ಬಲಿ

ಬಲಿ

ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ ಬದಿಯಲ್ಲಿದ್ದ ಬೂದಿರಾಶಿಯ ಪಕ್ಕದಿಂದ ಗರಗಸದ ಹುಡಿಯನ್ನು ಕೈಯಿಂದ ತೆಗೆದು ಒಲೆಯ ಒಳಗೆ ಹಾಕಿದಳು. ಗರಗಸದ ಹುಡಿಯ ಮೇಲೆ ಚಿಮಿಣಿಯೆಣ್ಣೆಯನ್ನು ಸ್ವಲ್ಪ ಸುರಿದು ಕಡ್ಡಿ ಗೀರಿ ಬೆಂಕಿ ಹಚ್ಚಿದಳು. ಬೆಂಕಿ ಹೊತ್ತುತಿದ್ದಂತೆ ಒಲೆಯ ಹಿಂಬದಿಯಲ್ಲಿದ್ದ ಕಟ್ಟಿಗೆಯ ತುಂಡುಗಳನ್ನು ತೆಗೆದು ಗರಗಸದ ಹುಡಿಯ ಮೇಲೆ ಇಟ್ಟಳು. ಸ್ವಲ್ಪ ಹೊತ್ತು ಉರಿದ ಕಟ್ಟಿಗೆ ನಂದ ತೊಡಗಿದಂತೆ ಅವಳು ಊದುಕೊಳವೆಯನ್ನು ತೆಗೆದುಕೊಂಡು ಊದತೊಡಗಿದಳು. ಕೆಂಡ ಜಾಸ್ತಿ ಕೆಂಪಗಾಗುತಿತ್ತೇ ಹೊರತು ಬೆಂಕಿ ಹಿಡಿಯಲಿಲ್ಲ. ಅಲ್ಲಿಯೇ ರಾಶಿ ಹಾಕಿದ್ದ ಒಣ ತರಗೆಲೆಗಳನ್ನು ತೆಗೆದು ಕೆಂಡದ ಮೇಲೆ ಹಾಕಿ ಮತ್ತೂ ಜೋರಾಗಿ ಊದತೊಡಗಿದಳು. ಉಸಿರಿನ ರಭಸಕ್ಕೆ ಕೆಂಡದ ಮೇಲಿನ ಬೂದಿ ಹಾಗೂ ಗರಗಸದ ಹುಡಿಯು ಹಾರಿ ಅವಳ ತಲೆಕೂದಲು, ಕಣ್ಣು, ಮೂಗು ಹಾಗೂ ಕೆನ್ನೆಯ ಮೇಲೆ ಕುಳಿತುಕೊಂಡವು. ಊದಿದಷ್ಟೂ ಹೊಗೆಯೇ ಬರತೊಡಗಿ ಆ ಹೊಗೆಯು ಇಡೀ ಅಡುಗೆ ಕೋಣೆಯನ್ನು ಆವರಿಸಿ ಅವಳಿಗೆ ದಮ್ಮು ಕಟ್ಟಿದಂತಾಯಿತು. ಊದುಕೊಳವೆಯನ್ನು ಅಲ್ಲಿಯೇ ಬಿಸಾಡಿ ಕೆಮ್ಮುತ್ತಾ ಅವಳು ಬಾಗಿಲ ಹತ್ತಿರ ಬಂದು ಅಂಗಳವನ್ನು ದೃಷ್ಟಿಸಿದಳು.

“ಯಾಕೋ ಮಗಾ, ಆ ಹೇಂಟೆಯನ್ನು ಕೈಯಲ್ಲಿ ಹಿಡಿದುಕೊಂಡು ಹಿಂಸೆ ಕೊಡುತ್ತೀಯಾ? ಬಿಟ್ಟು ಬಿಡು ಅದನ್ನು” ಅವಳು ಜೋರಾಗಿ ಕೂಗಿ ಹೇಳಿದಳು.

“ಇಲ್ಲಮ್ಮಾ. ನಾನು ಬಿಡೋಲ್ಲ, ಆ ಕೆಂಪು ಹುಂಜಕ್ಕೆ ಎಷ್ಟು ಕೊಬ್ಬು ನೋಡು. ನಮ್ಮ ಹೇಂಟೆಯನ್ನು ಬೆನ್ನಟ್ಟಿ ಕಚ್ಚುತ್ತಾನೆ. ನಾನು ಬಿಡೋಲ್ಲ” ಹೀಗೆ ಹೇಳುತ್ತಾ ಆ ಹುಡುಗ ಸಣ್ಣ ಸಣ್ಣ ಕಲ್ಲುಗಳನ್ನು ಹೆಕ್ಕಿಕೊಂಡು ಹುಂಜಕ್ಕೆ ಎಸೆಯತೊಡಗಿದ. ಆದರೂ ಹುಂಜ ಅವನ ಸುತ್ತು ತಿರುಗುವುದು ನಿಲ್ಲಿಸಲಿಲ್ಲ.

ಅಡುಗೆ ಕೋಣೆಯ ಹೊಗೆ ಕಡಿಮೆಯಾದಂತೆ ಅವಳು ಪುನಃ ಒಲೆಯ ಬದಿಗೆ ಬಂದಳು. ಸ್ವಲ್ಪ ಸೀಮೆಯೆಣ್ಣೆಯನ್ನು ಕಟ್ಟಿಗೆಯ ಮೇಲೆ ಜಾಸ್ತಿ ಸುರಿದಳು. ಕಡ್ಡಿಗೀರಿ ಬೆಂಕಿ ಹೊತ್ತಿಸಿ ಅದು ನಂದನಂತೆ ಆಗಾಗ್ಗೆ ಸ್ವಲ್ಪ ಸ್ವಲ್ಪವೇ ತರಗೆಲೆಯನ್ನು ಹಾಕಿ ಬೆಂಕಿಯು ಕಟ್ಟಿಗೆಯನ್ನು ಆವರಿಸುವಂತೆ ಮಾಡಿದಳು. ಬೆಂಕಿಯು ಕಟ್ಟಿಗೆಯನ್ನು ಸಂಪೂರ್ಣ ಆವರಿಸಿದಂತೆ ಅವಳು ನಿರಾಳಲಾದಳು. ಹಾಲು ಕುದಿಯುತ್ತಿದ್ದಂತೆ ಪಾತ್ರೆಯನ್ನು ಒಲೆಯಿಂದ ಕೆಳಗಿಳಿಸಿ ಸಕ್ಕರೆ ಹಾಕಿ ಎರಡು ಗ್ಲಾಸಿಗೆ ಸುರಿದಳು. ತಿನ್ನಲು ಏನಾದರೂ ಇದೆಯೆ? ಎಂದು ಪಕ್ಕದಲ್ಲಿದ್ದ ಹಲಗೆಯ ಸೆಲ್ಫ್ ಮೇಲೆ ಕೈಯಾಡಿಸಿದಳು. ಒಂದು ಪ್ಲಾಸ್ಟಿಕ್ ಪೊಟ್ಟಣ ಕೈಗೆ ಸಿಕ್ಕಿತು. ಅದರಲ್ಲಿದ್ದ ರಸ್ಕ್, ತುಂಡುಗಳನ್ನು ಕೈಹಾಕಿ ಹೊರಗೆ ತೆಗೆದಳು. ಆದರೆ ಸಣ್ಣ ಸಣ್ಣ ಇರುವೆಗಳು ರಸ್ಕಿನ ತುಂಡುಗಳನ್ನು ಮುತ್ತಿಕೊಂಡಿದ್ದು ಅವುಗಳು ಅವಳ ಕೈಗೂ ಹರಡಿಕೊಂಡಿತು. ರಸ್ಕಿನ ತುಂಡುಗಳನ್ನು ಒಮ್ಮೆ ಜೋರಾಗಿ ನೆಲಕ್ಕೆ ಕೊಡವಿಕೊಂಡಳು. ಇರುವೆಗಳು ಚದುರಿಹೋದ ಮೇಲೆ ಅವಳು ರಸ್ಕ್‌ಗಳನ್ನು ಹೆಕ್ಕಿಕೊಂಡಳು. “ಬಾ ಮಗೂ ಬಾ. ಹಾಲು ಕುಡಿದು ಆಮೇಲೆ ಆಡುವಿಯಂತೆ”. ಅವಳು ಜೋರಾಗಿ ಕೂಗಿ ಮಗನನ್ನು ಕರೆದಳು. ತಾಯಿಯ ಕರೆ ಕೇಳಿದ ಕೂಡಲೇ ಹುಡುಗ ಕೈಯಲ್ಲಿದ್ದ ಹೇಂಟೆಯನ್ನು ಅಲ್ಲಿಯೇ ಬಿಸಾಡಿ ಅಡುಗೆ ಕೋಣೆಗೆ ಓಡಿಬಂದು ಅವಳ ಹತ್ತಿರ ಕುಳಿತನು. ರಸ್ಕಿನ ತುಂಡುಗಳನ್ನು ಹಾಲಿಗೆ ಮುಳುಗಿಸಿ ಅವನು ಗಬ ಗಬ ತಿನ್ನುವುದನ್ನೇ ಅವಳು ತದೇಕಚಿತ್ತದಿಂದ ನೋಡುತಿದ್ದಳು. ಅವನ ಗ್ಲಾಸಿನ ಹಾಲು ಮುಗಿಯುತಿದ್ದಂತೆ ಅವಳು ತನ್ನ ಗ್ಲಾಸಿನ ಹಾಲನ್ನು ಕೂಡಾ ಅವನ ಗ್ಲಾಸಿಗೆ ಸುರಿದು ತಾನು ಹಾಲು ಕುಡಿದಂತೆ ಅನುಕರಣೆ ಮಾಡಿದಳು. “ಮಗಾ, ಇನ್ನು ಆಟ ಆಡಬೇಡ. ಸ್ನಾನ ಮಾಡಿಸುತ್ತೇನೆ. ನಾಳೇ ಹಬ್ಬ. ನಾನು ಒಳ್ಳೆಯ ಮದರಂಗಿ ತಂದಿದ್ದೇನೆ ನೋಡು. ನಿನ್ನ ಕೈ ತುಂಬಾ ಚಿತ್ರ ಬಿಡಿಸುತ್ತೇನೆ. ನಾಳೆ ಬೆಳಗ್ಗೆ ನೋಡುವಿಯಂತೆ.” ನಿನ್ನ ಕೈಯ ಮದರಂಗಿ ಜಾಸ್ತಿ ಕೆಂಪು ಆದರೆ ನೀನು ತುಂಬಾ ಅದೃಷ್ಟವಂತನು ಎಂದು ಅರ್ಥ. ಅವಳು ಮಗುವನ್ನು ಆಲಂಗಿಸುತ್ತಾ ಹೇಳಿದಳು.

“ಹಾಗಾದರೆ ನೀನು ಕೂಡಾ ಮದರಂಗಿ ಇಡಮ್ಮಾ. ನೋಡುವ, ಯಾರ ಕೈ ಜಾಸ್ತಿ ಕೆಂಪಾಗುತ್ತದೆ ಮತ್ತು ಯಾರು ಹೆಚ್ಚು ಅದೃಷ್ಟವಂತರು ಎಂದು” ಹುಡುಗ ತಾಯಿಯ ಸೆರಗನ್ನು ಎಳೆಯುತ್ತಾ ಹೇಳಿದ.

“ಇಲ್ಲ ಮಗೂ ನಾನು ಆ ಅದೃಷ್ಪ ಪಡಕೊಂಡು ಬಂದಿಲ್ಲ”

ಉಮ್ಮಳಿಸಿ ಬರುವ ದುಃಖವನ್ನು ತಡೆದುಕೊಳ್ಳುತ್ತಾ ಅವಳು ಎದ್ದು ನಿಂತಳು. ಹುಡುಗ ಆಂಗಳಕ್ಕೋಡಿದ. ಅವಳು ಅಡುಗೆ ಕೋಣೆ ಸೇರಿದಳು. ಬಹಳ ಕಷ್ಟದಿಂದ ಆ ಒಲೆಯೊಂದಿಗೆ ಹೋರಾಡಿ ಒಂದಿಷ್ಟು ಅನ್ನ ಬೇಯಿಸಿದಳು. ನಾಳೆ ಹಬ್ಬವಾದರೂ ಮನೆಯಲ್ಲಿ ಪದಾರ್ಥಕ್ಕೆ ಬೇಕಾದ ಸಾಮಾಗ್ರಿ ಇರಲಿಲ್ಲ. ಅಳಿದುಳಿದ ಒಂದಿಷ್ಟು ಒಣ ಮೀನಿನ ತುಂಡುಗಳನ್ನು ಸುಟ್ಟು ತಿಂದರಾಯಿತು ಎಂದುಕೊಂಡಳು. ಕತ್ತಲಾದೊಡನೆ ಒಳಗೋಡಿ ಬಂದ ಮಗನನ್ನು ಸ್ನಾನ ಮಾಡಿಸಿ ಊಟ ಬಡಿಸಿ ಮದರಂಗಿ ಇಡಲು ಮಲಗುವ ಕೋಣೆಗೆ ಕರಕೊಂಡು ಹೋದಳು. ಮಗನಿಗೆ ಇಪ್ಟವಾದಂತೆ ಅವನು ಹೇಳಿದ ರೀತಿಯಲ್ಲಿ ಅವನ ಎರಡೂ ಕೈಗಳಿಗೆ ಮದರಂಗಿಯಿಂದ ಚಿತ್ರಗಳನ್ನು ಬಿಡಿಸಿದಳು. ಹುಡುಗ ತನ್ನ ಕೈಗಳು ಬಟ್ಟೆ ಬರೆಗಳಿಗೆ ತಾಗದಂತೆ ಬಹಳ ಜಾಗ್ರತೆ ವಹಿಸಿ ಅಂಗಾತ ಮಲಗಿ ನಿದ್ರೆ ಹೋದನು. ಜಗತ್ತಿನ ಕಪಟವನ್ನರಿಯದ ತನ್ನ ಮಗುವಿನ ಮುಗ್ದ ಮುಖವನ್ನು ಅವಳು ಎವೆಯಿಕ್ಕದೆ ನೋಡಿದಳು. ಸ್ವಲ್ಪ ಹೊತ್ತಿನ ನಂತರ ಅವಳಿಗೆ ಏನೋ ಅಲೋಚೆನೆ ಬಂತು. ತನ್ನ ಎರಡೂ ಕೈಗಳನ್ನು ನೋ ಡಿಕೊಂಡಳು. ಕಪ್ಪು ಬಣ್ಣಕ್ಕೆ ತಿರುಗಿದ ಗಾಜಿನ ಬಳೆಗಳನ್ನು ತೊಟ್ಟುಕೊಂಡ ಹಾಲು ಬಣ್ಣದ ದುಂಡಗಿನ ತನ್ನ ಸುಂದರ ಬಿಳಿ ಕೈಗಳನ್ನು ಜೋಡಿಸಿಕೊಂಡು ಮತ್ತೊಮ್ಮೆ ನೋಡಿಕೊಂಡಳು. ಅವುಗಳ ಸೌಂದರ್ಯಕ್ಕೆ ತಾನೇ ಮಾರು ಹೋದಳು. ಈ ಸುಂದರ ಕೈಗಳ ಮೇಲೆ ಮದರಂಗಿಯ ಚಿತ್ತಾರ ಬಿಡಿಸಲು ಅವಳಿಗೆ ಮನಸ್ಸಾಯಿತು. ಅವಳು ಮದರಂಗಿಯ ಟ್ಯೂಬನ್ನು ಕೈಗೆತ್ತಿಕೊಂಡಳು. ಆದರೆ ಯಾಕೋ? ಅವಳ ಕಣ್ಣುಗಳು ಹನಿಗೂಡಿದವು. ಕೈಗಳು ನಡುಗತೊಡಗಿದವು. ಟ್ಯೂಬನ್ನು ದೂರ ಬಿಸಾಡಿ ಮಗುವಿನ ಪಕ್ಕ ಬೋರಲಾಗಿ ಮಲಗಿಕೊಂಡಳು.

ಬೆಳಗ್ಗಿನ ಜಾವ. ಹದವಾಗಿ ಕೊರೆಯುತ್ತಿರುವ ಚಳಿಗೆ ಅವಳಿಗೆ ಎಚ್ಚರವಾಯಿತು. ಲೋಕದ ಪರಿವೆಯಿಲ್ಲದೆ ಮಲಗಿದ ಮಗುವಿನ ಮೈಮೇಲೆ ಅಲ್ಲಿಯೇ ಹಗ್ಗದಲ್ಲಿ ನೇತುಹಾಕಿದ ತನ್ನ ಹಳೆಯ ಸೀರೆಯನ್ನು ಹೊದಿಸಿದಳು. ರಾತ್ರಿ ಸುಮಾರು ಹೊತ್ತಿನವರೆಗೂ ನಿದ್ರೆ ಬಾರದಿದ್ದುದರಿಂದ ಅವಳ ಕಣ್ಣುಗಳು ಉರಿಯುತಿದ್ದುವು. ಹಣೆ ಸಿಡಿಯುತಿತ್ತು.

ಬೆಳಗ್ಗಿನ ಫಲಹಾರ ಮುಗಿಯಿತು. ಅವಳು ಮಗುವನ್ನು ಸ್ನಾನ ಮಾಡಿಸಿ ತಾನು ವಾರದ ಸಂತೆಯ ದಿನ ರಸ್ತೆ ಬದಿಯಲ್ಲಿ ರಾಶಿ ಹಾಕಿ ಬಟ್ಟೆ ಬರೆ ಮಾರುವವನಿಂದ ಚೌಕಾಶಿ ಮಾಡಿಕೊಂಡು ಮಗನಿಗೆ ಒಂದು ಚಡ್ಡಿ ಹಾಗೂ ಟೀ ಶರ್ಟ್‌ ಖರೀದಿಸಿದ್ದಳು. ಅದನ್ನು ಮಗನಿಗೆ ತೋರಿಸದೆ ಒಮ್ಮೆಲೇ ಖುಷಿ ಮಾಡಿಸಲು ಅಡಗಿಸಿಟ್ಟಿದ್ದಳು. ಇವತ್ತು ಅದನ್ನು ತನ್ನ ಹಳೆಯ ಬಟ್ಟೆ ಕಟ್ಟಿನಿಂದ ಹೊರತೆಗೆದು ಮಗನಿಗೆ ತೋರಿಸಿದಳು. ಹುಡುಗನ ಸಂತೋಷಕ್ಕೆ ಪಾರವೇಯಿರಲಿಲ್ಲ. ಅವನು ಬೇಗ ಬೇಗನೆ ಹೊಸ ಬಟ್ಟೆಗಳನ್ನು ಧರಿಸಿ ಕುಣಿದಾಡಿದ. ಏಕೋ ಅವನ ಮುಖ ಒಮ್ಮೆಲೆ ಸಣ್ಣಗಾಯಿತು.

“ಅಮ್ಮಾ, ನಿನಗೆ ಹೊಸ ಬಟ್ಟೆ ಇಲ್ಲವೇನಮ್ಮಾ”?

ಅವಳು ಉತ್ತರಕ್ಕಾಗಿ ತಡವರಿಸಿದಳು. ಮತ್ತು ಸ್ವಲ್ಪ ಹೊತ್ತು ಅಲೋಚನೆಯಲ್ಲಿ ಬಿದ್ದಳು.

“ಇದೆ ಮಗು. ನನಗೆ ತುಂಬಾ ಬಟ್ಟೆ ಬರೆಯಿದೆ. ಅದರಲ್ಲಿ ಒಂದನ್ನು ಉಟ್ಟುಕೊಳ್ಳುತ್ತೇನೆ. ಇವತ್ತು ಹಬ್ಬ ತಾನೇ….. ನೀನೀಗ ಮಸೀದಿಗೆ ಹೋಗು ಹಿಂದೆ ಬರುವಾಗ ನಾನು ರೆಡಿಯಾಗಿರುತ್ತೇನೆ”. ಅವಳು ನಗೆಯ ಮುಖವಾಡ ತೋರಿಸಿದಳು.

“ಇಲ್ಲಮ್ಮಾ ನಾನು ಮಸೀದಿಗೆ ಹೋಗುವುದಿಲ್ಲ. ಎಲ್ಲರೂ ಅವರವರ ತಂದೆ, ಅಣ್ಣ, ತಮ್ಮ, ಚಿಕ್ಕಪ್ಪ, ದೊಡ್ಡಪ್ಪರೊಂದಿಗೆ ಮಸೀದಿಗೆ ಹೋಗುತ್ತಾರೆ. ರಸ್ತೆಯಲ್ಲಿ ಹೋಗುವಾಗ ಅವರ ನಗೆ- ತಮಾಷೆ ನನಗೆ ಹೊಟ್ಟೆಕಿಚ್ಚು ತರಿಸುತ್ತದೆ. ನನಗೆ ಯಾರಿದ್ದಾರಮ್ಮಾ? ನಾನು ಹೋಗುವುದಿಲ್ಲ”. ಅವನು ಅಳತೊಡಗಿದನು. ಅವಳು ಒಮ್ಮೆ ಅಧೀರಳಾದಳು. ಒತ್ತಿ ಬರುವ ಕಣ್ಣೀರನ್ನು ತಡೆದುಕೊಂಡಳು. ಮಗನನ್ನು ತನ್ನ ಬಳಿ ಸೆಳೆದುಕೊಂಡು ಅವನ ತಲೆಕೂದಲ ಮೇಲೆ ಕೈಯನ್ನಾಡಿಸಿದಳು. ಮುಖವನ್ನು ಮುದ್ದಿಸಿದಳು. ತೇವಗೊಂಡ ಕಣ್ಣಿಂದ ಮಗುವಿನ ಕೆನ್ನೆ ತೋಯಿಸಿದಳು. ಹುಡುಗ ತಾಯಿಯನ್ನು ದಿಟ್ಟಿಸಿ ನೋಡಿದ. ಅವನು ಗಟ್ಟಿ ಸ್ವರದಲ್ಲಿ ಹೇಳಿದ. “ನೀನು ಅಳಬೇಡಮ್ಮಾ. ನಾನು ಒಬ್ಬನೇ ಮಸೀದಿಗೆ ಹೋಗುತ್ತೇನೆ. ಒಬ್ಬನೇ ನನಗೆ ಯಾರೂ ಬೇಡ” ಹುಡುಗ ತಾಯಿಯನ್ನು ಅಪ್ಪಿ ಹಿಡಿದನು.

“ನೀನು ಒಬ್ಬನಲ್ಲ ಮಗೂ. ನಿನಗೆ ದೇವರಿದ್ದಾನೆ. ನಿನ್ನ ಎಡಬಲಕ್ಕೆ ಮಲಕುಗಳಿವೆ. ನಿನಗೆ ಅವರ ರಕ್ಷಣೆಯಿದೆ. ನೀನು ಹೋಗು ಮಗೂ” ಅವಳು ಗದ್ಗದಿತ ಕಂಠದಿಂದ ಹೇಳಿದಳು. ಹುಡುಗನ ಕೈ ಹಿಡಿದು ರಸ್ತೆ ವರೆಗೂ ಬಂದಳು. ಅವಳ ಕೈ ನಡುಗುತಿತ್ತು. ರಸ್ತೆ ಬದಿಯ ಲೈಟ್ ಕಂಬದ ಮರೆಯಲ್ಲಿ ನಿಂತು ಮಗುವನ್ನು ಕಳುಹಿಸಿಕೊಟ್ಟಳು. ಹುಡುಗ ತಲೆತಗ್ಗಿಸಿಕೊಂಡು ಒಬ್ಬ ನಡೆದು ಹೋಗುತಿದ್ದುದ್ದನ್ನು ಅವಳು ಬಹಳ ಹೊತ್ತು ನೋಡುತ್ತಾ ನಿಂತಳು. ಇದುವರೆಗೂ ಒತ್ತಿ ಹಿಡಿದ ಕಣ್ಣೀರು ಧಾರಾಕಾರವಾಗಿ ಹರಿಯತೊಡಗಿತು. ರಸ್ತೆಯ ಎರಡೂ ಬದಿಗಳಲ್ಲಿ ಜಮಾತಿನವರು ಗುಂಪು ಗುಂಪಾಗಿ ಮಸೀದಿಗೆ ನಡೆದು ಹೋಗುತ್ತಿದ್ದರು. ಹೊಸ ಹೊಸ ಕಲರ್ ಕಲರ್ ಬಟ್ಟೆಗಳು! ಶೂ ಚಪ್ಪಲಿಗಳು! ವಿವಿಧ ಆಕಾರದ ಟೊಪ್ಪಿಗಳು! ಕೆಲವರು ಜೋಕ್ಸ್ ಕಟ್ ಮಾಡಿಕೊಂಡು ನಗಾಡುತ್ತಾ ಹೋಗುತಿದ್ದರೆ ಇನ್ನು ಕೆಲವರು ಹೆಗಲಿಗೆ ಕೈಹಾಕಿಕೊಂಡು ಮಧ್ಯಾಹ್ನ ನಂತರದ ಸಿನಿಮಾ ಪ್ರೋಗ್ರಾಂ ಬಗ್ಗೆ ಚರ್ಚಿಸುತ್ತಾ ಹೋಗುತಿದ್ದರು. ಸೆಂಟಿನ ಪರಿಮಳ ಅವಳ ಮೈಮನಕ್ಕೆ ಪುಳಕ ನೀಡುತಿತ್ತು. ಕೆಲವು ಚಿಗುರು ಮೀಸೆಯ ಪುಂಡ ಹುಡುಗರು ಕೈ ಬೀಸಿಕೊಂಡು, ನಗಾಡುತ್ತಾ ನಡೆದು ಹೋಗುವಾಗ ಅವಳು ಅವರನ್ನು ಕದ್ದು ಕದ್ದು ನೋಡಿದಳು. ಅವಳಿಗೆ ತನ್ನ ಹಿಂದಿನ ನೆನಪಾಯಿತು. ಯಾಕೋ? ಮನಸ್ಸು ಸ್ಥಿಮಿತ ಕಳೆದುಕೊಳ್ಳುವುದನ್ನು ತಡೆಯಲು ಅವಳು ಸೀರೆಯ ಸೆರಗನ್ನು ತಲೆಗೆ ಎಳೆದುಕೊಂಡು ಮನೆಯ ಕಡೆಗೆ ಓಡಿದಳು. ಮನೆಯ ಒಳಗೆ ಬಂದು ಮುಂಬಾಗಿಲು ಭದ್ರ ಪಡಿಸಿ ಹಾಸಿಗೆಯ ಮೇಲೆ ಬೋರಲು ಬಿದ್ದುಕೊಂಡಳು ಜೋರಾಗುತ್ತಿರುವ ಎದೆಯ ಬಡಿತವನ್ನು ನಿಯಂತ್ರಿಸಲು ಅವಳು ಎದ್ದು ಬಚ್ಚಲು ಕೋಣೆಗೆ ಹೋಗಿ ಮುಖಕ್ಕೆ ತಣ್ಣೀರು ಚಿಮುಕಿಸಿಕೊಂಡಳು. ಎಷ್ಟೋ ಹೊತ್ತಿನ ನಂತರ ಅವಳ ಮನಸ್ಸು ಸ್ಥಿಮಿತಕ್ಕೆ ಬಂತು. ಹಾಗೆಯೇ ಅವಳು ಮುಂಬಾಗಿಲು ತೆರೆದು ಅಂಗಳಕ್ಕೆ ಬಂದಳು. ಅಂಗಳದಲ್ಲಿ ಹಿಂದಿನ ದಿನವೂ ಬಂದ ಆ ಕೆಂಪು ಹುಂಜ ಹಲವು ಹೇಂಟೆಗಳೊಂದಿಗೆ ಚಕ್ಕಂದವಾಡುತ್ತಾ ಕಾಳುಗಳನ್ನು ಹೆಕ್ಕಿ ತಿನ್ನುತಿದ್ದುವು. ಅವಳಿಗೆ ಅ ಹುಂಜವನ್ನು ನೋಡುವಾಗ ರೋಷ ನೆತ್ತಿಗೇರಿತು. “ಹಾಳು-ಮುಂಡೇವು” ಅವಳು ಶಪಿಸುತ್ತಾ ಅಂಗಳದಿಂದ ಒಳಬಂದು ಮುಂಬಾಗಿಲಲ್ಲಿ ನಿಂತಳು. ದೂರದಲ್ಲಿ ನೆರೆಮನೆಯ ಅಜ್ಜಿ ತನ್ನ ಮನೆಯ ಕಡೆಗೆ ಬರುವುದು ಕಾಣಿಸಿತು. ಅಜ್ಜಿ ಮನೆಯಂಗಳ ತುಳಿಯುತಿದ್ದಂತೆ ಅವಳು ನಗುತ್ತಾ ಅಜ್ಜಿಯನ್ನು ಸ್ವಾಗತಿಸಿದಳು. “ಈಗ ಪ್ರಾರ್ಥನೆಯ ಸಮಯ ಮಗೂ. ಇವತ್ತು ಬಲಿದಾನದ ಹಬ್ಬ. ಹೀಗೆಲ್ಲಾ ಮೆಟ್ಟಿಲಲ್ಲಿ ನಿಂತುಕೊಂಡು ಅಲೋಚಿಸಬಾರದು. ಒಳಗೆ ಬಾ ಮಗಳೇ”. ಅಜ್ಜಿ ಅವಳ ಉತ್ತರಕ್ಕೂ ಕಾಯದೆ ಒಳಗೆ ಹೋದಳು. ಅವಳು ಕೂಡಾ ಏನೂ ಉತ್ತರಿಸದೆ ಅಜ್ಜಿಯನ್ನು ಹಿಂಬಾಲಿಸದಳು. ಅಜ್ಜಿ ತನ್ನ ಕೈಯಲ್ಲಿದ್ದ ಪಾತ್ರೆಯನ್ನು ಅವಳಲ್ಲಿ ಕೊಟ್ಟಳು. “ಇದರಲ್ಲಿ ಬಿಸಿ ಬಿಸಿ ಎಟ್ಟಿ ಬಿರಿಯಾನಿ ಇದೆ ಮಗಳೇ. ಹಾಗೆಯೇ ಸ್ವಲ್ಪ ಕೋಸಂಬರಿ ಕೂಡಾ ಮಾಡಿದ್ದೇನೆ. ಮಗುವಿಗೆ ಎಟ್ಟಿ ಬಿರಿಯಾನಿ ಇಷ್ಟ ತಾನೇ? ಉಳಿದರೆ ರಾತ್ರಿ ಬಿಸಿ ಮಾಡಿ ತಿಂದು ಬಿಡು. ಅಜ್ಜಿ ಅವಳ ಉತ್ತರಕ್ಕೂ ಕಾಯದೆ ಹೊರಟು ನಿಂತಳು. ಅವಳಿಗೆ ಅಜ್ಜಿಯ ಮುಖ ನೋಡಿದೊಡನೆ ಅಳು ತಡೆಯಲಾಗಲಿಲ್ಲ. ಅಜ್ಜಿಯ ಭುಜಕ್ಕೆ ಒರಗಿ ಗಳಗಳನ ಅತ್ತು ಬಿಟ್ಟಳು. “ಅಳ್ಬೇಡ ಮಗಳೇ, ದೇವರು ಪರೀಕ್ಷಿಸಲು ಕೆಲವೊಮ್ಮೆ ನಮಗೆ ಈ ರೀತಿ ಕಷ್ಟ ಕೊಡುತ್ತಾನೆ, ಎದುರಿಸಬೇಕು. ಕತ್ತಲೆಯ ಹಿಂದೆ ಬೆಳಕಿದೆ. ಹೋಗು ಸ್ನಾನ ಮಾಡು, ಹೊಸ ಬಟ್ಟೆ ಬರೆ ಉಟ್ಟುಕೋ. ಇವತ್ತು ಒಳ್ಳೆಯ ದಿನ. ಶುದ್ಧ ಮನಸ್ಸಿನಿಂದ ದೇವರನ್ನು ಬೇಡಿಕೋ. ನಮ್ಮ ಬೇಡಿಕೆಗಳು ಖಂಡಿತ ಈಡೇರುತ್ತದೆ. ಅವನು ಎಲ್ಲರ ಬೇಡಿಕೆಗಳನ್ನು ಈಡೇರಿಸುತ್ತಾನೆ. ಇದರಲ್ಲಿ ಸಂಶಯಬೇಡ ಮಗಳೇ” ಅವಳು ಅಜ್ಜಿಯನ್ನು ದೃಷ್ಟಿಸಿ ನೋಡಿದಳು. ನನ್ನನ್ನು ಸಮಾಧಾನ ಪಡಿಸಲು ಈ ಅಜ್ಜಿ ಎಷ್ಟು ವರ್ಷಗಳಿಂದ ಈ ರೀತಿ ಮಾತಾಡುತ್ತಿದ್ದಾಳೆ! ಎಷ್ಟು ಹಬ್ಬಗಳು ಹಾದು ಹೋದವು!” ಅಜ್ಜಿಯ ನಂಬಿಕೆಯನ್ನು ಈ ವರ್ಷವಾದರೂ ಈಡೇರಿಸು ದೇವರೇ” ಅವಳು ಮನದಲ್ಲೇ ದೇವರನ್ನು ಬೇಡಿಕೊಂಡಳು.

ಅಜ್ಜಿ ಹೊರಟು ಹೋದ ಕೂಡಲೇ ಅವಳು ಲವಲವಿಕೆಯಿಂದ ಸ್ನಾನ ಮುಗಿಸಿ ಬಂದಳು. ಬಟ್ಟೆಯ ಕಟ್ಟು ಬಿಚ್ಚಿ, ಅದರಲ್ಲಿದ್ದ ಸೀರೆಗಳಲ್ಲಿ ಅವಳಿಗೆ ಇಷ್ಟವಾದ ಹಾಗೂ ಅವನಿಗೂ ಇಷ್ಟವಾದ ಸೀರೆಯೊಂದನ್ನು ಆರಿಸಿ, ಉಟ್ಟುಕೊಂಡಳು. ಎಣ್ಣೆ ಹಾಕಿ ತಲೆ ಬಾಚಿಕೊಂಡಳು. “ಓ ದೇವರೇ, ಈ ವರ್ಷವಾದರೂ ನನ್ನ ಮೇಲೆ ಕೃಪೆದೋರು. ನನ್ನ ಮಗನನ್ನು ಅನಾಥನನ್ನಾಗಿ ಮಾಡಬೇಡಪ್ಪಾ…..” ಅವಳು ಅಳುತ್ತಾ ದೇವರನ್ನು ಪ್ರಾರ್ಥಿಸಿಕೊಂಡಳು. ರಸ್ತೆಯಲ್ಲಿ ಜಮಾತಿನವರು ಪ್ರಾರ್ಥನೆ ಮುಗಿಸಿ ಗುಂಪು ಗುಂಪಾಗಿ ಮಾತಾಡಿಕೊಂಡು, ನಗಾಡಿಕೊಂಡು ಮನೆಯ ಕಡೆಗೆ ಹೋಗುವುದನ್ನು ಕೇಳಿಸಿಕೊಂಡಳು. ಇನ್ನೇನು! ಮಗ ಬರುವ ಹೊತ್ತಾಯಿತು. ತಾನು ಅತ್ತದ್ದು ಮಗನಿಗೆ ಗೊತ್ತಾಗದಿರಲೆಂದು ಅವಳು ಪುನಃ ಮುಖ ತೊಳದುಕೊಂಡು ಮಗನ ಬರವನ್ನು ನಿರೀಕ್ಷಿಸುತ್ತಿದ್ದಳು. ಮನೆಗೆ ಬಂದ ಮಗ ನಗು-ನಗುತ್ತಾ ಊಟ ಮುಗಿಸಿ ತನ್ನ ಹೊಸ ಬಟ್ಟೆ ಬರೆ ತೋರಿಸಲು ನೆರೆಮನೆಗೆ ಓಡಿದನು. ಎಟ್ಟಿ ಬಿರಿಯಾನಿಗೆ ಕೈಯಿಕ್ಕಿದ ಅವಳಿಗೆ ಊಟ ಮಾಡಲಾಗಲಿಲ್ಲ. ಅಜ್ಜಿಯ ಮಾತು ಕಿವಿಯಲ್ಲಿ ಗುಣುಗುಟ್ಟುತಿತ್ತು. “ಕತ್ತಲೆಯ ಹಿಂದೆ ಬೆಳಕಿದೆ ಮಗಳೇ. ಇವತ್ತು ಪವಿತ್ರ ದಿನ. ನಿನ್ನ ಪ್ರಾರ್ಥನೆಗಳು ಈಡೇರುತ್ತವೆ” ಅವಳಿಗೆ ಯಾವುದೋ ಹುರುಪು ಮೈ ಮೇಲೆ ಬಂದ ಹಾಗಾಯಿತು. ಅವಳು ಊಟ ಮಾಡದೆ ಕೈ ತೊಳೆದು ಕೊಂಡಳು. ಪ್ರತೀ ಕ್ಷಣ, ಪ್ರತೀ ಹೊತ್ತೂ ಅವಳು ದೇವರೊಡನೆ ಪ್ರಾರ್ಥಿಸಿಕೊಂಡಳು. ನೆರಮನೆಯವರು ಜೋರಾಗಿ ಟೇಪ್ ರೆಕಾರ್ಡರ್ ಹಾಕಿದ್ದು ಹಳೆಯ ಹಿಂದಿ ಸಿನಿಮಾ ಹಾಡು ಅಲೆ-ಅಲೆಯಾಗಿ ತೇಲಿ ಬರುತ್ತಿತ್ತು. ಇವತ್ತು ಯಾಕೋ ಆ ಹಾಡು ಅವಳಿಗೆ ತುಂಬಾ ಇಷ್ಟವಾಯಿತು. ಅವಳು ಕಿವಿ ಅಗಲಿಸಿಕೊಂಡು ಹಾಡನ್ನು ಕೇಳುತ್ತಿದ್ದಳು.

“ಅಯೆಗಾ…. ಅಯೆಗಾ…. ಅಯೆಗಾ…. ಅಯೆಗಾ ಅನೇವಾಲಾ….. ಅಯೆಗಾ…. ಅಯೆಗಾ….”

ಹುಡುಗ ಹೇಂಟೆಯನ್ನು ಎತ್ತಿ ಕೊಂಡು ಅವಳ ಭುಜಕ್ಕೆ ತಾಗಿಸುವವರೆಗೂ ಅವಳು ಹಾಡು ಕೇಳುವುದರಲ್ಲಿ ತಲ್ಲೀನಳಾಗಿದ್ದಳು. ಬೆಳಕು ಕರಗಿ ಕತ್ತಲೆ ನಿಧಾನವಾಗಿ ಭೂಮಿಯನ್ನು ಆವರಿಸುತ್ತಿತ್ತು.

“ಬಿಟ್ಟು ಬಿಡು ಮಗಾ ಆ ಹೇಂಟೆಯನ್ನು. ಯಾಕೆ ಅದಕ್ಕೆ ಹಿಂಸೆ ಕೊಡುತ್ತೀಯಾ…..” ಅವಳು ಮಗನಿಗೆ ಗದರಿಸುವ ಧ್ವನಿಯಲ್ಲಿ ಹೇಳಿದಳು.

“ಇಲ್ಲಮ್ಮಾ, ನಾನು ಬಿಡಲ್ಲ. ಆ ಕೆಂಪು ಹುಂಜ ಬೇರೆ ಹೇಂಟೆಗಳನ್ನಲ್ಲದೆ, ನಮ್ಮ ಹೇಂಟೆಯನ್ನೂ ಬೆನ್ನಟ್ಟಿ ಕಚ್ಚುತ್ತದೆ. ನಾನು ಬಿಡಲ್ಲ. ಇವತ್ತು ಅ ಹುಂಜಕ್ಕೆ ಬುದ್ದಿ ಕಲಿಸುತ್ತೇನೆ”.

ಹುಡುಗ ತಾಯಿಯ ಉತ್ತರವನ್ನೂ ಕಾಯದೇ ಹೇಂಟೆಯೊಂದಿಗೆ ಅಂಗಳಕ್ಕಿಳಿದ. ಅಂಗಳದ ಮೂಲೆಯಲ್ಲಿದ್ದ ಹರಿದ ಬೆತ್ತದ ಬುಟ್ಟಿಯನ್ನು ತಂದು ಹೇಂಟೆಯನ್ನು ಅದರೊಳಗೆ ಮುಚ್ಚಿಟ್ಟ. ಬುಟ್ಟಿಯ ಮೇಲೆ ಮರದ ಮಣೆಯನ್ನು ಬೋರಲು ಹಾಕಿದ. ಬುಟ್ಟಿಯೊಳಗಿಂದ ಹೇಂಟೆ ಹೊರಬರಲು “ಕುಟು….. ಕುಟು” ಶಬ್ಧ ಮಾಡುತ್ತಿತ್ತು. ಅ ಕೆಂಪು ಹುಂಜ ತನ್ನ ಗೆಳತಿಯರೊಂದಿಗೆ ಬುಟ್ಟಿಗೆ ಪ್ರದಕ್ಷಿಣೆ ಬರುತ್ತಿತ್ತು. “ಹಾಗೇ ಸಾಯುತ್ತಿರು” ಅವನು ಹುಂಜವನ್ನು ಓರೆಗಣ್ಣಿನಿಂದ ನೋಡುತ್ತಾ ಹಲ್ಲು ಮಸದುಕೊಂಡು ಮನೆಯೊಳಗೆ ಬಂದ.

ರಾತ್ರಿ ಸುಮಾರು ಹೊತ್ತಿನವರೆಗೂ ಹುಡುಗನಿಗೆ ಕಥೆ ಹೇಳುತ್ತಾ ಆಟ ಆಡಿಸುತ್ತಾ ಅವಳು ಸಮಯ ಕಳೆದಳು. ಅದರೂ ಅವಳ ಕಿವಿಯೆಲ್ಲಾ ಬಾಗಿಲ ಕಡೆಗೇ ಇತ್ತು. ಅವಳು ಮೈಯೆಲ್ಲಾ ಕಣ್ಣಾಗಿಸಿಕೊಂಡು ಕಾಯುತ್ತಾ ಇದ್ದಳು. ಇವತ್ತು ಅವರು ಬಂದೇ ಬರುತ್ತಾರೆ. ಹೌದು, ಅವರಿಗೆ ಖಂಡಿತ ಇಂದು ನನ್ನ ನೆನಪಾಗುತ್ತದೆ. ನನ್ನ ಪ್ರಾರ್ಥನೆಯನ್ನು ದೇವರು ಖಂಡಿತ ಸ್ವೀಕರಿಸುತ್ತಾನೆ. ಕಥೆ ಕೇಳುತ್ತಾ ನಿದ್ದೆ ಹೋದ ಮಗುವನ್ನು ಒಮ್ಮೆ ಪ್ರೀತಿಯಿಂದ ನೋಡಿ, ಅವನ ಹಾಲುಗೆನ್ನೆಗೆ ಬಾಗಿ ಮುತ್ತಿಕ್ಕಿದಳು. ಮತ್ತೊಮ್ಮೆ ಎದ್ದು ಕಿಟಕಿ ತೆರೆದು ಹೊರಗೆ ನೋಡಿದಳು. ತಂಪಗಿನ ಗಾಳಿ ಬೀಸಿ ಬರುತ್ತಿತ್ತು. ಚಂದಿರನ ಬೆಳಕಿತ್ತು. ಅವಳು ಅಧೀರಳಾಗಲಿಲ್ಲ. ಕತ್ತಲೆಯ ಹಿಂದೆ ಬೆಳಕಿದೆ, ಖಂಡಿತ ಬೆಳಕಿದೆ. ಅವಳಿಗೆ ಏನೋ ನೆನಪಾಯಿತು. ಅವಳು ನಾಚಿದಳು, ಆ ಕತ್ತಲೆಯಲ್ಲಿ ಅವಳ ಮೈಯಲ್ಲಿ ಸಣ್ಣಗೆ ನಡುಕ ಉಂಟಾಯಿತು. ಮೊದಲ ರಾತ್ರಿಯ ಸುಂದರ ನೆನಪು! ತನ್ನ ಕೈ ಹಿಡಿದು ಹತ್ತಿರ ಸೆಳೆದ ಅವರು ಅವಳಿಗೆ ಒಂದು ಸಣ್ಣ ಪೊಟ್ಟಣ ಉಡುಗೊರೆ ನೀಡಿದ್ದರು.

“ಏನದು”? ನಾಚಿಕೆ ಹೆದರಿಕೆ ಎಲ್ಲಾ ಮಿಶ್ರವಾಗಿತ್ತು ಅವಳ ಸ್ವರದಲ್ಲಿ. “ಇದು ಸೆಂಟು. ಬಹಳ ಪರಿಮಳದ ಸೆಂಟು. ಇದರ ಹೆಸರು ಜನ್ನತುಲ್ ಪಿರ್ದೌಸು” ಅವರು ಸೆಂಟು ಬಾಟಲಿಯ ಮುಚ್ಚಳ ತೆಗೆದು ಬೆರಳಿಗೆ ಸೆಂಟು ತಾಗಿಸಿ ಅವರ ಹಾಗೂ ನನ್ನ ಬಟ್ಟೆಗಳ ಮೇಲೆ ಒರಸಿದರು. ಒಮ್ಮೆಯಲ್ಲ ಹಲವು ಬಾರಿ. ಆ ಪರಿಮಳ ಹಾಗೂ ಅವರ ಹಿತವಾದ ಅಪ್ಪುಗೆ ಎಲ್ಲವನ್ನೂ ಮರೆಸಿತ್ತು. ನೆನಪುಗಳು ಮರುಕಳಿಸಿದಾಗ ಅವಳು ಎದ್ದು ಸೀದಾ ಮಲಗುವ ಕೋಣೆಯತ್ತ ತೆರಳಿದಳು. ಸೆಲ್ಪಿನ ಮೂಲೆಯಲ್ಲಿ ಅದೇ ಸೆಂಟು ಬಾಟಲಿ ಧೂಳು ಹಿಡಿದು ಹಾಗೆಯೆ ಇತ್ತು. ಅವಳು ಬಾಟಲಿಯನ್ನು ಕೈಗೆತ್ತಿಕೊಂಡು ಸೆಂಟನ್ನು ತನ್ನ ಉಟ್ಟುಕೊಂಡ ಬಟ್ಟೆಯ ಮೇಲೆ ಒರೆಸಿಕೊಂಡಳು ರೂಮೆಲ್ಲಾ ತುಂಬಿದ ಸೆಂಟಿನ ಪರಿಮಳದಿಂದ ಅವಳಿಗೆ ನಿದ್ರೆ ಅವರಿಸಿದ್ದು ಎಚ್ಚರವಾದಾಗ ಬೆಳಗಾಗಿತ್ತು.

ಅವಳು ಎದ್ದು ಅಡುಗೆ ಕೋಣೆಗೆ ಹೋದಳು. ಎಟ್ಟಿ ಬಿರಿಯಾನಿ ಹಾಗೆಯೇ ಇತ್ತು. ಪಾತ್ರೆಯತ್ತಿ ಮೂಸಿ ನೋಡಿದಳು. ಅನ್ನ ಹಳಸಿ ಹೋಗಿತ್ತು. ಅವಳು ಅದನ್ನು ತನ್ನ ಹೇಂಟೆಗೆ ಹಾಕಲು ಅಂಗಳಕ್ಕೆ ಬಂದಳು. ಬುಟ್ಟಿಯೊಳಗಿಂದ ಹೇಂಟೆ “ಕುಟು…. ಕುಟು” ಶಬ್ಧ ಮಾಡುತ್ತಿತ್ತು. “ಅಯ್ಯೋ ದೇವರೇ! ಈ ಹುಡುಗ ಯಾಕೆ ಹೀಗೆ ತ್ರಾಸ ಕೊಡುತ್ತಾನೆ. ಈ ಹೇಂಟೆ ನಿನ್ನ ಮಧ್ಯಾಹ್ನದಿಂದ ಏನೂ ತಿಂದಿಲ್ಲ. ಪಾಪ ತುಂಬಾ ಹಸಿದಿರಬಹುದು”. ಅವಳು ತನ್ನಷ್ಟಕ್ಕೇ ಗುಣುಗುಟ್ಟುತ್ತಾ ಬುಟ್ಟಿ ತಂದು ಅನ್ನವನ್ನು ಹೇಂಟೆಯ ಎದುರು ಚೆಲ್ಲಿದಳು. ಹಸಿವಿನಿಂದ ಕಂಗಾಲಾಗಿದ್ದ ಹೇಂಟೆ ಅನ್ನವನ್ನು ಒಂದೇ ಸಮನೆ ತಿನ್ನತೊಡಗಿತು. ಅನತಿ ದೂರದಲ್ಲಿ ಹಲವು ಬಿನ್ನಾಣಗಿತ್ತಿಯರ ಮಧ್ಯೆ ಇದ್ದ ಅ ಕೆಂಪು ಹುಂಜ ಅವಳ ಹೇಂಟೆಯನ್ನು ಕಂಡೊಡನೆ ಹೊಸ ಹುರುಪಿನಿಂದ ತನ್ನ ರೆಕ್ಕೆಗಳನ್ನು ಬಿಚ್ಚಿಕೊಂಡು ಓಡಿ ಬರ ತೊಡಗಿತು. “ಥೂ… ಹಲ್ಕಾ…. ಶೂವರ್.” ಅವಳು ಬಾಗಿ ಕಲ್ಲು ಹೆಕ್ಕಿ ಬೀಸಿದಳು. ಅದಾವುದರ ಪರಿವೆಯಿಲ್ಲದ ಆ ಹುಂಜ ಮತ್ತೂ ಧಾವಿಸಿ ಬರುತ್ತಿತ್ತು. ಹೆದರಿದ ಅವಳ ಹೇಂಟೆ ಅನ್ನ ತಿನ್ನುವುದನ್ನು ಬಿಟ್ಟು ಓಡ ತೊಡಗಿತು. ಆದರೂ ಆ ಕೆಂಪು ಹುಂಜ ಅದನ್ನು ಬೆನ್ನಟ್ಟಿಕೊಂಡು ಹೋಗಿ ತನ್ನ ಕೊಕ್ಕಿನಿಂದ ಅದರ ನೆತ್ತಿಯನ್ನು ಕಚ್ಚಿ ಹಿಡಿಯಿತು ಅವಳು ಮುಖ ಬೇರೆ ಕಡೆ ತಿರುಗಿಸಿದಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತುಡಿತ
Next post ನೀನೆ ನನಗೆಲ್ಲ

ಸಣ್ಣ ಕತೆ

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…