ವಿಧಿಯ ಆಟ (ಪ್ರಾಪ್ತಿ)

ವಿಧಿಯ ಆಟ (ಪ್ರಾಪ್ತಿ)

ಕಲ್ಲಪ್ಪ ಬಡವ ಅಂದ್ರೆ ಬಡವ, ಕಷ್ಟಪಟ್ಟು ತೋಟಗಾರಿಕೆ ತರಬೇತಿ ಪಡೆದ. ಒಳ್ಳೆಯವನಾಗಿದ್ದ. ಎಲ್ಲರೂ ಆತನನ್ನು “ನಮ್ಮ ಮನೆಗೆ ಬನ್ನಿ,” “ನಮ್ಮ ಮನೆಗೆ ಬನ್ನಿ,” “ಹೂದೋಟ ಮಾಡಿಕೊಡಿ”, “ತೆಂಗಿನಗಿಡ ನೆಡಲು ಹೊಂಡ ಎಷ್ಟು ದೊಡ್ಡದಿರಬೇಕು”, “ಗೊಬ್ಬರ ಎಷ್ಟು ಹಾಕಬೇಕು” ಎಂದು ಕೇಳುವವರೇ, ಕರೆಯುವವರೇ. ಅವರೆಲ್ಲರಿಗೂ ಇವನು ಕೆಲಸ ಮಾಡಿಕೊಡುತ್ತಾ ಪ್ರೀತಿಯ ಕಲ್ಲಪ್ಪನಾಗಿದ್ದ.

ಸ್ಥಳೀಯ ಪ್ರೌಢಶಾಲೆಯೊಂದರಲ್ಲಿ ಅವನಿಗೆ ನೌಕರಿ ಸಿಕ್ಕಿತು. ಅವನ ನೌಕರಿ ದಾಖಲಾತಿಗಳು ಮೇಲಿನ ಕಛೇರಿಗೆ ಹೋದವು. ಅಲ್ಲಿ ಸಂಬಂಧಪಟ್ಟ ಗುಮಾಸ್ತರ ಮೇಜನ್ನು ಸೇರಿತು. ಸುಮಾರು ಎರಡು, ಮೂರು ತಿಂಗಳು ಕಳೆದವು. ಆದೇಶವು ಇಂದು ಬರಬಹುದು, ನಾಳೆ ಬರಬಹುದು ಎಂದು ಕಾದು ಕುಳಿತ ಕಲ್ಲಪ್ಪ.

ಕಲ್ಲಪ್ಪನಿಗೆ ಹೆಣ್ಣು ಕೊಡುವವರ ಸಂಖ್ಯೆ ಜಾಸ್ತಿಯಾಯಿತು. “ನನ್ನ ಕೆಲಸದ ಆರ್ಡರ್ ಬಂದ ಮೇಲೆ ಮದುವೆಯಾಗುವುದು, ನನ್ನ ಮದುವೆ ವಿಚಾರ ನಂತರ” ಎಂದು ವಿವಿಧ ರೀತಿಯಲ್ಲಿ ಹೇಳಿ ಕಳಿಸುತ್ತಿದ್ದ. ಆದರೂ “ನೀವೇನೂ ಯೋಚನೆ ಮಾಡಬೇಡಿ, ನಿಮ್ಮ ಮ್ಯಾನೇಜ್‌ಮೆಂಟಿನವರು ಕೊಡುವ ಈ ತಾತ್ಕಲಿಕ ಸಂಬಳವೇ ಸಾಕು, ಅಡ್ಡಿಯಿಲ್ಲ” ಎಂದು ಒಬ್ಬರು ಕನ್ಯ ಕೊಡಲು ಮುಂದೆ ಬಂದರು. ಸ್ನೇಹಿತರ ಒತ್ತಾಯದಿಂದ ಆ ಹುಡುಗಿಯನ್ನು ಮದುವೆಯಾದ. ತಿಂಗಳು ಉರುಳಿತು. ನೇಮಕಾತಿ ಆದೇಶ ಮಾತ್ರ ಬರಲಿಲ್ಲ. ಆದದ್ದು ಬೇರೆ. ಅವನ ಹೆಂಡತಿ ಹೆರಿಗೆ, ಹೆಣ್ಣು ಮಗುವಿನ ಜನನ. ಅತ್ತ ಆರ್ಡರ್ ಬಾರದೇ ಇರುವುದು, ಇತ್ತ ಹೆರಿಗೆ ಖರ್ಚು, ಹೆಣ್ಣು ಮಗು ಬೇರೆ. ಅವನಿಗೆ ತಲೆ ಕೆಟ್ಟು ಹೋಯಿತು. ಯಾರನ್ನು ಶಪಿಸುವುದು, ತನ್ನ ವಿಧಿಯನ್ನು ತಾನೇ ಹಳಿದ. ಮತ್ತೆ ದೇವರಿದ್ದಾನೆ ಎಂದು ನಿಟ್ಟುಸಿರು ಬಿಡುತ್ತಾ ಶಾಲೆಗೆ ಹೋಗಿ ಬರತೊಡಗಿದ. ಜಿಲ್ಲಾ ಕಛೇರಿಗೆ, “ನೀನೇ ಹೋಗಿ, ಆ ಗುಮಾಸ್ತನಿಗೆ ಹೇಳಿ ನಿನ್ನ ಫೈಲನ್ನು ರುಜುವಿಗಾಗಿ ವ್ಯವಸ್ಥೆ ಮಾಡಿ ಬಾ” ಎಂದರು ಸ್ನೇಹಿತರು.

ಅದು ಸರಿಯೆನಿಸಿತು. ಅಲ್ಪಸ್ವಲ್ಪವಿದ್ದ ಹಣವನ್ನು ತೆಗೆದುಕೊಂಡು ಜಿಲ್ಲಾ ಕಛೇರಿಗೆ ಹೋದ. ಆ ಗುಮಾಸ್ತನನ್ನು ಭೇಟಿಯಾದ. ತನ್ನ ಪರಿಚಯ ಹೇಳಿಕೊಂಡ. ತನ್ನ ಕಷ್ಟ ತೋಡಿಕೊಂಡ. ಅನುಕಂಪ ಸೂಚಿಸಿಯಾರೇ? ಇಲ್ಲ!

“ಎಷ್ಟು ತಂದಿದ್ದೀಯಾ?”

“ನನ್ನಲ್ಲಿದ್ದ ಸ್ವಲ್ಪ ಹಣವನ್ನು ತಂದಿದ್ದೇನೆ”

“ಕೊಡಿಲ್ಲಿ”

ಅವನು ಕೊಟ್ಟ ಹಣವನ್ನು ಎಣಿಸಿ

“ಇಷ್ಟು ಸಾಲುವುದಿಲ್ಲ, ಸಾಲುವುದೇ ಇಲ್ಲ. ಇನ್ನಷ್ಟು ಬೇಕು.”

“ಎಷ್ಟು ಬೇಕೆಂದು ತಿಳಿಸಿ, ಮುಂದಿನ ಸಾರಿ ಬರುವಾಗ ತರುತ್ತೇನೆ” ಎಂದು ಹೇಳಿ,

“ಯಾವಾಗ ಬರಲಿ?”

“ಒಂದು ತಿಂಗಳು ಬಿಟ್ಟು ಬಾ” ಎಂದ ಗುಮಾಸ್ತ ಧನ್ಯವಾದ ಹೇಳಿ ವಾಪಸ್ಸು ಬಂದ ಕಲ್ಲಪ್ಪ.

ತಿಂಗಳು ಕಳೆಯಿತು. ಜಿಲ್ಲಾ ಕಛೇರಿಗೆ ಹೋದ. ಗುಮಾಸ್ತನನ್ನು ಕಂಡ, “ಓಹೋಹೋ…. ನಮಸ್ಕಾರ ಬನ್ನಿ, ಬನ್ನಿ….” ಎಂದು ಚೇರು ಹಾಕಿ ಕುಳ್ಳಿರಿಸಿದ. ಅಕ್ಕಪಕ್ಕದ ಗುಮಾಸ್ತರಿಗೆ ಪರಿಚಯಿಸಿದ. ಇವನಿಗೆ ಖುಷಿಯಾಯಿತು. ಕಾಫಿಗೆ ಗುಮಾಸ್ತನೇ ಕರೆದ. ಕುಡಿದು ದುಡ್ಡನ್ನು ಕೊಡಲು ಹೋದ. ಬೇಡ, ಬೇಡ, ಎಂದು ತಾನೇ ಕೊಟ್ಟ ಇವರೀರ್ವರು ಮಾತನಾಡುತ್ತಾ “ದುಡ್ಡು ಎಷ್ಟು ತಂದಿದ್ದೀಯ ಕೊಡು”

ತಂದ ಹಣವನ್ನು ಪೂರ್ತಿ ಕೊಟ್ಟ

“ನಿಮ್ಮ ಫೈಲನ್ನು ಆದಷ್ಟು ಬೇಗ ಹತ್ತು, ಇಪ್ಪತ್ತು ದಿವಸಗಳಲ್ಲಿ ಸಾಹೇಬರ ಸಹಿ ಮಾಡಿಸಿ ನಿಮಗೆ ಕಳಿಸಿ ಕೊಡುತ್ತೇನೆ” ಎಂದು ಭರವಸೆ ಕೊಟ್ಟ.

ಆದರೆ ಭರವಸೆ ಹಾಗೇ ಉಳಿಯಿತು. ಕೆಲಸ ಮಾತ್ರ ಆಗಲಿಲ್ಲ. ಕಲ್ಲಪ್ಪ ಜಿಲ್ಲಾ ಕಛೇರಿಗೆ ಹೋಗುವುದು, ಬರುವುದು ಹೀಗೆ ನಡೆದಿತ್ತು.

ಎರಡು ವರ್ಷ ಕಳೆಯಿತು. ಪುನಃ ಹೋದ. ಆ ಗುಮಾಸ್ತನನ್ನು ಕಂಡು ನಮಸ್ಕರಿಸಿದ. ಇವನನ್ನು ಕಂಡು ಮತಾನಾಡಿಸಲೇ ಇಲ್ಲ. ಕ್ಯಾರೇ ಅನ್ನಲಿಲ್ಲ. ಕಲ್ಲಪ್ಪ ನಿಂತೇ ಇದ್ದ. ಎಷ್ಟೋ ಹೊತ್ತಿನ ಮೇಲೆ ಕಲ್ಲಪ್ಪನನ್ನು ಕಂಡು ಜಬರದಸ್ತಾಗಿ “ಹಣ ಕೊಡಿ” ಎಂದ.

“ನೋಡಿ ಸರ್, ನನ್ನಲ್ಲಿದ್ದ ಎಲ್ಲ ಹಣವೂ ಖಾಲಿಯಾಗಿದೆ. ಸಾಲ ಮಾಡಿ ಕೊಟ್ಟಿದ್ದೇನೆ. ಈಗ ಎಲ್ಲೂ ಸಾಲ ಸಿಗಲಿಲ್ಲ” ಎಂದು ಹೇಳುವಷ್ಟರಲ್ಲಿಯೇ,

“ಹೆಂಡತಿ ತಾಳಿ ಮಾರಿಯಾದ್ರೂ ಹಣ ತಂದು ಕೊಡಬೇಕ್ರೀ, ಕೆಲಸವಾಗಬೇಕಿದ್ರೆ ಏನು ಮಾಡುವುದಕ್ಕೂ ಸಿದ್ಧರಿರಬೇಕ್ರಿ” ಎಂದು ಗದರಿಸಿದ.

ಕಲ್ಲಪ್ಪ ನಮ್ರತೆಯಿಂದ ಅವನು ಹೇಳಿದ್ದೆಲ್ಲವನ್ನು ಸ್ವೀಕರಿಸಿ

“ಸಾರ್”

“ಏ ಹಣ ಇಲ್ಲಾಂದ್ರೆ ನಾನಾಗ್ಲೆ ಹೇಳಿದ್ರಲ್ಲಾ ಹಾಗೆ ಮಾಡಿ. ಇಲ್ಲಿ ಎಲ್ರಿಗೂ ಹಂಚಬೇಕು”

“ನಾನು ಕೊಟ್ಟ ಹಣವನ್ನೆಲ್ಲಾ ಏನು ಮಾಡಿದ್ರಿ?” ಎಂದಾಕ್ಷಣ ಗುಮಾಸ್ತ ಉಗ್ರವಾದ.

“ಅದನ್ನೆಲ್ಲಾ ಕೇಳ್ಬೇಡ್ರಿ, ಹೇಳಿದಷ್ಟು ಮಾಡಿ, ನಿಮ್ಮ ಕೆಲಸ ಆಗಬೇಕೋ ಬೇಡ್ವೋ” ಎಂದು ಜೋರು ಮಾಡಿದ. ಮತ್ತೇನು ಮಾಡುವುದು “ಎರಡು ದಿನ ಬಿಟ್ಟು ಬರುತ್ತೇನೆ” ಎಂದು ವಾಪಾಸ್ಸು ಬಂದ.

ಈ ಸಾರಿ ಎಲ್ಲಾ ಕಡೆ ಸಾಲ ಮಾಡಿದ್ದರಿಂದ ಹಣ ಎಲ್ಲೂ ಸಿಗಲಿಲ್ಲ. ಆದರೆ ಗುಮಾಸ್ತನ ಹಣದ ದಾಹ ತೀರಿರಲಿಲ್ಲ. ಏನು ಮಾಡುವುದು ಎಂದು ಯೋಚಿಸುತ್ತಾ ಮನೆಯಲ್ಲಿಯೇ ಕುಳಿತಿದ್ದ.

ಹೆಂಡತಿಗೆ ಮತ್ತೆ ಹೆರಿಗೆ ದಿನ ಸಮೀಪವಾಯಿತು. ಆಕೆಯ ಖರ್ಚು ಬೇರೆ, ಎರಡು ಹೆಣ್ಣು ಮಕ್ಕಳು ಬೇರೆ, ಅವನಿಗೆ ಹುಚ್ಚುಹಿಡಿದಂತಾಯಿತು. ದಿಕ್ಕು ಕಾಣದಂತಾಯಿತು. ಹೆಂಡತಿಗೆ ತನ್ನ ಗಂಡನ ಪರಿಸ್ಥಿತಿ ಅರಿವಾಗಿ ನಿರ್ಧಾರ ತೆಗೆದುಕೊಂಡೇ ಗಂಡನ ಬಳಿ ಬಂದಳು. “ರೀ… ಏನ್ರೀ… ನಿಮ್ಮ ಕಷ್ಟ ನನಗೂ ಗೊತ್ತಾಗುತ್ತೆ ಕಣ್ರೀ ಈ ಕಷ್ಟದಲ್ಲಿ ನಾನೂ ಭಾಗಿಯಾಗ್ತೀನ್ರಿ” ಎಂದು ತನ್ನೆರಡು ಕೈಗಳಿಂದ ಅವನ ಗಲ್ಲವನ್ನು ಹಿಡಿಯುತ್ತಾ ನಿಧಾನವಾಗಿ ಹೇಳಿದಾಗ ಆಕೆಗೆ ತಡೆಯಲಾರದ ದುಃಖ ಉಮ್ಮಳಿಸಿ ಬಂದು ಅತ್ತುಬಿಟ್ಟಳು. ಅವನಿಗೂ ಸಹ ಈಕೆಯ ಸ್ಥಿತಿಯನ್ನು ಕಂಡು ಕಣ್ಣಲ್ಲಿ ನೀರು ಬಂದವು, ತಾನು ಸಮಾಧಾನ ತೆಗೆದುಕೊಂಡು ಆಕೆಯನ್ನು ಸಮಾಧಾನಪಡಿಸಿದ. ಕೊನೆಗೆ ಹೆಂಡತಿ ಧೈರ್ಯಮಾಡಿ “ನನ್ನ ತಾಳಿ ಸರ ಕೊಡುತ್ತೇನೆ ಎಲ್ಲಾದರೂ ಗಿರಿವಿ ಇಡಿ. ಇಲ್ಲದಿದ್ದರೆ ಅದನ್ನು ಮಾರಿ ಬಂದ ಹಣವನ್ನು ಕೊಟ್ಟು, ಇದೆ ಕೊನೆಯದು, ಇನ್ನು ಮುಂದೆ ಹಣವನ್ನು ಪೂರೈಸಲು ಸಾಧ್ಯವಿಲ್ಲ. ನಾನಿನ್ನು ಇಲ್ಲಿಗೆ ಬರುವುದಿಲ್ಲ ಎಂದು ಹೇಳಿ ಬನ್ನಿರಿ” ಎಂದಳು.

ಮಾರನೇ ದಿನವೇ ತಾಳಿ ಸರವನ್ನು ಗಿರಿವಿ ಇಡಲು ಸಾಧ್ಯವಾಗಲಿಲ್ಲ. “ಮೊದಲೇ ಸಾಲಗಾರ ನೀನು ಅದನ್ನು ಮಾರಿ ಹಣ ತೆಗೆದುಕೊ” ಎಂದರು ಗಿರಿವಿಕಾರರು. ನಿರ್ವಾಹವಿಲ್ಲದೆ ದೇವರ ಮೇಲೆ ಭಾರ ಹಾಕಿ ದೇವರೇ ಮುಂದೆ ಇದನ್ನು ಹೆಂಡತಿಗೆ ಸಂಬಳವಾದ ಕೂಡಲೇ ಮಾಡಿಸಿ ಕೊಡುತ್ತೇನೆ ಎಂದು ಯೋಚಿಸುತ್ತಾ ಮಾರಲು ಮನಸಿಲ್ಲದಿದ್ದರೂ ಮಾರಿದ. ಬಂದಷ್ಟು ಹಣವನ್ನು ತೆಗೆದುಕೊಂಡು ಜಿಲ್ಲಾ ಕಛೇರಿಗೆ ಹೋದ.

“ಸಾರ್ ನೀವೇಳಿದ ಹಾಗೆ ಹೆಂಡತಿ ತಾಳಿಯನ್ನು ಮಾರಿ ಹಣ ತಂದಿದ್ದೀನಿ ತೆಗೆದುಕೊಳ್ಳಿ” ಎಂದು ಕೊಟ್ಟ, “ತಡಮಾಡದೇ ಆದಷ್ಟುಬೇಗ ನನ್ನ ನೇಮಕಾತಿ ಆರ್ಡರನ್ನು ಸಾಹೇಬರ ಸಹಿ ಹಾಕಿಸಿ ಕಳಿಸಿಕೊಡಿ. ನಿಮ್ಮ ಹೆಸರನ್ನು ಹೇಳಿ ಬದುಕುತ್ತೇನೆ” ಎಂದು ದೈನ್ಯತೆಯಿಂದ ಹೇಳಿ ವಾಪಾಸ್ಸು ಬಂದ.

ಕೇವಲ ಮೂರೇ ಮೂರು ದಿನಕ್ಕೆ ಕಲ್ಲಪ್ಪನ ನೇಮಕಾತಿ ಆದೇಶವು ಜಿಲ್ಲಾ ಅಧಿಕಾರಿಯ ಸಹಿಯೊಂದಿಗೆ ಶಾಲೆಗೆ ಬಂದಿತು. ಎಲ್ಲರಿಗೂ ಆಶ್ಚರ್ಯವೋ ಆಶ್ಚರ್ಯ. ಎರಡು ಮೂರು ವರ್ಷವಾದರೂ ಆಗದೇ ಇರುವ ಕೆಲಸ ಈಗ ಆಗಿತ್ತು. ಕಲ್ಲಪ್ಪನ ಹೆಂಡತಿಗೆ ಈ ಸಾರಿ ಗಂಡು ಮಗು ಜನನವಾಗಿತ್ತು. ಅದರ ಪರಿಣಾಮ ಎಂದು ಇವರೆಲ್ಲ ಭಾವಿಸಿದ್ದರು. ಆದರೆ ಅಲ್ಲಿ ಆಗಿದ್ದೇ ಬೇರೆ. ಏನೇ ಆಗಲಿ ನನ್ನ ಕೆಲಸ ಮಾಡಿಕೊಟ್ಟಿದ್ದಾನೆ ಎಂದು ಹಣ್ಣು ಹೂವು ಕೊಟ್ಟು ಬರಲು ಜಿಲ್ಲಾ ಕಛೇರಿಗೆ ಕಲ್ಲಪ್ಪ ಹೋಗಿದ್ದ. ಅಲ್ಲಿ ಆ ಗುಮಾಸ್ತ ಕಾಣಲಿಲ್ಲ. ಬಹಳ ಹೊತ್ತು ಕಾದ. ಅಲ್ಲಿದ್ದ ಅಟೆಂಡರ್ “ಯಾರು ನೀವು? ಯಾರು ಬೇಕಾಗಿತ್ತು?” ಎಂದು ಕೇಳಿದ. “ಈ ಕುರ್ಚಿಯಲ್ಲಿ ಕುಳಿತು ಕೊಳ್ತಾರಲ್ಲ ಆ ಗುಮಾಸ್ತರು ಎಲ್ಲಿ ಹೋಗಿದ್ದಾರೆ” ಎಂದು ಕೇಳಿದ. “ರೈಲ್ವೆ ಸ್ಟೇಷನ್ ಹತ್ತಿರ ಒಂದು ದೊಡ್ಡ ಆಸ್ಪತ್ರೆ ಇದೆ. ಅಲ್ಲಿಗೆ ಹೋದ್ರೆ ಅವರು ಸಿಗ್ತಾರೆ” ಎಂದ.

ಕಲ್ಲಪ್ಪ ತಡಮಾಡಲಿಲ್ಲ. ಅಲ್ಲಿಗೆ ಹೋದ. ಹೇಗೋ ಪತ್ತೆ ಮಾಡಿ ಅವರಿದ್ದ ರೂಮಿಗೆ ಹೋದ. ಅಲ್ಲಿ ಅವನ ಹೆಂಡತಿಯನ್ನು ಮಲಗಿಸಿದ್ದಾರೆ. ಕಣ್ಣು ಪಿಳಿಪಿಳಿ ಬಿಡುತ್ತಾ ಅಂಗಾತ ಮಲಗಿದ್ದಾಳೆ. ಮುಖ ಬಿಳಿಚಿ ಹೋಗಿದೆ. ಕ್ಷಣಗಣನೆ ಮಡುತ್ತಾ ಆಕೆಯ ಪಕ್ಕದಲ್ಲಿ ಕುಳಿತಿದ್ದ ಗುಮಾಸ್ತ. ಗರ ಬಡಿದು ನಿಂತ ಕಲ್ಲಪ್ಪನ ಚೀಲದಲ್ಲಿದ್ದ ಹಣ್ಣು, ಹೂವು ಎಲ್ಲಾ ಬಾಡಿದ್ದವು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಳೆ ಸರವಲ್ಲ
Next post ಕವಿಯ ಮಾತನ್ನು ಯಾರು ಕೇಳುತ್ತಾರೆ?

ಸಣ್ಣ ಕತೆ

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

cheap jordans|wholesale air max|wholesale jordans|wholesale jewelry|wholesale jerseys