ಕೂಡಲ ಸಂಗಮದೇವನ ಕನ್ನಡ

ಕೂಡಲ ಸಂಗಮದೇವನ ಕನ್ನಡ

ಭಾಷೆ ಬಹಳ ಹಗುರಾದ ಸಾಧನವಾದ್ದರಿಂದ ಅದರ ಪ್ರಶ್ನೆ ಬಂದಾಗಲೆಲ್ಲ ಅದನ್ನು ನಾವು ಏನುಬೇಕಾದರೂ ಮಾಡಬಹುದು ಎಂದು ತಿಳಿಯುತ್ತೇವೆ. ಅದು ಸಾಧ್ಯವಿಲ್ಲ ಅನಿಸಿದಾಗ ಯಾರು ಯಾರನ್ನೋ ದೂರುತ್ತೇವೆ. ಫರ್ಡಿನಾಂಡ್ ದ ಸಸ್ಸ್ಯೂರ್ ತನ್ನ A Course in General Linguisticsನಲ್ಲಿ ಒಂದು ಮಾತು ಹೇಳುತ್ತಾನೆ: ಭಾಷೆಯ ಸಂಜ್ಞಾವ್ಯವಸ್ಥೆ ಕಾರಣರಹಿತವಾದ್ದರಿಂದ (arbitrary) ಅದನ್ನು ಯಾರು ಯಾವಾಗ ಬೇಕಾದರೂ ಸುಲಭವಾಗಿ ಮಾರ್ಪಡಿಸಿಕೊಳ್ಳಬಹುದು; ಆದರೆ ಈ ವ್ಯವಸ್ಥೆ ಯಾವೊಬ್ಬ ವ್ಯಕ್ತಿಯದೂ ಆಗಿರದೆ ಇಡೀ ಜನಪದಕ್ಕೆ ಸೇರಿದ್ದಾದ್ದರಿ೦ದ, ಯಾರೊಬ್ಬನ ಹಸ್ತಕ್ಷೇಪಕ್ಕೂ ಅದು ಬದಲಾಗುವುದಿಲ್ಲ. ಇದು ಸಮಕಾಲಕ್ಕೆ ಸಂಬಂಧಿಸಿದ ಮಾತು. ಆದರೆ ಲಂಬಕಾಲಕ್ಕೆ ಸಂಬಂಧಿಸಿ ಹೇಳುವುದಾದರೆ ಬದಲಾಗದ ಜೀವಂತ ಭಾಷೆ ಯಾವುದೂ ಇಲ್ಲ. ಸಸ್ಸ್ಯೂರ್ ಇದನ್ನೂ ಗಣನೆಗೆ ತೆಗೆದುಕೊಳ್ಳುತ್ತಾನೆ: ಭಾಷೆ ತನ್ನಿಂತಾನೇ ಎಂಬಂತೆ ಕಾಲದಿಂದ ಕಾಲಕ್ಕೆ ಬದಲಾಗುತ್ತಲೇ ಇರುತ್ತದೆ ಎನ್ನುವುದನ್ನು ಗುರುತಿಸುತ್ತಾನೆ. ಆದರೆ ಯಾರು ಯಾವಾಗ ಬೇಕಾದರೂ ಬದಲಾಯಿಸಬಹುದು ಎಂಬ ಈ ನಿಸಹಾಯಕ ಗುಣವೇ ಭಾಷೆಯ ಸ್ಥಿತಿಸ್ಥಾಪಕ ಗುಣವೂ ಹೌದು ಎಂಬುದು ಸಸ್ಸ್ಯೂರನ ಮತ.

ಈ ಮಾತಿನ ತಿರುಳನ್ನು ಅರಿಯದ ಕೆಲವು ಮೂಲಭೂತವಾದಿಗಳು ಇಂದು ರಾಜಕೀಯ ಕಾರಣಕ್ಕಾಗಿ ಮೂಲ ಕನ್ನಡ ಅಚ್ಚಗನ್ನಡವೆಂಬ ಕಟ್ಟರ್‌ವಾದೀ ಕಲ್ಪನೆಯೊಂದನ್ನು ಆಯುಧದಂತೆ ಝಳಪಿಸಲಿಕ್ಕೆ ಹತ್ತಿದ್ದಾರೆ. ಈ ಆಯುಧಕ್ಕೆ ಈಟಿಯಂತೆ ಒಂದೇ ಮೊನೆ: ಅದೆಂದರೆ ಸಂಸ್ಕೃತದ್ವೇಷ. ಈ ದ್ವೇಷವನ್ನು ಅವರು ಹುಟ್ಟುಹಾಕಿದ್ದೇನೂ ಅಲ್ಲ; ಚಾರಿತ್ರಿಕವಾಗಿ ಜನಸಾಮಾನ್ಯರಲ್ಲಿ ಬೇರೂರಿರುವ ಮನೋಭಾವ ಅದು. ಇದರ ಹಿಂದಿರುವ ಸಂಕೀರ್ಣವಾದ ವರ್ಣ, ವರ್ಗ, ಜಾತಿ, ಅರ್ಥ, ಶಿಕ್ಷಣ, ಸಂಸ್ಕೃತಿ ಕುರಿತಾದ ಭಿನ್ನತೆಗಳು ಮತ್ತು ಅನ್ಯಾಯಗಳು ಎಲ್ಲರಿಗೂ ಗೊತ್ತಿರುವ ವಿಷಯವಾದ್ದರಿಂದ ಇಲ್ಲಿ ವಿವರಿಸಬೇಕಾದ್ದಿಲ್ಲ. ಪ್ರಜಾಪ್ರಭುತ್ವದಲ್ಲಿ ಇಂಥ ಭಿನ್ನತೆಗಳೂ ಅವಕ್ಕೆ ಸಂಬಂಧಿಸಿದ ಅನ್ಯಾಯಗಳೂ ಮಾಯವಾಗುತ್ತವೆ ಎಂದು ತಿಳಿದುಕೊಂಡದ್ದು ಆಗಲೇ ಇಲ್ಲ. ಇದಕ್ಕೆ ಸಂಸ್ಕೃತವನ್ನು ‘ಫಾಲ್ ಗೈ’ (Fall Guy ‘ಪೆಟ್ಟು ತಿನ್ನಲಿಕ್ಕೆ ನಿಯುಕ್ತನಾದವನು’) ಮಾಡುವುದು ಕನ್ನಡ ಹಾಗೂ ಕನ್ನಡಿಗರ ಮಟ್ಟಿಗೆ ಆತ್ಮಘಾತುಕವಾಗುತ್ತದೆ.

ಈ ಮೂಲ ಕನ್ನಡದ ಕಲ್ಪನೆ ಕನ್ನಡ ಕಾವ್ಯಕ್ಕೆ ಸಂಬಂಧಿಸಿದಂತೆ ಸರಿಯಲ್ಲ ಎನ್ನುವುದನ್ನು ನೃಪತುಂಗ ಬಹಳ ಹಿಂದೆಯೇ ಹೇಳಿದ. ಅದೇ ರೀತಿ ಅತಿಯಾದ ಸಂಸ್ಕೃತದ ಮೋಹವನ್ನೂ ಅವನು ತಿರಸ್ಕರಿಸಿದ. ಮೂಲ ಕನ್ನಡ ಎಂಬುದು ಅವನ ಕಾಲಕ್ಕೇ ಹಳೆಗನ್ನಡವೆನಿಸಿತ್ತು ಎನ್ನುವುದನ್ನು ಗಮನಿಸಿದರೆ ಕನ್ನಡ ಮತ್ತು ಸಂಸ್ಕೃತದ ಸಂಪರ್ಕ ಅದೆಷ್ಟು ಪುರಾತನವಾದುದು ಎನ್ನುವುದು ಗೊತ್ತಾಗುತ್ತದೆ. ಅವನ ಕಾಲಕ್ಕೇ ಕನ್ನಡದಲ್ಲಿ ಸಂಸ್ಕೃತ ಸಾಕಷ್ಟು ಬೆರೆತುಹೋಗಿ ಕನ್ನಡದ ಅಸ್ಮಿತೆ ರೂಪುಗೊಂಡಿತ್ತು. ಸಂಸ್ಕೃತ ಮತ್ತು ಕನ್ನಡದ ಪದಗಳನ್ನು ಹದವಾಗಿ ಬೆರೆಸಿಕೊಳ್ಳಬೇಕು ಎಂದು ಅವನು ಸಲಹೆ ನೀಡಿದಾಗ ಈ ಬದಲಾದ ಕನ್ನಡದ ಅಸ್ಮಿತೆಯೇ ಅವನ ಮನಸ್ಸಿನಲ್ಲಿದ್ದುದು ಎಂದು ನಾವು ತಿಳಿಯಬೇಕಾಗುತ್ತದೆ. ನೃಪತುಂಗನ ಈ ಸಲಹೆಯನ್ನು ಸಾಧಾರಣವಾಗಿ ಕನ್ನಡದ ಕವಿಗಳೆಲ್ಲಾ ಸ್ವೀಕರಿಸಿಕೊಂಡು ಬಂದಿದ್ದರೂ (ಕುಮಾರವ್ಯಾಸ ಮರಾಠಿ ಪದಗಳನ್ನು ಸಹಾ ಹದವಾಗಿ ಉಪಯೋಗಿಸಿಕೊಳ್ಳುತ್ತಾನೆ), ಮೂಲ ಕನ್ನಡದ ಕುರಿತಾದ ರಾಷ್ಟ್ರೀಯತೆ (nationalism) ಹಾಗೂ ಸಂಸ್ಕೃತದ ಕುರಿತಾದ ಝೆನೊಫೋಬಿಯಾ (Xenophobia ‘ಪರದ್ವೇಷ’) ಕನ್ನಡ ನೆಲದಿಂದ ಎಂದೂ ಸಂಪೂರ್ಣವಾಗಿ ಮಾಯವಾದ್ದಿಲ್ಲ; ಬಹುಶಃ ಆಗುವುದೂ ಇಲ್ಲ.

ಇಂದು ಈ ಉಗ್ರವಾದ ಕಟ್ಟರ್‌ವಾದ ಸಂಸ್ಕೃತ ಪದಗಳನ್ನು ಕಿತ್ತುಹಾಕಬೇಕು, ಇಲ್ಲವೇ ಕನ್ನಡೀಕರಿಸಬೇಕು, ಕನ್ನಡ ವರ್ಣಮಾಲೆಯಿಂದ ಸಂಸ್ಕೃತಮೂಲದ ಅಕ್ಷರಗಳನ್ನು ತೆಗೆದುಹಾಕಬೇಕು ಅರ್ಥಾತ್ ಆಡುವಂತೆಯೇ ಬರೆಯಬೇಕು ಎಂದು ಮುಂತಾದ ಘೋಷಣೆಗಳ ರೂಪದಲ್ಲಿ ತಲೆಯೆತ್ತಿದೆ. ಸಂಸ್ಕೃತದ ಬಗೆಗಿನ ಅತಿಮೋಹ ಇನ್ನೂ ಕೆಲವು ಕನ್ನಡಿಗರಲ್ಲಿ ಇದೆಯೆನ್ನುವಮಟ್ಪಗೆ ಈ ಘೋಷಣೆಗಳಿಗೊಂದು ಕಾರಣ ಕಲ್ಪಿಸಬಹುದಾದರೂ, ಕನ್ನಡದ ಸಮಗ್ರ ಅಭಿವೃದ್ಧಿಯ ದೃಷ್ಪಿಯಿಂದ ಇದು ಅನಪೇಕ್ಷಣೀಯ ವಿದ್ಯಮಾನ. ಕನ್ನಡವನ್ನು ಜಾಗತಿಕ ಮಟ್ಟದಲ್ಲಿ ಬೆಳೆಸಬೇಕಾದ ನಾವು ಮೂಗಿನ ಮೇಲಿನ ಸಿಟ್ಟಿನಿಂದ ಮುಖವನ್ನೇ ಕೆಡಿಸಿದಂತೆ ಅದರ ಅ೦ಗಾ೦ಗಳನ್ನು ಕಡಿಯಲು ಹೊರಟಿರುವುದು ವಿಪರ್ಯಾಸದ ಸಂಗತಿ. ಯಾವುದೇ ಕಾರಣಕ್ಕಾಗಲಿ ಸಂಸ್ಕೃತದ್ವೇಷವನ್ನು ನಾವು ಇನ್ನೆಷ್ಟು ಶತಮಾನಗಳ ಕಾಲ ಹೊತ್ತುಕೊಂಡು ತಿರುಗುವುದು? ಝೆನೊಫೋಬಿಯಾ ಸಂಸ್ಕೃತಿಯನ್ನು ನಿಂತ ನೀರಾಗಿಸುತ್ತದೆಯಲ್ಲದೆ ಬೆಳೆಯಲು ಬಿಡುವುದಿಲ್ಲ ಎನ್ನುವುದಕ್ಕೆ ನಮ್ಮ ನೆರೆ ದೇಶವಾದ ಟಿಬೆಟ್‌ನ ಇತಿಹಾಸವೇ ಒಂದು ಜೀವಂತ ಸಾಕ್ಷಿ.

ದ್ವೇಷಿಸಬೇಕಾದ್ದು ಭಾಷೆಯನ್ನಲ್ಲ; ಅನ್ಯಾಯವನ್ನು ಮಾತ್ರ. ಜರ್ಮನಿಯ ನಾಝಿಗಳು ಭಾಷೆ ಮತ್ತು ಜನಾಂಗದ ಹೆಸರಲ್ಲಿ ಯೆಹೂದ್ಯರ ಮಾರಣಹೋಮ ಮಾಡಿದರು. ಜರ್ಮನ್ ಭಾಷೆಯಲ್ಲಿ ಬರೆಯುತ್ತಿದ್ದ ಅದೆಷ್ಟೋ ಜರ್ಮನ್-ಯೆಹೂದಿ ಲೇಖರಿಗೆ ತಮ್ಮ ಬಾಯಿಯಿಂದ ಭಾಷೆಯನ್ನೇ ಕಿತ್ತುಕೊಂಡ ಅನುಭವವಾಯಿತು. ಆದರೆ ಈ ಕಾರಣಕ್ಕೆ ಯೆಹೂದ್ಯರು ‘ಜರ್ಮನ್ ಭಾಷೆ’ಯನ್ನು ದ್ವೇಷಿಸುವುದೇ? ಈ ಮಾತು ವ್ಯಕ್ತಿಗಳಿಗೆ ಸಂಬಂಧಿಸಿದಂತೆಯೂ ಸತ್ಯ: ಫ್ರೆಡರಿಕ್ ನೀತ್ಸೆ ನಾಝಿಗಳಿಗೆ ಪ್ರೇರಣೆಯಾದ ಅತಿಮಾನವ ಕಲ್ಪನೆಯನ್ನು ಸೃಷ್ಪಿಸಿದವ; ಹೈಡೆಗ್ಗರ್ ನಾಝಿಸಮಿನಲ್ಲಿ ಒಲವು ತೋರಿದವ; ಎಝ್ರಾ ಪೌಂಡ್ ದ್ವಿತೀಯ ಮಹಾಯುದ್ಧದಲ್ಲಿ ಆಕ್ಸಿಸ್ ಬಣವನ್ನು ಬೆಂಬಲಿಸಿದ-ಯೆಹೂದಿ ವಿರೋಧಿ ವರ್ಣದ್ವೇಷವೂ ಅವನ ಬರಹಗಳಲ್ಲಿದೆ; ಪ್ರಸಿದ್ಧ ನಿರಚನ ವಿಮರ್ಶಕ ಪಾಲ್ ದ ಮನ್ ಕೂಡಾ ಒಂದು ಕಾಲದಲ್ಲಿ ನಾಝಿಸಮಿಗೆ ಪರವಾಗಿ ಪತ್ರಿಕಾಲೇಖನಗಳನ್ನು ಬರೆಯುತ್ತಿದ್ದ: ರಾಘವಾಂಕನ ಹರಿಶ್ಚಂದ್ರಕಾವ್ಯ ಹೊಲೆಯರ ಕುರಿತು, ಕಪ್ಪು ಮೈಬಣ್ಣದ ಕುರಿತು ಮೇಲ್ವರ್ಗದವರ ಪೂರ್ವಾಗ್ರಗಳನ್ನೇ ಅನುಮೋದಿಸುವಂತಿರುವುದು ಎಲ್ಲರಿಗೂ ಗೊತ್ತಿರುವ ಸ೦ಗತಿ. ಈ ಕಾರಣಕ್ಕೆ ನಾವಿವರನ್ನೆಲ್ಲ ಸಾರಾಸಗಟಾಗಿ ತಿರಸ್ಕರಿಸಬೇಕೇ ಅಥವಾ ನಮಗೆ ಅಸಹ್ಯವಾದ್ದನ್ನು ಹೊರತುಪಡಿಸಿ ಉಳಿದದ್ದನ್ನು ಸ್ಥೀಕರಿಸಬೇಕೇ? ಹೀಗೆ ಒಂದೊಂದು ಕಾರಣಕ್ಕೆ ಒಂದೊಂದು ಭಾಷೆಯನ್ನಾಗಲಿ ಒಬ್ಬೊಬ್ಬ ಲೇಖಕರನ್ನಾಗಲಿ ತಿರಸ್ಕರಿಸುತ್ತ ಹೋದರೆ ಕೊನೆಗೆ ನಮಗೆ ‘ಶುದ್ಧ’ವಾಗಿ ದಕ್ಕುವುದು ಸೊನ್ನೆ ಮಾತ್ರವೇ. ಅಷ್ಟಕ್ಕೂ ನಾನು ವೈಯಕ್ತಿಕವಾಗಿ ಸಂಸ್ಕೃತಾಭಿಮಾನಿಯೇನೂ ಅಲ್ಲ. ವಾಸ್ತವದಲ್ಲಿ ನನಗೆ ಸಂಸ್ಕೃತ ಗೊತ್ತೂ ಇಲ್ಲ. ಕನ್ನಡ ಮತ್ತು ಸಂಸ್ಕೃತದ ಆಯ್ಕೆ ಶಾಲಾವಿಧ್ಯಾಭ್ಯಾಸದಲ್ಲಿ ಬಂದಾಗ ನಾನು ಕನ್ನಡವನ್ನೇ ಆರಿಸಿಕೊಂಡವನು. ಸ್ವಲ್ಪವಾದರೂ ಸಂಸ್ಕೃತ ಶ್ಲೋಕಗಳನ್ನೋ ವಾಕ್ಯಗಳನ್ನೋ ಇಂದು ಅರ್ಥಮಾಡಿಕೊಳ್ಳಬಲ್ಲೆನಾದರೆ ಅದು ನನಗೆ ದೊರೆತ ಕನ್ನಡ ಶಿಕ್ಷಣದ ತಳಹದಿಯ ಮೇಲೆ. ಒಬ್ಬ ಭಾಷಾವಿಜ್ಞಾನಿಯಾಗಿ ನನಗೆ ಎಲ್ಲಾ ಭಾಷೆಗಳೂ ಒಂದೇ. ಆದರೆ ಒಬ್ಬ ಕನ್ನಡಿಗನಾಗಿ ಕನ್ನಡದ ಮೇಲೆ ಸ್ವಲ್ಪ ಪ್ರೀತಿ ಹೆಚ್ಚು ಅದೇ ಕಾರಣಕ್ಕೆ ನನಗೆ ಸಂಸ್ಕೃತದಲ್ಲಿ ಆಸಕ್ತಿ. ಯಾಕೆಂದರೆ ಸಂಸ್ಕೃತ ಭಾಷೆ ಮತ್ತು ಸಾಹಿತ್ಯದಿಂದ ಕನ್ನಡ ಪಡೆದುಕೊಳ್ಳುವುದು ಇನ್ನೂ ಇದೆಯೆಂದು ನನಗೆ ಅನಿಸುತ್ತದೆ. ಸಂಸ್ಕೃತ ಮತ್ತು ಕನ್ನಡದ ಸಂಬಂಧ ನಾವು ಹೇಗೆ ತೆಗೆದುಕೊಳ್ಳುವೆವೋ ಹಾಗೆ: ಸಂಸ್ಕೃತವನ್ನು ನಾವು ಕನ್ನಡದ ವೈರಿಯೆಂದು ತೆಗೆದುಕೊಂಡಷ್ಟೂ ಕಾಲ ನಮಗದರಿಂದ ಹಾನಿಯಲ್ಲದೆ ಒಳಿತಿಲ್ಲ; ಅದನ್ನೊಂದು ಸಂಪನ್ಮೂಲವೆಂದು ತಿಳಿದುಕೊಂಡರೆ ಅದರಿಂದ ನಮಗೆ ಸಾಕಷ್ಟು ಲಾಭವಿದೆ. ಈ ಆಯ್ಕೆ ಎಲ್ಲಾ ಕನ್ನಡಿಗರಿಗೂ ಸಿಗಬೇಕು ಎನ್ನುವುದು ಮುಖ್ಯ. ನೃಪತುಂಗ ಕೇವಲ ಕನ್ನಡ ಸಂಸ್ಕೃತಗಳ ಸಮನ್ವಯದ ಬಗ್ಗೆ ಮಾತ್ರ ನಡಿದವನಲ್ಲ, ಮಾರ್ಗ ದೇಸಿಗಳ ಸಮಾಗಮದ ಬಗ್ಗೆಯೂ ಹೇಳಿದ; ಇದು ಅವನ ಸಮತೋಲ ಮನಸ್ಸಿಗೆ ಉದಾಹರಣೆ. ಕನ್ನಡಿಗರಾದ ನಾವು ನೃಪತುಂಗನ ಅನುಯಾಯಿಗಳು.

ಸಂಸ್ಕೃತದಿಂದ ಕನ್ನಡಕ್ಕೆ ಆದರೆ ಕನ್ನಡದ ತಥಾಕಥಿತ ಸಂಸ್ಕೃತೀಕರಣದಿಂದ ಆಗಿದೆಯೆನ್ನಲಾಗುವ ‘ಅನ್ಯಾಯ’ವನ್ನು ಸರಿಪಡಿಸಬೇಕೆನ್ನುವವರು ಈಗಾಗಲೇ ಅವಕಾಶವಂಚಿತರಾದ ಮಂದಿಗೆ ಇಮ್ಮಡಿ ಅನ್ಯಾಯ ಮಾಡುತ್ತಿದ್ದಾರೆ; ಇದು ಒಂದೋ ಅತಿರೇಕ, ಇಲ್ಲವೇ ಬ್ಯಾಡ್ ಫೈತ್: ಬ್ಯಾಡ್ ಫೈತೇ ಆಗಿದ್ದರೆ ಅದೊಂದು ದುರ್ದೈವವೇ ಸರಿ; ಯಾಕೆಂದರೆ, ಬ್ಯಾಡ್ ಫೈತ್ ಎಂದರೆ ಅದೊಂದು ನಯವ೦ಚನೆ, ಇನ್ನೊಬ್ಬರನ್ನು ಮೆಚ್ಚಿಸಲು, ಆದರೆ ಸುಳ್ಳಾಗಿ, ನಡಕೊಳ್ಳುವ ವರ್ತನೆಗೆ ಜಾನ್ ಪಾಲ್ ಸಾರ್ತೄ ಇರಿಸಿದ ಹೆಸರು. ಯಾಕೆಂದರೆ ಈ ‘ಸರಿಪಡಿಸುವ’ ಮುಂದಾಳುಗಳು ಯಾರೂ ತಮಗೆ ಸಂಸ್ಕೃತದಿಂದ ಹಾಗೂ (ಇಲ್ಲವೇ) ‘ಅನ್ಯಾಯ’ಕ್ಕೆ ಒಳಗಾದ ‘ಸಾಂಪ್ರದಾಯಿಕ’ ಕನ್ನಡದಿಂದ ಒದಗಿದ ಸವಲತ್ತುಗಳನ್ನು ಬೇಡವೆಂದು ನಿರಾಕರಿಸಿದವರಲ್ಲ; ಬದಲಿಗೆ ಇವುಗಳ ಮೇಲಿಂದಲೇ ದೇಶವಿದೇಶಗಳನ್ನು ಸುತ್ತಿ ಬುದ್ಧಿ ಜೀವಿಗಳೂ, ವಿದ್ವಾಂಸರೂ ಎನಿಸಿ ಜನಮನ್ನಣೆ ಪಡೆದವರು. ಈಗ ಇಂಥವರು ಇಡೀ ಜನಪದದ ಭವಿಷ್ಯದ ಜತೆ ಆಟವಾಡಲು ತಯಾರಾಗಿರುವುದು ಒಂದು ರೀತಿಯ ಸಿನಿಕತನವೂ ಆಗುತ್ತದೆ.

ಇಂದು ನಮಗೆ ಬೇಕಾಗಿರುವುದು ವಿಸ್ತರಣೆಯಲ್ಲದೆ ಸಂಕುಚಿತತೆಯಲ್ಲ. ಕನ್ನಡಕ್ಕೆ ಮಾತ್ರವಲ್ಲ ಜಗತ್ತಿಗೂ ಬೇಕಾಗಿರುವ ವಿಷಯಗಳ ಬಗ್ಗೆ ಕನ್ನಡದಲ್ಲಿ ಬರೆಯುವುದು, ಓದುವುದು ಸಾಧ್ಯವಾಗಬೇಕು. ಒಮ್ಮೆ ಕಣ್ಣುತೆರೆದು ನೋಡಿ: ನಮ್ಮಲ್ಲಿ ಸೋಪಜ್ಞ ಚಿಂತನೆಯ ಕೃತಿಗಳು ಬರುತ್ತಿವೆಯೇ? ಬರದಿರುವುದಕ್ಕೆ ಸಂಸ್ಕೃತಮೋಹ ಕಾರಣವೇ ಅಥವಾ ಕನ್ನಡದ ಮಂದಿ ಪ್ರಯತ್ನಿಸದೆ ಇರುವುದು ಕಾರಣವೇ? ಈಗಾಗಲೇ ಕನ್ನಡದ ಮಕ್ಕಳು ನೇರವಾಗಿ ಇಂಗ್ಲಿಷ್ ಶಾಲೆಗಳಿಗೆ ಹೂೕಗುತ್ತಿದ್ದಾರೆ; ಇಂಥ ಸಂದರ್ಭದಲ್ಲಿ ಇದ್ದ ಕನ್ನಡವನ್ನೂ ಅಶಕ್ತಗೊಳಿಸಿದರೆ ಕನ್ನಡ ಶಾಲೆಗಳತ್ತ ಯಾರೂ ಸುಳಿಯುವುದಿಲ್ಲ. ಕನ್ನಡವನ್ನು ಇನ್ನಷ್ಟು ಶ್ರೀಮಂತಗೊಳಿಸುವುದು ಹೇಗೆ, ಕನ್ನಡದ ಬೋಧನೆ, ಉಪಯೋಗಗಳನ್ನು ಆಕರ್ಷಕವೂ ವ್ಯಾಪಕವೂ ಆಗಿಸುವುದು ಹೇಗೆ ಎನ್ನುವ ಕಡೆ ನಮ್ಮ ಚಿಂತನೆ ಹರಿಯಬೇಕಾಗಿದೆ. ಆಡುಮಾತಿನ ಬಳಕೆಗಾಗಲಿ, ಪ್ರಾದೇಶಿಕ ಕನ್ನಡದ ಬಳಕೆಗಾಗಲಿ ಯಾರ ವಿರೋಧವೂ ಇರಲಾರದು. ಇಂಥ ಪಯತ್ನಗಳೆಲ್ಲ ಹೆಚ್ಚೆಚ್ಚು ಸ್ವೀಕರಣ ಮನೋಧರ್ಮದವೇ; ಆದರೆ ಸಂಸ್ಕೃತದ ಕುರಿತಾದ ಚಾರಿತ್ರಿಕ ಅಸಮಾಧಾನವನ್ನು ಉಪಯೋಗಿಸಿಕೊಂಡು, ಕನ್ನಡದ ಅಸ್ಮಿತೆಯನ್ನೇ ಬದಲಾಯಿಸಲು ಮುಂದಾಗಿರುವ ಪ್ರವೃತ್ತಿ ನಿರಾಕರಣ ಮನೋಧರ್ಮದ್ದು.

ನಮಗೆಲ್ಲ ಪ್ರಿಯವಾಗಿರುವ ಬಸವಣ್ಣನವರ ಈ ವಚನವನ್ನು ನೋಡಿ:

ಜ್ಞಾನದ ಬಲದಿಂದ
ಅಜ್ಞಾನದ ಕೇಡು ನೋಡಯ್ಯ
ಜ್ಯೋತಿಯ ಬಲದಿಂದ
ತಮಂಧದ ಕೇಡು ನೋಡಯ್ಯ
ಪರುಷದ ಬಲದಿಂದ
ಅವಲೋಹದ ಕೇಡು ನೋಡಯ್ಯ
ನಮ್ಮ ಕೂಡಲ ಸಂಗನ ಶರಣರ ಅನುಭಾವದಿಂದ
ಎನ್ನ ಭವದ ಕೇಡು ನೋಡಯ್ಯ

ಇದರಲ್ಲಿ ಕನ್ನಡದ ಪದಗಳೂ ಸಂಸ್ಕೃತದ ಪದಗಳೂ ಹದವಾಗಿ ಅದೆಷ್ಟು ಹಿತವಾಗಿ, ಮಧುರವಾಗಿ ಬೆಸೆದುಕೊಂಡಿವೆ! ಜ್ಞಾನ-ಅಜ್ಞಾನ, ಜ್ಯೋತಿ-ತಮಂಧ, ಪರುಷ-ಅವಲೋಹ, ಅನುಭಾವ-ಭವ ಎಂಬೀ ಸಂಸ್ಕೃತ ಮೂಲದ ಪದಯುಗ್ಮಗಳ ಜತೆ ಕೇಡು ಎಂಬ ಕನ್ನಡ ಪದ (ಬಹುಶಃ ಇದೊಂದು ತದ್ಬವ) ಬರುವ ಬಗೆ, ಹಾಗೂ ಒಟ್ಟಾರೆ ವಚನಕ್ಕೆ ‘ತಮಂಧ’ ಎಂಬ ಪದ ಒದಗಿಸುವ ಲಯದ ಸೊಗಸನ್ನು ಗಮನಿಸಿ. ವಾಸ್ತವದಲ್ಲಿ ಈ ಸಂಸ್ಕೃತ ಮೂಲದ ಪದಗಳನ್ನು ಕನ್ನಡಿಗರೆಂದೂ ಬೇರೇ ಎಂದು ಕಂಡಿಲ್ಲ; ಅವುಗಳನ್ನು ಕನ್ನಡದ ಭಾಗವೆಂದೇ ಶತಮಾನಗಳಿಂದಲೂ ಸ್ವೀಕರಿಸಿದ್ದಾರೆ-ಕೆಲವೇ ಕೆಲವು ಮೂಲಭೂತವಾದಿಗಳ ಹೊರತು. ವಚನ ಪ್ರಕಾರವೂ ಸೇರಿದಂತೆ ಕನ್ನಡದ ಇಡೀ ಸಾಹಿತ್ಯಪರಂಪರೆಯೇ ಈ ಮನೋಭಾವದ್ದು.

ಬಸವಣ್ಣನ ಅಂಕಿತವಾದ ‘ಕೂಡಲಸಂಗಮ ದೇವ’ ಎಂಬ ಪದಗುಚ್ಛವನ್ನೇ ತೆಗೆದುಕೊಂಡರೆ ಅದರಲ್ಲಿರುವ ‘ಕೂಡಲ’ ಹಾಗೂ ‘ಸಂಗಮ’ ಎಂಬ ಕನ್ನಡ-ಸ೦ಸ್ಕೃತ ಪದಯುಗಳದ ಅರ್ಥ ಒಂದೇ! ಇದೊಂದು ಸ್ಥಳನಾಮವೆನ್ನುವುದು ನಿಜ. ಆದರೆ ಈ ಸ್ಥಳನಾಮವಾದರೂ ಹೇಗೆ ಬಂತು? ಅದೇ ರೀತಿ ‘ಶ್ರವಣಬೆಳಗೊಳ’ ಎಂಬುದರಲ್ಲೂ ಸಂಸ್ಕೃತ ಮತ್ತು ಕನ್ನಡ ಸುಂದರವಾಗಿ ಬೆರೆತುಕೊಂಡಿವೆ. ದ್ರಾವಿಡ ಕನ್ನಡ, ಸಂಸ್ಕೃತ ತತ್ಸಮ, ತದ್ಭವ ಎಲ್ಲವೂ ಸೇರಿದ ಮಿಶ್ರಧಾತುವಿನ ಕನ್ನಡವೇ ನಮ್ಮ ಕನ್ನಡ. ಇದೇ ‘ಕೂಡಲಸಂಗಮ ದೇವನ ಕನ್ನಡ’ – ಸರ್ವ ಕನ್ಕಡಿಗರ ಸೊತ್ತು. ಯಾರೊಬ್ಬನಿಗೂ ಇದರ ಮೇಲೆ ಏಕಸ್ವಾಮ್ಯವಿಲ್ಲ. ಇದು ಸಕಲರಿಗೂ ಸಮನಾಗಿ ಲಭ್ಧವಾಗುವಂತೆ ನೋಡಿಕೊಳ್ಳುವುದರಲ್ಲೇ ಕನ್ನಡಜನಪದದ ಏಳಿಗೆ ಅಡಗಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಳ್ಳರ ಕೂಟ – ೨
Next post ಕಾಲನ ಗಳಿಗೆ ಬಟ್ಟಲನ್ನು ಕುಡುಗೋಲನ್ನು

ಸಣ್ಣ ಕತೆ

 • ಇನ್ನೊಬ್ಬ

  ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

 • ಎರಡು ಮದುವೆಗಳು

  ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

 • ಮನೆಮನೆಯ ಸಮಾಚಾರ

  ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

 • ಶಾಕಿಂಗ್ ಪ್ರೇಮ ಪ್ರಕರಣ

  ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

 • ದೊಡ್ಡವರು

  ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

cheap jordans|wholesale air max|wholesale jordans|wholesale jewelry|wholesale jerseys