ಸತ್ಯವೇ ನಮ್ಮ ತಾಯಿ ತಂದೆ

ಸತ್ಯವೇ ನಮ್ಮ ತಾಯಿ ತಂದೆ

ಚಿತ್ರ: ಪಿಕ್ಸಾಬೇ
ಚಿತ್ರ: ಪಿಕ್ಸಾಬೇ

– ಗೋವಿನ ಹಾಡು ಗೀತೆಯನ್ನು ಆಧರಿಸಿ ರಚಿಸಿದ ಗೀತರೂಪಕ. ಇದನ್ನು ಆಡಿಸುವಾಗ ಪಾತ್ರಗಳ ಜೊತೆಯಲ್ಲಿ ಹಾಡುವ ಮೇಳಗಳನ್ನೂ ಬಳಸಬಹುದು.

ಕಾಳಿಂಗ ಎಂಬ ಗೊಲ್ಲ

ಮನುಜ ಗಿನುಜರಾ ಕಥೆಯಲ್ಲ – ಇದು
ದೇವದಾನವರ ಸ್ತುತಿಯಲ್ಲ,
ಆಡಿದ ಮಾತಿಗೆ ಜೀವವ ಹೂಡಿದ
ಗೋವಿನೀ ಕಥೆಗೆ ಸಮವಿಲ್ಲ.

ವನಪೀತಾಂಬರ ಉಟ್ಟಿರುವ – ಗಿರಿ
ಮಣಿಸರ ಎದೆಯಲಿ ತೊಟ್ಟಿರುವ
ಕರಿಮೋಡದ ಮುಂಗುರುಳ ಹಣೆಯಲಿ
ಸುಳಿಸುತ ಕಣ್ಣಿಗೆ ಕಟ್ಟಿರುವ

ಕನ್ನಡ ತಾಯಿಯ ಒಡಲಲ್ಲಿ ಸ-
ಹ್ಯಾದ್ರಿಯ ಸುಂದರ ಮಡಿಲಲ್ಲಿ
ಇದ್ದ ಕಾಳಿಂಗನೆಂಬ ಗೊಲ್ಲ ಸಾ-
ಕಿದ್ದ ಹಸುಗಳನು ಪ್ರೀತಿಯಲಿ.

ಒಂದೇ ಎರಡೇ ಐದಾರೇ ನೂ-
ರಾರು ಗೋವುಗಳ ಸರುಭಿಕುಲ,
ಮಕ್ಕಳಿಗೂ ಮಿಗಿಲೆನಿಸಿ ಅವುಗಳಿಗೆ
ಅಕ್ಕರೆ ತೋರುವನಾ ಗೊಲ್ಲ.

ಬೀಗವ ಮೈಗಳ ಗೋವುಗಳು ತೂ-
ಗಾಡುವ ಕ್ಷೀರದ ಭಾರಗಳು,
ಬಾಲವೆತ್ತಿ ಜಿಗಿಯುತ್ತ ಕೆಚ್ಚಲಿಗೆ
ದಾಳಿಯಿಡುವ ಕರುಮುದ್ದುಗಳು.

ತುಂಗೆಯಲ್ಲಿ ದಿನವೂ ಮಿಂದು
ಅಂಗಿ ಪಂಚೆ ವಲ್ಲಿಯ ಹೊದೆದು
ಕೊಳಲ ಊದಿ ಕರೆಯಲು ಗೊಲ್ಲ
ಕರೆವುವು ಹಾಲನು ಹಸುವೆಲ್ಲ.

ಬೆಟ್ಟಗುಡ್ಡಗಳ ಮೈಯಲ್ಲಿ ಎಲೆ-
ಸೊಕ್ಕಿದ ಕಾಡಿನ ನಡುವಿನಲಿ
ಹಚ್ಚಗೆ ಮೆಂದು ಸಂಜೆ ಗೋವು ಕರು-
ನೆಚ್ಚಿ ಬಹವು ದೊಡ್ಡಿಗೆ ಮರಳಿ.

ಇಂಥ ಗೋವುಗಳ ಗುಂಪಿನಲಿ
ಸತ್ಯ ಧರ್ಮ ಗುಣ ನೀತಿಯಲಿ
ಮರ್ತ್ಯರ ಮೀರಿಸಿದಂಥ ಹಸುವಿತ್ತು
ಪುಣ್ಯಕೋಟಿಯೆಂಬ ಹೆಸರಿನಲಿ.

ಪುಣ್ಯಕೋಟಿ

ಗೋವೆಂದರೆ ಗೋವು ನಿಜಕೆ ಪುಣ್ಯಕೋಟಿಯೇ
ನ್ಯಾಯ ಧರ್ಮದಲ್ಲಿ ಅದಕೆ ಮನುಜ ಸಾಟಿಯೇ?

ಪುಣ್ಯಕೋಟಿಗೊಂದೆ ಕರು
ಸ್ವರ್ಗಕೊಂದೆ ಕಲ್ಪತರು
ಸೂರ್ಯ ಬಾನಿಗೊಬ್ಬನೇ ಕಡಮೆಯೆನುವ ಯಾರು?
ಪ್ರೀತಿಯ ಧಾರಾಳವಿರಲು ಒಂದಾಗದೆ ನೂರು?

ತನ್ನ ಮಗುವಿನೊಂದು ಆಟ
ಅದರ ಕುಣಿತ ನೋಟ ಓಟ
ನೋಡಿ ನೋಡಿ ಪುಣ್ಯಕೋಟಿ ನಲಿಯುತಿದ್ದಿತು
ಬೆಳೆದು ನಿಂತು ಹುಲ್ಲ ಮೇದು
ಸಂಜೆಯಾಗುವುದಕೆ ಕಾದು
ಕಂದಗುಣಿಸೆ ಬೀಡಿಗೋಡಿ ಬರುತಲಿದ್ದಿತು

ಅಮ್ಮ ಇನ್ನೂ ದೂರದಲೇ
ಬರುತಲಿರಲು ದೊಡ್ಡಿ ಕಡೆ
ಅಂಬಾ ಎನುತ ಓಡಿಬರುವ ಕರುವ ಪ್ರೀತಿಗೆ
ಹೃದಯ ಕರಗಿ ಪುಣ್ಯಕೋಟಿ
ಮುದ್ದಿನಿಂದ ಮೈಯ ನೆಕ್ಕಿ
ಹಾಲುಸೂರೆ ಮಾಡುತಿತ್ತು ಕಾದ ಕಂದಗೆ.

ಕಾಳಿಂಗ ಮತ್ತು ಗೋವುಗಳ ಒಡನಾಟ

ಹೀಗೆ ಸಾಗುತಿರೆ ಕಾಲ ಒಂದು ದಿನ
ಬೆಳಗಿನಲ್ಲಿ ಕಾಳಿಂಗನು
ಎಂದಿನಂತೆ ನದಿಮಿಂದು ದೇವರನು
ನಮಿಸಿ ಸಿಂಗಾರಗೊಂಡನು.
ಎಳೆಯ ಮಾವಿನ ಮರದ ಕೆಳಗೆ ಎಳೆ-
ಚಿಗುರ ನೆರಳಲ್ಲಿ ಕುಳಿತನು
ಸರಸದಿಂದ ಕೊಳಲನ್ನು ನುಡಿಸುತ್ತ
ಒಲಿಸಿ ಗೋವುಗಳ ಕರೆದನು.

ಬಾ ಗಂಗೆ ಬಾರೆ
ಬಾ ಗೌರಿ ಬಾರೆ
ಬಾರೆ ಕಾವೇರಿ ಬಳಿ ಸಾರೆ
ಬಾರೆ ಮಾದೇವಿ
ಬಾ ಪುಣ್ಯಜೀವಿ
ಬಾ ಕಾಮಧೇನು ಓ ತಾಯಿ

ನೀವಿತ್ತ ಕ್ಷೀರ
ಅಮೃತದಾಹಾರ
ಲೋಕಕೇ ಭಾಗ್ಯದಾಧಾರ
ಕಣ್ತೆರೆದ ಗಳಿಗೆ
ಹಾಲಿತ್ತ ದಯೆಗೆ
ಸಮ ಯಾವುದಮ್ಮ ಜಗದೊಳಗೆ?
ದೊರೆ ದಿಲೀಪನಿಗೆ
ಮಗನನ್ನು ನೀಡಿ
ಹರಿಯ ಮುರಳೀಗಾನ ಕೇಳಿ
ನಲಿದ ತಾಯಿಯರ
ಕುಲದಲ್ಲಿ ಬಂದ
ಭಾಗ್ಯವತಿಯರೆ ಬನ್ನಿ ಇಲ್ಲಿ

ಗೊಲ್ಲ ಕರೆದ ದನಿ ಕೇಳಿ ಗೋವು ಉ
ಲ್ಲಾಸದಿಂದ ಬಳಿ ಬಂದವು
ಮುಂದೆ ಇಟ್ಟ ಕೊಡಗಳಲಿ ಕ್ಷೀರವನು
ಒಂದೆ ಧಾರೆಯಲಿ ಕರೆದವು

ಮುದ್ದುಕರುಗಳಿಗೆ ಹಾಲ ಉಣಿಸಿ, ಹಣೆ
ಗದ್ದ ಪ್ರೀತಿಯಲಿ ನೆಕ್ಕಿ
ಕಣಿವೆ ಕಡೆಗೆ ಗುಂಪಾಗಿ ಸಾಗಿದುವು
ಹಸಿರ ಮೇಯೆ ಮನವುಕ್ಕಿ

ಹಸುಗಳು ಕಾಡಿಗೆ ಮೇಯಲು ಹೋದದ್ದು

ಮೋದದಿಂದ ಆಕಳೆಲ್ಲ
ಮೇಯಲೆಂದು ಬಂದುವು
ಹಾದಿ ಬಿಟ್ಟ ತುಂಟರಂತೆ
ಕೂಗಿ ಜಿಗಿದು ನಡೆದುವು.

ಕಣಿವೆಯಲ್ಲಿ ಇಳಿದುವು
ಪೊದೆಯ ಸುತ್ತ ಸುಳಿದುವು
ಮಲೆಯ ಮೈಯ ಏರಿ ಇಳಿದು
ದೂರ ದೂರ ನಡೆದುವು.

ಹಸಿರು ಸೊಕ್ಕಿ ಬೆಳೆದಿತ್ತು
ತಲೆಯೆತ್ತರ ಮೀರಿ
ತಂಪುಗಾಳಿ ಬೀಸುತ್ತಿತ್ತು
ಕಾಡೇ ಉಸಿರಾಡಿ.

ಯಾರಿಗುಂಟು ಯಾರಿಗಿಲ್ಲ
ಇಂಥ ಭಾರಿ ಭೋಜನ?
ಮೇದು ಗೋವು ತಣಿದವು
ಹರಸುತ ವನರಾಜನ.

ಅರ್ಬುತನೆಂಬ ಭಯಂಕರ ಹುಲಿ

ದಟ್ಟ ಕಾಡಿನಾ ಮಧ್ಯದಲಿ
ಬೆಟ್ಟದ ನಿಗೂಢ ಗವಿಯಲ್ಲಿ
ವಾಸವಾಗಿದ್ದ ಅರ್ಬುತನು
ಏಳು ಹೆಜ್ಜೆಯ ಹುಲಿ ಅವನು.

ಅವನ ಕೋಪಕ್ಕೆ ಸಮವಿಲ್ಲ
ಅವನ ರೋಷಕ್ಕೆ ಎದುರಿಲ್ಲ
ಗರ್ಜಿಸಿದರೆ ಸಾಕೊಂದು ಸಲ
ನಡುಗಿ ಹೋಗುವುದು ಕಾಡೆಲ್ಲ.

ಬಣ್ಣದ ಗೆರೆಗಳು ಮೈತುಂಬ
ಯಮ ಸವರಿದ ಮೈ ಎನುವಂದ
ಬಾಯೊಳು ಬಾಚಿಯ ಹಲ್ಲುಗಳು
ಸಾಯಲು ಕರೆಯುವ ಶೂಲಗಳು.

ಹುಲಿಗಳ ಹುಲಿ ಈ ಅರ್ಬುತನು
ಕಲಿಗಳ ಕಲಿ ಈ ಅರ್ಬುತನು

ಹೊಳೆಯುವ ಭೀಕರ ಕಣ್ಣುಗಳು
ಉರಿಯುತ ಎರಗುವ ಉಲ್ಕೆಗಳು
ಯಮದೇವರ ಉತ್ಸವಕೆಂದು
ಬೆಳಗುವ ಜೋಡಿ ಹಿಲಾಲುಗಳು.

ಗೆಲ್ಲಲು ಬಂದವರೆಷ್ಟೊ ಜನ
ಕೊಲ್ಲಲು ಬಂದವರೆಷ್ಟೊ ಜನ
ದರ್ಶನವಾಯಿತೊ ಎದೆಯೊಡೆದು
ನಡೆದರು ಸ್ವರ್ಗದ ಕದ ತೆರೆದು!

ಹುಲಿಗಳ ಹುಲಿ ಈ ಅರ್ಬುತನು
ಕಲಿಗಳ ಕಲಿ ಈ ಅರ್ಬುತನು
* * * *

ಬಹಳ ಕಾಲ ನಿದ್ದೆಯೊಳಿದ್ದು
ಎದ್ದ ಒಮ್ಮೆ ಅರ್ಬುತರಾಯ
ಮೈಯ ಮುರಿದನೋ ಆಕಳಿಸಿ
ತೆರೆದ ಉರಿಬಾಯಿ ಜೊಲ್ಲಿಳಿಸಿ.

ಹಸಿವೋ ಹಸಿವು ಹೊಟ್ಟೆಯಲಿ
ಕೆಂಡ ಸುರಿದಂತೆ ಹೊಟ್ಟೆಯಲಿ
ಸುಟ್ಟು ಹೋಗುತಿದೆ ಕರುಳೆಲ್ಲ
ಕಿಚ್ಚು ಹಬ್ಬುತಿದೆ ಮೈಯೆಲ್ಲ.

ಕಟಕಟ ಕಡಿದನು ಹಲ್ಲುಗಳ – ನೆಲ
ಕೆತ್ತಿ ಹೊಡೆದ ಕಾಲ್‌ಪಂಜಗಳ,
ಕೂಗು ಹಾಕಿದನು ರೋಷದಲಿ – ಇಡಿ
ಕಾಡೇ ನಡುಗಿತು ಭೀತಿಯಲಿ!

ಅರ್ಬುತನೆಂದರೆ ಅರ್ಬುತನು
ಹುಲಿಗಳ ಗಂಡ ಅರ್ಬುತನು
ಅರ್ಬುತನೆಂದರೆ ಅರ್ಬುತನು
ಕಲಿಗಳ ಮಿಂಡ ಅರ್ಬುತನು!

ಅರ್ಬುತ ಪುಣ್ಯಕೋಟಿಯನ್ನು ಹಿಡಿದದ್ದು

ಬೆಟ್ಟದಿಂದ ಇಳಿದು ಬರುತ
ಸುತ್ತ ಒಮ್ಮೆ ನೋಡಿ
ಥಟ್ಟನೆ ಹುಲಿರಾಯ ನಿಂತ
ಹಾಕಿದಂತೆ ಮೋಡಿ;

ಮೇಯುತ್ತಿದೆ ಪೊದೆಯಾಚೆಗೆ
ಭಾರಿ ಗೋವು ಹಿಂಡು!
ಹಿಗ್ಗಿ ಹಿಗ್ಗಿ ನೋಡಿದ
ಕೊಬ್ಬಿದೆ ಒಂದೊಂದೂ.

ಎಷ್ಟು ಕಾಲ ಆಗಿತ್ತೋ
ಇಂಥ ಬೇಟೆ ಕಂಡು
ಯುಗವೇ ಆಗಿತ್ತೇನೋ
ಇಂಥ ಊಟ ಉಂಡು;
ಸಿಕ್ಕಿತೀಗ ಸಾಮಾನ್ಯಕೆ
ಸಿಕ್ಕದಂಥ ಯೋಗ
ಉರಿ ಹಸಿವಿಗೆ ಹಿರಿ ಔತಣ
ಭಲೇ ಎಂಥ ಭೋಗ!

ಕಾಲೂರಿದ ಮೈಚಾಚಿ
ಬಿಲ್ಲಿನಂತೆ ಬಾಗಿ
ಹಸುಮಂದೆಯ ಕಡೆಗೆ ತನ್ನ
ಕಣ್ಣ ಗುರಿಯ ಹೂಡಿ;
ಬಿಲ್ಲಿನಲ್ಲಿ ಹೂಡಿ ಎಳೆದು
ಬಿಟ್ಟ ಬಾಣವಾಗಿ
ಚಿಮ್ಮಿ ನೆಗೆದ ಒಂದೇ ಸಲ
ಪೊದೆಗಳನ್ನ ತೂರಿ.
* * * *

ಹುಲಿಯ ಕಾಣುತ್ತಲೇ
ಬೆದರಿ ಕೂಗುತ್ತ
ಓಡಿ ಹೋದವು ಗೋವು
ಕಂಡ ಕಂಡತ್ತ
ಸಿಕ್ಕಿತಯ್ಯೋ ಒಂದು
ಹಸು ಹುಲಿಯ ಕೈಗೆ
ಗೋವುಗಳ ದೇವಿಗೆ
ಏನಿಂಥ ಗತಿಯೆ?

ಆದರೇನೀ ಗೋವು
ಭಯ ಏನೂ ಇರದೆ
ಕ್ರೂರ ಹುಲಿಯನೆ ಪ್ರೀತಿ-
ಯಿಂದ ನೋಡುತಿದೆ
ಹುಲಿರಾಯ ಅಬ್ಬರಿಸಿ
‘ಎಲೆ ಮೂರ್ಖ ಹಸುವೆ
ಸಾಯಲಿಕೆ ಅಣಿಯಾಗು’
ಎನಲು ಹಸು ಅದಕೆ

ಪುಣ್ಯಕೋಟಿ ಮತ್ತು ಹುಲಿಯ ಮಾತುಕಥೆ

ಪುಣ್ಯಕೋಟಿ: ಹುಟ್ಟಿದಂದೇ ಸಾವು
ಗಟ್ಟಿ ಹುಲಿಯಣ್ಣ
ಇದ ತಿಳಿದ ಜೀವಕ್ಕೆ
ಭಯ ಏತಕಣ್ಣ?

ದಿನವು ಜನ ನಡೆಯುವುದೆ
ಯಮನಿರುವ ಕಡೆಗೆ
ಸ್ನೇಹ ಪ್ರೀತಿಯೆ ಮುಖ್ಯ
ಇರುವೆರಡು ಗಳಿಗೆ

ನನ್ನದೊಂದಿದೆ ಕಂದ
ಅದೆ ನನಗೆ ಎಲ್ಲ
ತಾಯುಳಿದು ಲೋಕದಲಿ
ಅದಕಾರೂ ಇಲ್ಲ
ಕಾಯುತಿದೆ ಪುಟ್ಟಕರು
ನಾ ಬರುವೆನೆಂದು
ಮೈನೆಕ್ಕಿ ಅಮ್ಮ ಮೊಲೆ
ಉಣಿಸುವಳು ಎಂದು.

ಕೊನೆಬಾರಿ ಅದಕ್ಕೊಮ್ಮೆ
ಹಾಲುಣಿಸಿ ಬರುವೆ
ಮುದ್ದಾಡಿ ಕಂದನ
ಮೈಸವರಿ ಬರುವೆ
ದಿಕ್ಕಿರದ ಮಗುವೊ ಅದು
ದಯೆ ತೋರು ಹುಲಿಯೆ
ನಿನ್ನ ನೆನೆವನು ಕಂದ
ಉಸಿರಿರುವವರೆಗೆ.

ಹುಲಿ: ಏನ ಹೇಳಿದೆ ಹಸುವೆ ನಾನಂಥ ಮರುಳೆ?
ಈಗ ಬಿಟ್ಟರೆ ನಿನ್ನ ಮತ್ತೆಲ್ಲಿ ಬರುವೆ?
ಸುಳ್ಳಾಡಿ ಓಡಿಹೋಗಲು ಹೊಂಚುತಿಹೆಯಾ?
ಯಮನೆಡೆಗೆ ಜೀವ ತಾನೇ ಬಂದುದಿದೆಯಾ?

ಪುಣ್ಯಕೋಟಿ: ಹೇಳಬಹುದೇ ಇಂಥ
ಮಾತ ನೀ ಹುಲಿಯೆ?
ನಮ್ಮ ಬಾಳಿನ ರೀತಿ
ನೀನಿನ್ನೂ ಅರಿಯೆ
ಸತ್ಯವೇ ಜೀವ
ಸತ್ಯವೇ ದೈವ
ಅದು ಇರದ ಬಾಳಿಗೆ
ಬೆಲೆ ಎನುವುದಿದೆಯೆ?

ಹುಲಿ: ಹೋಗಿ ಬಾ ನೋಡುವೆನು ನಿನ್ನ ಸತ್ಯವನು
ಅದು ಪ್ರಾಣಕಿಂತಲೂ ಮಿಗಿಲೆ ಎನುವುದನು,
ಸತ್ಯದಾ ತಲೆಬಾಲ ನಾ ನೋಡಿ ಬಿಡುವೆ
ನೀ ಮತ್ತೆ ಬರಲು, ನಾ ಹಿಂಸೆಯನೆ ಬಿಡುವೆ!
* * * *

ಪುಣ್ಯಕೋಟಿಯ ನುಡಿಯು ಹೇಗೋ
ಹುಲಿಯ ಮನಸಿಗೆ ತಾಗಿತು,
ಏನೊ ಏಕೋ ತಿಳಿಯದಿದ್ದರು
ಹುಲಿಯು ಹಸುವನು ಕಳಿಸಿತು

ಎಷ್ಟೋ ಹಸುಗಳ ತಿಂದ ನಾನು
ಬಿಡುವೆನೀ ದಿನ ಒಂದನು,
ಪಾಪ ಹಸು ಬಡಪಾಯಿ ಹೋಗಲಿ,
ಕಂದ ಕಾಣಲಿ ತಾಯನು.

ಬಾಳುವಾಸೆಯು ಯಾರಿಗಿಲ್ಲ
ಎಂದು ಯೋಚಿಸುತಾ ಹುಲಿ,
ಸುಳ್ಳ ಹೇಳದೆ ನಿಜವ ನುಡಿವರೆ
ಎಂದು ನಕ್ಕಿತು ಆ ಹುಲಿ.

ಪುಣ್ಯಕೋಟಿ ಬಂದು ಬೀಡಿಗೆ
ಹಾಲು ಉಣಿಸಿತು ಕರುವಿಗೆ,
ಹಾಲನುಣಿಸುತ ನಡೆದುದೆಲ್ಲವ
ತಿಳಿಸಿ ಹೇಳಿತು ಕಂದಗೆ.

ಪುಣ್ಯಕೋಟಿ ಮತ್ತು ಕರುವಿನ ಮಾತುಕತೆ

ಕುಡಿಯೊ ಕಂದ ಕಡೆಯ ಸಲ
ನಿನ್ನ ತಾಯ ಹಾಲ,
ಇನ್ನು ನೀನು ತಬ್ಬಲಿಯೋ
ತೀರಿತೆನ್ನ ಕಾಲ

ಮುದ್ದು, ಚಿನ್ನ, ನಿನ್ನ ಜೊತೆಗೆ
ಬಾಳುವಂಥ ಪುಣ್ಯವ
ಕೇಳಿಬರದ ಪಾಪಿ ನಾನು
ವಿಧಿ ಬಗೆಯಿತು ಅನ್ಯವ

ಏನೂ ಅರಿಯದಂಥ ಕಂದ
ಹೇಗೆ ಬಿಟ್ಟು ಹೋಗಲಿ?
ಸಾಧುಜೀವಕೆಲ್ಲ ರಕ್ಷೆ
ಹುಲಿಯಾಳುವ ಧರೆಯಲಿ?

ನೀನು ಮಾತ್ರ ಎಂದೂ ಯಾರ
ನೋಯಿಸದಿರು ಪುಟ್ಟ
ಬಾಳಬೇಕು ಲೋಕವೆಲ್ಲ
ತನ್ನ ತನ್ನ ಇಷ್ಟ

ಕರು: ನನ್ನ ಬಿಟ್ಟು ಹೋಗಬೇಡವೆ
ಬರೆವೆ ನಾನೂ ಕಾಡಿಗೆ
ನೀನು ಸಾಯಲು ಹೇಗೆ ಬಾಳಲೆ
ಅಮ್ಮಾ ಎನ್ನಲಿ ಯಾರಿಗೆ?

ಏಕೆ ಹೋಗುವೆ ಅಮ್ಮ ಸುಮ್ಮನೆ
ಇದ್ದುಬಿಡು ನೀ ಇಲ್ಲಿಯೆ
ಹೇಳಿದಷ್ಟಕೆ ಹೋಗಬೇಕೆ?
ಸುಳ್ಳೆ ಸರಿ ಹುಲಿರಾಯಗೆ!

ನನಗೆ ತೋರಿಸು, ಒಂದೆ ಏಟಿಗೆ
ಕೊಂದುಬಿಡುವೆನು ನೀಚನ
ಮುಟ್ಟಬಂದರೆ ಬಿಟ್ಟುಬಿಡುವೆನೆ
ನನ್ನ ಪ್ರೀತಿಯ ಅಮ್ಮನ?

ಪುಣ್ಯಕೋಟಿ: ಚಿನ್ನ ನಿನ್ನದು ಎಂಥ ಮನಸೊ
ನಿನ್ನ ಮನ ಅರಿವಾಯಿತು
ಎಷ್ಟು ಪ್ರೀತಿಯೊ ನಿನಗೆ ನನ್ನಲಿ
ಹಡೆದು ಸಾರ್ಥಕವಾಯಿತು.

ಇಲ್ಲಿ ನಿಲುವುದು ಸುಲಭ ಬಲ್ಲೆನು
ಸಲ್ಲದದು ಮಗು, ನಡತೆಗೆ,
ಎಂಥ ಹೊತ್ತಲು ನಿಲ್ಲಬೇಕು
ನಾವು ಆಡಿದ ಮಾತಿಗೆ

ಸತ್ಯವೇ ನಮ್ಮ ತಾಯಿತಂದೆ
ಸತ್ಯ ಬಂಧು ಬಳಗವು
ಸತ್ಯವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನಾ ಪರಮಾತ್ಮನು

ಹೀಗೆ ನುಡಿದಳು ಪುಣ್ಯಕೋಟಿ
ಜೊತೆಯ ಹಸುಗಳ ಕರೆದಳು
ನನ್ನ ಕಂದನ ಕಾಯ್ದುಕೊಳ್ಳಿರಿ
ಎಂದು ನಮಿಸುತ ನುಡಿದಳು.

ಪುಣ್ಯಕೋಟಿ: ಯಾವ ಭಾಗ್ಯದಿಂದಲೋ
ಯಾರ ಹರಕೆಯಿಂದಲೋ
ನಿಮ್ಮ ಸ್ನೇಹ ಕೂಡಿ ಬಂತು
ಯಾವ ಸುಕೃತದಿಂದಲೋ!

ಈವರೆಗೂ ಬೆಳೆದೆವು
ಸೋದರಿಯರ ರೀತಿ
ಹಂಚಿಕೊಂಡು ಬಾಳಿದೆವು
ಜೇನಿನಂಥ ಪ್ರೀತಿ;
ತಬ್ಬಲಿ ಈ ಕಂದನ
ನಿಮ್ಮದೆಂದೆ ತಿಳಿಯಿರೆ,
ತಪ್ಪು ಮಾಡೆ ನಕ್ಕು ಮರೆತು
ನನ್ನ ನೆನೆದು ಸಲಹಿರೇ!

ಹೋಗಿ ಬರುವೆ ಅಕ್ಕದಿರೇ
ಇರಲು ಮತ್ತೆ ಜನುಮ
ನಿಮ್ಮಲ್ಲಿಯೆ ಹುಟ್ಟಿ ಬರುವೆ
ನಿಮಗೆ ನನ್ನ ನಮನ.

ಪುಣ್ಯಕೋಟಿ ಹುಲಿಯ ಬಳಿಗೆ ಬಂದದ್ದು

ಕರುವ ಪ್ರೀತಿಯಲಿ ಮುದ್ದಿಸಿ ಕಂಬನಿ
ಸುರಿಸಿ ಪುಣ್ಯಕೋಟಿ
ಬಂತು ದೊಡ್ಡಿಯನು ಬಳಸಿ ಮೂರು ಸಲ
ಮೋಹಗಳನು ದಾಟಿ

ದಡದಡ ಓಡುತ ಬಂತು ಕಾಡಿನಲಿ
ಹುಲಿಯ ಗವಿಯ ಕಡೆಗೆ
ಬಾಗಿಲ ಬಳಿಯಲಿ ನಿಂತು ಹೇಳಿತು
ಒಳಗೆ ಇದ್ದ ಹುಲಿಗೆ

ಪುಣ್ಯಕೋಟಿ: ನನ್ನ ಒಡೆಯ ಕರುಣೆಯಿಂದ
ಸಾಕಿದಂಥ ಒಡಲು
ರಕ್ತ ಮಾಂಸ ಭರ್ತಿ ತುಂಬಿ
ತುಳುಕುತ್ತಿದೆ ಮಡಿಲು

ಬಂದು ನನ್ನ ಕೊಂದು, ಮೈಯ
ತಿಂದು ಹಸಿವ ನೀಗು
ಕಾಯಿಸಿದೆನೊ ಕ್ಷಮಿಸು ಅಣ್ಣ
ತಿಂದು ತೃಪ್ತನಾಗು

ಕೈಗೆ ಸಿಕ್ಕ ಬಲಿಯ ಬಿಟ್ಟೆ
ಏನು ನಿನ್ನ ಘನತೆ!
ಹುಲಿಯ ಗುಣವ ಮೀರಿತಲ್ಲ
ಕರುಣಿ ನಿನ್ನ ನಡತೆ!

ಬಾರೊ ನನ್ನ ತಿಂದು ಹೋಗು
ದೇವರೆದುರು ನಿಂದು
ಹೊಗಳುವೆನೋ ನಿನ್ನ ಕರುಣೆ
ಅಣ್ಣ ಅಮರನಾಗು.

ಹಿಂಸೆಗೆ ಹೇಸಿ ಹುಲಿಯು ಸತ್ತದ್ದು

ಹಸುವು ಮರಳಿ ಬರದೆಂದು ತಿಳಿದೆ ಕಳಿ-
ಸಿತ್ತು ಅದನು ಹುಲಿಯು
ಬರುವ ಗೋವ ಕಂಡಾಗ ಅದಕೆ
ಉಡುಗಿತ್ತು ಎಲ್ಲ ಬಲವು

ಸತ್ಯಕಾಗಿ ಕಸಮಾಡಿ ಜೀವವನು
ಎಸೆವುದೆಂದರೇನು?
ಇಂಥ ಗೋವುಗಳ ಎಷ್ಟು ತಿಂದೆನೋ
ಏನು ಹೀನ ನಾನು!

ಕಳೆದ ಬಾಳ ನೆನೆನೆನೆದು ನಡುಗಿತಾ
ಘೋರಹುಲಿಯು ತಾನು,
ಪ್ರೀತಿ ಅಳಿಸಿ, ಹಿಂಸೆಯನು ಬೆಳೆಸಿದೆ
ಎಂಥ ಕಟುಕ ನಾನು!

ಹೀಗೆ ಮರುಗುತ್ತ ಬಂತು ಹುಲಿಯು ಗವಿ-
ಹೊರಗೆ ಹಸುವ ಬಳಿಗೆ,
ಕಣ್ಣಿನಿಂದ ಕಂಬನಿಯು ಸುರಿಯೆ ನುಡಿ-
ದಿತ್ತು ಹಸುಗೆ ಹೀಗೆ

ಹುಲಿ: ಏನು ಹೇಳಲಿ ತಂಗಿಯೇ – ನನ್ನ ಈ
ಬಾಳೆ ಅಲುಗಿತು ಮಾತಿಗೆ
ನಿನ್ನಂಥ ಜೀವಗಳನು-ಕೊಂದು
ತಿಂದ ಈ ಬಾಳು ಬಾಳೇ?

ಕಣ್ಣ ಮಾಲಿನ್ಯ ಕಳೆದೇ – ನನ್ನ
ಸಣ್ಣತನವನು ತೋರಿದೆ
ನಿನ್ನಂಥ ಸತ್ಯವತಿಯ – ಮುಂದೆ ನಾ
ಮಣ್ಣ ಕಣವಾಗಿ ಹೋದೆ

ಬಾಳು ನೀ ಕಡೆಯವರೆಗೆ – ಪರರ
ಬಾಳಿಸುವ ಪುಣ್ಯವತಿಯೇ
ಜೀವಗಳ ಹಿಂಡಿ ತೆಗೆದ – ನನಗೀಗ
ಬಾಳುವಾಸೆಯೆ ತೀರಿದೆ
* * * *

ಹೀಗೆ ನುಡಿದು ಹಸುಪಾದಕೆ ವಂದಿಸಿ
ಗಿರಿಯನೇರಿ ಮೇಲಕೆ ನಿಂತು
ಸಾಯಲಿ ಹಿಂಸೆಯೆ ಎನ್ನುತ ಕೂಗಿ
ಹಾರಿ ಹುಲಿಯು ಅಸು ನೀಗಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಂಗಳೂರು
Next post ಮಂಥನ – ೯

ಸಣ್ಣ ಕತೆ

 • ಎರಡು ರೆಕ್ಕೆಗಳು

  ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

 • ದೊಡ್ಡ ಬೋರೇಗೌಡರು

  ಪ್ರಕರಣ ೭ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸಗಳ ಸಮಸ್ಯೆ ಬಹಳ ದೊಡ್ಡದೆಂದು ರಂಗಣ್ಣನಿಗೆ ತಿಳಿದುಬಂತು. ಮೇಲಿನವರು ಬರಿಯ ವರದಿಗಳನ್ನು ತಯಾರು ಮಾಡುವುದರಲ್ಲಿಯೂ ಹೊರಗಿನ ಪ್ರಾಂತದವರಿಗೆ - ಅದರಲ್ಲಿಯೂ… Read more…

 • ಕನಸು ದಿಟವಾಯಿತು

  ಪ್ರಕರಣ ೨ ಸೂರ್ಯೋದಯವಾಯಿತು. ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಕಾಫಿ ಸೇವನೆಯನ್ನು ಮಾಡುತ್ತಾ ರಂಗಣ್ಣನು ಹೆಂಡತಿಗೆ ಕನಸಿನ ಸಮಾಚಾರವನ್ನು ತಿಳಿಸಿದನು. ಆಕೆ- ಸರಿ, ಇನ್ನು ಈ ಹುಚ್ಚೊಂದು ನಿಮಗೆ… Read more…

 • ಕೊಳಲು ಉಳಿದಿದೆ

  ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

 • ಮಾದಿತನ

  ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…