ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನುವಷ್ಟು ಅಸಹಾಯಕತೆಗೆ ನಿಟ್ಟುಸಿರುಬಿಡುತ್ತಾ, ಆಗಾಗ ರಸ್ತೆ ಕಡೆ ಕಣ್ಣು ಹೊರಳಿಸುತ್ತಿದ್ದಳು. ದೃಷ್ಟಿ ತಟ್ಟನೆ ರಸ್ತೆ ಮೇಲೆ ಹೋಗುತ್ತಿದ್ದ ಬಾಯಮ್ಮನ ಕಡೆ ನೆಟ್ಟಿತು. ರಸ್ತೆ ತುಂಬಾ ಇಕ್ಕಟ್ಟಿನದೇ. ಸರಿಯಾಗಿ ಹೋದರೆ ಒಂದು ಬಾರಿ ಒಂದೇ ವಾಹನ ಬರಬಹುದು ಇಲ್ಲವೆ ಹೋಗಬಹುದು. ಆದರೂ ಅದು ಒನ್ ವೇ ಅಲ್ಲ. ಹೋಗುವ ಬರುವ ವಾಹನಗಳು ಬದಿಗೆ ಸರಿದು ನಿಂತೇ ಇನ್ನೊಂದಕ್ಕೆ ದಾರಿ ಮಾಡಿ ಕೊಡುವುದು. ರಸ್ತೆಯಂತೂ ಅರೆಬರೆ ಟಾರು ಹೊದ್ದುಕೊಂಡಿರುವ ಅಂಕುಡೊಂಕಿನ ದಾರಿ. ಆ ರಸ್ತೆಯಲ್ಲೆ ಹೆಬ್ಬಾವಿನ ಡೊಂಕು ಮೈ ಸವರಿ ಬರುತ್ತಿರುವಂತೆ ನುಲಿಯುತ್ತಾ ಬರುತ್ತಿದ್ದಳು ಬಾಯಮ್ಮ. ಬಾಯಲ್ಲಿ ಕೆಂಪು ಪಾನ್‌ಬೀಡಾ, ಕೈಯಲ್ಲೊಂದು ಛತ್ರಿ ಹಿಡಿದು ಅದನ್ನು ಬೀಸಿಕೊಂಡೇ ನಡೆಯುತ್ತಿದ್ದ ಬಾಯಮ್ಮ ಇವಳೆಡೆಗೆ ನೋಡಿಯೂ ನೋಡದಂತೆ ನಡೆಯುತ್ತಿದ್ದಳು. ಸುಮಯ್ಯಾ ಅಂದುಕೊಂಡಳು ಥೂ!. ಆ ಬ್ಯಾರಿ ಬಂದರೆ ಮಾತ್ರ ಇವಳಿಗೆ ಈ ಕಡೆ ಕಣ್ಣು ಹೊರಳುವುದಾ, ಈಗ ನೋಡಿದರೆ ತಿರುಗಿಯೂ ನೋಡದೆ ಹೋಗುವುದು. ಇವರಿಗೆಲ್ಲ ಗಂಡಸರ ದನಿ ಕೇಳಿದರೆ ಮಾತ್ರ ಕಿವಿ ಕೇಳುದಾ? ಇಲ್ಲದಿದ್ರೆ ಸುಮಾರು ಕಿವಿ ಇವಳದು ದಪ್ಪವೇ!!.
ಗುಂಯ್.. ಗುಂಯ್.. ಗುಂಯ್… ಎರಡೂ ಕೈ ಸೇರಿಸಿ ಟಫ್! ಟಫ್! ಎಲ್ಲಿಂದ ನುಸುಳಿ ಓಡಿತೋ! ಸಿಗದೆ ಹೋದ ಹತಾಶೆ, ಕೈಗಳೆರಡರ ಘರ್ಷಣೆಗೆ ಮೆದು ಹಸ್ತಕ್ಕೆ ಆದ ನೋವು. ಅಳದಿದ್ದರೂ ಕಣ್ಣಹನಿ ಕೆನ್ನೆಗಿಳಿದು, ಆಗಷ್ಟೆ ಚಿವುಟಿದ ಮೊಡವೆ ಮೇಲೆ ಹರಿದು ಗಾಯ ಚುರ್ರೆಂದಿತು. ಹಾಳಾದ ನೊಣ ಎಲ್ಲಿಂದ ಬರುತ್ತೋ? ಸರಿ ಇಷ್ಟೇ ಹೊತ್ತಿಗೆ. ದಿನವೂ ಬಾಯಮ್ಮನ ಸವಾರಿ ಪೇಟೆ ಕಡೆಯಿಂದ ಬಂದ ಹಾಗೆ.
ತಡೆಯಲಾಗಲೆ ಇಲ್ಲ ಕೂತು ಕೂತು ಬೇಸರ ನೀಗಲು ಏನಾದರೂ ಮಾತು ಬೇಕು.
ಹೋಯ್ ಎಂಥದಾ ಬಾಯಮ್ಮ. ನೋಡದೇ ಹೋಗುದು. ಡಿಸೋಜರು ವಿಟ್ಲದಿಂದ ಬಂದದ್ದಾ? ಅದಕ್ಕೆ ಬೇಗ ಬೇಗ ಹೋಗುದಾ? ಬಾಯಮ್ಮ ತಟ್ಟನೆ ತಿರುಗಿ ನಿಂತಳು ಬಂದೇ ಇರಾ!! ಸ್ವಲ್ಪ ಅರ್ಜೆಂಟ್ ಕೆಲಸವುಂಟು ಮಾರಾಯ್ತಿ,, ಸೋಸಾಯಿಟಿಗೆ ಹೋಗುದುಂಟು, ರೇಷನ್ ಕಾರ್ಡಿಗೆ ಆಧಾರ ಕಾರ್ಡು ಲಿಂಕ್ ಮಾಡಬೇಕಂತೆ, ಈ ಡಿಸೋಜಾರೋ ಎಣ್ಣೆಗಾಡಿ ಇನ್ನೂ ಬಂದೇ ಇಲ್ಲ. ಬಂದರೂ ನೆಟ್ಟಗೆ ನಡಿಲಿಕ್ಕುಂಟಾ ಈ ಹೊತ್ತಲ್ಲೀ.. ಹಾಳಾದ ಕಂಪ್ಯೂಟರ್‍ಗಳು ಬಂದದ್ದೆಲ್ಲ ನೂರೆಂಟು ತಾಪತ್ರಯ ಮಾರಾಯ್ರೇ, ಮತ್ತೆ ಬರುದಾ ಎನ್ನುತ್ತಾ ಬಿರಬಿರ ಹೊರಟೆ ಹೋದಳು. ಸುಮಯ್ಯಾ ತಲೆ ಮೇಲಿನ ದುಪಟ್ಟಾ ಸರಿ ಮಾಡಿಕೊಂಡಳು.
ಅಷ್ಟೊತ್ತಿಗೆ ಮಗ ಇಕ್ಬಾಲ್ ಓಡಿ ಬಂದ. ಅವನ ಹಿಂದೆ ಆಶ್ರಮದ ಹುಡುಗರು ಒಂದಿಬ್ಬರು ಬಂದರು.
ಉಮ್ಮಾ, ಕಲೆಂಜಿಮಲೆಗೆ ಹತ್ತಿ ಬರೋದಾ, ಇಲ್ಲೇ ಸ್ವಲ್ಪ ಮೇಲೆ..
ಮನೆಯ ಹಿಂಭಾಗದಲ್ಲೇ ಇರುವ ಆ ಬೆಟ್ಟ ಒಂದಾನೊಂದು ಕಾಲಕ್ಕೆ ಅಭಯಾರಣ್ಯವಾಗಿತ್ತಂತೆ. ಈಗ ಅಲ್ಲೊಂದು ಇಲ್ಲೊಂದು ಮರ ಬಿಟ್ಟರೆ ಬರಿ ಬೋಳು. ಮಗ ಆಶ್ರಮದ ಹುಡುಗರ ಜೊತೆಯಲ್ಲೆ ಇರುತ್ತಾನೆ. ಎಷ್ಟು ಹೇಳಿದರೂ ಕೇಳುವುದಿಲ್ಲ. ಕೆಲವು ಬಾರಿಯಂತೂ ಅಲ್ಲೆ ಭಜನೆ ಮಾಡಿ ಊಟ ಮಾಡಿದರೂ ಮಾಡಿದನೇ!! ಆಗಾಗ ತರಕಾರಿ ಅಂಗಡಿಯ ಮೆಹಬೂಬ್ ಸಾಬ್ ಮುಖ ಕೆಂಪಗೆ ಮಾಡಿ ಬೈಯ್ಯೋದಿದೆ. ಆದರೆ ಈ ಹುಡುಗನ ಹಿಡಿದುಕೊಂಡೇ ಕೂತರೆ ತನಗಾಗದು. ಇವರೆಲ್ಲ ಹೇಳಲು ಇರುವರೆ ಹೊರತೂ ಯಾರೂ ಬೇರೇನಕ್ಕೂ ಒದಗಿ ಬರಲಾಗದವರು. ಆಶ್ರಮದವರು ಪಾಪ ಅಂತಲೋ ಮಕ್ಕಳ ಜೊತೆ ಇರುವ ಮಗು ಅಂತಲೋ ಒಂದಿಷ್ಟು ಬಡಿಸಿದರೂ ಯಾವತ್ತು ಅದನ್ನು ಹೇಳಿಕೊಂಡಿಲ್ಲ. ತನ್ನ ಮಗನೂ ಆಗಾಗ ಆಶ್ರಮದ ಕೆಲಸಗಳಿಗೆ ಆವರಣ ಸ್ವಚ್ಛಗೊಳಿಸಲೂ ಹೋಗುತ್ತಿರುತ್ತಾನೆ. ಪಕ್ಕದ್ಮನೆಯ ಜೇಸನ್ ಬಂದು ಕರೆದರೂ ಹೋಗದ ಇಕ್ಬಾಲ್ ಆಶ್ರಮದ ವಿಘ್ನರಾಜ ಬಂದರೆ ಮಾತ್ರ ತಟ್ಟನೆ ಎದ್ದು ಹೋಗಿಬಿಡುತ್ತಾನೆ. ಅವರಿಬ್ಬರಲ್ಲೂ ಅದೆಂತದ್ದೋ ಸ್ನೇಹ. ಮೆಹಬೂಬಣ್ಣನ ಮಾತು ಕೇಳಿ ನಾನು ಈ ಹುಡುಗನ ಹಿಡಿಯಲುಂಟೇ!! ಎಂದುಕೊಂಡಳು. ನಾಳೆ ಕಟ್ಟಿದ ಬೀಡಿಯನ್ನೆಲ್ಲಾ ಡೇವಿಡ್ ಡಿಸೋಜ್‌ರ ಬೀಡಿಯಂಗಡಿಗೆ ಕೊಟ್ಟು ಬರಬೇಕು.
ನೊಣ ಮತ್ತೆ ಬಂದಿತ್ತು ಹಾರಿ ಕಿಟಕಿಯಿಂದ. ಕೈ ಬೀಡಿ ಹೊಸೆಯುತ್ತಿದ್ದರೆ, ಕಣ್ಣು ನೊಣದ ಬೇಟೆಯಾಡುತ್ತಿತ್ತು. ಆ ಸಣ್ಣ ಕೋಣೆಯಲ್ಲಿ ಎಲ್ಲಿ ಹೋದರೂ ಅದರ ಸದ್ದು, ಗುಂಯ್ಗುಡುವಿಕೆ. ಬೊಂತೆ ಮಾಡಿ ಕಟ್ಟಿಟ್ಟ ಹಳೆ ಬಟ್ಟೆಗಳ ಮೇಲೆ ಕೂತು, ಹಿಂಭಾಗ ಮೇಲೆತ್ತಿ ಕಾಲು ಕೈ ಉಜ್ಜಿಕೊಂಡಿತು. ಇಸ್ಸ್ಯಿ.. ಹೇತಿತು ಅಂದುಕೊಂಡಳು. ಶಾಲೆಗೆ ಹೋಗುವಾಗ ಮಾಸ್ಟ್ರು ಹೇಳಿದ್ದು ನೆನಪಿಗೆ ಬಂತು. ಅವು ಮೊಟ್ಟೆಯನ್ನೂ ಇಡೋದು ಹಾಗೇ. ಒಂದೇ ಸಲಕ್ಕೆ ಹತ್ತಾರು. ಎದ್ದು ಬಟ್ಟೆ ಗಂಟು ಝಾಡಿಸಿ ಬರಬೇಕೆಂದುಕೊಂಡಳು. ಎದ್ದೇಳುವಷ್ಟರಲ್ಲಿ ಪಕ್ಕಕ್ಕೆ ಕುಡಿದಿಟ್ಟ ಕಾಫಿ ಕಪ್ಪಿನಲ್ಲಿ ಬುಡದ ಕರಟದ ಮೇಲೆ ಕೂತು ಮೆಲ್ಲುತ್ತಿತ್ತು. ಛೀ. ಛೀ.. ಎಲ್ಲೆಲ್ಲೊ ಹೋಗಿ ಕೂತು ಬರುವುದು. ಮತ್ತೆ ಕಾಫಿ ಕಪ್ಪೋ, ಊಟದ ತಟ್ಟೆಯೋ ಅದರ ಮೇಲೆ ಕೂತುಬಿಡುವುದು.
ಹಚಾ! ಹಚಾ! ಕೈಯಾಡಿಸಿದಳು.. ಹಾರಿತಷ್ಟೇ ನೊಣ..ತಟ್ಟನೆ ಗುಂಯ್‌ಗುಡುವಿಕೆ ಮೇಲೆದ್ದು ಇವಳ ಕಿವಿಯೊಳಗೆ ಕೊರೆಯತೊಡಗಿತು.
ಎಲ್ಲಿ ಹೋಗಿ ಕೂತು ಬಂದಿರಬಹುದು. ಉದ್ದ ಹೊರಗೆ ಕಣ್ಣು ಕೀಲಿಸಿ ನೋಡಿದಳು. ಒಡೆದ ಪೈಪಿನ ಗಟಾರದ ನೀರು ಬಿಸಿಲಿಗೆ ಅರೆಬರೆ ಒಣಗಿತ್ತು ಅದರ ಮೇಲೆ. ಇಸ್ಸೀ.. ಛೀ..ಛೀ..
ಹೊರಗೆ ಹಾರಿದೆಯೋ ಹೇಸಿಗೆಯ ತಿನ್ನು, ಒಳಗೆ ಬಂದರೆ ಮಿಂದು ಅವಲಕ್ಕಿ ಉಣ್ಣು
ಬಾಗಿಲು ಹಾಕಿದರೆ ಸೆಖೆಗೆ ಕುದಿಯಬೇಕು. ಸಾಧ್ಯವೇ ಇಲ್ಲ. ಈ ನೊಣ ಬರದಂತೆ ಮನೆಗೆ ಅದೇನೋ ರೂಮ್ ಫ್ರೆಶನರ್ ತಂದು ಹಾಕಬಹುದಂತೆ. ಈ ಬ್ಯಾರಿಗೆ ಎಷ್ಟು ದಿನ ಹೇಳಿದಳೊ? ’ತನಗೋ ತನ್ನ ಬಾಲಕ್ಕೋ’ ಅನ್ನುವ ಹಾಗೇ ’ವಾರದ ಸಾಮಾನು ಒಮ್ಮೆ ತಂದರೆ ಮುಗಿತು ತನ್ನ ಕೆಲಸ’ ಅಂದುಕೊಳ್ಳುತ್ತಾನೆ. ಮತ್ತೇನಾದರೂ ಹೆಚ್ಚಿಗೆ ಹೇಳಿದರೆ ಉರಿದು ಬೀಳುತ್ತಾನೆ. ಅದೇ ಆ ಬಾಯಮ್ಮಗೆ ಪಾನಬೀಡಾ ಪುಕ್ಕಟೆ ಕೊಡಲು ಕಷ್ಟವಿಲ್ಲ ಅವನಿಗೆ.. ನೊಣ ಬರುವುದು ಅವನಿಗೂ ಇಷ್ಟವೇ ಇರಬೇಕು. ವಾಸನೆಯ ಗ್ರಹಿಸುವ ತನ್ನ ಬುದ್ದಿಗೆ ಹಳಿದುಕೊಂಡಳು.
ಕಾರು ರಸ್ತೆಯಲ್ಲಿ ಗಕ್ಕನೇ ಬಂದು ನಿಂತಿತು. ಮೋಜೆಸ್ ಒಮ್ಮೆ ಕಣ್ಣು ಕಿರಿದುಗೊಳಿಸಿ ಮನೆಯತ್ತ ನೋಡಿದಂತೆ ಮಾಡಿದ. ಹಾಗೆನ್ನಿಸಿತು ಆಕೆಗೆ. ಅವನಿಗೀಗ ನೋಡುವುದ ಬಿಟ್ಟೇಬಿಟ್ಟಿದ್ದಾನೆ. ಕಣ್ಣೀರು ಉಕ್ಕಿ ಮುಖದ ಮೇಲೆ ಮೂಡಿದ ಬೆವರ ಹನಿಗಳ ಕೂಡಾ ಕೆನ್ನೆಯ ಮೇಲೆ ಜೊತೆಯಾದವು. ತಲೆಯನ್ನು ಮುಚ್ಚಿದ ಸ್ಟಾಲ್ ಎಳೆದು ತೆಗೆದು ಹಾಕಿದಳು. ಅಬ್ಬಾ! ಎದೆಯ ಮೇಲಿನ ಸೆರಗೂ ಭಾರವೆನಿಸುತ್ತಿತ್ತು. ಸೆರಗು ತೆಗೆದು ಸೊಂಟಕ್ಕೆ ಸಿಕ್ಕಿಸಿದಳು. ಮೋಜೆಸ್ ಈಗ ನೋಡುತ್ತಿರುವಂತೆ ಅನ್ನಿಸಿತವಳಿಗೆ. ಮರುಕ್ಷಣ ಕಾರಿನಲ್ಲಿದ್ದವರ ದೃಷ್ಟಿಯೆಲ್ಲ ತನ್ನ ಕಡೆ ಇರುವಂತಾಗಿ ತಟ್ಟನೇ ಸೆರಗು ಹೊದ್ದಳು. ಆದರೂ ಕಣ್ಣು ಕಾರಿನ ಮುಂಭಾಗದಲ್ಲಿ ಕೂತವರ ಹುಡುಕಿತು. ಮೊಜೆಸ್‌ನ ಪಕ್ಕಕ್ಕೆ ಕೂತಿರುವುದು ಹೆಂಗಸು. ಹೊಟ್ಟೆಯಲ್ಲಿ ಅದೆಂಥದ್ದೋ ತಳಮಳ.. ಅಲ್ಲ, ಹತಾಶೆ. ಪಟ್ಲದಿಂದ ಕಡೆಯೂರಿಗೂ, ಕಡೆಯೂರಿಂದ ಪಟ್ಲಕ್ಕೂ ದಿನವೂ ಕಾರು ಹೊಡೆಯುವುದನ್ನೆ ಕಸುಬಾಗಿಸಿಕೊಂಡವ ಮೊಜೆಸ್. ಅದೆಷ್ಟೋ ಹೆಂಗಸರು ಪಕ್ಕ ಬಂದು ಕೂತು ಕೊಳ್ಳುವ ಸಂದರ್ಭ ಸಹಜ. ಆದರೆ ಅವನಿಗೆ ಅದರಲ್ಲಿ ವ್ಯತ್ಯಾಸ ಇಲ್ಲವೆನ್ನುತ್ತಿದ್ದ. ಮೊಜೆಸ್‌ನಿಗೆ ಆ ದಿನ ಮನೆಯ ಸಾಮಾನು ತರಲಿಕ್ಕಿದ್ದು, ಪ್ರಯಾಣಿಕರಾರೂ ಇರಲಿಲ್ಲ. ಬ್ಯಾಂಕಿನಿಂದ ನಡೆದು ಬರುತ್ತಿದ್ದ ಸುಮಯ್ಯಾ ಕಣ್ಣಿಗೆ ಬಿದ್ದಿದ್ದಳು. ಹಿಂದಿನ ಸೀಟಿನ ತುಂಬಾ ಸಾಮಾನು. ಮುಂದಿನ ಸೀಟಿನಲ್ಲಿ ಇವರಿಬ್ಬರೇ!! ಸುಮಯ್ಯಾ ನೋಡು. ನೀ ಪಕ್ಕ ಕೂತರೇ ನಂಗೆ ಇಲ್ಲದ ಕಿರಿಕಿರಿ ಮಾರಾಯ್ತಿ. ಬೇರೆಯವರು ಕೂತರೆ ನಂಗೇ ಏನೂ ಆಗುದಿಲ್ಲವಾ? ನೀ ಕೂತರೇ ಏನೆಲ್ಲಾ ತಾಪತ್ರಯ ಮಾರಾಯ್ತಿ..
ತಾನೂ ಕಿಚಾಯಿಸಿದ್ದಳು. ನೀನೆಂಥದ್ದಾ ಪಿರ್‍ಕಿ ಹಾಗೇ ಮಾಡೋದು? ನಿಂಗೇ ಹುಡುಗಿಯರಾದರೆ ಸಾಕು. ನಿನ್ನ ಕಾರು ಬರಿ ಕಾರಲ್ಲ ಮಾರಾಯಾ, ವಿಮಾನ ಅಂದುಕೊಳ್ಳುದು ನೀನು.. ನಾ ಎಂಥದ್ದೂ ಅಲ್ಲ ನಿಂಗೆ? ಅದಕ್ಕೆ ನಾ ಕಿರಿಕಿರಿ ಆಗೋದು.
ಅಯ್ಯೋ ಅದಲ್ಲಾ ಮಾರಾಯ್ತಿ, ನಾ ಹಾಗೇ ಹೇಳಿದ್ದಲ್ಲ! ಕಿರಿಕಿರಿ ಅಂದ್ರೆ ನಿಂಗೇ ಹೇಳುದ್ಹ್ಯಾಂಗಾ?. ತಲೆಕೆರೆದುಕೊಂಡ ಎಡಗೈಯಲ್ಲಿ. ತಟ್ಟನೇ ಆಕೆಯ ಕೆನ್ನೆ ಚಿವುಟಿದ. ಗಲ್ಲ ಕೆಂಪಾಗಿತ್ತು. ಮೊದಲೆಲ್ಲಾ ಮೋಜೆಸ್ನ ಕಾರು ಹತ್ತಿದಾಗ ತನಗೆ ರಥದಲ್ಲಿ ಕುಳಿತಂತೆ ಆಗುತ್ತಿತ್ತು. ತಾನು ಆತನ ಕಾರಿಗೆ ಕಾಯುತ್ತಿದ್ದ ದಿನಗಳು ನೆನಪಾದವು. ಆಗೆಲ್ಲ ತಾನು ಫೈನಾನ್ಸೊಂದರಲ್ಲಿ ಕೆಲಸಕ್ಕಿದ್ದೆ. ಕಾಗದ ಪತ್ರಗಳ ಆಚೀಚೆಗೆ ಕೊಂಡುಕೊಡುವುದು, ಫೈನಾನ್ಸಿನ ಕೋಣೆಗಳನ್ನು ಸ್ವಚ್ಚಗೊಳಿಸುವುದು. ಹೆಲ್ಪರ್ ಕೆಲಸ. ಆಗಲೇ ಮೋಜೆಸ್ ಪರಿಚಯವಾಗಿದ್ದ. ಸಂಜೆ ಅವನ ಕಾರಲ್ಲಿಯೆ ತಾನು ಬರುವುದಿತ್ತು. ಡ್ರೈವರ್ ಪಕ್ಕದ ಸೀಟು ತನಗೆ ಮೀಸಲಿತ್ತು. ಪಟ್ಲದ ರೋಡಿನ ಡೊಂಕುಗಳಿಗೆ ಸರಿಯಾಗೇ, ಬೇಕೆಂತಲೇ ಆತ ಅಡ್ಡಾದಿಡ್ಡಿ ಓಡಿಸುವುದು, ತಾನು ಆತನ ಮೇಲೆ ಬೀಳುವುದು, ತೊಡೆ ತೊಡೆ ತಾಗುತ್ತಲೇ ಮತ್ತೆ ನಾಚಿ ಸರಿದುಕೊಳ್ಳುವುದು. ಇದೆಲ್ಲ ಸುಮಾರು ಎರಡು ಮೂರು ವರ್ಷ ನಡೆದಿತ್ತು. ಅಪರೂಪಕ್ಕೆ ಯಾವತ್ತಾದರೂ ಆ ಸೀಟು ಸಿಗದಿದ್ದರೆ ತಾನು ಎಷ್ಟು ಬೇಸರ ಮಾಡಿಕೊಳ್ಳುತ್ತಿದ್ದೆ. ಆಗೆಲ್ಲ ತನ್ನ ಸಮಾಧಾನ ಮಾಡುತ್ತಿದ್ದ ಆತ. ಆದರೆ ಅವನಾಗಲೀ ತಾನಾಗಲೀ ಎಂದೂ ಬಾಯಿ ಬಿಟ್ಟು ಪರಸ್ಪರರ ಮನಸ್ಸನ್ನು ಹಂಚಿಕೊಳ್ಳಲೇ ಇಲ್ಲ. ಈಗೆಂತಾ ವಿಚಾರ ಮಾಡೋದು.. ಮಾಡುವುದೇ ತಪ್ಪು. ಹೋದ ವಾರವೂ ಹೀಗೆ ನೆನಪಿನಲ್ಲೇ ಕಳೆದುಹೋಗಿ, ಇಟ್ಟ ಅನ್ನ ಸೀದು ಹೋಗಿ ಬ್ಯಾರಿ ಕೈಯಲ್ಲಿ ಬೈಸಿಕೊಂಡಿದ್ದಳು.
ಕಾರು ಗೇರ್ ಬದಲಿಸಿ ಹೊರಟು ಹೋಗಿತ್ತು..
ಸುಮಯ್ಯ ರಸ್ತೆ ನೋಡತೊಡಗಿದಳು. ಕೈ ನಿಂತಿತು. ಎಲೆಗೆ ತುಂಬುತ್ತಿದ್ದ ತಂಬಾಕಿನ ಘಾಟು ನೆತ್ತಿಗೇರಿದಂತಾಗಿ ಮಬ್ಬಾದಂತಾಯಿತು. ಚಿತ್ರ ವಿಚಿತ್ರ.. ಅಯ್ಯೋ! ಎದೆಯೊಳಗೆ ನೋವಿನ ಮಿಡಿತ, ಅಲೆ ಅಲೆ ಎದ್ದಂಗಾಯಿತು. ವಿಪರೀತ ತಳಮಳ. ಕಣ್ಣು ಮುಚ್ಚಿದಳು. ಮುತ್ತಿಕ್ಕುತ್ತಿದೆ ನೊಣವೊಂದು ಮೊಜೆಸ್‌ನ ಹಣೆಯ ಮೇಲ್ಭಾಗಕ್ಕೆ. ಎಲ್ಲ ಆಳ ಅಗಲ ಆವರಿಸಿಕೊಂಡ ನೊಣ. ಬಾಯಮ್ಮನ ಕೆನ್ನೆಯ ಮೇಲೆ ಕೂತ ನೊಣವನ್ನ ಇವಳ ಬ್ಯಾರಿ ಮೆತ್ತಗೆ ಕೈಯಿಂದ ತೆಗೆಯುತ್ತಿದ್ದ. ಬಾಯಮ್ಮನ ಬಾಯಲ್ಲಿ ಬೀಡಾದ ಕೆಂಪು ಕೆಂಪು ರಸ. ನೊಣದ ಮೊರೆತ ಕಿವಿಯಿಂದ ತಲೆಯೊಳಗೆ. ಆ ಸದ್ದು ಗುಂಯ್ಗುಟ್ಟುವಿಕೆಗೆ ಆವರಿಸಿದ ಮಂಪರಿಗೆ ಆಕಳಿಸಿದಳು.
ಅರೆತೆರೆದ ಕಣ್ಣುಗಳ ಒಳಗೆ ನೊಣ ಆಕಾರದಲ್ಲಿ ಹಿಗ್ಗುತ್ತಾ ಈಗ ಕೈಕಾಲು ಕಳೆದುಕೊಂಡು ತೆವಳಲಾರಂಭಿಸಿತು. ಕಾಫಿಕಪ್ಪಿನ ಬುಡದಿಂದ ಎದ್ದು ಸರಿಯತೊಡಗಿತು. ನಿಧಾನ ಸುಮಯ್ಯಾ ಕೂತ ಸಣಬಿನ ಚೀಲದ ಒಳಹೊಕ್ಕು ಮೂತಿ ತಿವಿಯುತ್ತ, ಕಾಲುಗಳ ಸಂದಿಯಲ್ಲಿ ಮಿಸುಕಾಡುತ್ತಿದ್ದಂತೆ ಮರುಗಳಿಗೆಯಲ್ಲೇ ತೆವಳುವ ಅದರ ದೇಹ ತನ್ನ ದೇಹವನ್ನೇ ವ್ಯಾಪಿಸಿ, ಸುರುಳಿಸುರುಳಿಯಾಗಿ ಸುತ್ತಿ ಆಕೆಯನ್ನು ಹಿಂಡತೊಡಗಿದಂತೆ..
ಯೌವನದ ಭರವಸೆ, ಚಾನಮಾಜಿನ ಮೇಲೆ ಕೂತು ಹೇಳಿದ ಪಠಣ, ಆಶ್ರಮದ ಮಾಳಿಗೆಯಿಂದ ಕೇಳಿ ಬರುವ ಪ್ರಾರ್ಥನೆಯ ಸದ್ದು, ಇಗರ್ಜಿಗೆ ಹೊರಡುವ ಸಮಯದಲ್ಲಿ ಡೇವಿಡ್ ಡಿಸೋಜರ ಮನೆಯಿಂದ ಕೇಳಿಬರುವ ಯೇಸುನಾಮದ ಹಾಡುಗಳು ಎಲ್ಲವೂ ಗಾಳಿಯ ಅಲೆಗಳಲ್ಲಿ ತೇಲಿ ಹೋದಂತೆ.. ಸುಳಿಗಾಳಿಯ ನಿಟ್ಟುಸಿರು, ಆಕೆಯ ದೇಹವನ್ನೆ ವ್ಯಾಪಿಸಿದಂತಾಗಿ, ಮರುಕ್ಷಣ ಗಾಳಿಯ ನೀರವತೆಗೆ ಉಸಿರುಗಟ್ಟಿದಂತಾಗಿ ಎದುಸಿರು ಬರತೊಡಗಿತು.
*****
















