ಮೊದಲ ಮಳೆ

ಮೊದಲ ಮಳೆ ಬಂದಿಹುದು ಬೇಸಿಗೆಯೊಳಿಂದು
ಭುವಿ ಕಾದು ನಿಂದಿಹುದು ಬರುವುದೇ ಎಂದು
– ಕಾತರದಿ ಬೆಂದು

ಸಪ್ತ ರಾಗದ ದನಿಯ ಕೇಳಿದಂತೆ
ಸುಪ್ತ ಸ್ವರಗಳ ಮುತ್ತು ಚೆಲ್ಲಿದಂತೆ
ತಪ್ತ ಬಾಳುವೆಯೊಳಗ ಬೇಗೆಯನು ಅರಿತಂತೆ
ಸುತ್ತೆಲ್ಲ ಸೇರುತಿವೆ ಮೋಡ ಸಂತೆ,

ಕಾದಲರು ಕಾಣುವರು ನಗೆಗಣ್ಣಿನಿಂದ;
ಒಬ್ಬರೊಬ್ಬರ ಹೃದಯದೊಲವಿನಾನಂದ.
ಪೂರ್ವ ಗಾಳಿಯ ತಂಪು ಮೈದೋರಿ, ನಲವಿಂದ
ಎದೆಯ ಬೆಂಕಿಯು ಮೈಗೆ ನೀಡಿಹುದು ಬಂಧ!

ದೂರ ನೀಲದಲೇನೊ ಕೂಡಿ ನೀಲ,
ಮೂಡಿ ಬಂದಿತು ಹಿಂದೆ ಮೇಘಜಾಲ;
ಗುಡುಗು ಸಿಡಿಲಿನ ಮೊರೆತದೆದೆಯ ಕಲ್ಲೋಲ,
ನಡುವೆ ಮಿಂಚಿನ ಮಳೆಯ ಹನಿಗಳಾಲೋಲ!

ಹಸುರು ಹೂ ಚೆಲ್ವಿಕೆಯ ಹಸದ ನೀಡಿ,
ಕಲ್ಲೆದೆಗು ತಾಕಿಸುತ ಒಲವ ಮೋಡಿ,
ಎದೆ ತುಂಬಿ, ಕಾಲುವೆಯು ಮುಂದೆ ಮುಂದೂಡಿ
ಹಚ್ಚ ಬಾಳಿನ ಹಸದ ತರುತಿಹುದು ನೋಡಿ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೀರನ ಕನಸುಗಳ ಸುತ್ತ……
Next post ಪ್ರೀತಿ ಎಂದೂ ಮುಗಿಯುವದಿಲ್ಲ