ತ್ರಿಪದಿಗಳು

ಅರುಣೋದಯವು ಮುಗಿದು ಮರಿಸೂರ್ಯ ಹೊರಬಂದ
ಥರಥರಾವರಿ ಅವನ ಸೌಂದರ್‍ಯ-ಚಿನ್ನದ
ಹರಿವಾಣದಂತೆ ಹೊಳೆಯುವನು

ಎತ್ತಿ ಬಡಿವನು ಕಂದ ಹತ್ತಿದಿಂಬಿಗೆ ಕಾಲ
ಉಕ್ಕಿ ಬೀಸುವನು ತೋಳನು – ಗಾಳಿಯಲಿ
ಹಕ್ಕಿ ಹಾರುವುದು ಬಾನಲ್ಲಿ!

ಬಣ್ಣ ಬಣ್ಣದ ಟೋಪಿ ತನ್ನ ತಲೆಯಲಿ ಮೆರೆಸಿ
ಚಿಣ್ಣ ಅತ್ತಿತ್ತ ಹೊರಳಿದರೆ-ಕಣ್ಣೆದುರು
ಸಣ್ಣ ನವಿಲೊಂದು ಕುಣಿಯುವುದು!

ಅಮ್ಮುತಾತನಿಗೀಗ ಮೊಮ್ಮಗನೆ ಸರ್ವಸ್ವ
ಹಮ್ಮು ಬಿಮ್ಮಿರದ ಮುಸ್ಸಂಜೆ-ಹಾಡುವನು
ತನ್ನ ದೇವರೆ ಕೈಗೆ ಬಂದಂತೆ!

ಅಮ್ಮುತಾತ ತನ್ನ ಮೊಮ್ಮಗನ ತೋಳಲ್ಲಿ
ಸುಮ್ಮನೇ ತೂಗಿ ಹಾಡಿದರೆ- ಕಂದ ಮೈ
ಜುಮ್ಮೆನ್ನುವಂತೆ ನಕ್ಕಾನು.

ಮೊಮ್ಮಗನ ಆಡಿಸುತ ಅಮ್ಮಗಳ ಕಂಡನು
ಲಕ್ಷ್ಮಿಸತಿ ಸರಸ್ವತೀ ದೇವಿಯರ-ಜೊತೆಯಲ್ಲಿ
ವಿಷ್ಣು ಶಿವ ಬ್ರಹ್ಮ ಜೋತಿಗಳ.

ಅಜ್ಜಿಯೆಂದರೆ ಅಜ್ಜಿ ಸಜ್ಜಿಗೆಗು ಸವಿಯಜ್ಜಿ
ಮಜ್ಜನಕೆ ತೈಲ ಮೈಗುಜ್ಜಿ- ನಗುನಗುತ
ತಿದ್ದುವಳು ಬೆನ್ನು ತೊಡೆ ಹೆಜ್ಜಿ

ಮೊಮ್ಮಗನ ಆಡಿಸುತ ಮೈಸೋತು ಮನಸೋತು
ಸಿಂಹದ ಮರಿಯ ಚೆಲುವಿಗೆ- ಕಣ್‌ಸೋತು
ಅಮ್ಮಮ್ಮ ಅಡಿಗೆ ಮರೆತಾಳು.

ಅಮ್ಮುತಾತ: ಅಮ್ಮನ ತಂದೆ
ಅಮ್ಮಮ್ಮ: ಅಜ್ಜಿ (ಅಮ್ಮನ ಅಮ್ಮ)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಡಂಗುರ – ೧೯೯
Next post ಕೂಡದ ಕಾಲಕೆ……..

ಸಣ್ಣ ಕತೆ