Home / ಕಥೆ / ಸಣ್ಣ ಕಥೆ / ತಿರುಪೆ

ತಿರುಪೆ

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕೆ ಅವನಲ್ಲಿ ಹಣ ಭರ್‍ತಿ ಆಗುತ್ತಿರಲಿಲ್ಲ. ಕತ್ತಲೆ ಆವರಿಸುತ್ತಿದ್ದಂತೆ ಬಸ್ಸುಗಳು ಕಡಿಮೆಯಾಗ ತೊಡಗಿದುವು. ಅಳಿದುಳಿದ ಒಂದೊಂದು ಬಸ್ಸುಗಳು ಸ್ಟಾಂಡಿಗೆ ಬರುತ್ತಿದ್ದರೂ ಅವನಿಗೆ ಓಡಿ ಹೋಗಿ ಬಸ್ಸು ಹತ್ತಲು ತ್ರಾಣವಿಲ್ಲದೆ, ಕುಳಿತಲ್ಲಿಂದಲೇ ಬಸ್ಸುಗಳಿಗೆ ಹಿಡಿ ಶಾಪ ಹಾಕುತ್ತಿದ್ದ. ಈ ರೀತಿ ಮನಸ್ಸಿಗೆ ಬೇಜಾರಾದಾಗಲೆಲ್ಲಾ ಅವನಿಗೆ ನೆನಪಾಗುವುದು ಪಕ್ಕದಲ್ಲಿರುವ ರುದ್ರಭೂಮಿ. ಹುಡುಗ ನಿಧಾನವಾಗಿ ರುದ್ರಭೂಮಿಯತ್ತ ಹೆಜ್ಜೆ ಹಾಕಿದ. ಕತ್ತಲೆ ಸಂಪೂರ್‍ಣ ಆವರಿಸತೊಡಗಿದರೂ ಆ ರುದ್ರಭೂಮಿ ಅವನಿಗೆ ಚಿರಪರಿಚಿತವಾದುದರಿಂದ ನಡೆದು ಹೋಗಲು ಅವನಿಗೆ ತೊಂದರೆಯಾಗಲಿಲ್ಲ. ಜೀವಂತ ಜನರ ಜಂಜಾಟವಿಲ್ಲದ ಆ ರುದ್ರಭೂಮಿ ನಿರ್‍ಜನವಾಗಿದ್ದು ತಂಪಗಿನ ತಂಗಾಳಿ ಬೀಸಿ ಬರುತ್ತಿತ್ತು. ಹುಡುಗ ಸುತ್ತಲೂ ಕಣ್ಣಾಡಿಸಿದ. ದೂರದಲ್ಲಿ ಬೆಂಕಿಯ ಕೆನ್ನಾಲಗೆ ಕಾಣುತ್ತಿತ್ತು. ಬಹುಶಃ ಇವತ್ತು ಕೂಡಾ ಒಂದು ಶವ ಸುಟ್ಟಿರಬೇಕು ಎಂದು ಮನಸ್ಸಿನಲ್ಲೇ ಅಂದುಕೊಂಡು ಹತ್ತಿರದಲ್ಲಿದ್ದ ಕೆಂಪು ಕಲ್ಲುಗಳ ರಾಶಿಯ ಮೇಲೆ ಹುಡುಗ ಕುಳಿತುಕೊಂಡ ಅನತಿ ದೂರದಲ್ಲಿ ಯಾರೋ ತೂರಾಡುತ್ತಾ ನಡೆದುಕೊಂಡು ಬರುವ ಶಬ್ದ ಕೇಳಿ ಹುಡುಗ ಒಮ್ಮ ಅಧೀರನಾದ. ಕೆಲವೇ ಕ್ಷಣದಲ್ಲಿ ಆ ವ್ಯಕ್ತಿ ಅವನನ್ನು ಸಮೀಪಿಸಿದ. ಸ್ವಲ್ಪ ಅಡಿ ದೂರದಲ್ಲಿ ನಿಂತು ತನ್ನನ್ನೇ ಎವೆಯಿಕ್ಕದೆ ನೋಡುವ ಆ ವ್ಯಕ್ತಿಯನ್ನು ಹುಡುಗ ಕತ್ತಲೆಯಲ್ಲೂ ಪರಿಶೀಲಿಸತೊಡಗಿದ. ದಟ್ಟವಾದ ಗುಂಗುರು ತಲೆ ಕೂದಲು, ಕುರುಚಲು ಗಡ್ಡ, ಪೊದೆಯಂತ ಮೀಸೆ, ಸುಮಾರು ಆರಡಿ ಎತ್ತರದ ಅಜಾನುಬಾಹು. ಉಟ್ಟ ಉಡುಗೆತೊಡುಗೆಗಳನ್ನು ಕತ್ತಲೆಯಲ್ಲೂ ಸೂಕ್ಷ್ಮವಾಗಿ ನೋಡಿದ ಹುಡುಗ ಈತ ಸಭ್ಯವ್ಯಕ್ತಿ ಅಲ್ಲವೆಂದು ಮನಗಂಡ. ಅವನ ಕಾಲುಗಳು ಕಂಪಿಸತೊಡಗಿದವು. ಆ ವ್ಯಕ್ತಿ ಇನ್ನೂ ಹತ್ತಿರ ಬಂದು ಅವನಿಗೆ ತಾಗಿ ನಿಂತು ಗಹಗಹಿಸಿ ನಕ್ಕ. ಬಾಗಿ ಹುಡುಗನನ್ನೊಮ್ಮೆ ನೋಡಿದ. ಸ್ಥಿಮಿತ ಕಳಕೊಂಡ ದಢಿಯನ ಕಾಲುಗಳು ನೃತ್ಯ ಮಾಡುತ್ತಿದ್ದುವು. ಬಾಯಿಯಲ್ಲಿ ಸಾರಾಯಿ ವಾಸನೆ ಬರುತ್ತಿತ್ತು. ತೂರಾಡುತ್ತಾ ಅವನು ಕೆಂಪು ಕಲ್ಲಿನ ಮೇಲೆ ಕುಳಿತು ಹುಡುಗನ ಕೈ ಹಿಡಿದು ಕುಳ್ಳಿರಿಸಿದ. “ಕುಳಿತು ಕೋ ಮಗಾ, ಹೆದರಬೇಡ. ನಾನು ಕುಡುಕ ಹೌದು. ಆದರೆ ಕೆಟ್ಟ ಮನುಷ್ಯ ಖಂಡಿತ ಅಲ್ಲ. ಅಲ್ಲಿ ನೋಡು, ಹೆಣವನ್ನು ಸುಟ್ಟು ಮನೆಗೆ ಹೋಗಿ ಬಿಡುತ್ತಾರೆ. ಹಣ, ಆಸ್ತಿ, ಅಂತಸ್ತು ಎಲ್ಲಾ ಮಣ್ಣಲ್ಲಿ ಬೂದಿಯಾಗುತ್ತದೆ. ಆದರೂ ಮನುಷ್ಯ ಹಣ ಮಾಡಲು ಆರೋಗ್ಯ ಕಳೆದುಕೊಳ್ಳುತ್ತಾನೆ. ಮತ್ತೆ ಆರೋಗ್ಯ ಪಡೆಯಲು ಹಣ ಕಳೆದುಕೊಳ್ಳುತ್ತಾನೆ. ಸಾವೇ ಇಲ್ಲವೇನೋ ಎಂದು ಬದುಕುತ್ತಾನೆ. ಸಾಯುವಾಗ ಬದುಕಿಯೇ ಇಲ್ಲವೇನೋ ಎನ್ನುವಂತೆ ಸಾಯುತ್ತಾನೆ. ಇಲ್ಲಿಗೆ ಭೂಮಿ ಮೇಲಿನ ಆಟ ಮುಗಿದವರು ಮಾತ್ರ ಬರುತ್ತಾರೆ. ನಿನಗಿನ್ನು ಭೂಮಿ ಮೇಲೆ ಆಟವಾಡುವ ವಯಸ್ಸು. ಇಲ್ಲಿಗೇಕೆ ಬಂದೆ? ಯಾರು ನೀನು? ನಿನ್ನ ಹೆಸರೇನು?” ಬಸ್ ಸ್ಟಾಂಡಿನಲ್ಲೇ ಹುಟ್ಟಿ ಬೆಳೆದ ಅವನಿಗೆ ಈ ರೀತಿ ವೇದಾಂತಿಯಂತೆ ತೊದಲುವವರನ್ನು ತುಂಬಾ ಕಂಡಿದ್ದ. ಸಾರಾಯಿ ವಾಸನೆಯೂ ಅವನಿಗೇನೂ ಹೊಸತಲ್ಲ.

‘ನನಗೆ ಯಾರೂ ಇಲ್ಲ ಮಾಮ, ನನಗೆ ಹೆಸರು ಕೂಡಾ ಇಲ್ಲ’ ಹುಡುಗ ತೊದಲುತ್ತಾ ಅಂದ. ನಗೆ ತಡೆಯಲಾಗಲಿಲ್ಲ ಧಡಿಯನಿಗೆ ಜೋರಾಗಿ ನಕ್ಕ. ತನ್ನ ಹೆಗಲಿನಲ್ಲಿರುವ ಚೀಲವನ್ನು ನಿಧಾನವಾಗಿ ಇಳಿಸಿ ಕಲ್ಲಿನ ಮೇಲಿಟ್ಟು ಹುಡುಗನ ಭುಜದ ಮೇಲೆ ಕೈ ಇಟ್ಟು ಅಂದ. ಈ ಜೀವನ ಹೀಗೆಯೇ ಮಗಾ, ನನ್ನಂತ ಬುದ್ಧಿವಂತನಿಗೆ ಇದು ಕನಸು. ಮೂರ್‍ಖನಿಗೆ ಆಟ. ಸಿರಿವಂತನಿಗೆ ತಮಾಷೆ ಮತ್ತು ನಿನ್ನಂತಹ ಬಡವನಿಗೆ ದುರಂತ. ಅದಿರಲಿ ನೀನು ಹೆದರಬೇಡ, ನನಗೆ ಕೂಡಾ ಹಿಂದೆ-ಮುಂದೆ ಯಾರೂ ಇಲ್ಲ. ನಾನು ಕೂಡಾ ನಿನ್ನ ಹಾಗೆ ಬೇವರ್‍ಸಿಯೇ. ಆದರೆ ನೆನಪಿಟ್ಟುಕೋ. ಒಬಂಟಿ ಆಗಿರುವವನೇ ಪ್ರಪಂಚದಲ್ಲಿ ಎಲ್ಲರಿಗಿಂತ ಬಲಶಾಲಿ. ಆದರೆ ನನಗೆ ಹೆಸರಿದೆ. ಮೈಖಲ್. ಮಿಸ್ಟರ್ ಮೈಖಲ್. ಜನ ನನ್ನನ್ನು ಪ್ರೀತಿಯಿಂದ ಮೇಕಿ ಮಾಮ ಎಂದು ಕರೆಯುತ್ತಾರೆ. ನಿನ್ನನ್ನು ಜನ ಹೇಗೆ ಕರೆಯುತ್ತಾರೆ ಹೇಳು?” ಹುಡುಗನ ಗಲ್ಲ ನೇವರಿಸಿದ ಧಡಿಯ, ಹುಡುಗನಿಗೆ ಅಸಹ್ಯವಾಗಲಿಲ್ಲ. ಇದೆಲ್ಲಾ ಅನುಭವ ಅವನು ಭೂಮಿಗೆ ಬಂದಾಗಲೇ ಪಡೆದುಕೊಂಡು ಬಂದಿದ್ದ.

“ನಾನು ಬಸ್‌ಸ್ಟಾಂಡಿನಲ್ಲಿ ತಿರುಪೆ ಎತ್ತುತ್ತೇನೆ. ಕತ್ತಲೆಯಾದರೆ ಅಲ್ಲಿಯೇ ಮಲಗುತ್ತೇನೆ. ಅಂಗಡಿಯವರು, ಹೋಟೆಲಿನವರು, ಪ್ಯಾಪರ್ ಮಾರುವವರು, ಹಾಲು ಮಾರುವವರು ನನ್ನನ್ನು “ತಿರುಪೆ” ಎಂದು ಕರೆಯುತ್ತಾರೆ.

“ತಿರುಪೆ! ಮಾಸ್ಟರ್ ತಿರುಪೆ. ಆಹಾ! ಗುಡ್ ನೇಮ್. ಒಳ್ಳೆಯ ಹೆಸರು. ನಿನಗೆ ಯಾರೂ ಇಲ್ಲವೆಂದು ದುಃಖಿಸಬೇಡ, ನಾನಿದ್ದೇನೆ. ನಿನಗೆ ನನ್ನ ನೆನಪಾದಾಗಲೆಲ್ಲಾ ಈ ರುದ್ರಭೂಮಿಗೆ ಬಾ. ನೀನು ಹಸಿದಿದ್ದೀಯಾ ಎಂದು ನಿನ್ನ ಧ್ವನಿ ಹೇಳುತ್ತಾ ಇದೆ. ನಿಲ್ಲು ನಾನು ನಿನಗೆ ತಿನ್ನಲು ಕೊಡುತ್ತೇನೆ.” ಮೇಕಿ ಮಾಮ ತೂರಾಡುತ್ತಾ ತನ್ನ ಚೀಲದ ಒಳಗೆ ಕೈ ಹಾಕಿ ಒಂದು ಕಟ್ಟು ಹೊರ ತೆಗೆದು ಬಿಡಿಸಿದ. ಅದರ ಪರಿಮಳಕ್ಕೆ ಹುಡುಗನ ಬಾಯಲ್ಲಿ ಜೊಲ್ಲು ಸುರಿಯಿತು.

“ಇದು ಬಸ್‌ಸ್ಟಾಂಡಿನ ಹತ್ತಿರದ ಕಾಕನ ಅಂಗಡಿಯ ಚಿಕನ್ ಬಿರಿಯಾನಿ. ತಿನ್ನು ನನಗೆ ಹಸಿವಿಲ್ಲ.” ಕತ್ತಲೆಯಲ್ಲಿ ಆ ಕಟ್ಟದಲ್ಲಿ ಏನೇನಿದೆ ಎಂದು ಹುಡುಗನಿಗೆ ಕಾಣದು. ಆದರೆ ಆ ಪರಿಮಳ ಮಾತ್ರ ಅವನಿಗೆ ಚಿರಪರಿಚಿತವಾಗಿತ್ತು. ಕಾಕನ ಅಂಗಡಿಯೆದುರು ಹಾದು ಹೋಗುವಾಗ ಈ ಪರಿಮಳವನ್ನು ಆಸ್ವಾಧಿಸಿದ್ದ. ಕ್ಷಣ ಮಾತ್ರದಲ್ಲಿ ಬಿರಿಯಾನಿಯನ್ನು ಖಾಲಿ ಮಾಡಿ ಕೈಯನ್ನು ತನ್ನ ಅಂಗಿಗೆ ಒರಸಿದ ಹುಡುಗ. ಕೃತಜ್ಞತಾ ಭಾವದಿಂದ ತಿರುಪೆ ಮೇಕಿ ಮಾಮನನ್ನು ನೋಡಿದ. ಮೇಕಿ ಮಾಮ ತಿರುಪೆಯ ಹೆಗಲಿಗೆ ಮತ್ತೊಮ್ಮೆ ಕೈ ಹಾಕಿ ಮೈಯಲ್ಲಾ ಸವರಿದ. ರಾತ್ರಿ ಬಸ್ ಸ್ಟಾಂಡಿನಲ್ಲಿ ಮಲಗುತ್ತಿರುವುದರಿಂದ ಇಂತಹ ‘ರಾತ್ರಿ ಸ್ನೇಹ’ ತಿರುಪೆಗೆ ಹೊಸತೇನಲ್ಲ. ತಿರುಪೆಯಿಂದ ಯಾವುದೇ ಪ್ರತಿರೋಧ ಬರೆದುದರಿಂದ ಮೇಕಿ ಮಾಮ ತನ್ನ ವಾಂಛೆ ತೀರಿಸಿ, ತನ್ನ ಕೈ ಚೀಲದಿಂದ ಬೀಡಿ ಕಟ್ಟು ಹೊರತೆಗೆದು ಒಂದು ಬೀಡಿಯನ್ನು ಹೊತ್ತಿಸಿ, ದಂ ಎಳೆಯ ತೊಡಗಿದ.

“ಈ ಭೂಮಿಯಲ್ಲಿ ಕಾಮ ಹಾಗೂ ಹಸಿವು ಇಲ್ಲದಿರುತ್ತಿದ್ದರೆ, ಇಷ್ಟೊಂದು ಅಧರ್‍ಮ, ಅನಾಚಾರ ಖಂಡಿತ ನಡೆಯುತ್ತಿರಲಿಲ್ಲ ತಿರುಪೆ” ಮೇಕಿ ಮಾಮ ಕಲ್ಲಿಗೊರಗಿ ಬಡಬಡಿಸುತ್ತಿದ್ದ. ತಿರುಪೆ ಬಸ್‌ಸ್ಟಾಂಡಿಗೆ ಹೋಗಲು ಎದ್ದು ನಿಂತ.

“ಏ ತಿರುಪೆ, ನಿನಗೇನಾದರೂ ತಿನ್ನಲು-ಉಣ್ಣಲು ಕಮ್ಮಿಯಾದರೆ ಇಲ್ಲಿಗೆ ಬಾ. ನಾನಿದ್ದೇನೆ. ಮೇಕಿ ಮಾಮ. ಹೆದರಬೇಡ” ಹುಡುಗನ ಬೆನ್ನು ಸವರುತ್ತಾ ತನ್ನ ಕಿಸೆಯಿಂದ ಹತ್ತು ರೂಪಾಯಿಯ ಐದು ನೋಟುಗಳನ್ನು ತೆಗೆದು ತಿರುಪೆಗೆ ನೀಡಿದ. ಚಿಲ್ಲರೆ ನಾಣ್ಯಗಳ ಹೊರತು ನೋಟುಗಳನ್ನೇ ನೋಡಿರದ ತಿರುಪೆಗೆ ಆಶ್ಚರ್‍ಯವಾಯಿತು. ಅವನು ಅತೀ ದೈನ್ಯತೆಯಿಂದ ನೋಟುಗಳನ್ನು ತೆಗೆದುಕೊಂಡು “ಆಯಿತು ಮೇಕಿಮಾಮ” ಎನ್ನುತ್ತಾ ಬಸ್‌ಸ್ಟಾಂಡಿನ ಕಡೆಗೆ ಓಡಿದ.

ಅಂದು ರಾತ್ರಿ ತಿರುಪೆಗೆ ನಿದ್ರೆ ಬರಲಿಲ್ಲ. ಮೇಕಿ ಮಾಮನದೇ ನೆನಪು. ಆಗಾಗ್ಗೆ ತನ್ನ ಚಡ್ಡಿಯ ಕಿಸೆಯನ್ನು ಒತ್ತಿಕೊಳ್ಳುತ್ತಿದ್ದ. ನೋಟು ಜೋಪಾನವಾಗಿದೆಯೇ ಎಂದು ಖಾತರಿ ಮಾಡಿಕೊಳ್ಳುತ್ತಿದ್ದ. ನನ್ನ ಇಲ್ಲಿವರೆಗಿನ ಕೊಳಕು ಬದುಕಿನಲ್ಲಿ ಯಾರೂ ನನ್ನನ್ನು ಪ್ರೀತಿಸಲಿಲ್ಲ. ನನ್ನ ಕಣ್ಣೀರು, ದುಃಖ, ದುಮ್ಮಾನವನ್ನು ಅರ್‍ಥ ಮಾಡಲಿಲ್ಲ. ಎಲ್ಲರೂ ಕರುಣೆಯ ಮುಖವನ್ನು ತೋರ್‍ಪಡಿಸಿದರೇ ಹೊರತು ನನ್ನ ಹೃದಯಕ್ಕೆ ಹತ್ತಿರ ಬರಲೇ ಇಲ್ಲ. ಸಮಾಧಾನ ಮಾಡುವವರು ಅನೇಕರಿದ್ದಾರೆ. ಆದರೆ ಸಹಾಯ ಮಾಡುವವರು ಯಾರೂ ಇಲ್ಲ. ಆದರೆ ಮೇಕಿ ಮಾಮಾ! ಸಿಕ್ಕಿದ ಮೊದಲ ದಿನವೇ ಎಷ್ಟು ಪ್ರೀತಿಸಿದ. ನನಗೆ ಹಣ ಕೊಟ್ಟು, ಅನ್ನ ಕೊಟ್ಟ, ತಿನ್ನಲು-ಉಣ್ಣಲು ಕಮ್ಮಿಯಾದರೆ ಬಾ ಅಂದ. ಇನ್ನು ಮುಂದೆ ನನಗೂ ವಾರಸುದಾರರಿದ್ದಾರೆ. ನಾನು ಬೇವರ್‍ಸಿಯಲ್ಲ. ನಾನು ಕೂಡ ಎಲ್ಲರಂತೆ ಬದುಕಬೇಕು, ತಿರುಪೆ ಸಂತೋಷದಿಂದ ಚಡ್ಡಿಯ ಕಿಸೆಯನ್ನು ಮುಟ್ಟಿ ನೋಡಿದ. ಹೌದು ಈ ಐವತ್ತು ರೂಪಾಯಿಯನ್ನು ಏನು ಮಾಡುವುದು? ಹೊಸ ಬಟ್ಟೆ ಬರೆ ಅಗತ್ಯವಿಲ್ಲ. ಯಾರ ಮನೆಯಲ್ಲೂ ಬೇಡಿದರೆ ಕೊಡುತ್ತಾರೆ. ನನಗೀಗ ಅರ್‍ಜೆಂಟ್ ಬೇಕಾದುದು ಒಂದು ಜೊತೆ ಚಪ್ಪಲಿ, ಹೌದು ನಾಳೆ ಭಾನುವಾರ. ರಸ್ತೆ ಬದಿಯಲ್ಲಿ ಚಪ್ಪಲಿ ಮಾರುವವರು ಬರುತ್ತಾರೆ. ಕಮ್ಮಿ ಕ್ರಯಕ್ಕೆ ಚಪ್ಪಲಿ ಕೊಡುತ್ತಾರೆ. ಭಾನುವಾರದ ಕಲೆಕ್ಷನ್ ಸೇರಿಸಿ ಒಂದು ಜೊತೆ ನೀಲಿ ಸ್ಲಿಪ್ಪರ್ ತೆಗೆದುಕೊಳ್ಳಬೇಕು. ತಿರುಪೆ ಸುಖದ ಕನಸು ಕಾಣುತ್ತಾ ನಿದ್ದೆ ಹೋದ.

ಮರುದಿನ ತಿರುಪೆ ಬಹಳ ಹುರುಪಿನಿಂದ ಬಿಕ್ಷೆ ಬೇಡುತ್ತಿದ್ದ. ಮಧ್ಯಾಹ್ನ ಒಂದು ಜೊತೆ ನೀಲಿ ಸ್ಲಿಪ್ಪರ್ ಖರೀದಿಸಿದ. ಕಾಲಿಗೆ ಸಿಕ್ಕಿಸಿ ಬಹಳ ಗತ್ತಿನಿಂದಲೇ ಬಿಕ್ಷೆ ಎತ್ತುತ್ತಿದ್ದ. ಕತ್ತಲೆಯಾದೊಡನೆ ಬಿಕ್ಷೆ ನಿಲ್ಲಿಸಿ, ರುದ್ರಭೂಮಿ ಕಡೆಗೆ ಓಟಕ್ಕಿತ್ತ. ಮೇಕಿಮಾಮ ಆ ಕಲ್ಲು ರಾಶಿಯ ಮೇಲೆ ತೂರಾಡುತ್ತಾ ಹೊರಳಾಡುತ್ತಿರುವುದು ಅವನಿಗೆ ಕಂಡಿತು.

“ಮೇಕಿಮಾಮ, ಮೇಕಿಮಾಮ, ನನ್ನ ಕಾಲು ನೋಡು” ತಿರುಪೆ ಗತ್ತಿನಲ್ಲಿ ಮೇಕಿಮಾಮನ ಎದುರು ನಿಂತ. ಶಿಸ್ತಿನ ಸಿಪಾಯಿಯಂತೆ, ಮೇಕಿಮಾಮ ತೂರಾಡುತ್ತಾ ತಿರುಪೆಯ ಕಾಲು ನೋಡಿದ.

“ವೆರಿಗುಡ್! ಈಗ ನೀನು ಮಿಸ್ಟರ್ ತಿರುವೆ” ಮೇಕಿಮಾಮ ತನ್ನ ಕಿಸೆಗೆ ಕೈ ಹಾಕಿ ನೂರರ ಒಂದು ನೋಟನ್ನು ಹೊರ ತೆಗೆದು ತಿರುಪೆಯ ಕೈಯಲ್ಲಿ ಕೊಟ್ಟು ಎರಡು ಕಟ್ಟು ಬಿರಿಯಾನಿ ತರಿಸಿದ. ಇಬ್ಬರೂ ತಿಂದರು. ಮೇಕಿಮಾಮ ಜೋಲಾಡುವುದು ಮಾತ್ರ ನಿಲ್ಲಲಿಲ್ಲ.

“ಏ ತಿರುಪೆ! ನಾಳೆಯಿಂದ ನಾನಿಲ್ಲ, ಮುಂಬಯಿಗೆ ಹೋಗುತ್ತೇನೆ. ಮುಂಬಯಿಗೆ. ಒಂದು ವಾರ ಬಿಟ್ಟು ಬರುತ್ತೇನೆ” ಮೇಕಿಮಾಮ ತಿರುಪೆಯ ಹೆಗಲಿಗೆ ಕೈ ಹಾಕಿ ಹೇಳಿದ.

“ಏನು ಮೇಕಿಮಾಮ! ಎಲ್ಲಿಗೆ ಹೋಗುತ್ತೀಯಾ? ಮತ್ತೆ ನನಗೆ ಇಲ್ಲಿ ಯಾರಿದ್ದಾರೆ?” ತಿರುಪೆಗೆ ತುಂಬಾ ಬೇಸರವಾಯಿತು. ಮೇಕಿಮಾಮ ಜೋರಾಗಿ ನಕ್ಕ. ಕಡ್ಡಿಗೀರಿ ಬೀಡಿ ಸೇದ ತೊಡಗಿದ. ಅವನ ತಲೆ ಒಂದೇ ಕಡೆ ನಿಲ್ಲದೆ ಆಗಾಗ್ಗೆ ತಿರುಪೆಯ ಮೇಲೆ ಬೀಳುತ್ತಿತ್ತು. ತಿರುಪೆಗೆ ಅರ್ಥವಾಗಲಿಲ್ಲ. ಮೇಕಿಮಾಮ ತಿರುಪೆಯ ಗಲ್ಲ ಹಿಡಿದು ತನ್ನ ಮುಖವನ್ನು ಅವನ ಹತ್ತಿರ ತಂದ.

“ಏ ತಿರುಪೆ, ನಾನು ಮುಂಬಯಿಗೆ ಹೋಗುತ್ತೇನೆ. ಅಮ್ಚೆ ಮುಂಬಯಿ, ಮುಂಬಯಿ. ಗೊತ್ತೇನು ನಿನಗೆ?” ತಿರುಪೆ ಎತ್ತಿ ಬಸ್‌ಸ್ಟಾಂಡಿನಲ್ಲಿ ಮಲಗುವವನಿಗೆ ಹೊರ ಜಗತ್ತಿನ ಅರಿವಾದರೂ ಎಲ್ಲಿದೆ? ಜೀವ ತಳೆದದ್ದೇ ಅವನಿಗೆ ದೊರಕಿದ ಮೊದಲ ಜೈಲು ಶಿಕ್ಷೆ.

“ಗೊತ್ತಿಲ್ಲ ಮಾಮ” ತಿರುಪೆ ಪೆದ್ದನಂತೆ ನಿಂತುಕೊಂಡ.

“ನೋಡು ಮಗಾ, ಮುಂಬಯಿಯಲ್ಲಿ ಚೆಂದ ಚೆಂದದ ಅಪ್ಸರೆಯರಿದ್ದಾರೆ. ನಮ್ಮನ್ನು ಕೈ ಬೀಸಿ ಸ್ವಾಗತಿಸುತ್ತಾರೆ. ಕುಡಿಯಲು ಡ್ರಿಂಕ್ಸ್ ಕೊಡುತ್ತಾರೆ. ಡ್ಯಾನ್ಸ್ ಮಾಡುತ್ತಾರೆ. ಕುಣಿಯುತ್ತಾರೆ. ಜೂಜಾಡಲು ಕ್ಲಬ್‌ಗಳಿವೆ. ಕದ್ದು ನೋಡುವ ಸಿನಿಮಾಗಳಿವೆ. ಗೊತ್ತಾ ನಿನಗೆ?” ತಿರುಪೆಗೆ ಅರ್‍ಥವಾಗಲಿಲ್ಲ. ಅವನು ಜೋಲಾಡುವ ಮೇಕಿಮಾಮನ ತಲೆಯನ್ನೇ ನೋಡುತ್ತಿದ್ದ.

“ಗಾಬರಿಯಾಗಬೇಡ ತಿರುಪೇ, ಇದೆಲ್ಲಾ ನಿನಗೀಗ ಅರ್‍ಥವಾಗುವುದಿಲ್ಲ. ಒಂದು ಆರೇಳು ವರ್‍ಷ ಹೋಗಲಿ, ಎಲ್ಲಾ ನಿಧಾನವಾಗಿ ನಿನಗೆ ತಿಳಿಯುತ್ತೆ. ಅದಿರಲಿ ನಾನು ಮುಂಬಯಿಗೆ ಹೋಗಿ ಬರುವಾಗ ನಿನಗೆ ಏನು ತರಲಿ ಹೇಳು?” ಮೇಕಿಮಾಮ ತೊದಲುತ್ತಾ ಕೇಳಿದ. ತಿರುಪೆಗೆ ಮುಂಬಯಿ ಎಂದರೆ ಏನು ಎಂದು ಅರ್‍ಥವಾಗಲಿಲ್ಲ. ಬಸ್‌ಸ್ಟಾಂಡೇ ಅವನ ಜಗತ್ತು. ಗುರಿಯಿಲ್ಲದ ಬದುಕು ಅವನದು. ಗುರಿಕಂಬಗಳಿಲ್ಲದ ಕಾಲ್ಚೆಂಡಿನ ಆಟದಂತೆ ಅವನ ಜೀವನ. ಅದಕ್ಕೆ ಮೀರಿದ ಲೋಕವನ್ನು ಅವನಿಂದ ಅರ್‍ಥೈಸಲು ಸಾಧ್ಯವಿಲ್ಲ. ಅವನಿಗೆ ಮೇಕಿಮಾಮನ ಒಡನಾಟ ಬೇಕಿತ್ತು. ಅವನನ್ನು ಒಂದ ದಿನವೂ ಬಿಡಲು ತಿರುಪೆಗೆ ಇಷ್ಟವಿಲ್ಲ.

“ಮೇಕಿಮಾಮ, ನಾನು ಕೂಡಾ ನಿನ್ನೊಂದಿಗೆ ಬರುತ್ತೇನೆ” ತಿರುಪೆ ಹೆದರುತ್ತಾ ತನ್ನ ಇಂಗಿತವನ್ನು ಬಿಚ್ಚಿದ.

ಮೇಕಿಮಾಮ ಒಮ್ಮೆ ಹಿಂದೆ ಬಾಗಿದ, ಎರಡು ಸಾರಿ ಮುಂದೆ ಬಾಗಿದ. ಇನ್ನೇನು! ನೆಲಕ್ಕೆ ಬೀಳುತ್ತಾನೆ ಎನ್ನುವಾಗ ಪುನಃ ಎಡ ಪಾರ್‍ಶ್ವಕ್ಕೆ ಬಾಗಿದ. ಅವನ ತಲೆ ಆ ಕೆಂಪುಕಲ್ಲುಗಳ ರಾಶಿಗೆ ತಾಗಿತು. ಕೆಂಪುಕಲ್ಲನ್ನು ತಲೆದಿಂಬಾಗಿ ಮಾಡಿ ಒದರ ತೊಡಗಿದ.

“ಏ ತಿರುಪೆ, ಬರುತ್ತಿಯೇನು? ಬಾ, ಒಂದು ರಾತ್ರಿ ಒಂದು ಹಗಲು ರೈಲಿನಲ್ಲಿ ಪ್ರಯಾಣ ಮಾಡಬೇಕು. ನಂತರ ಒಂದು ವಾರ ಪರ ಊರಲ್ಲಿ ಇರಬೇಕು. ಧೈರ್‍ಯ ಇದೆಯಾ? ಯೋಚಿಸು. ಊಟದ ಖರ್‍ಚು, ಉಳುಕೊಳ್ಳುವ ಖರ್‍ಚು ನಾನು ನೋಡುತ್ತೇನೆ.”

“ಬರುತ್ತೇನೆ ಮೇಕಿಮಾಮ” ತಿರುಪೆ ತಡಮಾಡದೆ ಉತ್ತರಿಸಿದ. ಮೇಕಿಮಾಮ ಹತ್ತಿರ ಇರುವಾಗ ತಿರುಪೆಗೆ ಆನೆಯ ಬಲ ಬಂದ ಹಾಗೇ ಆಗುತ್ತಿತ್ತು. ಮೇಕಿಮಾಮ ಚಂಗನೆ ಎದ್ದು ಕುಳಿತ. ತಿರುಪೆಯ ಗಲ್ಲ ಹಿಡಿದು ಹೇಳಿದ. “ನೋಡು ಸರಿಯಾಗಿ ನಾಳೆ ಬೆಳಿಗ್ಗೆ ನಿನ್ನ ಬಟ್ಟೆ ಕಟ್ಟು ಹಿಡಿದುಕೊಂಡು ಇಲ್ಲಿಗೆ ಬಾ.” ಮೇಕಿಮಾಮ ತೂರಾಡುತ್ತಾ ಕತ್ತಲೆಯಲ್ಲಿ ಕರಗಿ ಹೋದ. ತಿರುಪೆ ಸಂತೋಷದಿಂದ ಕುಣಿಯುತ್ತಾ ಬಸ್‌ಸ್ಟಾಂಡ್ ಸೇರಿದ.

ಮರುದಿನ ಮಾಯಾನಗರಿಯ ಸುಂದರ ಕನಸುಗಳನ್ನು ಹೊತ್ತುಕೊಂಡು ತಿರುಪೆ ಮೇಕಿಮಾಮನೊಂದಿಗೆ ಮುಂಬಯಿಗೆ ಪ್ರಯಾಣ ಬೆಳೆಸಿದ. ಮುಂಬಯಿ ತಲುಪಿದ ತಿರುಪೆ ಮೇಕಿಮಾಮನೊಂದಿಗೆ ಹಗಲಿಡೀ ತಿರುಗಾಡುತ್ತಿದ್ದ. ಪಟ್ಟಣದ ದೌಲತ್ತಿಗೆ ಬೆರಗಾದ. ಆದರೆ ರಾತ್ರಿಯಾದೊಡನೆ ಮೋಕಿಮಾಮ ತಿರುಪೆಯನ್ನು ತನ್ನ ಪರಿಚಿತ ಕೊಳಚೆ ಗೇರಿಯಲ್ಲಿ ಬಿಟ್ಟು ಬೆಳಿಗ್ಗೆ ಬರುತ್ತಿದ್ದ. ರಾತ್ರಿಯಿಡೀ ಮೇಕಿಮಾಮ ಏನು ಮಾಡುತ್ತಾನೆ ಎಂಬುದು ತಿರುಪೆಗೆ ಗೊತ್ತಾಗುತ್ತಿರಲಿಲ್ಲ. ಒಂದು ದಿನ ಬೆಳಿಗ್ಗೆ ಮೇಕಿಮಾಮನನ್ನು ತಿರುಪೆ ಕೇಳಿಯೇ ಬಿಟ್ಟ. ಮೇಕಿಮಾಮ ನಕ್ಕ.

“ಏ ತಿರುಪೆ, ಈ ಮಾಯಾನಗರಿ ಬಿಚ್ಚಿಕೊಳ್ಳುವುದೇ ರಾತ್ರಿಯಲ್ಲಿ, ಹಗಲು ಮಲಗಿರುತ್ತದೆ. ಮಜಾ ಮಾಡಬೇಕಾದರೆ ರಾತ್ರಿ ಇಡೀ ಜಾಗರಣೆ ಮಾಡಬೇಕು.” ಮೇಕಿಮಾಮ ನಗುತ್ತಾ ಅಂದಾಗ ತಿರುಪೆಗೆ ಅರ್‍ಥವಾಗದೆ ಮೇಕಿ ಮಾಮನ ತೂರಾಡುವ ದೇಹವನ್ನೇ ನೋಡುತ್ತಿದ್ದ. ಅವನಿಗೆ ಮುಂಬಯಿ ಸಾಕಾಗಿತ್ತು, ತನ್ನ ತಿರುಪೆಯೆತ್ತುವ ಬಸ್‌ಸ್ಟಾಂಡ್ ನೆನಪಾಗಿ ಅಳತೊಡಗಿದ. ಅಲ್ಲಿ ಅವನಿಗೆ ಹಲವಾರು ಜನರು ಪರಿಚಿತರಿದ್ದರು, ಮಾತಾಡಿಸುತ್ತಿದ್ದರು, ರೇಗಿಸುತ್ತಿದ್ದರು. ಇಲ್ಲಿ ಅಪರಿಚಿತ. ಯಾರ ಪರಿಚಯವೂ ಇಲ್ಲ. ಭಾಷೆಯೂ ಅರ್‍ಥವಾಗುವುದಿಲ್ಲ. ಒಂದು ರೀತಿಯ ಯಾಂತ್ರಿಕ ತಬ್ಬಲಿ ಜೀವನ. ಒಂದು ದಿನ ಮೇಕಿಮಾಮನ ಹತ್ತಿರ ತಿರುಪೆ ಅಳುತ್ತಾ ಊರಿಗೆ ಹೋಗುವಾ ಅಂದ. ಮೇಕಿಮಾಮನಿಗೆ ಕೋಪ ಬಂತು. ಮೊದಲ ಸಲ ಅವನು ಕೋಪದಲ್ಲಿ ರೇಗಾಡುವುದನ್ನು ತಿರುವ್ಪೆ ನೋಡಿದ.

“ಏ ತಿರುಪೆ, ನಿನ್ನ ಹಣೆಬರಹದಲ್ಲಿ ತಿರುಪೆ ಎತ್ತಿಯೇ ಸಾಯುತ್ತೀ ಎಂದು ಬರೆದಿದ್ದರೆ ನೀನು ಎಷ್ಟು ಶ್ರಮಪಟ್ಟರೂ ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ನಿನಗೆ ಧನಿಕನಾಗುವ ಅದೃಷ್ಟ ಇದ್ದರೆ ಅದಕ್ಕೆ ನೀನು ಶ್ರಮಪಡಬೇಕಾಗಿಲ್ಲ. ತನ್ನಷ್ಟಕ್ಕೇ ನೀನು ಧನಿಕನಾಗುತ್ತೀಯಾ, ಇದು ಲೋಕದ ನಿಯಮ, ಕಾಲನ ಮಹಿಮೆ ತಿಳಿಯಿತೇನೋ ಬೇಕೂಫಾ. ಅಳಬೇಡ, ನಾಳೆ ಊರಿಗೆ ಹೋಗೋಣಾ.”

ತಿರುಪೆಗೆ ಸಂತೋಷವಾಯಿತು. ಮರುದಿನ ಬೆಳಿಗ್ಗೆ ತಿರುಪೆ ತನ್ನ ಬಟ್ಟೆ ಮೂಟೆ ಕಟ್ಟಿಕೊಂಡು ಮೇಕಿಮಾಮನ ಬರುವಿಕೆಯನ್ನೇ ಕಾಯುತ್ತಿದ್ದ. ಅಷ್ಟು ಹೊತ್ತಿಗೆ ಅನತಿ ದೂರದಲ್ಲಿ ಅಜಾನುಬಾಹು ವ್ಯಕ್ತಿಯೊಬ್ಬ ಬೈಕು ನಿಲ್ಲಿಸಿ ತನ್ನತ್ತ ಬರುತ್ತಿರುವುದನ್ನು ತಿರುಪೆ ನೋಡಿದ. ಅವನು ಬಣ್ಣ ಬಣ್ಣದ ಲುಂಗಿ ಉಟ್ಟಿದ್ದ. ಬಿಳಿ ಜುಬ್ಬಾ, ಕುರುಚಲು ಬಿಳಿ-ಕಪ್ಪು ಮಿಶ್ರಿತ ಗಡ್ಡ, ದಪ್ಪ ಮಿಲಿಟರಿ ಮೀಸೆ, ನಿದ್ದೆಗೆಟ್ಟ ಕೆಂಪು ಕಣ್ಣುಗಳು. ತಲೆಗೊಂದು ಕಪ್ಪು ಟೋಪಿ ಹಾಕಿದ್ದ. ಬಾಯಲ್ಲಿ ಹೊಗೆಯಾಡುವ ಚುಟ್ಟಾ, ಹತ್ತಿರ ಬಂದವನೇ ಹುಡುಗನನ್ನು ನೋಡಿ ನಕ್ಕ.

“ಚಲೋ ಬೇಟಾ, ಧೇರ್ ಹೋಗಯಾ…” ಎನ್ನುತ್ತಾ ತಿರುಪೆಯ ರಟ್ಟೆ ಹಿಡಿದು ಬೈಕಿನ ಕಡೆ ಸಾಗಿದ. ತಿರುಪ ಗಾಬರಿಯಾಗಿ ಜೋರಾಗಿ ಅಳತೊಡಗಿದ.

“ನಾನು ಬರಲ್ಲ. ನನಗೆ ಮೇಕಿಮಾಮ ಬೇಕು…. ಮೇಕಿ ಮಾಮ…”

“ಮೇಕಿ-ಕಾಕಿ ಕೋಯೀ ಇದರ್ ನಹೀ ಹೈ. ಹಮ್ಮೆ ಉಸುಕೋ ಪೈಸಾ ದಿಯಾ ಹೈ. ಓ ಕಭೀ ಇದರ್ ನಹೀ ಆಯೇಗಾ.”

ಆತನು ಕೊಂಕು ನಗು ನಗುತ್ತಾ ತಿರುಪೆಯನ್ನು ಅನಮತ್ತಾಗಿ ಎತ್ತಿ, ತನ್ನ ಬಲವಾದ ತೋಳಿನ ಮಧ್ಯೆ ಕುಳ್ಳಿರಿಸಿ ಬೈಕನ್ನು ವೇಗವಾಗಿ ಚಲಾಯಿಸಿದ.
*****

Tagged:

Leave a Reply

Your email address will not be published. Required fields are marked *

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...