ಅಮ್ಮ

ಅಮ್ಮ

‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ… ಕುತ್ರೂಸಾ… ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ…’ ಸೇಕ್ರಿ, ಕ್ರಿಷ್ಣಾ… ಕೊನ್ತೆಮ್ಮ… ಜಂಟಿ… ಜಂಟಿಯಾಗಿ ದೂರ್ವಾಣಿ ಮೂಲ್ಕ ತೀರಾ ಅತಾಸೆಯಿಂದ್ದೇ ವಬ್ರಾದ್ಮೇಲೆ ವಬ್ರು… ಯದ್ಬಿಳಂಗೆ ಮಾತಾಡಿ, ನನ್ನ ಯದ್ಗುಂಡ್ಗೆ ದೆಬ್ಬೆನ ಯೆಚ್ಗೆ ಮಾಡಿದ್ರು.

ಅಮ್ಮನೇ ಪ್ರಾಣ, ಅಮ್ಮನಿಗೇ ಸಮನಾದ ಸೊಮ್ಮು ಯೀ ಜಗದಲಿ ಯೆಲ್ಲಿದೆ? ದೇವ್ರಿಗೇ… ದೇವ್ರು ಸರ್ವಸ್ವ, ಆದರ್ಶ… ಶಕ್ತಿ… ಅಂತಾಽ… ಯೇನೆಲ್ಲ… ನಂಬಿರ್ವುನ್ಗೆ ಯಿಂತಾ ‘ವಗ್ರು’ ಸುದ್ದಿನೇ? ಮನಸ್ಸು ಅತ್ಲುಕೊತ್ಲಾಯ್ತು. ಆ ಕ್ಷಣ ಭೂಮ್ಯಾಕ್ಳಿದೆ! ಯಂದ್ನಿಂತೆ… ನನ್ನನ್ನ ನಾನೇ, ಸಂತೈಸಿಕ್ಕೊಂಡು…

‘ತಮ್ಮಾ… ಯೇನೋ… ಕಷ್ಟದ್ಮೇಲೆ ನಾ ಬೆಂಗ್ಳೂರ್ಗೆ ಬಂದಿದ್ದೆ. ನಾನ್ಗೀಲೆ ವರ್ಟು ಬತ್ತೀನಿ ನೀವು ಬಲ್ಲಾರಿ ಆಸ್ಪತ್ರೆಗೆ, ಅಮ್ಮನ ಜಲ್ದಿ ಸೇರ್ಸಿ ಅದ್ರಾ ಕರ್ಚು, ವೆಚ್ಚ, ಬಂದು ಕೊಡ್ತೀನಿ’ ಯೆಂದು ತಮ್ಮ ಸೇಕ್ರಿಗೆ, ದೂರ್ವಾಣಿಲಿ ತಡ್ಬಡ್ಸಿಗ್ಯಾಂತ, ಯೇಳ್ದೆ.

‘ಯೀಗ ಜೀಪ್ ಬಾಡ್ಗೆ, ಆಸ್ಪತ್ರೆಯ ದಾರಿ ಕರ್ಚಿಗ್ಯಾಂತ, ಅಂಗ್ಡಿ ಮಲ್ಲಣ್ಣನ ಮಗ ರಂಗಾರೆಡ್ಗೆ, ವಂದೈದ್ಸಾವ್ರಿ ಕೊಡ್ಲೇಳು! ನಾವಿಲ್ಲಿ, ಕೂಲಿ ನಾಲಿ ಮಾಡಿ ಜೀವ್ನ ವರೋರ್ಗೆ ಯಾರಿಲ್ಲಿ ಬುಡ್ದೆಕ್ಲಿಗೆ ಕಟ್ಗೊಂಡ್ವೀ? ನಮ್ಗ್ಯಾರು… ಕೊಟ್ಟಾರು?’ ತಮ್ಮ ಸೇಕ್ರಿ ಯೆಂದ್ನಿಂತೆ ನನ್ನ, ಕಡ್ಕುಂಡು ಬಿದ್ದ.

‘ತಡಾಯ್ಮಿದ್ಲು ಯಿಂಗೇ, ಬಂದ್ಬಿಟ್ರೆಲೇ ನೀವೆಲ್ಲ…! ಅಮ್ಮನ ಸ್ವಂತ ಅಮ್ಮನಂತೆ ನೀವ್ಯಾರು, ನೀವೆಂದೂ ಕಾಣ್ಲಿಲ್ಲ! ಅಮ್ಮ ಬರೀ ಅಮ್ಮನಾಗಿರಲಿಲ್ಲ ಅಪ್ಪನಾಗಿದ್ಲು! ಬೊಪ್ಪನಂಗಿದ್ಲು… ಯಿಲ್ಲಿ ಘೋನ್ ಕೊಡು, ಆ ಯಪ್ಗೇ ದುಡ್ಡು ಕೊಡ್ಲು ಯೇಳ್ತೀನಿ…’ ಯೆಂದೆ.

‘ರಂಗಾರೆಡ್ಡಪ್ಪಾ ನಮಸ್ಕಾರಪ್ಪಾ… ನನ್ ತಮ್ಮನಾರ್ ಕೈಗೆ, ವಂದೈದ್ಸಾವಿರ ಕೊಡಪ್ಪಾ… ನಾ ಯರ್ಡು ದಿನ್ದಾಗೆ ಬಂದು ಕೊಡ್ತೀನಿ… ಆಯ್ತಪ್ಪಾ… ಯೀ ನಿನ್ನ ಧರ್ಮ ಬುದ್ಧಿಗೆ ಜೋಹಾರ್… ಬಾಳ ಭಾಳ ವುಪುಕಾರವಾಯ್ತು…! ಯೆಂದೆ.

‘…ಅಂಗೇ ರವ್ವಾಟು ಫೋನು ನಮ್ ಸೇಕ್ರಿಗೆ ಕೊಡಪ್ಪಾ…’

‘ಯಿಗೋ ಕೊಟ್ಟೆ ನೋಡ್ಪಾ…’ ಯೆಂದ. ‘ಲೇ ತಮ್ಮಾ… ಅವುಸ್ರಾ ಮಾಡಿ, ಜೋಪಾನವಾಗಿ ಅಮ್ಮನ ಆಸ್ಪತ್ರೆಗೆ ಸೇರ್ಸಿರಿ ಯೆಂದು ಫೋನಿಟ್ಟೆ. ಬಡ್ಬಾಡಾ ಯೆಗ್ಲಿಗೆ ಬ್ಯಾಗೇರ್ಸಿ ಬಸ್ಸಿಡಿದು ಬಲ್ಲಾರ್ಗೆ ವರ್ಟೆ.
* * *

ಅಮ್ಮನ ನೆನ್ನು ಗಾಬ್ರಿಗಾಬ್ರಿಯಾಯಿತು ಅತ್ತು ವರ್ಸುಗ್ಳ ಕೆಳ್ಗೆ ಅಮ್ನಿಗೆ… ಯಿದೇ ರೀತಿ ಯೆಚ್ಚು ಕಡ್ಮೆ ಆಗಿತ್ತು. ನಾ ಆಗ್ಲೂ ಗುಲ್ಬರ್ಗ ಸೆಂಟ್ರಲ್ ಆಫೀಸಿನಲ್ಲಿ ಕೆಲ್ಸ ಮಾಡ್ತಿದ್ದೆ…! ಆಗ್ಲು ಬಲ್ಲಾರಿ ಆಸ್ಪತ್ರೆಗೆ ಸೇರ್ಸಿ, ತಿಂಗುಗಟ್ಲೆ ತೋರ್ಸಿದ್ವಿ. ಆಗ್ಲೆ ಯೆಲ್ರು ‘ಕೈಬಿಟ್ಲು ದುರುಗವ್ವ…’ ಯೆಂದು. ಕಾಗೆ ಆರ್ಸಿದ್ರು.

ಯೀ ದುರುಗವ್ವನಿಗಿಂತ ಸಣ್ಣ ಸಣ್ಣವ್ರೆಲ್ಲ ಯಳೇ ನಿಂಬೆಕಾಯ್ಗಿಳೆಲ್ಲ ಮಣ್ಣಾದ್ರು. ಯೀ ಅಳೇ ಘಟಾ ವುರ್ಳಿತು. ದೀಪ ಸಣ್ಗಾಯಿತು. ದೊಡ್ಮಗ್ನ ರೊಕ್ದ ಬಲ್ದ್ಮೇಲೆ ಯಿಷ್ಟು ವರ್ಸು ಜೀವ ಬಿಗಿಡಿದಿದ್ಲು…! ಯೀಗ ವುಳಿಯಲ್ಲ…’ ಯೆಂದು ತೋಡಿ ರಾಗ ತೆಗೆದ್ರು.

ಥೂ! ಯೀ ಜನ್ರೇನು ಯಂಗೂ ಸೈ. ಗೆದ್ರೆ ಚಪ್ಪಾಳೆ ವಡ್ತಾರೆ ಸೋತ್ರೆ ಮೂಗು ಮುರ್ತಾರೆಂದು ಮನ್ಸಾನ್ಯಾಗೇ ಅಂದ್ಕೊಂಡೆ.

ಛಲ್ದಲಿ ರ್‍ವಾಸ್ದಲಿ ಮಾತು, ಸಿಡಿಗುಂಡ್ನೆಂತೆ ರಕ್ತಗತವಾಗಿ… ಬಂತು… ‘ಯೆಷ್ಟೇ ಕರ್ಚಾದ್ರು ನೋವಿಲ್ಲ. ನನ್ನಮ್ಮನ ಬದುಕ್ಸಿ ವೂರ್ಗೆ ತರ್ತೀನಿ. ಆ ನಂಬ್ಕೆ ನನ್ಗೈತಿ… ಐತಿ’ ಯೆಂದೆ! ನನ್ನೊಂದ್ಸಾರಿ, ಲಕ್ವಾ ವಡ್ಡೆ… ಅಮ್ಮನ ಅನ್ನೊಂದ್ಸಾರಿ ಜನ್ರು ನೋಡಿದ್ದ್ರು. ಅಮ್ಮ ಆಗ ಕೋಮ್ದಲ್ಲಿದ್ದು ಮೈತುಂಬಾ ಕೊಳ್ವೆಗ್ಳು. ಯೀ ಕೊಳ್ವೆಗಳಿಂದ ಅಮ್ಮ ಬದುಕಿದ್ಲು. ಯಿದ್ನ ಕಂಡೇ…

‘ವುಚ್ಚೆಲ್ಲಪ್ಪ… ಮರುಳಾ…! ಯೇನೇನೋ ರೈಲು ಬಿಡ್ತಾನೆ ರಿಯಲ್ಲು ಸಾಧ್ಯವಿಲ್ಲ. ಕ್ಯಾಡ್ಬಾಡ ರೊಕ್ಕ ಕೈ ಬಿಟ್ರೆ… ಆಳ್ಬಾವ್ಗೇ ಸುರ್ದಿಂಗೆ! ಯೊಣ್ವಾಗಿ ಬಿದ್ದಿರ್‍ವು ಯೀ… ದುರುಗವ್ವ ಬದುಕಿ ಬರ್ಲು ಸಾಧ್ಯನೇ?’ ಯೆಂದು… ಜನ್ರು ಸವಾಲು ಕೂಗಿದ್ರು.

‘ಮೂಡಲ್ಲಿ ಮುಳ್ಗಲ್ಲಿ ಯಿದಾಗ್ದ ಮಾತೈತಿ’ ಯೆಂದ್ವರೆಷ್ಟೋ?!

ಅಂತೂ ಯಿಂತೂ ಯಂಟ್ನೇ ದಿನ್ಕೆ, ಪಿಳಿ ಪಿಳಿ ಕಣ್ಣು ಬಿಟ್ಟು, ಅಮ್ಮ ಯೆಲ್ರ್ನು ನೋಡಿ, ಬೆರ್‍ಗನ್ನುಂಟು ಮಾಡಿದ್ಲು. ಆವತ್ತು… ಕಾಳಿಕಾ ಮಾತಾ… ತೆನಾಲಿ ರಾಮಕೃಷ್ಣನ್ಗೆ… ಪ್ರತ್ಯಕ್ಷವಾದಷ್ಟು ಕುಸಿ ಬಲುಕುಸಿ ನಮ್ಗಾಯಿತು!!

‘ಯೀ ಬದುಕಿನಲ್ಲೊಂದಲ್ಲ… ಯೀ… ಸಾವ್ನಿಲ್ಲೂ ದುರುಗವ್ವ ಗೆದ್ಲು. ಯಮ್ನ ವೊಡ್ಸಿದ ಧೀರೇ…’ ಜನ್ರು ಆಸ್ಪತ್ರೆ ತುಂಬಾ ವದ್ಗಾರ ತೆಗೆದ್ರು. ಅತ್ನೇ ದಿನ್ಕೆ ಅಮ್ಮ… ಮಾತಾಡಿದ್ಲು. ಯೆದ್ದು ಕುಂತು, ಮೆಲ್ಗೆ ವೋಡಾಡ್ಲಿದ್ಲು. ಯೆಚ್ಚಿನ ಚಿಕಿತ್ಸೆಗೆಂದು ಬೆಂಗ್ಳೂರ್‍ಗೆ ವೋಗಿ ಪೂರ್ತಿ ಗುಣಕಂಡಾಗ ತಮ್ಮ ಬಲ್ರಾಮನೊಂದ್ಗೆ ಜಗ್ಳಕ್ಕಿಳಿದು,

‘ನಾನೂ ನಾನ್ಗಂಡಾ ಕಟ್ದ್ಮಿನೆಯಲ್ಲೇ ಪ್ರಾಣ ಬಿಡ್ತೀನಿ! ಯೂವುನ್ದು ಅಂಗು ಬ್ಯಾಡೆಂದು ವಿಂಬ್ದಲೇ ಮುಂಚ್ಗುಟ್ಟಿ, ಅಮ್ಮ ವೂರು ಸೇರಿದ್ದು ಕಂಡು, ಅನ್ನೊಂದ್ನೆ ಪವಾಡ್ದಂತೆ ವೂರು ಕೇರ್ಗಿರು ಕಂಡಿದ್ದರು.

ನನ್ಗಾಗ ಜ್ಞಾನೋದಯವಾಯಿತು. ಸಾಕ್ಷಾತ್ ಪರಶಿವನನ್ನ ಕುರಿತು, ತಪಸ್ಸು ಮಾಡಿ, ತಾಯಿಗಾಗಿ ಆತ್ಮಲಿಂಗವನ್ನೇ ತಂದ ಭಕ್ತವತ್ಸಲ ಮಹಾರಾವಣನಂತೆ, ನಾನೂ ಅಮ್ಮನ ಸಲುವಾಗಿ ಯೇಳು ವರ್ಸುಗಳ ತನಕ ಸಸ್ಯಹಾರಿಯಾಗಿ ವುಳಿವೆನೆಂದು ಪ್ರತಿಜ್ಞೆ ಮಾಡಿ, ಸಾಧಿಸಿ ಗೆದ್ದೆ! ಅದ್ರ ಫಲ್ವಾಗಿ, ಅಮ್ಮನ ನಿತ್ಯ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಲು, ತಮ್ಮ ಸೇಕ್ರಿ, ಸೇಕ್ರಿಯ ಯಂಡ್ತಿ ನಾಲ್ಕು ಜನ ಮಕ್ಳುಗೆ ವಹಿಸಿ, ಕೈ ತುಂಬಾ ರೊಕ್ಕ ಕೊಟ್ಟು ಪ್ರತಿತಿಂಗ್ಳು ಐದ್ಸಾವಿರ ಕೊಡಲು ತಪ್ದೆ… ಬರುವುದಾಗಿ ಯೇಳಿ ಗುಲ್ಬರ್ಗಕ್ಕೆ ಕರ್ತವ್ಯದ್ಮೇಲೆ ಹಾಜರಾದೆ. ಅಮ್ಮ ನೆನ್ಪಾಗ್ದಾ ಕ್ಷಣ, ದಿನ್ವಿಲ್ಲ. ಅಮ್ಮ ಬ್ರಹ್ಮನಿಗೇನು?! ಮುಕ್ಕೋಟಿ ದೇವಾನುದೇವತೆಗಳಿಗೂ… ಮಿಗಿಲು! ಅಮ್ಮನಿಗೆ ಮಾತ್ರ, ಜೀವಕೊಡುವ ಶಕ್ತಿ ತಾಳ್ಮೆ ಸಹನೆ ಯಿರ್‍ವುದು! ಬೇರಾರಿಗಿಲ್ಲ! ಯಿದು ಬಹಳ ಜನ್ರಿಗೆ ಅರ್ವಿಲ್ಲದೆ, ಅಮ್ಮಂದಿರನ್ನು ‘ಹಂದ್ಗಿಳು ಗದ್ರಿಸ್ದಿಂತೆ ಗದ್ರಿಸಿ ಪಾಪ ಕೂಪ್ದಲಿ ಬೀಳುವ… ಅವಿವೇಕ್ಗಳ ಬಗ್ಗೆ ಬಹಳ ಸಲ ನೊಂದುಕೊಂಡಿದ್ದುಂಟು! ಯೀ ತಿಳುವಳಿಕೆಯಿಂದ್ಲೇ ನಾ… ಮಾತ್ಗೆ ತಪ್ದೆ, ಯಿ ತನ್ಕ ಸಾಗಿದ ರಥವಿಂದು, ಆಸ್ಪತ್ರೆ ಸೇರಿದ್ದು ಕಣ್ಣ ಮುಂದೆ ಬಂತು.

ಅಮ್ಮ ಯೆದ್ರುಸ್ದಿ ಕಷ್ಟ ನಿಷ್ಟೂರ, ವಣನಿಂದೆ, ಅಪಮಾನ್ಗಳು ಯಾವ ದಮಯಂತಿ, ಚಂದ್ರ್ಮತಿ, ಸೀತೆ, ಸಾವಿತ್ರಿ, ದೌಪದಿ, ಬಡ್ವಿಲಿಂಗಮ್ಮ, ಬಾಲನಾಗಮ್ಮ… ಶಬರಿ, ಕುಂತಿ, ಯೇಮ್ರೆಡ್ಡಿ ಮಲ್ಲಮ್ಮ, ಸತೀ ಸಕ್ಕೂಬಾಯಿಗೂ ಕಡ್ಮಿಲ್ಲ! ಆದ್ರೆ ಯೀ ಜನ್ರು ಅಮ್ನ… ಯೆಬ್ಬಟ್ಟಿನ ಕೇರಿಯೆಂಗ್ಸು ಯೆಂದು, ಮೂಗು ಮುರುದ್ರು… ಯಿಪ್ಪತ್ತು ಮರ್ಸುಗಳು ಬಡ್ತನ ವದ್ದು, ಆಸಿ, ಗಾಳಿ, ನೀರಿನಾಸ್ರೇಲೇ ಬರ್‍ಗಾಲ್ದಾಗ ಐವತ್ತು ರೀತಿಯ ತಪ್ಲುಪಲ್ಲೆ, ಯೀಚ್ಲು ಮರ್ದ ಗಡ್ಡೆಗಳನ್ನು ಚೀಲ್ಗಳ್ಗಟ್ಲೆ ವತ್ತು ವತ್ತು ತಂದು ದನಕರ್ಗುಳನ್ನೂ… ನವಗ್ರಹಗಳಂತಿದ್ದ ಮಕ್ಳು, ಮೊಮ್ಮಕ್ಳು, ಮರಿಮಕ್ಳುನ ಬೆಳ್ಸಿ, ಪ್ರಾಮಾಣಿಕವಾಗಿ ಬದುಕುವುದ ಕಲ್ಸಿದ್ದು ನೆನೆದರೆ ಯೀ ಅಮ್ಮನ ತ್ಯಾಗ ಬಲಿದಾನ, ಶ್ರಮ, ಪ್ರಾಮಾಣಿಕತೆ… ಕಣ್ಣೀರಿನ ಮುಂದೆ ಜಗದ ಕಾಣಿಕೆ ತೀರಾ ಅಲ್ಪವೇ.

‘ಮಗಾಽ ನೀ ಯೆಲ್ಲಿತನ್ಕ ವೋದ್ಬೇಕಂತಾದ್ದೀಯಾ ವೋದು! ನೀ ಫೇಲಾದ ದಿನವೇ… ನಾ ನೇಣು ಬಿಗಿದುಕೊಳ್ತೀನೆಂದು’ ಅಮ್ಮ ದೇವ್ರು ಮೇಲೆ… ಅಪ್ಪುನ್ಮೇಲೆ… ವಟ್ಟಿಕ್ಕಿ ಪ್ರತಿಜ್ಞೆ ಮಾಡಿದ್ಲು. ನನ್ಗೆ ವಳ್ಳೆದಾಗ್ಲಿಲೆಂದು ಪ್ರತಿ ಸೋಮವಾರ ವುಪುವಾಸ ವ್ರತ ಆಚರಿಸುತ್ತಿದ್ದಳು ನಾ ನೌಕ್ರಿಗೆ ಸೇರ್ದ್ಮೇಲೆಂತೂ ಅಮ್ಮ ಯೇಳಳ್ಳಿಗೆ ಪದ್ವಾಗಿ, ಮಾತಾಗಿ ನಾಟ್ಕವಾಗಿ ಆದರ್ಶ ಮಹಿಳೆಯಾಗಿ… ದಂತಕತೆಯಾಗಿ ವೋದ್ಲು. ಯೀ ಭಾಗ್ಯ ಕೋಟಿಗೊಬ್ರಿಗೆ ಮಾತ್ರ.

ಅಪ್ಪ ಯಿದ್ದಕ್ಕಿದ್ದಂತೆ ಮೂರೇ ದಿನ್ದಲ್ಲಿ ತೀರಿದ್ಗಾ… ನಾವೆಲ್ಲ ಆಲುಗೆನ್ನೆಯ ಅಸ್ಗೂಸ್ಗುಳು. ಆಗ ಬೊಮ್ಮಗಟ್ಟೆಯಿಂದ ಭಿರೀಮಣ್ಣ ಮಾಮ, ಬಲಭೀಮನಂತೆ ನಮ್ಮಲ್ಲಿಗೆ ಬಂದಿದ್ದ. ಚೀಲ್ದ ತುಂಬಾ ಸಿಗ್ನಿ ತಂಬಿಟ್ಟು, ಸಜ್ಜೆಮಳ್ಕೆ, ಕೊಬ್ರಿ, ಕರೆಳ್ಳು, ಮುಳ್ಳಕ್ಕಿ, ಕಬ್ಬು… ಕಾಕಂಬಿ, ಬಿಸಿಬೆಲ್ಲ… ಸೀಗೆಣ್ಸು… ಯೇನೆಲ್ಲ ತಂದಿದ್ದ! ಯೀ ಮಾಮ ನನ್ನಮ್ಮನ ಸ್ವಂತ ತಮ್ಮ. ಧರ್ಮರಾಯನೆಂದೇ ಕ್ಯಾತಿ, ಗರಿಗರಿ ಯಿಸ್ತ್ರಿ ಮಾಡ್ದೆ ಬಿಳಿಷರ್ಟು, ಬಿಳ್ಪಂಚೆ, ಯೆಗ್ಲು ಮೇಲೆ ಜರ್ತಾರಿ ಶಾಲು, ಕಿವ್ಯಾಗೆ ಬಂಗಾರ್ದ ಬೆಂಡೋಲೆ, ಕೈಗೆ ವಾಚು, ಬೆರ್‍ಳುಗಳಿಗೆಲ್ಲ ಬೆಳ್ಳಿ, ಬಂಗಾರ್ದ ಮಿಣಿಮಿಣಿ ವುಂಗ್ರುಗ್ಳ ಸಾಲು… ಬಕ್ಣುದಾಗ ಪೆನ್ನು ಡೈರಿ, ಮೂರು ಬಾರ್‍ನಿ ಕಾಲ್ಮರ್‍ಗಿಳ ತೊಟ್ಟು… ಸಾವ್ಕಾರ್ಕೆಲಿ ಕ್ರ್ಯಾಪುಜಾಚ್ಗೊಂಡು ಬಂದಿದ್ದ.

‘ಅಕ್ಕಾ… ಅಕ್ಕಽ… ನೀ ಯಿಲ್ಲಿರ್‍ವದು ಪ್ರಾಣ್ಕೆ ಕುತ್ತಿದೆ! ಅಕ್ಕಪಕ್ಕ ಮಣೆಗಾರ್‍ನ ನೋಡ್ದ್ರೆ ಕೌರ್‍ವ ಪಾಂಡವ್ರ ದಾಯಾದಿ ಮತ್ಸರಕೂ ಯಕ್ವನೇ ಕಾಣುಸ್ತೆ! ನೀ ಮಕ್ಳ ಕಟ್ಕೊಂಡು ನಮ್ಮೂರ್‍ಗೆ ಬಂದ್ದಿಡು. ಮೂರು ಮನ್ಗೆಳಿವೆ. ವಂದ್ರಲ್ಲಿ ನೀ ಯಿರ್‍ವುಂತೆ, ಐದಾರು ವಲ ಗದ್ದೆ, ತ್ವಾಟ್ಗಳಿವೆ ವಂದ್ನ ನಿನ್ಗೆ ಬಿಟ್ಟುಕೊಡ್ತಿನಿ. ನನ್ಮಾತು ಕೇಳಿ, ಬಂದ್ಬಿಡು’ ಯೆಂದು ಅಕ್ರೆಯಿಂದಾ ಯೆಸ್ರಿಗೆ ತಕ್ಕಂತೆ ಗಂಡು ಮಗ್ನ ಮಾತ್ಗುಳ್ನೇ… ಆಡಿದ್ದ.

‘ನೀ ನನ್ನ ಪರ್ಪಾಟು…. ಮಾಡ್ಕೊಂಡಿಯಿ ತಮ್ಮಽ…! ನನ್ನಂಡ್ಸತ್ತ ದಿನ್ವೆ… ನಿನ್ನಕ್ಕ ಯೀ ವೂರು ದುರುಗವ್ವ ಸತ್ಲು! ಯದೆ ಕಲ್ಲಾಗಿದೆ. ದಿನಾ ಕೆಂಡಾಸಿ ಮಲ್ಗುತ್ತೀನಿ. ಯೀ ಮಕ್ಳು ಗಂಡ್ನ ಛಲ್ದ ಪದ್ದು, ಘನ್ತೆ ಗೌರ್‍ವಾದಾ ಸಲ್ವಾಗಿ ಪ್ರಾಣ್ದಲ್ಲೀನಿ! ನಿನ್ಮಾಮ್ನ ಕುಣ್ಯಾಗಿಡ್ಲಿಲ್ಲ… ಯೀ ಜಲ್ಲೇ ದುರುಗವ್ವನ ಕುಣ್ಯಾಕಿಟ್ರು…! ಯಿಗೋ ನೋಡು ನನ್ನಾವತಾರ್‍ನ… ಕೈಗಳ್ಗೆ ಬಳೆಯಿಲ್ಲ. ಮೂಗು ಕಿವಿ ತಲೆ ಕುತ್ಗೆ ಕಾಲ್ಗುಳು, ನಡ್ವು… ಖಾಲಿ… ಖಾಲಿ… ನೋಡು?! ಯೆಲ್ಲ ತೇಗ್ದ್ಮಿಲೆ ನಾ ಗಂಡ್ಸಲ್ವೆ?? ನನ್ನೆದ್ರು ನಿಲ್ಲೋ ಗಂಡ್ಮಗ ಯೀ ವೂರು ಕೇರ್ಯಾಗ… ಯಾರಿದ್ದಾರೆ ತೋರ್ಸು ತಮ್ಮಾ…?! ಯೀಗ ನಿಜದ ಕುರುಕ್ಷೇತ್ರದ ಕುಸ್ತಿ ಯಿರೋದು! ಯೆದ್ರಿ ವೋಡೋಡಿ ವೂರು ಬಿಡ್ಳಾಲ್ಲ… ಬರಾಳಲ್ಲ ತಮ್ಮಾ… ನಾ!! ಯೀ ನೆಲ್ದ ಧರ್ಮ ಮರ್ಮಾ ಕರ್ಮಕ್ಕಾಗಿ ಯೀ ನನ್ನ ಮನೆತನ್ದ ಕೀರ್ತಿಗಾಗಿ ರಕ್ತ ಚೆಲ್ಲಾಳು…’ ಅಮ್ಮ ನಾಟ್ಕದ್ಮಾತ್ಗುಳು ಯೇಳ್ದಿಂತೆ ಯೇಳಿದ್ದು ಕೇಳಿ, ಭೀಮಣ್ಣ ಮಾಮ, ಬೇವ್ರು ಸಿಟ್ಟೊಂಡು ವರಟೇ ವೋದ. ಯಿದೇ ತಂಗಿಯ ಯಸ್ನದಲಿ, ಮಾಮ ಬಲು ಬೇಗ ವಿಧಿವಶನಾಗಿದ್ದು, ಅಮ್ಮನ್ಗೆ ತುಂಬ್ಲಾರ್ದ ನಷ್ಟವಾಯ್ತು.

ಯಿಂಥಾ ಪರಿಸ್ಥಿತಿಯಲ್ಲೂ… ಅಮ್ಮ ಯೆದ್ರಾದೆ ಧೃತಿಗೆಡ್ದೆ. ಬದುಕನ್ನು ಸ್ವೀಕರ್ಸಿದ ಪರಿ, ಜನ್ರನ್ನು ಯಿಮ್ಮೆಟ್ದಿ ರೀತಿನೇ ನೈಜ ಯಿತಿಯಾಸವಾಯಿತು… ಅವ್ದು ಅಪ್ಪ ಸಾಯ್ವಾಗ ತಂಗಿ ರತ್ನವ್ವ ನಿಂಬೆಕಾಯಿ ಗಾತ್ರೆವಿದ್ದಳು… ಯೀಗಾ ಐದು ಮಕ್ಳು, ಅಗ್ಲೇ ಮೊಮ್ಮಕ್ಳ ಸದ್ಗ್ರುಯಿಣಿ! ನಮೆಲ್ಲರೆಳ್ಗೆಗಾಗಿ ಯೀಗೆ ಅಮ್ಮ ಶ್ರೀಗಂಧವಾಗಿ ಸವೆದ್ಲು… ದೀಪವಾಗಿ ವುರ್‍ದುಲು… ಮೇಣವಾಗಿ ಕರ್ಗಿದ್ಲು… ವಟ್ಟೆ, ಬಟ್ಟೆ, ಕಟ್ಟಿ ಯಲ್ರುನೂ ವಂದು ಮೆಟ್ಗೆ ಅತ್ಸಿಲು ತನ್ನ ಪ್ರಾಣವನ್ನೆ ಪಣವಾಗಿ ಯಿಟ್ಟ ಘಟನೆ ತಟ್ಟನೆ ಕಣ್ಮುಂದೆ ಬಂತು…

ಕೇರಿಯ ಕೆಲವು ಮಣೆಗಾರರೆಲ್ಲ ಸೇರಿ, ನಮ್ಮನ್ನೆಲ್ಲ ವೂರು ಬಿಡ್ಸಿ ವೋಡ್ಸಿ… ನಮ್ ಪಾಲಿನ ಮಾದಿತನನ್ನೆಲ್ಲ ಅಟ್ಟುವುಣ್ಣಬೇಕೆಂಬ ಕುತಂತ್ರ ಮಾಡಿ… ಕುಸ್ಮೆ ಕಣ ಮಾಡುತ್ತಿರ್‍ವು ಸುದ್ದಿ ಕೇಳ್ದಿ ಅಮ್ಮ… ನೆಲ್ಲು ಕುಟ್ಟೋದ್ನ ಅರ್ಧಕ್ಕೇ ಕೈಬಿಟ್ಟು, ಅದೇ ವನ್ಕೆ ಯೆಗ್ಲಿಗೇರ್ಸಿ… ಮನೆಯಿಂದ್ಲು ಕಣಕೆ ದುರ್ಗಿಯಾಗಿ… ಕಾಳಿಯಾಗಿ… ರಣಚಂಡಿಯಾಗಿ… ಯಿಡಂಬಿಯಂತೆ ಗೋಸಿ ಆಕ್ಕಿ, ತಲೆಕಟ್ಪು ಕಟ್ಟಿ, ತೊಡೆತಟ್ಟಿ,

‘ಬನ್ರೋ ಅಪ್ಟಣ್ಣಗಳಿರಾ… ಯಿಜಿಡಾಗಳಿರಾ… ಬೀಜಿದ್ದ ಲಬಾಡೆಕಾರ, ಮಣೆಗಾರರೊಬ್ಬಬ್ರೇ… ಯೆದ್ರುಗೆ ಬರೋ… ಯೆಳೆಮ್ಮೆ ಸಗಣಿ ಬಾಯಿಗೆ ತುರುಕಿ, ಕೆಳಕಾಕಿ ಜಾರಿ ತುಳಿಲಿಲ್ಲ… ನಾ ದುರುಗವ್ವನೇ ಅಲ್ಲಾ…’ ಯೆಂದು, ವೋಡಾಡ್ಸಿ… ವಡೆದು, ವಡೆದು… ಅರ್ಭಟ್ಸಿದ್ಲು.

ಮೂರು ದಿನ ಪಂಚಾಯ್ತಿ ನಡೀತು, ಯೇಳಳ್ಳಿ ಮಣೆಗಾರರ ಬಾಯ್ನ ಮುಚ್ಚಿಸಿದ್ಲು. ಮಾದಿತನ್ದ ಹಕ್ಕು ಪತ್ರ, ಕ್ರಯ ಪತ್ರ, ಸಾಕ್ಷಿ, ಪುರಾವೆ ಕಟ್ಟಿದ ರಸೀದಿ… ತಕರಾರು… ಯೆಲ್ಲಾ ಹಲ್ಸಿನ ತ್ವಳೆ ಬಿಡ್ಸಿಟ್ಟಂಗೆ ಜನ್ರು ಮುಂದೆ ಅರಿವಿದ್ಲು. ಯೆಲ್ಲ ಮುಚ್ಚಿಗಂಡು, ಮುಖಂಡ್ರು ಯೆದ್ದೆದ್ದು ವೋದ್ರು.

ಯಿದೇ ಸೆಡ್ವಿಲಿ… ಅಮ್ಮ ತನ್ನ ಸ್ವಂತ ಮಗ್ಳು, ಮಗ್ಳಗಂಡ ಕುಡ್ಕು ಬಜ್ಜೆಬ್ಬನೆಂಬ್ದುನ್ನು ಲೆಕ್ಸಿದೆ, ಅದೇ ವನ್ಕೆ ಬಂಡಿಲೇ ನಾಲ್ಕು ಯಿಕ್ಕಿ, ಕಟ್ಟು ಸೋರ್ವುಂತೆ ಮಾಡಿ, ವೂರು ಬಿಟ್ಟು ವೋಡ್ಸಿ… ವೂರು ಕೇರ್ಗಿರ ಸುಖ, ಶಾಂತಿ, ನೆಮ್ಮದಿ ತಂದಿತ್ತಿದ್ಲು,

‘ಥೂ… ಥೂ… ಯೀ ದುರುಗವ್ವ… ಯೇಳು ಅಸ್ವಲ್ದಾಳು. ಯಿವ್ಳು ಯೆಣ್ಣಲ್ಲ. ಗಂಡ್ಗುಲಿ. ವೂರು ಯಿಡಂಬಿ… ರಕ್ಕಸೀಽ… ಮುಂಟೆ, ರಂಟೆ, ಮಡ್ಕೆ, ಬಂಡಿ ವಡ್ತಾಳೆ. ಮಡಿಯಾಕಿ. ನೀರ್ಕಟ್ಟಿ ಗೊಬ್ರಾಚೆಲ್ಲಿ, ಬೀಜ ಚೆಲ್ಲಿ, ಕೂರ್ಗೆ ಆರ್‍ಗುತ್ತಾಳೆ. ಅತ್ತಾಳು ಗೇಯೋ ವಗ್ತ್ನಾನಾ ವಬ್ಳೆ ಮಾಡ್ತಾಳೆ… ಯಕ್ರಿಗೆ ನೂರು ಪಲ್ಲಾ ವುಳ್ಳಾಗಡ್ಡೆ ಬೆಳೆದು… ವಂದಂದೂ ಕೋಸ್ಗಡ್ದೆಯಾದ್ವುಂತಾ ಕೃಷಿ ಪ್ರಶಸ್ತಿ ಪಡೆದು… ಗಂಡ್ಸರ್‍ನ ಯಿಂದಿಕ್ಕಿದ್ಲು…’ ಯೆಂದು ಜನಾಡಿಕೊಂಡ್ರು. ಕೆಲ್ವ್ರಂತೂ ತಲೆ, ಮೀಸೆ ಬೊಳ್ಸಿಗೊಂಡು ಮಕ ತಗ್ಸಿಗೊಂಡು ವೋಡಾಡತ್ವಡ್ಗಿದ್ರು…

‘ಛೇ…ಛೇಽ… ಯಿವ್ರು ಜನ್ರಲ್ಲ ದನ್ಗಳು ಕುರ್‍ಡು ನೊಣ್ಗಳು. ಸಗಣಿ ವುಳ್ಗಳು! ಮಾಡುಂಡ್ರೆ ಮಂದಿ ಕಾಟ ತಿರ್ದುಂಡ್ರೆ ನಾಯ್ಗಿಳ ಕಾಟ! ಯೀ ಜನ್ರ್ನ ಮೆಚ್ಸಕ್ಗಾಲ್ಲಾಂತ ಮನ ಮೆಚ್ಚಿ ನಡ್ದೆ. ಗಂಡಿದ್ದಾಗ ಯಿ ವಸ್ತುಲು ದಾಟ್ದವ್ಳು… ಯೆಕ್ದಂ ಯೀ ರೂಪು… ತೀರು… ರೋಸ… ತಾಳ್ದೆ! ಯೀ ಜನ್ರು ತರ್ಗೆಲೆಯಾದ್ರು. ಕಮಂಗಿಗ್ಳಾದ್ರು…’ ಯೆಂದು ಅಮ್ಮ… ಯಿಗ್ನಿನಿಂದ ಆದೆಷ್ಟು ಸಾರಿ, ಯೇಳಿರಲಿಲ್ಲ??

ಯಿಡೀ ವೂರು ಕೇರ್‍ಗೆ, ಆದರ್ಶ… ಸ್ಪೂರ್ತಿಯ ಸೆಲೇಯಾಗಿ ಬದುಕಿನ ಖಣೆಯಾಗಿ, ಬದುಕುವುದ ಕಲ್ಸಿಕೊಟ್ಟಿದ್ದನ್ನು ಗುರ್ತಿಸಿ ರಾಜ್ಯೋತ್ಸವ ಪ್ರಶಸ್ತಿ, ಜನಪದಶ್ರೀ ಪ್ರಶಸ್ತಿ, ಪೌರ ಸನ್ಯಾನವೆಂದು ‘ವೀರವನ್ತೆ ವನ್ಕೆ ದುರುಗವ್ವ’ನೆಂದು ಪ್ರಶಸ್ತಿ ನೀಡಿ ಗೌರವ್ಸಿದ ದಿನ, ಅಮ್ಮ ಅಪ್ಪನ ನೆನೆದು ಬಾಳ ಅತ್ತಿದ್ದಳು.

‘ನೀ ಅದಿಮೂರು ಮಕ್ಕಳು ತಾಯಿಯಾಗಿ ಗಂಡಿಲ್ದಾಳಾಗಿ ಯೀ ವೂರು ಕೇರ್‍ಗಿರ ಪೋಟಿಗೆ ಬರ್ತಿಯಾ? ಪಲ್ಲಾ ಮುಳ್ಳೆಲ್ಲು ಕುಟ್ಟಿ, ವಂದೂ ಮೆರ್ಕುಲು ಯಿಲ್ದಂಗೆ ಗಂಟೆಯೊಳ್ಗೆ… ಅಸನು ಮಾಡಿ… ತೋಳ್ಬಂದಿ ಗೇಲ್ತೀಯಾ? ಪಲ್ಲಾ ರಾಗಿನ ತಾಸಿನೊಳ್ಗೆ ಬೀಸಿ ಬೆಳ್ಳಿಕಡ್ಗು ಪಡ್ತಿಯಾ? ರಾಂಪುರ್‍ದ ಪರಿಷೆಲಿ ಜೋಡು ಗಢಾರೆತ್ತಿ ಬೆಳ್ಳಿ ರೂಪಾಯಿ ಗೆಲ್ತೀಯಾ…?! ನೀ ಯೆಣ್ಣು ವುಲಿ ಬಿಡವ್ವ… ನಮ್ ಕುಲ್ದ ಕಿಮ್ಮತ್ತು ಯೆಚ್ಚಿಸ್ದೆ…’ ಯೆಂದು ಸ್ತ್ರೀಶಕ್ತಿ ಸಂಘದವ್ರು ಸನ್ಮಾನ್ಸಿದ್ದ್ರು. ಸಾಲ್ಮರ್ದ ತಿಮ್ಮಕ್ಕನಿಗೆ, ಓಬವ್ವ… ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕದೇವಿ, ನಿಜಗಲ್ಲಿನ ರಾಣಿಗೆ ವೋಲ್ಸಿ… ಯೇನೇನೋ… ಮಾತಾಡಿದ್ದು… ಅಮ್ಮನ್ಗೆ ತಲೆ ಬುಡಾ ಅರ್ಥವಾಗಿರಲಿಲ್ಲ!

ನಾನಂತೂ ನನ್ನ ಗಂಡಿನಿಗೆ ತಕ್ಕ ಯೆಂಡ್ತಿಯಾಗಿದ್ದೆ. ಯೀಗ ಮಕ್ಕಿಗೆ ವಳ್ಳೆ ತಾಯಿ ತಂದೆ ಗುರು, ಮಿತ್ರ, ಸೈನಿಕ, ಡಾಕ್ಟ್ರು, ವಿಮರ್ಶಕ, ಗೈಡು… ಆಗಿದ್ದೇನೆ! ಅಮ್ಮನ ಮಾತ್ಗುಳ ಕೇಳಿ ಜನ್ರು… ನಾಚಿ ತಲೆ ತಗ್ಸಿದ್ದರು. ಯಿದೇ ಕೊನೆಯ ಸನ್ಮಾನವಿರ್ಬೇಕು ಯಿನ್ನೆಂದು ಅಮ್ಮನ ಕರೆದು, ಕೆರದಿಂದ ವಡ್ಸಿಕೊಳ್ಳುವ ಕೆಲ್ಸನ, ಯಾರು ಮಾಡ್ಲಿಲ್ಲವೆಂಬ ಕೊರಗು ಅಮ್ಮನಿಗಿರಲಿಲ್ಲ ಆದ್ರೆ… ನಮ್ಗೆಲ್ಲ ವದಿಯಲು ಶಾಲು, ತಿನ್ನಲು ಐದಾರು ರಕಂನ ಅಣ್ಣು ಅಂಪ್ಲುಗಳು… ಆವತ್ತು ವಟ್ಟೆ ತುಂಬಾ ವೂಟ… ನಾಲ್ಕು ಕಾಸು ರಕ್ಕ… ಸಿಗುವುದು ತಪ್ಪಿತಲ್ಲವೆಂದು ನಾವು… ಕೊರಗಿದ್ದುಂಟು! ಅಮ್ಮ ಮಾತ್ರ ತಾನಾಯ್ತು ತನ್ನ ವಗ್ತ್ನವಾಯ್ತು…! ವಗ್ತ್ನ ಮಾಡುತ್ತಲೇ ಜೋರಾಗಿ, ಯಿಂಪಾಗಿ ಜನ್ಪಾದ ಹಾಡು ಆಡುತ್ತಾ… ಯಿರುತ್ತಿದ್ಲು. ಅಗ್ಲು ಯಿರ್‍ಲಿ ರಾತ್ರಿಯಿರ್‍ಲಿ ಆಡು ಕೇಳ್ಸಿದ್ರೆ ಅದು ದುರುಗವ್ವನದೆಂದು ಜನ್ರು ಗುರುತ್ಸಿ… ನಿಂತು… ಕುಂತು… ಆಲ್ಸಿ ಹಾವ್ನಿಂಗೇ… ತಲೆದೂಗುತ್ತಿದ್ದರು.
* * *

ಹಂಪಿ ತೇರ್‍ನಂಗೆ ಚಲ್ವಿನ ಚಿತ್ತಾರ್ದಲಿ… ಅಮ್ಮ ಮೇಲಿಂದ್ಮೇಲೆ ಯೇಳ್ತಿದ್ದ ಕತೆ. ಕಣ್ಣ ಮುಂದೆ ತೇಲಿ ತೇಲಿ ಬಂತು…

ಆಡೋ ವುಡ್ಗಿಗೆ ಮದ್ವೆ ಮಾಡಿ ತಣ್ಗೆ ಕೈ ತೊಳ್ಳುಕೊಂಡ ಅಪ್ಪ ಅಮ್ಮರ ಬಿಟ್ಟು, ತಾನೆಂಗೆ ಅಪ್ಪನ್ಸಂಗಡಾ ಆರಣ್ಯೆಡ್ವಿಲಿ ದೀಪ್ದ ಬುಡ್ಡಿಲಿ, ರಾಂಪುರ್‍ದ ಕಾಟ್ರು ಆಳ್ವಾನಂತ್ರ ಕಾಯ್ತಾ ಕಾಪುರ ಮೊದ್ಲಿಟ್ಗಾ… ಛಳಿ ಜ್ವರ್ಬಾಂದು ಗಡ್ಗಡಾ ನಡ್ಗಿ, ತಿಂಗ್ಳುಗಟ್ಲೆ ಮಲ್ಗಿದ ಪಕ್ಕೇಲಿ ಮಲ್ಗಿ ಬರ್‍ಬುರ್‍ತಾ… ಗಿಡ್ಕೆ ತ್ವಟ್ಲು ಕಟ್ಟಿ, ದೆವ್ವ, ಭೂತ, ಪಿಶಾಚಿ, ಗೂಬೆ, ಅದ್ದು, ಕಾಗೆ, ಕಣ್ಕಪ್ಡೆ… ವುರ್‍ತಿ, ನರಿ, ತ್ವಾಳ, ಕಪ್ಪಲಕ್ಕ, ಕಿರ್‍ಬು, ಕಾಡಂದಿ, ಜಿಂಕೆ, ಕುಂದ್ಲಿಗಳ್ಗೆ… ಜೋಗ್ಳು ಆಡಿ, ಮಲ್ಗಿಸ್ದಿ ಕಠಿಣ ದಿನಮಾನ್ಗಳ ನೆನೆದು, ಯೇಳ್ವಾಗಲೆಲ್ಲಾ… ಅಮ್ಮನ ಕಂಗ್ಳು ದೀಪದಂತೆ ಧಗ್ಗನೆ ವುರಿ… ವುರಿವುದ ನೋಡಾದೇ ನನ್ಗೆ ಸೋಜ್ಗಿವೆನ್ಸಿತ್ತು!!

ಅಮ್ಮ ಜನ್ರ ಪ್ರತಿಕ್ರಿಯೇ… ಗಮನ್ಸಿ, ಕತೆ ಮುಂದುವರ್ಸಿದ್ಲು… ಯೀ ನಮ್ಮೂರ ಕೆರೆಯಂಗ್ಳ ಬಹುದೊಡ್ಡ ದಂಡಾಕಾರಣ್ಯವಾಗಿತ್ತಾಗ! ನಿಮ್ಮಪ್ಪ ವುಲಿಮೀಸೆ ಕತ್ರಸಂಗಿದ್ದ. ಅಗ್ಲುರಾತ್ರಿ ನಿಮ್ಮಪ್ಪ, ವಂದಿಽ…. ಕೆರೆಯಂಗ್ಳದ ಮರಮುಟ್ಟು ಯೀಚ್ಲು, ತಾಳೆ, ವಂಗೆ, ಕ್ವಂಗೆ, ಕರಿಜಾಲ್ಮಿರ್‍ದ ಬಡ್ಡೆಗಳ್ನ ವುರುಳ್ಸಿದ! ವಟ್ಗೆ ಯಿಟ್ಟಿಲ್ಲ, ಜುಟ್ಟಿಗೆ ಯಣ್ಣಿಲ್ಲ, ಮೈಗೆ ಬಟ್ಟಿಲ್ಲ, ಅಂತಾದ್ರಲ್ಲಿ ಕೆರೆ ನೀರು ಕುಡ್ದು… ತ್ವಲೆ, ಕಂಬ್ಗಳ ವತ್ತು ವತ್ತು… ಮಾರಿ ಮಾರಿ… ವುಳ್ದಿವುಗಳಲ್ಲಿ ಮೂರಂಕಣ್ದ… ಅದಿನ್ನಾರು ಗಜ್ದ… ಮನೇನ ಯಂಗೆ ಕಟ್ಟಿಕೊಂಡ್ವಿ…? ಯೀ ಮನೆಯೊಳ್ಗೆ ನಾವು ಆದಿದಂಪತ್ಗಿಳಂಗೇ ಸಂಸಾರ ವೂಡಿದ್ವಿ!! ಮುಟ್ಟಿದ್ದೆಲ್ಲ ಚಿನ್ನವಾಯ್ತು! ಯರ್ಡು ಮೂರು ವರ್ಸು… ಗಂಜಿ ನೀರ್‍ಲಿ, ಚಿಂದಿ ಅರಿವ್ಲಿ… ವ್ಯಾಪಾರ… ವುಳ್ಳಾಗಡ್ಡೆ… ಬೇನ್ ಬೀಜ… ವುಳ್ಳಾಗಡ್ಡೆ ಬೀಜ, ವುಣ್ಸಿ ಪಿತ್ಕಾ… ತ್ವಗ್ಲು ಕರೆ ಮಾಡುವುದು ಚಳ್ಳಕೆರೆ, ಕೂಡ್ಲಿಗಿ, ಬಳ್ಳಾರಿ, ರಾಯದುರ್ಗ, ಕಣ್ಕೆಲ್ಲು… ಕಲ್ಯಾಣದುರ್ಗಗಳಲ್ಲಿ ಮಾರುವುದು, ಕಣ ಮಾಡ್ವುದು, ವೊಲ ಮಾಡ್ತಾ… ಮುತ್ತಿನ ವೊಲ್ಗೆಳು, ಬೆಳ್ಳಿ ಡಾಬು, ಬಂಗಾರ ಸಾಮಾನು, ದನ, ಕರು, ಕುರಿ, ಮೇಕೆ, ಕೋಳಿ, ನಾಯ್ಗಳು ಸಾಕಿ, ಯೇಳಳ್ಳಿಗೆ ಸಾವುಕಾರನಾಗಿ ಅತ್ವುರ್‍ಸು ಮೆರ್ದೆ, ವುರ್‍ದು, ದಾನ, ಧರ್ಮ, ಸಾಲ ಕೊಟ್ಟು ಮನೆತನ್ಗಳ ನಿಲ್ಸಿದ! ಮೆಲ್ಗೆ ಕೆಮ್ಮು, ದಮ್ಮು, ವುಬ್ಸ, ಆಯಾಸ ಕಾಣ್ಸಿಗೊಂತು. ಯಿದ್ದಕ್ಕಿದ್ದಂತೆ ವರಟೇ ವೋದ. ಆಗ ನಮ್ ಸ್ಥಿತಿಗತಿ, ರ್‍ವಟ್ಟಿ ಮ್ಯಾಗ್ಳ ಪಲ್ಲೆ, ಕೆಳ್ಗೆ ಬಿದ್ದಂಗಾತು!

ಯಿಂಗೆ… ಅಮ್ಮ ಕಣ್ಣಿಗೆ ಕಟ್ಟುವಂತೆ ಯೀ ಕತೇನಾ… ಅದೆಷ್ಟು ಸಲ ಯೇಳಿರಲಿಲ್ಲ?! ಪ್ರತ್ಸಿಲ ಯೇಳ್ವು ಸಂದರ್ಭದಲ್ಲೂ ಅಮ್ಮನ ಕಣ್ಣಲ್ಲಿ ಕಾಂತಿ, ಚೆಂಬೆಳಕು… ಕಂಡು ಬರುತ್ತಿತ್ತು. ಆತ್ಮವಿಶ್ವಾಸ ಸಂತೃಪ್ತಿ ಸಾಧಿಸ್ದಿ ಹುಮ್ಮಸ್ಸು, ಎದ್ದು ಕಾಣುತ್ತಿತ್ತು.

ಕಷ್ಟಗಳು ಬಳ್ಳಾರಿ ಬಿಸ್ಲಿದ್ದಂತೆ. ಸುಖಗಳು ಮಳೆಗಾಲದಂತೆ! ಬರಬಹುದು, ಬರ್‍ದೆ ವೋಗ್ಬವುದು ಯೆದೆಗುಂದದೆ ಯೆದ್ರಿಸ್ದಿರೆ ಜೀವ್ನ ಸಾರ್ಥಕವೆಂದು… ಅಮ್ಮ ಯೇಳುತ್ತಲೇ ಆಸ್ಟತ್ರೆ ಸೇರಿದ್ದು, ಕಣ್ಣಲ್ಲಿ ಪುನಃ ಪುನಃ ನೀರು ತಂತು.

ಬದ್ಕು ಮಾಡ್ತಾ… ಕತೆ ಯೇಳ್ದ್ರಲ್ಲಿ ಅಮ್ಮ… ತಲ್ಲೀನಳಾದ್ರೆ ಮುಗೀತು! ಅದೇ ವುರ್‍ಪು, ತಾಳ, ಮದ್ಲಿ, ಪಿಯಾನ, ಗತ್ತು, ಗಮ್ಮತ್ತು, ಸ್ವರ, ಲಯ… ವಂದೇ ಯಿರುತ್ತಿತ್ತು. ವಳ್ಳೆ ಬಯಲ್ಟಾ, ಯಕ್ಷಗಾನ, ಚಂಡೆಮದ್ಳೆಯಂತೆ… ರಂಗೇರುತ್ತಿತ್ತು. ಯಿದು ಅಮ್ಮನೊಬ್ಳ ಕಥೆ, ವ್ಯಥೆ, ಸಾಹಸ, ಜೀವ್ನ ರೀತಿಯಾಗಿರ್‍ದೆ… ಅಪ್ಪನ, ವೂರು-ಕೇರಿಯ, ಯಿಡೀ ಜನಾಂಗದ ನೋವು… ಬದುಕು, ಭವಣಿ… ನಲಿವು, ಯೇರುಪೇರು, ಸೋಲು-ಗೆಲವು, ಅಷ್ಟೇ ಯೇಕೆ, ಭಾರತದ ಯಾವುದೇ ಮೂಲೆಯ, ಜನಾಂಗದ ಕತೆಯಂತೆ, ಜೀವನ ವಿಧಾನದಂತೆ ನನ್ಗೆ ಕಂಡು ಬರುತ್ತಿತ್ತು. ಅಲ್ಲಿ ಅಮ್ಮ, ಅಪ್ಪನಾಗಿ, ಮಿತ್ರನಾಗಿ, ವಿಧುರನಾಗಿ, ಜನಮೇಜಯನಾಗಿ, ವೇದಾಂತಿಯಾಗಿ, ಮಾರ್ಗದರ್ಶಕಳಾಗಿ… ಕಂಡು ಬರುತ್ತಿದ್ದಳು.
* * *

ಸಾರಿಗೆ ಸಂಸ್ಥೆಯ ಬಸ್ಸು ವೇಗವಾಗಿ ರಸ್ತೆಯನ್ನಳೆಯುತ್ತಿತ್ತು ಆದ್ರೂ ಯಿಲ್ಲೇ ವರಟಂತಿತ್ತು. ಪ್ರತಿ ವೂರಲ್ಲಿ, ಯೆರೆಡೆರ್‍ಡು ಬಸ್ ನಿಲ್ದಾಣಗಳಿಗೆ ವೋಗುವುದು, ಮತ್ತೆ ವರ್‍ಗೆ ಬರುವುದು ಸ್ಟಾಪು ಕೊಡುವುದು ನಿಲ್ದಾಣಗಳಲ್ಲಿ ಯಂಟ್ರಿ ಕೊಡುವುದು… ಯೀಗೆ ತಡವಾಗುತ್ತಿದೆಯಲ್ಲಾ… ಬೇಗ… ಬಲುಬೇಗ, ಅಮ್ಮನ ಮುಖ ನೋಡಲಾಗುತ್ತಿಲ್ಲವಲ್ಲಾ… ಯೆಂಬ, ಚಡಪಡಿಕೆವುಂಟಾಯಿತು.

ಕುಂತು… ಕುಂತು… ಕೆಳ್ಗಡೆ ಬಿಸಿಯಾಗತೊಡಗಿತು. ಯೀಗಾಗ್ಲೇ ನಾಲ್ಕೂವರೆ ತಾಸು ಪ್ರಯಾಣಿಸಿದ್ದರು ಯಿರಿಯೂರು ತಲುಪಿರಲಿಲ್ಲ. ಬೆಂಗ್ಳೂರೇ ದಾಟ್ಲು ತಾಸು ಮೇಲೆ ಯಿಡಿದ್ರೆ… ಮುಂದ್ಲೂರು ದಾಟ್ಲು ಯಿನ್ನೆಷ್ಟು ತಾಸೋ… ಯೆಂಬ, ಲೆಕ್ಕಾಚಾರದಲ್ಲೇ ಕಾಲುಚಾಚಿದೆ ಯಿಕ್ಕಟ್ಟಿನ ಕಣಿವೆಯಲ್ಲಿದ್ದೇನೆನ್ಸಿತು. ಪಕ್ಕದಲ್ಲಿ ಕುಳಿತಿದ್ದ ಸಹಪ್ರಯಾಣಿಕ ನನ್ನಷ್ಟೇ ದಪ್ಪನಾಗಿ, ನನ್ನ ವುಜ್ಜುತ್ತಿದ್ದನೆನ್ನುವುದಕ್ಕಿಂತ, ಅಂಟಿಕೊಂಡೇ ಕುಳಿತಿದ್ದ ಸೀಟ್ಗಳ ಸೈಜು ಚಿಕ್ಕವೋ? ನಮ್ಮ ಸೈಜ್ಗುಳು ದೊಡ್ಡವೋ?? ಅಂತಾ ಬಿಸಿ… ಬಿಸಿಯಲ್ಲೂ ಮುಖವರಳಿದ್ದು ಸೋಜಿಗವೆನ್ಸಿತು.

ಅಷ್ಟರಲ್ಲಿ ದೂರ್ವಾಣಿ ಕರ್ಬೆಂತು. ಅವುದು ಮುಂಜಾಲಿಂದ ತಮ್ಮಗಳಿಂದ, ತಂಗಿ, ಮಾವನವ್ರಿಂದ ಕರ್‍ಗೆಳ್ಮೆಲೆ ಕರ್‍ಗೆಳು! ಸಹ ಪ್ರಯಾಣಿಕರಿಗೆ, ವುಚಿತ ಕಿರಿಕಿರಿಯಾಗುತ್ತಿದೆ… ಅನ್ನಿಸ್ತು! ಆದ್ರೆ ನನ್ಗೆ ಅನಿವಾರ್ಯ… ಅವಶ್ಯವಿರುವುರಿಂದ, ಕರೆ ಮಾಡ್ವುದು, ಕರ್‍ಗೆ ವುತ್ರಿಸುವುದು ನಡೆದೇ ಯಿತ್ತು. ಅಮ್ಮನ ಆಸ್ಪತ್ರೆಗೆ ಸೇರ್ಸಿ… ದ್ರವರೂಪ್ದಲಿ ವಟ್ಗೆ ಆಗಾಗ ಹಣ್ನೆ ರಸ… ನೀಡುತ್ತಿರುವುದನ್ನು ತಿಳಿದು ಮನಸ್ಸು ರವಾಟು ನಿರುಮ್ಮಳೆನ್ನಿತು.

ಯೀ ದೂರ್ವಾಣಿನ ಕಂಡ್ಹಿಡಿದು ಬಲು… ಭೇಷ್ ಮಾಡಿದ್ರು… ಬಸ್ಸಿನಲ್ಲಿದ್ದವನಿಗೆ ಬಲ್ಲಾರಿ ಆಸ್ಪತ್ರೆಯ ತಾಜಾ ಸುದ್ದಿ ಕೇಳಿ, ದೂರ್ವಾಣ್ಗೆ ಕೃತಜ್ಞತೆ ಯೇಳ್ಬೇಕೆನ್ಸಿತು. ಮತ್ತೇ… ದೂರಾಣಿ ಕರೆ ಬಂತು…

‘ಅಲೋ… ನಾನೀಗ ಯಿರಿಯೂರು ಬಿಟ್ಟೆ… ಯಿನ್ನೇನು ಚಳ್ಳಕೆರೆ ದಾಟ್ದಿರೆ.. ನಾ ಬಂದಂಗೇ…’ ನಾನೂ ಮೇಲಿಂದ್ಮೇಲೆ ಫೋನ್ ಮಾಡಿ… ಮಾಡಿ… ಕಾಮೆಂಟ್ರಿ ಕೊಟ್ರು… ಯೀ ದಗ್ಡಿಗಂಡ್ರು ನನ್ನ ನಂಬ್ತಾ ಯಿಲ್ಲವೇನೋ…?! ಯೆಂಬ ಸಂಕ್ಟ… ನನ್ನ ಚೂರಿಯಿಂದಿರಿಯುತ್ತಿತ್ತು. ಅಗ್ಲಾಲೆಲ್ಸಾ… ಫೋನ್ ಮಾಡಿ!

‘ನೀ ಯಲ್ಲೆದ್ದೀಯಿ ಯೆಸ್ಟು ಗಂಟ್ಗಿ ಬರ್ತೀಯಿ? ನೀ ಯೇಳಾದೆಲ್ಲ ನಿಜತಾನೇ? ನಂಬುಬವುದೇ? ಬೇಗ ಬಾ… ಅಟ್ಟಾಸ ಮಾಡ್ಬೇಡ…’ ಯೆಂದು… ತಮ್ಮ ಸೇಕ್ರಿ, ಕ್ರಿಷ್ಣಾ, ತಂಗಿ ರತ್ನವ್ವ, ಮಾವಂದಿರೂ ಕೂಡಾ ನನ್ನ ಅನುಮಾನ ಪಡುತ್ತಿರುವರೆನ್ಸಿತು. ಅನ್ನಂಗಿಲ್ಲ, ಅನುಭವ್ಸಿಂಗಿಲ್ಲ… ಯೆಂದು. ಬಸ್ಸಿನಲ್ಲಿ ವಿಲವಿಲ ವದ್ದಾಡಿದೆ.

ಅಂತು, ಯಿಂತೂ, ಬಲ್ಲಾರಿ ವಸಾ ನಿಲ್ದಾಣ ತಲುಪಿದೆ. ಆಟೋ ರಿಕ್ಷಾವೊಂದನ್ನು ಯಿಡಿದು ದೊಡ್ಡಾಸ್ಪತ್ರೆಗೆ ವರ್‍ಟೆ. ಬಲ್ಲಾರಿ ಬಿಸ್ಲು… ಗಬ್ಬು ವಾಸ್ನೇಗೆ… ಮುಂಜಾಲಿಂದ ವಟ್ಗೆ ಯೇನು ತುರುಕಿಲ್ದ ಕಾರಣದಿಂದ ಮೈ ಸುತ್ತಿ… ಸುತ್ತಿ ಬಂದು, ತಲೆ ಗಿರ್‌ಗುಟ್ಟತೊಡ್ಗಿತು! ಯೆಂದ್ರೋ ಮಹಾನುಭವಲು ಬಳ್ಳಾರ್‍ಗೆ ಬಂದು ಕೆಲ್ಸ ಮಾಡಿ, ಸುಧಾರ್‍ಸಿಲು ಪ್ರಯತ್ನಿಸಿದ್ರೂ.. ಆನ್ಗೆ ಚಡ್ಡಿ ವಲ್ಸಿದಂಗಿದೆ… ಅಂಗೇ ಆದೇ ಕೊಳ್ಗೇರಿಯನ್ನು ನಾಚಿಸುವಂತೆ, ಮರ್‍ಗಟ್ಟಿ ನಿಂತಿರ್‍ವು ಬಲ್ಲಾರಿಯನ್ನು ತೀರಾ… ಯಬ್ಡ ನೋಡ್ದಿಂಗೆ ನೋಡುತ್ತಾ.. ಆಸ್ಪತ್ರೆ ಸೇರಿದೆ.

ಜನ್ರಲ್ ವಾರ್ಡಿನಲ್ಲಿ… ಅಮ್ಮ, ಕೋಮ್ದಲ್ಲಿ ಮಲ್ಗಿದ್ದಳು. ವಟ್ಪಯೊಳ್ಗೆ ಕೈ ಆಕಿ, ಯಾರೋ ಕಿವಿಚಿದಂತಾಯಿತು. ಕಣ್ಣೀರ್‍ನಿ ಕಟ್ಟೆ ವಡಿಯಿತು. ಕಣ್ಣಾಗ ತುಂಗೆ, ಭದ್ರೆ, ಗಂಗೆ, ಕಾವೇರಿ… ಅರಿಯತೊಡಗಿದ್ಳು…

‘ಅಮ್ಮನಾ… ಅಮ್ಮನಂತೆ. ಬಾಳಾ ಭಾವಂಕ್ದಲಿ… ನೀವ್ಯಾರು ಕಣ್ಣರಪ್ಪೆಯಂತೆ, ಯೆಂಟೂವರೆ ದಶಕ್ದ ಗಾಂಧಿ ನೋಟ್ನಿಂತೆ ತುಂಬಾ ಬೆಲೆಬಾಳ್ವು ಅಮ್ಮನ ಜೋಪಾನ ಮಾಡ್ಲಿಲ್ಲವಾದ್ದರಿಂದ, ಯೀಗ ಯೆಣ್ವಾಗಿ ಮಲ್ಗಿರ್‍ವು ವಳ್ಗೆ ಯೆರ್ಡನೇ ಭಾರಿ ಲಕ್ವ ವಡೆದಿದೆ… ಅಮ್ಮನ ವುಸ್ರು, ಬೆವ್ರು, ರಕ್ತ, ಮಾಸ, ಆಸೆ, ಆಕಾಂಕ್ಷೆ, ಶಕ್ತಿ, ಅಷ್ಟೇ ಯೇಕೆ… ಯೀಗೇ ಬಡಜೀವವಾ ನೀವೆಲ್ಲ ಯೀರಿದ್ರೂ… ನೀವ್ಯಾರು ವಂದು ದಿನಾನೂ… ಅಮ್ಮನ್ಗೆ ಸುಡುಸುಡಾದು ಗಂಜೀ ಕೂಡಾ ಬಸ್ದಿಡಲಿಲ್ಲ…

‘…ನಿನ್ಗೆ ಆಕೋ ಬಾನಾನ… ಬೀದ್ಲಿ ಆಡ್ಡಾಡೋ ಕೋಳಿ, ನಾಯಿ, ಕಾಗೆ, ಹದ್ದು, ಅಂದ್ಗಿಳ್ಗೆ ಆಕ್ದಿರೆ ರವ್ವಾಟು ಪುಣ್ಯನ್ನಾ ಬಂದೀತು! ವಬ್ರು ಕಣ್ಗಾ ಸುಣ್ಣ, ಮತ್ತೊಬ್ರು ಕಣ್ಗೆ ಬೆಣ್ಣೆ… ಯಾವ ಮಕ್ಳಿಗೆ, ಸೊಸ್ತ್ರಿಗೆ ಕೆನ್ನೋಲ, ಮಾಗಾಣಿ, ಬೆಳ್ಳಿ, ಬಂಗಾರ, ವಲಾ, ಮನೆ… ಮಠ… ಗಳ್ಸಿ ಕೊಟ್ಟಾಳೆ. ತಾನಾಯ್ತು, ತನ್ನ ಬದ್ಕಿನಾ… ಪುರಾಣ, ಅರಿಕಥಿಯಾಯ್ತು…’ ಯೆಂದು. ಅಮ್ಮನ ಬೆನ್ಗೆ ಚುಚ್ಚಿ… ಚುಚ್ಚಿ… ಯೀ ಸ್ಥಿತಿಗೆ ತಂದ್ರೀ…’ ಯೆಂದು, ಆರಾಡಿ, ಕೂಗಾಡಿ, ಕಣ್ಣೀರಿಟ್ಟೆ.

ಅಮ್ಮ… ನಾ ಕೆಟ್ಟ ಜನ್ರನ್ನು, ದೃಶ್ಯವನ್ನು ನೋಡ್ಲಾರ್‍ನೆಂಬಂತೆ ಬಿಗಿಯಾಗಿ… ಕಣ್ಣಾ ಮುಚ್ಚಿದ್ಲು. ಯೀ ಜನ್ರಿಗೆ ಯೆಷ್ಟು ವುಪ್ದೇಶ, ಬಡ್ಕೊಂಡ್ರು… ನಾಯಿಬಾಲ್ದ ಡೊಂಕಿನಂಥವ್ರೇ…. ಯಿಡಂಬಿ ರಕ್ಕಸಿ… ತಾಯ್ಗಿಂಡ್ರೇ… ಕೆಡುಕ್ರೇ… ಶಕುನಿಯಂಥವ್ರೇ… ಯೆಂದು, ಅಮ್ಮ ಮೂಕಿಯಂತೆ ಮೌನನಾಗಿದ್ದಳು…

‘ಮಗಾಽ… ತಮ್ಮಾ… ಯಲ್ಲಪ್ಪ… ಯಲ್ಲಣ್ಣ… ನಿನ್ಗೆ ತುತ್ತು ಅನ್ನ ಕೊಡೋ ಸಕ್ತಿ ನಿನ್ನಲ್ಲಿದೆ. ಯಾರ್‍ಗೆ ಯಿಲ್ಲೆನ್ಬೇಡ. ಯಲ್ಲಾರ್‍ನ ನೋಡು! ನಿನ್ಗೆ ದೇವ್ರು ನೋಡ್ತಾನೆ. ನಮ್ಗೆ ನಿನೊಂದಿಲ್ಲದಿದ್ದರೆ… ಭಿಕ್ಕಿ ಬೇಡಿ, ಮನೆಮನ್ಗೆ ಆದ್ಕೊಂಡು ಇನ್ಬೇಕಾಗಿತ್ತು… ಮಗಾಽ…’ ಅಮ್ಮ ತೋಡಿರಾಗ್ದಲಿ, ನನ್ನ ಮುಂದೆ ಬಾಳ್ಸಾರಿ ಅಂದಿದ್ಲು… ಯೀಗೀಗ ತುಂಬಾ ನೊಂದು, ಬೆಂದು ನಿರಾಸೆ, ಜಿಗುಪ್ಸೆ… ಬೇಸ್ರಾದಿಂದಲೇ…

‘ಯೀ ಪ್ರಶಸ್ತಿ, ಗೌರ್‍ವ, ಫಲಕ್ಗಳು, ಸನ್ಮಾನ್ಗಳು, ಶಾಲ್ಗುಳು, ಬಿರುದು, ಬಾವ್ಲಿಗಳೂ… ಕೊನೇ ಗಳ್ಗೆಯಲಿ ವುಪ್ಗೆ ಬರ್‍ವಾಲ್ಲಾ… ವುಣ್ಸೆಣ್ಗಿ ಅಗವಲ್ಲಾ… ಮಗ ಯಲ್ಲನ್ನ ಆದಂಗೇ ಆಗ್ತಾವೇನಪ್ಪಾ…?!’ ಯೆಂದಿದ್ಲು.

ಯೀ ಯಲ್ಲ ಮಾತ್ಗುಳಲ್ಲಿ ಜೀವ್ನ ಸತ್ಯ ಸೌಂದರ್ಯ, ದರ್ಶನವಿತ್ತು. ಅಮ್ಮನ ಅನುಭವ್ದ ಸಾರ್‍ಸರ್ವಸ್ವಾದಾ… ಮುಂದೆ, ನಾವೆಲ್ಲ ವಿಶ್ವಕೆ ಭಾರತ್ದ ಕೊಡುಗೆಯಿದ್ದಂತೆ!

‘ಯೀ ಅಳ್ಳಿಕೊಂಪ್ಗೇನು ತ್ವಂಬ್ಲೈತಂತಾ ಬಿದ್ದಳೋ? ಸರ್ಕಾರ್ದ ಕೆಲ್ಸದಲ್ಲಿ ಸಾವ್ರ… ಸಾವ್ರ ಸಂಬ್ಳ ಯೇಣ್ಸೋ ಮಗ್ನ ಪ್ರಾಣ್ಕೆ ಬಿದ್ರಾಗಲ್ವೇ? ಕೂಲಿ ನಾಲಿ ಮಾಡಿ. ವಟ್ಟೆ ವರ್‍ಕೋಂಬ್ತಾರ್‍ತಾಗ… ಯೇನು ಗುದಿಗೈತಾ…??’ ಯೆಂದು, ಯೆಗ್ಸಟ್ಟೆ ಮಾತ್ಗುಳ್ನ ಮಕ್ಳು ಸೊಸ್ತ್ರಿ, ಮೊಮ್ಮಕ್ಕು… ಅಂದಾಗೇ… ಅಮ್ಮ ಯದೆ ಗುಂಡ್ಗೆ ವಡ್ಕೊಂಡು… ಆಸ್ಪತ್ರೆ ಸೇರಿದ್ದು. ಅಮ್ಮ ಅತ್ತಾಗಾಂತಾಽ… ಯೀ ಯಿಂದೆ ಯೆಲ್ಲಾ ಯೇಳಿದ್ಲು.

‘ನನ್ಗೆ ಮನೆಮುಂದ್ಲು ವಲ್ದುತಾಕ ಕಳ್ಸಿ… ಯಿತ್ತ ವುಪ್ಪಿಟ್ಟು ಯಿಟ್ಟಿಚ್ಚಿದ ಮೆಣ್ಸನಕಾಯಿ, ಅತ್ತಿಕಾಯಿ ಮಾಡುಂಡು, ಟೀ ಸೋಸಿ ಕುಡ್ದಿರೆ… ಯಿದ್ಕೆ ಮಕ್ಳು, ಸೊಸ್ತ್ರು, ಮೊಮ್ಮಕ್ಳು ಅಂತಾರೇನು… ಮಗಾ…?? ಯೀ ಜೀವವಿನ್ನು ಯಿರ್‍ಬೇಕೆ? ಯಿಷ್ಟು ವಯಸ್ಸಾದ್ರು ಕಣ್ಣುಗಳು ನಿಚ್ಚಳವಾಗಿ ಕಾಣಿಸ್ತೀವೆ, ಕಿವ್ಗಿಳು ಭೇಷ್ ಕೇಳುಸ್ತೀವೆ, ಕೈ, ಕಾಲು, ವಟ್ಟಿ, ಯೆಲ್ಲ ಗುಂಡುಕಲ್ಲಾಗಿವೆ. ಯೇನು ತಗೊಂಡು, ಯೇನ್ ಮಾಡ್ಲಿ ಮಗಾ…?? ಅಣೇಬರಾ… ನೆಟ್ಗಿಲ್ಲ! ನಾ ಯಾರ್‍ನ ಬಾಳಾ ನಂಬಿದ್ದೋ… ಅವ್ರೇ ಚೂರೀ ಯಿರ್‍ದ್ರು..!’ ಅಮ್ಮನ ಕಣ್ಣೀರು ಸಿಟ್ದೆ.

ನಾನಿಲ್ವೇನಮ್ಮಾ ಕರ್ಣ, ಶ್ರವಣನಂತೇ… ನಡೀ… ನನ್ನತ್ರ ಸುಖ, ಶಾಂತಿ, ನೆಮ್ಮದಿಯಾಗಿರ್‍ವಂತೆ. ಕೌರ್‍ವರೂಪ್ದಲಿ, ಅವ್ರಿಲ್ಲಿ ರಾಜ್ಯಭಾರ ಮಾಡುಂಬ್ಲಿ. ನಮ್ಗೆ ಪಾಂಡ್ವರಂತೆ ವನ್ವೂಸವಿರ್ಲಿ, ನೀ ಅನುಭವ್ಸಿದ ಕಷ್ಟ, ನೋವು, ಸೊಸ್ದಿ ಬಡತನ… ಯಿನ್ನಾದ್ರೂ ಸಾಕು! ಬರೀ ಅಭಿಮಾನ್ದಿಂದಾ, ಸನ್ಮಾನ, ವಗ್ಳಿಕೆಯಿಂದಾ… ಕಲಾವಿದರ ವಟ್ಟೆ, ಬಟ್ಟೆ, ತುಂಬಲ್ಲ. ಸುಖ, ಶಾಂತಿ, ನೆಮ್ಮದಿ ಸಿಗಲ್ಲ. ಯಿದ್ದಾಗ ತುತ್ತು ಕೂಳ್ಕೊಡದವ್ರು… ಸತ್ಮೇಲೆ ಹಾರ, ತುರಾಯಿ, ಆಕಿ, ರಜೆ ನೀಡಿ, ಕೈಜಾಡ್ಸಿದ್ರೆ ಋಣ ತೀರಲ್ಲ… ಯೆಂದಿದ್ಲು…

ನನ್ಗೆ ನೌಕ್ರಿ ಸಿಕ್ಕ ತಕ್ಷಣ, ಅಮ್ಮ ಯರ್‍ಡು ಮೂರ್ಸಾರಿ… ನನ್ಜೊತ್ಗೆಯಲ್ಲಿದ್ಲು. ಆರುತಿಂಗ್ಳು, ವರ್‍ಸು ಕಳಿಲಿಲ್ಲ. ಅಳ್ಳಿನ, ಮಕ್ಳುನ, ಮೊಮ್ಮಕ್ಳುನ… ಸೊಸ್ತೆರಿಬ್ರ್ನಾ ನೆನ್ಸಿಕಂಡು…

‘ದಿನ್ಪರ್ತಿ… ಸಿರಾ, ವುಪ್ಪಿಟ್ಟು, ದ್ವಾಸೆ, ವುರ್ಲುಗಡ್ಡೆ, ಕಲ್ಸನ್ನ, ಪೂರಿ, ವುತ್ತಪ್ಪ, ಸಕ್ರಿ ಟೀ… ಕಾಫೀ… ಬರೀ ಬಾನ, ಚಾಪಾಟ್ಲು… ಯಣ್ಣೆ ಬದುಕಿಂದು ತಿಂದು… ತಿಂದು… ಯಂಗೆ ಕೈಕಾಲು ಮಕ ಬಾತ್ಕೊಂಡು… ಗಲ್ಲೇ ಪಡ್ಗು ಆಗೀನಿ ನೋಡು ಮಗಾಽ…’ ಯೆಂದು, ಪದ ಮಾಡಿ ವರ್‍ಟು ಬರ್‍ವು ಅಮ್ಮನ್ಗೆ. ಕೆರ್‍ಕೆಟ್ಟಿ ಕಟ್ಟಿ, ನಿಲ್ಸಿಲು ನನ್ಗೆ ಮನಸ್ಸಾಗ್ಲಿಲ್ಲ.

ಮುಪ್ಪಿನ ಕಾಲ್ದಲ್ಲಿ, ಯೆಲ್ಲಿ ಯೇಗೆ ಅನ್ಸುತ್ತೋ… ಆಗಿರ್‍ಲಿಯೆಂದು, ಅಮ್ಮನ್ಗೆ ಯೆಂದೂ ಅಡ್ಡಿಯಾಗಲಿಲ್ಲ! ಅಮ್ಮನ ಮೇಲಿನ, ಅತೀವವಾದ ನನ್ನ ಪ್ರೀತಿನ, ಬಾಳಾ ದುರೂಪಯೋಗಪಡ್ಸಿಕೊಂಡವರೆಲ್ಲ… ಯಿಗ್ಲೂ ಯೀ… ಅಮ್ಮನ ಮುಂದಿಟ್ಟುಕೊಂಡೇ… ನನ್ನ ಬಕ್ಣಕೆ ಕತ್ತಿ ಆಕ್ಲು ಬರಿಗೈಲಿ, ತುದಿಗಾಲಲಿ… ಕೌರ್‍ವ ಸೈನ್ಯದಂತೆ ಕೈ, ಬಾಯಿ, ನಾಲ್ಗೆ… ಚಾಚಿ ನಿಂತಿದ್ರು. ಯಿವ್ರಿಗೆಲ್ಲ, ಖಂಡಿತವಾಗಿಯೂ ಯೀ ಅಮ್ಮ ಬೇಕಿಲ್ಲ. ರೊಕ್ಕದ ಮುಂದೆ, ಯಾವ ಅಮ್ಮ ಬೇಕಿಲ್ಲವೆಂದು, ಯಿವ್ರು ತಿಳಿದಿರುವುವುದರಿಂದಲೇ ರಕ್ಕನಾ, ಬಾನ, ಬಟ್ಟೆನಾ ಪ್ರೀತಿಸುತ್ತಿದ್ರು… ರೊಕ್ಕವೊಂದು ಬಿಟ್ಟು, ಅಮ್ಮ ಕಣ್ಣಿಗೆ ಕಾಣ್ಸಲೇ ಯಿಲ್ಲಾ… ಯೆನ್ಸಿತು.

‘ನೀ ಬರಾ ದಾರ್‍ನಿ ಕಣ್ಣಲ್ಲಿ ಕಣ್ಣಿಟ್ಟು ನಾವೆಲ್ಲ… ವೂಟ, ತಿಂಡಿ, ಬಿಟ್ಟು ದಿನ್ವಿಡೀ ಕಾದ್ವಿ ಮುಂಜಾಲಿಂದ ಪ್ರತಿದಾನ್ಕಿ… ವುದ್ರಿ ಯೀಳಿ ಯೇಳಿ… ಕೈಚಾಚಿ… ಸುಸ್ತಾಗಿದ್ವಿ ನೀ ಬರಾದು ಯೀವತ್ತು ತ್ವಟ್ಗು ತಡ್ವಾಗಿದ್ರೆ ನಮ್ಗತಿ ತಣ್ಣೀರೇ ಗತಿ!’ ಯೆಂದು, ತಮ್ಮಂದ್ರು… ಅಕ್ಕಂದ್ರು… ತಂಗಿ… ಬಂಧು ಬಳ್ಗವೆಲ್ಲ ಯಿಂದ್ಲು ರಾಗ್ನೇ ತೆಗಿದ್ರು.

ಯಲ್ರುನಾ… ವಂದ್ಪಾ ನೋಡ್ದೆ. ಬಲ್ಲಾರಿ ಬಿಸ್ಲಿಗೆ, ವಂದೇ ದಿನ್ಕೆ, ಸುಸ್ತಾದಂತೆ ಕಂಡುಬಂದ್ರು.

‘ಕೈಯಾಗೆ ಕಾಸಿಲ್ಲ, ಕೊಯ್ ನನ್ಮೂಗು…’ ಯಂದಂತೆ… ಯಿವ್ರೆಲ್ಜ ಸುಸ್ತಾಗ್ದೆ ಯೇನಣ್ಣ? ಅಮ್ನ ನೆಪ್ದಲಿ, ಯೇನನ್ನಾ… ನೀ ಕೊಡ್ತೀಯಾ ಯೆಂಬ್ಸಾಲಿ ಯಲ್ರು ಹಂದ್ಗಿಳಂಗೆ ಕಪ್ಪೆಗಳಂಗೆ ಕುಪ್ಪೆಯಾಗೇರೆ…’ ತಮ್ಮ ಸೇಕ್ರಿ, ನನ್ನ ಕಿವಿಯಲ್ಲಿ ವುಸ್ರಿದ.

ಯೀ ಅಂತರಿಕ ಸೆಡ್ವುಗಳ ಬದಿಗೊತ್ತಿ. ಯಲ್ರುದ ವೂಟ, ತಿಂಡಿ, ಬಸ್ಸು ಚಾರ್ಜು, ಆಸ್ಪತ್ರೆಯ ಕರ್ಚು ವೆಚ್ಚ ನೋಡ್ದೆ. ಯಾರ್‍ಗೂ ತೃಪ್ತಿಯಿಲ್ಲ. ನೋಟ್ಗುಳನ್ನು ತಿರುತಿರ್‍ವಿ ಯೇಣ್ಸಿ… ಯೇಣ್ಸಿ… ನನ್ನ ಮಕ ನೋಡುತ್ತಿದ್ದರು. ವಬ್ರಿಗೆ… ಯಿಬ್ರಿಗೆ ಆದ್ರೆ… ಕೈ ಬಿಚ್ಚಿ… ಕೊಡಬಹುದು. ಯೆಲ್ರು ಯಿದ್ದವರೇ… ವಬ್ರೂ ರೊಕ್ಕ ಬ್ಯಾಡ ಆನ್ನಿಲಿಲ್ಲ. ಯಿಂಥಾ ಪರಿಸ್ಥಿತಿಯಲ್ಲೇ ಸೋಜಿಗದ ಸಂಗತಿ ಯಿಲ್ಲಿ ಜರುಗಿತು…

ಅಮ್ಮನ ಬೆಡ್ಡಿನ ಪಕ್ಕದ ಬೆಡ್ಡಿನ್ಮೇಲೆ, ನಮ್ಮ ಬೊಮ್ಮಗಟ್ಟೆಯ ವುಲಿಕುಂಟಣ್ಣನ ಮಗ್ಳು ಕೋಮದಲ್ಲಿ ಮಲಗಿದ್ದಾಳೆ. ಯೀ ವುಲಿಕುಂಟಣ್ಣ… ನಮ್ಮಮ್ಮನ ಸ್ವಂತ ಅಕ್ಕನ ಮಗ. ಯಿವ್ರಾ ಪರಿಸ್ಥಿತಿ ಕಣ್ಣಾರೆ ಕಂಡು, ಕಣ್ಣುಕಪ್ಪಾಳಾಡಿದ್ವು.

ಯೀಗ್ಗೆ ಯಿಪ್ಪತ್ಮೂರು ವರ್‍ಸುಗಳ ಯಿಂದೆ… ಬಾಳಾ ಶ್ರೀಮಂತಿಕೆಯಲಿ ಮೆರ್‍ದೆ ಮನೆತನ. ಆಗ ಅಮ್ಮನ ಕೊನೆಯ ಆಸೆಯಂತೆ, ತಂಗಿ ರತ್ನವ್ವಳನ್ನು ಯಿವ್ರಾ ಮನ್ಗೆ ಕೊಟ್ಪು, ಮದುವೆ ಮಾಡಿ, ತೌರು ಕಡೆಯಾಗದಿರಲೆಂದು, ಆಸೆ ಪಟ್ಲಿದ್ದು ನಿಜ. ರಾಯಭಾರಿಯಾಗಿ ನಾನೇ ಬೊಮ್ಮಗಟ್ಟೆಗೆ ವೋಗಿ, ಅಗ್ಲುರಾತ್ರಿ ಸಂಬಂಧ ಬೆಳ್ಸಲು ತುದಿಗಾಲಲ್ಲಿ ನಿಂತೆವು. ಶ್ರೀಮಂತಿಕೆಯ ಮುಂದೆ, ನಾವು ತೃಣ ಮಾತ್ರವಾಗಿ… ಲೆಕ್ಕವಿಲ್ಲವಾದೆವು. ಅಂದು ಮುರಿದು ವೋದ ಸಂಬಂಧವಿಂದು, ಮತ್ತೆ ಸಾವಿನಲ್ಲಿ ವಂದುಗೂಡಿದ್ದು… ದೇವ್ರಲೀಲೆಯೆಂದು ಭ್ರಮ್ಸಿದೆ. ನಾಂತೂ… ಸೋತು ಶರಣಾಗತನಾಗಿ, ಅವ್ರ ಬೆಡ್ಡಿನ ಬಳಿ ವೋಗಿ, ಬಾಯಿತುಂಬಾ ಮಾತಾಡ್ಸಿ, ಹಣ್ಣು ಹಂಪಲು, ಯೆಳನೀರು, ಹಣ್ಣಿನ ರಸ ನೀಡಿ, ಕಷ್ಟ, ಸುಖ ಹಂಚಿಗೊಂಡೆವು.

ಶಾಲಾ-ಕಾಲೇಜು ದಿನಗಳಲ್ಲಿ… ಬೇಸಿಗೆ ರಜೆ ಬಿಟ್ಟಾಗ, ಅಮ್ಮನ ಆಣತಿಯಂತೆ, ನಾನು ಐದಾರು ಸಾರಿ ಬೊಮ್ಮಗಟ್ಟೆಗೆ ವೋಗಿ. ಸ್ವಲ್ಪ ದಿನಗಳನ್ನು ಅಲ್ಲಿ ನೆಮ್ಮದಿ, ಸುಖ, ಶಾಂತಿಯಿಂದ ಕಳೆದು, ಬರುತ್ತಿದ್ದೆ. ಅವ್ರ ಅನ್ನದ ಋಣ ಮಾತ್ರ ನನ್ನ ಮೇಲಿತ್ತು. ಅಮ್ಮ ಕೂಡಾ… ತೌರ್‍ಮನೆಯವರೆಂದ್ರೆ… ಪ್ರಾಣ ಬಿಡುತ್ತಿದ್ದಳು. ಯೀಗಾಗಿ ನನ್ಗೂ… ಯಿವ್ರೆಲ್ಲ ಜೀವವಾಗಿದ್ರು. ಅದ್ಕೆ ಅವ್ರ ಸೇವೆಗೆ ತುದಿಗಾಲಲ್ಲಿ ನಿಂತೆ.

ಮೂರು ದಿನವಾಯಿತು.

ನಮ್ಮಣ್ಣ ವುಲಿಕುಂಟೆಣ್ಣನ ಮಗಳು ತೀರಿದ್ಲು. ದುಃಖದ ಕಟ್ಟೆಯೊಡೆಯಿತು. ಸಾವಿನಲ್ಲಿ ಯೆರಡು ಕುಟುಂಬ್ಗಳು ವಂದಾದುವು.

‘ತಮ್ಮಾ… ಆರು ತಿಂಗ್ಳಿಂದ… ತಂಗಿಗೆ ಸಂಡೂರು, ಕೂಡ್ಲಿಗೆ, ಚೋರುನೂರು, ವಸಪೇಟೆ, ಯೀಗೇ ಯಿಪ್ಪತ್ತು ಸಾವಿರ್ಗಟ್ಲೆ ಕೈಬಿಟ್ಲು… ಯಿಪ್ಪತ್ತು ವರ್ಸುದ ಮಗ್ಳೂ ಕೈಬಿಟ್ಲು… ಸಾಲ ಸೋಲ್ಮಾಡಿ, ಭಾಳಾ ಮೆತ್ಗಾಗ್ವಿ… ಯೀಗ ಯೆಣ್ಸಾಗ್ಸಿಲು, ಆಸ್ಪತ್ರೆಯ ಕರ್ಚು ವೆಚ್ಚಕ್ಕೆ ರೊಕ್ಕವಿಲ್ಲ! ರೊವ್ವಾಟು ಸಾಲ್ವಾಗಿ, ಗರ್ದಾಗಿ, ರೊಕ್ಕಿದ್ರೆ ಕೊಡು ತಮ್ಮಾ… ಮರ್‍ಳಿ ಕೊಡ್ತೀನಿ…’ ಯೆಂದೌ, ಅಣ್ಣ ಹುಲಿಕುಂಟೆಣ್ಣ, ಬಾಯಾಕಿದ.

ಯಿದೊಳ್ಳೆ ಅವಕಾಶ… ಅವ್ರಿಗೆ ಸಹಾಯ ಮಾಡ್ಲು… ಸಣ್ಣಪುಟ್ಟದ್ದಕ್ಕೆ ಕೊಡ್ಲು ಹಾತ್ವಾರೆದು ಸುಮ್ಮನಾಗಿದ್ದವನು, ಯೀಗ ಜೋರಿಲೇ, ಜೇಬಿಗೆ ಕೈ ಆಕಿ, ರೊಕ್ಕ ತೆಗಿಬೇಕು… ಅಷ್ಟ್ರಾಗ ತಂಗಿ ರತ್ನವ್ವ, ತಮ್ಮಂದಿರೂ… ಅಕ್ಕ ಮಾವಂದಿರು… ನನ್ನ ದುಂಡ್ಗೆ ಮುತ್ತಿದ್ರು… ನನ್ನ ವಾರ್ಗೆ ಕರೆದ್ರು…

ಯೆಲ್ಲಿ ಮದ್ಲು ನಮ್ಮಗಳ ಅಸಿವು, ನೀರಡ್ಕೆನ ಅನುವು, ಆಪತ್ತು, ಬಡ್ತಾನಾನ, ತೀರ್‍ಸಪ್ಪಾಽ… ಯೇನ್ ಯಡ್ಡಂ ಸೆಡ್ಡಮ್ಲಿ… ಅವ್ರಿಗೆಲ್ಲ ರೊಕ್ಕ ಕೊಡಲೋಗ್ತಿಯಲ್ಲಾ…?! ಯೆಂದು, ಯೆಲ್ರು… ಸೆರ್‍ಗು ಅಂಗೈ, ಬೊಗ್ಸೆ, ಟುವ್ವಾಲೊಡ್ಡಿ ಸಾಲ್ಗಟ್ಟಿ ನಿಂತ್ರು!!

ನಾನಂತೂ ದಂಗುಬಡಿದು ವೋದೆ. ಸಣ್ಣ ನೌಕ್ರಽ… ಸಂಬ್ಳಾ ಸಾರ್‍ಗೆಯಲ್ಲೇ… ಜೀವ್ನ ವರೇನು! ಆ ಕ್ಷಣ… ಮೇಲ್ಕೆಳ್ಗೆ ನೋಡ್ದೆ.

‘ನೀ ನಮ್ಗೆ ರೊಕ್ಕ ಕೊಡುದಿದ್ರೂ ಪರ್‍ವಾಗಿಲ್ಲ ಅವ್ರಿಗೆ ಮಾತ್ರ ಕೊಡ್ಬೇಡ. ಯಿಂದ್ಲುದೆಲ್ಲ ಮರ್‍ತು ಮಜ್ಗೇಕೆ ನೀರಾಕ್ತಿಯಾ? ನೀ ಬೆಣ್ಣೆ ಕರ್‍ಗಿದಂಗೆ ಕರ್‍ಗಿ ರೊಕ್ಕಗಿಕ್ಕ ಕೊಟ್ಟರಂದ್ರೆ ನೋಡು… ಅಮ್ಮನ್ಮೇಲೆ ಆಣೆ. ಕರುಬಳ್ಳಿಗೆ ಬೆಲೆಕೊಡ್ದೆ, ರೊಕ್ಕಕ್ಕೆ ಮಾನ್ಯತೆ ನೀಡಿ, ಯಿದೇ ವುಲಿಕುಂಟೆಪ್ಪನೇ ಮದುವೆಗೆ ಅಡ್ಡಗಾಲು ಆಕಿದ್ನೆಂಬ್ದು ಮರ್‍ತಿಯೇನು? ಆಗಿನ ಸೀಮಂತಿಕೆ, ಧರ್ಪ, ಯೀಗೆಲ್ಲಿ? ನೀನೀಗ ಅವ್ರಿಗೆ ದಮ್ಡಿ ಕೊಟ್ರೇ ನಾವೆಲ್ಲ… ನಮ್ ನಮ್… ವೂರ್‍ಗುಳ್ಗೆ ವಂಟ್ವಿ…! ಯಿಗೋ ಪೆಂಟೆ ಕಿತ್ತಿವಿ…! ನೀನುಂಟು… ಅಮ್ಮನುಂಟು… ಆ ಬೊಮ್ಮಗಟ್ಟೆಯವ್ರುಂಟು…’ ಯಲ್ರು ಕುತ್ಗೇಮಟ್ಟ ಕಾರಿಕೊಂಡ್ರು.

ಪೂರ್ಣ ಸತ್ಯ… ಬಾಳ ಜನ್ರಿಗೆ ತಿಳಿದಿರಲ್ಲಿಲ್ಲ ದುರಂತವೆಂದ್ರೆ ಸತ್ಯ ಯಾರಿಗೆ ಬೇಕಾಗಿರುವುದಿಲ್ಲ. ಚಾಡಿ ಮಾತು, ಬಹಳ ಜನ್ರಿಗೆ ಪ್ರಿಯವಾಗಿರುತ್ತದೆ. ಸುಳ್ಳನ್ನೆ ಸತ್ಯವೆಂದು ನಿಜವೆಂದು ನಂಬಿರುತ್ತಾರೆ ನಂಬ್ಸಿರುತ್ತಾರೆ. ಕ್ರಾಸ್ ಚೆಕ್ ಮಾಡಲು ಯಾರು ಹೋಗುವುದಿಲ್ಲ. ಮೇಲ್ನೋಟಕ್ಕೆ ತೌರುಮನೆಯವ್ರು ರತ್ನವ್ವಳನ್ನು ಮದುವೆಯಾಗಲಿಲ್ಲವೆಂಬುದು ಮಾತ್ರ ಗೊತೈತಿ. ಆದ್ರೆ ರತ್ನವ್ವಳಿಗೆ ಮನಸ್ಸಿರಲಿಲ್ಲ! ಶಕುನಿಯಂತೆ ಬೆನ್ನತ್ತಿದ ಬೇತಾಳವಾಗಿ ಬಂದಿದ್ದ, ಸ್ವಂತ ಬಜ್ಜೆಪ್ಪಮಾಮ, ಅಕ್ಕ ಯೆಲ್ಲವ್ವ, ರೊಕ್ಕ ಕೊಟ್ಟು ನೀ… ಯೀ… ಸಂಬಂಧಾ ಮಾಡೋದಾದ್ರೆ ನಾವೀ ಮದುವೆಗೆ ಬರಲ್ಲವೆಂದು ಪಟ್ಟುಯಿಡಿದು ಜರ್‍ಗೋ ಕಲ್ಯಾಣ್ದ ಕೆಲ್ಸಕ್ಕೆ ಕಲ್ಲು ಆಕಿದ್ರು. ತಂಗಿ ರತ್ನವ್ವ ಮುಂಚ್ಗುಟ್ಟಿದ್ಲು ಅಂತಾ… ಅವ್ರು ಕೇಳ್ದಿ ರೊಕ್ಕ… ನಾ ಕೊಡ್ಲಿಲ್ಲ. ಸೆಡ್ವಿಲಿ ಹಠಕೆ ಬಿದ್ದು ನೌಕ್ರಿಯಲ್ಲಿರುವ ಗಂಡೆಂದು, ಅವ್ರು ಕೇಳ್ದಿ ರೊಕ್ಕಕ್ಕಿಂತ ಯರ್‍ಡುಪಟ್ಟು ಜಾಸ್ತಿಕೊಟ್ಟು, ಗೋಡ್ಗೆಳ್ದು, ತೆಗೆದು, ಕುಂಡ್ಯಾಕೆ ಬಡ್ಕೊಂಡಿದ್ದು ಬೇರೆ ಕತೆ!

ನಮ್ಮಾಟನಽ ಯಿಡೀ ಆಸ್ಪತ್ರೆಯ ಜನ್ರೆಲ್ಲ, ಬೆಪ್ಪುಲ್ರ್‍ಆಗಿ ನೋಡುತಾ ನಿಂತಿತ್ತು! ಆ ವೊಂದುಕ್ಷಣ, ನಾ… ಪಾತಾಳಕ್ಕಿಳಿದೆ…! ಯಿಡೀ ಆಸ್ಪತ್ರೆಯ ಆಕ್ರಂದನ ಕಿವಿಗಪ್ಪಳಿಸತೊಡ್ಗಿತು. ರೋಗಿಗಳ, ನಿಶ್ಯಕ್ತರ, ಬಡವ್ರ, ಕಟ್ಟಕಡೆಯವ್ರ, ದೀನರ, ದಲಿತರ, ನಿರ್ಲಕ್ಷಿತರ, ಶೋಷಿತರ, ಅಮಾಯಕತನ, ಅಸೂಯೆ, ಆಕ್ರೋಶ, ಅಸಹನೆ, ಸೇಡು, ಸಂಕಟ, ಸೆಡ್ವು… ಸಣ್ಣತನ್ಗಳು ಯೆಷ್ಟೊಂದು ಭಯಂಕರ?! ಯೆಲ್ಲರ್‍ಗೆ ನೆರವಾಗ್ವು ಶಕ್ತಿ ಖಂಡಿತ ನನ್ನಲ್ಲಿಲ್ಲ! ಅವ್ದು… ನಾಯಾ… ಮರ್‍ದ… ತಪ್ಲು?? ಮುಂದಿನ ಜನ್ಮವೊಂದಿದ್ರೆ… ಆಗ್ಲಾದ್ರು ಯೆಲ್ರುಗೂ ನೇರವಾಗ್ವು ಶಕ್ತಿ ನನ್ಗೆ ಬರ್‍ಲಿ…! ನನ್ನಮ್ಮನಿಗೆ ಮಗನಾಗಿ ಮತ್ತೊಮ್ಮೆ ವುಟ್ಟಿ ಬರ್‍ಲಿಯೆಂದು ಕಣ್ಣಂಚಿನಲ್ಲಿದ್ದ ನೀರು ವರ್‍ಸಿಕೊಳ್ತಾ… ಅಮ್ಮನ, ಬೆಡ್ಡಿನ ಬಳಿ ಕುಸ್ದು ಕುಳ್ತೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಂಚಕಾರ
Next post ಕಾರಂಜಿ ಕೆರೆಯ ಬಳಿ

ಸಣ್ಣ ಕತೆ

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

cheap jordans|wholesale air max|wholesale jordans|wholesale jewelry|wholesale jerseys