ಬಾಳೊಂದು ಕನಸಿನ ಲೋಕ

ಬಾಳೊಂದು ಕನಸಿನ ಲೋಕ

ಚಿತ್ರ: ಎಂ ಜೆ ಜಿನ್
ಚಿತ್ರ: ಎಂ ಜೆ ಜಿನ್

ಬಸ್ಸು ಹೊರಡುವ ಸಮಯವಾಯ್ತು. ಜೇಬಿನೊಳಗೆ ಎರಡೂ ಕೈಗಳನ್ನು ಇಳಿಬಿಟ್ಟು ನಿಂತಿದ್ದ ಶಂಕರನನ್ನೇ ಕಿಟಕಿಯಿಂದ ದಿಟ್ಟಿಸಿದಳು ಸುಮಿತ್ರಾ. ಆ ನಿರ್ಭಾವದ ಮುಖದಲ್ಲಿ ಯಾವ ವೇದನೆಯ ಎಳೆಯನ್ನು ಅವಳಿಂದ ಹುಡುಕಲಾಗಲಿಲ್ಲ. ಮರುಕ್ಷಣವೇ ಮನಸ್ಸು ನಿರಾಶೆಗೊಂಡಿತು. ಅವಳಿಗರಿವಿಲ್ಲದೇ ಕಣ್ತುಂಬಿಕೊಂಡಿತು. ತನ್ನ ಕಣ್ಣೀರು ಅವನಿಗೆ ಕಾಣಿಸಬಾರದೆಂದೇ ಪಕ್ಕಕ್ಕೆ ತಿರುಗಿಕೊಂಡಳು.

ಮಕ್ಕಳಿಬ್ಬರೂ ಪ್ರಯಾಣದ ಹುರುಪಿನಲ್ಲಿದ್ದರು. ಆ ಮುಗ್ಧ ಮನಗಳಿಗೆ ಯಾವ ಚಿಂತೆಯ ಲೇಪವಿಲ್ಲದೆ ಉತ್ಸಾಹದ ಬುಗ್ಗೆಗಳಾಗಿದ್ದವು. ಅಪ್ಪಾ ತಮ್ಮ ಜೊತೆ ಬರುತ್ತಿಲ್ಲ ಎಂಬ ಭಾವನೆಗಳೇ ಮಕ್ಕಳನ್ನು ಕಾಡುತ್ತಿರಲಿಲ್ಲ. ಬಾಯಿ ಮಾತಿಗಾದರೂ ಮಕ್ಕಳು ಅಪ್ಪಾ ನೀನು ಬಾ, ನಮ್ಮ ಜೊತೆ ಎಂದು ಕರೆದಿರಲಿಲ್ಲ. ಅಂತಹ ವಾತ್ಸಲ್ಯದ ಕೊಂಡಿ ಬೆಸದಿದ್ದರಲಿಲ್ಲವೇ?

ಬಸ್ಸು ಹೊರಟಿತು. “ಸುಮಿ ಹೋದ ಕೂಡಲೇ ಫೋನ್‌ಮಾಡು” ಎಂದು ಕೈಬೀಸಿ ಬೀಳ್ಕೊಟ್ಟ ಪತಿಯ ವರ್ತನೆ ಕಂಡು ಮನ ವ್ಯಗ್ರವಾಯಿತು.

ಎಂತಹ ಪತಿ ಈತ, ಅದೆಷ್ಟು ಧೈರ್ಯದಿಂದ ರಜೆಯಿಲ್ಲ ಎಂಬ ನೆಪವೊಡ್ಡಿ ಮಕ್ಕಳೊಂದಿಗೆ ತನ್ನೊಬ್ಬಳನ್ನೇ ಕಳುಹಿಸುತ್ತಿದ್ದಾರಲ್ಲ. ದೂರದ ಪ್ರಯಾಣ ಹೊಸ ಜಾಗ ಒಬ್ಬಳೇ ಹೇಗೆ ನಿಭಾಯಿಸುತ್ತಾಳೆಂಬ ಆತಂಕ ಕೊಂಚವಾದರೂ ಇಲ್ಲದವರಂತೆ ಕೈಬೀಸಿ ಬೀಳ್ಕೊಡುತ್ತಿದ್ದಾರೆ. ತಮ್ಮ ಅಸಮಾಧಾನವನ್ನು‌ ಈ ರೀತಿ ವ್ಯಕ್ತಪಡಿಸುತ್ತಿದ್ದಾರೆ. ಇರಲಿ, ಅದೆಷ್ಟು ದಿನ ಈ ಮಾತು. ಧೈರ್ಯ ಮಾಡಿ ಹೊರಟಿದ್ದೇನೆ. ದೇವರಿಟ್ಟಂತೆ ಆಗಲಿ, ತಾನಾದರೂ ಎಷ್ಟು ಅಂತಾ ತಗ್ಗುವುದು? ಅವರಾಗಿಯೇ ಅರ್ಥಮಾಡಿಕೊಳ್ಳಬಹುದಿತ್ತು. ಅರ್ಥಮಾಡಿಕೊಳ್ಳದಿದ್ದಲ್ಲಿ ನಾನಾದರೂ ಅರ್ಥ ಮಾಡಿಸಬಾರದೆ? ತಾನೇನು ಕಲ್ಲೆ?  ಮನಸ್ಸು, ಹೃದಯ, ಆಸೆ ನೋವುಗಳಿಲ್ಲದ ಬೊಂಬೆಯೆ? ತನ್ನ ಬದುಕೆಲ್ಲ ಅವರಾಸೆಗಳಂತೆಯೇ ನಡೆದುಹೋಗಬೇಕೆ? ಅವರಿಗೆ ಬೇಸರವಾಗಬಾರದೆಂದು, ತನಗೆ
ಬೇಸರವಾದರೂ ಚಿಂತೆಯಿಲ್ಲ ಎಂದಲ್ಲವೇ ತನ್ನೆಲ್ಲ ಅಸೆಗಳನ್ನು ಎದೆಯೊಳಗೆ ಬಚ್ಚಿಟ್ಟುಕೊಂಡಿದ್ದು, ಇಂದಲ್ಲ ನಾಳೆ ತನ್ನೆಲ್ಲ ಭಾವನೆಗಳಿಗೆ ಸ್ಪಂದಿಸಿ, ತನ್ನಾಸೆಗಳಿಗೆ ನೀರೆರೆಯುವರೇನೋ ಎಂಬ ನಿರೀಕ್ಷೆಯಲ್ಲಿ ಕಾದದ್ದೇ ಬಂತು. ಅವರೊಂದು ಕಲ್ಲು. ನನ್ನ ಪಾಲಿಗೆ ಮಾತ್ರ ಸ್ಪಂದನವಿಲ್ಲದ ಶಿಲೆ.

“ಅಮ್ಮ, ನೀರು ಕೊಡಮ್ಮ” ಮಗಳ ಮಾತಿಗೆ ಎಚ್ಚೆತ್ತ ಸುಮಿತ್ರ ಮಗಳಿಗೆ ಬ್ಯಾಗಿನಲ್ಲಿದ್ದ ನೀರಿನ ಬಾಟಲನ್ನು ಹೊರತೆಗೆದು ಕೊಟ್ಟಳು.

“ಅಮ್ಮಾ, ಅಪ್ಪಾ ಯಾಕೆ ನಮ್ ಜೊತೆ ಬರಲಿಲ್ಲ” ಮಗನ ಪ್ರಶ್ನೆಗೆ ಉತ್ತರಿಸಲು ಪದಗಳಿಗಾಗಿ ಹುಡುಕಾಡಿದಳು.

“ಅಪ್ಪನಿಗೆ ತುಂಬಾ ಕೆಲ್ಸ ಇದೆ. ರಜೆ ಕೊಡಲಿಲ್ಲವಂತೆ ಕಣೋ ಮನು” ಕಷ್ಟಪಟ್ಟು ಉತ್ತರಿಸಿದಳು.

ಅಷ್ಟರಲ್ಲಿ ಬಸ್ಸು ನಿಂತಿದ್ದರಿಂದ ಮಗನ ಗಮನ ಬೇರತ್ತ ಹರಿದು ಐಸ್ಕ್ರೀಂಗಾಗಿ ಪೀಡಿಸಿದ. ಮಕ್ಕಳಿಬ್ಬರಿಗೂ ಐಸ್ಕ್ರೀಂ ಕೊಡಿಸಿ, ತಾನು ಒಂದಷ್ಟು ನೀರು ಕುಡಿದು ಬಾಯಾರಿಕೆ ಇಂಗಿಸಿಕೊಂಡಳು.

ಬಸ್ಸು ಮತ್ತೆ ಹೊರಟ ಕೂಡಲೇ ಮನಸ್ಸು ಹಿಂದಕ್ಕೆ ಓಡಿತು. ತನ್ನ ವರ್ಗಾವಣೆ ಆರ್ಡರನ್ನು ನೋಡಿದ ಕೂಡಲೇ ಬದಲಾದ ಶಂಕರನ ವರ್ತನೆಯನ್ನು ಮನ ವಿಮರ್ಶಿಸಿತು. ಅಬ್ಬಾ ಶಂಕರ ಅದೆಂತಹ ಸ್ವಾರ್ಥಿ, ಕೊರಳಿಗೆ ತಾಳಿ ಕಟ್ಟಿದ ಕೂಡಲೇ ತನ್ನ ಮೇಲಷ್ಟೇ ಅಲ್ಲದೇ ತಾನು ಸಂಪಾದಿಸುವ ಹಣದ ಮೇಲೂ ತನ್ನ ಹಕ್ಕನ್ನು ಸ್ಥಾಪಿಸಿ ಬಿಟ್ಟಿದ್ದ.

ಸಾಧಾರಣ ರೂಪಿನವಳಾದ ತನ್ನನ್ನು ಶಂಕರ ಒಪ್ಪಿರುವುದನ್ನು ತಿಳಿದು ಹಿಗ್ಗಿದ್ದೆ. ಆದರೆ ತನ್ನ ಹಿಡಿಯಲು ಮುಂದಾಗಿದ್ದ ಕಾರಣ ತಾನು ಕೈತುಂಬಾ ಸಂಪಾದಿಸುತ್ತಿದ್ದ ಹಣ ಎಂದು ತಿಳಿಯುವ ಹೊತ್ತಿಗೆ ಮಗ ಹೊಟ್ಟೆಯಲ್ಲಿ ಬೆಳೆಯುತ್ತಿದ್ದ. ಹತ್ತು ವರ್ಷ, ಹೌದು ಹತ್ತು ವರ್ಷಗಳ ಕಾಲ ತನ್ನೆಲ್ಲ ದುಡಿಮೆಯನ್ನು ಪತಿಗಾಗಿ, ಪತಿಯ ಕಡೆಯವರಿಗಾಗಿ ವೆಚ್ಚ ಮಾಡಿದೆ.

ಗಂಡನೆಂಬ ವ್ಯಾಮೋಹವೋ, ಸಂಸಾರದಲ್ಲಿ ಸಿಲುಕಿದ್ದ ಬಂಧನವೋ ಮಕ್ಕಳ ಮೇಲಿನ ವಾತ್ಸಲ್ಯವೋ ಅಂತೂ ಅವರ ಜವಾಬ್ದಾರಿಗಳನ್ನೆಲ್ಲ ನಾನೂ ಹೊತ್ತು ಹಿರಿಯ ಸೊಸೆಯಾಗಿ ಕರ್ತವ್ಯಕ್ಕೆ ಓಗೊಟ್ಟೆ.

ಬೇಜವಾಬ್ದಾರಿ ಮಾವ, ದುಂದುವೆಚ್ಚ ಮಾಡುವ ಅತ್ತೆ, ಅತ್ಯಾಸೆಯ ನಾದಿನಿಯರು, ಅಷ್ಟೆಲ್ಲ ಕಷ್ಟಪಟ್ಟು ಓದಿಸಿದರೂ, ಒಳ್ಳೆಯ ಕೆಲಸ ಸಿಕ್ಕಿಲ್ಲವೆಂಬ ಕಾರಣವೊಡ್ಡಿ ತಮ್ಮೆಲ್ಲ ಖರ್ಚಿಗೂ ಕೈ ಒಡ್ಡುವ ಮೈದುನಂದಿರು ಇವರ ನಡುವೆ ನಾನು ಕಳದು ಹೋಗಿಯೇ ಬಿಟ್ಟಿದ್ದೆ. ಕೈ ತುಂಬಾ ಸಂಪಾದಿಸುತ್ತಿದ್ದರೂ ನನಗಾಗಿ ಖರ್ಚು ಮಾಡಿಕೊಳ್ಳಲಾಗಲಿ, ಕೈ ಎತ್ತಿ ಒಂದು ರೂಪಾಯಿ ಕೊಡಲೂ ಸ್ವತಂತ್ರಳಲ್ಲದ ತನ್ನ ಬಗ್ಗೆಯೇ ಹೀನಾಯವೆನಿಸಿ ಜಿಗುಪ್ಸೆ ಮೂಡುತ್ತಿತ್ತು. ತೌರಿನವರ ಯಾವ ಕಷ್ಟಕ್ಕೂ ಸ್ಪಂದಿಸಲಾರದಷ್ಟು ನಿಸ್ಸಹಾಯಕತೆ ರೋಷವುಕ್ಕಿಸಿದರೂ ಸಂಸಾರದ ಸಾಮರಸ್ಯಕ್ಕಾಗಿ ಅದುಮಿಡುತ್ತಿದ್ದೆ.

ಗಂಡನ ಒಳ್ಳೇತನವನ್ನು ಅತಿ ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದ ಅತ್ತೆ ತನ್ನೆಲ್ಲ ಮಕ್ಕಳ ಕಷ್ಟಸುಖಗಳಿಗೆ ತಮ್ಮಿಬ್ಬರನ್ನೇ ಹೊಣೆಯೊಗಿಸುತ್ತಿದ್ದುದು ಇರಿಸುಮುರಿಸಾಗುತ್ತಿದ್ದರೂ ಸೈರಿಸಿಕೊಂಡಿದ್ದೆ. ನನ್ನ ಸಹನೆಗೂ ಒಂದು ಮಿತಿ ಇತ್ತಲ್ಲವೆ? ಇರುವ ಇಬ್ಬರೇ ಕರುಳ ಕುಡಿಗಳಿಗೆ ಒಳ್ಳೆಯ ಭವಿಷ್ಯ ಬೇಡವೇ? ಹತ್ತರಲ್ಲಿ ಹನ್ನೊಂದಂತಾಗುವುದಾದರೆ ತಾನೇಕೆ ಒಳಗೂ ಹೊರಗೂ ದುಡಿಯಬೇಕು. ಸಹನೆಯ ಕಟ್ಟೆಯೊಡೆದು ತಿರುಗಿಬಿದ್ದಿದ್ದೆ.

ಸಾಲ ಸೋಲ ಮಾಡಿ ಲಕ್ಷಾಂತರ ಸುರಿದು ಮದುವೆ ಮಾಡಿ ಕಳುಹಿಸಿದ್ದರೂ, ಅವರು ಹೆತ್ತ ಮಕ್ಕಳಿಗೂ ನಾವೇ ಜವಾಬ್ದಾರಿ ವಹಿಸುವಂತಾದರೆ ಕೆರಳದಿರುವುದೇ?
ಒಳ್ಳೆಯ ಶಾಲೆಗಳಿಲ್ಲವೆಂಬ ನೆಪವೊಡ್ಡಿ ನಾದಿನಿಯರು ತಮ್ಮ ಮಕ್ಕಳನ್ನೆಲ್ಲ ಇಲ್ಲಿಯೇ ಬಿಟ್ಟು ಆ ಮಕ್ಕಳ ಊಟ, ತಿಂಡಿ, ಬರೆ, ಫೀಸು ಹೀಗೆ ಸಮಸ್ತವೂ ತಲೆ ಮೇಲೇರಿದಾಗಲೂ ಸುಮ್ನಿದ್ದೆ. ಆದರೆ ಆ ಮಕ್ಕಳಿಗಾಗಿ ತನ್ನ ಮಕ್ಕಳು ಹೆಂಡತಿಯನ್ನು ಕಡೆಗಣಿಸುವಂತಾದರೆ ತಾನ್ಹೇಗೆ ಸೈರಿಸುವುದು. ಎಲ್ಲದಕ್ಕೂ ತಮ್ಮನ್ನೇ ಆಶ್ರಯಿಸುವಂತೆ ಮಾಡಿದ್ದು ಅಲ್ಲದೇ ಬಂದಾಗಲೆಲ್ಲ ತಮಗಿಷ್ಪ ಬಂದದ್ದನ್ನು ಹೊತ್ತುಕೊಂಡು ಹೋಗುವ ನಾದಿನಿಯರ ಸ್ವಾರ್ಥ, ಸಮಯಸಾಧಕತನ ಪತಿಗೆಲ್ಲಿ ಅರ್ಥವಾಗಬೇಕು? ತಮ್ಮವರ ಮೇಲಿನ ಅತಿ ಪ್ರೀತಿ ತನ್ನ ಹೆತ್ತಮಕ್ಕಳ ಮೇಲಿನ ಮಮಕಾರವನ್ನು ಮರೆಸುತ್ತಿರುವುದು ಕಂಡ ಮೇಲಾದರೂ ನಾ ಎಚ್ಚೆತ್ತುಕೊಳ್ಳದಿದ್ದರೆ ಹೇಗೆ? ತಾನು ಅಷ್ಟು ದುಡಿಯುತ್ತಿದ್ದರೂ ಮಕ್ಕಳ ಸಣ್ಣ ಆಸೆಗಳಿಗೂ ಸ್ಪಂದಿಸುವಂತಿಲ್ಲ. ಏನೇ ತಂದರೂ ಎಲ್ಲಾ ಮಕ್ಕಳಿಗೂ
ತರಬೇಕು. ಎಲ್ಲಿಗೇ ಹೋದರೂ ಹಿಂಡನ್ನೆಲ್ಲ ಕರೆದೊಯ್ಯಬೇಕು. ಅಬ್ಬಾ ಸಾಕಾಗಿ ಹೋಯಿತು.

ಮಕ್ಕಳನ್ನು ಒಳ್ಳೆಯ ಶಾಲೆಗೆ ಹಾಕಬೇಕೆಂದು ತಾನು ಆಸೆಪಟ್ಟಾಗಲೇ ಮನೆಯಲ್ಲಿ ದೊಡ್ಡ ಯುದ್ಧ ಶುರುವಾಗಿತ್ತು. ಅಷ್ಟೊಂದು ಡೊನೇಷನ್ ಕೊಟ್ಟೇಕೆ ಸೇರಿಸಬೇಕು?
ಎಂಬುದು ಅತ್ತೆಯ ನಿರ್ಧಾರವಾದರೆ, ಈ ಮಕ್ಕಳನ್ನು ಮಾತ್ರ ಅಲ್ಲಿಗೆ ಸೇರಿಸಿದರೆ ತಮ್ಮ ಮಕ್ಕಳಿಗೆ ಭೇದ ಮಾಡುತ್ತಿದ್ದಾನೆ ಎಂದು ತಂಗಿಯರು ನೊಂದುಕೊಳ್ಳುತ್ತಾರೆ. ಸಾಮಾನ್ಯ ಶಾಲೆಯಲ್ಲಿಯೇ ಓದಲಿ, ಅಷ್ಟೊಂದು ಖರ್ಚು ಮಾಡಲು ಸಾಧ್ಯವಿಲ್ಲ ಎಂದು ಶಂಕರ್ ತನ್ನ ಆಸೆಗೆ ಮಣ್ಣೆರೆಚಿದಾಗಲೇ ಮನಸ್ಸು ನಿರ್ಧಾರವೊಂದನ್ನು ಕೈಗೊಂಡಿತು. ಪ್ರತಿ ಹಂತದಲ್ಲಿಯೂ ತನ್ನನ್ನು ಪ್ರತಿಬಂಧಿಸುವ ಅವರ ವಿರುದ್ಧ ಮನ ರೊಚ್ಚಿಗೆದ್ದಿತ್ತು. ಉಪಾಯವಾಗಿ ಈ ಬೇಡಿಗಳಿಂದ ಕಳಚಿಕೊಳ್ಳುವುದು ಹೇಗೆ ಎಂದು ಚಿಂತಿಸಿದೆ. ನಾದಿನಿಯರಿಗೆ ಮದುವೆ ಮಾಡಿ ಕೊಟ್ಟಾಗಿತ್ತು. ಒಳ್ಳೆಯ ಸ್ಥಿತಿವಂತರ ಮನೆಗೆ ಸೇರಿಸಿ
ಅಗಿತ್ತು. ಮೈದುನಂದರಿಗೂ ಚೆನ್ನಾಗಿ ಓದಿಸಿ ಆಗಿತ್ತು. ಇನ್ನೇನಿದೆ ಜವಾಬ್ದಾರಿ? ನಾನು ಹೀಗೆಯೇ ಮೂಕ ಬಸವಣ್ಣನಂತಿದ್ದರೆ ನಾದಿನಿಯರ ಮಕ್ಕಳ ಓದಿನ ಮದುವೆಯ ಜವಾಬ್ದಾರಿಯೂ ತನ್ನ ಹೆಗಲೇರುವುದರಲ್ಲಿ ಸಂದೇಹವಿಲ್ಲ. ಅಣ್ಣ, ಅತ್ತಿಗೆ ದುಡಿಯುತ್ತಿದ್ದಾರೆ ಎಂಬ ಭಾವನೆಯಲ್ಲಿ ಮೈದುನರು ಸ್ವಂತ ದುಡಿಮೆಯ
ಆಲೋಚನೆಯನ್ನೇ ಕೈ ಬಿಟ್ಟಿದ್ದಾರೆ. ನಾಳೆ ಇವರಿಗೂ ಮದುವೆ ಮಾಡಿ ಇವರ ಸಂಸಾರವನ್ನು ತಲೆ ಮೇಲೆ ಹೊರಬೇಕಾದೀತು. ಇವರಂತೂ ಸಂತೋಷವಾಗಿಯೇ
ಹೊರುತ್ತಾರೆ. ತಾನೀಗ ಏನು ಮಾಡಲಿ? ಎಂದು ಚಿಂತಿಸಿ ಚಿಂತಿಸಿ ಕೊನೆಗೊಂದು ನಿರ್ಧಾರ ಮಾಡಿಯಾಯಿತು.

ಯಾರಿಗೂ ತಿಳಿಯದಂತೆ ವರ್ಗಕ್ಕಾಗಿ ಪ್ರಯತ್ನಿಸಿ, ದೂರದೂರಿಗೆ ವರ್ಗವಾದಾಗ ನೆಮ್ಮದಿ ಎನಿಸಿತ್ತು.

ಆದರೆ ಶಂಕರ್ “ಸುಮಿ, ವರ್ಗನ ಕ್ಯಾನ್ಸಲ್ ಮಾಡಿಸ್ತೀನಿ. ಶಾಲಿನಿ ಬೇರೆ ಹೆರಿಗೆಗಾಗಿ ಬತಾ ಇದ್ದಾಳೆ. ನೀನಿಲ್ಲದೇ ಹೋದ್ರೆ ಅಮ್ಮಂಗೆ ಒಬ್ಳಿಗೆ ಕಷ್ಟವಾಗುತ್ತೆ” ಎಂದಾಗ ಮೈ ಉರಿದು ಹೋಗಿತ್ತು. ತಾಳ್ಮೆ ಕಳೆದುಕೊಳ್ಳದೇ “ರೀ, ಶಾಲಿನಿ ಭಾಣಂತನ ಅತ್ತೆ ಮಾಡ್ತಾರೆ. ಆಗಲ್ಲ ಅಂದ್ರೆ ಅವಳ ಗಂಡನ ಮನೆಯಲ್ಲಿಯೆ ಮಾಡಲಿ ಬಿಡಿ. ಮೊದಲನೆಯದು ನಾವು ಮಾಡಿ ಆಯ್ತಲ್ಲ. ಈಗ ವರ್ಗ ಕ್ಯಾನ್ಸಲ್ ಮಾಡಿಕೊಳ್ಳಲ್ಲ. ನೀವೂ ಅಲ್ಲಿಗೆ ವರ್ಗ ಮಾಡಿಸಿ ಕೊಂಡು ಬಿಡಿ. ತಿಂಗಳಿಗಿಷ್ಟು ಅಂತ ಹಣ ಕಳಿಸೋಣ. ನಿಮ್ಮ ತಮ್ಮಂದಿರಿಗೂ ಜವಾಬ್ದಾರಿ ಬರಲಿ. ಇನ್ನಾದರೂ ಅವರ ಕಾಲ ಮೇಲೆ ಅವರು ನಿಂತುಕೊಳ್ಳಲಿ” ಎಂದಿದ್ದಕ್ಕೆ ಹಾರಾಡಿ ಕೂಗಾಡಿದ್ದರು. ತನ್ನವರ ಮೇಲಿನ ಹುಚ್ಚು ಪ್ರೇಮದಿಂದ ಕುರುಡಾಗಿರೋ ಪತಿಗೆ ತನ್ನ ಮಾತು ಪಥ್ಯವೆನಿಸಿತೆ? ತನ್ನ ಹೆಂಡತಿ ತನ್ನ
ಮಕ್ಕಳು ಎಂಬ ಪ್ರೀತಿಯೇ ಇಲ್ಲದ ಈ ವ್ಯಕ್ತಿಯೊಂದಿಗೆ ಬಾಳುವುದ್ಹೇಗೆ? ಮನಸ್ಸು ಮತ್ತಷ್ಟು ದೃಢವಾಯಿತು. ಮಕ್ಕಳೊಂದಿಗೆ ಹೊಸ ಸಂಸಾರ ಹೂಡಲು ದೃಢವಾಗಿ ನಿಂತೆ.

ತನ್ನದೇ ದುಡಿಮೆ, ತನಗಿಷ್ಟು ಬಂದಂತೆ ವೆಚ್ಚ ಮಾಡಿ ಸ್ವತಂತ್ರವಾಗಿ ಬದುಕುವ ಬದುಕು ಇದೀಗಷ್ಟೇ ದೊರೆಯುತ್ತಿದೆ ಎಂದು ನೆನಪಾದೊಡನೆ ಮನ ಹರ್ಷ ತಾಳಿತು. ಮಕ್ಕಳಿಬ್ಬರಿಗೂ ಒಳ್ಳೆಯ ಶಿಕ್ಷಣ ಕೊಡಿಸಬೇಕು. ಮನೆಗೆ ಬೇಕಾದುದೆಲ್ಲವನ್ನೂ ಒಂದೊಂದಾಗಿ ಕೊಳ್ಳಬೇಕು, ಮದುವೆಯಾದಾಗಿನಿಂದಲೂ ಕತ್ತಿನಲ್ಲಿರುವ ಕರಿಮಣಿ ಸರ ಬಿಟ್ಟರೆ ಬೇರೇನೂ ಕೊಳ್ಳಲಾಗಲಿಲ್ಲ. ಒಂದಿಷ್ಟು ಒಡವೆ ಮಾಡಿಸಬೇಕು ಎಂದೆಲ್ಲ ಕನಸಿನ ಗೋಪುರ ಕಟ್ಟುತ್ತಿರುವಾಗಲೇ ಪತಿಯ ನುಡಿ ನೆನಪಾಯಿತು.

“ಸುಮಿ, ನಿಂಗೆ ಎಷ್ಟು ಅವಶ್ಯಕವೊ ಅಷ್ಟು ಇಟ್ಟುಕೊಂಡು ಉಳಿವ ಸಂಬಳವನ್ನು ಇಲ್ಲಿಗೆ ಕಳುಹಿಸು” ಅಧಿಕಾರದ ನುಡಿ ಕಂಗೆಡಿಸಿದರೂ ಹೋಗುವ ಮುನ್ನ ಪರಿಸ್ಥಿತಿ ವಿಕೋಪಕ್ಕೆ ಹೋಗುವುದು ಬೇಡವೆಂದು ತಲೆಯಾಡಿಸಿದ್ದೆ. ತಾನೀಗ ಧೈರ್ಯ ತಾಳಬೇಕು. ಶಂಕಗೆ ನೋವಾದರೂ ಚಿಂತೆ ಇಲ್ಲ, ತನ್ನಿಂದ ಹಣ ಕೊಡಲು ಸಾಧ್ಯವಿಲ್ಲವೆಂದು ತಿಳಿಸಿ ಬಿಡಬೇಕು ಎಂದು ಗಟ್ಟಿ ನಿರ್ಧಾರ ಮಾಡಿಕೊಂಡಳು ಮನದಲ್ಲಿ. ಮರುಕ್ಷಣವೇ ಶಂಕರ್ ಆ ಕಾರಣಕ್ಕಾಗಿಯೇ ತೊರೆದು ಬಿಟ್ಟರೆ? ಭಯವಾಯಿತು. ಶಂಕರ್‌ನನ್ನು ಬಿಟ್ಟು ಬಾಳಲು ತನ್ನಿಂದ ಸಾಧ್ಯವೆ?

ತನ್ನ ಅಂತರಂಗದ ಅರಿವಾದಂತೆ ಮಗಳು “ಅಮ್ಮ, ಅಪ್ಪ ಯಾವಾಗ ಬರ್ತಾರಮ್ಮ” ಕೇಳಿದಾಗ ನಿಟ್ಟುಸಿರುಬಿಟ್ಟು.

“ಬತಾರೆ ಪುಟ್ಟಿ, ನಿನ್ನನ್ನು ಬಿಟ್ಟಿರೋದು ಅಪ್ಪಂಗೆ ಕಷ್ಟ ಅನ್ನಿಸಿದ ಕೂಡಲೇ ಓಡೋಡಿ ಬತ್ತಾರೆ, ವರ್ಗ ಮಾಡಿಸಿಕೊಂಡು, ನಂಜೊತೇಲಿ ಇರ್ತಾರೆ” ಬಿಸಿಲ್ಗುದುರೆಯ ಬೆನ್ನೇರಿ ಉತ್ತರಿಸಿದಳು ಸುಮಿತ್ರ. ಶಂಕರ್ ಇಂದಲ್ಲ ನಾಳೆ ತನ್ನವರ ಸೆಳೆತದಿಂದ ಹೊರಬಂದು ತನ್ನ ಸಂಸಾರಕ್ಕೆ ಹಿಂತಿರುಗುವನೆಂಬ ನಿರೀಕ್ಷೆ ಅವಳಲ್ಲಿನ್ನೂ ಬತ್ತಿಲ್ಲ.
*****
ಪುಸ್ತಕ: ದರ್ಪಣ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಡಂಗುರ – ೧೦೮
Next post ವೇಶ್ಯೆ

ಸಣ್ಣ ಕತೆ