ಅಧ್ಯಾಯ ಹದಿನಾರು
ಅರವತ್ತರ ದಶಕವು ಕನ್ನಡ ಚಿತ್ರೋದ್ಯಮದ ತೀವ್ರ ಕಲಿಕೆಯ ದಿನಗಳು. ಅದು ತನ್ನ ಉಳಿವಿಗಾಗಿ ಸಿದ್ಧ ಶೈಲಿಯೊಂದರ ಹುಡುಕಾಟದಲ್ಲಿತ್ತು. ದಕ್ಷಿಣ ಭಾರತದ ಎಲ್ಲ ಭಾಷೆಗಳ ಚಲನಚಿತ್ರ ನಿರ್ಮಾಣ ಕೇಂದ್ರ ಮದರಾಸೇ ಆಗಿತ್ತು. ೧೯೬೦ರ ಆರಂಭದಿಂದ ಅಂತ್ಯದವರೆಗೆ ಕನ್ನಡ ಚಿತ್ರರಂಗ ತನ್ನ ಜಾಡಿನ ಶೋಧನೆಯಲ್ಲಿ ಅನೇಕ ಪ್ರಯೋಗಗಳನ್ನು ನಡೆಸಿತು. ಚಿತ್ರದ ವಸ್ತು, ತಾಂತ್ರಿಕತೆ ಮತ್ತು ನಿರೂಪಣೆಯ ದೃಷ್ಟಿಯಿಂದ ಈ ಸವೆದ ಜಾಡನ್ನು ತೊರೆದು ಹೊಸ ಹಾದಿಯನ್ನು ಅನ್ವೇಷಿಸಿದವರಲ್ಲಿ ಮೊದಲಿಗರು ಎನ್.ಲಕ್ಷ್ಮಿನಾರಾಯಣ್ (ಎನ್ನೆಲ್).
೧೯೬೪ರಲ್ಲಿ ‘ನಾಂದಿ’ ಚಿತ್ರದ ಮೂಲಕ ಕನ್ನಡದ ಹೊಸ ಬಗೆಯ ಸಂವೇದನೆಯೊಂದಕ್ಕೆ ನಾಂದಿ ಹಾಡಿದ ಎನ್ನೆಲ್ ಭಾರತೀಯ ಚಿತ್ರರಂಗ ಕಂಡ ಗಂಭೀರ ಚಲನಚಿತ್ರ ವಿದ್ಯಾರ್ಥಿಯಲ್ಲೊಬ್ಬರು. ಕನ್ನಡ ಚಿತ್ರರಂಗದ ಪರಿವರ್ತನೆಯ ಹರಿಕಾರರು. ಚಿತ್ರ ನಿರ್ಮಾಣದ ಸಿದ್ಧಸೂತ್ರಗಳನ್ನು ಬಿಟ್ಟು ತಮ್ಮದೇ ಆದ ಛಾಪು ಮೂಡಿಸಿದ ಹೆಗ್ಗಳಿಕೆ ಅವರದು. ತಮ್ಮ ಸುದೀರ್ಘ ವೃತ್ತಿ ಬದುಕಿನಲ್ಲಿ ಅವರು ನಿರ್ದೇಶಿಸಿದ್ದು ಒಂದು ಕಿರುಚಿತ್ರ ಮತ್ತು ಆರು ಕಥಾ ಚಿತ್ರಗಳು; ಆದರೆ ಆ ಆರೂ ಚಿತ್ರಗಳು ಇಂದಿಗೂ ಗಂಭೀರ ಅಧ್ಯಯನಕ್ಕೆ ಯೋಗ್ಯವಾದ ಚಿತ್ರಗಳಾಗಿಯೇ ಉಳಿದಿರುವುದು ಎನ್ನೆಲ್‌ರವರ ಸೃಜನಶೀಲ ಪ್ರತಿಭೆಗೆ ಸಾಕ್ಷಿ.
‘ಸಂಸ್ಕಾರ’ದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯ ಕಲಾತ್ಮಕ ಚಿತ್ರಗಳು ಪ್ರಾರಂಭವಾದದ್ದು ನಿಜ. ಆದರೆ ಆ ಆಂದೋಲನ ಬೀಜರೂಪದಲ್ಲಿ ವ್ಯಕ್ತಗೊಂಡದ್ದು ಎನ್ನೆಲ್‌ರವರ ಚಿತ್ರಗಳ ಮೂಲಕ. (ಸ್ವತಃ ಎನ್ನೆಲ್‌ರವರಿಗೆ ಕಲಾತ್ಮಕ ಮತ್ತು ವ್ಯಾಪಾರಿ ಚಿತ್ರಗಳು ಎಂಬ ವಿಶೇಷಣ ಮತ್ತು ವರ್ಗೀಕರಣದಲ್ಲಿ ನಂಬಿಕೆಯಿರಲಿಲ್ಲ. ಅವರ ಪ್ರಕಾರ ಎರಡೇ ವರ್ಗ-ಒಂದು ಒಳ್ಳೆಯ ಚಿತ್ರಗಳು ಮತ್ತೊಂದು ಒಳ್ಳೆಯವಲ್ಲದ ಚಿತ್ರಗಳು). ಚಲನಚಿತ್ರವು ನಿರ್ದೇಶಕನ ಮಾಧ್ಯಮ ಎಂದು ದೃಢವಾಗಿ ನಂಬಿ ಅದರಂತೆ ಎಂದೂ ರಾಜಿಯಾಗದೆ ಚಿತ್ರಗಳನ್ನು ರೂಪಿಸಿದ ಮೊದಲ ನಿಷ್ಠಾವಂತ ನಿರ್ದೇಶಕ. ಆರಂಭದ ‘ನಾಂದಿ’ ಮತ್ತು ‘ಉಯ್ಯಾಲೆ’ ಚಿತ್ರಗಳಲ್ಲಿ ಅವರು ಹಾಡುಗಳನ್ನು ಅಳವಡಿಸಿಕೊಂಡಿದ್ದರೂ ಮುಖ್ಯವಾಹಿನಿಯ ಚಿತ್ರಗಳ ಸಿದ್ಧ ಸೂತ್ರಗಳನ್ನು ಸಂಪೂರ್ಣ ತೊರೆದಿದ್ದರು. ಚಲನಚಿತ್ರಕ್ಕೆ ಕಲಾವಿದರು, ಕತೆ, ಸಂಭಾಷಣೆಯಂತೆಯೇ ಅದರ ಪರಿಸರವೂ ಒಂದು ಪಾತ್ರವಾಗಬಲ್ಲದೆಂಬುದನ್ನು ತೋರಿಸಿಕೊಟ್ಟರು. ಘೋಷಣೆಯ ವಿಧಾನವನ್ನು ಬಿಟ್ಟುಕೊಟ್ಟು ಸಾಮಾಜಿಕ ಸಂದೇಶವೊಂದನ್ನು ರೂಪಿಸಲು ಸಾಧ್ಯವೆಂಬುದನ್ನು ಸಾಧಿಸಿದರು. ಸತ್ಯಜಿತ್ ರೇ ಅವರನ್ನು ಮಾನಸಿಕ ಗುರುವಾಗಿ ಸ್ವೀಕರಿಸಿದ್ದ ಎನ್ನೆಲ್‌ರವರು ಆ ಅಭಿಜಾತ ನಿರ್ದೇಶಕನಂತೆಯೇ ತನ್ನ ಕತೆಗಳಲ್ಲಿ ಮಾನವೀಯ ನೆಲೆಗಳ ಅನಾವರಣಕ್ಕೆ ಪ್ರಯತ್ನಿಸಿದರು. ಅವರ ಬಹುತೇಕ ಚಿತ್ರಗಳು ಪ್ರಕಟಿತ ಸಾಹಿತ್ಯ ಕೃತಿಗಳನ್ನು ಆಧರಿಸಿದ್ದವು. ಇತರ ನಿರ್ದೇಶಕರಂತೆ ಎನ್ನೆಲ್ ಮೂಲಕೃತಿಯ ಆಶಯಗಳನ್ನು ಬಿಟ್ಟುಕೊಟ್ಟವರಲ್ಲ. ಅವರ ಚಿತ್ರಗಳು ಕೃತಿನಿಷ್ಠವಾದರೂ ಎನ್ನೆಲ್ ತಮ್ಮ ಸ್ಪರ್ಶ ಮಾತ್ರದಿಂದ ತಮ್ಮದೇ ಚಿತ್ರವೆಂಬಂತೆ ಕಡೆಯುತ್ತಿದ್ದರು.
ಎನ್.ಲಕ್ಷ್ಮೀನಾರಾಯಣರು ಜನಿಸಿದ್ದು ೧೩ನೇ ಜನವರಿ ೧೯೨೬ರಂದು, ತಾಯಿ ಸಾವಿತ್ರಮ್ಮ ಅವರ ತವರು ಶ್ರೀರಂಗಪಟ್ಟಣ. ತಂದೆ ಕೋಲಾರದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದ ಎಂ.ಆರ್. ನರಸಿಂಗರಾವ್. ಬಾಲ್ಯದಿಂದಲೂ ಎನ್ನೆಲ್ ಅವರಿಗೆ ಕಲಾಜಗತ್ತಿನ ಬಗ್ಗೆ ಮೋಹ. ಅವರು ಚಿತ್ರ ರಚನಕಾರರಾಗಿದ್ದರು. ಜಗತ್ತಿನ ಸಿನಿಮಾಗಳ ಬಗ್ಗೆ ಒಲವು ಮೂಡಿಸಿಕೊಂಡಿದ್ದರು. ಛಾಯಾಗ್ರಹಣದಲ್ಲಿ ಆಸಕ್ತಿ ತಳೆದಿದ್ದರು. ತಮ್ಮ ಮಾವ ಬಿ.ಆರ್. ಕೃಷ್ಣಮೂರ್ತಿಯವರು ತಯಾರಿಸಿ ನಿರ್ದೇಶಿಸಿದ ’ಶ್ರೀರಾಮ ಪೂಜಾ’ (೧೯೫೫) ಚಿತ್ರಕ್ಕೆ ಸಹಾಯಕರಾಗಿ ಸೇರಿ ತಮ್ಮ ವೃತ್ತಿ ಬದುಕನ್ನು ಆರಂಭಿಸಿದರು. ಅನಂತರ ಆರೆನ್ನಾರ್ ಗರಡಿ ಸೇರಿ ‘ಪ್ರೇಮದ ಪುತ್ರಿ’ ಚಿತ್ರದ ಸಹಾಯಕ ನಿರ್ದೇಶಕರಾದರು. ಮದರಾಸಿನಲ್ಲಿರುವಾಗಲೇ ಅಮೆರಿಕ ಮತ್ತು ಐರೋಪ್ಯ ರಾಯಭಾರಿ ಕಚೇರಿಗಳ ಆಶ್ರಯದಲ್ಲಿ ಹಾಗೂ ಅಲ್ಲಿನ ವಿವಿಧ ಫಿಲಂ ಸೊಸೈಟಿಗಳಲ್ಲಿ ಪ್ರದರ್ಶಿತವಾಗುತ್ತಿದ್ದ ವಿದೇಶೀ ಚಿತ್ರಗಳ ವೀಕ್ಷಣೆ, ಚಲನಚಿತ್ರ ಸಾಹಿತ್ಯ ಅಧ್ಯಯನಗಳು ಅವರಲ್ಲಿ ಚಲನಚಿತ್ರಗಳ ಬಗೆಗಿನ ದೃಷ್ಟಿಕೋನವೊಂದನ್ನು ರೂಪಿಸಿದವು. ಹಾಗಾಗಿ ಅವರು ಮಾತಿನ ಹಂಗಿಲ್ಲದ (ಸಂಭಾಷಣೆ, ವ್ಯಾಖ್ಯಾನ ಬಿಟ್ಟು) ಸಿನಿಮಾವನ್ನು ದೃಶ್ಯ ಮತ್ತು ಶಬ್ದ ಮಾಧ್ಯಮವನ್ನಾಗಿ ರೂಪಿಸಬೇಕೆಂಬ ಹಂಬಲದಿಂದ ‘ಬ್ಲಿಸ್’ ಎಂಬ ಕಿರುಚಿತ್ರವೊಂದನ್ನು ನಿರ್ದೇಶಿಸಿದರು.
ಎನ್ನೆಲ್ ಪ್ರಕಾರ ‘ಬ್ಲಿಸ್’ ಭಾರತೀಯ ವೇದಾಂತವನ್ನು ಕುರಿತಾದ ಚಿತ್ರ. ಎಪ್ಪತ್ತು ವರ್ಷದ ಒಬ್ಬ ಹಿರಿಯ ಪತ್ರಕರ್ತ, ಆರು ವರ್ಷದ ಹುಡುಗ, ಒಬ್ಬ ಪೋಸ್ಟ್‌ಮನ್, ಒಂದು ಗಿಣಿ ಮತ್ತು ಬೆಕ್ಕು- ಇದಿಷ್ಟು ಪಾತ್ರಗಳನ್ನು ಸಂಯೋಜಿಸಿ ಮಾತಿಲ್ಲದ ಕಿರುಚಿತ್ರ ರೂಪು ತಾಳಿತ್ತು. ನಿತ್ಯ ಜೀವನದ ಸಾಮಾನ್ಯ ಬದುಕಿನಲ್ಲಿಯೇ ಆನಂದವನ್ನು ಶೋಧಿಸುವ ‘ಬ್ಲಿಸ್’, ಮಾತಿನ ಹಂಗಿಲ್ಲದೆ ಮಾನವೀಯ ನೆಲೆಗಳನ್ನು ಅನ್ವೇಷಿಸುವ ಪ್ರಯೋಗ. ಇದು ಲಂಡನ್‌ನ ಬ್ರಿಟಿಷ್ ಫಿಲಂ ಇನ್ಸ್‌ಟಿಟ್ಯೂಟ್ ಸಾಂಕೇತಿಕ ನೆರವು ನೀಡಿದ ಮೊದಲ ಭಾರತೀಯ ಚಿತ್ರ. ೧೯೬೩ರಲ್ಲಿ ನಡೆದ ಸ್ಯಾನ್‌ಫ್ರಾನ್ಸಿಸ್ಕೋ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ವಿಶೇಷ ಪುರಸ್ಕಾರ ಪಡೆಯಿತು. ಈ ಪ್ರಶಸ್ತಿ ಪಡೆದ ಮೊದಲ ದಕ್ಷಿಣ ಭಾರತೀಯ, ಎನ್ನೆಲ್.

‘ಬ್ಲಿಸ್’ ಚಿತ್ರದ ಚಿತ್ರಸಾರ(Synopsis)ದ ಪೀಠಿಕೆಯಾಗಿ ಎನ್ನೆಲ್‌ರವರು “ಸಿನಿಮಾ ನನ್ನ ಭಾಷೆ. ನನ್ನ ಚಿತ್ರಗಳ ಮೂಲಕ ನಾನು ವಿಶ್ವದ ಜನರೊಂದಿಗೆ ಮಾತನಾಡಬಯಸುವೆ” ಎಂದು ಹೇಳಿದ್ದರು. ‘ಬ್ಲಿಸ್’ನಲ್ಲಿ ಮಾತಿಲ್ಲ, ಹಾಗೆಯೇ ಅವರ ಮುಂದಿನ ಚಿತ್ರ ಮಾತು ಬಾರದ ಮೂಕ-ಕಿವುಡರ ಕತೆಯನ್ನೇ ಆಧರಿಸಿದ್ದು ಕಾಕತಾಳೀಯವಿರಬಹುದು. ಆದರೆ ಎನ್ನೆಲ್ ಪ್ರಕಾರ ‘ಬ್ಲಿಸ್’ ಚಿತ್ರವನ್ನು ತಯಾರಿಸುತ್ತಿದ್ದ ಕಾಲದಲ್ಲಿಯೇ ಸಂಭಾಷಣೆಯೇ ಇಲ್ಲದ ಚಿತ್ರವನ್ನು ರೂಪಿಸುವ ಬಗ್ಗೆ ಯೋಚಿಸುತ್ತಿರುವಾಗ ‘ನಾಂದಿ’ ಚಿತ್ರದ ಕಿವುಡು ಮೂಕರ ಹೊಸ ಕಥಾವಸ್ತುವೊಂದು ಹೊಳೆಯಿತು. ಆ ಹೊತ್ತಿಗಾಗಲೇ ‘ನಂದಾದೀಪ’, ‘ನವಜೀವನ’ ಚಿತ್ರ ನಿರ್ಮಿಸಿದ್ದ ವಾದಿರಾಜ್-ಜವಾಹರ್ ಅವರು ಎನ್ನೆಲ್‌ಗೆ ಪರಿಚಿತರಾಗಿದ್ದರು. ಎನ್ನೆಲ್‌ರವರು ‘ನಾಂದಿ’ ಕತೆಯನ್ನು ಹೇಳಿದಾಗ ಅವರಿಗೆ ಒಪ್ಪಿಗೆಯಾಯಿತು.
‘ನಾಂದಿ’ ಒಬ್ಬ ಸಾಮಾನ್ಯ ಶಿಕ್ಷಕನೊಬ್ಬನ ಬದುಕಿಗೆ ಅನಿರೀಕ್ಷಿತವಾಗಿ ಹೆಣೆದುಕೊಳ್ಳುವ ಕಿವುಡು-ಮೂಕ ಸಮಸ್ಯೆಯೊಂದನ್ನು ಕುರಿತ ಚಿತ್ರ. ನಾಯಕ ಮೂರ್ತಿ ಶಾಲಾ ಶಿಕ್ಷಕ; ಹೆಂಡತಿ ನಿರ್ಮಲಳ ಜೊತೆ ಅವನದು ಸುಖದ ಸಂಸಾರ. ಆದರೆ ಚೊಚ್ಚಲ ಹೆರಿಗೆಯಲ್ಲಿ ನಿರ್ಮಲಾ ಸತು, ಮಗುವನ್ನು ಬಿಟ್ಟು ಹೋಗುತ್ತಾಳೆ. ಮಗನನ್ನು ನೋಡಿಕೊಳ್ಳಲು ಹುಟ್ಟು ಕಿವುಡು ಮೂಕಿಯನ್ನು ಮೂರ್ತಿ ಮದುವೆಯಾಗುತ್ತಾನೆ. ಹೆಂಡತಿಗೆ ಮತ್ತು ಮಗುವಿಗೆ ಮಾತು ಕಲಿಸಲು ತುಟಿ ಚಲನೆಯ ವಿಧಾನದಿಂದ ಅನಧಿಕೃತ ಕಿವುಡು-ಮೂಕರ ಶಾಲೆ ಆರಂಭಿಸುತ್ತಾನೆ. ಮೂಕಿಯ ಅಸಹಾಯಕತೆಯಿಂದ ಮೊದಲ ಹೆಂಡತಿಯ ಮಗು ಅಪಘಾತಕ್ಕೀಡಾಗುತ್ತದೆ. ಮೂಕಿಗೆ ಹುಟ್ಟುವ ಮಗು ಮೂಕಿಯಾಗದೆ ಸಹಜ ಗುಣದ ಮಗುವಾಗಿ ಬೆಳೆಯುತ್ತದೆ. ಇದು ಆ ಕಾಲಕ್ಕೆ ಹೊಸತೆನ್ನುವ ರೀತಿಯಲ್ಲಿ ಎನ್ನೆಲ್ ಕಟ್ಟಿಕೊಟ್ಟ ‘ನಾಂದಿ’. ಈ ಚಿತ್ರ ಸುಧಾರಣಾವಾದಿ ನಿಲುವಿನ ಕತೆಯಂತೆ ಕಂಡರೂ ಎನ್ನೆಲ್ ಅಳವಡಿಸಿದ ಸೂಕ್ಷ್ಮ ನಿರೂಪಣೆ ಚಿತ್ರವನ್ನು ಮೇಲ್ಮಟ್ಟದಲ್ಲಿರಿಸಿತ್ತು. ಮುಟ್ಟಲು ಅನೇಕಬಾರಿ ಯೋಚಿಸಬೇಕಾದ ಕಿವುಡು ಮೂಕರ ಸಮಸ್ಯೆಯಂಥ ನಿರಾಸಕ್ತ ವಸ್ತುವನ್ನು ಜನಪ್ರಿಯ ಚಿತ್ರವನ್ನಾಗಿ ರೂಪಿಸಿದ್ದು ಅವರ ಹೆಗ್ಗಳಿಕೆ.
ಈ ಚಿತ್ರದ ಚಿತ್ರೀಕರಣವೂ ವಿಶೇಷವಾಗಿತ್ತು. ಮದರಾಸಿನಿಂದ ನಂದಿಬೆಟ್ಟದಲ್ಲಿ ಬಂದು ಶೂಟಿಂಗ್ ಮಾಡುವುದು, ಈಗ ವಿದೇಶಗಳಿಗೆ ಹೋಗುವಷ್ಟೇ ವಿಶೇಷವಾಗಿದ್ದ ಕಾಲ. ಎನ್ನೆಲ್ ನಿಜವಾದ ಶಾಲೆ, ನಂದಿಬೆಟ್ಟ, ಸಭಾಂಗಣದಲ್ಲೇ ಚಿತ್ರೀಕರಣ ನಡೆಸಿದರು. ಚಿತ್ರಗಳಲ್ಲಿ ಹಾಡುಗಳ ಅಳವಡಿಕೆಗೆ ವಿರೋಧಿಯಾಗಿದ್ದ ಅವರು ‘ನಾಂದಿ’ಯಲ್ಲಿ ಸನ್ನಿವೇಶಕ್ಕೆ ತಕ್ಕ ಸಾಹಿತ್ಯವಿರುವ ಹಾಗೂ ಅಲ್ಲಿಯ ಕಲಾವಿದರ ಕೈಯಲ್ಲಿ ಇರುವಂಥ ವಾದ್ಯಗಳನ್ನೇ ಬಳಸಿದ ಹಾಡುಗಳನ್ನು ಅಳವಡಿಸಿದರು. ಕಿವುಡು ಮೂಗರ ಸನ್ನಿವೇಶಗಳನ್ನು ಚಿತ್ರೀಕರಿಸುವಾಗ ಆ ಕ್ಷೇತ್ರದಲ್ಲಿ ತಜ್ಞೆಯಾಗಿದ್ದ ಬೆಲ್ಜಿಯಂ ದೇಶದ ಮೇರಿ ಬಾಪ್‌ರವರ ಸಲಹೆಗಳನ್ನು ಪಡೆದು, ಅದರಂತೆಯೇ ಚಿತ್ರೀಕರಣ ನಡೆಸಿದ್ದರು. ಎನ್ನೆಲ್‌ರವರು ಸ್ವಂತ ಆಸಕ್ತಿಯಿಂದ ಚಿತ್ರೋತ್ಸವಕ್ಕೆಂದೆ ‘ನಾಂದಿ’ಯ ವಿಶೇಷ ಅವತರಣಿಕೆಯನ್ನು ಸಿದ್ಧಪಡಿಸಿ ಲಂಡನ್‌ನಲ್ಲಿ ನಡೆದ ಕಾಮನ್‌ವೆಲ್ತ್ ಚಿತ್ರೋತ್ಸವಕ್ಕೆ ಕಳುಹಿಸಿದ್ದರು. ಕನ್ನಡ ಭಾಷೆಯ ಚಿತ್ರವೊಂದು ಪರದೇಶದಲ್ಲಿ ಪ್ರದರ್ಶನ ಸೌಭಾಗ್ಯ ಪಡೆದದ್ದು ಅದೇ ಮೊದಲು. ಹಾಸ್ಯಕ್ಕೋ, ವ್ಯಂಗ್ಯ ಸನ್ನಿವೇಶಗಳಿಗೋ ಬಳಕೆಯಾಗುತ್ತಿದ್ದ ಕಿವುಡು-ಮೂಕರ ಪಾತ್ರಗಳನ್ನು ಮಾನವೀಯ ನೆಲೆಯಲ್ಲಿ ಶೋಧಿಸಿದ ಖ್ಯಾತಿ ಎನ್ನೆಲ್‌ರವರಿಗೆ ಸಲ್ಲಬೇಕು. ವಿಭಿನ್ನ ಸಾಮರ್ಥ್ಯದವರೆಂದು ಕರೆಸಿಕೊಳ್ಳುವ ಇವರನ್ನು ಮಾನವರನ್ನಾಗಿ ಚಿತ್ರಗಳಲ್ಲಿ ನೋಡಿದ ಪ್ರಥಮ ಪ್ರಯತ್ನವದು. ಮೈಸೂರು ಪೇಟಾ ಧರಿಸಿದ ಶಾಲಾ ಶಿಕ್ಷಕನ ಪಾತ್ರದಲ್ಲಿ ಡಾ.ರಾಜ್, ನಿರ್ಮಲಳ ಪಾತ್ರದಲ್ಲಿ ಕಲ್ಪನಾ. ಮೂಕಿ ಹೆಂಡತಿಯಾಗಿ ಹರಿಣಿಯವರ ಅಭಿನಯ ಮನಸೆಳೆಯುವಂತಿತ್ತು. ಶಾಲಾ ಶಿಕ್ಷಕರಾಗಿ ದಿನೇಶ್ ಮತ್ತು ಬಾಲಕೃಷ್ಣ ಹಾಗೂ ತಬಲಾ ವಾದಕನಾಗಿ ವಾದಿರಾಜ್ ಅವರ ಹಾಸ್ಯ ಸನ್ನಿವೇಶಗಳು ಮೊದಲ ಬಾರಿಗೆ ಹೆಚ್ಚು ನವಿರಾಗಿ ಮೂಡಿರುವುದನ್ನು ನಾಂದಿಯಲ್ಲಿ ಗುರುತಿಸಬಹುದು.

‘ನಾಂದಿ’ ಚಿತ್ರದ ನಂತರ ಎನ್ನೆಲ್ ನಿರ್ದೇಶನದ ‘ಉಯ್ಯಾಲೆ’ ಬಿಡುಗಡೆಯಾದರೂ, ಅದಕ್ಕೂ ಮುನ್ನ ವಿ.ಎಂ. ಇನಾಂದಾರ್‌ರವರ ‘ಶಾಪ’ ಕಾದಂಬರಿಯನ್ನಾಧರಿಸಿ ‘ಮುಕ್ತಿ’ ಚಿತ್ರವನ್ನು ನಿರ್ದೇಶಿಸಿದರು. ಇದು ಎನ್ನೆಲ್‌ರವರ ಚಿತ್ರಗಳಲ್ಲೇ ಅತ್ಯಂತ ವಿಶಿಷ್ಟ ಕಥಾವಸ್ತುವಿನ ಚಿತ್ರ. ರಂಗನಾಯಕಿ ಎಂಬ ವೇಶ್ಯೆಯ ಮಗಳು ಸರೋಜಿನಿ ತನ್ನ ಕೌಟುಂಬಿಕ ವೃತ್ತಿಯನ್ನು ದ್ವೇಷಿಸಿ, ಸಂಸಾರಿಯಾಗುವ ಹಂಬಲದಿಂದ ಮಾಧವ ಎಂಬ ಸಹಪಾಠಿಯನ್ನು ಪ್ರೀತಿಸುತ್ತಾಳೆ. ಮಾಧವನ ತಂದೆಯೇ ತನ್ನ ತಾಯಿಯ ಪ್ರಿಯಕರನಾಗಿದ್ದ ಎಂಬ ಸಂಗತಿ ತಿಳಿದುಬಂದಾಗ ಇಬ್ಬರೂ ಆಘಾತಕ್ಕೊಳಗಾಗುತ್ತಾರೆ. ಸಂಬಂಧದಲ್ಲಿ ತಂಗಿಯಾಗಬೇಕಾದವಳನ್ನೇ ಪ್ರೀತಿಸಿದ ಪಾಪಪ್ರಜ್ಞೆ ಮಾಧವನನ್ನು ಹಿಂಡಿದರೆ, ಮಾಧವನ ತಂದೆ ತಾನು ಜನಿಸಿದ ಎರಡು ವರ್ಷಕ್ಕೂ ಮೊದಲೇ ಗತಿಸಿದ್ದ ವಿಚಾರ ಸರೋಜಿನಿಗೆ ತಿಳಿಯುತ್ತದೆ. ಆದರೆ ತಾಯಿ ಪಡೆದ ಗುಹ್ಯರೋಗ ತನಗೂ ಬಳುವಳಿಯಾಗಿ ಬಂದಿರುವುದನ್ನು ಅರಿತ ನಂತರ ಸರೋಜಿನಿಯು ಮಾಧವನಿಂದ ದೂರವಾಗುವ ನಿರ್ಧಾರದೊಡನೆ ಚಿತ್ರ ಮುಗಿಯುತ್ತದೆ. ವಿವಾಹ ಎಂಬ ಮೂಲಭೂತ ಸಾಮಾಜಿಕ ಸಂಸ್ಥೆಯ ಪರಿಕಲ್ಪನೆಗಳೇ ಇಲ್ಲಿ ಛಿದ್ರವಾಗುತ್ತವೆ. ಇದು ಅತ್ಯಂತ ಸಂಕೀರ್ಣದ ಸಂಪ್ರದಾಯ ಮನಸ್ಸುಗಳಿಗೆ ಆಘಾತ ನೀಡುವ ಕಥಾವಸ್ತುವಿದ್ದ ಚಿತ್ರ. ಆದರೆ ಚಿತ್ರವನ್ನು ಯಾವುದೇ ಆವೇಶ, ಭಾವತೀವ್ರತೆಗೆ ಎಡೆಯಿಲ್ಲದೇ ರೂಪಿಸಿದ ಎನ್ನೆಲ್‌ರವರ ಚಿತ್ರಕ ಶಕ್ತಿ ಇಲ್ಲಿ ಪರಾಕಾಷ್ಠೆ ಮುಟ್ಟಿತ್ತು. ಅನೇಕ ದುರ್ಬಲ ಅಂಶಗಳ ಜೊತೆಯೂ ‘ಮುಕ್ತಿ’ ಭಾರತೀಯ ಚಿತ್ರಗಳಲ್ಲೇ ಅತ್ಯಂತ ವಿಶಿಷ್ಟವಾದ ಕೃತಿ. ’ಗೆಜ್ಜೆ ಪೂಜೆ’ ಚಿತ್ರಕ್ಕೂ ಮೊದಲೇ ಸೆಟ್ ಏರಿದರೂ ನಿರ್ಮಾಣದಲ್ಲಿ ವಿಳಂಬವಾದದ್ದು, ಸೆನ್ಸಾರ್ ಮಂಡಲಿ ಚಿತ್ರಕ್ಕೆ ’ಎ’ ಸರ್ಟಿಫಿಕೇಟ್ ನೀಡಿದ್ದು ಚಿತ್ರ ಪ್ರೇಕ್ಷಕರನ್ನು ಸೆಳೆಯದಿರಲು ಕಾರಣವಾಯಿತು.
ಚದುರಂಗರ ‘ಉಯ್ಯಾಲೆ’ ಸ್ನೇಹಿತನ ಹೆಂಡತಿಯನ್ನೇ ಪ್ರೀತಿಸುವ ವಿಭಿನ್ನ ಕತೆಯ ಚಿತ್ರ. ಮದುವೆಗೆ ಮುನ್ನ ಎರಡು ಗಂಡುಗಳಿಂದ ವಂಚಿತಳಾಗಿ, ಅನ್ಯದಾರಿಯಿಲ್ಲದೆ ಶೇಷಗಿರಿ ಎಂಬ ವಿಶ್ವವಿದ್ಯಾಲಯದ ಅಧ್ಯಾಪಕನನ್ನು ವರಿಸುವ ರಾಧೆ ಗಂಡನಿದ್ದರು ವಿಧವೆ. ಅಪಾರ ಪ್ರತಿಭೆ, ಜೀವನೋತ್ಸಾಹದ ರಾಧೆಯನ್ನು ಶೇಷಗಿರಿಯ ಅಧ್ಯಯನಾಸಕ್ತಿ, ಬದುಕಿನ ಬಗೆಗಿರುವ ಉಪೇಕ್ಷೆಗಳು ಕರುಳಿರಿಯುವ ಏಕಾಂಗಿತನಕ್ಕೆ ದೂಡುತ್ತವೆ. ತನ್ನ ವ್ಯಾಸಂಗವನ್ನು ಮುಂದುವರೆಸಲು ಶೇಷಗಿರಿಯ ಮನೆಗೆ ಬರುವ ಆತನ ಬಾಲ್ಯದ ಗೆಳೆಯ ಕೃಷ್ಣೇಗೌಡ ರಾಧೆಯ ಜೀವನದಲ್ಲಿ ಹೊಸ ಉತ್ಸಾಹ ತರುತ್ತಾನೆ. ತನ್ನ ಭರವಸೆಯ ಕುಡಿಯಾಗಿದ್ದ ಮಗಳ ನಿಧನಾನಂತರ ಕೃಷ್ಣೇಗೌಡನತ್ತ ಆಕರ್ಷಿತಳಾಗುವ ರಾಧೆಯಂತೆಯೇ ಆಕೆಯ ಬಗ್ಗೆ ಕೃಷ್ಣೇಗೌಡನಲ್ಲೂ ಅನುರಾಗ ಮೊಳೆತಿರುತ್ತದೆ. ಆದರೆ ಒಂದು ರಾತ್ರಿ ಆಕಸ್ಮಿಕ ರೀತಿಯಲ್ಲಿ ಅವರಿಬ್ಬರ ಸಮಾಗಮ ಫಲಿಸುವ ಸನ್ನಿವೇಶ ಸಂಭವಿಸುತ್ತದೆ. ಆದರೆ ಆ ಕ್ಷಣದಲ್ಲಿ ಅವರಿಬ್ಬರೂ ಸಂದರ್ಭವನ್ನು ಗೆಲ್ಲುವ ದೃಶ್ಯ ಕನ್ನಡ ಚಿತ್ರಗಳಲ್ಲೇ ಅನನ್ಯವೆನಿಸಿದೆ. ಕೇವಲ ಮೌನ, ನೆರಳು ಬೆಳಕಿನ ಚಲನೆ, ಪಾತ್ರಗಳ ಒಳತೋಟಿಯನ್ನು ಸೆರೆ ಹಿಡಿವ ಸಂಯೋಜನೆಯಿಂದಲೆ ಆ ದೃಶ್ಯ ಗೆಲ್ಲುತ್ತದೆ. ಯಾವುದೋ ಒಂದು ಕಾರಣದಿಂದ ಇಬ್ಬರೂ ಸಂಯಮದಿಂದ ವರ್ತಿಸುತ್ತಾರೆ. ಕೊನೆಗೆ ಅಂಥ ಸನ್ನಿವೇಶಕ್ಕೆ ಅವಕಾಶ ನೀಡದಿರಲು ಕೃಷ್ಣೇಗೌಡ ಸ್ನೇಹಿತನ ಮನೆಯನ್ನು ತೊರೆಯುತ್ತಾನೆ. ರಾಧೆ ಮತ್ತು ಶೇಷಗಿರಿರಾಯರ ಬದುಕು ಎಂದಿನಂತೆ ಮುಂದುವರೆಯುತ್ತದೆ.
‘ಉಯ್ಯಾಲೆ’ ಸಹ ರಾಜ್, ಕಲ್ಪನಾ, ಅಶ್ವಥ್‌ರಂತಹ ಜನಪ್ರಿಯ ನಟರನ್ನು ಹಾಕಿಕೊಂಡು ಸಂಪೂರ್ಣ ಹೊರಾಂಗಣದಲ್ಲಿ ತೆಗೆದ ಚಿತ್ರ. ಅದೇ ತಾನೆ ಸ್ಟಾರ್ ಇಮೇಜಿಗೆ ಸಿದ್ಧರಾಗುತ್ತಿದ್ದ ರಾಜ್ ಇಂಥದೊಂದು ಪಾತ್ರವನ್ನು ಅಷ್ಟೊಂದು ತನ್ಮಯತೆಯಿಂದ ವಹಿಸಿರುವುದು ಇಂದಿಗೂ ಅಚ್ಚರಿಯೆನಿಸುತ್ತದೆ. ವಿಮರ್ಶಕರು ರೇ ಅವರ ‘ಚಾರುಲತಾ’ ಚಿತ್ರದ ಗಾಢ ಛಾಯೆಯನ್ನು ಈ ಚಿತ್ರದಲ್ಲಿ ಗುರುತಿಸಿದರೂ, ‘ಉಯ್ಯಾಲೆ’ ವೈವಾಹಿಕ ಬಂಧನದ ಬಿರುಕುಗಳು, ಗಂಡು ಹೆಣ್ಣಿನ ಅಂತರಂಗವನ್ನು ಶೋಧಿಸಿದ ಚಿತ್ರವಾಗಿ ಇಂದಿಗೂ ತಾಜಾತನವನ್ನು ಉಳಿಸಿಕೊಂಡಿದೆ.
‘ಉಯ್ಯಾಲೆ’ ನಂತರ ಬಹುತೇಕ ವರ್ಷ ವಿಶ್ರಾಂತಿ ಪಡೆದುಕೊಂಡಿದ್ದ ಎನ್ನೆಲ್ ೧೯೭೩ರಲ್ಲಿ ‘ಅಬಚೂರಿನ ಪೋಸ್ಟಾಫೀಸು’ ಚಿತ್ರವನ್ನು ತೆರೆಗಿತ್ತರು. ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಅದೇ ಹೆಸರಿನ ಸಣ್ಣ ಕತೆಯನ್ನಾಧರಿಸಿದ ಈ ಚಿತ್ರ ಮಲೆನಾಡಿನ ಕೊಂಪೆಯೊಂದರಲ್ಲಿನ ನೀರಸ ಬದುಕನ್ನು ಕುರಿತ ಚಿತ್ರ. ಹೊರಗಿನ ಪ್ರಪಂಚಕ್ಕೆ ಪ್ರವೇಶದ್ವಾರವೆನಿಸಿದ ಪೋಸ್ಟಾಫೀಸಿನ ಆಗಮನದಿಂದ ಅಲ್ಲಿನ ಬದುಕಿನಲ್ಲಿ ಹೊಸ ಸಂಚಾರವೊಂದು ಆರಂಭವಾಗುತ್ತದೆ. ಅತ್ತೆಯ ಹಿಡಿತದಲ್ಲಿ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದ ಪೋಸ್ಟ್‌ಮ್ಯಾನ್ ಬೋಬಣ್ಣ ಕದ್ದು ನೋಡಿದ ಕಾಗದದಿಂದಲೇ ಹೊರಪ್ರಪಂಚದ ಅರಿವಿನೊಡನೆ ಕಂಗಾಲಾಗುತ್ತಾ, ಕೊನೆಗೆ ಉಸಿರುಗಟ್ಟಿಸುವ ಪರಿಸರದಿಂದ ಬಿಡುಗಡೆ ಪಡೆಯುವುದು ಈ ಚಿತ್ರದ ಕಥಾವಸ್ತು. ಇದರ ಜೊತೆಗೆ ಅಂಚೆ ಕಚೇರಿಯ ಆಗಮನವು ಅನೇಕರ ಬದುಕಿನಲ್ಲಿ ತರುವ ಪರಿವರ್ತನೆ, ಆತಂಕಗಳನ್ನು ಸೆರೆಹಿಡಿಯುತ್ತಾ ಹೋಗುತ್ತದೆ.
ಎಲ್.ಎಸ್.ಶೇಷಗಿರಿರಾಯರ ಸಣ್ಣ ಕತೆಯನ್ನಾಧರಿಸಿದ ‘ಮುಯ್ಯಿ’ (೧೯೭೮) ತನ್ನ ತಂದೆಯ ಸಾವಿನ ಸೇಡನ್ನು ತೀರಿಸಿಕೊಳ್ಳಲು ಯತ್ನಿಸುವ ಡ್ರೈವರನ ಮಾನಸಿಕ ತಾಕಲಾಟಗಳನ್ನು ಕುರಿತದ್ದು. ರಾಜ್‌ರವರ ಸಂಸ್ಥೆಗಾಗಿ ತಯಾರಿಸಿದ ‘ಬೆಟ್ಟದ ಹೂವು’ ಮಲೆನಾಡ ವರ್ಣ ವೈವಿಧ್ಯ, ಹಸಿರಿನ ಸೊಬಗಿನ ಹಿನ್ನೆಲೆಯಲ್ಲಿ ಬಡಕುಟುಂಬವೊಂದರ ಬಾಲಕನ ಸಣ್ಣಸಣ್ಣ ಬಯಕೆ, ಅದನ್ನು ಸಾಧಿಸಲು ಆತ ಪಡುವ ಕಷ್ಟ ಮತ್ತು ಎದುರಿಸುವ ನಿರಾಶೆಯನ್ನು ಅನಾವರಣಗೊಳಿಸಿದ ಚಿತ್ರ.
’ಬೆಟ್ಟದ ಹೂವು’ ಚಿತ್ರದಲ್ಲಿ ಎನ್ನೆಲ್ ಅವರ ಆವರೆಗಿನ ನಿರುದ್ವಿಗ್ನ ನಿರೂಪಣೆಯಿರಲಿಲ್ಲ. ಕತೆಯ ಮುಖ್ಯ ಪಾತ್ರದ ಬಗ್ಗೆ ಅವರಿಗಿದ್ದ ಸಹಾನುಭೂತಿಯಿಂದಾಗಿ ಅವರಿಗೆ ಎಂದಿನ ನಿರ್ಲಿಪ್ತತೆಯನ್ನು ಕಾಯ್ದುಕೊಳ್ಳಲಾಗಲಿಲ್ಲ ಎಂದು ಕಾಣುತ್ತದೆ. ಗಿರಿಸೀಮೆಯ ಕೊಂಪೆ. ಅಲ್ಲೊಂದು ಸಂಸಾರ. ಕಿತ್ತು ತಿನ್ನುವ ಬಡತನ. ಜೊತೆಗೆ ನಿಸರ್ಗದ ಚಳಿ, ಮಳೆ, ಕಾಡುಪ್ರಾಣಿಗಳ ಹಾವಳಿಯ ವೈಪರಿತ್ಯಗಳು. ಕಲಿಕೆಯ ತೀವ್ರ ಆಸಕ್ತಿಯಿರುವ ಹಿರಿಯ ಮಗ ರಾಮ ಬಡತನದಿಂದಾಗಿ ಶಾಲೆ ಬಿಡುತ್ತಾನೆ. ಕೆಲಸವಿಲ್ಲದ ಅಪ್ಪ ಕೂಲಿ ಅರಸಿ ಪಟ್ಟಣಕ್ಕೆ ಹೋಗುತ್ತಾನೆ. ಮಕ್ಕಳನ್ನು ಕಟ್ಟಿಕೊಂಡು ಏಗುವ ತಾಯಿಯ ನೆರವಿಗೆ ಹಿರಿಯ ಮಗ ರಾಮು ಧಾವಿಸುತ್ತಾನೆ. ಕಾಡಿನ ಅಪರೂಪದ ಹೂವುಗಳ ಚಿತ್ರ ಬರೆಯಲು ಬಂದ ವಿದೇಶಿ ಮಹಿಳೆ ಶೆರ್ಲಿ ಮೇಡಂಗೆ ಹೂ ಮಾದರಿಗಳನ್ನು ತಂದು ಕೊಡುತ್ತಾ ಹಣ ಕೂಡಿಡುತ್ತಾನೆ. ಅಸೀಮ ಸಾಹಸದಿಂದ ಅಪರೂಪದ ಆರ್ಕಿಡ್ ಹೂವನ್ನು ತಂದುಕೊಟ್ಟು ಹೆಚ್ಚಿನ ಭಕ್ಷೀಸು ಗಳಿಸುತ್ತಾನೆ. ಸಂಪಾದಿಸಿದ ಹಣದಿಂದ ತನ್ನ ಬಯಕೆಯ ಕುವೆಂಪು ರಚಿತ ಜನಪ್ರಿಯ ವಾಲ್ಮೀಕಿ ರಾಮಾಯಣವನ್ನು ಕೊಳ್ಳಲು ಹೋದಾಗ ಬದುಕಿನ ದೊಡ್ಡ ಆಯ್ಕೆಯೊಂದು ಎದುರಾಗುತ್ತದೆ. ಕಂಬಳಿಯಿಲ್ಲದೆ ನಡುಗುವ ಚಳಿಯಲ್ಲಿ ಬದುಕು ದೂಡುವ ತಾಯಿ ತಂಗಿಯನ್ನು ಬೆಚ್ಚಗಿಡುವುದೋ? ಹೃದಯದಲ್ಲಿರುವ ಕಲಿಯಬೇಕೆಂಬ ದೀಪಕ್ಕೆ ಎಣ್ಣೆ ಒದಗಿಸುವ ಪುಸ್ತಕ ಕೊಳ್ಳುವುದೋ? ಬಾಲಕ ಕೊನೆಗೆ ವೈಯಕ್ತಿಕ ಆಸೆಯನ್ನು ತೊರೆದು ಸಂಸಾರವನ್ನು ನಿಭಾಯಿಸಲು ನಿರ್ಧರಿಸುತ್ತಾನೆ. ಕೊಂಡು ತಂದ ಕಂಬಳಿಯನ್ನು ತಂಗಿಗೆ ಹೊದಿಸಿ ಕತ್ತಲಲ್ಲಿ ಕೂತು ಕಣ್ಣಿರುಗರೆಯುತ್ತಾ ಹೃದಯದ ಜ್ವಾಲೆಯನ್ನು ನಂದಿಸುವ ದೃಶ್ಯದೊಂದಿಗೆ ಚಿತ್ರ ಮುಗಿಯುತ್ತದೆ.
ಇಲ್ಲಿ ಎನ್ನೆಲ್ ಅವರ ಎಂದಿನ ನಿರುದ್ವಿಗ್ನ ಶೈಲಿಯಿಲ್ಲ. ಒಂದು ಸಾಮಾಜಿಕ-ಆರ್ಥಿಕ ಚೌಕಟ್ಟಿನ ಹಿನ್ನೆಲೆಯಲ್ಲಿ ತಳಸಮುದಾಯದ ಅನೇಕ ಸ್ತರಗಳನ್ನು ಬಿಂಬಿಸುವ ಅವಕಾಶವಿದ್ದರೂ ಬಾಲಕನನ್ನೇ ಹೆಚ್ಚು ಕೇಂದ್ರೀಕರಿಸಿದ್ದಾರೆ. ಕತೆಗೆ ತಕ್ಕಷ್ಟು ಮಾತ್ರ ಸಾಕ್ಷ್ಯಚಿತ್ರದ ಮಾದರಿಯಲ್ಲಿ ಹಿನ್ನೆಲೆಯನ್ನು ಕಟ್ಟುತ್ತಾರೆ. ನಿಸರ್ಗದ ಚೆಲುವು, ಶ್ರೀಮಂತಿಕೆಯು ಬಡ ಕುಟುಂಬದ ಬದುಕಿಗೆ ಕ್ರೂರ ವ್ಯಂಗ್ಯವಾಗಿ ಮುಖಾಮುಖಿಯಾಗುವುದಿಲ್ಲ.ಇವೆಲ್ಲವನ್ನು ಹೊರತುಪಡಿಸಿಯೂ ಚಿತ್ರ ಗಾಢವಾದ ಪರಿಣಾಮ ಬೀರುತ್ತದೆ.
ಬಾಲನಟನಾಗಿ ತೆರೆಗೆ ಪರಿಚಯವಾದ ಪುನೀತ್ ರಾಜ್‌ಕುಮಾರ್‌ರವರು ರಾಮುವಾಗಿ ನೀಡಿದ ಪ್ರಬುದ್ಧ ಅಭಿನಯವು ಆ ವರ್ಷ (೧೯೮೪) ಅವರಿಗೆ ಅತ್ಯುತ್ತಮ ಬಾಲನಟ ರಾಷ್ಟ್ರೀಯ ಪ್ರಶಸ್ತಿ ಗಳಿಸಿಕೊಟ್ಟಿತು. ಆದರೆ ಆ ವರ್ಷದ ರಾಜ್ಯ ಪ್ರಶಸ್ತಿ ಅವರಿಗೆ ದಕ್ಕಲಿಲ್ಲ. ಅರ್ಹತೆಯಿದ್ದರೂ ವಂಚನೆಯಾಗುವ ಪ್ರಕರಣಗಳಲ್ಲಿ ಇದೂ ಒಂದು. ರಾಷ್ಟ್ರಮಟ್ಟದಲ್ಲಿ ’ಬೆಟ್ಟದ ಹೂವು’ ಅತ್ಯತ್ತಮ ಪ್ರಾದೇಶಿಕ ಪ್ರಶಸ್ತಿ ಪಡೆದರೆ, ರಾಜ್ಯದಲ್ಲಿ ಎರಡನೇ ಅತ್ಯುತ್ತಮ ಪ್ರಶಸ್ತಿ ಹಾಗೂ ಅತ್ಯುತ್ತಮ ಕಥಾ ಪ್ರಶಸ್ತಿಯನ್ನು ಪಡೆದುಕೊಂಡಿತು.
ಎನ್ನೆಲ್ ಅವರು ರಾಜ್ ನಾಯಕರಾಗಿದ್ದ ’ನಾಂದಿ’ಯಿಂದ ವೃತ್ತಿ ಬದುಕು ಆರಂಭಿಸಿದರು. ಅವರ ವೃತ್ತಿ ಜೀವನದ ಕೊನೆಯಲ್ಲಿ ನಿರ್ದೇಶಿಸಿದ ಚಿತ್ರ ರಾಜ್ ಪುತ್ರ ಪುನೀತ್ ನಾಯಕರಾಗಿದ್ದ ’ಬೆಟ್ಟದ ಹೂವು’. ’ನಾಂದಿ’ ಮತ್ತು ’ಬೆಟ್ಟದ ಹೂವು’ ಸೇರಿದಂತೆ ಅವರ ಚಿತ್ರಗಳು ವ್ಯಕ್ತಿಗಳ ಅಂತರಂಗದ ವಿವಿಧ ಪಾತಳಿಗಳನ್ನು ಶೋಧಿಸಿದ ಪ್ರಯತ್ನಗಳೇ! ಒಟ್ಟು ಸಮಾಜದ ವಿಶಾಲ ಕ್ಯಾನವಾಸಿನ ಭಿತ್ತಿಯಲ್ಲಿ ವ್ಯಕ್ತಿಯ ಸಮಸ್ಯೆಗಳನ್ನು ಬಿಂಬಿಸುವ, ವಿಶ್ಲೇಷಿಸುವ ಅವಕಾಶಗಳಿದ್ದರೂ ಎನ್ನೆಲ್ ಅವುಗಳಿಗೆ ಹೆಚ್ಚು ಗಮನ ನೀಡಲಿಲ್ಲ. ವ್ಯಕ್ತಿಯ ಸಮಸ್ಯೆಗಳೇ ಅವರಿಗೆ ಮುಖ್ಯವೆನಿಸಿದವು. ಇದು ಅವರ ಬಗೆಗಿನ ಆಕ್ಷೇಪಣೆಯಲ್ಲ. ಎನ್ನೆಲ್ ಅವರ ಚಿತ್ರಗಳನ್ನು ಪರಿಭಾವಿಸುತ್ತಿದ್ದ ಕ್ರಮವನ್ನು ಮನಗಾಣುವ ಪ್ರಯತ್ನ, ಅಷ್ಟೆ.
ಸರಿಸುಮಾರು ಎಲ್ಲ ಚಿತ್ರಗಳಲ್ಲೂ ಎನ್ನೆಲ್ ತಮ್ಮ ಕಿರುಚಿತ್ರ ‘ಬ್ಲಿಸ್’ನಲ್ಲಿರುವ ಉದಾರವಾದಿ ಮಾನವೀಯತೆಯನ್ನೆ ಶೋಧಿಸುವ ಪರಿಯನ್ನು ಕಾಣಬಹುದು. ದಿನನಿತ್ಯದ ಬದುಕಿನ ಜಂಜಾಟಗಳ ನಡುವೆಯೂ ಬತ್ತದ ಮಾನವೀಯ ಸೆಲೆಗಳನ್ನು ಅನ್ವೇಷಿಸುವ ಅವರ ಪ್ರಯತ್ನ ಎಲ್ಲ ಚಿತ್ರಗಳಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಇಣುಕಿ ಹಾಕುತ್ತದೆ. ಬದುಕಿಗೆ ಅಡ್ಡಗೋಡೆಯಂತೆ ಎದುರಾಗುವ ಕಿವುಡು-ಮೂಕ ಸಮಸ್ಯೆ ಕೊನೆಗೆ ಬದುಕಿನ ಸಹಜ ಲಯಗಳಲ್ಲಿ ಲೀನವಾಗುವ ಪ್ರಕ್ರಿಯೆಯನ್ನು ‘ನಾಂದಿ’ ನಿರೂಪಿಸುತ್ತದೆ. ವಿಧಿಯ ಕ್ರೌರ್ಯಕ್ಕೆ ಬಲಿಯಾಗಿ ತಾಯಿಯ ಪ್ರಿಯಕರನ ಮಗನನ್ನೇ ಪ್ರೀತಿಸಿ, ತಾಯಿಯ ಗುಹ್ಯರೋಗವನ್ನೇ ಪಡೆದರೂ, ಏಕಾಂಗಿಯಾಗಿ ಬದುಕನ್ನು ಸ್ವೀಕರಿಸುವ ಹೆಣ್ಣೊಬ್ಬಳ ಅಂತಃಶಕ್ತಿ ‘ಮುಕ್ತಿ’ಯಲ್ಲಿ ಅನಾವರಣಗೊಂಡಿದೆ. ತನ್ನ ಸ್ನೇಹಿತನ ಹೆಂಡತಿಯಲ್ಲಿ ಅನುರಕ್ತಿ ತಾಳುವ, ಗಂಡನ ಸ್ನೇಹಿತನಲ್ಲಿ ಆಸಕ್ತಿ ತಾಳುವ, ಗಂಡು-ಹೆಣ್ಣಿನ ವ್ಯಕ್ತಿತ್ವಗಳು ತಮ್ಮ ಉನ್ನತ ಮಾನವೀಯ ಗುಣಗಳಿಂದಾಗಿ ವಿಕಸನಗೊಳ್ಳುವ ವಿಧಾನದಲ್ಲಿ ‘ಉಯ್ಯಾಲೆ’ ವಿಜೃಂಭಿಸುತ್ತದೆ. ಬಂಧನಕಾರಿ ವ್ಯವಸ್ಥೆಯಿಂದ ವಿಮೋಚನೆಯ ಹಾದಿಯ ಅನ್ವೇಷಣೆಯನ್ನು ‘ಅಬಚೂರು’ ತೆರೆದು ತೋರಿಸಿದರೆ, ಸೇಡೆಂಬ ಜ್ವಾಲೆ ಮಾನವೀಯ ಸೆಲೆಯಾಗಿ ಪರಿವರ್ತಿತವಾಗುವುದು ‘ಮುಯ್ಯಿ’ ಚಿತ್ರದ ವಿಶೇಷ. ಮನುಷ್ಯನ ಆಯ್ಕೆಯ ಸ್ವಾತಂತ್ರ್ಯ ಮತ್ತು ಹೊಣೆಗಾರಿಕೆಯನ್ನು ‘ಬೆಟ್ಟದ ಹೂವು’ ಕಾಣ್ಕೆಯಾಗಿ ನೀಡುತ್ತದೆ.
ಹೀಗೆ ಉದಾರವಾದಿ ಮಾನವೀಯ ಧೋರಣೆಯನ್ನೇ ಚಿತ್ರದ ಹಂದರವಾಗಿ ಬಳಸಿಕೊಂಡರೂ, ವಿಭಿನ್ನವಾದ ಕಥಾವಸ್ತುಗಳನ್ನು ಕನ್ನಡಿಗರಿಗೆ ನೀಡಿ ಅವರ ರುಚಿಶುದ್ಧಿಯನ್ನು ಹೆಚ್ಚಿಸಿದವರು ಎನ್ನೆಲ್.
ಸೈಡ್ ರೀಲ್
– ೧೯೬೪ರ ರಾಷ್ಟ್ರಪ್ರಶಸ್ತಿ ಪಟ್ಟಿಯಲ್ಲಿ ‘ನಾಂದಿ’ ಚಿತ್ರಕ್ಕೆ ಪ್ರಶಸ್ತಿ ಬರಬಹುದು ಎಂದು ಕನ್ನಡಿಗರು ಕಾತರರಾಗಿದ್ದರು. ಆಗಿನ ಆಯ್ಕೆ ಪದ್ಧತಿಯ ದೋಷದಿಂದಾಗಿ ‘ನಾಂದಿ’ಗೆ ಪ್ರಶಸ್ತಿ ಬರಲಿಲ್ಲ. ಮೊದಲಬಾರಿಗೆ ರಾಷ್ಟ್ರಪ್ರಶಸ್ತಿ ಪಟ್ಟಿಯನ್ನು ವಿರೋಧಿಸಿ ಸ್ವಯಂ ಪ್ರೇರಣೆಯಿಂದ ಬೆಂಗಳೂರಿನ ಸಿನಿಮಾ ಪ್ರೇಮಿಗಳು ಬೀದಿಗಿಳಿದು ಪ್ರತಿಭಟಿಸಿದರು.
– ಕನ್ನಡ ಚಿತ್ರರಂಗದಲ್ಲಿ ಖಳನಟನಾಗಿ ವಿಜೃಂಭಿಸಿ ಪೋಷಕ ಹಾಗೂ ಹಾಸ್ಯ ಪಾತ್ರಗಳಲ್ಲಿ ಮಿಂಚಿದ ದಿನೇಶ್ ಅವರ ಮೊದಲ ಚಿತ್ರ ‘ನಾಂದಿ’.
– ಎನ್ನೆಲ್ ಅವರ ’ಉಯ್ಯಾಲೆ’ ಮತ್ತು ’ಮುಕ್ತಿ’ ಚಿತ್ರಗಳು ೧೯೬೯-೭೦ರ ದ್ವಿತೀಯ ಅತ್ಯುತ್ತಮ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಹಂಚಿಕೊಂಡವು. ಒಬ್ಬ ನಿರ್ದೇಶಕನ ಎರಡು ಚಿತ್ರಗಳು ಒಂದೇ ಪ್ರಶಸ್ತಿಯನ್ನು ಹಂಚಿಕೊಂಡ ಅಪರೂಪದ ದಾಖಲೆ ಮತ್ತೆ ಪುನರಾವರ್ತನೆಯಾಗಲಿಲ್ಲ.
*****


















