ಹಿಂದಿ ಚಿತ್ರರಂಗದಲ್ಲಿ ಹೊಸಗಾಳಿ ಬೀಸುತ್ತಿದೆಯೆಂದೂ ಆ ರೀತಿಯ ಗಾಳಿ ಕನ್ನಡ ಚಿತ್ರಪಟದಲ್ಲಿ ಯಾಕಿಲ್ಲವೆಂದೂ ಕೆಲವರು ಕೇಳುತ್ತಿದ್ದಾರೆ. ಇಂತಹ ಕೇಳುಗರು ಮತ್ತು ನೋಡುಗರು ಒಂದೇ ಎಂದು ಹೇಳುವ ‘ಧೈರ್ಯ’ ನನಗಿಲ್ಲ. ಯಾಕೆಂದರೆ ಹಿಂದಿ ಚಿತ್ರಗಳನ್ನು ನೋಡಿ ಕನ್ನಡ ಚಿತ್ರರಂಗಕ್ಕೆ ಪ್ರಶ್ನೆ ಹಾಕುವವರೆಲ್ಲರೂ ಕನ್ನಡ ಚಿತ್ರಗಳ ನಿಷ್ಠಾವಂತ ನೋಡುಗರೆಂಬ ನಂಬಿಕೆ ನನಗಿಲ್ಲ. ಕೆಲವರು ಎರಡೂ ಭಾಷೆಯ ಚಿತ್ರಗಳನ್ನು ನೋಡುತ್ತಿರಬಹುದು. ಕನ್ನಡ ಚಿತ್ರಗಳ ಒಳಿತಿನ ಬಗ್ಗೆ ಆಸಕ್ತಿಯುಳ್ಳವರೂ ಆಗಿರಬಹುದು. ಆದರೆ ನಮ್ಮ ಸನ್ನಿವೇಶ ಎಂತಹ ವ್ಯಂಗ್ಯ ಮತ್ತು ವಿರೋಧಾಭಾಸಗಳಿಂದ ಕೂಡಿದೆಯಂದರೆ ಎಷ್ಟೋ ಸಾರಿ ಕೇಳುಗ ಮತ್ತು ನೋಡುಗ ಒಂದೇ ಆಗಿರುವುದಿಲ್ಲ. ಕನ್ನಡದಲ್ಲಿ ಹಿಂದಿಯಲ್ಲಿರುವ ಹೊಸಗಾಳಿ ಯಾಕೆ ಇಲ್ಲ ಎಂದು ಕೇಳುವವರಲ್ಲಿ ಅನೇಕರು ಕನ್ನಡ ಚಿತ್ರಮಂದಿರಗಳ ಗಾಳಿಯನ್ನೇ ಕುಡಿದಿರುವುದಿಲ್ಲ. ಕನ್ನಡದಲ್ಲಿ ಹೊಸಪ್ರಯತ್ನಗಳನ್ನು ಮಾಡುತ್ತಲೇ ಬಂದಿರುವವರು ಕರೆಯುವ ವಿಶೇಷ ಪ್ರದರ್ಶನಗಳಿಗೆ ಬಂದು ನೋಡುವ ಎಷ್ಟು ಮಂದಿ ತಾವಾಗಿಯೇ ಇಂತಹ ಚಿತ್ರಗಳನ್ನು ಚಿತ್ರಮಂದಿರಕ್ಕೆ ಹೋಗಿ ನೋಡುತ್ತಾರೆ? ಈ ಪ್ರಶ್ನೆ ಕೆಲವರಿಗೆ ಬೇಸರ ತರಿಸಬಹುದು. ಆದರೆ ಕೇಳುಗ ನೋಡುಗನೂ ಆಗಿರಬೇಕೆಂಬುದಷ್ಟೇ ನನ್ನ ಕಾಳಜಿ ಮತ್ತು ಕಳಕಳಿ.
ಇನ್ನು, ಹಿಂದಿ ಮತ್ತು ಕನ್ನಡ ಚಿತ್ರಗಳ ನೋಡುಗರಲ್ಲಿ ‘ಸಮಾನ ಪ್ರೇಕ್ಷಕರ ಪ್ರಮಾಣ’ ಆಶಾದಾಯಕವಾಗಿಲ್ಲ. ಕೆಲವರು ಮಾತ್ರ ಹಿಂದಿ ಮತ್ತು ಕನ್ನಡ ಚಿತ್ರಗಳನ್ನು ಸಮಾನವಾಗಿ ನೋಡುತ್ತಾರೆ. ಹಿಂದಿ ಚಿತ್ರಗಳಿಗೆ ಹೋಗುವ ಅನೇಕರು ಕನ್ನಡ ಚಿತ್ರಗಳಿಗೆ ಬರುವುದಿಲ್ಲ. ಅಂದರೆ ಪ್ರೇಕ್ಷಕ ವಲಯದ ಪ್ರಮಾಣ, ಪ್ರವೃತ್ತಿ ಮತ್ತು ಅಭಿರುಚಿಗಳಲ್ಲೂ ವ್ಯತ್ಯಾಸವಿರುವುದನ್ನು ಗಮನಿಸಬೇಕು. ಜೊತೆಗೆ ಹಿಂದಿ ಚಿತ್ರರಂಗ ಮತ್ತು ಕನ್ನಡ ಚಿತ್ರರಂಗದ ಮಾರುಕಟ್ಟೆಯ ಪ್ರಮಾಣದಲ್ಲೂ ಅಗಾಧ ವ್ಯತ್ಯಾಸವಿದೆ. ಮಾರುಕಟ್ಟೆಯ ಲೆಕ್ಕಾಚಾರವನ್ನು ಲೆಕ್ಕಿಸದೆ ಚಿತ್ರ ಮಾಡುವ ಮಂದಿ- ಹಿಂದಿ, ಕನ್ನಡ ಮತ್ತು ಎಲ್ಲ ಭಾಷಾವಲಯಗಳಲ್ಲೂ ಕಡಿಮೆಯೆಂದೇ ಹೇಳಬೇಕು.
ಹಿಂದಿಯಲ್ಲಿ ಬರುತ್ತಿರುವ ಹೊಸಬೆಳಕಿಗೆ ನಿದರ್ಶನವಾಗಿ ಲಗಾನ್, ಬ್ಲಾಕ್, ಚೆಕ್‌ದೇ, ತಾರೆ ಜಮೀನ್ ಪರ್ ಮುಂತಾದ ಚಿತ್ರಗಳನ್ನು ಹೆಸರಿಸಲಾಗುತ್ತಿದೆ. ಕನ್ನಡದಲ್ಲಿ ಯಾಕೆ ಇಂತಹ ಪ್ರಯತ್ನಗಳು ಇಲ್ಲ ಎಂದು ಕೇಳಲಾಗುತ್ತಿದೆ. ಹೀಗೆ ಕೇಳುವುದರ ಹಿಂದೆ ಸಹಜ ಕಾಳಜಿಯಿದೆಯೆಂಬುದು ನಿಜ. ಆದರೆ ಎರಡೂ ಚಿತ್ರರಂಗಗಳ ಪರಂಪರೆ, ಪ್ರವೃತ್ತಿ, ಅಭಿರುಚಿ ಮುಂತಾದ ಅಂಶಗಳನ್ನು ಪರಿಗಣಿಸದೆ ಅಂತಿಮ ತೀರ್ಮಾನಕ್ಕೆ ಬರುವುದು ಸರಿಯಲ್ಲ. ಕನ್ನಡವನ್ನು ಹಿಂದಿಗೆ ಹೋಲಿಸಿ ಹತಾಶೆಗೆ ಒಳಗಾಗುವುದು ಸಹ ಸೂಕ್ತವಲ್ಲ. ಯಾಕೆಂದರೆ ಹಿಂದಿ ಮತ್ತು ಕನ್ನಡ ಚಿತ್ರರಂಗಗಳು ಬೆಳೆದು ಬಂದ ಬಗೆಗಳೇ ಬೇರೆ. ಈಗ ‘ಲಗಾನ್’ ಚಿತ್ರದ ವಿಷಯಕ್ಕೆ ಬರೋಣ. ‘ಲಗಾನ್’ ಬರುವುದಕ್ಕೆ ಮುಂಚೆಯೇ ಬ್ರಿಟಿಷರಿಗೆ ಕಂದಾಯ ಕಟ್ಟಲು ಸಾಧ್ಯವಾಗದೆ ಬಂಡೆದ್ದ ಜನಪದ ಕಲಾವಿದನನ್ನು ಕೇಂದ್ರವಾಗಿಟ್ಟು ಕೊಂಡ ‘ಹಗಲುವೇಷ’ ಎಂಬ ಚಿತ್ರವನ್ನು ನಾನೇ ಕತೆ, ಚಿತ್ರಕತೆ, ಸಂಭಾಷಣೆ, ಹಾಡುಗಳನ್ನು ಬರೆದು ನಿರ್ದೇಶಿಸಿದ್ದೆ. ಬಿಡುಗಡೆಯ ಸಂದರ್ಭದಲ್ಲಿ ಆದ ಗಡಿಬಿಡಿಯನ್ನೂ ಒಳಗೊಂಡಂತೆ ಕೆಲವು ಕಾರಣಗಳಿಂದ ಈ ಚಿತ್ರ ಮಾರುಕಟ್ಟೆಯಲ್ಲಿ ಮುಗ್ಗರಿಸಿತು. ಈಗ ಇದೇ ಚಿತ್ರವನ್ನು ‘ಕನ್ನಡದ ಲಗಾನ್’ ಎಂದು ಕರೆದು ಟಿ.ವಿ. ಪರದೆ ಮೇಲೆ ಪ್ರಸಾರ ಮಾಡುತ್ತಿದ್ದಾರೆ. ಆದರೆ ‘ಲಗಾನ್’ ಬಗ್ಗೆ ಚರ್ಚಿಸಿದಂತೆ ಕನ್ನಡದ ಇಂತಹ ಚಿತ್ರಗಳ ಬಗ್ಗೆ ಯಾಕೆ ವ್ಯಾಪಕವಾಗಿ ಚರ್ಚಿಸುವುದಿಲ್ಲ? ಕನ್ನಡದ ಮುಖ್ಯವಾಹಿನಿಯಲ್ಲಿ ನಿರ್ಮಾಣಗೊಳ್ಳುವ ಮನರಂಜನಾತ್ಮಕ ಮೀಡಿಯೋಕರ್ ಹೊಸ ಪ್ರಯತ್ನಗಳನ್ನು ವೈಭವೀಕರಿಸುವ ‘ವಿಮರ್ಶೆಯು’ ಕನ್ನಡದಲ್ಲೇ ಸೃಷ್ಟಿಯಾಗುವ ಪರ್ಯಾಯ ಪ್ರಯತ್ನಗಳನ್ನು ಯಾಕೆ ಮುಂಚೂಣಿಗೆ ತರುವುದಿಲ್ಲ? ಒಂದು ಕನ್ನಡ ಚಿತ್ರದ ‘ನಿರ್ಮಾಣೇತಿಹಾಸ’ ಕುರಿತು ದೀರ್ಘ ಧಾರಾವಾಹಿ ಪ್ರಕಟಿಸುವ ‘ಸುಧಾ’ದಂತಹ ಪತ್ರಿಕೆಯು ಇತರೆ ಹೊಸ ಪ್ರಯತ್ನಗಳಿಗೆ ಅದರ ಕಾಲು ಭಾಗದಷ್ಟಾದರೂ ಅವಕಾಶ ಕಲ್ಪಿಸುವ ನೀತಿಯನ್ನು ಪರಿಪಾಲಿಸಿದೆಯೆ? ಇದು ಒಂದು ಸಿನಿಮಾ, ಒಂದು ಪತ್ರಿಕೆಯ ಪ್ರಶ್ನೆಯಲ್ಲ; ಯಾರನ್ನೂ ದೂರುವುದಕ್ಕಾಗಿ ಅಥವಾ ಟೀಕೆಗಾಗಿ ಈ ಮಾತನ್ನು ಹೇಳುತ್ತಿಲ್ಲ, ಅಭಿರುಚಿಯಲ್ಲಿ ವ್ಯತ್ಯಾಸವಾಗಿರುವುದು ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ಎಂಬ ಅಂಶವನ್ನು ಮನದಟ್ಟು ಮಾಡುವ ಸಂಕೇತವಾಗಿ ಮಾತ್ರ ಈ ಮಾತನ್ನು ಹೇಳುತ್ತಿದ್ದೇನೆ. ಒಂದು ‘ಮಾಸ್ಟರ್ ಪೀಸ್’ ಅನ್ನು ಎಲ್ಲೆ ಮೀರಿ ಎತ್ತಿ ಹಿಡಿಯುವುದಕ್ಕೂ ಮೀಡಿಯೋಕರ್ ಮಾರ್ಗದ ಒಳ್ಳೆಯ ಚಿತ್ರವನ್ನು ಅಗತ್ಯಕ್ಕಿಂತ ಹೆಚ್ಚು ವೈಭವೀಕರಿಸುವುದಕ್ಕೂ ವ್ಯತ್ಯಾಸವಿದೆ. ಒಟ್ಟು ವಾತಾವರಣವೇ ಈ ದಿಕ್ಕಿನಲ್ಲಿ ಸ್ಥಿತ್ಯಂತರಗೊಳ್ಳುತ್ತಿರುವಂತಿದೆ! ಆದ್ದರಿಂದ ಹಿಂದಿಯಲ್ಲಿ ನಡೆಯುತ್ತಿರುವ ಪ್ರಯೋಗಗಳು ಕನ್ನಡದಲ್ಲಿ ಯಾಕಿಲ್ಲ ಎಂದು ಕೇಳುವವರು ಕನ್ನಡದಲ್ಲಿ ನಡೆಯುವ ‘ಪರ್ಯಾಯ ಸಿನಿಮಾ’ ಪ್ರಯತ್ನಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎನ್ನುವುದು ನನ್ನ ವಿನಮ್ರ ವಿನಂತಿ. ಇದರರ್ಥ ಕನ್ನಡದ ಪರ್ಯಾಯ ಪ್ರಯತ್ನಗಳೆಲ್ಲ ಏನಕೇನ ಪ್ರಕಾರೇಣ ಶ್ರೇಷ್ಠವೆಂದೇನೂ ಅಲ್ಲ, ಮಾರುಕಟ್ಟೆಯ ಮಾರಣಹೋಮಕ್ಕೆ ಇಂತಹ ಹೊಸ ಪ್ರಯತ್ನಗಳು ಬಲಿಯಾಗದಿರಲಿ ಎಂಬ ಅಭಿರುಚಿ ಮೂಲ ಕಾಳಜಿ ಅಗತ್ಯ; ಅಷ್ಟೆ.
ಈ ಮಾತುಗಳನ್ನು ಹೇಳುವಾಗ ಇತ್ತೀಚಿನ ವರ್ಷಗಳಲ್ಲಿ ಬಂದಿರುವ ಸೂಕ್ಷ್ಮ ಸಂವೇದನೆಯ ಕೆಲವು ಹಿಂದಿ ಚಿತ್ರಗಳ ಮಹತ್ವವನ್ನು ನಾನು ಖಂಡಿತ ಕಡಿಮೆ ಮಾಡುತ್ತಿಲ್ಲ. ಲಗಾನ್, ಬ್ಲಾಕ್, ಚಕ್‌ದೇ, ತಾರೆ ಜಮೀನ್ ಪರ್ – ಮಾದರಿಯ ಚಿತ್ರಗಳಲ್ಲದೆ ಅಂಡರ್ ವರ್ಲ್ಡ್, ಕ್ರೈಮ್‌ಗಳನ್ನು ಕುರಿತಂತೆಯೂ ವಿಭಿನ್ನ ನಿರೂಪಣೆಯ ಪ್ರಯತ್ನಗಳು ಹಿಂದಿಯಲ್ಲಿ ನಡೆದಿವೆ. ‘ಲಗಾನ್’ ಚಿತ್ರವನ್ನೇ ನೋಡಿ. ನಿಧಾನವಾಗಿ ನಮ್ಮನ್ನು ಆವರಿಸಿಕೊಳ್ಳುವ ಸೊಗಸಾದ ನಿರೂಪಣೆಯುಳ್ಳ ಈ ಚಿತ್ರವು ಮುಖ್ಯವಾಹಿನಿ ನಟನಿಂದ (ಅಮೀರ್ ಖಾನ್) ನಿರ್ಮಾಣ ಗೊಂಡಿದ್ದು ಎನ್ನುವುದು ನಿಜಕ್ಕೂ ಗಮನಾರ್ಹ. ಇದೇ ನಟ ತಾನೇ ನಿರ್ಮಿಸಿ, ನಿರ್ದೇಶಿಸಿದ ‘ತಾರೆ ಜಮೀನ್ ಪರ್’ ಚಿತ್ರವು ಬಹುಶಃ ಉಳಿದ ಹಿಂದಿ ಚಿತ್ರಗಳಿಗಿಂತ ತೀರಾ ಭಿನ್ನವಾದ, ರಾಜಿಯಿಂದ ದೂರವಾದ, ಒಂದು ಸೂಕ್ಷ್ಮ ಸೃಷ್ಟಿ. ಕನ್ನಡದ ನಾಯಕ ನಟರು ಇಂತಹ ಸಂವೇದನಾಶೀಲ ಸಾಹಸಗಳಿಗೆ ಯಾಕೆ ಮುಂದಾಗುವುದಿಲ್ಲ ಎಂಬ ಪ್ರಶ್ನೆ ಸಹಜ. ಇದರರ್ಥ ಅವರು ನಿರ್ಮಾಪಕ, ನಿರ್ದೇಶಕರಾಗಬೇಕಿಲ್ಲ. ಸೂಕ್ಷ್ಮ ಸಂವೇದನೆಯ ಕಥಾವಸ್ತುಗಳ ಆಯ್ಕೆಗೆ ಪ್ರೇರಕ ಶಕ್ತಿಯಾದರೆ ಸಾಕು. ಆದರೆ ಅವರಿಗಷ್ಟೇ ಅಲ್ಲ ನಿರ್ಮಾಪಕ-ನಿರ್ದೆಶಕರಿಗೂ ಇಲ್ಲಿ ಒಂದು ಅಳುಕು, ಪ್ರಸಿದ್ಧ ನಟರನ್ನು ಹಾಕಿಕೊಂಡು ಇಂತಹ ಸೂಕ್ಷ್ಮತೆಯ ಚಿತ್ರ ಮಾಡಿದರೆ ಜನ ನೋಡುತ್ತಾರೆಯೆ? ಹಾಕಿದ ಹಣ ವಾಪಸ್ ಬರುತ್ತದೆಯೆ? ಈ ಅಳುಕು ಹಿಂದಿ ಚಿತ್ರರಂಗದವರಿಗೆ ಯಾಕಿಲ್ಲ ಎಂದು ಪ್ರಶ್ನಿಸಬಹುದು. ಹಿಂದಿ ಚಿತ್ರರಂಗದ ಹೊಸ ಪ್ರಯತ್ನಗಳಿಗೆ ಕರ್ನಾಟಕವನ್ನೂ ಒಳಗೊಂಡಂತೆ ಜಗತ್ತಿನ ಅನೇಕ ಭಾಗಗಳಲ್ಲಿ ನಿರ್ದಿಷ್ಟ ಪ್ರಮಾಣದ ಪ್ರೇಕ್ಷಕರಿದ್ದಾರೆ. ಕರ್ನಾಟಕದಲ್ಲಿ ಕನ್ನಡ ಚಿತ್ರಗಳಿಗೆ ಪೂರ್ಣ ಪ್ರಮಾಣದ ಪ್ರೇಕ್ಷಕರಿಲ್ಲ ಎಂದು ಉತ್ತರಿಸಬಹುದು. ಇಲ್ಲಿ ಅಭಿರುಚಿ ನಿರ್ಮಾಣದ ಪ್ರಶ್ನೆಯೂ ಇದೆ. ಪ್ರಸಿದ್ದ ಕಲಾವಿದರು, ನಿರ್ದೇಶಕರು ಮತ್ತು ಮಾಧ್ಯಮದ ಮಿತ್ರರು ಒಟ್ಟಾಗಿ ಅಭಿರುಚಿ ವಿಸ್ತಾರದ ಪ್ರಯತ್ನಗಳನ್ನು ಮಾಡಿದರೆ, ಸೂಕ್ಷ್ಮ ಸಂವೇದನೆಯ ಕನ್ನಡ ಪ್ರತಿಭೆಗಳಿಗೆ ಆತ್ಮಸ್ಥೈರ್ಯ ಬಂದೀತು. ವೈಭವೀ ಕರಣದ ವೈಪರೀತ್ಯಗಳನ್ನು ಮೀರಿದ ವಾಸ್ತವದ ಒತ್ತಾಸೆಗಳು ನಮಗೆ ಮುಖ್ಯವಾದರೆ ಸೂಕ್ಷ್ಮತೆಯ ದಾರಿ ಸುಗಮವಾದೀತು.
ವೈಭವೀಕರಣದ ವೈಪರೀತ್ಯಕ್ಕೆ ‘ಬ್ಲ್ಯಾಕ್’ ಹಿಂದಿ ಚಿತ್ರ ಒಂದು ಉತ್ತಮ ನಿದರ್ಶನ. ಇದು ಆಂಗ್ಲ ಚಿತ್ರವೊಂದರ ರೀಮೇಕ್ ಎಂದು ಹೇಳಲಾಯಿತಾದರೂ ಅದನ್ನು ಗಮನಿಸದೆ ವಿಮರ್ಶೆ ಮಾಡಿದವರೇ ಹೆಚ್ಚು. ರೀಮೇಕ್ ಎನ್ನುವುದನ್ನು ಮರೆತು ನೋಡಿದರೂ ‘ಬ್ಲ್ಯಾಕ್’ ನೀಡುವ ಸಂದೇಶ ಏನು ಎಂದು ಪ್ರಶ್ನಿಸಿಕೊಳ್ಳಬೇಕೆಂದು ನಾನು ಬಯಸುತ್ತೇನೆ. ನಿಜ ‘ಬ್ಲ್ಯಾಕ್’ ಚಿತ್ರದ ‘ಮೇಕಿಂಗ್’ ಮಚ್ಚಲೇಬೇಕಾದ ಅಂಶವಾಗಿದೆ. ಆದರೆ ಮಾನಸಿಕ ಅಸ್ವಸ್ಥತೆಯ ಹುಡುಗಿ ಹಾಗೂ ಯುವತಿಯನ್ನು ಪಳಗಿಸಲು ಕಥಾನಾಯಕ (ಅಮಿತಾಬ್ ಬಚ್ಚನ್ ಪಾತ್ರ) ಅನುಸರಿಸುವ ಮಾರ್ಗ ಹಿಂಸಾತ್ಮಕವಲ್ಲವೆ? ಗದರುವ, ಗರ್ಜಿಸುವ, ನೂಕುವ, ಕೈಯ್ಯೆತ್ತುವ ‘ಹಿಂಸಾ’ ವಿಧಾನಗಳ ಮೂಲಕ ಮಾನಸಿಕ, ದೈಹಿಕ ಅಸ್ವಸ್ಥತೆಯನ್ನು ಹೋಗಲಾಡಿಸುವ ವಸ್ತುವೇ ಪ್ರಶ್ನಾರ್ಹವಾದದ್ದು. ಆದರೆ ನಮ್ಮಲ್ಲಿ ವಸ್ತುವನ್ನು ಚರ್ಚಿಸದೆ ‘ಬಂಧ’ದಲ್ಲಿ ಬಂಧಿಯಾಗುವ ವಿಪರ್ಯಾಸವೇ ಹೆಚ್ಚು. ‘ತಾರೆ ಜಮೀನ್ ಪರ್’ ಇಂತಹ ಹಿಂಸಾ ವಿಧಾನವನ್ನು ಹಿಡಿಯುವುದಿಲ್ಲ. ಅದರ ಹಾದಿಯೇ ಬೇರೆ. ಈ ಹಿಂದಿ ಚಿತ್ರಗಳನ್ನು ಬಿಡಿ; ತುಂಬಾ ವರ್ಷಗಳ ಹಿಂದೆ ಬಂದ ‘ಮೂನ್ರಾಂಪಿರೈ’ ಎಂಬ ‘ಕಮರ್ಷಿಯಲ್’ ತಮಿಳು ಚಿತ್ರದಲ್ಲಿ ನಾಯಕನು ಮಾನಸಿಕ ಅಸ್ವಸ್ಥತೆಯ ನಾಯಕಿಯನ್ನು ಸರಿದಾರಿಗೆ ತರುವ ಪ್ರೀತಿಪೂರ್ವಕ ವಿಧಾನ ಎಷ್ಟು ಸೊಗಸಾಗಿದೆ! ಈ ಸೊಗಸು ‘ಬ್ಲ್ಯಾಕ್’ನಲ್ಲಿ ಎಲ್ಲಿದೆ ? ಹಾಗಾದರೆ ನಮ್ಮಲ್ಲಿ ನೋಡುವ ಕ್ರಮದಲ್ಲೇ ಪಕ್ಷಪಾತ ಅಥವಾ ಪೂರ್ವಾಗ್ರಹದ ಪದರು ಹದವಾಗಿ ಬೆರೆತುಕೊಂಡಿದೆಯೆ? ನಾವು ಒಮ್ಮೆ ಆತ್ಮಾವ ಲೋಕನ ಮಾಡಿಕೊಳ್ಳಬೇಕು.
ಹಿಂದಿ ಚಿತ್ರರಂಗದಲ್ಲಿ ಆಗುತ್ತಿರುವ ಕೆಲವು ಬದಲಾವಣೆಗಳನ್ನು ಪ್ರತ್ಯೇಕಿಸಿ ನೋಡಿ ಬೆರಗು ಪಡುವ ನಾವು ಅದೇ ಚಿತ್ರರಂಗದ ‘ಶೂನ್ಯ ವಲಯ’ವನ್ನೂ ಗಮನಿಸಬೇಕು. ಹಿಂದೆ ಹಿಂದಿಯಲ್ಲಿ ಬಂದ ಅಂಕು, ಆಕ್ರೋಶ್, ಅರ್ಧಸತ್ಯ, ಚೌರಂಗಿಲೇನ್, ಚಕ್ರ – ಮುಂತಾದ ಚಿತ್ರಗಳ ಚಕ್ರ ಚಲನೆ ನಿಂತು ಹೋಗಿ ಅಲ್ಲಿ ಶೂನ್ಯ ಸೃಷ್ಟಿಯಾಗಿಲ್ಲವೆ? ಈ ಶೂನ್ಯ ವಲಯವನ್ನು ತುಂಬುವುದು ಇಂದಿನ ಸಾಮಾಜಿಕ ಸನ್ನಿವೇಶದಲ್ಲಿ ಅತ್ಯಂತ ಜರೂರಿನ ಕೆಲಸವಲ್ಲವೆ? ಇಂದು ನಮ್ಮ ದೇಶವು ಎದುರಿಸುತ್ತಿರುವ ಸಾಮಾಜಿಕ-ಸಾಂಸ್ಕೃತಿಕ ಬಿಕ್ಕಟ್ಟಿಗೆ ಮುಖಾಮುಖಿಯಾಗುವ ಧೀರ ಪ್ರಯತ್ನಗಳನ್ನು ಹಿಂದಿ ಚಿತ್ರರಂಗ ಮಾಡುತ್ತಿದೆಯೆ? ಇಂತಹ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ನನಗೆ ಮುಖ್ಯವೆನಿಸುತ್ತದೆ.
ಹಾಗೆ ನೋಡಿದರೆ ‘ಪರ್ಯಾಯ ಸಿನಿಮಾ ವಲಯ’ದಲ್ಲಿ ಕನ್ನಡದ ಪ್ರಯತ್ನಗಳು ಗಂಭೀರವಾಗಿವೆ. ಕನ್ನಡದ ಸೀಮಿತ ಮಾರುಕಟ್ಟೆಯೊಳಗೆ ಮತ್ತಷ್ಟು ಸೀಮಿತವಾಗಿರುವ ವಲಯದಲ್ಲಿ ನಡೆಯುತ್ತಿರುವ ಕಡಿಮೆ ಬಜೆಟ್‌ನ ಪರ್ಯಾಯ ಪ್ರಯತ್ನಗಳ ಸೂಕ್ಷ್ಮ ಸಾಹಸಗಳಿಗೆ ಸೂಕ್ತ ಪ್ರಚಾರ ಮತ್ತು ಪ್ರೇಕ್ಷಕರು ಯಾಕೆ ಸಿಗುತ್ತಿಲ್ಲ? ‘ಕಮರ್ಷಿಯಲ್ ಕ್ಷೇತ್ರ’ದ ಕೆಲವು ಹೊಸ ಮಾದರಿಗಳಿಗೆ ಎಲ್ಲೆ ಮೀರಿದ ಮನ್ನಣೆಯ ಮುಂದೆ ‘ಗಂಭೀರ ಪರ್ಯಾಯ ಸಿನಿಮಾ’ಗಳಿಗೆ ಮಂಕು ಬಡಿಯುತ್ತಿಲ್ಲವೆ? ಸಾಮಾಜಿಕ ವಾಸ್ತವಿಕತೆಯೆನ್ನುವುದು ಸಿನಿಕತನಕ್ಕೆ ಬಲಿಯಾಗುತ್ತಿಲ್ಲವೆ? ಈ ಪ್ರಶ್ನೆಗಳಿಗೆ ಹುಡುಕುವ ಉತ್ತರದಲ್ಲಿ ಕನ್ನಡ ಚಿತ್ರರಂಗದ ಸರಿದಾರಿಯ ಶೋಧವಿದೆಯೆಂದು ನಾನು ನಂಬಿದ್ದೇನೆ. ಈ ದಿಕ್ಕಿನಲ್ಲಿ ನಾವೆಲ್ಲ ಅಂದರೆ ಗಂಭೀರ ಚಿತ್ರಗಳ ನಿರ್ದೇಶಕರು, ನಿರ್ಮಾಪಕರು, ಮಾಧ್ಯಮದ ಮಿತ್ರರು, ಕಲಾವಿದರು- ಹೀಗೆ ಸಂಬಂಧಪಟ್ಟ ಎಲ್ಲರೂ ಆತ್ಮ ನಿರೀಕ್ಷೆ ಮತ್ತು ಆತ್ಮಸ್ಥೆರ್ಯಗಳಿಂದ ಹೆಜ್ಜೆ ಹಾಕುವ ಅಗತ್ಯವಿದೆ. ಹಿಂದಿ ಚಿತ್ರರಂಗದ ಎದುರು ಅಳುಕಿ ಆತಂಕಿಸುವ ಅಗತ್ಯವಿಲ್ಲ.
*****
(೨೦೦೮)