ಕಾಲನ ಗಳಿಗೆ ಬಟ್ಟಲನ್ನು ಕುಡುಗೋಲನ್ನು
ಕೈಯಲ್ಲಿ ಹಿಡಿದಿರುವ ಚೆಲುವನೇ ನೀನಿನ್ನು
ಮುಂಚಿನಂತಲ್ಲ ಕರಗುತ್ತ ಬೆಳೆದಿರುವೆ,
ಸುತ್ತಲಿನ ಗೆಳೆಯರೆಲ್ಲರ ಕೊಡವಿಕೊಂಡಿರುವೆ.
ಅದು ನಿನ್ನ ಸವಿಯಿಚ್ಛೆ ಬಲಿತುದನು ತೋರುವುದು.
ಎಲ್ಲ ಗೊಂದಲವನು ನಿಯಂತ್ರಿಸಬಲ್ಲ ಪ್ರಕೃತಿಯದು
ಮತ್ತೆ ಹಿಂದಕ್ಕೆ ಎಳೆದಿರಿಸಿದರೆ ನಿನ್ನನ್ನು,
ಕಾಲವ ನಿಯಂತ್ರಿಸಲು ತನ್ನ ಶಕ್ತಿಗಳನ್ನು
ತೋರಿಸುವ ಸಲುವಾಗಿ. ಆದರೂ ಅವಳ ಭಯ
ಇರಲಿ, ಚೆಲುವನ್ನೇನೊ ಕಾಯಬಹುದವಳ ದಯ
ಉಳಿಸಲಾರದು ಸದಾ, ಲೆಕ್ಕ ಸಲಿಸಲೆಬೇಕು
ಪ್ರಕೃತಿ ಕರ್ತವ್ಯ ಅದು, ನಿನ್ನ ಕಳಿಸಲೆಬೇಕು.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 126
O Thou my lovely Boy who in thy power