ಗೋಪಿ

ಗೋಪಿ

ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು ಬಿಟ್ಟು ನೋಡುತ್ತದೆ. ಹತ್ತಿರದಲ್ಲಿಯೇ ಇದ್ದ ವೃಂದಾವನದ ತುಳಸಿಯನ್ನು ತಿನ್ನಲಿಕ್ಕೆ ನಾಲಿಗೆ ಚಾಚುತ್ತದೆ. ಆದರೆ ಅದು ಸರಿದಾಡಲಾರದು. ವೆಂಕಪ್ಪನು ಅದನ್ನು ಹಗ್ಗದಿಂದ ಕಟ್ಟಿ ಹಾಕಿದ್ದಾನೆ.

ಅದನ್ನು ಅವನು ಸ್ವೆಚ್ಚಾ ಸಂಚಾರಕ್ಕೆ ಹೊರಗೆ ಬಿಡುವುದೇ ಕಡಿಮೆ. ಯಾವ ಗವಳಿಯೂ ಅದನ್ನು ತನ್ನ ಆಕಳುಗಳ ಸಂಗಡ ಕರೆದುಕೊಂಡು ಹೋಗುವದಿಲ್ಲ. ಸ್ವತಃ ವೆಂಕಪ್ಪನಾದರೂ ಗವಳಿಗನಾಗಿ ಅದನ್ನು ಹುಲ್ಲು ಗದ್ದೆಗೆ ಒಯ್ಯುವದಿಲ್ಲ. ಕೆಲಸದಿಂದ ಬರುವ ಮುಂದೆ ತಾನೇ ಅಲ್ಲಿ ಇಲ್ಲಿ ತಿರುಗಾಡಿ ಹುಲ್ಲು ಹೊರೆಯನ್ನು ಹೊತ್ತು ಕೊಂಡು ಬರುತ್ತಾನೆ. ಅವನು ಬರುವ ದಾರಿಯನ್ನೆ ಆಕಳು ಕಾಯುತ್ತಿರುತ್ತದೆ. ಹುಲ್ಲೆಲ್ಲ ಅದರ ಪಾಲಾಗಬೇಕು. ಇಲ್ಲವಾದರೆ ಅವನನ್ನು ಹರಕೊಂಡು ತಿಂಬುವ ಹಾಗೆ ನೋಡುತ್ತದೆ. ಆದರೆ ಅದು ಸಮಾಧಾನಿ. ವೆಂಕಪ್ಪನು ಕೊಟ್ಟಷ್ಟರಲ್ಲಿ ತನ್ನ ಹಸಿವೆಯನ್ನು ತೀರಿಸಿಕೊಳ್ಳುತ್ತದೆ. ಅವನೂ ಸಹ ನಿಪುಣನಾಗಿ ತಂದ ಹುಲ್ಲಿನಲ್ಲಿ ಸಂಜೆಗೂ ಇಡುತ್ತಾನೆ.

ಓಣಿಯಲ್ಲಿಯ ಮನೆಯವರೆ ಪಲ್ಲೆಯ ಕಡ್ಡಿಗಳನ್ನು ಅಥವಾ ಮತ್ತೇನಾದರೂ ತಿನಸುಗಳನ್ನು ತಿಪ್ಪೆಯಲ್ಲಿ ಚೆಲ್ಲುವದನ್ನು ಬಿಟ್ಟು ಆಕಳದ ಮುಂದೆ ತಂದು ಒಗೆಯುತ್ತಾರೆ. ಆ ಓಣಿಯಲ್ಲಿರುವ ಮನೆಗಳಾದರೂ ಎಷ್ಟು? ಹನ್ನೆರಡು ಅಥವಾ ಹದಿಮೂರು. ಅಲ್ಲಿರುವವರೆಲ್ಲರೂ ಸಾಧಾರಣವಾಗಿ ಕೂಲಿ ಕುಂಬಳಿಯಾಗಲಿ ಅಥವಾ ಸಾವುಕಾರರ ಮನೆಗೆಲಸವಾಗಲಿ ಮಾಡಿ ಹೊಟ್ಟೆ ತುಂಬಿಕೊಳ್ಳುವವರು. ಸದ್ಯದ ಆರ್ಥಿಕ ಅವನತಿಯ ಕಾಲದಲ್ಲಿ ತಮ್ಮ ಹಸಿವೆಯನ್ನೇ ಅಡಗಿಸಲು ಅಶಕ್ಯರಾದವರು. ಆ ಬಡ ಪ್ರಾಣಿಗೆ ಏನನ್ನು ತಂದು ಹಾಕುವರು ? ಸನಾತನಿಗಳಾದ ತುಳಸಮ್ಮನವರು ಯಾವಾಗಲೊ ಆ ಸಂದಿಯಲ್ಲಿ ಹಾದು ಹೋಗುವಾಗ್ಗೆ ಆರ್‍ಎಬಡುತ್ತಿರುವ ಆ ಆಕಳನ್ನು ನೋಡಿದ್ದರಂತೆ. ಅಂದಿನಿಂದ ದಿನಾಲು ಹತ್ತಿಯ ಕಾಳನ್ನಾಗಲಿ ಅಥವಾ ಹಿಡಿ ಅಕ್ಕಿಯನ್ನಾಗಲಿ ಕೈಯಲ್ಲಿ ಹಿಡಿದುಕೊಂಡು ಬಂದು ಅದರ ಮುಂದೆ ಇಡುತ್ತಿದ್ದರು; ಆಕಳಿನ ಹಣೆಯ ಮೇಲೆ ಕುಂಕುಮವನ್ನು ಏರಿಸಿ, ಅದರ ಬಾಲದಚೌರಿಯಿಂದ ಮುಖದ ಮೇಲಿದ್ದ ಪಾದದ ಧೂಳಿಯನ್ನು ಹಾರಿಸಿ ಕೊಳ್ಳುತ್ತಿದ್ದರು. ಆದರೆ ಹೊಟ್ಟೆ ತುಂಬ ಕೂಳಿಲ್ಲದ್ದರಿಂದ ಆ ಮೂಕ ಪ್ರಾಣಿಯು ದಿನಾಲು ಕ್ಷೀಣವಾಗುತ್ತ ನಡೆದಿತ್ತು. ಅದರ ಮಾಂಸವೆಲ್ಲ ಕರಗಿ ಎಲುಬಿನ ಮೈಯಷ್ಟೆ ಪ್ರದರ್ಶನವಾಗಿತ್ತು. ಅದನ್ನು ಕಂಡು ತುಳಸಮ್ಮನವರು ಬಹಳೇ ಮರಗುತ್ತಿದ್ದರು. ಅವರೆ ರಾಯರ ಮನೆಯಲ್ಲಿ ಈ ಪ್ರಾಣಿಯ ಸುದ್ದಿಯನ್ನು ಹರಡಿದ್ದರು. ರಾಯರು ಸ್ವತಃ ವೆಂಕಪ್ಪನ ಮನೆಗೆ ಬಂದು ಆಕಳನ್ನು ಸುಮ್ಮನೆ ಕೊಲ್ಲುವದಕ್ಕಿಂತ ತಮ್ಮ ಮನೆಯಲ್ಲಿ ತಂದು ಬಿಡಲು ಪರಿಪರಿಯಾಗಿ ಬೇಡಿ ಕೊಂಡಿದ್ದರು. ಅವನ ಕೈಯನ್ನು ಚೆನ್ನಾಗಿ ಬೆಚ್ಚಗೆ ಮಾಡುವ ಯೋಜನೆಯನ್ನೂ ಕೈಕೊಂಡಿದ್ದರು. ಆದರೆ ವೆಂಕಪ್ಪನ ಮನಸ್ಸು, ಅದಕ್ಕೆ ಹಣಿಯಲಿಲ್ಲ. ಆಕಳನ್ನು ನಿರರ್ಥವಾಗಿ ಸಾಯಗೊಡಬಾರದೆಂಬ ತತ್ವಕ್ಕೆ ರಾಯರು ಹೇಗೆ ಹೆಣಗಾಡಿದರೊ ಹಾಗೆಯೇ ವೆಂಕಪ್ಪನೂ ಅದೇ ತತ್ವವನ್ನು ಮನಗಂಡು ಆಕಳನ್ನು ಬಿಟ್ಟು ಕೊಡಲು ಒಪ್ಪಲಿಲ್ಲ.

ಅದೆಷ್ಟು ದೃಢವಾದ ನಿಶ್ಚಯವು! ಆಕಳಿಂದೇನಾದರೂ ವೆಂಕಪ್ಪನಿಗೆ ಉಪಯೋಗವಿತ್ತೆ? ದಿನಾಲು ಒಂದು ತಂಬಿಗೆ ಹಾಲು ಕೊಟ್ಟು, ಅವನನ್ನು ಸಂರಕ್ಷಿಸುವದೇ? ಯಾವುದೂ ಇಲ್ಲ. ಆದರೂ ಈ ಆಕಳನ್ನು ಅವನು ದೇವತೆಯೆಂದು ನಂಬಿದ್ದಾನೆ. ಇಂಥ ದೇವತೆಯನ್ನು ಯಾರಿಗಾದರೂ ಸ್ವಾಧೀನಪಡಿಸಬೇಕಾದರೆ ಅದರ ದುರ್ದೈವವು ಮತ್ತೆಲ್ಲಿ ಕಣ್ತೆರೆಯುವದೆಂಬ ಭಯದಿಂದ ಅವನೆದೆಯಲ್ಲಿ ಭೂಕಂಪವಾಗುತ್ತದೆ. ನೆರೆಹೊರೆಯವರೆಲ್ಲರೂ ದಿನಾಲು ನೋಡುತ್ತಿದ್ದಾರೆ, ಪಾಪವನ್ನು ಕಟ್ಟಿಕೊಳ್ಳದೆ ಅದನ್ನು ಬಿಟ್ಟು ಬಿಡಲು ಎಲ್ಲರೂ ಉಪದೇಶಿಸುತ್ತಾರೆ; ಹಾಗೆ ಮಾಡದಿರುವ ಅವನನ್ನು ಕಂಡು ‘ಛೀ’ ಹಾಕುತ್ತಿದ್ದಾರೆ. ವೆಂಕಪ್ಪನು ಯಾವುದನ್ನೂ ಮನಸ್ಸಿಗೆ ಹಚ್ಚಿ ಕೊಂಡಿಲ್ಲ. ಯಾರ ಮಾತನ್ನೂ ಕೇಳಿಲ್ಲ. ಅದನ್ನು ಸಂರಕ್ಷಿಸುವುದು ತನ್ನ ಕರ್ತವ್ಯವೆಂದೇ ಹೇಳುತ್ತಾನೆ. ಅದು ತನ್ನ ಸರ್ವಸ್ವ, ತನ್ನ ಜೀವದ ಸೊತ್ತು ಎನ್ನುತ್ತಾರೆ.

ಬೆಳ್ಳಿಯ ಚಿಕ್ಕೆಯು ಜಗತ್ತಿಗೆ ಉಷೆಯ ಬರುವನ್ನು ಹೇಳಿ ಮೂಡಣದಲ್ಲಿ ನರ್ತಿಸುವ ಹೊತ್ತಿನಲ್ಲಿ ವೆಂಕಪ್ಪನು ತನ್ನ ಮೂರಂಕಣದ ಮನೆಯ ಚಿಕ್ಕ ಬಾಗಿಲವನ್ನು ಮೆಲ್ಲಗೆ ತೆಗೆದು ಹೊರಗೆ ಬರುತ್ತಾನೆ. ಮೊದಲು ಆಕಳ ದರ್ಶನವನ್ನು ತೆಗೆದುಕೊಳ್ಳುತ್ತಾನೆ. ಮಮತೆಯಿಂದ ಅದಕ್ಕೆ ‘ಗೋಪೀ…. ಗೋಪಿ’ ಎಂದು ಕರೆಯುತ್ತಾನೆ. ‘ನೆಟ್ಟಗಿದಿಯಾ?’ ಎಂದು ಕೇಳುತ್ತಾನೆ. ಅದು ಗೋಣು ಹಾಕುತ್ತದೆ. ಗೋಪಿಯ ಮೈಮೇಲೆಲ್ಲ ಕೈಯಾಡಿಸಿ ಅದಕ್ಕೆ ತನ್ನ ವಂದನೆಗಳನ್ನು ಅರ್ಪಿಸುತ್ತಾನೆ. ಆ ಮೇಲೆ ಅವನ ನಿತ್ಯ ಕರ್ಮಗಳಿಗೆ ಪ್ರಾರಂಭ. ಮತ್ತೆ ತನ್ನ ಕೆಲಸದಿಂದ ಮರಳಿದಾಗ್ಗೆ ಗೋಪಿಯ ದರ್ಶನವು ಮೊದಲಾಗಬೇಕು. ಹೊರಗೆ ಹೋಗುವ ಮುಂದೆ ಅದನ್ನು ಮಾತನಾಡಿಸಿ ಹೋಗಬೇಕು.

ವೆಂಕಪ್ಪನ ಈ ವೃತ್ತಿಯನ್ನು ಕಂಡು ಮನೆಯಲ್ಲಿಯ ಹೆಂಡತಿಯೂ ಸಹ ನೊಂದುಕೊಂಡಿದ್ದಾಳೆ. ಎಷ್ಟೋ ಸಲ ಸಿಟ್ಟಿಗೆದ್ದು ಗಂಡನ ಕೂಡ ವಾಗ್ವಾದದ ಯುದ್ದವನ್ನು ಹೂಡಿದ್ದಾಳೆ. ಆಕೆಯ ಸಂತತಿ ಎರಡು ವರ್ಷಕ್ಕೊಮ್ಮೆ ವರ್ಷ ವರ್ಷ ಹೆಣ್ಣು ಮಕ್ಕಳು ಗಂಡು ಮಕ್ಕಳು ಬೆಳೆಯುತ್ತಲಿದ್ದಾರೆ. ಆರು ಮಕ್ಕಳ ತಾಯಿಯಾಗಿದ್ದಾಳೆ. ಮಕ್ಕಳ ಬೇನೆ ಬೇಸರಿಕೆ, ಅವರ ಅರಿವೆ ಅಂಚಡಿ, ಇವುಗಳ ಮಾತುಕತೆಯಲ್ಲಿಯೇ ಅವಳ ವಿಚಾರ ಹರಿದಾಡುತ್ತಿದೆ. ‘ಚೊಚ್ಚಲ ಮಗಳಾದ ಚಂಪೆಗೆ ನೆರೆಯುವ ವಯಸ್ಸು ಸಮೀಪಿಸಿದೆ. ಅವಳ ಮದುವೆ. ಉಳಿದವರಿಗೆ ಶಾಸ್ತ್ರದಲ್ಲಿ ಹೇಳಿದ ಸಮಾರಂಭಗಳು. ಇದಕ್ಕೆಲ್ಲ ದುಡ್ಡು ಬೇಡವೆ?’ ಇಂಥ ವಿಚಾರಗಳಿಂದ ಅವಳ ಮನಸ್ಸಿನಲ್ಲಿ ತಾಕಲಾಟವೆದ್ದಿದೆ. ಗಂಡನು ಏನೂ ದುಡ್ಡು ಕೂಡಿಸುವ ಹಾಗಿಲ್ಲ. ತನ್ನ ಕೂಲಿಯಲ್ಲಿ ಉಳಿದ ಹಣವನ್ನು ಶಕ್ಯವಾದರೆ ಗೋಪಿಯ ಹೊಟ್ಟೆಗಾಗಿಯೆ ಉಪಯೋಗಿಸುತ್ತಾನೆ. ಮನೆಯಲ್ಲಿಯ ಅಡಚಣಿಯ ಬಗ್ಗೆ ಹೆಂಡತಿಯು ಪ್ರಶ್ನೆ ಎತ್ತಿದಾಗ್ಗೆ, ಹೆಂಡತಿಯ ಮೈ ಮೇಲಿಟ್ಟ ಹಲವು ವಸ್ತುಗಳನ್ನು ಮಾರಿ ಸಮಾರಂಭಗಳನ್ನು ನೆರವೇರಿಸೋಣ ಎನ್ನುತ್ತಾನೆ. ಈ ಮಾತುಗಳನ್ನು ಕೇಳಿಯಂತೂ ಹೆಂಡತಿಯ ಸಿಟ್ಟು ಉಕ್ಕುತ್ತದೆ. ಕೆಲಸವನ್ನು ಮಾಡುತ್ತ ದೊಡ್ಡ ಜಗಳವನ್ನೆ ಹೂಡುತ್ತಾಳೆ. ಏನಾದರೂ ಅವು ಆಕೆಯ ವಸ್ತುಗಳು! ಮನೆಯಲ್ಲಿಯ ಉಳಿದ ಹುಡುಗರು ಇವರಿಬ್ಬರನ್ನು ಶೂನ್ಯ ದೃಷ್ಟಿಯಿಂದ ಮಿಕಿಮಿಕಿ ನೋಡುತ್ತ ನಿಲ್ಲುತ್ತಾರೆ.

ಬೇಟೆಗಾರರ ಸಪ್ಪಳವನ್ನು ಕೇಳಿ ಚಿಗರೆಗಳು ನಿಲ್ಲುವ ಹಾಗೆ ಬಾಗಿಲ ಮುಂದೆ ವಾಸವಾಗಿದ್ದ ಗೋಪಿಯು ಮಾತ್ರ ಕಿವಿಗಳನ್ನು ನಿಮಿರಿಸಿ ನಿಲ್ಲುತ್ತದೆ ಧಡಪಡಿಸುತ್ತದೆ. ಮಾತನಾಡುವದನ್ನು ಬಿಟ್ಟು ವೆಂಕಪ್ಪನು ಹೊರಗೆ ಓಡಿ ಬರುತ್ತಾನೆ. ‘ಗೋಪೀ ಗೋಪಿ…’ ಎಂದು ಒದರುತ್ತಾನೆ. ಅವನ ಧ್ವನಿಯಲ್ಲಿ ಅವನ ಅಂತಃಕರಣವೇ ಮೂರ್ತಿವೆತ್ತಂತೆ ತೋರುತ್ತದೆ. ಅದರ ಮೊಗದ ಮೇಲೆ ತನ್ನ ಮೊಗವನ್ನು ಇಡುತ್ತಾನೆ. ತನ್ನ ಕಣ್ಣೀರುಗಳನ್ನು ಒರಸುತ್ತಾನೆ. ತನ್ನ ಹೃದಯದ ದುಃಖವನ್ನು ಗೋಪಿಯು ಕಳೆಯುವಳೆಂದು ಅವನು ಸಂಪೂರ್ಣವಾಗಿ ನಂಬಿದ್ದಾನೆ. ತನ್ನ ಉತ್ಸಾಹದ ಹೆಚ್ಚಳವೆಲ್ಲ ಗೋಪಿಯು ಕೊಟ್ಟಿದ್ದೆ ಎಂದು ವಿಶ್ವಾಸಪೂರ್ಣವಾಗಿ ಹೇಳುತ್ತಾನೆ. ವರ್ಷ ಕೊಮ್ಮೆಯಾದರೂ ತುಳಜಾಪೂರದ ಯಾತ್ರೆಯನ್ನು ಅವನು ಕಾಲ್ನಡಿಗೆಯಿಂದ ಮಾಡುವನು. ಯಾತ್ರೆಯ ಜೊತೆಗಾರನಾಗಿ ಗೋಪಿಯು ಅವನ ಸಂಗಡ ಇರಬೇಕು. ಯಾತ್ರೆಯಲ್ಲಿ ಕಂದಿ ಬಣ್ಣದ ನಿಶಾನೆಗೆ ಯಾವ ಸ್ಥಾನವೊ ಅದೆ ಸ್ಥಾನ ಗೋಪಿಗೆ. ದಾರಿಯಲ್ಲಿಯ ಶ್ರಮವನ್ನೆಲ್ಲ ಗೋಪಿಯ ಮುಖವನ್ನು ನೋಡಿ, ನಮಸ್ಕಾರ ಮಾಡಿ, ಅವನು ಪರಿಹಾರ ಮಾಡಿಕೊಳ್ಳುತ್ತಿದ್ದನು. ಈ ಯಾತ್ರೆಯಲ್ಲಿ ಮಾತ್ರ ಗೋಪಿಗೆ ಬೇಕಾದಷ್ಟು ಎಳೆ ಹುಲ್ಲು ಸಿಗುತ್ತಿದ್ದತಾದ್ದರಿಂದ ತುಸು ಒಳ್ಳೆ ಮೈ ಕಟ್ಟಿನಿಂದ ಅದು ವೆಂಕಪ್ಪನ ಮನೆಯನ್ನು ಕಾಣುತ್ತಿತ್ತು.

ಗೋಪಿಯು ವೆಂಕಪ್ಪನ ಮನೆಗೆ ಬಂದು ಮೂರು ವರ್ಷವಾಗಿ ಹೋಯಿತು. ಅದರ ಬಾಳು ಹಾಗೆಯೆ ಸಾಗಿದೆ. ಈ ವರುಷ ಏನೂ ಮಳೆಯಿಲ್ಲ. ಯಾವಾಗಾದರೊಮ್ಮೆ ಮೇಘರಾಜನು ತನ್ನ ದಂಡನ್ನು ತೆಗೆದುಕೊಂಡು ಬರಲು, ಮಾರುತನು ಬಿರನೆ ತನ್ನ ಚಟುವಟಿಕೆಗಳನ್ನು ಪ್ರಾರಂಭಿಸಿ ಆ ದಂಡನ್ನು ಚದುರಿಸಿಬಿಡುತ್ತಿದ್ದನು. ಸತತವೂ ಸ್ವಚ್ಛವಾದ ನೀಲಿಮೆಯ ಬಾನೇ ಕಾಣುತ್ತಿತ್ತು. ತನಗೆ ಯಾರೂ ನೀರೆರೆಯಲಿಲ್ಲೆಂದು ಭೂದೇವಿ ಗೋಳಿಡುತ್ತಿದಳು. ವೆಂಕಪ್ಪನು ತನ್ನ ಕೆಲಸವನ್ನು ಮುಗಿಯಿಸಿಕೊಂಡು ರಣ ರಣ ಬಿಸಿಲಿನಲ್ಲಿ ಊರ ಹೊರಗೆ ಎಷ್ಟು ತಿರುಗಾಡಿದರೂ ಹುಲ್ಲು ಸಿಗುತ್ತಿರಲಿಲ್ಲ ಬೇಸಿಗೆಯ ದಿನಗಳು ಬಂದವು. ವೆಂಕಪ್ಪನ ಕಳವಳವು ಇಮ್ಮಡಿಯಾಯಿತು. ಗೋಪಿಯ ಸಂಕಟವೊಂದು, ಮನೆಯಲ್ಲಿ ಸಂಸಾರದ ಕಿಟಕಿಟ ಇನ್ನೊಂದು. ಗೋಪಿಯು ಮತ್ತಿಷ್ಟು ಬಡಕಾಗತೊಡಗಿತು. ಮನೆಯಲ್ಲಿಯ ಗೋಳು ಹೆಚ್ಚಿತು. ಎಲ್ಲಿಯಾದರೂ ಭಿಕ್ಷೆ ಬೇಡಿ ಹುಲ್ಲು ಹೊರೆಯನ್ನು ಕೊಳ್ಳಬೇಕೆಂದರೂ ಹುಲ್ಲಿನ ಒಣಮುಖನಾದರೂ ಪೇಟೆಯಲ್ಲಿ ಕಾಣುತ್ತಿರಲಿಲ್ಲ. ವೆಂಕಪ್ಪನಿಗೆ ಭಯಂಕರ ನಿರಾಶೆ!

ಬೇಸಿಗೆಯ ಒಂದು ಮಧ್ಯಾಹ್ನ, ಎಲ್ಲಿಯೋ ದೂರ ದೂರ ತಿರುಗಾಡಿ. ಮೊಗವೆಲ್ಲ ಕಪ್ಪಿಟ್ಟುಕೊಂಡು ಒಂದು ಸಣ್ಣ ಹುಲ್ಲಿನ ಹೊರೆಯನ್ನು ಹಿಡಿದು ಕೊಂಡು ವೆಂಕಪ್ಪನು ಮನೆಯ ದಾರಿಯನ್ನು ಹಿಡಿದಿದ್ದ; ದಾರಿಯನ್ನು ನಡೆ ನಡೆದು ಸೋತುಬಿಟ್ಟಿದ್ದ; ಮೈಯಲ್ಲಿ ಬೆವರು ಹರಿಯುತ್ತಿತ್ತು. ಸಾಗುತ್ತಿದ್ದ ಹಾಗೆಯೆ ಗೋಪಿಯನ್ನು ಕಂಡ, ಅವನಿಗೆ ಮಹದಾಶ್ಚರ್ಯವಾಯಿತು. ಅವನೆಂದಿಗೂ ಅವನ್ನು ಹಾಗೆ ಹೊರಬಿಟ್ಟಿರಲಿಲ್ಲ. ಕಣ್ಣೆದುರು ನೋಡುತ್ತಾನೆ. ಅದರ ಸಂಗಡ ತನ್ನ ಮಗನಿದ್ದಾನೆ, ಅವನು ನಗುತ್ತಿದ್ದಾನೆ.

ಅಪ್ಪನನ್ನು ನೋಡುವುದೊಂದೆ ತಡ. ಮಗನು “ಅಪ್ಪಾ.. ಅಪ್ಪಾ.. ಅವ್ವಗ ಇಷ್ಟಿಷ್ಟು ದುಡ್ಡು ಬರತಾವ……. ತುಳಸಮ್ಮನೋರು ಕೊಡತಾರ…. ಅಕ್ಕನ ಲಗ್ನ ಆಗತದ……..” ಎಂದು ಏನೇನೋ ಕುಣಿಕುಣಿದು ಹೇಳಿದನು. ಮೂರು ನಾಲ್ಕು ದಿನಗಳಿಂದ ಸಾಧಾರಣವಾಗಿ ಸಹ ಕೂಳಿಲ್ಲದ ಗೋಪಿಯು ಹೇಗೊ ಅಷ್ಟು ದಾರಿಯನ್ನು ನಡೆದು ಬಂದಿದ್ದಿತು. ಇನ್ನು ಕೆಲವು ಹೆಜ್ಜೆಗಳನ್ನು ಸಾಗಿದ್ದರೆ ರಾಯರ ಮನೆಯು ಬಂದೇ ಬಿಡುತ್ತಿತ್ತು. ವೆಂಕಪ್ಪನ ಹೆಂಡತಿಯ ಆಶೆಗಳೆಲ್ಲವೂ ಕೊನೆಗಾಣುತ್ತಿದ್ದವು. ಆದರೆ ವೆಂಕಪ್ಪನು ಮಗನ ಮಾತನ್ನೇನೂ ಕೇಳಲಿಲ್ಲ. ಅವನಿಗೆ ಯಾವ ಪ್ರತ್ಯುತ್ತರವನ್ನೂ ಕೊಡಲಿಲ್ಲ. ಆ ಹುಡುಗ ಪೆಚ್ಚಾಗಿ ನಿಂತಿತು. ತನ್ನನ್ನೆ ಹುಚ್ಚಾಗಿ ನೋಡುತ್ತಿದ್ದ ಗೋಪಿಯನ್ನು ವೆಂಕಪ್ಪನು ಮೈ ದಡವಿ ತಿರುಗಿ ಮನೆಯ ದಾರಿಯನ್ನು ಹಿಡಿಯಿಸಿದನು. ಯಾವುದೂ ಮಾತನಾಡದೆ ಮಗನು ತಂದೆಯನ್ನು ಹಿಂಬಾಲಿಸಿದನು.

ಅಂದು ಇಡೀ ದಿನವೆಲ್ಲ ವೆಂಕಪ್ಪನಿಗೆ ವಿರಾಮವಿಲ್ಲ. ನಿಂತನಿಂತಲ್ಲಿ ಕುಳಿಕುಳಿತಲ್ಲಿ ಮನಸ್ಸು ಏನೋ ವಿಚಾರಿಸುತ್ತಿದೆ, ಉಸಿರ್ಗರೆಯುತ್ತಿದೆ. ಮೊದಲೆ ಮೈ ದಣುವಿನಲ್ಲಿ ಮನಸ್ಸಿನ ಸಂತಾಪವೂ ಬೇರೆ. ನಡುನಡುವೆ ಹುಚ್ಚು ಹಿಡಿದಂತೆಯೂ ಮಾಡುತ್ತಿದ್ದಾನೆ. ದುಡ್ಡು ಬರುವುದನ್ನು ತಪ್ಪಿಸಿದನೆಂದು ಹೆಂಡತಿಯು ವೆಂಕಪ್ಪನನ್ನು ದೂರುತ್ತಿದ್ದಾಳೆ. ರಾಯರ ಮನೆಗೆಲಸವನ್ನು ಬಿಟ್ಟು ಸ್ವಸ್ಥವಾಗಿ ಮನೆಯಲ್ಲಿ ಕುಳಿತುಬಿಡುವೆನೆಂದೂ ಆ ಮೇಲೆ ಸಂಸಾರದ ಚಕ್ರ ಹೇಗೆ ಸಾಗುವುದೋ ನೋಡುವೆನೆಂದೂ ಬೆದರಿಕೆಯನ್ನು ಹಾಕುತ್ತಿದ್ದಾಳೆ. ವೆಂಕಪ್ಪನು ಏನೂ ಮಾತನಾಡಲಿಲ್ಲ. ಅಂದು ಬೇಗನೆ ಹಾಸಿಗೆಯನ್ನು ಹಾಸಿ ಮಲಗಿಕೊಂಡುಬಿಟ್ಟ.

ಮಧ್ಯರಾತ್ರಿಯ ಕಾಲವು ಮಿಕ್ಕಿ ಹೋಗಿದೆ. ಮನೆಯ ಬಾಗಿಲವು ಮೆಲ್ಲನೆ ತೆರೆಯಿತು. ಒಂದು ನಿಮಿಷದಲ್ಲಿ ಬಾಗಿಲನ್ನು ಮತ್ತೆ ತನ್ನಸ್ಥಾನ ವನ್ನು ಆಕ್ರಮಿಸಿತು. ಆ ರಾತ್ರಿಯ ಮಂದವಾದ ಬೆಳಕಿನಲ್ಲಿ ವೆಂಕಪ್ಪನು ಗೋಪಿಯನ್ನು ತನ್ನ ಸಂಗಡ ಎಳೆದುಕೊಂಡು ಹೊರಟನು. ಓಣಿಯಲ್ಲೆಲ್ಲ ಜನರು ಸ್ತಬ್ಧರಾಗಿ ಮಲಗಿಕೊಂಡುಬಿಟ್ಟಿದ್ದಾರೆ. ಹೋದಹೋದಲ್ಲೆಲ್ಲ ಕತ್ತಲೆಯನ್ನು ತುಳಿಯುತ್ತ ಹೊರಟ ಗೋಪಿಯ ಕಾಲ ಸಪ್ಪಳವೆ ವೆಂಕಪ್ಪನಿಗೆ ಕೇಳಿ ಬರುತ್ತಿದೆ. ಅರ್ಧ ತಾಸಿನಲ್ಲಿ ಅವನು ವಿಶಾಲವಾದ ಬೈಲುಪ್ರದೇಶವನ್ನು ಕಂಡನು.

ದೂರದೂರದವರೆಗೆ ಭೂಮಿಯು ಹರಡಿದೆ; ಮೇಲೆ ಅಂತ್ಯವಿಲ್ಲದ ಮುಗಿಲ ಅಂಗಣದಲ್ಲಿ ದಿವ್ಯ ಜ್ಯೋತಿಗಳು ಕಾಣುತ್ತಿವೆ; ಯಾವುದೊ ಮಾಯೆ ಜನರನ್ನು ಚೇತರಿಸುವಂತೆ ಜಗದಿಂದ ಮುಗಿಲಿನವರೆಗೂ ಹಬ್ಬಿ ನಿಂತಿದ್ದಾಳೆ; ಹಗಲಿನಲ್ಲಿ ಬೆಂದ ಮನವನ್ನು ನಿಶೆಯ ಹೆಗಲ ಮೇಲಿರಿಸಿ ಬೇಕಾದ ಹಾಗೆ ಮನವನ್ನು ತಣಿಸಬಹುದಾಗಿದೆ. ಆದರೆ ಅದಾವುದೂ ವೆಂಕಪ್ಪನ ಹೃದಯವನ್ನು ತಟ್ಟಲಿಲ್ಲ; ಅವನಾತ್ಮವನ್ನು ಅರಳಿಸಲಿಲ್ಲ. ಅವನು ಕಣ್ಣಿದ್ದು ಕುರುಡನಾಗಿದ್ದ; ಕಿವಿಯಿದ್ದು ಕಿವುಡನಾಗಿದ್ದ, ಬಾಯಿಯಿದ್ದು ಮೂಕನಾಗಿದ್ದ . ರಾಜಮಾರ್ಗವನ್ನು ಬಿಟ್ಟು ಸೀಳ್ದಾರಿಯನ್ನು ಹಿಡಿದು ಒಂದು ಸಣ್ಣ ಕೆರೆಯ ದಂಡೆಗೆ ಬಂದುನಿಂತ.

ಎಲ್ಲೆಲ್ಲಿಯೂ ಮಂದ ಬೆಳಕು ತುಳುಕುತ್ತಿತ್ತು. ಅದರಿಂದಲೆ ಜಗತ್ತನ್ನು ನೋಡಬಹುದಾಗಿತ್ತು. ಕೆರೆಯಲ್ಲಿ ಏನೂ ನೀರಿರಲಿಲ್ಲ. ಅದರ ಬಾಯಿ ಒಣಗಿ ಬಿರುಕುಬಿಟ್ಟಿತು, ಎಲೆಗಳುದುರಿ ಹೋಗಿ ಸುದಾಮನಂತೆ ಬಡಕಾಗಿ ಒಂದು ಗಿಡ ಬೆಳೆದು ನಿಂತಿತ್ತು. ವೆಂಕಪ್ಪನು ಗೋಪಿಯನ್ನು ಆ ಗಿಡದ ಕೆಳಗೆ ನಿಲ್ಲಿಸಿದ. ನಿಲ್ಲುವಷ್ಟರಲ್ಲಿಯೇ ಉಸಿರ್ಗರೆದು ಗೋಪಿಯು ನೆಲಕ್ಕೆ ಬಿದ್ದಿತು. ಅದನ್ನು ನೋಡಿ ವೆಂಕಪ್ಪನು ಮತ್ತಿಷ್ಟು ಕಕ್ಕಸಬಟ್ಟನು.

ಅವನಿಗೆ ಸಹಿಸಲಾರದ ವೇದನೆಯಾಯಿತು. ಇದೇ ಕೆರೆಯ ಹತ್ತಿರ ಅವನು ಗೋಪಿಯನ್ನು ಮೊದಲಿಗೆ ಕಂಡಿದ್ದನು ಆಗ. ಆಗ ‘ಅಂಬಾಽ ಅಂಬಾಽ ಅಂಬಾಽ’ ಎಂದು ಒದರುತ್ತ ಬೆದರಿಕೆಯ ಕಣ್ಣುಗಳಿಂದ ಅತ್ತ ಇತ್ತ ಓಡುತಿತ್ತು. ಕಟುಕರ ಕೈಯಿಂದ ಪಾರಾಗಿ ಏಕಾಕಿಯಾಗಿ ಸುಳಿದಾಡುತ್ತಿತ್ತು. ‘ಅಯ್ಯೋ ! ಪಾಪ ! ದೇವಿಯ ಮೊರೆಯಿಡುತ್ತಿದೆ’ ಎಂದು ಅಂಬಿಕಾ ದೇವಿಯ ಭಕ್ತನಾದ ವೆಂಕಪ್ಪನು ಕರುಣೆಯಿಂದ ತನ್ನ ಹತ್ತಿರ ಕರೆದು ಅದಕ್ಕೆ ಹುಲ್ಲು ತಂದು ಹಾಕಿದನು. ಆಗ ಭೂಮಿಯು ಎಷ್ಟು ಹಸುರಿಸಿತ್ತು! ಕೆರೆಯ ಮೇಲಿದ್ದ ಅದೇ ಮರವು ಚಿಗುರೊಡೆದು ಕುಲುಕುಲು ನಗುವಂತೆ ಕಾಣುತ್ತಿತ್ತು. ಕೆರೆಯ ತುಂಬಾ ನೀರಿದ್ದುವು. ಗೋಪಿಯು ಎಳೆಹುಲ್ಲು ತಿಂದಿತು, ನೀರು ಕುಡಿಯಿತು. ತನ್ನ ಕೊರಳನ್ನು ವೆಂಕಪ್ಪನ ಸಾಧೀನ ಪಡಿಸಿತು. ಯಾರೂ ಅದರ ಕೊರಳನ್ನು ಕೊಯ್ಯದಂತೆ ನೋಡಿಕೊಳ್ಳುವೆನೆಂದು ಅವನು ದೇವಿಯ ಸಾಕ್ಷಿಯಾಗಿ ಆಣೆ ಮಾಡಿದನು. ಅದನ್ನು ಅಕ್ಷರಶಃ ಪಾಲಿಸುವುದೆ ತನ್ನ ಕರ್ತವ್ಯವೆಂದು ತಿಳಿದನು. ಅದೆಂಥ ರಮ್ಯವಾದ ದಿನವದು! ಹುಣ್ಣಿವೆಯ ಬೆಳುದಿಂಗಳು ಇವನೆದೆಯಲ್ಲಿ ತುಳುಕಾಡಿ ‘ನೀನೊಂದು ಧರ್ಮದ ಕಾರ್ಯವನ್ನು ಮಾಡುತ್ತಿರುವಿ’ ಎಂದು ಹೇಳಿದಂತಾಗಿತ್ತು. ದಯವೇ ಧರ್ಮದ ಮೂಲವಲ್ಲವೆ!

ಕಷ್ಟವಿರಲಿ, ಸುಖವಿರಲಿ, ದೇವಿಯಿಂದ ಬಂದ ಗೋಪಿಯನ್ನು ಸಾಯುವವರೆಗೆ ಯಾರ ಕೈಯಲ್ಲಿಯೂ ಕೊಡದೆ ಸಲಹುವೆನೆಂದು ಪಣತೊಟ್ಟ ವೆಂಕಪ್ಪನ ಆಶೆಯು ಇಂದು ಮಣ್ಣು ಗೂಡಿದೆ. ಅಪಾರವಾದ ತಪ್ಪನ್ನು ಮಾಡಿದೆನೆಂಬ ಎಚ್ಚರಿಕೆಯು ಅವನ ಹೃದಯವನ್ನು ಚುಚ್ಚುತ್ತಿದೆ. ‘ಹೋಗಿ ಬಾಽ!’ ಎಂದು ಹೇಳಲು ಅವನಿಗಾಗಲಿಲ್ಲ. ದುಃಖವು ಕುತ್ತಿಗೆಯನ್ನು ತುಂಬಿ ಉಬ್ಬಿ ಬಂದಿತು. ಕುಂಕುಮದ ಚೀಟಿಯನ್ನು ಬಿಚ್ಚಿ ಗೋಪಿಗೆ ಕುಂಕುಮವನ್ನು ಏರಿಸಿದನು. ಮನೆಯಿಂದ ತಂದ ತುಳಸೀ ದಳಗಳನ್ನು ಅದರ ಮುಂದೆ ಇಟ್ಟನು. ಮೈ ತುಂಬ ಕೈಯಾಡಿಸಿ ತನ್ನ ಹಣೆಯನ್ನು ಅದರ ಹಣೆಗೆ ಹಚ್ಚಿದನು. ಎದ್ದು ನಿಂತು ಎಲ್ಲ ದಿಕ್ಕುಗಳಿಗೂ ಕೈಮುಗಿದು ತನ್ನ ಅಪರಾಧವನ್ನು ಕ್ಷಮಿಸಲು ಬೇಡಿಕೊಂಡನು. ಗೋಪಿಯು ವಿಚಿತ್ರವಾದ ದೃಷ್ಟಿಯಿಂದ ವೆಂಕಪ್ಪನನ್ನು ನೋಡಿಯೆ ನೋಡುತ್ತಿತ್ತು.

ವೆಂಕಪ್ಪನು ಕೆರೆಯನ್ನು ಬಿಡುವಾಗ್ಗೆ ಗೋಪಿಯು ಮಲಗಿಕೊಂಡಲ್ಲಿಯೇ ‘ಅಂಬಾಽ!’ ಎಂದು ಒದರಿತು. ‘ಇನ್ನು ದೇವಿಯ ಚಿತ್ತ’ ಎನ್ನುತ್ತ ವೆಂಕಪ್ಪನು ಹಾಗೆಯೆ ಮುಂದೆ ಮುಂದೆ ನಡೆದುಬಿಟ್ಟನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಹಿಮೆ
Next post ನಿನ್ನ ಕೆನ್ನೆ ಕುಳಿ

ಸಣ್ಣ ಕತೆ

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

cheap jordans|wholesale air max|wholesale jordans|wholesale jewelry|wholesale jerseys