ಮಂಥನ – ೧

ಮಂಥನ – ೧

swirling-light-1209350_960_720Unsplash“ಅನು, ಅನು ಪುಟ್ಟಿ, ಅನು ಡಾರ್ಲಿಂಗ್… ಡಾರ್ಲಿಂಗ್…” ನೀಲಾ ಕೂಗುತ್ತಾ ಅನುವಿನ ರೂಮಿನೊಳಗೆ ಕಾಲಿರಿಸಿದಳು. ಅನು ಮೈಮರೆತು ನಿದ್ರಿಸುತ್ತಿದ್ದಾಳೆ. ಹೊದಿಕೆ ಎಲ್ಲೋ ಬಿದ್ದಿದೆ. ತೊಟ್ಟಿದ್ದ ನೈಟಿ ಮಂಡಿವರೆಗೆ ಏರಿದೆ. ಅಸ್ತವ್ಯಸ್ಥಿತಳಾಗಿ ಮಲಗಿದ್ದಾಳೆ. ಕಿಟಕಿಯ ಪರದೆಯನ್ನು ಸರಿಸಿ ನೀಲಾ ನೇರ ಅನುವಿನ ತಲೆಯ ಹತ್ತಿರ ಕುಳಿತು ಮಗಳನ್ನು ದಿಟ್ಟಿಸಿದಳು. ಕಿರುನಗೆ ಮೊಗದಲ್ಲಿ ಲಾಸ್ಯವಾಡುತ್ತಿದೆ. ಹಣೆಯ ತುಂಬ ಕೂದಲು ಹರಡಿದೆ. ಯಾವ ಸಿಂಗಾರವೂ ಇಲ್ಲದೆಯೂ ಅನು ಸುಂದರವಾಗಿ ಕಾಣುತ್ತಿದ್ದಾಳೆ. ತನ್ನ ಮಗಳು ಅಪೂರ್ವ ಲಾವಣ್ಯವತಿ ಎಂದುಕೊಂಡಳು. ವಾತ್ಸಲ್ಯ ಉಕ್ಕೇರಿ ಬಂದು ಅವಳೆಡೆ ಬಾಗಿ ಹಣೆಯ ಮೇಲೆ ಮುತ್ತನಿರಿಸಿದಳು.

“ಅನು, ಕಣ್ಣು ಬಿಡು, ಎಚ್ಚರ ಮಾಡ್ಕೊ” ಊಂ ಊಂ ಎಂದು ಅನು ನಿದ್ರೆಗಣ್ಣಿನಲ್ಲಿ ಕೊಸರಾಡಿದಳು.

ಪುಟ್ಟ ಮಗುವಿನಂತೆ ಮೊಂಡಾಟ ಮಾಡುವುದನ್ನು ಕಂಡು “ಅನು, ಎದ್ದೇಳು. ಇವತ್ತಿಗೆ ನಿಂಗೆ ಇನ್ನೊಂದು ವರ್ಷ ಜಾಸ್ತಿ ಆಯ್ತು ಗೊತ್ತಾ. ನಾನು ನಿನ್ನ ವಯಸ್ಸಿನಲ್ಲಿ ಅಮ್ಮನಾಗಿಬಿಟ್ಚಿದ್ದೆ. ಏಳು ಅನು ಗದರಿದಳು, ಅಲುಗಾಡಿಸಿದಳು.

ಅನು ಮೆಲ್ಲನೆ ಕಣ್ಣು ಬಿಟ್ಟಳು. “ಹ್ಯಾಪಿ ಬರ್ತ್‌ಡೇ ಟು ಯೂ” ರಾಗವಾಗಿ ಹಾಡಿದಳು ನೀಲಾ. ಅಮ್ಮನ ಹುಡುಗಾಟಿಕೆ ಹೊಸದೆನಿಸಿತ್ತು. ಬೆರಗಾಗಿ ನೋಡುತ್ತಾ, “ಓಹ್ ಈವತ್ತು ನನ್ನ ಹುಟ್ಟಿದ ಹಬ್ಬನಾ ಥ್ಯಾಂಕ್ಯೂ ಮಮ್ಮಿ” ಕಣ್ಣರಳಿಸಿ ನಕ್ಕಳು.

“ಹೌದು ರಾಜಕುಮಾರಿ. ಇಂದು ತಮ್ಮ ಜನ್ಮದಿನ. ಏಳುವಂತವರಾಗಿ, ಅಭ್ಯಂಜನ ಮುಗಿಸಿ ಹೊಸ ಪೋಶಾಕನ್ನು ಧರಿಸುವಂತವರಾಗಿ” ನಾಟಕೀಯವಾಗಿ ನುಡಿದಳು. ಮಗಳೊಂದಿಗೆ ಮಗುವಾದಳು.

“ಅಮ್ಮ, ಯಾವ ರಾಜ್ಯದ ರಾಜಕುಮಾರಿ ನಾನು. ನಂಗೆ ಅಜೀರ್ಣವಾಗುವಷ್ಟು ಪ್ರೀತಿ ತೋರಿಸಿಬಿಡ್ತಿಯಾ. ಅಭ್ಯಂಜನ ಗಿಭ್ಯಂಜನ ಏನೂ ಬೇಡ. ನಂಗೆ ಆಫೀಸಿಗೆ ಹೊತ್ತಾಗುತ್ತೆ. ಸ್ನಾನ ಮಾಡಿ ಹೊರಟುಬಿಡ್ತಿನಿ.”

ಇವತ್ತು ನಿನ್ನ ಹುಟ್ಟಿದ ಹಬ್ಬ ದೇವಸ್ಥಾನಕ್ಕೆ ಹೋಗಬೇಕು. ಮನೆಯಲ್ಲಿ ಸ್ಪೆಷಲ್ ಅಡಿಗೆ ಮಾಡಬೇಕು. ನಿನ್ನ ಫ್ರೆಂಡ್ಸ್‌ನೆಲ್ಲಾ ಸಂಜೆ ಪಾರ್ಟಿಗೆ ಕರೀಬೇಕು. ಇನ್ನು ಎಷ್ಟೊಂದು ಕೆಲ್ಸ ಇದೆ. ನೀನು ಆಫೀಸಿಗೆ ರಜಾ ಹಾಕಲೇಬೇಕು” ಒತ್ತಾಯಿಸಿದಳು.

“ಅಮ್ಮ, ಯಾವ ಸಂತೋಷಕ್ಕೆ ಇದನ್ನೆಲ್ಲ ಮಾಡ್ಕೊಬೇಕು. ಹೀಗೆಲ್ಲ ಸಂಭ್ರಮದಿಂದ ಮಾಡ್ತಿಯಾ, ಕೊನೆಗೆ ಏನೋ ಅಪ್ಸೆಟ್ ಆಗ್ತೀಯಾ. ಹೋದ ವರ್ಷದ್ದು ನಾನಿನ್ನು ಮರೆತಿಲ್ಲ ಅಮ್ಮ. “ಪ್ಲೀಸ್, ಅನು, ಅದನ್ನೆಲ್ಲ ನೆನಪಿಸಬೇಡ” ದುಗುಡಗೊಂಡಳು.

“ಮತ್ತೆ ಈಗ ಯಾಕಮ್ಮ ಇದೆಲ್ಲಾ ನಾನೇನು ಪುಟ್ಟ ಮಗುವಾ ಹುಟ್ಟಿದ ಹಬ್ಬ ಆಚರಿಸಿಕೊಳ್ಳೋಕೆ.” ನಿನಗೊಂದು ಮಗು ಅಗೋ ತನಕ ನೀನು ನನಗೆ ಪುಟ್ಟ ಮಗುವೇ. ನನಗೆ ನಿರಾಶೆ ಮಾಡಬೇಡ. ಇವತ್ತೊಂದಿನ ನಾನು ಹೇಳಿದಂತೆ ಕೇಳು” ಲಲ್ಲೆಗರೆದಳು.

“ಆದರೆ ಅಪ್ಪಾ” ನಿನ್ನ ಗಂಡ ಅನ್ನೋಕೆ ಹೋದವಳು ತಡೆದು ಅಪ್ಪಾ ಎಂದಳು.

“ಅವರಾಗಲೇ ಬೆಂಗಳೂರಿಗೆ ಹೋದರು. ಬರೋದು ನಾಳೇನೇ. ಇವತ್ತು ಇಡೀ ದಿನ ನನ್ನದು, ನಿನ್ನದು. ಈ ವರ್ಷ ಹಿಂದಿನ ಬಾರಿ ಆದ ಹಾಗೆ ಆಗಲ್ಲ. ಏಳು ಮೇಲೆ, ತಲೆಗೆ ಎಣ್ಣೆ ಒತ್ತುತ್ತೇನೆ ಬೇಗ ಬಾ” ಸಡಗರದಿಂದ ಹೊರಟ ಅಮ್ಮನನ್ನೇ ಅನು ಬೆರಗಿನಿಂದ ನೋಡಿದಳು.

ಹೋದ ವರ್ಷದ ನೆನಪಾಯಿತು. ಅಂದು ಕೂಡ ಅಮ್ಮ ಹೀಗೆ ಸಡಗರಿಸಿದ್ದಳು. ದೇವಸ್ಧಾನಕ್ಕೆ ಕರೆದೊಯ್ದು ಅರ್ಚನೆ ಮಾಡಿಸಿದ್ದಳು. ಸಂಜೆ ಎಲ್ಲರನ್ನು ಕರೆಯುವಂತೆ ಬಲವಂತಿಸಿದ್ದಳು, ಪುಣ್ಮಕ್ಕೆ ನಾನ್ಯಾರನ್ನೂ ಕರೆದಿರಲಿಲ್ಲ. ನನ್ನನ್ನ ಬಲವಂತವಾಗಿ ಅಪ್ಪನ ಅಶೀರ್ವಾದ ಪಡೆಯಲು ಅಪ್ಟನ ರೂಮಿಗೆ ಕಳುಹಿಸಿ ತಾನು ಬಾಗಿಲಲ್ಲೇ ನಿಂತಿದ್ದಳು. ಅಪ್ಪ ಮಗಳ ಮಧ್ಯೆ ಸೌಹಾರ್ದತೆಯನ್ನು ಬೆಳೆಸಲು ಅಮ್ಮ ಸದಾ ಹಾರೈಸುತ್ತಾ ಇಂಥ ಅವಕಾಶಗಳಿಗಾಗಿ ಕಾಯುತ್ತಿದ್ದಳು. ತನಗಂತೂ ಚೂರೂ ಇಷ್ಟವಿರಲಿಲ್ಲ. ಅಮ್ಮನ ಬಲವಂತಕ್ಕೆ, ನೊಂದುಕೊಳ್ಳುತ್ತಾಳೆ ಎಂಬ ಆತಂಕಕ್ಕೆ ಒಲ್ಲದ ಮನಸ್ಸಿನಿಂದಲೇ, ಎಂದೂ ಅಪ್ಪನ ರೂಮಿಗೆ ಕಾಲಿಡದಿದ್ದವಳು ಅಂದು ಕಾಲಿಟ್ಟು ನೇರವಾಗಿ ಅವರ ಬಳಿಗೆ ಹೋಗಿ ಕಾಲು ಮುಟ್ಟಿ ನಮಸ್ಕರಿಸುತ್ತಾ “ನನ್ನ ಹುಟ್ಟಿದ ದಿನ ಇವತ್ತು, ಆಶೀರ್ವಾದ ಮಾಡಿ” ಎಂದಳು. ಭೂಕಂಪ ಆದವರಂತೆ ದಡ ದಡನೆ ಹೊರಬಂದು “ನೀಲಾ ನೀಲಾ ಇದೆಲ್ಲ ನಂಗಿಷ್ಟ ಇಲ್ಲಾ ಅಂದ್ರೂ ಯಾಕೆ ಈ ನಾಟಕ ಆಡಿಸ್ತಿಯಾ. ಯಾವುದನ್ನು ಮರೀಬೇಕು ಅಂತಿದಿನೋ ಅದನ್ಯಾಕೆ ನೆನಪಿಸುವಂತೆ ಮಾಡ್ತಿಯಾ. ನಿನ್ನ ಮಗಳ ಹುಟ್ಟಿದ ದಿನ ನಂಗೆ ಜ್ಞಾಪಿಸಿ ನಿನ್ನ ಹಾಗೂ ನಿನ್ನ ಪ್ರಿಯತಮನ ಪ್ರೇಮವನ್ನು ನನಗೆ ಚುಚ್ಚಿ ತೋರಿಸ್ತಾ ಇದ್ದೀಯಾ ಅಲ್ವಾ. ಅವಳು ನನ್ನ ಮಗಳಲ್ಲ ಅನ್ನೋ ಸತ್ಯಾನ ಪದೇ ಪದೇ ತಿಳಿಸೋಕೆ ಬರ್ತೀಯಾ. ಇದೇ ಕಡೆ. ಇನ್ನೆಂದೂ ಹೀಗೆ ನಡೀಬಾರದು” ಎಂದವರೇ ಅಮ್ಮನ ಕೆನ್ನೆಗೆ ಚಟಾರೆಂದು ಬಾರಿಸಿಯೇ ಬಿಟ್ಟಾಗ ಭೂಮಿ ಬಾಯಿ ತೆರೆದು ಅಲ್ಲಿಯೇ ನನ್ನನ್ನು ನುಂಗಬಾರದೆ ಅನ್ನಿಸಿತ್ತು. ಯಾಕೆ ಬೇಕಿತ್ತು ಈ ಅಮ್ಮನಿಗೆ ಇದೆಲ್ಲಾ. ನನ್ನ ಹುಟ್ಟುಹಬ್ಬ ಮಾಡಲಿಲ್ಲ ಅಂತಾ ಅಳ್ತಾ ಇದ್ದೋರು ಯಾರು. ನಾನು ಅವರ ಮುಂದೆ ಬಂದರೆ ಏನೆಲ್ಲಾ ನೆನಪಾಗುತ್ತೆ ಅನ್ನೋ ನಿಜಾ ಗೊತ್ತಿದ್ದೂ ಈ ಅಮ್ಮ ಯಾಕೆ ಪದೇ ಪದೇ ಕಲ್ಲನ್ನು ಹೂಮಾಡೋಕೆ ಹೋಗ್ತಾಳೆ. ಈ ಅಮ್ಮನಿಗೆ ಈ ಜನ್ಮದಲ್ಲಿ ಬುದ್ದಿ ಬರುವುದಿಲ್ಲ. ವಿಷಾದ ಒತ್ತಿಕೊಂಡು ಬಂದಿತ್ತು.

ಕಣ್ಣೀರಿಡುತ್ತಾ ನಿಂತ ಅಮ್ಮನನ್ನು ನಿಧಾನವಾಗಿ ನಡೆಸಿಕೊಂಡು ಬಂದು “ಅಮ್ಮ ಮೂರ್ಖರ ಜೊತೆ ನಾವೂ ಮೂರ್ಖರ ಥರ ಆಡಬಾರದು ಅಲ್ವೇನಮ್ಮ. ನಿನ್ನನ್ನ ನೋಯಿಸಿ ಹಿಂಸಿಸೋದೆ ಅಪ್ಪನ ಉದ್ದೇಶವಾಗಿದೆ. ನಿನ್ನ ಸಡಗರ, ನಿನ್ನ ಸಂತೋಷ ಸಹಿಸೋ ಶಕ್ತಿ ನಿನ್ನ ಗಂಡನಿಗಿಲ್ಲ ಕಣಮ್ಮ. ಬೇಜಾರು ಮಾಡ್ಕೊಬೇಡ. ಬಾ, ನನ್ನ ಹುಟ್ಟಿದ ಹಬ್ಬವನ್ನ ಹೊರಗೆ ಸೆಲಿಬ್ರೋಟ್ ಮಾಡೋಣ” ಎಂದು ಬಲವಂತವಾಗಿ ಹೊರಡಿಸಿ ಹೊರಗೆ ಕರೆದೊಯ್ದ ನೆನಪಾಗಿ, ನಿಟ್ಟುಸಿರು ಬಿಟ್ಟಳು.

ಇವತ್ತಾದರೂ ಅಮ್ಮ ತನಗಿಷ್ಟ ಬಂದಹಾಗೆ ಸಂತೋಷವಾಗಿರಲಿ ಎಂದು ಅನು ನೀಲ ಹೇಳಿದಂತೆ ಕೇಳತೊಡಗಿದಳು.

ಅವಳೇ ಆರಿಸಿ ತಂದಿದ್ದ ಡ್ರೆಸ್ ನೋಡಿ ಸಂತೋಷಪಟ್ಟಳು. ತಲೆ ತುಂಬಾ ಎಣ್ಣೆ ಹಚ್ಚಿಸಿಕೊಂಡು ಅಮ್ಮನಿಂದಲೇ ನೀರು ಎರೆಸಿಕೊಂಡು, ಹೊಸ ಡ್ರೆಸ್ ಧರಿಸಿದಳು.

ಅಮ್ಮನಿಚ್ಛೆಯಂತೆ ಸಿಂಗರಿಸಿಕೊಂಡು ಅಮ್ಮನನ್ನೂ ಕೈನಿಯಲ್ಲಿ ಕೂರಿಸಿಕೊಂಡು ದೇವಸ್ಥಾನಕ್ಕೆ ಹೋದಳು. ಮನಸ್ಸಿಗೊಲ್ಲದಿದ್ದರೂ ಕಣ್ಮುಚ್ಚಿ ಧ್ಯಾನಿಸಿ ನಮಸ್ಕರಿಸಿದಳು. “ದೇವಾ ನೀನಿರುವುದು ನಿಜವೇ ಆದರೆ ನನ್ನಮ್ಮ ಸದಾ ನಗುತ್ತಾ ಇರುವಂತೆ ಮಾಡು” ಎಂದು ಬೇಡಿಕೊಂಡಳು.

ತಾವೇ ಪಾರ್ಟಿ ಕೊಡಿಸುವುದಾಗಿ ಹಟ ಹಿಡಿದು ನೀಲಳಿಗೆ ಇಷ್ಟವಾದ ನಾರ್ತ್‌ ಇಂಡಿಯನ್ ಊಟ ಕೊಡಿಸಿದಳು. ಐಸ್ ಕ್ರೀಂ ತಿನ್ನಿಸಿದಳು.

ಸಂಜೆ ಫ್ರೆಂಡ್ಸನ್ನೆಲ್ಲ ಇನ್‌ವೈಟ್ ಮಾಡಿದಳು. ಅಮ್ಮ ಸಿದ್ದಗೊಳಿಸಿದ ಕೇಕ್ ನೋಡಿ ತಮಾಷೆ ಮಾಡಿ ನಕ್ಕಳು. “ಏನಮ್ಮ ಒಂದೇ ಕ್ಯಾಂಡಲ್ ಇಟ್ಟಿದ್ದೀಯಾ. ನಂಗೇನು ಒಂದು ವರ್ಷವಾ. ಮಗಳ ವಯಸ್ಸು ಗೊತ್ತಾಗಬಾರದು ಅಂತಾನಾ. ಏಯ್‌ ಅಮ್ಮ ನಾನೇ ಎಲ್ಲರಿಗೂ ಹೇಳಿಬಿಡ್ತೀನಿ. ನಾನು ೨೨ ತುಂಬಿ ೨೩ ವರ್ಷದ ಯುವತಿ ಅಂತಾ” ರೇಗಿಸಿದಳು.

ಫ್ರೆಂಡ್ಸ್ ಬಂದಾಗ ಕೇಕ್ ಕತ್ತರಿಸಿ ಎಳೇ ಮಗುವಿನಂತೆ ಅಮ್ಮನನ್ನು ಮುದ್ದುಗರೆದಳು. ಬಾಯಿ ತುಂಬಾ ಕೇಕ್ ತಿನ್ನಿಸಿ ತಾನೂ ನಕ್ಕು ಅಮ್ಮನನ್ನು ನಗಿಸಿದಳು. ಈ ಗಳಿಗೆ ಶಾಶ್ವತವಾಗಿರಬಾರದೆ ಎನಿಸಿಬಿಟ್ಟಿತು.

ನಾಳೆ ಯಥಾ ಪ್ರಕಾರ ಆ ಮನೆ ಮೌನದ ಸಾಮ್ರಾಜ್ಯ. ಇಲ್ಲವೇ ಅಪ್ಪನ ಕೂಗಾಟ, ಹಾರಾಟ. ಅಮ್ಮನ ಕಣ್ಣೀರಿನ ಹೊಳೆ ಹರಿಸುವ ದಿನಚರಿ ಥೂ ನೆನೆಸಿಕೊಂಡರೆ ಬೇಸರವಾಗುತ್ತದೆ. ಅದನ್ನು ನನೆಸಿಕೊಳ್ಳಲೇಬಾರದೆಂದು ನಿರ್ಧರಿಸಿ ಫ್ರೆಂಡ್ಸ್ ಜೊತೆ ನಗು ತಮಾಷೆ ಕೀಟಲೆಗಳಲ್ಲಿ ಮುಳುಗಿಹೋದಳು. ನೀಲಳಿಗೆ ಈಗ ಇದು ನಿಜವಾದ ಮನೆ ಎಂದೆನಿಸಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾರೋ ಬಾರೋ ಮಳೆರಾಯ
Next post ಸೂರ್ಯ ಅನ್ನೋ ಪ್ರಾಣಿ

ಸಣ್ಣ ಕತೆ

 • ಕ್ಷಮೆ

  ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

 • ನಿರಾಳ

  ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

 • ವ್ಯವಸ್ಥೆ

  ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

 • ನಿಂಗನ ನಂಬಿಗೆ

  ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

 • ಕೇರೀಜಂ…

  ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…