ಚಿತ್ರ: ಪ್ರಾನಿ
ಚಿತ್ರ: ಪ್ರಾನಿ

ಮನೆ ಮುಂದೆ ಸಾರಣೆ ಮಾಡಿಲ್ಲ ಚೆಂದವಾಗಿ ರಂಗೋಲಿ ಬಿಡಿಸಿಲ್ಲ. ನಲ್ಲಿ ನೀರು ಹಿಡಿಯಲೂ ಬಂದಿಲ್ಲ ಹೊತ್ತು ಮೀರುತ್ತಿದ್ದರೂ ಕಾಣುತ್ತಿಲ್ಲ! ಅವನು ಸಾಕಿದ ನಾಯಿ ಮಾತ್ರ ಕುಂಯ್‌ಗುಟ್ಟುತ್ತಾ ಮನೆ ಒಳಗೂ ಹೊರಗೂ ಅಡ್ಡಾಡುತ್ತಿತ್ತು. ಚೆಂಬಸಪ್ಪ ಹಂಗೆಲ್ಲಾ ಹೊತ್ತು ಏರಿದರೂ ಮಲಗುವ ಆಸಾಮಿಯಲ್ಲ. ಸದಾ ಯಾವುದಾದರೂ ಯಾರದ್ದೇ ಕೆಲಸವಾದರೂ ತನ್ನದೇ ಎಂಬಂತೆ ದಿನವೆಲ್ಲಾ ದುಡಿಯುವ ದಣಿವರಿಯದ ವಿಚಿತ್ರ ಇಸಮು. ಇದು ಕೇರಿಗೇ ಗೊತ್ತಿರುವ ಸಂಗತಿ. ನಲ್ಲಿ ನೀರು ಹಿಡಿಯಲು ಬಿಂದಿಗೆ ಹಿಡಿದು ಅಂವಾ ಬಂದನೆಂದರೆ ಅಲ್ಲಿರುವ ಹೆಂಗಸರಿಗೆಲ್ಲಾ ಖುಷಿ. ಎಲ್ಲರ ಬಿಂದಿಗೆಗಳನ್ನು ತಾನೇ ತೆಗೆದುಕೊಂಡು ನಲ್ಲಿಗೆ ಹಿಡಿದು ತುಂಬಿಸಿ ಅವರ ಸೊಂಟದ ಮೇಲೆ ಇರಿಸುವುದರಲ್ಲಿ ಅವನಿಗೆಂತೋ ಅವರ್ಣನೀಯ ಆನಂದ. ಕಡೆಗೆ ತನ್ನ ಮನೆಗೂ ನಾಲ್ಕಾರು ಬಿಂದಿಗೆ ನೀರು ಹೊತ್ತೊಯ್ಯುವ ಅವನು ಎಂದೂ ಸರದಿಗೆ ನಿಂತು ಬಡಿದಾಡಿದವನಲ್ಲ. ನಲ್ಲಿ ನೀರು ಸಿಗದಿದ್ದರೆ ಕಬೀರ ಮಠದ ಬಳಿಯ ಅಕ್ಕಚ್ಚಮ್ಮನ ಬಾವಿಗೆ ಹೋಗಿ ತನ್ನ ಮನೆಗೆ ಬೇಕಾದಷ್ಟು ನೀರು ಹಾಕ್ಕಿಕೊಳ್ಳಬಲ್ಲ. ಅಲ್ಲೂ ಹೆಂಗಸರ ಗುಂಪಿದ್ದರೆ ಚೆಂಬಸಪ್ಪನನ್ನು ನೋಡಿದೊಡನೆ ‘ಅಣ್ಣಾ ಒಂದೀಟು ನೀರು ಸೇದಿಕೊಡು’ ಅನ್ನೋರೇ ಹೆಚ್ಚು. ಅವರು ಅನ್ನದಿದ್ದರೂ ಇವನೇ ಮುಂದಾಗಿ ಅವರ ಬಿಂದಿಗೆಗಳನ್ನು ಬಾವಿಗೆ ಬಿಟ್ಟು ನೀರು ಸೇದಿ ಬಿಂದಿಗೆಯನ್ನು ಅವರ ಸೂಂಟಕ್ಕೇರಿಸುವಷ್ಟು ಉದಾರಿ. ಎಲ್ಲೂ ಅವನದು ಕಡೆಸರದಿ.

ಜಾಲಿ ಕೊರಡಿನಂತಿದ್ದ ಚೆಂಬಸಪ್ಪ ಯಾವ ಕಷ್ಟದ ಕೆಲಸಕ್ಕೂ ಎಂತವರ ನೆರವಿಗೂ ಸದಾ ಸಿದ್ಧ ಅಂದ ಮೇಲೆ ಯಾರಿಗೆ ತಾನೇ ಬೇಡವಾದಾನು? ಬೆಳಿಗ್ಗೆ ಎದ್ದವನೆ ಅಂಗಳ ಗುಡಿಸಿ ಸೆಗಣಿ ಹಿಡಿದು ತಂದು ಸಾರಣೆ ಮಾಡಿ ದಿನಕ್ಕೊಂದು ತರಾ ರಂಗೋಲಿ ಬಿಡಿಸುವ ವೈಖರಿಯನ್ನೇ ನೋಡುತ್ತಾ ಹೆಂಗಸರು ನಿಲ್ಲೋದುಂಟು. ಬೆಳಗಿನ ಬೆಡ್ ಕಾಫಿ ತಡವಾದಾಗ ಗಂಡನಿಂದ ಅನ್ನಿಸಿಕೊಳ್ಳೋದೂ ಉಂಟು. ಅಂಥೋನ್ನ ಅಂಗಳ ಈವತ್ತು ಬಿಕೋ ಅನ್ನುವಾಗ ಕೇರಿಯ ಹೆಂಗಸರಲ್ಲಿ ಅದೆಂತದೋ ತಳಮಳ. ನಿನ್ನೆ ರಾತ್ರಿ ಅವನಕ್ಕ ಮತ್ತು ಅವನ ಮಧ್ಯೆ ನಡೆದ ಗಲಾಟೆ. ಆಕೆಯ ಗಂಡ ಚೆಂಬಸಪ್ಪನನ್ನು ತದುಕಿದ್ದು ನೆನಪಾದಾಗ
ಕೆಟ್ಟದೆನಿಸಿತ್ತು. ಏನೂ ತಿಳಿಯದ ಅಮಾಯಕನ ಮೇಲೆ ಕೈಮಾಡೋದೆ! ಇರೋ ಮನೆ ಬಿಡಿಸಿದರೆ ಅವನಾದರೂ ಹೋದಾನೆಲ್ಲಿ ಎಂದವನ ಪರವಾಗಿ ಕೇರಿಯ ಹಿರಿಯರು
ವಕಾಲತ್ತಿಗೆ ನಿಂತು ಅಕ್ಕ ಕೊಟ್ರಮ್ಮ ಅವಳ ಗಂಡನ ಬಳಿ ರಾಜಿಗೆ ಮುಂದಾಗಿದ್ದರು. ‘ನೀವ್ಯಾರ್ರಿ ಅದ್ನೆಲ್ಲಾ ಹೇಳೋಕೆ. ರೂಲ್ಸು ಪ್ರಕಾರ ಈ ಮನೆ ನಮ್ಮದೈತಿ. ಇಷ್ಟು ಈ ಹುಚ್ಚನ್ನ ಇರೋಕೆ ಬಿಟ್ಟಿದ್ದು ನಮ್ದೇ ತಪ್ಪು. ಮನೆ ಅಪಲಾಯಿಸೋಕೆ ನೋಡ್ತಾ ಅವ್ನೆ ಹುಚ್ಚ ಹೋಗ್ ಹೋಗ್ರಿ ನಿಮ್ಮ ಕೆಲಸ ನೋಡ್ಕಳಿ’ ಅಂತ ದಬಾಯಿಸಿದ್ದಳು ಅವನಕ್ಕ.

ಚೆಂಬಸಪ್ಪನನ್ನು ಎಲ್ಲರೂ ಹುಚ್ಚೆಂಬಸಪ್ಪ ಅಂತಲೇ ಕರೆಯೋದು ವಾಡಿಕೆಯಾರಾದರೂ ಅವನಕ್ಕಳೇ ಹಾಗೆಂದಾಗ ಆ ಮಾತಿನಲ್ಲಿ ತಿರಸ್ಕಾರ ಕೇರಿಗರ ಮನಸ್ಸನ್ನು ಘಾಸಿಗೊಳಿಸಿತ್ತು. ಅವನನ್ನು ಎಲ್ಲರೂ ಹುಚ್ಚೆಂಬಸಪ್ಪ ಅಂತಲೇ ಗುರುತಿಸಿದರೂ ಮಾತಲ್ಲಿ ಗೇಲಿಯಾಗಲಿ, ಉಡಾಫೆಯಾಗಲಿ ಇರದೆ ಅವನ ಮುಗ್ಧತೆಗೆ ಮರುಗುವ ಕಾಳಜಿಯೇ ಹೆಚ್ಚಾಗಿ ಮೇಳೈಸಿರುತ್ತಿತ್ತು. ಕರುವಿನಕಟ್ಟೆ, ಜನರ ಯಾರ ಮನೆಗೆಲಸವೂ ಅವನಿಲ್ಲದೆ ಸುಸೂತ್ರವಾಗಿ ಸಾಗಿದ ಉದಾಹರಣೆಗಳಿರಲಿಲ್ಲ. ಎಲ್ಲರ ಮನೆ ಮದುವೆ, ಮುಂಜಿ, ನಾಮಕರಣ, ಮೈನೆರೆತಶಾಸ್ತ್ರ, ಸತ್ಯನಾರಾಯಣ ವ್ರತ, ವರಮಹಾಲಕ್ಷ್ಮಿ ಪೂಜೆಯಿಂದ
ಹಿಡಿದು ಮಾಮೂಲಿ ಹಬ್ಬ ಹರಿದಿನಗಳು ತಿಥಿಮತಿಗಳಿಗೂ ಚೆಂಬಸಪ್ಪನದು ಖಾಯಂ ಹಾಜರಿ. ಹಬ್ಬಕ್ಕೆ ಬೇಕಾದ ಮಾವು ಬೇವು ಹೂವು ಗೋಮೂತ್ರ ಬಾಳೆಕಂದು ಬಾಳೆಲೆಯನ್ನು ತೋಪಿನಿಂದ ತರುವ ತಳಿರು ತೋರಣ ಕಟ್ಟಿಸಿಂಗರಿಸುವ, ಬೇಕಾದ ದಿನಸಿ ಹೊತ್ತು ತರುವ, ಕಡೆಗೆ ಅಡಿಗೆ ಕೆಲಸಕ್ಕೂ ಚೆಂಬಸಪ್ಪನ ನೆರವನ್ನೇ ನಂಬಿದ ಕುಟುಂಬಗಳೇ ಹೆಚ್ಚು. ಅವನಿಂದ ಚಾಕರಿ ಮಾಡಿಸಿಕೊಳ್ಳದೋರೆ ಪಾಪಿಗಳು. ಯಾರೂ ಅಸೂಯೆಪಡುವಂತಹ ಕೆಂಪು ಬಣ್ಣದ ಮೈಕಟ್ಟಿನ ಆಳು. ಗರಡಿಗೆ ಹೋಗಿ ಸಾಮು ತೆಗೆಯದಿದ್ದರೂ ಮಾಡುವ ಕಷ್ಟದ ಕಾಯಕದಿಂದಲೇ ಮೈ ಹುರಿಗಟ್ಟಿತ್ತು. ದೊಡ್ಡ ಪಟ್ಟಾ ಪಟ್ಟಿ ಚೆಡ್ಡಿ ತೋಳಿರುವ ತೆಳ್ಳನೆ ಬನಿಯನ್ ತಲೆಗೊಂದು ಟೋಪಿ, ಕಾಲಿಗೆ ಯಾರದ್ದೋ ಸವೆದ ಚಪ್ಪಲಿ ಹಣೆಗೆ ಮೂರಳೆ ಈಬತ್ತಿ ಬಿಳಿ ಕುರುಚಲು ಗಡ್ಡ ಎಂದೂ ಕ್ರಾಪ್ ಕಾಣದ ಪೈಲ್ವಾನ್ ಕಟಿಂಗ್. ಇವು ಅವನ ವೇಷಭೂಷಣಗಳು. ಮುಖದಲ್ಲಿನ ಮುಗ್ಧತೆ ಕಂಗಳಲ್ಲಿನ ಅಭೋದತೆಯಿಂದಾಗಿ ಹೊಸದಾಗಿ ನೋಡುವವರಿಗೆ ಅವಭೂತನಂತೆಯೋ, ಯಾವುದೋ ಮಠದಯ್ಯನಂತೆಯೋ ಭಾಸವಾಗುತ್ತಿದ್ದ ಮಾತುಗಳು ಅಷ್ಟೆ ಅರ್ಥ ಮಾಡಿಕೊಳ್ಳೋದು ತುಸು ಕಷ್ಟವೆ. ಆವನಿಂದ ಚಾಕರಿ ಮಾಡಿಸಿಕೂಳ್ಳುವ ಮಂದಿ ಅವನಮಾತನ್ನೆಂದೂ ಆರ್ಥೈಸಿಕೊಳ್ಳಲು ಪ್ರಯತ್ನಿಸಿದವರೂ ಅಲ್ಲ. ಅವನಿಗೆ ವೃದ್ಧತಾಯಿ ಮೂವರು ತಂಗಿಯರು ಒಬ್ಬ ಆಕ್ಕ ಇದ್ದಳು. ಹೆಣ್ಣು ಮಕ್ಕಳಿಗೆಲ್ಲಾ ಮದುವೆಯಾಗಿತ್ತು ಬೇರೆ ಊರುಗಳಲ್ಲಿದ್ದರು. ಅಕ್ಕ ಮಾತ್ರ ದೊಡ್ಡಪೇಟೆಯಲ್ಲಿದ್ದಳು. ದೊಡ್ಡಕುಟುಂಬ ಹುಟ್ಟಿದ್ದ ಚೆಂಬಸಪ್ಪ ಬಡವನೇನಲ್ಲ ವಿಧವೆ ತಾಯಿಗೆ ಮಗ ಅರೆ ಹುಚ್ಚನೆಂದು ತೋರಿದಾಗ ಇದ್ದ ಆಸ್ತಿಯನ್ನೆಲ್ಲಾ ಮಾರಿ ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ತನ್ನ ಜವಾಬ್ದಾರಿಯನ್ನು ನೀಗಿಕೊಂಡಿದ್ದಳು. ಹೀಗಾಗಿ ಮದುವೆಗೆಂದು ತೋಟಗಳು ಕೈಬಿಟ್ಟಿದ್ದವು. ಇದ್ದನಾಲ್ಕು ಹೆಂಚಿನ ಮನೆಗಳನ್ನೂ ಹೆಣ್ಣುಮಕ್ಕಳ ಹೆಸರಿಗೇ ಬರೆದುಬಿಟ್ಟಿದ್ದಳು. ಮನೆಬಾಡಿಗೆ ಹೆಣ್ಣು ಮಕ್ಕಳ ಪಾಲಾಗುತ್ತಿತ್ತು. ಒಂದು ಮನೆಯಲ್ಲಿ ಮಗನೊಂದಿಗಿದ್ದ ತಾಯಿ, ನಾಲ್ವರಲ್ಲಿ ಯಾರಾದರೊಬ್ಬರು ತನ್ನನ್ನು ಆರೈಕೆ ಮಾಡಿಯಾರೆಂಬ ಭರವಸೆ ಇಟ್ಟುಕೊಂಡವಳು. ಆದರೆ ಆಗಿದ್ದೇ ಬೇರೆ. ಗಂಡನ ಮನೆ ಸೇರಿದ ಹೆಣ್ಣುಮಕ್ಕಳು ವರ್ಷಕ್ಕೊಮ್ಮೆ ತಾಯಿಯನ್ನು ನೋಡಲು ಬಂದರೆ ಅದೇ ಹೆಚ್ಚು. ಊರಲ್ಲಿದ್ದ ಮಗಳು ಸಹ ನೋವುನ್ಯಾತ ಎಂದು ಹೇಳಿ ಕಳುಹಿಸಿದರೂ ಬರುವುದು ಕಷ್ಟ. ಬಂದರೂ ಪಡಸಾಲೆಯಲ್ಲಿ ಕೂತು, ‘ಚೆಂದಾಗಿ ಅವ್ವನ್ನ ನೋಡಿಕೊಳ್ಳಲೇ ಹುಚ್ಚುಮುಂಡೇದೆ’ ಎಂದು ತಿಳಿಹೇಳಿ ಎದ್ದು ಹೋಗುವಷ್ಟು ಅಂತಃಕರಣ ಇರುವಾಕೆ. ಹಂಗಾಗಿ ತಾಯಿ ತನ್ನ ಹೊಟ್ಟೆ ಹೊರದುಕೊಳ್ಳುವ ಹೊಣೆ ಚೆಂಬಸಪ್ಪನದೇ ಆಗಿತ್ತು. ಅವನೆಂದೂ ಯಾವುದನ್ನೂ ಪ್ರಶ್ನಿಸಿದವನಲ್ಲ. ತಾಯಿಯಿಂದ ತನಗಾದ ಅನ್ಯಾಯವನ್ನೂ ಅರಿಯದಷ್ಟು ಮುಗ್ಧ. ಅವರಿವರು ಚುಚ್ಚಿಕೊಟ್ಟರೂ
ಇವನಿಗರ್ಥವಾಗಿದ್ದೆಷ್ಟೋ. ಏನೂ ತಿಳಿಯದವನಿಗೂ ಹಸಿವಾಗುವುದು ತಿಳಿಯುತ್ತಲ್ಲ ಹೀಗಾಗಿ ಯಾರು ಏನು ಕೆಲಸ ಹೇಳಿದರೂ ಮಾಡುತ್ತಿದ್ದ. ಪುಡಿಗಾಸು ಸಿಕ್ಕರೆ ತಂದು ಹಿಟ್ಟು ಬೇಯಿಸಿ ಗೊಜ್ಜು ಚಟ್ನಿ ಮಾಡಿ ಮುದ್ದೆ-ಚಟ್ಟಿಯನ್ನಂತೂ ತಾಯಿಗೆ ಒದಗಿಸುತ್ತಿದ್ದ.

ಇಂಥ ಕೆಲಸವೇ ಹೇಳಬೇಕೆಂತಿಲ್ಲ ಇಂಥದ್ದೇ ಕೆಲಸ ತನ್ನದು ಎಂದೂ ನಂಬಿದವನಲ್ಲ. ಮದುವೆ ಮನೆಯವರು ಕರೆದರೆ ನೀರು ಹೊತ್ತು ಹಾಕುತ್ತಾನೆ. ಊಟ
ಬಡಿಸುವವ, ಎಂಜಲೆಲೆಯನ್ನು ಎತ್ತುತ್ತಾನೆ. ಗಡದ್ದಾಗಿ ಊಟವನ್ನೂ ಮಾಡುತ್ತಾನೆ. ತಾಯಿಗೂ ಎಲೆಯಲ್ಲಿ ಕಟ್ಟಿಸಿಕೊಂಡು ತರುತ್ತಾನೆ. ಊಟ ಮಾಡುವುದರಲ್ಲಿ ಚೆಂಬಸಪ್ಪ ಬಕಾಸುರ. ಮದುವೆಮನೆಗಳಲ್ಲಿ ಅವನೆಂದೂ ಅನ್ನ ಸಾಂಬಾರ್ ಮುಟ್ಟುವವನೇ ಅಲ್ಲ. ಸೈಡ್ಸೂ ಅವನಿಗೆ ಬೇಡ. ಬೂಂದಿ, ಜಿಲೇಬಿ, ಪಾಕು ಏನೇ ಸಿಹಿಯಿರಲಿ ಹೊಟ್ಟೆ ತು೦ಬುವಷ್ಟು ಅವನ್ನೇ ಹಾಕಿಸಿಕೊಂಡು ಕತ್ತೆಯಂತೆ ದುಡಿದರೂ ಕೊಟ್ಟಷ್ಟೇ ಕಾಸು ತೆಗೆದುಕೊಳ್ಳುತ್ತಿದ್ದರಿಂದ ಅವನ ಊಟದ ಬಗ್ಗೆ ಯಾರೂ ರಿಸ್ಟ್ರಿಕ್ಷನ್ ಮಾಡುತ್ತಿರಲಿಲ್ಲ. ಕೇಳಿದಷ್ಟು ಬಡಸ್ರಿ ಅವನ್ಗೆ ಎಂದು ಅಡಿಗೆಯವರಿಗೆ ಹೇಳುವಷ್ಟು ಔದಾರ್ಯ ತೋರುತ್ತಿದ್ದರು ಮಂದಿ. ಅವನು ಸಿಹಿ ತಿನ್ನುವ ಪರಿ ನೋಡಿ ‘ಅನ್ನ ಸಾಂಬಾರ್. ಹಾಕಿಸ್ಕೋ ಅಂದರೆ ಚೆಂಬಸಪ್ಪ ತಲೆ ಕೊಡವಿಬಿಡುತ್ತಿದ್ದ ‘ದಿನಾ ಅದನ್ನ ತಿಂಬೋದು ಇದ್ದೇ ಐತಿ ಸ್ವಾಮಿ. ಸಿಪ್ರಾ ಮಾಡಿದಾಗ ನಾನು ಬರೀ ಅದ್ನೇ ತಿಂಬೋದು ಕಡೀಗೆ ಹೊಟ್ಟೆನಾಗ ಜಾಗ ಉಳಿದ್ರೆ ನೋಡೋಣ ಅಂದುಬಿಡುತ್ತಿದ್ದ.

ಯಾರಾದರೂ ಹೆಂಗಸರು ಚಟ್ನಿಪುಡಿ ಮಾಡಬೇಕೆಂದರೆ, ಸಾಂಬಾರ ಖಾರದಪುಡಿ ಮಾಡಿಕೊಳ್ಳಬೇಕೆಂದರೆ, ಚೆಂಬಸಪ್ಪ ಬರಲೇಬೇಕು. ಸಾಂಬಾರದ ಲಾವಾ ಜಮೆ ಹಸನ ಮಾಡಿಕೊಡೋದು ಕುಟ್ಟೋದು. ಸಾಂಬಾರ ಪುಡಿ ಉರಿಯೋದು, ಮಿಶಿನ್ಗೆ ಹೋಗಿ ಹಾಕಿಸಿಕೊಂಡು ಬರೋವರ್ಗೂ ಟೊಂಕ ಕಟ್ಟಿ ದುಡಿಯುತ್ತಿದ್ದ. ನಮ್ಮ ತಾಯಿ ಕೂಡ ಅವನಿಂದ್ಲೆ ಸಾಂಬಾರದಪುಡಿ ಚಟ್ನಿ ಪುಡಿ ಕುಟ್ಟಿಸುತ್ತಿದ್ದಳು. ಹಪ್ಪಳ ಸಂಡಿಗೆ ಇಡಲೂ ಅವನಿರಬೇಕು. ಕೊಟ್ಟಷ್ಟೇ ಕಾಸು ತೆಗೆದುಕೊಳ್ಳುತ್ತಿದ್ದ. ಬಲವಂತ ಮಾಡಿದರೂ ನಮ್ಮ ಮನೆಯಲ್ಲಿ ಊಟಕ್ಕೆ ನಿಲ್ಲುತ್ತಿರಲಿಲ್ಲ. ಒಂದು ಲೋಟ ಕಾಫಿಯನ್ನೂ ಮುಟ್ಟಿದವನಲ್ಲ. ಆಗ ಮಿಡ್ಲ್ ಸ್ಕೂಲ್‌ನಲ್ಲಿ ಓದುತ್ತಿದ್ದ ನಮಗೆ ನಮ್ಮ ಮನೇಲಿ ಉಣ್ಣಲಿ ಎಂಬಾಸೆ. ಯಾಕೆಂದರೆ ನಮಗೆ ಗಾಳಿಪಟ, ಬುಗುರಿ ಮಾಡಿಕೊಡೋದು, ನವರಾತ್ರಿಯಲ್ಲಿ ಗೊಂಬೆ ಕೂರಿಸಲು ನೆರವಾಗೋನು. ‘ಅವಂದು ದೊಡ್ಡ ಜಾತಿ ಕಣೋ. ನಮ್ಮಂಥೋರ ಮನೇನಲ್ಲಿ ಉಣ್ಣೋದಿಲ್ಲ ಅನ್ನುತ್ತಿದ್ದಳು ಅಮ್ಮ. ಆಗ ಅದೆಲ್ಲಾ ನಮ್ಮ ಮನದಾಳಕ್ಕಿಳಿಯದ ಮಾತುಗಳು. ಅವನು ಕಾಸು ತೆಗೆದುಕೊಂಡು ಹೋಗುವಾಗ ಇನ್ನು ಎಂಟಾಣೆ ಜಾಸ್ತಿ ಕೊಡಮ್ಮ ಅಂತ ದುಂಬಾಲು ಬೀಳುತ್ತಿದ್ದೆ. ಯಾವಾಗಲಾದರೂ ಅವನೆ, ‘ಭೀಮವ್ವ ನಿನ್ನ ಗಂಡಂದು ಹಳೆ ಟೊಪ್ಗೆ ಇದ್ರೆ ಕೊಡವ್ವ’ ಅಂತ ಕೇಳುತ್ತಿದ್ದ. ಒಂದು ಸಲ ಅಪ್ಪನ ಹಳೆ ಟೋಪಿ ಕಿಮ್ಮಟ ಹಿಡಿದಿದ್ದ ಕೋಟೊಂದನ್ನು ಅಮ್ಮ ಕೊಟ್ಟಿದ್ದಳು. ಅದನ್ನ ನೀಟಾಗಿ ಒಗೆದು ತೊಟ್ಟು ಅಗ್ದಿ ಖುಷಿಯಿಂದ ಕೇರಿ ತು೦ಬಾ ಅಂವಾ ಅಡ್ಡಾಡಿದ ನೆನಪು ಇನ್ನೂ ಹಸಿರಾಗಿದೆ. ಯಾರ ಮನೆ ಮುಂದೆ ಸೌದೆ ಬಿದ್ದಿರಲಿ, ಕೊಡಲಿ ಈಸ್ಕೊಂಡು ಒಡೆದು ಸೀಳಿ ಹಾಕುತ್ತಿದ್ದ. ಗಾಡಿಗಟ್ಟಿಲೆ ಸೌದೆ ಒಡೆದು ಹಾಕುವಷ್ಟು ಶಕ್ತಿ ಅವನಲ್ಲಿತ್ತು. ಹಬ್ಬದ ಸೀಸನ್ನಲ್ಲಿ ಅನೇಕರು ಅವನಿಂದ ಮನೆಗಳಿಗೆ ಸುಣ್ಣ ಬಣ್ಣ ಹೊಡೆಸುತ್ತಿದ್ದರು. ಯಾರಾದರೂ ಅನ್ನ ಸಾರು ಡಬ್ಬಿಗೆ ಹಾಕಿಕೊಡಲು ಹೋದರೆ ಸುತ್ರಾಂ ಮುಟ್ಟುತ್ತಿರಲಿಲ್ಲ. ‘ಬೇಕಾರೆ ಹಿಟ್ಟೋ, ಅಕ್ಕಿ ಬ್ಯಾಳೆ ಕೊಡ್ರವ್ವೋ’ ಅನ್ನುತ್ತಿದ್ದ ನಾವೇನು ನಮ್ಮ ಕುಲವೇನು ಎಂದು ಬೀಗುತ್ತಿದ್ದ ಲಿಂಗಾಯಿತರ ಮನೆಯ ಮದುವೆ ಊಟಕ್ಕೆ ಮಾತ್ರ ನಿಲ್ಲುತ್ತಿದ್ದ. ಆದರೆ ಯಾರ ಮನೆಯಲ್ಲಿ ಸಾವು ಸಂಭವಿಸಲಿ ಜಾತಿ ರಿವಾಜು ಹಿಡಿಯದೆ ಹೋಗಿ ಶವದ ಮೈ ತೊಳೆದು, ಈಬತ್ತಿ ಹಚ್ಚಿ ತಲೆಗೆ ಪೇಟಾ ಸುಟ್ಟಿಟ್ಟು ಉಲ್ಟ ಅಂಗಿ ತೊಡಿಸಿ ಹೂಹಾರ ಹಾಕಿ ಶವ ಶಿಂಗಾರ ಮಾಡೋದ್ರಲ್ಲಿ ಅಂವಾ ಭಕ್ತಿ ಭಾವ ತೋರುತ್ತಿದ್ದ. ‘ಶಿವ ಪೂಜಿಗಿಂತ ಈ ಕಾರ್ಯ ಸೇಸ್ಟ ಕಣ್ರಪ್ಪ’ ಅಂತಿದ್ದ. ಚಟ ಕಟ್ಟಿ ಹೆಗಲೂ ಕೊಡುತ್ತಿದ್ದ. ಪೀರ್ಲ ಹಬ್ಬದಲ್ಲಿ ಕೆಂಡ ತುಳಿಯೋ ಸಾಬರ ಜೊತೆ ಸೇರಿ ಕೆಂಡ ತುಳಿದು ಬೆರಗುಗೊಳಿಸುತ್ತಿದ್ದ ಇಂಥವನನ್ನು ಜನ ಆಡಿಕೊಳ್ಳದೆ ಬಿಟ್ಟವರಲ್ಲ ‘ಅದೇನ್ ನಿಂದು ಹೊಟ್ಟೆನೋ ಅನಂತಶೆಟ್ಟಿ ಛತ್ರಾನೋ’ ಗೇಲಿ ಮಾಡುತ್ತಿದ್ದರು. ‘ಮೊರ ಹುಗ್ಗಿ ಮೊರ ಮಾಲ್ದಿ ಬಾಲಿ ಕೋಲ್ಡ್’ ಎಂದು ಹುಡುಗರು ಅವನ ಹಿಂದಿಂದೆ ಹೋಗಿ ಕೂಗಿ ರೇಗಿಸುತ್ತಿದ್ದರು. ಆಗ ಮಾತ್ರ ಅಂವಾ ತಾಳ್ಮೆಗೆಟ್ಟು ಕಲ್ಲೆತ್ತಿಕೊಂಡು ಬೀಸುತ್ತಾ ಹುಚ್ಚನೆ ಆಗುತ್ತಿದ್ದ. ಹಿರಿಯ ತಲೆಗಳು ಮಧ್ಯ ಪ್ರವೇಶಿಸದಿದ್ದರೆ ತಲೆ ಒಡಯಲೂ ಚೆಂಬಸಪ್ಪ ಹೇಸದವ. ಇಷ್ಟಗಲ ಬಾಯಿ ತುಂಬಾ ಮಕ್ಕಳಂತೆ ನುಂಗುವ ಅವನ ಮುಖ ಮಾರಿಯಲ್ಲಾ ಕೆಂಡದಂತಾಗಿಬಿಡುತ್ತಿತ್ತು. ತರಗುಟ್ಟಿ ನಡಗುತ್ತಿದ್ದ ಅಂಥ ಕೋಪಿಷ್ಠ. ಹಿರಿಯರೇ ಹುಡುಗರನ್ನು ಗದರಿಸಿ ಓಡಿಸುತ್ತಿದ್ದರು.

ಅವನು ಮೈ ತೊಳೆಯದೆ ದೇವರಿಗೆ ಊದುಬತ್ತಿ ಬೆಳಗದೆ ಬಾಯಿಗೆ ನೀರೂ ಹಾಕುವವನಲ್ಲ. ಅವನ ಪರಿಶುಭ್ರತೆಯು ಕುಹಕಕ್ಕೆ ವಸ್ತುವಾಗಿತ್ತು. ಹೇಗಾದರೂ ಅವನಿಗೆ ಪಾಕೆಟ್ ಕುಡಿಸಲು ಹೆಣಗಾಡಿದ ಕುಡಕರಿಗಂತೂ ಲೆಕ್ಕವಿಲ್ಲ. ಕೋಳಿ ತಿನ್ನಿಸುಲೂ ಪಾಡು ಪಟ್ಟವರುಂಟು. ಅವನ ಗಂಡಸುತನವನ್ನೂ ಪರೀಕ್ಷಿಸುವ ಕುತೂಹಲ. ಅವನನ್ನು ದಂಧೆ ಮಾಡುವ ಹೆಣ್ಣು ಒಬ್ಬಳೊಂದಿಗೆ ಕೋಣೆಯೊಂದರಲ್ಲಿ ಕೂಡಿ ಹಾಕಿದ್ದರು. ಹೆಂಗಾರು ಚೆಂಬಸಪ್ಪನ್ನ ರೇಪ್ ಮಾಡೆಂದು ಅವಳಿಗೆ ನೂರರ ನೋಟೊಂದನ್ನು ಕೈಗಿಟ್ಟ ಪಡ್ಡೆ ಹುಡುಗರು ಹುರಿದುಂಬಿಸಿದ್ದರು. ನಾನೂ ಆವಳು ಅವನ ಮೈಮೇಲೆಲ್ಲಾ ಹಾವು ಹರಿದಾಡಿದಂತೆ ಹರಿದಾಡುವುದನ್ನು ಬಾಗಿಲ ಸಂದಿಯಲ್ಲಿ ನೋಡುವಾಗ ಬೆಚ್ಚಗಾಗಿದ್ದೆ. ಆದರೇನು ಅವಳು ಹೊರಳಾಡಿದ್ದಷ್ಟೇ ಬಂತು ಅವನು ತನ್ನ ತೊಡೆಯ ಬಲವಾಗಿ ಸಿಕ್ರಿಸಿಕೊಂಡಿದ್ದ ಕೈಗಳನ್ನು ತೆಗೆಸಲು ಹರಸಾಹಸ ಮಾಡಿದರೂ ಆಗಲಿಲ್ಲ. ಚೆಂಬಸಪ್ಪ ಗಟ್ಟಿಯಾಗಿ ಅಳುತ್ತಾ “ಶಿವ ಶಿವ ಕಾಪಾಡು ಕಾಪಾಡು, ಕೆಡಿಸ್ತಾ ಅವ್ಳೆ ಬರ್ರಪ್ಪೋ” ಎಂಬ ಕೂಗಿಗೇ ಹೆದರಿ ಅವಳೇ ಬಾಗಿಲು ತೆರೆದುಕೊಂಡು ಓಡಿ ಹೋಗಿದ್ದಳು. ಇಷ್ಟಾದರೂ ಅವನನ್ನು ಹಿಜಡಾ ಎಂದು ಕರೆವ ಎದೆಗಾರಿಕೆ ಮಾತ್ರ ಯಾರಲ್ಲೂ ಇರಲಿಲ್ಲ. ಪೈಲ್ವಾನನ ಮೈಕಟ್ಟು, ಸಂತನ ಫೇಸ್ಕಟ್ಟು, ಭೀಮ ಬಲ ಹೊಂದಿದ್ದ ಅವನ ಮುಂದೆ ಕುಡಿದು ಕೆಟ್ಟು ಕೆರ ಹಿಡಿದ ನರಪೇತಲ್ಲಿರಿಗೆಲ್ಲಿಯ ಆತ್ಮವಿಶ್ವಾಸ. ಆ ಮೇಲೆ ವಾರಗಟ್ಟಲೆ ಅವನು ಜ್ಜರದಿಂದ ನರಳಿದ ಸುದ್ದಿ ಕೇಳಿದಾಗಲಂತೂ ನನಗೆ ಒಳಗೇ ಪಶ್ಚಾತ್ತಾಪ ಉಂಟಾಗಿತ್ತು. ಇಷ್ಟಾಗಿ ಅವನನ್ನು ಹುಚ್ಚನೆಂದು ಒಪ್ಪಿಕೊಳ್ಳಲು ಕರುವಿನಕಟ್ಟೆ ಜನರಿಗೇ ಏಕೋ ಅರೆಮನಸ್ಸು. ಆದರೂ ಗೋಡೆಯ ಮೇಲಿನ ನೆರಳು ನೋಡಿಕೊಂಡು ಬುಡ್ಡಿ ಬೆಳಕಿನಲ್ಲಿ ಅವನು ಕುಣಿಯಲು ಶುರು ಮಾಡಿದಾಗ ಎಂಥವರಿಗೂ ಅನುಮಾನ. ಆಗ ಅವನೊಂದು ಹಾಡು ಹೇಳಿಕೊಂಡೇ ಕುಣಿಯಲಾರಂಭಿಸುತ್ತಿದ್ದ
ಇದ್ದೋರ ಮನೆಗೆ ಸತ್ತೋರು ಬಂದರು
ಸತ್ತೋರ ಮನೆಗೆ ಇದ್ದೋರು ಹೋದರು
ಊರೆಲ್ಲಾ ಬೆಳ್ಕು ಕೊಡೋ ದೀಪದ
ಕೆಳ್ಗೆ ಕತ್ಲೆ ಐತೆ
ಕೆಂಪಗಿವ್ನಿ ಅಂಬೋ ಗುಲಗಂಜಿ ತಿಕ
ದಾಗೆ ಕರ್ರಗೈತೆ
ತಾಯಿಗಿಂತ್ಲೂ ದೊಡ್ಡ ವಸ್ತು ಪರಪಂಚ್ದಾಗೆ
ಎಲ್ಲೈತೆ?
ಆದ್ರೂ ಆಕಿ ಒಂದು ಕಣ್ಣಾಗೆ ಸುಣ್ಣ ಇಟ್ಳು
ಒಂದು ಕಣ್ಣಾಗೆ ಬೆಣ್ಣೆ ಇಟ್ಳು
ಸುಣ್ಣ ಬೆಣ್ಣೆ ಒಂದೇ ಬಣ್ಣ ಎಲ್ಡು
ತಿನ್ನೋನು ಚೆಂಬಸಣ್ಣ
ಮಾಯದ ಲೋಕ ಮಾಯದ ಜನ ಮಾಯದ ಲೋಕ ಮಾಯದ ಜನ

ಅವನು ತಕತಕ ಕುಣಿಯುವುದನ್ನು ನೋಡಲು ಹುಡುಗರನ್ನು ಅವನ ತಾಯಿ ಅನೇಕ ಬಾರಿ ಕೋಲು ತೋರಿಸಿ ಅದೇ ಕೋಲಿನಿಂದ ಮಗನನ್ನೂ ಬಡಿದು ‘ಹುಚ್ಚು ಮುಂಡೇದೆ ಸುಮ್ಕಿರ್ಲೆ’ ಅಂತ ಅವನ ಕುಣಿತ ನಿಲ್ಲಿಸಲು ಶತಪ್ರಯತ್ನ ಮಾಡುತ್ತಿದ್ದುದುಂಟು. ಕುಟ್ಟೋದು ಬೀಸೋದು ಹಸನುಮಾಡೋದು ಮನೆಗೆ ಸುಣ್ಣ ಬಣ್ಣ ಬಳಿಯೋದು, ಸೌದೆ ಹೊಡೆಯೋದು, ಅಡಿಗೆ ಮಾಡಿ ಬಡಿಸೋದು, ಹೂಕಟ್ಟೋದು, ಹೊಲದಲ್ಲಿ ಕಳೆ ಕೀಳೋದು, ಮಕ್ಳು ಆಡಿಸೋದು, ಸ್ಕೂಲಿಗೆ ಬಿಟ್ಟು ಬರೋದು ಇಂತದ್ದೇ ಕೆಲಸ ಅಂತಿಲ್ಲ ಎಲ್ಲಾ ಕೆಲಸ ಕತ್ತೆಯಂತೆ ದುಡಿಯೋನು. ದುಡಿದು ತಾಯಿಯನ್ನು ಸಾಕೋನು. ದುಡಿಯುತ್ತಲೇ ಮುದುಕನಾದೋನು ಚೆಂಬಸಪ್ಪ. ಕಡೆಗಾಲದಲ್ಲಿ ತಾಯಿಗೆ ಲಕ್ವ ಹೊಡೆದು ಕೈಕಾಲು ಬಿದ್ದಾಗ ಒಂದೆರಡು ದಿನ ಹೆಣ್ಣುಮಕ್ಳು ಕೂಡ್ಲಿಗಿ ಕೊಟ್ಟೂರಿಂದ ಬಂದು ಹೋದ್ದು ಬಿಟ್ಟರೆ ಉಳಿದಂತೆ ತಾಯಿ ಸೇವೆ ಮಾಡಿದೋನು ಅವನೆ. ಊರಲ್ಲೇ ಇದ್ದ ಅಕ್ಕ ಒಮ್ಮೆ ಬಂದೋಳು ಮತ್ತೆ ತಲೆ ಹಾಕಲಿಲ್ಲ. ತಾಯಿ ಹೇಲು ಉಚ್ಚೆ ಬಾಚೋದು, ಸ್ನಾನ ಮಾಡಿಸಿ ಸೀರೆ ಉಡಿಸೋದು ತಲೆ ಬಾಚಿ ಹೆರಳು ಹಾಕೋದು, ಗಂಜಿ ಉಣ್ಣಿಸೋದು ಎಲ್ಲಾ ತಾನೇ ಮಾಡುತ್ತಿದ್ದ. ಆಸ್ಪತ್ರೆಗೆ ಹೋಗಿ ಔಷದಿ ತಂದು ಕುಡಿಸುತ್ತಿದ್ದ, ಎಣ್ಣೆ ನೀವುತ್ತಿದ್ದ. ಮರುಗದ ಕೇರಿ ಹೆಣ್ಣುಮಕ್ಕಳೆಲ್ಲ ‘ನಿನ್ಗೆ ನೋಡಿಕೊಳ್ಳೋಕೆ ತ್ರಾಸಾಯ್ತದೆ ಆಸ್ಪತ್ರೆಗಾರು ಸೇರ್ಸೋ ಚೆಂಬಸಪ್ಪ’ ಅನ್ನುತ್ತಿದ್ದರು. ಯಾಕಾಗಲ್ರವ್ವಾ ಕಡೆದ್ರೆ ನಾಕು ಆಳು ಆಗಂಗವ್ನಿ ಅವ್ವನ ಕಡೆಗಾಲಕ್ಕೆ ಆಸ್ಪತ್ರೆ ಪಾಲು ಮಾಡ್ಲೋ….? ಸ್ವಂತ ಮನೆಯಾಗೇ ಜೀವ ಬಿಡ್ಲಿ ಎಂದು ಬುಳು ಬುಳು ಮಕ್ಕಳಂತೆ ಅತ್ತುಬಿಡುವ. ಅಂತೂ ಒಂದು ರಾತ್ರಿ ತಾಯಿ ಶಿವನ ಪಾದ ಸೇರಿದಳು. ಹೆಣ್ಣುಮಕ್ಳು ಓಡಿ ಬಂದರು ಅತ್ತು ರಂಪ ಮಾಡಿದರು. ಅವನ ಕಣ್ಣಲ್ಲಿ ಮಾತ್ರ ಹನಿ ನೀರಿಲ್ಲ ಕಾರ್ಯ ಮುಗಿಸಿಕೊಂಡು ಬಂದಷ್ಟೇ ವೇಗವಾಗಿ ಹೊರಟೇ ಹೋದರು. ಅಕ್ಕ ಕೂಟ್ರಮ್ಮ ಮಾತ್ರ ಚೆಂಬಸಪ್ಪ ಇರೋ ಮನೆಗಾಗಿ ತಗಾದೆ ತೆಗೆದ್ಳು.. ನಿರ್ದಾಕ್ಷಿಣ್ಯವಾಗಿ ಹೊರಹಾಕಲು ಸೆರಗು ಸಿಗಿಸಿ ನಿಂತಳು. ಇವನೊಪ್ಪಬಲ್ಲ. ಅಕ್ಕ ಅವನ ಗಂಡ ಅವನನ್ನ ತದುಕಿ ಹೊರ ಹಾಕಲು ಯತ್ನಿಸಿದಾಗ ಕೇರಿ ಜನ ಸೇರಿ ಬಿಡಿಸಿದರು. ಕೇರಿ ಹಿರೇರಾದ ರಾಮಣ್ಣ ಬೆಂಕೆಣ್ಣ ಚೆನ್ನಮ್ಮ ಪಂಚಾತಿಗೆ ನಿಂತರು. “ಅವನಾರ ಎಲ್ಲಿ ಹೋಗ್ತಾನೆ ಜೀವ ಇರೋವರ್ಗೂ ಬಿಡ್ರಿ, ಆಮೇಲೆ ಮನೆ ನಿಮ್ದೇ ಅಲ್ವಾ ಹೊರಾಗ್ ದಬ್ಬಿದರೆ ಆದೆಲ್ಲಿಗೋದೀತು ಹುಚ್ಚನಂತಾದು’. ಯಾರು ಮರುಗಿದರೂ ಒಡ ಹುಟ್ಟಿದವಳು ಮರುಗಲಿಲ್ಲ ‘ಈವತ್ತು ಒಂದಿನ ಟೇಮ್ ಕೊಟ್ಟಿದೀನಿ ನಾಳೆ ಬೆಳಗಾಗೋದ್ರಾಗೆ ಮನೆ ಖಾಲಿ ಮಾಡ್ಬೇಕು. ಇಲ್ಲ ಸಾಮಾನು ಎತ್ತಿ ಹೊರಗೆ ಹಾಕ್ಸೋಳೆ, ಎಂದು ತಾಕೀತು ಮಾಡಿದಳು. ತನ್ನ ಹೆಸರಿಗಿದ್ದ ಮನೆಯನ್ನು ಬಜಾರಿ ಇಷ್ಟು ದಿನ ಬಿಟ್ಟಿದ್ದೇ ಹೆಚ್ಚು ಅಂದು ಕೂಂಡಿತು ಜನ. ‘ಬೇಕಾರೆ ನಿಮ್ಮ ಮನೆಯಾಗೆ ಇಟ್ಟುಕೊಳ್ರಪ್ಪಾ’ ಎಂದು ಸೆರಗು ಜಾಡಿಸಿ ಹೊರಟೇ ಹೋದಳು. ‘ಎಲಾರ ವಾಸಕ್ಕೆ ಒಂದುಮನೆ ನೊಡ್ಕಳಲೆ ಚೆಂಬಣ’ ಎಂದವೇ ಬುದ್ಧಿ ಹೇಳಿಲಾಯಿತು. ಅವನು ಅದೇಕೋ ‘ಮಾಯದ ಲೋಕ ಮಾಯದ ಜನ’ ಅಂತ ನಕ್ಕ. ರಾತ್ರಿಯೆಲ್ಲಾ ಬುಡ್ಡಿ ಬೆಳಕಲ್ಲಿ ನೆರಳು ನೋಡಿಕೊಳ್ಳುತ್ತಾ ಹಾಡಿ ಕುಣಿಯುತ್ತಿರಬಹುದೆಂದು ಕೊಂಡರು ಹಾಯಾಗಿ ರಗ್‍ನಡಿ ಮಲಗಿದ ಜನ. ಯಾಕೆಂದರೆ ಅವನು ಒಂದು ಕಣ್ಣಿಗೆ ಬೆಣ್ಣೆ ಇಟ್ಟೆ ಒಂದು ಕಣ್ಣಿಗೆ ಸುಣ್ಣ ಇಟ್ಟೇ ಹೊಂಟೋದೆಲ್ಲವ್ವಾ ಮಾಯದ ಲೋಕ ಮಾಯದ ಜನ ಎಂಬ ಹಾಡು ಸರಿ ರಾತ್ರಿಯಲ್ಲು ಕೇಳುತ್ತಲೇಯಿತ್ತು. ‘ಯಾಕ್ಲಾ ಹಂಗೆ ಒದರ್ತಿ ಸುಮ್ಗೆ.. ಬಿದ್ಕೋಳೋ’ ಎಂದು ಹೋಗಿ ಗದರಲು ಮಾತ್ರ ಯಾರಿಗೂ ಮನಸ್ಸಾಗಲಿಲ್ಲ.

ಗಂಟೆ ಒಂಬತ್ತಾದರೂ ಮನೆಯಿಂದ ಹೊರಗೆ ತಲೆಹಾಕದೆ ಅವನ ನಾಯಿ ಮಾತ್ರ ಅಡ್ಡಾಡುತ್ತಾ ಬೊಗಳುವಾಗ ತಡೆಯಲಾರದೆ ನಮ್ಮಪ್ಪನೇ ‘ಚೆಂಬಸ್ವಾ’ ಎಂದು
ಕೂಗುತ್ತಾ ಮನೆ ಒಳಗಡೆ ಹೋದರು. ಹೋದವರು ಗಾಬರಿಯಾಗಿ ಹೊರಬಂದರು. ಕ್ಷಣ ಮಾತ್ರದಲ್ಲೇ ‘ಹುಚೆಂಬಸಪ್ಪ ನೇಣು ಹಾಕ್ಕೊಂಡು ಸತ್ತವ್ನೆ’ ಅನ್ನೋ ಸುದ್ದಿ ಊರಲೆಲ್ಲ ಹರಡಿತು. ಕಾಲೇಜಿಗೆ ಹೊರಟ್ಟಿದ್ದ ನನಗೆ ಹೋಗಬೇಕೆನಿಸಲಿಲ್ಲ.
*****