ಚಿತ್ರ: ಎಂ ಜೆ ಜಿನ್

ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ.

ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ. ಹುಡುಗಿ ಕಂದುಬಣ್ಣದ ವರಾದರೂ ಲಕ್ಷಣವಾಗಿದ್ದಳು. ಅವಳ ಮೈ ಮಾಟ, ಹದಿನೇಳರ ವಯಸ್ಸು ಅವಳಿಗೊಂದು ವಿಶಿಷ್ಟ ಸೌಂದರ್ಯ ಕೊಟ್ಟಿದ್ದವು. ಅವಳ ನೀಳ ಕೇಶರಾಶಿ, ಎತ್ತರದ ನಿಲುವು, ಅವಳ ಆಧುನಿಕ ವೇಷಭೂಷಣಕ್ಕೆ ಅವಳನ್ನು ನೋಡಿ ವಯಸ್ಸಿನ ಹುಡುಗರು ಮಾರುಹೋಗುವ ಹಾಗೆ ಇದ್ದಳು.

ಕೊರಿಯರ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಇಪ್ಪತ್ತೊಂದು ವಯಸ್ಸಿನ ಬಾಲೂಗೆ ಹೃದಯದಲ್ಲಿ ಪ್ರೇಮಾಂಕುರವಾಗಿ ಹುಡುಗಿಯರನ್ನು ಕಣ್ಣುಹಾಯಿಸಿ ನೋಡುವ ತಡವಾಗಿತ್ತು.

ಈ ಕಾಲೇಜಿನ ಹುಡುಗಿ ಅವನ ಕಣ್ಣಿಗೆ ಬಿದ್ದಿದ್ದು ಮೂರು ತಿಂಗಳ ಕೆಳಗೆ. ಅಷ್ಟರಲ್ಲಿ ಅವಳು ಚಿರಪರಿಚಿತಳು. ಅವಳ ನೆರಳನ್ನು ನೋಡಿ ಕೂಡ ಅವಳು ತಾನು ಪ್ರೀತಿಸುತ್ತಿರುವ ಹುಡುಗಿ ಅವಳೇ ಎಂದು ಮನ ಗೊಳ್ಳುತ್ತಿದ್ದ. ಮೂರು, ನಾಲ್ಕು ತಿಂಗಳುಗಳಾದರೂ ತನಗೆ ಪ್ರೀತಿ ಅಂಕುರಿಸಿದ್ದ ಹುಡುಗಿಯನ್ನು ಎಂದು ಮಾತನಾಡಿಸುವ ಅವಕಾಶ ಬಾಲೂಗೆ ದೊರೆಯಲಿಲ್ಲ. ಅವಳು ಯಾವಾಗಲೂ ಸ್ನೇಹಿತರೊಡಗೂಡಿ ಹೋಗುತ್ತಿದ್ದುದರಿಂದ ಬಾಲು ಕಾದು ಕಾದು ಎದುರುನೋಡುತ್ತಿದ್ದ. ಏಕಾಂತದ ಕ್ಷಣ ಅವನಿಗೆ ಬಗ್ಗೆ ಬರಲಿಲ್ಲ. ದಿನೇ ದಿನೇ ಅವನ ಹೃದಯದಲ್ಲಿ ಅವಳ ಬಗ್ಗೆ ಪ್ರೀತಿಯ ಹೊನಲು ಹೊಮ್ಮುತ್ತಿತ್ತು. ಅವನ ಪ್ರೇಮ ಏಕಮುಖವಾಗಿ ಬೆಳೆಯುತ್ತಾ ಹೋಯಿತು. ಅವಳಿಗೆ ಅವನ ಬಗ್ಗೆ ಕಿಂಚಿತ್ತೂ ಅನುರಾಗ ವಿರಲಿಲ್ಲ. ಆದರೆ ಬಾಲು ಛಲದಂಕ ಮಲ್ಲನಂತೆ ಪ್ರೇಮ ಭಿಕ್ಷೆಗಾಗಿ ಆಕೆಯ ಬೆನ್ನು ಬಿದ್ದಿದ್ದ.

ಅವನ ಕನಸು ಮನಸ್ಸಿನಲ್ಲಿ ಆ ಹುಡುಗಿ ಪ್ರೇಮ ಪುತ್ಥಳಿ ಯಾಗಿ ಪ್ರತಿಷ್ಠಾ ಪಗೊಂಡಿದ್ದಳು. ಚಿಂತೆಗೆ ತನ್ನ ಪ್ರಿಯತಮೆಯನ್ನು ಬಿಟ್ಟು ಯಾವ ವಿಷಯಗಳು ಅವನನ್ನು ಬಾಧಿಸುತ್ತಿರಲಿಲ್ಲ. ಚಿಕ್ಕಂದಿನಲ್ಲಿ ತಂದೆಯನ್ನು ಕಳೆದುಕೊಂಡ ಬಾಲೂಗೆ ತಾಯಿಯು ಎಷ್ಟೋ ತ್ಯಾಗ ಮಾಡಿ, ದುಡಿದು ಸಂಪಾದಿಸಿ ಬೆಳೆಸಿದ್ದಳು. ಬಾಲುವನ್ನು ಬಿ‌ಎ ಪದವೀಧರನಾಗಿ ಮಾಡುವುದರಲ್ಲಿ ಬ್ಯಾಂಕಿನ ಸಾಲವನ್ನು ಮಾಡಿದ್ದಳು. ಪದವೀಧರನಾದ ಮೇಲು ಬಾಲೂಗೆ ಗುರು ಕೆಲಸ ಸಿಗದೆ ಬಹಳ ಕಷ್ಟಪಡಬೇಕಾಯಿತು. ಕೊನೆಗೆ ಬಾಲುವಿನ ತಾಯಿ ಗೌರಮ್ಮ ಅಡಿಗೆ ಕೆಲಸ ಮಾಡುತ್ತಿದ್ದ ಮನೆಯ ಯಜಮಾನನ ಕೊರಿಯರ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿಸಿಕೊಂಡಿದ್ದ. ಬಾನುವಿಗೆ ಇತ್ತೀಚಿನ ವಿಕ್ಷಿಪ್ತತೆ, ವಿಹ್ವಲತೆ ಬಗ್ಗೆ ಗೌರಮ್ಮನಿಗೆ ಯಾವ ಅರಿವೂ ಇರಲಿಲ್ಲ. ಮಗನಲ್ಲಿ ಏನೋ ಪರಿವರ್ತನೆ ಕಾಣುತ್ತದೆ ಎಂದು ಹಲುಬಿ ಕೊಳ್ಳುತ್ತಿದ್ದರು.

“ಬಾಲು, ಮನೆಯ ದಿನಸಿ ಸಾಮಾನುಗಳು ಮುಗಿದುಹೋಗಿವೆ, ಸಾಯಂಕಾಲ ತೆಗೆದುಕೊಂಡು ಬರುವೆಯಾ?” ಎಂದಾಗ,

“ನನಗೆ ಸಾಯಂಕಾಲ ಬೇರೆ ಕೆಲಸ ಇದೆ. ನನಗೆ ಹೋಗಲು ಆಗುವುದಿಲ್ಲ” ಎನ್ನುತ್ತಿದ್ದ. ಅವನಿಗೆ ಬೆಳಗ್ಗೆ ಸಾಯಂಕಾಲ ಕೆಲಸವಾದ ಮೇಲೆ ಅದಾವ ಮಹತ್ಕಾರ್ಯವಿತ್ತೆಂದು ಗೌರಮ್ಮನಿಗೆ ತಿಳಿದಿರಲಿಲ್ಲ.

“ಏಕೋ ಏನೋ ಒಂದು ತರಹ ಇರ್ತಿಯ. ನಿನಗೆ ಏನು ಆಗಿದೆ? ನಿನ್ನ ಯಾವ ವಿಷಯ ಮನಸ್ಸನ್ನು ಭಾದಿಸುತ್ತಾ ಇದೆ? ಶಾಮರಾಯರು ಉದಾರ ಮನಸ್ಸಿನಿಂದ ನಿನಗೆ ಕೊರಿಯರ್ ಕಂಪನಿಯಲ್ಲಿ ಕೆಲಸ ಕೊಟ್ಟಿರುವಾಗ ಅದನ್ನು ಮನಸ್ಸಿಟ್ಟು ಮಾಡಿ ಮುಂದೆ ಬರಬೇಕಪ್ಪಾ” ಅಂತ ಬುದ್ಧಿವಾದ ಹೇಳುತ್ತಿದ್ದರು ತಾಯಿ.

ಬಾಲು ತಾನೇ ಕಟ್ಟಿಕೊಂಡ ಪ್ರೇಮದ ಕೋಟೆಯಲ್ಲಿ ಬಂಧಿತನಾಗಿದ್ದ. ಅವನನ್ನು ಪ್ರೀತಿ-ಪ್ರೇಮ-ಪ್ರಣಯದ ಭಾವ ತುಮಲಗಳು ಆಕ್ರಮಿಸಿ ಅವನ ಕಣ್ಣನ್ನು ಪ್ರೇಮದಿಂದ ಕುರುಡಾಗಿ ಮಾಡಿತ್ತು. ಅವನು ವಿವೇಚನೆಗೆ ಬಾಹಿರವಾಗಿ ತನ್ನ ಪ್ರಿಯತಮೆಗೆ ತನ್ನ ಮನದಾಳದ ಪ್ರೇಮ ಸಂದೇಶವನ್ನು ತಲುಪಿಸುವ ವಿಧಾನವನ್ನು ಕುರಿತು ಯೋಚಿಸುತ್ತಿದ್ದೆ. ಮನೆಗೂ ಕೊರಿಯರ್ ಕಂಪನಿಗೆ ಮಧ್ಯದಲ್ಲಿದ್ದ ಕಾಲೇಜು ಅವನನ್ನು ಈ ಹುಡುಗಿಯ ಪ್ರೇಮ ಜಾಲದಲ್ಲಿ ಸಿಲುಕಿಸಿತ್ತು. ಮನೆಯನ್ನು ಬಿಟ್ಟೆನೆಂದರೆ ಕಾಲೇಜಿನ ಬಳಿಯೇ ಹೆಚ್ಚು ಸಮಯವನ್ನು ಕಳೆದು ಮಿಕ್ಕ ಅಲ್ಪಸ್ವಲ್ಪ ವೇಳೆಯಲ್ಲಿ ಕೊರಿಯರ್ ತಲುಪಿಸುವ ಕೆಲಸ ಮಾಡುತ್ತಿದ್ದ. ಶಾಮರಾಯರು ಕೊರಿಯರ್ ತಲುಪಿಸುವುದಕ್ಕಾಗಿ ಅವರಿಗೊಂದು ಮೋಟಾರ್ ಬೈಕ್ ಅನ್ನು ಕೊಟ್ಟಿದ್ದರು. ಅವನಿಗೆ ಕೊರಿಯರ್ ತಲುಪಿಸಿ ಬರುವುದು ಬೈಕಿನಿಂದ ಆಗಿ ಸರಾಗವಾಗಿತ್ತು. ಇನ್ನುಳಿದ ಸಮಯವನ್ನೆಲ್ಲಾ ತನ್ನ ಪ್ರಿಯತಮೆಗಾಗಿ ಮೀಸಲಿಟ್ಟಿದ್ದ. ಕೈಯಲ್ಲಿ ಒಂದು ಬೈಕು, ಹೀಗೊಂದು ಸನ್ ಕ್ಯಾಪ್, ಕಣ್ಣಿಗೆ ಗಾಗಲ್ಸ್, ಕೈಗೊಂದು ಗಡಿಯಾರ, ಕೆಂಪು ಬಣ್ಣದ ಟೀ ಶರ್ಟ್, ಮತ್ತು ಜೀನ್ಸ್ ಪ್ಯಾಂಟು ಇವು ಪ್ರಿಯತಮೆಗೆ ಇವನ ಸ್ಟೇಟಸ್ ಹಾಗೂ ಆಧುನಿಕತೆಯನ್ನು ಸಾರುವ ಸಾಧನವಾಗಿದ್ದವು. ಎಲ್ಲಕ್ಕೂ ಹೆಚ್ಚಾಗಿ ಅವನ ಹೃದಯದಲ್ಲಿ ಉಕ್ಕುತ್ತಿರುವ ಪ್ರೀತಿ-ಪ್ರೇಮಕ್ಕೆ ತನ್ನ ಪ್ರಿಯತಮೆ ಒಲಿಯುವಳೆಂಬ ಆಸೆ ಇಟ್ಟುಕೊಂಡಿದ್ದ. ಅವನು ರಾತ್ರಿ ತನ್ನ ಪ್ರೇಮ ನಿವೇದನೆ ಹೇಗೆ ಮಾಡಲಿ ಎಂದು ಯೋಚಿಸುತ್ತಿದ್ದ. ಕೊರಿಯರ್ ಸರ್ವಿಸ್ ನಲ್ಲಿ ಇರುವ ಅವನು ಪ್ರೇಮ ಪತ್ರ ಬರೆದು ತಲುಪಿಸುವ ಕೆಲಸ ಮಾಡಬಹುದಿತ್ತು. ಆದರೆ ಪ್ರೇಮ ಪತ್ರದಲ್ಲಿ ನನ್ನ ತುಂಬು ಹೃದಯ ಮನೆಗಳನ್ನು ಅಳವಡಿಸಿ ಅದನ್ನು ಪ್ರಿಯತಮೆಗೆ ತಲುಪಿಸುವುದು ಅಸಾಧ್ಯವೆನಿಸಿತು ಅವನಿಗೆ. ಸದಾ ಸ್ನೇಹಿತೆಯರ ಗುಂಪಿನಲ್ಲಿರುತ್ತಿದ್ದ ತನ್ನ ಪ್ರಿಯತಮೆಗೆ ಪ್ರೇಮ ಪತ್ರವನ್ನು ಕೊಡುವುದಾದರೂ ಹೇಗೆ? ಏಕಾಂತದಲ್ಲಿ ಆ ಹುಡುಗಿ ಸಿಗುವ ಹಾಗಿಲ್ಲ ಎಂದಮೇಲೆ ಬೇರೆ ವಿಧಾನ ಅವನ ಹೃದಯ ಯೋಚಿಸುತ್ತಿತ್ತು. ತನ್ನ ಪ್ರೇಮದ ಅಭಿವ್ಯಕ್ತಿಗೆ ಸಿಳ್ಳೆ ಹೊಡೆದು ಹೊಸ ಚಿತ್ರದ ಪ್ರೇಮಗೀತೆಗಳನ್ನು ಗುನುಗಿ ನೋಡಿದ.

ಅದರಿಂದ ಯಾವ ಪ್ರಭಾವವೂ ಆಗಲಿಲ್ಲ. ಕಾಲೇಜು ಹುಡುಗಿಯರ ತಂಡಕ್ಕೆ ಈ ರೀತಿಯ ಬೀದಿ ರೋಮಿಯೋಗಳ ಪ್ರೇಮಗೀತೆಗಳ ಮೇಲೆ ಅಸಡ್ಡೆ ಇದ್ದು ಅವರ ದೃಷ್ಟಿಯು ಕೂಡ ಹುಡುಗರ ಮೇಲೆ ಬೀಳುತ್ತಿರಲಿಲ್ಲ. ಆಧುನಿಕ ಚಿತ್ರಗಳ ಪ್ರೇಮ ಸಮ್ಮಿಲನ, ಕಥೆ ಕಾದಂಬರಿ ರೀತಿಯ ಪ್ರೀತಿ ನಿವೇದನೆ ಯಾವುದು ಬೇಡ ಎಂದು ಬಾಲು ನಿರ್ಧರಿಸಿದ.

ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ತನ್ನ ಪ್ರೇಮವನ್ನು ವ್ಯಕ್ತಪಡಿಸಲು ನಿರ್ಧರಿಸಿದ. ಅವನ ಮನಸ್ಸಿಗೆ ಬಂದದ್ದು ಪ್ರೀತಿಯ ಸಂಕೇತವಾದ ಹೃದಯದ ಆಕಾರದಲ್ಲಿದ್ದ ಬಲೂನನ್ನು ಕಾಲೇಜಿನ ಎದುರಿನ ಕಂಭಕ್ಕೆ ಕಟ್ಟಬೇಕೆಂದು ನಿರ್ಧರಿಸಿದ. ಇದನ್ನು ಹಗಲಿನಲ್ಲಿ ಮಾಡಿದರೆ ಜನಗಳ ಕಣ್ಣಿಗೆ ಬಿದ್ದು ಹೋಗಿ ಬರುವವರು ಪ್ರಶ್ನೆ ಮಾಡಬಹುದೆಂದು ರಾತ್ರಿಯ ಸಮಯ ಸರಿ ಎಂದು ಯೋಚಿಸಿದ.

ಅಂದು ಮಂಗಳವಾರ ರಾತ್ರಿ ತನ್ನ ಕೊರಿಯರ್ ಕೆಲಸಗಳೆಲ್ಲ ಮುಗಿಸಿ ಮನೆಗೆ ಬಂದಾಗಿನಿಂದ ಮೌನ ಸಂವೇದನೆ ಪ್ರೇಮ ಪರವಶತೆಯಿಂದ ಮನಸ್ಸು ಬಹಳ ವಿಹ್ವಲವಾಗಿ ಖಿನ್ನಗೊಂಡಿತು.

“ಬಾಲು! ಏಕೋ ರಾತ್ರಿ ೧೧ ಗಂಟೆಯಾದರೂ ಮಲಗಿಲ್ಲ” ಎಂದು ಕೇಳಿದರು ಅವನ ತಾಯಿ.

“ಅಮ್ಮ, ನೀನು ಬೆಳಗ್ಗಿನಿಂದ ಕೆಲಸ ಮಾಡಿರುತ್ತೀ. ನೀನು ನನ್ನ ಯೋಚನೆ ಮಾಡಬೇಡ. ನೀನು ಹೋಗಿ ಮಲಗು. ನನಗೆ ನಿದ್ರೆ ಬಂದಾಗ ಮಲಗುವೆ” ಎಂದು ಅಮ್ಮನಿಗೆ ಹೇಳಿದ.

ಹಾಸಿಗೆಯಲ್ಲಿ ಉರುಳಾಡುತ್ತಿದ್ದ ಬಾಲು ತಾಯಿ ನಿದ್ರೆ ಮಾಡಿದೊಡನೆ ಬಾಗಿಲನ್ನು ಹೊರಗಿನಿಂದ ಬೀಗ ಹಾಕಿಕೊಂಡು ಕಾಲೇಜಿನ ಕಡೆ ಹೃದಯಾಕಾರದ ಪ್ರೇಮ ಸಂದೇಶದ ಬಲೂನನ್ನು ಕಂಭಕ್ಕೆ ಕಟ್ಟಲು ಹೊರಟ. ತನ್ನ ಹೃದಯದ ಸಂದೇಶ ಬೆಳಿಗ್ಗೆ ಹುಡುಗಿ ಕಾಲೇಜಿಗೆ ಬರುವಾಗ ಅವಳಿಗೆ ತಲುಪುತ್ತದೆ ಎಂದು ಸಂತಸದಿಂದ ಸಾಗಿದ.

ಅಂದು ಮಂಗಳವಾರ ರಾತ್ರಿ ೧೨ ಘಂಟೆ. ಬಾಲು ಕಾಲೇಜಿನ ಎದುರಿನ ಕಂಭದ ಹತ್ತಿರ ಬಂದ ಮೋಟಾರ್ ಬೈಕಿನ ಮೇಲೆ. ಅದನ್ನು ಬ್ರೇಕ್ ಹಾಕಿ ಅದರ ಸೀಟಿನ ಮೇಲೆ ನಿಂತು ಕಂಭ ಹತ್ತಿದ. ಅವನಿಗಿದ್ದ ಪ್ರೇಮದ ಆವೇಶದಲ್ಲಿ ಅದು ವಿದ್ಯುತ್ ಕಂಭವೇ? ಟೆಲಿಫೋನ್ ಕಂಭವೇ ಎಂಬುದು ಅವನಿಗೆ ಅರಿವಿರಲಿಲ್ಲ, ಗ್ರಹಚಾರ ನೆಟ್ಟಗಿರಲಿಲ್ಲ. ಪ್ರಿಯತಮೆಗೆ ತನ್ನ ಮನದಾಳದ ಮಾತನ್ನು ಸಾಂಕೇತಿಕವಾಗಿ ಹೇಳುತ್ತಿದ್ದೇನೆ ಎಂಬ ಉದ್ವೇಗವೋ ಕತ್ತಲೆಯ ಪ್ರಭಾವವೋ ಟೆಲಿಫೋನ್ ಕಂಭದ ಬದಲು ವಿದ್ಯುತ್ ಕಂಭ ಏರಿ ಬಲೂನು ಕಟ್ಟಿದ. ಪ್ರೇಮ ಕುರುಡಿರಬಹುದು. ಆದರೆ ವಿದ್ಯುತ್ ತಂತಿ ಕುರುಡಾದೀತೇ? ವಿದ್ಯುತ್ ಸ್ಪರ್ಶಕ್ಕೆ ಒಳಗಾದ ಬಾಲು ಹದಿನೆಂಟು ಅಡಿಗೂ ಎತ್ತರದ ಕಂಭದಿಂದ ಕೆಳಕ್ಕೆ ದೊಪ್ಪೆಂದು ಬಿದ್ದ. ಮೋಟಾರ್ ಬೈಕಿಗೆ ಅವನ ದೇಹ ಘರ್ಷಿಸಿ ನೆಲಕ್ಕೆ ಕಲ್ಲಮೇಲೆ ಉರುಳಿದಾಗ ಅವನ ಪ್ರಾಣಕ್ಕೆರಗಿತು ಪ್ರೇಮದ ಅಭಿವ್ಯಕ್ತಿ.

ಹಾದಿಯಲ್ಲಿ ಹೋಗುತ್ತಿದ್ದವರು ಬಾಲುವನ್ನು ಬೌರಿಂಗ್ ಆಸ್ಪತ್ರೆಗೆ ತಲುಪಿಸಿದರು. ಅಲ್ಪ ಸ್ವಲ್ಪ ಎಚ್ಚರ…. ನೋವಿನಲ್ಲಿ ತಾಯಿಯ ವಿಳಾಸ ಹೇಳಿದಾಗ ತಾಯಿ ಧಾವಿಸಿ ಬಂದಳು. ನೆರೆಹೊರೆಯವರ ಸಹಾಯದಿಂದ ಅಲ್ಲಿಂದ ನಿಮ್ಹಾನ್ಸ್‌ಗೆ ಕರೆದೊಯ್ಯಲಾಯಿತು. ಆದರೆ ತೀವ್ರ ರಕ್ತಸ್ರಾವದಿಂದ ಬಾಲು ಪ್ರಾಣ ತನ್ನ ಪ್ರಿಯತಮೆ ಇಲ್ಲದ ಪ್ರೇಮಲೋಕ ಸೇರಿತು. ತಾಯಿಯು ಕಣ್ಣೀರು ಸುರಿಸಿ ಅವಳ ಬಾಳು ಬಂಜರು ಭೂಮಿ ಆಯಿತು. ಬಾಲುವಿನ ಪ್ರಿಯತಮೆಯನ್ನು ಪತ್ತೆಹಚ್ಚಲು ನೋಡಿದ ಪೊಲೀಸರ ವಿಚಾರಣೆಯಲ್ಲಿ ಯಾವ ಮಾಹಿತಿಯೂ ಲಭ್ಯವಾಗಲಿಲ್ಲ. ಸತ್ತ ಬಾಲು ನೊಂದಿಗೆ ಅವನ ಪ್ರಿಯತಮೆ ಇದ್ದಳು. ಇಂತಹ “ಶಾಕಿಂಗ್ ಪ್ರೇಮ ಪ್ರಕರಣ” ಬಾಲುವಿನ ಸಾವಿನಲ್ಲಿ ಅಮರವಾಯಿತು. ಅಮರ ಪ್ರೇಮಿಯ ಬಗ್ಗೆ ಹುಡುಗಿಗೆ ಕಿಂಚಿತ್ ತಿಳಿಯಲಿಲ್ಲ.
*****

ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)