ಮರಳಿ ಬಾರೆ ಪ್ರಕೃತಿ ಮಾತೆ
ಮರಳಿ ತೋರೆ ನಿನ್ನನು
ನಾವು ಸಿಡಿದು ಹೋಗುವ ಮುನ್ನ
ಪಾರು ಮಾಡೆ ನಮ್ಮನು
ಹಕ್ಕಿ ಹಾಡು ಕೇಳಬೇಕಿದೆ
ಅದಕೆ ಕಿವಿಗಳು ಕಾದಿವೆ
ಗುಬ್ಬಿ ಗೂಡು ಕಟ್ಟಬೇಕಿದೆ
ಅದಕೆ ಮನಗಳು ತೆರೆದಿವೆ
ಗಾಳಿ ಕೊಳಲ ನೂರು ಸ್ವರಕೆ
ಅಬ್ಬರದ ಮನ ಜಾರಿದೆ
ಬದುಕಿ ಉಳಿವ ಒಂದೆ ಆಸೆಗೆ
ಜೀವ ಕುಲ ಕೈ ಮುಗಿದಿದೆ
ಕೋಪ ಬೇಡ ತಾಪ ಬೇಡ
ನಾವು ತಪ್ಪಿಗೆ ಬಾಧ್ಯರು
ಚರಾಚರಗಳ ಶಾಪ ಜೊತೆಗೆ
ಪಾಪದಲಿ ನಾವ್ ಆದ್ಯರು
ಮರಳಿ ಬಾರೆ ಪ್ರಕೃತಿ ಮಾತೆ
ನಾವು ನಿನ್ನ ಕುಡಿಗಳು
ತಾಯಿ ಮಡಿಲಲಿ ಮಕ್ಕಳಾಡುವ
ನಮಗೆ ಬೇಕಾ ದಿನಗಳು
*****



















