ಕತೆ: ವಾಸ್ತವತೆ ಮತ್ತು ಅನನ್ಯತೆಗಳ ನಡುವೆ

ಕತೆ: ವಾಸ್ತವತೆ ಮತ್ತು ಅನನ್ಯತೆಗಳ ನಡುವೆ

ಕೆಲವು ದಿನಗಳ ಹಿಂದೆ ಒಂದು ಮುಂಜಾನೆ ನಾನು ಕತೆಗಾರರೊಬ್ಬರ ಜತೆ ದೂರವಾಣಿಯಲ್ಲಿ ಮಾತಾಡುತ್ತಿದ್ದೆ. ಅವರು ಹೇಳಿದರು: ಸದ್ಯ ಕನ್ನಡಕ್ಕೆ ತೇಜಸ್ವಿಯವರ ‘ತಬರನ ಕತೆ’ ಮತ್ತು ಅನಂತಮೂರ್ತಿಯವರ ‘ಸೂರ್ಯನ ಕುದುರೆ’ ಮಾದರಿಯಾಗಿವೆ. ಮೊದಲನೆಯದು ವಾಸ್ತವತೆಯನ್ನು ಒಳಗೊಂಡರೆ ಎರಡನೆಯದು ಅನನ್ಯತೆಯನ್ನು ಒಳಗೊಂಡಿದೆ. ಮುಂದಿನ ಕತೆಗಳು ಈ ಎರಡರ ನಡುವೆ ಸಾಗಬಹುದೆಂದು ಅನಿಸುತ್ತದೆ-ಎಂಬುದಾಗಿ.

ಈ ಯುವ ಕತೆಗಾರ ‘ತಬರನ ಕತೆ’ ಮತ್ತು ‘ಸೂರ್ಯನ ಕುದುರೆ’ ಎಂಬೀ ಪ್ರಸಿದ್ಧ ಕತೆಗಳ ಗುಣಗಳನ್ನು ಸರಿಯಾಗಿಯೆ ಗಹಿಸಿದ್ದಾರೆ. ಹಾಗೂ, ಇವು ಸಾಹಿತ್ಯದ ಒಂದೊಂದು ಸೀಮೆಗಳನ್ನು ಪ್ರತಿನಿಧೀಕರಿಸುವಂತೆ ಅವರಿಗೆ ತೋರಿದುದಕ್ಕೆ ಎಲ್ಲರೂ ಗುರುತಿಸಬಹುದಾದ ಕಾರಣಗಳಿರಬಹುದು. ಕಥನ ಕಲೆ ಇವೆರಡರ ನಡುವಣ ಸಾಕಷ್ಟು ವಿಸ್ತಾರದ ಹಾದಿಯಲ್ಲಿ ಎಲ್ಲಾದರೂ ಸಾಗಬಹುದಾಗಿದೆ ಎನ್ನುವುದು ಬಹುಶಃ ಅವರ ಅಭಿಪ್ರಾಯ. ಇದು ಈ ಎರಡು ಮಹತ್ವದ ಕತೆಗಳ ಟೀಕೆಯಲ್ಲ, ಅವುಗಳ ಕುರಿತಾದ ಒಂದು ದರ್ಶನ.

ವಾಸ್ತವತೆಯೇ ಕಾರಣವಾಗಿರುವ ಕತೆಗಳ ಕುರಿತಾದ ಮಾತೆಂದರೆ, ಈ ವಾಸ್ತವತೆ ಬದಲಾದಾಗ ಈ ಕತೆಗಳೂ ಕೊನೆಗೊಳ್ಳುವ ಸಾಧ್ಯತೆಯಿದೆ ಎನ್ನುವುದು. ಆದ್ದರಿಂದ ಅವು ಚರಿತ್ರೆಯ ಒಂದು ಕಾಲಘಟ್ಟದ ಜತೆ ಗುರುತಿಸಲ್ಪಡುತ್ತವೆ. ಯಾಕೆಂದರೆ ವಾಸ್ತವತೆ ಚರಿತ್ರೆಯ ಭಾಗವಾಗಿರುತ್ತ ಚರಿತ್ರೆ ಇಂಥ ವಾಸ್ತವಿಕ ಕೃತಿಗಳನ್ನು ತನಗೆ ಬೇಕಾದಂತೆ ಉಪಯೋಗಿಸಿಕೊಳ್ಳುತ್ತದೆ. ಇದರಿಂದ ಅವುಗಳ ಮಹತ್ವವೇನೂ ಕಡಿಮೆಯಾಗುವುದಿಲ್ಲ; ಒಂದು ದೃಷ್ಟಿಯಿಂದ ಮಹತ್ವ ಹೆಚ್ಚೇ ಆಗುತ್ತದೆ. ಯಾಕೆಂದರೆ, ಚರಿತ್ರೆಯನ್ನೇ ಬದಲಿಸುವಂಥ ಕೃತಿಗಳು ಇವು. ವಾಸ್ತವಿಕ ಕೃತಿಗಳು ಹೀಗಾದ್ದಕ್ಕೆ ಜಾಗತಿಕ ಸಾಹಿತ್ಯ ಕ್ಷೇತ್ರದಲ್ಲಿ ಅನೇಕ ಉದಾಹರಣೆಗಳಿವೆ. ರಶಿಯನ್ ಮಹಾಕ್ರಾಂತಿಯ ಸಂದರ್ಭಕ್ಕೆ ಸಲ್ಲುವ ಮ್ಯಾಕ್ಸಿಂ ಗಾರ್ಕಿಯ ಸುಪ್ರಸಿದ್ಧ ಕಾದಂಬರಿ ‘ತಾಯಿ’ ಇಂಥದು. ಇನ್ನು ಈ ಅನನ್ಯ ಎನ್ನಬಹುದಾದ ಕತೆಗಳಾದರೆ, ಅವು ಸುಲಭವಾಗಿ ಯಾರ ಕೈಗೂ ಸಿಗುವುದಿಲ್ಲ. ಆದ್ದರಿಂದ ವಾಸ್ತವವಾದಿಗಳಮಟ್ಟಿಗೆ ಅವು ಪಲಾಯನಕಾರಿ; ಅನನ್ಯತೆಯನ್ನು ಮೆಚ್ಚುವವರಿಗೆ ಹೀಗೆ ಕೈಗೆ ಸಿಗದಿರುವುದೇ ಅವುಗಳ ಗುಣ.

ಚರಿತ್ರೆಯಲ್ಲಿ ಒಂದು ಸಂದರ್ಭದಲ್ಲಿ ಉಪಯೋಗಕ್ಕೆ ಬಂದವು ಅದೇ ರೀತಿಯಲ್ಲಿ ಸದಾ ಕಾಲ ಉಪಯೋಗಕ್ಕೆ ಬರುವುದಿಲ್ಲ ಎನ್ನುವುದೊಂದು ಕಟು ಸತ್ಯ. ಸಂಗತಿಗಳು ಕಾಲಾಂತರದಲ್ಲಿ ಮರುಕಳಿಸಬಹುದು, ಆದರೆ ಹಾಗೆ ಮರುಕಳಿಸುವಾಗ ಅವು ಹಾಗೇ ಇರುವುದಿಲ್ಲ! ಇದಕ್ಕೆ ಮಹಾತ್ಮಾ ಗಾಂಧಿಯವರು ಬಳಸಿದ ಸತ್ಯಾಗ್ರಹದ ಕುರಿತಾಗಿ ಈಚೆಗೆ ಎದ್ದಿರುವಂಥ ಜಿಜ್ಞಾಸೆ ಒಂದು ಉದಾಹರಣೆ. ಈ ಸತ್ಯಾಗ್ರಹವೆನ್ನುವುದು ಕಾಲಾತೀತವಾಗಿ ಬಳಸಲಾಗಬಹುದಾದ ಒಂದು ಮಾರ್ಗವೆಂದು ನಾವು ನಂಬಿದ್ದೆವು. ಬಳಸುತ್ತಲೂ ಇದ್ದೆವು. ಆದರೆ ಕಾಲಕ್ರಮೇಣ, ಕೇವಲ ಸತ್ಯಾಗ್ರಹದಿಂದ ಏನನ್ನೂ ಬದಲಾಯಿಸುವುದಕ್ಕೆ ಸಾಧ್ಯವಾಗುವುದಿಲ್ಲ ಎಂಬ ಹತಾಶೆ ಜನರನ್ನು ಬಾಧಿಸತೊಡಗಿದ್ದೂ ನಿಜ. ಈಗಲಾದರೆ ಯುವ ಪೀಳಿಗೆಗೆ ಸತ್ಯಾಗ್ರಹಕ್ಕಿಂತ ಸಂಜಯ್ ದತ್ತನ ‘ಗಾಂಧಿಗಿರಿ’ಯೇ ಹೆಚ್ಚು ಪರಿಣಾಮಕಾರಿ ಎನಿಸತೊಡಗಿದೆ! ಗಾಂಧಿಗಿರಿ ಎನ್ನುವ ಪದವನ್ನು ಹಳೆತಲೆಮಾರಿನವರು ಸ್ವೀಕರಿಸಲಾರರು. ಈ ಪದವನ್ನೇ ಆಕ್ಷೇಪಿಸಿದವರೂ ಇದ್ದಾರೆ. ಕಾರಣ ಇದು ದಾದಾಗಿರಿ, ಚಮ್ಚಾಗಿರಿ ಮುಂತಾದ ನಕಾರಾತ್ಮಕವಾದ ಪದಗಳ ಪರಿವಾರಕ್ಕೆ ಸೇರಿದೆ. ಸತ್ಯಾಗ್ರಹದಲ್ಲಿ ಸತ್ಯವೇ ಪಣವಾದರೆ, ಗಾಂಧಿಗಿರಿಯಲ್ಲಿರುವುದು ಒಂದು ರೀತಿಯ ಭರ್ತ್ಸನೆ. ಮಹಾತ್ಮಾಗಾಂಧಿ ಇಂಥ ಗಾಂಧಿಗಿರಿಯನ್ನು ಸರ್ವಥಾ ಒಪ್ತುತ್ತಿರಲಿಲ್ಲ. ಯಾಕೆಂದರೆ, ಅವರದು ಸಂಪೂರ್ಣ ಪಾರದರ್ಶಕವಾದ ಮಾರ್ಗ: ಗುರಿ ಶುದ್ಧವಾಗಿರಬೇಕಾದರೆ ಮಾರ್ಗವೂ ಶುದ್ಧವಾಗಿರಬೇಕು ಎನ್ನುವ ತತ್ವ. ಗಾಂಧಿ ಬಳಸಿಕೊಂಡಿದ್ದ ಉಪವಾಸ ಸತ್ಯಾಗ್ರಹದ ಅರ್ಥ ಕೂಡಾ ಕಾಲಾಂತರದಲ್ಲಿ ಬದಲಾಗಿರುವುದನ್ನು ಗಮನಿಸಬೇಕು: ಈಗ ಒಂದು ದಿನದ, ಅಥವಾ ಇನ್ನೂ ಚುಟುಕಾಗಿ, ಮುಂಜಾನೆಯಿಂದ ಸಂಜೆಯವರೆಗಿನ ಉಪವಾಸ ಸತ್ಯಾಗ್ರಹಗಳು ಚಾಲ್ತಿಗೆ ಬಂದಿರುವುದನ್ನು ನೋಡಿದರೆ, ಉಪವಾಸವೆನ್ನುವುದು ಸದ್ಯ ಕೇವಲ ಸಾಂಕೇತಿಕ ಅರ್ಥದಲ್ಲಿ ಮಾತ್ರ ಬಳಕೆಯಲ್ಲಿವೆ. ಹೀಗೆ ಗಾಂಧಿಯವರು ಬಳಸಿದ ಅನೇಕ ತತ್ವಗಳು, ವಿಧಾನಗಳು ಇಂದು ಚಾರಿತ್ರಿಕವಾಗಿಬಿಟ್ಟದೆ. ಇವು ಮತ್ತೆ ನಮಗೆ ಒದಗಬೇಕಾದರೆ, ಕಾಲಾಂತರದಲ್ಲಿ ಇವನ್ನು ನಾವು ಪುನಃ ಕಂಡುಕೊಳ್ಳಬೇಕು, ಕಂಡು ಬೆರಗಾಗಬೇಕು. ಈ ಬೆರಗಿನ ಗುಣ ಮುಖ್ಯ. ಸಾಹಿತ್ಯದಲ್ಲೂ ವಾಸ್ತವಕ್ಕೆ ಉಪಯೋಗವಾದ ಕೃತಿಗಳು ಈ ರೀತಿ ಕ್ರಮೇಣ ಚಾರಿತ್ರಿಕವೂ ಆಗಬಹುದು. ಬಹುಶಃ ಇದು ಸಾಹಿತ್ಯ ತನ್ನ ತುರ್ತು ಕ್ರಿಯಾಶೀಲತೆಯ ಉತ್ಸುಕತೆಗೆ ತೆರಬೇಕಾದ ಬೆಲೆಯೆಂದು ಕಾಣುತ್ತದೆ.

ಆದರೆ ‘ತಬರನ ಕತೆ’ಯನ್ನು ‘ವ್ಯಕ್ತಿಯೊಬ್ಬ ವ್ಯವಸ್ಥೆಗೆ ಮುಖಾಮುಖಿ ಯಾಗುವುದನ್ನು’ (ಇದು ನನ್ನ ಜತೆ ಮಾತಾಡುತ್ತಿದ್ದ ಕತೆಗಾರರು ಬಳಸಿದ ಅರ್ಥಪೂರ್ಣ ಪದಪುಂಜ) ತೋರಿಸುವ ಕತೆಯೆಂದು ಓದುವುದು ಸಾಧ್ಯವಿಲ್ಲವೇ? ಖಂಡಿತವಾಗಿಯೂ ಸಾಧ್ಯ. ಮಾತ್ರವಲ್ಲ, ಹಾಗೆ ಓದುವ ಮೂಲಕ ನಾವು ‘ತಬರನ ಕತೆ’ಯನ್ನು ಮತ್ತೆ ಮತ್ತೆ ಜೀವಂತಗೊಳಿಸುವುದೂ ಸಾಧ್ಯ. ಯಾಕೆಂದರೆ ಆಗ ‘ತಬರನ ಕತೆ’ ಕೇವಲ ಒಂದು ಕಾಲದ ಒಂದು ಸನ್ನಿವೇಶದ ಕತೆಯಾಗಿರದೆ, ಎಲ್ಲಾ ಕಾಲಕ್ಕೂ ಸಲ್ಲುವ ಒಂದು ರೂಪಕವಾಗಿಬಿಡುತ್ತದೆ. ಆದರೆ ಹೀಗೆ ಓದಬೇಕೆಂದು ಕತೆ ನಮಗೆ ಹೇಳುವುದಿಲ್ಲ. ಇದೇ ಮಾತು ಮ್ಯಾಕ್ಸಿಂ ಗಾರ್ಕಿಯ ‘ತಾಯಿ’ಯ ಕುರಿತೂ ಹೇಳಬಹುದು. ‘ಸೂರ್ಯನ ಕುದುರೆ’ಯಾದರೆ ವಾಸ್ತವತೆಯತ್ತ ನೇರವಾಗಿ ಬೊಟ್ಟುಮಾಡದ ಕಾರಣ ಆಗಲೇ ಅನನ್ಯತೆಯ ಓದಿನತ್ತ ನಮ್ಮನ್ನು ತೊಡಗಿಸುತ್ತದೆ. ಈ ಎರಡೂ ಕಥನ ರೀತಿಗಳ ಮುಖ್ಯ ವ್ಯತ್ಯಾಸ ಇದೇ. ಎರಡೂ ಪ್ರತ್ಯಪ್ರತ್ಯೇಕವಾದ ಶ್ರಮಗಳನ್ನು ಓದುಗರಿಂದ ಅಪೇಕ್ಷಿಸುತ್ತವೆ: ‘ತಬರನ ಕತೆ’ಯನ್ನು ಅನನ್ಯವಾಗಿಸುವುದೂ, ‘ಸೂರ್ಯನ ಕುದುರೆ’ಯನ್ನು ವಾಸ್ತವವಾಗಿಸುವುದೂ ಎರಡೂ ಓದುಗರ ಕೈಯಲ್ಲಿರುವ ಸಂಗತಿಗಳು. ಮಾತ್ರವಲ್ಲ, ಹೀಗೆ ಮಾಡಿದರೇನೇ, ಈ ಕತೆಗಳಿಂದ ನಾವು ಅತ್ಯುತ್ತಮವಾದ್ದನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯ.

ಈ ಎರಡನೆ ರೀತಿಗೆ ಫ್ರಾಂಝ್ ಕಾಫ್ಕಾನ ಕೃತಿಗಳ ಉದಾಹರಣೆಯನ್ನೂ ನೀಡಬಹುದು. ‘ದುರ್ಗ’ ಎಂಬ ಕಾದಂಬರಿಯಲ್ಲಿ ಒಬ್ಬ ಮಣೇಗಾರ (ಸರ್ವೇಯರ್) ಒಂದು ಗ್ರಾಮಕ್ಕೆ ಬರುತ್ತಾನೆ. ಈ ಗ್ರಾಮದ ಕೇಂದ್ರ ಒಂದು ದುರ್ಗ (ಕೋಠಿ). ದುರ್ಗದವರೇ ಅವನನ್ನು ಗ್ರಾಮ ಅಳೆಯುವುದಕ್ಕೆ ಕರೆಸಿರುವುದು. ಆದರೆ ತನ್ನನ್ನು ಕರೆಸಿದವರನ್ನು ಈ ಮಣೇಗಾರನಿಗೆ ಭೇಟಿಯಾಗುವುದಕ್ಕೇ ಕಷ್ಪವಾಗುತ್ತದೆ. ಮಾತ್ರವಲ್ಲ, ಊರವರೆಲ್ಲ ಅವನನ್ನು ಸಂದೇಹದಿಂದ ನೋಡುತ್ತಾರೆ, ಅವನಿಗೆ ಯಾವ ಸಹಕಾರವನ್ನೂ ನೀಡುವುದಿಲ್ಲ. ಕೊನೆಗೂ ದುರ್ಗಕ್ಕೆ ಪ್ರವೇಶ ಗಿಟ್ಟಿಸಿ ಅಲ್ಲಿನ ದಫ್ತರಗಳು ತುಂಬಿದ ಕೊಠಡಿಗಳಲ್ಲಿ ಇವನು ಸಂಚರಿಸುತ್ತಾನೆ. ಆದರೆ ಯಾವ ಉಪಯೋಗವೂ ಆಗುವುದಿಲ್ಲ. ಕಾಫ್ಕಾನದೇ ‘ವಿಚಾರಣೆ’ ಎಂಬ ಇನ್ನೊಂದು ಕಾದಂಬರಿಯಲ್ಲಿ ಬ್ಯಾಂಕ್ ಉದ್ಯೋಗಿಯೊಬ್ಬನನ್ನು ಯಾವ ಸ್ಪಷ್ಟ ಕಾರಣವೂ ಇಲ್ಲದೆ ಬಂಧಿಸಲಾಗುತ್ತದೆ. ಬಂದಿಸಿದರೂ ಅವನನ್ನು ಜೇಲಿಗೆ ಹಾಕದೆ, ವಿಚಾರಣೆಯಿರುವಾಗಲೆಲ್ಲ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಆದೇಶಕ್ಕೆ ಗುರಿಪಡಿಸಿಬಿಡಲಾಗುತ್ತದೆ. ಇದು ನಿಜಕ್ಕೂ ಅವನ ಪಾಲಿಗೆ ಜೇಲಿನಲ್ಲಿರುವುದಕ್ಕಿಂತಲೂ ಘೋರ ಅನುಭವವಾಗಿ ಪರಿಣಮಿಸುತ್ತದೆ. ಕೊನೆಯಲ್ಲಿ ನಾಲ್ಕು ಜನ ಬಂದು ಅವನನ್ನು ಒಂದು ಬಯಲಿಗೆ ಕೊಂಡೊಯ್ದು ಎದೆಗೆ ಕತ್ತಿ ಹಾಕಿ ತಿವಿದು ಕೊಲ್ಲುತ್ತಾರೆ. ಕಾಫ್ಕಾನ ಯಾವ ಕೃತಿಗಳೂ ವಾಸ್ತವತೆಯವು ಎಂದು ಹೇಳಲಾಗದು. ಆದರೂ “ವ್ಯಕ್ತಿ ಮತ್ತು ವ್ಯವಸ್ಥೆಯ ಮುಖಾಮುಖಿಯನ್ನು” ಇವು ಬಹಳ ಶಕ್ತವಾಗಿ ಕಥಿಸುತ್ತವೆ.

ದೇವನೂರ ಮಹಾದೇವರ ‘ಕುಸುಮಬಾಲೆ’ ಪ್ರಕಟವಾದಾಗ ಕೆಲವು ದಲಿತ- ಬಂಡಾಯ ಬರಹಗಾರರು ಆಕ್ಷೇಪವೆತ್ತಿದರು. ಇದು ಸುಲಭವಾಗಿ ಅರ್ಥವಾಗುವುದಿಲ್ಲ ಎನ್ನುವುದು ಮಾತ್ರವೇ ಆಕ್ಷೇಪಕ್ಕೆ ಕಾರಣವಾಗಿರಲಿಲ್ಲ; ಅದೊಂದು ‘ಕಲಾಕೃತಿ’ ಆಗಿದೆಯೆನ್ನುವುದೂ ಕಾರಣವಾಗಿತ್ತು. ಇಲ್ಲಿ ‘ಕಲೆ’ಯೆಂದರೆ ಆಲಂಕಾರಿಕ, ಅನಗತ್ಯ, ಹಾಗೂ ಅಭಿಜಾತ ಸಾಹಿತ್ಯ ಪರಂಪರೆಗೆ ಸೇರಿದ್ದು ಎಂದೆಲ್ಲ ಅರ್ಥವಾಗುತ್ತದೆ. ದಲಿತ-ಬಂಡಾಯ ಸಾಹಿತ್ಯ ಕಟು ವಾಸ್ತವತೆಯಿಂದ ಕೂಡಿರಬೇಕು ಎಂದು ಒಂದು ಪಂಗಡದವರು ನಂಬುತ್ತಾರೆ. ಹಾಗೂ ಅವರು ಮಹಾದೇವರನ್ನು ಇಂಥ ಕಟು ವಾಸ್ತವತೆಯ ಜತೆ ಗುರುತಿಸಿಕೊಂಡಿದ್ದರು. ಈ ಗುರುತಿಗೆ ‘ಕುಸುಮಬಾಲೆ’ ಸೇರುವಂತಿರಲಿಲ್ಲ. ‘ಕುಸುಮಬಾಲೆ’ಯ ಕಥಾನಕದಲ್ಲಿ ಹಲವು ಅವಾಸ್ತವ ಸಂಗತಿಗಳು ಸೇರಿಕೊಂಡಿವೆ. ಉದಾಹರಣೆಗೆ ದೀಪಗಳು ಊರು ಸುತ್ತಿ ಬಂದು ಮಾತಾಡಿಕೊಳ್ಳುತ್ತವೆ; ಮಂಚ ಕತೆ ಹೇಳುತ್ತದೆ. ದೇವನೂರರ ಈ ಕಿರುಕಾದಂಬರಿಯಲ್ಲಿ ಇಂಥ ‘ಕಲಾತ್ಮಕ’ ಅಂಶಗಳು ಅನೇಕ ಇವೆ. ಹಾಗೂ ಇವೆಲ್ಲ ಈ ಕೃತಿಯನ್ನು ‘ಅನನ್ಯ’ಗೊಳಿಸಿವೆ. ಆದರೆ ಈ ಕಾರಣಕ್ಕೆ ಇದು ವಾಸ್ತವದಿಂದ ಮುಖ ತಿರುಗಿಸಿದೆ ಎಂದು ಹೇಳಲಾಗುವುದಿಲ್ಲ.

ಯಾವುವು ಕಟ್ಟಾ ವಾಸ್ತವವಲ್ಲವೋ ಅವುಗಳಲ್ಲೆಲ್ಲ ಅಸಾಮಾನ್ಯವಾದ ಸಂಗತಿಯೇನೋ ಇರುತ್ತದೆ. ಮೊತ್ತದಲ್ಲಿ ಅದು ಅತಾರ್ಕಿಕವಾಗಿರುತ್ತದೆ. ಅರ್ಥಾತ್ ಇಲ್ಲಿ ಕಾರ್ಯಕಾರಣ ಸಂಬಂಧಗಳು ಸಡಿಲಗೊಳ್ಳುತ್ತವೆ, ಹಾಗೂ ನಾವು ಹುಟ್ಟಿ ಬದುಕುತ್ತಿರುವ ಜಗತ್ತು ಇದಾಗಿರುವುದು ಸಾಧ್ಯವೇ ಎಂದು ಗಾಬರಿಯಾಗುತ್ತದೆ. ಒಂದು ವೇಳೆ ಇದೆಲ್ಲ ನಿಜವಾಗಿರಬೇಕಿದ್ದರೆ ಯಾವ ನಿಯಮದ ಕೆಳಗೆ ನಿಜವಾಗಿರಬಹುದು ಎಂದು ಮನಸ್ಸು ಯೋಚಿಸಲು ತೊಡಗುತ್ತದೆ. ಹೀಗೆ ಯೋಚನೆಗೆ ಹಚ್ಚುವುದೇ ಇಂಥ ಕೃತಿಗಳು ಮಾಡುವ ಕೆಲಸವಾಗಿರಬಹುದು. ಇಲ್ಲಿ ‘ತಬರನ ಕತೆ’ಯಂಥ ವಾಸ್ತವದ ಕತೆಗಳೂ ಕೂಡಾ ಯಾಕೆ ಮುಖ್ಯವಾಗುತ್ತವೆ ಎಂದರೆ ಅದು ಚಿತ್ರಿಸುವಂಥ ವಾಸ್ತವತೆಯೂ ನಮಗೆ ಸಹ್ಯವಾದ್ದೇನಲ್ಲ ಎಂಬ ಕಾರಣಕ್ಕೆ. ಕಾನೂನು ಪ್ರಕಾರ ನಿಮಗೆ ಸಿಗಬೇಕಾದ್ದು ಸಿಗುವುದಿಲ್ಲ; ಯಾವುದು ಅನ್ಯಾಯವೆಂದು, ಆಗಬಾರದೆಂದು ಸಾರ್ವಜನಿಕವಾಗಿ ಒಪ್ಪುತೇವೆಯೋ ಅದು ಆಗುತ್ತಿರುತ್ತದೆ. ಹಾಗೂ, ಯಾರೂ ಅದರ ವಿರುದ್ಧ ಕೈಯೆತ್ತುವುದಿಲ್ಲ. ಇದು ನಮಗೆ ತಿಳಿದ, ತಿಳಿಯದ ಸಾವಿರ ರೂಪಗಳಲ್ಲಿ ದಿನವೂ ಮರುಕಳಿಸುತ್ತಲೇ ಇರುತ್ತದೆ. ಪ್ರತಿ ಸಲವೂ ಇದನ್ನು ಕಂಡಾಗ ನಮಗೆ ಅಚ್ಚರಿಯುಂಟಾಗುತ್ತದೆ; ಒಂದು ವೇಳೆ ಅಚ್ಚರಿಯುಂಟಾಗದೆ ಇದ್ದರೆ ಅದೂ ಒಂದು ಅಚ್ಚರಿಯೇ. ‘ನಿಜವು ಕತೆಗಿಂತ ಅದ್ಭುತ’ (Truth is stranger than fiction) ಎಂಬ ಮಾತಿನ ತಾತ್ಪರ್ಯವೇ ಇದು.

ಆದರೆ ಇಂಥ ವಾಸ್ತವ ಕತೆಗಳನ್ನು ನಮಗೆ ಪ್ರತಿ ದಿನ ನೀಡುವುದಕ್ಕೆ ಪತ್ರಿಕೆಗಳಿವೆ, ಟೀವಿ ಚಾನೆಲುಗಳಿವೆ. ಈ ಪ್ರತಿಯೊಂದು ಮಾಧ್ಯಮವೂ ಇವನ್ನು ಓದುಗ- ವೀಕ್ಷಕರ ಆಸಕ್ತಿಯನ್ನು ಮನದಲ್ಲಿಟ್ಟುಕೊಂಡೇ ಕಥನ ರೂಪದಲ್ಲಿ ನಿರೂಪಣೆ ಮಾಡುತ್ತವೆ. ಹಾಗೂ ಇವಕ್ಕೆಲ್ಲ ಒಂದು ದೈನಿಕ ಧಾರಾವಾಹಿಯ ಗುಣವೂ ಇರುವುದರಿಂದ ಇನ್ನೇನಾಗುವುದೋ ಎಂಬ ಕುತೂಹಲವೂ ಜನರಲ್ಲಿ ಇರುತ್ತದೆ. ಇವು ವಾಸ್ತವ ಸಂಗತಿಗಳಾದ್ದರಿಂದ ನಮಗೆಲ್ಲರಿಗೂ ಇಂಥ ಕತೆಗಳನ್ನು ಕೇಳುವುದರಲ್ಲಿ ಸ್ವಹಿತವೂ ಇರುತ್ತದೆ ಎನ್ನುವುದನ್ನೂ ಅಲ್ಲಗಳೆಯಲಾಗುವುದಿಲ್ಲ. ಸಾಮೂಹಿಕ ಮಾತುಕತೆಗೂ ಚರ್ಚೆಗೂ ಇವು ಕಾರಣವಾಗುತ್ತವೆ ಕೂಡಾ. ಜರ್ಮನಿಯಲ್ಲಿ ನಾಝಿಗಳು ನಡೆಸಿದ ಜನಾಂಗ ಹತ್ಯೆಗಿಂತ ಘೋರವಾದ್ದು ಮಾನವ ಇತಿಹಾಸದಲ್ಲೇ ಎಂದೂ ನಡೆದುದಿಲ್ಲ. ಔಸ್‌ವಿಟ್ಝ್ ನ ನಂತರ ಕವಿತೆಯೇ ಸಾಧ್ಯವಿಲ್ಲ ಎಂದ ಅಡೋರ್ನೊ. (ಔಸ್‌ವಿಟ್ಝ್ ಎನ್ನುವುದು ಪೋಲೆಂಡಿನಲ್ಲಿ ಮಿಲಿಯಗಟ್ಟಲೆ ಯೆಹೂದ್ಯರನ್ನು ಗ್ಯಾಸ್ ಕೂಪಕ್ಕೆ ತಳ್ಳಿದ ಒಂದು ಜಾಗ.) ಆದರೂ ಇಂಥ ಮಾನವ ವಿಕಾರಗಳು ಒಂದಲ್ಲ ಒಂದು ವಿಧದಲ್ಲಿ ಯಾವತ್ತೂ ಜರುಗುತ್ತಲೇ ಬಂದಿವೆ. ಈಚೆಗೆ ನಥಾರಿಯಲ್ಲಿ ಮೋನೀಂದ್ರ ಸಿಂಗ್ ಪಂಧೇರ್ ಮತ್ತವನ ಕಿಂಕರ ಸುರೇಂದ್ರ ಕೋಲಿ ಮಹಿಳೆಯರ ಮತ್ತು ಮಕ್ಕಳ ಮೇಲೆ ವರ್ಷಗಳಿಂದಲೂ ನಡೆಸಿದರೆನ್ನಲಾದ ಪೈಶಾಚಿಕ ಕೃತ್ಯಕ್ಕೆ ಏನೆನ್ನೋಣ? ದಲಿತರು, ಬಡವರು, ಮಕ್ಕಳು, ಮಹಿಳೆಯರು, ಅಲ್ಪಸಂಖ್ಯಾತರು ಎಂದು ಮೊದಲಾಗಿ ದುರ್ಬಲರ ಮೇಲೆ ನಡೆಯುತ್ತ ಬಂದಿರುವ ದೌರ್ಜನ್ಯ ಮುಂದುವರಿಯುತ್ತಲೇ ಇದೆ; ಹಾಗೂ ಮಾಧ್ಯಮಗಳು ಇವನ್ನು ವರದಿಮಾಡುತ್ತಲೂ ಇವೆ. ಈ ವಾಸ್ತವ ಕತೆಗಳಿಗಿಂತ ಹೆಚ್ಚಿನ ವಾಸ್ತವತೆ ಸಾಹಿತ್ಯದಿಂದ ಸಾಧ್ಯವೇ? ಆದರೆ ಇಂಥ ಪತ್ರಿಕಾ ವರದಿ ಸಾಹಿತ್ಯದ ವಿಧಾನವಾಗಲಿ ಉದ್ದೇಶವಾಗಲಿ ಅಲ್ಲ. ಗರಿಷ್ಠ ವಾಸ್ತವತೆಗೆ ಅಂಟಿಕೊಂಡಿರುವ ಸಾಹಿತ್ಯ ರಚನೆಗಳು ಕೂಡಾ ಪತ್ರಿಕಾ ವರದಿಗಳು ತೋರದ ಕಾಣ್ಕೆಯೊಂದನ್ನು ತೋರುತ್ತವೆ. ಒಂದು ವೇಳೆ ಅಂಥಾ ಕಾಣ್ಕೆಯಿಲ್ಲದಿದ್ದರೆ ಅವಕ್ಕೂ ದಿನೋಪಯೋಗಿಯಾದ ಪತ್ರಿಕಾ ವರದಿಗೂ ವ್ಯತ್ಯಾಸವೇ ಅಳಿದುಹೋಗಿ ನಿನ್ನೆಯ ಪತ್ರಿಕೆಯಂತೆ ಬೇಗನೆ ಹಳತಾಗಿಬಿಡುತ್ತವೆ.

ಯಾವ ಸಾಹಿತ್ಯ ಕೃತಿಯೂ ನಿರ್ವಾತ ಪರದೇಶದಲ್ಲಿ ಹುಟ್ಟುವುದಿಲ್ಲ; ಅದಕ್ಕೆ ಸಾಮಾಜಿಕ ದೇಶಕಾಲಗಳ ಸಂದರ್ಭವಿರುತ್ತದೆ. ಮತ್ತು ಈ ಸಂದರ್ಭಕ್ಕೆ ಇತರ ಸಾಹಿತ್ಯ ಕೃತಿಗಳು ಸೇರ್ಪಡೆಯಾಗಿರುತ್ತವೆ ಕೂಡ. ಈ ವಿಷಯವನ್ನು ನಾವು ಸಾಮಾನ್ಯವಾಗಿ ಗಮನಿಸುವುದಿಲ್ಲ, ಆದರೂ ಅದನ್ನು ಮನಸ್ಸಿನಲ್ಲಿಟ್ಟುಕೊಂಡೇ ನಮ್ಮ ಓದು ಸಾಗುತ್ತಿರುತ್ತದೆ. ಇಲ್ಲಿ ನಾನು ಹೇಳಲು ಉದ್ದೇಶಿಸುವುದೆಂದರೆ, ಹೇಗೆ ಈ ವಾಸ್ತವ ಮತ್ತು ಅನನ್ಯತೆ ಎಂಬ ವಿಶಾಲ ಹರವಿನ ವಾದಗಳೂ ಕೂಡ ಒಂದನ್ನೊಂದು ಬೆನ್ನು ಹತ್ತುತ್ತ, ಒಂದಕ್ಕೊಂದು ಪೂರಕವಾಗುತ್ತ, ಒಂದನ್ನೊಂದು ವಿರೋಧಿಸುತ್ತ, ಒಂದರಿಂದೊಂದು ಅರ್ಥ ಪಡೆದುಕೊಳ್ಳುತ್ತ ಇರುತ್ತವೆ ಎನ್ನುವುದು. ಇಡೀ ಸಾಹಿತ್ಯವೇ ವಾಸ್ತವವಾದದಿಂದ ತುಂಬಿದ್ದರೆ, ಅದು ಬೇಸರ ಉಂಟುಮಾಡೀತು; ಅದೇ ರೀತಿ, ಸಾಹಿತ್ಯ ಅನನ್ಯತೆಗೆ ಶರಣಾದರೂ ಅದು ಬೇಸರ ಉಂಟುಮಾಡುವ ಸಂಗತಿಯೇ. ಇವೆರಡೂ, ಹಾಗೂ ಇಂಥದೇ ಇನ್ನಿತರ ಹಲವು ವಾದಗಳೂ, ವಿಧಾನಗಳೂ, ಪರಿಕಲ್ಪನೆಗಳೂ ಒಟ್ಟು ಸಾಹಿತ್ಯಕ್ಕೆ ಅಗತ್ಯ. ಆಗ ಮಾತ್ರ ಒಂದು ಕೃತಿ ಇನ್ನೊಂದರ ಸವಿಯನ್ನು ಹೆಚ್ಚಿಸುತ್ತದೆ. ಒಂದೇ ತರದ ಮರಗಳಿಂದ ಒಂದು ಅರಣ್ಯ ಉಂಟಾಗುವುದಿಲ್ಲ ಎನ್ನುವುದನ್ನು ತಿಳಿದರೆ ನಾವು ಪ್ರತಿಯೊಂದರ ಚೆಲುವನ್ನೂ ಸವಿಯಲು ಸಾಧ್ಯವಾಗುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೆನಪು
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೬

ಸಣ್ಣ ಕತೆ

 • ಇನ್ನೊಬ್ಬ

  ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

 • ಕರಿಗಾಲಿನ ಗಿರಿರಾಯರು

  ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

 • ಅಮ್ಮ

  ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

 • ಗ್ರಹಕಥಾ

  [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

 • ಜಡ

  ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

cheap jordans|wholesale air max|wholesale jordans|wholesale jewelry|wholesale jerseys