ಬಂದವರು ಬಂದಿರಲಿ ಹೋದವರು ಹೋಗಿರಲಿ
ನಿನ್ನ ಜತೆ ನಾನಿರಲು ಸಾಲದೇನು?
ಅವರಿವರು ಹಾಗಿರಲಿ ಈ ದಾರಿ ನಿನಗಿರಲಿ
ನೂರಾರು ಸಂಕಷ್ಟ ಬಂದರೇನು.
ತೇಲು ನೋಟದ ಜನರ ಅಣಕು ನುಡಿಗಳ ಕೇಳಿ
ಎದೆನೊಂದು ಬಗೆಗೆಡುವ ಮನವು ಬೇಡ;
ನಿನ್ನ ಹೆಗ್ಗುರಿ ದಾರಿ ಬಹುದೂರ ಹರಿದಿಹುದು
ಮುತ್ತಿನಂತಹ ಮಾತು ತಿಳಿದು ನೋಡ.
ಜೀವನದ ಕಠಿಣತೆಯ ಕಂಡುಂಡು ಅನುಭವಿಸಿ
ಕರ್ತವ್ಯ ಪಾಲನೆಗೆ ಮುಂದೆ ನುಗ್ಗು;
ಅನುಭವದ ಆಳದಲಿ ನೂರ್ಕೋಟಿ ರತ್ನಗಳ
ಬೆಳಕು ಝಗಝಗಿಸಿರಲು-ಎಂಥ ಹಿಗ್ಗು.
ಹಿರಿದಾದುದರ ಕಡೆಗೆ ಹರಿದೋಡಿ ಹೋಗುವದು
ನಿನ್ನ ಬಾಳಿನ ನಿತ್ಯ ಮಂತ್ರವಿರಲಿ!
ಜೀವನದಗಾಧತೆಯ ಅರಿವಿನಾಳದ ತಳಕೆ
ಮುಳುಗಿ ಏಳುವ ತನಕ ತಶಾಳ್ಮೆಯಿರಲಿ!
*****

















