ರಂಗಣ್ಣನ ಕನಸಿನ ದಿನಗಳು – ೯

ರಂಗಣ್ಣನ ಕನಸಿನ ದಿನಗಳು – ೯

ಆವಲಹಳ್ಳಿಯಲ್ಲಿ ಸಭೆ

ಹಿಂದೆಯೇ ನಿಶ್ಚೈಸಿದ್ದಂತೆ ಆವಲಹಳ್ಳಿಯಲ್ಲಿ ಉಪಾಧ್ಯಾಯರ ಸಂಘದ ಸಭೆಯನ್ನು ಸೇರಿಸಲು ಏರ್ಪಾಟು ನಡೆದಿತ್ತು. ರಂಗಣ್ಣನು ಹಿಂದಿನ ದಿನ ಸಾಯಂಕಾಲವೇ ಆವಲಹಳ್ಳಿಗೆ ಬಂದು ಮೊಕ್ಕಾಂ ಮಾಡಿದನು. ಸಭೆಯಲ್ಲಿ ಕಾರ್ಯಕ್ರಮಗಳಲ್ಲ ಚೆನ್ನಾಗಿ ನೆರವೇರಬೇಕೆಂದು ಮಾಧ್ಯಮಿಕ ಪಾಠಶಾಲೆಯ ಮುಖ್ಯೋಪಾಧ್ಯಾಯರ ಮತ್ತು ಸಹಾಯೋಪಾಧ್ಯಾಯರ ನೆರವನ್ನು ಪಡೆದುಕೊಂಡಿದ್ದನು. ಜೊತೆಗೆ ಕೆಲವು ದೊಡ್ಡ ಪ್ರಾಥಮಿಕ ಪಾಠಶಾಲೆಗಳ ಅನುಭವಿಗಳೂ ದಕ್ಷರೂ ಆದ ಮುಖ್ಯೋಪಾಧ್ಯಾಯರನ್ನೂ ಸಹಾಯೋಪಾಧ್ಯಾಯರನ್ನೂ ಮುಂದಾಗಿಯೇ ಕಂಡು ಅವರಿಗೆ ತಕ್ಕ ಸಲಹೆಗಳನ್ನು ಕೊಟ್ಟಿದ್ದನು.

ಆವಲಹಳ್ಳಿಯಲ್ಲಂತೂ ಏರ್ಪಾಟುಗಳು ಸಂಭ್ರಮದಿಂದ ನಡೆದಿದ್ದುವು. ಪಾಠಶಾಲೆಯ ಮುಂದುಗಡೆ ವಿಶಾಲವಾದ ಸೊಗಸಾದ ಹಸುರು ವಾಣಿ ಚಪ್ಪರ. ಅದಕ್ಕೆ ಮಾವಿನೆಲೆಯ ತೋರಣಗಳು, ಬಾಳೆಯ ಕಂಬಗಳು, ಬಣ್ಣ ಬಣ್ಣದ ಕಾಗದದ ಮಾಲೆಗಳು- ಇವುಗಳ ಅಲಂಕಾರ. ಊರೆಲ್ಲ ಚೊಕ್ಕಟವಾಗಿದ್ದಿತು. ಏನೋ ದೊಡ್ಡದೊಂದು ಉತ್ಸವ ನೆರವೇರುತ್ತದೆಂದು ಹಳ್ಳಿಯವರೆಲ್ಲ ಬಹಳ ಸಂಭ್ರಮದಿಂದ ಚಪ್ಪರದ ಹತ್ತಿರ ಓಡಾಡುತ್ತಿದ್ದರು.

ಸಭೆ ಸೇರುವ ಶನಿವಾರದ ಬೆಳಗ್ಗೆ ಎಂಟು ಗಂಟೆಗೆಲ್ಲ ಹಳ್ಳಿಗಳಿಂದ ಉಪಾಧ್ಯಾಯರುಗಳು ಬಂದು ಸೇರಿದರು. ಚಪ್ಪರದಲ್ಲಿ ಸಭೆ ನಡೆಯಲು ಏರ್ಪಾಟಾಗಿದ್ದಿತು. ಹಳ್ಳಿಯ ಮುಖಂಡರು ಕುಳಿತುಕೊಳ್ಳುವುದಕ್ಕೆ ಸ್ಥಳವನ್ನು ಏರ್ಪಡಿಸಲಾಗಿತ್ತು. ದೊಡ್ಡ ಬೋರೇಗೌಡರಿಗೆ ರಂಗಣ್ಣ ತನ್ನ ಪಕ್ಕದಲ್ಲಿಯೇ ಕುರ್ಚಿಯನ್ನು ಹಾಕಿಸಿ ಅವರನ್ನು ಕೂಡಿಸಿಕೊಂಡಿದ್ದನು, ಸಭೆ ಎಂಟೂವರೆ ಗಂಟೆಗೆ ಸರಿಯಾಗಿ ಪ್ರಾರಂಭವಾಯಿತು. ದೇವತಾ ಪ್ರಾರ್ಥನೆ ಮುಗಿದನಂತರ ರಂಗಣ್ಣ ಅಧ್ಯಕ್ಷರ ಆರಂಭ ಭಾಷಣವನ್ನು ಮಾಡಿದನು: “ಈ ದಿವಸ ಆವಲಹಳ್ಳಿಯಲ್ಲಿ ಈ ಸಭೆ ಸೇರಿರುವುದಕ್ಕೆ ಕಾರಣರಾದವರು ನನ್ನ ಮಿತ್ರರಾದ ಶ್ರೀ ದೊಡ್ಡ ಬೋರೇಗೌಡರು. ಅವರು ತೋರಿಸಿರುವ ಆದರಾತಿಥ್ಯಗಳಿಗೆ ಪ್ರತ್ಯುಪಕಾರವನ್ನು ನಾವು ಮಾಡಬೇಕಾದರೆ ನಮ್ಮ ನಮ್ಮ ಕೆಲಸಗಳನ್ನು ಪ್ರಾಮಾಣಿಕತೆಯಿಂದಲೂ ದಕ್ಷತೆಯಿಂದಲೂ ನೆರವೇರಿಸಿ ಮಕ್ಕಳು ವಿದ್ಯಾಭ್ಯಾಸದಲ್ಲಿ ಮುಂದುವರಿಯುವಂತೆ ನೋಡಿಕೊಳ್ಳಬೇಕು. ಇದಕ್ಕೆ ಉಪಾಧ್ಯಾಯರ ಶ್ರದ್ಧಾ ಯುಕ್ತವಾದ ಪ್ರಯತ್ನ ಮತ್ತು ಗ್ರಾಮಸ್ಥರ ಸಂತೋಷ ಪೂರ್ವಕವಾದ ಸಹಕಾರ- ಇವೆರಡೂ ಆವಶ್ಯಕ. ಈಗ ಉವಾಧ್ಯಾಯರಿಗೆ ನಾಲ್ಕು ಮಾತುಗಳನ್ನು ಹೇಳುತ್ತೇನೆ. ಸಾಯಂಕಾಲ ಸಭೆ ಸೇರಿದಾಗ ಗ್ರಾಮಸ್ಥರಿಗೆ ಹೇಳಬೇಕಾದುದನ್ನು ಹೇಳುತ್ತೇನೆ. ನಾನು ಹೇಳುವ ಮಾತುಗಳಿಗೆ ಉಪಾಧ್ಯಾಯರಾರೂ ಕೋಪಿಸಿಕೊಳ್ಳಬಾರದೆಂದು ಮೊದಲಿನಲ್ಲೇ ಪ್ರಾರ್ಥಿಸಿಕೊಳ್ಳುತ್ತೇನೆ.’

‘ಉಪಾಧ್ಯಾಯರು ಮೊದಲಿನಲ್ಲಿ ಇಲಾಖೆಯ ರೂಲ್ಸಿನಂತೆ ನಡೆದು ಸಂವಿಧಾನನ್ನು ಪಾಲಿಸಬೇಕು. ಈಗ ಮಕ್ಕಳನ್ನು ವರ್ಷದ ಎಲ್ಲಾ ತಿಂಗಳಲ್ಲಿ ಮೊದಲನೆಯ ದರ್ಜೆಗೆ ದಾಖಲ್ಮಾಡಿಕೊಳ್ಳುತ್ತಿದ್ದೀರಿ. ಇದು ತಪ್ಪು, ಬೇಸಗೆಯ ರಜ ಮುಗಿದು ಪಾಠ ಶಾಲೆ ಪ್ರಾರಂಭವಾಗುವಾಗ ಒಂದು ತಿಂಗಳು ಅವಧಿಯಲ್ಲಿ ಸೇರಿಸಿಕೊಳ್ಳಬೇಕು ; ಅನಂತರ ಸೇರಿಸಬಾರದು. ನವರಾತ್ರಿಯ ನಂತರ ಸೇರಿಸಬಹುದೆಂದು ನಿಯಮವೇನೋ ಇದೆ. ಆದರೆ ಸ್ಥಳಾವಕಾಶ, ಪಾಠ ಹೇಳಿಕೊಡುವುದಕ್ಕೆ ಉಪಾಧ್ಯಾಯರ ಸೌಕರ್‍ಯ – ಇವು ಇದ್ದರೆ ಮಾತ್ರ ಸೇರಿಸಬಹುದು ; ಇಲ್ಲವಾದರೆ ಸೇರಿಸಕೂಡದು. ಇದನ್ನು ಕಡ್ಡಾಯವಾಗಿ ಆಚರಣೆಗೆ ತರಬೇಕು. ಮಕ್ಕಳಿಗೆ ಅ, ಆ, ಇ, ಈ, ಎಂಬ ಕ್ರಮದಲ್ಲಿ ವರ್ಣಮಾಲೆಯ ಅಕ್ಷರಗಳನ್ನು ತಿದ್ದಿಸುತ್ತೀರಿ. ಈ ಕ್ರಮವನ್ನು ಬಿಟ್ಟು ಪುಸ್ತಕದಲ್ಲಿ ಪಾಠಗಳಿರುವ ಕ್ರಮದಲ್ಲಿಯೇ ಪಾಠಗಳನ್ನು ಕಲಿಸಬೇಕು ; ಮತ್ತು ಮಕ್ಕಳ ಅಭಿವೃದ್ಧಿಯ ತಃಖ್ತೆಯನ್ನು ತಪ್ಪದೆ ಇಡಬೇಕು. ಉಪಾಧ್ಯಾಯರಲ್ಲಿ ಹಲವರು ಶಿಕ್ಷಣಕ್ರಮಗಳ ಪ್ರಕಾರ ಪಾಠಮಾಡುತ್ತಿಲ್ಲ. ಕೆಲವರಿಗಂತೂ ಆ ಕ್ರಮಗಳೇ ಗೊತ್ತಿಲ್ಲ. ಈಗ ಸಭೆಯಲ್ಲಿ ಆ ಕ್ರಮಗಳ ವಿಚಾರದಲ್ಲಿ ತಿಳಿವಳಿಕೆಯನ್ನು ಕೊಡಲಾಗುತ್ತದೆ. ಉಪಾಧ್ಯಾಯರು ಅವುಗಳಿಂದ ಲಾಭ ಪಡೆಯಬೇಕು’ ಎಂದು ಮುಂತಾಗಿ ಹೇಳಿದನು.

ತರುವಾಯ ಭಾಷೆಯ ಪಾಠಗಳನ್ನು ಕುರಿತು ಮಿಡಲ್ ಸ್ಕೂಲಿನ ಮುಖ್ಯೋಪಾಧ್ಯಾಯರು ಭಾಷಣ ಮಾಡಿದರು. ಒಂದು ಗದ್ಯದ ಪಾಠ, ಒಂದು ಪದ್ಯದ ಪಾಠ – ಇವುಗಳನ್ನು ಉದಾಹರಣೆಯಾಗಿ ತೆಗೆದುಕೊಂಡು ಕ್ರಮವನ್ನು ವಿವರಿಸಿದರು. ಇದಾದ ಮೇಲೆ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರೊಬ್ಬರು ಗಣಿತದಲ್ಲಿ ಮೂರನೆಯ ತರಗತಿಗೆ ಮಾದರಿ ಪಾಠವನ್ನು ಮಾಡಿ ತೋರಿಸಿದರು. ಇನ್ನೊಬ್ಬರು ಮುಖ್ಯೋಪಾಧ್ಯಾಯರು ಭೂಗೋಳ ಪಾಠಗಳನ್ನು ಮಾಡುವ ಕ್ರಮವನ್ನು ವಿವರಿಸಿದರು. ಮಿಡಲ್ ಸ್ಕೂಲಿನ ಸಹಾಯೋಪಾಧ್ಯಾಯರೊಬ್ಬರು ಚರಿತ್ರೆಯ ಪಾಠಗಳಿಗೆ ಬೇಕಾದ ಉಪಕರಣಗಳನ್ನೂ ಅವುಗಳನ್ನು ಶೇಖರಿಸುವ ಕ್ರಮವನ್ನೂ ಪಾಠಗಳಲ್ಲಿ ಉಪಯೋಗಿಸುವ ಕ್ರಮವನ್ನೂ ತಿಳಿಸಿದರು. ಅಷ್ಟು ಹೊತ್ತಿಗೆ ಹತ್ತೂವರೆ ಗಂಟೆ ಆಯಿತು. ಆಮೇಲೆ ರಂಗಣ್ಣನು ಉಪಾಧ್ಯಾಯರನ್ನು ಕುರಿತು, “ಭಾಷೆಯ ಪಾಠ ಮಾಡುವುದರಲ್ಲಿ ಮತ್ತು ಗಣಿತ ಪಾಠಗಳಲ್ಲಿ ನಿಮಗೆ ಏನಾದರೂ ಕಷ್ಟಗಳಿದ್ದರೆ ತಿಳಿಸಿ, ಅವುಗಳಿಗೆ ಪರಿಹಾರೋಪಾಯಗಳನ್ನು ಚರ್ಚಿಸೋಣ” ಎಂದು ಹೇಳಿದನು. ಕೆಲವರು ಉಪಾಧ್ಯಾಯರು ನಿಂತುಕೊಂಡು ಕೆಲವು ಭಾಗಗಳ ಮೇಲೆ ವಿವರಣೆ ಕೇಳಿದರು. ಅವುಗಳಿಗೆಲ್ಲ ರಂಗಣ್ಣನೇ ಪರಿಹಾರಗಳನ್ನು ವಿವರಿಸಿದನು. ಹೀಗೆ ಪ್ರಾತಃ ಕಾಲದ ಸಭೆ ಹನ್ನೊಂದೂವರೆ ಗಂಟೆಯವರೆಗೂ ನಡೆಯಿತು. ಸಭೆ ಮುಕ್ತಾಯವಾಗುವಾಗ ರಂಗಣ್ಣನು, ‘ಈಗ ತಿಳಿಸಿದ ಕ್ರಮಗಳನ್ನು ಆಚರಣೆಗೆ ತರಬೇಕಾದುದು ಮುಖ್ಯ. ಪ್ರತಿ ತಿಂಗಳಲ್ಲೂ ಹೀಗೆಯೇ ಪಾಠಗಳ ವಿಷಯದಲ್ಲಿ ತಿಳಿವಳಿಕೆಯನ್ನು ಕೊಡುತ್ತೇವೆ. ನೀವುಗಳು ಸಹ ಬೋಧನೆಯಲ್ಲಿ ನಿಮಗಿರುವ ತೊಡಕುಗಳನ್ನು ಗುರುತು ಹಾಕಿಕೊಂಡು ಬಂದು ಅವುಗಳಿಗೆ ಪರಿಹಾರವನ್ನು ಪಡೆಯಿರಿ. ಉಪಾಧ್ಯಾಯರಿಗೆಲ್ಲ ಹೇಳಬೇಕಾದ ಇನ್ನೊಂದು ಮುಖ್ಯ ವಿಚಾರವಿದೆ. ಈಗ ನನ್ನ ಅನುಭವದಲ್ಲಿ ಕೆಲವರು ಉಪಾಧ್ಯಾಯರು ನಿಯಮಗಳನ್ನು ಅತಿಕ್ರಮಿಸುತ್ತಲೂ ತಾತ್ಸಾರದಿಂದಲೂ ಕೆಲಸ ಮಾಡುತ್ತಿದಾರೆ. ಅವರನ್ನು ದಂಡಿಸುವ ಅಧಿಕಾರವನ್ನೇನೋ ಸರಕಾರದವರು ನನಗೆ ಕೊಟ್ಟಿದ್ದಾರೆ. ದಂಡನೆ ಮಾಡುವುದು ಯಾವಾಗಲೂ ಒಳ್ಳೆಯದಲ್ಲ. ಅದು ಸೌಹಾರ್ದವನ್ನು ಕೆಡಿಸುತ್ತದೆ, ದ್ವೇಷವನ್ನು ಬೆಳಸುತ್ತದೆ. ಆದರೆ ಕರ್ತವ್ಯ ದೃಷ್ಟಿಯಿಂದ ದಂಡನೆಯನ್ನು ಮಾಡಲೇಬೇಕಾಗುತ್ತದೆ. ನಾನಾಗಿ ಮಾಡಿದರೆ ಇನ್ಸ್‍ಪೆಕ್ಟರ್ ಸಾಹೇಬರು ದಬ್ಬಾಳಿಕೆ ನಡೆಸುತ್ತಾರೆ ಎಂದು ಉಪಾಧ್ಯಾಯರು ದೂರುತ್ತಾರೆ. ಇದಕ್ಕಾಗಿ ನಾನೊಂದು ಆಲೋಚನೆ ಮಾಡಿದ್ದೇನೆ. ನೀವುಗಳೆಲ್ಲ ಒಪ್ಪುವಹಾಗಿದ್ದರೆ ಅದರಂತೆ ನಡೆಯಲು ನಾನು ಸಿದ್ಧನಾಗಿದ್ದೇನೆ. ನಿಮ್ಮ ಪ್ರತಿನಿಧಿಗಳಾಗಿ ನಾಲ್ಕು ಜನ ಉಪಾಧ್ಯಾಯರನ್ನು ಚುನಾವಣೆ ಮಾಡಿರಿ. ಅವರದೊಂದು ಸಮಿತಿ ಏರ್ಪಡಿಸೋಣ. ಅದಕ್ಕೆ ನಾನು ಅಧ್ಯಕ್ಷನಾಗಿರುತ್ತೇನೆ. ಆ ಸಮಿತಿಗೆ ಎಲ್ಲ ದಂಡನಾಧಿಕಾರವನ್ನೂ ಬಿಟ್ಟು ಕೊಡುತ್ತೇನೆ. ಉಪಾಧ್ಯಾಯರ ತಪ್ಪು ನಡತೆಯನ್ನೂ ಸಂಬಂಧಪಟ್ಟ ಕಾಗದಗಳನ್ನೂ ಸಮಿತಿಯ ಮುಂದೆ ಇಟ್ಟು, ಅಲ್ಲಿ ಆಗುವ ಬಹುಮತದ ತೀರ್ಮಾನದಂತೆ ನಡೆಯುತ್ತೇನೆ. ಅವರು ದಂಡನೆ ಮಾಡಕೂಡದು ಎಂದು ಹೇಳಿದರೆ ಮಾಡುವುದಿಲ್ಲ ; ಮಾಡಬೇಕು ಎಂದು ಹೇಳಿದರೆ ಮಾಡುತ್ತೇನೆ. ಈ ಸಲಹೆಯನ್ನು ಆಲೋಚನೆ ಮಾಡಿ-ಎಂದು ಹೇಳಿದನು. ಸ್ವಲ್ಪ ಚರ್ಚೆಗಳಾದನಂತರ ಉವಾಧ್ಯಾಯರು, ‘ಸ್ವಾಮಿ ! ಸಮಿತಿಯೇನೂ ಬೇಡ, ತಾವೇನೋ ಒಳ್ಳೆಯ ಸಲಹೆಯನ್ನೆ ಮಾಡಿದಿರಿ, ದಂಡನೆ ಮಾಡಬೇಕೆಂಬ ಅಭಿಲಾಷೆ ತಮಗಿಲ್ಲವೆಂಬುದು ಈ ರೇಂಜಿನ ಉಪಾಧ್ಯಾಯರಿಗೆಲ್ಲ ಗೊತ್ತು. ಆದರೆ ಈಗ ನಾವು ಯಾರಾದರೂ ತಪ್ಪು ಮಾಡಿದರೆ ಅದು ಆ ಉಪಾಧ್ಯಾಯರಿಗೆ ಮಾತ್ರ ಮತ್ತು ತಮಗೆ ಮಾತ್ರ ತಿಳಿದಿರುತ್ತದೆ. ಮುಂದೆ ಆ ತಪ್ಪು ಸಮಿತಿಗೆಲ್ಲ ತಿಳಿದು ಕಡೆಗೆ ಇತರರಿಗೂ ತಿಳಿದು ಉಪಾಧ್ಯಾಯರ ಮಾನ ಹೋಗುತ್ತದೆ. ಆದ್ದರಿಂದ ಏನಿದ್ದರೂ ಆ ತಪ್ಪುಗಳನ್ನು ದಯವಿಟ್ಟು ತಮ್ಮ ಹೊಟ್ಟೆಯಲ್ಲಿಯೇ ಇಟ್ಟುಕೊಂಡು ನಮ್ಮನ್ನು ಕಾಪಾಡಿಕೊಂಡು ಬರಬೇಕು. ಮುಖ್ಯವಾಗಿ ಹೇಳುವುದಾದರೆ, ಹಿಂದಿನವರು ನಮಗೆ ಯಾವುದೆಂದು ತಿಳಿವಳಿಕೆಯನ್ನೂ ಕೊಡದೆ ಸುಮ್ಮನೆ ದಂಡನೆ ಮಾಡುತ್ತಿದ್ದರು. ಹಿಂದಿನ ಇನ್ಸ್‍ಪೆಕ್ಷನ್ನಿನ ವರದಿಗಳನ್ನು ತಾವು ನೋಡಿದ್ದೀರಿ. ಬರೆದಿರುವುದೆಲ್ಲ ಇಂಗ್ಲಿಷಿನಲ್ಲಿ, ನಮಗೆ ಆ ಭಾಷೆ ಬರುವುದಿಲ್ಲವೆಂದು ಸ್ವಾಮಿಯವರಿಗೆ ಗೊತ್ತು. ಅವರು ಏನು ಬರೆದಿದ್ದಾರೆಂಬುದನ್ನು ತಿಳಿದು ಕೊಳ್ಳುವುದಕ್ಕೆ ನಾವು ಜನಾರ್ದನಪುರ ಮತ್ತೆಲ್ಲಿಗೋ ಹೋಗಿ ಇಂಗ್ಲಿಷ್ ತಿಳಿದವರಿಂದ ಓದಿಸಿ ಅರ್ಥ ಹೇಳಿಸಿಕೊಳ್ಳಬೇಕಾಗಿತ್ತು. ಸ್ವಾಮಿಯವರ ಕಾಲದಲ್ಲಿ ಅವುಗಳೆಲ್ಲ ತಪ್ಪಿವೆ. ಆರು, ಏಳು ಪುಟಗಳಷ್ಟು ಕನ್ನಡದಲ್ಲಿಯೇ ತಮ್ಮ ವರದಿಗಳನ್ನು ಬರೆದು ತಿದ್ದಿ ಕೊಳ್ಳಬೇಕಾದ ಅಂಶಗಳನ್ನು ನಮೂದಿಸಿರುತ್ತೀರಿ. ಇನ್ನು ಮುಂದೆ ಉಪಾಧ್ಯಾಯಯರು ತಪ್ಪು ಮಾಡುವುದಕ್ಕೆ ಅವಕಾಶ ಕಡಿಮೆ. ಆದ್ದರಿಂದ ಸಮಿತಿಯೇನೂ ಇಲ್ಲದೆ ತಾವೇ ನಮ್ಮನ್ನು ಕಾಪಾಡಿಕೊಂಡು ಬರಬೇಕು? ಎಂದು ಹೇಳಿಬಿಟ್ಟರು.

‘ಒಳ್ಳೆಯದು. ಶ್ರೀ ದೊಡ್ಡ ಬೋರೇಗೌಡರ ಔದಾರ್ಯದಿಂದ ಈ ದಿನ ನಿಮಗೆಲ್ಲ ಔತಣದ ಏರ್ಪಾಟಾಗಿದೆ, ಇನ್ನು ಭೋಜನಕ್ಕೆ ಸಿದ್ಧರಾಗೋಣ. ಮಧ್ಯಾಹ್ನ ಎರಡೂವರೆಯಿಂದ ಮೂರುವರೆವರೆಗೆ ಡ್ರಾಯಿಂಗ್, ಮಣ್ಣಿನ ಕೆಲಸ ಮತ್ತು ಇತರ ಕೈ ಕೆಲಸಗಳ ವಿಚಾರದಲ್ಲಿ ಟ್ರೈನಿಂಗ್ ಆಗಿಲ್ಲದ ಉವಾಧ್ಯಾಯರಿಗೆ ತಿಳಿವಳಿಕೆ ಕೊಡಲಾಗುತ್ತದೆ. ಮೂರೂವರೆ ಗಂಟೆಯಿಂದ ಬಹಿರಂಗ ಸಭೆ ನಡೆಯುತ್ತದೆ’ ಎಂದು ರಂಗಣ್ಣನು ಹೇಳಿ ಸಭೆಯನ್ನು ಮುಗಿಸಿದನು.

ಸ್ಥಳದ ಉಪಾಧ್ಯಾಯರೊಬ್ಬರು, ಅವನ ನೆಂಟನೊಬ್ಬನು ಮತ್ತು ಗೋಪಾಲ ಸೇರಿ ಆ ದಿನದ ಅಡಿಗೆಯನ್ನು ಮಾಡಿದ್ದರು. ಸಕ್ಕರೆಗುಂಬಳ ಕಾಯಿ ಹಾಕಿ ಬೇಳೆಹುಳಿ, ಹುರುಳಿಕಾಯಿಯ ಪಲ್ಯ, ಚಿತ್ರಾನ್ನ, ಬೋಂಡ ಮತ್ತು ಪಾಯಸ-ಆ ದಿನದ ಅಡಿಗೆ, ಅಡಿಗೆಯೆಲ್ಲ ಮುಗಿಯಿತೆಂದು ವರ್ತಮಾನ ಬರುತ್ತಲೂ ಎಲೆಗಳನ್ನು ಹಾಕುವುದಕ್ಕೆ ಪ್ರಾರಂಭಿಸಿದರು. ಆಗ ಆ ಊಟದ ಏರ್ಪಾಟಿನ ಬದನಾಮಿ ರಂಗಣ್ಣನಿಗೆ ತಿಳಿಯಿತು. ಏನೋ ಒಂದು ಉದಾತ್ತವಾದ ಧೈರ್‍ಯದಿಂದ ಕಾರ್ಯವೊಂದನ್ನು ಕೈ ಕೊಂಡರೆ ಉತ್ಸಾಹಭಂಗಮಾಡುವ ಸಂದರ್ಭಗಳು ಹೇಗೆ ಬಂದು ಕೂಡಿ ಕೊಳ್ಳುತ್ತವೆ ಎನ್ನುವುದು ಅವನ ಅನುಭವಕ್ಕೆ ಬಂದಿತು. ಬ್ರಾಹ್ಮಣ ಉಪಾಧ್ಯಾಯರು ಅಡಿಗೆಯ ಮನೆಯ ಸಮಾಜದಲ್ಲಿ ಎಲೆಗಳನ್ನು ಹಾಕಿ ಕೊಂಡು ಕುಳಿತರು. ಉಳಿದವರಿಗೆಲ್ಲ ಪಾಠ ಶಾಲೆಯ ಕಟ್ಟಡದಲ್ಲಿ ಎಲೆಗಳನ್ನು ಹಾಕಬಹುದೆಂದು ಆಲೋಚಿಸಿದ್ದರೆ ಉಪಾಧ್ಯಾಯರಲ್ಲಿ ಮೂವರು ಆದಿಕರ್ಣಾಟಕರಿದ್ದರು. ಆ ಉಪಾಧ್ಯಾಯರು ತಮಗೆ ಉತ್ತಮ ಜಾತಿಯವರೊಡನೆ ಸಹಪಂಕ್ತಿ ಭೋಜನ ಇಲ್ಲವೆಂಬುದನ್ನು ಮೊದಲೇ ತಿಳಿದುಕೊಂಡಿದ್ದರು. ಅವರು ರಂಗಣ್ಣನ ಬಳಿಗೆ ಬಂದು ‘ಸ್ವಾಮಿ ! ನಾವು ಈ ಊರೊಳಗೆ ಬೇರೆ ಏರ್ಪಾಟು ಮಾಡಿಕೊಂಡಿದ್ದೇವೆ. ನಮ್ಮ ಜನ ಇದ್ದಾರೆ. ಅಪ್ಪಣೆ ಆದರೆ ಊಟ ಮಾಡಿಕೊಂಡು ಬರುತ್ತೇವೆ’ ಎಂದರು. ರಂಗಣ್ಣ ಒಂದು ನಿಮಿಷ ಆಲೋಚನೆ ಮಾಡಿ ಅಡಿಗೆಯ ಮನೆಗೆ ಹೋಗಿ ದೊಡ್ಡ ಎಲೆಗಳಲ್ಲಿ ಚಿತ್ರಾನ್ನ ಮತ್ತು ಬೋಂಡಗಳನ್ನು ಕಟ್ಟಿಸಿ, ಪಾತ್ರೆಯೊಂದರಲ್ಲಿ ಪಾಯಸವನ್ನು ಹಾಕಿಸಿ ಉಪಾಧ್ಯಾಯರೊಬ್ಬರ ಕೈಯಲ್ಲಿ ತೆಗೆಸಿಕೊಂಡು ಬಂದನು. ಆ ಆದಿಕರ್ಣಾಟಕ ಉಪಾಧ್ಯಾಯರಿಗೆ ಅವುಗಳನ್ನು ಕೊಡಿಸಿ, ‘ಮೇಷ್ಟೇ ! ನಿಮ್ಮ ಜನರ ಮನೆಯಲ್ಲಿ ಊಟ ಮಾಡಿ. ಜೊತೆಯಲ್ಲಿ ಇವುಗಳನ್ನೂ ಊಟ ಮಾಡಿ, ಮುಂದೆ ಒಳ್ಳೆಯ ಕಾಲ ಬರುತ್ತದೆ. ಆಗ ಈ ಭೇದಗಳೆಲ್ಲ ಹೋಗುತ್ತವೆ’ ಎಂದು ಹೇಳಿ ಕೊಟ್ಟು ಕಳುಹಿಸಿದನು. ಆ ಉಪಾಧ್ಯಾಯರು, ‘ಚಿಂತೆಯಿಲ್ಲ ಸ್ವಾಮಿ-ನಮಗೆ ಇದೆಲ್ಲ ರೂಢಿಯಾಗಿ ಹೋಗಿದೆ’ ಎಂದು ಹೇಳಿ ಕೈ ಮುಗಿದು ಹೊರಟರು.

ಸದ್ಯಃ ಹೆಚ್ಚು ಗಲಭೆಯಿಲ್ಲದೆ ಈ ಪ್ರಕರಣ ಮುಗಿಯಿತೆಂದು ರಂಗಣ್ಣ ಹಿಂದಿರುಗುತ್ತಿದ್ದಾಗ ಇಬ್ಬರು ಉಪಾಧ್ಯಾಯರು- ದೊಡ್ಡ ದೊಡ್ಡ ನಾಮಗಳನ್ನು ಧರಿಸಿದವರು-ಬಂದು ಕೈ ಮುಗಿದರು. ‘ಏನು ಮೇಷ್ಟ್ರ್‍ಎ! ನಡೆಯಿರಿ ಊಟಕ್ಕೆ ಹೊರಡೋಣ’ ಎಂದು ರಂಗಣ್ಣನು ಹೇಳಿದನು.

‘ಸಾರ್ ! ನಾವು ಇಲ್ಲಿ ಊಟ ಮಾಡುವುದಿಲ್ಲ. ನಾವು ಸ್ವಲ್ಪ ಬುತ್ತಿ ಕಟ್ಟಿ ಕೊಂಡು ಬಂದಿದ್ದೇವೆ’ ಎಂದು ಅವರು ಹೇಳಿದರು.

ರಂಗಣ್ಣನು- ಇವನ್ಯಾರೋ ನಿಷ್ಠಾವಂತರಾದ ಐಯ್ಯಂಗಾರ್ ಮೇಷ್ಟರುಗಳಿರಬಹುದು. ನಲ್ಲಿ ನೀರು ಕುಡಿಯದೆ ಬಾವಿ ನೀರು ಕುಡಿಯುವ ಜನ. ಅವರ ಮಡಿ ಮತ್ತು ಆಚಾರಗಳಿಗೆ ನಾನೇಕೆ ಅಡ್ಡಿ ಬರಲಿ? ಪುಳಿಯೋಗರೆ ಕಟ್ಟಿಕೊಂಡು ಬಂದಿರಬಹುದು-ಎಂದು ಆಲೋಚನೆ ಮಾಡಿದನು. ಆದರೂ ಬ್ರಾಹ್ಮಣರಲ್ಲಿ ಈ ಒಳಪಂಗಡಗಳೇಕೆ ? ಒಬ್ಬಿಬ್ಬರು ಐಯ್ಯಂಗಾರ್ ಬ್ರಾಹ್ಮಣರು ಅಡಿಗೆಯ ಮನೆಯ ಹತ್ತಿರ ಕುಳಿತಿದ್ದಾರಲ್ಲ. ಅವರ ಜೊತೆಯಲ್ಲಿ ಇವರು ಸಹ ಕುಳಿತು ಕೊಳ್ಳಬಹುದಲ್ಲ ಎಂಬುದಾಗಿ ಪುನಃ ಆಲೋಚನೆ ಮಾಡಿ, ‘ಮೇಷ್ಟ್ರೆ ! ನೀವು ಅಡಿಗೆಯ ಮನೆಯ ಹತ್ತಿರ ನಿಮ್ಮ ಜನರೊಂದಿಗೆ ಕುಳಿತುಕೊಳ್ಳ ಬಹುದಲ್ಲ’ ಎಂದು ಸಲಹೆ ಕೊಟ್ಟನು.

ಸಾರ್ ! ನಾವು ವೆಂಕಟಾಪುರದ ವೈಷ್ಣವರು ! ನಾವು ಅವರ ಜೊತೆಯಲ್ಲಿ ಸೇರುವುದಿಲ್ಲ.

ವೆಂಕಟಾಪುರದ ವೈಷ್ಣವರು ಎಂಬುವರು ಯಾರು? ಎನ್ನುವುದು ರಂಗಣ್ಣನಿಗೆ ತಿಳಿಯದು. ಅಂತೂ ಯಾರೋ ಬಹಳ ಆಚಾರವಂತರು ಎಂದು ತೀರ್ಮಾನಿಸಿಕೊಂಡು, ‘ಒಳ್ಳೆಯದು ಮೇಷ್ಟ್ರ್‍ಎ! ನಿಮ್ಮ ಬುತ್ತಿಯಲ್ಲಿ ನನಗೂ ಸ್ವಲ್ಪ ಮಿಗಿಸಿರಿ !’ ಎಂದು ನಗುತ್ತಾ ಹೇಳಿ ಕಳುಹಿಸಿಬಿಟ್ಟನು.

ಬಳಿಕ ಪಾಠಶಾಲೆಯ ಕಟ್ಟಡದಲ್ಲಿ ಏನು ಏರ್ಪಾಡಿದೆಯೋ ನೋಡೋಣವೆಂದು ಬರುತ್ತಿದ್ದಾಗ ಇಬ್ಬರು ಉಪಾಧ್ಯಾಯರು ಬಂದು, ‘ಸ್ವಾಮಿ ! ನಾವು ವಿಶ್ವಕರ್ಮ ಜನಾಂಗ. ಇಲ್ಲಿ ನಾವು ಊಟ ಮಾಡುವುದಿಲ್ಲ.’ ಎಂದು ಹೇಳಿದರು.

‘ಹಾಗಾದರೆ, ಉಪವಾಸ ಇರುತ್ತೀರಾ?’
‘ಇನ್ನೇನು ಮಾಡುವುದು ಸಾರ್! ಏನಾದರೂ ಬಾಳೆಹಣ್ಣು ದೊರೆತರೆ ತೆಗೆದುಕೊಂಡು ತಿನ್ನು ತೇವೆ.’

ರಂಗಣ್ಣನಿಗೆ ಬಹಳ ವ್ಯಥೆಯಾಯಿತು. ಇಷ್ಟೊಂದು ಜನ ಔತಣದ ಭೋಜನ ಮಾಡುವಾಗ ಈ ಇಬ್ಬರು ಉಪಾಧ್ಯಾಯರು ಹಸಿದುಕೊಂಡು ಸಪ್ಪೆ ಮುಖಗಳನ್ನು ಮಾಡಿಕೊಂಡು ಕುಳಿತಿದ್ದರೆ ಹೇಗೆ ತಾನೆ ಇತರರು ಸಂತೋಷದಿಂದ ಇರಬಹುದು? ಇದಕ್ಕೆ ಪರಿಹಾರವೇನು? ಎಂದು ಆಲೋಚನೆ ಮಾಡಿ, ’ಮೇಷ್ಟ್ರ್‍ಏ! ನಾಲ್ಕು ಬೊಂಡಾಗಳನ್ನಾದರೂ ತಿನ್ನುತ್ತೀರಾ ? ನೀವು ಜನಾರ್ದನ ಪುರಕ್ಕೆ ಬಂದಾಗಲೋ ಬೆಂಗಳೂರಿಗೆ ಹೋದಾಗಲೋ ಹೋಟಲುಗಳಲ್ಲಿ ತಿಂಡಿ ತೆಗೆದು ಕೊಳ್ಳುವುದುಂಟಷ್ಟೆ? ಎಂದು ಕೇಳಿದನು. ಆ ಮೇಷ್ಟರುಗಳು ಒಬ್ಬರ ಮುಖವನ್ನೊಬ್ಬರು ನೋಡುತ್ತ ನಿಂತುಕೊಂಡು ಕಡೆಗೆ, ‘ಅಲ್ಲಿ ನಮ್ಮ ಜನರ ಹೋಟೆಲುಗಳಿವೆ ಸಾರ್ ! ಅಲ್ಲಿ ತಿಂಡಿ ತೆಗೆದುಕೊಳ್ಳುತ್ತೇವೆ. ಇಲ್ಲಿ ನಾವು ಬೋಂಡಾ ಸಹಾ ತಿನ್ನೋದಿಲ್ಲ’ ಎಂದು ಹೇಳಿಬಿಟ್ಟರು.

‘ನಿವು ಉಪವಾಸ ಇರಬೇಡಿ ಮೇಷ್ಟ್ರ್‍ಎ, ನಿಮಗೆ ಹಾಲೂ ಹಣ್ಣೂ, ಕಡಲೆ ಕಾಯಿ, ಪುರಿ- ಮೊದಲಾದುವನ್ನು ಕೊಡಿಸುತ್ತೇನೆ’ ಎಂದು ಹೇಳಿ ರಂಗಣ್ಣನು ಅವುಗಳ ವ್ಯವಸ್ಥೆ ಮಾಡಿದನು.

ಆ ಉಪಾಧ್ಯಾಯರು ಅತ್ತ ಹೊರಟರು. ಇತ್ತ ಪಾಠಶಾಲೆಯ ಕಟ್ಟಡದಲ್ಲಿ ಗಲಾಟೆಗೆ ಪ್ರಾರಂಭವಾಗಿ ಸ್ವಲ್ಪ ಮಾರಾಮಾರಿ ನಡೆಯುವುದಾಗಿ ರಂಗಣ್ಣನಿಗೆ ಕಂಡುಬಂತು. ಬೇಗ ಒಳಕ್ಕೆ ಹೋಗಿ, ‘ಏನಿದು ಮೇಷ್ಟರ ಗಲಾಟೆ ! ಊಟದ ಹೊತ್ತಿನಲ್ಲಿ ಎಲ್ಲರೂ ಸಿಪಾಯಿಗಳಾಗಿ ಯುದ್ಧಕ್ಕೆ ನಿಂತಿದ್ದೀರಿ’ ಎಂದು ಸ್ವಲ್ಪ ಗದರಿಸಿದನು. ಒಳಗಿನ ವಾತಾವರಣ ಸ್ವಲ್ಪ ಶಾಂತವಾಯಿತು. ಒಬ್ಬ ಮೇಷ್ಟ್ರು ಕೈ ಮುಗಿದು, ‘ನೋಡಿ ಸ್ವಾಮಿ! ನಾವು ಒಕ್ಕಲಿಗರು, ಈ ಉಪ್ಪಾರ ಮೇಷ್ಟ್ರು ನಮ್ಮ ಮಧ್ಯೆ ಬಂದು ಕುಳಿತು ಕೊಂಡಿದ್ದಾರೆ. ಅವರು ಜಾತಿಯಲ್ಲಿ ಕೀಳು. ಆ ಮೇಷ್ಟರಿಗೆ, ಎಷ್ಟು ದೂರ ಹೋಗು ಎಂದರೆ ಆತ ಹೋಗುವುದಿಲ್ಲ? – ಎಂದು ದೂರು ಹೇಳಿದನು.

‘ಆಗಲಿ, ಎಲ್ಲರಿಗೂ ತಕ್ಕ ಏರ್ಪಾಟು ಮಾಡುತ್ತೇವೆ ಎಂದು ರಂಗಣ್ಣನು ಹೇಳಿ ಕೆಲವರನ್ನು ಪಕ್ಕದ ಎರಡು ಕೊಟಡಿಗಳಿಗೆ ಹಂಚಿ ಮಧ್ಯದ ಹಾಲಿನಲ್ಲಿ ಒಕ್ಕಲಿಗ ಮೇಷ್ಟರುಗಳಿಗೆ ಸ್ಥಳವನ್ನು ಬಿಡಿಸಿದನು. ಅಷ್ಟಕ್ಕೆ ಆ ಪುರಾಣ ಮುಗಿಯಲಿಲ್ಲ. ಕೊಟಡಿಗಳಲ್ಲಿ, ‘ಸಾರ್! ನಾವು ಈ ಮೇಷ್ಟ್ರು ಮುನಿಸಾಮಿಯನ್ನು ನಮ್ಮ ಜೊತೆಯಲ್ಲಿ ಸೇರಿಸುವುದಿಲ್ಲ ? ಎಂದು ಗಲಭೆ ಎದ್ದಿತು. ಕಡೆಗೆ ರಂಗಣ್ಣ ಆಯಾ ಉಪಾಧ್ಯಾಯರ ಜಾತಿಗಳನ್ನು ವಿಚಾರಿಸಿ, ಗೋಡೆಗಿದ್ದ ಕಪ್ಪು ಹಲಗೆಗಳನ್ನೆಲ್ಲ ಇಳಿಸಿ ಮಧ್ಯದಲ್ಲಿ ಅಡ್ಡವಿಟ್ಟು, ಕುಂಬಾರರು, ಕುಂಚಟಿಗರು, ಉಪ್ಪಾರರು, ನಾಯಿಂದರು, ಬಣಜಿಗರು-ಮೊದಲಾದವರಿಗೆಲ್ಲ ಬೇರೆ ಬೇರೆ ಅಂಕಣಗಳನ್ನು ಏರ್ಪಡಿಸಿ ಅಲ್ಲಿಂದ ಹೊರಟನು. ‘ದೇವರೇ! ಈ ಜನಾಂಗವನ್ನು ನೀನು ಹೇಗೆ ತಾನೆ ಉದ್ದಾರ ಮಾಡುತ್ತಿಯೋ ನನಗೆ ತಿಳಿಯದು. ಬ್ರಾಹ್ಮಣರು ಬ್ರಾಹ್ಮಣೇತರರು ಎಂಬ ಭೇದಭೂತವೊಂದು ದೇಶದಲ್ಲಿ ನಾಟ್ಯ ಮಾಡುತ್ತಿದೆಯಲ್ಲ ! ಅದೆಂದಿಗೆ ತೊಲಗೀತೋ ಎಂದು ಹಾರೈಸುತಿದ್ದರೆ ಈ ಮರಿದೆವ್ವಗಳು ಅಸಂಖ್ಯಾತವಾಗಿ ತುಂಬಿ ಕೊಂಡಿವೆ. ಬೆಂಗಳೂರು ಮತ್ತು ಮೈಸೂರು ಪಟ್ಟಣಗಳಲ್ಲಿ ಭಾಷಣಗಳನ್ನೂ ಘೋಷಣಗಳನ್ನೂ ಮಾಡುವ ರಾಜಕೀಯ ಚಳವಳಿಗಾರರು ಮೊದಲು ಈ ಮರಿದೆವ್ವಗಳಿಗೆ ಮದ್ದು ಹುಡುಕಿದರೆ ಸಾಕು ; ದೇಶಕ್ಕೆ ದೊಡ್ಡ ಸೇವೆ ಮಾಡಿದ ಹಾಗಾಗುತ್ತದೆ’- ಎಂದು ಹೇಳಿಕೊಳ್ಳುತ್ತ ಭಗ್ನೋತ್ಸಾಹಿಯಾಗಿ ಹಿಂದಿರುಗಿದನು.

ಚಪ್ಪರದಲ್ಲಿ ಒಂದು ಕಡೆ ನಾಲ್ಕು ಜನ ಉಪಾಧ್ಯಾಯರ ಗುಂಪೊಂದು ಸೇರಿತ್ತು. ‘ಈ ಮೇಷ್ಟರುಗಳು ಏನು ಮಸಲತ್ತು ಮಾಡುತ್ತಿದಾರೋ! ಅವರು ಯಾವ ಜಾತಿಯೋ!’ ಎಂದುಕೊಂಡು ರಂಗಣ್ಣ ಅವರಲ್ಲಿಗೆ ಹೋದನು. ಆ ಗುಂಪಿನಲ್ಲಿದ್ದ ಬಸವಯ್ಯ ಎಂಬ ಮೇಷ್ಟ್ರು ಕೈ ಮುಗಿದು ‘ಸ್ವಾಮಿಯವರಿಗೆ ಮೊದಲೇ ಗೊತ್ತಿದೆ. ನಾವೆಲ್ಲ ಲಿಂಗಾಯತರು. ಈ ಊರಲ್ಲಿ ನನ್ನ ನೆಂಟರು ಇದ್ದಾರೆ. ಅವರ ಮನೆಯಲ್ಲಿ ಊಟಕ್ಕೆ ಬರ ಹೇಳಿದ್ದಾರೆ. ಬಾರಪ್ಪ, ಊಟಕ್ಕೆ ಹೋಗೋಣ ಎಂದು ಕರೆದರೆ ಈ ರೇಣುಕಾರಾಧ್ಯ ಮೇಷ್ಟ್ರು ತಾನು ಅಲ್ಲಿಗೆ ಬರುವುದಿಲ್ಲ ಎಂದು ಹಟ ಮಾಡುತ್ತಿದ್ದಾನೆ. ಇದೊಂದು ಬಂಡಾಟ ಆಗಿದೆ. ಸ್ವಾಮಿಯವರು ಪರಿಹಾರ ಮಾಡಬೇಕು’ ಎಂದನು.

‘ಅದೇಕೆ ಮೇಷ್ಟ್ರೆ? ನೀವೆಲ್ಲ ಲಿಂಗಾಯತರು, ಒಂದು ಜನ. ಅವರು ವಿಶ್ವಾಸದಿಂದ ಊಟಕ್ಕೆ ಕರೆಯುವಾಗ ಹೋಗದೆ ಹಟ ಮಾಡುತ್ತೀರಿ. ಇದು ಚೆನ್ನಾಗಿಲ್ಲ.’

‘ನಾವು ಗುರುವರ್ಗದವರು ; ಆಚಾರ್ಯ ಸಂಪ್ರದಾಯದವರು ಸಾರ್ ! ಇವರದೆಲ್ಲ ಸಂಕರಜಾತಿ, ಬೇಕು ಬೇಕೆಂದು ಈಗ ನನ್ನನ್ನು ಊಟಕ್ಕೆ ಕರೆಯುತ್ತಾರೆ. ನಾಳೆ ನಮ್ಮ ಮಠದವರಿಗೆ ತಿಳಿದರೆ ಅವರು
ನನಗೆ ಬಹಿಷ್ಕಾರ ಹಾಕಿಬಿಡುತ್ತಾರೆ.’

ಬಸವಯ್ಯ ಮಧ್ಯೆ ಬಾಯಿ ಹಾಕಿ, ‘ನಾವೇನೂ ಸಂಕರಜಾತಿ ಅಲ್ಲ
ಸಾ ! ನಮಗೂ ಅವರಿಗೂ ಭೇದ ಏನೂ ಇಲ್ಲ. ಈಚೆಗೆ ಇವರಿಗೆಲ್ಲ ಯಾರೋ ಹೇಳಿ ಕೊಟ್ಟಿದ್ದಾರೆ ; ಅದರಮೇಲೆ ತಾವೆಲ್ಲ ಬೇರೆ, ಗುರುವರ್ಗದವರು, ನಮಗಿಂತ ಹೆಚ್ಚು ಎಂದು ಹೇಳಿಕೊಳ್ಳುತ್ತಾರೆ’ ಎಂದನು.

ರಂಗಣ್ಣನು ‘ಮೇಷ್ಟ್ರ್‍ಎ ! ನನಗೆ ಈ ಭೇದಗಳೊಂದೂ ಗೊತ್ತಿಲ್ಲ. ರೇಣುಕಾರಾಧ್ಯರನ್ನು ಬಲಾತ್ಕಾರ ಮಾಡಬೇಡಿ. ಸಂತೋಷವಾಗಿ ಬಂದರೆ ಕರೆದು ಕೊಂಡು ಹೋಗಿ. ಇಲ್ಲವಾದರೆ ಬಿಟ್ಟು ಬಿಡಿ. ಇಲ್ಲಿ ಜಾತಿ ಮತ್ತು ಮತಗಳ ವ್ಯಾಜ್ಯ ಮಾತ್ರ ಬೇಡ’ ಎಂದು ಹೇಳಿ ನಿಟ್ಟುಸಿರು ಬಿಟ್ಟನು.

ಕಡೆಗೆ ಆ ಮೂವರು ಉಪಾಧ್ಯಾಯರು ಊಟಕ್ಕೆ ಹೋದರು; ರೇಣುಕಾರಾಧ್ಯರೊಬ್ಬರೇ ಉಳಿದರು, ರಂಗಣ್ಣನು ಅವರನ್ನು ನೋಡಿ, ‘ಮೇಷ್ಟೆ ! ನೀವು ಗುರುವರ್ಗದವರು ; ಉತ್ತಮ ಜಾತಿ, ನಾನು ಬ್ರಾಹ್ಮಣ ; ಉತ್ತಮ ಜಾತಿ. ನನ್ನ ಜೊತೆಯಲ್ಲಿ ಕುಳಿತುಕೊಂಡು ಊಟ ಮಾಡುತ್ತೀರಾ ? ಊಟ ಮಾಡುವ ಹಾಗಿದ್ದರೆ ಬನ್ನಿ ಹೋಗೋಣ ? ಎಂದು ಕರೆದನು.

‘ಇಲ್ಲ ಸಾರ್, ನಾವು ಬ್ರಾಹ್ಮಣರ ಜೊತೆಯಲ್ಲಿ ಊಟ ಮಾಡುವುದಿಲ್ಲ. ಬಾಹ್ಮಣರು ಭವಿಗಳು!?

‘ಭವಿಗಳು ಎಂದರೇನು ಮೇಷ್ಟ್ರೆ? ನಾವು ನಿಮಗಿಂತ ಕೀಳು ಜಾತಿಯೇ?

‘ನನಗೆ ಗೊತ್ತಿಲ್ಲ ಸಾರ್, ನೀವು ಲಿಂಗವನ್ನು ಕಟ್ಟುವುದಿಲ್ಲ. ನಾವು ಇಷ್ಟಲಿಂಗ ಕಟ್ಟಿದ್ದೇವೆ.’

ರಂಗಣ್ಣನಿಗೆ ದಿಕ್ಕು ತೋರಲಿಲ್ಲ. ಆ ಮೇಷ್ಟ್ರು ಉಪವಾಸ ವಿರುತ್ತಾನಲ್ಲ ಎಂಬುದೊಂದೇ ವ್ಯಥೆ.

‘ಹಾಗಾದರೆ ಏನು ಮಾಡುತ್ತೀರಿ ಮೇಷ್ಟ್ರೆ?’

‘ನಮ್ಮ ಹಳ್ಳಿ ಇಲ್ಲಿಗೆ ಎರಡು ಮೈಲಿ ದೂರ ಇದೆ ಸಾರ್, ಅಪ್ಪಣೆ ಆದರೆ ಮನೆಗೆ ಹೋಗಿ ಊಟ ಮಾಡಿಕೊಂಡು ಮಧ್ಯಾಹ್ನ ಎರಡು ಗಂಟೆಗೆಲ್ಲ ಬರುತ್ತೇನೆ.’

‘ಸಂತೋಷ ಮೇಷ್ಟ್ರೆ! ಊಟಕ್ಕೆ ಹೊರಡಿ, ಅನುಕೂಲವಾದರೆ ಮಧ್ಯಾಹ್ನದ ಸಭೆಗೆ ಬನ್ನಿ. ಇಲ್ಲವಾದರೆ ಮನೆಯಲ್ಲೇ ಇರಿ. ನಿಮಗೆ ಮಧ್ಯಾಹ್ನ ರಜ ಕೊಟ್ಟಿದ್ದೇನೆ.’

‘ರಜಾ ಏತಕ್ಕೆ ಸಾರ್ ! ಎರಡೇ ಮೈಲಿ, ಸೈಕಲ್ ಇದೆ. ತಮ್ಮ ಊಟ ಆಗುವುದರೊಳಗಾಗಿ ಬಂದು ಹಾಜರಾಗುತ್ತೇನೆ.’

‘ಭೇಷ್ ! ಬಹಳ ಸಂತೋಷ ಮೆಷ್ಟ್ರೇ! ಮನೆಯಿಂದ ಬರುವಾಗ ನನಗೂ ಒಂದು ಇಷ್ಟಲಿಂಗ, ಒಂದಿಷ್ಟು ಪ್ರಸಾದ ತನ್ನಿ, ನೀವು ಗುರುಗಳು, ನನಗೂ ಲಿಂಗ ಕಟ್ಟಿಬಿಡಿ!’ ಎಂದು ನಗುತ್ತಾ ರಂಗಣ್ಣನು ಆ ಮೇಷ್ಟರನ್ನು ಬೀಳ್ಕೊಟ್ಟನು.

ಇಷ್ಟೆಲ್ಲ ಫಜೀತಿ ಗಂಡುಮೇಷ್ಟ್ರುಗಳಿಂದ ಆಯಿತಲ್ಲ. ಇನ್ನು ಆ ನಾಲ್ಕು ಹೆಣ್ಣು ಮೇಷ್ಟ್ರುಗಳ ವಿಚಾರ ಏನೋ ಎಂತೋ? ಸ್ವಲ್ಪ ತಿಳಿದುಕೊಳ್ಳೋಣ ಎಂದು ಸುತ್ತಲೂ ನೋಡಿದರೆ ಅವರು ಪತ್ತೆಯೇ ಇರಲಿಲ್ಲ. ಅವರು ಎಲ್ಲಿಗೆ ಹೋದರೋ ಎಂದುಕೊಂಡು ಅಡಿಗೆಯ ಮನೆಯ ಕಡೆಗೆ ಬಂದರೆ ಅವರು ಅಲ್ಲಿ ಹಾಜರಿದ್ದರು. ಅವರೆಲ್ಲ ಬಾಹ್ಮಣರೇ ಆಗಿದ್ದರು; ಸಾಲದುದಕ್ಕೆ ತಮ್ಮ ಸೇವೆ ಸ್ವಲ್ಪ ನಡೆಯಲೆಂದು ತಟ್ಟೆಗಳಲ್ಲಿ ಅನ್ನ, ಪಾತ್ರೆಗಳಲ್ಲಿ ಹುಳಿ ತುಂಬಿಕೊಂಡು ಬಡಿಸುವುದಕ್ಕೆ ಸಿದ್ಧವಾಗಿ ನಿಂತಿದ್ದರು! ಅವರು ಹಾಗೆ ಸಿದ್ದವಾಗಿದ್ದುದನ್ನು ನೋಡಿ ರಂಗಣ್ಣನಿಗೆ ಪರಮಾನಂದ ವಾಯಿತು. ಆದರೆ ಅವರನ್ನು ಊಟಕ್ಕೆ ಕುಳ್ಳಿರಿಸಿ ಬಡಿಸುವ ಕೆಲಸವನ್ನು ಗಂಡಸರು ಮೇಷ್ಟರ ಕೈಯಿಂದ ಮಾಡಿಸುವುದು ಒಳ್ಳೆಯದೆಂದು ಅವನಿಗೆ ತೋರಿತು. ಆ ಮಾತನ್ನೆ ಅವರಿಗೆ ಹೇಳಿದನು: ‘ನೀವುಗಳೆಲ್ಲ ಅಬಲೆಯರು, ಆಗಲೇ ಆಯಾಸಪಟ್ಟಿದ್ದೀರಿ. ಈ ಮೇಷ್ಟರುಗಳು ಬಡಿಸುತ್ತಾರೆ. ನೀವುಗಳೆಲ್ಲ ಪಾತ್ರೆ ಮತ್ತು ಸೌಟುಗಳನ್ನು ಕೆಳಗಿಟ್ಟು ಊಟಕ್ಕೆ ಕುಳಿತು ಕೂಳ್ಳಿ. ಅವರು ಒಪ್ಪಲಿಲ್ಲ. ‘ಬೇಡ ಸಾರ್ ! ಸಂಸಾರದಲ್ಲಿ ಅಬಲೆಯರದೇ ಆಡಳಿತ, ಇದೂ ಒಂದು ಮೇಷ್ಟರ ಸಂಸಾರ, ಈ ಸಂತೋಷ ನಮಗೆಲ್ಲಿ ಲಭ್ಯವಾಗುತ್ತದೆ. ತಾವು ಊಟಕ್ಕೆ ಕುಳಿತು ಕೊಂಡರೆ ನಾವು ಇದನ್ನೆಲ್ಲ ನಿರ್ವಾಹ ಮಾಡುತ್ತೇವೆ’ ಎಂದರು.

‘ನಾನು ಮೇಲ್ವಿಚಾರಣೆ ನೋಡಿಕೊಳ್ಳಬೇಕು. ನಾನು ಈಗಲೇ ಊಟಕ್ಕೆ ಕುಳಿತುಕೊಳ್ಳುವುದಿಲ್ಲ’. ಇದರ ಮೇಲೆ ಸ್ವಲ್ಪ ಚರ್ಚೆಗೆ ಪ್ರಾರಂಭವಾಯಿತು. ಇನ್ಸ್‍ಪೆಕ್ಟರ್ ಸಾಹೇಬರು ಮೊದಲನೆಯ ಪಂಕ್ತಿಯಲ್ಲೇ ಕುಳಿತು ಊಟ ಮಾಡಬೇಕೆಂದು ಹಲವರು ಉಪಾಧ್ಯಾಯರು ಒತ್ತಾಯ ಮಾಡಿದರು. ಆದರೆ ರಂಗಣ್ಣ ಒಪ್ಪಲಿಲ್ಲ. ಬಡಿಸುವಾಗ ಏನು ಗಲಭೆಗಳಾಗುತ್ತವೆಯೋ? ಎಂಬುದೊಂದು ದೊಡ್ಡ ಹೆದರಿಕೆ ಅವನಿಗೆ. ಒತ್ತಾಯ ಮಾಡಿ ಪ್ರಯೋಜನವಿಲ್ಲವೆಂದು ಉಪಾಧ್ಯಾಯರು ಸುಮ್ಮನಾದರು. ಬಡಿಸುವುದಕ್ಕೆ ಇಬ್ಬರು ಉಪಾಧ್ಯಾಯರೂ, ಆ ನಾಲ್ವರು ಉಪಾಧ್ಯಾಯಿನಿಯರೂ ಸಿದ್ಧರಾದರು. ರಂಗಣ್ಣನದು ಮೇಲ್ವಿಚಾರಣೆ. ಇನ್ನು ಹೆಚ್ಚು ಹೇಳಬೇಕಾದುದಿಲ್ಲ. ಎಲ್ಲರಿಗೂ ಪುಷ್ಕಳವಾಗಿ ಮೃಷ್ಟಾನ್ನ ಭೋಜನ ಆಯಿತು. ಮೊದಲಿನಲ್ಲಿ ಸ್ವಲ್ಪ ತೊಂದರೆ ತಿಸರುಗಳಿದ್ದರೂ ಮುಕ್ತಾಯದಲ್ಲಿ ಸುಖ ಸಂತೋಷಗಳೇ ತುಂಬಿದ್ದುವು. ಊಟವಾದಮೇಲೆ ಆಯಾ ಜಾತಿಯವರು ತಾವು ಕುಳಿತಿದ್ದ ಎಡೆಗಳನ್ನು ತಾವು ತಾವೇ ಚೊಕ್ಕ ಮಾಡಿ ಕೈ ತೊಳೆದು ಕೊಂಡು ಬಂದು ಚಪ್ಪರದಲ್ಲಿ ಹಾಕಿದ್ದ ಜಮಖಾನದ ಮೇಲೆ ಕುಳಿತರು.

ಈ ಕಡೆ ರಂಗಣ್ಣ ಮತ್ತು ಉಳಿದಿದ್ದ ಉಪಾಧ್ಯಾಯರೂ ಉಪಾಧ್ಯಾಯಿನಿಯರೂ ತಂತಮ್ಮ ಊಟಗಳನ್ನು ಮುಗಿಸಿಕೊಂಡು ಚಪ್ಪರದಲ್ಲಿ ಹಾಜರಾದರು. ಇಷ್ಟೆಲ್ಲ ಮುಗಿಯುವ ಹೊತ್ತಿಗೆ ಮಧ್ಯಾಹ್ನ ಒಂದು ಗಂಟೆಯಾಯಿತು. ಅಲ್ಲಿ ತಾಂಬೂಲ ಚರ್ವಣ, ಸ್ವಲ್ಪ ಸಲಿಗೆಯ ಮತ್ತು ಹಾಸ್ಯ ಪ್ರವೃತ್ತಿಯ ಉಪಾಧ್ಯಾಯರು, ‘ಸಾರ್! ತಮ್ಮ ಕೈಯೆಲ್ಲ ಸುಣ್ಣವಾಗಿ ಹೋಗುತ್ತೆ. ನಾವು ಸುಣ್ಣ ಹಚ್ಚಿ ಎಲೆ ಮಡಿಸಿ ಕೊಡುತ್ತೇವೆ’ ಎಂದು ಹೇಳಿದರು. ಒಬ್ಬ ಮೇಷ್ಟ್ರು ಇನ್ಸ್‍ಪೆಕ್ಟರವರ ಕೈಯಲ್ಲಿ ಅಡಿಕೆಯ ಪುಡಿಯನ್ನು ಹಾಕಿದನು; ಮತ್ತೊಬ್ಬನು ವೀಳೆಯದೆಲೆಯ ತೊಟ್ಟು ಗಳನ್ನು ತೆಗೆದು ಹದವಾಗಿ ಸುಣ್ಣ ಹಚ್ಚಿ ಮಡಿಸಿ ಕೊಟ್ಟನು. ಅವುಗಳನ್ನು ಇನ್ಸ್‍ಪೆಕ್ಟರ್ ಸಾಹೇಬರು ಸ್ವೀಕರಿಸಿ ಚರ್ವಣ ಮಾಡುತ್ತಿದ್ದಾಗ, ಮತ್ತೊಂದು ಕಡೆಯಿಂದ ಮೇಷ್ಟ್ರು ಬಂದು, ‘ಈ ಬೀಡ ನಾನು ತಯಾರಿಸಿದ್ದು ; ಇದರ ರುಚಿ ಪರಾಂಬರಿಸಬೇಕು ಸ್ವಾಮಿಯವರು’- ಎಂದು ಕಾಣಿಕೆ ಕೊಟ್ಟನು. ಮತ್ತೊಬ್ಬ ಮೇಷ್ಟ್ರು, ‘ಬೀಡ ಮಾಡುವುದರಲ್ಲೇನು ಸಾರ್ ಚಮತ್ಕಾರ? ಅಂಗಡಿ ಯವರೆಲ್ಲ ಮಾಡಿಡುತ್ತಾರೆ. ನಾನು ಬಾಳೆಯಗಿಡ ಮಾಡಿಕೊಡುತ್ತೇನೆ’ ಎಂದು ಹೇಳಿ ಅರ್ಧ ನಿಮಿಷದಲ್ಲಿ ವೀಳೆಯದೆಲೆಗೆ ಸುಣ್ಣ ಹಚ್ಚಿ ಅದನ್ನು ಮಡಿಸಿ ಬಾಳೆಯ ಗಿಡವನ್ನು ಮಾಡಿ ಇನ್ಸ್‍ಪೆಕ್ಟರಿಗೆ ಕೊಟ್ಟನು. ರಂಗಣ್ಣನಿಗೆ ಅವರ ಸಲಿಗೆಯನ್ನೂ ಕೈಚಳಕವನ್ನೂ ನೋಡಿ ಬಹಳ ಸಂತೋಷವಾಯಿತು. ಅಲ್ಲಿಯೇ ಸಮೀಪದಲ್ಲಿ ಮುನಿಸಾಮಿ ಕುಳಿತಿದ್ದ. ಅವನನ್ನು ನೋಡುತ್ತಲೂ ಇನ್ಸ್‍ಪೆಕ್ಟರಿಗೆ ಬಹಳ ನಗು ಬಂದಿತು. ಯಾರಿಗೂ ಕಾರಣ ತಿಳಿಯದು. ಸ್ವಲ್ಪ ನಗುವನ್ನು ತಡೆದುಕೊಂಡು, ‘ಏನು ಮೇಷ್ಟ್ರೆ! ಏನಾಯಿತು? ಶ್ಯಾನುಭೋಗರು ಏನು ಹೇಳಿದರು?’ ಎಂದು ಕೇಳಿದನು. ‘ಸಾರ್ ! ತಾವು ಹೇಳಿದ ಸಲಹೆ ಬಹಳ ಚೆನ್ನಾಗಿದೆ, ಆಗಿ ಹೋಯಿತು ಸಾರ್ ಗುಡಿಸಿಲು ಮೇಲೆ ಹುಲ್ಲು ಹೊಚ್ಚುವುದೊಂದೇ ಉಳಿದಿದೆ. ಅದರ ಆರಂಭೋತ್ಸವ ಮಾಡಬೇಕೆಂದು ಶ್ಯಾನುಭೋಗರು ಹೇಳಿದ್ದಾರೆ. ಖಂಡಿತ ತಮ್ಮನ್ನು ಕರೆದುಕೊಂಡು ಬರಬೇಕೆಂದು ಹೇಳಿದ್ದಾರೆ. ಸ್ವಾಮಿಯವರನ್ನು ನೋಡುವುದಕ್ಕೆ ಶ್ಯಾನುಭೋಗರೂ ಕಮಿಟಿ ಮೆಂಬರುಗಳೂ ಜನಾರ್ದನಪುರಕ್ಕೆ ಬರುತ್ತಾರೆ.’

‘ಖರ್ಚಿನ ಬಾಬತು ಹೇಗೆ?’
‘ಕಮಿಟಿ ಮೆಂಬರುಗಳೇ ಚಂದಾ ಹಾಕಿಕೊಂಡರು ಸಾರ್‌! ಅವರಿಗೇನ್ ಸಾರ್, ಎಲ್ಲರೂ ನೆಮ್ಮದಿ ಕುಳ.?

ರಂಗಣ್ಣನಿಗೆ ಆ ಸಮಾಚಾರ ತಿಳಿದುದರಿಂದ ಮತ್ತೂ ಸಂತೋಷವಾಯಿತು. ಆ ಮಾತು ಈ ಮಾತು ಆಡುತ್ತ ಹರಟೆಗಳಲ್ಲಿ ಎರಡೂವರೆ ಗಂಟೆ ಹತ್ತಿರವಾಯಿತು. ಬೆಳಗ್ಗೆ ಸೂಚನೆ ಕೊಟ್ಟಿದ್ದಂತೆ ಉಪಾಧ್ಯಾಯರಿಗೆ ಮಣ್ಣಿನ ಕೆಲಸ, ಕಾಗದ ಮಡಿಸುವುದು ಮೊದಲಾದುವುಗಳಲ್ಲಿ ಒಂದು ಗಂಟೆಯ ಕಾಲ ಶಿಕ್ಷಣವನ್ನು ಕೊಡಲಾಯಿತು. ಮಧ್ಯಾಹ್ನ ಮೂರೂವರೆ ಗಂಟೆಗೆ ಬಹಿರಂಗ ಸಭೆ ಸೇರಿತು.

ಚಪ್ಪರದಲ್ಲಿ ಹಳ್ಳಿಯಲ್ಲಿನ ಗಂಡಸರು ಹೆಂಗಸರು ನೂರಾರು ಜನ ಸೇರಿಬಿಟ್ಟರು. ದೊಡ್ಡ ಬೋರೇಗೌಡರೂ ಬಂದರು. ಮೊದಲಿನಂತೆಯೇ ಅವರನ್ನು ರಂಗಣ್ಣ ತನ್ನ ಪಕ್ಕದಲ್ಲಿ ಕುರ್ಚಿಯಲ್ಲಿ ಕುಳ್ಳಿರಿಸಿಕೊಂಡನು. ದೇವತಾ ಪ್ರಾರ್ಥನೆ ಎರಡು ನಿಮಿಷಗಳ ಕಾಲ ಆಯಿತು. ಆಮೇಲೆ ಕುಮಾರವ್ಯಾಸನ ಭಾರತದಿಂದ ಅರ್ಧ ಗಂಟೆಯ ಕಾಲ ವ್ಯಾಖ್ಯಾನದೊಂದಿಗೆ ವಾಚನ ನಡೆಯಿತು. ತರುವಾಯ ಹದಿನೈದು ನಿಮಿಷಗಳ ಕಾಲ ಉಪಾಧ್ಯಾಯರೊಬ್ಬರು ನಕಲಿ ಮಾಡಿದರು. ಇದಾದಮೇಲೆ ಇಪ್ಪತ್ತು ನಿಮಿಷಗಳ ಕಾಲ ಮಿಡಲ್ ಸ್ಕೂಲಿನ ಮುಖ್ಯೋಪಾಧ್ಯಾಯರು ಸಹಕಾರ ಸಂಘಗಳಿಂದ ಆಗುವ ಪ್ರಯೋಜನಗಳು’ ಎಂಬ ವಿಷಯವನ್ನು ಕುರಿತು ಭಾಷಣ ಮಾಡಿದರು. ತರುವಾಯ ಹದಿನೈದು ನಿಮಿಷಗಳ ಕಾಲ ಉಪಾಧ್ಯಾಯರ ಗೋಷ್ಟಿಯಿಂದ ಸಂಗೀತ ನಡೆಯಿತು. ಆ ಬಳಿಕ ಅಧ್ಯಕ್ಷರ ಮುಕ್ತಾಯ ಭಾಷಣ ಬಂತು. ಆಗ ರಂಗಣ್ಣನು, ಬೆಳಗ್ಗೆ ನಾನು ಉಪಾಧ್ಯಾಯರನ್ನು ಕುರಿತು ನಾಲ್ಕು ಮಾತುಗಳನ್ನು ಹೇಳಿದೆ. ಈಗ ಗ್ರಾಮಸ್ಥರನ್ನು ಕುರಿತು ನಾಲ್ಕು ಮಾತುಗಳನ್ನು ಹೇಳಬೇಕೆಂಬ ಬಯಕೆ ಇದೆ. ಈ ದಿನ ನನಗೂ ನನ್ನ ಈ ಉಪಾಧ್ಯಾಯ ಮಂಡಲಿಗೂ ಆಗಿರುವ ಸಂತೋಷವನ್ನು ಬಾಯಿಮಾತಿನಿಂದ ಹೇಳಲು ಸಾಧ್ಯವೇ ಇಲ್ಲ. ಈ ದಿನದ ಕಾರ್ಯಕ್ರಮಗಳೆಲ್ಲ ದೇವರ ದಯೆಯಿಂದ ಸಾಂಗವಾಗಿ ನೆರವೇರಿದೆ. ನನ್ನ ಮಿತ್ರರಾದ ಶ್ರೀ ದೊಡ್ಡ ಬೋರೇಗೌಡರ ಔದಾರ್ಯದಿಂದ ನಮ್ಮೆಲ್ಲರಿಗೂ ಮೃಷ್ಟಾನ್ನ ಭೋಜನವೂ ಲಭಿಸಿತು. ಆದರೆ ಈ ಸಭೆಗಳನ್ನು ಏರ್ಪಡಿಸುವ ಉದ್ದೇಶ ಬರಿ ಊಟಮಾಡುವ ಸಲುವಾಗಿ ಅಲ್ಲ. ಈ ದಿನ ಬೆಳಗ್ಗೆ ನೀವುಗಳೆಲ್ಲ ನೋಡಿದಂತೆ ಉಪಾಧ್ಯಾಯರಿಗೆ ಬೋಧನಕ್ರಮಗಳ ವಿಚಾರದಲ್ಲಿ ತಿಳಿವಳಿಕೆಯನ್ನೂ ಮಧ್ಯಾಹ್ನದಲ್ಲಿ ಕೈ ಕೆಲಸಗಳಲ್ಲಿ ಶಿಕ್ಷಣವನ್ನೂ ಕೊಡಲಾಯಿತು. ಇವುಗಳನ್ನೆಲ್ಲ ಏರ್ಪಾಟು ಮಾಡಿರುವುದು ತಮ್ಮ ಮಕ್ಕಳ ವಿದ್ಯಾಭ್ಯಾಸ ಚೆನ್ನಾಗಿ ನಡೆಯಲಿ ಎಂಬ ದೊಡ್ಡ ಉದ್ದೇಶದಿಂದ. ಸದ್ಯದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಚೆನ್ನಾಗಿ ನಡೆಯುತ್ತಿಲ್ಲ. ಸರಕಾರದವರು ಹಣವನ್ನು ಖರ್ಚು ಮಾಡುತ್ತಿದ್ದಾರೆ. ಆದರೆ ತಕ್ಕಷ್ಟು ಫಲ ದೊರೆಯುತ್ತಿಲ್ಲ. ನೀವುಗಳೆಲ್ಲ ಆಲೋಚನೆ ಮಾಡಿ : ಒಂದು ಎಕರೆ ಗದ್ದೆಗೆ ನೀವು ಮೂವತ್ತು ರೂಪಾ ಯಿಗಳವರೆಗೂ ಖರ್ಚು ಮಾಡಿ ಅದರಿಂದ ಇಪ್ಪತ್ತು ರೂಪಾಯಿಗಳ ವರಮಾನ ಪಡೆದರೆ ನಿಮಗೆ ವ್ಯಥೆಯಾಗುವುದಿಲ್ಲವೆ? ಅದಕ್ಕೆ ಬದಲು ನೂರು ರೂಪಾಯಿ ವರಮಾನ ಬಂದರೆ ನಿಮಗೆ ಸಂತೋಷವಾಗುವುದಿಲ್ಲವೆ? ಮುಂದೆ ಸರಕಾರದವರು ಮಾಡಬೇಕಾದ ಕೆಲಸಗಳೇನೋ ಬಹಳವಿವೆ. ನಮ್ಮ ದೇಶದಲ್ಲಿ ವಿದ್ಯಾಭ್ಯಾಸ ಚೆನ್ನಾಗಿ ಪ್ರಚಾರವಾಗಬೇಕಾದರೆ ಪ್ರೈಮರಿ ಸ್ಕೂಲುಗಳು ಹದಿನೈದು ಸಾವಿರ ಆದರೂ ಇರಬೇಕು ; ಮಿಡಲ್ ಸ್ಕೂಲುಗಳು ಸಾವಿರದ ಐನೂರು ಆದರೂ ಸ್ಥಾಪಿತವಾಗಬೇಕು ; ಹೈ ಸ್ಕೂಲುಗಳು ಐನೂರು ಆದರೂ ಆಗಬೇಕು. ವಿಶ್ವವಿದ್ಯಾನಿಲಯದ ಮಾತನ್ನು ನಾನು ಆಡುವುದಿಲ್ಲ. ನಮ್ಮ ಇಲಾಖೆಯ ಮಾತನ್ನು ಆಡುತ್ತೇನೆ. ಸಾವಿರ ಮತ್ತು ಅದಕ್ಕೆ ಹೆಚ್ಚಿನ ಪ್ರಜಾ ಸಂಖ್ಯೆಯುಳ್ಳ ಪ್ರತಿಯೊಂದು ಗ್ರಾಮದಲ್ಲಿಯೂ ಒಂದೊಂದು ಮಿಡಲ್ ಸ್ಕೂಲು ಇರಬೇಕು. ಅದಕ್ಕೆ ಸಮಿಪದಲ್ಲಿ ಹುಡುಗರನ್ನು ಒದಗಿಸತಕ್ಕೆ ಹತ್ತು ಹನ್ನೆರಡು ಪ್ರೈಮರಿ ಸ್ಕೂಲುಗಳು ಸುತ್ತಲೂ ಇರಬೇಕು. ಆಗ ವಿದ್ಯಾಭ್ಯಾಸ ಚೆನ್ನಾಗಿ ನಡೆಯುತ್ತದೆ. ಈ ವ್ಯವಸ್ಥೆಗೆಲ್ಲ ಮೂರು ಕೋಟಿ ರೂಪಾಯಿಗಳನ್ನಾದರೂ ನಾವು ಖರ್ಚು ಮಾಡಬೇಕಾಗುತ್ತದೆ. ಆ ಕಾಲ ಯಾವಾಗ ಬರುವುದೋ ದೇವರಿಗೇ ಗೊತ್ತು. ಈಗ ನಮ್ಮ ದೇಶದಲ್ಲಿ ನೂರು ಜನಕ್ಕೆ ಹನ್ನೆರಡು ಜನ ಮಾತ್ರ ಓದು ಬರೆಹ ಬಲ್ಲವರು. ಪಾಶ್ಚಾತ್ಯ ದೇಶಗಳಲ್ಲಿ ನೂರಕ್ಕೆ ತೊಂಬತ್ತೈದು, ತೊಂಬತ್ತೆಂಟು ಜನ ಓದು ಬರೆಹ ಬಲ್ಲವರು.’

‘ಸದ್ಯದಲ್ಲಿರುವ ಅನುಕೂಲಗಳನ್ನು ಗ್ರಾಮಸ್ಥರು ಚೆನ್ನಾಗಿ ಉಪಯೋಗಿಸಿಕೊಳ್ಳಬೇಕಾದುದು ಅವರ ಕರ್ತವ್ಯ. ಉಪಾಧ್ಯಾಯರ ವಿಚಾರವನ್ನು ನನಗೆ ಬಿಟ್ಟು ಬಿಡಿ, ಅವರನ್ನು ತಿದ್ದುವ ಮತ್ತು ಅವರಿಂದ ಕೆಲಸ ತೆಗೆಯುವ ಜವಾಬ್ದಾರಿ ನನಗೆ ಸೇರಿದ್ದು, ನೀವುಗಳು ಸಹ ಉಪಾಧ್ಯಾಯರನ್ನು ಗೌರವದಿಂದಲೂ ಪ್ರೇಮದಿಂದಲೂ ನೋಡಿಕೊಂಡರೆ ಅವರು ಸಂತೋಷವಾಗಿ ಕೆಲಸ ಮಾಡುತ್ತಾರೆ. ಈ ದಿನ ಇಲ್ಲಿ ಸೇರಿರುವ ಉಪಾಧ್ಯಾಯರು ಗ್ರಾಮಸ್ಥರ ವಿಷಯದಲ್ಲಿ ಕೃತಜ್ಞತೆಯಿಂದ ತುಂಬಿದ್ದಾರೆ. ಈ ದಿನದ ಆದರಾತಿಥ್ಯಗಳಿಗೆ ಹೇಗೆ ತಾನೆ ಪ್ರತ್ಯುಪಕಾರ ಮಾಡಬಹುದು? ಗ್ರಾಮಸ್ಥರ ಮಕ್ಕಳಿಗೆಲ್ಲ ಚೆನ್ನಾಗಿ ಪಾಠ ಹೇಳಿಕೊಟ್ಟು ತಿಂದ ಬೋಂಡಗಳನ್ನು ಜೀರ್ಣಿಸಿಕೊಳ್ಳಬೇಕಾಗಿದೆ ಎಂದು ಅವರು ಆಲೋಚನೆ ಮಾಡುತ್ತಿದಾರೆ. ಉಂಡ ಮನೆಗೆ ಎರಡು ಬಗೆಯುವುದುಂಟೆ? ಈಗ ಉಪಾಧ್ಯಾಯರಲ್ಲೆಲ್ಲ ನವಚೈತನ್ಯ ಹುಟ್ಟಿದೆ ; ಅವರಲ್ಲಿ ಉತ್ಸಾಹ ಹೊರಸೂಸುತ್ತಿದೆ. ಅವರು ಹಿಂದಿನಿಗಿಂತ ಮುಂದೆ ಚೆನ್ನಾಗಿ ಕೆಲಸ
ಮಾಡುತ್ತಾರೆ. ನೀವುಗಳು ನಾನು ಹೇಳುವುದನ್ನು ಸ್ವಲ್ಪ ಗಮನಿಸಿ’

‘ಮಕ್ಕಳನ್ನು ಪಾಠಶಾಲೆ ತೆರೆದ ಒಂದು ತಿಂಗಳೊಳಗಾಗಿ ಸೇರಿಸಿ ಬಿಡಿ. ಆಮೇಲೆ ಪಾಠಶಾಲೆಗೆ ಸೇರಿಸಬೇಕೆಂದು ಕರೆದುಕೊಂಡು ಹೋಗ ಬೇಡಿ, ಮೇಷ್ಟರಿಗೆ ಒತ್ತಾಯ ಮಾಡಬೇಡಿ. ಇದು ನಮ್ಮ ನಿಯಮಗಳಿಗೆ ವಿರೋಧವಾದುದು ; ಮತ್ತು ಇತರ ಮಕ್ಕಳ ವಿದ್ಯಾಭಿವೃದ್ಧಿಗೆ ಕುಂದಕ ತರುವಂಥದು. ಆಲೋಚನೆಮಾಡಿ: ನೀವು ಬಿತ್ತನೆ ಮಾಡುವಾಗ ಅಥವಾ ನಾಟಿ ಮಾಡುವಾಗ ಈ ತಿಂಗಳು ಒಂದಿಷ್ಟು, ಮುಂದಿನ ತಿಂಗಳು ಇನ್ನಷ್ಟು, ಮರುದಿಂಗಳು ಮತ್ತಿಷ್ಟು – ಹೀಗೆ ಪ್ರತಿ ತಿಂಗಳಲ್ಲೂ ಬಿತ್ತನೆ ಅಥವಾ ನಾಟಿ ಮಾಡುತ್ತೀರಾ ? ಏಕೆ ಮಾಡುವುದಿಲ್ಲ ? ಹಾಗೆಯೇ ನಮ್ಮ ಪಾಠ ಶಾಲೆಗಳಲ್ಲಿ ಕೂಡ.’

‘ಎರಡನೆಯದಾಗಿ, ಮಕ್ಕಳನ್ನು ಚೊಕ್ಕಟವಾಗಿ ಪ್ರತಿದಿನವೂ ಪಾಠ ಶಾಲೆಗೆ ಕಳಿಸಿಕೊಡಿ. ಹೆಣ್ಣು ಮಕ್ಕಳನ್ನು ಚೊಕ್ಕಟವಾಗಿ ಕಳಿಸುತ್ತೀರಿ. ಆ ಮಕ್ಕಳು ಬಾಚಿಕೊಂಡು ಹೆರಳು ಹಾಕಿಕೊಂಡು ಮುದ್ದು ಮುದ್ದಾಗಿ ಪಾಠ ಶಾಲೆಗೆ ಬರುತ್ತವೆ. ಹುಡುಗರು ಅರೆ ಬೆತ್ತಲೆಯಲ್ಲಿ, ಸರಿಯಾದ ಉಡುಪುಗಳಿಲ್ಲದೆ, ಹಲ್ಲುಜ್ಜದೆ, ಮುಖ ತೊಳೆಯದೆ, ಹಾಗೆಯೇ ಬಂದು ಕುಳಿತುಕೊಳ್ಳುತ್ತಾರೆ. ಇದು ಸರಿಯಲ್ಲ.’

‘ಮೂರನೆಯದಾಗಿ, ಹುಡುಗರಿಗೆ ಸ್ಲೇಟು ಪುಸ್ತಕಗಳನ್ನು ತೆಗೆದು ಕೊಡಬೇಕು. ಈ ವಿಚಾರದಲ್ಲಿ ನನ್ನದೊಂದು ಸಲಹೆ. ನೀವು ಪಾಠ ಶಾಲೆಗೆ ಸ್ಲೇಟುಗಳನ್ನೂ ಪುಸ್ತಕಗಳನ್ನೂ ದಾನಮಾಡಿ, ಅವುಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತೇವೆ. ದಾನಮಾಡಿದ ಮಹನೀಯರ ಹೆಸರುಗಳನ್ನು ಪಟ್ಟಿಯಲ್ಲಿ ಬರೆದು ಪ್ರಕಟಿಸುತ್ತೇವೆ ; ಇಲಾಖೆಯವರ ಗಮನಕ್ಕೆ ಅವರ ಹೆಸರುಗಳನ್ನು ತರುಸುತ್ತೇವೆ. ಈ ದಾನದಿಂದ ಬಹಳ ಪ್ರಯೋಜನವಿದೆ. ಸ್ಲೇಟುಗಳನ್ನೂ ಪುಸ್ತಕಗಳನ್ನೂ ಪಾಠಶಾಲೆಯಲ್ಲಿ ಉಳಿಸಿಕೊಂಡು ನಿಮ್ಮ ಮಕ್ಕಳು ಬಂದಾಗ ಬರೆಯುವುದಕ್ಕೂ ಓದುವುದಕ್ಕೂ ಉಪಾಧ್ಯಾಯರು ಕೊಡುತ್ತಾರೆ. ಆಮೇಲೆ ಪೆಟ್ಟಿಗೆಯಲ್ಲಿ ಭದ್ರವಾಗಿ ತೆಗೆದಿಡುತ್ತಾರೆ. ಒಂದು ಬಾರಿ ಕೊಂಡು ಹೀಗೆ ಇಟ್ಟರೆ ಎರಡು ವರ್ಷಕಾಲವಾದರೂ ಅವು ಬಾಳಿಕೆ ಬರುತ್ತವೆ. ನಿಮಗೆ ಪದೇ ಪದೇ ಖರ್ಚುಮಾಡುವ ಕಷ್ಟ ತಪ್ಪುತ್ತದೆ. ಯಾರಾದರೂ ದಾನಮಾಡುತ್ತೀರಾ?

ಈ ದಿನ ಶುಭದಿನ, ಇದೇ ಶುಭ ಮುಹೂರ್ತ…’ ಎಂದು ಹೇಳುತ್ತಿದ್ದಾಗ ದೊಡ್ಡ ಬೋರೇಗೌಡರು, ‘ಸ್ವಾಮಿ ! ನಾನು ಐವತ್ತು ಸ್ಲೇಟು, ಐವತ್ತು ಮೊದಲನೆಯ ಪುಸ್ತಕ, ಇಪ್ಪತ್ತು ಎರಡನೆಯ ಪುಸ್ತಕ ಕೊಡುತ್ತೇನೆ’ ಎಂದು ಎದ್ದು ನಿಂತುಕೊಂಡು ಹೇಳಿದರು. ಸಭೆಯಲ್ಲೆಲ್ಲ ಕರತಾಡನಗಳೂ ಜಯಘೋಷಗಳೂ ತುಂಬಿ ಹೋದವು. ಐದು ನಿಮಿಷಗಳಲ್ಲಿ ಏಳೆಂಟು ಜನ ವಾಗ್ದಾನಮಾಡಿದರು. ಪಾಠಶಾಲೆಗೆ ನೂರು ಸ್ಲೇಟುಗಳು ಮತ್ತು ಬೇಕಾದಷ್ಟು ಪಠ್ಯ ಪುಸ್ತಕಗಳು, ಒಂದು ಮೈಸೂರು ಮ್ಯಾಪು ಒಂದು ಇಂಡಿಯಾ ಮ್ಯಾಪು ದೊರೆತುವು.

ರಂಗಣ್ಣನು ಆ ದಾತೃಗಳಿಗೆಲ್ಲ ಉಚಿತರೀತಿಯಲ್ಲಿ ವಂದನೆಗಳನ್ನರ್‍ಪಿಸಿ, ಇನ್ನು ಕೆಲವು ಹಿತೋಕ್ತಿಗಳನ್ನಾಡಿ ತನ್ನ ಅಧ್ಯಕ್ಷ ಭಾಷಣವನ್ನು ಮುಗಿಸಿದನು.

ದೊಡ್ಡ ಬೋರೇಗೌಡರು ವಂದನಾರ್ಪಣೆ ಮಾಡಿದರು. ಅವರು ದೊಡ್ಡ ವಿದ್ಯಾವಂತರಲ್ಲದಿದ್ದರೂ ಲೌಕಿಕದಲ್ಲಿ ಚೆನ್ನಾಗಿ ನುರಿತವರಾದ್ದರಿಂದ ಬಹಳ ಚೆನ್ನಾಗಿ ಮಾತನಾಡಿದರು. ಆ ದಿನದ ಕಾರ್ಯಕಲಾಪಗಳನ್ನು ಪ್ರಶಂಸೆಮಾಡಿ, ಉಪಾಧ್ಯಾಯರಿಗೂ ಗ್ರಾಮಸ್ಥರಿಗೂ ಸೌಹಾರ್ದ ಬೆಳೆಯುವುದಕ್ಕೆ ಹೀಗೆ ಸಭೆಗಳನ್ನು ಗ್ರಾಮಾಂತರಗಳಲ್ಲಿ ಏರ್ಪಡಿಸುವುದು ಒಳ್ಳೆಯದೆಂದು ಅನುಮೋದಿಸಿದರು. ಹೀಗೆ ಇಬ್ಬರನ್ನೂ ಕಲೆ ಹಾಕಿ, ಆ ಎರಡೆತ್ತುಗಳ ಮೇಲೂ ಆ ಸೌಹಾರ್ದದ ನೊಗವನ್ನು ಹೊರಿಸಿ, ಬಂಡಿಯಲ್ಲಿ ಮಕ್ಕಳನ್ನು ಕೂಡಿಸಿ ತಾವೇ ಸಾರಥಿಯಾಗಿ ನಡೆಸುತ್ತಿರುವ ಇನ್ಸ್‍ಪೆಕ್ಟರ್ ಸಾಹೇಬರವರಿಗೆ ತಾವುಗಳೆಲ್ಲ ಕೃತಜ್ಞರಾಗಿರುವುದಾಗಿ ಹೇಳಿದರು. ಆ ಮೇಲೆ ರಂಗಣ್ಣನಿಗೆ ತಾವೇ ಒಂದು ಒಳ್ಳೆಯ ಹೂವಿನ ಹಾರವನ್ನು ಹಾಕಿದರು.

ರಂಗಣ್ಣ ದೊಡ್ಡ ಬೋರೇಗೌಡರಿಗೆ ತಾನು ವಿಶೇಷವಾದ ರೀತಿಯಲ್ಲಿ ಮರ್ಯಾದೆ ಮಾಡಬೇಕೆಂದು ಏರ್ಪಾಟು ಮಾಡಿಕೊಂಡಿದ್ದನು. ಅವರ ಕೊರಳಿಗೆ ತಾನು ಸಿದ್ಧ ಪಡಿಸಿಕೊಂಡಿದ್ದ ಹೂವಿನ ಹಾರವನ್ನು ಹಾಕಿ ಹಸ್ತಲಾಘವ ಕೊಟ್ಟನು. ಆ ಬಳಿಕ ‘ಕಾಯೌಶ್ರೀಗೌರಿ’ ಮತ್ತು ಜಯ ಘೋಷಗಳಿಂದ ಸಭೆ ಮುಕ್ತಾಯವಾಯಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಾಮರಾಜ್ಯ
Next post ಹೆರಿಗೆ

ಸಣ್ಣ ಕತೆ

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

cheap jordans|wholesale air max|wholesale jordans|wholesale jewelry|wholesale jerseys