ಸುಮ್ಮನೆಂದರದು ಸಾವಯವವಾದೀತೇ ?

ನಿಮಿಷಕದಿನಾರು ಉಸಿರು. ಬಾಯಾರಿ ಹತ್ತಾರು ನೀರು ಕಮ್ಮಿಯೊಳನ್ನ ಮೂರು ದೊರೆಕೊಂಡೊಡೆಲ್ಲ ಕಾರುಬಾರು ಹಮ್ಮಿನಾ ಮೊದಲೊಮ್ಮೆ ಸುಮ್ಮನಾಲೋಚಿಸುತ ಆಮಿಷದ ಬಾರು ಕಾರನು ಮಿತಿಯೊಳಿರಿಸುತ ಲೆಮ್ಮ ಭುವನದಾರೋಗ್ಯ ಉಳಿಸಿದರದುವೆ ಸಾವಯವ - ವಿಜ್ಞಾನೇಶ್ವರಾ *****

ಹಸುರುಳಿಸದೆ ಇನ್ನೇನು ಕೆಲಸ ?

ಹಸುರ ಕೆಲಸಗಳೆಲ್ಲ ಜೀವಕು, ಬದುಕಿನುದ್ದಕು ಹಸಿದು ತಿನ್ನುತ, ಬೀಜ ಚೆಲ್ಲುತ, ಹೊಸತು ಬೆ ಳೆಸುತ, ತಂಪು ಕಾಯುವ ಲೇಸು ಜೀವನವೆಲ್ಲ ಜೀವಕು ಏಸು ಜೀವರ ಶ್ರಮದ ಹಸುರನು ಘಾಸಿಗೊಳಿಸದ ಕಸದ ಕೃಷಿಯನು, ಹಸದಿ ಸಾವಯವವೆನಲಕ್ಕು...

ಸೂರ್‍ಯನವಯವವಲ್ಲವೇ? ಹಸುರೆಲ್ಲ

ನಾರು, ಬೇರು, ಪತ್ರೆ, ಫಲ, ಹಸುರುಹ ಸುರಿಗು ತರತರದ ಬರತರದವಯವವು ನೀರ ಕುಡಿಯಲಿಕೆ, ಮಣ್ಣ ತಿನ್ನಲಿಕೆ ಬರಿಯೆಲೆಯೆ ಮಡಕೆ, ಸೌರ ಶಾಖದೊಳಡುಗೆ ಸೂರ್‍ಯನೊಲವಿನ ಕೊಡುಗೆ, ಹಸುರುಡುಗೆ ಸಾವಯವ - ವಿಜ್ಞಾನೇಶ್ವರಾ *****

ಅನ್ನಕೆಮ್ಮವಯವ ಬಳಸದೊಡದನು ಸಾವಯವವೆನಲುಂಟೇ ?

ತಿನ್ನಲಿಕೆ ಬಾಯಿ ಕೊಟ್ಟಂದು ದೇವ ತಾ ಸು ಮ್ಮನಿರಲಿಲ್ಲ ಕೊಟ್ಟಿಹನು ಕಣ್ಣು, ಕಿವಿ, ಮೂಗು ಅನ್ನದಿರವನು ಅರಸಿಯುಣ್ಣಲಿಕೆಲ್ಲವಯವವು ಚೆನ್ನತನದೊಳೆಮ್ಮ ಕೈಕಾಲು ಬಳಲಿದೊಡಾ ಅನ್ನವನು ಸಾನುರಾಗದಿ ಸಾವಯವವೆನಲಕ್ಕು - ವಿಜ್ಞಾನೇಶ್ವರಾ *****

ಪರಿಶೀಲಿಸಲೀ ಸಾವಯವದರ್ಥ ವೈಶಾಲ್ಯ ತಿಳಿಯದೇ?

ನೂರೊಂದು ಹೆಸರಿನೊಳೊಂದು ಸಾವಯವ ಸಾರಿ ಪೇಳ್ವುದದುವೆ ಅವಯವಗಳುನ್ನತಿಯ ಪರಿ ಪರಿಯ ಜೀವಕೆಲ್ಲಕು ನೂರೊಂದವಯವ ದಾರಿ ನೋಡಲಿಕೆ, ಭಾರಿ ಮಾಡಲಿಕೆ ಭೂರಿ ಅನ್ನವನರಸಿಯುಣ್ಣಲಿಕೆ - ವಿಜ್ಞಾನೇಶ್ವರಾ *****

ಕೃಷಿಯೆಂದು ಒಂದು ಹೆಸರು ಸಾಲದೇ ?

ಕೃಷಿಯೆಂದರೊಂದೇ ಹೆಸರಿತ್ತಂದು ರಾಶಿ ಹೇಳುವರಿಂದು ಹೆಸರ ನೂರೊಂದು ಹುಸಿ ಹೆಸರುಗಳಲ್ಲಲ್ಲೇ ಹಿಂದು ಮುಂದು ಕಾಸಿನವಸರವೆಂದು, ಅಧಿಕ ಇಳುವರಿಗೆಂದು ಹೊಸ ಘಾಸಿ ತಂತ್ರದೊಳೆಲ್ಲ ಜಗ ಬರಿದಿಂದು - ವಿಜ್ಞಾನೇಶ್ವರಾ *****

ಗರಿಕೆಯ ಮಿತಿಯ ನೀವ್ ತಿಳಿಯದವರೇ ?

ಏರಲಾರದದು ಆಕಾಶದೆತ್ತರಕಾದೊಡಂ ಹೋರಿ ಬಾಳ್ವುದದು ಮಣ್ಣಿರುವ ತನಕ ತರತರದ ಹೂ ಹಣ್ಣು ಕೊಡದಾದೊಡಂ ನೊರೆ ಹಾಲ್ ಬೆಣ್ಣೆಯಪ್ಪುದಾ ಹಸುತಿನುವ ಗರಿಕೆಯಂತೆನ್ನ ಕವನ ಸಂಗ್ರಹವು - ವಿಜ್ಞಾನೇಶ್ವರಾ *****

ಬರಿ ನಾರೆನಲುಂಟೇ ? ನಾರಿಕೇಳವನು ಸುಲಿದುಣಬೇಡವೇ ?

ಬುದ್ಧಿಯನ್ನು ತಿದ್ದಲಿಕೆಂದು ಲೋಕವನೆ ತಾ ಬಯ್ದು ಭರದೊಳಂತೆ ತಿರುಗಿ ಬಯ್ದವರೆನ್ನ ಬಂಧುಗಳೆಂದು ಬರೆದೊರದೊದೆಸಿಕೊಂಡವರೆಷ್ಟೋ ಜನರಾಗಿಹರು ಹಿಂದು ಬಲಕಪ್ಪ ಅನ್ನದೊಳು ಜೊತೆಗೂಡಿ ನಾರಿರ್ಪಂತೆನ್ನ ಬರಹಗಳಿವ್ ಹಿಂದಾದವರ ಜೊತೆಗೊಂದು ಬಿಂದು - ವಿಜ್ಞಾನೇಶ್ವರಾ *****

ವೇಳೆ ಗಡು ನಿಯಮವದೇನು ಆತ್ಮ ಶೋಧನೆಗೆ ?

ಮಲ ಶೋಧನೆಯ ವೇಳೆ ವ್ಯರ್ಥವಾಗದಂದದಲೆನ್ನ ಒಳ ಮನವೆನ್ನ ಜೀವನವನವಲೋಕಿಸುತಿರಲಾಗ ತಳೆದಿರ್ಪ ಕವನಗಳಿವ್ ಗೊಬ್ಬರವೆಂದವಗಣಿಸದಿರಿ ಫಲವಂತ ಮರಕೆಲ್ಲದಕು ಮೂಲ ಗೊಬ್ಬರವಲಾ ಬೆಲೆಬಾಳ್ವಾರೋಗ್ಯಕ್ಕೆ ಮೂಲ ಮಲ ಶೋಧವಲಾ - ವಿಜ್ಞಾನೇಶ್ವರಾ *****

ಫಲ ಮೊದಲೊ ? ಮಲ ಮೊದಲೋ ? ನಿರ್ಣಯವುಂಟೆ ?

ಕಳಿತ ಹಣ್ಣನಿಕ್ಕುವುದೆನ್ನ ಕವನದ ಬಯಕೆ ಹುಳಿತವಾದೊಡಂ ಉಣಲಕ್ಕು ಹುಳಿಗೊಜ್ಜಿಗಕ್ಕು ಕೊಳೆತೊಡದುವೇ ಬಿತ್ತಾಗಿ ಹೊಸ ಮರ ಬಕ್ಕು ಕಳಿತ ಗೊಬ್ಬರಕು ಕಳಿತ ಹಣ್ಣಿನಾ ಬೆಲೆ ಇಕ್ಕು ಫಲಿತದೊಳು ತಿಪ್ಪೇಶನಾರಾಧನೆಗೆ ಮಹತಿಕ್ಕು - ವಿಜ್ಞಾನೇಶ್ವರಾ *****