ಆಸರೆ

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು.

ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ?

ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ?

ಕುಂಞಂಬುವನ್ನು ಇವೆರಡು ಪ್ರಶ್ನೆಗಳು ಎಡೆ ಬಿಡದೆ ಕಾಡುತ್ತಿದ್ದವು.

“ಉಳುವವನಿಗೇ ಭೂಮಿಯಂತೆ.” ಎಂದು ಮೊದಲು ಅವನಲ್ಲಿ ಹೇಳಿದ್ದು ಪುತ್ತೂರು ಕಾಸರಗೋಡು ಮೈಲು ಬಸ್ಸಿನ ಡ್ರೈವರು ಶೀನಣ್ಣ.

“ನಿನ್ನ ಹಣೇಬರಾ ಬದಲಾಯಿತು ಮಣಿಯಾಣಿ. ಕೇರಳದಲ್ಲಿ ಕಮ್ಯುನಿಸ್ಟು ಸರ್ಕಾರ ಬರುತ್ತದಂತೆ. ಗೇಣಿ ಕೊಡುವ ಮಾತು ಬಿಡು. ಭೂಮಿಯನ್ನೂ ಇನ್ನು ದನಿಗೆ ಕೊಡಬೇಕಾಗಿಲ್ಲವಂತೆ. ನಿನ್ನ ಭೂಮಿ ನಿನ್ನದೇ ಆಗತ್ತೆ. ನಾನು ಎಂಜಿನ್ನು ಎದುರು ಕೂತು ಉಷ್ಣ ಹೆಚ್ಚಿಸಿ ಕೊಂಡದ್ದೇ ಬಂತು.”

ಶೀನಣ್ಣ ಸುಳ್ಳು ಹೇಳುವವನಲ್ಲ. ಆದರೂ ಕುಂಞಂಬುಗೆ ಮೊದಲು ಆ ಮಾತುಗಳನ್ನು ನಂಬಲು ಸಾಧ್ಯವಾಗುತ್ತಿರಲಿಲ್ಲ. ಕಳೆದ ಓಟಿಗೆ ಮೊದಲು ಕೋರ ಚಾಲ್ಯನೂ ಹೇಳಿದ ಮೇಲೆ ಅವನಿಗೆ ಸ್ವಲ್ಪ ನಂಬಿಕೆ ಬಂತು. “ನಿನಗೆ ಗೊತ್ತುಂಟ ಕುಂಞಂಬು? ನಮ್ಮಂತ ಬಡವರಿಗಾಗಿಯೇ ಇರುವುದು ಈ ಕತ್ತಿಸುತ್ತಿಗೆ ಪಕ್ಷ. ಕತ್ತಿ ಅಂದ್ರೆ ಕೃಷಿ. ಸುತ್ತಿಗೆ ಅಂದ್ರೆ ಕೈಗಾರಿಕೆ. ಎರಡೂ ದುಡಿಮೆಯ ಆಯುಧಗಳು. ನನಗೆ ಮೊದಲು ಗೊತ್ತಿರಲಿಲ್ಲ. ಈಗ ಪಾರ್ಟಿಮೆಂಬರು ಆದ ಮೇಲೆ ಎಲ್ಲಾ ಗೊತ್ತಾಗುತ್ತಿದೆ. ಮುದುಕನಾದವ ತರುಣಿ ಹೆಂಡ್ತೀನ ಇಟ್ಕೂಂಡು ಮಾಡೋದೇನು? ಗೈಮೆ ಮಾಡದವರ ಹೆಸ್ರಲ್ಲಿ ಬೂಮಿ ಯಾಕಿರ್‍ಬೇಕು? ಕತ್ತಿ ಸುತ್ತಿಗೆ ಪಕ್ಷ ಬರ್‍ಲಿ. ನಮ್ಮ ರಕ್ತ ಕುಡಿದ ದನಿಗಳ ಕೊಬ್ಬು ಇಳಿದು ಹೋಗುತ್ತದೆ.”

“ಆದರೆ ಕೋರಣ್ಣಾ? ಭೂಮಿ ದನಿಗಳ ಹೆಸರಲ್ಲಿದೆ. ಗೇಣಿ ಕೊಟ್ಟದ್ದಕ್ಕೆ ನನ್ನಲ್ಲಿ ಆಧಾರವೇನಿಲ್ಲ. ನಾಳೆ ದನಿ ಹೊರಗೆ ಹಾಕಲು ಬರುತ್ತಾನೆ ಎಂದಿಟ್ಟುಕೋ. ಅವನು ನಾಲ್ಕೈದು ಆಳುಗಳನ್ನು ಕರಕೊಂಡು ಬಂದರೆ ನಾನು ಒಬ್ಬ ಹೇಗೆ ಎದುರಿಸಿಯೇನು? ನೀನು ಹೇಳೋದೇನೋ ಚೆನ್ನಾಗಿಯೇ ಇದೆ. ನನ್ನ ಕಷ್ಟಕ್ಕೆ ಯಾರು ಒದಗುತ್ತಾರೆ?”

“ಅದನ್ನು ನಮ್ಮ ಪಾರ್‍ಟಿ ಯೋಚಿಸಿಲ್ಲ ಅಂದುಕೊಳ್ಳಬೇಡ. ನಾಳೆ ನಮ್ಮ ಆಫೀಸಿಗೆ ಬಾ. ನಿನ್ನ ಜಾಗದ ವಿವರ ತಿಳಿಸು. ನಾವು ತಾಲೂಕು ಕಛೇರಿಯಿಂದ ನಕ್ಷೆ ಸಂಗ್ರಹಿಸುತ್ತೇವೆ. ನಮ್ಮ ಪಾರ್‍ಟಿ ಗೆದ್ದರೆ ಇದೇ ಸಲ ನಿನ್ನ ಭೂಮಿ ನಿನಗೆ ಸಿಗುತ್ತದೆ. ಸೋತರೆ ಮುಂದಿನ ಸಲ ನಾವು ಗೆದ್ದೇ ಗೆಲ್ಲುತ್ತೇವೆ. ಭೂಮಿಗಾಗಿ ಐದು ವರ್‍ಷ ನೀನು ಕಾಯಬೇಕಾಗುತ್ತದೆ.”
* * *

ಡ್ರೈವರ್‌ ಶೀನಪ್ಪಣ್ಣನ ಬಸ್ಸು ಹತ್ತುವಾಗ ಕುಂಞಂಬುವಿನ ಸ್ಮೃತಿಪಟಲದಲ್ಲಿ ಪಳ್ಳತ್ತಡ್ಕದಲ್ಲಿ ಅವನು ಕಳೆದ ದಿನಗಳು ನೆನಪಾದವು. ಅವನ ತಂದೆಯ ಊರು ಬೆದ್ರಡ್ಕ. ತಾಯಿ ಬೇಡಡ್ಕದವಳು. ಬಟ್ಯಡ್ಕ ಪರಮೇಶ್ವರ ಭಟ್ಟರ ತೋಟದಲ್ಲಿ ಕೂಲಿ ಮಾಡಿ ಅವರು ಅವನನ್ನು ಅಡ್ಯನಡ್ಕ ಶಾಲೆಗೆ ಕಳಿಸುತ್ತಿದ್ದದು. ಅಡ್ಯನಡ್ಕ ಗೂಡಂಗಡಿಯ ಇಸ್ಮಾಲಿ ಬ್ಯಾರಿಯ ಹುರಿಗಡಲೆಯ ಆಕರ್ಷಣೆಯಿಂದಾಗಿ ಕುಂಞುಂಬು ಅಪ್ಪನ ಜೇಬಿನಿಂದ ಸ್ವಲ್ಪ ಸ್ವಲ್ಪ ಎಗರಿಸುತ್ತಿದ್ದ. ಶಾಲೆಯಲ್ಲಿ ಮೇಸ್ಟ್ರು ಹರಿಶ್ಚಂದ್ರನ ಕತೆ ಹೇಳುವಾಗ ತಾನು ಮಾಡುತ್ತಿರುವುದು ತಪ್ಪು ಎಂದು ಅವನಿಗಾಗುತ್ತಿತ್ತು. ಇಸ್ಮಾಲಿ ಬ್ಯಾರಿಯ ಕಡಲೆ ಕಾಣುವಾಗ ಹರಿಶ್ಚಂದ್ರ ಮರೆತು ಹೋಗುತ್ತಿದ್ದ. ಕತೆ ಬಿಟ್ಟರೆ ಮೇಸ್ಟ್ರು ಹೇಳುವುದು ಯಾವುದೂ ಅವನಿಗೆ ಅರ್ಥವಾಗುತ್ತಿರಲಿಲ್ಲ. ಮೇಸ್ಟ್ರ ಏಟು ತಾಳಲಾರದೆ ಒಂದು ದಿನ ಎಮ್ಮೆ ಸೆಗಣಿ ತಂದು ಮೇಸ್ಟ್ರ ಕುರ್ಚಿಗೆ ಬಳಿದ. ಅವಸರದಲ್ಲಿ ಬಂದು ಕೂತ ಬಿಳಿ ಮುಂಡಿನ ಮೇಸ್ಟ್ರ ಫಜೀತಿ ದೇವರಿಗೇ ಪ್ರೀತಿ. ಬೆತ್ತದ ವಿಚಾರಣೆ ನಡೆಸಿದಾಗ ಅಪರಾಧಿ ಸಿಕ್ಕಿಬಿದ್ದ. ಅಲ್ಲಿಗೆ ಕುಂಞಂಬುವಿನ ಶಿಕ್ಷಣ ನಿಂತಿತು.

ಅಪ್ಪ ಅವನನ್ನು ಸಾರಡ್ಕದ ಪುನರ್‍ಜನ್ಮ ಹೋಟೆಲಿಗೆ ಸೇರಿಸಿದ. ಅಲ್ಲಿ ಲೋಟಾ ತೊಳೆಯುವ ಕೆಲಸ. ಕೈ ಜಾರಿದರೆ ಲೋಟ ಠಳ್ಳೆಂದು ಒಡೆದು ಹೋಗಿ ದೊಡ್ಡ ರಾಮಾಯಣ. ಇವನ ತಲೆಗೆ ಠಕ್ಕೆಂದು ಮೊಟಕು. ಆದರೆ ಹೊಟ್ಟೆಗೆ ತೊಂದರೆಯಾಗುತ್ತಿರಲಿಲ್ಲ. ಹೋಟೇಲಿಗೆ ಬರುತ್ತಿದ್ದವರು ಸೇದಿ ಬಿಸುಡುತ್ತಿದ್ದ ಬೀಡಿ ತುಂಡುಗಳನ್ನು ಒಟ್ಟು ಮಾಡಿ ಖಾಲಿ ಬೆಂಕಿ ಪೆಟ್ಟಿಗೆಯಲ್ಲಿ ಬಚ್ಚಿಟ್ಟು ಸಾರಡ್ಕದ ಗುಡ್ಡೆಯಲ್ಲಿ ಅಡಗಿ ಹೊಗೆ ಬಿಡುತ್ತಿದ್ದ.

ಹೋಟೇಲು ಕೆಲಸದಲ್ಲಿದ್ದಾಗ ತಂದೆ ಕ್ಷಯದಿಂದ ನರಳಿ ಸತ್ತುಹೋದ. ತಾಯಿ ಹಗ್ಗ ತಗೊಂಡಳು. ಮತ್ತೆ ಅಲ್ಲಿ ಸಾರಡ್ಕದಲ್ಲಿ ಇರಲು ಕುಂಞಂಬುವಿಗೆ ಮನಸ್ಸು ಬರಲಿಲ್ಲ. ಒಂದು ದಿನ ಹೋಟೇಲು ಯಜಮಾನ ಹೊರಗೆ ಹೋದ ಹೊತ್ತು ಸಾಧಿಸಿ ಗಲ್ಲಾದಲ್ಲಿ ಇದ್ದಷ್ಟು ಹಣವನ್ನು ಜೇಬಿಗೆ ತುಂಬಿಕೊಂಡು ಮೈಲು ಬಸ್ಸು ಹತ್ತಿ ಬದಿಯಡ್ಕಕ್ಕೆ ಬಂದಿದ್ದ.

ಬದಿಯಡ್ಕದ ಸೋಡಾ ಕಾಮತ ಇವನಿಗೆ ಸೋಡಾ ಮಾರುವ ಕೆಲಸ ಕೊಟ್ಟಿದ್ದ. ದಿನವಿಡೀ ದುಡಿದರೆ ಸಿಗುವುದು ನಾಲ್ಕಾಣೆ. ಬಸ್‌ಸ್ಟಾಂಡಿನ ಹಿರಿಯ ವ್ಯಾಪಾರಿ ಅಬ್ಬುಕರುಂಞ ಅದರಿಂದ ಒಂದಾಣೆಯನ್ನು ನಿರ್ದಾಕಿಣ್ಯವಾಗಿ ವಸೂಲಿ ಮಾಡಿ ಬಿಡುತ್ತಿದ್ದ. ಕೊಡದಿದ್ದರೆ ಇವನ ಚಡ್ಡಿ ಬಿಚ್ಚಿ…….ಥೂ ಅ………ಏನೇನೋ ಅಸಹ್ಯ. ಹೇಳುವುದು ಯಾರಲ್ಲಿ? ರಾತ್ರಿ ಬಸ್‌ಸ್ಟ್ಯಾಂಡಲ್ಲಿ ಮಲಗಬೇಕಾದರೆ ಅಬ್ಬುಕರುಂಞ ಹೇಳಿದಂತೆ ಕೇಳಲೇಬೇಕು.

ಕಾಲಕ್ರಮೇಣ ತನ್ನ ಕೈಕಾಲುಗಳಲ್ಲಿ ಬಲ ತುಂಬಿದ ಮೇಲೆ ಅಬ್ಬುಕರುಂಞಯನ್ನು ಎದುರಿಸುವ ಧೈರ್ಯ ಬಂತು. ತನ್ನ ಸಹವರ್ತಿ ಶಂಗರನ್ನಾಯರಿಗೆ ವಿಷಯ ತಿಳಿಸಿ ಅಬ್ಬುಕರುಂಞ ಚಡ್ಡಿ ಬಿಚ್ಚ ಬಂದಾಗ ಎರಡು ಏರಿಸಿದ. ಹಿಂದಿನಿಂದ ಶಂಗರನ್ನಾಯರ್‌ ಎರಡು ಝೂಡಿಸಿ ಒದ್ದ. ಅಂದಿನಿಂದ ಅಬ್ಬುಕರುಂಞ ಬದಿಯಡ್ಕದಲ್ಲಿ ಕಾಣಿಸಲಿಲ್ಲ. ಅವನು ಕುಂಬಳೆಯಲ್ಲಿ ತನ್ನ ವೃತ್ತಿ ಮುಂದುವರಿಸಿದ್ದಾನೆಂದು ತಿಳಿದು ಬಂತು.
* * *

ಬದಿಯಡ್ಕದ ಬದುಕು ಅರ್ಥಹೀನವೆಂದು ಅರಿವಾದಾಗ ಕುಂಞಂಬುವಿಗೆ ತುಂಬು ತಾರುಣ್ಯ. ಅಂದು ಮೈಲು ಬಸ್ಸು ಹತ್ತಿ ಬಂದವ ಪಳ್ಳತ್ತಡ್ಕದಲ್ಲಿ ಇಳಿದ. ಗುರುತಿನವರು ಯಾರೂ ಇರಲಿಲ್ಲ. ಉದ್ದೇಶದ ಬಗ್ಗೆ ಯೋಚಿಸಿರಲಿಲ್ಲ. ಮೊದಲು ಭೇಟಿಯಾದದ್ದು ಇಸುಬ್ಬು ಇಚ್ಚ. ಇವನ ಕತೆ ಕೇಳಿ ಮರುಗಿದವ ಇವನನ್ನು ತನ್ನ ಬಿಡಾರಕ್ಕೆ ಕರಕೊಂಡು ಹೋದ.

“ಕಂತ್ರಾಟು ಕೆಲಸ ವಹಿಸಿಕೊಂಡಿದ್ದೇನೆ. ನಿನ್ನ ಕೆಲಸ ನೋಡಿ ಹಣ ಕೊಡುವುದು. ಅಲ್ಲಾನಾಣೆ, ದುಡಿದವರಿಗೆ ಮೋಸ ಮಾಡಿಲ್ಲ. ದನಿಗಳಿಗೆ ಸ್ವಲ್ಪ ಮೋಸ ಮಾಡದಿದ್ದರೆ ದುಡಿದವರಿಗೆ ನ್ಯಾಯ ನೀಡುವುದು ಹೇಗೆ? ಇರ್‍ತಿಯಾದರೆ ಇರು. ಬೇಡಾಂದ್ರೆ ನಿನ್ನಿಷ್ಟ?

ಇಸುಬು ಇಚ್ಚನ ಬಿಡಾರದಲ್ಲಿ ಹದಿನೈದು ಮಂದಿ ಕೆಲಸದಾಳುಗಳು. ಬೇಸಿಗೆಯಲ್ಲಿ ಕೈ ತುಂಬಾ ಕೆಲಸ. ಪಳ್ಳತ್ತಡ್ಕದ ಪುಟ್ಟ ಹೊಳೆ ಬೇಸಿಗೆಯಲ್ಲಿ ಬತ್ತಿ ಹೋಗುತ್ತಿತ್ತು. ಅದಕ್ಕೆ ಅಲ್ಲಲ್ಲಿ ಗುಂಡಿ ತೋಡಿ ಮೋಟಾರಿಟ್ಟು ಬಟ್ರುಗಳ ಅಡಿಕೆ ತೋಟಕ್ಕೆ ನೀರು ಹಾಯಿಸುವುದು, ಅಡಿಕೆ ಹೆಕ್ಕುವುದು, ಮದ್ದು ಬಿಡುವುದು, ಗೋಟು ಅಡಿಕೆ ಸುಲಿಯುವುದು ಎಲ್ಲದಕ್ಕೂ ಕಂತ್ರಾಟೇ.

ಮಳೆಗಾಲದಲ್ಲಿ ಪಳ್ಳತ್ತಡ್ಕದ ಪುಟ್ಟ ಹೊಳೆ ತುಂಬಿ ಹರಿಯುತ್ತಿತ್ತು. ಕಬ್ಬಿಣದ ಹಳೇ ಸಂಕದ ಹತ್ತಿರ ಒಟ್ಟಿದ್ದ ಜಲ್ಲಿ ಕಲ್ಲಿನ ಮೇಲೆ ಗೊರಬೆ ಹಾಕಿ ಕೂತು ಅವನು ಕಾಯುತ್ತಿದ್ದ. ತೇಲಿ ಬರುವ ತೆಂಗಿನಕಾಯಿ, ಮರಮುಟ್ಟು ಮಾರಿದರೆ ಕೈ ತುಂಬಾ ಹಣ. ಸೊಂಟಕ್ಕೆ ಬೆಳ್ಳಿಯ ನೇವಳ, ಕುತ್ತಿಗೆಗೊಂದು ಚಿನ್ನದ ಸರ, ಕಿವಿಗಳಿಗೆ ಒಂಟಿಮಾಡಲಿಕ್ಕಾದದ್ದು ಆ ಹಣದಿಂದ. ಅದರಲ್ಲಿ ಇಸುಬು ಇಚ್ಚ ಪಾಲು ಕೇಳುತ್ತಿರಲಿಲ್ಲ.

ಇಸುಬು ಇಚ್ಚನ ಮನೆಯಿರುವುದು ಏತಡ್ಕದಲ್ಲಿ. ಅವನ ಅಜ್ಜನ ಮನೆ ಕಾರಡ್ಕ. ಅಲ್ಲಿ ಇಸುಬು ಇಚ್ಚ ಕೃಷ್ಣ ಭಟ್ಟರ ತೋಟದ ಕೆಲಸಕ್ಕಿದ್ದ. ಆಗಾಗ ಅಡಿಕೆ ಜಾರಿಸುತ್ತಿದ್ದ. ಒಂದು ಸಲ ಮಾಲು ಸಮೇತ ಕೃಷ್ಣ ಭಟ್ಟರ ಕೈಗೆ ಸಿಕ್ಕಿ ಬಿದ್ದ. ಬ್ಯಾರಿಯ ಗ್ರಹಚಾರವನ್ನು ಭಟ್ಟರು ಬಿಡಿಸಿದರು. ಇಸುಬು ಇಚ್ಚ ಪಳ್ಳತ್ತಡ್ಕಕ್ಕೆ ಬಂದ ಮೇಲೆ ನಸೀಬೇ ಬದಲಾಗಿ ಮೇಸ್ತ್ರಿಯಾಗಿ ಬಿಟ್ಟ. ಹಂತ ಹಂತವಾಗಿ ಬೆಳೆದ. ಏತಡ್ಕದಲ್ಲಿ ಮಾಳಿಗೆ ಮನೆ ಕಟ್ಟಿಸಿಕೊಂಡ. ಕುಂಞಂಬು ಆ ಮನೆಗೆ ಅದೆಷ್ಟು ಸಲ ಹೋಗಿದ್ದನೊ? ಹೋದಾಗಲೆಲ್ಲಾ ಇಸುಬ್ಬು ಇಚ್ಚನ ಬ್ಯಾರ್ತಿ ಬೀಪಾತುಮ್ಮ ಕೋಯಿಕ್ಕರಿ, ನೆಯಿಚೋರು, ಬಿರಿಯಾಣಿ, ಚಕ್ಕರಚೋರು ಮಾಡಿ ಹಾಕುತ್ತಿದ್ದಳು. ತನಗೂ ಒಂದು ಸಂಸಾರಬೇಕು ಎಂದು ಕುಂಞಂಬುವಿಗೆ ಆದದ್ದೇ ಆಗ.

ಹಾಗಾದ ಮೇಲೆಯೇ ಅವನು ಪಳ್ಳತ್ತಡ್ಕದ ಸುಂದರಿಯನ್ನು ಗಮನಿಸಿದ್ದು. ಅವಳ ಅಪ್ಪ ದಾಮೋದರ ಬೆಳ್ಚಪ್ಪಾಡ ವಿಷ್ಣುಮೂರ್ತಿಯ ಪಾತ್ರಿಯಾಗಿದ್ದ. ಅವನ ಜಾತಿ ಜನರ ಕಾರ್‍ಣಚ್ಚನಾಗಿ ಕೈಗೆ ಚಿನ್ನದ ಬಳೆ, ಕಾಲಿಗೆ ಬೆಳ್ಳಿಯ ಕಡಗ ಹಾಕಿ, ಅಂಗಿ ಹಾಕದೆ ಬಿಳಿ ಪಂಚೆ ಉಟ್ಟು, ಮೇಲೊಂದು ಬಿಳಿ ಶಾಲು ಹೊದ್ದುಕೊಂಡು ಓಡಾಡಿ ಬಹಳ ಗೌರವ ಪಡೆಯುತ್ತಿದ್ದ.

ಅವನ ಮಗಳು ನಿಜಕ್ಕೂ ಸುಂದರಿ. ಅವಳು ಮನೆಯಲ್ಲೇ ಬೀಡಿ ಕಟ್ಟುವವಳು. ಅದನ್ನು ಇಸ್ಮಾಯಿಲು ಬ್ಯಾರಿಯ ಬ್ರಾಂಚಿಗೆ ಕೊಡಲು ಬರುವಾಗ ಕುಂಞಂಬು ಕಾದು ನಿಲ್ಲುತ್ತಿದ್ದ. ನಾಲ್ಕನೆಯ ಭೇಟಿಯಲ್ಲಿ ಅವನು ಧೈರ್ಯದಿಂದ ಕೇಳಿಬಿಟ್ಟ.

“ನನ್ನನ್ನು ಮದುವೆಯಾಗುತ್ತೀಯಾ?”

ಸುಂದರಿ ನಾಚಿ ಕೆಂಪಾಗಿ ಮಾತು ಬಾರದೆ ನಿಂತಳು.

“ನಿನಗೆ ಇಷ್ಟವಿದ್ದರೆ ಹೇಳು. ಇಸುಬ್ಬು ಇಚ್ಚನನ್ನು ಬಿಟ್ಟರೆ ನನ್ನ ಕಡೆಯವರು ಯಾರೂ ಇಲ್ಲ. ನಿನನ್ನು ಹೂವಿನ ಹಾಗೆ ನೋಡಿಕೊಳ್ಳಬಲ್ಲೆ.” ಸುಂದರಿ ತಲೆ ಕೆಳಗೆ ಹಾಕಿ ನಡೆದಳು. ನಡೆವಾಗ ನುಡಿದಳು: “ಅಪ್ಪನನ್ನು ಕೇಳಿ.”

ಕುಂಞಂಬುನ ಪರವಾಗಿ ಇಸುಬ್ಬು ಇಚ್ಚ ಮಾತುಕತೆಗೆ ಹೋದ. “ನೀವು ಹಿರಿಯರು. ಪರಮ ಕಾರಣಿಕದ ವಿಷ್ಣುಮೂರ್ತಿಯ ಬೆಳ್ಚಪ್ಪಾಡರು. ದೊಡ್ಡ ಮನಸ್ಸು ಮಾಡಿ ಕುಂಞಂಬುವನ್ನು ನಿಮ್ಮ ಅಳಿಯನನ್ನಾಗಿ ಮಾಡಿಕೊಳ್ಳಬೇಕು.”

ದಾಮೋದರ ಬೆಳ್ಚಪ್ಪಾಡನ ಕಣ್ಣು ಗಿರಗಿರನೆ ತಿರುಗಿತು.

“ನೀವು ಸಾವ್ಕಾರಾದ್ದಕ್ಕೆ ಬಿಟ್ಟಿದ್ದೇನೆ. ಆ ನಾಯಿಂಡೆ ಮೋನು ಕುಂಞಂಬುವಿಗೆ ಎಷ್ಟು ಅಹಂಕಾರ? ಬಿಕನಾಸಿ ಪರ್ದೇಸಿ ಬೇವಾರ್ಸಿ ಅವನು. ಅವನಿಗೆ ಹೆಣ್ಣು ಕೊಡುವ ಬದಲು ಹೊಳೆಗೆ ಕಡಿದು ಚೆಲ್ಲಿಯೇನು?”

ಪೆಚ್ಚು ಮೋರೆ ಹಾಕಿ ವಾಪಾಸಾದ ಇಸುಬು ಇಚ್ಚ ಕುಂಞಂಬುವಿನೆದುರು ಪ್ರತಿಜ್ಞೆ ಯಂಥ ಮಾತಾಡಿದ.

“ದಾಮೋದರ ಬೆಳ್ಚಪ್ಪಾಡನಿಗೆ ಮಣ್ಣ್‌ಟ್ಟ್‌ ಮೂಡಟ್ಟ್! ನೀನು ಎರಡು ತಿಂಗಳು ಸಮಯ ಕೊಡು. ನಿನಗೆ ಒಂದು ತರವಾಡು ಹುಡುಗಿಯನ್ನು ಹುಡುಕಿ ತಾರದಿದ್ದರೆ ನಾನು ಬ್ಯಾರಿಗೆ ಹುಟ್ಟಿದವನೇ ಅಲ್ಲ.”

ಇಸುಬು ಇಚ್ಚ ದೂರದ ಬಂದಡ್ಕದಿಂದ ಕುಂಞಂಬುವಿಗೆ ಸಂಬಂಧ ಕುದುರಿಸಿದ. ಕೊಗ್ಗು ಮಣಿಯಾಣಿಯ ಮಗಳು ಸುಶೀಲ ಹೆಸರಿಗೆ ತಕ್ಕಂತಿದ್ದಳು. ಅವಳು ಬರುವ ಮೊದಲೇ ಉಕ್ಕಿನಡ್ಕ ಗೋವಿಂದ ಭಟ್ಟರ ಹತ್ತು ಮುಡಿಗದ್ದೆಯನ್ನು ಕುಂಞಂಬು ಗೇಣಿಗೆ ಮಾಡಿಕೊಂಡ. ಒಂದು ಪುಟ್ಟ ಮನೆ ಕಟ್ಟಲು ಇಸುಬು ಇಚ್ಚ ಸಹಾಯ ಮಾಡಿದ. ಸುಶೀಲ ಮನೆಯನ್ನು ತುಂಬಿದಳು.

ಕುಂಞಂಬು ಗೋವಿಂದ ಭಟ್ಟರ ಬರಡು ಗದ್ದೆಗಳಲ್ಲಿ ಬಂಗಾರ ಬೆಳೆದ. ಹೆಂಡತಿ ಸುಶೀಲ ಒಳ್ಳೆ ಕೆಲಸಗಾರ್‍ತಿ. ಇಸುಬ್ಬು ಇಚ್ಚನ ಆಳುಗಳು ಏಣೆಲು ಮತ್ತು ಸುಗ್ಗಿ ಬೆಳೆ ಕಾಲದಲ್ಲಿ ಕೆಲಸಕ್ಕೆ ಬಂದು ಬಿಡುತ್ತಿದ್ದರು. ಸುಶೀಲಳ ಗರ್ಭದಲ್ಲೊಂದು ಜೀವ ಮೊಳಕೆಯೊಡೆಯತೊಡಗಿತು.

ಆಗಲೇ ಕೋರಚಾಲ್ಯ ಉಕ್ಕಿನಡ್ಕದಲ್ಲಿ ಕಮ್ಯುನಿಸ್ಟ್‌ ಪಾರ್ಟಿ ಬ್ರಾಂಚನ್ನು ಆರಂಭಿಸಿದ್ದು. “ದುಡಿಯುವವರದೇ ಸಾಮ್ರಾಜ್ಯ. ಉಳುವವನೇ ಹೊಲದೊಡೆಯು ಎಂಬ ಘೋಷಣಾ ವಾಕ್ಯಗಳು ಮೊಳಗತೊಡಗಿದ್ದು. ಒಂದು ರಾತ್ರಿ ಕುಂಞಂಬುವಿನ ಮನೆಗೆ ಬೆಂಕಿ ಬಿತ್ತು. ತುಂಬು ಗರ್ಭಿಣಿ ಸುಶೀಲ ಹೊರಗೆ ಓಡಿ ಬರುವಾಗ ಎಡವಿ ಬಿದ್ದಳು. ಗರ್ಭಸ್ರಾವವಾಗಿ ತಾಯಿ ಮಗು ಕೊನೆಯುಸಿರೆಳೆ ಯುವುದಕ್ಕೆ ಮನೆ ಬೆಂಕಿ ಆರಿಸಲು ಬಂದವರು ಮೂಕ ಸಾಕ್ಷಿಗಳಾದರು. ಸುಶೀಲಳಿಗೆ ಮದ್ದು, ಗುಳಿಗೆಗೆಂದು ಬದಿಯಡ್ಕಕ್ಕೆ
ಹೋಗಿದ್ದ ಕುಂಞಂಬು ವಾಪಾಸು ಬಂದವನು ಕುಸಿದು ಅತ್ತ. ಸ್ವಲ್ಪ ಹೊತ್ತಲ್ಲಿ ಪೋಲೀಸು ಜೀಪು ಬಂತು. “ಮನೆಗೆ ಬೆಂಕಿಕೊಟ್ಟು ಹೆಂಡತಿಯ ಸಾವಿಗೆ ಕಾರಣನಾದವ ಎಂದು ಕುಂಞಂಬುವಿಗೆ ಕೋಳ ತೊಡಿಸಿ ಜೀಪಿಗೆ ತಳ್ಳಿ ಪೋಲೀಸರು ಜೀಪೇರಿದರು. ಬಿಡಿಸಲು ಇಸುಬ್ಬು ಇಚ್ಚ ಅಲ್ಲಿರಲಿಲ್ಲ.
* * *

ಕೇಸು ಕೋರ್ಟಿನಲ್ಲಿ ನಿಲ್ಲಲಿಲ್ಲ. ಆದರೆ ಕೇಸು ಮುಗಿಯಲು ನಾಲ್ಕು ವರ್ಷ!

ಕುಂಞಂಬು ಬಿಡುಗಡೆಗೊಂಡ.

ಹೋಗುವುದೆಲ್ಲಿಗೆ?

ಕಾಸರಗೋಡು ಬಸ್‌ಸ್ಟ್ಯಂಡ್‌ಲ್ಲಿ ಅಲೆದಾಡುತ್ತಿದ್ದವನಿಗೆ ಮೈಲು ಬಸ್ಸು ಡ್ರೈವರ್‌ ಶೀನಣ್ಣ ಎದುರಾದ.

“ನಿನ್ನ ಒಬ್ಬನ ಕತೆಯಿದೆಂದು ಭಾವಿಸಬೇಡ ಮಣಿಯಾಣಿ. ಕೆಲವರು ಈಗಲೂ ಜೈಲಿನಲ್ಲಿದ್ದಾರೆ. ನಿನ್ನ ಇಸುಬ್ಬು ಇಚ್ಚ ಪಳ್ಳತ್ತಡ್ಕದಲ್ಲೇ ಇದ್ದಾನೆ. ಕೋರಚಾಲ್ಯ ಪಂಚಾಯತು ಅಧ್ಯಕನಾಗಿದ್ದಾನೆ. ಹೋಗಿ ನೋಡು. ಹೊಸ ಹಾದಿ ಕಂಡುಕೊಳ್ಳುತ್ತೀ.”

ಮೈಲು ಬಸ್ಸು ಡ್ರೈವರ್‌ ಶೀನಣ್ಣ ಕುಂಞಂಬುವನ್ನು ಪಳ್ಳತ್ತಡ್ಕದಲ್ಲಿ ಇಳಿಸಿದ.

ಕುಂಞಂಬು ಮತ್ತೆ ಇಸುಬು ಇಚ್ಚನ ಬಿಡಾರಕ್ಕೆ ನಡೆದ. ಇಸುಬು ಇಚ್ಚ ಕುಂಞಂಬುವನ್ನು ಪಂಚಾಯತು ಪ್ರೆಸಿಡೆಂಟ್‌ನಲ್ಲಿಗೆ ಕರೆದೊಯ್ದ.

“ನಿನ್ನ ಜಾಗದ ನಕ್ಷೆ ಇಲ್ಲಿದೆ. ಗೋವಿಂದ ಭಟ್ಟ ನಿನ್ನಜಾಗವನ್ನು ನುಂಗಿದ್ದಾನೆಂದು ಅರ್ಜಿಕೊಡು. ನಮ್ಮ ಸರಕಾರ ಇರುವಾಗ ದುಡಿಯುವವರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ನಿನ್ನ ಜಾಗ ನಿನಗೆ ಸಿಗದಿದ್ದರೆ ನಾನು ಪ್ರೆಸಿಡೆಂಟು ಸೀಟಿಗೆ ರಾಜಿ ಪತ್ರ ಬಿಸಾಕಿಯೇನು?”

ಹಿಂದಿರುಗುವಾಗ ಇಸುಬು ಇಚ್ಚನೆಂದ.

“ದುಡಿಯುವವರನ್ನು ಅಲ್ಲಾ ಕಾಪಾಡುತ್ತಾನೆ. ನೀನು ದುಡಿದ ಹೊಲ ಗದ್ದೆ ಗೋವಿಂದ ಭಟ್ಟನ ಸ್ವಾಧೀನಕ್ಕೆ ಹೋಗಲು ಕತ್ತಿ-ಸುತ್ತಿಗೆ ಸರಕಾರ ಬಿಡುವುದಿಲ್ಲ.” ಕುಂಞಂಬು ತಲೆದೂಗಿದ.

“ಆದರೆ ಇಸುಬು ಇಚ್ಚ. ಸುಶೀಲೆ ಇಲ್ಲದ ಬದುಕನ್ನು ಮತ್ತೆ ಹೇಗೆ ಕಟ್ಟಿಕೊಳ್ಳಲಿ?”

ಇಸುಬು ಇಚ್ಚ ಸಂತೈಸಿದ.

“ಅಲ್ಲಾ ಒಂದು ಕೈಯಿಂದ ತಗೊಂಡರೆ ಇನ್ನೊಂದು ಕೈಯಿಂದ ಕೊಡುತ್ತಾನೆ. ಬಾ”

“ಎಲ್ಲಿಗೆ?”

“ಸುಂದರಿಯಲ್ಲಿಗೆ. ಅವಳ ಅಪ್ಪ ದಾಮೋದರ ಬೆಳ್ಚಪ್ಪಾಡ ಅವಳನ್ನು ರಾಮ ಬೆಳ್ಚಪ್ಪಾಡನಿಗೆ ಕಟ್ಟಿದ. ಅವನು ಕುಡಿದು ಸತ್ತರೆ ದಾಮೋದರ ಬೆಳ್ಚಪ್ಪಾಡ ಮಗಳಿಗೆ ಹೀಗಾಯಿತಲ್ಲಾ ಎಂಬ ವ್ಯಥೆಯಿಂದ ಸತ್ತ. ಅವಳಲ್ಲಿ ಒಂದು ಮಾತು ಕೇಳು. ಆಮೇಲೆ ಅಲ್ಲಾ ಇಟ್ಟಂತಾಗಲಿ.”

ಸುಂದರಿ ಕುಂಞಂಬುವನ್ನು ನೋಡಿ ಕಣ್ಣರಳಿಸಿದಳು. “ಈಗ ಅಪ್ಪನನ್ನು ಕೇಳಬೇಕಾಗಿಲ್ಲ. ಏನು ನಿನ್ನ ಮನಸ್ಸು?”

ಸುಂದರಿ ಇಸುಬ್ಬು ಇಚ್ಚ ಇದ್ದಾನೆಂದು ನೋಡಲಿಲ್ಲ. ಓಟದ ನಡಿಗೆಯಲ್ಲಿ ಬಂದು ಕುಂಞಂಬುವಿಗೆ ತೆಕ್ಕೆ ಬಿದ್ದು ಅವನ ಹರವಾದ ಎದೆಯನ್ನು ಕಣ್ಣೀರಿನಿಂದ ತೋಯಿಸಿ ಬಿಕ್ಕಿದಳು.

“ಅನಾಥೆಯಾಗಿದ್ದ ನನಗೆ ಈಗ ಆಸರೆ ಸಿಕ್ಕಿತು.”

ಇಸುಬ್ಬು ಇಚ್ಚ ಆಕಾಶದತ್ತ ನೋಡಿ ಹೇಳಿದ.

“ಎಲ್ಲರಿಗೂ ಆಸರೆ ಅವನು”
*****
[೧೯೭೬]

Tagged:

Leave a Reply

Your email address will not be published. Required fields are marked *

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...