ಬೀರನ ಕನಸುಗಳ ಸುತ್ತ……

ಬೀರನ ಕನಸುಗಳ ಸುತ್ತ……

ಚಿತ್ರ: ಸೋಮವರದ

ಇಡೀ ಊರು ಮಳೆ ನೀರಿನಲ್ಲಿ ಅದ್ದಿ ತೆಗೆದಂತಿತ್ತು. ಕಳೆದ ಮೂರು ದಿನಗಳಿಂದ ಸುರಿಯುತ್ತಿದ್ದ ಮಳೆಯಿಂದ ಮನೆಯ ಗೂಡುಗಳಲ್ಲಿ ಅವಿತಿದ್ದ ಜನ ಹಕ್ಕಿ ಮರಿಗಳಂತೆ ಕುತ್ತಿಗೆ ಯನ್ನು ಬಾಗಿಲಿಂದ ಚಾಚಿ ಮಳೆಯ ಆರ್ಭಟವನ್ನು ನೋಡುತ್ತಿದ್ದರು. ಬರ ಎಂಬ ಶಬ್ದವನ್ನೇ ಕಳೆದ ಮೂರು ದಿನಗಳಿಂದ ಭೋರ್ಗರೆಯುತ್ತಿದ್ದ ಬಾನು ಅಳಿಸಿ ಹಾಕಿತ್ತು. ಕಳೆದ ಎರಡು ತಿಂಗಳಿಂದ ಮಡುಗಟ್ಟಿದ್ದ ಮೋಡ…. ಸಿಡಿಲಿ, ಗುಡುಗು, ಮಿಂಚುಗಳೊಂದಿಗೆ ಇಳೆಗೆ ಅಪ್ಪಳಿಸಿತ್ತು. ಮಳೆಯ ಅಬ್ಬರಕ್ಕೆ ಕಡಲು ತಾನೇನು ಕಡಿಮೆಯಲ್ಲ ಎಂಬಂತೆ ಅಲೆಗಳ ಉಬ್ಬರ ಚೆಲ್ಲಾಟ, ರೋಷ ಕಡಲದಂಡೆಗೆ ಮುತ್ತಿಡುತ್ತಿತ್ತು. ಹೀಗೇ ಮಳೇ ಬಂದರೆ ಗುಡಿಸಲೇ ಕೊಚ್ಚಿ ಹೋದೀತೆಂಬ ಭಯ ಬೀರನಿಗೆ ಆವರಿಸಿತ್ತು. ಪಕ್ಕು ಸಾವುಕಾರ ಗದ್ದೆಯನ್ನು ಹದಮಾಡಲು ಎರಡು ದಿನಗಳಿಂದ ಒತ್ತಾಯಿಸುತ್ತಲೇ ಇದ್ದ. ಹಾಳುಬಿದ್ದ ಮಳೆ ಬಿಡುವೇ ಕೊಡುತ್ತಿಲ್ಲ ಎಂದು ಪ್ರೀತಿಯಿಂದಲೇ ಶಪಿಸುತ್ತಿದ್ದ ಬೀರ. ಶಾಲೆಗೆ ಹೋದ ಮಂಜ, ಸಿರಿ ಬರುವ ಹೊತ್ತಾಗಿತ್ತು. ಬಿರುಗಾಳಿ ಮಳೆಯಲ್ಲಿ ಯಾಕಾದರೂ ಶಾಲೆಗೆ ಮಕ್ಕಳನ್ನು ಕಳುಹಿಸಿದೆನೋ ಎಂದು ಮನದಲ್ಲೇ ನೊಂದುಕೊಂಡ. ತನ್ನಂತೆ ಮಕ್ಕಳು ಪರರ ಗದ್ದೆಯಲ್ಲಿ ಗೇಯುವಂತಾಗಬಾರದು. ದೊಡ್ಡ ಮನುಷ್ಯರಾಗಬೇಕು. ಮಕ್ಕಳು ಸಾಹೇಬರಾಗಿ ಬದುಕಬೇಕೆಂಬ ತನ್ನ ದಿನದ ಕನಸನ್ನು ನೆನಪಿಸಿಕೊಂಡು ನಕ್ಕ. ಮಳೆ ಆರ್ಭಟದಲ್ಲಿ ಗುಡಿಸಲ ಕತ್ತಲಲ್ಲಿ ಆ ನಗು ಯಾರಿಗೂ ಕಾಣಿಸಲಿಲ್ಲ. ಕೇಳಿಸಲೂ ಇಲ್ಲ…. ಹರಿವ ಹಳ್ಳದ ತೊರೆ ಬೀರನಲ್ಲಿ ಸಂತಸ ಉಕ್ಕಿಸಿತ್ತು. ತುಂಬಿ ಹರಿವ ಹಳ್ಳದೊಂದಿಗಿನ ಸಂಬಂಧಗಳು ಉಕ್ಕಿಬಂದವು. ಬೀರ ಹರೆಯದ ದಿನಗಳಿಂದ ಬಾಲ್ಕಕ್ಕೆ ಜಿಗಿದ. ಅಪ್ಪನ ಜೊತೆ ಹಳ್ಳದಲ್ಲಿ ನುಗ್ಗಿ ತುಂಡು ಕಟ್ಟಿಕೊಂಡು ಈಜು ಕಲಿವ ದಿನಗಳು, ದಂಡೆಯಲ್ಲಿನ ಏಡಿಗಳನ್ನು ಹಿಡಿದು ಕ್ಷಣ ಮಾತ್ರದಲ್ಲಿ ಅವುಗಳ ಕೊಂಬು ಮುರಿಯುತ್ತಿದ್ದ ತನ್ನಪ್ಪನ ಸಾಹಸ ಮನದ ಮುಂದೆ ಸುಳಿದು ಮರೆಯಾಯಿತು. ಏಡಿ ಹಿಡಿಯಲು ಹೋಗಿ ಪಕ್ಕದ ಮನೆಯ ಹೀರನ ಕಾಲಿಗೆ ಏಡಿ ಕಚ್ಚಿ ಹಿಡಿದದ್ದು…. ಕಾಲಿಂದ ಬಳಬಳನೇ ರಕ್ತ ಹರಿದದ್ದು…. ಏಳೂರು ಗೌಡನ ಹೆಸರು ಹೇಳಿದರೆ ಏಡಿ ತನ್ನ ಹಿಡಿತ ಸಡಿಲಿಸುತ್ತದೆ ಎಂದು ತನ್ನಜ್ಜಿ ಹೇಳಿದ ಮಾತನ್ನು ನೆನಪಿಸಿಕೊಂಡು ಹೇಳಿದ್ದು…. ಆದರೂ ಏಡಿ ತನ್ನ ಹಿಡಿತ ಸಡಿಲಿಸದಿದ್ದನ್ನು ಕಂಡು ಅಪ್ಪ ಏಡಿಯ ಕೊಂಬು ಮುರಿದದ್ದು ಬೀರನಿಗೆ ನೆನಪಾಯ್ತು. ಗದ್ದೆಯ ಹೊಂಡೆದಲ್ಲಿ ಇಳಿದ ಬೀರ ದೊಂಡು, ಮುರುಗುಂಡ ಮೀನುಗಳನ್ನು ಹಿಡಿಯಲು ಕುಳಿಯನ್ನು ಮುಳುಗಿಸಿದ ತಿಳಿಯಾಗಿದ್ದ ಹೊಂಡ ಒಮ್ಮೆಲೆ ಗೊಡಗೆದ್ದಿತು. ಹೊಂಡದಲ್ಲಿ ಚಿತ್ತಾರವೊಂದು ಮೂಡಿಬಂತು. ಕಸಿವಿಸಿಗೊಂಡ ಮುರುಗುಂಡು ಮೀನುಗಳು ದಂಡು ಕುಳಿಯಲ್ಲಿ ತೇಲಿಬಂದವು. ಬೀರ ಖುಷಿಯಿಂದಲೇ ಕುಳಿಯನ್ನು ಮೇಲೆತ್ತಿದ. ಸಿಕ್ಕ ನಾಲ್ಕಾರು ಪೊಗದಸ್ತಾಗಿ ಬೆಳೆದಿದ್ದ ಮೀನುಗಳನ್ನು ಕೆಸುವಿನ ಎಲೆಯಲ್ಲಿ ಹಾಕಿ ಸುತ್ತಿ ಬೆಂಕಿಹೊತ್ತಿಸಿ ಸುಟ್ಟು ಉಪ್ಪು ಹಚ್ಚಿಟ್ಟ. ಮೀನು ಕಂಡರೆ ಮಂಜನ ಬಾಯಲ್ಲಿ ನೀರೂರುತ್ತಿತ್ತು. ಶಾಲೆಯಿಂದ ಬಂದ ಮಂಜ ಗುಡಿಸಲು ಹೊಕ್ಕವನೇ ಅಡಿಗೆ ಬಟ್ಟಲಿಗೆ ಕೈ ಹಾಕುವುದು ಅವನಿಗೆ ರೂಢಿಯಾಗಿತ್ತು. ಬೀರ ಮಗನಿಗೆ ಸುಟ್ಟ ಮೀನು ಕೊಟ್ಟು, ಮಗಳಿಗೆ ಮೀನು ತಿನ್ನಲು ಹೇಳಿ ಗದೆ ಬದು ಸರಿಮಾಡಲು ಅಡಿಕೆ ಸುಳಿ ಟೊಪ್ಪಿ ತಲೆಗಿಟ್ಟು ನಡೆದ…..

                                                             ***

ಬೀರ ಗದ್ದೆಗೆ ಆಗ ತಾನೇ ಇಳಿದಿದ್ದ. ದೂರದಲ್ಲಿ ಯಾರೋ ಬರುತ್ತಿದ್ದಂತೆ ಭಾಸವಾಯ್ತು. ಆಕೃತಿ ಸ್ವಲ್ಪ ಹೊತ್ತಿನಲ್ಲೇ ಸನಿಹ ಬಂತು. ಹತ್ತಿರ ಬರುತ್ತಿದ್ದಂತೆ ಸ್ಪಷ್ಟವಾಯ್ತು. ಮುನ್ನಾ ಸಾಬಿ. ಇನ್ನೂ ಹರೆಯದ ಹುಡುಗ. ಗ್ಯಾರೇಜ್ ಇಟ್ಟುಕೊಂಡು ದುಡಿವ ಉತ್ಸಾಹದ ಹುಡುಗ. ಸಾಬರ ಮುನ್ನಾ ತನಗಿಂತ ಕಿರಿಯರಾದ ಮಂಜ, ಸಿರಿಯರೊಂದಿಗೆ ಆಟವಾಡಲು ಬಷೀರ್ ನನ್ನು ಕಟ್ಟಿಕೊಂಡು ಆಗಾಗ ಬರುತ್ತಿದ್ದ. ಬೀರನನ್ನು ಕಂಡರೆ ಅವನಿಗೆ ಎಲ್ಲಿಲ್ಲದ ಪ್ರೀತಿ. ಬೀರನಿಗೂ ಅಷ್ಟೆ. ತನ್ನ ಮಕ್ಕಳಂತೆ ಅವರನ್ನು ಕಾಣುತ್ತಿದ್ದ ಬೀರ ವಯಸ್ಸು ಮರೆತು ಅವರನ್ನು ವಾರಿಗೆಯರಂತೆ ಕಾಣುತ್ತಿದ್ದ. ’ಏನೋ ಮುನ್ನಾ ಇಂಥ ಮಳೆಯಲ್ಲಿ ಈ ಕಡೆ ಬಂದೆ. ಯಾವುದು ಗಾಡಿ ಬಂದಿಲ್ವಾ ರಿಪೇರಿಗೆ’ ಎಂದು ಪ್ರಶ್ನಿಸಿದ. ’ಇಲ್ಲ ಕಾಕಾ, ಪಕ್ಕು ಮಾಮಾ ಹೊಸ ಕಾರು ತಂದವರೇ ಅಂಥ ಸುದ್ಧಿ ಬಿದ್ದಿತ್ತು. ಹೊಸ ಕಾರು ನೋಡಿಯೇ ಬಿಡೋಣ ಅಂಥ ಬಂದಿದ್ದೆ. ಪಕ್ಕು ಸಾವುಕಾರದ್ದು ದರ್ಬಾರು ನನಗಿಂತ ನಿಂಗೆ ಚೆನ್ನಾಗಿ ಗೊತ್ತಲ್ಲಾ’ ಎಂದ ಮುನ್ನಾ. ’ನಿಂಗೆ ಚೆನ್ನಾಗಿ ಗೊತ್ತಲ್ಲಾ’ ಎಂಬ ಮುನ್ನನ ಮಾತು ಹತ್ತು ವಸಂತಗಳ ಹಿಂದಕ್ಕೆ ಬೀರನನ್ನು ಕರೆದೊಯ್ತು…. ಗದ್ದೆಯ ಬದು ಸರಿ ಮಾಡುತ್ತಲೇ ಇದ್ದ ಬೀರನ ಕಣ್ಮುಂದೆ ಸಾವಿರಾರು ಚಿತ್ರಗಳು ಸುಳಿದವು….

                                                                             ***

ಪಕ್ಕು ಸಾವುಕಾರ…. ತನಗೆ ಆಶ್ರಯ ಕೊಟ್ಟ ದೊರೆ. ಗೋಕರ್ಣದಿಂದ ಓಡಿಬಂದಿದ್ದ ತನಗೆ ಆಶ್ರಯ ಕೊಟ್ಟವನು. ಜಾತಿಯ ಹಂಗು ತೊರೆದು ಸ್ವಚ್ಛಂದ ಬದುಕು ಬದುಕಿದವನು. ಗುಳ್ಳಾಪುರದ ಜನರ ಕಣ್ಣಲ್ಲಿ ಅವನದು ಹಾದರದ ಬದುಕು. ಆದರೆ ಪಕ್ಕು ಮಾಮಾ ಡೋಂಗಿ ಜೀವನ ಮಾಡಿದವನಲ್ಲ. ರಾಜಾರೋಷ ಮಾಡಿದವ. ಆಷಾಢಭೂತಿ ತನದಿಂದ ಒಳ ಹೊರಗು ಬೇರೆ ಬೇರೆಯಾಗಿ ಅವ ಬದುಕಲಿಲ್ಲ ಎಂದು ಬೀರಾ ತನ್ನಷ್ಟಕ್ಕೆ ತಾನೇ ಅಂದುಕೊಳ್ಳತೊಡಗಿದ….
***
ಪಕ್ಕು ಮಾಮಾ ನೋಡಲು ಮನೋಹರವಾಗಿದ್ದ. ತಲೆತುಂಬಾ ಕೂದಲು. ನಲವತ್ತರ ಆಜೂಬಾಜಿರಬಹುದು. ಐದೂವರೆ ಅಡಿ ಎತ್ತರದ ಆಳು. ಬಿಳಿಬಣ್ಣದ ಪಕ್ಕು ಹತ್ತು ವರ್ಷ ಬ್ಯಾಂಕ್ ನೌಕರಿ ಮಾಡಿ ರಾಜೀನಾಮೆ ಬಿಸಾಕಿ ಬಂದಿದ್ದ. ಮ್ಯಾನೇಜರ್ ಜೊತೆ ಸಣ್ಣ ವಿಷಯಕ್ಕೆ ಜಗಳ ಕಾದು ನೌಕರಿಗೆ ವಿದಾಯ ಹೇಳಿ ಬಂದಿದ್ದ ಎಂದು ಊರ ಜನ ಆಡಿಕೊಳ್ಳುತ್ತಿದ್ದರು. ಅಜ್ಜನ ಕಾಲದಿಂದ ಬಂದಿದ್ದ ಜೇನ್ಮಠದ ಆಸ್ತಿ ಕೂತುಂಡರೂ ಮೂರು ತಲೆಮಾರಿಗೂ ಕರಗದಷ್ಟಿತ್ತು. ಬೀರ ಕಳೆದ ಹತ್ತು ವರ್ಷದಿಂದ ಗದ್ದೆಯಲ್ಲಿ ಬೆವರಿಳಿಸಿ ಮೈಮುರಿದು ದುಡಿದಿದ್ದ. ತೆಂಗು ಅಡಿಕೆ ಮರಗಳು ಮುಗಿಲಾಚೆಗೆ ಬೆಳೆದು ನಿಂತಿದ್ದವು. ಮಾವು, ಹಲಸು ಪೇರಲ ಗಿಡಗಳಿಂದ ಬರುವ ಆದಾಯದ ಜೊತೆಗೆ ಸಾವಿರಾರು ತೆಂಗಿನಕಾಯಿಗಳು, ಕ್ವಿಂಟಾಲಗಟ್ಟೆಲೆ ಅಡಿಕೆ… ಶ್ರೀಮಂತಿಕೆ ಮನೆಯ ಅಂಗಳದಲ್ಲಿ ಬಿದ್ದಿತ್ತು. ಆಗತಾನೆ ಮಾರುಕಟ್ಟಿಗೆ ಬಂದಿದ್ದ ಮಾರುತ ೮೦೦ ಕಾರ್ ಗುಳ್ಳಾಪುರದ ಜನರ ಕಣ್ಣು ಕುಕ್ಕಿಸುತ್ತಿತ್ತು. ಪಕ್ಕು ತನ್ನ ಹೊಸ ಕಾರ್ ನಲ್ಲಿ ಶ್ರೀನಿವಾಸ ಡಿಲಕ್ಸ್ ಹೊಟೆಲ್ ಗೆ ಸಂಜೆ ಬಂದು ಏರ್ ಕಂಡೀಶನ್ ರೂಮ್ ನಲ್ಲಿ ಕುಳಿತು ಟೀ ಹೀರಿ, ಗೋಲ್ಡ್ ಪ್ಲ್ಯಾಕ್ ಸಿಗರೇಟ್ ಸೇದಿ, ಬಂಗ್ಲೆ ಶಿವರಾಮ ಹೆಗಡೆಯ ಫ಼್ರೆಂಡ್ಸ್ ರಿಕ್ರಿಯೇಶನ್ ಕ್ಲಬ್ ನಲ್ಲಿ ಒಂದೆರಡು ತಾಸು ಇಸ್ಪೇಟ್ ಆಡಿ ರಾತ್ರಿ ಮನೆಗೆ ಬರುತ್ತಿದ್ದುದು ರೂಢಿ. ಪಕ್ಕುವಿನ ಜೀವನ ಶೈಲಿ ಇಷ್ಟೇ ಆಗಿದ್ದರೆ ವಿಶೇಷವೇನಿರಲಿಲ್ಲ. ಆದರೆ…. ಪಕ್ಕು ಬ್ಯಾಂಕ್ ನೌಕರಿಗೆ ವಿದಾಯ ಹೇಳಿದುದರ ಜೊತೆಗೆ ಅಂಕೋಲೆಯ ಹೆಣ್ಣೊಂದನ್ನು ಜೊತೆಗೆ ಕರೆದು ತಂದಿದ್ದ. ಜೇನ್ಮಠದ ತೋಟದ ಮನೆ ಆಕೆಯ ಆಶ್ರಯ ತಾಣವಾಗಿತ್ತು. ವಿವಾಹಿತ ಹೆಣ್ಣೊಬ್ಬಳು ಪಕ್ಕುವಿನ ಹಿಂದೆ ಬಿದ್ದಿರುವುದು ಊರಲ್ಲಿ ಗುಲ್ಲಾಗಲು ಹೆಚ್ಚು ಸಮಯ ಹಿಡಿಯಲಿಲ್ಲ. ಪಕ್ಕುವಿನ ಹೊಸ ಸಾಹಸ ಫ಼್ರೆಂಡ್ಸ್ ರಿಕ್ರಿಯೇಶನ್ ಕ್ಲಬ್ ನವರೆಗೂ ಬಂದಿದ್ದರೂ ಪಕ್ಕುವನ್ನು ಈ ಬಗ್ಗೆ ಕುತೂಹಲಕ್ಕೂ ಕೇಳುವ ಧೈರ್ಯ ಆತನ ಸಹವರ್ತಿಗಳಿಗೆ ಇರಲಿಲ್ಲ. ಪಕ್ಕುವಿನ ತೋಟದಮನೆಯ ಸಾಹಸ ಕಿರಿಕಿರಿ ತಂದದ್ದು ಆತನ ಪತ್ನಿಗೆ, ಪತ್ನಿಯ ಪ್ರಶ್ನೆಗಳಿಗೆ ಉತ್ತರಿಸಲು ಪಕ್ಕುವಿಗೆ ಸಬೂಬುಗಳಿದ್ದವು. ತೋಟದ ಮನೆಗೆ ಬಂದಾಕೆ ಬ್ಯಾಂಕ್ ಉದ್ಯೋಗಿಯ ಪತ್ನಿ. ಮಕ್ಕಳು ಹಾಗೂ ಆಕೆಯ ಪತಿರಾಯ ಸದ್ಯದಲ್ಲೇ ಬರಲಿದ್ದಾನೆ ಆತನಿಗೆ ದೂರದ ಮುಂಬೈನಲ್ಲಿ ಕೆಲಸ. ಈಗ ಇಲ್ಲಿಗೆ ವರ್ಗವಾಗಿದೆ. ನನ್ನ ನೌಕರಿ ಕಾಲದ ಗೆಳೆಯ, ಸಹೋದ್ಯೋಗಿ, ಸಹಾಯ ಮಾಡದಿರಲಾಗುತ್ತದೆಯೇ? ತುರ್ತಿಗೆ ಬಾಡಿಗೆ ಮನೆ ಸಿಗುವವರೆಗೆ ತೋಟದ ಮನೆಯಲ್ಲಿರುತ್ತಾರೆ ಎಂದು ಪಕ್ಕು ಹೆಂಡತಿಗೆ ಹೇಳಿದ್ದ… ಆದರೆ ಮುಂದೆ ಆದದ್ದೇ ಬೇರೆ. ಒಂದು ವರ್ಷದಲ್ಲಿ ಪಕ್ಕುವಿನ ಮಗುವಿಗೆ ತೋಟದ ಮನೆಯ ಹೆಂಗಸು ಜನ್ಮ ನೀಡಿದ್ದಳು. ಸರಿಯಾಗಿ ಪಕ್ಕುವಿನ ಮುಖದ ರೇಖೆಗಳನ್ನು ನೋಡದ ಪತ್ನಿ ಸುಶೀಲಾ ತೋಟದ ಮನೆಯ ಸಂಬಂಧದ ಬಗ್ಗೆ ಪ್ರಶ್ನಿಸುವುದು ದೂರದ ಮಾತಾಗಿತ್ತು. ಪಕ್ಕುವಿನ ಎಲ್ಲಾ ಬಾನಗಡಿಗಳಿಗೆ ಬೀರ ಮೂಕ ಸಾಕ್ಷಿಯಾಗಿದ್ದ. ಪಕ್ಕುವಿನ ದರ್ಬಾರು ಆ ದಿನಗಳಲ್ಲಿ ಜೋರಾಗಿತ್ತು. ಪತ್ನಿ ಸುಶೀಲಾ ತನ್ನ ಮಕ್ಕಳೊಂದಿಗೆ ಊರ ಮನೆಯಲ್ಲಿ ಉಳಿದರೆ, ಪಕ್ಕು ಹಾಯಾಗಿ ತೋಟ, ತೋಟದ ಮನೆ, ಗಳೆಯ ಮಾಧವ, ಆತನ ಪತ್ನಿ, ಬೀರಾ, ಇಸ್ಪೇಟ ಕ್ಲಬ್ ಗಳ ಲೋಕದಲ್ಲಿ ವಿಹರಿಸಿದ. ರತ್ನಕ್ಕಗೆ ಮಗುವಾದಾಗ ಊರಲ್ಲಿ ಎದ್ದ ಗುಲ್ಲು ಬಹುಕಾಲ ನಿಲ್ಲಲಿಲ್ಲ. ಸುಶೀಲಾ ಈ ವಿಷಯವಾಗಿ ಪಕ್ಕುವಿನ ಜೊತೆಗೆ ಪ್ರಸ್ತಾಪಿಸಲಿಲ್ಲವಂದೇನಿಲ್ಲ. ಒಂದು ರಾತ್ರಿ ಆಕೆ ಜೀವಮಾನದಲ್ಲಿ ಸಂಗ್ರಹಿಸಿಟ್ಟಿದ್ದ ಧೈರ್ಯವನ್ನೆಲ್ಲಾ ಒಗ್ಗೂಡಿಸಿ ಕೇಳಿದಳು. ರತ್ನಕ್ಕನ ಜೊತೆ ನಿಮ್ಮದು ಭಾರೀ ದೋಸ್ತಿಯಂತಲ್ಲಾ? ಮಗು ಸಹ ನಿಮ್ಮ ಹಾಗಿದೆ ಎಂದು ತಿಮ್ಮಿ ಹೇಳ್ತಿದ್ಲು… ಎಂದು ಸುಶೀಲ ರಾಗ ಎಳೆದಳು. ಪಕ್ಕು ಸುಶೀಲಾಳ ತೋಳತೆಕ್ಕೆಯಲ್ಲಿ ಮಲಗುತ್ತಿದ್ದುದೇ ಅಪರೂಪಕ್ಕೆ. ಅಂದು ಸುಶೀಲಾಳ ಬೆತ್ತಲೇ ದೇಹದ ಜೊತೆ ಒಂದಾಗಿದ್ದ ಆತ ಆಕೆಯ ಪ್ರಶ್ನೆಗೆ ನಸುನಕ್ಕ… ಮಾತು ಅದಕ್ಕಿಂತ ಮುಂದೆ ಹೋಗಲಿಲ್ಲ. ಪಕ್ಕು ಸಂತೃಪ್ತನಾಗಿದ್ದ. ಮೊದಲ ಮಗಳನ್ನು ಮುಂಬೈಗೆ ಮದುವೆ ಸಹ ಮಾಡಿಕೊಟ್ಟ. ಮಗ ಡಾಕ್ಟರ್ ಆಗಿ ಹೊರಬರಲು ಒಂದು ವರ್ಷ ಮಾತ್ರ ಉಳಿದಿತ್ತು. ಚಿಕ್ಕ ವಯಸ್ಸಿಗೆ ಮದುವೆಯಾಗಿದ್ದ ಪಕ್ಕು ಇದೀಗ ಗೆಳೆಯನ ಪತ್ನಿಯಿಂದ ಮಗುವೊಂದನ್ನು ಪಡೆದಿದ್ದ. ವಿಚಿತ್ರವೆಂದರೆ ಗೆಳೆಯನ ಪತ್ನಿಗೆ ಮಗುವಾದದ್ದೇ ಗುಳ್ಳಾಪುರಕ್ಕೆ ಬಂದಮೇಲೆ. ಮಾಧವ ಸಹ ಪತ್ನಿಗೆ ಮಗುವಾದ ಮೇಲೆ ಖುಷಿಯಿಂದಿದ್ದ. ಅವನ ಮುಂಬೈ ದಿನಗಳು, ಪತ್ನಿಗೆ ನೀಡಿದ್ದ ಸ್ವಾತಂತ್ರ್ಯ, ಆಗಾಗ ಆತನ ಮುಂಬೈ ಪ್ರವಾಸ ಜೋರಾಗಿತ್ತು. ಮನೆಯ ಜವಾಬ್ದಾರಿ ಬಗ್ಗೆ ಆತ ತಲೆ ಕೆಡಿಸಿಕೊಂಡಿರಲಿಲ್ಲ. ಗುಳ್ಳಾಪುರಕ್ಕೆ ಬಂದ ನಂತರವಂತೂ ಎಲ್ಲವನ್ನು ರತ್ನಕ್ಕ ನಿಭಾಯಿಸಿಕೊಂಡಿದ್ದಳು. ಪಕ್ಕು ಮತ್ತು ಆತನ ಗೆಳೆಯ ಮಾಧವನ ಸ್ನೇಹ ವಿಚಿತ್ರ ತರಂಗಗಳನ್ನು ಬೀರನಲ್ಲಿ ಹುಟ್ಟಿ ಹಾಕಿತ್ತು. ಜೇನ್ಮಠದಲ್ಲಿ ವಾಸವಾಗಿದ್ದ ಅಜ್ಜಯ್ಯ ಆಗಾಗ ಹೇಳುತ್ತಿದ್ದ ಬದುಕಿನ ಅರ್ಥ, ಪಕ್ಕು, ಮಾಧವ ಮತ್ತು ಆತನ ಪತ್ನಿ ರತ್ನಕ್ಕನ ಸಂಬಂಧಗಳು ಗದ್ದೆ ಕೆಲಸ ಮಾಡುವಾಗ ಕಾಡುತ್ತಿದ್ದ ಸಂಗತಿಗಳಾಗಿದ್ದವು. ತನ್ನ ಒಡೆಯನ ಸ್ವಚ್ಛಂದ ಬದುಕು, ಅನೈತಿಕ ಸಂಬಂಧಗಳ ಬಗ್ಗೆ ಸ್ವತಂತ್ರವಾಗಿ ತನ್ನ ಮನದ ಸ್ವೇಚ್ಛೆಗೆ ಬೀರ ತನ್ನಷ್ಟಕ್ಕೆ ತಾನೆ ಅಚ್ಚರಿಪಡುತ್ತಿದ್ದ. ಕೆಳ ಜಾತಿಯವರಾದ ತಮಗೆ ಆಶ್ರಯ ಕೊಟ್ಟವರ ಬದುಕಿನ ಬಗ್ಗೆ ಪ್ರಶ್ನಿಸುವುದಿರಲಿ, ಮನದಲ್ಲೇ ಯೋಚಿಸುವುದು ಪಾಪ ಎಂದು ನಂಬಿದ್ದ ಕಾಲವದು. ತನ್ನೂರಾದ ಗೋಕರ್ಣ ಸನಿಹ ಬೇಲಿಹಿತ್ತಲಿನಲ್ಲಿ ಅಸ್ಪೃಶ್ಯ ಜನಾಂಗದಲ್ಲಿ ಮಾತ್ರ ಇಂಥ ಅನೈತಿಕ ಸಂಬಂಧಗಳ ರೋಚಕ ಕತೆಗಳನ್ನು ಕೇಳುತ್ತಿದ್ದ ಬೀರ ತನ್ನ ಒಡೆಯನ ಬದುಕಿನ ತಿರುವುಗಳನ್ನು ಕಣ್ಣಾರೆ ಕಾಣುವಂತಾಗಿತ್ತು. ತನ್ನೊಡೆಯನನ್ನು ಒಮ್ಮೆ ರತ್ನಕ್ಕನ ಒಡನಾಟದ ಕುರಿತು ಕೇಳಿಯೇ ಬಿಡಬೇಕು ಎಂಬ ಬೀರ ಬಹುದಿನಗಳಿಂದ ಅಂದುಕೊಳ್ಳುತ್ತಿದ್ದ. ಪಕ್ಕು ಸಾವುಕಾರನ ಕಳ್ಳದಂಧೆಗಳ ಒಳಹೊರಗು ಬೀರನಿಗೆ ಗೊತ್ತಿದ್ದುದೇ ಆಗಿತ್ತು. ಪಕ್ಕು ಸಾವುಕಾರನಿಗೆ ಇಷ್ಟವಾದ ’ಕಳ್ಳು’ನ್ನು ತಳ್ಳಿಕೇರಿಯ ಸಾಬರ ಮನೆಯಿಂದ ತಂದು ಕೊಡುತ್ತಿದ್ದ ಬೀರಾ, ಒಡೆಯನ ಜೊತೆ ಕುಡಿಯುವಾಗ ಪಾಲುದಾರನೂ ಆಗುತ್ತಿದ್ದ. ಆಗ ಮಾತ್ರ ಒಡೆಯ ಪಕ್ಕು ಮತ್ತು ಬೀರನ ನಡುವೆ ಅಂತರವೇ ಇಲ್ಲವಾಗುತ್ತಿತ್ತು. ಆಗ ಪಕ್ಕು ಹೇಳುತ್ತಿದ್ದ ರಸಿಕ ಕತೆಗಳಿಗೆ ಕೊನೆಯೇ ಇರಲಿಲ್ಲ. ಬೀರ ಸಹ ಆಗಾಗ ಗೋಕರ್ಣದ ತನ್ನ ಗೆಳತಿಯೊಂದಿಗೆ ಕದ್ದು ಸಿನಿಮಾಕ್ಕೆ ಹೋದ ರಸಘಳಿಗೆಗಳನ್ನು ಪಕ್ಕುವಿನ ಎದುರುಹೇಳಿದ್ದುಂಟು. ಆದರೆ ರತ್ನಕ್ಕನ ವಿಷಯದಲ್ಲಿ ಒಮ್ಮೆ ಮುಖಾಮುಖಿಯಾಗಿ ಸಾವುಕಾರರನ್ನು ಕೇಳಿಯೇ ಬಿಡಬೇಕು ಎಂಬ ಬೀರನ ಆಸೆ ಮಾತ್ರ ಎಷ್ಟೋ ಬಾರಿ ನಾಲಿಗೆಯ ತುದಿತನಕ ಬಂದು ವಾಪಸ್ಸಾಗಿತ್ತು. ರತ್ನಕ್ಕನ ಬಗ್ಗೆ ಈ ಪಾಟೀ ಕುತೂಹಲಕ್ಕೆ ಕಾರಣವೂ ಇತ್ತು. ರತ್ನಕ್ಕಗೆ ಜೇನ್ಮಠದ ಅಜ್ಜಯ್ಯನ ಬಗ್ಗೆ ಇದ್ದ ಕಾಳಜಿ ಮುನ್ನಾ, ಅಜ್ಜಯ್ಯ ಜೇನ್ಮಠದಲ್ಲಿ ಬಂಗಾರ ಬೆಳ್ಳಿಯ ನಾಣ್ಯಗಳನ್ನಿಟ್ಟಿದ್ದಾನೆ ಎಂದು ಹೇಳುತ್ತಿದ್ದ ಕತೆಗಳು ಬೀರನಲ್ಲಿ ಗೊಂದಲ ಹುಟ್ಟಿಸಿದ್ದವು. ಅಜ್ಜಯ್ಯನ ಕೊನೆಯ ಕಾಲದಲ್ಲಿ ರತ್ನಕ್ಕ ಅಜ್ಜಯ್ಯನ ಬಗ್ಗೆ ತೋರಿದ ಪ್ರೀತಿ ಆ ಬಂಗಾರದ ನಾಣ್ಯಗಳ ಕಾರಣಾದಿಂದಲೋ ಅಥವಾ ಅದನ್ನು ಮೀರಿದ ಪ್ರೀತಿ ಇತ್ತೋ ಎಂಬ ಸಂಶಯಗಳು ಬೀರನಲ್ಲಿ ಆಗಾಗ ಸುಳಿಯುತ್ತಿದ್ದವು. ಬಾವಲಿಗಳ ವಾಸಸ್ಥಳವಾಗಿದ್ದ ಜೇನ್ಮಠದಲ್ಲಿ ಆ ಅಜ್ಜಯ್ಯ ಅದ್ಹೇಗೆ ವಾಸವಾಗಿದ್ದಾನೋ ಎಂಬ ಭಾವನೆ ಮಿಂಚಿ ಮರೆಯಾಯ್ತು. ಕತ್ತಲ ಗವಿಯಂತಿದ್ದ ಜೇನ್ಮಠದಲ್ಲಿ ಅಜ್ಜಯ್ಯ ಅದೆಷ್ಟು ಕಾಲದಿಂದ ವಾಸವಾಗಿದ್ದನೋ ಬೀರನಿಗೆ ತಿಳಿದಿರಲಿಲ್ಲ. ಅಜ್ಜಯ್ಯ ಜೇನ್ಮಠದ ಸನ್ಯಾಸಿಯಾಗಿ ಬದುಕಿದ್ದ. ಇಂಥ ಸನ್ಯಾಸಿ ಜೊತೆ ರತ್ನಕ್ಕನ ಸಂಬಂಧ ಬಿಡಿಸಲಾಗದ ಒಗಟಾಗಿತ್ತು. ರತ್ನಕ್ಕನ ಅಜ್ಜಯ್ಯನ ಜೊತೆಗಿನ ಒಡನಾಟ ಬಂದು ತೆರನಾಗಿದ್ದರೆ, ಸಾಬರ ಮುನ್ನ , ಹಾಲು ಮಾರುವ ಚಿನ್ನಕ್ಕ ಊರಲ್ಲಿ ಮಿಂಡ ಮೆರೆಯುತ್ತಿದ್ದ ಪುತ್ತು ಹೆಗಡೆಯೊಂದಿಗಿನ ವರ್ತನೆ ಬೀರನನ್ನು ಯೋಚನೆಯ ಪ್ರಪಾತಕ್ಕೆ ತಳ್ಳುತ್ತಿದ್ದವು….
***
ಬೀರ ಗದ್ದೆಯನ್ನು ಹದ ಮಾಡುತ್ತಿದ್ದ. ನಾಟ ಕಾರ್ಯಕ್ಕೆ ಕಾಲ ಸನ್ನಿಹಿಸಿತ್ತು. ಬರುವ ವರ್ಷ ತನ್ನದೇ ಗದ್ದೆಯಲ್ಲಿ ಗೇಯಬೇಕು ಎಂಬ ಕನಸು ನನಸಾಗುವ ದಿನಗಳು ಸಹ ಹತ್ತಿರ ಬಂದಿದ್ದವು. ಈ ಕಾರ್ಯಕ್ಕಾಗಿ ಕಳೆದ ಒಂದು ವರ್ಷದಿಂದ ಬೀರನ ಪತ್ನಿ ಸಸಿಹಿತ್ಲುದಲ್ಲಿ ಉಳಿದುಕೊಂಡಿದ್ದಳು. ಬೀರ ಒಡೆಯ ಪಕ್ಕುಗೆ ಆಗಾಗ ಈ ವಿಷಯ ಹೇಳುತ್ತಲೇ ಇದ್ದ. ಪಕ್ಕು ಸಾಹುಕಾರನದು ಒಂದೇ ಹಠ; ಎರಡು ಗುಂಟೆ ಗದ್ದೆಯಲ್ಲಿ ಅದೇನು ಗೆಯ್ಯುವೆ. ನಿನ್ನ ಮಕ್ಕಳ, ಹೆಂಡ್ತಿ ಹೊಟ್ಟೆಗೆ ಸಾಲಂಗಿಲ್ಲ ಬೀರಾ. ಆ ಆಸೆನೆಲ್ಲಾ ಬಿಡು, ಇಲ್ಲೇ ಉಳಿದು ಬಿಡು ಎಂಬುದು ಪಕ್ಕುವಿನ ಆಗ್ರಹಪೂರಕ ಸಲಹೆ ಯಾಗಿತ್ತು. ಪಕ್ಕು ಸಾವುಕಾರನ ಸಲಹೆ ಯಲ್ಲಿ ಸ್ವಾರ್ಥವಿದೆ ಎಂದು ಬೀರನಿಗೆ ತಿಳಿಯುತ್ತಿತ್ತು. ಆದರೆ ಬಾಯ್ಬಿಟ್ಟು ಹೇಳುತ್ತಿರಲಿಲ್ಲ. ಸಾಹುಕಾರನ ಪ್ರೀತಿಯನ್ನು ಮರೆಯಲಾರದೆ, ಆತನ ಪ್ರೇಯಸಿ ರತ್ನಕ್ಕನ ಚಂಚಲತೆಯ ಕ್ಷಣಗಳನ್ನು ನೋಡದೇ ಇರಲಾಗದ ವಿಚಿತ್ರ ಬಂಧನದಲ್ಲಿ ಬೀರ ಸಿಲುಕಿದ್ದ. ಬೀರನ ಪತ್ನಿ ಗುಳ್ಳಾಪುರ ಬಿಟ್ಟುಬರಲು ಒತ್ತಾಯಿಸುತ್ತಲೇ ಇದ್ದಳು…..
***
ಗುಳ್ಳಾಪುರದಲ್ಲಿ ಅಂದಿನ ಬೆಳಗು ಎಂದಿನಂತಿರಲಿಲ್ಲ. ಪೊಲೀಸರು ಬೆಳಿಗ್ಗೆಯೇ ಜೇನ್ಮಠದ ಕಡೆಗೆ ಲಗ್ಗೆ ಹಾಕಿದ್ದರು. ಜೇನ್ಮಠದ ಸನಿಹದಲ್ಲೇ ಇದ್ದ ಬೀರ ಆಗತಾನೆ ಗುಡಿಸಲಿಂದ ಹೊರಗೆ ಬಂದಿದ್ದ. ಪೊಲಿಸರು ತನ್ನ ಗುಡಿಸಲು ಕಡೆಗೆ ಬರುತ್ತಿದ್ದುದು ಕಂಡು ಬೀರ ’ಇದೇನು ಗ್ರಾಚಾರ ಬಂತಪ್ಪಾ’ ಅಂದುಕೊಂಡ. ಕೈಯಲ್ಲಿ ಲಾಟಿ ಹಿಡಿದಿದ್ದ, ನರಪೇತಲನಂತಿದ್ದ ಪೇದೆ ಬೀರನತ್ತ ನೋಡುತ್ತಾ ಲಾಟಿಯಿಂದ ಸನ್ನೆ ಮಾಡುತ್ತಲೇ ಹತ್ತಿರ ಬರುವಂತೆ ಕರೆದ. ’ಆ ಅಜ್ಜಯ್ಯನನ್ನು ಎಷ್ಟು ದಿನದಿಂದ ನೋಡುತ್ತಿದ್ದೀ? ಕೊನೆಯ ಬಾರಿಗೆ ನೋಡಿದ್ದು ಯಾವಾಗ’ ಎಂದು ಪ್ರಶ್ನಿಸಿದ. ಬೀರ ನಗುತ್ತಲೇ ’ಏನಾಯ್ತು ಸಾಹೆಬ್ರೆ ಅಜ್ಜಯ್ಯಗೆ, ನಾಲ್ಕುದಿನದ ಹಿಂದೆ ನೋಡಿದ್ದೆ. ಸಾವುಕಾರ ರತ್ನಕ್ಕ ಊಟಕೊಟ್ಟು ಬಂದಿದ್ರು. ಅಜ್ಜಯ್ಯ ಬಾಳದಿನ ಬದುಕಕಿಲ್ಲ ಬೀರ. ನೋಡ್ಕೊಂಡು ಬಾ ಅಂದಿದ್ರು, ಗದ್ದೆ ಕೆಲ್ಸ ನೋಡಿ ಹೋಗ್ಲಿಕ್ಕೆ ಆಗಿಲ್ಲ’ ಎಂದು ರಾಗ ಎಳೆದ. ಪೇಪರ್ ಒಂದನ್ನು ಬೀರನ ಮುಂದಿಡಿದ ಪೇದೆ ’ಇಲ್ಲಿ ಸಹಿ ಮಾಡು’ ಎಂದ. ಬೀರಾ ಹೆಬ್ಬೆಟ್ಟನ್ನು ಮುಂದೆ ಮಾಡಿದಾಗ ’ಹೆಬ್ಬೆಟ್ಟಾ, ಹಾಗಾದರೆ ಸ್ಟೇಶನ್ ಹತ್ರಾ ಬಂದ್ಬಿಡು’ ಎಂದ ಪೇದೆ ಜೇನ್ಮಠದ ಕಡೆಗೆ ನಡೆದ. ಬೀರನಿಗೆ ಕುತೂಹಲ ತಡೆಯಲಾಗದೇ ’ಏನಾಗಿದೆ ಸಾಹಿಬ್ರೇ ಅಜ್ಜಯ್ಯನಿಗೆ,’ ’ಅಯ್ಯೋ ಆ ಮುದುಕ ಬಾವಿಗೆ ಬಿದ್ದು ಸತ್ತನಲ್ಲೋ, ಅವ ಬೀಳೋದೆನೋ ಬಿದ್ದ, ನಮ್ಮ ಜೀವ ಹೋಗುತ್ತ ಕಣೋ, ಬೀರಾ. ’ ಬಾ ಹೆಣ ಎತ್ತಕೆ ಸಹಾಯ ಮಾಡುವಿಯಂತೆ. ಅಲ್ಲಿ ಸಿದ್ಧ , ಗೋರವ, ಮಾದಿಗರ ಅಮಾಸೆ ಬಂದಾರೆ ಎಂದ ಪೇದೆ. ಬೀರನಿಗೆ ಕ್ಷಣಾರ್ಧದಲ್ಲಿ ಎಲ್ಲವೂ ಹೊಳೆಯಿತು. ಅಜ್ಜಯ್ಯ ಜೇನ್ಮಠದ ವಾಸ ಮುಗಿಸಿ ತಿರುಗಿ ಬಾರದ ಹಾದಿಗೆ ಪಯಣ ಬೆಳೆಸಿದ್ದ. ಅಜ್ಜಯ್ಯ ಹೇಳುತ್ತಿದ್ದ ಮಾತು ಬೀರನಿಗೆ ನೆನಪಾಯ್ತು…. ’ಬೀರಾ ಮನುಷ್ಯನ ಆಸೆಗೆ ಮಿತಿ ಇಲ್ಲ ಕಣೋ ಮನುಷ್ಯ ಆಸೆನ ಗೆಲ್ಲಬೇಕು. ಬುದ್ಧ ಗೆದ್ದನಲ್ಲಾ ಹಾಗೆ, ಮೋಕ್ಷ ಹುಡುಕಲು ಹೋಗಿ ಮನುಷ್ಯರ ಪ್ರೀತಿಯ ಬಂಧನದಲ್ಲಿ ಸಿಕ್ಕನಲ್ಲಾ ಆ ಬುದ್ಧ. ನೀನು ಒಂಥರಾ ಹಾಗೆ. ಆ ಭೂಮಿತಾಯಿ ಜೊತೆ ಅದೆಂಥಾ ಪ್ರೀತಿನೋ ನಿಂದು.’ ಅಜ್ಜಯ್ಯ ತನ್ನೊಂದಿಗೆ ಮಾತನಾಡಿದ ಮಾತುಗಳನ್ನು ಮೆಲಕು ಹಾಕುತ್ತಲೇ ಜೇನ್ಮಠದ ಕಡೆಗೆ ನಡೆದ. ಪಕ್ಕು ಸಾವುಕಾರ ಇನ್ಸ್ಪೆಕ್ಟರಿಗೆ ಏನೋ ಹೇಳುತ್ತಿದ್ದರು. ದೊಡ್ಡ ಸಾಹೇಬರು ತಲೆ ಆಡಿಸುತ್ತಿದ್ದರು. ರತ್ನಕ್ಕ ಜೇನ್ಮಠಕ್ಕೆ ದೂರದಲ್ಲೇ ನಿಂತು ಮುಸು ಮುಸು ಅಳುತ್ತಿದ್ದಳು…. ಇತ್ತ ಸಂಜೆ ವೇಳೆಗೆ ಎಲ್ಲವೂ ಮುಗಿದು ಹೋಗಿತ್ತು. ಜೇನ್ಮಠ ಈಗ ಖಾಲಿಯಾಗಿತ್ತು. ಅಜ್ಜಯ್ಯನ ಬಂಗಾರ-ಬೆಳ್ಳಿ ನಾಣ್ಯಗಳು ಏನಾದವು ಎಂಬ ಕುತೂಹಲ ಮಾತ್ರ ಬೀರನಿಗೆ ಪ್ರಶ್ನೆಯಾಗಿ ಉಳಿದವು. ರತ್ನಕ್ಕ ಎಲ್ಲವನ್ನು ಕಬಳಿಸಿದಳೇ? ಅಜ್ಜಯ್ಯನನ್ನು ಕಾಡಿಸುತ್ತಿದ್ದ ಸಾಬರ ಮುನ್ನಾ ಏನಾದರೂ ಕಿತಾಪತಿ ಮಾಡಿದನೆ? ಆವ ಮೊನ್ನೆ ನಾಲ್ಕಾರು ಹುಡುಗರನ್ನು ಕಟ್ಟಿಕೊಂಡು ಜೇನ್ಮಠದ ಕಡೆಗೆ ಅಡ್ಡಾಡಿದ್ದು ಬೀರ ನೋಡಿದ್ದ. ಅಂತು ಎಲ್ಲವೂ ನಿಗೂಢವಾಗಿಯೇ ಉಳಿದವು…. ನಾಲ್ಕಾರು ದಿನಗಳಲ್ಲಿ ಅಜ್ಜಯ್ಯನನ್ನು ಕೈಕಾಲು ಕಟ್ಟಿ ಯಾರೋ ಜೇನ್ಮಠದ ಆಳ ಬಾವಿಗೆ ಹೊತ್ತು ಹಾಕಿದ್ದರು ಎಂಬ ಸುದ್ದಿ ಗುಳ್ಳಾಪುರದ ತುಂಬಾ ಹಬ್ಬಿತು. ನಿಶಕ್ತನಾಗಿದ್ದ ಅಜ್ಜಯ್ಯ ಅಂತು ಕೊಲೆಯಾದ ಎಂಬ ಸತ್ಯ ಅಡಗಿಹೋಯ್ತು. ಸಾವಿನ ಸತ್ಯ ಮಾತ್ರ ಜೇನ್ಮಠದ ಸನಿಹದ ಗುಡ್ಡಗಳಲ್ಲಿ ಅಡಿಗಿತ್ತು. ಬೀರ ಮಾತ್ರ ಅಜ್ಜಯ್ಯನ ಸಾವಿನನಂತರ ಪಕ್ಕುವಿನ ಗದ್ದೆ ತಾಣವನ್ನು ಬದಲಿಸಲು ನಿರ್ಧರಿಸಿದ್ದ. ರತ್ನಕ್ಕನ ಚಂಚಲತೆ ಮಾತ್ರ ಆತನನ್ನು ಬಹುವಾಗಿ ಕಾಡಿತು. ತನ್ನ ಮಕ್ಕಳು ಗುಡಿಸಲಲ್ಲಿ ಅಜ್ಜಯ್ಯನ ಸಾವಿನ ನಂತರ ಹೆದರುತ್ತವೆ ಎಂಬ ಸಬೂಬು ಬೀರನಿಗೆ ಸಿಕ್ಕಿತ್ತು.
* * *
ಬೀರ ಗದ್ದೆಯಲ್ಲಿ ಭತ್ತ ನಾಟ ಕಾರ್ಯದಲ್ಲಿ ನಿರತನಾಗಿದ್ದ. ಮುನ್ನ ಓಡೋಡಿ ಬರುತ್ತಿದ್ದ ಬಿರುಸಿಗೆ ಭತ್ತ ನಾಟ ಮಾಡುತ್ತಿದ್ದ ಒಕ್ಕಲಗಿತ್ತಿಯರು ದಂಗಾದರು. ’ಏ ಬೀರಾ ಬೇಗ ಬಾರೋ. ಪಕ್ಕು ಸಾವುಕಾರನಿಗೆ ಲಕ್ವಾ ಹೊಡೆದಿದೆ,’ರತ್ನಕ್ಕ ಹೇಳಿ ಕಳಿಸಿದಾರೆ. ಸಾಹುಕಾರರಿಗೆ ಲಕ್ವಾ ಹೊಡೆದಿದೆ ಎಂದು ಕೇಳಿದ ಬೀರ ಕುಸಿದುಹೋದ. ಸುಶೀಲಕ್ಕ ಹಿಡಿಶಾಪ ಹಾಕುತ್ತಾ ತೋಟದ ಮನೆಗೆ ಧಾವಿಸಿದರು. ರತ್ನಕ್ಕ ತುಟಿಬಿಚ್ಚದ ದುಃಖ ಅದಿಮಿಟ್ಟುಕೊಂಡಿದ್ದರು. ಮುನ್ನ ಶೆಡ್ ನಲ್ಲಿಟ್ಟಿದ್ದ ಕಾರ್ ಹೊರತೆಗೆದ. ಮತ್ತು ಹೆಗಡೆ, ಬಶೀರ, ಪಕ್ಕುವನ್ನು ಹಿಡಿದುಕೊಂಡು ಬಂದ್ರು. ಬೀರ ಸಾಹುಕಾರನನ್ನು ಮನೆಯಿಂದ ಹೊರತರಲು ನೆರವಾದ. ಪಕ್ಕು ಸಾವುಕಾರ ಆಸ್ಪತ್ರೆ ಸೇರಿದ್ರು. ರತ್ನಕ್ಕ ತೋಟದ ಮನೆಯಲ್ಲಿ ದಿನದೂಡುತ್ತಿದ್ದರು. ಪುತ್ತು ಹೆಗಡೆ ಆಗಾಗ ಬಂದು ಹೋಗುತ್ತಲೇ ಇದ್ದಾರೆ…. ಬೀರ ತನ್ನ ಸಾವುಕಾರನೊಂದಿಗೆ ಮುಖಾಮುಖಿ ಯಾಗಿ ಕೇಳಬೇಕೆಂದ ಮಾತುಗಳು ಗದ್ದೆ ಯಲ್ಲಿ ಬಿದ್ದು ಹೊರಳಾಡುತ್ತಿವೆ… ರತ್ನಕ್ಕನ ಚಂಚಲತೆ ಸಹ ಬೀರನಿಗೆ ಬಿಡಿಸಲಾಗದ ಒಗಟಾಗಿ ಉಳಿದುಬಿಟ್ಟಿದೆ. ಬೀರಾ ಸಸಿಹಿತ್ಲುಗೆ ತೆರಳಿ ಸ್ವಂತ ಗದ್ದೆ ಗೇಯುವ ಕನಸು ಕಾಣುತ್ತಲೇ ಇದ್ದಾನೆ. ಗುಡಿಸಲ ಮುಂದೆ ಸಿರಿ, ಮಂಜ ಆಟವಾಡುತ್ತಲೇ ಇದ್ದಾರೆ…..
(ಆಗಸ್ಟ್ ೨೦೦೩)


Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಕ್ಕಿ
Next post ಮೊದಲ ಮಳೆ

ಸಣ್ಣ ಕತೆ

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…