ಮೈಸೂರಿನ ವಿದ್ಯಾರಣ್ಯಪುರದಲ್ಲಿ ಅವರ ಮನೆ. ತಂದೆ ಕೋದಂಡ ರಾಮಯ್ಯನವರು ಸಂಗೀತ ವಿದ್ವಾಂಸರು, ಅವಕಾಶ ಸಿಕ್ಕಾಗ ಸಂಗೀತ ಕಛೇರಿ ಮಾಡುತ್ತಾರೆ. ಮಿಕ್ಕ ಸಮಯದಲ್ಲಿ ನಾಲ್ಕು ಮಕ್ಕಳಿಗೆ ಸಂಗೀತ ಪಾಠ ಹೇಳಿಕೊಡುತ್ತಾರೆ. ಮಗ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿದ್ದಾನೆ. ಅವನು ಓದಿ ದೊಡ್ಡ ಡಾಕ್ಟರಾಗಿ ಕೆಲಸಕ್ಕೆ ಸೇರಿ ಕೈತುಂಬಾ ಸಂಪಾದಿಸುವ ವರೆಗೆ ತಂದೆಗೆ ಬಹಳ ಕಷ್ಟ, ಮಗನಿಗೆ ಸರ್ಕಾರದಿಂದ ಸ್ಕಾಲರ್‌ಶಿಪ್ ಬರುತ್ತದೆ. ಬ್ಯಾಂಕಿನವರು ವಿದ್ಯಾಭ್ಯಾಸಕ್ಕೆ ಸಾಲ ಕೊಟ್ಟಿದ್ದಾರೆ. ಮಗಳು ಸರಸ್ವತಿ ಮದುವೆಯಾಗಿ ಬೆಂಗಳೂರಿನಲ್ಲಿದ್ದಾಳೆ. ಅವಳ ಪತಿ ವಿಮಾನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಾರೆ. ಬೆಂಗಳೂರಿನಲ್ಲಿ ಸ್ವಂತ ಮನೆ ಇದೆ. ಆರ್ಥಿಕವಾಗಿ ಏನೂ ತೊಂದರೆಯಿಲ್ಲ. ಅವರಿಗೆ ಒಬ್ಬಳು ಮಗಳು. ಹೆಸರು ನಯನ. ಅವಳಿನ್ನೂ ಶಾಲೆಯಲ್ಲಿ ಓದುತ್ತಿದ್ದಾಳೆ. ಇತ್ತೀಚಿಗಷ್ಟೇ ರಾಯರ ಪತ್ನಿ ಲಕ್ಷ್ಮೀದೇವಿ ದೈವಾದೀನರಾದರು. ರಾಯರ ಜೀವನದ ಆಶಾ ಕಿರಣ ಮಗ ಅರವಿಂದ. ಅವನು ಚೆನ್ನಾಗಿ ಓದಿ ಡಾಕ್ಟರಾದರೆ ತಮ್ಮ ಸಮಸ್ಯೆಗಳೆಲ್ಲಾ ಪರಿಹಾರವಾಗುತ್ತದೆ. ಅದೇ ಅವರ ಬಾಳಿನ ಉದ್ದೇಶ. ಅದೇ ಅವರ ಕನಸು.
ಅರವಿಂದ ಕೂಡಾ ತಂದೆಯಂತೆ ಸಂಗೀತ ವಿದ್ವಾನ್. ವೈದ್ಯನಾದರೇನು ಸಂಗೀತ ಕಲಿಯಬಾರದೇ? ಅವನಿಗೆ ತಂದೆಯೇ ಗುರು, ಮತ್ತೊಬ್ಬ ಗುರುಗಳ ಬಳಿ ಕೆಲವು ಕೀರ್ತನೆಗಳನ್ನು ಭಾವಗೀತೆಗಳನ್ನು ರಂಗಗೀತೆಗಳನ್ನು ಹಾಡಲು ಕಲಿತಿದ್ದಾನೆ. ಆದರೆ ತನ್ನ ವೈದ್ಯ ವಿದ್ಯಾಭ್ಯಾಸದಲ್ಲಿ ಸಂಗೀತಾಭ್ಯಾಸಕ್ಕೆ ಸಮಯವೇ ಇಲ್ಲ. ನಿಯಮಿತವಾಗಿ ಕುಳಿತು ಹಾಡಿ ಅಭ್ಯಾಸ ಮಾಡದಿದ್ದರೂ, ಮನೆಯ ಕೆಲಸ ಮಾಡುವಾಗ ಸದಾ ಹಾಡುತ್ತಾ ಇರುತ್ತಾನೆ. ಕಾಲೇಜಿನ ಕಾರ್ಯಕ್ರಮಗಳಲ್ಲಿ ತಪ್ಪದೆ ಹಾಡುತ್ತಾನೆ. ಆದರೆ ಬೇರೆ ಕಾಲೇಜುಗಳಲ್ಲಿ ಅಂದರೆ ವಿಜ್ಞಾನ, ಕಲಾ, ವಾಣಿಜ್ಯ ಮುಂತಾದ ಕಾಲೇಜುಗಳಲ್ಲಿ ಇರುವಷ್ಟು ಅವಕಾಶಗಳು ವೈದ್ಯಕೀಯ ಕಾಲೇಜುಗಳಲ್ಲಿ ಇರುವುದಿಲ್ಲ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಈ ತರಹದ ಪಠ್ಯೇತರ ಚಟುವಟಿಕೆಗಳಲ್ಲಿ ಉತ್ಸಾಹವೂ ಇರುವುದಿಲ್ಲ. ಹಾಗಾಗಿ ಅರವಿಂದನ ಸಂಗೀತಾಭ್ಯಾಸ ಸಾಧಾರಣ ಸ್ತರದಲ್ಲಿ ಸಾಗಿತ್ತು. ಅರವಿಂದ ತನ್ನ ವೈದ್ಯಕೀಯ ವಿದ್ಯಾಭ್ಯಾಸದಲ್ಲಿ ಪೂರಾ ಲಕ್ಷ್ಯವಿಟ್ಟು ಓದುತ್ತಿದ್ದ. ಹೆಣ್ಣು ದಿಕ್ಕಿಲ್ಲದ ಮನೆಯಲ್ಲಿ ಈ ತಂದೆ ಮಕ್ಕಳು ಸೇರಿ ಮನೆಯ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದರು. ಸರಸ್ವತಿ ಆಗಾಗ ತಂದೆಯ ಮನೆಗೆ ಬಂದು ಹೋಗುತ್ತಿದ್ದಳು.
ಅರವಿಂದನ ಎಂ.ಬಿ.ಬಿ.ಎಸ್ ಮುಗಿಯಿತು. ಮೈಸೂರಿನಲ್ಲಿಯೇ ಒಂದು ಆಸ್ಪತ್ರೆಯಲ್ಲಿ ಕೆಲಸವೂ ಸಿಕ್ಕಿತು. ಆದರೆ ಆ ಕೆಲಸದಲ್ಲಿ ಅರವಿಂದನಿಗೆ ಸಮಾಧಾನವೂ ಸಿಗಲಿಲ್ಲ. ತೃಪ್ತಿಯೂ ಸಿಗಲಿಲ್ಲ. ಅವನ ಸಹೋದ್ಯೋಗಿಗಳಾಗಲಿ, ಆಸ್ಪತ್ರೆಯ ಆಡಳಿತ ಮಂಡಳಿಯವರಾಗಲಿ ಇವನನ್ನು ಒಬ್ಬ ಪೂರ್ಣ ಪ್ರಮಾಣದ ವೈದ್ಯನೆಂದು ಒಪ್ಪಿಕೊಂಡಿರಲಿಲ್ಲ. ಆಸ್ಪತ್ರೆಗೆ ಇಂಟರ್ನ್‌ಷಿಪ್‌ಗೆ ಬರುವ ವಿದ್ಯಾರ್ಥಿ ಎಂಬಂತೆ ಪರಿಗಣಿಸುತ್ತಿದ್ದರು. ಅಷ್ಟೇಕೆ, ಇವನ ಬಳಿಗೆ ಬರುವ ರೋಗಿಗಳೂ ಮತ್ತು ಅವರ ಮನೆಯವರಿಗೂ ಕೂಡಾ ಇವರನ್ನು ಪೂರ್ಣ ಪ್ರಮಾಣದ ಡಾಕ್ಟರ್ ಎಂದು ಪರಿಗಣಿಸುತ್ತಿರಲಿಲ್ಲ. ಯಾರಾದರೂ ದೊಡ್ಡ ಡಾಕ್ಟರ್ ಇದ್ದರೆ ಹೇಳಿ ಎನ್ನುತ್ತಿದ್ದರು. ಬಹುಷಃ ಅದಕ್ಕೆ ಕಾರಣ ಅರವಿಂದನ ವಯಸ್ಸು ಮತ್ತು ಅವನ ಸಣ್ಣ ದೇಹ. ಅವನು ಎಂ.ಬಿ.ಬಿ.ಎಸ್ ಪಾಸ್ ಮಾಡಿದ ಡಾಕ್ಟರಾದರೂ ಇನ್ನೂ ಹುಡುಗನಂತೆಯೇ ಕಾಣುತ್ತಿದ್ದ. ಮೇಲಾಗಿ ಸ್ವಲ್ಪ ಸಂಕೋಚದ ಸ್ವಭಾವ. ಹಿರಿಯ ವೈದ್ಯರಂತೆ ಜೋರಾಗಿ ಮಾತನಾಡುತ್ತಿರಲಿಲ್ಲ. ಆದರೂ ಬಹಳ ಶ್ರದ್ಧೆಯಿಂದ ಮತ್ತು ಆಸಕ್ತಿಯಿಂದ ಕೆಲಸ ಮಾಡುತ್ತಿದ್ದುದರಿಂದ ನಿಧಾನವಾಗಿ ಜನರ ಮೆಚ್ಚುಗೆ ಗಳಿಸತೊಡಗಿದ.
ಅರವಿಂದನಿಗೆ ಹೃದಯರೋಗ ತಜ್ಞನಾಗಬೇಕು, ಹೃದಯದ ಶಸ್ತ್ರ ಚಿಕಿತ್ಸೆ ಮಾಡಬೇಕು ಎಂಬ ಬಯಕೆ ಬಲವಾಗತೊಡಗಿತು. ಆಸ್ಪತ್ರೆಯ ಹೃದಯರೋಗತಜ್ಞರ ಜೊತೆ ಹೆಚ್ಚಾಗಿ ಬೆರೆಯುತ್ತಿದ್ದ ಮತ್ತು ಹೃದ್ರೋಗ ವಿಭಾಗದಲ್ಲಿ ಫಿಜಿಷಿಯನ್ ಆಗಿ ಕೆಲಸ ಮಾಡತೊಡಗಿದ. ಆಸ್ಪತ್ರೆಯ ಹಿರಿಯ ವೈದ್ಯರು ಮತ್ತು ಆಡಳಿತವರ್ಗದವರು ಇವನ ಶ್ರದ್ಧೆ ಮತ್ತು ಬುದ್ಧಿವಂತಿಕೆಯನ್ನು ನೋಡಿ, ನೀವು ಕಾರ್ಡಿಯಾಲಜಿಯಲ್ಲಿ ಎಂ.ಎಸ್. ಮಾಡಿಕೊಳ್ಳಿ, ನಿಮಗೆ ಒಳ್ಳೆಯ ಭವಿಷ್ಯವಿದೆ ಎಂದು ಸಲಹೆ ಕೊಟ್ಟರು. ಅರವಿಂದನಿಗೂ ಅದೇ ಸರಿ ಎನಿಸಿತು. ಆ ವಿಷಯದ ಬಗ್ಗೆ ತಂದೆಯವರಲ್ಲಿ ಚರ್ಚಿಸಿದ. ಅವರಿಗೆ ಅಂತಹ ವಿಶೇಷ ಉತ್ಸಾಹವೇನೂ ಇರಲಿಲ್ಲ. ಆದರೆ ಮಗನ ಅಭಿವೃದ್ಧಿಗೆ ಮತ್ತು ಅವನ ಉತ್ಸಾಹಕ್ಕೆ ಅಡ್ಡಿ ಮಾಡಬಾರದೆಂದು ಅವನು ಎಂ.ಎಸ್. ಮಾಡುವುದಕ್ಕೆ ಒಪ್ಪಿಕೊಂಡರು. ಅರವಿಂದ ಬ್ಯಾಂಕಿಗೆ ಹೋಗಿ ತಾನು ಎಂ.ಎಸ್. ಮಾಡಬೇಕೆಂದಿರುವ ವಿಷಯವನ್ನು ತಿಳಿಸಿ, ಅದಕ್ಕೆ ಬೇಕಾಗುವ ವಿದ್ಯಾಭ್ಯಾಸ ಸಾಲ ಸೌಲಭ್ಯದ ಬಗ್ಗೆ ವಿಚಾರಿಸಿದ. ಆ ಶಾಖೆಯ ಮ್ಯಾನೇಜರ್ ಬಹಳ ಒಳ್ಳೆಯವರು. ಓದಲು ಮುಂದೆ ಬರುವ ಹುಡುಗರನ್ನು ಬಹಳ ಪ್ರೋತ್ಸಾಹಿಸುತ್ತಿದ್ದರು. ಇವನಿಗೂ ಖಂಡಿತ ಎಜುಕೇಷನ್ ಲೋನ್ ಕೊಡುವುದಾಗಿ ಒಪ್ಪಿಕೊಂಡರು. ಅರವಿಂದ ಆ ವರ್ಷದ ಎಂಟ್ರೆಂಸ್ ಪರೀಕ್ಷೆ ಬರೆದ, ಒಳ್ಳೆಯ ರ್ಯಾಂಕಿಂಗ್‌ನಲ್ಲಿ ಉತ್ತೀರ್ಣನಾದ. ಕೌನ್ಸಿಲಿಂಗ್‌ನಲ್ಲಿ ಯಾವ ವಿಶ್ವವಿದ್ಯಾಲಯ ಬೇಕು? ಯಾವ ಕಾಲೇಜು ಬೇಕು? ಎಂದು ಕೇಳಿದಾಗ ಮಣಿಪಾಲದ ಕಾಲೇಜು ಆರಿಸಿಕೊಂಡ, ಸೀಟು ದೊರೆಯಿತು. ಬ್ಯಾಂಕಿನಲ್ಲಿ ಸಾಲ ದೊರೆಯಿತು. ಮಣಿಪಾಲದ ವೈದ್ಯಕೀಯ ಕಾಲೇಜಿನಲ್ಲಿ ಸೇರಿಯೂ ಆಯಿತು. ಈಗ ಇವನ ಮುಂದಿರುವ ದೊಡ್ಡ ಸಮಸ್ಯೆಯೆಂದರೆ ತಂದೆಯವರನ್ನು ಮೈಸೂರಿನಲ್ಲಿ ಒಂಟಿಯಾಗಿ ಬಿಟ್ಟು ಹೋಗುವುದು. ಹಾಗೆಂದು ಅವರನ್ನು ಮಣಿಪಾಲಕ್ಕೆ ಕರೆದುಕೊಂಡು ಹೋಗುವಂತೆಯೂ ಇಲ್ಲ. ಈಗೇನು ಮಾಡುವುದೆಂದು ಅವರನ್ನೇ ಕೇಳಿದ, ಅವರು “ಧಾರಾಳವಾಗಿ ಹೋಗಿ ಬಾ. ನನ್ನ ಊಟ ನಾನು ಮಾಡಿಕೊಳ್ಳುತ್ತೇನೆ. ಇನ್ನು ಮನೆ ಗುಡಿಸಲು, ಪಾತ್ರೆ ತೊಳೆಯಲು ರತ್ನಮ್ಮ ಬರುತ್ತಾಳೆ. ನೀನು ವಾರಕ್ಕೊಮ್ಮೆಯೋ ಹದಿನೈದು ದಿನಗಳಿಗೆ ಒಮ್ಮೆಯೋ ಬಂದು ಹೋಗು, ನಾನು ನನ್ನ ಸಂಗೀತದ ಪಾಠಗಳಲ್ಲಿ ನಿರತನಾಗಿರುತ್ತೇನೆ. ಯಾವಾಗಲಾದರೊಮ್ಮೆ ಬೆಂಗಳೂರಿಗೆ ಹೋಗಿ ಸರಸ್ವತಿಯನ್ನು ಅಳಿಯಂದಿರನ್ನು ಮಗುನೂ ನೋಡಿಕೊಂಡು ಬರುತ್ತೇನೆ. ನನ್ನ ಚಿಂತೆ ಬಿಡು, ನೀನು ನಿಶ್ಚಿಂತೆಯಾಗಿ ಹೋಗಿ ಬಾ” ಎಂದರು.
ಅರವಿಂದ ಮಣಿಪಾಲಕ್ಕೆ ಹೋಗಲು ಎಲ್ಲಾ ತಯಾರಿ ಮಾಡಿಕೊಂಡ. ಹೊರಡುವ ಮುನ್ನ ಬೆಂಗಳೂರಿಗೆ ಹೋಗಿ ಅಕ್ಕನ ಮನೆಯಲ್ಲಿ ಎರಡು ದಿನ ಇದ್ದು ಎಲ್ಲರೊಂದಿಗೆ ಸಂತೋಷವಾಗಿ ಕಾಲ ಕಳೆದು ಮಣಿಪಾಲಕ್ಕೆ ಹೊರಟ, ಮಣಿಪಾಲ ಮೆಡಿಕಲ್ ಕಾಲೇಜ್ ಬಹಳ ಚೆನ್ನಾಗಿತ್ತು. ಹಾಸ್ಟೆಲ್‌ನಲ್ಲಿ ಕೂಡಾ ಎಲ್ಲಾ ಅನುಕೂಲಗಳೂ ಇದ್ದವು. ಹೊಸ ಹೊಸ ಗಳೆಯರಾದರು. ವಿದ್ಯಾಭ್ಯಾಸದಲ್ಲಿ ಪೂರ್ಣ ಲಕ್ಷ್ಯವಿಟ್ಟು ಓದತೊಡಗಿದ. ಅವಕಾಶ ಸಿಕ್ಕಾಗ ಕಾಲೇಜಿನ ಕಾರ್ಯಕ್ರಮಗಳಲ್ಲಿ ತಪ್ಪದೆ ಹಾಡುತ್ತಿದ್ದ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಖ್ಯಾತವಾದ ಹಲವಾರು ದೇವಾಲಯಗಳಿದ್ದವು. ಆಗಾಗ ಉಡುಪಿಯ ಕೃಷ್ಣ ಮಂದಿರ, ಧರ್ಮಸ್ಥಳದ ಮಂಜುನಾಥ ದೇವಸ್ಥಾನ ಮುಂತಾದ ದೇವಾಲಯಗಳಿಗೆ ಹೋಗಿ ಬರುತ್ತಿದ್ದ, ಹೋದಲ್ಲೆಲ್ಲಾ ತಪ್ಪದೇ ದೇವರ ನಾಮಗಳನ್ನು ಹಾಡುತ್ತಿದ್ದ. ಆಗಾಗ ಬೆಂಗಳೂರಿಗೆ, ಮೈಸೂರಿಗೆ ಹೋಗಿ ಅಕ್ಕ, ಭಾವನವರನ್ನು, ತಂದೆಯವರನ್ನು ನೋಡಿಕೊಂಡು ಬರುತ್ತಿದ್ದ. ಹೀಗೆಯೇ ನೋಡ ನೋಡುತ್ತಿದ್ದಂತೆಯೋ ಎರಡು ವರ್ಷ ಕಳೆಯಿತು. ಅರವಿಂದನ ಎಂ.ಎಸ್. ಪದವಿ ಮುಗಿಯಿತು. ಮತ್ತೊಂದು ವರ್ಷ ಅಲ್ಲಿಯೇ ಇದ್ದು ಆಸ್ಪತ್ರೆಯಲ್ಲಿ ಇಂಟರ್ನ್‌ಶಿಪ್ ಕೂಡಾ ಮಾಡಿ ಮುಗಿಸಿದ.
ಮುಂದೆ ಎಲ್ಲಿ ಕೆಲಸಕ್ಕೆ ಸೇರಬೇಕು ಎಂಬ ಪ್ರಶ್ನೆ ಎದುರಾಯಿತು. ಅವನ ಗೆಳೆಯರೂ, ಪ್ರಾಧ್ಯಾಪಕರು ಎಲ್ಲರೂ ಬೆಂಗಳೂರಿಗೆ ಹೋಗಿ ಯಾವುದಾದರೂ ಹೈಟೆಕ್ ಆಸ್ಪತ್ರೆ ಸೇರಿ, ಉಜ್ವಲ ಭವಿಷ್ಯವಿದೆ ಮತ್ತು ಒಳ್ಳೆಯ ಸಂಬಳವೂ ದೊರೆಯುತ್ತದೆ ಎಂದು ಸಲಹೆ ಕೊಟ್ಟರು.
ತಂದೆಯವರ ಬಳಿ ಚರ್ಚೆಮಾಡಿದ. ಅವರು ಮರು ಮಾತಾಡದೇ ಹಾಗೆಯೇ ಆಗಲಿ ಬೆಂಗಳೂರಿನಲ್ಲಿಯೇ ಕೆಲಸಕ್ಕೆ ಸೇರಿಕೋ ಎಂದು ಪ್ರೋತ್ಸಾಹಿಸಿದರು. ಬೆಂಗಳೂರಿಗೆ ಹೋಗಿ ಅಕ್ಕನಿಗೆ ಹೇಳಿದ. ಅವಳಿಗಂತೂ ಅಪರಿಮಿತವಾದ ಸಂತೋಷವಾಯಿತು. “ಬಹಳ ಸಂತೋಷ ಇಲ್ಲಿಯೇ ಕೆಲಸಕ್ಕೆ ಸೇರು. ನಮ್ಮ ಮನೆಯಲ್ಲಿಯೇ ಇರು. ಮಹಡಿಯ ಮೇಲಿನ ರೂಮು ಹೇಗೂ ಖಾಲಿ ಇದೆ. ಅಲ್ಲಿಯೇ ಇದ್ದುಕೋ. ಊಟ ತಿಂಡಿ, ಕಾಫಿ ಎಲ್ಲಾ ಇಲ್ಲಿಯೇ ಕೆಳಗೆ ಬಂದು ನಮ್ಮ ಜೊತೆಗೆ ತೆಗೆದುಕೊ” ಎಂದೆಲ್ಲಾ ಬಹಳ ಉತ್ಸಾಹದಿಂದ ಹೇಳಿದಳು. ಅರವಿಂದ ತನ್ನ ಎಂ.ಎಸ್. ಪದವಿ ಮುಗಿದ ಮೇಲೆ ಮಣಿಪಾಲದ ತನ್ನ ಹಾಸ್ಟೆಲ್ ಕೋಣೆಯನ್ನು ಖಾಲಿಮಾಡಿ, ತನ್ನ ಬಟ್ಟೆ ಬರೆ, ಪುಸ್ತಕಗಳು ಮತ್ತು ಇತರ ವಸ್ತುಗಳನ್ನು ತೆಗೆದುಕೊಂಡು ನೇರವಾಗಿ ಮೈಸೂರಿನ ಮನೆಗೇ ಹೋಗಿ ತನ್ನ ತಂದೆಯವರ ಜೊತೆಗೇ ಇದ್ದ. ಮೈಸೂರಿನಲ್ಲಿದ್ದ ತನ್ನ ಚಿಕ್ಕಪ್ಪಂದಿರ ಮನೆಗಳಿಗೆ, ಸೋದರತ್ತೆಯ ಮನೆಗೆ, ಇನ್ನಿತರ ಬಳಗದವರ ಮನೆಗಳಿಗೆ ಹೋಗಿಬಂದ. ಅದೇ ರೀತಿ ತನ್ನ ಸಹಪಾಠಿಗಳ ಮನೆಗಳಿಗೆ, ತಾನು ಹಿಂದೆ ಕೆಲಸ ಮಾಡುತ್ತಿದ್ದ ಆಸ್ಪತ್ರೆಯ ವೈದ್ಯರುಗಳ ಮನೆಗಳಿಗೆ ಹೋಗಿ ಎಲ್ಲಾ ಗೆಳೆಯರನ್ನು ಮಾತನಾಡಿಸಿಕೊಂಡು ಬಂದ. ಆಗಾಗ ಬೆಂಗಳೂರಿಗೆ ಹೋಗಿ ವಿವಿಧ ಆಸ್ಪತ್ರೆಗಳಲ್ಲಿ ಕೆಲಸಕ್ಕೆ ಅರ್ಜಿ ಹಾಕಿ ಬಂದ. ಕಾರ್ಡಿಯಾಲಜಿಯಲ್ಲಿ ಎಂ.ಎಸ್. ಮಾಡಿರುವುದರಿಂದ ಎಲ್ಲಾ ಆಸ್ಪತ್ರೆಗಳಲ್ಲಿ ಕೆಲಸ ಕೊಡಲು ಮುಂದಾದರು. ಕೊನೆಗೆ ಒಂದು ಒಳ್ಳೆಯ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿಕೊಂಡ.
ಅಕ್ಕ ಸರಸ್ವತಿಯ ಮನೆಯಲ್ಲಿಯೇ ವಾಸ್ತವ್ಯ ಹೂಡಿದ. ಸರಸ್ವತಿಗೆ, ಭಾವ ಜಗದೀಶ್‌ರವರಿಗೆ, ಮಗಳು ನಯನಾಗೆ ಎಲ್ಲರಿಗೂ ಆರವಿಂದ ಎಂದರೆ ಬಹಳ ಅಚ್ಚುಮೆಚ್ಚು. ಅರವಿಂದನಿಗೆ ಮೊದಲ ತಿಂಗಳ ಸಂಬಳ ಬಂದಾಗ ನಯನಾಳಿಗೆ ಹೊಸ ಉಡುಪುಗಳು, ಅಕ್ಕನಿಗೆ ರೇಷ್ಮೆಸೀರೆ, ಭಾವನಿಗೆ ಸೂಟು ಎಲ್ಲಾ ಕೊಡಿಸಿದ. ಬೆಂಗಳೂರಿನ ಪ್ರಸಿದ್ಧ ಹೊಟೇಲ್‌ಗೆ ಕರೆದೊಯ್ದು ಊಟ ಹಾಕಿಸಿದ. ಕೆಲವೇ ದಿನಗಳಲ್ಲಿ ಒಂದು ಒಳ್ಳೆಯ ಕಾರು ತೆಗೆದುಕೊಂಡ. ರಾತ್ರಿ ಬೇಗ ಮನೆಗೆ ಬಂದಾಗ ನಯನಳಿಗೆ ಪಾಠ ಹೇಳಿಕೊಡುತ್ತಿದ್ದ. ಕೆಲವೊಮ್ಮೆ ಸಂಗೀತ ಅಭ್ಯಾಸ ಮಾಡಿಕೊಳ್ಳುತ್ತಿದ್ದ. ತಂದೆಯವರು ಆಗಾಗ ಬೆಂಗಳೂರಿಗೆ ಬಂದು ಮಗ, ಮಗಳು, ಅಳಿಯ, ಮೊಮ್ಮಗಳ ಜೊತೆ ಎರಡು ಮೂರು ದಿನ ಇದ್ದು ಹೋಗುತ್ತಿದ್ದರು. ಅರವಿಂದ ತಂದೆಯವರನ್ನು ಭಾವನವರನ್ನು ತನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿ “ಡೀಟೈಲ್ಡ್ ಮೆಡಿಕಲ್ ಚೆಕ್ಅಪ್” ನ ಪ್ರಕಾರ ಎಲ್ಲಾ ರೀತಿಯ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿದ. ಇವರ ಜೀವನ ಹೀಗೆಯೇ ಸುಗಮವಾಗಿ ಸಾಗುತ್ತಿತ್ತು.
ಕೋದಂಡರಾಮಯ್ಯನವರು ಒಮ್ಮೆ ತಮ್ಮ ಸ್ನೇಹಿತ ಕೃಷ್ಣ ಅಯ್ಯಂಗಾರ್‌ರ ಹತ್ತಿರ ತಮ್ಮ ಮಗನ ವಿದ್ಯಾಭ್ಯಾಸ, ಒಳ್ಳೆಯ ನೌಕರಿ ಎಲ್ಲಾ ವಿಷಯಗಳನ್ನು ಹೆಮ್ಮೆಯಿಂದ ಹೇಳಿಕೊಂಡರು. ಅಯ್ಯಂಗಾರರು ಹೇಳಿದರ “ಬಹಳ ಸಂತೋಷ ರಾಯರೆ ನೀವು ಕಷ್ಟಪಟ್ಟಿದಕ್ಕೂ ಸಾರ್ಥಕವಾಯಿತು. ಮಗ ಚೆನ್ನಾಗಿ ಓದಿದಾನೆ. ಒಳ್ಳೆಯ ಕೆಲಸದಲ್ಲಿದ್ದಾನೆ. ಕೈತುಂಬಾ ಸಂಪಾದಿಸ್ತಾನೆ. ಮುಖ್ಯವಾಗಿ ಒಳ್ಳೆಯ ಗುಣವಂತ ಹುಡುಗ. ನೀವು ಪಟ್ಟ ಶ್ರಮ ಸಾರ್ಥಕವಾಯಿತು. ಇನ್ನು ತಡವೇತಕೆ? ಅವನಿಗೊಂದು ಮದುವೆ ಮಾಡಿಬಿಡಿ. ನಿಮ್ಮ ಜವಾಬ್ದಾರಿ ಮುಗೀತು ಅನ್ಕೊಳಿ. ಮುಂದೆ ಈ ಮನೇನ ಬಾಡಿಗೆಗೋ, ಭೋಗ್ಯಕ್ಕೋ ಕೊಟ್ಟು ನೀವು ಹೋಗಿ ಬೆಂಗಳೂರಲ್ಲೇ ಮಕ್ಕಳ ಜೊತೆ ಹಾಯಾಗಿ ಇದ್ದುಬಿಡಿ” ಎಂದರು. ಅಯ್ಯಂಗಾರರ ಮಾತು ಸರಿ ಎನಿಸಿತು. “ನೀವು ಹೇಳೋದು ಸರಿ ಸ್ವಾಮಿ. ಈ ಸಲ ಬೆಂಗಳೂರಿಗೆ ಹೋದಾಗ ನಮ್ಮ ಹುಡುಗನ ಹತ್ತಿರ ಮಾತಾಡ್ತೀನಿ, ಹಾಗೇ ನಮ್ಮ ಮಗಳು, ಅಳಿಯಂದಿರ ಹತ್ತಿರಾನೂ ಮಾತಾಡ್ತೀನಿ” ಎಂದರು.
ಅದೇ ಪ್ರಕಾರ ಮುಂದಿನ ಸಲ ಬೆಂಗಳೂರಿಗೆ ಹೋದಾಗ ಮಗ ಅರವಿಂದನ ಮುಂದೆ ಮದುವೆಯ ವಿಷಯ ಎತ್ತಿದರು. ಅವನೂ ಕೂಡಾ ಆ ವಿಷಯ ಯೋಚಿಸಿದ್ದ. ಆದರೂ ಮಾನಸಿಕವಾಗಿ ಸಿದ್ಧನಿರಲಿಲ್ಲ. ಈಗ ತಾನೇ ಕೆಲಸ ಸಿಕ್ಕಿದೆ. ಸ್ವಲ್ಪ ಸುಧಾರಿಸಿಕೊಂಡು ಬೆಂಗಳೂರಿನಲ್ಲಿ ಒಂದು ಸ್ವಂತ ಮನೆ ಮಾಡಿ ನಂತರ ಮದುವೆ ಮಾಡಿಕೊಳ್ಳಬೇಕು ಎನಿಸಿತು. ತಂದೆಯ ಬಳಿ ಹಾಗೆಯೇ ಹೇಳಿದ, “ಅಪ್ಪಾ ಈಗ ತಾನೆ ಕೆಲಸ ಸಿಕ್ಕಿದೆ. ಇನ್ನೂ ನಾನು ಸರ್ಜನ್ನಾಗಿ ಯಾವುದೇ ಆಪರೇಷನ್ ಮಾಡಿಲ್ಲ. ಸೀನಿಯರ್‌ಗಳ ಜೊತೆ ಅಸಿಸ್ಟೆಂಟ್ ಆಗೇ ಕೆಲಸ ಮಾಡ್ತಿದೀನಿ, ನಂದೂ ಅಂತ ಒಂದು ಮನೆ ತಗೋಬೇಕು ಅಂತ ಆಸೆ ಇದೆ. ಅದಕ್ಕೇ ಒಂದೆರಡು ವರ್ಷ ಮದುವೆ ಬೇಡಾ ಅಂತ ಅನ್ಕೊಂಡಿದೀನಿ.” ತಂದೆಯವರಿಗೆ ಅದೇ ಸರಿ ಎನಿಸಿತು. ಹಾಗೇ ಆಗಲಪ್ಪ. ಒಂದೆರಡು ವರ್ಷ ಕಳೀಲಿ ಬಿಡು ಎಂದರು. ಮರುದಿನ ಅರವಿಂದ ಆಸ್ಪತ್ರೆಗೆ ಹೋದ ಮೇಲೆ ರಾಯರು ತಮ್ಮ ಮಗಳ ಹತ್ತಿರ ಈ ವಿಷಯ ಹೇಳಿದರು. ಹಾಗೂ ಅರವಿಂದನ ಅಭಿಪ್ರಾಯವನ್ನು ತಿಳಿಸಿದರು. ಆದರೆ ಸರಸ್ವತಿಗೆ ಅದು ಸರಿಕಾಣಲಿಲ್ಲ. “ಅವನೇನು ಸೆಟ್ಲ್ ಆಗೋದು. ಓದಿ ಆಯ್ತು. ಎಂ.ಎಸ್. ಮಾಡಿದ್ದೂ ಆಯ್ತು. ಒಳ್ಳೆ ಕೆಲಸಾನೂ ಸಿಕ್ತು ಇನ್ನೇನು ಮದುವೆ ಆಗೋದು ತಾನೇ? ಒಂದು ಕೆಲಸ ಮಾಡೋಣಾಪ್ಪ ಅವರಿವರಿಗೆ ಹೇಳಿ ನೋಡೋಣ, ಯಾವುದಾದರೂ ಒಳ್ಳೆಯ ಪ್ರಸ್ತಾಪ ಬಂದರೆ ಜಾತಕ ತರಿಸಿ ನೋಡೋಣ. ಜಾತಕ ಸರಿ ಹೊಂದಿದರೆ ಮುಂದಿನ ವಿಚಾರ ಮಾತಾಡಿ ನಾವು ಅವರನ್ನು ನೋಡೋದು, ಅವರು ನಮ್ಮನ್ನ ನೋಡೋದು ಮುಂದಿನ ಮಾತುಕತೆ ಎಲ್ಲಾ ಆಗೋದರೊಳಗೆ ಒಂದು ವರ್ಷಾನೇ ಆಗತ್ತೆ. ಇನ್ನು ಎಂಗೇಜ್‌ಮೆಂಟ್ ಅಂತ ಮಾಡಿಕೊಂಡು ಬಿಟ್ರೆ ಇನ್ನು ಸ್ವಲ್ಪ ದಿನ ಕಾಯಬಹುದು ಮದುವೆಗೆ.” ರಾಯರಿಗೆ ಅದೂ ಸರಿ ಎನಿಸಿತು. ನೋಡೋಣ ಎಂದು ಮಾತು ಮುಗಿಸಿದರು. ಮರುದಿನ ಮೈಸೂರಿಗೆ ಹೊರಟರು.
ಸರಸ್ವತಿಗೆ ಒಂದು ವಿಚಾರ ಮನಸ್ಸಿಗೆ ಬಂದಿತು. ತನ್ನ ಮಗಳು ನಯನಳನ್ನು ತಮ್ಮನಿಗೆ ಮದುವೆ ಮಾಡಿದರೆ ಹೇಗೆ? ಹೇಗೂ ಅರವಿಂದ ಎಂ.ಬಿ.ಬಿ.ಎಸ್., ಎಂ.ಎಸ್. ಓದಿರುವ ಡಾಕ್ಟರು. ಲಕ್ಷರೂಪಾಯಿ ಸಂಬಳ ಬರುವ ಕೆಲಸವಿದೆ. ಮಗಳನ್ನು ಅವನಿಗೆ ಕೊಟ್ಟು ಮದುವೆ ಮಾಡಿದರೆ ಮಗಳು ಸುಖವಾಗಿರುತ್ತಾಳೆ. ಮಗಳಿಗೆ ಅತ್ತೆ-ಮಾವರ ಕಾಟ ಇಲ್ಲ. ಹಣಕ್ಕೆ, ಒಡವೆಗೆ, ಸುಖಸಂತೋಷಕ್ಕೆ ಏನೂ ಕಡಿಮೆಯಿರುವುದಿಲ್ಲ. ಇದೇ ಸರಿ ಎಂದು ಸಂತೋಷಪಟ್ಟಳು. ರಾತ್ರಿ ಗಂಡ ಆಫೀಸಿನಿಂದ ಬಂದ ಮೇಲೆ ಅವರ ಬಳಿ ಈ ವಿಷಯ ಹೇಳಿದಳು. ಅವರು ಜೋರಾಗಿ ನಕ್ಕುಬಿಟ್ಟರು. “ನೀನು ಇಂತಹ ಹಗಲುಗನಸು ಕಾಣುವುದನ್ನು ಬಿಡು ಸರಸ್ವತಿ. ಈ ವಿಷಯ ಖಂಡಿತ ಸಾಧ್ಯವಿಲ್ಲ. ಅವನ ವಯಸ್ಸೇನು? ಇವಳ ವಯಸ್ಸೇನು? ಅವನು ದೊಡ್ಡ ಡಾಕ್ಟರು. ಅವನು ತನ್ನ ವಿದ್ಯಾರ್ಹತೆಗೆ, ಉದ್ಯೋಗಕ್ಕೆ ಅವರ ಮಟ್ಟದವರನ್ನೇ ನೋಡಿ ಮದುವೆ ಆಗ್ತಾನೆ. ಮುಖ್ಯವಾಗಿ ವಯಸ್ಸಿನ ಅಂತರ ತುಂಬಾ ಜಾಸ್ತಿ. ಎಲ್ಲಾದರೂ ನಯನಳ ಮುಂದೆ ಹೇಳೀಯಾ. ಅವಳದು ಹದಿಹರೆಯದ ವಯಸ್ಸು. ಎಲ್ಲಾದರೂ ಮನಸ್ಸು ಕೆಡಿಸಿಕೊಂಡು ಓದು ಹಾಳು ಮಾಡಿಕೊಂಡರೆ ಏನುಗತಿ? ನೀನು ಆ ವಿಷಯ ಬಿಡು” ಎಂದು ಬಿಟ್ಟರು.
ಆದರೆ ಸರಸ್ವತಿ ಮಾತ್ರ ಆ ವಿಷಯ ಬಿಡಲು ಸಿದ್ಧಳಿರಲಿಲ್ಲ. ದೇವಸ್ಥಾನಕ್ಕೆ ಹೋದಾಗ ತನ್ನ ಗೆಳತಿಯರಿಬ್ಬರ ಹತ್ತಿರ ಈ ವಿಷಯ ಹೇಳಿದಳು. ಅವರೂ ಕೂಡಾ ವಯಸ್ಸಿನ ಅಂತರ ಏನೂ ಪರವಾಗಿಲ್ಲ. ನಮ್ಮ ಸಂಬಂಧೀಕರಲ್ಲಿ ಒಂದು ಮದುವೆ ಆಯಿತು. ಹುಡುಗನಿಗೂ ಹುಡುಗಿಗೂ ಎಂಟು ವರ್ಷ ವ್ಯತ್ಯಾಸ. ಮದುವೆ ಆಗಿ ಚೆನ್ನಾಗಿದ್ದಾರೆ. ಎರಡು ಮಕ್ಕಳೂ ಆಗಿವೆ. ಹಾಗೇ ಹೀಗೇ ಎಂದು ಇವಳ ಕಿವಿ ಊದಿದರು. ಇನ್ನೊಬ್ಬ ಮಹಿಳೆ ತನಗೂ ತನ್ನ ಪತಿಗೂ ಹತ್ತು ವರ್ಷ ವ್ಯತ್ಯಾಸ, ಈಗ ನಮಗೆ ಮಕ್ಕಳಾಗಲಿಲ್ಲವೇ? ನಾವೂ ಚೆನ್ನಾಗಿಯೇ ಇದ್ದೇವೆ ಎಂದರು. ಸರಸ್ವತಿಗೆ ಮತ್ತಷ್ಟು ಉತ್ತೇಜನ ದೊರೆತಂತಾಯಿತು. ಸರಿ ಸಮಯ ನೋಡಿ ತಮ್ಮನ ಹತ್ತಿರ ಮಾತನಾಡೋಣ ಎಂದುಕೊಂಡಳು. ಆದರೆ ಗಂಡ ಹೇಳಿದ ಒಂದು ಮಾತು ಸರಿ ಎನಿಸಿತು. ನಯನಳದು ಹದಿಹರೆಯದ ವಯಸ್ಸು ಅವಳು ಮದುವೆಯ ವಿಷಯ ಈಗಿನಿಂದ ತಲೆಗೆ ಹಚ್ಚಿಕೊಳ್ಳದೇ ಪೂರ್ತಿ ಲಕ್ಷವಿಟ್ಟು ಓದಬೇಕು. ಒಂದು ದಿನ ಅರವಿಂದನ ಬಳಿ ಮದುವೆಯ ವಿಷಯ ತೆಗೆದಳು. ಅವನು ತಂದೆಯ ಬಳಿ ಹೇಳಿದಂತೆಯೇ ಹೇಳಿದ, ಸರಸ್ವತಿ ಕೂಡಾ ತನ್ನ ವಾದ ಮಂಡಿಸಿದಳು. ಈಗಲಿಂದ ನೋಡ್ತಿರೋಣ ಯಾವುದಾದರೂ ಸರಿ, ಎನ್ನಿಸಿದರೆ ಒಪ್ಪಿಕೊಂಡುಬಿಡು, ಎರಡು ವರ್ಷಗಳ ನಂತರವೇ ಮದುವೆ ಮಾಡಿಕೋ ಎಂದಳು. ಅರವಿಂದನೂ ಸರಿ ಎಂದ. ನಂತರ ನಿಧಾನವಾಗಿ, “ಒಂದು ವಿಷಯ ಹೇಳ್ತೀನಿ, ಸ್ವಲ್ಪ ನಿಧಾನವಾಗಿ ಯೋಚನೆ ಮಾಡು, ನೀನ್ಯಾಕೆ ನಮ್ಮ ನಯನನ್ನೇ ಮದುವೆಯಾಗಬಾರದು? ಅವಳಿಗೂ ನಿನ್ನ ಕಂಡ್ರೆ ತುಂಬಾ ಇಷ್ಟ. ನಿನಗೂ ಅವಳನ್ನು ಕಂಡ್ರೆ ಪ್ರಾಣ, ಹೇಗೂ ಗೋತ್ರ ಬೇರೆ ಬೇರೆ ಆಗತ್ತೆ. ನಕ್ಷತ್ರಗಳೂ ಒಪ್ಪತ್ತೆ. ನೀನು ಒಪ್ಪಿದಾದರೆ ಜೋಯಿಸರಿಗೆ ಜಾತಕ ತೋರಿಸೋಣ. ಜಾತಕಗಳು ಸರಿಹೊಂದಿದರೆ ಸರಿ. ಮದುವೆ ನಿಧಾನವಾಗಿ ಆಗಲಿ. ಹೇಗೂ ಅವಳು ಓದ್ತಾ ಇದಾಳೆ” ಎಂದು ಮುಗುಳು ನಕ್ಕಳು. ಅರವಿಂದ ನಗಲಿಲ್ಲ. ಗಾಬರಿಯಾದ. ಅಕ್ಕ ಇದೇನು ಮಾತು ಅಂತ ಆಡ್ತೀಯ? ನಯನ ನಾವು ಸಾಕಿ ಬೆಳೆಸಿದ ಮಗು, ನಿನಗೆ ಮಗಳು ನನಗೂ ಮಗಳಿದ್ದಂತೆಯೇ, ಈ ತರಹದ ಕೆಟ್ಟ ಯೋಚನೆ ನಿನ್ನ ಮನಸ್ಸಿಗಾದರೂ ಹೇಗೆ ಬಂತೋ ಕಾಣೆ ದಯವಿಟ್ಟು ಈ ಯೋಚನೆ ಇಲ್ಲೇ ಮರೆತುಬಿಡು, ಅವಳು ಚೆನ್ನಾಗಿ ಓದಲಿ, ಒಳ್ಳೆಯ ಕೆಲಸಕ್ಕೆ ಸೇರಲಿ ಆಮೇಲೆ ನಾವೆಲ್ಲರೂ ಸೇರಿ ಒಳ್ಳೆ ವರ ನೋಡಿ ಮದುವೆ ಮಾಡೋಣ” ಎಂದು ಹೇಳಿ ಎದ್ದು ಹೋದ, ಆದರೆ ಸರಸ್ವತಿಯ ಮನಸ್ಸಿನಲ್ಲಿ ಮಾತ್ರ ಆದೇ ವಿಚಾರ ನಲಿದಾಡುತ್ತಿತ್ತು. ಮತ್ತೊಂದು ದಿನ ತಂದೆಯವರು ಬಂದಾಗ ಅವರ ಹತ್ತಿರವೂ ಅರವಿಂದನ ಮದುವೆಯ ವಿಷಯ ತೆಗೆದು, ಹಾಗೆಯೇ ಮಾತಿನ ಮಧ್ಯೆ ನಮ್ಮ ನಯನಳನ್ನೇ ಅರವಿಂದನಿಗೆ ಕೊಟ್ಟು ಮದುವೆ ಮಾಡಿದರೆ ಹೇಗೆ?” ಎಂದು ಕೇಳಿದಳು. ಅವರೂ ಕೂಡ `ಖಂಡಿತ ಬೇಡ’ ಎಂದು ಬಿಟ್ಟರು. ನೀನು ನನ್ನ ಮಗಳು, ಅವನು ನನ್ನ ಮಗ ಇಬ್ಬರದೂ ನನ್ನದೇ ರಕ್ತ, ಅಕ್ಕನ ಮಗಳನ್ನು ಸೋದರ ಮಾವ ಮದುವೆ ಆಗುವುದನ್ನು ನಾನು ಕೇಳಿದ್ದೇನೆ. ಆದರೆ ನಮ್ಮ ಮನೆಯಲ್ಲಿ ಅದು ನಡೆಯುವುದು ನನಗಿಷ್ಟವಿಲ್ಲ. ಅರವಿಂದನೂ ಈ ವಿಷಯ ಒಪ್ಪಲಾರ ಎಂದರು. ಕೆಲವು ದಿನಗಳು ಈ ವಿಷಯ ಯಾರೂ ಮಾತನಾಡಲಿಲ್ಲ.
ಆರವಿಂದ ಕೆಲವು ದಿನ ರಾತ್ರಿ ವೇಳೆಯಲ್ಲಿ ಕೆಲಸ ಮಾಡಬೇಕಿತ್ತು. ಆಗ ಸಂಜೆ ಆಸ್ಪತ್ರೆಗೆ ಹೋಗಿ ಮರುದಿನ ಮುಂಜಾನೆ ಮನೆಗೆ ಬರುತ್ತಿದ್ದ, ಕೆಲವೊಮ್ಮೆ ಮಧ್ಯಾನ್ಹ ಕೆಲಸಕ್ಕೆ ಹೋಗಿ ರಾತ್ರಿ ಹನ್ನೊಂದು ಗಂಟೆಗೆ ಬರುತ್ತಿದ್ದ. ಆಗ ಸರಸ್ವತಿ ಇವನಿಗಾಗಿ ಎಚ್ಚರವಿದ್ದು ರಾತ್ರಿ ಇವನು ಬಂದ ಮೇಲೆ ಊಟ ಬಡಿಸಿ, ನಂತರ ಹೋಗಿ ಮಲಗುತ್ತಿದ್ದಳು. ಬರುಬರುತ್ತಾ ಅದೂ ಅವಳಿಗೆ ಕಷ್ಟವಾಗತೊಡಗಿತು. ಡೈನಿಂಗ್ ಟೇಬಲ್‌ನ ಮೇಲೆ ಊಟ ಇಟ್ಟು ಮಲಗಿಬಿಡುತ್ತಿದ್ದಳು. ಅರವಿಂದನ ಹತ್ತಿರ ಕೂಡಾ ಮನೆಯ ಬೀಗದ ಕೈ ಇರುತ್ತಿತ್ತು. ಮಧ್ಯರಾತ್ರಿ ಮನೆಗೆ ಬಂದು ಅವನೇ ಬೀಗ ತೆಗೆದು, ಮನೆಯೊಳಗೆ ಬಂದು, ಬಟ್ಟೆ ಬದಲಾಯಿಸಿ, ಊಟ ಮಾಡಿ ಮಲಗುತ್ತಿದ್ದ. ನಿಧಾನವಾಗಿ ಒಂದು ಯೋಚನೆ ಮಾಡಿದ. ಆಸ್ಪತ್ರೆಯ ಹತ್ತಿರವೇ ಒಂದು ಮನೆ ತೆಗೆದುಕೊಂಡು ಅಲ್ಲಿಯೇ ಇದ್ದರೆ ಒಳ್ಳೆಯದಲ್ಲವೇ? ಆಸ್ಪತ್ರೆಯಲ್ಲಿ ತನ್ನ ವೈದ್ಯ ಮಿತ್ರರೊಂದಿಗೆ ಈ ವಿಷಯ ಚರ್ಚಿಸಿದ. ಅವರೆಲ್ಲರೂ ಆಸ್ಪತ್ರೆಯ ಹತ್ತಿರದಲ್ಲಿಯೇ ಅಪಾರ್ಟ್‌ಮೆಂಟ್ ಕೊಂಡುಕೊಂಡು ವಾಸಿಸುತ್ತಿದ್ದರು. ಆಸ್ಪತ್ರೆಗೆ ಹೋಗಿ ಬರಲು ಬಹಳ ಅನುಕೂಲವಾಗಿತ್ತು. ಕೆಲವು ಗೆಳೆಯರ ಜೊತೆ ಬೊಮ್ಮಸಂದ್ರದಲ್ಲಿ ಒಂದೆರಡು ಅಪಾರ್ಟ್‌ಮೆಂಟ್ ನೋಡಿಕೊಂಡು ಬಂದ. ಇವನ ಆಸ್ಪತ್ರೆಯ ಆವರಣದಲ್ಲಿಯೇ ಒಂದು ಬ್ಯಾಂಕ್ ಶಾಖೆಯಿತ್ತು. ಅವನು ಅಲ್ಲಿಯೇ ಸಂಬಳ ತೆಗೆದುಕೊಳ್ಳುತ್ತಿದ್ದ, ಆ ಬ್ಯಾಂಕಿನವರು ಮನೆ ಕೊಳ್ಳಲು ಸಾಲ ಕೊಡಲು ಒಪ್ಪಿದರು. ಈ ವಿಷಯವನ್ನು ಸರಸ್ವತಿಯ ಹತ್ತಿರ ಚರ್ಚೆ ಮಾಡಿದ. ಅವಳು ಧಾರಾಳವಾಗಿ ಹೋಗು ಯಾರು ಬೇಡವೆಂದವರು ಎಂದಳು. ಭಾವ ಕೂಡಾ ಪ್ರೋತ್ಸಾಹ ಕೊಟ್ಟರು. ತಂದೆಯವರ ಬಳಿ ಚರ್ಚೆ ಮಾಡಿದ. ಅವರಿಗೇನೂ ತೋಚಲಿಲ್ಲ. ಅದೆಲ್ಲಾ ಏಕೆ ಬೇಕು? ಅಕ್ಕನ ಮನೆಯಲ್ಲಿಯೇ ಹೊಂದಿಕೊಂಡು ಇರಬಾರದೇ? ಎಂದರು. ನಿಧಾನವಾಗಿ ಒಪ್ಪಿಕೊಂಡರು. ಮನೆ ಖರೀದಿಸುವ ಪ್ರಕ್ರಿಯೆ ಮೂರ್ನಾಲ್ಕು ತಿಂಗಳೇ ಹಿಡಿಯಿತು. ಮನೆಯ ಸಾಲ, ರಿಜಿಸ್ಟ್ರೇಷನ್ ಎಲ್ಲಾ ಮುಗಿದು ಮನೆ ಇವರ ಸುಪರ್ದಿಗೆ ಬಂದ ಮೇಲೆ ಮನೆಯ ಒಳಗಡೆ ವಾರ್ಡ್‌ರೋಬ್ ಮತ್ತು ಕೆಲವು ಎಲೆಕ್ಟಿಕಲ್ ಕೆಲಸ ಮಾಡಿಸುವುದಿತ್ತು. ಅದೆಲ್ಲಾ ಮುಗಿದ ಮೇಲೆ ಒಂದು ಒಳ್ಳೆಯ ದಿನ ನೋಡಿ ಗೃಹಪ್ರವೇಶ ಇಟ್ಟುಕೊಂಡರು. ಮೈಸೂರಿನಿಂದ ಆರವಿಂದನ ತಂದೆಯ ಕಡೆಯ ನಾಲ್ಕಾರು ಸಂಬಂಧಿಕರು ಬಂದರು. ಅರವಿಂದ ಅಕ್ಕ ಭಾವ ಒಲ್ಲದ ಮನಸ್ಸಿನಿಂದ ಮಣಿದು ಮೇಲೆ ಕಾಳಿತು ಗೃಹಪ್ರವೇಶ ನೆರವೇರಿಸಿ ಕೊಟ್ಟರು.
ಕೋದಂಡರಾಮಯ್ಯನವರು ತಮ್ಮ ಮೈಸೂರಿನ ಮನೆಯನ್ನು ಬಾಡಿಗೆಗೆ ಕೊಟ್ಟು ತಮ್ಮ ಮಗನ ಮನೆಯಲ್ಲಿಯೇ ಇರಲು ಬಂದರು. ತಂದೆ ಮಗ ಮೊದಲಿನಂತೆಯೇ ತಾವೇ ಅಡುಗೆ ಮಾಡಿಕೊಳ್ಳುತ್ತಿದ್ದರು ಮನೆ ಗುಡಿಸಿ, ಸಾರಿಸಿ, ಪಾತ್ರೆ ತೊಳೆದು, ಬಟ್ಟೆ ಒಗೆದು ಹೋಗಲು ಒಬ್ಬ ಕೆಲಸದವಳನ್ನು ಗೊತ್ತು ಮಾಡಿಕೊಂಡರು. ಇವರ ಜೀವನ ನಿಧಾನವಾಗಿ ಬೆಂಗಳೂರಿನ ವಾತಾವರಣಕ್ಕೆ ಮತ್ತು ಅಪಾರ್ಟ್‌ಮೆಂಟ್ ಜೀವನಕ್ಕೆ ಹೊಂದಿಕೊಳ್ಳತೊಡಗಿತು. ತಂದೆಯವರು ಯಾವಾಗಲಾದರೊಮ್ಮೆ ತಮ್ಮ ಮಗಳ ಮನೆಗೆ ಹೋಗಿ ಬರುತ್ತಿದ್ದರು. ಅರವಿಂದನೂ ತಿಂಗಳಿಗೋ ಎರಡು ತಿಂಗಳಿಗೋ ಒಮ್ಮೆ ಅಕ್ಕನ ಮನೆಗೆ ಹೋಗಿ, ಅಕ್ಕ, ಭಾವ ಮತ್ತು ನಯನಳನ್ನು ನೋಡಿಕೊಂಡು ಬರುತ್ತಿದ್ದ, ಆದರೆ ಸರಸ್ವತಿಯಾಗಲಿ ಭಾವನವರಾಗಲಿ ಒಮ್ಮೆಯೂ ಇವರ ಮನೆಗೆ ಬರಲಿಲ್ಲ.
ಅರವಿಂದ ಒಂದುವರ್ಷ ಹಿರಿಯ ಸರ್ಜನ್‌ರ ಜೊತೆ ಹೃದಯ ಶಸ್ತ್ರ ಚಿಕಿತ್ಸೆಗಳಲ್ಲಿ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದ, ಈಗೀಗ ತಾನೇ ಮುಖ್ಯ ಸರ್ಜನ್ ಆಗಿ ಒಂದಿಬ್ಬರು ಅಸಿಸ್ಟೆಂಟ್‌ಗಳನ್ನು ಇಟ್ಟುಕೊಂಡು ಹೃದಯದ ಶಸ್ತ್ರಚಿಕಿತ್ಸೆ ಮಾಡತೊಡಗಿದ. ಹೀಗಿರುವಾಗ ಇವನ ಜೀವನದಲ್ಲಿ ಒಂದು ದೊಡ್ಡ ತಿರುವು ತೆಗೆದುಕೊಳ್ಳುವಂತಹ ಪರಿಸ್ಥಿತಿ ಒದಗಿಬಂದಿತು.
ಅರವಿಂದ ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲಿ ‘ಅನು’ ಎಂಬ ನರ್ಸ್ ಇದ್ದಳು. ಮೂಲತಃ ಅವಳು ಕೇರಳದ ಎರ್ನಾಕುಲಂ ಜಿಲ್ಲೆಯವಳು, ತಾಯಿ ಕೂಡಾ ಇವಳೊಂದಿಗೆ ಬೆಂಗಳೂರಿನಲ್ಲಿಯೇ ಇದ್ದರು. ಅನುಗೆ ಒಬ್ಬ ತಂಗಿ ಕೂಡಾ ಇದ್ದಾಳೆ. ಅವಳ ಹೆಸರು ಸ್ಮಿತಾ, ಅವಳೂ ಕೂಡ ನರ್ಸ್ ಕೆಲಸ ಮಾಡುತ್ತಿದ್ದಾಳೆ. ಅವಳು ಕುವೈಟ್‌ನಲ್ಲಿ ಒಂದು ಮಲೆಯಾಳಿ ಸ್ವಾಮ್ಯದ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾಳೆ. ತಂದೆಯವರು ಭಾರತೀಯ ನೌಕಾಪಡೆಯಲ್ಲಿ ಸೈನಿಕರಾಗಿದ್ದರು. ಎರಡು ವರ್ಷಗಳ ಹಿಂದೆ ತೀರಿಹೋಗಿದ್ದರು. ಹಾಗಾಗಿ ಅನು ಎರ್ನಾಕುಲಂ ಬಿಟ್ಟು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾಳೆ. ತಾಯಿಯನ್ನು ತನ್ನ ಜೊತೆಗೇ ಇಟ್ಟುಕೊಂಡಿದ್ದಾಳೆ. ಅನು ಬಹಳ ಬುದ್ಧಿವಂತೆ. ನಾಲ್ಕಾರು ಭಾಷೆಗಳನ್ನು ಸರಾಗವಾಗಿ ಮಾತನಾಡುತ್ತಾಳೆ. ಅವಳ ಬುದ್ಧಿವಂತಿಕೆ, ಕೆಲಸದಲ್ಲಿರುವ ನಿಷ್ಠೆ, ಚುರುಕುತನ ಎಲ್ಲಾ ನೋಡಿ ಅವಳನ್ನು ಡಾ|| ಅರವಿಂದನಿಗೆ ಅಸಿಸ್ಟೆಂಟಾಗಿ ಹೃದಯ ಶಸ್ತ್ರ ಚಿಕಿತ್ಸೆಗೆ ನರ್ಸ್ ಆಗಿ ನೇಮಿಸಿದ್ದರು. ಅರವಿಂದನೂ ಅವಳ ಬಗ್ಗೆ ಅಪಾರ ಮೆಚ್ಚುಗೆ ಇಟ್ಟುಕೊಂಡಿದ್ದ. ಆಸ್ಪತ್ರೆಯ ಆಡಳಿತ ಮಂಡಳಿಗೂ ಅವಳ ಬಗ್ಗೆ ತನ್ನ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು. ಅನೂಗೂ ಡಾ|| ಅರವಿಂದ್’ ಎಂದರೆ ಬಹಳ ಗೌರವ ಮತ್ತು ಅವನೆಂದರೆ ಅಚ್ಚುಮೆಚ್ಚು. ಒಮ್ಮೆ ಓಣಂ ಹಬ್ಬದದಿನ ಅನು ಮತ್ತು ಅವಳ ತಾಯಿ ಕಾತ್ಯಾಯಿನಿ ಅಮ್ಮ ಸಾಂಪ್ರದಾಯಿಕ ಉಡುಗೆ ಓಣಂನ ಬಿಳಿ ಪಂಚೆಯಂತಹ ಜರಿ ಸೀರೆ ಉಟ್ಟು ಆರವಿಂದನ ಮನೆಗೆ ಬಂದು, ಅರವಿಂದನಿಗೆ ಮತ್ತು ಅವನ ತಂದೆಯವರಿಗೆ ಸಿಹಿತಿಂಡಿ ಮತ್ತು ಕೆಲವು ತಿನಿಸುಗಳನ್ನು ಕೊಟ್ಟು, ಬಹಳ ಹೊತ್ತು ಸಂತೋಷವಾಗಿ ನಗುನಗುತ್ತಾ ಮಾತನಾಡಿ ಹೋದರು. ಮರುದಿನ ಅರವಿಂದ ಆ ವಿಷಯವನ್ನು ಆಸ್ಪತ್ರೆಯ ತನ್ನ ಸಹೋದ್ಯೋಗಿ ವೈದ್ಯರುಗಳ ಬಳಿ ಹೇಳಿದಾಗ ಅವರಿಗೆಲ್ಲಾ ಆಶ್ಚರ್ಯ ಮತ್ತು ಅಸೂಯೆ ಎರಡೂ ಆಯಿತು. ಏಕೆಂದರೆ ಅನು ಮತ್ತು ಅವಳ ತಾಯಿ ಅರವಿಂದನ ಮನೆಗೆ ಮಾತ್ರ ಬಂದು ತಿಂಡಿ ಕೊಟ್ಟು ಹೋಗಿದ್ದರು. ಆಸ್ಪತ್ರೆಯ ಮತ್ತೊಬ್ಬ ಡಾಕ್ಟರ್ ಅನುವನ್ನು ಕೇಳಿದರು. “ಏನು ಮೇಡಂ ನೆನ್ನೆ ನೀವು ಡಾ|| ಅರವಿಂದ್‌ರವರ ಮನೆಗೆ ಹೋಗಿ ಸ್ವೀಟ್ಸ್ ಕೊಟ್ಟು ಬಂದರಂತೆ. ನಾವೂ ಕೂಡಾ ಇದೇ ಬಿಲ್ಡಿಂಗ್‌ನಲ್ಲಿ ಇದೀವಿ, ನಮ್ಮ ಮನೆಗೆ ಯಾಕೆ ಬರ್ಲಿಲ್ಲ?” ಎಂದು ಕೇಳಿದರು. ಅನು ನಗುನಗುತ್ತಾ “ಆದು ಹಾಗೇನೇ” ಎಂದಳು. ಹಾಗೆಂದರೇನರ್ಥ? ಅಂದರೆ ಅನು ಅರವಿಂದನನ್ನು ಪ್ರೀತಿಸುತ್ತಿರುವಳೇ? ಅನು ಸಾಂಪ್ರದಾಯಿಕ ಉಡುಗೆಯಲ್ಲಿ ಹಬ್ಬದ ದಿನ ಮನೆಗೆ ಬಂದು ಸಿಹಿತಿಂಡಿ ಕೊಟ್ಟು ಹೋದ ಕ್ಷಣದಿಂದ ಅರವಿಂದನಿಗೂ ಅವಳ ಮೇಲೆ ಸ್ವಲ್ಪ ಪ್ರೀತಿ ಹುಟ್ಟಿತು. ಆಸ್ಪತ್ರೆಯಲ್ಲಿ ಅವಳನ್ನು ಕಂಡಾಗಲೆಲ್ಲಾ ಮುಗುಳು ನಗುತ್ತಿದ್ದ. ಅವಳೂ ಕೂಡಾ ಅವನನ್ನು ಕಂಡಾಗಲೆಲ್ಲಾ ಮೋಹಕವಾಗಿ ನಗುತ್ತಿದ್ದಳು. ಒಂದು ದಿನ ಬೆಳಗ್ಗೆಯೇ ಒಂದು ಎಮರ್ಜನ್ಸಿ ಕೇಸ್ ಬಂದಿತು. ಕೂಡಲೇ ಶಸ್ತ್ರ ಚಿಕಿತ್ಸೆ ಮಾಡಿ ಸ್ಟಂಟ್ ಅಡವಳಿಸಬೇಕಿತ್ತು. ಆರವಿಂದನೇ ಮುಖ್ಯ ಸರ್ಜನ್, ಮತ್ತೊಬ್ಬ ಸಹಾಯಕ ಸರ್ಜನ್ ಮತ್ತು ಇಬ್ಬರೂ ಪರಿಣಿತ ನರ್ಸ್‌ಗಳು, ಅದರಲ್ಲಿ ಅನು ಒಬ್ಬಳು. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ಮುಗಿಯಿತು. ರೋಗಿಯನ್ನು ನಿಧಾನವಾಗಿ ಅಬ್‌ಸರ್ವೇಷನ್ ಕೋಣೆಗೆ ಕೊಂಡೊಯ್ದರು. ಸರ್ಜನ್‌ಗಳಿಬ್ಬರೂ ಪರಸ್ಪರ ಕೈಕುಲುಕಿ ಅಭಿನಂದನೆಗಳನ್ನು ಹೇಳಿದರು. ಅನು ಅರವಿಂದನ ಏಪ್ರನ್ ಬಿಚ್ಚಿದಳು. ಅರವಿಂದ ಒಂದು ಕ್ಷಣ ಭಾವುಕನಾಗಿ ಅವಳನ್ನು ತಬ್ಬಿಕೊಂಡ. ಯಾರಾದರೂ ನೋಡಿಯಾರು ಎಂದು ತಕ್ಷಣ ದೂರ ಸರಿದ. ಅವಳು ನಾಚಿ ಅಲ್ಲಿಂದ ಓಡಿದಳು. ಅದೇ ದಿನ ಮತ್ತೆ ಅವಳನ್ನು ಕಂಡಾಗ ಏನಾದರೂ ಹೇಳಬೇಕೆನಿಸಿತು. ಆದರೆ ಏನೂ ಹೇಳಲಿಲ್ಲ. ಇಬ್ಬರ ಕಣ್ಣುಗಳೂ ಕಲೆತವು. ಪರಸ್ಪರ ಮಾತನಾಡಿಕೊಂಡವು. ಎರಡು ದಿನ ಕಳೆಯಿತು. ಅನು ಅರವಿಂದನ ಕೋಣೆಯಲ್ಲಿ ಕುಳಿತು ರಿಪೋರ್ಟ್‌ಗಳನ್ನು ಫೈಲ್ ಮಾಡುತ್ತಿದ್ದಳು. ಅದೇ ಸಮಯದಲ್ಲಿ ಅರವಿಂದ್ ಒಳಗೆ ಬಂದ. ಬಂದವನೇ ಬಹಳ ಭಾವುಕನಾಗಿ ಅವಳ ಕೈ ಹಿಡಿದು “ಅನು ಐ ಲವ್ ಯೂ” ಎಂದ. ಅವಳು ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡಿ “ಐ ಲವ್ ಯೂ ಟೂ” ಎಂದಳು. ಮುಂದಿನ ದಿನಗಳು ಬಹಳ ಆನಂದಕರವಾಗಿ ಕಳೆದವು. ಒಂದು ದಿನ ಅರವಿಂದ ಕೇಳಿದ. “ಅನು ನಾವಿಬ್ಬರೂ ಮದುವೆ ಆಗೋಣವೇ?” ಅನು ಸಂತೋಷದಿಂದ ಒಪ್ಪಿ ಹೂಂ ಎಂದಳು. ಆ ರಾತ್ರಿ ಅನು ಈ ಮದುವೆಯ ವಿಷಯ ತನ್ನ ತಾಯಿಯ ಬಳಿ ವಿಚಾರಿಸಿದಳು. ಅವರು ಸಂತೋಷದಿಂದ ಒಪ್ಪಿಕೊಂಡರು. ಒಪ್ಪದೇ ಇನ್ನೇನು ಮಾಡಿಯಾರು? ಗಂಡನಿಲ್ಲದ ಹೆಂಗಸು. ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮದುವೆ ಮಾಡಬೇಕು. ಹೇಗೆ ಮಾಡುವುದು? ಕೈಲಿ ಹಣ ಇಲ್ಲ. ಓಡಿ ಆಡಿ ವರ ಹುಡುಕಿ ಮದುವೆ ಮಾಡಲು ಶಕ್ತಿ ಇಲ್ಲ. ಅನು ತಾನೇ ಒಬ್ಬ ಒಳ್ಳೆಯ ಡಾಕ್ಟರನ್ನು ಮದುವೆ ಮಾಡಿಕೊಳ್ಳುವೆನೆಂದರೆ ತಾನೇಕೆ ಬೇಡ ಎನ್ನಲಿ ಎಂದು, ಈ ಮದುವೆಗೆ ತನ್ನ ಪೂರ್ಣ ಸಮ್ಮತಿ ಇತ್ತರು. ಅರವಿಂದ ಕೂಡಾ ಈ ವಿಷಯವನ್ನು ತಂದೆಯವರ ಬಳಿ ಹೇಳಿದ. ಅವರು ಖಂಡಿತ ಬೇಡವೇ ಬೇಡ ಎಂದುಬಿಟ್ಟರು. “ಯಾಕಪ್ಪಾ ಏನಾಯಿತು? ಅವಳು ತುಂಬಾ ಒಳ್ಳೆಯ ಹುಡುಗಿ, ಓದಿದವಳು. ನನ್ನ ಜೊತೆ ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಅವಳಿಗೆ ಒಳ್ಳೆಯ ಹೆಸರಿದೆ. ನನ್ನ ಜೊತೆ ಆಪರೇಷನ್‌ಗಳಲ್ಲಿ ಭಾಗವಹಿಸುತ್ತಾಳೆ. ಮುಂದೆ ನನ್ನನ್ನು ನಿಮ್ಮನ್ನ ಚೆನ್ನಾಗಿ ನೋಡಿ ಕೊಳ್ತಾಳೆ? ಈ ಎಲ್ಲಾ ಅಂಶಗಳು ತಂದೆಯವರಿಗೆ ಮುಖ್ಯವಾಗಿರಲಿಲ್ಲ. ಅವರು ಬೇಡ ಅನ್ನುವುದಕ್ಕೆ ಮುಖ್ಯ ಕಾರಣ ಜಾತಿ! ಅವರು ಸ್ಪಷ್ಟವಾಗಿ ಹೇಳಿಬಿಟ್ಟರು. ನೋಡು ಅರವಿಂದ ಅವಳು ಯಾವ ಜಾತಿಯೋ ಯಾವ ಜನವೋ, ಮಾಂಸ ಮಡ್ಡಿ ತಿನ್ನುವ ಜನವಾದರೆ ಏನು ಗತಿ! ದಯವಿಟ್ಟು ಈ ವಿಚಾರ ಇಲ್ಲಿಗೇ ಮರೆತುಬಿಡು. ನಿನಗೆ ಮದುವೆ ಮಾಡಿಕೋಬೇಕು ಅಂದರೆ ಹೇಳು ಮೈಸೂರಿನಲ್ಲಿ ನಮ್ಮ ಜನರಲ್ಲೇ ಯಾರಾದರೂ ಹುಡುಗಿ ಇದಾಳೇನೋ ವಿಚಾರಿಸ್ತೀನಿ. ನಿಮ್ಮಕ್ಕನ ಹತ್ತಿರ ಮಾತಾಡು, ನಾನು ಈ ವಾರ ಮೈಸೂರಿಗೆ ಹೋದಾಗ ಶ್ರೀನಿವಾಸನ ಹತ್ತಿರಾನೋ ವಾಸಜ್ಜನ ಹತ್ತಿರಾನೋ ಮಾತಾಡ್ತೀನಿ.” ಅರವಿಂದನಿಗೆ ಬಹಳ ಗಾಬರಿಯಾಯಿತು. ಏನು ತಂದೆಯವರು ಈ ಸಂಬಂಧವನ್ನು ಒಪ್ಪಿಕೊಳ್ಳುವುದೇ ಇಲ್ಲವೇ? ನಾನು ಅನುವನ್ನು ಮದುವೆಯಾಗುವ ವಿಷಯ ಮರೆತು ಬಿಡಬೇಕೇ? ನಮ್ಮಿಬ್ಬರ ಮಧುರ ಕನಸುಗಳು ನನಸಾಗುವುದಿಲ್ಲವೇ? ನಮ್ಮ ಕನಸಿನ ಕ್ಷಣ ಒಡೆದು ನುಚ್ಚುನೂರಾಗುವುದೇ? ಹೇ ದೇವರೇ ಇದೇನು ನಿನ್ನ ಪರೀಕ್ಷೆ, ಈ ಅನು ಪರಿಚಯವಾಗುವ ತನಕ ತಾನೆಂದೂ ಯಾವ ಹುಡುಗಿಯನ್ನೂ ಕಣ್ಣೆತ್ತಿಕೂಡಾ ನೋಡಿರಲಿಲ್ಲ. ಪ್ರಕೃತಿ ಸಹಜವಾಗಿ ಇವಳಲ್ಲಿ ಅನುರಾಗ ಮೂಡಿತು. ಅವಳು ತನ್ನ ಪ್ರೇಮ ಪ್ರಕಟಿಸಿದಳು. ನಾನೂ ಕೂಡಾ ಅದಕ್ಕೆ ಸ್ಪಂದಿಸಿದೆ. ದೇವರೇ ದಯವಿಟ್ಟು ಈ ಪ್ರೇಮ ಫಲಿಸಿ ನಾವಿಬ್ಬರೂ ಒಂದಾಗುವಂತೆ ಮಾಡು ತಂದೆ’ ಎಂದು ದೇವರಲ್ಲಿ ಭಕ್ತಿಯಿಂದ ಪ್ರಾರ್ಥಿಸಿದ.
ಮುಂದಿನ ಭಾನುವಾರ ಅರವಿಂದ ಮತ್ತು ಅವನ ತಂದೆಯವರು ಸರಸ್ವತಿಯ ಮನೆಗೆ ಹೋದರು. ತಿಂಡಿ, ಕಾಫಿಯ ಶಾಸ್ತ್ರವಾದ ಮೇಲೆ ಅರವಿಂದ ಅನು ವಿಷಯ ಹೇಳಿದ. ನಾವಿಬ್ಬರೂ ಮನಸಾರ ಪ್ರೀತಿಸ್ತಿದೀವಿ. ಮದುವೆ ಮಾಡಿಕೊಳ್ಳೋಣ ಅಂತ ನಿರ್ಧಾರ ಮಾಡಿದೀವಿ, ನೀವೇನಂತೀರ ಭಾವಾ? ಎಂದು ಭಾವನವರ ಕಡೆಗೆ ನೋಡಿದ. ಅವರು ಸುಮ್ಮನೆ ಮುಗುಳು ನಕ್ಕರು, ಅವರ ಅಭಿಪ್ರಾಯಕ್ಕೆ ಯಾರೇನು ಬೆಲೆ ಕೊಡುತ್ತಾರೆ ಎನ್ನುವಂತಿತ್ತು ಅವರ ನಗು. ಇವರ ಮಾತುಗಳನ್ನು ಕೇಳುತ್ತಾ ಕುಳಿತಿದ್ದ ನಯನ ಸಂತೋಷದಿಂದ ಹೋ ಎಂದು ಕಿರುಚಿ ಕೈ ತಟ್ಟಿಗಳು, ವೆರಿಗುಡ್ ವೆರಿಗುಡ್. ಕಂಗ್ರಾಜುಲೇಷನ್ಸ್ ಮಾವಾ ಫೋಟೋ ಇದ್ರೆ ತೋರಿಸ್ತೀಯಾ? ಎಂದು ಮಾವನ ಪಕ್ಕದಲ್ಲಿ ಬಂದು ಕುಳಿತಳು. ಸರಸ್ವತಿ ಅವಳನ್ನು ಕಿಕ್ಕಿರಿಸಿ ನೋಡಿದಳು.
“ನೀ ಸುಮ್ಮೆ ಕೂತ್ಕಳೇ.. ನಿನಗೇನು ಗೊತ್ತಾಗುತ್ತೆ. ನೀನು ಸುಮ್ಮನೆ ಒಳಗೆ ಹೋಗು, ಓದಿಕೋ ಹೋಗು” ಎಂದಳು. ನಯನ ಮನಸ್ಸಿಲ್ಲದ ಮನಸ್ಸಿನಿಂದ ಎದ್ದು ತನ್ನ ರೂಮಿಗೆ ಹೋದಳು. ಅರವಿಂದನಿಗೆ ಚೆನ್ನಾಗಿ ಗೊತ್ತಿತ್ತು ಅಕ್ಕ ಇದಕ್ಕೆ ಖಂಡಿತ ಒಗ್ಗುವುದಿಲ್ಲವೆಂದು, ಆದುದರಿಂದ ಮತ್ತೆ ಭಾವನವರ ಕಡೆಗೆ ತಿರುಗಿ ಕೇಳಿದ, ಅವರು ಸ್ವಲ್ಪ ಸಾವರಿಸಿಕೊಂಡು ಹೇಳಿದರು. “ನಿನಗೆ ಇಷ್ಟವಾದರೆ ಸರಿ ಖಂಡಿತ ಮಾಡಿಕೋ ನೀನು ಓದಿದವನು, ಒಳ್ಳೇದೂ, ಕೆಟ್ಟೋದು ಎಲ್ಲಾ ನಿನಗೆ ಚೆನ್ನಾಗಿ ಅರ್ಥವಾಗತ್ತೆ.” ಆಷ್ಟರಲ್ಲಿ ಸರಸ್ವತಿ ಮಧ್ಯೆ ಬಾಯಿ ಹಾಕಿ ಹೇಳಿದಳು. “ನೀವು ಸುಮ್ನಿರ್ರಿ ನಿಮಗೇನು ಗೊತ್ತಾಗುತ್ತೆ ಇವೆಲ್ಲಾ. ನೋಡು ಅರವಿಂದ ನಾನು ನಿನ್ನ ಅಕ್ಕ ನಿನ್ನ ಹಿತ ಬಯಸೋಳು. ನಿನ್ನ ತಾಯಿಯ ಸ್ಥಾನದಲ್ಲಿ ನಿಂತು ಹೇಳ್ತಿದೀನಿ ನೀವು ಇಬ್ಬರೂ ಪ್ರೀತಿಸ್ತಿರೋದು ಬಂತು ಗೆಳೆತನ ಆಷ್ಟೇ, ಒಟ್ಟಿಗೆ ಕೆಲಸ ಮಾಡ್ತೀರಿ, ಪ್ರತಿದಿನ ಒಬ್ಬರನ್ನೊಬ್ಬರು ನೋಡ್ತೀರಾ, ಒಟ್ಟಿಗೆ ಕೆಲಸ ಮಾಡ್ತೀರಾ, ಅದಕ್ಕೇ ಒಳ್ಳೆಯ ಫ್ರೆಂಡ್ಸ್ ಆಗಿದೀರಾ, ನೀನು ಡಾಕ್ಟರು ದೊಡ್ಡ ಸರ್ಜನ್ನು, ಅದಕ್ಕೆ ಅವಳು ನಿನ್ನನ್ನು ಮೆಚ್ಚಿಕೊಂಡಿದ್ದಾಳೆ. ಇದನ್ನೆಲ್ಲಾ ಪ್ರೀತಿ ಅಂತಾರೋ? ನನ್ನ ಮಾತು ಕೇಳು, ಸುಮ್ಮನೆ ನಮ್ಮ ನಯನನ್ನೇ ಮದುವೆ ಮಾಡಿಕೋ, ಮನೆ ಹುಡುಗಿ, ನನ್ನ ತವರುಮನೆ ಸೇರ್ತಾಳೆ, ಅಪ್ಪನ್ನ ನಿನ್ನ ಪ್ರೀತಿಯಿಂದ ನೋಡೋತಾಳೆ, ನಾಳೆ ಇಳಿವಯಸ್ಸಿನಲ್ಲಿ ನಮಗೂ ಒಂದು ಆಸರೆಯಾಗಿರ್ತಾಳೆ, ನಿನಗೂ ಒಳ್ಳೆಯ ಹೆಂಡತಿಯಾಗಿರ್ತಾಳೆ. ಅವಳ ಮಾತು ಕೇಳಿ ಅರವಿಂದ ರೇಗಿದ, “ಅಕ್ಕಾ ಅಕ್ಕಾ ನಾನವತ್ತೇ ಸ್ಪಷ್ಟವಾಗಿ ಹೇಳಿದೀನಿ, ಅವಳು ನನಗೂ ಮಗಳಿದ್ದಂತೆ, ನಾನು ನೀನೂ ಎತ್ತಿ ಬೆಳೆಸಿದ ಮಗು ಅದು, ಅವಳನ್ನು ನಾನು ಮದುವೆಯಾಗುವುದೇ? ಖಂಡಿತ ಸಾಧ್ಯವಿಲ್ಲ.”
ಸರಸ್ವತಿ ಮಧ್ಯೆ ಬಾಯಿಹಾಕಿ ಹೇಳಿದಳು, “ಆದರೆ ಗೋತ್ರಾ?” ನಮ್ಮದೂ ನಿಮ್ಮದೂ ಗೋತ್ರ ಬೇರೆ ತಾನೇ? ನಾನು ನಯಗಳ ಜಾತಕ, ನಿನ್ನ ಜಾತಕ ಎರಡನ್ನು ಜೋಯಿಸರಿಗೆ ತೋರಿಸಿದೆ. ನಿಮ್ಮಿಬ್ಬರ ಜಾತಕಗಳು ಚೆನ್ನಾಗಿ ಹೊಂದುತ್ತವೆ ಅಂತ ಹೇಳಿದ್ದಾರೆ, ಸುಮ್ನೆ ಒಪ್ಕೋ”. ಅರವಿಂದ ರೇಗಿದ. ‘ಜಾತಕ ಅಂತೆ ಗೋತ್ರ ಅಂತೆ ಅದಕ್ಕೆಲ್ಲಾ ಏನಾದರೂ ಅರ್ಥ ಇದೆಯೇ? ನಾನೂ ನೀನೂ ಒಂದೇ ತಂದೆತಾಯಿ ಮಕ್ಕಳು, ನಮ್ಮಿಬ್ಬರಲ್ಲೂ ಹರಿತಿರೋದು ಒಂದೇ ರಕ್ತ ನೀನು ಇವರನ್ನು ಮದುವೆ ಆದಾಕ್ಷಣ ನೀನು ಬೇರೆ ಗೋತ್ರ ಅ೦ತೆ, ನೀನು ಮದುವೆ ಆಗಿ ಬೇರೆಯವರ ಮನೆ ಸೇರಿದ ಕೂಡಲೇ ನನ್ನ ನಿನ್ನ ಸಂಬಂಧ ಮುರಿದುಹೋಯಿತೇ? ಇನ್ನು ಜಾತಕ ಅದೊಂದು ಪರಿಕಲ್ಪನೆ ಅಷ್ಟೇ, ಜಾತಕಗಳು ಹೊಂದಿ ಬಿಟ್ಟರೆ ನಮ್ಮ ನಮ್ಮ ಆಚಾರ ವಿಚಾರ ಸಾಂಸಾರಿಕ ಜೀವನ ಎಲ್ಲಾ ಹೊಂದಿಕೊಂಡು ಬಿಡತ್ತೋ? ಜಾತಕ, ಗೋತ್ರ ನಕ್ಷತ್ರ ರಾಶಿ ಎಲ್ಲಾ ಚೆನ್ನಾಗಿ ಹೊಂದತ್ತೆ ಅಂತ ನೋಡಿ ಮದುವೆ ಆದ ಎಷ್ಟೋ ಜನ ಡೈವೋರ್ಸ್ ಮಾಡಿಕೊಳ್ಳಲಿಲ್ಲವೇ? ಅದೂ ಅಲ್ಲದೆ
“ಅದೂ ಅಲ್ಲದೆ” ತಂದೆಯವರು ಮಧ್ಯ ಬಾಯಿಹಾಕಿ ತಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಮುಂದಿಟ್ಟರು. ಅದೂ ಅಲ್ಲದೇ ಅವರು ಮಲೆಯಾಳಿಗಳು, ಯಾವ ಜಾತಿಯೋ ಯಾವ ಜನಾನೋ ಮಾಂಸ ಮಡ್ಡಿ ತಿನ್ನೋವರಾದರೆ ಏನು ಗತಿ!”
ಸರಸ್ವತಿ ಹೌಹಾರಿದಳು.
“ಅಯ್ಯೋ ಅಯ್ಯೋ ಕರ್ಮ ಕರ್ಮ ಮಲೆಯಾಳಿಗಳೇ! ಹಾಗಾದರೆ ಖಂಡಿತ ಮಾಂಸ ತಿನ್ನುವರೇ ಅವರ ತಂದೆ ಏನ್ ಕೆಲಸ ಮಾಡ್ತಾರಂತೆ?” ಆರವಿಂದ ಉತ್ತರಿಸಿದ.
“ಹುಡುಗಿಗೆ ತಂದೆ ಇಲ್ಲ, ತಾಯಿ ಮಾತ್ರ ಇದ್ದಾರೆ, ಆವರೂ ಇವಳ ಜೊತೆಲೇ ಇದಾರೆ. ಒಬ್ಬ ತಂಗಿ ಇದಾಳೆ, ಅವಳು ಕೂಡಾ ನರ್ಸ್. ಅವಳು ದುಬಾಯಿನಲ್ಲಿದಾಳೆ.
“ಇಂತಹ ಮಲೆಯಾಳಿ ನರ್ಸ್‌ಗಳ ಕಥೆ, ಸಾವಿರಾರು ಕೇಳಿದೀನಿ, ತಂದೆ ಇಲ್ಲ, ಮಕ್ಕಳು ನರ್ಸ್ ಆಗಿ ಯಾವುದಾದರೆ ಆವೂರು, ಯಾವ ದೇಶ ಆದರೆ ಆ ದೇಶ ನಿಮ್ಮಂತಹ ಅಮಾಯಕ ಹುಡುಗರನ್ನು ಬಲೆಗೆ ಹಾಕ್ಕೊಂಡು ನಾಲ್ಕುದಿನ ಸುಖ ಪಡೋದು, ನಿಮ್ಮ ಹಣನೆಲ್ಲಾ ದೋಚಿಕೊಂಡು ಓಡಿಹೋಗೋದು,” ಸರಸ್ವತಿ ನಿಟ್ಟುಸಿರು ಬಿಟ್ಟು ಹೇಳಿದಳು.
ಆರವಿಂದನಿಗೆ ಕೋಪ ಬಂತು, ಆದರೂ ಸಾವರಿಸಿಕೊಂಡು ಹೇಳಿದ.
“ಅಕ್ಕಾ ಅಕ್ಕಾ… ನೀನು ಸ್ವಲ್ಪ ನ್ಯಾಯವಾಗಿ ಯೋಚನೆ ಮಾಡಿನೋಡು. ಒಳ್ಳೇವ್ರು ಕಟ್ಟೋರು ಎಲ್ಲಾ ಜಾತೀಲೂ ಇರ್ತಾರೆ, ಎಲ್ಲಾ ಊರಲ್ಲೂ ಇದ್ದಾರೆ. ಮಾಂಸಾಹಾರಿಗಳೆಲ್ಲಾ ಕೆಟ್ಟೋರು, ಸಸ್ಯಾಹಾರಿಗಳೆಲ್ಲಾ ಒಳ್ಳೇವ್ರು ಅಂತ ಹೇಳಕ್ಕೆ ಆಗಲ್ಲ. ಮಾಂಸಾಹಾರಿಗಳಲ್ಲೂ ಎಷ್ಟೋ ಜನ ಒಳ್ಳೆವ್ರಿದ್ದಾರೆ, ಸಸ್ಯಾಹಾರಿಗಳಲ್ಲೂ ಕೆಟ್ಟೋರಿದ್ದಾರೆ, ಹಾಗೆಲ್ಲಾ ಜನರಲೈಸ್ ಮಾಡಕ್ಕಾಗಲ್ಲ, ನಾವು ವಿಜ್ಞಾನ ಓದಿದರೆ ಸಾಲದು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು, ಮೂಢನಂಬಿಕೆಗಳನ್ನು ದೂರ ಮಾಡಬೇಕು, ಈ ಪುರೋಹಿತಶಾಹಿ ಹಿಡಿತದಿಂದ ಬಿಡಿಸಿಕೊಳ್ಳಬೇಕು, ಮದುವೆ ಆದ ಮೇಲೆ ಮಾಂಸಾಹಾರ ತಿನ್ನಬಾರದು, ನಮ್ಮ ಮನೆಯ ಸಂಸ್ಕೃತಿಗೆ ಸಂಪ್ರದಾಯಗಳಿಗೆ ಹೊಂದಿಕೊಂಡು ಹೋಗಬೇಕು ಎಂದು ತಿಳಿಸಿಹೇಳಿದರೆ ಖಂಡಿತ ತಿಳಕೋತಾಳೆ, ಅದರ ಪ್ರಕಾರ ನಡೀತಾಳೆ. ನನಗಂತೂ ಅನು ಒಳ್ಳೆಯ ಹುಡುಗಿ ನನ್ನ ಜೊತೆ ಪ್ರಾಮಾಣಿಕವಾಗಿ ನಡೆದುಕೊಂಡು ಸಂಸಾರ ಮಾಡ್ತಾಳೆ ಅಂತ ನಂಬಿಕೆ ಇದೆ. ನಾನು ಅವಳನ್ನ ಮನಸಾರೆ ಪ್ರೀತಿಸ್ತಿದೀನಿ. ಅವಳೂ ಕೂಡಾ ನನ್ನನ್ನ ತುಂಬಾ ಪ್ರೀತಿಸ್ತಿದಾಳೆ. ನಾನು ಅವಳನ್ನೇ ಮದುವೆ ಆಗೋದು ಅಂತ ನಿರ್ಧರಿಸಿದ್ದೇನೆ. ಯಾರು ಒಪ್ಪಲಿ ಬಿಡಲಿ ನಾನು ಅವಳನ್ನೇ ಮದುವೆ ಆಗೋದು.”
ಅರವಿಂದ ಖಡಾಖಂಡಿತವಾಗಿ ಹೇಳಿಬಿಟ್ಟ. ಈ ಮಾತಿನಿಂದ ಎಲ್ಲರೂ ಗಾಬರಿಯಾದರು. ತಂದೆಯವರು ಸಪ್ಪಗಾದರು. ಏನು ಹೇಳಲೂ ತೋಚದೆ ಸುಮ್ಮನೆ ಕುಳಿತರು. ಭಾವನವರು ಯಾರೂ ಏನು ಬೇಕೋ ಮಾಡಿಕೊಳ್ಳಲಿ ಈ ವಿಷಯದಲ್ಲಿ ನಾನೇನೂ ಹೇಳಲು ಬಯಸುವುದಿಲ್ಲ ಎಂದು ತೆಪ್ಪಗೆ ಕುಳಿತರು. ಆದರೆ ಸರಸ್ವತಿಗೆ ಮಾತ್ರ ಅರವಿಂದನ ನಿರ್ಧಾರ ದೊಡ್ಡ ಆಘಾತವನ್ನೇ ತಂದಿತ್ತು. ಹಾಗಾಗಿ ಅವಳು ತೀವ್ರವಾಗಿ ಪ್ರತಿಕ್ರಿಯಿಸಿದಳು.
ಅರವಿಂದ ನಿನಗೆ ಸಾವಿರ ಸಲ ತಿಳಿಸಿಹೇಳಿ ಆಯಿತು. ಸುಮ್ಮನೆ ನಮ್ಮ ನಯನನ್ನು ಮದುವೆ ಆಗು ಅಂತ. ನೀನಂತೂ ಅದಕ್ಕೆ ಒಪ್ಪಲಿಲ್ಲ. ಸರಿ ನಮ್ಮ ಜನರಲ್ಲೇ ಗೋತ್ರ, ನಕ್ಷತ್ರ, ಜಾತಕ ನೋಡಿ ಯಾವುದಾದರೂ ಹುಡುಗಿ ನೋಡೋಣಾಂದರೆ ಅದ್ಯಾವಳೋ ಮಲಯಾಳಿ ನರ್ಸ್‌ನ್ನು ಮದುವೆ ಆಗ್ತಿನೀಂತೀಯ ಯಾರನ್ನಾದ್ರು ಕಟ್ಟಿಕೊಂಡು ಹಾಳಾಗಿಹೋಗು. ನನ್ನ ಪಾಲಿಗೆ ನೀನು ಸತ್ತೆ ಅಂತ ತಿಳಕೋತೀನಿ” ಎಂದು ಹೇಳಿ ಕೆಕ್ಕರಿಸಿ ನೋಡಿ ಎದ್ದು ಒಳಗೆ ಹೋದಳು. ಅರವಿಂದನೂ ಕೋಪದಿಂದ ಹೊರಡಲು ಅನುವಾದ, ತಂದೆಯವರ ಕಡೆ ನೋಡಿ, “ನಡೀರಿ ಹೋಗೋಣ” ಎಂದ. ಅವರು ಬರಲು ಸಿದ್ಧರಿರಲಿಲ್ಲ. ಅವರೂ ಕೋಪಗೊಂಡಿದ್ದರು. “ನೀನು ಆ ಮಲೆಯಾಳಿ ನರ್ಸ್‌ನ ಮದುವೆ ಆಗೋದಾದರೆ ನಾನು ಆ ಮನೆಗೆ ಕಾಲಿಡೋದಿಲ್ಲ. ನಿನ್ನ ಮದುವೆಗೂ ಬರೋದಿಲ್ಲ, ಹೋಗು ಇಲ್ಲಿಂದ, ನಾನು ಇನ್ನಮೇಲೆ ಇಲ್ಲೇ ಇರ್ತೀನಿ” ಎಂದರು. ಅರವಿಂದನಿಗೆ ಏನು ಹೇಳಲೂ ತೋಚಲಿಲ್ಲ. ಮರು ಮಾತಾಡದೆ ತನ್ನ ಚೀಲ ಎತ್ತಿಕೊಂಡು ಹೊರನಡೆದ. ಮನೆಗೆ ಹೋದವನೆ ಸುಮ್ಮನೆ ಬಟ್ಟೆ ಬದಲಾಯಿಸಿ ಮಲಗಿಬಿಟ್ಟ. ರಾತ್ರಿ ಊಟವನ್ನೂ ಮಾಡಲಿಲ್ಲ. ಹಾಲೂ ಕುಡಿಯಲಿಲ್ಲ. ಮರುದಿನ ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ ಬಟ್ಟೆ ಬರೆ ಜೋಡಿಸಿಕೊಂಡು ಮೈಸೂರಿಗೆ ಹೋದ. ಅಲ್ಲಿಂದಲೇ ತನ್ನ ಆಸ್ಪತ್ರೆಗೆ ದೂರವಾಣಿ ಕರೆಮಾಡಿ, ತುರ್ತು ಕೆಲಸದ ಮೇಲೆ ಮೈಸೂರಿಗೆ ಬಂದಿದ್ದೇನೆ. ಎರಡು ದಿನ ರಜೆ ಮಂಜೂರು ಮಾಡಿರಿ ಎಂದು ಕೇಳಿಕೊಂಡ, ಮೈಸೂರು ತಲುಪಿದ ಕೂಡಲೇ ತನ್ನ ಚಿಕ್ಕಪ್ಪ ಶ್ರೀನಿವಾಸರಾಯರ ಮನೆಗೆ ಹೋದ. ಅವರ ಬಳಿ ತನ್ನ ಕಷ್ಟ ತೋಡಿಕೊಂಡ. ನೀವಾದರೂ ತಂದೆಯವರಿಗೆ ಒಂದು ಮಾತು ಹೇಳಿ ಈ ಮದುವೆಗೆ ಒಪ್ಪಿಸಿ ಎಂದು ವಿನಂತಿಸಿದ. ಚಿಕ್ಕಮ್ಮ ನೀವಾದರೂ ಅಕ್ಕನಿಗೆ ಸಮಾಧಾನ ಮಾಡಿ ಈ ಮದುವೆಗೆ ಒಪ್ಪಿಸಿ ಎಂದು ಕೇಳಿಕೊಂಡ. ಅವರಾದರೂ ಏನು ಮಾಡಿಯಾರು? ಅವರೂ ಕೂಡಾ ಜಾತಿ, ಧರ್ಮ, ಜಾತಕ, ನಕ್ಷತ್ರ, ಗೋತ್ರ ಮುಂತಾದ ವಿಷಯಗಳಲ್ಲಿ ಅಪಾರ ವಿಶ್ವಾಸ ಇಟ್ಟುಕೊಂಡವರು. ಅವರು ಇವನಿಗೆ ಸಮಾಧಾನ ಮಾಡಿ, ಈ ವಿಷಯದಲ್ಲಿ ದುಡುಕಬೇಡ, ನಿಧಾನವಾಗಿ ಯೋಚಿಸಿ ಒಂದು ನಿರ್ಧಾರಕ್ಕೆ ಬಾ ಎಂದು ತಿಳಿಹೇಳಿ ಕಳಿಸಿದರು.
ಅಲ್ಲಿಂದ ತನ್ನ ಸೋದರ ಮಾವನ ಮನೆಗೆ ಹೋದ. ಅವರ ಬಳಿಯೂ ತನ್ನ ಪ್ರೇಮ ಪ್ರಕರಣದ ಬಗ್ಗೆ ಹೇಳಿ, ನೀವಾದರೂ ತಂದೆಯವರನ್ನು ಒಪ್ಪಿಸಿರಿ ಎಂದು ಕೇಳಿಕೊಂಡ. ಅವರೂ ಕೂಡಾ “ಜಾತಿ ಬಿಟ್ಟು ಯಾರೋ ಮಾಂಸ ತಿನ್ನುವವಳನ್ನು ಯಾಕೆ ಮದುವೆ ಆಗ್ತೀಯ. ನಮ್ಮ ಸುಶೀಲ, ಬಿ.ಎ, ಬಿ.ಎಡ್. ಓದಿ ಟೀಚರಾಗಿದಾಳೆ. ಅವಳನ್ನು ಮದುವೆ ಆಗು. ನಿಮ್ಮ ತಾಯಿ ಇದ್ದಾಗ ಈ ವಿಷಯ ಒಂದ್ಸಲ ಪ್ರಸ್ತಾಪ ಮಾಡಿದ್ವಿ, ಅಗ್ಲಿ ಮಾತಾಡ್ತೀನಿ ಅಂದಿದ್ಲು, ನಿಮ್ಮ ತಂದೆಯವರ ಹತ್ತಿರಾನೂ ಮಾತಾಡಿದ್ದೆ. ಅವರು ಅರವಿಂದನ ಓದು ಮುಗಿದು ಅವನಿಗೊಂದು ಕೆಲಸ ಸಿಗಲಿ ಅಂದಿದ್ರು. ನಿನಗೆ ಕೆಲಸ ಸಿಗೋ ಹೊತ್ತಿಗೆ ನೀವುಗಳು ಬೆಂಗಳೂರಿನಲ್ಲಿ ಮನೆ ಮಾಡಿಕೊಂಡು ಹೊರಟುಹೋದಿರಿ. ಅದಕ್ಕೆ ನಾವು ಈ ವಿಷಯ ಮುಂದುವರಿಸುವುದಕ್ಕಾಗಲಿಲ್ಲ. ಈಗ ನೋಡಿದರೆ, ನೀನು ಈ ಕಥೆ ಹೇಳ್ತಾ ಇದ್ದೀಯಾ! ನೋಡಪ್ಪಾ ದುಡುಕಿ ಯಾವ ನಿರ್ಧಾರಕ್ಕೂ ಬರಬೇಡ, ನಿಧಾನವಾಗಿ ಯೋಚನೆ ಮಾಡು” ಎಂದರು.
ಅರವಿಂದ ನಿಟ್ಟುಸಿರು ಬಿಟ್ಟು ಅಲ್ಲಿಂದ ಹೊರಟ. ತನ್ನ ಇಬ್ಬರು ಸ್ನೇಹಿತರ ಬಳಿ ಚರ್ಚಿಸಿದ. ಅವರಿಬ್ಬರೂ ಖಂಡಿತ ಮಾಡಿಕೋ, ನಾವು ನಿನ್ನ ಸಹಾಯಕ್ಕೆ ಇದ್ದೇವೆ. ಪ್ರೀತಿ ಇಲ್ಲದ ಮದುವೆ ಕೇವಲ ಒಂದು ವ್ಯವಹಾರ ಅಷ್ಟೇ ಪ್ರೀತಿ ಇಲ್ಲದ ಸಂಸಾರದಲ್ಲಿ ಯಾವ ಸುಖವೂ ಇರುವುದಿಲ್ಲ ಎಂದು ತಮ್ಮ ಅನುಭವವನ್ನು ಸಾಮಾನ್ಯ ಮಾತಿನಲ್ಲಿ ಹೇಳಿದರು. ನಿಮ್ಮ ತಂದೆಯವರೊಂದಿಗೆ ಖಂಡಿತ ಮಾತನಾಡುತ್ತೇವೆ ಎಂದರು. ಮೈಸೂರಿನಲ್ಲಿ ಇನ್ನೂ ಕೆಲವರೊಂದಿಗೆ ಈ ವಿಷಯ ಮಾತನಾಡಿ, ಬೆಂಗಳೂರಿಗೆ ಹಿಂತಿರುಗಿ ಬಂದ. ಮರುದಿನದಿಂದ ತನ್ನ ಕೆಲಸ ಕಾರ್ಯಗಳಲ್ಲಿ ನಿರತನಾದ. ಸಂಜೆ ಕೆಲಸ ಮುಗಿದು ಸ್ವಲ್ಪ ಆರಾಮವಾಗಿ ಕುಳಿತಿದ್ದ. ಆಗ ಅನು ಬಂದಳು. “ಏನಾಯಿತು. ಎರಡು ದಿನ ರಜಾ ಹಾಕಿದ್ದೀರಿ. ಮನೆಯಲ್ಲಿ ಅಪ್ಪ ಹುಷಾರಾಗಿದ್ದಾರೆಯೇ? ನಮ್ಮ ಮದುವೆಯ ವಿಷಯ ಏನಾದರೂ ಮಾತನಾಡಿದಿರಾ?” ಎಂದು ಕೇಳಿದಳು. ಅರವಿಂದ ನಡೆದ ವಿಷಯಗಳನ್ನೆಲ್ಲಾ ವಿಸ್ತಾರವಾಗಿ ಅವಳಿಗೆ ತಿಳಿಸಿ ಹೇಳಿದ. ಮುಂದೇನು ಮಾಡಬೇಕೆಂದು ತೋಚುತ್ತಿಲ್ಲ! ಎಂದು ಅವಳ ಕೈಹಿಡಿದುಕೊಂಡು ಅಳತೊಡಗಿದ. ಅವಳು ಏನು ಮಾಡುವುದೆಂದು ತಿಳಿಯದೆ ಸುಮ್ಮನೆ ಕುಳಿತಳು. ನಂತರ ಮನಸ್ಸಿಲ್ಲದ ಮನಸ್ಸಿನಿಂದ ಒಂದು ಮಾತು ಹೇಳಿದಳು. “ಅರವಿಂದ ಸರ್. ನನಗಾಗಿ ನೀವು ಇಷ್ಟೊಂದು ಕಷ್ಟಪಡೋದು ಬೇಡ. ನಿಮ್ಮ ಮನೆಯವರಿಗೆ ಇಷ್ಟ ಇಲ್ಲ ಅಂದ್ರೆ ಬೇಡ ಬಿಡಿ. ನಿಮ್ಮ ಜಾತಿಯವರನ್ನೇ ಯಾರನ್ನಾದರೂ ನೋಡಿ ಮದುವೆಯಾಗಿ, ನಾನು ನಿಮ್ಮನ್ನು ಎಂದಿಗೂ, ಎಂದೆಂದಿಗೂ ಅತ್ಯಂತ ಗೌರವದಿಂದ ನೋಡ್ತೀನಿ, ನಾನು ನಿಮ್ಮ ಕಣ್ಣ ಮುಂದಿದ್ದರೆ ನಿಮಗೆ ಕಷ್ಟ ಆದರೆ ನಾನು ಈ ಕೆಲಸ ಬಿಟ್ಟು ನನ್ನ ತಂಗಿ ಹತ್ತಿರ ದುಬಾಯಿಗೆ ಹೋಗಿ ಬರ್ತೀನಿ ನೀವು ಮಾತ್ರ ಬೇಜಾರು ಮಾಡ್ಕೋಬೇಡಿ” ಎಂದು ಅವನ ತಲೆ ನೇವರಿಸಿ ಸಮಾಧಾನ ಮಾಡಿ ಹೋದಳು.
ಆ ರಾತ್ರಿ ಅರವಿಂದ ಪರಿಪರಿಯಾಗಿ ಯೋಚಿಸಿದ ಎಷ್ಟೇ ಯೋಚಿಸಿದರೂ ಅನುವನ್ನು ಮರೆತು ಬೇರೊಬ್ಬಳನ್ನು ಮದುವೆಯಾಗುವ ವಿಷಯ ಅವನಿಗೆ ಸರಿ ಎಂದು ಅನಿಸಲಿಲ್ಲ. ಹೀಗೇ ಯೋಚಿಸಿ ಯೋಚಿಸಿ ನಿದ್ರೆಗೆ ಶರಣಾದ. ಮುಂದಿನ ಎರಡುದಿನ ಆಸ್ಪತ್ರೆಯಲ್ಲಿ ಅನುವನ್ನು ಭೇಟಿ ಮಾಡಲಿಲ್ಲ. ಭಾನುವಾರ ಅಕ್ಕನ ಮನೆಗೆ ಹೋದೆ. ಅವಳು ಇವನ ಮುಖ ಕೂಡಾ ನೋಡಲಿಲ್ಲ. ಭಾವ ಊಟ ಮಾಡಿಕೊಂಡು ಹೋಗು ಎಂದರು. ಇವನು ಊಟ ಮಾಡಲಿಲ್ಲ. ತಂದೆಯವರು ಬಹಳ ಸಪ್ಪಗಿದ್ದರು. ಅರವಿಂದ ಅವರ ಆರೋಗ್ಯ ವಿಚಾರಿಸಿದ ಮನೆಗೆ ಬನ್ನಿ ಎಂದ ನೀನು ಆ ನರ್ಸ್‌ನ ಮದುವೆ ಆಗೋದಿಲ್ಲ ಎಂದು ಹೇಳಿದರೆ ಬರ್ತೇನೆ ಎಂದರು. “ಆ ವಿಷಯ ಇನ್ನೂ ಏನೂ ನಿರ್ಧಾರ ಮಾಡಿಲ್ಲ. ಆ ಮೇಲೆ ನೋಡೋಣ ಬನ್ನಿ” ಎಂದ.
ಅವರು “ನನಗೆ ಸಂಗೀತಪಾಠ ಇದೆ. ನಾಳೆ ಮೈಸೂರಿಗೆ ಹೋಗ್ತಿದೀನಿ ಹೋಗಿ ಬಂದ ಮೇಲೆ ನೋಡೋಣ” ಎಂದರು. ಸರಿ ಎಂದು ಅರವಿಂದ ತನ್ನ ಮನೆಗೆ ಹೊರಟ. ಮರುದಿನ ಒಂದು ಆಪರೇಷನ್ ಮಾಡಬೇಕಿತ್ತು ಅನುನೇ ವಿಶೇಷ ಸಹಾಯಕಿ ಆಗಿ ಬಂದಳು, ಆಪರೇಷನ್ ಆದಮೇಲೆ ಒಂದು ರೀತಿಯ ಸಮಾಧಾನ ಮತ್ತು ನಿರಾಳವಾಯಿತು. ಅನುಗೆ ವಿಶೇಷ ಥ್ಯಾಂಕ್ಸ್ ಹೇಳಿದ, ಆದೇ ದಿನ ರಾತ್ರಿ ಮತ್ತೊಂದು ಆಪರೇಷನ್ ಆಗಲೂ ಅನು ಸಹಾಯಕಳಾಗಿ ಬಂದಳು. ಆಪರೇಷನ್ ನಂತರ ಬಟ್ಟೆ ಬದಲಾಯಿಸಿ ಒಂದು ನಿಮಿಷ ಕಣ್ಮುಚ್ಚಿ ಕುಳಿತ, ಅನು ಬಂದಳು. ಇವನ ಬೆನ್ನ ಮೇಲೆ ಕೈಯಿಟ್ಟು ಸಮಾಧಾನ ಮಾಡಿದಳು, ಬಿಸಿ ಬಿಸಿ ಕಾಫಿ ತಂದು ಕೊಟ್ಟಳು. ಹೀಗೆಯೇ ಎರಡು ತಿಂಗಳೇ ಕಳೆಯಿತು, ಮದುವೆಯ ವಿಷಯ ಮಾತನಾಡದೇ ಸುಮ್ಮನೆ ತನ್ನ ಹಳೆಯ ಕಾರ್ಯಗಳಲ್ಲಿ ನಿರತನಾದ.
ಒಂದು ಸಂಜೆ ಆಸ್ಪತ್ರೆಯಿಂದ ಮನೆಗೆ ಹೋದಾಗ ಒಂದು ಅಚ್ಚರಿ ಕಾದಿತ್ತು. ಮನೆಯಲ್ಲಿ ತಂದೆಯರು ಬಂದಿದ್ದರು. ಹಿಂದಿನಂತೆ ತಾವೇ ಅಡುಗೆ ಮಾಡಿ ಇಟ್ಟಿದ್ದರು. ಅರವಿಂದನಿಗೆ ತಂದೆಯವರನ್ನು ನೋಡಿ ತುಂಬಾ ಸಂತೋಷವಾಯಿತು, “ಹೇಗಿದ್ದೀರಿ? ಆರೋಗ್ಯವಾಗಿದ್ದೀರಾ? ಯಾವಾಗ ಬಂದ್ರಿ?” ಎಂದೆಲ್ಲಾ ವಿಚಾರಿಸಿದ. ನಂತರ ಮುಖ, ಕೈಕಾಲು ತೊಳೆದುಕೊಂಡು, ಬಟ್ಟೆ ಬದಲಾಯಿಸಿ, ಚಹ ಮಾಡಿದ, ತಂದೆ-ಮಗ ಇಬ್ಬರೂ ಕುಳಿತು ಕುಡಿದರು. ಅರವಿಂದನೂ ಮದುವೆಯ ವಿಷಯ ಎತ್ತಲಿಲ್ಲ. ತಂದೆಯವರೂ ಆ ವಿಷಯ ಏನೂ ಮಾತನಾಡಲಿಲ್ಲ. ರಾತ್ರಿ ಇಬ್ಬರೂ ಊಟ ಮಾಡಿ ಮಲಗಿದರು. ಮರುದಿನ ಬೇಗ ಬೇಗ ತಯಾರಾಗಿ ಆಸ್ಪತ್ರೆಗೆ ಹೊರಟುಹೋದ. ಮಧ್ಯಾನ್ಹ ಬಿಡುವಿದ್ದಾಗ ಸರಸ್ವತಿಗೆ ಫೋನ್ ಮಾಡಿ “ಹೇಗಿದ್ದೀಯಾ?” ಎಂದು ಕೇಳಿದ. ಅವಳು ಇನ್ನು ಕೋಪದಿಂದಲೇ ಇದ್ದಳು, ನಾನು ಹೇಗಿದ್ದರೆ ನಿನಗೇನು?” ಎಂದಳು. ಅರವಿಂದ ತಂದೆಯ ವಿಚಾರ ಮಾತನಾಡಿ “ಏನು ಧಿಡೀರಂತ ಬಂದು ಬಿಟ್ಟರು. ಹಾಷಾರಾಗಿದಾರೆ ತಾನೆ?” ಎಂದು ಕೇಳಿದ.
“ನನ್ನನ್ನೇನು ಕೇಳೀಯಾ? ನಾನೇನು ಡಾಕ್ಟರಾ? ನೀನ್ತಾನೆ ಡಾಕ್ಟರು. ಅವರು ಹುಷಾರಾಗಿದಾರಾ ಇಲ್ಲವಾ ಅಂತ ನೀನು ಹೇಳಬೇಕು. ಅವರು ನನಗೆ ಮಾತ್ರ ತಂದೆ ಅಲ್ಲ, ನಿನಗೂ ತಂದೇನೇ ತಾನೆ ನಾನೇ ಯಾಕೆ ಅವರನ್ನು ನೋಡಿಕೋಬೇಕು?” ಎಂದಳು. ಅರವಿಂದನಿಗೆ ವಿಷಯ ಅರ್ಥವಾಯಿತು. ಸರಿ ಫೋನ್ ಕೆಳಗಿಟ್ಟು ತನ್ನ ಕೆಲಸ ಕಾರ್ಯಗಳಲ್ಲಿ ನಿರತನಾದ. ರಾತ್ರಿ ಮನೆಗೆ ಹೋದಾಗ ತಂದೆಯವರ ಬಳಿ ಸೂಕ್ಷ್ಮವಾಗಿ ವಿಚಾರಿಸಿದ ಅವರು ಏನೂ ನಡೆದೇ ಇಲ್ಲ ಎನ್ನುವಂತೆ ಮಾತನಾಡಿದರು. ಊಟ ಆದಮೇಲೆ ಹೀಗೆಯೇ ಒಂದು ವಿಷಯ ಹೇಳಿದರು. “ಭಾವ ಏನೋ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಒಂದ್ಸಲ ನಾನೂ ಬರ್ತೀನಿ ನನಗೂ ಮೆಡಿಕಲ್ ಚೆಕಪ್ ಮಾಡಿಸು” ಎಂದರು. ಅವರು ಎಂದೂ ಆ ರೀತಿ ಹೇಳಿದವರೇ ಅಲ್ಲ, ಅರವಿಂದ ಗಾಬರಿಯಾಗಿ ಅಪ್ಪ ಹುಷಾರಾಗಿದೀರಿ ತಾನೆ?” ಎಂದು ಕೂಡಲೇ ಸ್ಟೆತೋಸ್ಕೋಪ್ ತಂದು ಅವರನ್ನು ಅಲ್ಲಿಯೇ ಸೋಫಾದ ಮೇಲೆ ಮಲಗಿಸಿ ಚೆಕ್ ಮಾಡಿದ ನಂತರ ಬಿ.ಪಿ. ಯಂತ್ರ ತಂದು ಬಿ.ಪಿ ನೋಡಿದ. ನಾಡಿ ಮಿಡಿತ ನೋಡಿದ ಎಲ್ಲಾ ನಾರ್ಮಲ್ ಆಗಿತ್ತು, “ಎಲ್ಲಾ ನಾರ್ಮಲ್ ಆಗಿದೆ. ಯಾವುದಕ್ಕೂ ನಾಳೆ ನನ್ನ ಜೊತೆಗೆ ಆಸ್ಪತ್ರೆಗೆ ಬನ್ನಿ, ಒಂದು ಸಲ ಇ.ಸಿ.ಜಿ. ಮಾಡಿ ನೋಡಿ ಬಿಡೋಣ, ಅಂದಹಾಗೆ ನಿಮಗೆ ಏನೂ ಪ್ರಾಬ್ಲಮ್ ಇಲ್ಲಾ ತಾನೇ? ಏನಾದರೂ ಪ್ರಾಬ್ಲಮ್ ಕಾಣಿಸಿಕೊಂಡಿತೇ?” ಎಂದು ಕೇಳಿದ.
“ಏನೂ ಪ್ರಾಬ್ಲಮ್ ಇಲ್ಲಪ್ಪ. ನನ್ನ ಜೊತೆಗಾರರೆಲ್ಲರೂ ಒಂದಲ್ಲಾ ಒಂದು ಸಮಸ್ಯೆಯಿಂದ ಬಳಲುತ್ತಾ ಇದಾರೆ, ಎಲ್ಲರಿಗೂ ಬಿ.ಪಿ, ಶುಗರು, ಹಾರ್ಟ್ ಪ್ರಾಬ್ಲೆಮ್ಸ್ ಅದೂ ಇದೂ ಅಂತ ಡಾಕ್ಟರ್ ಹತ್ತಿರ ಹೋಗ್ತಿದ್ದಾರೆ. ಏನೋ ದೇವರ ದಯದಿಂದ ನನಗೆ ಅಂತಹ ಯಾವ ಸಮಸ್ಯೆಗೂ ಇಲ್ಲ, ಮನೇಲೇ ಡಾಕ್ಟರನ್ನ ಇಟ್ಟುಕೊಂಡು ನಾನು ಒಂದು ಸಲನೂ ಚೆಕ್ ಅಪ್ ಮಾಡಿಸಿ ಕೊಳ್ಳದೇ ಇದ್ರೆ ನಂದೇ ತಪ್ಪಾಗುತ್ತೆ. ಅದಕ್ಕೆ ನಿನ್ನ ಹತ್ತಿರ ಕೇಳಿದೆ. ಸರಿ ಯಾವುದಕ್ಕೂ ನಾಳೆ ಒಂದು ಸಲ ಆಸ್ಪತ್ರೆಗೆ ಹೋಗಿ ಬರೋಣ. ಅಂದ ಹಾಗೆ ನಿನ್ನ ಭಾವನ್ನೂ ಒಂದು ಸಲ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚೆಕಪ್ ಮಾಡಿಬಿಡು, ಅವರು ಯಾವಾಗಲೂ ಬಹಳ ಸುಸ್ತಾಗಿದ್ದಾರೆ.”
ಅರವಿಂದ ಗಾಬರಿಯಾದ, ಕೂಡಲೇ ಭಾವನಿಗೆ ಫೋನ್ ಮಾಡಿದ, ಸರಸ್ವತಿಯೇ ಫೋನ್ ತೆಗೆದುಕೊಂಡಳು. ಆರವಿಂದ ಎಂದು ತಿಳಿದ ಕೂಡಲೇ ಫೋನ್ ಡಿಸ್‌ಕನೆಕ್ಟ್ ಮಾಡಿದಳು. ಅರವಿಂದ ಮತ್ತೆ ಫೋನ್ ಮಾಡಿ, ಕೂಡಲೇ ಹೇಳಿದ
“ನಾಳೆ ಭಾವನನ್ನು ರಜಾ ಹಾಕಿ ನನ್ನ ಜೊತೆ ಆಸ್ಪತ್ರೆಗೆ ಬರಕ್ಕೆ ಹೇಳು. ಮಾಸ್ಟರ್ ಮೆಡಿಕಲ್ ಚೆಕ್‌ಅಪ್ ಮಾಡಿಸೋಣ” ಎಂದ, ಸರಸ್ವತಿ ಖಾರವಾಗಿ ನುಡಿದಳು. “ನಿಮ್ಮ ಆಸ್ಪತ್ರೆಗೆ ಗಿರಾಕಿಗಳು ಕಡಿಮೆ ಆಗಿದ್ರೆ ಎಲ್ಲಾದ್ರೂ ಮೆಡಿಕಲ್ ಕ್ಯಾಂಪ್ ಏರ್ಪಾಡು ಮಾಡಿ. ನಮಗೆ ನಿಮ್ಮ ಸಹಾಯ ಬೇಕಾಗಿಲ್ಲ. ಬೆಂಗಳೂರಿನಲ್ಲಿ ನೀನು ಒಬ್ಬನೇ ಅಲ್ಲ ಡಾಕ್ಟರಿರೋದು, ನಿಮ್ಮ ಆಸ್ಪತ್ರೆ ಒಂದೇ ಅಲ್ಲ ಆಸ್ಪತ್ರೆ ಇರೋದು. ನಮ್ಮ ಕತೆ ನಾವು ನೋಡಿಕೋತೀವಿ, ನಿಮ್ಮ ಕತೆ ನೀವು ನೋಡಿಕೊಳ್ಳಿ? ಎಂದು ಹೇಳಿ ಫೋನಿಟ್ಟುಬಿಟ್ಟಳು. ಅರವಿಂದ ನಿಟ್ಟುಸಿರು ಬಿಟ್ಟು, ಮಲಗಲು ಹೋದ. ಮರುದಿನ ತಂದೆಯವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮಾಸ್ಟರ್ ಮೆಡಿಕಲ್ ಚೆಕಪ್ ಮಾಡಿಸಿದ. ಎಲ್ಲಾ ಸರಿಯಾಗಿತ್ತು. ಇಬ್ಬರೂ ಬಿಡುಗಡೆಯ ನಿಟ್ಟುಸಿರು ಬಿಟ್ಟರು. ಅನು ತಾನೇ ಮುಂದೆ ಬಂದು ರಾಯರ ಕಾಲು ಮುಟ್ಟಿ ನಮಸ್ಕರಿಸಿದಳು, ಮಾಸ್ಟರ್ ಮೆಡಿಕಲ್ ಚೆಕಪ್‌ಗೆ ಸಹಾಯಕಿಯಾಗಿ ಕೆಲಸ ಮಾಡಿದಳು. ಅವಳು ಸ್ವಚ್ಛ ಕನ್ನಡದಲ್ಲಿ ಬಾಯ್ತುಂಬಾ ಮಾತನಾಡಿದಳು. ರಾಯರು, ಸುಮ್ಮನೆ ಮುಗುಳು ನಕ್ಕರು. ಕೊನೆಗೆ ಥ್ಯಾಂಕ್ಸ್ ಹೇಳಿದರು.
ಮುಂದಿನವಾರ ಅರವಿಂದನ ತಾಯಿಯ ವಾರ್ಷಿಕ ಶ್ರಾದ್ಧವಿತ್ತು. ಮೈಸೂರಿನಲ್ಲಿ ಚಿಕ್ಕಪ್ಪ ಶ್ರೀನಿವಾಸರವರ ಮನೆಯಲ್ಲಿಯೇ ಮಾಡುವುದೆಂದು ನಿರ್ಧರಿಸಿದರು. ಅವರಿಗೆ ದೂರವಾಣಿ ಕರೆ ಮಾಡಿ, ಪುರೋಹಿತರಿಗೆ, ಬ್ರಾಹ್ಮಣರ್ಥ ಕೊಡುವವರಿಗೆ, ಅಡುಗೆಯವರಿಗೆ ಎಲ್ಲಾ ಬರಹೇಳುವಂತೆ ತಿಳಿಸಿ ಆಯಿತು. ಸರಸ್ವತಿ ತಾನು ಬರುವುದಿಲ್ಲ ಎಂದು ಬಿಟ್ಟಳು. ಸರಿ ತಂದೆ, ಮಗ ಕಾರಿನಲ್ಲಿ ಮೈಸೂರಿಗೆ ಹೋಗಿ ಶ್ರಾದ್ಧದ ಕಾರ್ಯ ಮುಗಿಸಿದರು. ಮಧ್ಯಾಹ್ನ ಊಟ ಆದ ಮೇಲೆ ಎಲ್ಲರೂ ಆರಾಮವಾಗಿ ಮಾತನಾಡುತ್ತಾ ಕುಳಿತಿದ್ದರು. ಆ ಸಮಯ ನೋಡಿ, ಚಿಕ್ಕಪ್ಪ ಶ್ರೀನಿವಾಸರಾಯರೂ ಅರವಿಂದನನ್ನು ಕೇಳಿದರು.
“ಮದುವೆ ವಿಷಯ ಏನು ನಿರ್ಧಾರ ಮಾಡಿದೆಯಪ್ಪಾ?” ಅರವಿಂದ ಯಾವ ಸಂಕೋಚವಿಲ್ಲದೆ ನೇರವಾಗಿ ಉತ್ತರ ಕೊಟ್ಟ.
“ಚಿಕ್ಕಪ್ಪಾ ನಾನಂತೂ ನನ್ನ ಸ್ಟಾಫ್ ನರ್ಸ್ ಅನುನೇ ಮದುವೆ ಆಗ ಬೇಕೆಂತಿದೀನಿ. ಅವಳು ಓದಿದವಳು. ಬಹಳ ಒಳ್ಳೆಯ ಹುಡುಗಿ, ಕೆಲಸದಲ್ಲಿ ತುಂಬಾ ನಾಜೂಕು. ಅವಳನ್ನು ಮದುವೆಯಾದರೆ ನಾವೆಲ್ಲರೂ ಸುಖ ಸಂತೋಷದಿಂದ ಇರಬಹುದು. ಗುರು ಹಿರಿಯರಲ್ಲಿ ಭಕ್ತಿ ಗೌರವವಿದೆ. ನಮ್ಮ ತಂದೆಯವರನ್ನು ಅತ್ಯಂತ ಗೌರವದಿಂದ ಕಾಣ್ತಾಳೆ. ಚೆನ್ನಾಗಿ ಸೇವೆ ಮಾಡ್ತಾಳೆ, ಅಪ್ಪ ಒಪ್ಪಿದರೆ, ನೀವುಗಳು ಒಪ್ಪಿಕೊಂಡರೆ ಖಂಡಿತ ಅವಳನ್ನೇ ಮದುವೆ ಆಗೋದು ಅಂತ ಅಂದುಕೊಂಡಿದೀನಿ.”
“ಅದೆಲ್ಲಾ ಸರೀಪ್ಪಾ ಆದರೆ ಜಾತಿ! ಅವರಾವ ಜಾತೀನೋ ಯಾವ ಜನಾನೋ, ಮಾಂಸ ಮಡ್ಡಿ ತಿನ್ನೋ ಜನ ಆದರೆ ಏನು ಗತಿ!” ಚಿಕ್ಕಪ್ಪಾ ತಮ್ಮ ವಾದ ಮಂಡಿಸಿದರು.
ಅರವಿಂದ ಉತ್ತರಿಸಿದ.
‘ಚಿಕ್ಕಪ್ಪಾ ನೀವೆಲ್ಲಾ ಹಿರಿಯರು. ನಿಮಗೆ ಗೊತ್ತಿಲ್ಲದಿರೋದೇನಿದೆ. ಜನ್ಮನಾ ಜಾಯತೇ ಶೂದ್ರಃ ಕರ್ಮಣಾ ಜಾಯತೇ ದ್ವಿಜಃ ಅಂತ ದೊಡ್ಡವರು ಹೇಳಿದ್ದಾರೆ. ನಾವು ಮಾಡುವ ಸತ್ಕರ್ಮದಿಂದ ನಾನು ದ್ವಿಜರಾಗ್ತಿವಿ. ಅವಳು ನನ್ನ ಕೈಹಿಡಿದು, ಸಪ್ತಪದಿ ತುಳಿದು ನಮ್ಮ ಮನೆಗೆ ಬಂದ ಮೇಲೆ ಅವಳು ನಮ್ಮ ಗೋತ್ರ ಆಗ್ತಾಳೆ, ನಮ್ಮ ಮನೆಯ ಭಾಷೆ, ಆಚಾರ, ವಿಚಾರ ಸಂಸ್ಕೃತಿ ಕಲಿಸೋದು ನಮ್ಮ ಕರ್ತವ್ಯ. ಅದನ್ನು ನಾನು ಕಲಿಸ್ತೀನಿ. ಅತ್ಯಂತ ಕುಶಾಗ್ರಮತಿಯಾದ ಆ ಹುಡುಗಿ ನಮ್ಮ ಮನೆಯ ನಡೆ ನುಡಿ ಸಂಸ್ಕಾರ ಸಂಸ್ಕೃತಿ ಎಲ್ಲಾನೂ ಆದಷ್ಟು ಬೇಗ ಕಲಿತು ನಿಮ್ಮೆಲ್ಲರ ಮನ ಗೆಲ್ಲೋದರಲ್ಲಿ ಯಾವ ಸಂದೇಹವೂ ಇಲ್ಲ.”
ಅರವಿಂದನ ವಾದ ಮತ್ತು ದೃಢ ವಿಶ್ವಾಸವನ್ನು ನೋಡಿದ ಹಿರಿಯರೆಲ್ಲರೂ ಮೂಕ ವಿಸ್ಮಿತರಾದರು. ಸ್ವಲ್ಪ ತಡೆದು ಚಿಕ್ಕಪ್ಪನವರೇ ಹೇಳಿದರು. ಆಗಲಪ್ಪಾ ನಿನ್ನ ಸಂತೋಷವೇ ನಮ್ಮ ಸಂತೋಷ, ಎಲ್ಲಾ ಒಳ್ಳೇದಾಗ್ಲಿ. ಆದರೆ ಒಂದು ಮಾತು. ಮದುವೆ ಆದ ಮೇಲೆ ನಾನು ಮಾಡಿದ್ದು ತಪ್ಪಾಯ್ತು ಅಂತ ಪಶ್ಚಾತ್ತಾಪ ಪಡೋದು, ಮುಂದಕ್ಕೆ ಗಂಡ ಹೆಂಡತಿ ದೂರಾಗೋದು ಮುಂತಾದ ಪರಿಸ್ಥಿತಿ ಬರಬಾರದು.” “ಸರಿ ಚಿಕ್ಕಪ್ಪ. ಆ ಜವಾಬ್ದಾರಿ ನಂದು” ಎಂದು ಅರವಿಂದ ಎಲ್ಲರಿಗೂ ಕೈ ಮುಗಿದು ಕೃತಜ್ಞತೆ ತೋರಿದ. ಚಿಕ್ಕಪ್ಪನವರು ವಿಷಯ ಬದಲಿಸಿದರು.
“ಕೋದಂಡನ್ನ ನಿನ್ನ ಆಸ್ಪತ್ರೆಗೆ ಕರಕೊಂಡು ಹೋಗಿ, ಮೆಡಿಕಲ್ ಚೆಕಪ್ ಮಾಡಿಸಿದೆಯೆಂತೆ. ಬಹಳ ಸಂತೋಷ ಆಯ್ತು. ನಿನಗೇನೂ ಅಭ್ಯಂತರ ಇಲ್ಲ ಅಂದ್ರೆ ನಾಳೆ ನಾನೂ ಮತ್ತು ನಿನ್ನ ಚಿಕ್ಕಮ್ಮ ನಿಮ್ಮ ಜೊತೆ ಬೆಂಗಳೂರಿಗೆ ಬರ್ತೀವಿ. ನಮಗೂ ಸ್ವಲ್ಪ ಮೆಡಿಕಲ್ ಚೆಕ್‌ಅಪ್ ಮಾಡಿಸಿ ಬಿಡಪ್ಪಾ?”
ಅರವಿಂದ ಸಂತೋಷವಾಗಿ ಒಪ್ಪಿಕೊಂಡ.
“ಖಂಡಿತವಾಗಿ ಬನ್ನಿ ಚಿಕ್ಕಪ್ಪ ನಾನು ಖುದ್ದಾಗಿ ನಿಮ್ಮಿಬ್ಬರ ಮೆಡಿಕಲ್ ಚೆಕಪ್ ಮಾಡ್ತೀನಿ. ಅನೂನೇ ನನ್ನ ಅಸಿಸ್ಟೆಂಟ್ ಆಗಿ ನಿಮ್ಮ ಸೇವೆ ಮಾಡ್ತಾಳೆ.”
ಇದಾದ ಒಂದು ತಿಂಗಳಿನಲ್ಲಿ ಅನು ಮತ್ತು ಅರವಿಂದರ ಮದುವೆ ವಸಂತಪುರದ ಶ್ರೀ ವಸಂತ ವಲ್ಲಭರಾಯ ಸ್ವಾಮಿ ದೇವಾಲಯದಲ್ಲಿ ಸರಳವಾಗಿ ನಡೆಯಿತು. ಅರವಿಂದನ ಹತ್ತಿರದ ಸಂಬಂಧಿಕರು ಹತ್ತು ಹದಿನೈದು ಜನ ಬಂದಿದ್ದರು. ತಂದೆಯವರು ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿಕೊಂಡಿದ್ದರು. ಅವರು ಮದುವೆಗೆ ಬಂದು ವಧೂವರರನ್ನು ಆಶೀರ್ವದಿಸಿದರು. ಚಿಕ್ಕಪ್ಪ-ಚಿಕ್ಕಮ್ಮ ಮಣೆಯ ಮೇಲೆ ಕುಳಿತು ವರನ ತಂದೆಯ ಪಾತ್ರ ವಹಿಸಿದರು. ಅಕ್ಕ-ಭಾವ ಮತ್ತು ನಯನ ಮಾತ್ರ ಬರಲಿಲ್ಲ! ಇನ್ನು ಹುಡುಗಿಯ ಕಡೆ ಅವಳ ತಾಯಿ ಮಾತ್ರ ಇದ್ದರು. ಕೊನೆಯ ಘಳಿಗೆಯಲ್ಲಿ ಅವಳ ತಂಗಿ ದುಬಾಯಿನಿಂದ ಬಂದಿಳಿದಳು. ಅನೂನ ತಾಯಿಯ ಅಣ್ಣ ಅತ್ತಿಗೆ ಒಂದು ಹುಡುಗಿಯು ತಂದೆ ತಾಯಿಯ ಸ್ಥಾನದಲ್ಲಿ ಕುಳಿತು ಹುಡುಗಿಯನ್ನು ಧಾರೆ ಎರೆದು ಕೊಟ್ಟರು. ಅನು ಅರವಿಂದನಿಗೆ ಪ್ರೀತಿಯ ಮಡದಿಯಾಗಿ, ತಂದೆಯವರಿಗೆ ಮುದ್ದಿನ ಸೊಸೆಯಾಗಿ, ಮನೆಗೆ ಹೆಣ್ಣು ದಿಕ್ಕಾಗಿ ಎಲ್ಲರ ಮನ ತುಂಬಿದಳು. ಅಕ್ಕ ಭಾವ ಮತ್ತು ಅವರ ಮಗಳು ಮದುವೆಗೆ ಬರದೇ ಇದ್ದುದು ಎಲ್ಲರಿಗೂ ಬಹಳ ಬೇಸರ ತಂದಿತ್ತು.
ಇವರಿಬ್ಬರೂ ಮದುವೆಯಾದ ಕೆಲವೇ ದಿನಗಳಲ್ಲಿ ಸರಸ್ವತಿ ಅನುವನ್ನು ಒಪ್ಪಿಕೊಳ್ಳುವ ಪ್ರಸಂಗವೂ ಬಂದಿತು. ಒಂದು ದಿನ ನಡುರಾತ್ರಿ ಹನ್ನೆರಡೂವರೆಗೆ ನಯನ ಆರವಿಂದನಿಗೆ ಫೋನ್ ಮಾಡಿ “ಮಾಮಾ ಅಮ್ಮನಿಗೆ ಏನೋ ಆಗಿದೆ ವಿಪರೀತ ಒದ್ದಾಡ್ತಿದಾಳ ಕೂಡಲೇ ಬಾ” ಎಂದಳು. ಅರವಿಂದ ಕೂಡಲೇ ಉಡುಪು ಧರಿಸಿ, ಕಾರು ತೆಗೆದುಕೊಂಡು ಹೊರಟ. ಅನು ಕೂಡಾ ಉಡುಪು ಧರಿಸಿ ಅರವಿಂದನ ಜೊತೆಗೆ ಹೊರಟಳು, ಗಾಬರಿಯಾಗಿ ಕುಳಿತಿದ್ದ ತಂದೆಯವರಿಗೆ ಸಮಾಧಾನ ಮಾಡಿದರು. “ನಾನೀಗಲೇ ಅಕ್ಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಏನು ಚಿಕಿತ್ಸೆ ಮಾಡಬೇಕೋ ಮಾಡಿಸುತ್ತೇನೆ. ನೀವು ಧೈರ್ಯವಾಗಿರಿ, ಆಸ್ಪತ್ರೆ ತಲುಪಿದ ಮೇಲೆ ನಾನು ನಿಮಗೆ ಫೋನ್ ಮಾಡಿ ವಿವರಗಳನ್ನು ತಿಳಿಸುತ್ತೇನೆ. ನೀವು ಧೈರ್ಯವಾಗಿರಿ. ಮಲಕ್ಕೊಂಡಿರಿ” ಎಂದು ತಂದೆಯವರಿಗೆ ಧೈರ್ಯ ಹೇಳಿ ಹೊರಟ. ಸರಸ್ವತಿಗೆ ಹೃದಯಾಘಾತವಾಗಿತ್ತು. ಅವಳಿಗೆ ಪ್ರಥಮ ಚಿಕಿತ್ಸೆ ಮಾಡಿ, ಅವಳನ್ನು ತನ್ನ ಕಾರಿನಲ್ಲಿ ಮಲಗಿಸಿ, ಆಸ್ಪತ್ರೆಗೆ ಕರೆದುಕೊಂಡು ಹೋದ. ಹೋಗುವ ಮುನ್ನ ಆಸ್ಪತ್ರೆಗೆ ಫೋನ್ ಮಾಡಿ ಈಗ ಎಮರ್ಜನ್ಸಿ ಕೇಸ್ ತೆಗೆದುಕೊಂಡು ಬರುವುದಾಗಿ ಆಪರೇಷನ್‌ಗೆ ತಯಾರಿ ಮಾಡಿಕೊಳ್ಳಬೇಕೆಂದು ತಿಳಿಸಿದ. ತನ್ನ ಸಹಾಯಕ ಹಾಗೂ ಆಪ್ತ ಗೆಳೆಯ ಡಾ|| ಧೃವಕುಮಾರ್‌ಗೆ ದೂರವಾಣಿ ಕರೆಮಾಡಿ ಕೂಡಲೇ ಆಸ್ಪತ್ರೆಗೆ ಬರುವಂತೆ ತಿಳಿಸಿದ.
ಸರಸ್ವತಿಗೆ ಆಂಜಿಯೋಗ್ರಾಮ್ ಮಾಡಿ, ಸ್ಟಂಟ್ ಹಾಕಲಾಯಿತು. ಈ ಪೇಷಂಟ್ ತನ್ನ ಒಡಹುಟ್ಟಿದ ಅಕ್ಕನೇ ಆದುದರಿಂದ ಮತ್ತು ತನ್ನನ್ನು ಮನಸಾರೆ ದ್ವೇಷಿಸುವ ಅಕ್ಕನಾದುದರಿಂದ ಆಪರೇಷನ್ ಸಮಯದಲ್ಲಿ ರಾಗದ್ವೇಷಗಳು ಅಡ್ಡಬಂದು, ತಾನು ಭಾವುಕನಾಗುವ ಸಂಭವವಿರುವುದರಿಂದ, ತಾನು ಆಪರೇಷನ್ ಮಾಡದೆ, ತನ್ನ ಗೆಳೆಯ ಧೃವಕುಮಾರ್ ಕೈಲಿ ಮಾಡಿಸಿದ.
ಮರುದಿನ ಬೆಳಗ್ಗೆ ಸರಸ್ವತಿಗೆ ವಿಷಯ ತಿಳಿಯಿತು. ಅರವಿಂದ ಮತ್ತು ಅನು ಮಾಡಿದ ಸಹಾಯಕ್ಕೆ ಕೃತಜ್ಞತೆ ವ್ಯಕ್ತಪಡಿಸಿದಳು. ಮಾತನಾಡಲಾಗದೇ ಬಾಯಿ ಕಟ್ಟಿತು. ಅರವಿಂದನ ಕೈ ಹಿಡಿದು ಕಣ್ಣೀರು ಸುರಿಸಿದಳು. ನಂತರ ಅನೂನ ಕೈ ಹಿಡಿದು ಥ್ಯಾಂಕ್ಸ್ ಹೇಳಿದಳು. ನಯನ ಮತ್ತು ಭಾವ ಬಂದು ಸರಸ್ವತಿಯನ್ನು ನೋಡಿ ಹೋದರು. ತಂದೆಯವರೂ ಬಂದು ಸರಸ್ವತಿಯನ್ನು ನೋಡಿಹೋದರು. ಅನು ರಜಾಹಾಕಿ ನಾಲ್ಕುದಿನ ಸರಸ್ವತಿಯನ್ನು ನೋಡಿಕೊಂಡಳು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಹೊರಡಬೇಕಾದ ಸಮಯ ಬಂದಿತು. ಅರವಿಂದನ ಸಲಹೆಯ ಮೇರೆಗೆ ಅಕ್ಕನನ್ನು ಅರವಿಂದನ ಮನೆಗೆ ಕರೆದೊಯ್ಯಲಾಯಿತು. ಅನು ರಾತ್ರಿ ಹಗಲೂ ನಾದಿನಿಯ ಸೇವೆ ಮಾಡಿದಳು, ಹದಿನೈದು ದಿನಗಳ ಬಳಿಕ ಸರಸ್ವತಿ ತನ್ನ ಮನೆಗೆ ಹೊರಟು ನಿಂತಳು. ಈಗ ತಾನೇ ಹೃದಯಾಘಾತವಾಗಿ ಶಸ್ತ್ರ ಚಿಕಿತ್ಸೆ ಆಗಿರುವ ಸರಸ್ವತಿ ಮನೆಯ ಕೆಲಸಗಳನ್ನು ಮಾಡಲು ಆಗುವುದಿಲ್ಲ ಎಂದು, ಅನು ತನ್ನ ತಾಯಿ ಕಾತ್ಯಾಯಿನೀ ಅಮ್ಮ ಅವರನ್ನು ಸರಸ್ವತಿಯ ಮನೆಯಲ್ಲಿದ್ದು ಅಡುಗೆ ಕೆಲಸ, ಮನೆಯ ಕೆಲಸ ಎಲ್ಲಾ ಮಾಡಿಕೊಂಡಿರುವಂತೆ ವಿನಂತಿಸಿ, ಸರಸ್ವತಿಯ ಜೊತೆ ಕಳಿಸಿಕೊಟ್ಟಳು. ಅನು ಮಾಡಿದ ಉಪಕಾರಕ್ಕೆ ಹೇಗೆ ವಂದನೆ ತಿಳಿಸುವುದೆಂದು ತಿಳಿಯದೇ ಸರಸ್ವತಿ, ಅರವಿಂದ ಮತ್ತು ಅನೂರ ಕೈಹಿಡಿದು ಕಣ್ಣೀರಿಡುತ್ತಾ ಹೇಳಿದಳು. “ಅರವಿಂದ ನಾನು ವಿನಾಕಾರಣ ನಿನ್ನನ್ನು ದ್ವೇಷ ಮಾಡಿದೆ. ನಿನ್ನ ಮದುವೆಗೂ ಬರಲಿಲ್ಲ, ಆದರೆ ನೀವಿಬ್ಬರೂ ನನ್ನನ್ನು ಕ್ಷಮಿಸಿ, ನನ್ನ ಜೀವ ಉಳಿಸಿದಿರಿ. ಅನು ನನ್ನನ್ನು ಕ್ಷಮಿಸಮ್ಮ. ನೀನು ಯಾವ ಊರಿನವಳೋ, ಯಾದ ಜನವೋ ಅಂತ ನಾನು ಆತಂಕ ಪಟ್ಟಿದ್ದೆ. ನೀನೇ ನನ್ನ ಜೀವ ಉಳಿಸಿ, ನನ್ನ ಸೇವೆ ಮಾಡಿದೆ. ನನಗೂ ನಿನಗೂ ಯಾವ ಜನ್ಮದ ಅನುಬಂಧ ಅನು, ತುಂಬಾ ತುಂಬಾ ಥ್ಯಾಂಕ್ಸ್ ಅಮ್ಮ ನಿನಗೆ” ಎಂದು ಹೇಳಿ ಅರವಿಂದನ ಕೈಹಿಡಿದು ಕೃತಜ್ಞತೆಯ ಭಾವದಿಂದ ನೋಡುತ್ತಿದ್ದಳು.
*****









