ಸಂಜೆ

ಸಂಜೆ

ಚಿತ್ರ ಸೆಲೆ: ಪಿಕ್ಸಾಬೇ.ಕಾಂ
ಚಿತ್ರ ಸೆಲೆ: ಪಿಕ್ಸಾಬೇ.ಕಾಂ

ಅಪೇಕ್ಷೆಗಳಿಗೆ ಮಿತಿಯೆಂಬುದಿದೆಯಾದರೂ ಪ್ರತಿಫಲಾಕ್ಷೇಗೆ ಮಿತಿಯೆಂಬುದೇಯಿಲ್ಲ. ಅದು ನಮ್ಮ ಸಾವಿನೊಂದಿಗೇ ಸುಖ ಕಾಣುವಂತಾದ್ದಾಗಿರಬಹುದು. ಬಯಸಿದೊಡನೆ ಬಯಸಿದಂತಹ ಸಾವು ಕೂಡ ಮನುಷ್ಯನಿಗೆ ದಕ್ಕದು. ಮನುಷ್ಯ ಅದೆಷ್ಟು ಅಸಹಾಯಕನಲ್ಲವೆ. ಈ ಸಾವು ಯಾಕಾದರೂ ಇಷ್ಟೊಂದು ಕಾಡಬೇಕು? ಚಿಗುರದ ವೃದ್ಧಾಪ್ಯ, ಪ್ರೀತಿಸದ ಮಕ್ಕಳ ದಿವ್ಯ ನಿರ್ಲಕ್ಷ್ಮ, ಖಾಲಿಯಾದ ಜೇಬು, ಗುಣವಾಗದ ರೋಗ, ತನ್ನದೇ ಆದ ನೆರಳು ಒಂದು ಮುಷ್ಟಿ ಅನ್ನಕ್ಕೂ ದಾರಿ ಕಾಣದ, ದಾರಿ ಮಾಡಿಕೊಳ್ಳದ ಕಳೆದ ದಿನಗಳು, ಕಳೆಯಬೇಕಾಗಿರುವ ಅನಿಶ್ಚಿತ ಅನಧಿಕೃತ ದಿನಗಳ ಪಯಣ. ಈ ಬಗ್ಗೆಯೆಲ್ಲಾ ನೆನೆವಾಗ ಹೃದಯ ಹಿಂಡಿದಂತಾಗುತ್ತದೆ.

ನೋವಿಗಿಂತಲೂ ನನ್ನನೀಗ ಕಾಡುತ್ತಿರುವುದು ಭಯ. ಇದುವರೆಗೆ ಹರಿವ ನೀರಿನಂತೆ ಸರಾಗವಾಗಿ ಸಾಗಿಬಂದ ಜೀವನಕ್ಕೀಗ ಕಡು ಬೇಸಿಗೆ, ಜಲ ಬತ್ತಿದಂತೆಯೇ ಮೈ ಬಲವೂ ಬತ್ತುತ್ತದೆ. ಮತ್ತೆ ಮಳೆ ಹರಿಯುತ್ತದೆ ನದಿ ಸಡಗರದಿಂದ ತುಂಬಿ ಹರಿಯುತ್ತದೆ. ಒಣಗಿದ ಮರ ಚೈತ್ರದಲ್ಲಿ ಚಿಗುರೊಡೆಯುತ್ತದೆ. ಆದರೆ ಕಳೆದುಹೋದ ವಯಸ್ಸು? ಮುಗಿಯುತ್ತಾ ಬಂದ ಆಯಸ್ಸು? ಇವೆಲ್ಲಾ ನನ್ನ ಚಿಂತನೆಗಳೇನಲ್ಲ ಉತ್ತರ ಕಾಣದ ಪ್ರಶ್ನೆಗಳು. ಚಿತೆಗೆ ಹೋಗುವ ಹಾದಿಯಲ್ಲಿ ಊರುತ್ತಿರುವ ಸವಕಲು ಹೆಜ್ಜೆಗಳಿಂದ ಕೇಳಿಬರುವ ಪಿಸು ಮಾತುಗಳು. ಬದುಕಲಾಗದ ಬದುಕು ಕೂಡ ಅದೆಂತಹ ಹಿಂಸೆ! ಅಸಲು ಇದನ್ನು ಬದುಕು ಎನ್ನಲೆ? ಎಲ್ಲರನ್ನೂ ಕಳೆದುಕೊಂಡು ಅನಾಥನಾದವನೂ ಬದುಕನ್ನು ಭರಿಸಬಲ್ಲ, ಅದೇ ಬದುಕಿನ ರಹಸ್ಯ, ಎಲ್ಲರೂ ಇದ್ದೂ ಅನಾಥನಾದವನಿಗೆ ಈ ಮಾತ್ರ ತಾಣವೂ ಇಲ್ಲದಂತಾಗಿ ಬಿಡುವುದೇ ಬದುಕಿನ ಕುಚೋದ್ಯ, ಪ್ರಾಯಶಃ ಹೆತ್ತವರು ಯಾರೂ ಪ್ರತಿಫಲಾಪೇಕ್ಷೆಯಿಂದ ಮಕ್ಕಳನ್ನು ಸಾಕಿ ಸಲಹುವುದಿಲ್ಲ, ಮಕ್ಕಳು ನಕ್ಕಾಗ ನಕ್ಕು ಅತ್ತಾಗ ಅತ್ತ ತಮ್ಮ ಆಸೆ ಆಕಾಂಕ್ಷೆಗಳನ್ನೆಲಾ ಸಮಾಧಿ ಮಾಡಿ ಅವರ ಏಳ್ಗೆಗಾಗಿ ದುಡಿದು ಮಡಿವ ದಾರಿ ಹಿಡಿವುದೇ ಹೆತ್ತವರ ಸಹಜ ಗುಣ. ಪ್ರೀತಿಸಿದವರ ಮನೋಧರ್ಮ ಕರುಳಿನ ನಿಯಮ. ಆದ್ದರಿಂದಲೇ ಯಾರಲ್ಲೂ ಈ ಬಗ್ಗೆ ಅಂತಹ ವಿಶೇಷವಾದ ಅಚ್ಚರಿಯಾಗಲಿ ಅನುಕಂಪವಾಗಲಿ ಇಲ್ಲ.

ಅದಕ್ಕೇ ಇರಬೇಕು ನಾನು ಬೀದಿ ಪಾಲಾದಾಗ ಯಾರ ಮುಖದಲ್ಲೂ ಕಳವಳವೇ ಕಾಣಲಿಲ್ಲ! ‘ಈಗಿನ ಕಾಲದಲ್ಲಿ ಇದೆಲ್ಲಾ ಕಾಮನ್ನು ಸಾರ್, ಹೆತ್ತವರನ್ನು ಮುಪ್ಪಿನ ಕಾಲದಲ್ಲಿ ಯಾವ ಮಕ್ಕಳು ನೋಡಿಕೋತಾರ್‍ಹೇಳಿ’ ಹೀಗಂತ ನನ್ನನ್ನು ಪ್ರಶ್ನಿಸಿದವರೇ ಹೆಚ್ಚು. ಈ ಪ್ರಶ್ನೆಗೆ ನಿಟ್ಟುಸಿರುಬಿಟ್ಟರೆ ಬೇರೆ ಉತ್ತರವೂ ನನ್ನಲ್ಲಿರಲಿಲ್ಲ. ನನಗನ್ನಿಸಿದಿಷ್ಟೆ ಮುಪ್ಪಿನಲ್ಲಿ ತಂದೆ ತಾಯಿಯರನ್ನು ತಿರಸ್ಕರಿಸುವ ಸಮಾಜ ಆಧುನಿಕವಾಯಿತೆ ಅಥವಾ ಪರಿಸ್ಥಿತಿಯ ಕೂಸಾಯಿತೆ! ಅರ್ಥವಾಗದು.

ವನಜ ಮೂರನೇ ಹೆರಿಗೆಯಲ್ಲಿ ತೀರಿಕೊಂಡಾಗ ನನಗೆ ನಲವತ್ತಾಗಿರಬಹುದು. ಮಕ್ಕಳಿಬ್ಬರು ಹೈಸ್ಕೂಲು ಮೆಟ್ಟಿಲು ಹತ್ತಿದ್ದರು. ಹುಟ್ಟಿದ ಮೂರನೆ ಮಗುವೂ ಬುದುಕಲಿಲ್ಲ. ‘ನಿನಗಿನ್ನೂ ವಯಸ್ಸಿದೆ ಕಣೋ ಈಗೆಲ್ಲಾ ವಿದ್ಯಾವಂತ ಗಂಡಸು ಓದಿ ನೌಕರಿ ಹಿಡಿದು ಮದುವೆ ಆಗೋದೇ ನಲವತ್ತಕ್ಕೆ… ಸುಮ್ನೆ ಮದುವೆ ಆಗಯ್ಯ’ ಅಂದವರೇ ಬಹಳ. ವನಜಳ ತಂಗಿ ವಿಮಳನ್ನು ಕೊಡಲು ಮಾವಯ್ಯ ಉತ್ಸುಕರಾಗಿದ್ದರು. ತಾಯಿ ದೇವರ ಸೃಷ್ಟಿ, ಗಂಡಿನ ಬತ್ತದ ಕಾಮ ಸ್ವಾರ್ಥ ಲಾಲಸೆಗಳಿಂದಾಗಿ ರೂಪ ತಾಳುವ ಮಲತಾಯಿ ಮಾನವನ ಸೃಷ್ಟಿ ಅನಿಸುತ್ತದೆ. ಯಾವತ್ತು ತನ್ನ ಅನುಕೂಲಕ್ಕಾಗಿ ಸೃಷ್ಟಿಸಿಕೊಂಡ ಯಾವುದೂ ಕೇವಲ ಕುಂಡದಲ್ಲಿ ಬೆಳದ ಗಿಡದಂತೆ ಅನ್ನಿಸಿದಾಗ ಆಶೆಗಳಿಗೆ ಶರಣಾಗಿರಲಿಲ್ಲ. ಮುಖ್ಯವಾಗಿ ನನ್ನ ಇಬ್ಬರು ಮಕ್ಕಳು ಮಹಾ ಬುದ್ದಿವಂತರು. ಮೀಸಲಾತಿ ಭಾಗ್ಯ ಕಾಣದ ಜಾತಿಯಲ್ಲಿ ಹುಟ್ಟಿದರೂ ಓದಿನಲ್ಲಿ ಗಟ್ಟಿಗರು.  ನಾನೇನು ಅವರಿಗಾಗಿ ಹೆಚ್ಚು ಖರ್ಚು ಮಾಡುವ ಪರಿಸ್ಥಿತಿಯಲ್ಲಿ ಇದ್ದವನಲ್ಲ. ಫ್ರೀಶಿಪ್‌ ಸ್ಕಾಲರ್‌ಶಿಪ್‌ಗಳಲ್ಲೇ ಓದು ಸಾಗಿಸಿದ ಪ್ರತಿಭಾವಂತರು. ಅವರಿಗೆ ಬೇಕಾದಾಗ ಒಂದಿಷ್ಟು ಪುಸ್ತಕಗಳು ಅಷ್ಟಿಷ್ಟು ಖರ್ಚಿಗೆ ಹಣ ಒದಗಿಸಿಕೊಟ್ಟರಾಯಿತು. ಓದಲೆಂದೇ ಹುಟ್ಟಿಬಂದವರಂತೆ ಹಗಲು ರಾತ್ರಿ ಒಂದು ಮಾಡಿ ತಪಸ್ಸಿನಂತೆ ಓದಿಗೆ ಕೂತುಬಿಡುತ್ತಿದ್ದರು. ಮಲತಾಯಿಯನ್ನು ತಂದು ಅವಳಿಗೆ ದಾಸನಾಗಿ ಮಕ್ಕಳ ಭವಿಷ್ಯ ಹಾಳುಗೆಡವಬೇಡವೆಂದು ಮನಸ್ಸು ಚಂಡಿ ಹಿಡಿಯಿತು. ವನಜ ತನ್ನ ದುಡಿಮೆಗೆ ಜಿಪುಣತನಕ್ಕೆ ಕೋಪತಾಪಗಳಿಗೆ ಹೊಂದಿಕೊಂಡವಳು. ನಾನೊಬ್ಬ ಪಿಗ್ಮಿ ಕಲೆಕ್ಟರ್. ಊರೂ ಕೇರಿ ಅಲೆದು ಪಿಗ್ಮಿ ಕಟ್ಟಿಸಿಕೊಂಡು ಅದರಿಂದ ಬರುವ ಮೂರು ಸಾವಿರ ಕಮಿಷನ್ ಹಣದಿಂದ ಸಂಸಾರವನ್ನು ಸರಿದೂಗಿಸಬೇಕಿತ್ತು, ಮಕ್ಕಳಿಗೂ ಯೋಗ್ಯ ವಿದ್ಯಾಭ್ಯಾಸ ನೀಡಬೇಕಿತ್ತು, ನನ್ನಂತೆ ಅವರೂ ಪಿಗ್ಮಿ ಕಲೆಕ್ಟರ್’ಗಳಾಗಬಾರದಲ್ಲವೆ. ಮಕ್ಕಳ ಭವಿಷ್ಯಕಾಗಿ ನನ್ನ ವಾಮೋಹ ವಾಂಛೆಗಳನ್ನೆಲ್ಲಾ ಹೂತುಬಿಟ್ಟೆ.

ಬೆಳಗು ಹರಿವ ಮೊದಲೆ ಎದ್ದು ತಿಂಡಿ ಮಾಡಬೇಕು. ಮಕ್ಕಳಿಗೆ ತಿನ್ನಿಸಿ ಕಾಲೇಜಿಗೆ ಕಳಿಸಬೇಕು. ನಂತರ ಅಡಿಗೆ ಬೇಯಿಸಿ ಕೆಲೆಕ್ಷನ್ಗೆ ಹೊರಡಬೇಕು. ಇದ್ದ ಒಂದು ಲಡಾಸು ಸೈಕಲ್ ಅದೇ ನನ್ನ ಸಂಗಾತಿ, ಊರು ತುಂಬಾ ಬಿಸಿಲಲ್ಲಿ ಅಲೆಯುತ್ತಿದ್ದೆ, ಮಕ್ಕಳು ಯಾವಾಗ ಬಂದು ಬಡಿಸಿಕೊಂಡು ಉಣುತ್ತಿದ್ದವೋ. ಎಂದೂ ತಣ್ಣನೆ ಊಟವೇ ಅವಕ್ಕೆ ಗತಿ. ನಾನು ಮನೆಗೆ ಬರುವುದೇ ರಾತ್ರಿ, ಓದುತ್ತಾ ಕೂತ ಮಕ್ಕಳನ್ನು ನೋಡೋವಾಗ ಆಯಾಸವೆಲ್ಲಾ ಬಿಸಿಲಿಗಿಟ್ಟ ಮಂಜಿನಂತಾಗಿ ಮತ್ತೆ ನವಚೈತನ್ಯ ಪುಟಿಯುತ್ತಿತು. ರಾತ್ರಿ ಬಿಸಿ ಅನ್ನ ಮಾಡಿ ಬಡಿಸುತ್ತಿದ್ದೆ, ಅವರು ಜೊತೆಗೇ ಕೂತು ಊಟ ಮಾಡುವ ತಬ್ಬಿ ಮಲಗುವ ಸುಖಕ್ಕಿಂತ ಹೆಚ್ಚಿನ ಸುಖ ಪ್ರಪಂಚದಲ್ಲಿ ಮತ್ತೇನಿದೆ ಅನ್ನಿಸುವಾಗ ವನಜಳ ನೆನಪಾಗಿ ಕಣ್ಣು ತುಂಬಿ ಬರುತ್ತಿದ್ದವು.

ಹಬ್ಬ ಹರಿದಿನಗಳಲ್ಲಿ ಒಬ್ಬಟ್ಟು ಮಾಡಲು ಬಾರದಿದ್ದರೂ ಉಳಿದಂತೆ ಪಾಯಸ ಕೋಸಂಬರಿ ಕಡಬಿಗೇನು ಕೊರತೆ ಮಾಡುತ್ತಿರಲಿಲ್ಲ, ಫಾರ್ ಎ ಚೇಂಜ್ ಯಾರಾದರೂ ಮದುವೆ ಮುಂಜಿ ಅಂತ ಊಟಕ್ಕೆ ಕರೆದರೆ ತಪ್ಪಿಸುತ್ತಿರಲಿಲ್ಲ, ನನಗಂತೂ ಬಲು ಹುರುಪು. ಮಕ್ಕಳಿಗೆ ಸುತ್ರಾಂ ಇಷ್ಟವಿಲ್ಲದಿದ್ದರೂ ಒಂದು ದಿನವಾದರೂ ಅಪ್ಪ ಒಲೆಯ ಮುಂದೆ ಬೇಯುವುದು ತಪ್ಪಲಿ ಹೋಗೋಣ ನಡೆಯೋ ಅನ್ನುತ್ತಿದ್ದ ಸಣ್ಣ ಮಗ ಹರಿ, ದೊಡ್ಡವ ಪವಮಾನನಿಗೆ ಅದೆಂತದೋ ಬಿಗುಮಾನ. ಬೆಳೆಯುತ್ತಾ ಹೋದಂತೆ ಇಬ್ಬರ ಗುಣ ಸ್ವಭಾವ ಅಜಗಜಾಂತರವಾದಾಗ ನನ್ನಲ್ಲಿ ಅಚ್ಚರಿ. ಮಕ್ಕಳನ್ನು ತಬ್ಬಿ ಮಲಗುವ ಸುಖವನ್ನು ಮೊದಲ ಬಾರಿಗೆ ಕಿತ್ತುಕೊಂಡಿದ್ದು ಅವರ ಓದು.

ರಾತ್ರಿಯೆಲ್ಲಾ ಓದುವ ಮಧ್ಯೆ ಎದ್ದು ಕಾಫಿ ಮಾಡಿಕೊಡುವುದರಲ್ಲಿ ನನಗೊಂದು ಧನ್ಯತೆ. ಮತ್ತಷ್ಟು ಹೊಸ ಅಂಗಡಿಗಳು, ಮನೆಗಳು, ಕ್ಲಬುಗಳನ್ನೂ ಬಿಡದೆ ಸುತ್ತಿ ಪಿಗ್ಮಿ ಕಲೆಕ್ಟ್ ಮಾಡುತ್ತಿದ್ದೆ. ಚಿಕ್ಕವನು ಎಸ್.ಎಸ್.ಎಲ್.ಸಿ. ಮೆರಿಟ್‌ನಲ್ಲಿ ಮುಗಿಸಿದರೆ, ದೊಡ್ಡವನು ಮೆಡಿಕಲ್‌ನಲ್ಲಿ ಕೊನೆ ವರ್ಷದಲ್ಲಿದ್ದ, ಮೈತುಂಬಾ ಸಾಲವೂ ಇತ್ತು. ನನ್ನ ಶ್ರಮ ಮಕ್ಕಳ ಪರಿಶ್ರಮವನ್ನು ಕಣ್ಣಾರೆ ಕಾಣುವ ನೆರೆಹೊರೆಯವರು ಸಾಲ ಕೇಳಿದರೆ ಎಂದೂ ಇಲ್ಲವೆನ್ನಲಿಲ್ಲ, ಹೀಗಾಗಿ ಬಂಧು ಬಳಗದವರಲ್ಲಿ ನಾನೆಂದೂ ಕೈ ಚಾಚುವ ಪ್ರಮೇಯವೇ ಬರಲಿಲ್ಲ.

ಮೆರಿಟ್‌ಗಳಲ್ಲಿ ಪಾಸಾದ್ದರಿಂದ ಕೆಲಸವೂ ತಾನಾಗಿಯೇ ಹುಡುಕಿಕೊಂಡು ಬಂದವು. ಅದ್ಹೇಗೆ ಬೆಳೆದು ದೊಡ್ಡವರಾದರೋ ದೇವರೇ ಬಲ್ಲ! ಮಕ್ಕಳಿಗೀಗ ಮದುವೆ ವಯಸ್ಸು. ಸ್ವಂತ ಗೂಡಿಲ್ಲದ ಹೊಲ ಮನೆ ಕ್ಯಾಷೂ ಇಲ್ಲದ ಪಿಗ್ಮಿ ಕಲೆಕ್ಟರನ ಸಂಬಂಧ ಯಾರಪ್ಪ ಬೆಳೆಸುತ್ತಾರೆಂಬ ಹಪಹಪಿಕೆ ನನ್ನನ್ನು ಆವರಿಸಿರುವಾಗಲೆ ಸಂಬಂಧಗಳು ತಾವಾಗಿಯೇ ಹುಡುಕಿಕೊಂಡು ಬಂದವು. ಹರಿಯನ್ನು ಮದುವೆಯಾದವಳು ಅದೇ ಕಾಲೇಜಿನ ಪ್ರೋಫೆಸರನ ಮಗಳು. ಆಕೆ ಕೂಡ ಲೆಕ್ಚರರ್, ಇನ್ನು ಡಾಕ್ಟರ್ ಪವಮಾನನಿಗೆ ಸಿಕ್ಕ ಹೆಂಡತಿ ಡಾಕ್ಟರಿಣಿ. ಎಲ್ಲಾ ಮಾಯಾ ಬಜಾರ್ ಸಿನಿಮಾದಲ್ಲಿ ನಡೆದಂತೆ ನಡೆದಾಗ ನನ್ನನ್ನು ಯಾರೂ ಆಗ ಕೇಳುವವರೇ ಇಲ್ಲ. ಮದುವೆ ಖರ್ಚಿಗೆಂದು ಮತ್ತೊಂದಿಷ್ಟು ಯಥೋಚಿತವಾಗಿ ಸಾಲ ಮಾಡಿದೆ. ಪಿಗ್ಮಿಗೆ ಹೋಗುವುದನ್ನೇನು ನಿಲ್ಲಿಸಲಿಲ್ಲ. ಆದರೆ ರಾತ್ರಿ ವಿಪರೀತ ಸುಸ್ತು. ಮನೆಗೆ ಹಿಂದಿರುಗುವ ಹೊತ್ತಿಗೆ ಸೊಸೆ ಮಕ್ಕಳು ರೂಮು ಸೇರಿರುತ್ತಿದ್ದರು ನಾನೇ ಬಡಿಸಿಕೊಂಡು ತಿನ್ನಬೇಕು, ಎಲ್ಲಾ ಅವರವರ ಕೆಲಸ ಕಾರ್ಯ ಸ್ಟೂಡೆಂಟ್ಸು, ಪೇಷಂಟ್ಸು ಯೋಗಕ್ಷೇಮದಲ್ಲೇ ತಲ್ಲಿನರಾಗುತ್ತಿದ್ದುದರಿಂದ ಯಾರಿಗೂ ನನ್ನನ್ನು ಮಾತನಾಡಿಸಲೇ ಪುರುಸೊತ್ತಿಲ್ಲ. ಬರಬರುತ್ತಾ ಅದೇ ಅಭ್ಯಾಸವಾಗಿ ಹೋಯಿತೋ ಎಂಥದೋ. ನನಗೋ ಮಕ್ಕಳೊಂದಿಗೆ ಕೂತು ಮಾತನಾಡುವ ಹಂಬಲ. ಹೇಗಿದ್ದವರು ಹೇಗಾದೆವು! ದೇವರು ಎಂತಹ ಕರುಣಾಮಯಿ ಎಂದೆಲ್ಲಾ ಹೇಳಿಕೊಳ್ಳುವ ಆಶೆ. ನಮ್ಮನ್ನು ಆಗ ತಿರಸ್ಕಾರದಿಂದ ಕಂಡ ಬಳಗ ಈಗ ಎಡತಾಕುವ ಬಗ್ಗೆ ಮಕ್ಕಳಲ್ಲಿ ಬೈದುಕೊಳ್ಳುವ ಚಪಲ. ಬರುವ ಬಳಗವೆಲ್ಲಾ ಮಕ್ಕಳಿಗಾಗಿಯೇ ಬರುತ್ತಿದ್ದರು. ನನ್ನ ಕಡೆ ಕಾಟಾಚಾರಕ್ಕೆ ನಗೆ ಬೀರಿದರೆ ನನ್ನ ಅವರ ಸಂಬಂಧ ಮುಗಿಯಿತು. ಅದೇನಾದರೂ ಆಗಲಿ ಮಕ್ಕಳ ದುಡಿಮೆ ದರ್ಪ ಗಣ್ಯರೊಂದಿಗಿನ ಒಡನಾಟ ನೋಡುವಾಗ ಕಣ್ಣಿಗೆ ಹಬ್ಬ, ನನ್ನ ಪಿಗ್ಮಿ ಕಲೆಕ್ಷನ್ನಿನ ಹಣ ಯಾರಿಗೆ ಬೇಕು. ಯಾರೂ ಕೇಳುತ್ತಲೂ ಇರಲಿಲ್ಲ.

ಒಂದು ದಿನ ಲಡಾಸು ಸೈಕಲ್ ಮೇಲೆ ಬರುವಾಗ ಆಯತಪ್ಪಿ ಬಿದ್ದೆ, ಕಾಲಿಗೆ ಪೆಟ್ಟಾಯಿತು. ಮಕ್ಕಳಿಗೆ ಬೇಸರ. ಕಾಲಿಗೆ ಆದ ಗಾಯವೇಕೋ ಮಾಗಲಿಲ್ಲ, ವ್ರಣವಾಯಿತು. ಮೂತ್ರ ರಕ್ತ ಪರೀಕ್ಷೆ ಮಾಡಿಸಿದ ಮಗ ಡಯಾಬಿಟೀಸ್ ಅ೦ದ. ಬೇಕಾದ್ದನ್ನು ತಿನ್ನುವ ಶಕ್ತಿ ಬಂದಾಗ ಸಿಹಿಯೇ ಮುಟ್ಟದಂತ ಕಾಯಿಲೆ – ನಗು ಬಂತು. ‘ಇನ್ನು ನೀನು ಯಾರಿಗಾಗಿ ದುಡಿತಿದ್ದಿಯಪ್ಪಾ? ನೀನು ಈ ರೀತಿ ಅಂಗಡಿ ಮನೆ ಸುತ್ತೊದು ನಮ್ಮ ಸ್ಟೇಟಸ್ಗೂ ಅವಮಾನ ಇನ್ನು ಸಾಕು ಮಾಡು’ ಒಂದು ನಮೂನೆ ಗದರುವ ಪರಿ ಕಾಳಜಿ ತೋರಿದರು. ನನಗೂ ಅರವತೈದು ದಾಟಿದ್ದು ಮನಸ್ಸಿನ ಮಾತು ದೇಹ ಕೇಳುತ್ತಿರಲಿಲ್ಲ, ಪಿಗ್ಮಿಯನ್ನು ಅರೆಮನಸ್ಸಿನಿಂದಲೇ ನಿಲ್ಲಿಸಿದೆ. ಕೂತೀಗ ಮಾಡಬೇಕೇನು?

ಸೊಸೆಯರಿಗೆ ಅಡಿಗೆ ಸಹಾಯಕ್ಕೆ ನಿಂತೆ. ಅವರು ಬಿಜಿ ಇದ್ದಾಗ ನಾನೇ ಮಾಡಿ ಬಡಿಸಿದೆ. ‘ನಮ್ಮಪ್ಪ ನಳಮಹಾರಾಜ, ಈರುಳ್ಳಿ ಬೇಳೆ ಹುಳಿ, ಗೊಜ್ಜು ಮಾಡಿದ ಅಂದ್ರೆ ನನಗಂತೂ ಡಬ್ಬಲ್ ಹೊಟ್ಟೆ’ ಅಂದ ಡಾಕ್ಟರ್, ‘ಅಪ್ಪಾ ನಾಳೆ ಬಿಸಿಬೇಳೆಬಾತ್ ಮೊಸರು ಅನ್ನ ರೆಡಿ ಮಾಡು ಎಲಾದರೂ ಹೊರಗಡೆ ಹೋಗಿಬರೋಣ’ ಅಂದ ಲೆಕ್ಟರರ್, ಉತ್ಸಾಹದಿಂದ ಮಾಡಿದೆ. ಹೊರಗೆ ಹೊರಡಲು ಸಿದ್ದನಾಗಿ ಹಳೆ ಪಂಚೆ ಅಂಗಿ ಏನೆಲ್ಲಾ ಐರನ್ ಮಾಡಿಕೊಂಡೆ. ತಿಂಡಿ ತೀರ್ಥ ಎಲ್ಲಾ ಕಾರಲ್ಲಿಟ್ಟು ಒಳಬಂದು ನೀಟಾಗಿ ಪಂಚೆಯುಟ್ಟು ಅಂಗಿ ತೊಟ್ಟು ಬರುವುದರಲ್ಲಿ ಕಾರು ಗೇಟು ದಾಟಿ ಬೀದಿಯಲ್ಲಿ ಓಡುತ್ತಿತ್ತು. ಶಿವಪೂಜೆಯಲ್ಲಿ ಕರಡಿಗೆ ಏಕೆ ಎಂದು ನಗುತಾ ಗೇಟ್ ಹಾಕಿಕೊಂಡು ಒಳಬಂದೆ. ಮೈಮೇಲಿನ ಇಸ್ತ್ರಿ ಬಟ್ಟೆಗಳು ನನ್ನೊಂದಿಗೆ ನಗೆಯಾಡಿದಂತಾಯಿತು ಅರ್ಥವಾಗಲಿಲ್ಲ.

ದಿನಗಳೆದ೦ತೆ ಸೊಸೆಯರು ಅಡಿಗೆಮನೆ ಸುಳಿಯದಂತಾದರು. ಹೊರಗೆಲಸ ಕೆಲಸದವಳದಾದರೂ ಅಡಿಗೆ ಮನೆಗೆಲೆಸ ನನ್ನ ಪಾಲಿಗೇ ಬಿದ್ದಿತು. ಕಷ್ಟಪಟ್ಟು ದುಡಿದು ಮನೆಗೆ ಬರುವ ಮಕ್ಕಳಿಗೆ ರುಚಿರುಚಿಯಾಗಿ ಮಾಡಿಬಡಿಸುವುದರಲ್ಲೂ ಒಂತರಾ ಸುಖವಿತ್ತು. ಆದರೆ ಅವರೆಷ್ಟೋ ಸಲ ಪಾರ್ಟಿ ಫಂಕ್ಷನ್‌ಗಳೆಂದು ಹೋಟೆಲ್‌ಗಳಲ್ಲಿ ಊಟ ಮುಗಿಸಿ ಬರುತ್ತಿದುದೇ ಹೆಚ್ಚು. ಒಬ್ಬನೇ ಕೂತು ಊಟ ಮಾಡುವಾಗ ಮಲಗುವಾಗ ಹೇಳಿಕೊಳ್ಳಲಾಗದಂತಹ ಸಂಕಟ. ಪುಟ್ಟ ಮನೆಯಲ್ಲಿ ಒತ್ತರಿಸಿಕೊಂಡು ಮೈಮೇಲೆ ಕಾಲುಹಾಕಿ ಮುದುಡಿ ಮಲಗುವ ದಿನಗಳು ಅದೆಲ್ಲಿ ಹೋದವು? ದೆವ್ವದಂತಹ ಬಂಗಲೆಯ ಹಾಲ್‌ನಲ್ಲಿ ಒಂಟಿಯಾದ ನಾನು ಕೂಡ ದೆವ್ವದಂತಾಗಿಬಿಟ್ಟಿದ್ದೆ. ಮಕ್ಕಳು ಸೊಸೆಯರಿಗೆ ಮಾತನಾಡಿಸಲು ವೇಳೆಯಿಲ್ಲವೋ ಬೇಕಿಲ್ಲವೋ ಗೊತ್ತಾಗದಂತಹ ಸ್ಥಿತಿ. ಹಿಂದೆ ಕಷ್ಟಸುಖ ಹಂಚಿಕೊಳ್ಳಲು ನೆರೆಯವರಿದ್ದರು. ಇಲ್ಲಿನ ಬಂಗಲೆ ಮನೆಗಳವರೂ ಮಾತು ಮರೆತವರೆ. ಅಚ್ಚರಿಯೆಂದರೆ ನನ್ನ ಸೊಸೆಯರು ಸಾಕಿದ ಮುದ್ದಾದ ನಾಯಿಮರಿಗಳೊಂದಿಗೆ ಬಾಯಿತುಂಬಾ ಮಾತನಾಡುತ್ತಿದುದುಂಟು. ಮತ್ತೆ ಹರಿ, ಪವಮಾನ ಕೂಡ ಅವುಗಳೊಂದಿಗೆ ಬೆಳಗಿನ ವಾಕ್ ಹೋಗುತ್ತಿದ್ದರು. ಕೆಲಸದಿಂದ ಬಂದೊಡನೆ ಮೊದಲ ಪ್ರೀತಿ ಅವಕ್ಕೆ ಅನ್ನ, ಹಾಲು ಕಾಣಿಸುತ್ತಿದ್ದವನು ನಾನು. ಆದರೆ ಪವಮಾನ ನಾಯಿಗಳಿಗೆಂದೇ ಮಾಂಸ ತಂದು ಹಾಕುವಾಗ ತಡೆಯಲಾಗಿರಲಿಲ್ಲ. ಪಿಗ್ಮಿಗೆ ಹೋಗುವ ದಿನಗಳಲ್ಲೂ ದೇವರು, ಧರ್ಮ, ಸಂಧ್ಯೆ ಮರೆತವನಲ್ಲ, ಹಬ್ಬ ಹರಿದಿನ ಶ್ರಾದ್ದ ಬಿಟ್ಟವನಲ್ಲ. ‘ಅವೇನು ಬೀದಿ ನಾಯಿಗಳಲ್ಲ. ಅವುಗಳ ಕಾಸ್ಟ್ ಏನ್ ಗೊತ್ತಾ? ಇಂತದ್ದಕ್ಕೆಲಾ ತಲೆ ಹಾಕ್ಬೇಡ ಸುಮ್ನಿರು’ ಡಾಕ್ಟರ್ ಜಬರಿಸಿದ. ಮನೇಲಿ ಮಾಂಸಮದ್ದು ತರಬಾರದು ಅಂತ ತಿಳಿಹೇಳಿದೆ. ಮಕ್ಕಳಿಬ್ಬರೂ ನಕ್ಕುಬಿಟ್ಟರು. ನಾಯಿ ತಿಂದುಬಿಟ್ಟ ಅನಿಷ್ಟವನ್ನು ಎತ್ತಿಹಾಕಿ ನೆಲ ತೊಳೆದು ಸ್ನಾನ ಮಾಡಿ ಮಡಿ ಮಾಡಿಕೊಳ್ಳುತ್ತಿದ್ದೆ. ಅಲ್ಲಿಗೆ ನನ್ನ ಸಿಟ್ಟು ಶಾಂತವಾಗುತ್ತಿತ್ತು.

ಈ ಜನ ಹೊರಗಡೆ ಬಾರು ಕ್ಲಬ್ಬಗಳಿಗೆ ಹೋದಾಗ ತಿಂದು ಕುಡಿದು ಬರುವ ಬಗ್ಗೆ ಮೇಷ್ಟ್ರು ಅನಂತಕೃಷ್ಣ ಒಮ್ಮೆ ಹೇಳಿ ವ್ಯಂಗ್ಯ ನಗೆ ಬೀರಿದ್ದ. ಮನೆ ತುಂಬಾ ಬರೇ ಇಂಗ್ಲೀಷ್ ಮಾತೆ. ನಾಯಿಗಳ ಜೊತೆಗೂ ಇಂಗ್ಲೀಷು! ನಾನು ಕನ್ನಡ ಮಾತನಾಡಿದರೆ ನಾಯಿಗಳು ಗುರ್‌ ಎನ್ನುತ್ತಿದ್ದವು.

ಮಕ್ಕಳ ಹುಟ್ಟುಹಬ್ಬ ಸೊಸೆಯರ ಹುಟ್ಟಹಬ್ಬಗಳು ಭರ್ಜರಿ ನಡೆಯುತ್ತಿದ್ದವು – ಸಿನೆಮಾ ಮಾದರಿ. ನಾನು ಬಾಂಕ್‌ನಲ್ಲಿ ಕೂಡಿಟ್ಟ ಪುಡಿಗಾಸಿನಲ್ಲೇ ಇವರಿಗೆ ಗಿಫ್ಟು ಕೊಟ್ಟು ಖುಷಿಪಡುತ್ತಿದ್ದೆ. ಶ್ರೀಮಂತರೆಲ್ಲಾ ಜಮಾಯಿಸುತ್ತಿದ್ದರು. ನನಗೆ ಅಂದು ರಜೆ. ಕಿಚನ್ಗೆ ಹೋಗುವಂತಿಲ್ಲ. ಭಟ್ಟನೊಬ್ಬ ಬಂದು ಸಿಹಿ ಮಾಡಿದರೂ ರಾತ್ರಿಗೆಲ್ಲಾ, ಐಶ್ವರ್ಯ ಬಾರ್’ನಿಂದ ಪೊಟ್ಟಣಗಳಲ್ಲಿ ಕಟ್ಟಿದ ಮಾಂಸ, ಮೀನು, ಕ್ಯಾನ್‌ಗಳಲ್ಲಿ ಶೀಸೆಗಳೂ ಬರುತ್ತಿದ್ದವು. ಮಧ್ಯರಾತ್ರಿ ತನಕ ನಡೆವ ಪಾರ್ಟಿಗಳಲ್ಲಿ ಹಾಡು ಕೆಟ್ಟ ಕುಣಿತಗಳೂ ಇರುತ್ತಿದ್ದವು. ‘ಏಯ್! ಏನೋ ನಿಂತಿದ್ದಿ… ಚಿಕನ್ ಬಡಿಸೋ’ ಅಂದನೊಬ್ಬ ಸೂಟಿನವನು. ‘ಮುದ್ಕಾ, ಗ್ಲಾಸ್ಗೆ ಸ್ವಲ್ಪ ಐಸ್ ಪೀಸ್ ಹಾಕೋ’ ಅಂದಳೊಬ್ಬಳು ಹೊಕ್ಕಳ ಕೆಳಗೆ ಸೀರೆ ಉಟ್ಟೊಳು. ಪ್ರತಿಭಟಿಸದಿದ್ದರೂ ದುರುಗುಟ್ಟಿ ನೋಡಿ ಅಡಿಗೆ ಮನೆ ಸೇರಿಕೊಂಡಿದ್ದೆ. ನನಗಾಗಿ ರಾಗಿ ಬಾಲ್ಸ್‌, ಗೋಧಿ ಅನ್ನ ಕಾದಿತ್ತು.

ಮಾರನೆ ದಿನ ನನ್ನ ಅನ್‌ಕಲ್ಚರ್ಡ್‌ ಬಿಹೇವಿಯರ್ ಬಗ್ಗೆ ಮಕ್ಕಳು ಸೊಸೆಯರು ತರಾಟೆಗೆ ತೆಗೆದುಕೊಂಡರು. ರೇಗಬೇಕೆನಿಸಿದರೂ ರೇಗಲಿಲ್ಲ. ರುಚಿಯಾಗಿ ಹೊಟ್ಟೆ ತುಂಬಾ ತಿನ್ನುವುದಕ್ಕೆಂದೇ ಮದುವೆ ಮನೆಗಳಿಗೆ ಮಕ್ಕಳೊಂದಿಗೆ ಹೋಗುತ್ತಿದ್ದ ದಿನಗಳು ನೆನಪಿಗೆ ಬಂದವು. ಮಕ್ಕಳಿಗೆ ತಿಂದುಂಡು ಚೆಲ್ಲುವಾಗ ಜಗಳವಾಡಿ ಮನಸ್ತಾಪ ಮಾಡಿಕೊಳ್ಳಬಾರದೆನಿಸಿತು. ‘ಈಗಿನ ಮಾಡರನ್ ಸೊಸೈಟಿಯಲ್ಲಿ ಇದೆಲ್ಲಾ ವೆರಿ ವೆರಿ ಕಾಮನ್ ಕಣೋ ಸುಬ್ಬು… ಹೊಂದಿಕೋಬೇಕಯ್ಯ, ಇದು ಅವರ ಕಾಲ ಕಣ್ಣಪ್ಪ’ ಅಂದ ಅನಂತಕೃಷ್ಣ. ‘ಜಾತಿ ಸಂಪ್ರದಾಯ ನೇಮ ನಿಷ್ಟೆ…’ ಬಡಬಡಿಸಿದೆ. ‘ಅದಕ್ಕೆಲಾ ಅವರೆಂದೋ ಎಳ್ಳು ನೀರು ಬಿಟ್ಟವರೆ… ನಿನಗೆ ಬೇಕೋ ನೀನ್ ಮಾಡ್ಕೋ’

‘ಇಂಥ ಮನೇಲಿ ನಾನಿರಬೇಕೆ!’

‘ಎಲ್ಲಿ ಹೋಗ್ತಿಯೋ ಸುಬ್ಬು… ನಿನಗೆಲ್ಲೈತೋ ಮನೆ?’ ಕುಹಕ ನಗೆ ಅನಂತನದು. ಹೌದು ನನಗೆಲ್ಲಿದೆ? ಮೊದಲ ಬಾರಿಗೆ ಎದೆಯಲ್ಲಿ ಛಳಕು ಕಂಡಿತು. ನನ್ನ ರೋಗದ ಪರೀಕ್ಷೆ ಮಾಡದಷ್ಟು ಮಗನಿಗೆ ಪೇಷೆಂಟುಗಳು. ನಾನೋ ಪುಗಸಟ್ಟೆ ಗಿರಾಕಿ ಬಾಯಿ ಚಪಲ ಬೇರೆ. ಸಿಹಿ ಕಂಡರೆ ಮನ ಜೋಕಾಲಿ ಆಡೋದು. ಇತ್ತೀಚೆಗೆ ಪದೆ ಪದೆ ಶುಗರ್ ಜಾಸ್ತಿ ಆಗಿ ನರಳುತ್ತಾ ನಲಗುವಂತಾಗಿಬಿಟ್ಟಿತು. ‘ಬಾಯಿ ಚಪಲ ಕಡಿಮೆ ಮಾಡ್ಕೋ. ಬೇಕಾದ್ದು ಇದೆ ಅಂತ ಸಿಕ್ಕಿದ್ದೆಲಾ ಮುಕ್ಕಿದರೆ ಹೀಗೆ ಆಗೋದು’ ಡಾಕ್ಟರ್ ಮಗ ಕೂಗಾಡಿದ. ಈಗೀಗ ಅವನು ರೇಗುವುದು ಅತಿಯಾಯಿತೆನಿಸಿತು. ಹರಿಯ ಮೇಲೂ ಅವನ್ದು ರೋಪೇ. ಹರಿ ಸೈನ್ಸ್ ಲೆಕ್ಟರರ್ ಅವನ ಹೆಂಡ್ತಿ ಮ್ಯಾಥ್ಸ್‌ನಲ್ಲಿ ಮುಂದು. ಮನೆ ತುಂಬಾ ಬೆಳಿಗ್ಗೆ ಸಂಜೆ ಟೂಶನ್ಗೆ ಬರುವ ಧಾಂಡಿಗರ ದಂಡು ಅವರ ವೆಹಿಕಲ್‌ಗಳ ಗದ್ದಲ. ಡಾಕ್ಟರನ ಹೆಂಡತಿಗೆ ಇದೊಂದು ತಲೆನೋವು, ಅವಳೇನು ಗಂಡನ ತಲೆ ತುಂಬುತ್ತಿದ್ದಳೋ!

‘ನೋಡಯ್ಯಾ ಹರಿ, ನಿಮ್ಮ ಟ್ಯೂಶನ್ಗೆ ಬೇರೆ ಕಡೆ ರೂಮ್ ಮಾಡಿಕೊಳ್ಳಿ, ಇದೇನ್ ಮನೇನಾ? ಕಾಲೇಜಾ?’ ಪವಮಾನ ರೇಗುತ್ತಿದ್ದ. ಹರಿ ಸೈರಿಸಿದರೂ ಅವನ ಹೆಂಡತಿ ಯಾಕೆ ಸೈರಿಸಿಯಾಳು. ‘ದಂಡಿಗಟ್ಟಲೆ ಪೇಷಂಟು ಮನೆಗೇ ಬರ್ತಾರಲ್ಲ ಇದೇನ್ ಮನೇನೋ ಆಸ್ಪತ್ರೆನೋ ಕೇಳಿ? ಯಾವಕ್ಕೆ ಏನು ರೋಗವೋ ನಾಳೆ ಇನ್‌ಫೆಕ್ಷನ್ ಆದ್ರೆ ಏನ್ ಗತಿ…. ಮೊದಲೇ ನಾನು ಪ್ರೆಗ್ನೆಂಟು’ ಹರಿಯ ಹೆಂಡತಿಯ ದಬಾವಣೆ ನನಗೂ ಹೌದೆನ್ನಿಸಿತು. ‘ನೋಡ್ರೋ ಇದೆಲ್ಲಾ ಮನೆಯವರೆಗೂ ಹಚೋಂಡ್ರೆ ಮನೆನಲ್ಲೂ ನೆಮ್ಮದಿ ಇರೋದಿಲ್ಲ. ನಿಮ್ಮ ಪೇಷೆಂಟ್ಸ್‌ಗಾಗಿ ಒಂದು ಕ್ಲಿನಿಕ್ ಮಾಡ್ಕೊಳ್ಳಿ…. ನೀವೂ ಅಷ್ಟೆ ಟೂಶನ್ಗೆ ಬೇರೆಡೆ ವ್ಯವಸ್ಥೆ ಮಾಡ್ರಪ್ಪಾ ಪುಟ್ಟ ವಿಷಯಕ್ಕೆ ಅಣ್ಣತಮ್ಮನ ಮನಸ್ಸು ಕೆಡಬಾರ್‍ದು’ ತಿಳಿ ಹೇಳಿದೆ. ಯಾರ ಕಿವಿಗೂ ನನ್ನ ಮಾತು ಬಿದ್ದಂತೆ ತೋರಲಿಲ್ಲ. ಮನೆಯಲ್ಲಿ ಆಗಾಗ ಸಣ್ಣಪುಟ್ಟ ಜಗಳ ಕಿಡಿ ಹೊತ್ತಿದ್ದು ಹೊಗೆಯಾಡುತ್ತಲೇ ಇತ್ತು.

ಸಾಲದಕ್ಕೆ ನನಗೆ ಮೂತ್ರ ಹೋಗೋದೇ ಕಷ್ಟವಾಯಿತು. ಆಸ್ಪತ್ರೆ ಸೇರಿಸಿದರು. ಅಡಿಗೆಯವನೊಬ್ಬನನ್ನು ಗುರುತು ಮಾಡಿಕೊಂಡರು. ಅವನೇ ಆಸ್ಪತ್ರೆಗೆ ಊಟ ತರುತ್ತಿದ್ದ. ಕೆಥೆಡ್ರಾ ಏರಿಸಿ ಮೂತ್ರ ತೆಗೆದರು. ಒಂದೆರಡು ದಿನದಲ್ಲಿ ಪೆರಾಲಿಸೆಸ್ ಸ್ಟ್ರೋಕ್ ಹೊಡೆಯಿತು. ‘ಮೈಲ್ಡ್ ಸ್ಟ್ರೋಕ್’ ಅಂದರು ದೊಡ್ಡ ಡಾಕ್ಟರ್. ಆದರೂ ಜೀವ ಬಾಯಿಗೆ ಬಂದಂತಾಯಿತು. ಮಕ್ಕಳ ಮುಖದಲ್ಲಿ ನಿರ್ಲಿಪ್ತ ಭಾವ. ಸೊಸೆಯರು ಮೊದಲೆರಡು ದಿನ ಬಂದವರು ಮತ್ತೆ ತಲೆ ಹಾಕಲಿಲ್ಲ. ಆಸ್ಪತ್ರೆಯಲ್ಲಿ ಕೆಲಸ ಮಾಡುವ ವೈದ್ಯ ಸೊಸೆ ಕೂಡ ತನ್ನ ಕೋಣೆಗೆ ಬಾರದಷ್ಟು ಬಿಜಿ. ತಡೆಯಲಾರದೇ ಒಮ್ಮೆ ಪವಮಾನನನ್ನು ಕೇಳಿಯೇ ಬಿಟ್ಟೆ, “ಆಕೆ ಪ್ರಸೂತಿ ತಜ್ಞೆ, ಆಕೆ ಬಂದೇನ್ ಮಾಡ್ಬೇಕು.. ನೀವು ಆಕೆ ಕೇಸ್ ಅಲ್ಲ” ಗದರಿದ್ದ.

“ಕೇಸು ಅಲ್ಲ, ನಿಜ. ಮಾವನಲ್ಲವೇನಯ್ಯಾ?” ಕೇಳಬೇಕೆಂದ ಮಾತುಗಳೆಲ್ಲಾ ಗಂಟಲಲ್ಲೇ ಸಿಕ್ಕಿಕೊಂಡವು. ತಿಂಗಳುಗಟ್ಟಲೆ ಆಸ್ಪತ್ರೆಯಲ್ಲೇ ಬಿಟ್ಟರು. ಅಡಿಗೆಯವನಿಗೆ ನಾನೆಂದರೆ ತಾತ್ಸಾರ. ಅವನು ನನಗಾಗಿಯೇ ಬೇರೆ ಅಡಿಗೆ ಮಾಡಬೇಕಿತ್ತು. ಒಂದೊಂದು ದಿನ ಅನ್ನ ಸಾಂಬಾರೇ ತರುತ್ತಿದ್ದ. ಹೆದರಿಕೊಂಡೇ ಪುಷ್ಕಳವಾಗಿ ತಿಂದು ಬಿಡುತ್ತಿದ್ದೆ. ಆಗೀಗ ಊಟವನ್ನೇ ತರುತ್ತಿರಲಿಲ್ಲ. ಆಸ್ಪತ್ರೆಯಲ್ಲಿ ಕೊಡುತ್ತಿದ್ದ ಊಟಕ್ಕೇ ಒಗ್ಗಿಕೊಂಡೆ. ಮಗ ಆಸ್ಪತ್ರೆಯಲ್ಲಿದ್ದುದರಿಂದ ಆಸ್ಪತ್ರೆಯವರೇನು ತಿರಸ್ಕಾರವಾಗಿ ಕಾಣುತ್ತಿರಲಿಲ್ಲ. ಆದರೆ ಮಗ ತೋರುವ ತಿರಸ್ಕಾರ ಅವರಿಗೆ ಅರ್ಥವಾಗಿತ್ತು. ಮೊದಲಿನ ಅಪ್ಯಾಯತೆ ಮಾಸಿತ್ತು. ಬೆರಳು
ಗಾಯದ್ದೇ ನೆಪವಾಗಿ ಗಾಂಗ್ರಿನ್ ಆಯಿತು. ಯಮಯಾತನೆ ತಾಳಲಾಗದೆ ಬೊಬ್ಬೆ ಹೊಡೆದಾಗ ಕಾಲಿನ ಬೆರಳುಗಳನ್ನೇ ತುಂಡು ಮಾಡಿ ದೊಡ್ಡ ಬಾಂಡೇಜ್ ಕಟ್ಟಿದರು.

ದಿನಗಳು ಕಳೆದಂತೆ ಕೋಲೂರಿಕೊ೦ಡು ಓಡಾಡುವಂತಾದೆ. ಯಾರಲೂ ಮನೆಗೆ ಕರೆದೊಯುವ ಮಾತನ್ನೇ ಆಡರು. ಮುಖವೇ ತೋರಿಸರು. ನನಗೋ ಮನೆ ಸೇರುವ ತವಕ. ಮಕ್ಕಳಿಬ್ಬರು ಈಗ ಬೇರೆ ಮನೆಗಳನ್ನು ಮಾಡಿರುವ ಸುದ್ದಿ ಮುಟ್ಟಿಸಿದ್ದ ಅಡಿಗೆ ಭಟ್ಟ. ನನ್ನ ಮೈ ಪಾದರಸವಾಯಿತು. ಒಮ್ಮೆ ಹೇಳಿ ಕಳಿಸಿ ಕರೆಸಿಕೊಂಡೆ. ಗಾಬರಿಯಾದಂತೆ ಕಂಡರು. ‘ನಾವು ಏನಾಯ್ತೋ ಹೋಗೇ ಬಿಟ್ಟೆಯೇನೋ ಅಂತ ಓಡಿ ಬಂದ್ವಿ… ಯಾಕೆ ಕರಸ್ದೆ ನಮ್ಮನ್ನ’ ಸಿಡಿಮಿಡಿಗುಟ್ಟಿದರು. ‘ನನ್ನ ಜೀವನ ಇರೋವರ್ಗ ನೀವು ಬೇರೆ ಆಗಬೇಡ್ರೋ, ಒಂದಾಗಿ ಬಾಳ್ರಪ್ಪಾ, ಬೇರೆ ಯಾಕ್ ಮನೆ ಮಾಡಿದೊ, ಮುಠಾಳ್ರಾ’ ಹಲುಬಿದೆ. ಲೆಕ್ಟರರ್ ಮಾತೇ ಆಡಲಿಲ್ಲ, ‘ನೀನೆಲ್ಲಿ ಸಾಯ್ತೀಯಾ…? ನೀನು ಸಾಯೋವರ್ಗೂ ಕಾಯೋಕೆ ಆಗುತ್ತಾ ಇದೆಲ್ಲಾ ಸೆಂಟಿಮೆಂಟಲ್ ಡೈಲಾಗ್ ಸಿನಿಮಾಕ್ಕೇ ಸರಿ’ ಡಾಕ್ಟರ್ ಕೊಕ್ಕನೆ ನಕ್ಕುಬಿಟ್ಟ. ಮುಖದ ಮೇಲೆ ಕುದಿವ ನೀರು ಚೆಲ್ಲಿದಂತಾಯಿತು.

ತಿಂಗಳುಗಳು ಉರುಳಿದರೂ ಮನೆ ಮುಖ ನೋಡಲಾಗಲಿಲ್ಲ. ಆಸ್ಪತ್ರೆ ವಾಸ ಖಾಯಂ ಆಯಿತು. ಆವಾಗಾವಾಗ ಅನಂತಕೃಷ್ಣ ಮಾತ್ರ ಬಂದು ಹೋಗುತ್ತಿದ್ದ. ನನ್ನ ಮಕ್ಕಳು ಮಾಡುವುದೆಲ್ಲಾ ಅವನ ದೃಷ್ಟಿಯಲ್ಲಿ ಸರಿ! ‘ನನ್ನನ್ನು ನನ್ನ ಹೆಂಡ್ತಿನೂ ನನ್ನ ಮಕ್ಕಳು ಹೊರಹಾಕೋ ಮೊದ್ಲೆ ನಾವೇ ಬ್ಯಾರೆ ಬಂದುಬಿಟ್ವಿ ಕಣಯ್ಯ, ಪೆನ್‌ಶನ್‌ನಲ್ಲಿ ಹೇಗೋ ಜೀವನ ಸಾಗುತ್ತೆ. ಇದೆಲಾ ಮಾರ್ಡನ್ ಸೊಸೈಟಿಯಲ್ಲಿ ಕಾಮನ್’ ಅನ್ನುವ ಅವನು ನನ್ನಲ್ಲಿ ಭಯ ಹುಟ್ಟಿಸಿ ಬಿಡುತ್ತಿದ್ದ. ಬ್ಯಾಂಕಲಿಟ್ಟ ಬಿಡಿಗಾಸಲ್ಲಿ ಅದು ಇದು ಔಷಧಿ ತರಿಸಿಕೊಂಡಿದ್ದೆ. ಬಾಲೆನ್ಸ್ ‘ನಿಲ್’ ಆಗಿತ್ತು ಪೆನ್ಶನ್ ಬರಲು ನಾನ್ ಯಾವ ಸರ್ಕಾರಿ ನೋಕ್ರಾ….. ಅನಾಥ ಪ್ರಜ್ಞೆ ಪರಚುತ್ತಿತು. ಆಸ್ಪತ್ರೆ ಊಟ ತಿಂದು ನಾಲಿಗೆ ಜಡುಗಟ್ಟಿ ಹೋಗಿತ್ತು.

ಒಮ್ಮೆ ದೊಡ್ಡ ಡಾಕ್ಟರ್ ರೌಂಡ್ಸ್ ಬಂದರು. ಕೇಳಿಯೇ ಬಿಟ್ಟೆ, ‘ನನ್ನನ್ನು ಯಾವಾಗ ಡಿಸ್ಚಾರ್ಜ್ ಮಾಡ್ರಿರಾ. ನಾನ್ ಚೆನ್ನಾಗೇ ಇದೀನಲ್ಲ’ ಅವರು ನಕ್ಕರು. ‘ಯಸ್, ಯು ಆರ್ ಫರ್ ಪೆಕ್ಟಿಲೀ ಆಲ್ರೈಟ್…’ ನೀವು ಯಾವಾಗ ಬೇಕಾದ್ರೂ ಹೋಗಬಹುದು. ಆದರೆ ನಿಮ್ಮೆ ಮಗ ಪವಮಾನ ಡಿಸ್ಚಾರ್ಜ್ ಮಾಡ್ಬೇಡಿ ಅಂತ ರಿಕ್ವೆಸ್ಟ್ ಮಾಡೊಂಡಿದಾನೆ. ಸಾರಿ ಪ್ಲೀಸ್…. ‘ಹಂಗೇನ್ರಿ? ಡಿಸ್ಚಾರ್ಜ್ ಮಾಡದಿದ್ರೆ ನಾನೇ ಹೋಗ್ತೀನೇಳ್ರಿ’ ರೇಗಾಡಿದೆ. ಆತ ಸುಮ್ಮನೆ ನಕು ಹೊರಟು ಹೋದ, ನರ್ಸ್‌ಗಳು ಮುಸಿಮುಸಿ ನಕ್ಕರು. ಇವರಿಗೆಲ್ಲಾ ವಯಸ್ಸೇ ಆಗೋದಿಲ್ಲವೇನೋ ಹಾಳಾದೋರು ಶಪಿಸಿದೆ. ನಿರ್ಧಾರ ಟಿಸಿಲೊಡೆಯಿತು.

ಅವತ್ತೇ ಆಸ್ಪತ್ರೆಗೆ ವಿದಾಯ ಹೇಳಿ ಕೋಲೂರುತ್ತಾ ಕಾಲೆಳೆಯುತ್ತಾ ಮನೆಗೆ ಬಂದೆ. ಬಲಗೈ ಬೇರೆ ಸ್ವಾಧಿನವಿರಲಿಲ್ಲ. ನಾನು ರೋಗಿಯಾದ್ದರಿಂದ ಡಾಕ್ಟರ ಮಗನ ಮನೆಗೇ ಕಾಲು ಕರೆತಂದಿತು, ಅವನ ಹೆಂಡತಿಯ ಅಪ್ಪ ಅಮ್ಮ ಸುಖಾಸೀನರಾಗಿದ್ದರು. ನನ್ನೆಡೆಗೆ ತಿಳಿನಗೆ ಬೀರಿದರು. ಮಗ ಗೇಟಿಗೇ ಧಾವಿಸಿದ. ‘ನಿನ್ನನ್ನು ಯಾವ ನನ್ಮಗ ಡಿಸ್ಚಾರ್ಜ್ ಮಾಡಿದೋನು? ಯಾಕೆ ಬಂದೆ ಇಲ್ಲಿಗೆ ಯಾರ್ ನೋಡೋತಾರೋ ಗೂಬೆ ನಿನ್ನಾ’ ಚೀರಾಡಿದ ಅವನ ಬಾಯಿಗೆ ಅಡೆತಡೆಯಿಲ್ಲ. ಅವನ ನಡವಳಿಕೆಯನ್ನು ಕಂಡು ಅವನ ಮಾವನಿಗೇ ನಾಚಿಕೆಯಾಗಿರಬೇಕು ಸಮಾಧಾನಪಡಿಸಲು ಎದ್ದು ಬಂದ. ಸೊಸೆ ತಿರುಗಿ ಸಹ ನೋಡಲಿಲ್ಲ. ‘ಕ್ಯೂ’ನಲ್ಲಿದ್ದ ರೋಗಿಗಳ ಕಣ್ಣಿಗೆ ನಾನು ಆಹಾರವಾದೆ. ‘ನೋಡ್ ಮಾವಯ್ಯ ಈ ಮುದ್ಕನ್ನ, ಆಸ್ಪತ್ರೆನಲ್ಲಿ ಯಾತಕ್ಕೆ ಕಡಿಮೆಯಾಗಿತು? ಇಲ್ಲಿ ಯಾರಿದಾರೆ ನೋಡೊಳ್ಳೋರು ನೀವೇ ಹೇಳಿ. ನೋಡಿ ಅಪ್ಪಾ, ನಾನು ಯಾವತ್ತೂ ಸ್ಟ್ರೈಟ್ ಫಾರ್ವರ್ಡ್… ಸುಮ್ನೆ ಹರಿ ಮನೆಗೆ ಹೋಗು… ದಿನಕ್ಕೆ ಎರಡು ಪಿರಿಯಡ್ ಒದರಿಬಿಟ್ಟು ಯಾರಾದರೂ ಮನೆಗೆ ಬಂದಿರ್ತಾರೆ. ನೋಡ್ಕೋತಾರೆ’ ಡಾಕ್ಟರ್ ರೇಗಿದ.  ‘ಹೌದು.. ದಟ್ ಈಸ್ ಬೆಟರ್ ಅನ್ಸುತ್ತೇರಿ’ ಅವನ ಮಾವನೂ ತಾಳಹಾಕಿದ. ‘ಏನ್ ನಿಂತಿದಿಯಾ … ಹೋಗ್’ ಆಜ್ಞೆಯಂತೆ ಮಾತುಗಳು ಹೊರಬಂದವು. ಅವನ ಗಮನ ಪೇಷೆಂಟ್ಗಳತ್ತ ಸರಿಯಿತು. ನಾನೂ ಅಲ್ಲಿಂದ ಸರಿದೆ.
*   *   *

‘ಇಲ್ಲಿಗೆ ಯಾಕ್ರಿ ಬಂದ್ರಿ? ಮೊದಲೆ ಕಾಯಿಲೆ ಮನುಷ್ಯ…. ನೀವು ಡಾಕ್ಟರ್ ಮಗನ್ನ ಇಟ್ಕೊಂಡು ನಮ್ಮ ಪ್ರಾಣ ತಿನ್ನೋಕೆ ಇಲ್ಲಿಗಾ ಬರೋದು! ನಾನೇ ತುಂಬಿದ ಬಸಿರಿ ನಾವ್ ಮಾಡ್ಕೊಂಡು ತಿನ್ನೋದು ತ್ರಾಸಾಗಿದೆ’ ಲೆಕ್ಚರರ್ ಸೊಸೆ ಅತ್ತೇ ಬಿಟ್ಟಳು.

‘ಹೌದಪಾ, ಯೋಚ್ನೆ ಮಾಡಿ… ಮುಂದಿನ ತಿಂಗಳಲ್ಲಿ ಅವಳು ಬೇರೆ ಹೆರಿಗೆಗೆ ಹೋಗ್ತಾಳೆ. ಯಾರ್ ನೋಡ್ಕೊತಾರೆ ನಿನ್ನ? ನನ್ನ ಕೈನಲ್ಲಾಗುತ್ತಾ ನೀನೇ ಹೇಳು. ನಾನು ಹೋಟೆಲ್ನಲ್ಲಿ ತಿಂದು ಹೇಗೋ ಮ್ಯಾನೇಜ್ ಮಾಡ್ತೀನಿ. ಮೊದಲೆ ನೀನು ರೋಗದ ಮನುಷ್ಯ, ಪಥ್ಯ ಬೇರೆ ಏನು ಮಾಡ್ತಿ? ಅಣ್ಣನ ಮನೇಲಿ ನೀನ್ ಇರೋದೇ ವಾಸಿ’ ನಯವಾಗಿಯೇ ಲೆಕ್ಟರ್ ಕೊಟ್ಟ, ‘ಅವನು ಇಲ್ಲಿಗೆ ಕಳಿಸಿದ್ನಲ್ಲಪ್ಪಾ’ ಅಂತ ಅಲ್ಲಿನ ವರದಿ ಒಪ್ಪಿಸಿದೆ. ‘ಅವನು ಹೇಳೋದ್ರಲ್ಲಿ ತಪ್ಪೇನಿದೆ? ನೀನ್ ಯಾಕೆ ಆಸ್ಪತ್ರೆಯಿಂದ ಬಂದೆ? ಆಸ್ಪತ್ರೆಯವರಿಗೆ ನೀನು ಭಾರವೆ? ನೂರಾರು ಕೇಸುಗಳಲ್ಲಿ ನೀನೂ ಒಂದು. ಹೇಗೂ ಡಿಸ್ಚಾರ್ಜ್ ಮಾಡಿಸಿಕೊಳ್ದೆ ಬಂದಿದಿಯಾ ಕಾನೂನಿನ ದೃಷ್ಟಿಯಿಂದ್ಲೂ ತಪ್ಪು ಅಣ್ಣಂಗೂ ಅಪಮಾನ…. ಸುಮ್ನೆ ಹೋಗಿ ಆಸ್ಪತ್ರೆನಲ್ಲಿ ಇದ್ದುಬಿಡು. ನಮಗೆ ಕಾಲೇಜಿಗೆ ಟೈಮ್ ಆಗುತ್ತೆ’ ಗದರಿದ. ಬಾಗಿಲಿಗೆ ಬೀಗ ಹಾಕಿಕೊಂಡು ತನ್ನ ಹೆಂಡತಿಯನ್ನು ಸ್ಕೂಟರ್’ನಲ್ಲಿ ಕೂರಿಸಿಕೊಂಡು ಹೋಗೇಬಿಟ್ಟ.
*   *   *

ಆಸ್ಪತ್ರೆಗೆ ಹೋಗಲು ಮನಸಾಗಲಿಲ್ಲ, ದುಃಖ ಒತ್ತರಿಸಿ ಬ೦ದರೂ ಮಕ್ಕಳನ್ನು ಬೈದುಕೊಳ್ಳಲು ನಾಲಿಗೆಯೇ ಏಳಲಿಲ್ಲ, ‘ಇದೆಲ್ಲಾ ಮಾರ್ಡನ್ ಸೊಸೈಟಿಯಲ್ಲಿ ಕಾಮನ್’ ಅಂದ ಅನಂತಕೃಷ್ಣನ ಮಾತು ಹೃದಯವನ್ನು ಹಿಂಡಿತು. ಮೇಲೆ ಕೆಟ್ಟ ಬಿಸಿಲು ಕೆಳಗಡೆ ಸುಡುವ ನೆಲ, ನಿಂತೇ ಇದ್ದೆ, ಹಾದಿ ಹೋಕನೊಬ್ಬ ‘ತಗೋ ತಾತ’ ಅಂತ ಕೈಲಿ ಐವತ್ತು ಪೈಸೆ ಇಟ್ಟಾಗ ಬೆಚ್ಚಿ ಬಿದ್ದು ಇಹಕ್ಕೆ ಬಂದೆ. ನನ್ನ ಕೊಳಕು ಬಟ್ಟೆ ಬೆಳೆದ ಬಿಳಿಗಡ್ಡ ಸೊಟ್ಟ ಕೈಕಾಲು ಅದಾವ ಭಂಗಿಯಲ್ಲಿ ನಿಂತಿದ್ದೆನೋ ಕಣ್ಣುಗಳಲ್ಲಿ ನೀರು ಬೇರೆ ಭಿಕ್ಷುಕನಂತೆ ಕಂಡಿರಬೇಕು. ತಪ್ಪು ಅವನದಲ್ಲ. ಪ್ರತಿಫಲಾಪೇಕ್ಷೆ ನನ್ನದೇ ತಪ್ಪು, ಬಿಸಿಲಿಗೆ ಕೈನಲ್ಲಿದ್ದ ಐವತ್ತು ಪೈಸೆ ಮಿನುಗಿತು. ಹೀಗೂ ಬದುಕಬಹುದಲ್ಲವೆ. ಆದರೆ ಗಣ್ಯರಾದ ಮಕ್ಕಳಿಗೆ ಇದರಿಂದಾಗಿ ಅವಮಾನವಾಗುತ್ತೆ, ನನ್ನ ಮಕ್ಕಳಿಗೆ ಅವಮಾನವಾಗಬಾರದು. ‘ಮಾರ್ಡನ್ ಸೊಸೈಟಿಯಲ್ಲಿ ಅವರ ಘನತೆಗೆ ಕುಂದಾಗಬಾರದು. ನಾನವರ ಸುಖವನ್ನು ಬಯಸಿದೆ. ಅವರೀಗ ಸುಖವಾಗಿದ್ದಾರೆ. ಈ ಶಿಥಿಲವಾದ ಶರೀರದಿಂದ ಅವರಿಗೆ ತೊಂದರೆಯಾಗಬಾರದು. ಬೇಕೆಂದಾಗ ಸಾವು ಬರಲು ನಾ ಭೀಷ್ಮನೂ ಅಲ್ಲ, ಇದೇ ಊರಲಿದ್ದು ಭಿಕ್ಷೆ ಬೇಡಿದರೆ ಮಕ್ಕಳ ಮೇಲೆ ಹಗೆ ತೀರಿಸಿಕೊಂಡಂತಾಗುತ್ತೆ. ದೂರದ ಕಾಣದ ಊರಿಗೆ ಹೋಗಿ ಬಿಡಬೇಕು. ಕಾಲೆಳೆಯುತ್ತ ಬಸ್‌ಸ್ಟಾಂಡ್ ಕಡೆ ಸಾಗುತ್ತೇನೆ. ‘ಮಾರ್ಡನ್ ಸೊಸೈಟೀಲಿ ಇದೆಲ್ಲಾ ಕಾಮನ್ … ಕಾಮನ್’ ಬಡಬಡಿಸುತ್ತಾನೆ. ನಗು ಬರುತ್ತದೆ. ಜೋರಾಗಿ ನಗುತ್ತೇನೆ. ಪುಂಡ ಹುಡುಗರು ಕಲ್ಲು ಬೀಸುತ್ತಾರೆ. ಓಡಲೂ ಆಗದು ನಿಲ್ಲಲೂ ಆಗದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಾಣಿಗಳಿಂದ ಕಲಿಬೇಕಾದ್ದು
Next post ಚಂದ್ರೇಗೌಡರು

ಸಣ್ಣ ಕತೆ

 • ಗಿಣಿಯ ಸಾಕ್ಷಿ

  ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

 • ಮೌನರಾಗ

  ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

 • ಪ್ರೇಮನಗರಿಯಲ್ಲಿ ಮದುವೆ

  ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

 • ವಲಯ

  ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

 • ದುರಾಶಾ ದುರ್ವಿಪಾಕ

  "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…