ಪುಂಸ್ತ್ರೀ – ೧

ಪುಂಸ್ತ್ರೀ – ೧

ಶರವು ಮರ್ಮವ ಘಾತಿಸಿತು

“ಮುಂದಿನ ಜನ್ಮ ಅಂತನ್ನುವುದು ಒಂದು ಇರುವುದೇ ಆದಲ್ಲಿ ಗಂಡೂ ಅಲ್ಲದ, ಹೆಣ್ಣೂ ಅಲ್ಲದ ಜೀವಿಯಾಗಿ ಜನಿಸಿ ನಿನ್ನನ್ನು ಕೊಲ್ಲುತ್ತೇನೆ.”

ನಿಧಾನವಾಗಿ ಕಣ್ಣುತೆರೆದು ಸುತ್ತಲೂ ದಿಟ್ಟಿಸುವಾಗ ನೆನಪಾದ ಮಾತುಗಳವು.

ಮಲಗಿದಲ್ಲಿಂದಲೇ ಎಡಗೈ ಎದೆಯನ್ನು ಮೃದುವಾಗಿ ನೀವತೊಡಗಿತು. ನೋವಾಗುತ್ತಿದೆ. ತುಂಬಾ ನೋವಾಗುತ್ತಿದೆ. ಹೃದಯಕ್ಕೆ ನಾಟಿದ ಬಾಣ ಹಾಗೆಯೇ ಇದೆ. ಅದು ನಾಟಿದಾಗ ಎಳೆದು ತೆಗೆಯಲು ಯತ್ನಿಸಿ ವಿಫಲನಾದದ್ದು ನೆನಪಿಗೆ ಬಂತು. ಈಗ ಇದನ್ನು ತೆಗೆದುಬಿಡಲೇ ಎಂದು ಬಲಗೈಯನ್ನು ಬಾಣದತ್ತ ಸರಿಸಿದಾಗ ಅವನು ಕಳವಳದಿಂದ ಮುಂದಕ್ಕೆ ಬಂದ.

“ತುಂಬಾ ನೋವಾಗುತ್ತಿದೆಯೇ ತಾತಾ? ಸ್ವಲ್ಪ ಸಹಿಸಿಕೊಳ್ಳಿ. ಆ ಬಾಣವನ್ನು ಕೀಳಬಾರದೆಂದು ರಾಜ ವೈದ್ಯರು ಹೇಳಿದ್ದಾರೆ. ಗಾಯವಾದಲ್ಲಿಗೆ ಹಚ್ಚಲು ಲೇಪ ಸಿದ್ಧಗೊಳ್ಳುತ್ತಿದೆ. ವೈದ್ಯರು ನಿಮಗಾಗಿ ನೋವು ನಿವಾರಕ ಗುಳಿಗೆಗಳನ್ನು ಮತ್ತು ಕಷಾಯವನ್ನು ಅಣಿ ಗೊಳಿಸುತ್ತಿದ್ದಾರೆ.”

ದುರ್ಯೋಧನನ ಮಾತಿಗೆ ಪ್ರತಿಕ್ರಿಯೆಯಾಗಿ ಭೀಷ್ಮರು ಅವನನ್ನು ದಿಟ್ಟಿಸಿ ನೋಡಿದರು. ಅವರ ಹುಬ್ಬುಗಳು ಮೇಲೇರಿದವು. ಮಾತಾಡಲೆಂದು ಬಾಯಿ ತೆರೆದರೆ ಸ್ವರ ಹೊರಬರಲಿಲ್ಲ. ನೀರಡಿಕೆಯೆಂದು ಸಂಜ್ಞೆ ಮಾಡಿದರು. ಪ್ರತೀಹಾರಿ ಅಲ್ಲೇ ಇದ್ದ ಹೂಜಿಯಿಂದ ನೀರು ತಂದು ಕೊಟ್ಟ. ಅದನ್ನು ಕುಡಿಯಲೆಂದು ಏಳಲು ಹೊರಟಾಗ ಅಸಾಧ್ಯ ನೋವು ಅವರನ್ನು ಬಾಧಿಸಿತು. ತಕ್ಷಣ ದುರ್ಯೋಧನ ಮಂಚದತ್ತ ಧಾವಿಸಿ ಅವರ ತಲೆಯನ್ನು ತನ್ನ ತೊಡೆಯ ಮೇಲಿರಿಸಿಕೊಂಡ: “ಕಷಾಯ ಕುಡಿದ ಮೇಲೆ ಇಷ್ಟು ನೋವಿರಲಾರದು ತಾತಾ. ಈಗ ಬಾಯಿ ತೆರೆಯಿರಿ. ನಾನು ನೀರು ಕುಡಿಸುತ್ತೇನೆ.”

ಕುಡಿಯುವಾಗ ಒಂದಷ್ಟು ನೀರು ಕಟವಾಯಿಯಿಂದ ಹೊರಬಂತು. ತನ್ನ ಉತ್ತರೀಯದಿಂದ ದುರ್ಯೋಧನ ಅದನ್ನು ಒರೆಸಿದ. ಭೀಷ್ಮರ ಕಣ್ಣುಗಳೊಡನೆ ಅವನ ಕಣ್ಣುಗಳು ಸಂಧಿಸಿದವು. ಅವುಗಳಲ್ಲಿ ನೋವು ತುಂಬಿತ್ತು. ಭೀಷ್ಮರು ನಿಧಾನವಾಗಿ ಮಾತಾಡಿದರು: “ಮಗೂ, ಈ ಬಾಣ ಅಸಾಧ್ಯ ಯಾತನೆಯನ್ನು ಉಂಟು ಮಾಡುತ್ತಿದೆ. ನೋವು ಕೊಡುವ ದಂತಗಳನ್ನು ನಾವು ಕಿತ್ತು ತೆಗೆಯುವುದಿಲ್ಲವೆ? ರಾಜವೈದ್ಯರಿಗೆ ಹೇಳು. ಗಾಯದ ಸುತ್ತ ನೋವಾಗದಂತೆ ಲೇಪ ಸವರಿ ನಿಧಾನವಾಗಿ ಇದನ್ನು ಅವರು ಕೀಳಲಿ. ಮತ್ತೆ ನಾನು ಮೊದಲಿನಂತಾಗುವುದು ಬೇಡವೆ?”

ದುರ್ಯೋಧನನೆಂದ: “ತಾತಾ, ನೀವಿನ್ನು ಯುದ್ಧದಲ್ಲಿ ಭಾಗವಹಿಸುವಂತಿಲ್ಲ. ನಿಮಗೆ ಪೂರ್ಣ ವಿಶ್ರಾಂತಿ ನೀಡಬೇಕೆಂದು ರಾಜವೈದ್ಯರು ಹೇಳಿದ್ದಾರೆ. ಈ ಬಾಣ ಆಳವಾಗಿ ಹೃದಯವನ್ನು ಪ್ರವೇಶಿಸಿದೆ. ಕಿತ್ತು ತೆಗೆದರೆ ಪ್ರಧಾನ ರಕ್ತನಾಳಛಿದ್ರವಾಗಿ ಪ್ರಾಣಕ್ಕೇ ಅಪಾಯವಿದೆಯಂತೆ. ಅದಾಗಿಯೇ ಬಿದ್ದು ಹೋಗುವವರೆಗೆ ನಿಮಗೇನೂ ತೊಂದರೆಯಿಲ್ಲವಂತೆ. ತಾತಾ, ದಯವಿಟ್ಟು ಬಾಣವನ್ನು ಮುಟ್ಟಬೇಡಿ.”

ಭೀಷ್ಮರಿಗೆ ಆಶ್ಚರ್ಯವಾಗಲಿಲ್ಲ. ಅವರು ಯೋಚಿಸತೊಡಗಿದರು. ಯುದ್ಧವೆಂದರೆ ಸೋಲು, ಸಾವು ಇದ್ದದ್ದೇ. ಈ ಭೌತಿಕ ಪ್ರಪಂಚ ಸಾಕೆನಿಸಿದಾಗ ಆತ್ಮಹತ್ಯೆಯಲ್ಲದೆ ಸಾಯುವ ಭಾಗ್ಯ ತನಗೀಗ ಲಭ್ಯವಾಗಿದೆ. ಬೇಕಾದರೆ ತಾನು ಈ ಕ್ಷಣ ಸತ್ತುಬಿಡಬಹುದು. ಅದಕ್ಕೆ ಈ ಬಾಣವನ್ನು ಕಿತ್ತು ತೆಗೆದರಾಯಿತು. ಬೇಡವೆಂದರೆ ಈ ಬಾಣ ತಾನಾಗಿಯೇ ಬಿದ್ದು ಹೋಗುವವರೆಗೆ ಎಲ್ಲಾ ವಿದ್ಯಮಾನಗಳಿಗೆ ಮೂಕ ಪ್ರೇಕ್ಷಕನಾಗಿರಬಹುದು. ತನಗೆ ಇನ್ನು ವಿಶ್ರಾಂತಿ. ಎದೆಗೆ ನಾಟಿರುವ ಈ ಬಾಣವನ್ನು ಕಿತ್ತು ತೆಗೆದರೆ ಶಾಶ್ವತ ವಿಶ್ರಾಂತಿ!

ಭೀಷ್ಮರಿಗೆ ವಿದ್ಯಾಗುರು ಪರಶುರಾಮರ ನೆನಪಾಯಿತು. ಅವರಿಗೆ ಎಷ್ಟು ವಯಸ್ಸೋ? ಅವರನ್ನು ಎಲ್ಲರೂ ಚಿರಂಜೀವಿ ಎಂದು ಹೇಳುತ್ತಿದ್ದರು. ಸಾವಿಲ್ಲದ ಮಾನವನಿರಲು ಸಾಧ್ಯವೆ? ಹಾಗಾದರೆ ಚಿರಂಜೀವಿ ಎಂಬುದಕ್ಕೇನರ್ಥ? ಗುರುಗಳನ್ನು ಕೇಳಿದಾಗ ಅವರು ಹೇಳಿದ್ದರು: “ಸುಮ್ಮನಿರು ಭೀಷ್ಮಾ ನೀನು. ಚಿರಂಜೀವಿ ಅನ್ನುವುದು ಒಂದು ಒಳ್ಳೆಯ ಕಲ್ಪನೆ. ನನ್ನನ್ನು ಬೇಕಾದರೆ ದೀರ್ಘಾಯುಷಿ ಎನ್ನಬಹುದು. ಹುಟ್ಟಿದವರಿಗೆ ಸಾವು ಇರಲೇಬೇಕು. ಜೀವನದಲ್ಲಿ ಯಾವತ್ತೂ ನಲಿವಿಗಿಂತ ನೋವೇ ಹೆಚ್ಚು. ಒಮ್ಮೊಮ್ಮೆ ನನಗೂ ಜೀವನ ಸಾಕೆನಿಸುತ್ತದೆ. ಆದರೇನು ಮಾಡುವುದು? ನಾವು ಇಚ್ಚಿಸಿದಾಗ ಆತ್ಮಹತ್ಯೆಯ ಹೊರತಾಗಿ ಮರಣ ಬರಲು ಸಾಧ್ಯವಿಲ್ಲವಲ್ಲ? ಮನುಷ್ಯ ಚಿರಂಜೀವಿಯಾಗಲು ಸಾಧ್ಯವಿಲ್ಲ. ಆದರೆ ಇಚ್ಚಾಮರಣಿಯಾಗಿರಲು ಸಾಧ್ಯವಾಗಿರುತ್ತಿದ್ದರೆ ಎಷ್ಟು ಒಳ್ಳೆಯದಿತ್ತು!”

ಇಚ್ಚಾಮರಣಿ! ನೋವಿನಲ್ಲೂ ಭೀಷ್ಮರ ಮುಖದಲ್ಲಿ ನಗು ಮೂಡಿತು. ಈ ಬಾಣ ಕಿತ್ತೆಸೆದರೆ ನಾನು ಸತ್ತುಬಿಡುತ್ತೇನೆ. ಬೇಕೆನಿಸಿದಾಗ ನನಗಿದನ್ನು ಕಿತ್ತುಬಿಡಲು ಸಾಧ್ಯ. ನಿಜವಾದ ಅರ್ಥದಲ್ಲಿ ನಾನು ಇಚ್ಚಾಮರಣಿಯಾಗಿ ಬಿಟ್ಟೆ. ಚಿರಂಜೀವತ್ವ ಅನ್ನುವುದು ಕಲ್ಪನೆ. ಆದರೆ ನನ್ನ ಇಚ್ಚಾಮರಣ ಮಾತ್ರ ವಾಸ್ತವ. ಪರಶುರಾಮರನ್ನು ಮತ್ತೆ ನಾನು ಕಂಡವನಲ್ಲ. ಬದುಕಿದ್ದಾರೋ ಅಥವಾ ಕಾಲವಶರಾಗಿದ್ದಾರೊ? ಕಾಲವಶರಾಗಿದ್ದರೆ ಅವರ ಅಂತ್ಯಕಾಲ ಹೇಗಿತ್ತೊ? ಅನಾಯಾ ಸೇನ ಮರಣ!

ಭೀಷ್ಮರು ಮಲಗಿದಲ್ಲಿಂದಲೇ ಸುತ್ತಲೂ ಕಣ್ಣಾಡಿಸಿದರು. ಒಂದು ಕಡೆ ದ್ರೋಣ, ಕರ್ಣ, ಶಲ್ಯ, ಮತ್ತೊಂದು ಕಡೆ ಕೃಷ್ಣ, ಯುಧಿಷ್ಠಿರ, ಭೀಮ, ಅರ್ಜುನ, ನಕುಲ, ಸಹದೇವರು. ಅವರಿಗೆ ನಗುಬಂತು. ಹಸ್ತಿನಾವತಿಯ ಸಿಂಹಾಸನಕ್ಕೆ ಮುಂದಿನ ಒಡೆಯನನ್ನು ನಿರ್ಧರಿಸುವ ಈ ಕುರುಕ್ಷೇತ್ರ ಯುದ್ಧ. ಕಳೆದ ಒಂಬತ್ತು ದಿನ ಖಾಡಾಖಾಡಿ ಕದನ ನಡೆಸಿದವರು ಈಗ ನನ್ನ ಸುತ್ತ ನೆರೆದಿದ್ದಾರೆ. ರಕ್ತಸಿಂಚಿತ ಸಿಂಹಾಸನದ ಉತ್ತರಾಧಿಕಾರತ್ವಕ್ಕಿಂತ ರಕ್ತಸಂಬಂಧ ತತ್ಕಾಲಕ್ಕೆ ಮಹತ್ತ್ವ ಪಡೆದುಕೊಂಡಿದೆ. ನಾನು ಹೀಗೆ ಮಂಚದಲ್ಲೇ ಪವಡಿಸಿದರೆ ಯುದ್ಧ ನಿಂತು ಬಿಡುತ್ತದಾ? ಭೀಷ್ಮರು ಯುಧಿಷ್ಠಿರನತ್ತ ದೃಷ್ಟಿ ಹಾಯಿಸಿದರು. ಅವನು ಒಂದೆರಡು ಹೆಜ್ಜೆ ಮುಂದಕ್ಕೆ ಬಂದ.

“ಮೊದಲಿನಿಂದಲೂ ಯುದ್ಧ ಬೇಡವೆನ್ನುತ್ತಾ ಬಂದವನು ನಾನು. ತಾತಾ, ನಿಮಗೆ ಹೀಗಾದುದನ್ನು ನನ್ನಿಂದ ಸಹಿಸಲಾಗುತ್ತಿಲ್ಲ. ನಿಮಗಿಂತ ನನಗೆ ಸಿಂಹಾಸನ ಮುಖ್ಯವಲ್ಲ. ರಾಜ್ಯಕ್ಕಾಗಿ ಎಂತಹ ದುರಂತ ನಡೆದುಹೋಯಿತು? ಇನ್ನು ಯುದ್ಧ ಸಾಕು ತಾತಾ. ಬಂಧು ಬಾಂಧವರ ರಕ್ತಸಿಂಚಿತ ಸಿಂಹಾಸನದಲ್ಲಿ ಕುಳಿತು ಯಾವ ಸಾಮ್ರಾಟ ನೆಮ್ಮದಿಯಿಂದ ರಾಜ್ಯವಾಳಿಯಾನು? ನಾನು ವನವಾಸ ದೀಕ್ಷೆ ಕೈಗೊಳ್ಳುತ್ತೇನೆ. ತಮ್ಮಂದಿರಿಗೆ ಪಾಂಚಾಲ ದೇಶವಿದೆ, ವಿರಾಟನಗರಿಯಿದೆ. ದುರ್ಯೋಧನನೇ ರಾಜ್ಯವಾಳಲಿ.

ಭೀಷ್ಮರಿಗೆ ಏನು ಹೇಳಬೇಕೆಂದು ತೋಚಲಿಲ್ಲ. ಎಳವೆಯಿಂದಲೂ ಈ ಯುಧಿಷ್ಠಿರನದು ಇದೇ ರೀತಿಯ ಯೋಚನೆ. ತನ್ನಿಂದಾಗಿ ಬೇರೆಯವರಿಗೆ ನೋವಾಗಬಾರದು. ತಾನು ನೋವುಂಡರೂ ಚಿಂತಿಲ್ಲ; ಇತರರು ಸುಖವಾಗಿರಬೇಕೆನ್ನುವವನು ಅವನು. ಅವನ ಹೃದಯ ವಿಶಾಲತೆಯಲ್ಲಿ ತಿಲದಷ್ಟಾದರೂ ದುರ್ಯೋಧನನಿಗಿರುತ್ತಿದ್ದರೆ ಪಾಂಡವರಿಗೆ ಕೊನೆಯ ಪಕ್ಷ ಅವರು ಕೇಳಿದ ಐದು ಗ್ರಾಮಗಳನ್ನು ಕೊಟ್ಟುಬಿಡುತ್ತಿದ್ದ. ಆಗ ಈ ಯುದ್ಧ ಸಂಭವಿಸುತ್ತಿರಲಿಲ್ಲ. ಈಗಲೂ ಯುಧಿಷ್ಠಿರ ಅದೇ ರಾಗ ಹಾಡುತ್ತಿದ್ದಾನೆ. ಅವನು ಬದಲಾಗಿಲ್ಲ. ಈ ದುರ್ಯೋಧನನೂ ಬದಲಾಗುವುದಿಲ್ಲ. ಹಾಡಿದ್ದನೇ ಹಾಡಿ ಏನು ಪ್ರಯೋಜನ?

ಆದರೂ ಭೀಷ್ಮರ ಕಣ್ಣುಗಳು ದುರ್ಯೋಧನನ ಕಣ್ಣುಗಳನ್ನು ಸಂಧಿಸಿದವು. ದುರ್ಯೋಧನನಿಗೆ ಅವರ ಭಾವ ಅರ್ಥವಾಗಿ ಕಣ್ಣು ಮುಚ್ಚಿಕೊಂಡ. ನಿಧಾನವಾಗಿ ಭೀಷ್ಮರೆಂದರು : ಯುಧಿಷ್ಠಿರನೆಂದದ್ದು ಕೇಳಿಸಿಕೊಂಡೆಯಾ ಮಗೂ? ಅವನು ರಾಜ್ಯದಾಹಿಯಲ್ಲ. ಯುದ್ಧದ ಪರಿಣಾಮವೇನೆಂಬುದನ್ನು ನನ್ನನ್ನು ನೋಡಿ ಅರ್ಥಮಾಡಿಕೋ. ಯುದ್ಧ ನಿಲುಗಡೆಗಾಗಿ ನನ್ನ ಬಲಿದಾನವಾಯಿತೆಂಬ ನೆಮ್ಮದಿಯ ಮರಣವನ್ನು ನನಗೆ ದಯಪಾಲಿಸುತ್ತೀಯಾ ಮಗೂ? ಇಂದು ನನಗಾದದ್ದು ನಾಳೆ ನಿನಗಾದೀತು. ಒಂದು ಕಾಲದಲ್ಲಿ ಯುದ್ಧದಿಂದ ಸಮಸ್ಯೆ ಪರಿಹಾರವಾಗುತ್ತದೆಂದು ಭಾವಿಸಿದ್ದವ ನಾನು. ನನ್ನ ವಿಜಯಗಳಿಗೆ ಹೆಮ್ಮೆ ಪಟ್ಟವನು. ಆದರೆ ಮಗೂ, ಈಗ ನನಗೆ ಅರ್ಥವಾಗಿದೆ ಯುದ್ಧದಲ್ಲಿ ಯಾರಿಗೂ ಗೆಲುವು ದಕ್ಕುವುದಿಲ್ಲವೆಂಬ ಶಾಶ್ವತ ಸತ್ಯ. ಮಾನವನ ಜೀವನದಲ್ಲಿ ಕೊನೆಗೂ ಉಳಿಯುವುದು ಆತನ ಬಾಹ್ಯ ವಿಜಯಗಳಲ್ಲ. ತನ್ನ ಮೇಲೆ ತಾನು ಸಾಧಿಸುವ ವಿಜಯವೇ ನಿಜವಾದ ವಿಜಯ. ನ್ಯಾಯ ಮತ್ತು ಧರ್ಮಪ್ರಕಾರ ಪಾಂಡವರಿಗೆ ಏನನ್ನು ಕೊಡಬೇಕಾಗಿದೆಯೋ ಅದನ್ನು ಕೊಡು. ಚಂದ್ರವಂಶದ ಸರ್ವನಾಶಕ್ಕೆ ನೀನು ಕಾರಣನಾಗುತ್ತಿರುವುದನ್ನು ಅರ್ಥಮಾಡಿಕೋ. ಇತಿಹಾಸದ ಪಥ ಬದಲಾಯಿಸಲು ಈಗಲೂ ನಿನಗೆ ಸಾಧ್ಯವಿದೆ.”

ಭೀಷ್ಮರ ತಲೆ ಈಗಲೂ ದುರ್ಯೋಧನನ ತೊಡೆಯ ಮೇಲಿತ್ತು. ಅವನಿಗೆ ಅವರ ಪ್ರಖರ ದೃಷ್ಟಿಯನ್ನು ಎದುರಿಸಲು ಸಾಧ್ಯವಾಗದೆ ಕಣ್ಣು ಮುಚ್ಚಿಕೊಳ್ಳಬೇಕಾಯಿತು. ಅದೇ ಸ್ಥತಿಯಲ್ಲಿ ಅವನು ಕಷ್ಟಪಟ್ಟು ಮಾತಾಡಿದ: “ತಾತಾ, ಯುದ್ಧ ನಿಶ್ಚಯವಾಗುವಾಗ ನಾನು ಗೆದ್ದೇ ಗೆಲ್ಲುತ್ತೇನೆಂಬ ಹಮ್ಮು ನನ್ನಲ್ಲಿರಲಿಲ್ಲ. ಹಸ್ತಿನಾವತಿಯ ಆಧಾರಸ್ತಂಭವೇ ಉರುಳಿ ಬಿದ್ದಮೇಲೆ ವಿಜಯದ ಕನಸು ಕಾಣುವ ಭಾಗ್ಯವೂ ನನಗಿಲ್ಲ. ಆದರೆ ತಾತಾ, ಈಗ ಯುದ್ಧ ನಿಲ್ಲಿಸಿದರೆ ಭೀಷ್ಮರ ಪತನಕ್ಕಾಗಿಯೇ ನಡೆದ ನಾಟಕವಿದು ಎಂದು ಜನರಾಡಿಕೊಳ್ಳುವುದಿಲ್ಲವೆ? ಹಸ್ತಿನಾವತಿಯ ಚಂದ್ರವಂಶೀಯರ ನಡವಳಿಕೆಯನ್ನು ಆರ್ಯಾವರ್ತದ ಕ್ಷತ್ರಿಯರು ಮಾದರಿಯಾಗಿ ಸ್ವೀಕರಿಸುತ್ತಾರೆ. ಒಮ್ಮೆ ಆರಂಭಿಸಿದ ಯುದ್ಧವನ್ನು ಜಯಾಪಜಯಗಳ ನಿರ್ಣಯವಿಲ್ಲದೆ ನಿಲ್ಲಿಸುವುದು ಕ್ಷಾತ್ರಧರ್ಮಕ್ಕೆ ವಿರುದ್ಧವಾಗುವುದಿಲ್ಲವೆ? ಎಳವೆಯಲ್ಲಿ ನನ್ನನ್ನು ತೊಡೆಯ ಮೇಲೆ ಕುಳ್ಳಿರಿಸಿ ಪಾಠ ಹೇಳಿಕೊಡುತ್ತಿದ್ದವರು ನೀವು. ಅಡಿಯ ಮುಂದಿಡುವುದೇ ಸ್ವರ್ಗವಲ್ಲವೆ? ಯುದ್ಧ ನಿಲ್ಲಿಸಿ ಹೇಡಿಯೆನಿಸುವುದಕ್ಕಿಂತ ಯುದ್ಧದಲ್ಲಿ ಸೋಲುಂಡರೂ ಆದೀತು. ಯುದ್ಧ ನಿಲುಗಡೆಯ ಮಾತು ಬೇಡ.”

ಭೀಷ್ಮರು ಮಾತು ಮುಂದುವರಿಸಲಿಲ್ಲ. ಬಾಣ ಚುಚ್ಚಿದ ಭಾಗದ ನೋವು ರಣಾಂಗಣವನ್ನು ನೆನಪಿಗೆ ತಂದಿತು. ಒಮ್ಮೆ ಬಿಡದಿಯ ಉದ್ದಗಲಕ್ಕೆ ಕಣ್ಣು ಹಾಯಿಸಿದರು. ಅದು ಕಣ್ಣಿಗೆ ಬೀಳಲಿಲ್ಲ. ಅದು ಹೆಣ್ಣೂ ಅಲ್ಲದ, ಗಂಡೂ ಅಲ್ಲದ ಒಂದು ವಿಚಿತ್ರ ಆಕೃತಿ. ಹತ್ತನೆಯ ದಿನದ ಯುದ್ಧಾರಂಭದ ಸನ್ನಿವೇಶದಲ್ಲಿ ಇದ್ದಕ್ಕಿದ್ದಂತೆ ಅನೂಹ್ಯವಾಗಿ ತನ್ನೆದುರು ಕಾಣಿಸಿಕೊಂಡ ಅದನ್ನು ನೋಡಿ ಅವರು ಆಶ್ಚರ್ಯ ಚಕಿತರಾಗಿದ್ದರು. ಅದು ಸೀರೆಯುಟ್ಟಿತ್ತು; ಎದೆಗವಚ ತೊಟ್ಟಿತ್ತು. ತಲೆಯಲ್ಲಿ ಶಿರಸ್ತ್ರಾಣವಿತ್ತು. ಆದರೆ ಮುಖದಲ್ಲಿ ಗಂಡು ಕಳೆಯಿರಲಿಲ್ಲ. ಹಣೆಯಲ್ಲಿ ಢಾಳಾದ ಉದ್ದನೆಯ ಕುಂಕುಮದ ನಾಮ. ಕಳೆದ ಒಂಬತ್ತು ದಿನಗಳ ಯುದ್ಧದಲ್ಲಿ ಅದನ್ನು ಒಮ್ಮೆಯೂ ಸಂಧಿಸಿರಲಿಲ್ಲ. ಪ್ರಚ್ಛನ್ನ ವೇಷಧಾರಿಯಾಗಿ ಯುದ್ಧಕ್ಕೆ ಬರಬೇಕಾದ ಅಗತ್ಯವಾಗಲೀ, ಅನಿವಾರ್ಯವಾಗಲೀ ಯಾರಿಗೂ ಇರಲಿಲ್ಲ. ಅದು ಧರ್ಮಕ್ಷೇತ್ರವಾದ ಕುರುಕ್ಷೇತ್ರದಲ್ಲಿ ನಡೆಯುವ ಧರ್ಮಯುದ್ಧ. ಅಜ್ಞಾತಪರ್ವದಲ್ಲಿ ಅರ್ಜುನ ಬೃಹನ್ನಳೆಯಾಗಿ ವಿರಾಟನಗರಿಯಲ್ಲಿ ಇದೇ ವೇಷದಲ್ಲಿ ಇದ್ದಿರಬೇಕು. ಆದರೆ ಇದು ವೇಷವಲ್ಲ, ವಾಸ್ತವ.

ಭೀಷ್ಮರು ಯುಧಿಷ್ಠಿರನತ್ತ ನೋಟ ಹಾಯಿಸಿದರು. “ಮಗೂ, ಅದು ಯಾರು ನನ್ನ ಹೃದಯಕ್ಕೇ ಗುರಿ ಇಟ್ಟು ನನ್ನನ್ನು ಈ ಸ್ಥತಿಗೆ ತಂದವರು? ಆ ವ್ಯಕ್ತಿಯನ್ನು ನೋಡಿ ನಾನು ಅಯೋಮಯನಾಗಿ ನಿಂತುಬಿಟ್ಟೆ. ಯಾವ ಪ್ರೇರೇಪಣೆಯೂ ಇಲ್ಲದೆ ಆ ವ್ಯಕ್ತಿ ಬಾಣ ಪ್ರಯೋಗಿಸಿ ಬಿಟ್ಟಿತು. ಅಷ್ಟೇ ನನ್ನ ನೆನಪಿನಲ್ಲಿರುವುದು. ಮತ್ತೆ ಎಚ್ಚರವಾದಾಗ ಇಲ್ಲಿದ್ದೇನೆ. ಹೇಳು ಮಗೂ, ಅದು ಯಾರು?”

ಯುಧಿಷ್ಠಿರ ಅವನತ್ತ ಮುಖನಾಗಿ ಉತ್ತರಿಸಿದ: “ಅವನು ದ್ರುಪದ ಪುತ್ರ ಶಿಖಂಡಿ. ಅವನ ರಥವನ್ನು ನೀವು ಸರಿಯಾಗಿ ನೋಡಲಿಲ್ಲವೆನಿಸುತ್ತದೆ. ರಥದ ಮೇಲೆ ಪಾಂಚಾಲದೇಶದ ಧ್ವಜವಿತ್ತು. ಅವನು ಧೃಷ್ಟದ್ಯುಮ್ಮ, ದ್ರೌಪದಿಯರಿಗಿಂತ ಮೊದಲು ಹುಟ್ಟಿದವನು. ಅವನ ದೇಹಸ್ಥತಿ ಹೇಗಿದ್ದರೂ ಅಸಾಧಾರಣ ವಿಕ್ರಮಿ. ಆದರೆ ತಾತಾ ನೀವು ಸ್ವಲ್ಪ ಎಚ್ಚರವಹಿಸುತ್ತಿದ್ದರೆ ಈ ಸ್ಥತಿ ನಿಮಗೆ ಬಂದೊದಗುತ್ತಿರಲಿಲ್ಲ.”

ಪಾಂಚಾಲದ ದೊರೆ ದ್ರುಪದನ ವಿಚಿತ್ರ ಸಂತಾನದ ಬಗ್ಗೆ ಗೂಢಚರರು ಬಹಳ ಹಿಂದೆ ಹೇಳಿದ್ದು ಭೀಷ್ಮರಿಗೆ ನೆನಪಾಯಿತು. ಅಜ್ಞಾನಿ ದ್ರುಪದ ತನ್ನ ರಕ್ತಸಂಬಂಧದ ಅತಿ ನಿಕಟ ಬಂಧುವೊಬ್ಬಳನ್ನು ವಿವಾಹವಾಗಿದ್ದ. ರಕ್ತಸಂಬಂಧ ಮತ್ತು ಸಗೋತ್ರ ವಿವಾಹದ ಪರಿಣಾಮವೇ ಇರಬೇಕು, ಅತ್ತ ಗಂಡೂ ಅಲ್ಲದ, ಇತ್ತ ಹೆಣ್ಣೂ ಅಲ್ಲದ ವಿಚಿತ್ರ ಸಂತಾನಕ್ಕೆ ಜನ್ಮ ನೀಡಿದ. ಪಾಂಚಾಲದ ಭಾವೀ ದೊರೆಯೆಂದು ಅದನ್ನು ಯಾರೂ ಒಪ್ಪಿಕೊಳ್ಳಲಾರರೆಂದು ಅವನಿಗೆ ಅಂದೇ ಖಚಿತವಾಗಿತ್ತು. ಅದಕ್ಕಿಂತಲೂ ಮುಖ್ಯವಾಗಿ ದ್ರೋಣಾಚಾರ್ಯರ ಶಿಷ್ಯರಿಂದ ಭಂಗಿತನಾಗಿ ಅರ್ಧರಾಜ್ಯ ಕಳಕೊಂಡಿದ್ದ ದ್ರುಪದನಲ್ಲಿ ಪ್ರತೀಕಾರ ವಾಸನೆ ತೀವ್ರವಾಗಿತ್ತು. ತನ್ನ ಪತ್ನಿಯಲ್ಲಿ ಸಾಮಥ್ರ್ಯಶಾಲೀ ಗಂಡು ಸಂತಾನವನ್ನು ಪಡೆಯಲು ಸಾಧ್ಯವಾಗದೆಂದು ಯೋಚಿಸಿದ ದ್ರುಪದ ಆರೋಗ್ಯವಂತ ಕುಮಾರನೊಬ್ಬನನ್ನು ಮತ್ತು ಕುಮಾರಿಯೊಬ್ಬಳನ್ನು ದತ್ತಕ ತೆಗೆದುಕೊಂಡ. ಅವರನ್ನು ಯಜ್ಞಮುಖೇನ ಶುದ್ಧೀಕರಣ ಮಾಡಿ ಯಜ್ಞ ಸಂಭವರೆಂದು ಕರೆದ. ಕ್ಷತ್ರಿಯರಂತೆ ಬೆಳೆಸಿ ಪೂರ್ವಾಶ್ರಮದ ವಾಸನೆ ಸ್ವಲ್ಪವೂ ಉಳಿಯದಂತೆ ನೋಡಿಕೊಂಡ. ದ್ರೋಣನಿಂದಾದ ಪರಾಭವದ ಕತೆಯನ್ನು ಹೇಳಿ ಹುಡುಗನಲ್ಲಿ ದ್ರೋಣದ್ವೇಷದ ಕಿಚ್ಚನ್ನು ಹೊತ್ತಿಸಿದ. ಹುಡುಗನಿಗೆ ಧೃಷ್ಟದ್ಯುಮ್ಮನೆಂದು ಹೆಸರಿರಿಸಿದ. ಹುಡುಗಿ ದ್ರೌಪದಿಯಾದಳು. ಲೋಕ ಅವರಿಬ್ಬರನ್ನು ದ್ರುಪದ ಸಂತತಿಯೆಂದೇ ಭಾವಿಸಿತು. ಯುಧಿಷ್ಠಿರನಿಗೂ ಸತ್ಯಸಂಗತಿ ತಿಳಿದಿರಲಿಲ್ಲ. ಈಗ ದ್ರುಪದನ ನಿಜ ಸಂತತಿಯಿಂದ ಹಸ್ತಿನಾವತಿಯ ಆಧಾರ ಸ್ತಂಭ ಕಳಚಿಬಿದ್ದಿದೆ. ಇನ್ನು ಆ ದತ್ತಕ ಸಂತತಿಯಿಂದ ಏನೇನು ಆಗಲಿದೆಯೊ? ದ್ರುಪದನ ನಿಜ ಸಂತತಿಯಾದ ಶಿಖಂಡಿ ಗಂಡೂ ಅಲ್ಲ, ಹೆಣ್ಣೂ ಅಲ್ಲ! ಭೀಷ್ಮರು ಹಳೆಯ ನೆನಪಿನಿಂದ ಕಂಪಿಸಿಬಿಟ್ಟರು.

ಅವರ ತಲೆಯನ್ನು ತೊಡೆಯ ಮೇಲಿರಿಸಿಕೊಂಡ ದುರ್ಯೋಧನನೂ ಕಂಪಿಸಿದ. ಭೀಷ್ಮರ ಅಂತ್ಯ ಸಮೀಪಿಸಿತೇನೋ ಎಂದು ಕಳವಳಿಸಿ ಕೇಳಿದ: “ಏನಾಯಿತು ತಾತಾ? ಉಸಿರಾಡಲು ಕಷ್ಟವಾಗುತ್ತಿದೆಯೆ?”

ಭೀಷ್ಮರು ಸಹಜ ಸ್ಥತಿಗೆ ಮರಳಿದರು. ಮಗೂ ಅಪಶಕುನದ ಮಾತುಗಳೆಂದು ಭಾವಿಸಬೇಡ. ಎಳವೆಯಿಂದ ಇಲ್ಲಿಯವರೆಗಿನ ಘಟನೆಗಳಲ್ಲಿ ಕೆಲವನ್ನು ಬೇಡವೆಂದರೂ ಮರೆಯಲಾಗುತ್ತಿಲ್ಲ. ಕೆಲವು ತಪ್ಪುಗಳು ನಮ್ಮ ಅಚಾತುರ್ಯದಿಂದ ಸಂಭವಿಸುತ್ತವೆ. ಕೆಲವನ್ನು ನಾವು ಗೊತ್ತಿದ್ದೇ ಮಾಡುತ್ತೇವೆ. ನೀನೇ ಯೋಚಿಸಿ ನೋಡು. ಅಂದು ಕಪಟದ್ಯೂತದಲ್ಲಿ ಧೃತರಾಷ್ಟ್ರ ರಾಜ್ಯವನ್ನು ಕಳಕೊಂಡಾಗಲೂ ಆಟ ನಿಲ್ಲಿಸಲಿಲ್ಲ. ತನ್ನ ಸೋದರರನ್ನು, ತನ್ನನ್ನು, ಕೊನೆಗೆ ದ್ರೌಪದಿಯನ್ನು ಪಣವಾಗಿಟ್ಟು ಸೋತ. ಅಷ್ಟಕ್ಕೇ ತೃಪ್ತನಾಗುವ ಬದಲು ನೀನು ರಜಸ್ವಲೆಯಾಗಿದ್ದ ದ್ರೌಪದಿಯನ್ನು ತುಂಬಿದ ಸಭೆಗೆ ಎಳೆದು ತರುವಂತೆ ದುಶ್ಶಾಸನನಿಗೆ ಆಜ್ಞಾಪಿಸಿದೆ. ಅವನು ಸೆರಗಿಗೆ ಕೈಹಾಕಿ ಮಾನಭಂಗಕ್ಕೆ ಮುಂದಾದ. ಈ ಕೃಷ್ಣ ಸಕಾಲಕ್ಕೆ ಆಗಮಿಸಿ ಅವಳ ಮಾನಹರಣವಾಗದಂತೆ ತಡೆದ. ಆದರೆ ಅಂದು ಭೀಮ ಮಾಡಿದ ಪ್ರತಿಜ್ಞೆಗಳು ಹಾಗೆಯೇ ಉಳಿದಿವೆ. ಯುದ್ಧ ಈಗ ನಿಲುಗಡೆಯಾದರೆ ಆ ಪ್ರತಿಜ್ಞೆಗಳು ಅರ್ಥ ಕಳೆದುಕೊಳ್ಳುತ್ತವೆ. ಮಗೂ, ನೀನೂ ಬದುಕು. ಬೇರೆಯವರನ್ನೂ ಬದುಕಗೊಡು.”

ತಕ್ಷಣ ದುರ್ಯೋಧನನೆಂದ: “ತಾತಾ, ನೀವು ಅರ್ಧಕ್ಕೇ ನಿಲ್ಲಿಸಿದಿರಿ. ಪಾಂಡವರನ್ನು ಮತ್ತು ದ್ರೌಪದಿಯನ್ನು ಧೃತರಾಷ್ಟ್ರ ಮಹಾಪ್ರಭುಗಳು ದಾಸ್ಯವಿಮುಕ್ತಿಗೊಳಿಸಿ ಇಂದ್ರಪ್ರಸ್ಥವನ್ನು ಅವರಿಗೇ ಬಿಟ್ಟುಕೊಟ್ಟರು. ಆದರೆ ಸೋಲುತ್ತೇನೆಂದು ಗೊತ್ತಿದ್ದೂ ಮತ್ತೆ ದ್ಯೂತವಾಡಿದನಲ್ಲಾ ಈ ಯುಧಿಷ್ಠಿರ? ಅವನ ದ್ಯೂತವ್ಯಸನವೇ ಇಂದಿನ ಈ ಅನಾಹುತಕ್ಕೆ ಕಾರಣ. ಸೋಲು ಖಚಿತವಾದರೂ ದ್ಯೂತವನ್ನು ರಾಜಧರ್ಮವೆಂದು ಈ ಯುಧಿಷ್ಠಿರ ಹೇಳಿದ್ದು ನೆನಪಿದೆಯಾ ತಾತಾ? ಕ್ಷತ್ರಿಯನಿಗೆ ದ್ಯೂತದಂತೆ ಯುದ್ಧವೂ ರಾಜಧರ್ಮ. ಅಲ್ಲಿ ಸೋಲು, ಗೆಲುವು ಮುಖ್ಯವಾಗುವುದಿಲ್ಲ.”

ಭೀಷ್ಮರು ಕೃಷ್ಣನತ್ತ ದೃಷ್ಟಿ ಹಾಯಿಸಿದರು. ಅವನು ಭಾವರಹಿತನಾಗಿ ನಿಂತಿದ್ದ. ಬುದ್ಧಿವಂತರು ಹೆಚ್ಚು ಮಾತಾಡುವುದಿಲ್ಲ. ದೃಷ್ಟಿಯನ್ನು ಯುಧಿಷ್ಠಿರನತ್ತ ಹೊರಳಿಸಿ ಭೀಷ್ಮರು ಕೈಸನ್ನೆ ಮಾಡಿದರು. ಯುಧಿಷ್ಠಿರ ಮಂಚದ ಬಳಿಗೆ ಬಂದು ಬಾಗಿದ. ಅವನ ಎರಡೂ ಕೈಗಳನ್ನು ಬೊಗಸೆಯಲ್ಲಿ ಹಿಡಿದುಕೊಂಡು ಇಳಿದನಿಯಲ್ಲಿ ಭೀಷ್ಮರೆಂದರು: “ಮಗೂ, ಒಟ್ಟು ವ್ಯವಸ್ಥೆಯಲ್ಲಿ ನಾವೆಲ್ಲಾ ಹೇಗೆ ಅಸಹಾಯಕರಾಗುತ್ತಿದ್ದೇವೆ ನೋಡು. ಯುದ್ಧ ಬೇಡವೆಂದರೂ ನಿಲ್ಲಿಸಲಾಗದ ಯುದ್ಧ ಬೇಕೆಂದರೂ ಮುಂದುವರಿಸಲಾಗದ ಸ್ಥತಿ ನನ್ನದು. ಹೆಣ್ಣುಗಳಿಗೆ ಸೋಲದ, ಗಂಡು ಗಳಿಂದ ಸೋಲಿಸಲಾಗದ ಭೀಷ್ಮನನ್ನು ಒಬ್ಬ ಶಿಖಂಡಿ ಈ ಅವಸ್ಥೆಗೆ ತಂದು ಮಲಗಿಸುತ್ತಾನೆ. ಮನಸ್ಸಾಕ್ಷಿಗನುಗುಣವಾಗಿ ವರ್ತಿಸಲಾಗದ ಶಿಖಂಡಿ ಸ್ಥತಿಯಲ್ಲಿ ನಾವು ಬದುಕಬೇಕಾಗಿದೆ. ಏನೆಲ್ಲಾ ಆಗಬೇಕಾಗಿದೆಯೋ ಅದೆಲ್ಲಾ ಆಗಿ ಹೋಗಲಿ. ಯುದ್ಧ ಮುಂದುವರಿಯಲಿ. ಧರ್ಮಕ್ಕೆ ಜಯವಾಗಲಿ.”

ಭೀಷ್ಮರು ಮಾತು ನಿಲ್ಲಿಸಿದರು. ಪಾಂಡವರು ತಲೆಬಾಗಿ ಅವರಿಗೆ ವಂದಿಸಿ ಕೃಷ್ಣನೊಡನೆ ಬಿಡದಿಯಿಂದ ಹೊರಬಿದ್ದರು. ದುರ್ಯೋಧನ ಮೊದಲಿನ ಹಾಗೆ ಕುಳಿತೇ ಇದ್ದ. ಅವನ ದೃಷ್ಟಿಯೊಡನೆ ದೃಷ್ಟಿ ಬೆರೆಸಿ ಭೀಷ್ಮರೆಂದರು: “ಮಗೂ, ತಪ್ಪೋ, ಸರಿಯೋ, ನಿನ್ನಲ್ಲೊಂದು ಬದ್ಧತೆಯಿದೆ. ಯುದ್ಧ ನಿಲುಗಡೆಯಿಲ್ಲವೆಂದು ನೀನೇ ಹೇಳಿದ ಮೇಲೆ ಹೀಗೆ ನೀನು ಕುಳಿತಿರುವುದು ಸರಿಯಲ್ಲ. ನೀನಿನ್ನು ಹೊರಡು. ಇಲ್ಲಿ ವೈದ್ಯರಿರುತ್ತಾರೆ; ಪ್ರತೀಹಾರಿ ಇರುತ್ತಾನೆ. ಎಂದಾದರೂ ಒಂದು ದಿನ ಬೀಳಲೇಬೇಕಾದ ದೇಹ ಇದು. ನನ್ನ ಚಿಂತೆ ಬಿಡು. ಇನ್ನು ಕೌರವ ಸೇನೆಯನ್ನು ಸಮರ್ಥವಾಗಿ ನಡೆಸಬಲ್ಲವರೆಂದರೆ ಗುರುದ್ರೋಣರು ಮಾತ್ರ. ಅವರಿಗೆ ಸೇನಾಧಿಪತ್ಯವನ್ನು ವಹಿಸಿಕೊಡು.”

ದುರ್ಯೋಧನ ತಾತನ ತಲೆಯನ್ನು ನಿಧಾನವಾಗಿ ಮೇಲಕ್ಕೆತ್ತಿ, ತಾನು ಎದ್ದು, ದಿಂಬನ್ನು ಆಧಾರವಾಗಿ ಇಟ್ಟ. ದ್ರೋಣ, ಶಲ್ಯ, ಕರ್ಣ ಮಂಚದ ಸಮೀಪಕ್ಕೆ ಬಂದರು. “ಮಗೂ, ನಾನು ಧರಿಸಿರುವುದು ಕುರು ಸೇನಾನಾಯಕನ ಶಿರಸ್ತ್ರಾಣ. ಇದನ್ನು ಮೆಲ್ಲನೆ ತೆಗೆದು ಬಿಡು. ಇಲ್ಲಿರುವವರು ಇದಕ್ಕೆ ನಮಸ್ಕರಿಸಿ ದ್ರೋಣಾಚಾರ್ಯರ ಶಿರದ ಮೇಲಿಟ್ಟುಬಿಡಿ. ಇದೊಂದು ಶುಭಕಾರ್ಯವೆಂದು ತಿಳಿದುಕೊಳ್ಳಿ. ಯಾವುದೇ ಶುಭಕಾರ್ಯಕ್ಕೆ ಮುಹೂರ್ತವಿಟ್ಟುಕೊಳ್ಳಬೇಕಾಗಿಲ್ಲ. ಈಗಿನ ವೇಳೆಯೇ ಶುಭವೇಳೆ. ಹೊತ್ತು ಕಳೆಯುವುದು ಬೇಡ. ಯುದ್ಧ ಮುಂದುವರಿಯಲಿ.”

ಸೇನಾಧಿಪತಿಯ ಕಿರೀಟಧಾರಣೆ ಮಾಡಿಸಿಕೊಂಡ ಆಚಾರ್ಯ ದ್ರೋಣರು ಭೀಷ್ಮರ ಪಾದಗಳನ್ನು ಮುಟ್ಟಿ ಕಣ್ಣಿಗೊತ್ತಿಕೊಂಡರು: “ನಿಮ್ಮ ಶಿರವನ್ನಲಂಕರಿಸಿದ ಈ ಕಿರೀಟವನ್ನು ಹೊರುವ ಯೋಗ್ಯತೆ ನನಗಿಲ್ಲ. ನಿಮ್ಮ ವಿಶ್ವಾಸ ದೊಡ್ಡದು. ಯುದ್ಧದಲ್ಲಿ ಜಯಶಾಲಿಯಾಗುವಂತೆ ನೀವು ಆಶೀರ್ವದಿಸಬೇಕು.”

ಎದೆ ನೋಯುತ್ತಿದ್ದರೂ ಭೀಷ್ಮರು ನಕ್ಕರು: “ಆಚಾರ್ಯ ದ್ರೋಣರೇ, ಕೇವಲ ಆಶೀರ್ವಾದದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲವೆನ್ನುವುದು ನಿಮಗೂ ಗೊತ್ತಿರುವ ಸತ್ಯ. ನಮ್ಮ ಹಾಗೆ ಯೋಚಿಸುವವರು ಹೇಳಬಹುದಾದ ಮಾತನ್ನು ಹೇಳುತ್ತಿದ್ದೇನೆ. ಎಲ್ಲರೂ ಹೋಗಿ ಬನ್ನಿ. ಧರ್ಮಕ್ಕೆ ಜಯವಾಗಲಿ.”

ವೈದ್ಯರು ಮತ್ತು ಪ್ರತೀಹಾರಿಯನ್ನು ಬಿಟ್ಟು ಉಳಿದವರು ಭೀಷ್ಮರಿಗೆ ವಂದಿಸಿ ಬಿಡದಿ ಯಿಂದ ಹೊರಬಿದ್ದರು. ಭೀಷ್ಮರು ನೋವಿನಿಂದ ಕಣ್ಣುಮುಚ್ಚಿಕೊಂಡರು. ಅವರ ನೆನಪು ಹಿಂದಕ್ಕೋಡಿತು. ಅಂದು ಗುರು ಪರಶುರಾಮರೊಡನೆ ಯುದ್ಧ ಮಾಡಿ ಅವರನ್ನು ಸೋಲಿಸಿದ್ದೆ. ಇಂದು ಒಬ್ಬ ಶಿಖಂಡಿಯಿಂದಾಗಿ ಮೇಲೇಳದಂತಾಗಿದ್ದೇನೆ. ಗುರು ಪರಶುರಾಮರು ಒಬ್ಬ ಗಂಡು. ನಾನೂ ಓರ್ವ ಗಂಡು. ಆದರೆ ಈ ಶಿಖಂಡಿ ಗಂಡೂ ಅಲ್ಲದ ಹೆಣ್ಣು ಅಲ್ಲ! ಕಿವಿಯಲ್ಲಿ ಆ ಮಾತುಗಳು ಅನುರಣನಗೊಳ್ಳತೊಡಗಿದವು.

“ಮುಂದಿನ ಜನ್ಮ ಅಂತನ್ನುವುದು ಒಂದು ಇರುವುದೇ ಆದಲ್ಲಿ, ಗಂಡೂ ಅಲ್ಲದ, ಹೆಣ್ಣೂ ಅಲ್ಲದ ಜೀವಿಯಾಗಿ ನಿನ್ನನ್ನು ಕೊಲ್ಲುತ್ತೇನೆ.”

ಹಾಗಾದರೆ ಇದು ಅವಳೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವ್ಯತ್ಯಾಸ
Next post ತನ್ನ ಕೈಯಿಂದಲೇ ಪ್ರಕೃತಿ ಸೃಷ್ಟಿಸಿ ತೆಗೆದ

ಸಣ್ಣ ಕತೆ

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

cheap jordans|wholesale air max|wholesale jordans|wholesale jewelry|wholesale jerseys