ದೇವರು ಮತ್ತು ಅಪಘಾತ

ದೇವರು ಮತ್ತು ಅಪಘಾತ

ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ ಬಯಕೆಯೆದುರು ಸೋತು ಸುಮ್ಮನಾಗಿದ್ದರು. ಅವಳೇ ನಿಂತು ಮಣ್ಣಿನ ಗೋಡೆಗಳನ್ನು ಸಿದ್ಧಪಡಿಸಿ ಸೂರನ್ನು ಹೊದಿಸಿದ್ದಳು. ಹೀಗಾಗಿ ಅವಳ ಉಳಿತಾಯವೆಲ್ಲಾ ಗುಡಿಸಲ ರೂಪವನ್ನು ಪಡೆದಿತ್ತು. ಕೆರೆಯಲ್ಲಿ ನೀರು ಏರಿದರೆ ಅವಳ ಗುಡಿಸಲೇ ಮೊದಲ ತುತ್ತಾಗುವುದೆಂದು ಎಲ್ಲರೂ ಭವಿಷ್ಯ ನುಡಿದಿದ್ದರು. ಮೊನ್ನೆಯ ಮಳೆಗೆ ಶೇಖರವಾಗಿದ್ದ ನೀರು ಅವಳ ಗುಡಿಸಲಿನಿಂದ ಬಹು ದೂರ ಇತ್ತು. ಆದರೂ ಅವಳು ಆಗಾಗ್ಗೆ ತಡಿಕೆಯನ್ನು ಸಡಿಲಿಸಿ ಹೊರಗೆ ಬಂದು ದೀರ್ಘವಾಗಿ ನಿಟ್ಟಿಸುತ್ತಿದ್ದಳು. ಹೇಗೂ ಇಡೀ ರಾತ್ರೆ ಅವಳ ಗುಡಿಸಲಿನ ನೆಲದ ಮೇಲೆಲ್ಲಾ ಪಾತ್ರೆ, ತಟ್ಟೆಗಳು ಸೂರಿನ ನೀರನ್ನು ತಮ್ಮೊಡಲಲ್ಲಿ ಸೇರಿಸಿಕೊಳ್ಳಲು ಹರಡಿದ್ದವು. ಇಪ್ಪತ್ತು ದಿನಗಳ ಬಾಣಂತಿಯಾಗಿದ್ದ ಅವಳ ಮಗಳು, ಕೂಸನ್ನು ಮಡಿಲಲ್ಲಿ ತುಂಬಿಕೊಂಡು ಒಂದಿಷ್ಟು ಒಣನೆಲ ಹುಡುಕುತ್ತಾ ಆ ರಾತ್ರಿಯಿಡೀ ಪರದಾಡಿದ್ದಳು.

ಆ ರಾತ್ರಿ ನಡೆದಿದ್ದ ಇನ್ನೊಂದು ಘಟನೆ ಅವಳನ್ನು ನಡುಗುವಂತೆ ಮಾಡಿತ್ತು. ಹಲವಾರು ಬಾರಿ ಅವಳು ಒಳ ಹೊರಗೆ ಓಡಾಡಿ, ನೀರನ್ನು ಮೊಗೆದು ಹೊರಗೆ ಎಸೆದು, ಮತ್ತೊಮ್ಮೆ ಕೆರೆಯ ನೀರನ್ನು ನಿರುಕಿಸಿ ಒಳಗೆ ಬಂದು ಮಧ್ಯರಾತ್ರೆಯ ವೇಳೆಗೆ ಸುಸ್ತಾಗಿ ಅಲ್ಲೇ ಇದ್ದ ಮಣೆಯ ಮೇಲೆ ಕುಕ್ಕರುಗಾಲಿನಲ್ಲಿ ಕುಳಿತಳು. ಹಾಗೆಯೇ ನಿದ್ರೆಯ ಜೋಂಪಿನಲ್ಲಿ ಮೈಮರೆತಳು. ಎಷ್ಟು ಹೊತ್ತು ಒರಗಿದ್ದಳೋ….. ಅವಳ ನೆತ್ತಿಯ ಮೇಲೆ ಪಟಕ್ಕನೆ ಬೀಳಲಾರಂಭಿಸಿದ ನೀರ ಹನಿಗಳಿಂದ ಅವಳು ಕಣ್ತೆರೆದಳು. ಚಿಮಿಣಿ ದೀಪದ ಮಸಕು ಬೆಳಕಿನಲ್ಲಿ ಮಗಳೆಲ್ಲಿದ್ದಾಳೆಂದು ಹುಡುಕಿದಳು. ಒಲೆಯ ಬಳಿ ಒಂದು ಮರದ ಹಲಗೆಯ ಮೇಲೆ ಅವಳ ಮಗಳು ಕುಳಿತು ಹಾಗೆಯೇ ಗೋಡೆಗೆ ಒರಗಿದ್ದಳು. ಮಗುವು ಅವಳ ಮಡಿಲಲ್ಲಿತ್ತು. ಬಾಣಂತಿಗೆ ಮಲಗಲೂತಾವಿಲ್ಲ…. ಅವಳ ಎದೆ ಹಿಂಡಿತು. ಮಗುವನ್ನಾದರೂ ತನ್ನ ಮಡಿಲಲ್ಲಿ ಹಾಕಿಕೊಳ್ಳೋಣ ಎಂದು ಎದ್ದಾಗಲೇ ಅವಳ ರಕ್ತ ಹೆಪ್ಪುಗಟ್ಟಿತು. ಅವಳ ಮಗಳ ಕಾಲಿನ ಬಳಿ ಇದ್ದ ಆ ಭಯಾನಕ ಪ್ರಾಣಿಯನ್ನು ಆ ಅಪರಾತ್ರಿಯಲ್ಲಿ ಕಾಣುತ್ತಿದ್ದಂತೆಯೇ ಅವಳು ಮರಗಟ್ಟಿ ಹೋದಳು….. ಆ ಪ್ರಾಣಿ ಸುಮಾರು ಒಂದಡಿ ಉದ್ದವಿತ್ತು. ನಾಲ್ಕು ಕಾಲುಗಳು ಮೋಟದ, ದಪ್ಪಗಿನ ಬಾಲ….. ಅದರ ಬೆನ್ನಿನ ಮೇಲಿದ್ದ ಮುಳ್ಳುಗಳು ಮತ್ತು ಅದರ ಹಸಿರು ಮಿಶ್ರಿತ ಕೆಂಪು ಬಣ್ಣ…. ಅದು ಮೆಲ್ಲನೆ ಅವಳ ಮಗಳತ್ತಲೇ ಚಲಿಸುತ್ತಿದೆ. ಇನ್ನು ಸುಮ್ಮನಿರಲು ಸಾಧ್ಯವಿಲ್ಲ….. ನಿಧಾನವಾಗಿ ಅವಳ ಕೈಕಾಲುಗಳಲ್ಲಿ ಶಕ್ತಿ ಸಂಚಾರವಾಯಿತು. ಕ್ಷಣಾರ್ಧದಲ್ಲಿ ಅವಳು ತಡಿಕೆಯ ಬಾಗಿಲನ್ನು ತೆರೆದು, ಮಿಂಚಿನಂತೆ ಮಗಳ ಬಳಿ ಸಾರಿ ತನ್ನೆಲ್ಲಾ ಬಲವನ್ನು ಬಿಟ್ಟು ಒದ್ದಳು. ದೊಪ್ಪನೆ ಆ ಪ್ರಾಣಿ ಬಾಗಿಲ ಬಳಿ ಹೋಗಿ ಬಿದ್ದಿತು. ಹಿಂದೆಯೇ ಅವಳು ಬೊಬ್ಬೆ ಹೊಡೆದಳು…. ಅವಳ ಬೊಬ್ಬೆಗೆ ಮಗಳು ಗಾಬರಿಯಾಗಿ ಕಣ್ಣು ತೆರೆದಳಷ್ಟೇ…. ಇನ್ಯಾವ ಗುಡಿಸಲ ಬಾಗಿಲು ಕೂಡ ತೆರೆಯಲಿಲ್ಲ.

ಹಿಂದೆ…. ಬಹಳ ಹಿಂದೆ ಅವಳಿಗೂ ಹೆಸರೊಂದಿತ್ತು. ಅವಳು ಲಂಗ ತೊಟ್ಟು ನೀರಿನ ಹನಿಗಳೊಡನೆ ಚಿಮ್ಮಿದಾಗ, ಸೀರೆಯ ಸೆರಗನ್ನು ಮೊದಲ ಬಾರಿಗೆ ಎದೆಯ ಮೇಲೆ ಹರಡಿದಾಗ ಯಾರಾದರೂ ಬೆರಳಿನಿಂದ ಅವಳ ಗದ್ದವನ್ನು ಮೇಲೆತ್ತಿದಾಗ ಕಣ್ಣು ಮುಚ್ಚಿಕೊಂಡು ನಾಚಿದ ವಧುವಾಗಿದ್ದಾಗ, ಅವಳ ಗಂಡನ ಬಲವಾದ ಬಾಹುಗಳಲ್ಲಿ ನಲುಗಿದಾಗ, ಅವನಿಗೆ ಕೋಪ ಬಂದು ಒದ್ದಾಗ….. ಮುಂದಲೆ ಹಿಡಿದು ಗೋಡೆಗೆ ಕುಟ್ಟಿದಾಗ….. ಆಗೆಲ್ಲಾ ಅವಳಿಗೆ ಒಂದು ಹೆಸರಿತ್ತು. ಕಾಲ ಅವಳ ಮುಖದ ಮೇಲೆ ಸರಳರೇಖೆ, ತ್ರಿಕೋನ, ವಕ್ರರೇಖೆಗಳ ಜಾಮಿತ್ರಿಯ ಗುರುತನ್ನು ಬಿಡಿಸಿ ಹೋದಂತೆ, ಕರುಳುಗಳು ನುಲಿದು, ಹೆಣೆದುಕೊಂಡು ಹಿಗ್ಗಾಮುಗ್ಗಾ ಎಳೆದಾಡಿದಾಗ, ಬಸಿರ ಕುಡಿಯು ಬಿಸಿಲು, ಚಳಿ ಮಳೆಗಾಲದ ಹೊಡೆತಕ್ಕೆ ಮುರುಟಿ ಹೋಗುವುದೆನಿಸಿದಾಗ ಅವಳು ಮಣ್ಣು ಹಿಡಿದ ಮಾಸಲು ಬಣ್ಣದ ಚಾದರವನ್ನು ಹೊದ್ದಳು. ಅಳುವ ಮನೆಗಳಿಗೆ ಹೊಕ್ಕಳು. ಬಿಕ್ಕುವ ದನಿಗಳಿಗೆ ಕಿವುಡಾದಳು. ಅವಳೆದುರು ಇರುತ್ತಿದ್ದ ನಿರ್ಜೀವ ದೇಹಗಳಿಗೆ ಸ್ನಾನ ಮಾಡಿಸುತ್ತಿದ್ದಳು. ಸೆಂಟ್ ಹಚ್ಚುತ್ತಿದ್ದಳು. ಬೆಂಕಿ ಕಡ್ಡಿಯನ್ನು ಹಿಡಿದು, ‘ಲಾ ಇಲಾಹ ಇಲ್ಲಲ್ಲಾ ಮುಹಮ್ಮದುರ್ ರಸೂಲಲ್ಲಾಹ್’ ಎಂದು ಚಾಚೂ ತಪ್ಪದೆ ಕಲ್ಮ ಬರೆಯುತ್ತಿದ್ದಳು. ಹಾಗಾದಾಗ ಮಾತ್ರ ಭಗಭಗನೆ ಉರಿಯುತ್ತಿದ್ದ ಅವಳ ಒಡಲು ಶಾಂತವಾಗುತ್ತಿತ್ತು. ಆಗಲೇ ಅವಳನ್ನು ಎಲ್ಲರೂ ‘ಗಸ್ಸಾಲಿನ್ ಚಿಕ್ಕಮ್ಮ’ ಎಂದು ಕರೆದದ್ದು. ಹೆಣಕ್ಕೆ ಸ್ನಾನ ಮಾಡಿಸುವ ಚಿಕ್ಕಮ್ಮ……

ಬೆಳಕಿನ ಮೋಡಗಳನ್ನು ಕಾಣುತ್ತಿದ್ದಂತೆಯೇ ಧಾರಾಕಾರವಾಗಿ ಹರಿದಿದ್ದ ಮಳೆಯೂ ವಿಶ್ರಾಂತಿ ತೆಗೆದುಕೊಂಡಿತ್ತು. ಆ ಥಂಡಿ ನೆಲದ ಮೇಲೆ ಹತ್ತಾರು ಗೋಣಿ ಚೀಲಗಳ ಮೇಲೆ ಮಂದಲಿಗೆಯನ್ನು ಹಾಸಿಕೊಂಡು ಅವಳ ಮಗಳು ಹಸೀನ ಮಲಗಿದ್ದಳು. ಬಿಸಿಲಿನ ಚೆಲ್ಲಾಟವನ್ನು ಅನುಸರಿಸುತ್ತಾ, ಅವಳು ನೆನೆದಿದ್ದ ಅರಿವೆಗಳನ್ನು ಹರವುತ್ತಿದ್ದಳು. ಕಾಲಿಗಂಟಿದ ಕೂಚ್ಚೆಗೆ ಒಂದಿಷ್ಟು ನೀರು ಹೊಯ್ದು ಒಳ ಬಂದ ಅವಳು ಹಲಗೆಯ ಮೇಲಿದ್ದ ಡಬ್ಬಗಳನ್ನೆಲ್ಲಾ ತಡಕಾಡಿದಳು. ಮುದುರಿ ಬಿದ್ದಿದ್ದ ಕಾಗದದ ಪೊಟ್ಟಣಗಳನ್ನೆಲ್ಲ ಬಿಚ್ಚಿ ನೋಡಿದಳು. ಉಂಡೆಯಾಗಿದ್ದ ಪ್ಲಾಸ್ಟಿಕ್ ಪೊಟ್ಟಣಗಳನ್ನು ಬಿಡಿಸಿ ನೋಡಿದಳು. ಯಾವುದರಲ್ಲಾದರೂ ಕಾಫಿ ಪುಡಿ ಹೋಗಲಿ…. ಕಾಫಿ ಪುಡಿಯ ಧೂಳಾದರೂ ಕಣ್ಣಿಗೆ ಬೀಳಲಿಲ್ಲ. ‘ಯ ಅಲ್ಲಾಹ್…’ ಅವಳು ನಿಟ್ಟುಸಿರುಗರೆದಳು. ಈ ಕಾಫಿಗಾಗಿ ಮಾತ್ರ ಅಲ್ಲ… ಕಾಫಿ ಹೂಗಳ ಮೈಮರೆಸುವ ಸುಗಂಧದೊಡನೆ ತೇಲಿಬಂದ ಕಳೆದುಹೋದ ದಿನಗಳ ಸಿಹಿ-ಕಹಿಯನ್ನು ನೆನೆದು ಹೀಗೆಯೇ ನಿರಂತರವಾಗಿ ಬೀಳುತ್ತಿದ್ದ ಜಡಿಮಳೆಗೆ ಸ್ವಲ್ಪವೂ ಹೆದರದೆ, ತಲೆ ಎತ್ತಿ ನಿಂತಿದ್ದ ಸಾಲುಮನೆಗಳ ಬೆಚ್ಚನೆಯ ತಂಪು ಕಾಫಿಯನ್ನು ಕುದಿಸುತ್ತಿದ್ದ ಕಾಫಿ ಗಿಡಗಳ ಪ್ರಶಾಂತ ಉರಿಯುವಿಕೆ, ಪಲ್ಪರ್ ಮಾಡಿದ ಕಾಫಿ ಬೆಳೆಯ ರಾಶಿಗಳು,….. ಇವಿಷ್ಟು ಮಾತ್ರ ಅಲ್ಲೊಂದು ಇಲ್ಲೊಂದು ಅವಳ ಮನಸ್ಸಿನಲ್ಲಿ ಚುಕ್ಕಿ ಯಾಟವಾಡಿ ಮಾಯವಾದವು. ಫಕ್ಕನೆ ಅವಳಿಗೆ ನಗುಬಂದಿತು. ಅಲ್ಲಿ ಅವಳ ಕಣ್ಣೆದುರಿನಲ್ಲಿ ಕಾಫಿ ತೋಟದ ಒಡೆಯರ ಮನೆ ಮೂಡಿತು. ಆ ಬಂಗಲೆಯಲ್ಲಿ…. ಅದು ಆಕೆಯು ಮಾತ್ರ ಕರೆಯುತ್ತಿದ್ದುದಲ್ಲ…. ಎಲ್ಲರೂ…. ಕೂಲಿಯಾಳುಗಳು, ಮೇಸ್ತ್ರಿಗಳು, ರೈಟರು…. ಎಲ್ಲರೂ ಬಂಗಲೆಯ ಮೇಲೆ ಅತ್ಯಂತ ಭಯಭಕ್ತಿಯಿಂದ ಮಾತಾಡುತ್ತಿದ್ದರು. ಬೆಂಗಲೆಯಲ್ಲಿ ಸಾವ್ಕಾರ್ರ ಹೆಂಡತಿ ಹೆರಿಗೆಯಾಗಿದೆ…. ಬಂಗಲೆಗೆ ನೆಂಟರು ಬಂದಿದ್ದಾರೆ. ದೊಡ್ಡ ಸಾವ್ಕಾರ್ರಿಗೆ ನೆಗಡಿಯಾಗಿದೆ. ಅದರೊಂದಿಗೇ ಅವಳು ಮಾತ್ರ ಬಂಗಲೆಯ ಅಡಿಗೆಯವಳು…. ಆಗಾಗ್ಯೆ ಅವಳ ಯಜಮಾನತಿ ಅಪ್ಪಣೆ ಮಾಡುವಳು, “ಮರಿಯಮ್…. ಜಮೀಲ್ ಸಾವ್ಕಾರ್ರಿಗೆ ಹಾಲು ಕುಡಿಸು…. ಮರಿಯಮ್ ಇಲ್ನೋಡು ಅನ್ವರ್ ಸವ್ಕಾರ್ರಿಗೆ ಮೂಗೊರೊಸ್ಕಾಗಲ್ವಾ ನಿನ್ಗೆ?…. ಓ…. ಮರಿಯಮ್ ಅಕ್ರಮ್ ಸಾವ್ಕಾರ್ರಿಗೆ ನೋಡೋಕಾಗಲ್ವಾ.. ನ್ಯಾಪ್ಕಿನ್ ತುಂಬಾ ಕಕ್ಕಸ್ಸು ಮಾಡಿದ್ದಾರೆ…. ಅವರನ್ನು ಎತ್ಕಂಡೋಗಿ ತೊಳೆಸು….” ಮರಿಯಮ್ಗೆ ದಿಗ್ಭ್ರಾಂತಿ, ಈ ಚೋಟುದ್ದವೆಲ್ಲಾ ಹುಟ್ಟುತ್ತಲೇ ಹೇಗೆ ಸಾವ್ಕಾರಾಬಿಟ್ರು? ಮತ್ತೆ ಅವರ ತಾಯಂದಿರೂ ಕೂಡ ಸಾವ್ಕಾರ್ರೆ…. ಆಮೇಲೆ ಅವಳಿಗೆ ಅಭ್ಯಾಸವಾಗಿಬಿಟ್ಟಿತು. ‘ಮರಿಯಮ್’ ಎಂಬ ಕೂಗು ಅವಳ ಕಿವಿಯ ಮೇಲೆ ಬಿದ್ದ ಕೂಡಲೇ, ಅವಳು ಯಾವುದೇ ಒಬ್ಬ ಸಾವ್ಕಾರ್ರಿಗೆ ಚಡ್ಡಿ ತೊಡಿಸಲು, ಸಿಂಬಳ ಒರೆಸಲು, ತಿಕ ತೊಳೆಸಲು ಸನ್ನದ್ಧಳಾಗಿರುತ್ತಿದ್ದಳು…. ಆದರೂ ಕಳೆದು ಹೋದೆ ಆ ಜಡಿ ಮಳೆಯ ದಿನಗಳಲ್ಲಿ ಅವಳ ಯೌವನದ ಕಾವಿನಂತೆಯೇ ನವಿರಾದ ಹದವಾದ ಕಾಫಿಯ ಸುಮಧುರವಾದ ಸುವಾಸನೆ….

“ಹಾ!….” ಅವಳು ಮತ್ತೊಮ್ಮೆ ವಾಸ್ತವ ಲೋಕಕ್ಕೆ ಹಿಂದಿರುಗಿದಳು. ಅವಳು ಬೆರಳ ಮೇಲೆ ಲೆಕ್ಕ ಹಾಕಿದಳು. ಇವತ್ತಿಗೆ ಇಪ್ಪತ್ತೇಳು ದಿನ…. ಆಂ ಕಲಸಕ್ಕೆ ಹೋಗಿ ಅಮ್ಮಗೆ ಇಪ್ಪತ್ತೇಳು ದಿನ, ಅಬ್ಬಾ! ಬದುಕುವುದಾದರೂ ಹೇಗೆ ? ಬರೀ ಜೀವ ಹಿಡಿಯುವುದಷ್ಟೇ ಅಲ್ಲ… ಈಗ ಹಸೀನಳಿಗೆ ನಲವತ್ತನೆ ದಿನದ ಶಾಸ್ತ್ರಕ್ಕೆ ಒಂದು ಸೀರೆ, ಅವಳ ಮಗುವಿಗೆ ಒಂದು ಜೊತೆ ಬಟ್ಟೆ ಅಳಿಯನಿಗೆ ಏನಾದರೂ ಸಲಾಮಿ ಮಗಳನ್ನು ಕರೆದೊಯ್ಯಲು ಬರುವ ಅವಳ ಅತ್ತೆಯ ಮನೆಯವರಿಗೆ ಊಟ, ತಿಂಡಿ….. ಕೊನೆಗೆ…. ಈ ಮನೆಗೆ ಹೊದಿಸಲು ಒಂದಿಷ್ಟು ಗಳು, … ಹೆಂಚು…. ಅಯ್ಯೋ…. ನನ್ನ ದುರಾಶೆಗೆ ಮಿತಿಯೇ ಇಲ್ಲವೇ?…..

ಕಳೆದ ಇಪ್ಪತ್ತೇಳು ದಿನಗಳಿಂದ ಆ ದೊಡ್ಡ ಪಟ್ಟಣದಲ್ಲಿ ಯಾರೂ ಸತ್ತಿರಲಿಲ್ಲ ವೆಂದರ್ಥವಲ್ಲ. ಪಟ್ಟಣದ ಆ ಭಾಗದಲ್ಲಿರುವ ನೂರಾನಿ ಮಸೀದಿಯಿಂದ ಹಿಡಿದು ಜಾಮಿಯ ಮಸೀದಿಯವರೆಗಿನ ಏಳು ಮಸೀದಿಗಳ ಪ್ರದೇಶಕ್ಕೆ ಗಸ್ಸಾಲಿನ್ ಆಗಿ ನೇಮಕವಾಗಿದ್ದುದ್ದು ಜಮಾಲ್ ಬೀ, ಏನಿಲ್ಲವೆಂದರೂ ಆ ಕಡೆ ಐದಾರು ಹೆಂಗಸರ ಸಾವಾಗಿದೆ, ಆದರೆ…. ಈ ಮರಿಯಮ್‍ನ ಅಧಿಕಾರ ವ್ಯಾಪ್ತಿಯಲ್ಲಿರುವ ಹೆಂಗಸರೆಲ್ಲಾ ಸಾಯಲೇಬಾರದೆಂಬ ಛಲ ಹೊತ್ತಿರುವಾಗ ಅವಳು ಬದುಕುವುದಾದರೂ ಹೇಗೆ?

ಸರಿ…. ಈಗ ಮತ್ತೆ ಕಾಫಿ ಪುಡಿಯ ಬಳಿಯಿಂದ ಆರಂಭಿಸುವುದಾದಲ್ಲಿ, ಅವಳಂತೂ ಈ ಎಲ್ಲಾ ಆಲೋಚನೆಗಳಿಂದ ಬಸವಳಿದು ಚೈತನ್ಯ ಹೀನಳಾಗಿ, ಶಕ್ತಿಯುಡುಗಿ ದಾರಿಕಾಣದೆ ಕುಸಿದು ಕುಳಿತು ಚಿಂತಾಮಗ್ನಳಾದಳು. ಆಗ ಒಮ್ಮೆಲೇ ಅವಳಿಗೆ ಹೊಳೆದ ಐಡಿಯಾ ಏನೆಂದರೆ, ಖಬರಸ್ತಾನ್‌ದಲ್ಲಿರುವ ಕರೀಮ್ ಮಾಡುವಂತೆ ತಾನೂ ಏಕೆ ಮಾಡಬಾರದು ಎಂಬುದು… ಕರೀಮ್ ಗೋರಿ ತೋಡುವವ. ಹೀಗೆಯೆ….. ಪಟ್ಟಣದ ಜನ ತಾವ್ಯಾರೂ ಸಾಯಬಾರದೆಂದು ಛಲ ಹಿಡಿದು ಕುಳಿತಾಗ ಆಗ ರಾತ್ರೆಯಲ್ಲಿ ಆತ ಸದ್ದಿಲ್ಲದ ಏಳುವನಂತೆ, ಕೈಯಲ್ಲಿ ಗುದ್ದಲಿ ಬೇರೆ…. ಮೆಲ್ಲನೆ ಅಡಿಯಿಟ್ಟು ಯಾವುದಾದರೂ ಗೋರಿಯ ಬಳಿ ಹೋಗಿ, ಗುದ್ದಿಯನ್ನು ಅಡಿಮೇಲು ಮಾಡಿ ಯಾವುದಾದರೂ ಗೋರಿಯ ಮೇಲೆ ಬಡಿದು ಬಂದು ತಪ್ಪಗೆ ಮಲಗುವನಂತೆ. ತಗೋ! ಬೆಳಿಗ್ಗೆ ಏಳುವ ವೇಳೆಗೆ ಅವನಿಗೆ ಒಂದು ಗೋರಿ ತೋಡುವ ಆರ್ಡರ್…. ತಾನೂ ಹಾಗೇಕೆ ಮಾಡಬಾರದು? ಅಕಸ್ಮಾತ್ ಹಾಗೆ ಗುದ್ದಲಿಯಿಂದ ಒಡೆದದ್ದು ಗಂಡಸಿನ ಗೋರಿಯಾದರೆ…. ಅದರಿಂದ ತನಗೇನು ಲಾಭ?…. ಅಥವಾ ತನ್ನೀ ಪ್ರಯತ್ನ ಜಮಾಲ್ ಬೀಗೆ ಫಲ ಕೊಟ್ಟರೆ ತನಗೇನು ಬಂದಂತಾಯಿತು? “ಯಾ ಅಲ್ಲಾಹ್…. ಯಾ ಗೈಬಾನೆವಲಿ….
ಯಾ ಪಾಕ್ ಪರ್‌ವರ್‌ದಿಗಾರ್…. ಯಾ ಖ್ವಾಜ ಬಂದೆ ನವಾಜ್…. ಯಾ ಗೌಸಲ್ ಆಜಮ್ ದಸ್ತಗೀರ್…. ಯಾ….” ಅವಳ ಮೊರೆ ಅರ್ಧದಲ್ಲಿಯೇ ತುಂಡಾಯಿತು. ಯಾರದೋ ಹೆಜ್ಜೆ ಸದ್ದುಗಳು ಮಾತುಗಳು…. ಅವಳು ನಿಧಾನವಾಗಿ ಕತ್ತೆತ್ತಿ ನೋಡಿದಳು. ಗುಲಾಬಿ ಮಿಶ್ರಿತ ಕೆಂಪು ಬಣ್ಣದ ಮೋರೆಯ ಮೇಲೆ ಕಪ್ಪು ಗಡ್ಡ ಎದ್ದು ಕಾಣುವಂತಿದ್ದವನೊಬ್ಬ ನಸುಗಪ್ಪು ಬಣ್ಣದ ಗಿಡ್ಡನೆಯ ವ್ಯಕ್ತಿಯೊಬ್ಬ…. ಇಬ್ಬರೂ ಬಾಗಿಲ ಬಳಿ ನಿಂತಿದ್ದರು.

“ಮರಿಯಮ್ ಬೀ….” ಗಿಡ್ಡನೆಯ ವ್ಯಕ್ತಿ ನುಡಿಯಿತು, “ಕಂಟ್ರಾಕ್ಟರ್ ಆದಮ್ ಸಾಹೇಬರ ಮನೆ ಗೊತ್ತು ತಾನೆ…. ಅಲ್ಲಿಗೆ ಕೂಡಲೇ ಬರಬೇಕು” ಮರಿಯಮ್‌ಬೀ ಎಗರುತ್ತಿದ್ದ ಗುಂಡಿಗೆಯನ್ನು ನಿಯಂತ್ರಿಸುತ್ತಾ ಧ್ವನಿಯಲ್ಲಿ ಅಡಗಿದ್ದ ವಿಶೇಷೋತ್ಸಾಹವನ್ನು ಅದುಮುತ್ತಾ ಅತ್ಯಂತ ಮಾಮೂಲಿನ ರೀತಿಯಲ್ಲಿ ಪ್ರಶ್ನಿಸಿದಳು. “ಏನಾಗಿದೆ ಅವರ ಮನೇಲೀ…?”

“ಅವರ ಸೊಸೆ ಸತ್ತು ಹೋದರು…” ಕಪ್ಪು ಗಡ್ಡದವನು ನುಡಿದ. ಪಾಪ! ಎನ್ನುವುದನ್ನೂ ಮರೆತುಬಿಟ್ಟಳು. ಯಾರದಾದರೂ ಸಾವಿನ ಸುದ್ದಿ ಕೇಳಿದಾಗ ಕೂಡಲೇ “ಇನ್ನಲಿಲ್ಲಾಹಿ ವ ಇನ್ನ ಇಲೈಹಿರಾಜಿವೂನ್’ ಎಂದು ಹೇಳಬೇಕಾದ್ದನ್ನು ಹೇಳಲಿಲ್ಲ. ಅವಳ ಧಮನಿಗಳಲ್ಲಿ ಹೊಸರಕ್ತ ವಿಶೇಷವಾಗಿ ಪ್ರವಹಿಸತೊಡಗಿತು. ಹೊಟ್ಟೆಯ ಸಂಕಟ ಅಡಗಿತು. ಅವಳು ಎದ್ದು ನಿಂತಳು.

“ಅವರ ಮಗಳೂ ಕೂಡ….” ಗಿಡ್ಡನೆಯ ವ್ಯಕ್ತಿ ಹೇಳಿದ. ಅವಳ ನರನಾಡಿಗಳೆಲ್ಲಾ ಲವಲವಿಕೆಯಿಂದ ಹುರಿಗಟ್ಟತೊಡಗಿದವು.

“ಮತ್ತೆ…. ಅವಳ ಮೊಮ್ಮಗಳೂ ಕೂಡ ಸತ್ತು ಹೋಗಿದ್ದಾಳೆ” ಕಪ್ಪು ದಾಡಿಯವ ಹೇಳಿದ ಮರಿಯಮ್ ಬೀ ಆಶ್ಚರ್ಯಚಕಿತಳಾದಳು. ಈ ಕೈಗಳಿಗೆ ಇಷ್ಟೇಕೆ ಬಲ ಬಂದಿದೆ? ರೆಕ್ಕೆಗಳೇನಾದರೂ ಮೂಡಿವೆಯೇ? ಅವಳೆದೆ ಹೊಡೆದುಕೊಳ್ಳಲಾರಂಭಿಸಿತು. ಹಳೆಯ ಚಾದರವನ್ನು ತೆಗೆದು ಬೇಗನ ತಲೆಯ ಮೇಲೆ ಸುತ್ತಿಕೊಳ್ಳಲಾರಂಭಿಸಿದಳು…. ಬಾಗಿಲ ಬಳಿ ಹೋಗುತ್ತಲೇ ಮಗಳನ್ನು ಕೂಗಲಾರಂಭಿಸಿದಳು. “ಏ…. ಹಸೀನ…. ಬಾಗಿಲನ್ನು ಎಳದುಕೋ…… ಮಗಳೆ… ಕೆಲಸದ ಮೇಲೆ ಹೋಗ್ತಿದೀನಿ…. ಬರೋದು ತಡವಾಗುತ್ತೆ….”

ದಾಪುಗಾಲಿಡುತ್ತಾ ನಡೆಯುತ್ತಿದ್ದಂತೆ ಅವಳು ಯೋಚಿಸಿದಳು. ಒಂದೇ ಮನೆಯ ಮೂವರು ಅದೂ ಖಾಯಿಲೆಯಿಲ್ಲ…. ಕಸಾಲೆಯಿಲ್ಲ….. ಹರೆಯದವರು…. ಹೇಗೆ ಸತ್ತರು ಅಂತಲೂ ಕೇಳಲಿಲ್ಲವಲ್ಲ, ಅವಳ ನಡಿಗೆ ಚುರುಕಾಯಿತು. ಆದಮ್ ಸಾಹೇಬರ ಮನೆಯೆದುರು ಹಾಕಿದ್ದ ಶಾಮಿಯಾನ, ಬಿಳಿಯ ಪಾಯಿಜಾಮ ಶರ್ಟ್ ತೊಟ್ಟು, ಬಿಳಿಯ ಟೋಪಿ ಅಥವಾ ಬಿಳಿಯ ತಲವಸ್ತ್ರ ಕಟ್ಟಿದ ಗಂಡಸರ ಗುಂಪು, ಅಲ್ಲಲ್ಲೇ ಮಕ್ಕಳು…. ಶಾಮಿಯಾನದ ಬಳಿ ಬರುತ್ತಿದ್ದಂತಯೇ ಅತಿ ಮುಖ್ಯ ಕಾರ್ಯ ನಿರ್ವಹಿಸಬೇಕಾದ ಅಧಿಕಾರಿಯಂತೆ ಅವಳ ನಡಿಗೆ ಮಂದವಾಯಿತು. ಗತ್ತಿನಿಂದ ಹೆಜ್ಜೆ ಇಡುತ್ತಾ ಮೆಲುವಾಗಿ ಬರುತ್ತಿದ್ದ ಅವಳು ಮನೆ ಮುಂಭಾಗದಲ್ಲಿ ದಾನ ಮಾಡಲು ಇಟ್ಟಿದ್ದ ಗೋಧಿ, ಅಕ್ಕಿ, ಉಪ್ಪಿನ ಮೂಟೆಗಳನ್ನು ಗಮನಿಸಿದಳು. ಒಮ್ಮೆಲೇ ಅಲ್ಲೇ ನಿಂತು ತನ್ನ ಚಾದರದ ತುಂಬಾ ಅವುಗಳನ್ನು ತುಂಬಿಸಿಕೊಳ್ಳಬೇಕನ್ನಿಸಿತು. ಛೇ!….. ತಾನೇನು ಭಿಕಾರಿಯಲ್ಲವಲ್ಲ…. ಗಸ್ಸಾಲಿನ್.. ತಾನೇಕೆ ಭಿಕ್ಷೆ ಬೇಡಬೇಕು ?… ತನ್ನ ಸೇವೆಗೆ ಪ್ರತಿಫಲವಾಗಿ ಅಷ್ಟೇ ಏಕೆ…. ಇನ್ನೂ ಹೆಚ್ಚಿಗೆ ಸಿಗುವಾಗ ತನ್ನ ಘನತೆ ತಾನು ಉಳಿಸಿಕೊಳ್ಳಬೇಕು.

ಅವಳಿನ್ನೂ ಒಳಗೆ ಕಾಲಿಟ್ಟಿರಲಿಲ್ಲ. ಅವಳನ್ನು ಕರೆಯಲು ಬಂದಿದ್ದ ಗಿಡ್ಡ ವ್ಯಕ್ತಿ ಅವಳನ್ನು ಉದ್ದೇಶಿಸಿತು. “ಗಸ್ಸಾಲಿನ್ ಚಿಕ್ಕಮ್ಮ…. ಇವರೆಲ್ಲಾ ಆಕ್ಸಿಡೆಂಟ್‌ನಲ್ಲಿ…. ತೀರಿಕೊಂಡಿರೋದು….. ನೆನ್ನೆ ಬೆಳಿಗ್ಗೆ ಆಕ್ಸಿಡೆಂಟಾಗಿರೋದು. ಪೋಸ್ಟ್ ಮಾರ್ಟಮ್ ಆಗಿ ನಮ್ಮ ಕೈ ಸೇರೋ ಹೊತ್ತೆ ಇಷ್ಟೊತ್ತಾಗಿದೆ. ನಾವು ಜಾಸ್ತಿ ಹೊತ್ತು ಹೆಣಗಳನ್ನು ಇಟ್ಕೊಳೋಕಾಗಲ್ಲ. ನೀರು ಬಿಸಿಯಾಗಿದೆ. ಬಟ್ಟೆ ಎಲ್ಲಾ ತಂದಾಗಿದೆ. ಬೇರೆ ಎಲ್ಲಾ ಸಾಮಾನನ್ನು ತಂದಿದೀವಿ. ನಿಮ್ಮ ಕೆಲಸ ಬೇಗ ಶುರುಮಾಡಿ. ನಮಗೆ ಜೊಹರ್‌ನ ನಮಾಜಿನ ವೇಳೆಗೆ ಹೆಣಗಳನ್ನು ಸಿದ್ಧ ಮಾಡಿಕೊಟ್ಟರೆ ಆಯಿತು.” ಹೆಣಗಳಷ್ಟೇ ತಣ್ಣಗೆ ಕೊರೆಯುವ ಧ್ವನಿಯಲ್ಲಿ ಲೆಕ್ಕಾಚಾರವಾಗಿ ಮಾತುಕತೆಯಾಡಿ ಅವನು ಮುಗಿಸಿದ.

ಮರಿಯಮ್ ಬೀ ಅಲ್ಲೇ ಒಂದು ಕ್ಷಣ ನಿಂತಳು. ಅವಳಿಗೆ ಆ ಮನೆಯವರು ಗೊತ್ತಿದ್ದರು. ಜೀನತ್‌, ರೇಹಾನ, ಅಸ್ಮ…. ಎಷ್ಟು ಬೇಗ ಅವರ ಹೆಸರುಗಳು ಮಾಯವಾದವು? ಈಗ ಅವರು ಬರೀ ಹೆಣಗಳು…. ಬೇಗ ರೆಡಿ ಮಾಡಿ ಮಣ್ಣು ಪಾಲು ಮಾಡೋದಿಕ್ಕೆ…. ಆಹ! ತನ್ನ ಕೆಲಸವಾದರೂ ಎಂತಹದು… ಮಣ್ಣಿನಲ್ಲಿ ಮುಚ್ಚಲು ಉಗುರು ಸಂದಿನಲ್ಲಿರುವ ಕೊಳೆಯನ್ನು ಕೂಡ ನಾಜೂಕಾಗಿ ಬೆಂಕಿಕಡ್ಡಿಯಿಂದ ತೆಗೆಯಬೇಕು. ಹೊಸ ಕಫನ್‌ನಲ್ಲಿ ಸುತ್ತಬೇಕು… ಗಂಡಸಾದರೆ ಐದು ಸುತ್ತು ಬಟ್ಟೆ…. ಹೆಂಗಸಾದರೆ ಏಳು ಸುತ್ತು ಬಟ್ಟೆ… ಗಂಡಸಿಗೆ ತೊಡಬೇಕಾಗಿರುವ ಗೋರಿ ಸೊಂಟದ ಮಟ್ಟ ಇರಬೇಕು. ಹೆಂಗಸಿಗೆ ಎದೆ ಮಟ್ಟ ತೊಡಬೇಕು. ಅವಳು ನಿಧಾನವಾಗಿ ಒಳಗಿನ ಹಜಾರಕ್ಕೆ ಕಾಲಿಟ್ಟಳು. ಕಂಟ್ರಾಕ್ಟರ್ ಆದಮ್ ಸಾಬ್ ಕಟ್ಟಿಸಿದ್ದ ವಿಶಾಲವಾದ ಹಜಾರದಲ್ಲಿ ಕಾಲಿಡಲೂ ಜಾಗವಿಲ್ಲದಂತೆ ತುಂಬಿ ತುಳುಕುತ್ತಿದ್ದ ಹೆಂಗಸರ ಮಧ್ಯದಲ್ಲಿ ಮೂರು ಹೆಣಗಳನ್ನು ಸಾಲಾಗಿ ಇರಿಸಲಾಗಿತ್ತು. ಮೂರು ಬಿಳಿಯ ಚಾದರಗಳನ್ನು ಹೊದಿಸಿದ್ದ ಆ ಹಣಗಳ ಬಳಿ ಊದುಗಡ್ಡಿಯ ಕಟ್ಟುಗಳು ಉರಿಯುತ್ತಿದ್ದವು. ಇಡೀ ಹಜಾರದಲ್ಲಿ ಒಂದೇ ಒಂದು ಸದ್ದಿಲ್ಲ. ಮೌನದ ಅನವರತ ರಾಜ್ಯಭಾರ ನಡೆದಿತ್ತು. ಮಾತು ಮೂಕಾಗುವ ಸಂದರ್ಭಗಳು ಅನೇಕ. ಆದರೆ ಈ ದುಃಖ ಮಡುಗಟ್ಟಿದ ಮೌನ ಹೃದಯಗಳನ್ನು ತಣ್ಣಗೆ ಕೊರೆಯುತ್ತಿತ್ತು. ಸಂಬಂಧಗಳು ಕೊನೆಯಾಗುವ, ಆತ್ಮೀಯರು ಅಪರಿಚಿತರಾಗುವ, ಕ್ಷಣಾರ್ಧದಲ್ಲಿ ಹೆಸರುಗಳು ಮಾಯವಾಗುವ, ಮನುಷ್ಯ ದೇಹಗಳು ಕೂಡಲೇ ವಿತರಣೆ ಗೊಳ್ಳಬೇಕಾದ ಅನುಪಯುಕ್ತ ವಸ್ತುಗಳಾಗುವ ಈ ಸಂದರ್ಭ ಎಷ್ಟೊಂದು ವಿಲಕ್ಷಣವಾದುದು. ಅವಳು ನೇರವಾಗಿ ಒಳ ಹೋದಳು. ಸೊಂಟದಿಂದ ಉಂಡೆಯೊಂದನ್ನು ತೆಗೆದು, ಚಕಚಕನೆ ಒಂದೊಂದು ಹಣದ ಉದ್ದವನ್ನು ಅಳತೆಮಾಡಿ ಅಲ್ಲಲ್ಲೇ ಗಂಟು ಹಾಕಿ ಗುರುತು ಮಾಡಿಕೊಂಡಳು. ಕಫನ್‌ಗೆ ಹೊಲಿಗೆಗಳಿರುವುದಿಲ್ಲ.

ಆದರೆ ಎಷ್ಟೊಂದು ಚಾಕಚಕ್ಯತೆಯಿಂದ ಕತ್ತರಿಸಬೇಕೆಂದರೆ, ಒಮ್ಮೆ ಕತ್ತರಿಸಿದ ಕಫನ್ ಆ ಹಣಕ್ಕೆ ಯಾವತ್ತು ಚಿಕ್ಕದಾಗಬಾರದು. ಅದಕ್ಕೆ ಮೊದಲೇ ಅಳತೆ ತೆಗೆದು ಕೊಳ್ಳಬೇಕು. ಹಾಗೇನಾದರೂ ಉದ್ದ-ಅಗಲಗಳಲ್ಲಿ ಕಫನ್ ಹೆಣದ ಅಳತೆಗೆ ಚಿಕ್ಕದಾದಲ್ಲಿ…. ಅದೊಂದು ಅಶುಭ ಸೂಚನೆ ಆ ಮನೆಯಲ್ಲಿ ಮತ್ತೊಂದು ಸಾವಾಗಬಹುದೆಂಬ ಶಂಕ ಅಳತೆ ತೆಗೆದುಕೊಂಡ ಮರಿಯಮ್ ಬೀ ಮೂರು ಪಟ್ಟಣಗಳಲ್ಲಿದ್ದ ಬಟ್ಟೆಯನ್ನು ಬಿಚ್ಚಿದಳು ಮೂರು ಕೂಡ ಕೆಂಪು ಬಣ್ಣದವು, ಮೂವರು ಸುಮಂಗಲಿಯರು, ಮುದುಕಿಯರಲ್ಲ, ಅಥವಾ ವಿಧವೆಯರೂ ಅಲ್ಲ… ಅವರನ್ನು ಬಿಳಿ ಕಫನ್‌ನಲ್ಲಿ ಸುತ್ತಲು… ಕೆಂಪು ಬಯಕೆಯ ಸಂಕೇತ, ಪ್ರೀತಿ, ರಾಗ, ದ್ವೇಷಗಳ ಸೂಚಕ. ಈ ಮಣ್ಣಿನಲ್ಲಿ ಸೇರಲಿರುವ ಇಬ್ಬರು ಸುಮಂಗಲಿಯರಲ್ಲಿ ಒಬ್ಬಳು ಅಸ್ಮ ಕನ್ಯೆ…. ಕನ್ಯೆಯ ಸ್ವಪ್ನಗಳೊಂದೂ ಫಲಿಸಿರುವುದಿಲ್ಲ. ಬಯಕೆಗಳೊಂದೂ ಈಡೇರಿರುವುದಿಲ್ಲ. ಇನ್ನೂ ಅರಳದ ಸುಗಂಧಭರಿತ ಮೊಗ್ಗು, ಹೀಗಾಗಿ…. ಕನ್ಯೆಯನ್ನು ಹೂತಿರುವ ಮಣ್ಣಿನಲ್ಲಿ ಅವಳ ಯೌವ್ವನದ ಅಭಿಲಾಷೆ, ಆಕಾಂಕ್ಷೆ, ಅಭೀಷ್ಟೆಗಳ ಸುಗಂಧ ಮೂಡಿರುತ್ತದೆ. ಮರಿಯಮ್ ಬೀ ಆ ವಿಚಾರದಲ್ಲಿ ನಿಷ್ಣಾತೆ ಅವಳು ಖಬರಸ್ತಾನ್‌ಗೆ ಹೋದಾಗಲೆಲ್ಲಾ ಬಗ್ಗಿ ಯಾವುದಾದರೂ ಗೊರಿಯ ಒಂದಿಷ್ಟು ಮಣ್ಣನ್ನು ಕೈಯಲ್ಲಿ ಹಿಡಿದು ಮೂಸಿನೋಡಿ ಒಮ್ಮೆಲೇ ನಿರ್ಧರಿಸುವಳು, ಓ… ಇದು ಕನ್ಯೆಯ ಗೋರಿ… ಅಥವಾ…. ಇಲ್ಲ…. ಇದು…ಬೇರೆಯವರದ್ದು…ಎಂದು.

ಅವಳು ಕರಾರುವಕ್ಕಾಗಿ ಕತ್ತರಿಸುತ್ತಿದ್ದಳು. ಮೂರು ಕಫನ್‌ಗಳನ್ನು ಕತ್ತರಿಸಿ ಮಡಚಿ ಇಟ್ಟು ಅಂಟವಾಳ ಕಾಯಿಯನ್ನು ಕುಟ್ಟಿ, ನೆನೆ ಹಾಕಿ, ಧೂಪವನ್ನು ಕುಟ್ಟಿ ಪುಡಿ ಮಾಡಿ, ಕಣ್ಣಿಗೆ ಹಚ್ಚುವ ಸುರ್ಮವನ್ನು ತೇದು ಸಿದ್ಧಗೊಳಿಸಿ, ಸೆಂಟ್‌ನ ಬಾಟಲಿಗಳ ಬಿಗಿಯಾದ ಮುಚ್ಚಳವನ್ನು ಒಮ್ಮೆ ಸಡಿಲಗೊಳಿಸಿ ಹಾಗೆಯೇ ಇಟ್ಟು…. ಯಾರೂ ಕೂಡ ಆ ಕೋಣೆಗೆ ಬಾರದಂತ ಬಾಗಿಲನ್ನು ಎಳೆದುಕೊಂಡು ಅವಳು ಅಂಗಳಕ್ಕೆ ಅಡಿ ಇಟ್ಟಳು. ಅಂಗಳದಲ್ಲಿ ಮೂರು ಹಂತಗಳಲ್ಲಿ ನೀರು ಕುದಿಯುತ್ತಿತ್ತು. ಅವಳು ಹಂಡೆಯ ಮುಚ್ಚಳವನ್ನು ಸರಿಸಿದಳು. ಅದರೊಳಗೆ ದಾಳಿಂಬೆ ಎಲೆಗಳು ಹಬೆಯಾಡುತ್ತಿದ್ದವು. ಅವಳಿಗೆ ಸಮಾಧಾನವಾಯಿತು. ಆ ನೀರೊಲೆಯ ಪಕ್ಕದಲ್ಲೇ ಸುಮಾರು ನಾಲ್ಕಡಿ ಉದ್ದ ಒಂದೂವರೆ ಅಡಿ ಅಗಲ ಮೂರಡಿಯಷ್ಟು ಆಳದ ಗುಂಡಿಯನ್ನು ತೋಡಿದ್ದರು. ಅದುವೆ ಲಹದ್. ಅದರ ಮೇಲೆ ಎರಡು ದಪ್ಪ ಮರದ ಹಲಗೆಗಳನ್ನು ಜೋಡಿಸಿದ್ದರು. ಆ ಮರದ ಹಲಗೆಗಳ ಮೇಲೆ ಅಲ್ಲಿ ಅರ್ಧ ಚಂದ್ರಾಕಾರದ ಗುರುತುಗಳಿದ್ದವು. ಆ ಹಲಗೆಗಳ ಮೇಳೆ ಹೆಣವನ್ನಿಟ್ಟು ಸ್ನಾನಮಾಡಿಸಿದರೆ… ನೀರೆಲ್ಲಾ ಆ ಗುಂಡಿಯೊಳಗೆ ಬೀಳಬೇಕು. ಸ್ಥಾನಕ್ಕೆ ಬಳಸಿದ ಬೇರೆ ವಸ್ತುಗಳೂ ಅಲ್ಲೇ ಬೀಳಬೇಕು. ಆ ನೀರು ಚರಂಡಿಯೊಳಗೆ ಹರಿದು ಹೋಗುವಂತಿಲ್ಲ. ಎಲ್ಲಾದರೂ ಉಂಟೇ? ಗುಸಲ್ ನೀರು ಚರಂಡಿಗೆ ಹರಿಯುವುದುಂಟೇ… ಗುಸಲ್ ಮಾಡಿಸುವಾಗ ಎಷ್ಟೊಂದು ವಿಧಿ ವಿಧಾನಗಳು…. ದೇವರ ಸ್ತೋತ್ರ, ಪ್ರಾರ್ಥನೆಯೊಂದಿಗೆ ಶುದ್ಧಿಯಾಗುವಂತಹದು.

ಅವಳು ಲಹದ್‌ನ ಹಲಗೆಯ ಮೇಲೆ ಒಂದು ಕಾಲನ್ನಿಟ್ಟು ಪರೀಕ್ಷಿಸಿದಳು… ಅದು ಅಲುಗಾಡದಂತೆ ಭದ್ರವಾಗಿತ್ತು. ಗಿಡ್ಡ ವ್ಯಕ್ತಿ ಅಲ್ಲಿಗೆ ಬಂದ. ಮರಿಯಮ್ ಬೀ ಯುದ್ಧದಲ್ಲಿ ಸೇನಾನಿಯಂತೆ ಆ ವ್ಯಕ್ತಿಗೆ ಆದೇಶಿಸಿದಳು “ನೋಡಿ ಜಮಾಲ್ ಭಾಯಿ…
ಆ ಕಡೆಯಂತೂ ಕಾಂಪೌಂಡಿದೆ. ಈ ಮೂರು ಭಾಗ ಕೂಡ ಶಾಮಿಯಾನ ತರಿಸಿ ಮರೆಮಾಡಿ, ಸ್ನಾನ ಮಾಡಿಸುವಾಗ ಒಂದೇ ಒಂದು ಹುಳು ಕೂಡ ಈ ಕಡ ತಲೆ ಹಾಕಬಾರದು. ತಿಳೀತಾ? ಸತ್ತವ್ರಿಗೆ ಏನೂ ಲಜ್ಜೆ ಇರಲ್ವಾ? ಆದ್ರೆ ಬಾಯಿ ಮಾತ್ರ ಇರಲ್ಲ ಅಷ್ಟೇ ……… ನಮಗೆ ಹೇಳೊದಿಕ್ಕೆ. ಇವತ್ತು ಅಪ್ರಿಗೆ ಗುಸಲ್ ಆದ್ರೆ ನಾಳೆ ನಮಗೂ ಅಗುವಂತದೆ…. ಅದಕ್ಕೆ ಎಷ್ಟ್ ಜೋಪಾನವಾಗಿ ಗುಸಲ್ ಕೊಡೇಕು…. ಹೆಚ್ಚು ಕಡಿಮೆಯಾದ್ರೆ ನಾಳೆ ಅಲ್ಲಾಹ್‌ಗೆ ಉತ್ತರ ಹೇಳೋರು ಯಾರು?” ಅವಳ ಸ್ವಗತ ನಡದೇ ಇತ್ತು. ಗಿಡ್ಡ ವ್ಯಕ್ತಿ ನಾಲ್ಕಾರು ಜನರೊಡನೆ ಬಂದು, ಮೇಲೆ ಶಾಮಿಯಾನ ಕಟ್ಟಿಸುತ್ತಲೂ ಶಾಮಿಯಾನದ ಗೋಡೆಯನ್ನು ನಿರ್ಮಿಸುವ ಕೆಲಸದಲ್ಲಿ ನಿರತನಾಗಿದ್ದ.

ಮೊದಲು ಜೀನತ್‌ಳ ಹೆಣ ಎತ್ತಬೇಕಾದರೆ, ಅವಳ ತಾಯಿ ಅಕ್ಕಂದಿರೆಲ್ಲಾ ಮೂರ್ಛೆ ಹೋದರು, ಹೆಂಗಸರೆಲ್ಲಾ ಬಿಕ್ಕಳಿಸುತ್ತಲೇ ಜೋರಾದ ದನಿಯಲ್ಲಿ ದೇವರ ನಾಮವನ್ನು ಸ್ಮರಿಸಿದರು. ಹೆಂಗಸಿನ ಹೆಣವನ್ನು ಹೆಂಗಸರೆ ಎತ್ತಬೇಕು. ಗಂಡಸರು ಮುಟ್ಟುವಂತಿಲ್ಲ. ಯಾವುದಾದರೂ ಅಚಾನಕವಾದ ಪರಿಸ್ಥಿಯಲ್ಲಿ ಗಂಡಸು ಸತ್ತರ, ಇನ್ಯಾರೂ ಗಂಡಸರು ಅಲ್ಲಿರದಿದ್ದಲ್ಲಿ ಹೆಂಗಸರು ಆತನಿಗೆ ಗುಸಲ್ ಮಾಡಿಸಿ ಮಣ್ಣು ಮಾಡಬಹುದು. ಆದರೆ…. ಹೆಂಗಸು ಸತ್ತ ಕೂಡಲೇ ಗಂಡನಾಗಲೀ, ತಂದೆಯಾಗಲೀ, ಸೋದರನಾಗಲೀ, ಮಗನೇ ಆಗಲಿ ಆ ಹಣವನ್ನು ಮುಟ್ಟಕೂಡದು ಯಾಕಾಗಿ ಈ ರೀತಿಯ ಕಟ್ಟುಪಾಡು ಇರಬಹುದು? ಒಮ್ಮಲೇ ಅವಳಿಗೆ ನೆನಪಾಯಿತು ಅವಳ ತಾಯಿ ಆಗಾಗ್ಗೆ ಹೇಳುವುದಿತ್ತು. “ಏನಂತ ತಿಳಿದಿದೀಯ ಮಗಳೇ ಈ ಹಣ್ಣು ಜನ್ಮ… ಒಬ್ಬ ಹೆಂಗಸು ಶೀಲವಂತೆ ಅಂತ ಅನ್ನಿಸಿಕೊಳ್ಳಬೇಕಾದರೆ ಅವಳು ಸತ್ತು ಮೂರು ದಿನ ಆಗ್ಬೇಕು” ಅಂತ. ಅದರ ನಿಜವಾದ ಅರ್ಥ ಅವಳಿಗೆ ತಿಳಿಯುತ್ತಿದೆ. ಲಹದ್‌ನ ಹಲಗೆಗಳ ಮೇಲೆ ಮಲಗಿದ್ದ ಅನೇಕ ನಿರ್ಜಿವ ಹೆಣ್ಣುಗಳು ಅಲ್ಲಿಯೂ ಎಷ್ಟೊಂದು ಆಕರ್ಷಕವಾಗಿ ಕಾಣಬಲ್ಲರು ಎಂಬುದು ಆಕೆಗೆ ತಿಳಿದಿದೆ. ಮತ್ತೆ ಹೆಣಗಳೊಡನೆ ಸಂಭೋಗ ನಡೆಸುವ ವಿಕೃತ ಮನಸ್ಸಿನವರು ಕೂಡ ಈ ಪ್ರಪಂಚದಲ್ಲಿದ್ದಾರೆ ಎಂದು ಅವಳು ಕೇಳಿದ್ದಾಳೆ. ಮೂರು ದಿನಗಳಲ್ಲಿ ಹಣ ಕೊಳೆಯಲು ಆರಂಭಿಸಿದ ನಂತರ ಹೆಣ್ಣಿಗೆ ಆ ಹೆದರಿಕೆಯಿಲ್ಲ. ಅಬ್ಬ….. ಹಣ್ಣಿನ ಜನ್ಮವೇ….

ಜೀನತ್‌….. ಅದಮ್ ಸಾಹೇಬರ ಏಕೈಕ ಪುತ್ರಿ, ಬೆಂಗಳೂರಿನಲ್ಲಿ ಶ್ರೀಮಂತರ ಮನೆಗೆ ಕೊಟ್ಟಿದ್ದರು ಅವಳನ್ನು. ಎರಡು ಮಕ್ಕಳ ತಾಯಿ, ವಯಸ್ಸು ಇಪ್ಪತ್ತಾರರೊಳಗೆ ಇರಬಹುದು ಎಂದೆನಿಸಿತು ಅವಳಿಗೆ. ಲಹದ್‌ನ ಹಲಗೆಯ ಮೇಲೆ ಮಲಗಿಸಿ ಕಫನ್ನಿನ ಕೆಂಪು ಚಾದರವನ್ನು ಹೊದೆಸಿ, ಅವಳನ್ನು ಸುತ್ತಿದ್ದ ಬಟ್ಟೆಯನ್ನು ಹೊರತೆಗೆದಳು. ಹೀಗೆ ಪೋಸ್ಟ್ ಮಾರ್ಟಮ್ ಆಗಿ ಬಂದಿದ್ದರಿಂದ ಅವಳ ಮೈಮೇಲೆ ಆಭರಣಗಳೂ ಇರಲಿಲ್ಲ. ಸೀರೆಯೂ ಇರಲಿಲ್ಲ. ಮರಿಯಮ್ ಬೀಗೆ ಅದೊಂದು ತುಂಬಲಾರದ ನಷ್ಟ. ಏಕೆಂದರೆ ಹೆಣದ ಮೈಮೇಲಿನ ಬಟ್ಟೆಗೆ ಅವಳೇ ವಾರಸುದಾರಳು ಈಗಲೂ ಪರವಾಗಿಲ್ಲ…. ಅವಳು ಕಡೆಗಣ್ಣಿನಿಂದ ನೋಡಿದಳು. ಹೊಚ್ಚ ಹೊಸ ಬೆಡ್‌ಷೀಟಿನಲ್ಲೇ ಸುತ್ತಿದ್ದಾರೆ. ಅಲ್ಲಲ್ಲಿ ರಕ್ತದ ಕಲೆಗಳು ಮಾತ್ರ. ಅದೇನು ತೊಳೆದರೆ ಹೋಗುತ್ತೆ. ಮೂರು ಹೊಸ ಬೆಡ್‌ಷೀಟ್‌ಗಳು…… “ನೀರು ಬಿಸಿಯಾಗಿರಬಾರದು. ತಣ್ಣಗೂ ಕೂಡ ಇರಬಾರ್‍ದು…… ಸಮವಾಗಿ ಬೆರೆಸಿ…” ಅವಳು ತನ್ನ ಕೆಲಸದಲ್ಲಿದ್ದಂತೆಯೇ ಸಹಾಯಕ್ಕೆ ನಿಂತ ಜೀನತ್‌ಳ ಅಕ್ಕ ಹಾಗೂ ಅತ್ತಿಗೆಯನ್ನು ಜಬರಿಸಿದಳು. ಅವಳು ವಿದಿಬದ್ದವಾಗಿ ಸ್ನಾನ ಆರಂಭಿಸಿದಳು. ಮೊದಲು ಹೆಣದ ಜನನಾಂಗಗಳನ್ನು ಶುದ್ಧಿ ಗೊಳಿಸಿದಳು. ವಜೂ ಮಾಡಿಸಿದಳು. ತಲೆಗೆ ಮೈಗೆ ಅಂಟವಾಳದ ಕಾಯಿ ಹಾಕಿ ಚೆನ್ನಾಗಿ ಉಜ್ಜಿ ತೊಳೆದಳು. ರಕ್ತ ಹರಿದು ಹೋಗುತಿತ್ತು. ಬಿಸಿನೀರು ಬೀಳುತ್ತಿದ್ದಂತೆ ಹಳದಿಯಾಗಿದ್ದ ಮೈ ಬಣ್ಣ ತುಸುವೇ ನಸುಗೆಂಪು ಬಣ್ಣಕ್ಕೆ ಬಂದಂತೆ ತೋರುತಿತ್ತು. ಅವಳು ಕೊನೆಯ ಹಂತವಾಗಿ ಅರಬಿ ಸೂರಃಗಳನ್ನು ಹೇಳುತ್ತಾ ಚೆಂಬಿನಲ್ಲಿದ್ದ ನೀರಿನ ಮೇಲೆ ಉರುಬುತ್ತಾ ಹೆಣದ ಮೇಲೆ ಸುರಿದಳು, ಹೆಣವನ್ನು ಹೊತ್ತುಕೊಂಡು ಹೋಗುವ ಪಲ್ಲಂಗದಲ್ಲಿ ಹೊಸ ಚಾಪೆಯನ್ನು ಹಾಸಿ, ಮೊದಲೇ ಪದರ ಪದರವಾಗಿ ಬಿಡಿಸಿಟ್ಟ ಕಫನ್‌ನ ಮೇಲೆ ಹೆಣವನ್ನು ವರ್ಗಾಯಿಸಿದಳು. ಉದ್ದನೆಯ ವಸ್ತ್ರಗಳು, ತಲೆಯ ವಸ್ತ್ರ, ಎದೆಯ ವಸ್ತ್ರ, ಮೇಲಿನ ಚಾದರದ ವಸ್ತ್ರ ಇವೆಲ್ಲವನ್ನೂ ಒಂದೊಂದಾಗಿ ಹೆಣದ ಮೇಲೆ ಬಿಡಿಸುತ್ತಾ ಹೋದಳು. ಕಾಲುಗಳ ಬಳಿ ಅರ್ಧ ಅಡಿಯಷ್ಟು, ವಸ್ತ್ರವನ್ನು ಮೂಲೆಯ ಬಾಯಿಯಂತೆ ಕಟ್ಟಿ ಅಲ್ಲಿ ಒಂದು ದಾರದಿಂದ ಬಿಗಿದಳು.

ಎಡಭಾಗ ಮತ್ತು ಬಲಭಾಗದ ಪದರಗಳನ್ನು ಒಂದರ ಮೇಲೊಂದು ಬರುವಂತೆ ಸರಿಪಡಿಸಿ, ಸೊಂಟಕ್ಕೆ ಕಫನ್ನಿನ ಒಂದು ಬಟ್ಟೆಯಿಂದ ಬಿಗಿದಳು, ಎದೆ ಭಾಗದ ಮೇಲಿನ ಚಾದರವನ್ನು ಹೆಣದ ಮುಖ ಕಾಣುವಂತೆ ಸ್ವಲ್ಪ ಬಿಡಿಸಿದ್ದು, ಅದರ ಮೇಲೆ ಅಬೀರ್ ಪುಡಿಯನ್ನು ಹರಡಿದಳು. ಒಂದು ಬೆಂಕಿ ಕಡ್ಡಿಯನ್ನು ಬೆರಳಲ್ಲಿ ಹಿಡಿದು ನಾಜೂಕಾಗಿ ಬರೆದಳು. “ಲಾ ಇಲ್ಲಾಹ ಇಲ್ಲಲ್ಲಾಹ್ ಮುಹಮ್ಮದುರ್ರಸೂಲಲ್ಲಾಹ್” (ಅಲ್ಲಾಹನ ಹೊರತು ಬೇರೆ ಯಾರೂ ಪೂಜಾರ್ಹರಿಲ್ಲ. ಮುಹಮ್ಮದ್ ಅಲ್ಲಾಹ್‌ನ ಪ್ರವಾದಿ.)

ನಾಡ ಹೆಂಚಿನಲ್ಲಿಟ್ಟಿದ್ದ ದಪ್ಪ ಕೆಂಡಗಳ ಮೇಲೆ ಸಾಂಬ್ರಾಣಿಯನ್ನುದುರಿಸಿ ಆ ಹೊಗೆಯಿಂದ ಆ ಹೆಣದ ಕೂದಲನ್ನು ಮೊದಲೇ ಒಣಗಿಸಿದ್ದಳು. ಮಧ್ಯದಲ್ಲಿ ಬೈತಲೆ ತೆಗೆದು ಕೂದಲನ್ನು ಇಬ್ಬಾಗ ಮಾಡಿ ಕಫನ್ನಿನೊಳಗಡೆ ಮುಚ್ಚಿದಳು. ಪಾಪ ಮಾಡಿದ ಹೆಂಗಸರಿಗೆ ಎಡಭಾಗದ ಕೂದಲನ್ನು ಆ ಪಾದದ ಎಡ ಹೆಬ್ಬೆರಳಿಗೆ, ಬಲಭಾಗದ ಕೂದಲನ್ನು ಬಲ ಹೆಬ್ಬೆರಳಿಗೆ ಕಟ್ಟಿ ಎಳೆಸುವನಂತೆ, ಆ ದೇವರು…ಆದ್ರೆ… ಈಗ ಹೆಂಗಸ್ರಿಗೆ ಕೂದ್ಲೇ ಇರಲ್ವಲ್ಲಾ ತಲೇಲಿ? ಗಂಡಸರ ಹಂಗೆ ಕ್ರಾಪ್ ಬಿಟ್ಟಿರ್‍ತಾರೆ….. ಹಿಂದೆ…. ಅವಳು ಚಿಕ್ಕವಳಾಗಿದ್ದಾಗ ಅನ್ವರ್ ಎನ್ನುವ ಒಬ್ಬ ಟೈಲರ್ ಇದ್ದ. ಅವಳ ತಂದೆಯ ಸ್ನೇಹಿತ… ಅವನ ಭುಜದವರೆಗೆ ಕೂದಲು ಬಿಟ್ಟುಕೊಂಡು, ತಲೆಯ ಮಧ್ಯದಲ್ಲಿ ಬೈತಲೆ ತೆಗೆದು ನೀಟಾಗಿ ಬಾಚುತ್ತಿದ್ದ ಒಂದು ದಿನವೂ ಪ್ಯಾಂಟೋ…… ಪೈಜಾಮವನ್ನೋ ಹಾಕಿದವನಲ್ಲ ಅವನು ಪಂಚೆಯನ್ನು ಸುತ್ತಿಕೊಂಡು, ಬಳುಕುತ್ತಾ ನಡೆಯುತ್ತಿದ್ದ ಅವನನ್ನು ಕಂಡು ಎಲ್ಲರೂ ಮುಸಿ ಮುಸಿ ನಗುತ್ತಿದ್ದರು. ಅವಳ ತಾಯಿಯೂ ಒಮ್ಮೊಮ್ಮೆ ಸೆರಗಿನ ಮರೆಯಲ್ಲಿ ತುಟಿಗಳನ್ನು ಅದುಮಿ ನಗುವನ್ನು ತಡೆಯಲು ಪ್ರಯತ್ನಿಸುತ್ತಿದ್ದುದುಂಟು. ಈ ಹೆಂಗಸರು, ನುಣ್ಣಗೆ ಕ್ರಾಪ್ ಹೊಡೆದು ಕೊಂಡು ಸೀರೆ ಸುತ್ತಿಕೊಂಡು ಬಳಕುತ್ತಾ ನಡೆದಾಗಲೆಲ್ಲಾ ಅವಳಿಗೆ ಅನ್ವರ್ ಜ್ಞಾಪಕಕ್ಕೆ ಬರುತ್ತಿದ್ದ…

ಈಗ ಹೆಣಕ್ಕೆ ಕಫನ್ ತೊಡಿಸಿಯಾದ ಮೇಲೆ ಒಮ್ಮೆಲೇ ಹೆಂಗಸರೆಲ್ಲಾ ಸೇರಿಬಿಟ್ಟಿದ್ದರು. ಮರಿಯಮ್ ಬೀ ಬೆಂಕಿಕಡ್ಡಿಯನ್ನು ಹಿಡಿದು ನಾಜೂಕಾಗಿ ಸೆಂಟ್‌ನ ಒಂದು ತೆಳುವಾದ ಗೆರೆಯನ್ನು ಮುಚ್ಚಿದ್ದ ರೆಪ್ಪೆಗಳ ಕೆಳಗೆ ಎಳೆದಳು. ಸುರ್ಮಪುಡಿಯಲ್ಲಿ ಆ ಕಡ್ಡಿಯನ್ನು ಅದ್ದಿ, ಕಣ್ಣ ಕೆಳಗೆ ಎಳೆದಾಗ ಹೊಳೆಯುವ ಕಪ್ಪು ಸುರ್ಮದ ನೀಟಾದ ಗೆರೆಯೊಂದು ಮುಚ್ಚಿದ ಕಣ್ಣುಗಳ ಅಂದವನ್ನು ಹೆಚ್ಚಿಸಿತು. ಸೆಂಟನ್ನು ಅವಳ ಹಣೆ, ಕನ್ನೆ, ಎದೆ, ಕೈ, ಕಾಲುಗಳಿಗೆ ಬಳಿದು ಉಳಿದಿದುದನ್ನು ಕಫನ್ನಿನ ಮೇಲೆ ಚಿಮುಕಿಸಿದಳು. ಮಂಜಿನಂತ ಬಿಳಿಯಾದ ಕರ್ಪೂರವನ್ನು ಕಫನ್ನಿನೊಳಗೆ ಸುರಿದಳು….. ನಂತರ ಆ ಹೆಣದ ಹತ್ತಿರದ ಸಂಬಂಧಿಗಳು ಬಳಿ ಬರಲು ಅವಕಾಶವನ್ನಿತ್ತು ಅವಳು ಅಲ್ಲಿಂದ ಹೊರಬಂದಳು.

ಅವಳು ಹಜಾರಕ್ಕೆ ಕಾಲಿಟ್ಟಾಗ, ಇನ್ನೂ ಇಬ್ಬರು ನಿರಾಯಾಸವಾಗಿ ಮಲಗಿದ್ದರು… ಅವಳು ಒಂದು ನೋಟವನ್ನು ಬೀರಿ ಅಲ್ಲಿಂದ ಅಡಿಗೆ ಕೋಣೆಗೆ ಕಾಲಿಟ್ಟಳು. ಅವಳಿಗೆ ಆಯಾಸವೆನಿಸುತ್ತಿತ್ತು. ಅಲ್ಲಿಗೆ ಬಂದು ಒಂದು ಮಣೆಯನ್ನೆಳೆದುಕೊಂಡು ಕುಳಿತಳು. ಸುತ್ತಮುತ್ತಲಿನವರ ಮನೆಗಳಿಂದ ಪಾತ್ರೆಗಟ್ಟಲೆ ಅನ್ನ ಬರುತ್ತಿತ್ತು. ಸತ್ತವರ ಮನೆಗೆ ಕಳಿಸುವ ಪದ್ಧತಿಯ ಪ್ರಕಾರ ಎಲ್ಲರ ಮನೆಗಳಿಂದಲೂ ಅನ್ನ, ಬೇಳೆಸಾರು, ಪಲ್ಯ ಅಥವಾ ಚಟ್ನಿ…. ಇದ್ದವರ ಮನೆಯಿಂದ ಉಪ್ಪಿನಕಾಯಿ ರಾಶಿರಾಶಿಯಾಗಿ ಬಂದು ಬೀಳುತ್ತಿತ್ತು. ಅಡಿಗೆ ಕೋಣೆಯ ತುಂಬಾ ಅನ್ನದ ಪಾತ್ರೆಗಳೇ ಇದ್ದುದರಿಂದ ಆದಮ್ ಸಾಹೇಬರ ಮನೆಯ ಕೆಲಸದಾಕೆ ರಾಬಿಯ ಬುದ್ಧಿವಂತಿಕೆಯನ್ನು ತೋರಿಸುತ್ತಿದ್ದಳು. ಅನ್ನದ ಪಾತ್ರಗಳನ್ನು ಮಾತ್ರ ಉಳಿಸಿಕೊಂಡು, ಎಲ್ಲರ ಮನೆಯಿಂದ ಬಂದ ಬೇಳೆ ಸಾರನ್ನು ಒಂದು ದೊಡ್ಡ ಕೊಳದಪ್ಪಲೆಗೆ ಸುರಿದುಕೊಂಡು ಅವರವರ ಪಾತ್ರೆಗಳನ್ನು ಕೂಡಲೇ ಹಿಂದಿರುಗಿಸುತ್ತಿದ್ದಳು. ಮರಿಯಮ್ ಬೀಗೆ ಅನ್ನದ ಪರ್ವತವನ್ನು ಕಂಡು, ಮರಿಯಮ್ ಬೀಯ ಕರುಳುಗಳು ಹಿಂಡತೊಡಗಿದವು. ಅಡಿಗೆಯಾಕೆ ಧಗಧಗಿಸುವ ಒಲೆಯ ಮೇಲೆ ಕಾಫಿಯ ದೊಡ್ಡ ಪಾತ್ರೆಯನ್ನಿಟ್ಟಿದ್ದಳು. ಸುಮ್ಮನೆ ಕುಳಿತ ಮರಿಯಮ್ ಬೀಯನ್ನು ಕಂಡು ಆಕೆ ವಿಚಾರಿಸಿದಳು.

“ಕಾಫಿ ಕೂಡಲೇ ಚಿಕ್ಕಮ್ಮ?”

“ಬೇಡ ತಾಯಿ…. ಒಂದು ತುತ್ತು ಅನ್ನ ಬೆಳಗಿನಿಂದ ತಿಂದಿಲ್ಲ…. ಈಗ ಸುಸ್ತಾಗಿದೆ…”

“ಅಯ್ಯೋ…. ಚಿಕ್ಕಮ್ಮ…. ಇಷ್ಟೆಲ್ಲಾ ಅನ್ನ…. ಯಾರಿಗೋಸ್ಕರ ಬಂದಿರೋದು…. ತಗೋ…. ಊಟ ಮಾಡು…. ಇನ್ನೂ ಎರಡು ಹೆಣಗಳಿಗೆ ನೀನು ಗುಸಲ್ ಮಾಡಿಸಬೇಕಲ್ಲ….. ಶಕ್ತಿ ಬೇಡ್ವ?” ಒಂದು ತಟ್ಟೆಯ ತುಂಬಾ ಮಲ್ಲಿಗೆ ಮೊಗ್ಗುಗಳಂತಹ ಅನ್ನವನ್ನು ಹಾಕಿ, ಬೇಳೆಯನ್ನು ಸುರಿದು, ಪಲ್ಯ ವನ್ನಿಟ್ಟು, ಉಪ್ಪಿನಕಾಯಿಯನ್ನು ತಟ್ಟೆಯ ಬದಿಗೆ ಅಂಟಿಸಿ, ಒಂದು ಹಪ್ಪಳವನ್ನು ಮೇಲಿಟ್ಟು ಎದುರಿಗಿಟ್ಟಳು.

ಮರಿಯಮ್ ಬೀ ಬೇಗನೆ ಕೈ ತೊಳೆದು ದೇವರ ಹೆಸರನ್ನು ಹೇಳುತ್ತಾ, ಒಂದು ತುತ್ತನ್ನು ಬಾಯಿಗಿಟ್ಟಳು. ಅವಳಿಗೇ ಆಶ್ಚರ್ಯವೆನಿಸುವಂತೆ ಅವಳ ಮಗಳು ಹಸೀನ ಅವಳ ಗಂಟಲಲ್ಲಿ ಅಡ್ಡಲಾಗಿ ಸಿಲುಕಿಕೊಂಡಳು… ಪಾಪ! ಬಾಣಂತಿ ಮೊದ್ಲೇ ಆ ಮಗೂಗೆ ಕುಡಿಸೋಕೆ ಹಾಲಿಲ್ಲ. ಇನ್ನು ಊಟ ಬೇರೆ ಇಲ್ಲ ಅಂದ್ರೆ… ಬರಿ ಹೊಟ್ಟೆಯ ತಾಯಿಯ ಎದೆಯನ್ನು ಮಗುವು ಚೀಪಿದಾಗ ಆಗುವ ಉರಿ, ಸಂಕಟ…. ಯಾ ಅಲ್ಲಾಹ್! ನನ್ನ ಮಗಳು ಹಸಿದು ಕೂತಿದಾಳೆ ಮನಸ್ಸು ಮಗಳನ್ನು ನೆನೆದು ಬಿಕ್ಕಳಿಸುತ್ತಿರುವಾಗ, ಹಸಿದ ಕರಳುಗಳೇ ಗೆದ್ದವು. ಅವಳ ಗಂಟಲಿನಲ್ಲಿ ಅಡರಿ ಕುಳಿತ ಹಸೀನಳನ್ನು ಮುಲಾಜಿಲ್ಲದೆ ಅವು ಕಿತ್ತೆಸೆದು, ಒಂದರ ಹಿಂದೆ ಒಂದು ತುತ್ತುಗಳನ್ನು ಬರಮಾಡಿಕೊಂಡು ನಿರಾಳ ವಾದವು. ಉಕ್ಕಿದ ಕಣ್ಣೀರನ್ನು ಅವಳು ತನ್ನ ಸೆರಗಿನಿಂದ ಒರೆಸಿಕೊಂಡಳು.

ಹೊಟ್ಟೆ ತುಂಬಾ ಉಂಡು… ಉದ್ದನೆಯ ಸ್ಟೀಲ್ ಲೋಟದ ತುಂಬಾ ಕಾಫಿಯನ್ನು ಕುಡಿದು…. ಸೆರಗನ್ನು ಬಿಗಿಯಾಗಿ ಎಳೆದು ಕಟ್ಟಿ ಅವಳು ಲಹದ್‌ನ ಹಲಗೆಗಳ ಮೇಲೆ ರೇಹಾನಳನ್ನು ಮಲಗಿಸಿದಳು. ರೇಹಾನ ಮದುಮಗಳು, ಮರಿಯಮ್ ಬೀಯ ಲೆಕ್ಕಾಚಾರ ದಲ್ಲಿ ಒಂದು ಮಗುವು ಆಗುವವರೆಗೂ ಒಬ್ಬ ಹೆಣ್ಣು ದುಲ್ಲನ್; ಅಂತೆಯೇ ರೇಹಾನಳ ಎರಡೂ ಕೈಗಳಲ್ಲಿ ಮೆಹಂದಿಯ ಬಳ್ಳಿ ಚಿಗುರು ಹೂವುಗಳು ಅರಳಿದ್ದವು. ಅವಳನ್ನು ಸುತ್ತಿದ್ದ ಬೆಡ್‌ಷೀಟನ್ನು ಕಿತ್ತೆಸದು ಮರಿಯಮ್ ಬೀ ನೀರು ಹೊಯ್ಯಲಾರಂಬಿಸಿದಳು. ರಕ್ತ ಒಂದೇ ಸಮನೆ ಹರಿದು ಹೋಗಲಾರಂಭಿಸಿತು. ಅವಳು ಹೆಣಕ್ಕೆ ವಜೂ ಮಾಡಿಸುವಾಗ ಫಕ್ಕನೆ ಅವಳ ಅರಿವಿಗೆ ಬಂದದ್ದು…. ಅವಳ ಮೂಗಿನಲ್ಲಿ ಮೂಗು ಬೊಟ್ಟು ಇದೆಯೆಂಬುದು. ಫಳಫಳನೆ ಹೊಳೆಯುತ್ತಿದ್ದ ಒಂದು ಹರಳಿನ ಮೂಗು ಬೊಟ್ಟು ಅವಳು ಮೂಗಿನ ಹೊಳ್ಳೆಯೊಳಗೆ ಬೆರಳನ್ನು ತೂರಿಸಿ ತಿರುವನ್ನು ಹಿಡಿದು, ಮೂಗುಬಟ್ಟನ್ನು ತಿರುಗಿಸಿದಳು, ಪ್ರಯೋಜನವಿಲ್ಲ. ಅದು ಬಿಗಿಯಾಗಿ ಕೂತಿತ್ತು……

ಮರಿಯಮ್ ಬೀ ತನ್ನ ಪ್ರಯತ್ನವನ್ನು ಮುಂದುವರಿಸಿದ್ದಳು. ಅವಳಲ್ಲಿ ದೂರದ ಆಸೆಯೊಂದು ಅಂಕುರಿಸಿತ್ತು. ಕೆಲವು ಮನೆಗಳಲ್ಲಿ ಸತ್ತ ಹೆಣ್ಣುಮಗಳ ಮೂಗುಬಟ್ಟನ್ನು ಅಪರೂಪಕ್ಕೊಮ್ಮೆ ಯಾರಾದರೂ ಗಸ್ಸಾಲಿನ್‌ಗೆ ದಾನ ಮಾಡುವುದಿತ್ತು. ಹಾಗೇನಾದರೂ… ಅವಳು ಎಲ್ಲಾ ಬಲವನ್ನು ಬಿಟ್ಟು ತನ್ನ ಸೀರೆಯ ಸೆರಗಿನಲ್ಲಿ ಮೂಗುತಿಯ ಮೇಲ್ಭಾಗವನ್ನು ಬಿಟ್ಟು, ತಿರುಗಿಸಿದಳು…. ಅವಳಿಗೆ ನೆರವಾಗಲು ಚೊಂಬಿನಲ್ಲಿ ನೀರು ತುಂಬಿಕೊಡಲು, ಹೆಣವನ್ನು ಎತ್ತಲು, ಬೆನ್ನಿನ ಭಾಗದಲ್ಲಿ ಉಜ್ಜಲು ಮುಂತಾಗಿ ಅವಳಿಗೆ ನೆರವಾಗಲು ನಿಂತಿದ್ದ ರೇಹಾನಾಳ ಅಕ್ಕ, ಕೆಂಪಾಗಿದ್ದ ಮೂಗನ್ನು ಮತ್ತೊಮ್ಮೆ ಒರೆಸಿಕೊಂಡು ಕ್ಷೀಣವಾದ ಧ್ವನಿಯಲ್ಲಿ ನುಡಿದಳು. “ವಜ್ರದ ಮೂಗುಬಟ್ಟು ಅದು. ನನ್ನ ಅಜ್ಜಿಯದು. ಈ ರೇಹಾನ ಅಜ್ಜಿಗೆ ತುಂಬಾ ಮೆಚ್ಚಿನವಳು. ಅದಕ್ಕೆ ಅವಳಿಗೆ ಅಜ್ಜಿ ಆ ಮೂಗುಬೊಟ್ಟನ್ನು ಮದುವೆಯಲ್ಲಿ ಕೊಟ್ಟಿದ್ದರು.” ಮರಿಯಮ್ ಬೀಯ ಆಸೆ ಕ್ಷಣದಲ್ಲಿ ಮಂಗಮಾಯವಾಯಿತು. ಅಂತೂ ಕಷ್ಟಪಟ್ಟು ಮೂಗು ಬೊಟ್ಟನ್ನು ತೆಗೆದು ರೇಹಾನಳ ಅಕ್ಕನ ಕೈಗೆ ನೀಡಿ, ಅತ್ಯಂತ ನಿರ್ವಿಕಾರ ಮನಸ್ಥಿತಿಯಲ್ಲಿ ಅವಳು ಕೆಲಸ ಮುಂದುವರಿಸಿದಳು.

‘ದುರಾದೃಷ್ಟವೆಂದರೆ, ರಹಾನಳಿಗೆ ಬಿಸಿ ನೀರಿನ ಸ್ನಾನ ಮತ್ತು ‘ಅಡೈದಮ್’ ನೀಡಿದ ನಂತರವೂ ರಕ್ತಸ್ರಾವ ನಿಲ್ಲಲಿಲ್ಲ. ಅಡೈದಮ್ ಎಂದರೆ, ಸ್ನಾನದ ಕೊನೆಯ ಹಂತದಲ್ಲಿ ಇಬ್ಬರು ಹೆಣದ ಎರಡು ಕಡೆನಿಂತು, ಶವದ ಹೊಟ್ಟೆಯ ಮೇಲೆ ಒಂದು ಕೈಯನ್ನಿಟ್ಟು, ತಲೆಯ ಕೆಳಗೆ ಇನ್ನೊಂದು ಕೈಯನ್ನಿಟ್ಟು, ಛಕ್ಕನೆ ಹೆಣ ಕೂರುವಂತ ಎತ್ತುತ್ತಾರೆ. ಹೀಗಾದಾಗ, ಹೆಣದ ದೇಹದಿಂದ ಮಲ, ಮೂತ್ರಾದಿ, ರಕ್ತ, ಕಫ ಮುಂತಾದವು ಹೊರಬರುತ್ತದೆ. ಹೀಗೆ ಎರಡು ಬಾರಿ ಎತ್ತಿ, ಮೂರನೆಯ ಬಾರಿ ಸ್ವಲ್ಪ ಎತ್ತುವ ಈ ಕ್ರಮಕ್ಕೆ ‘ಅಡೈದಮ್’ ಎನ್ನುತ್ತಾರೆ ಮರಿಯಮ್ ಬೀ ರೇಹಾನಗೆ ಸ್ನಾನ ಮಾಡಿಸಿದ ನಂತರ ಕೂಗಿದಳು. “ಹತ್ತಿ ತನ್ನಿ” ಆಸ್ಪತ್ರೆಯ ಬಳಕೆಗೆ ಬರುವ “ಸ್ಟರಿಲೈಜ್ ಕಾಟನ್”ನ ಎರಡು ಮೂರು ಬಂಡಲ್‌ಗಳನ್ನು ಯಾರೋ ತಂದರು. ಮರಿಯಮ್ ಬೀ ಹೆಣ ಹೊರುವ ಪಲ್ಲಂಗದ ಮೇಲೆ ಹರಡಿದ್ದ ಕಫನ್ನಿನ ಮೇಲ್ಭಾಗದಲ್ಲಿ ಹತ್ತಿಯ ಪದರಗಳನ್ನು ಬಿಡಿಸಿದಳು. ಆ ಪದರಗಳ ಮೇಲೆ ರೇಹಾನಳನ್ನು ಮಲಗಿಸಿ, ಅವಳ ಎದೆ ಹೊಟ್ಟೆ ಮತ್ತಿತರೆ ರಕ್ತಸ್ರಾವವಾಗುತ್ತಿದ್ದ ಭಾಗಗಳ ಮೇಲೆ ಹತ್ತಿಯನ್ನು ಬಿಡಿಸಿ, ಕಫನ್ನಿನ ಪದರಗಳನ್ನು ಬಿಡಿಸಿದಳು. ರೇಹಾನ ಸುಂದರಳಾಗಿದ್ದ ಹೆಂಗಸು, ಮರಿಯಮ್ ಕೈಚಳಕದಿಂದ ಪೋಸ್ಟ್ ಮಾರ್ಟಮ್‌ಗೊಳಗಾಗಿದ್ದ ಆ ದೇಹ, ಮುಖ ಸುಂದರವಾಗಿಯೇ ಕಾಣುತ್ತಿತ್ತು.

ಇನ್ನು ಅಸ್ಮ…. ಎಳೆಯ ಚಿಗುರು, ಹದಿನಾರರ ಹರೆಯದ ಬಾಲೆ….. ಮರಿಯಮ್ ಚಕಚಕನೆ ಕೆಲಸ ಮುಗಿಸಿದಳು.

ಜಮೀಲ್ ಮತ್ತೊಮ್ಮೆ ಬಂದು ಅವಸರ ಮಾಡಿದ. ಜೊಹರ್ ನಮಾಜಿನ ವೇಳೆಯಾಯಿತು. ಇನ್ನು ಜನಾಜ ನಮಾಜ್ ಕೂಡ ಆಗ್ಬೇಕು, ಬೇಗ ಎತ್ತಿ, ಜಿನತ್, ರೇಹಾನ, ಅಸ್ಮ ಮೂವರ ಮುಖಗಳು ಮುಚ್ಚಿಹೋದವು. ಅವರ ಮುಖದ ಭಾಗವನ್ನು ಕಫನ್ನಿನ ಎಡ, ಬಲ ಪದರಗಳಿಂದ ಮುಚ್ಚಿ, ನೆತ್ತಿಯ ಮೇಲೆ ಎಲ್ಲ ಬಟ್ಟೆಯನ್ನು ಮುಷ್ಟಿಯಲ್ಲಿ ಹಿಡಿದು ಮರಿಯಮ್ ಬೀ ಅಲ್ಲೊಂದು ಗಂಟನ್ನು ಹಾಕಿದಳು. ಪಲ್ಲಂಗದ ಮೇಲಿನ ಮುಚ್ಚಳವನ್ನು ಹಾಕಿದಳು. ಅದನ್ನು ಬಿಗಿದು, ಆ ಮುಚ್ಚಳದ ಮೇಲೆ ದೇವರ ನಾಮವಿದ್ದ ದಪ್ಪ ಬಟ್ಟೆಯನ್ನು ಹರಡಿ ಅದರ ಮೇಲೆ ಮಲ್ಲಿಗೆ ಗುಲಾಬಿಗಳ ಚಾದರಗಳನ್ನು ಹೊದಿಸಿದರು. ಕರ್ಪೂರ, ಅಬೀರ್, ಸೆಂಟ್, ಗುಲಾಬಿ, ಮಲ್ಲಿಗೆಗಳ ಮಿಳಿತ ಹೆಣದ ವಿಶಿಷ್ಟ ವಾಸನೆ, ತಡೆದಿಟ್ಟ ಅಳುವಿನ ಭೋರ್ಗರತ, ಗಂಡಸರ ದೇವರ ನಾಮ ಸ್ಮರಣೆಯೊಡನೆ ಗಂಡಸರು ಛಕಛಕನೆ ಆ ಪಲ್ಲಂಗಗಳನ್ನು ತಮ್ಮ ಹೆಗಲುಗಳ ಮೇಲೆ ಹೊತ್ತು ನಡೆದರು. ಬಿಕ್ಕುತ್ತಾ ಹೆಂಗಸರು ಆ ಕಾಂಪೌಂಡಿನ ಎತ್ತರವಾದ ಗೋಡೆಗಳ ಹಿಂದೆ ಉಳಿದರು. ಮೂರ್ಛೆ ಹೋದವರ ಮುಖಗಳ ಮೇಲೆ ಯಾರೋ ನೀರು ಚಿಮುಕಿಸಿದರು. ಅವರನ್ನು ಹೊತ್ತು ಒಳ ನಡೆದರು. ಹೆಣಗಳಿಗೆ ಸ್ನಾನ ಮಾಡಿಸಿದ ನಂತರ ತುಂಬಿಸಿದ್ದ ಆ ಮೂರು ಹಂತಗಳಲ್ಲಿ ನೀರು ಬಿಸಿಯಾಗಿತ್ತು. ತಾಮ್ರದ ಸ್ಟೀಲಿನ, ಪ್ಲಾಸ್ಟಿಕ್ಕಿನ ಹತ್ತಾರು ಚೊಂಬುಗಳು ಅಲ್ಲಿದ್ದವು. ಹೆಂಗಸರೆಲ್ಲಾ ಪರಸ್ಪರ ಸಾಂತ್ವನ ನೀಡುತ್ತಿದ್ದರು.

ಕೆಲಸಮಯದ ನಂತರ ಹುಡುಗನೊಬ್ಬ ಓಡಿಬಂದ “ಜನಾಜ ನಮಾಜ್ ಆಯಿತು ಈಗ ಖಬರಸ್ತಾನ್‌ಗೆ ಹೋಗ್ತಿದೀವಿ…. ತೋಷ ಕೊಡಿ.” ಯಾರೋ ಒಳಗಿನಿಂದ ಕಲ್ಲು ಸಕ್ಕರೆ, ಖರ್ಜೂರ ತುಂಬಿದ್ದ ಚೀಲವನ್ನು ತಂದುಕೊಟ್ಟರು. ಹುಡುಗ ಓಡಿದ, ಹೆಂಗಸರೆಲ್ಲಾ ಕಿಟಕಿಗಳಲ್ಲಿ ಕಾಂಪೌಂಡಿನ ಉದ್ದಕ್ಕೂ ನಿಗುರಿ ನೋಡಿದರು. ಮಸೀದಿಯಿಂದ ಹೊರಟ ಮೂರು ಶವಗಳನ್ನು ಹೊತ್ತ ಗಂಡಸರು ಸರಸರನೆ ನಡೆಯುತ್ತಿದ್ದರು. ಅಪಾರವಾಗಿ ಜನ ಸೇರಿದ್ದರು. ಆ ಜನ ಮರೆಯಾಗಿ ಹೋದರು.

ಹೆಂಗಸರೆಲ್ಲಾ ಕೂಡಲೇ ಬಿಸಿನೀರಿನ ಹಂಡೆಗಳ ಬಳಿ ಬಂದರು. ಒಂದೊಂದು ಚೊಂಬು ನೀರನ್ನು ತೆಗೆದುಕೊಂಡು ಒಬ್ಬೊಬ್ಬರೂ ವಜೂ ಮಾಡಿದರು, ಅಷ್ಟರಲ್ಲೇ ಹೆಣಗಳನ್ನಿಟ್ಟಿದ್ದ ವಿಶಾಲವಾದ ಹಜಾರವನ್ನು ಈಗಾಗಲೇ ಗುಡಿಸಿ ಸಾರಿಸಿ ಶುಭ್ರವಾದ ಜಮಖಾನೆಗಳನ್ನು ಹಾಸಲಾಗಿತ್ತು. ವಜೂ ಮಾಡಿ ಒಳಗೆ ಬಂದ ಹೆಂಗಸರೆಲ್ಲಾ ಸೀರೆಯ ಸರಗನ್ನು ಚಾದರದಂತೆ ಮಾಡಿ ತಲೆ, ಕೈಗಳು ಎಲ್ಲಾ ಮರೆಯಾಗುವಂತೆ ಹೊದೆದರು. ಒಂದು ಸಾಲಿನ ಹಿಂದೆ ಅನೇಕ ಸಾಲುಗಳು ಮೂಡಿದವು. ಆಳುಕಾಳುಗಳು, ಮಾಸಿಕ ಚಕ್ರಕ್ಕನುಗುಣವಾಗಿ ಮುಟ್ಟಾದವರು, ಎಳೆಯಮಕ್ಕಳ ತಾಯಂದಿರು ನಮಾಜ್‌ನಲ್ಲಿ ಭಾಗವಹಿಸಲಿಲ್ಲ.

ಮರಿಯಮ್ ಬೀ….. ಬಂದು ನೋಡಿದಳು. ಒಂದು ಹಂಡೆಯಲ್ಲಿ ನೀರು ಕುದಿಯುತ್ತಿತ್ತು. ಇಡೀ ಮನೆಯಲ್ಲಿ ಒಂದು ಗಂಡು ಪಿಳ್ಳೆಯೂ ಇರಲಿಲ್ಲ. ಇನ್ನೂ ಒಂದು ಗಂಟೆಯವರೆಗೆ ಬರುವ ಸಂಭವವೂ ಇರಲಿಲ್ಲ. ಲಹದ್‌ನ ಹಲಗೆಗಳ ಪಕ್ಕ ಒಂದು ಚಪ್ಪಡಿಯ ಬಳಿ ಬಂದು ಹಂಡೆಗೆ ಹತ್ತಿರವಾಗಿ ಬಟ್ಟೆಗಳನ್ನು ಕಳಚಲಾರಂಭಿಸಿದಳು. ಲಂಗವನ್ನು ಎದೆಯ ಮಟ್ಟಕ್ಕೆ ಕಟ್ಟಿ, ಅವಳು ಸಾಂಗವಾಗಿ ಸ್ನಾನ ಮಾಡಲಾರಂಭಿಸಿದಳು. ಏನೇನಿರಲಿಲ್ಲ ಅಲ್ಲಿ….? ಅವಳು ಬಹುದಿನದಿಂದ ಕಾಣದೇ ಇದ್ದ ಬಿಸಿನೀರು, ಅಂಟವಾಳ ಕಾಯಿಯ ನೊರೆ, ಸಿನಿಮಾ ತಾರೆಯರ ಸೌಂದರ್ಯದ ಸಾಬೂನು, ಒಂದು ಕೂರತ ಎಂದರೆ ಸ್ನಾನದ ನಂತರ ಬದಲಾಯಿಸಲು ಅವಳು ಬಟ್ಟೆಯನ್ನು ತಂದಿರಲಿಲ್ಲ. ಏನು ಮಾಡುವುದು. ಇದೇ ಬಟ್ಟೆಯನ್ನು ಉಟ್ಟರೂ ಆದೀತು. ಆದರೆ ಅವಳ ಅದೃಷ್ಟಕ್ಕೆ ಅದಮ್ ಸಾಹೇಬರ ಎರಡನೆ ಹೆಂಡತಿ ಆ ಕಡೆ ಬಂದಳು.

“ಅರೇ ಗಸ್ಸಾಲಿನ್ ಚಿಕ್ಕಮ್ಮ….. ಥೂ ನಿನ್ನ ಧೈರ್ಯಕ್ಕಿಷ್ಟು ಬೆಂಕಿ ಹಾಕ…. ಯಾರಾದರೂ ಗಂಡಸ್ರು ಬಂದಿದ್ರೆ?”

“ಇಲ್ಲ ಆಪ…. ಬಿಡಿ….. ನನ್ ಸರ್ವಿಸ್‌ನಲ್ಲೇ ಹಾಗಾಗಿಲ್ಲ ಗಂಡು ಬರ ಬೇಕಾದ್ರೆ….. ಇನ್ನೂ ಮುಕ್ಕಾಲು ಗಂಟೆಯಾಗುತ್ತೆ ನೋಡ್ತಿರಿ…..”

“ಅದ್ಸರಿ ಸ್ನಾನ ಮಾಡಿ ಏನು ಉಡ್ತೀಯ?”

ಅವಳು ಮಾತಾಡಲಿಲ್ಲ.

ಆದಮ್ ಸಾಹೇಬರ ಹೆಂಡ್ತಿ ತನ್ನ ಕೋಣೆಗೆ ಹೋಗಿ ತನ್ನ ಒಂದು ಹಳೆಯ ಲಂಗ ಸೀರೆಯನ್ನು ತಂದಿಟ್ಟು “ಜೀನತ್‌, ರೇಹಾನ ಅವ್ರ ಸೀರೆಗಳು ಬಚ್ಚಲ ಮನೇಲಿವ ಎಷ್ಟೋ” ಎಂದು ಶುಭ ಸುದ್ದಿಯನ್ನು ತಿಳಿಸಿ ಹೋದಳು.

ಮರಿಯಮ್ ಬೀ ಸ್ನಾನ ಮಾಡಿ ಒಗೆದ ಬಟ್ಟೆಗಳನ್ನು ಹಜಾರದಲ್ಲಿ ಕಾಲಿಟ್ಟಾಗ ಹೊಳೆಯುತ್ತಿದ್ದಳು. ಅವಳಿಗೆ ಹಗುರವೆನಿಸಿತು. ಹಜಾರದಲ್ಲಿ ನಮಾಜ್ ಮುಗಿದಿದ್ದು ಪ್ರಾರ್ಥನೆ ನಡೆಯುತ್ತಿತ್ತು. ಮುಂದಿನ ಸಾಲಿನಲ್ಲಿ ಕುಳಿತಿದ್ದ ಹಜ್ ಯಾತ್ರೆ ಮುಗಿಸಿ ಬಂದಿದ್ದ ತೈಮ ಜೊತೆಯಲ್ಲಿ ಎಲ್ಲರೂ ತಮ್ಮ ಕೈಗಳನ್ನು ಮೇಲಕ್ಕೆತ್ತಿ ಪ್ರಾರ್ಥನಾ ಭಂಗಿಯಲ್ಲಿದ್ದರು. ಆ ಊರಿನಲ್ಲಿ ಗಂಡಸರು, ಹೆಂಗಸರು, ಮಕ್ಕಳಾದಿಯಾಗಿ ಎಲ್ಲರೂ ತೈಮ ಎಂದು ಸಂಭೋದಿತರಾಗಿದ್ದ ಆಕೆ ಅತ್ಯಂತ ಕರುಣಾಜನಕವಾಗಿ ಪ್ರಾರ್ಥನೆ ಮಾಡುತ್ತಿದ್ದರು.

“ಹೇ ಅಲ್ಲಾ…. ನೀನೇ ಆದಿ… ನೀನೇ ಅಂತ್ಯ ನೀನು ಕರುಣಾಮಯಿ, ನೀನು ರಹಮಾನ, ನೀನು ರಹೀಮ್….. ನೀನು ಪವಿತ್ರ… ನಿರ್ಣಾಯಕ ದಿನದ ನ್ಯಾಯಾಧಿಪತಿಯೇ ನಮ್ಮ “ಅಮಾಲ್ ನಾಮ” ನಮ್ಮ ಬಲಗೈಯಲ್ಲಿರುವಂತೆ ಕರುಣಿಸು (ಪುಣ್ಯವಂತರಿಗೆ ಬಲಗೈಯಲ್ಲಿ ಪಾಪಿಗಳಿಗೆ ಎಡಗೈಯಲ್ಲಿ ಅಮಾಲ್ ನಾಮ ಸಿಗುವುದೆಂಬ ನಂಬಿಕೆ) ಅಖಿರತ್‍ನ ದಿನದ ಪರೀಕ್ಷೆಯನ್ನು ನಮ್ಮ ಮೇಲೆ ಸುಲಭವಾಗಿಸು…” ಪ್ರತಿಯೊಂದು ಪ್ರಾರ್ಥನಾ ವಾಕ್ಯ ಮುಗಿದಂತೆ ತೈಮ ಒಂದೆರಡು ನಿಮಿಷಗಳ ವಿರಾಮವನ್ನು ನೀಡುವರು. ಅಲ್ಲಿ ನೆರೆದಿದ್ದ ಎಲ್ಲಾ ಹೆಂಗಸರೂ ಒಟ್ಟಾಗಿ “ಅಮೀನ್” ಎಂದು ಒಕ್ಕೊರಲಿನಲ್ಲಿ ನುಡಿಯುವರು.

ಪ್ರಾರ್ಥನೆ ಮುಂದುವರೆಯಿತು.

“ರಕ್ಷಕನೇ…. ಈ ಮನೆಯ ಆತ್ಯಮೂಲ್ಯ ಆತ್ಮಗಳು ನಿನ್ನ ಬಳಿ ಹಾಜರಾಗಿವೆ. ಈ ಪ್ರಪಂಚದ ಎಲ್ಲಾ ವ್ಯಾಮೋಹಗಳಿಂದ ಮುಕ್ತರಾಗಿ ನಿನ್ನ ಪವಿತ್ರ ಲೋಕವನ್ನು ಪ್ರವೇಶಿಸಿದ್ದಾರೆ. ಯಾ ಅಲ್ಲಾಹ್…. ಗೋರಿ ಕಗ್ಗತ್ತಲೆಯಲ್ಲಿ ಅವರಿಗೆ ಬೆಳಕನ್ನು ದಯಪಾಲಿಸು. ಈ ದಿನ ಪರಲೋಕ ಸೇರಿದವರಲ್ಲಿ ಗೃಹಿಣಿಯರಿದ್ದಾರೆ…. ಎಳೆಯ ಹುಡುಗಿಯೂ ಇದ್ದಾಳೆ…. ದೇವಾ! ಅವರ ತಪ್ಪುಗಳನ್ನು ಮನ್ನಿಸು, ತಿಳಿದೊ ತಿಳಿಯದೆಯೋ ಮಾಡಿರುವ ಅವರ ಪಾಪ ಕೃತ್ಯಗಳನ್ನು ಕ್ಷಮಿಸು. ಹೇ ಅಲ್ಲಾ….! ನೀನು ಕರುಣಾಳು…. ಎಪ್ಪತ್ತು ತಾಯಂದಿರ ಪ್ರೀತಿ ನಿನ್ನಲ್ಲಿ ಅಡಕವಾಗಿದೆ. ನಾವು ಮನುಷ್ಯ ಮಾತ್ರದವರು. ಈ ಪ್ರಪಂಚದ ವ್ಯಾಮೋಹದಿಂದ, ವಸ್ತುಗಳ ವ್ಯಾಮೋಹದಿಂದ, ಕಪಟದಿಂದ ನಾವು ನಡೆಸಿರುವ ಎಲ್ಲಾ ಗುನಾಹ್‌ಗಳನ್ನು ಮಾಫ್ ಮಾಡು ಸ್ವಾಮಿ…..”

ಎಲ್ಲರ ಒಕ್ಕೂರಲಿನ ಅಮೀನ್‌ನೊಡನೆ ತೈಮಳ ಪ್ರಾರ್ಥನೆ ಇನ್ನೂ ಮುಂದುವರಿಯುತ್ತಿತ್ತು. ಮರಿಯಮ್ ಬೀ ಕ್ಷಣಕಾಲ ನಿಂತು ನೋಡಿ, ದುವಾದಲ್ಲಿ ಭಾಗವಹಿಸಲೇ ಎಂದು ಯೋಚಿಸಿದಳು. ಆದರೆ ಅವಳಿಗೆ ಅಷ್ಟೊಂದು ವಿರಾಮವಾದರೂ ಎಲ್ಲಿದೆ? ಇಷ್ಟೆಲ್ಲಾ ಕೆಲಸ ಯಥಾವತ್ತಾಗಿ ಮಾಡುತ್ತಿರಬೇಕಾದರೂ ಅವಳ ಮನಸ್ಸೆಲ್ಲಾ ಹೊಟ್ಟೆಗಿಷ್ಟು ಆಧಾರವಾಯಿತೋ ಇಲ್ಲವೋ…. ಚೊಚ್ಚಲು ಬಾಣಂತಿಗೆ ಯಾವತ್ತಾದರೂ ಒಂದು ಕುರಿಯ ಕಾಲಿನ ಸೂಪ್ ಕೊಡಲು ಸಾಧ್ಯವಾಗಲಿಲ್ಲ. ಒಂದು ಮೊಟ್ಟೆಯಾ ಹೋಗಲಿ ಒಂದು ಚಮಚ ತುಪ್ಪಾನೂ ಅವಳ ಅದೃಷ್ಟಕ್ಕೆ ಇಲ್ವಲ್ಲಾ. ಬದಲಿಗೆ ಎರಡು ದಿನವಾದರೂ ಒಣ ರೊಟ್ಟಿಯೂ ಸಿಗದಂತಹ ಪ್ರಸಂಗ… ಹೊಟ್ಟೆ ತುಂಬಿದ್ದರಿಂದ ಅವಳ ಆಳದಿಂದ ಕಿಚ್ಚೊಂದು ನಿಗುರಲಾರಂಭಿಸಿತು. ‘ದಾನೆ ದಾನ ಪ ಲಿಖಾ ಹೈ ಖಾನೇ ವಾಲೇಕನಾಮ್….’ ಅಹ! ಎಂತಹ ಒಳ್ಳೆಯ ಕಲ್ಪನೆ…. ಸಾಹುಕಾರರ ಮನೆಯ ತಟ್ಟೆ ಯಲ್ಲಿಯೇ ಉಳಿಯಲು, ಸಿಂಕ್ ಮೂಲಕ ಹರಿದು ಹೋಗಿ ಮಲಮೂತ್ರಾದಿಗಳೊಡನೆ ಸೇರಲು ಚರಂಡಿಯಲ್ಲಿ ಹರಿದು ಹೋಗಲು ಸಾಕಷ್ಟು ಅನ್ನವನ್ನು ಸೃಷ್ಟಿ ಮಾಡಿರುವ ಅಲ್ಲಾಹನೇ… ನಮ್ಮಂಥ ಬಡವರ ಹೊಟ್ಟೆಗೆ ಸೇರಲು, ನನ್ನ ಹಸೀನಳ ಹೆಸರಿಗೆ ಅನ್ನದ ಅಗಳುಗಳನ್ನು ನೀನ್ಯಾಕ ಸೃಷ್ಟಿ ಮಾಡಿಸಲಿಲ್ಲ? ಇದೇ ಧಾಟಿಯಲ್ಲಿ ಅವಳ ಪ್ರಶ್ನೆಗಳು ಮುಂದುವರಿಯುತ್ತಿದ್ದವೇನೋ…. ಆದರೆ ಕರ್ತವ್ಯ ಅವಳನ್ನು ಕೂಗಿ ಕರೆಯುತ್ತಿತ್ತು.

ಅವಳು ಬಚ್ಚಲು ಮನೆಗೆ ಓಡಿದಳು. ತನ್ನ ಕಣ್ಣುಗಳನ್ನೇ ನಂಬಲಾಗಲಿಲ್ಲ. ಒಂದು ಬಿಳಿಯ ಜರಿ ಹೂಗಳ ಹಸಿರು ರೇಷ್ಮೆ ಸೀರೆ, ಇನ್ನೊಂದು ಕೆಂಪು ಬಾರ್ಡರಿನ ಹಳದಿ ರೇಷ್ಮೆ ಸೀರೆ…. ಆದರೆ ಎಲ್ಲೆಂದರಲ್ಲಿ ರಕ್ತ ಓಕುಳಿಯಾಡಿತ್ತು. ರಕ್ತದ ಆ ವಿಕೃತ ಕಲೆಗಳು, ಹಸಿರಕ್ತದ ವಾಕರಿಕೆ ಬರುವ ವಾಸನ ಯಾವುದೂ ಅವಳನ್ನು ಕಂಗೆಡಿಸಲಿಲ್ಲ. ಇಡೀ ತನ್ನ ಬದುಕಿನಲ್ಲಿಯೇ ಕಾಣದಿದ್ದ ಅದ್ಭುತವೊಂದು ಹೀಗೆ ಉಡುಗೊರೆಯಾಗಿ ದೊರಕುತ್ತದೆಂದು ಅವಳು ಭಾವಿಸಿರಲಿಲ್ಲ. ಆ ಸೀರೆಗಳನ್ನು ಮೃದುವಾಗಿ ಎತ್ತಿಟ್ಟಳು. ಆಶ್ಚರ್ಯ! ಆ ಸೀರೆಗಳಡಿಯಲ್ಲಿ ಆಸ್ಮಳ ಪಂಜಾಬಿ ಡ್ರೆಸ್ ಕೂಡಾ ಇದೆ. ತೀರಾ ಇತ್ತೀಚಿನ ಫ್ಯಾಷನ್‌ನಂತೆ ಹೋಲಿಸಿದ್ದು. ಅವಳು ಅದನ್ನೆತ್ತಿ ಎರಡೂ ಕೈಯಲ್ಲಿ ಹಿಡಿದು ನೋಡಿದಳು. ಪಾಯಿಜಾಮ ಇಡಿಯಾಗಿದೆ. ಪ್ರಾಕನ್ನು ಬಿಡಿಸಿ ನೋಡಿದಳು. ಹಿಂಭಾಗ ಸೊಟ್ಟ ರೀತಿಯಲ್ಲಿ ಕತ್ತರಿಸಲ್ಪಟ್ಟಿತ್ತು. ಏನೊ ಪರಾಗಿಲ್ಲಾ! ಈಗ ಹೇಗೋ ಸಡಿಲವಾದ ಫ್ರಾಕ್ ಹಾಕುವುದು. ಅದನ್ನು ನೇರವಾಗಿ ಕತ್ತರಿಸಿ ಒಂದು ಉದ್ದನೆಯ ಹೊಲಿಗೆ ಹಾಕಿಬಿಟ್ಟರೆ ಹೊಚ್ಚ ಹೊಸ ಡ್ರೆಸ್! ಅವಳ ಮೈಮನಸ್ಸುಗಳು ಕೃತಜ್ಞತೆಯಿಂದ ಬಾಗಿಬಿಟ್ಟವು. ಏಕೆಂದರೆ…. ಕಳೆದ ಹಲವಾರು ವರ್ಷಗಳಿಂದ ಹಸೀನಾಳ ಅದಮ್ಯ ಬಯಕೆಯೊಂದು ಉಳಿದೇಬಿಟ್ಟಿತ್ತು. ಒಂದು ಫ್ರಾಕ್ ಚೂಡಿಯನ್ನು ತೊಡುವುದು. ಆ ಆಸೆಯನ್ನು ಮರಿಯಮ್ ಹಸೀನಳ ಮದುವೆಯಲ್ಲೂ ಪೂರೈಸಲಾಗಿರಲಿಲ್ಲ. ಕೊನೆಗೆ ಅವಳ ಗಂಡನೂ ಕೂಡ ಹಸೀನಳಿಗೆ ತೊಡಿಸಿರಲಿಲ್ಲ. ಮರಿಯಮ್ ಧನ್ಯತಾ ಭಾವದಿಂದ ರೋಮಾಂಚಿತಳಾದಳು. ಬಿಳಿಯ ಡ್ರೆಸ್ ನಷ್ಟಗಲಕ್ಕೂ ಹರಡಿದ್ದ ರಕ್ತದ ಕಂಪು ಅವಳನ್ನೇನೂ ಹಿಮ್ಮೆಟ್ಟಿಸುವಂತಿರಲಿಲ್ಲ. ಅದನ್ನಂತೂ ಒಂದು ಕ್ಷಣ ಎದೆಗವಚಿ ಹಿಡಿದು ನಂತರ ಎಲ್ಲವನ್ನೂ ಸರಿಸಿ ಮೂಟೆ ಕಟ್ಟಿದ್ದಳು.

ಅವಳು ಅತ್ಯಂತ ಪ್ರಸನ್ನತೆಯಿಂದ ಬಚ್ಚಲು ಮನೆಯಿಂದ ಹೊರಗೆ ಬಂದಾಗ, ಗಂಡಸರು ಹಿಂದಿರುಗಿದ್ದರು. ಹೆಂಗಸರಲ್ಲಿ ಕೆಲವರು ತಮ್ಮ ಮನೆಗಳಿಗೆ ಹೋಗಲು ಬುರ್ಕ ತೊಡುತ್ತಿದ್ದರು. ದೂರದೂರಿನಿಂದ ಬಂದಿದ್ದ ನೆಂಟರು ಒಂದೊಂದು ಕೋಣೆ ಗಳಲ್ಲಿ ಮೈ ಚೆಲ್ಲಿದರು.

ಮರಿಯಮ್ ಹಿತ್ತಲಿಗೆ ಬಂದಾಗ…. ಜಮೀಲ್ ಶಾಮಿಯಾನ ತಗೆಸುವ ಸಿದ್ಧತೆಯಲ್ಲಿದ್ದ. ಅವಳನ್ನು ನೋಡಿ ಹತ್ತಿರ ಬಂದವನೇ ಜೇಬಿನಿಂದ ಮುನ್ನೂರು ರೂಪಾಯಿಗಳನ್ನು ತೆಗೆದುಕೊಟ್ಟ. ನಿಧಾನವಾಗಿ ಕೇಳಿದ;

“ಅಕ್ಕಿ, ಗೋಧಿಯನ್ನು ತೆಗೆದುಕೊಂಡಿರಾ ಗಸ್ಸಾಲಿನ್ ಚಿಕ್ಕಮ್ಮ?”

“ಇಲ್ಲ…. ಜಮೀಲ್ ಭಾಯಿ….”

“ಬನ್ನಿ ಇಲ್ಲಿ.”

ಮರಿಯಮ್‌ಳ ಉಡಿತುಂಬಿ ಹೋಯಿತು. ಅಕ್ಕಿ, ಗೋಧಿ, ಉಪ್ಪು… ಅವಳ ಹೊಟ್ಟೆ ತುಂಬಿತು; ನೆತ್ತಿ ತಂಪಾಯಿತು. ಮನಸ್ಸು ತೃಪ್ತಿಯಾಯಿತು.

ಹೊರಲಾರದ ಹೊರೆಗಳನ್ನು ಹೊತ್ತು ತಂದ ಮರಿಯಮ್ ಗುಡಿಸಲ ಹೊಸಿಲನ್ನು ದಾಟುತ್ತಿದ್ದಂತೆಯೇ ಕೂಗಿದಳು.

“ಹಸೀನ… ನನ್ನ ಮಗಳೇ… ಎಲ್ಲಿದ್ದೀಯ?”

ಹಸೀನಾ ಸಿಡುಗುಟ್ಟುತ್ತಿದ್ದ ತಲೆ, ಚುರುಗುಟ್ಟುತ್ತಿದ್ದ ಹೊಟ್ಟೆಯಿಂದ ಕಂಗೆಟ್ಟು ಮಲಗಿದೆಡೆಯಿಂದಲೇ ಕಾಲನ್ನು ನೀಡಿದಳು. ಮರಿಯಮ್, ಜೀನತ್‌, ರೇಹಾನಾ, ಅಸ್ಮಳನ್ನು ಹಿಡಿದದ್ದಕ್ಕಿಂತಲೂ ಸುಲಭವಾಗಿ ಹಸೀನಳನ್ನು ಹಿಡಿದೆತ್ತಿ ಕೂರಿಸಿ, ತಂದಿದ್ದ ಅನ್ನ ಸಾರನ್ನು ಕರೆಸಿ ಅವಳ ಬಾಯಿಗಿಟ್ಟಳು. ಹಸೀನಳಿಗೆ ನುಂಗಲು ಸಾಧ್ಯವಾಗಲಿಲ್ಲ. ಒಂದು ಗುಟುಕು ನೀರನ್ನು ಕುಡಿಸಿ ಅನ್ನದ ಉಂಡೆಗಳನ್ನು ಅವಳ ಬಾಯಿಗಿಡುತ್ತಾ ಹೋದಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮನಸ್ಸು
Next post ಕವಿ

ಸಣ್ಣ ಕತೆ

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

cheap jordans|wholesale air max|wholesale jordans|wholesale jewelry|wholesale jerseys