ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ.
“ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳುವದರಲ್ಲಿ ಸಮಯ ಹೋಗಿರುತ್ತದೆ. ನೀನು ನಪುಂಸಕನಾಗಿರುತ್ತಿ” ಎಂದವನು ಹತ್ತಾರು ಸಲ ಹೇಳಿದ್ದ. ಮಾತಿನಲ್ಲಿ ಹುಡುಗಾಟಿಕೆ, ಕುಚೋದ್ಯವಿರಲಿಲ್ಲ. ಇಷ್ಟು ವರುಷಗಳ ನಂತರ ಅವನ ಮಾತುಗಳು ಕಾಡಲು ಕಾರಣವೇನು, ಭಯ!
ಭಯ! ತನಗೆ! ಮಂಚದ ಮೇಲೆ ಅಂಗತ್ತಲಾಗಿ ಮಲಗಿದ ಅವನ ತುಟಿಗಳ ಮೇಲೆ ಮಂದವಾದ ಮುಗ್ಳುನಗೆ ಹಾದು ಮಾಯವಾಗುತ್ತದೆ. ಮತ್ತೊಂದು ಸಿಗರೆಟ್ ಅಂಟಿಸುತ್ತಾನೆ. ವಯಸ್ಸಾಗಿದೆ, ಈಗಲೂ ಬರಿ ತನ್ನ ಹೆಸರು ಕೇಳಿ, ನಡುಗಿ ಬಟ್ಟೆ ಒದ್ದ ಮಾಡಿಕೊಳ್ಳುವವರಿದ್ದಾರೆ. ತನ್ನದುರು ಯಾವ ಪೋಲೀಸ್ ಅಧಿಕಾರಿಗೂ ಕುಳಿತು ಮಾತಾಡುವಷ್ಟು, ಧೈರ್‍ಯವಿಲ್ಲ.
“ಯಾರಿಗಾದರೂ ನಿನ್ನ ಮೇಲೆ ಪ್ರೀತಿ, ವಿಶ್ವಾಸವಿದೆಯೆ.”
ಅಂತಹವರಿಗಾಗಿ ಹುಡುಕಾಡಿದ್ದ ತಾನು. ಬತ್ತಲೆ ಮುಖಗಳು ಹಾದು ಹೋಗಿದ್ದವು ಕಣ್ಣ ಮುಂದೆ, ಮುಖವಾಡ ತೊಟ್ಟ ಮುಖಗಳು. ತಮ್ಮ ಸ್ವಾರ್‍ಥಕ್ಕಾಗಿ ವಿನಯ, ಪ್ರೇಮ, ಆರಾಧಕತೆ ತೋರುವವರ, ಹೆಚ್ಚು ಕಡಿಮೆ ಮಾತಾಡಿದರೆ ಯಾವ ಅನಾಹುತವಾಗುವದೂ ಎಂಬ ಭಯ.
“ನೀನು, ನಿನ್ನಂತಹವರು ಬಿತ್ತಿ ಬೆಳೆಸಿದ ಬೆಳೆ ಇದು. ಎಲ್ಲಡೆಯಲ್ಲಿಯೂ ಸುಳ್ಳು, ಮೋಸ, ದಾದಾಗಿರಿ, ದ್ವೇಶ, ಶಂಡತನ, ನಿನ್ನ ಯಾರು ನಂಬುವದಿಲ್ಲ. ಮನಸ್ಸಿನಾಳದಿಂದ ಅಕ್ಕರೆಯ ಮಾತಾಡುವುದಿಲ್ಲ. ಎಲ್ಲರೂ ಭಯ ಪಡುತ್ತಾರಷ್ಟೆ.
ಅವನ ಮಾತುಗಳು ಎಂದೂ ಭಾವುಕವಾಗುತ್ತಿರಲಿಲ್ಲ. ತನ್ನ ಮಕ್ಕಳ ಬಗ್ಗೆ ಯೋಚಿಸಿದ. ಮೂವರು ಗಂಡು, ಒಂದು ಹೆಣ್ಣು. ಎಲ್ಲರೂ ದೊಡ್ಡವರಾಗಿದ್ದಾರೆ. ಅವರಿಗೆ ಜನ್ಮವಿತ್ತವಳು ಪರಲೋಕ ಸೇರಿ, ಬಹು ಕಾಲ ಸಂದಿದೆ. ಬಹುಶಃ ಅವಳು ತನನ್ನು ಹೃದಯಪೂರ್‍ವಕವಾಗಿ ಪ್ರೇಮಿಸುತ್ತಿದ್ದಳೇನೊ. ಅದು ಪೂರ್ತಿ ವಿಶ್ವಾಸದಿಂದ ಹೇಳುವ ಹಾಗಿಲ್ಲ.
ತನ್ನ ಇಡಿ ಜೀವನದಲ್ಲಿ ಯಾರನ್ನು ನಂಬಿರಲಿಲ್ಲ, ಅದಕ್ಕಾಗಿ ತಾನೀ ಹೇರಳವಾದ ಹಣ, ಅದರೊಡನೆ ಹೆಸರು ಸಂಪಾದಿಸಿದು. ಅದು ಹೇಗೆ ಸಾಧ್ಯವಾಯಿತು ಅದು ಮುಖ್ಯವಲ್ಲ. ದೇಶದ ಯಾವ ಜೈಲು ತನ್ನನ್ನು ಬಹುಕಾಲ ಬಂದಿಯಾಗಿಡುವಲ್ಲಿ ಯಶಸ್ವಿಯಾಗಿಲ್ಲ. ಹಣದ ಮಹಾತ್ಮೆಯದು. ಎಂತಂತಹ ಅಧಿಕಾರಿಗಳನ್ನು ರಾಜಕಾರಣಿಗಳನ್ನು, ಕಾನೂನಿನ ದುರಂಧರರನ್ನು ಗುಲಾಮರನ್ನಾಗಿಸುತ್ತದೆ ಅದು. ಅದನ್ನೇ ಅವನಿಗೆ ಹೇಳಿದ್ದ. ವೇದನೆಯ ಮುಗುಳ್ನಗೆ ಹಾದಿತ್ತವನ ತುಟಿಗಳ ಮೇಲೆ. ಮನುಷ್ಯ ತನ್ನನ್ನು ತಾನು ಕೊಂದುಕೊಳ್ಳಲು ಹೊರಟಿರುವ ಸಂಕೇತವಿದು ಎಂದಿದ್ದ. ಅವನ ಮಾತುಗಳು ತನಗೆ ಅರ್‍ಥವಾಗುತ್ತಿರಲಿಲ್ಲ. ಹೆಚ್ಚು ಓದಿ ಕೊಂಡವನೂ ಅಲ್ಲ, ಪ್ರಭುತ್ವ, ಕಾರ್‍ಯಾಲಯದ ಕಾರಕನ. ಅವನೊಬ್ಬನಿಗೆ ತಾನೆಂದರೆ ತೃಣಮಾತ್ರವೂ ಭಯವಿಲ್ಲ. ತನ್ನಲ್ಲಿರುವ ಹಣದ ಆಸೆ ಇಲ್ಲ. ತಾನೆಂದರೆ ಬಹಳ ಪ್ರೀತಿ ಇದೆ. ತಾನು ಈಗಲೂ ಒಬ್ಬ ಒಳ್ಳೆಯ ವ್ಯಕ್ತಿಯಾಗಬಲ್ಲೆನೆಂಬ ಧೃಡವಾದ ವಿಶ್ವಾಸವಿದೆ. ಈಗ ಸಮಯ ಮಿಂಚಿ ಹೋಗಿದೆ ಎಂದು ಕೊಳ್ಳುತ್ತ ಸಿಗರೆಟನ್ನು ಆಶ್‌ಟ್ರೆಗೆ ಹಾಕುತ್ತಾನೆ. ಪಕ್ಕಕ್ಕೆ ಹರಿಯುತ್ತದೆ ನೋಟ. ಅವಳು ಬದುಕಿದ್ದಾಗ ಮಲಗುತ್ತಿದ್ದ ಸ್ಥಳ ಈಗ ಖಾಲಿಯಾಗಿದೆ. ಅಲ್ಲಿ ಅಕ್ಕರೆಯಿಂದ ಕೈಯಾಡುತ್ತಾನೆ.
ಅವಳು ಹೋದ ಕೆಲ ದಿನಗಳಷ್ಟೆ, ಏನೊ ಕಳೆದುಕೊಂಡ ಹಾಗಿತ್ತು. ಮತ್ತೆ ಎಲ್ಲ ಮಾಮೂಲು. ಯೌವನ ತುಂಬಿದ ಹುಡುಗಿಯರನ್ನು ನೋಡಿದರೆ ಪುಳಿಕೇಳುತ್ತಿತ್ತು ಮನ. ನರ, ನಾಡಿಗಳಲ್ಲಿ ಸಿಹಿಯಾದ ನೋವು ಹರಿದಾಡುತ್ತಿತ್ತು. ಇಷ್ಟವಿದ್ದೂ, ಇಷ್ಟವಿಲ್ಲದೆಯೋ ಎಷ್ಟೋ ಹೆಂಣುಗಳು ತನ್ನ ಹಾಸಿಗೆ ಹಂಚಿಕೊಂಡಿದ್ದಾರೆ ಬೇಕಾದದ್ದನ್ನು ಪಡೆಯಬೇಕೆಂಬ ಛಲ, ಪ್ರತಿಸಲಕ್ಕೂ ಸ್ಪುಟಿದೇಳುತ್ತಿದ್ದ ದೇಹದ ಹಸಿವು, ತನ್ನಲ್ಲಿ ಕೆಲಸಕ್ಕಿದ್ದವನ ಮಗಳು ಈಗಲೂ ಕಣ್ಣ ಮುಂದೆ ಸುಳಿಯುತ್ತಾಳೆ. ಎಷ್ಟು ಬಲವಾದ ದೇಹ, ಗಂಡಸರನ್ನು ರೇಗಿಸಲೆಂಬಂತೆ ಎದ್ದು ನಿಂತ ದೊಡ್ಡ ಸ್ತನಗಳು, ವಯಸ್ಸು ಹದಿನೆಂಟು ದಾಟಿರಬಹುದು. ಅವಳೊಡನೆ ಒಂದು ರಾತ್ರಿ ಕಳೆದಿದ್ದ.
ಎಷ್ಟು ವರುಷಗಳಾದವು ಆದರೂ ಈಗಲೂ ಆ ದೃಶ್ಯ ಕಣ್ಣಿಗೆ ಕಟ್ಟಿದೆ. ಹಣದ ಆಸೆಗೆ ಅವಳ ತಂದೆಯೇ ಅವಳನ್ನು ಕರೆತಂದಿದ್ದ. ಭಯದಿಂದ ನಡಗುತ್ತ ಬಾಗಿಲಲ್ಲ ನಿಂತಿದ್ದಳು. ಕಣ್ಣಿನಿಂದ ತಡೆಯಿಲ್ಲದೆ ನೀರು ಹರಿಯುತ್ತಿತ್ತು.
“ದಯಮಾಡಿ ನನ್ನ ಜೀವನ ಹಾಳುಮಾಡಬೇಡಿ. ಅವನಿಗೆ ಕೊಡಲು ನನ್ನ ಬಳಿ ಏನೂ ಇಲ್ಲ. ಇದ್ದದ್ದನ್ನು ಎಂಜಲು ಮಾಡಬೇಡಿ. ಅಪವಿತ್ರಗೊಳಿಸಬೇಡಿ” ಬಿಕ್ಕಳಿಕೆಯ ನಡುವೆ ಯಾಚಿಸಿದ್ದಳು.
“ಅಷ್ಟು ಭಯವೇಕೆ. ಏನೂ ಆಗುವದಿಲ್ಲ. ಉಸಿರಾಟದ ಜತ ಏರಿ ಇಳಿಯುತ್ತಿದ್ದ ಅವಳ ಸ್ತನಗಳನ್ನೇ ನೋಡುತ್ತ ಹೆಗಲ ಮೇಲೆ ಕೈ ಹಾಕಿ ಹೇಳಿದ್ದ. ಪೂರ್ತಿ ಶಕ್ತಿಯಿಂದ ದೂರ ತಳ್ಳಿದ್ದಳು. ಕೋಪ, ಉದ್ರೇಕದಿಂದ ಅವಳನ್ನು ಮಂಚದ ಬಳಿ ಎಳೆ ತಂದಿದ್ದ. ಸ್ವಲ್ಪ ಹೊತ್ತು ಕಾದಾಡಿದ ಅವಳು ಎಲ್ಲವೂ ನಿಶ್ಪ್ರಯೋಜಕವೆಂಬುದರಿತು ಶವದಂತೆ ಬಿದ್ದು ಕೊಂಡಳು. ಯಾವುದರ ಪರಿವೆಯೂ ಇಲ್ಲದೆ ನರನಾಡಿಗಳ ಬಿಗುವನ್ನು ಸಡಿಲಗೊಳಿಸಿಕೊಂಡಿದ್ದ. ರಾತ್ರಿ ಯಾವಾಗಲೊ ಎದ್ದು ಹೊರಟು ಹೋಗಿದ್ದಳವಳು.
ಮರುದಿನ ತನ್ನ ಕೆಲಸಗಾರನ ಮಗಳು ಆತ್ಮಹತ್ಯೆ ಮಾಡಿಕೊಂಡಿರುವದಾಗಿ ತಿಳಿದು ಬಂದಿತ್ತು. ಹಣ ಪೋಲೀಸರ, ಡಾಕ್ಟರ್ ಮತ್ತು ಸತ್ತವಳ ತಂದೆಯ ಬಾಯಿ ಮುಚ್ಚಿಸಿತ್ತು. ಒಂದೆರಡು ದಿನ ಕಾಡಿದ ಆ ಘಟನೆ ಮಾಸಿ ದೂರವಾಯಿತು. ಇಂದೇಕೆ ಅದು ಇಷ್ಟು ನೆನಪಿಗೆ ಬರುತ್ತಿದೆ. ಮಿತ್ರನ ಮಾತುಗಳ ಪ್ರಭಾವವ! ಭಯವ!
“ಸ್ವರ್‍ಗ, ನರಕಗಳು ಇಲ್ಲೆ ಇವೆ. ನೀ ಮಾಡಿದ ಪಾಪಗಳ ಫಲ ಅನುಭವಿಸುತ್ತಿ” ಒಮ್ಮೆ ಜನರ ಗುಂಪಿನಿಂದ ಒಬ್ಬ ಕಿರುಚಿದ್ದ. ಸ್ವರ್‍ಗವನ್ನು ಭೂಮಿಯ ಮೇಲೆ ಸೃಷ್ಟಿಸಿಕೊಂಡ ತಾನು ಆ ಬಗ್ಗೆ ಎಂದೂ ಯೋಚಿಸಿರಲಿಲ್ಲ. ಗಂಡು ಮಕ್ಕಳನ್ನು ಒಳ್ಳೆಯ ಶಾಲೆಯಲ್ಲಿ ಓದಿಸಲು ಯತ್ನಿಸಿದ್ದ. ಓದು ಅವರ ಮಿದುಳಿನಲ್ಲಿ ಇಳಿಯುವ ಲಕ್ಷಣಗಳು ಕಂಡುಬರಲಿಲ್ಲ. ಈಗ ಅವರೂ ತನ್ನ ಧಂದೆಯನ್ನಂಟಿಕೊಂಡಿದ್ದಾರೆ. ಅದನ್ನು ವಿಸ್ತಾರಗೊಳಿಸುತ್ತಿದ್ದಾರೆ. ಅವರಿಗೆ ತನ್ನ ಮೇಲೆ ಪ್ರೇಮಾಭಿಮಾನಗಳಿಲ್ಲವೆ ಎಂದು ಕೇಳಿಕೊಂಡ. ಇಲ್ಲ, ತೃಣಮಾತ್ರವೂ ಇಲ್ಲ ಎಂದು ಧೃಡವಾಗಿ ಹೇಳಿತು ಮನ. ಇನ್ನೊಬ್ಬ ಮಗಳ ಮದುವೆ ವಿಜೃಂಭಣೆಯಿಂದ ಮಾಡಿದ್ದೇನೆ ಎನಿಸಿದಾಗ ಮತ್ತೊಂದು ದೃಶ್ಯ ಹಾಯಿತು ಕಣ್ಣಲ್ಲಿ.
ತನ್ನ ಮಗಳಿಗಾಗ ಹದಿನಾರು ವರುಷವಿರಬಹುದು. ವಯಸ್ಸಿಗೂ ಮೀರಿದ ಬೆಳವಣಿಗೆ, ಒಂದು ದಿನ ರಾತ್ರಿ ಅವಳ ಕೋಣೆಯ ಎದುರಿನಿಂದ ಹೋಗುವಾಗ ಒಳಗಿನಿಂದ ಏನೊ ಸದ್ದು ಕೇಳಿದಂತಾಗಿ ತಡೆದಿದ್ದ. ಇನ್ನೂ ಸ್ಪಷ್ಟವಾಯಿತು ಶಬ್ದ, ಕುತೂಹಲದಿಂದ ಕಿಟಕಿಗಿರುವ ಗಾಜಿನ ಮೂಲಕ ಒಳಗೆ ನೋಡಿದ್ದ. ನಂಬಲಸಾಧ್ಯವಾದ ದೃಶ್ಯ. ಏನು ಮಾಡಬೇಕೆಂಬುವದು ತೋಚದೆ ಸ್ತಬ್ದ ಗೊಂಡಿತ್ತು ಮನ. ನಗ್ನವಾದ ಅವಳ ಎದೆಯ ಮೇಲೆ ಕೈ ಯಾಡುತ್ತಿದ್ದಾನೆ ಇಳಿ ವಯಸ್ಸಿನ ಕೆಲಸದಾಳು ಅವಳ ಕೈ ಇನ್ನೆಲ್ಲೊ ಇದೆ. ಸಿಟ್ಟು, ಪರಮಾವಧಿಗೆ ತಲುಪಿತ್ತು. ಬಾಗಿಲನ್ನು ಒದ್ದಿದ್ದ. ಅದು ಒಳಗಿನಿಂದ ಹಾಕಿರಲಿಲ್ಲ. ಎಷ್ಟು ಧೈರ್ಯ, ಮಗಳನ್ನು ಸಿಕ್ಕಾಪಟ್ಟೆ ಒದ್ದಿದ್ದ. ಮೂರು ದಿನಗಳ ನಂತರ ಕೆಲಸದಾಳಿನ ಶವ ಚರಂಡಿಯೊಂದರಲ್ಲಿ ತೇಲಿತ್ತು.
“ಸಮಾಜದಲ್ಲಿ ನಡೆಯುವ ಪ್ರತಿ ಕೆಲಸದಲ್ಲೂ ನಮ್ಮ ಪಾಲು ಸೇರಿರುತ್ತದೆ. ಸಮಾಜವೆಂದರೆ ನಾವುತಾನೆ.” ನಿರ್‍ವಿಕಾರ ದನಿಯಲ್ಲಿ ಹೇಳಿದ್ದ ಮಿತ್ರ ಒಮ್ಮೆ.
“ಪ್ರತಿ ಅಪರಾಧದಲ್ಲೂ ನಿನ್ನ ಪಾಲೂ ನಿಸ್ಸಂದೇಹ” ವ್ಯಂಗ್ಯವಾಗಿ ಕೇಳಿದ್ದ ತಾನು.
“ನಿಸ್ಸಂದೇಹ” ಅಳುಕದೆ ಉತ್ತರಿಸಿದ್ದ.
“ಸುಳ್ಳಿನ, ದ್ವೇಷದ, ವಂಚನೆಯ ಬೀಜಗಳನ್ನು ಹರಡಿ ಬೆಳೆಸದ ನಿನ್ನ ಪಾಲೂ ಇದೆಯೆ, ಪ್ರತಿ ಅಪರಾಧದಲ್ಲಿ! ಅದು ಹೇಗೆ? ಈಗ ತನ್ನ ಮಾತಿನಲ್ಲಿ ವ್ಯಂಗ್ಯ ಇನ್ನೂ ಹೆಚ್ಚಾಗಿತ್ತು. ಪ್ರಶ್ನೆ ನಾಟಕೀಯವಾಗಿತ್ತು.
“ಇದೆಲ್ಲದರ ಮೂಕ-ಪ್ರೇಕ್ಷಕನಾಗಿರುವದರಿಂದ ನನ್ನ ಪಾಲು ಸೇರಿದಂತಾಗಲಿಲ್ಲವೆ.” ತನ್ನ ಮಾತಿನಲ್ಲಿದ್ದ ವ್ಯಂಗ್ಯವನ್ನು ಗಮನಿಸದವನಂತೆ ಕೂಡಲೆ ಉತ್ತರಿಸಿದ್ದ. ಪಂಜಾಬ, ಶ್ರೀಲಂಕ ಮತ್ತಿತರ ಕಡೆ ಆಗುತ್ತಿದ್ದ ಅಮಾನುಶ್ಯ ಕೊಲೆಗಳಿಗೆ ಭೀಕರ ಸಾವುಗಳಿಗೆ ತಾನೂ ಕಾರಣನೆಂಬುವದು ಅರ್‍ಥವಿಲ್ಲದ ಮಾತು. ಅತಿ ಅಧಿಕಾರದ ಆಸೆ, ಧನದ ಆಸೆಗಾಗಿ ಹುಟ್ಟಿಕೊಂಡ ಭಾಷೆ, ಪ್ರಾಂತೀಯ ಪ್ರೇಮದ ಸೋಗಿದು. ಕೆಲವರ ಏಳ್ಗೆಗಾಗಿ ಸಾವಿರಾರು ಜನರ ಬಲಿ ಎಂದವನ ವಾದ. ಆ ಮಾತಿನ ಸರಣಿ ಬೆಳೆಸಿದರೆ ಅದು ಹೇಗೆಂಬುವದನ್ನು ಸಂಯಮದಿಂದ ವಿವರಿಸುತ್ತಾನೆ. ಅದಾವದೂ ತನ್ನ ಮೆದುಳಿನಲ್ಲಿ ಇಳಿಯುವದಿಲ್ಲ. ಉಸಿರುಗಟ್ಟಿಸುತ್ತದೆ. ಅವನಿಲ್ಲದಾಗ ಆ ಮಾತುಗಳನ್ನು ಮಲಕು ಹಾಕಿದರೆ ಅದರಲ್ಲಿ ಯಾವದೊ ಅರ್‍ಥವಾಗದ ಸತ್ಯವಿದೆ ಎನಿಸುತ್ತದೆ. ಆ ಬಗ್ಗೆ ಹೆಚ್ಚು ಯೋಚಿಸಲು ಅವಕಾಶ ಕೊಡುವದಿಲ್ಲ ಮನ. ಕುಡಿದು, ತಿಂದು, ಸುಖ, ಸಂತೋಷದಿಂದಿರುವದು ಬಿಟ್ಟು ಈ ಇಲ್ಲದ ತಲೆನೋವೆಕೆ.
ಸಮಯ ಮಿಂಚುತ್ತಿದೆ. ದಿನಗಳಲ್ಲ, ಗಂಟೆಗಳು ಮಿಕ್ಕಿವೆ. ಎಚ್ಚರಿಸುತ್ತದೆ ಮನ, ಮಂಚದಿಂದೇಳುತ್ತಾನೆ. ಮೂವರು ಮಕ್ಕಳು ಮಲಗಿರುವ ಕೋಣೆ ಹಾದು ಮೆಟಲಿಳಿಯುವಾಗ ಎನಿಸುತ್ತದೆ, ತನ್ನವರಿಗೆ ಯಾತರ ಕಡಿಮೆಯೂ ಮಾಡಿಲ್ಲ. ರಾಜ ಭೋಗದ ಜೀವನ ಕೊಟ್ಟಿರುವೆ. ಅದರ ಬದಲಾಗಿ ಅವರು ತನಗೇನು ಕೊಟ್ಟಿದ್ದಾರೆ. ಒಂದು ಸಲವಾದರೂ ಮನದಾಳದಿಂದ ಬಂದ ಅಕ್ಕರೆಯ ಮಾತಾಡಿದ್ದಾರೆಯ, ತನಗೆ ಪ್ರೇಮ, ವಿಶ್ವಾಸ ಅವರ್‍ಯಾಕೆ ಕೊಡಬೇಕು. ಬೆಳೆದು ದೊಡ್ಡವರಾಗಿದ್ದಾರೆ. ತಂದೆಯಂದಿರಾಗಿದ್ದಾರೆ. ಪರಾವಲಂಬಿಗಳಲ್ಲ.
ಗೇಟು ತೆರೆದು ಹೊರಗಡಿಯಿಟ್ಟಾಗ ಆಯುಧವನ್ನು ಸರಿಪಡಿಸಿಕೊಳ್ಳುತ್ತ ಅಂಗರಕ್ಷಕ ಹಿಂದಾಗುತ್ತಾನೆ. ಅವನಿಗೆ ಜತೆಗೆ ಬರುವ ಅವಶ್ಯಕತೆ ಇಲ್ಲ ಎಂದಾಗ ಅಳಕುತ್ತ ಹೇಳುತ್ತಾನೆ.
“ಈ ರಾತ್ರಿಯಲ್ಲಿ…..”
“ಬೇಡ, ನೀ ಮನೆಯಲ್ಲೆ ಇರು, ನನ್ನ ಕೊಲೆ ಮಾಡಲು ಯಾರೂ ಕಾದಿರುವದಿಲ್ಲ.” ಸಿಟ್ಟಿನಿಂದ ಗದರುತ್ತಾನೆ. ಇಷ್ಟವಿಲ್ಲದವನಂತೆ ಒಳಹೋಗುತ್ತಾನವನು. ಎಲ್ಲರಿಗೂ ಅಭ್ಯಾಸವಾಗಿ ಹೋಗಿದೆ. ಒಳ್ಳೆಯ ಮಾತಿನಲ್ಲಿ ಯಾರಿಗೆ ಏನು ಹೇಳಿದರೂ ತಿಳಿಯುವದಿಲ್ಲ. ಗೊತ್ತುಗುರಿ ಇಲ್ಲದಂತೆ ಬೀಳ ತೊಡಗುತ್ತವೆ ಹೆಜ್ಜೆಗಳು.
ಮಕ್ಕಳು ತಾನು ಹಿಡಿದ ಹಾದಿಯ ಹಿಡಿಯಬಾರದೆಂದು ಏನೇನು ಮಾಡಿಲ್ಲ. ಯಾವುದೂ ಸಫಲವಾಗಲಿಲ್ಲ. ಸ್ಕೂಲಿನ ಕೊನೆಯ ವರುಷದಲ್ಲಿರುವಾಗಲೇ ಹುಡುಗಿಯರ ಗೀಳು. ಅದರ ಕಾರಣವಾಗೊ ಮತ್ತಿನ್ನವದಾದರೂ ಕಾರಣವಾಗೊ ಎರಡು, ಮೂರು ದಿನಕಕ್ಕೊಂದು ಸಲ ದೊಡ್ಡ ಜಗಳ, ತನ್ನ ವರ್ಚಸ್ಸಿನ ಪ್ರಭಾವದಿಂದ ಯಾರೂ ಜೈಲು ಕಂಡಿಲ್ಲ ಅಷ್ಟೆ. ಓದು ಅವರ ಮೈ ಗಂಟುವದಿಲ್ಲ ಎಂಬುವದು ಖಚಿತವಾದಾಗ ಧಂದೆಗೆ ಹಚ್ಚಿದ್ದ. ಮೋಸ, ಬಾಹುಬಲದಿಂದ ಸಾಕಷ್ಟು ಹಣ ಸಂಪಾದಿಸುತ್ತಿರುವದನ್ನು ಕಂಡು ಆಗ ಹಮ್ಮೆಪಟ್ಟಿದ್ದ. ಎಷ್ಟಾದರೂ ನಿಮ್ಮ ಮಕ್ಕಳಲ್ಲವೆ ಎಂದು ಹೊಗಳಿದ್ದರು. ಬಹುಜನ ಒಮ್ಮೆಲೆ ಕೊಟ್ಯಾಧಿಶ್ವರರಾಗುವ ಹಂಬಲದಲ್ಲಿ ಪ್ರಾಣಾಪಾಯದ ಸ್ಥಿತಿ ತಂದು ಕೊಂಡಿದ್ದರು. ನಾಲ್ಕಾರು ಸಲ. ಇದ್ದ ವರ್‍ಚಸ್ಸನ್ನೆಲ್ಲಾ ಉಪಯೋಗಿಸಿ ಹಣ ಸುರಿದು ತನ್ನ ಪ್ರಾಣ ಮುಡುಪಾಗಿಟ್ಟು ಅವರುಗಳನ್ನು ಮೃತ್ಯು ಪಂಜರದಿಂದ ಕಾಪಾಡಿದ್ದ. ಅದರ ಅರಿವಿರಲಿಕ್ಕಿಲ್ಲವೆ ಅವರಿಗೆ ಏನೂ ಅನಿಸುವದಿಲ್ಲವೆ ತೃಣ ಮಾತ್ರ ಪ್ರೇಮ ಯಾಕಿಲ್ಲ.
“ಸುಳ್ಳಾಡಿದಾಗ, ಮೋಸ ಮಾಡಿದಾಗ ಮೊದಲು ಸ್ವಲ್ಪ ತಪ್ಪು ಮಾಡುತ್ತಿದ್ದೇನೆ ಎನಿಸಬಹುದು. ಆ ಮೇಲೆ ಅದೇ ಅಭ್ಯಾಸವಾಗಿ ಜೀವನದ ರೀತಿಯಾಗಿ ಬಿಡುತ್ತದೆ. ಹಾಗೆ ನಡೆದಿದೆ ನಮ್ಮ ಸುತ್ತಲಿನ ಲೋಕ. ಅದಕ್ಕೀಗ ಹೊಸ, ಹೊಸ ಶಬ್ದಗಳು ಹುಟ್ಟಿಕೊಳ್ಳುತ್ತಿವೆಯಷ್ಟೆ. ಅದಕ್ಕಾಗಿ ಪ್ರೇಮವೆಂಬ ಶಬ್ದಕ್ಕೀಗ ಹೊಸ ಅರ್ಥವನ್ನು ಹುಡುಕಬೇಕಾಗಿದೆ.” ಮಿತ್ರ ಕಿವಿಯಲ್ಲಿ ಹೇಳಿದಂತೆನಿಸುತ್ತದೆ. ಏನೆಲ್ಲಾ ಮಾಡಿದ್ದಾನೆ ತನ್ನವರಿಗಾಗಿ. ಬೇರೆಯವರಿಗೆ ಏನೂ ಮಾಡಿಲ್ಲ. ರಕ್ತ ಹಂಚಿಕೊಂಡು ಹುಟ್ಟಿದ್ದವರಿಗಾಗಿ ಮಾಡಿರುವೆ. ಅದು ಮಹಾನ್ ಕಾರ್‍ಯವಲ್ಲ, ಎಲ್ಲರೂ ಮಾಡುವದೆ. ಏನೇ ಆಗಲಿ ತಾನಿಲ್ಲವಾದಾಗ ಅವರು ಸುಖವಾಗಿರಬಲ್ಲರು. ಅದೊಂದು ತೃಪ್ತಿ.
“ಧನ ಅಧಿಕಾರ ಸಂಪಾದಿಸಲು ಏನೆಲ್ಲಾ ಮಾಡಿರುವಿ, ಒಂದು ಒಳ್ಳೆಯ ಕೆಲಸ ಮಾಡಬೇಕೆಂದು ಎಂದಾದರೂ ಯೋಚಿಸಿದ್ದೆಯಾ, ಒಳ್ಳೆಯ ಕೆಲಸದಲ್ಲಿ ನಿನ್ನ ಬುದ್ಧಿಯನ್ನು ಹರಿಯಬಿಟ್ಟಿದ್ದರೆ ಮನಕ್ಕೆ ಸುಖ ಶಾಂತಿ ಲಭಿಸುತ್ತಿತ್ತು.” ಮಿತ್ರನ ಮಾತು ನೆನಪಾಗಿ ಹೆಜ್ಜೆಗಳ ಗತಿ ವೇಗವಾಗುತ್ತದೆ. ಮಕ್ಕಳನ್ನು ತಾ ಮಾಡಿದಂತಹ ನೀಚ ಕೆಲಸಗಳಿಂದ ದೂರವಿಡಲು ಯತ್ನಿಸಿದೆ. ಅವರನ್ನು ಒಳ್ಳೆಯ ಶಾಲೆಗೆ ಓದಲು ಕಳುಹಿಸಿದೆ. ಅವರಗಳು ಓದದೆ ತನ್ನ ದಾರಿಯೇ ಹಿಡಿದರೆ ತನ್ನ ತಪ್ಪ. ಅವರಿಟ್ಟ ತಪ್ಪು ಹೆಜ್ಜೆಯನ್ನು ನಯವಾದ ಮಾತಿನಿಂದ ತಿದ್ದಲಿಲ್ಲ. ಅದು ನಿಜ. ಅದಕ್ಕೆ ತನಗೆ ಸಮಯವೆಲ್ಲಿತ್ತು. ತಾನು ಹುಟ್ಟಿಸಿ, ಸಾಕಿ ಸಲುಹಿದ ಸಾಮ್ರಾಜ್ಯವನ್ನು ಆಳುವದರಲ್ಲಿ ಕೆರೆದುಕೊಳ್ಳಲೂ ಸಮಯ ದೊರೆಯುತ್ತಿರಲಿಲ್ಲ.
ಈಗ ಸಮಯ ಮಿಂಚಿ ಹೋಗಿದೆ. ಕೆಲವ ಗಂಟೆಗಳು ಮಾತ್ರ ಮಿಕ್ಕಿವೆ. ಈ ಕೆಲಗಂಟೆಗಳಲ್ಲಿ ಏನಾದರೂ ಒಂದು ಒಳ್ಳೆಯ ಕೆಲಸಮಾಡಬೇಕು. ಜನ ಬಹುಕಾಲದವರೆಗೆ ನೆನಪಿಡುವಂತಹ ಕೆಲಸ.
ಮಿತ್ರನೆಡೆ ಹರಿಯುತ್ತದೆ ಯೋಚನೆ, ಅವನನ್ನು ನೋಡಿ ಎಷ್ಟೋ ಸಲ ಅಸೂಯೆ ಪಟ್ಟಿದ್ದಾನೆ ತಾನು. ಬರುವ ಸಂಬಳದಲ್ಲಿ ಸಾಗಿಸುತ್ತಾನೆ ಜೀವನ. ತನ್ನ ಕೈಲಾದಷ್ಟು ಸಂಗಡಿಗರಿಗೆ ಸಹಾಯ, ಸಲಹೆ ನೀಡುತ್ತಾನೆ. ಹೆಚ್ಚು ಓದಿ ಕೊಂಡಿಲ್ಲ, ಆದರೂ ಎಷ್ಟು ಬುದ್ಧಿ, ಅದ್ಭುತವಾದ ಯೋಚನಾ ಶಕ್ತಿ, ಅದನ್ನೆ ಅವನಿಗೆ ಹೇಳಿದಾಗ ಅದು ಎಲ್ಲರಿಗೂ ಇದೆ. ಯಾರೂ ಉಪಯೋಗಿಸಿಕೊಳ್ಳುವದಿಲ್ಲ ಎನ್ನುತ್ತಾನೆ. ಮುಂದೆ ಬರಲು ತನಗೆ ಬೇಕಾದುದ್ದನ್ನು ಪಡೆಯಲು ತೋರಿದ ಮಾರ್‍ಗಹಿಡಿದ ತಾನು, ಅಂತಹವರಿಗೆ ಮರ್‍ಯಾದೆ ಕೊಡುತ್ತಿದೆ ಸಮಾಜ ಎಂದು ಅನುಭವದಿಂದ ಅರಿತಿದ್ದ. ಮೊದಲು ಕಷ್ಟ ಪಡಬೇಕಾದರೂ ನೋಡು ನೋಡುತ್ತ ಸುಗಮವಾಗಿತ್ತು ದಾರಿ. ಈಗಂತೂ ಯಾವ ಕಷ್ಟವೂ ಇಲ್ಲದೆ ಬರುತ್ತದೆ ಹಣ. ಉಚ್ಚವರ್‍ಗದ ಸಮಜದಲ್ಲೂ ಮರ್‍ಯಾದೆಗೆ ಕಡಿಮೆ ಇಲ್ಲ. ಆದರೂ ಯಾಕೀಗ ಇಲ್ಲದ ಕೊರಗು, ಯಾವದಕ್ಕೂ ಅರ್‍ಥವಿಲ್ಲವೆಂಬ ಭಾವನೆ. ಕಾರಣ ಮಿತ್ರ. ಅವನೊಬ್ಬನಿಗೆ ತಾನು ಸಮಾಜವನ್ನು ನಾಶ ಮಾಡುವ ದೊಡ್ಡ ಹುಳುಗಳ ಪೈಕಿ ಒಬ್ಬನೆಂದು ನೇರವಾಗಿ ಹೇಳುವ ಧೈರ್‍ಯ. ಹಾಗೆ ಒಂದು ಸಲ ಹೇಳಿದ್ದ ಅಷ್ಟೆ. ತಮ್ಮದು ವಾರಕೆರಡು ಬಾರಿ ಭೇಟಿಯಾಗುವ ಪರಿಪಾಠ, ಹಾಗಾಗದಿದ್ದ ವಾರಗಳು ಬಹು ಅಪರೂಪ. ಅವನು ಸರಿಯಾದ ಸಮಯಕ್ಕೆ ಬರದಿದ್ದಾಗ ಆಗುತ್ತಿದ್ದ ತಳಮಳ ಹೇಳನಾತೀತ. ಹಾಗೇಕೆ? ಎಂದು ತನ್ನನ್ನು ತಾನೆ ಎಷ್ಟೋ ಸಲ ಕೇಳಿಕೊಂಡಿದ್ದ. ಅದಕ್ಕೆ ಸರಿಯಾದ ಉತ್ತರ ದೊರೆತಿರಲಿಲ್ಲ. ಎಷ್ಟೋ ಸಲ ಅವನ ಮಾತುಗಳು ಅರ್‍ಥವಾಗುತ್ತಲೇ ಇರಲಿಲ್ಲ. ಪ್ರತಿ ಶಬ್ದದಲ್ಲೂ ನಿಘೂಡವಾದ ಸತ್ಯ ಅಡಗಿದೆ ಎಂಬ ಭಾವ. ಒಂದು ಸಲ ತಡವಾಗಿ ಬಂದಾಗ ತನ್ನ ಕಾತುರತೆಯನ್ನು ಕಂಡು ನಗುತ್ತ ಹೇಳಿದ್ದ.
“ನಮ್ಮದು ಜನ್ಮ ಜನ್ಮಾಂತರಗಳ ಸಂಬಂಧವಿದದ್ದಂತಿದೆ.”
ಗಹಗಹಿಸಿ ನಕ್ಕು ಹೇಳಿದ್ದ ತಾನು.
“ಹೌದು, ಹೋದ ಜನ್ಮದಲ್ಲಿ ನಾನೊಬ್ಬ ಮಹಾತ್ಮನಾಗಿರಬೇಕು.”
“ಈಗಲೂ ಸಮಯ ಮಿಂಚಿಲ್ಲ. ನೀನು ಮಹಾತ್ಮನಾಗಬಹುದು” ಪೂರ್‍ತಿ ವಿಶ್ವಾಸದಿಂದ ಗಂಭೀರವಾಗಿ ಹೇಳಿದ್ದ.
ಕೆಲಗಂಟೆಗಳ ಅವಧಿಯಲ್ಲಿ ಮಹಾತ್ಮನಾಗಲು ಸಾಧ್ಯವಿಲ್ಲವೆ!
ಹೆಜ್ಜೆಗಳ ವೇಗ ಕಡಿಮೆಯಾಯಿತು. ಎದುರಿಗೆ ಬರುತ್ತಿದ್ದ ಒಬ್ಬ ವಿನಯವಾಗಿ ನಮಸ್ಕರಿಸಿ ಪಕ್ಕಕ್ಕೆ ಸರಿದು ನಿಂತ. ವಿನಯವಲ್ಲ, ಭಯ ಎಂದಿತು ಮನ. “ಮನುಷ್ಯ ಮೊದಲು ಭಯದಿಂದ ಮುಕ್ತನಾಗಬೇಕು. ತಾನೊಬ್ಬ ಅಪೂರ್‍ವ ಜೀವಿ ಎಂಬುವದು ಅರಿಯಬೇಕು. ಬದುಕಬೇಕು. ಒಂದೊಂದು ಸಲ ಅವನ ಮಾತು ಭಾಷಣಕಾರನಂತಿರುತ್ತಿತ್ತು.
“ನಾನು ಬದಕುತ್ತಿಲ್ಲವೆ” ಕೇಳಿದ್ದ ತಾನು.
“ಇಲ್ಲ. ಬರಿ ಉಸಿರಾಡುತ್ತಿರುವಿ…….. ಎಂದು ಅವರೊಡನೆ ಮಕ್ಕಳಿಗೆ ಹೇಳುವಂತಹ ಮಾತಿನ ಸರಣಿಯಲ್ಲಿ ಏನೇನೊ ಹೇಳಿದ್ದ. ಅದನ್ನು ಅರ್‍ಥಮಾಡಿಕೊಳ್ಳಲು ಬೇಸರ.
ಮಕ್ಕಳಿಗಾಗಿ ಏನೂ ಮಾಡುವದು ಮಿಕ್ಕಿಲ್ಲ. ಅವರ ಮೊಮ್ಮಕ್ಕಳು, ಮತ್ತವರ ಮಕ್ಕಳು ಹಾಯಾಗಿ ಕಾಲ ಕಳೆಯುವಷ್ಟು ಸಂಪಾದಿಸಿಟ್ಟಿದ್ದೇನೆ. ಅವರುಗಳು ತಮ್ಮ ಸಂಪಾದನೆಯನ್ನು ಅದರಲ್ಲಿ ಜೋಡಿಸುವರೆಂಬುವದು ನಿಸಂದೇಹ. ಕೊನೆಯ ಮಗನ ಮಗುವಿನ ನಾಮಕರಣ ಸಮಾರಂಭ ಮುಗಿದು ಕೆಲದಿನಗಳು ಮಾತ್ರ ಕಳೆದಿವೆ. ಔತಣಕ್ಕೆ ಮಿತ್ರನೂ ಬಂದಿದ್ದ. ಮಗುವನ್ನೆತ್ತಿ ಮುದ್ದಾಡಿ ತಮ್ಮಿಬ್ಬರಿಗೆ ಕೇಳುವಂತೆ ಅವನ ಕಿವಿಯಲ್ಲಿ ಉಸುರಿದ್ದ.
“ನಿನ್ನ ತಾತನ ಹಾಗಾಗಬೇಡ. ಎಲ್ಲಡೆಯಲ್ಲಿಯೂ ಸುಖ, ಸಂತಸವನ್ನು ಹರಡು, ಬದುಕು ಬಹು ಸುಂದರ ಅದನ್ನು ಇನ್ನೂ ಸುಂದರಗೊಳಿಸು, ಮಾನವ ಮನ ಮಾಡಿದರೆ ಈ ಲೋಕವನ್ನು ನಂದನವನವಾಗಿಸಬಲ್ಲನೆಂಬುವದು ಜಗಕ್ಕೆ ತೋರು. ತನಗೂ ಅರ್‍ಥವಾಗದ ಮಾತು ಆ ಮಗುವಿಗೆ ತಿಳಿಯುವದೆ, ನನಗಾಗೆ ಹೇಳಿದಂತಿತ್ತದು. ಆಗವನ ಮೇಲೆ ಸಿಟ್ಟು, ಬಂದಿತ್ತು. ಎಂತಹ ದೊಡ್ಡ ಸಮಾರಂಭ ಇಲ್ಲಿ ಎಲ್ಲರೂ ಸುಖ, ಸಂತೋಷಗಳಿಂದಿಲ್ಲವೆ ಎನಿಸಿತು. ಅದನ್ನೇ ಕೇಳಿದ.
“ಸುಖ, ಸಂತಸ ಈ ಶಬ್ದಗಳ ಅರ್‍ಥವನ್ನು ಬಹು ಸೀಮಿತಗೊಳಿಸಿದ್ದಾರೆ ಜನ. ಹಾಯಾಗಿ ಕುಡಿದು ತಿಂದು ಮಲಗುವುದು ಸುಖವೆ. ಚಿಲ್ಲರೆ ಹಾಸ್ಯಕ್ಕೆ ಹೊಟ್ಟೆ ತುಂಬ ನಗುವದು ಸಂತಸವೆ. ನಿಜವಾದ ಸಂತಸ ಯಾವಗಲೂ ನಿನ್ನೊಡನಿರುತ್ತದೆ. ಆ ಸುಖ ಅನುಭವಿಸಬಲ್ಲೆಯಾದರೆ ಆಗ. ಅದರ ಪರಿಣಾಮ ನಿನ್ನ ಸುತ್ತಲಿನ ನಾಲ್ಕು ಜನರಿಗಾಗುತ್ತದೆ. ನೋಡು, ಈ ಹಸುಳೆ ಎಷ್ಟು ಸುಂದರವಾಗಿ ಮುಗ್ಧವಾಗಿದೆ. ಬಹುಶಃ ದೇವರು ಹೀಗೆ ಇರುತ್ತಾನೇನೊ!”
ಕೂಸನ್ನು ಮತ್ತೊಮ್ಮೆ ಮುದ್ದಿಸಿದ್ದ.
ಏನಾದರೂ ಒಳ್ಳೆಯ ಕೆಲಸ ಮಾಡಬೇಕು. ಏನು? ಸಿಗರೆಟ್‌ಗಾಗಿ ಜೇಬಿಗೆ ಕೈ ಹಾಕಿದ. ಸುತ್ತಲೂ ಹರಿಯಿತು ನೋಟ, ಗುಡಿಸಿಲುಗಳ ನಡುವೆ ಚಿಕ್ಕ ದಾರಿಯಲ್ಲಿದ್ದ ಅವನು. ನಾಯಿಗಳ ಬೊಗಳು, ಕ್ರಿಮಿಗಳ ಕಿರಿಚಾಟ ಮಾತ್ರ ರಾತ್ರಿಯ ಮೌನವನ್ನು ಕದಡುತ್ತಿತ್ತು. ಹೊಗೆ ಬಿಡುವಾಗ ಹೇಳಿತು ಮನ, ‘ರಾತ್ರಿ ಕಳೆದು ಬೆಳಕಾಗುತ್ತದೆ’ ತನ್ನ ಆಪ್ತರನ್ನೆಲ್ಲ ಕಂಡು ಮಾತಾಡಿಸಿದರೆ ತಾನು ಮಾಡಿದ ಪಾಪಗಳಿಗೆ ಕ್ಷಮೆ ಕೋರಿದರೆ! ಯಾರು ತನ್ನ ಆಪ್ತರು, ಯಾತರ ಕ್ಷಮೆ, ಲೋಕದ ಮೇಲೆ ಹರಡಿರುವ ಹೊಲಸು ಶುದ್ಧವಾಗುವದೆ. ಎಲ್ಲರೂ ಆನಂದದಿಂದ ಬಾಳುವಂತೆ ಮಾಡುವದು ಸಾಧ್ಯವೆ.
ಎದುರಿನಿಂದ ಒಬ್ಬ ಬರುತ್ತಿರುವದು ಕಂಡು ಅತ್ತ ಹರಿಯಿತು ನೋಟ, ದುರುಗುಟ್ಟಿ ನೋಡಿದ, ಕೈಯಲ್ಲಿ ದೊಡ್ಡ ಕೊಡಲಿ ಇದೆ. ತನ್ನ ಕಡೆಯ ಬರುತ್ತಿದ್ದಾನೆ. ಅವನಡೆ ತಾನೂ ಹೆಜ್ಜೆ ಹಾಕ ತೊಡಗಿದ. ಹತ್ತಿರವಾಗುತ್ತಿದ್ದಂತೆ ಮುಖ ಸ್ಪಷ್ಟವಾಗ ತೊಡಗಿತು. ಬೆಳೆದ ಗಡ್ಡ, ಒಳಕ್ಕೆ ಹೋದ ಕಣ್ಣುಗಳು, ಮುಖದ ಮೇಲೆ ಮಾಂಸವಿಲ್ಲ. ಕೊಡಲಿಯ ಹರಿತವನ್ನೆ ಪರೀಕ್ಷಿಸುತ್ತಿದ್ದ. ಅವನ ನೋಟ ಎದುರಿಗೆ ಬರುತ್ತಿದ್ದ ತನ್ನ ಬೀಳುತ್ತಲೆ ಓಡಿ ಬಂದು ಕೊಡಲಿ ಮೇಲೆತ್ತಿದ. ಅದು ತನ್ನ ಕುತ್ತಿಗೆ ಸಮೀಪಿಸುವ ಮೊದಲು ಕೈಹಿಡಿದು ಕೇಳಿದ.
“ಏನು? ಏನಾಗಿದೆ ನಿನಗೆ? ನನ್ನ ಯಾಕೆ ಹೊಡೆಯುತ್ತಿ.”
“ಅವಳು ಆತ್ಮಹತ್ಯೆ ಮಾಡಿಕೊಂಡಿಲ್ಲ. ನೀನೇ ಕೊಲೆ ಮಾಡಿರುವಿ. ಈಗ ಸೇಡು ತೀರಿಸಿಕೊಂಡು ಅವಳ ಆತ್ಮಕ್ಕೆ ಶಾಂತಿ ಒದಗಿಸುವ ಸಮಯ ಬಂದಿದೆ.” ಆವೇಶ ತುಂಬಿದ ದನಿಯಲ್ಲಿ ಕೂಗಿದ. ಹಿಂದೆ ಹೋಗುತ್ತದೆ ಮನ, ಬಲವಾದ ತೊಡೆ, ಸ್ತನಗಳು ಕಣ್ಣಮುಂದೆ ನಾಟ್ಯವಾಡುತ್ತವೆ. ಅವಳು ದಯನೀಯ ದನಿಯಲ್ಲಿ ಯಾಚಿಸುತ್ತಾಳೆ. ಅವನಿಗೆ ಕೊಡಲು ನನ್ನ ಬಳಿ ಏನೂ ಇಲ್ಲ. ಇದ್ದದ್ದನ್ನು ಎಂಜಲು ಮಾಡಬೇಡಿ. ಬಿಡು ಅವನ ಕೈ ಎರಗಲಿ ನಿನ್ನ ಕುತ್ತಿಗೆ, ಇಲ್ಲಿಗೆ ಮುಗಿದು ಹೋಗುತ್ತದೆ ನೀಚ ಜೀವನ, ಕೂಗುತ್ತದೆ ಅಂತರಾಳ, ಕೊಡಲಿ ಹಿಡಿದ ಕೈಯನ್ನು ಇನ್ನೂ ಬಲವಾಗಿ ಹಿಡಿಯುತ್ತಾನೆ.
“ನನ್ನ ಕೊಂದರೆ ಅವಳು ಬರುವಳೆ” ಸ್ವಮ್ಯವಾಗಿ ಕೇಳುತ್ತಾನೆ. ತನ್ನ ದನಿ ಕೇಳಿ ತನಗೇ ಆಶ್ಚರ್‍ಯವಾಗುತ್ತದೆ.
“ನಿನ್ನ ಕೊಂದರೆ ಪಾಪದ ಒಂದು ಕಣವಾದರೂ ನಾಶವಾಗುತ್ತದೆ. ನೂರಾರು ಜನರು ಸರಾಗವಾಗಿ ಉಸಿರೆಳೆಯುತ್ತಾ ಸುಖವಾಗಿ ಬಾಳುತ್ತಾರೆ. ನೀನು ಸಾಯಬೇಕು.” ಆವೇಶದ ಮಾತಿನೊಡನೆ ಕೈಯನ್ನು ಬಿಡಿಸಿಕೊಳ್ಳುವ ಯತ್ನ, ಅಕ್ಕಪಕ್ಕದ ಗುಡಿಸಿಲುಗಳು ತೆರೆದುಕೊಂಡು ಜನ ಹೊರ ಬರುತ್ತಾರೆ. ಅವನನ್ನು ಅಲ್ಲಿ ಕಂಡಾಗ ಭಯದಿಂದ ನಡಗುತ್ತಾರೆ. ಕೆಲವರು ಮುಂದೆ ಬಂದು ಕೊಡಲಿ ಹಿಡಿದವನನ್ನು ದೂರ ಎಳೆದುಕೊಂಡು ಹೋಗುತ್ತಾರೆ.
“ಬಿಡಿ, ನನ್ನ ಬಿಡಿ. ಕೊಲ್ಲಿರಿ ಅವನನ್ನು ಎಷ್ಟು ದಿನ ಶಂಢರ ಬಾಳು ಬಾಳುತ್ತೀರಿ.” ಒಬ್ಬ ಕೊಡಲಿಯನ್ನು ಕಸಿದುಕೊಳ್ಳುತ್ತಾನೆ. ಅವನ ಕೂಗಾಟ ಸಾಗೇ ಇದೆ. ಅವನನ್ನೆ ಕೆಲ ಹೊತ್ತು ನೋಡಿ ಮರಳಿ ಹೆಜ್ಜೆ ಹಾಕಿದಾಗ ನಾಲ್ಕಾರು ಜನ ಹತ್ತಿರ ಬರುತ್ತಾರೆ. ಒಬ್ಬ ವಯಸ್ಕ ಯಾಚನೆಯ ದನಿಯಲ್ಲಿ ಹೇಳುತ್ತಾನೆ.
“ಅವನನ್ನು ಕ್ಷಮಿಸಿ ಮಹಾಸ್ವಾಮಿ, ಅವಳು ಆತ್ಮಹತ್ಯೆ ಮಾಡಿಕೊಂಡಾಗಿನಿಂದ ಹೀಗೆ ಹುಚ್ಚನ ಹಾಗೆ ಕೂಗಾಡುತ್ತಾನೆ.”
“ಮದುವೆಯಾಗಿಲ್ಲವೆ” ಪ್ರಕೃತಿಯನ್ನು ಉದ್ದೇಶಿಸಿ ಕೇಳಿದಂತೆ ಕೇಳುತ್ತಾನೆ. ಕಂಠ ಭಾರವಾಗಿದೆ.
“ಇಲ್ಲ ಸ್ವಾಮಿ, ಅದರ ಮಾತೆತ್ತಿದರೆ ಇನ್ನೂ ರೇಗುತ್ತದೆ ಅವನ ಹುಚ್ಚು. ಮದುವೆಗೆ ಬಂದ ಎಲ್ಲ ಹುಡುಗಿಯರನ್ನು ಕೊಂದು ಬಿಡುತ್ತೇನೆ ಎನ್ನುತ್ತಾನೆ.”
ಭಾರವಾದ ಮನದಿಂದ ಮುಂದೊಂದು ಹೆಜ್ಜೆ ಇಟ್ಟಾಗ ನಾಲ್ಕಾರು ಕೈಗಳು ಅವನ ಕಾಲು ಹಿಡಿಯುತ್ತವೆ. ಭಯದಿಂದ ಕೂಡಿದ ದನಿಯಲ್ಲಿ ಹೇಳುತ್ತಾನೆ ವಯಸ್ಕ.
“ಆದದ್ದನ್ನು ಮರೆತು ಬಿಡಿ ಮಹಾಸ್ವಾಮಿ. ದಯವಿಟ್ಟು, ಅವನನ್ನು ಕ್ಷಮಿಸಿ, ಸಂಸಾರ
ಬಹಳ….”
ಮುಂದೆ ಕೇಳಲಾಗುವದಿಲ್ಲ, ಹೇಳುತ್ತಾನೆ.
“ಹೋಗಿ, ಹಾಯಾಗಿ ಮಲಗಿ, ಅವನಿಗೇನೂ ಮಾಡುವದಿಲ್ಲ.”
ಅದನ್ನು ನಂಬದವರಂತೆ ತಮ್ಮ ತಮ್ಮ ಗುಡಿಸಿಲುಗಳ ಕಡೆಗೆ ಹೆಜ್ಜೆ ಹಾಕುತ್ತಾರೆ. ಅವನ ಭಾರವಾದ ನಡಿಗೆ ಮುಂದೆ ಸಾಗುತ್ತದೆ.
ಇವರೆಲ್ಲ ಇಷ್ಟು, ನಿಸ್‌ಹಾಯರಾಗಲು ಇಂತಹ ಭಯಭರಿತ ಜೀವನ ನಡೆಸಲು ಕಾರಣ ನೀನೆ.” ಮಿತ್ರ ಕಿರುಚಿ ಹೇಳಿದಂತೆನಿಸುತ್ತದೆ. ಬೆರಳುಗಳಿಗೆ ಕಾವು ತಗಲಿ ಸಿಗರೇಟ್ ಮುಗಿಯಲು ಬಂದಿರುವದು ಸೂಚಿಸುತ್ತದೆ. ಕೊನೆಯ ಸಲ ಹೊಗೆ ಎಳೆದು ಅದನ್ನು ದೂರ ಎಸೆಯುತ್ತಾನೆ.
ಸಮಯ ಹತ್ತಿರ ಸಾಗುತ್ತಿದೆ. ಒಂದು ಒಳ್ಳೆಯ ಕೆಲಸ ಮಾಡಬೇಕು.
ಸಾವು ಎಂತಹ ಭಯಂಕರ. ಸತ್ತಮೇಲೆ ನಾನಿಲ್ಲವಾಗುತ್ತೇನೆ. ಈಗ ನಡೆಯುತ್ತಿರುವ ಉಸಿರಾಡುತ್ತಿರುವ ತಾನು! ನಾಲ್ಕುಜನ ಹೊತ್ತುಕೊಂಡು ಹೋಗಿ ಸುಟ್ಟು ಬಿಡುತ್ತಾರೆ. ದೇಹದ ಮೇಲೆ ಆಡುತ್ತದೆ ಕೈ, ತಾನಿಲ್ಲದಾಗ ಏನಾಗುತ್ತದೆ. ಏನೂ ಆಗುವದಿಲ್ಲ. ಎಂದಿನಂತೆ ಸಾಗುತ್ತದೆ ಕಾಲಚಕ್ರ, ತಾನು ಸತ್ತರೆ ಬಹು ಜನಕ್ಕೆ ಸಂತಸವಾಗುವದರಲ್ಲಿ ಸಂದೇಹವಿಲ್ಲ. ಎಷ್ಟೋ ಜನ ಆ ದಿನವನ್ನೂ ಹಬ್ಬವಾಗಿ ಕೂಡ ಆಚರಿಸಬಹುದು. ನೋವಾಗುವದು ಮಿತ್ರನಿಗೆ ಮಾತ್ರ.
ಜೀವನ ಬಹು ಸುಂದರ, ಸಾವು ಅಷ್ಟೆ, ಕ್ರೂರ. ಆದರೆ ಅದರಿಂದಲೇ ಇರುವದು ಜೀವನ ಸೌಂದರ್‍ಯ, ಬದುಕು, ಸಾವಿನ ನಡುವಿನ ಸಮಯ ಬಹು ಸೀಮಿತ. ಅಷ್ಟರಲ್ಲೆ ಒಳ್ಳೆಯದನ್ನು ಮಾಡಬೇಕು. ಕೆಟ್ಟದನ್ನು ಮಾಡುವಷ್ಟೆ ಸುಲಭವಾಗಿ ಒಳ್ಳೆಯವನ್ನು ಕೂಡ ಮಾಡಬಹುದೆಂದು ಜನರೇಕೆ ತಿಳಿದುಕೊಳ್ಳುವದಿಲ್ಲ. ಮಿತ್ರ ಪೂರ್‍ತಿ ಮಾನವ ಜನಾಂಗದ ಭಾರವನ್ನ ಹೊತ್ತವನಂತೆ ಹೇಳಿದ್ದ. ನಡುಗೆ ಅವನನ್ನು ಮುಖ್ಯ ರಸ್ತೆಗೆ ತಂದಿತ್ತು. ಒಂದು ಕಡೆನಿಂತು ಯೋಚಿಸ ತೊಡಗಿದ. ಒಳ್ಳೆಯದು ಕಟ್ಟದು, ಸುಳ್ಳು ನಿಜ, ಸಾವು-ಬದುಕು, ಸಿಟ್ಟು, ದ್ವೇಶ, ಪ್ರೇಮ, ಸುಖ, ಆನಂದ, ದುಃಖ, ನಿಸ್ಸಹಾಯತೆ ಈ ಪದಗಳ ಅರ್‍ಥ ಹುಡುಕುತ್ತ ಹಾಗೆ ಎಷ್ಟು ಹೊತ್ತು ನಿಂತಿದ್ದನೆಂಬ ಅರಿವು ಅವನಿಗಿಲ್ಲ. ಒಂದು ನಿರ್‍ಣಯಕ್ಕೆ ಬಂದ ಅವನ ಹೆಜ್ಜೆಗಳು ಧೃಡವಾಗಿ, ವೇಗವಾಗಿ ಮುಂದೆ ಬೀಳತೊಡಗಿದವು.
“ಹೇಳಿ, ನಾನೇನು ಸೇವೆ ಮಾಡಬಲ್ಲೆ” ನ್ಯಾಯವಾದಿಯ ಮಾತಿನಲ್ಲಿ ಗಾಢವಾದ ನಿದ್ದೆಯಿಂದ ಎದ್ದ ಬೇಸರ, ಸಿಟ್ಟಿರಲಿಲ್ಲ. ಅತಿ ಮರ್‍ಯಾದೆಯಿಂದ ಕೇಳಿದರು.
“ನನ್ನ ಉಯಿಲು ಬದಲಿಸಬೇಕಾಗಿದೆ”. ಬಹು ಸಹಜವಾಗಿತ್ತವನ ಮಾತು. ಈ ಹೊತ್ತಿನಲ್ಲಿ ಯಾಕೆ ನಾಳೆ ಬರಬಹುದಾಗಿತ್ತಲ್ಲ ಎಂದು ಕೇಳುವ ಧೈರ್‍ಯವಿಲ್ಲ ನ್ಯಾಯವಾದಿಗೆ ಹಾಗಿತ್ತವನ ಧನದ ಅಧಿಕಾರದ ಮಹಿಮೆ.
“ಏನು ಹೇಳಿ”
ಬರೆಯಲು ಕೂಡುತ್ತ ಕೆಲಸಕ್ಕೆ ಸಿದ್ಧನಾದ. ತನ್ನ ಎಲ್ಲ ಚರ, ಸ್ಥಿರ ಆಸ್ಥಿಯನ್ನು ಮಿತ್ರನ ಹೆಸರಿನಲ್ಲಿ ಬರೆಯುವಂತೆ ಹೇಳಿದ! ಅದರಿಂದ ನ್ಯಾಯವಾದಿಗೆ ಆಶ್ಚರ್‍ಯವಾದರೂ ಅದನ್ನು ತೋರಗೊಡಲಿಲ್ಲ. ಕೋಟ್ಯಾಂತರ ರೂಪಾಯಿಗಳ ವಾರಸುದಾರನ ಮೇಲೆ ಮನ ದಾಳದಲ್ಲಿ ಅಸೂಯೆ ಉಂಟಾಯಿತು. ಬರೆಯುವದು ಮುಗಿಸಿ ತಾನೆ ಮನೆಯಲ್ಲಿ ಮಲಗಿದ್ದಿಬ್ಬರನ್ನು ಸಾಕ್ಷಿಗಾಗಿ ಕರೆತಂದ. ಅವನು ತನ್ನ ಉಯಿಲಿನ ಮೇಲು ಹಸ್ತಾಕ್ಷರ ನಮೂದಿಸಿದ ನಂತರ ಮತ್ತಿಬ್ಬರು ಆ ಕೆಲಸ ಮಾಡಿದರು. ಒಂದು ಪ್ರತಿಯನ್ನು ತೆಗೆದುಕೊಂಡು ಎದುರಿಗಿದ್ದ ಕಾಗದದ ಮೇಲೆ ಮಿತ್ರನಿಗೊಂದು ಪತ್ರಗೀಚಿ ಎರಡನ್ನು ಕಿಸೆಗೆ ಸೇರಿಸುತ್ತ ಅಲ್ಲಿಂದೆದ್ದ.
ಅವನ ಮನ ಸಮಯದ ಓಟದ ಕಡೆ ಇತ್ತು. ನಡುಗೆ ತೀವ್ರಗತಿಯಿಂದ ಸಾಗಿತ್ತು. ಈಗೊಂದು ಗುರಿ ಇರುವಂತೆ ಕಾಣುತ್ತಿತ್ತವನಿಗೆ, ಮನೆಯ ಗೇಟನ್ನು ಸಮೀಪಿಸುತ್ತಿದ್ದಂತೆ ಎದುರಾದರು ದ್ವಾರಪಾಲಕರು, ಅವರನ್ನು ಗಮನಿಸದವನಂತೆ ಒಳನಡೆದ. ಹಿರಿಯ ಮಗನ ಕೋಣೆಯ ಬಾಗಿಲು ಬಡಿದ ಸ್ವಲ್ಪ ಸಮಯದ ನಂತರ ಜೋರಾಗಿ ಬೈಯ್ಯುತ್ತಲೆ ಬಾಗಿಲು ತೆರೆದ ಅವನು ಎದುರಿಗೆ ತಂದೆಯನ್ನು ಕಂಡು ನಿದ್ದೆ ಒಮ್ಮೆಲೆ ಹಾರಿ ಹೋಯಿತು. ತನ್ನಿಬ್ಬರು ತಮ್ಮಂದಿರನ್ನು ಕರೆದುಕೊಂಡು ಖಾಸಾಗಿ ಕೋಣೆಗೆ ಬರಬೇಕಾಗಿ ಆದೇಶಿಸಿದ. ಯಾವದೋ ಬಹು ತುರ್‍ತಾದ ಕೆಲಸವಿರಲೇಬೇಕು ಎಂದು ಕೊಂಡ ಹಿರಿಯ ಪುತ್ರ ತನ್ನ ಕೆಲಸಕ್ಕೆ ತೆರಳಿದ.
ತನ್ನ ಕೋಣೆಗೆ ಬಂದ ಅವನು ಸುತ್ತು ಕಣ್ಣು ಹಾಯಿಸಿದ. ಅವನಿಗಲ್ಲ ಒಳ್ಳೆಯದೇನೂ ಕಾಣಲಿಲ್ಲ. ಬರಿ ಪಾಪದ ಛಾಯೆಗಳು ಇನ್ನೂ ಹಸಿರಾಗಿವೆ. ಗೋಡೆಗಿದ್ದ ಬೀರು ತೆರೆದಾಗ ಅಲ್ಲಿ ತುಂಬಿದ ನೋಟಿನ ಕಂತೆಗಳು ಗಹಗಹಿಸಿ ನಕ್ಕಂತೆನಿಸಿತು. ಅದರಲ್ಲಿನ ಇನ್ನೊಂದು ಖಾನೆ ತೆರೆದ. ತನ್ನನ್ನು ಕಾಪಾಡಿಕೊಳ್ಳಲು ಕೊಂಡ ಹೊಸ ಮಾದರಿಯ ರಿವಾಲ್ವರ್ ಇಟ್ಟ ಸ್ಥಾನದಲ್ಲಿ ಇತ್ತು. ಅದನ್ನು ತೆಗೆದುಕೊಂಡು ಪುನಃ ಬೀರು ಮುಚ್ಚಿದ, ಈಗ ಅದು ಬರಿಗೋಡೆಯಾಯಿತು. ಪಿಸ್ತುಲನ್ನು ಬಿಚ್ಚಿ ನೋಡಿದ. ಸರಿಯಾಗಿ ಆರುಗುಂಡುಗಳು ತಮ್ಮ ಸ್ಥಾನದಲ್ಲಿವೆ. ಮಾನವ ಮಾನವನನ್ನು ನಾಶ ಮಾಡುವ ಆಯುಧ. ಮಾನವನೆ ರೂಪುಗೊಳಿಸಿದ್ದು. ಅದನ್ನು ಮುಚ್ಚಿ ಜೇಬಿಗೆ ಸೇರಿಸಿದ.
ತನ್ನ ಖಾಸಾಗಿ ಧ್ವನಿ ನಿಯಂತ್ರಿತ ಕೋಣೆ ಅಲ್ಲಿ ತನ್ನ ಸ್ವಾರ್‍ಥಕ್ಕಾಗಿ ತೆಗೆದುಕೊಂಡ ನಿರ್‍ಣಯಗಳಿಗೆ ಲೆಖ್ಖವಿಲ್ಲ. ನಿದ್ದೆಯಿಂದೆದ್ದ ತನ್ನ ಮೂವರು ಮಕ್ಕಳು ಕುಳಿತಿದ್ದಾರೆ. ಅವನ್ನು ಕಂಡಾಕ್ಷಣ ಎದ್ದು ನಿಂತರು. ಅವನ ಹಿಂದೆಯೇ ಬಾಗಿಲು ಮುಚ್ಚಿಕೊಂಡಿತು. ಮೂವರ ಮುಖವನ್ನು ಒಮ್ಮೆ ನೋಡಿದ, ಈಗಲೂ ಅವರಿಗೆ ತಾನು ಮಾತಾಡುವದಕ್ಕಿಂತ ಮೊದಲು ಮಾತಾಡುವ ಧೈರ್‍ಯವಿಲ್ಲ. ಭಾವರಹಿತವಾಗಿತ್ತವನ ಮುಖ. ಕ್ಷಣಾರ್‍ಧದಲ್ಲಿ ಪಿಸ್ತೂಲು ಕೈಗೆ ಬಂದಿತು. ಒಂದರ ಹಿಂದೆ ಒಂದರಂತೆ ಮೂರುಗುಂಡುಗಳು ಹಾರಿದವು. ಕುಸಿಯುತ್ತಿದ್ದ ಅವರನ್ನು ಕೆಲಕ್ಷಣ ನೋಡಿದ ನಿಧಾನವಾಗಿ ಆಶ್ಚರ್‍ಯ ಭಯಗಳ ಭಾವ ಅವರ ಮುಖದಿಂದ ಸರಿಯುತ್ತಿತ್ತು. ಅವರುಗಳು ಮಡಿದಿರುವದು ಖಚಿತ ಪಡಿಸಿಕೊಂಡು ಪಿಸ್ತುಲನ್ನು ಜೇಬಿಗೆ ಸೇರಿಸುತ್ತ ಕೋಣೆಯಿಂದ ಹೊರಬಿದ್ದ. ಕಾಲುಗಳು ಕಿರಿಯಮಗನ ಕೋಣೆಯ ಬಳಿ ತಂದವು. ಬಾಗಿಲು ಒಳಗಿನಿಂದ ಹಾಕಿರಲಿಲ್ಲ. ಕೂಸು, ತಾಯಿ ಗಾಢ ನಿದ್ರೆಯಲ್ಲಿದ್ದರು. ಮಗುವನ್ನು ಬಹು ಪ್ರೇಮದಿಂದ ಎತ್ತಿಕೊಂಡು ತಾಯಿಯಿಂದ ಬೇರ್‍ಪಟ್ಟ ಕಾರಣ ಸ್ವಲ್ಪ ಮಿಸುಕಾಡಿತದು. ಮುಂಬಾಗಿಲಿಗೆ ಬರುತ್ತಲೇ ಹಾಜರಾದ ಅಂಗರಕ್ಷಕ, ಅವನಿಗೆ ತನ್ನ ಕಾರನನ್ನು ಹೊರ ತೆಗೆಯುವಂತೆ ಆದೇಶಿಸಿದ. ಹಸುಳೆಯೊಡನೆ ಮಾಲೀಕರನ್ನು ಆ ಸಮಯದಲ್ಲಿ ಕಂಡು ಆಶ್ಚರ್‍ಯವಾಯಿತವನಿಗೆ. ಆಜ್ಞೆ ಮಾತ್ರ ಪಾಲಿಸಲು ಕಲಿತ ಅವನು ಕಾರನ್ನು ಹೊರತಂದ. ಯಾರೂ ತನ್ನ ಜೊತೆ ಬರುವದು ಬೇಡ ಎನ್ನುತ್ತ ಚಾಲಕನ ಸ್ಥಾನದಲ್ಲಿ ಕುಳಿತ. ಶರವೇಗದಿಂದ ಮುಂದೆ ಓಡಿತು ವಾಹನ, ಮಿತ್ರನ ಮನೆ ಸಮಿಪಿಸುತ್ತಿದ್ದಂತೆ ಅದರ ವೇಗ ಕಡಿಮೆಯಾಗುತ್ತ ಬಂದು ನಿಂತಿತು. ತನ್ನ ಮೊಮ್ಮಗನನ್ನ ಎತ್ತಿ ತಂದು ಮಿತ್ರನ ಮನೆಯ ಬಾಗಿಲೆದುರಿನ ಮೆಟ್ಟಿಲ ಮೇಲೆ ಮಲಗಿಸಿದ, ತನ್ನ ಜೇಬಿನಿಂದ ಎರಡು ಕಾಗದಗಳನ್ನು ತೆಗೆದು ಮಗುವಿನ ಅಡಿಯಲ್ಲಿಟ್ಟ. ಪ್ರೇಮ ತುಂಬಿದ ಮನದಿಂದ ಅದನ್ನು ಮುದ್ದಿಸಿದಾಗ ಜೀವನದ ಲವಲವಿಕೆಯನ್ನು ತೋರಲೆಂಬಂತೆ ಕೈಕಾಲು ಆಡಿಸಿತು ಮಗು.
ಸ್ವಲ್ಪ ದೂರ ವೇಗವಾಗಿ ಓಡಿದ ವಾಹನ ಪಟ್ಟಣದ ಸರಿಹದ್ದು ದಾಟುತ್ತಿದ್ದಂತೆ ಮಾಮೂಲು ಗತಿಯಿಂದ ಹೋಗ ತೊಡಗಿತ್ತು. ಸ್ಥಬ್ಧ ಗೊಂಡಿತ್ತವನ ಮನ. ಇನ್ನೂ ಸ್ವಲ್ಪ ಹೊತ್ತು ಮಿಕ್ಕಿದೆ. ತಾನು ಡಾಕ್ಟರ್ ಕಾಲರ್ ಹಿಡಿದು ಸಿಟ್ಟಿನಿಂದ ಅಲುಗಿಸಿ ಕೇಳದಿದ್ದರೆ ತನಗೂ ತಿಳಿಯುತ್ತಿರಲಿಲ್ಲ ಮೃತ್ಯು ಇಷ್ಟು ಸಮೀಪದಲ್ಲಿದೆ ಎಂದು. ತನ್ನ ಪ್ರಾಣ ಒಯ್ಯಲು ಯಮರಾಜ ಬರಬೇಕಾಗಿಲ್ಲ. ಮಿತ್ರನ ಮೇಲೆ ಪೂರ್‍ತಿ ವಿಶ್ವಾಸವಿದೆ. ಅವನ ಮೇಲ್ವಿಚಾರಣೆಯಲ್ಲಿ ತನ್ನ ಮೊಮ್ಮಗ ಖಂಡಿತ ಒಳ್ಳೆಯವನಾಗುವನು. ನಿಜವಾದ ಸುಖ ಸಂತಸವನ್ನು ಅವನು ಹೊಂದಿ ನಾಲ್ವರಲ್ಲಿ ಹಂಚಿದರೆ ಸಾಕು.
ಪಕ್ಕದ ಮಣ್ಣಿನ ಹಾದಿಗೆ ಮರಳಿಸುತ್ತಾನೆ ಕಾರನ್ನು, ಅದು ತಗ್ಗು, ದಿನ್ನೆಗಳಲ್ಲಿ ಓಡ ತೊಡಗುತ್ತದೆ. ಬೆಳೆದು ನಿಂತ ಹಸಿರಾದ ಹೊಲ. ದೂರದಲ್ಲಿನ ಕೋಳಿಯ ಕೂಗುಗಳು, ಕತ್ತಲೆ ಮಂದವಾಗುತ್ತ ಬೆಳಕು. ಸೂರ್‍ಯ ಉದಯಿಸುವದಕ್ಕೆ ಪ್ರಕೃತಿಯ ವ್ಯವಸ್ಥೆ, ಕಾರು ತಟಸ್ಥವಾಗುತ್ತದೆ. ಪಿಸ್ತುಲನ್ನು ಬಲಗೈಯಲ್ಲಿ ತೆಗೆದುಕೊಂಡು ಕಿವಿಯ ಮೆಲ್ಲಡೆ ಅದುಮಿ ಹಿಡಿಯುತ್ತಾನೆ. ಅದರಿಂದ ಹೊರಟ ಶಬ್ದ ಯಾರ ಶಾಂತಿಯನ್ನು ಕದಡುವದಿಲ್ಲ. ಅವನ ತುಟಿಗಳ ಮೇಲಿದ್ದ ತಿಳಿಯಾದ ನಗೆಯನ್ನು ಯಾರು ಅಳಿಸಲು ಸಾಧ್ಯವಿಲ್ಲ.
*****


















