Home / ಕಥೆ / ಸಣ್ಣ ಕಥೆ / ಕಲಿತ ಕಳ್ಳ

ಕಲಿತ ಕಳ್ಳ

“ಕಿಟ್ಟೂ…….! ಚಳಿಯೊ……! ಹೊಟ್ಟೆಯಲ್ಲಿ ನಡುಕ……! ಅಯ್ಯೋ ಸಾಯ್ತಿನೊ ……. ಕಿಟ್ಟೂ ….. ಅಯ್ಯೋ….. ಅಯ್ಯೋ…. ಹ….. ಯ್ಯೋ…. ಎಂಥಾ… ವೇಳೆ ತಂದೆಪ್ಪಾ ಭಗವಂತಾ!…. ಅಯ್ಯೋ… ಚಳಿ! ಚಳಿ!… ಏನಾದರೂ ಹೊಚ್ಚೊ….ಕಿಟ್ಟೂ! ಕಿಟ್ಟೂ ನಿನ್ನ ಮಕ್ಕಳು ಮರೀ…. ಎಲ್ಲಾ ನೋಡಿದೆ…….. ಆದರೆ ಇದು ನೋಡೋದು ಬ್ಯಾಡಪ್ಪಾ!…. ದೇವರು ಲಗೂನೇ ಕಣ್ಣು ಮುಚ್ಚಲಿನ್ನು!……… ಎಲ್ಲಿ ಹೋದ್ಯೋ……. ಕಿಟ್ಟೂ……….?”

`ಎಲ್ಲಿಲ್ಲಮ್ಮಾ. ಇಲ್ಲೇ ಇದ್ದೀನಿ! ಹೊಚ್ಚಲಿಕ್ಕೆ ಏನಾದ್ರೂ ಅದಽ, ಏನು ನೋಡಿದೆ… ನೀನು ಹಾಗೆಲ್ಲಾ ಮನಸ್ಸಿಗೆ ಹಚ್ಚಿಕೊಳ್ಳ ಬೇಡಮ್ಮಾ… ದಿನಮಾನ ಬ೦ದ್ಹಾಂಗ ಹೋಗಲಿಕ್ಕೇ ಬೇಕು! ಈಗಾದರೂ ಸಮಾಧಾನದಿಂದ ನಾಲ್ಕು ದಿನಾ ಹೋಗಲಿ!’

`ಎಂಥಾ…. ಸಮಾಧಾನ! ಸುಡಗಾಡಿನಾಗಿನ…. ಸಮಾಧಾನ! ಸುಟ್ಟು ಹೋಗಲಪ್ಪಾ ಇಂಥಾ ಸಮಾಧಾನ!……… ಅಯ್ಯೋ….. ಬಾಳಾ…ಕಿಟ್ಟೂ! ….ಸಾಯ್ತಿನೋ…….. ಇನ್ನ!… ….ನಿನಗ ಕಲಿಸಿ…. ಏನು ದಂಡೆಗೆ ಹಚ್ಚಿದ್ಹಾಂಗಾತು……. ನಡು ಹೊಳ್ಯಾಗ….ಹರಿಗೋಲಿನ ಹುಟ್ಟು……. ಮುರಿದ್ಹಾಂಗ ಅತಲ್ಲ……. ನಿನ್ನ ಜನ್ಮಾ!……’

ಕಿಟ್ಟುವಿನ ವಿಷಣ್ಣವಾದ ಮೊಗದಿಂದ ಹೊರಟ ಬಿಸಿಯುಸಿರೊಂದು ಮನೆಯೊಳಗಿನ ಹವೆಯನ್ನೆಲ್ಲ ಬೆಚ್ಚಗೆ ಮಾಡಿತು. ಅದರಿಂದ ಮುದುಕಿಯ ಚಳಿಯೂ ಕೊಂಚ ಕಡಿಮೆಯಾಯಿತೇನೋ! ಸ್ವಲ್ಪ ಶಾಂತ೪ಾಗಿ, `ಶಾಂತೀದು ಇನ್ನೂ ಒಳಗಿನ ಕೆಲಸ……….. ಆಗಲಿಲ್ಲಽ? ನಿನಗ ಅಂಗಡಿಗೆ ಹೋಗಲಿಕ್ಕೆ ಹೊತ್ತಾಯ್ತು…’ ಎಂದು ಮತ್ತೊಂದು ಮಗ್ಗುಲಿಗೆ ಹೊರಳಲು ಯತ್ನಿಸಿದಳು.


ಸ್ಥಾವರ ಆಸ್ತಿ-ಪಾಸ್ತಿಗಳಿಲ್ಲದೆ ಕೇವಲ ಸಣ್ಣ ಸಂಬಳದಮೇಲೆ ಸಾಗುವ ಸಂಸಾರವು, ಸದ್ಯ ಸುಸ್ಥಿತಿಯಲ್ಲಿದ್ದಂತೆ ಕಂಡರೂ, ಅದು ತಳ ಹದಿ ಹಾಕದೆ ಕಟ್ಟಿದ ಕಟ್ಟಡದಂತೆಯೆ. ಈ ಮಾತಿನ ಅರಿವು ಶ್ರೀನಿವಾಸರಾಯರಿಗೆ ಇರಲಿಲ್ಲವೆಂತಲ್ಲ, ಇತ್ತು. ಅಂತೆಯೆ ಅವರು ತಾಲ್ಲೂಕು ಕಚೇರಿಯೊಳಗಿನ ಸಣ್ಣ ಗುಮಾಸ್ತರಾಗಿದ್ದರೂ ಮೂರು ಸಾವಿರ ರೂಪಾಯಿಗಳ ಜೀವವಿಮೆಯೊಂದನ್ನು ಮಾಡಿಸಿದ್ದರು-ಮುಪ್ಪಿನ ಕಾಲಕ್ಕೆ ನೆರವಾದೀತೆಂದು. ಇದೂ ಅಲ್ಲದೆ, ಸಂಬಳದಲ್ಲಿ ಮನೆತನ ಸಾಗಿಸಿ ಹಿರಿಯಮಗನನ್ನು-ಕಿಟ್ಟೂ ಆತನ ಹೆಸರು-ಬಿ. ಎ. ವರೆಗೆ ಅಭ್ಯಾಸ ಮಾಡಿಸಿದ್ದರು; ಅದರಲ್ಲೂ ವಿಶೇಷವೆಂದರೆ ಇಷ್ಟರಲ್ಲಿಯೆ ಕಿಟ್ಟುವಿನ ಮದುವೆಯನ್ನೂ ಮಾಡಿಬಿಟ್ಟಿದ್ದರು. ಇನ್ನೇನು, ‘ಐದಾರು ತಿಂಗಳಲ್ಲಿ ಸೊಸೆ ಮನೆಗೆ ಬರುವಳು, ಅಷ್ಟರಲ್ಲಿಯೆ ಕಿಟ್ಟುವಿನ ಪರೀಕ್ಷೆಯು ಆಗುವುದು, ಮತ್ತೇನು? ಪ್ರಾಂತಸಾಹೇಬರ ಗುರುತೂ ಇದೆ, ಸ್ವಲ್ಪ ಹೇಳಿಕೊಂಡು ಕಿಟ್ಟುವಿಗೆ ಎಲ್ಲಿಯಾದರೂ ಒಂದು ಕೆಲಸ ಕೊಡಿಸಿದಿರೆ ತೀರಿತು. ಅವರ ಭಾರವಂತೂ ಬೇರೆ ಕಡೆಗೆ ಹೋಗುವುದು. ನನ್ನ ಸಂಬಳದಲ್ಲಿ ಸಣ್ಣ ಹುಡುಗನ ಶಿಕ್ಷಣ- ಮನೆಯ ವೆಚ್ಚಗಳು ಸಾಗುವವು…’ ಇವೇ ಮೊದಲಾದ ಕನಸುಗಳನ್ನು ಕಾಣುತ್ತ ಶ್ರೀನಿವಾಸರಾಯರು ಸುಖದಲ್ಲಿದ್ದರು. ಆದರೆ ವಿಧವೆಯಾದ ಮಗಳು ಮುಂದೆ ಹಾಯ್ದು ಹೋದಾಗ, ಅವರ ಹೃದಯಕ್ಕೆ ಸಾವಿರ ಚೇಳು ಕಡಿದಷ್ಟು ನೋವಾಗುವುದು. ಆದರೂ ‘ಎಲ್ಲರಿಗೂ ಎಲ್ಲ ವಿಷಯಗಳಲ್ಲಿಯೂ ಎಲ್ಲಿ ಸರಿಯಾಗಿರುತ್ತದೆ! ಯಾವುದಾದರೊಂದು ಕೊರತೆ ಇದ್ದೆ ಇರುವುದಲ್ಲ!’ ಎಂದುಕೊಂಡು ಮನಸ್ಸಿಗೆ ಏನೋ ಸ್ವಲ್ಪ ಸಮಾಧಾನವಾಡಿ ಕೊಳ್ಳುತ್ತಿದ್ದರು.

ಶ್ರೀನಿವಾಸರಾಯರ ಸಂಸಾರ ಕಟ್ಟಡವು, ಯಾವುದೊ ಒ೦ದು ಮೂಲೆಯಲ್ಲಿ ಸ್ವಲ್ಪ ಕೆಳಗಿಳಿದದ್ದು ಎಲ್ಲವೂ ಒಮ್ಮೆಲೆ ಮುರಿದೇ ಬಿತ್ತು: ರಾಯರು ಅಕಸ್ಮಾತ್ ತೀರಿಕೊಂಡುದರಿಂದ, ಕಿಟ್ಟುವಿನ ಓದು ಅಷ್ಟಕ್ಕೆಯೆ ನಿಂತಿತ್ತು, ಮನೆಗೆ ಬ೦ದ. `ಮಾವ ಸತ್ವ, ಮಾತನಾಡಿಸಬೇಕು? ಎಂದು ಶಾಂತೆಯ ತ೦ದೆ ಅವಳನ್ನು ಕರೆದುಕೊಂಡು ಬಂದು, ನಾಲ್ಕು ದಿನ ನಿಂತು, ಅವಳನ್ನು ಅಲ್ಲಿಯೆ ಬಿಟ್ಟು ಹೋದ, ಅಂತೂ ಕಿಟ್ಟುವಿಗೆ ತಾಯಿ, ಅಕ್ಕ, ತಮ್ಮ ಹಾಗೂ ಈಗ ಮನೆಗೆ ಬಂದ ಹೆಂಡತಿ ಇಷ್ಟು ಜನರ ಭಾರ ಹೊರಬೇಕಾಯಿತು. ಹಿರಿಯರಿಂದ ಬಂದ ಆಸ್ತಿಯೆಂದರೆ ದೂರದ ಹಳ್ಳಿಯಲ್ಲೊಂದು ಮನೆ, ಬರಬೇಕಾದ ವಿಮೆಯ ಹಣ ಇಷ್ಟೇ! ವಿಮೆಯ ವಿಚಾರ ಮಾಡಲಾಯಿತು, ಪರದೇಶದ ಕಂಪನಿ. ಯುದ್ಧದ ವಿಷಮವಾತಾವರಣದ ಮೂಲಕ ಅವರ ಆಫೀಸು ಮುಚ್ಚಲ್ಪಟ್ಟಿದ್ದಿತಂತೆ. ಅದರ ಪ್ರಧಾನ ಕಾರ್ಯಾಲಯ ಅಮೆರಿಕೆಯಲ್ಲಿ; ಆದುದರಿಂದ ಆತ್ತ ಕೆಲಸ ನಡೆಯಿಸಿ, ವಾರಸ್ ದಾರರ ನಿಶ್ಚಯವಾದ ಮೇಲೆ ಆ ಹಣ ಕೈಗೆ ಸಿಕ್ಕುವುದು. ಅದರಿಂದ ಅದೂ ಸದ್ಯಕ್ಕೆ ಕನ್ನಡಿಯೊಳಗಿನ ಗಂಟೆ.

ಹೀಗಿತ್ತು, ಕಿಟ್ಟುವಿನ ಮನೆತನಕ್ಕೆ ಹಿರಿಯರಿಂದ ಬಂದ ಆಸ್ತಿಯ ಆಧಾರೆ. ಎಂದ ಮೇಲೆ ಅವನ ಶಿಕ್ಷಣದ ಮುಂದೆ ಹೇಗೆ ಸಾಗಬೇಕು? ಅದರಿಂದ ಆತನು ಕಲಿಯುವುದನ್ನು ಬಿಟ್ಟು ಮನೆತನ ಸಾಗಿಸುವ ಯೋಚನೆ ಮಾಡಬೇಕಾಯಿತು. ತಾಯಿಯ ಹತ್ತಿರ ಇದ್ದ ಅಲ್ಪ ಸ್ವಲ್ಪ ಬಂಗಾರದ ಒಡವೆಗಳನ್ನು ಮಾರಿ, ತಂದೆಯ ಉತ್ತರಕರ್ಮ ತೀರಿಸಿ ತಿಲಾಂಜಲಿ ಕೊಟ್ಟನು. ಎಲ್ಲವನ್ನೂ ಬಿಡಲು ಬಂದೀತು, ಆದರೆ ಈ ಧರ್ಮದ ಕಟ್ಟಳೆಗನ್ನು ಮೀರುವುದು ಸಾಧ್ಯವೆ? ಧಾರ್ಮಿಕ ವಿಧಿ ವಿಧಾನಗಳನ್ನಷ್ಟು ತೀರಿಸಿದ ಮೇಲೆ, ಉಳಿದ ನಾಲ್ಕು ಕಾಸುಗಳಿ೦ದ ಅ೦ತೂ ಇಂತೂ ನಾಲ್ಕು ದಿನ ಹೊಟ್ಟೆಗಿಷ್ಟು ಹಿಟ್ಟೂ ನೀರೂ ಆಯಿತು.

ಮುಂದೆ ಮನೆತನ ಸಾಗಿಸಲು ಕಿಟ್ಟು ಕೆಲಸ ಹುಡುಕಬೇಕಾಯಿತು. ಎಲ್ಲ ಕಡೆಗೂ ಕೆಲಸಕ್ಕೆ ಅರ್ಜಿ ಹಾಕಿದ. ಇಂದಿನ ಈ ನಿರುದ್ಯೋಗ-ಯುಗದಲ್ಲಿ ಕೇವಲ ಅರ್ಜಿಯಿಂದಲೆ ಕೆಲಸ ಬೇಗನೆ ಹೇಗೆ ಸಿಕ್ಕಬೇಕು? ಕೆಲಸ ಸಿಕ್ಕುವವರೆಗೆ ಎಲ್ಲಿಯಾದರೂ ಅ೦ಗಡಿಯಲ್ಲಿ ಲೆಕ್ಕ ಬರೆದು, ಬಂದದ್ದರಲ್ಲಿಯೇ ಸಂಸಾರ ಸಾಗಿಸಬೇಕೆಂದು, ಲೆಕ್ಕ ಬರೆಯುವ ಕೆಲಸ ಹಿಡಿಯಲು ಅಂಗಡಿಗೆ ಹೋದ. ಅಂಗಡಿಕಾರನು `ಹೊಟ್ಟೆಗೆ ಕಾಳು-ಕಡಿಗಳನ್ನು ಒಯ್ಯುವಂತಿದ್ದರೆ ನಾಳೆಯಿಂದ ಬರಲಿಕ್ಕೆ ಬರುತ್ತಿರು, ಇಲ್ಲದಿದ್ದರೆ ಬೇಡ! ಈಗೇನು ಬರೆಯುವವರಿಗೆ ಕಡಿಮೆ? ದಿನಾ ಕೊಳಿವಿ ಅಕ್ಕಿ ಕೊಟ್ಟರೆ, ಬಂದು ಬರೆದು ಹೋಗ್ತಾನ, ಆ ಪೇನ್ಶನರ್ ಮಾಸ್ತರು!’ ಎಂದು ಹೇಳಿಬಿಟ್ಟನು. `ಇರಲಿ, ಇದಕ್ಕೂ ಹೆಚ್ಚು ಎಲ್ಲಿ ಸಿಗತಽದ? ಒಂದುವೇಳೆ ಎರಡನೆಯ ಕಡೆಗೆ ಸಿಕ್ಕರೂ ಇದನ್ನೇನು ನಾನು ಕಾಯಂ ಮಾಡ ಬೇಕಿಲ್ಲ. ನಾಲ್ಕು ದಿನ ಕೆಲಸ ಸಿಕ್ಕುವ ವರೆಗೆ ಮಾತ್ರ ಮಾಡುವುದು!” ಎಂದು ಹೆಚ್ಚಿಗೆ ವಿಚಾರಿಸದೆ ಕಿಟ್ಟುವೂ ಅದಕ್ಕೆ ಒಪ್ಪಿದ. ಅಂದಿನಿಂದ ಕಿಟ್ಟುವಿಗೆ ನಾಲ್ಕಾರು ಅ೦ಗಡಿಗಳಲ್ಲಿ ಲೆಕ್ಕ ಬರೆಯಲು ಕೆಲಸ ಸಿಕ್ಕಿತು; ಆದರಿಂದ ಅರೆಹೊಟ್ಟೆಯ ಜೀವನವು ಸಾಗಲಾರಂಭಿಸಿತು.

ಸರಕಾರಿ ಕೆಲಸ ಸಿಕ್ಕುವವರೆಗೆ ಅ೦ಗಡಿಯ ಲೆಕ್ಕ ಬರೆಯಬೇಕೆಂದು ಕಿಟ್ಟು ನಿಶ್ಚಯಿಸಿ ಬರೆಯುವುದನ್ನು ಹಿಡಿದ. ಆದರೆ ಇನ್ನೂ ಬೇರೆ ಕಡೆಗೆ ಕೆಲಸ ಸಿಕ್ಕಲಿಲ್ಲ. ಸಿಕ್ಕುವ ಸಂಬಳ-ಅಲ್ಲ ಕಾಳು-ಕಡಿ ಹೆಚ್ಚಾಗಲಿಲ್ಲ. ಸಂಬಳ ಹೆಚ್ಚಾಗದಿದ್ದರೂ ಸಂಸಾರ ದಿನ-ದಿನಕ್ಕೆ ದೊಡ್ಡದಾಗುತ್ತಿದ್ದಿತು. ಬಡತನಕ್ಕೆ ಸಂತತಿ ಬೇಡ ಬೇಡವೆಂದರೂ ಬಿಡುವುದಿಲ್ಲವಂತೆ. ಶಾ೦ತೆ ಈಗ ಎರಡು ಮಕ್ಕಳ ತಾಯಿ; ಮೇಲೆ ಮತ್ತೊಂದು ಬಸಿರು ಬೇರೆ. ತಾಯಿ ಈಗೊಂದು ವರ್ಷದಿಂದಲೂ ಕ್ಷಯದಿಂದ ಹಾಸಿಗೆ ಹಿಡಿದಿರುವಳು, ಅಕ್ಕ ಸ್ವಲ್ಪ ವಿಶಾಲ ಮನಸ್ಸಿನವಳು; ಅದರಲ್ಲೂ ಸುಧಾರಕ ಕಿಟ್ಟುವಿನ ಸಹವಾಸ ಬೇರೆ. ತಾಯಿ ಕಟ್ಟಾ ಸನಾತನಿಯಾದರೂ ಮಗಳು ನರ್ಸ್ ಕೆಲಸ ಮಾಡುವೆನೆನ್ನಲು ಅನಿವಾರ್ಯವಾಗಿ ಒಪ್ಪಿಗೆ ಕೊಡಬೇಕಾಯಿತು. ಅದರಿಂದ ಅಕ್ಕನ ಹೊರೆಯೊಂದು ಕಿಟ್ಟುವಿಗೆ ಕಡಿಮೆಯಾಗಿತ್ತು. ಇಷ್ಟೇ ಅಲ್ಲ, ಅವಳೇ ತನ್ನ ಹೊಟ್ಟೆ-ಬಟ್ಟೆ, ಸಾಗಿಸಿ ಕೊ೦ಡು ತಿ೦ಗಳೊಂದಕ್ಕೆ ಕಿಟ್ಟುವಿಗೆ ನಾಲ್ಕು ರೂಪಾಯಿ ಕಳುಹುತ್ತಿದ್ದಳು. ಆದರೂ ಕಿಟ್ಟುವಿನ ಸಂಸಾರವು ಸುಖಮಯವಾಗಿ-ಬೇಡ-ಸುಸೂತ್ರವಾಗಿ ಸಾಗುವಂತೆಯೂ ಆಗಲಿಲ್ಲ.


ಕಿಟ್ಟು ಒಂದು ಅಂಗಡಿಯ ಲೆಕ್ಕ ಬರೆದು ಮತ್ತೊಂದು ಅಂಗಡಿಗೆ ಹೋಗಲೆಂದು ಹೊರಟ. ಹೊರಗೆ ಜಿಟಿಜಿಟಿ ಮಳೆ, ಆಕಾಶವು ತಿಳಿಯಾದ ಕಪ್ಪು ಮೋಡಗಳಿಂದ ಮುಚ್ಚಿದ್ದಿತು. ದಾರಿಯಲ್ಲಿ ಒಬ್ಬಿಬ್ಬರು ಕೊಡೆ ಹಿಡಿದು ಹೊರಟಿದ್ದರು. ಮಳೆ ಬೇಗ ನಿಲ್ಲುವ ಲಕ್ಷಣ ತೋರುತ್ತಿರಲಿಲ್ಲ. ಕಿಟ್ಟು ತಲೆಯ ಮೇಲಿನ ಟೋಪಿಗೆ ತೆಗೆದು ಬಗಲಲ್ಲಿ ಹಿಡಿದು, ಸ್ವಲ್ಪ ಬೇಗ ನಡೆದ. ಈಗ ಅವನು ಹೋಗಬೇಕಾದದ್ದು ಜವಳಿಯ ಅ೦ಗಡಿಗೆ. ಅದು ಸ್ವಲ್ಪ ದೂರವಿತ್ತು. ಅಲ್ಲಿ ಹೋಗುವುದರೊಳಗೆ ಟೊಪ್ಪಿಗೆ ತೊಯ್ಯುವುದು; ತಲೆ ತೊಯ್ದರೂ ಒರಸಲಿಕ್ಕೆ ಬಂದೀತೆಂದು ಕಿಟ್ಟುವಿನ ವಿಚಾರ. ಕೊಡೆ ಹಿಡಿದುಕೊಂಡು ಹೊರಟ ದಾರಿಕಾರನಿಗೆ ಇದೊಂದು ಮೋಜೆನಿಸಿತೇನೋ; ಅವನ ಮುಖದಲ್ಲಿ ಕಿರುನಗೆಯೊಂದು ಮಿಂಚಿತು.

ಹೋಗು-ಹೋಗುತ್ತ ಕಿಟ್ಟುವಿಗೆ ಹಿಂದಿನ ದಿನಗಳೆಲ್ಲ ನೆನಪಾಗ ತೊಡಗಿದುವು. ನಾಲ್ಕೈದು ವರ್ಷಗಳ ಹಿಂದೆ ತಾನು ಕಾಲೇಜಿನಲ್ಲಿದ್ದುದು: `ಆಗ ತನ್ನ ಇಂಗ್ಲೀಷ್ ಎಷ್ಟು ಒಳ್ಳೆಯದಿತ್ತು. ಪ್ರಿನ್ಸಿಪಾಲ್ ರೂ ಮೆಚ್ಚಿ ಹೊಗಳಿದ್ದರು. ಕನ್ನಡವೂ ಅದರಂತೆಯೇ, ನಾನು ಇಂಟರ್ ನಲ್ಲಿದ್ದಾಗ ನನ್ನ ವಿಷಯ ಕನ್ನಡವಲ್ಲವಾದರೂ ಕಾಲೇಜ್ ಮಿಸೆಲೆನಿಗೆ ಒಂದು ಕವನವನ್ನು ಬರೆದು ಕೊಟ್ಟಿದ್ದೆ. ಎಷ್ಟು ಒಳ್ಳೆಯದಾಗಿತ್ತದು! ಒಂದೆರಡು ಅಭಿನಂದನಸರವಾದ ಪತ್ರಗಳು ಕೂಡ ಬಂದಿದ್ದುವು. ಆದರೆ…ಆ ವಿದ್ಯೆ ಆ ಕನ್ನಡ, ಇಂದು ಬಾಳುವೆಗೆ ಏನೂ ಉಪಯೋಗ ಬೀಳದಾದುವಲ್ಲ! ಹಾಸಿಗೆ ಹಿಡಿದ ತಾಯಿಗೆ ಬೆಚ್ಚಗೆ ಹೊಚ್ಚಲು ಒಂದು ಶಾಲನ್ನು ಸಂಪಾದಿಸಲೂ ಸಹಾಯವಾಗಲಾರವಲ್ಲ!… ಹೀಗೆ ಏನೇನನೋ ವಿಚಾರಿಸುತ್ತಿರುವಾಗಲೆ, ಮನಸ್ಸು ಉದ್ವಿಗ್ನತೆಯಿಂದ ಯಾವುದೋ ಒಂದು ನಿಶ್ಚಯಕ್ಕೆ ಬಂದು ನಿಂತಂತಾಯಿತು. ಮುಖವೂ ಪ್ರಸನ್ನವಾಯಿತು. ತಲೆಗೆ ಟೊಪ್ಪಿಗೆಯನ್ನು ಹಾಕಿಕೊಂಡು ಅ೦ಗಡಿಯಲ್ಲಿ ಕಾಲಿಟ್ಟನು.

`ಕಿಟ್ಟಪ್ಪಾ, ಬರಲಿಕ್ಕೆ ತಡವಾಯಿತೆಂದು?’ ಶೇಡಜಿಯವರು ಕೇಳಿದರು. ‘ಮನೆಯಲ್ಲಿ ಅಮ್ಮನ ಮೈಯಲ್ಲಿ ನೆಟ್ಟಗಿಲ್ಲ ಸ್ವಲ್ಪ ನಿಲ್ಲಬೇಕಾಯಿತು’ ಎಂದು ಹೇಳಿ ತಿರುಗಿ ಶೇಡಜಿಯವರು ‘ಏನಾಗಿದೆ?’ ಎಂದು ಕೇಳುವುದಕ್ಕಿಂತ ಮುಂಚಿತವಾಗಿಯೆ ತಾನು ಬರೆಯುವ ಸ್ಥಳಕ್ಕೆ ಹೋಗಿ ಕುಳಿತು ಬಿಟ್ಟ. `ಬೇಗನೆ ಕೆಲಸ ತೀರಿಸಿಕೊಂಡು ಹೋಗಬೇಕೆಂದಿದ್ದಾನೇನೋ!’ ಎಂದುಕೊಂಡು ಶೇಡಜಿಯವರೂ ಅಷ್ಟಕ್ಕೇ ಸುಮ್ಮನಾದರು.

ಕಿಟ್ಟು ಬರೆಯಲು ಕುಳಿತುಕೊಳ್ಳುವ ಸ್ಥಳವು ಶಾ೦ತವಾದುದು. ಅಲ್ಲಿ ಗಿರಾಕಿಗಳ ಗಲಾಟೆಯಿಲ್ಲ. ಸುತ್ತೆಲ್ಲ ಜವುಳಿಯ ನಗಗಳಿದ್ದರೂ, ಅದಾವಾಗಲೋ ಒಮ್ಮೊಮ್ಮೆ ಒಬ್ಬ ಆಳು ಬಂದು ಬೇಕಾದುದನ್ನಷ್ಟು ಎತ್ತಿ ಒಯ್ಯುವನಿಷ್ಟೆ!

ಕಿಟ್ಟು ಬರೆಯಲು ಕುಳಿತ; ಕೀರ್ದಿಯನ್ನು ಕೈಯಲ್ಲಿ ತಕ್ಕೊಂಡ ಮಸಿಯಲ್ಲಿ ಲೆಕ್ಕಣಿಕೆ ಅದ್ದಿದ. ಬರೆಯಲು ಕೈಸಾಗಲಿಲ್ಲ. ಹಾಗೆಯೆ ಕುಳಿತ. ಮನಸ್ಸು ವಿಚಾರಮಾಲಿಕೆಯನ್ನು ಮುಡಿಯುತ್ತ ಮುಂದೆ ಸಾಗತೊಡಗಿತು; ಲೆಕ್ಕಣಿಕೆಯ ಮಸಿ ಆರಿತು. ಮತ್ತೆ ಅದ್ದಿದ, ಬರೆಯಲೆಂದು, ಮತ್ತೂ ಬರೆಯಲಾಗಲಿಲ್ಲ. ಕಿರ್ದಿಯನ್ನು ಬದಿಗೆ ಇಟ್ಟ, ಲೆಕ್ಕಣಿಕೆಯನ್ನು ಒಗೆದ, ಸುತ್ತಲೂ ನೋಡಿದ, ಚೆಟ್ಟನೆ ಎದ್ದು ನಿಂತ. `ಏನೇ ಆಗಲಿ, ಹಾಗೆ ಮಾಡದೆ ಗತಿಯೇ ಇಲ್ಲ; ಈಗಲೇ ನೋಡಿ ಇಡಬೇಕು’ ಎಂದು ತನ್ನಲ್ಲಿ ತಾನೇ ಅಸ್ಫುಟವಾಗಿ ಗುಣುಗುಟ್ಟಿದ. ಜವುಳಿಯ ಕಪಾಟುಗಳನ್ನೆಲ್ಲ ಕಿತ್ತು ಹಾಕತೊಡಗಿದ. ರಗ್ಗುಗಳನ್ನೆಲ್ಲ ಒ೦ದೊ೦ದಾಗಿ ಇಳು ಹಲಾರಂಭಿಸಿದ, `ಇದು ಒಳ್ಳೆಯದಿದೆ! ಮಳೆಗಾಲದಲ್ಲಿ ಹೊದೆಯಲಿಕ್ಕೆ; ಆದರೆ ಇದರೆ `ಕಲರ್’ ಒಳ್ಳೆಯದಿಲ್ಲ. ಇಂತಹದೆ ಮತ್ತೊಂದನ್ನು ನೋಡಬೇಕು!’ ಎಂದು ಕಪಾಟಿನತ್ತ ದೃಷ್ಟಿಯನ್ನು ಬೀರಿದ. ಕೂಡಲೆ `ನಾನೇನು ಹಣ ಕೊಟ್ಟು ಕೊಳ್ಳಬೇಕಾಗಿದೆಯೇ? ಇಷ್ಟೇಕೆ ಚಿಕಿತ್ಸೆ?’ ಎಂದುಕೊಂಡನೇನೋ! ಮುಖದಲ್ಲಿ ಹುಚ್ಚುನಗೆಯೊಂದು ಅರಳಿತು. ‘ಯಾವುದೇ ಇರಲಿ, ಕೈಗೆ ಬಂದದ್ದು ಕೈಲಾಸ!’ ಎಂದುಕೊಂಡು ಅದನ್ನೇ ಮೇಲೆ ತೆಗೆದು ಇಟ್ಟು, ಬರೆಯುವ ಸ್ಥಳಕ್ಕೆ ಬಂದು ಕುಳಿತ.

ಬುದ್ದಿ ಬಲವಿದ್ದವನು ತಪ್ಪು ಮಾಡಲು ಮನಸ್ಸು ಮಾಡಿದರೂ, ದಾರಿ ತಪ್ಪಲು ಸುಲಭಸಾಧ್ಯವಾಗುವುದಿಲ್ಲ. ಕಿಟ್ಟು ವಿಚಾರಿಸತೊಡಗಿದ. `ಇದೇನು ನನ್ನ ವಿಚಾರ? ನಾನಿಷ್ಟು ಕಲಿತವನು, ತಿಳಿದವನು….! ತುಡುಗು ಮಾಡಲು ಯೋಚಿಸಿದೆನೇ? ಈ ಮರ್ಕಟಮನಸ್ಸು, ಕ್ಷಣದಲ್ಲಿ ಬೇಕಾದುದನ್ನು ಮಾಡಲೂ ಮುಂದೂಡುವುದಲ್ಲ….! ನಾನು ಕಳ್ಳ ನೆನಿಸಿಕೊಳ್ಳಲೇ…. ಕಳವು! ಕಳವು!…ಕೆಟ್ಟ ಕೆಲಸ! ಮಹಾ ಪಾಪ! ಇಂತಹ ಕೀಳು ಕೆಲಸ ನನ್ನಿಂದಾಗದು! ಸುಧಾರಿಸಿದವನಾದ ನನ್ನ ಮನಸ್ಸೇ ಹೀಗೆಂದ ಮೇಲೆ ಅಶಿಕ್ಷಿತ ಜನರ ಮನಸ್ಸಿನ ಹಂತವೆಲ್ಲಿ? ಅಂತೆಯೆ ಸಮಾಜದಲ್ಲಿ ಇಷ್ಟು ಕಳವು! ಕೊಲೆಗಳು! ನಾನೂ ಅ೦ತಹ ಕಳ್ಳರಲ್ಲೊಬ್ಬನಾಗಲೇ?… ಆಗಲಾರೆ? ಎಂದೂ ಆಗಲಾರೆ…. ಮಾಲಕನನ್ನು ಕೇಳಲೆ? ಕೇಳಿದರೆ ಕೊಟ್ಟಾರೆ?… ಇಲ್ಲ ಇಲ್ಲ; ಕೇಳಿದರೆ ಕೊಡುವುದಿಲ್ಲ! ಖಂಡಿತ ಕೊಡುವುದಿಲ್ಲ!…. ಕೇಳಿದರೆ ಕೊಡುವುದಿಲ್ಲ; ಕೊಳ್ಳಲು ಕೈಯಲ್ಲಿ ಕಾಸಿಲ್ಲ! ಕದಿಯುವುದು ಕೆಡುಕು! ಆದರೆ…. ಮನೆಯಲ್ಲಿ ತಾಯಿ ‘ಚಳಿ! ಚಳಿ!’ ಎಂದು ನಡುಗುತ್ತಿರುವಳಲ್ಲ! ಏನು ಆರ್ತಸ್ವರವದು!…. ಅದನ್ನು ಮತ್ತೆ ಮತ್ತೆ ನನ್ನಿಂದ ಕೇಳುವುದಕ್ಕಾಗುವುದಿಲ್ಲ! ಕೇಳಲಾರೆ!’ ಕಿಟ್ಟುವಿನ ಮೈ ನಡುಗಿತು. ಕಣ್ಣು ಕುಣಿಕೆಯಲ್ಲಿ ನೀರೊಸರಿತು. ಮನೆಯಿಂದ ಹೊರಬೀಳುವಾಗ ಹೊತ್ತು ಕೊಳ್ಳಲು ಕೇಳಿದ ಅಮ್ಮನ ಮಾತುಗಳು ಒಂದೆಸವನೆ ಕಿವಿಯಲ್ಲಿ ಸುತ್ತತೊಡಗಿದುವು. `ಬೇಕು; ಅಮ್ಮನಿಗೆ ಬೆಚ್ಚಗೆ ಹೊದ್ದಿಸಲು ಬೇಕು! ಅದನ್ನು ತಂದುಕೊಡುವುದು ಆಕೆಯ ಮಗನಾದ ನನ್ನ ಕರ್ತವ್ಯ ಆದರೆ…. ಅದನ್ನು ಸಂಪಾದಿಸಿಕೊಡುವಷ್ಟು ನನ್ನಲ್ಲಿ ಸಾಮರ್ಥ್ಯವಿಲ್ಲ. ಅನುಕೂಲತೆಯಿಲ್ಲ! ಅದಕ್ಕೆ ಉಳಿದುದೊಂದೇ ಉಪಾಯ….!’

ಅದೇ ದಿವಸ ಸಂಜೆಗೆ ಕಿಟ್ಟುವಿನ ಮಾತೃಪ್ರೇಮವು ಆತನ ವಿವೇಕವನ್ನು ಗೆದ್ದಿತು.


ಈಗ ಕಿಟ್ಟು ಪೋಲೀಸ ಸ್ಟೇಶನಿನ ಒಂದು ಮೂಲೆಯಲ್ಲಿ ಮೋರೆ ಒಣಗಿದೆ. ಕಣ್ಣು ಕೆಂಪಗಾಗಿವೆ. ಕಣ್ಣೀರು ಹರಿದು ಹರಿದು ಗಲ್ಲಗಳು ಹಸಿಯಾಗಿವೆ; ಧೂಳು ಕೂತು ಹೊಲಸಾಗಿವೆ. ಮೈಯಲ್ಲಿಯ ಶರಟಿಗೆಲ್ಲ ಕೆಸರುಹತ್ತಿದೆ. ತಲೆಯ ಮೇಲೆ ಟೊಪ್ಪಿಗೆಯಿಲ್ಲ, ಮನದಲ್ಲಿ ‘ನಾನೇಕೆ ಹಾಗೆ ಮಾಡಿದೆ? ಯಾವ ಕೆಟ್ಟ ಕಾಲವು ಆ ಕಳವಿಗೆ ಚೈತನ್ಯ ಕೊಟ್ಟಿತೋ! ನಿನ್ನೆಯ ಸಂಜೆ. ಬೇಡ ಮರಳಿ ನೆನೆಯುವುದೇ ಬೇಡ ಎಂತಹ ಭೀಕರ ಒದೆತಗಳವು! ಅದೂ ದಾರಿಯಲ್ಲಿ ! ಅಂಗಡಿಯವರೆಲ್ಲ ನೋಡುತ್ತಿದ್ದರು; ಹುಡುಗರು ನಗು ತ್ತಿದ್ದರು; ಕಳ್ಳ! ಕಳ್ಳ! ಎಂದು ಕೂಗಿಕೊಳ್ಳುತ್ತಿದ್ದರು; ಜನರೇನೇನೊ ಆಡಿಕೊಳ್ಳುತ್ತಿದ್ದರು! ನೆಲಕ್ಕೆ ಮುಗ್ಗರಿಸಿಬಿದ್ದರೂ ಹಾಗೆಯೆ ಎಳೆದರಲ್ಲ! ಒದೆದರಲ್ಲ! ಏನು ನಿಷ್ಕರುಣಿಗಳು! ದಾರಿಯಲ್ಲಿಯ ಒಂದೊಂದು ಮಾತಿನ ಸೆಟ್ಟಿನ ನೋವಿಗೆ ಇಲ್ಲಿ ಹೊಡೆದ ನೂರು ನೂರು ಹೊಡೆತಗಳ ನೋವೂ ಸರಿಯೆನಿಸದು, ಎಂತಹ ಅಪಮಾನಕರವಾದ ಸಂಗತಿಯದು! ಜನರಲ್ಲಿ ನಾಳೆ ಹೇಗೆ ಮೋರೆತೋರಿಸಲೆ?…. ಮೋರೆ ತೋರಿಸುವುದು…. ಇಲ್ಲಿಂದ ಬಿಟ್ಟರಲ್ಲವೆ? ನಿನ್ನೆಯ ಸಂಜೆ ಶಾ೦ತೆ ಎಷ್ಟು ಹೊತ್ತು ದಾರಿಕಾಯ್ದಳೊ! ತಾಯಿ ಹಾಸಿಗೆ ಹಿಡಿದವಳು; ಶಾಂತೆಗ೦ತೂ ಕೂಸು ಕೈಬಿಡುವುದಿಲ್ಲ ಎಂದಮೇಲೆ ಹೊರಗೆ ಬಂದು, ನಾನೆಲ್ಲಿ-ಎಂಬುದನ್ನು ಕೇಳುವವರಾದರೂ ಯಾರು ? ಯಾರನ್ನು ? ಒಂದುವೇಳೆ ಕಂಡವರು ಯಾರಾದರೂ ಹೇಳಿದ್ದರೆ ಎಷ್ಟು ನೊಂದು ಕೊಂಡರೊ! ಮೊದಲೇ ನಾನು ಬರುವಾಗ, ನನ್ನ ಅಸಹಾಯ ಸ್ಥಿತಿಯನ್ನು ಕಂಡು ಮರುಗುತ್ತಿದ್ದಳು ತಾಯಿ! ಈ ಸಂಗತಿಯನ್ನು ಕೇಳಿ ದ್ದರಂತೂ…….. ” ಎ೦ದು ಏನೇನನೊ ವಿಚಾರಿಸುತ್ತಿರುವಾಗಲೆ-`ಹರಾಮಖೋರ್! ಮತ್ತೇನು ಕದ್ದಾನೊ! ಒ೦ದೂ ಹೇಳುವುದಿಲ್ಲ, ಲಾಕಪ್ಪಿಗೆ ಒಯ್ದು ಬಿಡಿರಿ! ಹೋಗಲಿ, ಹಾಳಾಗಿ!” ಎಂದು ಹತ್ತಿರನಿಂತ ಪೋಲೀಸನಿಗೆ ಹವಾಲದಾರನು ಹೇಳಿದನು.

ಕಿಟ್ಟು ತಡವರಿಸುತ್ತ ‘ಇಲ್ಲ! ನಾನೆಂದೂ ಕಳವು ಮಾಡಿಲ್ಲ! ಮನೆಯಲ್ಲಿ ನನ್ನ ತಾಯಿ ಬೇನೆಯಿಂದ ಮಲಗಿದ್ದಾಳೆ. ‘ಚಳಿ! ಚಳಿ!’ ಎಂದಳು, ಬೇರೆಯೇನೂ ಉಪಾಯಗಾಣದೆ ಹೀಗೆ ಮಾಡಿದೆ. ನಾನೆಂದೂ ಇಂತಹ ಕೆಲಸ ಮಾಡಿದವನಲ್ಲ. ಇದನ್ನು ಮಾಡಿದ್ದಕ್ಕೆ ತುಂಬಾ ಪಶ್ಚಾತಾಪಪಡುತ್ತಿದ್ದೇನೆ. ನಾನು ಹುಂಬನೆಂದು ತಿಳಿಯಬೇಡಿರಿ. ಕಲಿತವ ನಿದ್ದೇನೆ! ನನಗೂ ಬುದ್ದಿ ಇದೆ, ಒಮ್ಮೆ ಕಾಲು ಜಾರಿದ ಮೇಲೆ ಮತ್ತೆ ಮತ್ತೆ ಹಾಗೆಯೆ ಆಗುತ್ತದೆಯೆಂದೇನೂ ಅಲ್ಲ!’ ಎಂದ.

`ಮುಚ್ಚು ಬಾಯಿ ಸೂ… ….ಮಗನೆ! ಕಲಿತವನಂತೆ! ತಿಳಿದವ! ತಿಳಿದವರು ಹಿಂಗ ಮಾಡತಾರಽ? ಮತ್ತೆ ನಮ್ಮ ಮುಂದ ಹಾಂಗಽ ಹೀ೦ಗ ಅ೦ತ ಹೇಳ ತಾನ! ದೊಡ್ಡ ದೊಡ್ಡ ಮಾತು ಹೇಳವನಿಗೆ ಕಳವು ಮಾಡಲಿಕ್ಕೇನಾಗಿತ್ತು?’

`ರಾವಸಾಹೇಬರೆ, ನಾ ಹೇಳುವುದನ್ನಾದರೂ ಕೇಳಿಕೊಳ್ಳಿರಿ ವಿಚಾರ ಮಾಡಿರಿ! ಆ ಮೇಲೆ ಬೇಕಾದುದನ್ನು ಹೇಳಿರಿ! ಏನೆಂದರೂ ಮನುಷ್ಯನ ಕರ್ತವ್ಯಾಕರ್ತವ್ಯಗಳಿಗೆ ಅವನಷ್ಟೇ ಅಲ್ಲದೆ, ಅವನ ಸುತ್ತಲಿನ ಪರಿಸ್ಥಿತಿಯ ಹೇಗೆ ಕಾರಣವಾಗಿರುತ್ತದೆಯೆಂಬುದನ್ನೂ ವಿಚಾರ ಮಾಡಿರಿ! ನನ್ನ ಸ್ಥಿತಿಯಲ್ಲಿ ಇದ್ದರೆ ನೀವೂ ಇದೇ ಕಳವು… …

`ಬಾಯಿಮುಚ್ಚು! ಏನು ಬೊಗಳತಿದ್ದಿಯಾ? ಎಲ್ಲಿ ಇದ್ದೀದಿ ನೆನಸದನಽ ನಿನಗ?’ ಎ೦ದು ಎದ್ದೇ ಬಂದ, ಹವಾಲದಾರ.

ಧಪ್………ಧಮ್……. …ಧಫ್………. ಧಫ್………

“ಆಯ್ಯೋ …ಸತ್ತೆ ….ಸತ್ತೆ!….ಸತ್ತೆ….”

ಕಿಟ್ಟುವಿನ ವಿದ್ಯೆ, ಅಭ್ಯಾಸ, ಕಾರ್ಯಕುಶಲತೆಗಳಲ್ಲಾವುದೂ ಆತನ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಸಹಾಯಕವಾಗಲಿಲ್ಲ!

ಕಿಟ್ಟು ಜೈಲಿನಲ್ಲಿ ನರಳುವಾಗ- ತಾಯಿ ಮನೆಯಲ್ಲಿ `ಚಳಿ! ಚಳಿ!’ ಎಂದು ನಡುಗಿ ಜೀವಬಿಡುತ್ತಿರುವಾಗ- ಶಾಂತೆ ‘ನಿನ್ನೆಯಿಂದಲೂ ಗಂಡ ಮನೆಗೆ ಯಾಕ ಬರಲಿಲ್ಲ’ ಎಂದು ಚಿಂತಿಸುತ್ತಿರುವಾಗ `ಒಳ್ಳೆದಾಯ್ತವನಿಗೆ! ಎಷ್ಟು ಸಾರೆ ಹೀ೦ಗ ಕಳವು ಮಾಡಿದ್ದನೊ! ಕಲಿತವನಂತೆ! ಕಲಿತ ಕಳ್ಳನಲ್ಲವೆ?’ ಎಂದು ಜನರು ಆಡಿ ಕೊಳ್ಳುತ್ತಿದ್ದರು.
*****

Tagged:

Leave a Reply

Your email address will not be published. Required fields are marked *

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...