ಮೈಮನಗಳ ಸುಳಿಯಲ್ಲಿ ಭಾಷೆ

ಮೈಮನಗಳ ಸುಳಿಯಲ್ಲಿ ಭಾಷೆ

ಕವಿ ಎಚ್. ಎಸ್. ಶಿವಪ್ರಕಾಶ್ ತಮ್ಮ ಇತ್ತೀಚಿನ ಸಂದರ್ಶನವೊಂದರಲ್ಲಿ, ಕಾವ್ಯದ ಕೆಲಸ ಭಾಷೆಯ ಸೂಕ್ಷ್ಮತೆಯನ್ನು ಹೆಚ್ಚಿಸುವುದು ಎಂದಿದ್ದಾರೆ. ಇದು ಮಹತ್ವದ ಮಾತು. ಈ ಮಾತನ್ನು ಅವರು ವಿಸ್ತರಿಸಲಿಲ್ಲವಾದರೂ, ಸ್ವಲ್ಪ ವಿಶ್ಲೇಷಿಸಿದರೆ ಇದರ ಅರ್ಥವ್ಯಾಪ್ತಿ ಗೊತ್ತಾಗುತ್ತದೆ. ಕವಿಗೆ ಭಾಷೆ ದಿನ ನಿತ್ಯದ ಕಾರ್ಯಪ್ರವರ್ತ. ಆಡುಮಾತಿನಿಂದಲೇ ಸಿಗಬೇಕೆನ್ನುವುದು ನಿಜವಾದರೂ, ಹಲವು ಸಂದರ್ಭಗಳಲ್ಲಿ ಈ ಮಾತು ತನ್ನ ಸೂಕ್ಷ್ಮತೆಯನ್ನು ಕಳೆದುಕೊಂಡಿರುತ್ತದೆ-ಮುಖ್ಯವಾಗಿ ರಾಜಕೀಯ ಅಥವಾ ಇಂಥದೇ ಸಾರ್ವಜನಿಕ ಸದುಗದ್ದಲದ ಉಪಯೋಗದಲ್ಲಿ. ಆಗ ಇಡೀ ಭಾಷೆಯೇ ಅಪಮೌಲ್ಯಗೊಂಡ ಹಾಗೆ. ಮಾತು ಸೂಕ್ಷ್ಮಜ್ಞತೆಯನ್ನು ಕಳೆದುಕೊಳ್ಳುವುದೆಂದರೆ ಅದನ್ನು ಆಡುವವರು ಸಂವೇದನಾಶೀಲತೆಯನ್ನು ಕಳೆದುಕೊಂಡಿದ್ದಾರೆಂದೇ ಅರ್ಥ. ಮಾತಿಗೆ ಸೂಕ್ಷ್ಮಜ್ಞತೆಯನ್ನು ಮರಳಿಸುವುದರ ಮೂಲಕ ಕಾವ್ಯ ಜನರಿಗೆ ಸಂವೇದನಾಶಕ್ತಿಯನ್ನು ಮತ್ತೆ ದೊರಕಿಸಿಕೊಡುತ್ತದೆ. ಒಟ್ಟಾರೆಯಾಗಿ ಎಲ್ಲಾ ಕಲೆಗಳೂ ತಮ್ಮ ತಮ್ಮ ಬಗೆಗಳಲ್ಲಿ ಮಾಡುವುದು ಇದನ್ನೇ. ಮೊದಲ ಮಹಾಯುದ್ಧದಲ್ಲಿ ಭಾಗವಹಿಸಿ ತಾರುಣ್ಯದಲ್ಲೇ ಪ್ರಾಣ ಕಳಕೊಂಡ ಇಂಗ್ಲಿಷ್ ಕವಿ ವಿಲ್ಫ್ರೆಡ್ ಓವೆನ್ ತಾನು ಹೋರಾಡುತ್ತಿರುವುದು ಇಂಗ್ಲಿಷ್ ಭಾಷೆಗೋಸ್ಕರ ಎಂದಾಗ ಅವನ ಮನಸ್ಸಿನಲ್ಲಿದ್ದುದು ಇಂಥದೇ ಭಾವ.

ಮಾತಿನ ಸೂಕ್ಷ್ಮತೆಯ ಬಗ್ಗೆ ತುಂಬಾ ಯೋಜಿಸಿದ ಚಿಂತಕನೆಂದರೆ ಇಪ್ಪತ್ತನೆ ಶತಮಾನದ ಬಹುದೊಡ್ಡ ಜರ್ಮನ್ ತತ್ವಜ್ಞಾನಿ ಮಾರ್ಟಿನ್ ಹೈಡೆಗ್ಗರ್. ಯಾವುದೇ ವಿಷಯದ ಕುರಿತು ಜಿಜ್ಞಾಸೆ ನಡೆಸಿದರೂ ಈತ ಕೊನೆಗೂ ಭಾಷೆಯ ವಿಷಯಕ್ಕೆ ಬಂದೇ ಬರುತ್ತಾನೆ. ತತ್ವಜ್ಞಾನ ಮತ್ತು ಸಾಹಿತ್ಯ ವಿಮರ್ಶೆ-ಇವೆರಡೂ ಎಂದೂ ಭಾಷೆಯ ಪ್ರಶ್ನೆಯಿಂದ ಮುಕ್ತವಾಗಲಾರವು. ಇವು ಮಾತ್ರವೇ ಅಲ್ಲ, ಯಾವುದೇ ಜಿಜ್ಞಾಸೆಯೂ ಬಹುಬೇಗನೆ ಭಾಷೆಯ ಪ್ರಶ್ನೆಯನ್ನು ಎದುರಿಸಲೇಬೇಕಾಗುತ್ತದೆ. ಈ ಪದದ ಅರ್ಥವೇನು, ಇಲ್ಲಿ ನಾವು ಉದ್ದೇಶಿಸುವುದು ಏನನ್ನು, ಹಿಂದೆ ಇದನ್ನು ಯಾವ ರೀತಿ ಬಳಸುತ್ತಿದ್ದರು ಇತ್ಯಾದಿ ಪ್ರಶ್ನೆಗಳಿಲ್ಲದೆ ಯಾವ ಆಳವಾದ ಚರ್ಚೆಯೂ ಸಾಧ್ಯವಾಗುವುದಿಲ್ಲ. ಹೈಡೆಗ್ಗರನಂತೂ ನೇರವಾಗಿ ಭಾಷೆಯ ಕುರಿತು ಸಾಕಷ್ಟು ಜಿಜ್ಞಾಸೆ ನಡೆಸಿದ್ದಾನೆ. ಭಾಷೆಯನ್ನು ಜೀವಿತದ ಮನೆಗೆ ಹೋಲಿಸಿದವನು ಆತನೇ. ಭಾಷೆಯ ಗುಣದ ಬಗ್ಗೆ ಆತ ನೀಡಿದ ಮೂರು ಭಾಷಣಗಳಿವೆ. ಒಂದರಲ್ಲಿ ಹೈಡೆಗ್ಗರ್ ನಾವು ಭಾಷೆಯೊಂದಿಗೆ ಯಾವ ಅನುಭವವನ್ನು ಪಡಬಹುದು ಎಂದು ವಿಚಾರಿಸುತ್ತಾನೆ. ಯಾವುದೇ ಒಂದು ವಸ್ತುವಿನೊಂದಿಗೆ ಅನುಭವಕ್ಕೆ ಒಳಗಾಗುವುದೆಂದರೆ, ಆ ವಸ್ತು ನಮಗೆ ಒದಗುವುದು, ನಮ್ಮನ್ನು ಘಾತಿಸುವುದು, ನಮ್ಮ ಮೇಲೆ ಸುರಿಯುವುದು, ಹರಿದುಬರುವುದು ಮತ್ತು ಬದಲಾಯಿಸುವುದು ಎನ್ನುತ್ತಾನೆ. ಇಲ್ಲಿ ನಾವು ಏನೂ ಮಾಡುವುದಿಲ್ಲ, ಆದರೆ ನಮಗಿದು ಸಂಭವಿಸುತ್ತದೆ ಎನ್ನುವುದು ಹೈಡೆಗ್ಗರನ ಅಭಿಪ್ರಾಯ. ಆದರೆ ಸಾಧಾರಣವಾದ ಉಪಯೋಗದಲ್ಲಿ ಭಾಷೆ ತನ್ನನ್ನು ಮುಂದಕ್ಕೆ ತರುವುದಿಲ್ಲ, ಯಾಕೆಂದರೆ ಆಗ ನಮಗೆ ಹೇಳುವುದಕ್ಕೆ, ಕೇಳುವುದಕ್ಕೆ, ವಿವರಿಸುವುದಕ್ಕೆ ಇತ್ಯಾದಿ ಏನೋ ಇರುತ್ತದೆ. ಆಗೆಲ್ಲಾ ಭಾಷೆ ನೇಪಥ್ಯಕ್ಕೆ ಸರಿದಿರುತ್ತದೆ. ಹಾಗಾದರೆ, ಭಾಷೆ ಭಾಷೆಯಾಗಿ ಮಾತಾಡುವುದು ಯಾವಾಗ? ನಮಗೆ ಸಂಬಂಧಿಸಿದಂಥ, ನಮ್ಮನ್ನು ಎತ್ತಿ ಒಯ್ಯುವಂಥ, ದಮನಿಸುವಂಥ ಅಥವಾ ಉತ್ತೇಜಿಸುವಂಥ ಯಾವುದೋ ಒಂದಕ್ಕೆ ತಕ್ಕುದಾದ ಶಬ್ದ ಸಿಗದಿದ್ದಾಗ! ಆಗ ನಾವು ಮನಸ್ಸಿನಲ್ಲಿರುವುದನ್ನು ಹೇಳದೆ ಇರುತ್ತೇವೆ. ಹಾಗೂ ಅದಕ್ಕೆ ಸರಿಯಾದ ಯೋಚನೆ ನೀಡದೆ, ಭಾಷೆ ತಾನು ತನ್ನ ನಿಜ ಸತ್ವದಿಂದ ನಮ್ಮನ್ನು ದೂರದಿಂದ ಕ್ಷಣಮಾತ್ರವಾಗಿ ಒರೆಸಿಹೋಗುವ ನಿಮಿಷಗಳನ್ನು ಅನುಭವಿಸುತ್ತೇವೆ. ಕಾವ್ಯದಲ್ಲಿ ಹೀಗಾಗುತ್ತದೆ ಎಂದು ಅನೇಕ ಉದಾಹರಣೆಗಳ ಸಮೇತ ಹೈಡೆಗ್ಗರ್ ವಿವರಿಸುತ್ತಾನೆ.

ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಭಾಷೆಗೆ ಅದರ ಮೈಯೂ ಇದೆ, ಮನವೂ ಇದೆ. ಭಾಷೆಯ ಮೈ ಎಂದರೆ ಅದರ ಶಬ್ದರೂಪ; ಮನವೆಂದರೆ ಅರ್ಥರೂಪ. ಇದನ್ನೇ ‘ಶಬ್ದಾರ್ಥ’ ಎಂದು ಕವಿ ಕಾಳಿದಾಸ ಕರೆದಿರುವುದು. ಶಬ್ದಾರ್ಥಗಳು ಒಂದಕ್ಕೊಂದು ಸೇರಿಕೊಂಡು ಪರಸ್ಪರ ಬೇರ್ಪಡಿಸಲಾರದಂತೆ ಇರುತ್ತವೆ. ಆದರೂ ಹೈಡೆಗ್ಗರ್ ಹೇಳಿದಂಥ ಕೆಲವು ನಿಮಿಷಗಳಲ್ಲಿ ಅವು ನಮಗೆ ತಮ್ಮ ಒಳಪದರಗಳನ್ನು ಮಿಂಚಿನ ಗೆರೆಗಳಂತೆ ತೋರಿಸಿಬಿಟ್ಟು ಮತ್ತೆ ಮುಚ್ಚಿಕೊಳ್ಳುತ್ತವೆ. ಇದೇ ಭಾಷಾನುಭವ ಹಾಗೂ ಭಾಷೆಯ ಸೂಕ್ಷ್ಮತೆಯನ್ನು ವರ್ಧಿಸಿಕೊಳ್ಳುವ ವಿಧಾನ. ಭಾಷೆಯ ಈ ಮೈನಗಳ ಸುಳಿಯಲ್ಲಿ ಕಾವ್ಯ ನಮ್ಮನ್ನು ಒಯ್ಯಲು ತಯಾರಿರುತ್ತದೆ. ಹೀಗೆ ಒಯ್ತಕ್ಕೆ ಒಳಗಾಗುವುದು ಕಾವ್ಯ ನಮಗೆ ಒದಗಿಸಬಹುದಾದಂಥ ವಿಶಿಷ್ಟ ಅನುಭವ. ಆದರೆ ಇದಕ್ಕೆ ನಾವು ನಮ್ಮ ಯಾವುದೇ ಪ್ರತಿರೋಧಗಳನ್ನು ಕೈಬಿಡುವುದಕ್ಕೆ ತಯಾರಿರಬೇಕು; ಕೇವಲ ಶಬ್ದಕ್ಕಾಗಿ, ಅಥವಾ ಅರ್ಥಕ್ಕಾಗಿ ಓದುವುದು ಕೂಡಾ ಅಂಥ ಪ್ರತಿರೋಧವೇ ಇದ್ದೀತು.

ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯದ ಆರಂಭದ ಪುಟಗಳಲ್ಲೇ ದಶರಥ ಮಹಾರಾಜನ ರಾಜಧಾನಿ ಅಯೋಧ್ಯೆ (ಸಾಕೇತ ನಗರಿ)ಯ ವರ್ಣನೆ ಬರುತ್ತದೆ:

ದೇಶ ಕೋಸಲಮಿಹುದು ಧನ ಧಾನ್ಯ ಜನ ತುಂಬಿ
ಸರಯೂ ನದಿಯ ಮೇಲೆ. ಮೆರೆದುದು ವಿಷಯಮಧ್ಯೆ
ರಾಜಧಾನಿ ಅಯೋಧ್ಯೆ, ರಮಿಸುವಿಂದ್ರಿಯ ಸುಖದ
ನಡುವಣಾತ್ಮಾನಂದದಂತೆ. ಪೇಳೇನೆಂಬೆನಾ
ಪರ್ವಿತ್ತದರ ಜಸು, ರಾಕಾ ಶಶಾಂಕನಿಂ
ಪರ್ವಿತೆನೆ ಬೆಳ್ದಿಂಗಳೊಳ್ಪಿ ಸೊದೆಯ ಸೋನೆ,
ಲೋಕತ್ರಯಂಗಳಂ ರಚಿಸಿದನು ಮನು ತಾನೆ

ಮುಂತಾಗಿ ಈ ವರ್ಣನೆ ಮುಂದುವರಿಯುತ್ತದೆ. ನನ್ನ ಓದಿನಲ್ಲಿ ನನ್ನನ್ನು ವಿಶೇಷವಾಗಿ ಆಕರ್ಷಿಸಿದ ಹಲವು ಸಂಗತಿಗಳಲ್ಲಿ ‘ಮೆರೆದುದು ವಿಷಯಮಧ್ಯೆ’ ಎಂಬ ಪದಪುಂಜ ಒಂದು. ಇದೇನು ವಿಷಯಮಧ್ಯೆ ಎಂದರೆ? ವಿಷಯ ಎಂದರೆ ವಸ್ತು ಅಥವಾ ಸಂಗತಿ ಎಂಬ ಒಂದು ರೂಢಿಯ ಅರ್ಥ ನಮಗೆಲ್ಲ ಗೊತ್ತಿದೆ. ಆದರೆ ಈ ಪದಗುಚ್ಛದಲ್ಲಿ ಅದರ ಅರ್ಥ ಬೇರೆಯೇ. ಸ್ವಲ್ಪ ಯೋಚಿಸಿದರೆ, ‘ಕವಿರಾಜಮಾರ್ಗ’ದ ಪ್ರಥಮಪರಿಚ್ಛೇದದಲ್ಲೇ ಬರುವ ಪ್ರಸಿದ್ಧವಾದ ‘ಕಾವೇರಿಯಿಂದಮಾ’ ಪದ್ಯ ನೆನಪಾಗದಿರದು:

ಕಾವೇರಿಯಿಂದಮಾ ಗೋ
ದಾವರಿವರಮಿರ್ಪ ನಾಡದಾ ಕನ್ನಡದೊಳ್
ಭಾವಿಸಿದ ಜನಪದಂ ವಸು-
ಧಾವಲಯವಿಲೀನವಿಶದವಿಷಯವಿಶೇಷಂ

ಭಾಷಾನುಭವದ ದೃಷ್ಪಿಯಿಂದ ಈ ಕಂದಪದ್ಯ ಅತ್ಯಂತ ವಿಶಿಷ್ಟವಾದ್ದು; ಅದನ್ನಿಲ್ಲಿ ನಾನು ವಿವರಿಸುವ ಅಗತ್ಯವಿಲ್ಲ. ಆದರೆ ಬಿಡಿಬಿಡಿ ಕನ್ನಡ ಪದಗಳ ನಂತರ ಒಮ್ಮೆಲೆ ಬರುವ ‘ವಸುಧಾ-ವಲಯ-ವಿಲೀನ-ವಿಶದ-ವಿಷಯ-ವಿಶೇಷಂ’ ಎಂಬ ಸಂಸ್ಕೃತ ಸಮಾಸಪದ ಯಾರ ಮನಸ್ಸನ್ನೂ ಸೆಳೆಯದೆ ಇರಲಾರದು. ಇದರ ಅರ್ಥವೇನೆಂದು ವಿವರಿಸಹೊರಟರೆ ಕಷ್ಟವೇ! ಆದರೆ ಇಲ್ಲಿ ಬರುವ ‘ವಿಷಯವಿಶೇಷಂ’ ಎಂಬ ಪದಗುಚ್ಛದ ‘ವಿಷಯ’ಕ್ಕೆ ದೇಶ, ಪ್ರದೇಶ, ರಾಜ್ಯ ಮುಂತಾದ ಅರ್ಥ. ಇದೇ ಅರ್ಥವನ್ನೇ ನಾವು ಕುವೆಂಪುರವರ ಉದಾಹರಣೆಯಲ್ಲೂ ಕಾಣುವುದು. ಅಷ್ಟು ಮಾತ್ರವೇ ಆದರೆ ಅದರಲ್ಲೇನೂ ಸ್ವಾರಸ್ಯವಿಲ್ಲ. ವಿಷಯ ಎಂಬ ಪದಕ್ಕೆ ಭೋಗ ಎನ್ನುವ ಇನ್ನೊಂದು ಅರ್ಥವೂ ಇದೆ-‘ವಿಷಯಸುಖ’ ಎಂಬ ನುಡಿಗಟ್ಟಿನಲ್ಲಿ ನಾವೀ ಅರ್ಥವನ್ನು ನೋಡಬಹುದು. ಕುವೆಂಪು ಮುಂದಿನ ಎರಡು ಸಾಲುಗಳಲ್ಲಿ ‘ವಿಷಯ’ದ ಈ ಅರ್ಥವನ್ನೂ ಉಪಯೋಗಿಸಿಕೊಳ್ಳುತ್ತಾರೆ ಎನ್ನುವುದೇ ಇಲ್ಲಿನ ಮುಖ್ಯ ಸಂಗತಿ; ಆಗಲೇ ನಮಗೆ ‘ಮೆರೆದುದು ವಿಷಯಮಧ್ಯೆ ರಾಜಧಾನಿ ಅಯೋಧ್ಯೆ, ರಮಿಸುವಿಂದ್ರಿಯ ಸುಖದ ನಡುವಣಾತ್ಮಾನಂದದಂತೆ’ ಎಂಬುದರ ಇಡಿಯಾದ ಅರ್ಥ ಅರಿವಿಗೆ ಬರುವುದು! ರಾಜರ್ಷಿ ದಶರಥನಿಗೆ ತಕ್ಕುದಾದ ವರ್ಣನೆ ಇದು. ವಿಷಯಸುಖದ ಮಧ್ಯೆ ಇದ್ದೂ ವಿಷಯಾತೀತವಾದ ಆತ್ಮಾನಂದದಲ್ಲಿರುವಂತೆ ಆತನ ರಾಜಧಾನಿ ಇತ್ತು ಎನ್ನುವುದು ಅವನ ಗುಣವನ್ನೇ ವರ್ಣಿಸಿದಂತಾಗುತ್ತದೆ. ಇಲ್ಲಿ ಪ್ರಾಸಂಗಿಕ ಎಂಬಂತೆ ಒದಗುವ ‘ಮಧ್ಯೆ’ ಮತ್ತು ‘ಅಯೋಧ್ಯೆ’ ಎಂಬ ಪದಾಂತ್ಯ ಪ್ರಾಸವೂ ಕಾವ್ಯಗುಣ ವರ್ಧಿಸುವುದಕ್ಕೆ ಸಹಕಾರಿಯಾಗುತ್ತದೆ.

ಕುವೆಂಪು ಅವರದು ಹಳೆಗನ್ನಡ, ನಡುಗನ್ನಡ, ಹೊಸಗನ್ನಡ ಮಿಶ್ರಿತ ಶೈಲಿ. ಇದು ನಡುಗನ್ನಡದಲ್ಲಿ ನಿಂತುಕೊಂಡು ಇಡೀ ಕನ್ನಡಕಾವ್ಯದ ಇತಿಹಾಸವನ್ನು ಸಿಂಹಾವಲೋಕನದಿಂದ ನೋಡಿದ ಹಾಗೆ. ‘ಇಹುದು’ ಎನ್ನುವುದು ಹಳೆಗನ್ನಡ- ನಡುಗನ್ನಡವಾದರೆ, ‘ಸರಯೂ ನದಿಯ ಮೇಲೆ’ ಎನ್ನುವುದು ಹೊಚ್ಚ ಹೊಸ ಕನ್ನಡ. ನದಿಯ ದಡದಲ್ಲಿ ಎನ್ನುವುದಕ್ಕೆ ‘ನದಿಯ ಮೇಲೆ’ ಎನ್ನುವುದು ಇಂಗ್ಲಿಷ್, ಫ್ರೆಂಚ್ ಮುಂತಾದ ಭಾಷೆಗಳಲ್ಲಿ ಕಾಣಿಸುವ ಪ್ರಯೋಗ. ಕುವೆಂಪು ಇಂಥ ಹೊಸ ಭಾಷಾಪ್ರಯೋಗಗಳಿಗೆ ತಮ್ಮನ್ನು ತಾವು ತೆರೆದುಕೊಂಡವರು ಎನ್ನುವುದು ಸ್ಪಷ್ಟ. ಅವರು ವ್ಯಾಸ, ವಾಲ್ಮೀಕಿ ಮುಂತಾದ ದೇಶೀಯ ಕವಿಗಳ ಜತೆಜತೆಯಲ್ಲೇ ಹೋಮರ್, ಮಿಲ್ಟನ್ ಮುಂತಾದ ಪಾಶ್ಚಾತ್ಯ ಕವಿಗಳನ್ನೂ ಆರಂಭದಲ್ಲೇ ವಂದಿಸುತ್ತಾರೆ ಎನ್ನುವುದನ್ನೂ ನೆನೆದುಕೊಳ್ಳಬಹುದು. ಮುಂದೆ, ‘ಪರ್ವಿತ್ತು’ (ಹಬ್ಜಿತ್ತು) ಎನ್ನುವುದು ಶುದ್ದ ಹಳೆಗನ್ನಡ; ಅದು ‘ಪೇಳ್’ ಎಂಬ ಪದಕ್ಕೆ ಅನುಪ್ರಾಸ ಒದಗಿಸುವುದರ ಜತೆಗೇ ಕಥಾದೂರಕ್ಕೆ ಸರಿಯಾದ ಭಾಷಾದೂರವನ್ನೂ ಒದಗಿಸುತ್ತದೆ. ಅದೇ ರೀತಿ ‘ಜಸಂ’ (ಯಶಸ್ಸು) ಮತ್ತು ‘ರಾಕಾ ಶಶಾಂಕ’ (ಪೂರ್ಣಚಂದ್ರ) ಎಂಬ ಪದಗಳು ಕೂಡಾ. ರಾಕಾ ಶಶಾಂಕ ಎಂಬಲ್ಲಿನ ಒಳ ಪ್ರಾಸ ಮತ್ತು ಮೂರು ಸಲ ಬರುವ ‘ಆ’ಕಾರ ಲಯಕ್ಕೆ ಸಹಕಾರಿ. ‘ಸೊದೆಯ ಸೋನೆ’ಯ ಜತೆಯಲ್ಲಿ ‘ಮನು ತಾನೆ’ ಒದಗಿಸುವ ಪದಾಂತ ಹಾಗೂ ಚರಣಾಂತ ಪ್ರಾಸವು ಕೂಡ ಮೋಹಕವಾದುದು. ‘ಸೊದೆಯ ಸೋನೆ’ ತಾನಾಗಿಯೇ ಒಂದು ಸೊಗಸಾದ ಪದಬಂಧ. ಆದಿ ಪ್ರಾಸ (ದ್ವಿತೀಯಾಕ್ಷರ ಪ್ರಾಸ) ಮತ್ತು ಅಂತ್ಯಪ್ರಾಸಗಳನ್ನು ನಿಯಮಿತವಾಗಿ ಇಟ್ಟುಕೊಳ್ಳದ ಈ ‘ಮಹಾಛಂದಸ್ಸು’ ಅನುಪ್ರಾಸ ಮತ್ತು ಪದಾಂತ ಪ್ರಾಸಗಳನ್ನು ಅಲ್ಲಲ್ಲಿ ಹಿತಮಿತವಾಗಿ ಬಳಸುತ್ತಿರುವುದು ಗಮನಾರ್ಹ. ಸೂಕ್ಷ್ಮವಾಗಿ ನೋಡಿದರೆ, ಇಂಥ ಇನ್ನೆಷ್ಟೋ ರೀತಿಯ ಭಾಷಾವಿಲಾಸಗಳನ್ನು ನಾವಿಲ್ಲಿ ಕಾಣಬಹುದು.

ಇದೇ ನಗರವನ್ನು ವರ್ಣಿಸುತ್ತ, ‘ತವರೂರೆನಿಸಿ ಸಿರಿಗೆ ಬಿಜ್ಜೆಗೆ ಕಲೆಗೆ ಬೀರಕಾ ಪತ್ತನಂ’ ಎಂಬ ಮಾತುಗಳು ಬರುತ್ತವೆ. ಇಲ್ಲಿ ‘ಬೀರಕಾ’ (ಬೀರಕೆ ಆ) ಎಂಬಲ್ಲಿನ ‘ಬೀರ’ (ವೀರ) ಎಂಬ ಪದಪ್ರಯೋಗ ವಿಶಿಷ್ಟವಾದ್ದು. ಸಂಪತ್ತಿಗೆ, ವಿದ್ಯೆಗೆ, ಕಲೆಗೆ, ವೀರತೆಗೆ ಆ ಪಟ್ಟಣ ತವರೂರೆನಿಸಿ-ಎನ್ನುವುದು ಕವಿತೆಯ ಸಾರ. ಆದರೆ ವೀರತೆ ಅಥವಾ ಶೌರ್ಯಕ್ಕೆ ವೀರ ಎನ್ನುವುದೊಂದು ಅಪರೂಪದ ಪದಪ್ರಯೋಗವೇ ಸರಿ. ಆದರೆ ಅಷ್ಟು ಅಪರೂಪವೂ ಅಲ್ಲ! ‘ಅರಸುಗಳಿಗಿದು ವೀರ, ದ್ವಿಜರಿಗೆ ಪರಮವೇದದ ಸಾರ, ಯೋಗೀಶ್ವರರ ತತ್ವವಿಚಾರ’ ಎಂಬ ಕುಮಾರವ್ಯಾಸ ಭಾರತದ ಮೊದಲ ಸಂಧಿಯ ಪದ್ಯದಲ್ಲಿ ಇದೇ ರೀತಿಯ ಪ್ರಯೋಗ ಬರುತ್ತದೆ. ಕುಮಾರವ್ಯಾಸ ‘ವೀರ’ ಎಂಬ ಪದವನ್ನು ‘ಸಾರ,’ ’ತತ್ವವಿಚಾರ’ ಎಂಬಿತ್ಯಾದಿ ಇತರ ಪದಗಳಿಗೆ ಪದಾಂತ ಪ್ರಾಸ ಒದಗಿಸಲು ಉಪಯೋಗಿಸಿದರೆ, ಕುವೆಂಪುರವರು ಐದು ಮಾತ್ರೆಗಳ ಗಣಗಳಿಗೋಸ್ಕರ ಅದನ್ನು ಉಪಯೋಗಿಸುತ್ತಾರೆ. ಆದರೆ ಕೇವಲ ಪ್ರಾಸಕ್ಕಾಗಿ ಈ ಕವಿಗಳು ಹೀಗೆ ಮಾಡುತ್ತಾರೆ ಎಂದು ತಿಳಿಯಬಾರದು; ಇಲ್ಲಿ ಭಾಷೆಯ ಹೊರ ಮೈ ಮತ್ತು ಒಳ ಮನಸ್ಸು ಪರಸ್ಪರ ಹೊಂದಿಕೊಂಡೇ ಕೆಲಸ ಮಾಡುತ್ತಿವೆ. ಮುಂದೆ ಹೋದರೆ, ‘ಮನೆಗಳಿಂದರಮನೆಗಳಿಂದಾಪಣಗಳಿಂದೆ’ ಎಂಬ ಇಡಿಯಾದ ಒಂದು ಸಾಲು ಸಿಗುತ್ತದೆ. ಇಲ್ಲಿ ನಮ್ಮ ಹಿಂದಣ ಕವಿಗಳಿಗೆ ಪ್ರಿಯವಾಗಿದ್ದ ಪದದೊಳಗೆ ಪದ ಎಂಬ ‘ಮನೆಗಳಿಂದರಮನೆಗಳಿಂ’ (ಇಲ್ಲಿ ಮಾತ್ರ ಅದು ತಿರುಗಾಮುರುಗಾ ಆಗಿದೆ) ಪ್ರಯೋಗ ಮಾತ್ರವಲ್ಲದೆ, ಹಿಂದಿನ ಪದಗಳ ಜತೆ ಲಯಬದ್ಧವಾಗಿ ಕೂತುಕೊಳ್ಳುವ, ಈಗ ರೂಢಿಯಲ್ಲಿಲ್ಲದ, ‘ಆಪಣ’ (ಅಂಗಡಿ) ಎಂಬ ಹಳೆಗನ್ನಡ ಪದವೂ ಬರುತ್ತದೆ. ನಗರವರ್ಣನೆಯ ಭಾಗಕ್ಕೆ ಕುವೆಂಪು ಅವರು ಲಕ್ಷೀಶ ಕವಿಯ ಪುರವರ್ಣನೆಗಳನ್ನು ನೆನಪಿಸುವ ವಾರ್ಧಕ ಷಟ್ಪದಿಯ ಚರಣಗಳನ್ನು ಉಪಯೋಗಿಸುತ್ತಾರೆ ಎನ್ನುವುದು ಕುತೂಹಲದ ವಿಷಯ. ಇದು ಅವರು ಹಿರಿಯ ಕವಿಯ ಕಾವ್ಯ‌ಋಣಕ್ಕೆ ವಂದಿಸುವ ವಿಧಾನವೂ ಆಗಿರಬಹುದು. ಈ ಎಲ್ಲಾ ಸಂಗತಿಗಳನ್ನೂ ಗಮನಿಸಿದರೆ, ಕುವೆಂಪು ಕಾವ್ಯರಚನೆಯನ್ನು ಎಷ್ಟೊಂದು ಹೃದ್ಯತೆ ಮತ್ತು ಆರ್ದತೆಯಿಂದ ತೆಗೆದುಕೊಂಡಿದ್ದರು ಎನ್ನುವುದು ಗೊತ್ತಾಗುತ್ತದೆ.

ಇಲ್ಲಿ ನಾನು ಎತ್ತಿಕೊಂಡಿರುವ ‘ಶ್ರೀ ರಾಮಾಯಣ ದರ್ಶನಂ’ ಕಾವ್ಯಭಾಗ ನಿರುದ್ದಿಷ್ಟವಾಗಿ ಮಾತ್ರ. ಇಡೀ ಕಾವ್ಯವನ್ನು ಆಳವಾಗಿ ಅಧ್ಯಯನ ಮಾಡಿದರೆ ಇಂಥ ಇನ್ನೆಷ್ಟೋ ಹೊಳಹುಗಳು ಓದುಗರಿಗೆ ಸಿಗಬಹುದು. ಕನ್ನಡದ ಕಾವ್ಯಪರಂಪರೆಯೇ ಈ ರೀತಿಯ ಭಾಷಾನುಭವ ನೀಡುವಂಥದು. ಆದ್ದರಿಂದ ನಮ್ಮದೇ ಭಾಷಾಸೂಕ್ಷ್ಮತೆಯನ್ನು ಅಭಿವೃದ್ದಿಗೊಳಿಸುವುದಕ್ಕೆ ಈ ಕಾವ್ಯಗಳ ಅಭ್ಯಾಸವೂ ಸಹಕಾರಿ. ಕೆಲವು ವರ್ಥಗಳ ಹಿಂದೆ ಇಂಥ ಮೂಲಕಾವ್ಯಗಳೇ ಜನರ ಕೈಗೆ ಸಿಗುವುದು ಅಪರೂಪವಾಗಿದ್ದುವು. ಈಗ ಪುಸ್ತಕಗಳ ಕೊರತೆ ಇರಲಾರದು. ಆದರೆ ಪುಸ್ತಕಗಳಷ್ಟೇ ಸಾಲದು. ಅವುಗಳಲ್ಲೇನಿದೆ ಎಂದು ಓದಿ ತಿಳಿದುಕೊಂಡು ಇತರರಿಗೂ ಅರುಹುವ ಜನ ಬೇಕು. ಹಿಂದೆ ಶಾಲೆಕಾಲೇಜುಗಳಲ್ಲಿ ಕಲಿಸುವ ಪಂಡಿತರು ಈ ಕೆಲಸ ಮಾಡುತ್ತಿದ್ದರು. ಈಗ ಅಂಥವರು ವಿದ್ಯಾಭ್ಯಾಸ ರಂಗದಿಂದ ದೂರವಾಗಿದ್ದಾರೆ. ಈಗ ಪಠ್ಯ ಬಿಟ್ಟು ಇನ್ನೇನೇನೋ ಹೇಳುವವರೇ ಜಾಸ್ತಿ. ಆದರೆ ಪಠ್ಯವನ್ನು ಆಳವಾಗಿಯೂ ತೌಲನಿಕವಾಗಿಯೂ ಓದಿದಾಗ ದೊರೆಯುವ ಸ್ವಾರಸ್ಯವೇ ಬೇರೆ. ಭಾಷೆಯ ಸೂಕ್ಷ್ಮತೆ ನಮಗೆ ದಕ್ಕಬೇಕಾದರೆ ನಾವು ಆದಷ್ಟೂ ಪಠ್ಯಕ್ಕೆ ಹತ್ತಿರವಾಗಿ ಓದುವುದನ್ನು ಕಲಿತುಕೊಳ್ಳಬೇಕು. ಇದು ಸಾಧ್ಯವಾಗಬೇಕಾದರೆ ಆಧುನಿಕ ಸಮಾಜ ಮೂಲೆಗೊತ್ತಿರುವ ‘ಪಂಡಿತ ಪರಂಪರೆ’ಯನ್ನು ಮತ್ತೆ ಹೊಸ ರೀತಿಯಲ್ಲಿ ಪುನರುಜ್ಜೀವನಗೊಳಿಸುವುದು ಅಗತ್ಯ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಮನ
Next post ಭವ್ಯ ಭಾರತ ಭೂಮಿ

ಸಣ್ಣ ಕತೆ

 • ಒಂದು ಹಿಡಿ ಪ್ರೀತಿ

  ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

 • ಕಲಾವಿದ

  "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

 • ವಲಯ

  ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

 • ದಿನಚರಿಯ ಪುಟದಿಂದ

  ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

 • ಮೋಟರ ಮಹಮ್ಮದ

  ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

cheap jordans|wholesale air max|wholesale jordans|wholesale jewelry|wholesale jerseys