Home / ಕಥೆ / ಸಣ್ಣ ಕಥೆ / ಕುಸಿದ ಬದುಕಿನ ಸುತ್ತ

ಕುಸಿದ ಬದುಕಿನ ಸುತ್ತ

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹೆಂಡತಿ ಬೊಮ್ಮಿ ಕೊಟ್ಟಿಗೆಯಲ್ಲಿ ಇದ್ದ ಒಂದೇ ಎಮ್ಮೆಯ ಹಾಲು ಕರೆಯುತ್ತಿದ್ದಳೆಂದು ಅವಳ ಕೈಬಳೆ ಸದ್ದಿಗೆ ಗ್ರಹಿಸಿದ ಹೊಲಿಯಪ್ಪ ಎದ್ದು ನೆಂದ ಕಂಬಳಿಯ ಒಣಹಾಕಲು ಹೋದ. ಹೋಗುತ್ತಿದವನ ನೋಡಿ ಹದಿನಾರರ ಪೋರ ಮಗ ರಾಕು ಹಿಂದಿನಿಂದ ನೋಡಿ, ಅಪ್ಪಾ ಉಚ್ಚೆ ಮಾಟ್ಕಂಡಿಯಾ? ನೋಡು ಎಂದು ತನ್ನ ತಂಗಿ ನಾಗೇಂದ್ರಿಗೆ ಹೇಳುತ್ತಿರುವುದು ಕಿವಿಗೆ ಬೀಳುತ್ತಲೂ, ಅರ್ಧ ನಶೆ ಇಳಿದ ಕಾರಣ ಸುಮ್ಮನೇ ಕೇಳದವನಂತೆ ಹಾಗೇ ಹೋಗಿ ಮನೆ ಪಕ್ಕೆಗೆ ಕಟ್ಟಿದ ತಂತಿಗೆ ಕಂಬಳಿಯ ನೇತುಹಾಕಿದ. ಆತ ಆಗಾಗ ಹೀಗೆ ಉಚ್ಚೆ ಹೊಯ್ದುಕೊಳ್ಳುವುದು ಸರ್ವೆಸಾಮಾನ್ಯವಾಗಿತ್ತು. ಉಣ್ಣದೇ ಬರಿ ಕಳ್ಳಭಟ್ಟಿ ಸರಾಯಿ ಕುಡಿದೇ ಮಲಗಿದ ದಿನಗಳಲ್ಲೆಲ್ಲಾ ಆತನ ಮುಂಡು ಒದ್ದೆಯಾಗುತ್ತಿತ್ತು.. ಆದರೆ ಇಂದಾತ ಉಚ್ಚೆ ಹೊಯ್ದುಕೊಂಡಿರಲಿಲ್ಲ. ಮಳ್ಳು ಹಿಡಿದಂತೆ ಹೊಯ್ಯುತ್ತಿರುವ ಮಳೆಯ ದಿನವಾದ್ದರಿಂದ ಮೂತ್ರ ಹೆಚ್ಚಾದರೂ ಇಂದು ಮೂತ್ರವೇ ಬಂದಿರದಿದ್ದದ್ದು ಅವನಿಗೆ ವಿಚಿತ್ರ ಎನ್ನಿಸಿತು. ಈಗ ಯಾಕೋ ಮೂತ್ರ ಬಂದಂತಾಗಿ ಗುಡಿಸಲ ಎಡಬದಿಗೆ ನಡೆದ. ಬೊರ್ರೆಂದು ಸುರಿವ ಮಳೆಗೆ ಮನೆಯ ಎಡಕ್ಕೆ ಕಣ್ಣಳತೆಯಲ್ಲಿ ಕಾಣುವ ಹಳ್ಳ ಭೀಕರವಾಗಿ ಸದ್ದು ಮಾಡುತ್ತಾ ಹರಿಯುತ್ತಿತ್ತು.

ಹೊರಗಿನ್ನು ಧಾರಾಕಾರ ಮಳೆ ಸುರಿದೇ ಇತ್ತು. ಉದ್ದಕ್ಕೂ ಹರಡಿದ ದಾಸ ನಾಯಕರ ತೋಟದಲ್ಲಿ ಹತ್ತಾರು ಅಡಿಕೆ ಮರಗಳು ಬುಡಕಚ್ಚಿದ್ದವು. ಅದರ ಪಕ್ಕವೇ ಇರುವ ಗದ್ದೆಗಳಲ್ಲಿ ನೀರು ತುಂಬಿ ಭತ್ತದ ಪೈರಿನ ಹಸಿರು ಕಾಣದಂತೆ ಬಿದ್ದು ಹೋಗಿದ್ದವು. ಗದ್ದೆಯ ಹಸಿರಿನ ನಡುವೆ ಹಾವಿನಂತೆ ಹಾಸಿಕೊಂಡಿರುತ್ತಿದ್ದ ಕಾಲುದಾರಿ ಕಣ್ಣಿಗೇ ಕಾಣುತ್ತಿರಲಿಲ್ಲ. ಎಲ್ಲೆಲ್ಲೂ ನೀರೇ ನೀರು. ತೋಟ ಗದ್ದೆಗಳನ್ನು ಕಣ್ಣಿಗೆ ಕಾಣುವಂತೆ ಇರಲಿ ಎಂದೋ ಏನೋ ದಾಸ ನಾಯಕರು ತುಸು ಎತ್ತರಲ್ಲಿ ಏರಿ ಮೇಲೆ ಮನೆ ಕಟ್ಟಿಕೊಂಡಿದ್ದರು.

ನಾಗೇಂದ್ರಿ ಇವತ್ತು ಬೇಗನೇ ಎದ್ದಿದ್ದಳು. ಅಣ್ಣ ತಂಗಿ ಹೊರ ತೆಣೆಯ ಮೇಲೆ ನಿಂತು ಮಳೆಯೊಂದಿಗೆ ಮಾತಾಡುತ್ತಿದ್ದರು. ರಾಕುವಿನ ಕಣ್ಣು ಆಗಾಗ ಏರಿ ಮನೆಯ ಕಡೆ ನೆಟ್ಟು ಏನನ್ನೋ ಅರಸುತ್ತಿತ್ತು. ಮಳೆ ಕಾಟಕ್ಕೆ ನಾಲ್ಕು ದಿನದಿಂದಲೂ ಶಾಲೆಗೆ ರಜೆ. ಹಾಗಾಗಿ ನಾಗೇಂದ್ರಿಗೆ ಸೋರುವ ಮನೆಯನ್ನು ಆಗಾಗ ಒರೆಸುತ್ತಾ, ಮಣ್ಣ ನೆಲದಲ್ಲಿ ನೀರು ಬೀಳುವ ಕಡೆಗೆಲ್ಲಾ ಪಾತ್ರೆಗಳನ್ನಿಟ್ಟು ಕಾಯುತ್ತ ಇರುವುದೇ ಆಗಿತ್ತು. ಕಳೆದೆರಡು ವಾರದಿಂದ ಮಳೆಯ ಆರ್ಭಟ ಹೆಚ್ಚಿದಂತೆಲ್ಲಾ ದಿನವೂ ಸೋರುವ ಮನೆಯಲ್ಲಿ ಅರ್ಧ ರಾತ್ರಿ ಜಾಗರಣೆಯೇ ಆಗಿರುತ್ತಿತ್ತು, ಆದರೆ ನಿನ್ನೆ ಹುಲ್ಲಿನ ಮನೆಯ ಮೇಲೆ ಅಣ್ಣ ರಾಕು ಪ್ಲಾಸ್ಟಿಕ್ಕು ಹೊದಿಸಿ ಬಂದಿದ್ದ. ನಿದ್ದೆ ಹತ್ತಿದ್ದು ತಿಳಿಯದಂತೆ ಗಡದ್ದಾಗಿ ಮಲಗಿದವಳಿಗೆ ಬೆಳಿಗ್ಗೆಯೇ ಎಚ್ಚರವಾಯ್ತು. ಪ್ಲಾಸ್ಟಿಕ್ಕು ಕೊಂಡು ತರಲು ಹಣ ಇಲ್ಲದೇ ಅಮ್ಮ ನಾಯಕರ ಮನೆಗೆ ಹೋಗಿ ದುಡ್ಡು ಬೇಡಿ ತಂದಿದ್ದಳು. ಅಲ್ಲಿ ನಾಗೇಂದ್ರಿಗೆ ಅಮ್ಮನ ದೀನತೆ ಕಣ್ಣಲ್ಲಿ ನೀರುಕ್ಕಿಸಿತ್ತು. ಒಡೆಯಾ ನೂರು ರೂಪಾಯಿ ಇದ್ರೆ ಕೊಡ್ರಾ. ಅಂಗಡಿಗೆ ಹೋಗಿ ಪ್ಲಾಸ್ಟಿಕ್ಕ್ ಸುಡ್ಲೂ ತಾಕಣಬತ್ತಿ. ಮನೆಯೆಲ್ಲಾ ಚೂರು ಬಿಡದೇ ಸೋರ್‍ತಿದು. ಏಡ ವರ್ಷ ಆತ್ರಾ ಮನೀ ಹುದಸಿ. ಆಗಿಂದು ಮುಳಿಹುಲ್ಲು ಎಲ್ಲಾ ಹಾಳಾಗಿ ಹೋಗಿದು. ನೀರೆಲ್ಲ ಒಳಗೇಯಾ ಹಾ. ಪಾಸ್ಟಿಕ್ಕು ಸುಡ್ಲೂ ಕತ್ತರ್‍ಸಿ ಮ್ಯಾನೆ ಹಾಕದ್ರೇ ನೀರು [ಸೋ]ಚೋರುದ ನಿಲ್ಲತಿತು. ಒಡೆಯಾ ಬೊಮ್ಮಿ ಮುಖ ಸಣ್ಣಗೇ ಮಾಡಿ ಆರ್‍ತವಾಗಿ ನುಡಿದಿದ್ದಳು.

ಈಗೀಗೇ ಮುಳಿಹುಲ್ಲು ಸಿಕ್ಕುದೇ ತಾರಾಸು ಒಡೆಯಾ. ಯಾರೂ ಈಗೀಗೇ ಬ್ಯಾಣ ಗೀಣ ಹಾಂಗ್ಹೇ ಬಿಡುಕಲ್ರು. ಗ್ಯಾರ ಗಿಡ, ಸಾಗವಾನಿ ಅದು ಇದೂ ಅಂತೆಯಾ. ಈ [ಸ]ಚಲಕ್ಕಾದ್ರೂ ಹೊದಿಸಬೇಕಾಗಿತ್ರ. ನಾನೋಬ್ಳೇ ಏನ ಮಾಡೆ ಸಾಯ್ಲೀ. ಇಂವ ದಿನ ಇಡೀ ಕುಂಡ್ಕಂಡೇ ಬಿದ್ಕಂತ್ಯಾ. ಇಂವನ ಕಟಕಂಡೇ ಕೆಟ್ಟಿ ನಾನು ದಾಸ ನಾಯಕರಿಗೆ ಬೊಮ್ಮಿಯ ಸ್ಥಿತಿ ನೋಡಿ ಯಾಕೋ ಕೆಟ್ಟದೆನ್ನಿಸಿತು. ಹೆಂಡತಿ ಒಳಗಿರುವುದ ಗಮನಿಸಿ, ತಟ್ಟನೆ ಕಿಸೆಯಿಂದ ನೂರು ಕೈಗಿತ್ತಿದ್ದರು. ಅದು ನಿನ್ನೆಯಷ್ಟೇ. ಕೈಗೆ ನೂರು ರೂಪಾಯಿ ಸಿಕ್ಕುತ್ತಲೇ ದಡಬಡಿಸಿ ಆಕೆ ಅಂಗಡಿಗೆ ಹೋಗಿ ಪ್ಲಾಸ್ಟಿಕ್ಕು ಕೊಂಡು ತಂದಿದ್ದಳು. ಎಸ್.ಎಸ್.ಎಲ್.ಸಿ. ಕಲಿಯುತ್ತಿದ್ದ ಅಣ್ಣ ರಾಕು ಸದೃಢ ದೇಹಿಯಾಗಿದ್ದ. ಪಾಪ ಅದು ಹೇಗೋ ಸಂಭಾಳಿಸಿಕೊಂಡು ಅಲ್ಲಾಡುವ ಮನೆಯ ಗಳ ಹಿಡಿದೇ ನಿಧಾನಕ್ಕೆ ಹತ್ತಿ ಸೋರುವ ಕಡೆಗೆಲ್ಲ ತನಗೆ ತಿಳಿದ ಮಟ್ಟಿಗೆ ಹೊದಿಸಿ ಬಂದಿದ್ದ. ಇವತ್ತು ಅಷ್ಟೇನೂ ಸೋರಿರದಿದ್ದರೂ ಅಪ್ಪ ಹೊಲಿಯಪ್ಪ ಮಲಗಿದ ಕಡೆಯೇ ಒಂದಿಷ್ಟು ಜಾಸ್ತಿ ಸೋರಿತ್ತು.

ರಾತ್ರಿಯೆಲ್ಲ ಮಳೆ ಜೋರಿದ್ದರೂ ಜೋಗುಳ ಹಾಡಿದಂತೆ ಆಗಿ ನಾಗೇಂದ್ರಿ ಬೆಚ್ಚಗೆ ಮಲಗಿದ್ದಳು. ಹೀಗಾಗಿ ಇಂದು ಬೇಗ ಏಳುವುದು ಸುಖವೆನಿಸಿತ್ತು ಆಕೆಗೆ. ತಂಗೀ …ತಂಗೀ. ಇತ್ಲಾಗೇ ಚೂರ್ ಬಾರೇ ಮಗಾ, ಕರು ದಾಂಬ ಹಿಡ್ಕಣುಕೆ. ಇದರ ಮನಿ ಕಾಯುವಾಗಾ.. ಇದು ಯಾನ್ಮನಿ ನಾಟ್ಕ ಮಾಡುದ ಕಲ್ತಿದು, ಹಾಲ ಕರುಕೇ [ಕರೆಯಲು]ಬಿಡುಕಲಾ. ತಾಯಿಯ ಧ್ವನಿ ಕೇಳಿದ ನಾಗೇಂದ್ರಿ ನೆಟ್ಟಗೆ ಕೊಟ್ಟಿಗೆ ಕಡೆ ಓಡಿದಳು.

ಹಾಲು ಕರೆಯುತ್ತಿದ್ದ ಬೊಮ್ಮಿ ಆತಂಕಗೊಂಡಿದ್ದಳು. ಮನೆಯೂ ಹಳ್ಳದ ಮಟ್ಟದಲ್ಲಿಯೇ ಇದೆ. ಹೀಗೇ ಮಳೆ ಸುರಿಯುತ್ತಿದ್ದರೇ ಮನೆ ಬಿಟ್ಟು ಹೋಗಬೇಕಾಗುವುದೇನೋ? ಒಮ್ಮೆ ಕೊಟ್ಟಿಗೆಯ ಮಾಡು ನೋಡಿದಳು. ಅದೂ ತಾಳೆ ಸೋಗಿನದು. ಅರ್ಧಮರ್ಧ ಸೋರುತ್ತಲೇ ಇರುವ ಕೊಟ್ಟಿಗೆಯಲ್ಲಿ ಇದ್ದ ಒಂದು ಎಮ್ಮೆ ಮತ್ತು ಕರುವನ್ನು ನೀರು ತಾಕದ ಕಡೆಯಲ್ಲಿ ಕಟ್ಟುತ್ತಿದ್ದಳು. ಆದರೆ ಇಂದವಳಿಗೆ ಧೈರ್ಯ ಸಾಲುತ್ತಿಲ್ಲ. ಹೀಗೆ ಹುಯ್ಯುವ ಮಳೆಯ ಕಾರುಬಾರು ನಂಬಲಾಗದು. ಇದ್ದ ಗೋಡೆ ಸಂಪೂರ್ಣ ಹಸಿಹಸಿಯಾಗಿ ಯಾವಾಗ ಕುಸಿದು ಬೀಳುವುದೋ ಅನ್ನೋ ಹಾಗಿದೆ. ಅಲ್ಲಿಯೇ ವಟಗುಡಲಾರಂಭಿಸಿದಳು.

ದಿನಾ ಹೊಟೆಲ್ಲಿಗೆ ಹಾಲು ಹಾಕುಕೆ ಹೋಗುಕೆ ಸಾಯ್ತ್ಯಾ ಇಂವ., ದುಡ್ಡು ಸಿಕ್ತಿದು ಅಂದ್ಕಂಡಿ. ಇಲ್ಲ ನೋಡದ್ರೇ ಒಂದಿನೇ ಕೊಟ್ಟಿಗೆ ಹೆಂಗೀದು. ಮೊಳಿ ಗೀಳಿಗೇ ಬಿದ್ದ ಹೋಗುದ. ದನಕರಾ ಸತ್ತಿವಾ ಬದ್ಕಿವಾ. ಅವ್ನಾ ಪಾಲಸ್ಕಾ ಬೇಕು, ಎನೂ ಎಂತದೂ ಇಲ್ಲ ಏನೂ ದರಖಾರೇ ಇಲ್ಲದ ಮನಷ್ಯಾ. ಯಾವ ಜನ್ಮಕ್ಕೆ ಚಿಕ್ಕದ್ನೋ ದ್ಯಾವ್ರೀಗೇ ಗುತ್ತು. ಗೋಡೆಯೆಲ್ಲ ಹಸಿಹಸಿಯಾ. ನಾಳಿಗೇ ಬಿದ್ದ ಹೋತೀದೇನಾ, ಕಾಣ್ತೀದು. ಏನ ಮಾಡುದೇನಾ. ನಾಗೇಂದ್ರಿ ಕರುನ ಇಲ್ಲಿ ಕಟ್ಟುದ ಬ್ಯಾಡೇ ಮಗಾ. ಮನೀಗೆ ಎಳ್ಕಂಡ ನಡಿ. ಎನ್ನುತ್ತಾ ಆಕೆ ಕೊಟ್ಟಿಗೆಯಿಂದ ಹೊರಬಿದ್ದಳು. ನಾಗೇಂದ್ರಿ ಕರುವಿಗೆ ಹಾಲು ಕುಡಿಯಲು ದಾಂಬು ಸಡಲಿಸುತ್ತಲೆ ಒಂದೇ ಗುಪ್ಪಿಗೆ ಕರು ತಾಯ್ ಕೆಚ್ಚಲ ಕಡೆ ನೆಗೆಯಿತು.

ರಾಕು, ಚಾ ಕುಡಿಯುಕೆ ಬರ್ರಾ ಎಲ್ಲರೂ ಒಳ ಕೋಣೆಯಿಂದ ಬಂದ ಬೊಮ್ಮಿಯ ದನಿ ಕೇಳಿದ ಹೊಲಿಯಪ್ಪ ಸುರಿವ ಮಳೆಯಲ್ಲೇ ನಾಲ್ಕು ಹೆಜ್ಜೆ ಹಾಕಿ ಮನೆ ಮುಂದಿನ ಮಾವಿನ ಗಿಡದ ಎಲೆಯೆರಡು ಹಿಡಿದು ತಂದು ಗಸಗಸ ಹಲ್ಲು ತಿಕ್ಕಲಾರಂಭಿಸಿದ. ತೆಣೆಯ ಮೇಲೆ ಹೊರಮುಖ ಮಾಡಿ ನಿಂತ ಆತನ ಕಣ್ಣು ಏರಿ ಮೇಲಿನ ದಾಸ ನಾಯಕರ ಮನೆ ಕಡೆ ನೆಟ್ಟಿತ್ತು.

ಯಾಕೋ ಆ ಮನೆ ಒಮ್ಮಿಂದೊಮ್ಮೇಲೆ ಕೆಳಗೆ ಸರಿದು ಬರತೊಡಗಿದೆ ಎನ್ನಿಸಿತು. ಭ್ರಮೆ ಎಂದು ಕಣ್ಣುಜ್ಜಿಕೊಂಡ. ರಾತ್ರಿಯ ಎಣ್ಣೆಯ ಮಹಿಮೆ ಎಂದುಕೊಂಡ. ಊಹುಂ ಅದಾವುದೂ ಅಲ್ಲ. ಮನೆಗೆ ಮನೆಯೇ ಎದ್ದು ಹಳ್ಳದ ಕಡೆಗೆ ವಾಲುತ್ತಿದೆ ಎನ್ನಿಸಿತು. ಅಷ್ಟೇ.. ತನ್ನ ಮನೆಯ ಕಡೆಗೊಮ್ಮೆ ನೋಡಿಕೊಂಡ. ತಟ್ಟಿಗೂಡಿನಂತಿದ್ದ ಮುಳಿಹುಲ್ಲಿನ ತನ್ನ ಮನೆ ಖಡಕ್ ಆಗಿ ನಿಂತಿದ್ದರೆ ಐರಾವತದಂತಹ ನಾಯಕರ ಮನೆಯ ಬುಡವೇ ಜರಿದು ಚಲಿಸಲಾರಂಬಿಸಿದೆ. ಏನಿಂಥಾ ಪವಾಡ! ಏನಾಯ್ತಪ್ಪಾ.. ಎಂದು ಕೊಳ್ಳುತ್ತಿರುವಾಗಲೇ ಮನೆಯೊಳಗಿನಿಂದ ಒಮ್ಮೆಲೇ ಕೋಲಾಹಲ ಬೊಬ್ಬೆ ಕೇಳಿಬರತೊಡಗಿತು.

ಮರುಕ್ಷಣವೇ ದಾಸ ನಾಯಕರು ಅವರ ಗಂಡು ಮಕ್ಕಳು, ಹೊರಬರಲಾಗದೇ ಓಲಾಡುತ್ತಾ ಹೊರಬಿದ್ದರು. ಗಂಡು ಮಕ್ಕಳಿಬ್ಬರೂ ಅದು ಹೇಗೋ ಏರಿ ಕುಸಿತದ ವಿರುದ್ಧ ದಿಕ್ಕಿನಲ್ಲಿ ಬಲಕ್ಕೆ ಸಮತಟ್ಟು ಜಾಗೆಗೇ ಓಡಿ ಬಂದರು. ದಾಸ ನಾಯರು ಅವರ ಹಿಂಬಾಲಿಸಿದರು. ಆದರೆ ಹೊಲಿಯಪ್ಪ ಮನೆಯತ್ತಲೇ ದೃಷ್ಟಿ ಕೀಲಿಸಿದ್ದ. ಒಡತಿ ಹೊರಬರಲೇ ಇಲ್ಲ ಎಂದುಕೊಳ್ಳುತ್ತಿರುವಾಗಲೇ ಆ ಹದಿನಾಲ್ಕರ ಪೋರಿ ಮಧುರಾ ಜೋರಾಗಿ ಕಿರುಚುತ್ತಾ ಹೊರಗೋಡಿಬಂದಳು. ಮನೆ ಗೋಡೆ ಕಿಡಕಿ ಬಾಗಿಲುಗಳು ಸಡಿಲಗೊಂಡು ಬೀಳಲಾರಂಭಿಸಿದ್ದವು. ಆ ಮನೆಯೂ ಎಡದಿಕ್ಕಿಗೆ ಚಲಿಸುತ್ತಿತ್ತು. ಆ ಪೋರಿ ಬಲದಿಕ್ಕಿಗೆ ಓಡಿ ಬರದೇ ಎಡಕ್ಕೆ ಓಡುತ್ತಿದ್ದರೇ ಯಾರ ಕೈಕಾಲು ಆಡುತ್ತಿರಲಿಲ್ಲ. ಆ ಮುದ್ದು ಹುಡುಗಿ ಎದ್ದು ನಿಲ್ಲಲು ಯತ್ನಿಸುತ್ತಿದ್ದಳು. ಮತ್ತೆ ಮಣ್ಣಿನ ಜಾರುವಿಕೆಗೆ ನೆಲಕ್ಕೆ ಬೀಳುತ್ತಿದ್ದಳು. ಮಣ್ಣಿನ ಕೂಡ ಜರಿದು ಜರಿದು ಹೋಗುತ್ತಿದ್ದಳು. ಹೊಲಿಯಪ್ಪ ಸ್ಥಂಬಿತನಾಗಿದ್ದ. ಬೊಬ್ಬೆ ಹಾಕಬೇಕೆಂಬುದನ್ನೆ ಮರೆತಂತೆ, ಬಾಯಿ ಕಟ್ಟಿದಂತೆ, ಉಸಿರೇ ನಿಂತು ಹೋದಂತೆ ಬೆರ್ಚಪ್ಪನಂತೆ ನಿಂತ. ದಾಸ ನಾಯಕರು ಈಗ ನಿಂತಲ್ಲಿಯೇ ಅರಚತೊಡಗಿದರು.

ಅಯ್ಯೋ, ಯಾರಾರೂ ಬರ್ರೋ ನನ್ನ ಮಗಳ ಹಳ್ಳಕೆ ಬೀಳ್ತೆ ಇದೋ.. ಯಾರಾರೂ ಕಾಪಾಡ್ರೋ, ಹೊಲಿಯಪ್ಪ ಬಾರೋ.. ನಿಂಗೆ ಕೈ ಮುಗಿತಿ. ನನ್ನ ಮಗಳ ಹಿಡಿಯೋ. ಬಿತ್ತೋ ಬಿದ್ದೇ ಹೋಯ್ತೋ… ಎನ್ನುತ್ತಾ ಅಳತೊಡಗಿದರು,
ಯಾವಾಗಲೂ ಗಂಭೀರ ಮುಖಭಾವದ ಒಡೆಯ ದಾಸ ನಾಯಕರು ಹಸನ್ಮುಖಿಯಾಗಿದ್ದರೂ ಎಂದೂ ಇತರರೆದುರು ದೀನರಾಗಿ ಕಂಡೇ ಇರದ ಅವರ ಇಂದಿನ ದೈನ್ಯ ಕಂಡು ಹೊಲಿಯಪ್ಪನಿಗೆ ಕರುಳಿಗೆ ಯಾರೋ ಇಕ್ಕಳದಿಂದ ಬಗೆದಂತೆ ನೋವು ಕೊಟ್ಟಿತು. ತನ್ನ ಮದುವೆ ಮಾಡಿಸಿ ಈ ಊರಿಗೆ ಕರೆತಂದು ತನಗೊಂದು ಗುಡಿಸಲು ಕಟ್ಟಿಕೊಳ್ಳಲು ನೆಲವನ್ನು ಕೊಟ್ಟ ಧಣಿ. ತಂದೆ ತಾಯಿಯನ್ನು ಎಳವೆಯಲ್ಲೇ ಕಳೆದುಕೊಂಡ ತಾನು ಇವರ ಕೃಪೆಯಿಂದಲೇ ಸಂಸಾರ ಹೂಡುವಂತಾಗಿತ್ತು. ಶ್ರೀಮಂತಿಕೆಯ ಗರ್ವ ಇತ್ತದರೂ ಸಂಕಟದಲ್ಲಿ ಎಂದೂ ಕೈ ಬಿಟ್ಟಿರಲಿಲ್ಲ. ಈಗೀಗ ತಾನು ಅವರ ಮನೆ ಕೆಲಸಕ್ಕೆ ಹೋಗುತ್ತಿಲ್ಲ.

ಒಡೆಯಾ ಬುಡ ಉಂದಕ್ಕೆ ಮೂವತ್ತು ರೂಪಾಯಿ ಕೊಡ್ರಾ. ಅಂದ್ರೇ ಬತ್ತಿ ಕೆಲಚಕ್ಕೆ ಇಲ್ಲದಿರೆ ಬರುಕಲ್ಲ್ರಾ ನಾನು. ಮಾಣೇಸ್ವರ ಒಡೆದೀರು ಮೂವತ್ತು ರುಪಾಯಿ ಕುಡತಿರು. ಇಪ್ಪತ್ತ ರೂಪಾಯಿ ಕಾಲ ಹೋಯ್ತ್ರಾ ಇಗೇ. ಅದೇ ಪ್ರತಿ ವರ್ಷವೂ ಮಳೆಗಾಲ ಮುಗಿದು ದಸರಾ ಬರುವ ಹೊತ್ತಿಗೆ ಮನೆ ವಠಾರದ ತೆಂಗಿನ ಬುಡ ಕಟ್ಟುವ ಕೆಲಸ ಮಾಡಿ ಬಿಡುತ್ತಿದ್ದ. ಹೋದವರ್ಷವೂ ಅದೇ ಕಾರಣಕ್ಕೆ ಕರೆಕಳಿಸಿದಾಗ ತಾನು ಹೇಳಿದ್ದು ಅವರಿಗೆ ಪಥ್ಯವಾಗಿರಲಿಲ್ಲ.

ಹೌದೇನಾ. ಏಗೇ ನಿಂಗೇ ಬಾಳ ಧಿಮಾಕ ಬರುಕೆ ಶುರುವಾಗಿದ. ತಡಿ. ಊರಿಗೇ ನಿನೊಬ್ಬನೇ ಕಸಬಗಾರ ಅಂದ್ಕಂಡಿಯ್ಯಾ, ಹ್ಯಾಂಗೆ. ನೀ ಬರಬ್ಯಾಡ ಮಗನೇ.. ನಾ ಇಪ್ಪತ್ತ ರೂಪಾಯಿ ಕುಟ್ಟೆ ಬುಡ ಮಾಡ್ಸದಿದ್ದರೆ ಹೇಳ್ ಎಂದು ಸವಾಲು ಹಾಕಿದ್ದರು. ಆಚೆಕೇರಿ ನಾರಾಯಣ ಬಂದು ಎಲ್ಲ ಬುಡ ಮಾಡಿ ಹೋಗಿದ್ದ. ತಾನು ಸ್ವಾಭಿಮಾನಕ್ಕೆ ಬಿದ್ದಂತೆ ಅವರ ಮನೆ ಕಡೆ ಹೋಗುವುದ ನಿಲ್ಲಿಸಿದ್ದ. ಮಾತನ್ನು ಅವರೇ ನಿಲ್ಲಿಸಿದ್ದರು. ಆದರೆ ತನ್ನ ಮಕ್ಕಳು ಹೆಂಡತಿಗೆ ಆಗಾಗ ಸಹಾಯ ಮಾಡುತ್ತಲೇ ಇರುವರು. ತಾನು ಬೇಡವೆಂದರೂ ಬೊಮ್ಮಿ ಕೂಡಾ ಮನೆಗೆಲಸ ಗದ್ದೆ ಕೆಲಸ ಎಲ್ಲಕ್ಕೂ ಅವರ ಮನೆಯ ಸರದಿ ಮುಗಿದ ಮೇಲೆಯೇ ಬೇರೆ ಮನೆಗಳ ಕೆಲಸಕ್ಕೆ ಹೋಗುವುದು ಬಿಟ್ಟಿರಲಿಲ್ಲ.

ಹೊಲಿಯಪ್ಪ ಈಗ ನಾಯಕರ ಗಂಡು ಮಕ್ಕಳ ಕಡೆ ನೋಡಿದ. ಕಲಿಯಲು ತುಂಬಾ ಬುದ್ದಿವಂತರೆಂದು ಹೆಸರು ಗಳಿಸಿದ್ದ ಹುಡುಗರಿಬ್ಬರೂ ಈಗ ಅಸಹಾಯಕರಾಗಿ ದಿಕ್ಕು ತೋಚದಂತೆ ಗಲ್ಲುಗಂಬದಂತೆ ನಿಂತಿದ್ದರು. ತಂಗಿಯ ಕಾಪಾಡುವ ಧೈರ್ಯ ಅವರಲ್ಲಿರಲಿಲ್ಲ. ಅಪ್ಪನ ಬೊಬ್ಬೆ ಕೇಳಿದ ಕೂಸು ಅಪ್ಪಾ, ಅಪ್ಪಾ, ಹಿಡಿ, ನನ್ನ ಹಿಡಕಾ, ಅಪ್ಪಾ… ಎಂದು ಅಳುತ್ತಾ ಕೈ ಮುಂದೆ ಮಾಡುತ್ತ, ಮತ್ತೆ ಹಳ್ಳದ ಜಾಡಿನತ್ತ ಜಾರುತ್ತಲೇ ಇದ್ದಳು. ಒಮ್ಮೆಲೆ ಎದ್ದ ಈ ಬೊಬ್ಬೆ ಸದ್ದಿಗೆ ಚಾ ಕುಡಿಯುತ್ತ ಕುಳಿತ್ತಿದ್ದ ನಾಗೇಂದ್ರಿ, ಬೊಮ್ಮಿ, ರಾಕು ಬೆದರಿ ಹೊರಗೋಡಿ ಬಂದರು. ಅಲ್ಲಿಯ ದೃಶ್ಯ ಅವರಿಗೆ ನಂಬಲಾಗಲಿಲ್ಲ. ಒಂದೆಡೆ ಮನೆ ಕುಸಿಯುತ್ತಿದ್ದರೆ ಆ ಕಡೆ ಹೋದರೆ ಅನಾಹುತವೆಂದು ಎಲ್ಲರ ಒಳಬುದ್ಧಿ. ಜೀವ ಭಯ ಕಾಡುತ್ತಿತ್ತು.

ಆದರೆ ಹೊಲಿಯಪ್ಪನಿಗೆ ಈಗ ತಡೆಯಲಾಗಲಿಲ್ಲ. ಮಣ್ಣು ಕುಸಿಯುತ್ತಿದ್ದರೂ ಹಿಂದೆ ಮುಂದೆ ನೋಡದೇ ಆ ಹುಡುಗಿಯಿದ್ದಲ್ಲಿಗೇ ಓಡತೊಡಗಿದ. ಕಾಲುಗಳು ಸಳ್ಳನೇ ಜಾರುತ್ತಿದ್ದರೂ ಎತ್ತಿ ಎತ್ತಿ ಹಾಕತೊಡಗಿದ. ಇನ್ನು ಹತ್ತು ಹೆಜ್ಜೆ ಹಾಕಿದರೆ ಆ ಹುಡುಗಿ ಕೈಗೇ ಸಿಕ್ಕೇ ಬಿಟ್ಟಳು ಎಂದು ಕೈ ಉದ್ದ ಮಾಡಿಯೇ ಓಡಿದ. ಊಹೂಂ ದೇವರಿಗೆ ಅದು ಇಷ್ಟವಿಲ್ಲ. ನೆಲದವ್ವ ಬಲಿ ಬೇಡಿದಳೇ? ತಿಳಿಯಲಿಲ್ಲ. ಮಳೆರಾಯನ ಮುನಿಸು ದಾಸ ನಾಯಕನ ಏಕೈಕ ಹೆಣ್ಣು ಕುಡಿಯ ಮೇಲೆ ಕಣ್ಣು ಹಾಕಿತೇ? ಹಾಂ. ಹಂಗೇ ಹೋಗ್. ಹೂಂ ಅಯ್ಯೋ ಹಿಡಿ ಹಿಡಿ. ಸದ್ದುಗಳು ಬರಿಯ ಮಾತಾದವೇ ಬಿಟ್ಟರೇ ಆಕೆ ಸಿಕ್ಕಲೇ ಇಲ್ಲ. ಗುಡ್ಡ ಒಮ್ಮೇಲೆ ಪಸಕ್ಕನೇ ಕುಸಿದೇ ಹೋಯ್ತು. ಅದರ ಕೂಡಾ ಮಧುರಾ ಕೈ ಚಾಚುತ್ತಲೇ ಬಳಿದುಹೋದಳು. ನೀರು ಮಣ್ಣು ಮೆತ್ತಿದ ಮೈಯಲ್ಲಿ ಆಕೆಯ ಚಲನೆ ಮಾತ್ರ ಅದೊಂದು ಜೀವ ಎಂದು ತೋರಿಸುತ್ತಿತ್ತು. ಮನೆಯ ಇತರೇ ಸಾಮಾನುಗಳು ಉರುಳಿ ಉರುಳಿ ಹೊರಬೀಳುತ್ತಲೇ ಇದ್ದವು. ಮಧುರಾ ಕೂಡಾ ತುಂಬಿ ಹರಿಯುತ್ತಿರುವ ಹಳ್ಳದಲ್ಲಿ ಬಿದ್ದು ಹೋದಳು. ತನ್ನೊಡಲಿಗೆ ಬಂದ ಎಲ್ಲವನ್ನೂ ಬಳಿದುಕೊಂಡು ಮೈದುಂಬಿ ಕುಣಿಯುತ್ತಾ ಠೇಂಕರಿಸುತ್ತಾ ರೌಧ್ರ ನರ್ತನ ಮಾಡುತ್ತಾ ಸರಿಯುತ್ತಿತ್ತು ಹಳ್ಳ.

ಹರಿವ ನೀರಿಗೆ ಹಾರಿ ಆಕೆಯನ್ನು ಕಾಪಾಡುವ ಧೈರ್ಯ ಸ್ವಂತ ತಂದೆಗೇ ಇರಲಿಲ್ಲ. ನಾಯಕರು ಈಗ ಅವಶೇಷವಾಗಿ ಬಿದ್ದಿರುವ ಮನೆಯೆಡೆಗೆ ನೋಡಿದರು. ಏರಿ ಇನ್ನು ಕುಸಿಯುತ್ತಿಲೇ ಇತ್ತು. ಮನೆ ಮುಕ್ಕಾಲು ಭಾಗ ಕುಸಿದಿದೆ. ಅರ್ಧಕರ್ಧ ಕೊಚ್ಚಿ ಹೋಗಿದೆ. ಹೆಂಡತಿ ಕುಸುಮ ಹೊರಬರಲೇ ಇಲ್ಲ. ಕುಸಿದ ಮನೆಯೊಳಗೆ ಕುಸಿದಿದ್ದಳು. ಹೆಂಡತಿ ಬದುಕಿರುವ ಯಾವ ಕುರುಹು ಇರಲಿಲ್ಲ. ಅಲ್ಲಿಯೂ ಹೋಗಲಾಗದೇ, ಇಲ್ಲಿ ನಿಲ್ಲಲಾಗದೇ ಎದೆಯೊಳಗಿನ ನೋವು ಬೆಂಕಿಯೋ, ಬರ್ಪವೋ ತಿಳಿಯದಂತಾಗಿ ಕುಸಿದರು. ಪ್ರಳಯ ಸೌಂದರ್ಯ ಜಗತ್ತನ್ನೆ ವ್ಯಾಪಿಸಿದಂತೆ ಕಾಣಿಸುತ್ತಿತ್ತು. ಹತ್ತಾರು ವರ್ಷಗಳಿಂದ ಕಟ್ಟಿದ ಬದುಕು ಕ್ಷಣದಲ್ಲಿ ಹೀಗೆ..

ಬೊಬ್ಬೆ ಸದ್ದಿಗೆ ಹೊರಗೋಡಿ ಬಂದ ರಾಕು ಕೈಯಲ್ಲಿಯ ಉಬ್ಬಿರೊಟ್ಟಿ ಇನ್ನು ಅರ್ಧ ಬಾಯಲ್ಲಿ ಅರ್ಧ ಕೈಯಲ್ಲಿ ಇತ್ತು. ಕೈಸಡಿಲಕ್ಕೆ ಅದು ಬಿದ್ದು ಹೋಗಿತ್ತು. ಯಾರೂ ಗ್ರಹಿಸಿದ ರೀತಿಯಲ್ಲಿ ಆತ ನಾಲ್ಕೇ ನೆಗೆತಕ್ಕೆ ಹಳ್ಳದ ಸಮೀಪ ಓಡಿದ್ದ. ಮರುಕ್ಷಣವೇ ಹಳ್ಳಕ್ಕೆ ನೇರವಾಗಿ ಧುಮುಕಿಬಿಟ್ಟ. ಈಜು ಅತನಿಗೆ ಹೊಸತಲ್ಲ. ಆದರೆ ಇಂದಿನ ನೀರಿನ ಸೆಳವಿಗೆ ಆತನ ಬಲ ಸಾಲದಾಗಿತ್ತು. ಆತ ಬಿಡಲಿಲ್ಲ. ಮಿಂಚಿನಂತೆ ಚಲಿಸತೊಡಗಿದ. ಕೆಂಪು ಬಣ್ಣದ ಹಳ್ಳದ ನೀರಿನಲ್ಲಿ ಇವರಿಬ್ಬರೂ ತೇಲುತ್ತಾ ಹೋಗುತ್ತಿದ್ದರು. ಉಳಿದವರೆಲ್ಲ ಹಳ್ಳದ ದಡದ ಉದ್ದಕ್ಕೂ ಓಡುತ್ತಾ ಬರುತ್ತಿದ್ದರೆ ನೂರು ಇನ್ನೂರು ಮೀಟರ ಹೋಗುವಷ್ಟರಲ್ಲೇ ವಿಸ್ಮಯ ಎನ್ನಿಸುವಂತೆ ಮಧುರಾ ಆತನ ಕೈಗೆ ಸಿಕ್ಕಳು. ಪರಸ್ಪರ ಕೈ ಸಿಕ್ಕೊಡನೇ ಇನ್ನೆಂದೂ ಬಿಡಲಾರೆ.. ಎಂಬಂತೆ ರಾಕು ಆಕೆಯನ್ನು ತಬ್ಬಿ ಹಿಡಿದುಕೊಂಡ. ನಿತ್ರಾಣಳಾಗಿದ್ದಳಾಕೆ. ಅಲ್ಲೊಂದು ಭಾವಬಂಧ ಏರ್ಪಟ್ಟಂತೆ ಆಕೆ ಆತನ ಬಾಚಿ ಹಿಡಿದಳು. ಜೀವದಾಸೆಯ ಕೂಗು ಆಕೆಯದಾಗಿದ್ದರೂ ಆತನದಾಗಿರಲಿಲ್ಲ. ಅದು ಪ್ರೇಮವೋ ಸಿಗದೇ ಇರುವುದು ಸಿಕ್ಕ ಖುಷಿಯೋ ಎಂತದ್ದೋ!

ಅದ್ಯಾಕೋ ಮಧುರಾನನ್ನು ಕಂಡರೆ ಆತನೊಳಗೊಳಗೆ ಅದೆಂಥದೋ ಪುಳಕ. ಆಕೆಯ ಗೋದಿ ಮೈಬಣ್ಣ. ನುಣುಪು ಕೆನ್ನೆಗಳು, ಸೂಕ್ಷ್ಮವಾದ ನೋಟ, ಮೆತ್ತಗಿನ ಮಾತು ಆತನಿಗೆ ಗೊತ್ತಿಲ್ಲದಂತೆ ಆಕರ್ಷಿಸಿಸುತ್ತಿತ್ತು. ಆದರೆ ಆಕೆ ತನ್ನ ಹೆತ್ತವರ ಒಡೆಯನ ಮಗಳು. ದಾಸ ನಾಯಕರು ಊರಿಗೆ ಕೊಂಚ ಸಿರಿವಂತರು. ಮೇಲ್ಜಾತಿಯವರು. ನಾಯಕರಿಗೂ ಗೌಡರಿಗೂ ಸಂಬಂಧಗಳ ಕನಸಿನಲ್ಲೂ ಗ್ರಹಿಸಲಾರದವರು. ಆದರೆ ರಾಕುವಿನ ಮನಸ್ಸಿನ ಮಹಲಿಗೆ ಇದ್ಯಾವುದರ ಹಂಗೂ ಇಲ್ಲ.

ಮಧುರಾ ಇನ್ನೂ ಎಳಸು. ಅವಳಿಗೆ ಆತನ ಆಂತರ್ಯ ಗೊತ್ತಿರಲಿಲ್ಲ. ಶಾಲೆಗೆ ರಜೆ ಇದ್ದ ದಿನಗಳಿದ್ದರೆ ಆತ ಗದ್ದೆ ಕೆಲಸಕ್ಕೆ ಬಂದಾಗಲೆಲ್ಲಾ ಆಕೆಗೆ ಆತನ ಬಗ್ಗೆ ಚೂರು ಅಕ್ಕರೆ ತೋರುತ್ತಿದ್ದಳು. ಅವಲಕ್ಕಿ ಕಲಿಸಿಕೊಡುವಾಗಲೆಲ್ಲಾ ಉಳಿದವರಿಗಿಂತ ಆತನಿಗೆ ಒಂದಿಷ್ಟು ಜಾಸ್ತಿ ಬೆಲ್ಲ ಹಾಕಿ ಕೊಡುತ್ತಿದ್ದಳು.

ರಾಕು ಆಕೆಗಾಗಿ ಹಂಬಲಿಸುತ್ತಿದ್ದ. ಅದೆಷ್ಟೋ ಸಲ ತಂಗಿಗೂ ಕಾಣಿಸದೇ ಸಂಪಿಗೆ ಹಣ್ಣುಗಳನ್ನು ಕದ್ದು ಇಟ್ಟುಕೊಂಡು ಆಕೆ ಒಬ್ಬಳೇ ಸಿಕ್ಕಾಗ ಕೊಟ್ಟು ಆಕೆಯ ಮುಖದಲ್ಲಿಯ ನಗು ನೋಡಲು ಪರಿತಪಿಸುತ್ತಿದ್ದ. ಮಧೂ,, ಇಲ್ನೋಡೇ, ನಾಗೇಂದ್ರಿಗೆ ಹೇಳಬ್ಯಾಡೆ. ನಿಂಗಂದೇ ಹಣ್ಣ ಕಿತ್ತಂಡ ಬಂದಿ. ತಕಾ.. ಎಂದು ಆಕೆಗೆ ಕೊಟ್ಟರೆ ಆಕೆ ಖುಷಿಗೊಳ್ಳುತ್ತಿದ್ದಳು. ಜಾತಿಯ ಯಾವ ಭಿನ್ನತೆಯೂ ಅಲ್ಲಿ ಮಾತಾಡುತ್ತಿರಲಿಲ್ಲ.

ಮನೆಯ ಪಕ್ಕಕ್ಕೇ ಹರಿಯುವ ಹಳ್ಳಕ್ಕೆ ಆಗಾಗ ಆಕೆಯನ್ನು ಕಾಲು ಒರೆಸುವ ಕೊತ್ತಲ ಚೀಲಗಳನ್ನು [ ಸಣಬಿನ ಚೀಲ] ತೊಳೆಯಲು ಆಕೆಯ ತಾಯಿ ಕುಸುಮ ಕಳಿಸುತ್ತಿದ್ದರು. ಆಕೆ ಹಳ್ಳಕ್ಕೆ ಹೋದದ್ದನ್ನು ಕಂಡಾಗಲೆಲ್ಲಾ ರಾಕು ಅಲ್ಲಿ ಹಾಜರ್.ಆಗೆಲ್ಲ ರಾಕು ಮಧೂ ನಾ ಬಡಿದ ಕುಡ್ತಿತೆ, ತಾರೇ. ನಿನ್ನ ಕೈನಲ್ಲಿ ಆಗುದಿಲ್ಲ. ಒಜ್ಜೇ ಇತದು. ಇತ್ಲಾಗೇ ತಾ ಎಂದು ಜಬರದಸ್ತಿ ಮಾಡಿ ತೊಳೆದು ಕೊಡುತ್ತಿದ್ದ. ನಾಗೇಂದ್ರಿ ಎಲ್ಲಾದರೂ ಕಂಡರೆ ಆಕೆಯೂ ಓಡಿ ಬರುತ್ತಿದ್ದಳು. ಆದರೆ ಅಣ್ಣ ಮಧುರಾಗೆ ಮುದ್ದಾಂ ಸಹಾಯಮಾಡುವುದನ್ನು ಕಂಡಾಗಲೆಲ್ಲಾ ಆಕೆಗೆ ಹೊಟ್ಟೆಯುರಿಯುತ್ತಿತ್ತು. ಮನೆಗೆ ಬಂದು ಅವ್ವಾ. ಇಂವ. ಬ್ಯಾರ್‍ಯೋರ್ ಕೆಲಸ ಮಾಡುಕೇ ಆಗ್ವಾ. ನಾ ಚಾದರು ಬಡಿತಿದ್ರೆ ನೋಡ್ಕಂತೇ ನಿಂತ್ಕಂತ್ಯಾ . ಆ ಬಿಳಿ ಮೊಕದೊಳಿಗೆ ಮಸ್ಕಾ ಹುಡಿಯುಕೆ ಸಾಯ್ತ್ಯಾ. ಇಂವಂಗೆ ಇನ್ಯಾವಗೂ ನಾ ಏನೂ ಕೆಲಸ ಮಾಡ ಕುಡುದಿಲ್ಲ ನೋಡು. ಎಂದು ಚಾಡಿಹೇಳುತ್ತಿದ್ದಳು.

ಆಗೆಲ್ಲ ಬೊಮ್ಮಿಗೆ ಯೌವನದಲ್ಲಿ ಹೊಲಿಯಪ್ಪನ ಕಾರುಬಾರು ನೆನಪಾಗುತ್ತಿತ್ತು. ಇದೇ ಹಳ್ಳಕ್ಕೆ ಬಟ್ಟೆ ಒಗೆಯಲು ಬೊಮ್ಮಿ ಆಗಾಗ ಬರುತ್ತಿದ್ದಳು. ಆತನು ಅವಳಿಗಾಗಿ ಅಲ್ಲಿಗೆ ಬರುತ್ತಿದ್ದ. ಆಕೆಯಲ್ಲಿ ಪ್ರೇಮ ಭಿಕ್ಷೆ ಬೇಡುತ್ತಿದ್ದ. ಏ, ಬುಮ್ಮಿ , ಇಲ್ನೋಡೆ, ನನ್ನುಂಚರಿಗೆ ನೋಡೆ, ಏ, ನಾನ ನಿನ್ನ ಮ್ಯಾಲೆ ಜೀಂಮಾನೆ ಇಟ್ಕಂಡಿ. ಇದೈ ನೀ ಹೂಂ ಅನ್ದೀರೆ ನಾ ಇಲ್ಲೆ ಹಳ್ಳದಲ್ಲೇ ಬಿದ್ದ ಸಾಯ್ತಿ, ಕಡಿಗೆ ನಿಂಗೆ ವಸತರ ಸೆಳಿಯುಕು ಇಲ್ಲಿ ಬರುಕೆ ಆಗ್ವಂಗಿಲ್ಲ. ಇಲ್ಲದಿರೇ ಈ ಮರಕ್ಕೇ ಪಾಶ ಹಾಕಣ್ತಿ ನೋಡೆ ಎಂದು ಹೆದರಿಸುತ್ತಿದ್ದ. ಆಕೆ ಸಭ್ಯೆಯಾದರೂ ಧೈರ್ಯಸ್ಥೆ, ಆತನ ಜರಿಯುತ್ತಿದ್ದಳು.

ಏ, ಹೋಗಾ,ಮಂಗನ ಮುಸಡ್ಯವ್ನೇ, ದಿನಾ ದಿನಾ ಸಾಯ್ಲೆ ಅಂದ್ಕಂಡ ಸುಮ್ನಿದ್ರೆ ನಿಂದು ಜೋರೆ ಆಯ್ತು. ನಮ್ಮಪ್ಪಗೆ ಹೇಳ್ತಿ ತಡಿ. ನಿಂಗೇನ ಬ್ಯಾರೆ ಕೆಲ್ಸಿಲ್ಲಾ. ನಾನೇ ಸಿಕ್ಕಿನೇ ನಿಂಗೆ, ಮದಿಯಾಗುಕೆ. ಬ್ಯಾರೆ ಯಾರ್‍ನರೂ ನೋಡ್ಕಾ. ಎಂದು ತಿವಿದು ಹೇಳಿದರೂ ಆತ ಅಂಗಲಾಚುತ್ತಲೇ ಇರುತ್ತಿದ್ದ. ಕೊನೆಗೆ ಆತ ದಾಸ ನಾಯಕರಿಗೆ ಗಂಟು ಬಿದ್ದು ಅವರು ಮುತುವರ್ಜಿ ವಹಿಸಿ, ಹೆಣ್ಣು ಗಂಡು ಮಾತುಕತೆ ನಡೆಸಿ ಕೊನೆಗೂ ಆತನ ಕೈಹಿಡಿದಿದ್ದಳು. ಅದು ಆಗಾಗ ಆಕೆಗೆ ನೆನಪಾಗಿ ಇಷ್ಟು ಬೇಗ ತನ್ನ ಬದುಕಿನ ಸುಂದರ ಕ್ಷಣಗಳೆಲ್ಲಾ ಕಳೆದುಹೋದವೇ ಎಂದುಕೊಳ್ಳುತ್ತಿದ್ದಳು. ಈ ಮಗನೂ ಇಂವನ ಹಂಗೇ. ಅಪ್ಪಗೆ ಸರಿಯ್ಯಾಗೇ ಇಂವ. ಅಂದುಕೊಳ್ಳುತ್ತ ಮುಗುಳ್ನಗುತ್ತಿದ್ದಳು.

ಆದರೀಗ ಕಣ್ಣ ಮುಂದೆ ಮುಂದೆ ಮಗ ಹಳ್ಳದ ಪಾಲಾದದ್ದನ್ನು ಕಂಡ ಹೆತ್ತೊಡಲು ಹೌಹಾರಿತು. ಇದ್ದವನೊಬ್ಬ ಗಂಡು ಮಗ. ಬೊಮ್ಮಿ ಕಂಗೆಟ್ಟಳು. ನೆಲಕ್ಕುರುಳಿದಳು. ಕೆಸರು ಮಣ್ಣನ್ನೇ ತಲೆಗೆ ಎತ್ತಿ ಹಾಕಿಕೊಳ್ಳುತ್ತಾ ಹುಚ್ಚಿಯಂತೆ ಅರಚತೊಡಗಿದಳು. ಹೊಲಿಯಪ್ಪ ನಿಂತಲ್ಲೇ ಕಲ್ಲಾಗಿದ್ದ.

ಆದರೆ ಅವರಿಬ್ಬರೂ ಬೆಸೆದ ಕೈಗಳ ಹಿಡಿದೇ ಹಾಗೇ ನೀರಿನಲ್ಲಿ ಕೊಚ್ಚಿ ಹೋಗೇ ಬಿಟ್ಟರು. ಮಧುರಾ ತನಗೊಂದು ಜೊತೆ ಸಿಕ್ಕ ಭ್ರಮೆಯಲ್ಲಿ ನೀರಲ್ಲಿ ಹಾಗೇ ಸೆಳೆದುಹೋಗುತ್ತಿದ್ದರೆ, ರಾಕು ರಕ್ಷಿಸಿಕೊಳ್ಳುವ ಯಾವ ಪ್ರಯತ್ನವನ್ನೂ ಮಾಡದೇ ಸಕಾರಣವಾಗಿಯೇ ಆಕೆಯ ಕೈಹಿಡಿದು ಸುಮ್ಮನುಳಿದುಬಿಟ್ಟ. ಮಾನವ ಸಮಾಜ ತಿರಸ್ಕರಿಸುವ ಕೆಲವು ಅತೀತವಾದ ಅನುಬಂಧಗಳು ಆಪ್ತತೆಯ ನೆಲೆಯಲ್ಲಿ ವ್ಯಕ್ತಿಗಳಲ್ಲಿ ಸಾವನ್ನು ಸಂತೋಷದಿಂದಲೇ ಆಸ್ವಾದಿಸುವಂತೆ ಮಾಡುತ್ತವೆಯೇನೋ.

ಊರಿನ ಜನರೆಲ್ಲ ಸೇರುವ ಹೊತ್ತಿಗೆ ಎಲ್ಲವೂ ಮುಗಿದಿತ್ತು. ರಕ್ಷಣಾ ಕಾರ್ಯದ ಸಿಬ್ಬಂದಿಗಳು ಕುಸಿದ ಮನೆಯೊಳಗಿನಿಂದ ಕುಸುಮಮ್ಮಳ ದೇಹವನ್ನು ತೆಗೆದು ಪೋಸ್ಟ ಮಾರ್ಟಂಗೆ ಕಳಿಸಿದರು. ಯಾವುದನ್ನೂ ಓದದೇ ದಾಸ ನಾಯಕರು ಮತ್ತು ಹೊಲಿಯಪ್ಪ ಇಬ್ಬರೂ ತಲಾಟಿ ಕೊಟ್ಟ ಅದೆಂಥದ್ದೋ ಕಾಗದ ಪತ್ರಗಳಿಗೆ ಸಹಿ ಹಾಕಿದರು.

ಐದಾರು ತಿಂಗಳಿಂದ ಸಂತ್ರಸ್ತರಿಗೆ ಸಿಗಬೇಕಾದ ಸವಲತ್ತುಗಳಿಗೆ ಅಲೆದಾಡಿ ದಾಸ ನಾಯಕರು ಸುಸ್ತಾಗಿದ್ದಾರೆ. ಬಂದ ಹಣ ಏನಕ್ಕೂ ಸಾಲದೆಂಬಂತೆ ಇನ್ನೊಬ್ಬರಲ್ಲಿ ತಾನೇ ಕೈಯ ಚಾಚಬೇಕಾಗಿದೆ. ಹೊಲಿಯುಪ್ಪನೆ ಗಟ್ಟಿಮುಟ್ಟಾದ ಕಟ್ಟಿಗೆಯ ತೊಲೆಯೊಂದನ್ನು ತಂದು ಎರಡು ಕೈಯಾಳುಗಳ ನೆರವಿನಿಂದ ಗಳ ಜೋಡಿಸಿ ಮೇಲೆ ಒಂದಿಷ್ಟು ಒಣ ಹುಲ್ಲು ಹೊದಿಸಿ, ಅದರ ಮೇಲೆ ಪ್ಲಾಸ್ಟಿಕ್ಕು ಸುಡ್ಲೂ ತಂದು ಕತ್ತರಿಸಿ, ಸಣ್ಣದೊಂದು ಗುಡಿಸಲು ಕಟ್ಟಿಕೊಟ್ಟಿದ್ದಾನೆ. ಅದೂ ಆತನ ಮನೆಯ ಪಕ್ಕಕ್ಕೇ. ನಾಯಕರ ಗಂಡು ಮಕ್ಕಳಿಬ್ಬರು ಈ ಊರು ಬೇಡವೆಂದು ಬೆಂಗಳೂರು ಪಟ್ಟಣ ಸೇರಿದ್ದಾರೆ. ಈಗ ದಾಸ ನಾಯಕರು ಏಕಾಂಗಿ. ಈಗ ಬೊಮ್ಮಿ ಬೇಯಿಸಿ ಹಾಕುವ ಅಡುಗೆಯೇ ಅವರಿಗೂ ಗತಿ.

ಅನ್ನಕ್ಕೆ ಇಡಲು ನೀರು ತರಲು ಹೋದ ಬೊಮ್ಮಿ ಕೊಡ ಹೊತ್ತು ಹೈರಾಣಾಗಿ ಬರುತ್ತಿದ್ದಳು. ಅವಳ ನೋಡಿ ಹೊರಗೆ ತೆಣೆಯ ಮೇಲೆ ಕೂತಿದ್ದ ನಾಯಕರ ಕಣ್ಣು ಕಿರಿದಾಗಿ ಪ್ರಶ್ನಿಸುವಂತೆ ಕಾಣುತ್ತಲೇ ಬೊಮ್ಮಿ ಒಡೆಯಾ ಹಳ್ಳದ ಗುಂಡಿಲಿ ಈ ಸರ್ತಿ ನೀರು ಬತ್ತ ಹೋಗಿ ತಿಂಗಳಾಯ್ತರಾ. ಹ್ವಾದ ಅಮಾಸಿಯಿಂದೇ ಬೊಮ್ಮಯ್ಯ ನಾಯಕರ ಭಾಗಾಯತದ ಬಾವಿಯಿಂದಲೇ ನೀರು ಹೊರ್ತಿಂವೆ ನಾನು. ಎಂದವಳು ಹಳ್ಳವನ್ನೆ ಕೊಚ್ಚಿಕೊಂಡು ಹೋಗುವಂತೇ ಬಂದ ನೀರೆಲ್ಲ ಎಲ್ಲಿ ಹೋಯ್ತು ಎಂದು ವಿಸ್ಮಯ ಪಡುತ್ತಾ ಒಳನಡೆದಳು.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...