ಬೇಗ ಬಾ, ಇರುಳ ದೇವಿ ಬಾ, ಬಾ,
ತಡೆಯದಿರು ಸಿಂಗರಕೆ,
ಬೇಗ ಬಾ, ಬಾ, ಬಾ!
ತಾರೆಗಳ ಲಾಸ್ಯವೇಕೆ
ಚಂದ್ರಿಕೆಯ ಹಾಸ್ಯವೇಕೆ
ಮುಡಿಗೆ ಸಾಕು ಏಳು ಚಿಕ್ಕೆ
ಕಿವಿಗೆ ಎರಡು ಓಲೆ!
ಮೊಗ್ಗೆಗಿನಿಸು ನಗೆಯನಾಯ್ದು
ದಣಿದ ಮನಕೆ ತಣಿವತಂದು
ಬೆಂದ ಬಾಳು ಅರಳುವಂತೆ
ಬೀರು ನಾಳಿನಾಸೆಯ!
ಕನಸಿನ ಮನೆ ಮುರಿದಿದೆ
ಹೃದಯದೊಲುಮೆ ಬತ್ತಿದೆ
ಶುಭ ಶಂಕರ ಮನಕೆ ಮಸಣದ
ಕಳೆದುಂಬಿದೆ ತಾಯಿಯೆ!
ನಿನ್ನ ಮೈಮನ ಸೋಂಕಲಿ
ರೋಮ ರೋಮವು ಕೊನರಲಿ
ಮೃದು ಸುವಾಸ ಮುತ್ತಲಿ
ಹರಣ ಮತ್ತವಾಗಲಿ!
ದಿನದಿ ಸವೆದೆ ನಲುಮೆ ನಗೆಯು
ನಿನ್ನಿರುಳಲಿ ಚಿಗಿಯಲಿ
ದಿನದಿ ಮುರಿದ ಆಸೆಯೆಲ್ಲ
ನಿನ್ನೆದೆಯಲಿ ಫಲಿಸಲಿ!
ನಿನ್ನ ಕಂಗಳಾಳದಲ್ಲಿ
ಮಂಗಲಮಯ ದೇವನಿರವು
ಅಲ್ಲಿ ನನ್ನ ಒಲವ ನೆಯ್ದು
ನನ್ನ ನಾನೆ ಮರೆನೆನು!
*****


















