೧
ನಸುಗೆಂಪಿನ
ತುಸು ಹಳದಿಯ
ಸಮ್ಮಿಶ್ರಣದೆಸಕ
ಚೆಲುವಾಗಿರೆ,
ಹೊಳೆಯುತಲಿಕ್ಕೆ
ಅದೆಯರುಣನ ಗಮಕ
೨
ಕೆಂಬರಲನು
ಅಂಬರದಲಿ
ತುಂಬಿದ ತೆರ ನೋಟ;
ಕುಂಕುಮ ರಸ-
ವಂಕಿತವಹ
ವರ ಪಾಟಲ ಮಕುಟ
೩
ಚೆಂದಳಿರನು
ನೆಯ್ದದರನು
ತೊಟ್ಟಿಹ ಸುವಿಲಾಸ;
ಕೆಮ್ಮೀಸೆಯ
ಹುಮ್ಮಸವನು
ಇಮ್ಮಡಿಸುವ ಹಾಸ
೪
ರಕ್ತಾಂಬರ
ಸಕ್ತೋದರ
ಕಿರಣದ ಪರಿಪಾಟ;
ಕೆಂದಳದಲಿ
ಬಿಗಿವಿಡಿದಿಹ
ಹವಳದ ಚೆಲು ‘ಚಾಟಿ’
೫
ಇಂತೊಪ್ಪಿರೆ
ಸಂತಸದಲಿ
ಮೂಡಣದಲಿ ಅರುಣ
ಮೂಡುತ, ದಿಸೆ-
ಗೀಡಾಡಿದ
ನವ ಕುಂಕುಮ ಕಿರಣ
೬
ಹಕ್ಕಿಯ ಕೊರ-
ಲಿಂಚರ ಹೊರ
ಹೊರಡಿಸಿ ಹಾಡುವನು
ಮಕ್ಕಳ ಮಾ-
ತಾಡಿಸಿ, ತಾ-
ನುರೆ ತೊದಲಾಡುವನು
೭
ಸಿ೦ಗಾರದ
ತಂಗಾಳಿಯ
ತೀಡಿಸಿ, ಸುಯ್ಯುವನು
ಅರಳಾಗಿಸಿ,
ನಗಿಸುತ ನಗುತಿಹನು
೮
ನಿದ್ದೆಯ ಪರೆ
ಕೀಳುತಲರೆ-
ದೆರಿದಿಹ ಕಣ್ಣುಗಳ
ಬಿರಿದರಳಿಸಿ,
ಎಬ್ಬಿಸುವನು
ನಾಡಿನ ಜನರುಗಳ
೯
ಹೊಸ ಹುರುಪನು
ಹೊಸೆಯಿಸುವನು
ಬೀರುತ ಚೈತನ್ಯ;
ಉಪಹಾಸದಿ
ಅಪಹರಿಸುವ
ಜಡತೆಯ ಮಾಲಿನ್ಯ
೧೦
‘ಅಜ್ಞಾನದ
ಅಂಧತೆಯನು
ಬೇದಿಸಿ ನೇಸರಿದೋ-
ಬೆಳಕಿನ ಬೆಳೆ
ತಿಳಿವಿನ ಹೊಳೆ
ಹೊಮ್ಮಿಸಿ ಬರುವನಿದೊ!’
೧೧
ಎಂಬಾ ನುಡಿ
ನಂಬಿಸಿಯಡಿ-
ಯಿಡುವನು ಮುಂದರುಣ;
ಆ ನಿಮಿಷದಿ
ರವಿಯುದಿಸುತ
ಸುರಿವನು ಸುಜ್ಞಾನ!
*****
೧೯೩೫

















