳುತ್ತಿದ್ದ. ಅವಳಿಗೆ ಎಲ್ಲಿಗೆಂದು ಅರ್‍ಥವಾಗುತ್ತಿರಲಿಲ್ಲ. ಮಂಡೆ ಬೋಳಿಸಿದ ಮೀನು ವಾಸನೆಯ ಕೊಳಕ ಮೂಸೆಯೊಡನೆ ಯಾವುದೇ ಆಟ ಆಡಲು ಮನಸ್ಸು ಬರುತ್ತಿರಲಿಲ್ಲ. ಏನೇನೋ ಕಾರಣ ಹುಡುಕಿ ಮಾತಾಡುತ್ತಾ ಮೈ ಮೇಲೆ ಬೀಳುವ, ಕೈಯಿಂದ ಎದೆ ಚಿವುಟುವ ಮೂಸೆಯೆಂದರೆ ಅವಳಿಗೆ ಅಸಹ್ಯ.
ಮಳೆ ಮತ್ತಷ್ಟು ಹೆಚ್ಚಿತು. ಸಾವಿತ್ರಿ ಮನೆಯ ಹಿಂಬದಿಯ ಮೈದಾನದ ತುದಿಯಲ್ಲಿರುವ ದೊಡ್ಡ ಮಾವಿನ ಮರದ ಕೆಳಗೆ ಮಳೆಗಾಳಿಯಿಂದಾಗಿ ಈಗ ತುಂಬಾ ಹಣ್ಣು ಬಿದ್ದಿರಬೇಕು ಎಂದುಕೊಂಡಳು. ಕತ್ತಲೆ, ಮಳೆಗಾಳಿ ಅಲ್ಲದಿದ್ದರೆ ಈಗಲೇ ಅಲ್ಲಿಗೆ ಹೋಗಬಹುದಿತ್ತು. ಬೆಳಿಗ್ಗೆ ಬೇಗ ಅಲ್ಲಿಗೆ ಹೋಗಬೇಕು. ಎಲ್ಲರಿಗಿಂತಲೂ ಮೊದಲು ಹೋಗಿ ಆದಷ್ಟು ಹೆಚ್ಚು ಹಣ್ಣು ತಂದು ಮಾಂಬಳ ಮಾಡಬೇಕು. ಆ ಕೊಳಕ ಮೂಸೆ ಬಂದರೆ ಏನಾದರೂ ಮಾಡುತ್ತಿರುತ್ತಾನೆ. ಎಲ್ಲರೂ ಕೆಳಗಿನಿಂದ ಹಣ್ಣು ಹೆಕ್ಕಿದರೆ ಮೂಸೆ ಮರಕ್ಕೆ ಹತ್ತುತ್ತಾನೆ. ತನ್ನ ಕಂಬಯಿಯನ್ನು ಮೇಲೆತ್ತಿ ಆತ ಮರ ಹತ್ತಿದರೆ ಒಳಗಿನದ್ದೆಲ್ಲಾ ಕಾಣುತ್ತಿರುತ್ತದೆ. ಅದೂ ಸಾಲದೆಂಬಂತೆ ಮೇಲಿನಿಂದಲೇ ಆತ ನಾಚಿಕೆ ಇಲ್ಲದೆ ಮೂತ್ರ ಹೊಯ್ಯುತ್ತಾನೆ. ಬರೇ ಗಲೀಜು ಪ್ರಾಣಿ. ಅವನು ಮಾಡಿದ ಕೊಳಕಿನಿಂದ ಮಾವಿನ ಹಣ್ಣು ಹೆಕ್ಕಿ ತಂದು ತೊಳೆಯಬೇಕಷ್ಟೆ.
ನಾಗವೇಣಿ ಜತೆಯಲ್ಲಿದ್ದರೆ ಮೂಸೆ ಸಾವಿತ್ರಿಯ ತಂಟೆಗೆ ಬರುತ್ತಿರಲಿಲ್ಲ. ಮೂಸೆ ಮರಹತ್ತಿದಾಗಲೆಲ್ಲ ನಾಗವೇಣಿ ಕೆಳಗಿನಿಂದ ಕಲ್ಲು ಹೊಡೆಯುತ್ತಾಳೆ. ಒಂದು ಸಲ ನಾಗವೇಣಿ ಎಸೆದ ಕಲ್ಲು ಮೂಸೆಯ ಬೋಳು ಮಂಡೆಗೆ ಬಡಿದು ರಕ್ತ ಚಿಮ್ಮಿಸಿತ್ತು. ಆದರೂ ಸಾವಿತ್ರಿಯನ್ನು ಕಂಡಾಗ ಮೂಸೆ ಮುಂಚಿನಂತೆ ಆಡುವುದನ್ನು ಬಿಟ್ಟಿರಲಿಲ್ಲ. ಮೂಸೆಯನ್ನು ಕಂಡಾಗೆಲ್ಲಾ “ಹೆಣ್ಣಂತ ಹೇಳ್ರೆ ಜೀವ ಬುಟ್ಟದೆ ಅಂಡೆ” ಎಂದು ಮುಖ ಸಿಂಡರಿಸುವ ನಾಗವೇಣಿ ಮೂಸೆಯಿಂದ ಸಾಕಷ್ಟು ಕಿರುಕುಳ ಅನುಭವಿಸಿದವಳೇ. ತನಗೆ ಮಾತ್ರ ನಾಗವೇಣಿಯ ಧೈರ್‍ಯ ಇಲ್ಲ. ಒಮ್ಮೆ ಧೈರ್‍ಯಮಾಡಿ ಮೂಸೆಯ ಮೂತಿಗೆ ಎರಡು ಇಕ್ಕಿದರೆ ಪ್ರಾಣಿ ದೂರವಾದೀತೇನೊ?
ಸಾವಿತ್ರಿಯ ಜೀವನದ ಅತ್ಯಂತ ಸಂತೋಷದ ಕಣಗಳು ಆ ದೊಡ್ಡ ಮಾವಿನ ಮರದ ಬುಡದಲ್ಲಿ ಕಳೆಯುತ್ತಿದ್ದವು. ಆ ಮರದ ಕೆಳಗಿನ ಕೊಂಬೆಗೆ ಹಗ್ಗ ಕಟ್ಟಿ ಉಯ್ಯಾಲೆ ಜೀಕುವುದೆಂದರೆ ಅವಳಿಗೆ ಪ್ರಾಣ. ಅದರ ಬುಡದಲ್ಲೇ ಬಿಲ್ಲೆಯಾಟ, ಲಗೋರಿ, ಕಲ್ಲಾಟ ಆಡಿದುದಕ್ಕೆ ಲೆಕ್ಕವಿಲ್ಲ. ಆಗೆಲ್ಲಾ ಮೂಸೆಯೂ ಬಂದು ಅವರೊಡನೆ ಸೇರಿಕೊಳ್ಳುವುದುಂಟು. ಕಣ್ಣಾಮುಚ್ಚೆ ಕಾಡೇ ಗೂಡೇ ಆಡುವಾಗ ಮೂಸೆ ಗಟ್ಟಿಯಾಗಿ ಅಪ್ಪಿಹಿಡಿದು ನೋಯಿಸುತ್ತಾನೆ. ಅದಕ್ಕೇ ಹೆಚ್ಚಾಗಿ ನಾಗವೇಣಿಯೊಂದಿಗೆ ಕಲ್ಲಾಟ ಆಡುವುದು ಅವಳಿಗೆ ಇಷ್ಟ.
ಆ ಮಾವಿನ ಮರ ಅವಳ ಕುಟುಂಬವೂ ನೆನಪಿಸಿಕೊಳ್ಳುವ ಮರವಾಗಿತ್ತು. ಅವಳ ಉಗ್ಗವ ಇಡೀ ಊರಿನಲ್ಲಿ ಅಂತಹ ಬೇರೆ ಮಾವಿನ ಮರ ಇಲ್ಲ ಎಂದು ತನ್ನ ಬಾಲ್ಯವನ್ನು ಜ್ಞಾಪಿಸಿಕೊಳ್ಳುತ್ತಿದ್ದುದುಂಟು. ಉಪ್ಪಿನಕಾಯಿಗೆ ಮಿಡಿಯನ್ನು, ಚಟ್ನಿಗೆ ಕಾಯಿಯನ್ನು, ಪಸಿಂಗಿರಿ ಮತ್ತು ಮಾಂಬಳಕ್ಕೆ ಮಾವಿನ ಹಣ್ಣನ್ನು ಕೊಡುತ್ತಿದ್ದುದು ಅದೇ ಮರ. ಆದುದರಿಂದ ಸಾವಿತ್ರಿಗೆ ಆ ಮರವೆಂದರೆ ಅಜ್ಜಿಯಷ್ಟೇ ಪ್ರೀತಿ.
ಮಳೆ ಇನ್ನೂ ನಿಂತಿರಲಿಲ್ಲ. ಈಗ ಅವಳಿಗೆ ಇನ್ನೊಮ್ಮೆ ರಾಮಕೃಷ್ಣನ ನೆನಪಾಯಿತು. ತನ್ನನ್ನು ಮದುವೆಯಾಗಲು ಒಪ್ತಾನೋ ಇಲ್ಲವೋ. ಇಲ್ಲದಿದ್ರೆ ನಾಗೂನಲ್ಲಿ ಹೇಳಿಸಿ ನೋಡಬೇಕು. ನಾಗೂ ಅಂದ್ರೆ ಅಷ್ಟು ಪ್ರೀತಿ ಅವನಿಗೆ. ತನಗೂ ಒಬ್ಬ ಅಣ್ಣ ಇರುತ್ತಿದ್ದರೆ ತನನ್ನು ಎಷ್ಟು ಪ್ರೀತಿಸುತ್ತಿದ್ದನೋ.
ತನಗೆ ಒಬ್ಬ ಅಣ್ಣನೂ ಇಲ್ಲ, ತಮ್ಮನೂ ಇಲ್ಲ. ಉಗ್ಗವ ಅಂದಿದ್ದಳಲ್ಲಾ ಮತ್ತೆ ಮದುವೆ ಆಗೋದು ಮಗು ಹೆರೋದಕ್ಕೆ ಅಂತ. ಆದರೆ ಚಿಕ್ಕಮ್ಮ ಯಾಕೆ ಇನ್ನೂ ಹೆರ್‍ಲಿಲ್ಲ? ತನಗೂ ಒಂದು ಒಳ್ಳೆಯ ಮಗು ಇದ್ದರೆ ಎಷ್ಟು ಚೆನ್ನು! ಬಿಳಿಯಾದ, ಚೆಂದದ, ದುಂಡುದುಂಡಾದ ಮಗುವೊಂದನ್ನು ತಾನು ಹೆತ್ತು, ಎತ್ತಿ, ಹಾಡಿ, ಆಡಿಸಿ, ಮೀಯಿಸಿ, ಮುದ್ದಿಸಿ, ಹಾಲು ಕುಡಿಸಬೇಕು. ಆದರೆ ಮಗುವಿಗೆ ಹಾಲು ಕುಡಿಸೋದಿಕ್ಕೆ ತನಗೆ ಮೊಲೆಯೇ ಇಲ್ಲವಲ್ಲಾ! ನಾಗೂನ ತಮ್ಮನಿಗೆ ಬಾಟ್ಲಿಯಲ್ಲಿ ಹಾಲು ಹಾಕಿ ಕುಡಿಸುತ್ತಿದ್ದರು. ಹಾಗಾದರೆ ನನ್ನ ಮಗುವಿಗೂ ಹೀಗೆ ಹಾಲು ಕುಡಿಸಬೇಕಾ ? ಅಲ್ಲವಲ್ಲ! ಮತ್ತೆ ಆ ಲಕ್ಷ್ಮಿ ಅವಳ ಮಗುವಿಗೆ ಮೊಲೆಯ ಹಾಲೇ ಕೊಡ್ತಾಳೆ. ಸಾವಿತ್ರಿಗೆ ಒಂದೂ ಅರ್‍ಥವಾಗದೆ ಉಗ್ಗವನಲ್ಲಿ ತನ್ನ ಪೇಚನ್ನು ತೋಡಿಕೊಂಡಳು. ಉಗ್ಗವನಿಗೆ ಕೋಪ ಬಂದರೂ ಸಾವಿತ್ರಿಯನ್ನು ನೋಯಿಸ ಲಾಗದೆ “ಇಲ್ಲೆ ಪುಟ್ಟಾ, ನೀ ದೊಡ್ಡವಳಾಕನ ನಿಂಗೆನೂ ಮೊಲೆ ಬಂದದೆ. ನಿಂಗೆ ಕೂಸು ಆಕನ ಅದರ್‍ಲಿ ಹಾಲ್ ಬಂದದೆ” ಎಂದಳು.
ಮಗು ಬೇಕಾದರೆ ಮದುವೆ ಆಗಲೇಬೇಕಲ್ಲಾ? ಹೌದು. ರಾಮಕೃಷ್ಣನನ್ನೇ ಮದುವೆ ಯಾಗೋದು. ಅವನ ಹಾಗೇ ಇರುವ ಮಗು ಸಿಗುತ್ತದೆ ತನಗೆ. ಹೇಗೆ ? ಹೇಗೆಂದು ಉಗ್ಗವ ಹೇಳುವುದಿಲ್ಲ. ನಾಗವೇಣಿಯಲ್ಲಿ ಕೇಳಬೇಕು. ನಿನ್ನೆ ಕೇಳಲು ಮರೆತು ಹೋಯಿತು. ನಾಳೆ ಬೆಳಿಗ್ಗೆ ಹಣ್ಣು ಹೆಕ್ಕಲು ಹೋಗುವಾಗ ಕೇಳಬೇಕು.
ರಾಮಕೃಷ್ಣ ಕಾಲೇಜು ಕಲಿಯುತ್ತಿದ್ದಾನೆ. ತಾನೂ ಸ್ವಲ್ಪ ವಿದ್ಯಾಭ್ಯಾಸ ಮಾಡಬಹುದಿತ್ತು, ಸುಮ್ಮನೆ ಕೂಳಿಗೆ ದಂಡವಾಗಿ ಮನೆಯಲ್ಲೇ ಬಿದ್ದಿರುವುದಕ್ಕಿಂತ. ಆದರೆ ಉಗ್ಗವ ಹೇಳಿದ್ದಳಲ್ಲಾ- “ಕಾಲೇಜಿಗೆ ಹೋದ್ರೆ ಹಾಳಾಗಿ ಹೋದವೆ ಎಲ್ಲಾ. ಕಲ್ತೇ ಹಾಳಾತ್ ಲೋಕು ಅಂತ. ಅದು ಹೇಗೆ ಎಂದು ಅವಳಿಗೆ ಗೊತ್ತಾಗಿರಲಿಲ್ಲ. ಈಗ ಕೇಳಿದರೆ ಉಗ್ಗವ ಬೈದಾಳೆಂದು ಸುಮ್ಮನಾದಳು.
ಮಳೆ ಬಿಡಲೇ ಇಲ್ಲ. ರಾತ್ರಿ ಇನ್ನೂ ಎಷ್ಟು ಹೊತ್ತು ಇದೆಯೊ? ಇದೇ ರೀತಿ ನಿದ್ದೆಯಿಲ್ಲದೆ ಎಷ್ಟು ಹೊತ್ತು ಕಳೆಯಬೇಕೊ? ಸೋರುವ ಚಾವಡಿಯಲ್ಲಿ ತನ್ನನ್ನು, ಉಗ್ಗವನನ್ನು ಹಾಕಿ ಚಿಕ್ಕಮ್ಮನೊಡನೆ ಕೋಣೆ ಸೇರಿರುವ ಅಪ್ಪನಿಗೆ ತನ್ನ ಮೇಲೆ ಖಂಡಿತಾ ಪ್ರೀತಿಯಿಲ್ಲ. ಇಂತಹ ಮನೆಯಲ್ಲಿರುವುದಕ್ಕಿಂತ ಮದುವೆಯಾಗಿ ಹೋಗಿ ಬಿಡುವುದೇ ಮೇಲು. ಇಷ್ಟು ಪ್ರೀತಿಸುವ ಉಗ್ಗವನನ್ನು ಕರಕೊಂಡೇ ಹೋಗಬೇಕು. ಆದ್ರೆ ಗಂಡ ಒಪ್ತಾನೋ ಇಲ್ಲವೊ? ರಾಮಕೃಷ್ಣನನ್ನು ಮದುವೆಯಾದ್ರೆ ತೊಂದರೆಯಿಲ್ಲ. ಉಗ್ಗವನನ್ನೂ ಕರೆದುಕೊಂಡು ಹೋಗಬಹುದು.
ಉಗ್ಗವನ ಆಸರೆಯಲ್ಲಿ ಯೋಚಿಸುತ್ತಿದ್ದಂತೆ ಸಾವಿತ್ರಿಗೆ ಸಣ್ಣ ನಿದ್ದೆ ಬಂತು. ನಿದ್ದೆಯಲ್ಲೊಂದು ಕನಸು. ರಾಮಕೃಷ್ಣ ಮದುವಣಿಗನಾಗಿದ್ದಾನೆ. ಕೈಯಲ್ಲಿ ಮಾಲೆ ಹಿಡಿದುಕೊಂಡು ಹುಡುಗಿಯೊಬ್ಬಳ ಕೊರಳಿಗೆ ಹಾಕಲು ಹೋಗುತ್ತಿದ್ದಾನೆ. ಹುಡುಗಿ ಇನ್ನೂ ಕಾಣುತ್ತಿಲ್ಲ. ದಢಾಲ್ ಎಂಬ ಶಬ್ದ ಕೇಳಿ ಕನಸು ಒಡೆಯಿತು. ತಾನು ಈವರೆಗೆ ಕಂಡ ಕನಸನ್ನು ನೆನೆದು ನಗುಬಂತು. “ಪುಟ್ಟಾ! ಎಂತದೋ ಬೀತ್. ಶಬ್ದ ಕೇಳ್ಸಿತ್‌ಲ್ಲೆನಾ?” ಉಗ್ಗವ ಕೇಳಿದಾಗ ಸಾವಿತ್ರಿ ಹೌದೆಂದು ತಲೆಯಾಡಿಸಿದಳು. ತೋಟದಲ್ಲೆಲ್ಲೋ ಕಂಗು ಬಿದ್ದಿರಬೇಕು. ನಾಳೆ ನೋಡಿದರಾಯಿತು ಎಂದು ಸುಮ್ಮನಾದಳು.
ಮಳೆಯ ಅಬ್ಬರ ಕಡಿಮೆಯಾಗುತ್ತಿತ್ತು. ಅಪ್ಪ ಕೋಣೆಯ ಬಾಗಿಲು ತೆಗೆದು ಕಣ್ಣುಜ್ಜಿ ಕೊಳ್ಳುತ್ತಾ ಹೊರ ಬಂದು “ಅಬ್ಬಾ, ಎಂಥಾ ಮಳೆ! ನಂಗೆ ನಿದ್ದೆಲಿ ಗೊತ್ತೇ ಆತ್ಲೆ” ಎಂದ. ಎಂಥಾ ಕುಂಭಕರ್‍ಣ ಈ ಅಪ್ಪ! ಚಾವಡಿಯಲ್ಲಿ ಮಲಗುತ್ತಿದ್ದರೆ ಗೊತ್ತಾಗುತ್ತಿತ್ತು ಅವನಿಗೆ ಮಳೆಯ ಪ್ರತಾಪ.
ಮಳೆ ನಿಂತಿತು. ಬೆಳಕು ಹರಿಯುತ್ತಿತ್ತು. ಈಗಲೇ ಹೋಗಿ ಬಿದ್ದ ಮಾವಿನ ಹಣ್ಣುಗಳನ್ನೆಲ್ಲಾ ಹೆಕ್ಕಿ ತರಬೇಕು ಎಂದುಕೊಂಡು ಬುಟ್ಟಿ ಹಿಡಿದು ಹೊರಬಂದು “ನಾಗೂ ಬೇಗ ಬಾನೆ. ಮಾವಿನ ಹಣ್ಣ್ ತರೊಮಾ” ಎಂದು ಗಟ್ಟಿಯಾಗಿ ಕರೆದಳು. “ಬಂದೇ” ಎನ್ನುತ್ತಾ ನಾಗವೇಣಿ ಹಿಂಬಾಲಿಸಿದಳು.
ಇಬ್ಬರೂ ಓಡುತ್ತಾ ಬಂದು ನೋಡಿ ದಂಗಾಗಿ ನಿಂತುಬಿಟ್ಟರು. ದೊಡ್ಡ ಮಾವಿನಮರ ರಾತ್ರಿಯ ಮಳೆ ಗಾಳಿಯ ಹೊಡೆತ ತಾಳಲಾರದೆ ಬಿದ್ದು ಬಿಟ್ಟಿದೆ. ಸ್ವಲ್ಪ ಹೊತ್ತು ನಿಶ್ಶಬ್ದವಾಗಿ ಪರಸ್ಪರ ಮುಖ ನೋಡಿಕೊಂಡರು. ಇನ್ನು ಆ ಮರ ಹಣ್ಣು ನೀಡದು. ಕುಂಟೆಬಿಲ್ಲೆ, ಲಗೋರಿ ಆಡಲು ನೆರಳು ನೀಡದು. ಜೋಕಾಲಿ ಜೀಕುವಂತೆಯೂ ಇಲ್ಲ.
ದೂರದಿಂದ ಮಾವಿನಹಣ್ಣು ಹೆಕ್ಕಲು ಬರುತ್ತಿರುವವರ ಗದ್ದಲ ಕೇಳಿ ಗಬಗಬನೆ ಹಣ್ಣು ಹೆಕ್ಕಿ ಬುಟ್ಟಿಗೆ ತುಂಬತೊಡಗಿದರು. ಹಣ್ಣು ಹೆಕ್ಕುತ್ತಾ ನಾಗವೇಣಿ “ಸಾವಿತ್ರಿ! ಅಣ್ಣ ಮನ್ನೆ ಅಪ್ಪನೊಟ್ಟಿಗೆ ಮಡಿಕೇರಿಗೆ ಅತ್ತೆ ಮನೆಗೆ ಹೋಗಿತ್ತ್. ನಿನ್ನೆ ವಾಪಾಸ್ ಬಾತ್” ಎಂದಳು. ರಾಮಕೃಷ್ಣನ ಹೆಸರು ಕೇಳುತ್ತಲೇ ಸಾವಿತ್ರಿಗೆ ಮಾವಿನಮರ ಬಿದ್ದು ಹೋದುದು ಮರೆತೇ ಹೋಯಿತು. ಆತುರದಿಂದ “ಯಾಕೆ ಹೋಗಿತ್ತ್ ನಾಗೂ?”ಎಂದು ಪ್ರಶ್ನಿಸಿದಳು.
“ಇನ್ನ್ ಹತ್ತ್ ದಿನಲಿ ಅವಂಗೆ ಮೊದುವೆ ಗಡಾ. ಅತ್ತೇ ಮೊಗಳ ಮೊದುವೆ ಆದೆ ಗಡಾ.”
ರಾತ್ರಿ ತಾನು ಉಗ್ಗವನೊಡನೆ ಆಡಿದ ಮಾತುಗಳೆಲ್ಲಾ ನೆನಪಾಗಿ ಸಾವಿತ್ರಿ ಕೆಳಗೆ ಬಿದ್ದಿದ್ದ ಮಾವಿನ ಮರವನ್ನು ನೋಡುತ್ತಾ ನಿಂತು ಬಿಟ್ಟಳು.
*****
[೧೯೭೪]


















