ಸನ್ಮಾನ

ಸನ್ಮಾನ

ಖ್ಯಾತ ಸಾಹಿತಿ ಮಾ.ನಾ.ಸು. ಅವರಿಗೆ ಪೌರ ಸನ್ಮಾನ, ಅಲಂಕೃತ ಟ್ರ್ಯಾಕ್ಟರ್‌ನಲ್ಲಿ ಅದ್ದೂರಿ ಮೆರವಣಿಗೆ, ಕೊಂಬು ಕಹಳೆ, ಜಾನಪದ ಕುಣಿತ, ವೀರಗಾಸೆ ಯೂನಿಫಾರಂ ತೊಟ್ಟ ಸ್ಕೂಲು, ಕಾಲೇಜಿನ ಮಕ್ಕಳು, ನಗರದ ಗಣ್ಯ ಅಧಿಕಾರಿಗಳು ಎಲ್ಲರೂ ಈತನನ್ನು ಹೊತ್ತು ಮೆರೆಸಿ ಬೆವರು ಸುರಿಸಿ ಸಭಾಂಗಣಕ್ಕೆ ಕರೆತಂದು ಪ್ರತಿಷ್ಠಾಪಿಸಿದ್ದಾರೆ. ಹಾರ ತುರಾಯಿಗಳ ರಾಶಿ ಬಿದ್ದಿದೆ. ಸಭಾಂಗಣದ ತುಂಬಾ ಸಾಹಿತ್ಯ ಪ್ರೇಮಿಗಳು ತುಂಬಿತುಳುಕುತ್ತಿದ್ದರೆ, ಹೂವಿನಿಂದಲಂಕೃತವಾದ ಭರ್ಜರಿ ವೇದಿಕೆಯ ಮೇಲೆ ಮಹಾಸ್ವಾಮಿಗಳು, ಮಂತ್ರಿ ಮಹೋದಯರು, ಹಿರಿಯ ಸಾಹಿತಿಗಳು, ನಗರಸಭೆಯ ಅಧಿಕಾರಿಗಳು ಎಲ್ಲರೂ ಸಾಲಾಗಿ ವಿರಾಜಮಾನರಾಗಿದ್ದಾರೆ. ಆ ಸಾಲಿನಲ್ಲಿ ನಾನೂ ಇದ್ದೇನೆ. ಬೆಂಕಿಯ ಮೇಲೆ ಕುಳಿತಂತಹ ಅನುಭವ. ನನಗಿದೆಲ್ಲಾ ಇಷ್ಟವಿಲ್ಲ. ಬೇಕೂ ಇಲ್ಲ. ಇಂತಹ ಅಬ್ಬರ, ಆಡಂಬರಗಳಿಂದ ನಾನೆಂದೂ ದೂರ. ಆದರೆ ಕಾರ್ಯಕರ್ತರು ಬಿಡಬೇಕಲ್ಲ. ನನ್ನನ್ನು ಖಿನ್ನತೆ ಕಾಡಿದರೆ ಮಾ.ನಾ.ಸು. ಪ್ರಸನ್ನವದನರಾಗಿದ್ದಾರೆ.

ಕಳೆದ ಮಾಸ ಅವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಬೇರೆ ಸರಕಾರ ಅನುಗ್ರಹಿಸಿದೆ. ಪ್ರಶಸ್ತಿ ಪುರಸ್ಕಾರ, ಮಾನ ಸನ್ಮಾನ ಇವರಿಗೆ ಹೊಸದೇನಲ್ಲ. ಆದರೆ ಈ ಸಲ ತಮ್ಮ ಊರಿನ ಸಾಹಿತ್ಯವರೇಣ್ಯನಿಗೆ ರಾಜ್ಯೋತ್ಸವ ಪ್ರಶಸ್ತಿಯಂತಹ ದೊಡ್ಡ ಪ್ರಶಸ್ತಿ ಬಂದಾಗ ಊರಿನ ಜನ ಸುಮ್ಮನಿರಲು ಸಾಧ್ಯವೆ. ಇಂತಹ ವರ್ಚಸ್ಸಿನ ಸಾಹಿತಿಗಳಾದರೂ ಜಿಲ್ಲೆಯಲ್ಲಿ ಅದೆಷ್ಟು ಜನರಿದ್ದಾರೆ? ನಗರಸಭೆಯವರು ಊರಿನ ಜನರ ಬಾಯಿಗೆ ವಾರಕ್ಕೊಮ್ಮೆಯಾದರೂ ನೀರು ಬಿಡದಿದ್ದರೂ ಊರೇ ಹಂದಿಗಳ ಬೀಡಾದರೂ ಚರಂಡಿಗಳ ತುಂಬಾ ಕೊಚ್ಚೆ ಮಲೆತು ಸೊಳ್ಳೆಗಳ ಸಾಮ್ರಾಜ್ಯವಾಗಿದ್ದರೂ ತಿಪ್ಪೆಗುಂಡಿಗಳ ರಾಶಿರಾಶಿ ರಸ್ತೆ ಬದಿ ಸಿಂಗಾರಗೊಂಡು ಊರೆಂಬ ಊರೇ ಗಬ್ಬುನಾತ ಹೊಡೆಯಹತ್ತಿದ್ದರೂ ಒಂದಿಷ್ಟು ಮೂಗು ಸಿಂಡರಿಸದ, ತಮ್ಮ ಲಕ್ಷವೆಲ್ಲಾ ಊರಿನ ಒಳೊಳ್ಳೆ ಕಡೆ ಇರುವ ನೆಲವನ್ನು ಕಬಳಿಸಿ ಸೈಟುಗಳನ್ನಾಗಿ ಮಾಡಿಕೊಂಡು ಹಂಚಿಕೊಳ್ಳುವಲ್ಲಿ ಸದಾ ಬಡಿದಾಡುವ ಈ ನೆಲಗಳ್ಳರು ತಮ್ಮ ಬಡಿದಾಟ ಮರೆತು ಇಂತಹ ಒಂದು ನಾಗರಿಕ ಸನ್ಮಾನ ಏರ್ಪಡಿಸಿದ್ದಕ್ಕಾಗಿ ಊರಿನ ಮಂದಿ ನಗರಸಭೆಯವರ ಸಂಸ್ಕಾರ ಸಂಸ್ಕೃತಿಗೆ ನಿಬ್ಬೆರಗಾಗಿ ಬಿಡುತ್ತಿರುವ ನಿಟ್ಟುಸಿರಿಗೆ ಇಡೀ ಸಭಾಂಗಣವೇ ಬೆಚ್ಚಗಾಗಿದೆ. ಸಾಹಿತಿ ಮಾ.ನಾ.ಸು. ನಗರಸಭೆಯವರನ್ನು ‘ನರಕಸಭೆ’ ಎಂದು ಗೇಲಿ ಮಾಡಿ ಉಗುಳಿ ಪತ್ರಿಕೆಗಳಿಗೆ ಬರೆದದ್ದುಂಟು. ಆದರೇನು, ಕಿಂಚಿತ್ತೂ ಬದಲಾಗದ ನಗರಸಭೆ ‘ಬೈದವರೆನ್ನ ಬಂಧುಗಳಯ್ಯ’ ಎಂಬ ಬಸವ ತತ್ತ್ವ ಪ್ರತಿಪಾದಕರು. ನಿಂದಿಸಿದ ಸಾಹಿತಿಗೆ ಸನ್ಮಾನ ಮಾಡುತ್ತಿರುವ ಇವರ ಸಹೃದಯತೆಯ ಬಗ್ಗೆ ನಾಗರಿಕರಿಗೆ ಅದೊಂದು ಬಗೆಯ ಸೋಜಿಗ. ಮಾ.ನಾ.ಸು. ವೇದಿಕೆ ಏರಿದರೆಂದರೆ ರಾಜಕಾರಣಿಗಳನ್ನು, ಪೊಲೀಸರನ್ನು, ಮಿತ್ರ ಸಾಹಿತಿಗಳನ್ನು ಕಡೆಗೆ ಜಗದ್ಗುರುಗಳನ್ನೂ ಬಿಡದೆ ಮುಖಮೂತಿ ನೋಡದೆ ಜಾಡಿಸಿಬಿಡುತ್ತಾರೆ. ಈತನಿಂದ ಬೈಸಿಕೊಳ್ಳುವುದನ್ನೇ ಗುಣಗಾನವೆಂಬಂತೆ ಸ್ವೀಕರಿಸುವ ಜಗದ್ಗುರುಗಳು ಸಹ ಮಾ.ನಾ.ಸು. ಅವರನ್ನು ಕರೆದು ಮಠದ ಉತ್ಸವದಲ್ಲಿ ಬಿರುದುಬಾವಲಿ ನೀಡಿ ಸನ್ಮಾನಿಸಿದ್ದುಂಟು. ಬಯ್ಯುವುದರಲ್ಲಿ, ಸನ್ಮಾನ ಗಿಟ್ಟಿಸುವುದರಲ್ಲಿ ಇವರದ್ದು ಗಿನ್ನಿಸ್ ದಾಖಲೆ ಅನ್ನಬಹುದು. ನಿಷ್ಠೂರವಾಗಿ ಬರೆಯುತ್ತಾರೆ, ಮಾತನಾಡುತ್ತಾರೆ, ಗಟ್ಟಿ ಸಾಹಿತಿ, ಗಂಡು ಸಾಹಿತಿ, ಗುಂಡು ಸಾಹಿತಿ, ಗೂಂಡಾ ಸಾಹಿತಿ ಎಂದೆಲ್ಲಾ ಓದುಗರು ಹಾಡಿ ಹೊಗಳುತ್ತಾರೆ. ಈ ಸಾಹಿತಿ ಕಂ ಪ್ರೊಫೆಸರ್ ಕಂಡರೆ ಪ್ರಾಂಶುಪಾಲರೂ ಎದುರಾಡರು. ಎಲ್ಲೆಲ್ಲೂ ತನ್ನ ಸಾಹಿತಿಗಿರಿ ಚಲಾಯಿಸುವ ಮಾ.ನಾ.ಸು. ಛಲದಂಕಮಲ್ಲನೆಂದೇ ಪ್ರಖ್ಯಾತರು.

ಶಿಷ್ಯ ಅಲವೇಲು ಮಾ.ನಾ.ಸು. ಚೇರ್‌ನ ಹಿಂದುಗಡೆಯೇ ಇದ್ದು ಆಗಾಗ ಅವರಿಗೆ ಬಿಸಿಲೇರಿ, ಒಣದ್ರಾಕ್ಷಿ, ಗೋಡಂಬಿ ಕೊಡುವ ಉಸ್ತುವಾರಿ ಹೊತ್ತಿದ್ದಾಳೆ. ಮಾ.ನಾ.ಸು. ಗೀಚಿ ಬರೆದದ್ದನ್ನೆಲ್ಲಾ ಟೈಪ್ ಮಾಡಿಡುವ ಅಲವೇಲು ಸಾಹಿತಿಯ ಪಟ್ಟ ಶಿಷ್ಯೆ. ಮಾಮೂಲಿ ಟೈಪಿಸ್ಟಳಾದರೂ ಕನ್ನಡದಲ್ಲಿ ಪ್ರೈವೇಟಾಗಿ ಎಂ.ಎ. ಮಾಡಿಕೊಂಡಿರುವ ಈಕೆ ಸ್ವತಃ ಒಂದು ಸಾಲು ಬರೆಯದಿದ್ದರೂ ಬರೆದವರನ್ನು ಟೀಕಿಸುವುದರಲ್ಲಿ ನಿಷ್ಣಾತೆ. ಹೊಗಳುವುದೂ ಗೊತ್ತಿದೆ. ಅದು ಮಾತ್ರ ಮಾ.ನಾ.ಸು. ಅವರಿಗೇ ಮೀಸಲು. ಅವರ ಮೊದಲು ಪ್ರಕಟವಾದ ಕಥೆ, ಲೇಖನ, ಕಾದಂಬರಿಯಿಂದ ಹಿಡಿದು ಇಂದಿನ ಬರಹ ಪುಸ್ತಕಗಳವರೆಗೆ ಎಲ್ಲಾ ತುಣುಕುಗಳನ್ನು ಸಂಗ್ರಹಿಸಿಟ್ಟಿದ್ದಾಳೆ, ಪೋಟೋಗಳನ್ನು ತೆಗೆವ ಹಾಬ್ಬಿ ಇರುವ ಈಕೆ ಇತ್ತೀಚೆಗೆ – ಎಲ್ಲಾ ಮಾ.ನಾ.ಸು. ಗಾಗಿ, ಹಾಗಾದರೆ ಇವಳಿಗೆ ಹೇಳೋರು ಕೇಳೋರು ಯಾರೂ ಇಲ್ಲವೆ? ಗಂಡ ಒಬ್ಬನಿದ್ದಾನೆ, ಹೈಸ್ಕೂಲಿನಲ್ಲಿ ಮೇಷ್ಟು; ಒಂದಿಷ್ಟು ಎಡಬ. ಮಾ.ನಾ.ಸು. ಜತೆಯಲ್ಲಿ ಹೆಂಡತಿ ಓಡಾಡುವುದೇ ಅವನಿಗೆ ಪರಮ ಸೌಭಾಗ್ಯದ ವಿಷಯ. ಅಲವೇಲು ಗಂಡನ ಸಂಗಡ ಕಳೆಯುವುದಕ್ಕಿಂತ ಮಾ.ನಾ.ಸು. ಜತೆ ಸಾಹಿತ್ಯ ಪರಿಚಾರಿಕೆ ಮಾಡುವುದೇ ಹೆಚ್ಚು. ಮಾ.ನಾ.ಸು. ಕೂಡ ಅಷ್ಟೇ. ದೆವ್ವದಂತಹ ಬಂಗಲೆಯಲ್ಲಿ ನಾಲ್ಕಾರು ರೂಮುಗಳಿದ್ದರೂ ಮನೆ – ಮಡದಿ – ಮಕ್ಕಳ ಗೋಜಿನಲ್ಲಿದ್ದರೆ ಸಾಹಿತ್ಯ ಗೋರಿ ಸೇರೀತೆಂದು ಅಂಜಿ ಬರೆಯಲು ಪ್ರತ್ಯೇಕ ಆಫೀಸನ್ನೇ ಮಾಡಿದ್ದಾರೆ. ಅಲ್ಲಿ ಅವರಿಬ್ಬರ ಸಾಹಿತ್ಯ ಸೇವೆಗೆ ಯಾವ ಅಡಚಣೆಯೂ ಇಲ್ಲ. ಮಾ.ನಾ.ಸು. ಸಮಾರಂಭಗಳಲ್ಲಿ ಮಾಡುವ ಭಾಷಣದಿಂದ ಹಿಡಿದು ಧರಿಸುವ ಉಡುಪು, ತೊಡುವ ಚಪ್ಪಲಿಯ ಬಣ್ಣವನ್ನು ಸಹ ಅಲವೇಲುವೇ ನಿರ್ಧರಿಸುವಾಕೆ. ತನ್ನ ಯಶಸ್ಸಿನಲ್ಲಿ ಅವಳ ಪಾಲಿದೆ ಅಂತ ಕುಡಿದಾಗಲೊಮ್ಮೆ ಮಾ.ನಾ.ಸು. ಬಡಬಡಿಸುವುದುಂಟು. ಇದನ್ನೆಲ್ಲಾ ಕೇಳುವಾಗ ನನ್ನ ಹೊಟ್ಟೆಯಲ್ಲಿ ಖಾರ ಕದಡಿದ ಅನುಭವ, ಅಸೂಯೆ, ಆಕ್ರೋಶ, ಅಸಹಾಯಕತೆ ಏನೆಲ್ಲಾ ಆಗುತ್ತದಾದರೂ ಇಂಥವರ ಬಗ್ಗೆ ಬಾಯಿಬಿಟ್ಟರೆ ನನ್ನದೇ ಸಣ್ಣತನ ಆದೀತೆಂಬ ಅಳುಕು.

ಅಲಮೇಲು ಹಿಂದಿನಿಂದ ಬಗ್ಗಿ ಮುಖಕ್ಕೆ ಮುಖವಿಟ್ಟು ಮಾ.ನಾ.ಸು. ಜತೆ ಪಿಸುಗುಡುವುದೇನು, ಇಷ್ಟಗಲ ನಗುವುದೇನು, ಸಲಹೆ ಸೂಚನೆ ನೀಡುವ ಪರಿ, ಸರಬರ ಓಡಾಟದ ವೈಖರಿ, ಅಸಹನೆಯಿಂದ ಕುದಿಯುತ್ತೇನೆ. ಅವಳ ಸೆರಗಿನ ಗಾಳಿ ತಾಕಿದರೂ ಬೆಂಕಿಯ ಝಳ ಬಡಿದಂತಾಗುತ್ತದೆ. ಯಾರಾದರೂ ನನ್ನ ಪರಿಸ್ಥಿತಿಯನ್ನು ಗಮನಿಸಿಬಿಟ್ಟರೆ ಎಂಬ ಭೀತಿಯಿಂದ ಮುಖದ ತುಂಬಾ ನಗೆ ಸೃಷ್ಟಿಸಿಕೊಳ್ಳಲು ಶತಪ್ರಯತ್ನ ಮಾಡುತ್ತೇನೆ, ಸ್ಟ್ಯಾಂಡಿಂಗ್ ಫ್ಯಾನ್‌ಗಳಿದ್ದರೂ ನನಗೇಕೋ ಸೆಕೆಯಿಂದ ಮೈಯೆಲ್ಲಾ ಬೆವರು, ಎದೆಯಲ್ಲೆಲ್ಲಾ ನಗಾರಿ ಬಾರಿಸಿದಂತೆ ಭಾಸ, ಬಿ.ಪಿ. ಹೆಚ್ಚಾಗಿರಬಹುದೆ ಎಂಬ ಆತಂಕ. ನನ್ನನ್ನು ನಾನೇ ಸಂತೈಸಿಕೊಳ್ಳುತ್ತೇನೆ. ಅಸೂಯೆಗೆ ಪಕ್ಕಾಗದೆ ಸಮಾರಂಭದ ಆನಂದದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಹೆಣಗುತ್ತೇನೆ.

ಚಂದದ ಹುಡುಗಿ ಪದ್ಮಳ ಪ್ರಾರ್ಥನೆಯಿಂದ ಸಮಾರಂಭ ಆರಂಭವಾಗುತ್ತದೆ. ಕಾರ್ಯಕ್ರಮ ನಿರೂಪಣೆಗೆ ಮಿಂಚಿನ ಬಳ್ಳಿ ತಸ್ಮಿಯಾ ನಿಲ್ಲುತ್ತಾಳೆ. ಸಮಾರಂಭವೆಂದರೆ ಇನ್ನೇನು ಮಾ.ನಾ.ಸು. ರನ್ನು ವಾಚಾಮಗೋಚರ ಹಾಡಿ ಹೊಗಳುವುದು ತಾನೆ. ದಲಿತರ ಬಗ್ಗೆ ಮಾ.ನಾ.ಸು. ಬರೆದ ಪುಸ್ತಕಗಳು ಪ್ರಶಸ್ತಿ ಪಡೆದಿವೆ. ಮುಂದುವರಿದೆ ಜಾತಿಯವರಾದರೂ ಮಾ.ನಾ.ಸು. ಸಾಮಾಜಿಕ ಕಳಕಳಿಯುಳ್ಳ ನಿರ್ಭಿತ ಬರೆಹಗಾರ. ದಲಿತರ ಬಗ್ಗೆ ಅವರದ್ದು ನಿರ್ವ್ಯಾಜ ಪ್ರೇಮ…… ಇನ್ನು ಮುಂತಾಗಿ ಹಿರಿಯ ಸಾಹಿತಿಯೊಬ್ಬ ಅಭಿನಂದನಾ ಭಾಷಣ ಬಿಗಿಯುತ್ತಿದ್ದಾರೆ. ಮಾ.ನಾ.ಸು. ದಲಿತರನ್ನು ಪ್ರೀತಿಸಿದ್ದು ಬರೀ ಬರೆಹದಲ್ಲಷ್ಟೆ ಎಂಬ ಸತ್ಯ ಇವನಿಗೇನು ಗೊತ್ತು. ಮೀಸಲಾತಿ ಬಗ್ಗೆ ಒಳಗೇ ಕೆಂಡಕಾರುವ ಮಾ.ನಾ.ಸು. ದಲಿತರ ಹೆಗಲ ಮೇಲೆ ಕೈಹಾಕಿ ಅಂಬೇಡ್ಕರ್ ಬಗ್ಗೆ ಕವನ ಬರೆದಾಕ್ಷಣ ದಲಿತಬಂಧುವಾಗಲು ಶಕ್ಯವೆ! ತನಗಿಂತ ಸೇವೆಯಲ್ಲಿ ಕಿರಿಯ ದಲಿತ ಒಬ್ಬ ರೀಡರ್ ಆದಾಗ ಈ ಮಹಾಶಯ ಅದೆಷ್ಟು ಕೊಳಕು ಮಾತನಾಡಿದ್ದ. ಒಳಗೇ ಮಾಡಿದ ರಾಜಕೀಯ ಅದೆಷ್ಟು. ಆದರೂ ಈತ ಬಂಡಾಯ ಸಾಹಿತಿ ಎಂದೇ ಪ್ರಖ್ಯಾತ. ನಗು ಬರುತ್ತದೆ.

ಮಾ.ನಾ.ಸು. ಮೌಢ ಕಂದಾಚಾರ ಪದ್ಧತಿಗಳ ಪರಮ ಶತ್ರು, ದೇವರೆಂದರೆ ಅಲರ್ಜಿ. ದೇವರು, ಧರ್ಮ, ಸುಡುಗಾಡು ಸೇರಿದರೇನೆ ಜಾತಿಯ ವಿನಾಶ ಸಾಧ್ಯ ಅನ್ನೋದರ ಪ್ರತಿಪಾದಕ – ಸಚಿವರೊಬ್ಬರ ಗುಣಗಾನ ಸಾಗುತ್ತದೆ. ಮಾ.ನಾ.ಸು. ನಿಜಬಣ್ಣ ನನಗಲ್ಲದೆ ಬೇರೆ ಯಾರಿಗೆ ತಾನೆ ಗೊತ್ತಿದೆ. ತಾನೇ ನೇರವಾಗಿ ಜ್ಯೋತಿಷ್ಯ ಕೇಳದಿದ್ದರೂ ನನ್ನಿಂದ ಕೇಳಿಸಿ ತಮಗೆ ಯಾವಾಗ ಶುಕ್ರದೆಸೆಯು ಆರಂಭವಾಗುತ್ತದೆ ಎಂದು ಚಡಪಡಿಸುವುದುಂಟು. ಬಡ್ತಿ ಸಿಗಲೆಂದೇ ಸುದರ್ಶನ ಹೋಮ ಮಾಡಿಸಲು ನನಗೆ ಹೇಳುವ ಗುಳಿಕಕಾಲ, ವಾರ, ನಕ್ಷತ್ರ ನೋಡಿ ಕಾದಂಬರಿ ಬರೆಯಲು ಕೂರುವ ಈ ಮಹಾನುಭಾವ ಮೌಢ ಕಂದಾಚಾರಗಳ ಶತ್ರುವಂತೆ, ಮನೆತುಂಬಾ ದೇವರ ಪಟಗಳಿವೆ ನಿಜ. ಆದರೆ ಹೆಂಡತಿಯ ಭಾವನೆಯನ್ನು ನಾನು ಭಗ್ನಗೊಳಿಸಲಾರೆ. ಅವು ಕೂಡ ಮನೆಯ ಆಲಂಕಾರಿಕ ವಸ್ತುಗಳಲ್ಲಿ ಸೇರುತ್ತವೆ ಬಿಡಿ ಎಂದು ಬಂಡಲ್ ಬಿಡುವ ಮಾ.ನಾ.ಸು. ಓದುಗರ ದೃಷ್ಟಿಯಲ್ಲಂತೂ ಮಹಾ ವಿಚಾರವಾದಿ.

ಮಾ.ನಾ.ಸು. ಅವರೆಂದೂ ಪ್ರಶಸ್ತಿಗೆ, ಪ್ರಸಿದ್ದಿಗೆ ಆಶಿಸಿದವರಲ್ಲ. ಪ್ರಶಸ್ತಿಗಳೇ ಅವರನ್ನರಸಿಕೊಂಡು ಬರುತ್ತವೆ. ಅದವರ ಬರೆಹದ ತಾಕತ್ತು ಅನ್ನುತ್ತಾರೆ ಜಿಲ್ಲಾ ಅಧಿಕಾರಿಗಳೊಬ್ಬರು. ರಾಜ್ಯೋತ್ಸವ ಪ್ರಶಸ್ತಿಗಾಗಿ ಮಾ.ನಾ.ಸು. ಸತತ ಆರು ವರ್ಷಗಳಿಂದ ಅರ್ಜಿ ಹಾಕಿ, ಕಂಡ ಕಂಡ ಮಂತ್ರಿಗಳ ಕೈಕಾಲು ಹಿಡಿದದ್ದು ಇವರಿಗೆ ಗೊತ್ತಿಲ್ಲದಿರಬಹುದು. ಈ ಸಲ ಇವರ ಮಿತ್ರನೊಬ್ಬ ಮಂತ್ರಿಯಾದ. ಅವನಿಗೆ ಅಂದೇ ಹಾರ ತುರಾಯಿ ಹಾಕಿ ಗುಂಡು ಪಾರ್ಟಿ ಕೊಟ್ಟ ಮಾ.ನಾ.ಸು., ಆ ಮಂತ್ರಿಯ ದಕ್ಷತೆ, ಕ್ರಿಯಾಶೀಲತೆ ಬಗ್ಗೆ ಗುಣಗಾನ ಮಾಡಿ ಪುಟ್ಟಗಟ್ಟಲೆ ಪತ್ರಿಕೆಗಳಿಗೆ ಬರೆದರು. ಆ ಮಂತ್ರಿಯಿದ್ದ ಸಭೆಯಲ್ಲಿ ಮಾ.ನಾ.ಸು. ಇರಲೇ ಬೇಕು. ಮಂತ್ರಿಯು ಮಾಡದ ಸಾಧನೆಗಳ ಬಗ್ಗೆಯೂ ಬೆಲ್ಲದ ಮಾತಿನ ಮಹಾಪೂರ ಹರಿಸಿ ಆತನನ್ನು ಸಮ್ಮೋಹನಗೊಳಿಸದೆ ಹೋಗಿದ್ದಿದ್ದರೆ ಇವರಿಗೆಲ್ಲಿಯ ಪ್ರಶಸ್ತಿ? ‘ಪ್ರಶಸ್ತಿ ಹಣ ನೀವೇ ಇಳ್ಕೊಳ್ಳಿ ಅಪ್ಪಾ, ಪ್ರಶಸ್ತಿ ನನಗೆ ಸಾಕು’ ಅನ್ನುವವರೆಗೂ ರಾಜಿಯಾದ ಇವರು, ಎಲ್ಲಾ ಪ್ರಶಸ್ತಿಗಳನ್ನು ಬೆನ್ನು ಹತ್ತಿ ಪಡೆದ ಭೂಪ. ಇವರ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ. ಮಾಡಿದ ಮರಿ ಸಾಹಿತಿಯೊಬ್ಬ ಅಕಾಡೆಮಿಯಲ್ಲಿ ಜಾತಿಬಲದಿಂದ ಅಧ್ಯಕ್ಷನಾಗಿ ಬಿಡೋದೆ! ತತ್‌ಕ್ಷಣ ಅವನ ಹೆಡೆಮುರಿಗೆ ಕಟ್ಟಿ ಕೆಡವಿ ತಮ್ಮದೊಂದು ಐತಿಹಾಸಿಕ ಕಾದಂಬರಿಗೆ ಅಕಾಡೆಮಿ ಪ್ರಶಸ್ತಿ ಗಿಟ್ಟಿಸಿದ ಭೂಪ ಅಥವಾ ಭೂತ ನಮ್ಮ ಮಾ.ನಾ.ಸು.

ಈ ಮಹಾಶಯನಿಗೆ ತಮ್ಮ ಕಾದಂಬರಿಗಳು ಚಲನಚಿತ್ರವಾಗಬೇಕೆಂಬ ಆಶೆ. ಅವು ರಾಜ್ಯ, ರಾಷ್ಟ್ರ ಪ್ರಶಸ್ತಿ ಗಳಿಸಬೇಕೆಂಬ ಹೆಬ್ಬಯಕೆ. ಆಗ ಪ್ರಯೋಗಾತ್ಮಕ ಚಿತ್ರಗಳ ಕಾಲ. ಮಾ.ನಾ.ಸು. ಸುಮ್ಮನಿರಲಿಲ್ಲ. ತನ್ನಂಥ ಹುಚ್ಚರನ್ನೆಲ್ಲಾ ಕಲೆ ಹಾಕಿ ಬ್ಯಾಂಕ್ ಲೋನ್ ತೆಗೆದು ತಮ್ಮದೇ ಆದ ಕಾದಂಬರಿ ಆಧರಿಸಿ ತಾವೂ ಅಭಿನಯಿಸಿ ಕಪ್ಪುಬಿಳುಪಿನ ಆಫ್‌ಬೀಟ್ ಚಿತ್ರ ಮಾಡೇಬಿಟ್ಟರು. ಪ್ರಾಯಃ ಆಗಲೇ ಅಲವೇಲು ಇವರ ಜೀವನದಲ್ಲಿ ಪ್ರವೇಶಿಸಿದಳು ಅನಿಸುತ್ತೆ. ಮಡಿಕೋಲಿನಂತಿದ್ದ ಅಲವೇಲುವೇ ಹೀರೋಯಿನ್. ಉಬ್ಬಿದ ಮೊಲೆಗಳು, ದೊಡ್ಡ ದೊಡ್ಡ ಕಣ್ಣುಗಳೇ ಅವಳ ಆಸ್ತಿ. ಚಿತ್ರ ಮಾತ್ರ ಹೊರಗಡೆ ಬರಲೇ ಇಲ್ಲ. ಸಾಹಿತಿ ಮಿತ್ರರ, ಸಚಿವೋತ್ತಮರ ಬೆಂಬಲದಿಂದಾಗಿ ಚಿತ್ರ ರಾಷ್ಟ್ರ ಪ್ರಶಸ್ತಿಯನ್ನು ಪಡೆಯಿತು. ಕನ್ನಡ ನಾಡಿನ ತುಂಬಾ ಒಮ್ಮೇಲೆ ಮಾ.ನಾ.ಸು. ಪ್ರಖ್ಯಾತರಾದರು. ವಿಚಾರ ಸಂಕಿರಣಗಳೂ ಅಲ್ಲಲ್ಲಿ ನಡೆದವು. ಪ್ರಶಸ್ತಿ ಸ್ವೀಕರಿಸಲು ದೆಹಲಿಗೆ ಸತಿ ಸಮೇತರಾಗಿ ಹೋಗಿದ್ದರೆಂದು ಪತ್ರಿಕೆಗಳು ಬರೆದವು. ಸತ್ಯ ನನಗೆ ಗೊತ್ತು. ಇವರ ಜತೆ ಹೋದವಳು ಅಲವೇಲು.

ಒಂದೆರಡು ವರ್ಷ ಸಾಲ ತೀರಿಸುವುದರಲ್ಲೇ ಕಾಲ ಕಳೆದ ಮಹಾನುಭಾವ ಮತ್ತೊಬ್ಬ ಸಿನಿಮಾ ಖಯಾಲಿಯ ಸೇತುವನ್ನು ಹಿಡಿದು ಕ್ರಾಂತಿಕಾರಿ ಚಿತ್ರ ಮಾಡಿದರು. ಅದೆಷ್ಟೋ ಹುಡುಗಿಯರನ್ನು ಇಂಟರ್‌ವ್ಯೂ ಮೇಕಪ್ ಟೆಸ್ಟ್ ನೆವದಲ್ಲಿ ಹಾಳೂ ಮಾಡಿದರು. ಈ ಚಿತ್ರವೂ ಹೊರ ಬರಲಾಗದೆ ಡಬ್ಬದಲ್ಲಿ ಕೊಳೆತರೂ ರಾಜ್ಯ ಪ್ರಶಸ್ತಿ ಗಿಟ್ಟಿಸಿತ್ತು. ಕನ್ನಡದ ಮಹಾಜನತೆಗೆ ಇವರ ಎರಡು ಚಿತ್ರಗಳನ್ನು ನೋಡುವ ಸೌಭಾಗ್ಯ ಒದಗಿ ಬರಲಿಲ್ಲ. ಆ ಮಾತು ಬೇರೆ. ಬಾದಾಮಿ ಹೌಸ್‌ನಲ್ಲಿ ಪ್ರೀಮಿಯರ್ ಶೋ ಇಟ್ಟಾಗ ನಾನು ಇವರ ಚಿತ್ರಾನ್ನವಾದ ಚಿತ್ರಗಳನ್ನು ನೋಡಿದ್ದೇನೆ. ನಿದ್ದೆ ಬಂದರೂ ಮಾಡದೆ ಅಂಜಿಕೆಯಿಂದ ಪೂರಾ ಚಿತ್ರ ನೋಡಿದ್ದೇನೆ. ಇವರನ್ನು ಹಾಡಿ ಹೊಗಳಿ ಕೈ ಕೈ ಕುಲುಕುವ ಮಂದಿಯನ್ನು ನೋಡಿ ನಾನಿವರ ಮಟ್ಟಕ್ಕೆ ಏರಲಾರೆ ಎಂದು ನಿಟ್ಟುಸಿರು ಬಿಟ್ಟಿದ್ದೇನೆ. ಈತ ಲಕ್ಷಗಟ್ಟಲೆ ಸಾಲ ಮಾಡಿ ಅದನ್ನೆಲ್ಲಾ ಇಸ್ಪೀಟ್ ಆಡಿ, ರೇಸ್‌ಗೆದ್ದು ತೀರಿಸಿದಾಗ ಆ ‘ಗಟ್ಸ್’ ಬಗ್ಗೆ ಮೆಚ್ಚಿಕೊಂಡಿದ್ದೇನೆ ಸಹ. ನನಗೆ ಮಾ.ನಾ.ಸು. ಕಥೆ, ಕಾದಂಬರಿಗಳ ಬಗ್ಗೆ ವಿಮರ್ಶೆ ಮಾಡುವ ಸಾಮರ್ಥ್ಯ ಇಲ್ಲದಿರಬಹುದು. ಮೆಚ್ಚಿಕೊಳ್ಳಬಹುದಿತ್ತು. ಆದರೆ ಜನಪ್ರಿಯ ಬರಹ ಇವರದಲ್ಲ. ಇವರ ಕಾದಂಬರಿಗಳೂ ಇವರು ತೆಗೆದ ಸಿನಿಮಾಗಳಂತೆಯೆ ಪ್ರಭಾವ ಬೀರುವಾಗ ನಾನಾದರೂ ಎಂಥದು ಮಾಡಲಿ. ಸಾಲದ ಒತ್ತಡದಿಂದ ರಿಲೀಫ್ ಆಗಲು ಒಂದು ಪೆಗ್ ಕುಡಿಯುತ್ತೇನೆಂದು ಆರಂಭಿಸಿದ ಮಾ.ನಾ.ಸು. ಕುಡಿತ, ಇವತ್ತು ಅವರ ಬರಹಕ್ಕೆ ಸ್ಫೂರ್ತಿಯಾಗಿ ಕುಡಿದರೆ ಮಾತ್ರ ತಲೆ ಓಡುತ್ತದೆ ಎಂಬ ಭ್ರಮೆ ಮೂಡಿಸಿಬಿಟ್ಟಿರುವುದನ್ನು ಕಂಡು ಒಳಗೇ ಸಂಕಟ ಪಟ್ಟಿದ್ದೇನೆ. ಇವರ ಹೆಣ್ಣು ಹೆಂಡದ ತಿಕ್ಕಲಿನ ಬಗ್ಗೆ ಅಸೂಯೆ, ವಾಕರಿಕೆಯೂ ಇದೆಯಾದರೂ ಖಂಡಿತ ನಾನವರ ಶತ್ರುವಲ್ಲ. ವಿಪರೀತ ಗದ್ದಲ ಸನ್‌ಗನ್‌ಗಳ ಪ್ರಕಾಶಕ್ಕೆ ಗಲಿಬಿಲಿಗೊಂಡು ಮಾ.ನಾ.ಸು. ಲೋಕದಿಂದ ಈಚೆ ಬರುತ್ತೇನೆ. ಅವರ ಸನ್ಮಾನ ನಡೆದಿದೆ. ಜಗದ್ಗುರುಗಳು ಶಾಲು ಹೊದ್ದಿಸಿ ಮೈಸೂರು ಪೇಟ ತೊಡಿಸಿ ಶಾರದೆ ವಿಗ್ರಹ ಕೈಗಿಟ್ಟು ಹರಸುತ್ತಾರೆ. ಎಲ್ಲೆಡೆ ಹರ್ಷೋದ್ಗಾರ, ಅಲವೇಲುವಂತೂ ತನ್ನ ಮೈಯ ಶಕ್ತಿಯನ್ನೆಲ್ಲಾ ಕೈಗಳಿಗೆ ಒಟ್ಟುಗೂಡಿಸಿ ಜೋರಾಗಿ ಚಪ್ಪಾಳೆ ತಟ್ಟುತ್ತಿದ್ದಾಳೆ, ಶಾಲು, ಪೇಟ, ನೆನಪಿನ ಕಾಣಿಕೆ ಎಲ್ಲವನ್ನೂ ತೆಗೆದ ಮಾ.ನಾ.ಸು. ಅವಳ ಕೈಗಿಡುತ್ತಾರೆ. ಅವಳದನ್ನು ಅಮೂಲ್ಯ ಆಸ್ತಿ ಎಂಬಂತೆ ಎದೆಗವಚಿ ತೆಗೆದೊಯ್ಯುತ್ತಾಳೆ.

ಮಾ.ನಾ.ಸು. ಅವರ ಕಂಚು ಕಂಠ ಸನ್ಮಾನಕ್ಕೆ ಉತ್ತರ ನೀಡುತ್ತದೆ. ಎದೇ ಠೇಂಕಾರದ ಮಾತುಗಳು, ನಗರಸಭೆಯನ್ನು ನರಕಸಭೆ ಎಂದೇ ಉಡಾಫೆ ಮಾಡಿದ ಈತ ಕಾವಿ ಖಾಕಿ ಖಾದಿ ಎಂಬ ಈ ಮೂರು ‘ಕಾ’ ಗೆಗಳನ್ನು ಅಂಕೆಯಲ್ಲಿ ಇಡದಿದ್ದರೆ ದೇಶ ಎಂದೂ ಪ್ರಗತಿ ಕಾಣದು ಎಂದು ಜಾಡಿಸುತ್ತಾರೆ. ಮಠಪತಿಗಳಿಗೆ ಏಕೆ ಮಣ ಬಂಗಾರ? ಹತ್ತಾರು ಕುಟುಂಬಗಳು ಒಟ್ಟಿಗೆ ವಾಸ ಮಾಡುವಷ್ಟು ದೊಡ್ಡ ಮಠ ಒಂಟಿ ಸ್ವಾಮಿಗೇಕೆ? ಎ.ಸಿ. ರೂಮ್, ಕಾಂಟೆಸ್ಸಾ ಕಾರು, ಫಾರಿನ್ ಟೂರು ಸರ್ವಸಂಘ ಪರಿತ್ಯಾಗಿಗಳಿಗೇಕೆ ಎಂದು ಗುಡುಗುತ್ತಾರೆ. ನಮ್ಮ ದೇಶದಲ್ಲಿ ಚರ್ಚ್‌ಗಳನ್ನು ಕಟ್ಟಿದರೆ, ಧರ್ಮ ಪ್ರಚಾರ ಮಾಡಿದರೆ, ಮಸೀದಿಗಳನ್ನು ಕಟ್ಟಿದರೆ ಹಲ್ಲೆ ನಡೆಸುವ ಸಣ್ಣತನ ನಮಗೇಕೆ? ಸಭೀಕರನ್ನು ಪ್ರಶ್ನಿಸುತ್ತಾರೆ. ಇದೇ ನಮ್ಮ ಜಗದ್ಗುರುಗಳು ಫಾರಿನ್‌ಗಳಲ್ಲಿ ತಮ್ಮ ತಮ್ಮ ಧರ್ಮಗಳ ಪ್ರಚಾರ ಮಾಡಬಹುದು. ಶಿವ, ವೆಂಕಟರಮಣ, ಕೃಷ್ಣನ ದೇವಾಲಯಗಳನ್ನು ನಿರ್ಮಿಸಬಹುದು. ಕೆಂಪು ಮೂತಿಗಳಿಗೆ ಲಿಂಗ ಕಟ್ಟಬಹುದು. ಯಜ್ಞಪವೀತ ಹಾಕಬಹುದು. ಇಲ್ಲಿ ಸತ್ತ ಸಂಸ್ಕೃತ ಅಲ್ಲಿ ಕಲಿಸಬಹುದು. ಸಖತ್ ಪ್ರಚಾರ ಪಡೆದು ಫಾರಿನ್ ಸ್ವಾಮಿಗಳೆಂದೇ ಖ್ಯಾತನಾಮರಾಗಬಹುದು. ಆಗ ಹಿಗ್ಗಿ ಹಿರೇಕಾಯಿಯಾಗುವ ನಾವು ಪರಧರ್ಮ ಸಹಿಷ್ಣುಗಳೂ ಆಗಬೇಕಲ್ಲವೆ? ಹಿಂದೂ, ಮುಸ್ಲಿಮ್, ಕ್ರಿಸ್ತರು ಅಂತ ಕಚ್ಚಾಡುತ್ತಾ ಹೋದರೆ ಇಡೀ ಭಾರತವೇ ನಾಳೆ ಕಾರ್ಗಿಲ್ ಆದೀತು ಹುಷಾರ್! ಎಂದು ಎಚ್ಚರಿಸುತ್ತಾ ಮಾತಿನ ಮೋಡಿ ಹಾಕುತ್ತಾರೆ. ನನ್ನ ಮಾತುಗಳಿಂದ ಮಹಾಸ್ವಾಮಿಗಳಿಗೆ ನೋವಾಗಿರಬಹುದು. ಬಟ್ ಐ ವೋಂಟ್ ಕೇರ್. ತಲೆ ಕೊಡವಿ ಬಿಡುತ್ತಾರೆ ಮಾ.ನಾ.ಸು. ಜನರ ಮೆಚ್ಚಿಗೆಯ ಸುದೀರ್ಘ ಚಪ್ಪಾಳೆ, ಮಹಾಸ್ವಾಮಿಗಳತ್ತ ನೋಡುತ್ತೇನೆ. ತಾಮಸವನ್ನು ಗೆದ್ದವರಲ್ಲವೆ, ಮಂದಸ್ಮಿತರಾಗಿದ್ದಾರೆ. ಸಮಾರಂಭದ ಅರ್ಧ ಖರ್ಚು ಜಗದ್ಗುರುಗಳವರದೇ ಎಂದು ಮಾ.ನಾ.ಸು. ಮಗಳೊಂದಿಗೆ ಪಿಸುಗುಟ್ಟುವಾಗ ಕೇಳಿಸಿಕೊಂಡಿದ್ದೇನೆ.

ವೇದಿಕೆಯ ಮೇಲೆ ಅಟ್ಯಾಕ್ ಮಾಡುವ ಈತ ಅದೇ ಮಹಾಸ್ವಾಮಿಗಳ ಜೀವನ ಚರಿತ್ರೆಯನ್ನು ಬರೆಯುತ್ತಿದ್ದಾರೆ. ಎಂಥ ವಿಪರ್ಯಾಸ. ಮಠಾಧೀಶರನ್ನು ತೆಗಳುವ ನಿಮ್ಮಂಥ ಪ್ರಬುದ್ಧರು ಅವರ ಜೀವನ ಚರಿತ್ರೆ ಬರೆಯಬಹುದೇ? ತಡೆಯಲಾರದೆ ನಾನು ಕೆಣಕಿದ್ದುಂಟು. ಮಹಾಸ್ವಾಮಿಗಳು ವೈಚಾರಿಕ ಜಗದ್ಗುರುಗಳಂತೆ. ಬುದ್ಧ, ಬಸವ, ಶಂಕರ, ಅಂಬೇಡ್ಕರರ ಅಪರಾವತಾರವಂತೆ. ಬರೆಯುವುದರಲ್ಲಿ ತಪ್ಪಿಲ್ಲವೆಂದು ಗಂಟೆಗಟ್ಟಲೆ ಭಾಷಣ ಬಿಗಿದಾಗ ನನಗನ್ನಿಸಿದ್ದುಂಟು- ದೊಡ್ಡ ಸೈಟನ್ನು ಮಠದವರು ನೀಡಿದಾಗ ಹಕ್ಕೆಂಬಂತೆ ಪಡೆದ ಈತ ಋಣಮುಕ್ತನಾಗಲು ಬರೆಯುತ್ತಿರಬಹುದಂತ, ಮಠದ ಕಾಲೇಜಿನಲ್ಲಿ ಅಲವೇಲುಗೆ ಟೈಪಿಸ್ಟ್ ಕೆಲಸ ಸಿಕ್ಕಿದ್ದರಲ್ಲಿ ಇವರ ಪ್ರಭಾವವಿದೆ. ಇಷ್ಟೆಲ್ಲಾ ಮಠದಿಂದ ಪಡೆದ ಮಹಾಶಯನನ್ನು ಮಠದ ಭಕ್ತನೆಂದು ಪತ್ರಿಕೆಯೊಂದು ಬರೆದಾಗ ಕೂಗಾಡಿ ಹಾರಾಡಿದ್ದುಂಟು. ಮಠವನ್ನು, ಮಠಾಧೀಶರನ್ನು ನಿಂದಿಸುತ್ತ ಅವರಿಂದ ಒಳಗಿಂದೊಳಗೇ ಏನೆಲ್ಲಾ ಲಾಭ ಪಡೆವ ಇಂಥ ಊಸರವಳ್ಳಿಗಳ ಬಣ್ಣ ಬಯಲಾಗುವುದು ಯಾವಾಗ?

ಮತ್ತೆ ಚಪ್ಪಾಳೆ, ಬೆಚ್ಚಿ ಬೀಳುತ್ತೇನೆ. ಯಾರನ್ನು ಟೀಕಿಸಿದರೋ! ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಸ್ತ್ರೀ ಇರುತ್ತಾಳೆ ಎಂಬ ಮಾತಿದೆ. ಅದು ಖಂಡಿತ ಸುಳ್ಳಲ್ಲ. ನನ್ನ ಶ್ರೀಮತಿ ತ್ಯಾಗಮಯಿ, ಕರುಣಾಮಯಿ. ನನ್ನ ಎಲ್ಲಾ ಎಡವಟ್ಟುಗಳನ್ನು ಸಹಿಸುವ ಸಹನಶೀಲೆ. ಮನೆಮಕ್ಕಳು ಎಲ್ಲಾ ಹೊಣೆಗಾರಿಕೆಯನ್ನು ತಾನೊಬ್ಬಳೇ ನಿಭಾಯಿಸುವ ಎದೆಗಾತಿ. ಕಾಲೇಜು, ಬರಹ ಇದಿಷ್ಟೇ ನನ್ನ ಕಾಯಕ. ನನ್ನ ಇಂದಿನ ಎಲ್ಲಾ ಯಶಸ್ಸು ಅವಳಿಗೇ ಸಲ್ಲಸಬೇಕು ಎಂದೆಲ್ಲಾ ಪ್ರಶಂಸಿಸುವಾಗ ತಮಾಷೆ ಎನಿಸುತ್ತದೆ. ಯಾಕೆಂದರೆ ಮಾ.ನಾ.ಸು. ಇತರರನ್ನು ಹೊಗಳುವುದೇ ಅಪರೂಪ. ಹೆಂಡತಿ ಬಗ್ಗೆ ಭಯವೇನಿಲ್ಲ. ಆದರೆ ತಾನೋರ್‍ವ ಆದರ್ಶ ಪುರುಷನೆಂದು ಜನರೆದುರು ಪ್ರತಿಬಿಂಬಿಸಬೇಕಲ್ಲ.

ನನ್ನನ್ನು ಗುಂಡು ಸಾಹಿತಿ ಅಂತ ಕೆಲವರು ಹೀಯಾಳಿಸುತ್ತಾರೆ. ಐ ನೋ ದಟ್. ಹಾಗಿದ್ದರೆ ಕುಡುಕರೆಲ್ಲಾ ಸಾಹಿತಿಗಳಾಗಬೇಕಿತ್ತಲ್ಲವೆ. ಕಿಡಿಕಿಡಿ ಯಾಗುತ್ತಾರೆ. ನನ್ನ ಕೃತಿಗಳನ್ನು ಓದೋವಾಗ ವಿಸ್ಕಿ ಸ್ಮೆಲ್ ಬರುತ್ತಾ? ಚಿಕನ್ ಮಸಾಲಾ ಘಮ್ ಎನ್ನುತ್ತಾ? ನನ್ನ ಚಾರಿತ್ರ್ಯ. ಮುಖ್ಯವಲ್ಲ. ನಾನು ಬರೆದ ಚರಿತ್ರೆ ಮುಖ್ಯ. ಆ ಮಾತನ್ನು ಒಪ್ಪಿದೆವೆಂಬಂತೆ ಸಭಿಕರ ಚಪ್ಪಾಳೆ.

ಮಹಾಸ್ವಾಮಿಗಳವರ ಆಶೀರ್ವಚನವೆಂದಾಗ ಎಲ್ಲೆಡೆ ಸದ್ದಡಗುತ್ತದೆ. ಮಾ.ನಾ.ಸು. ಐವತ್ತರ ತರುಣ, ಅವರ ಸಾಹಿತ್ಯಕ್ಕೀಗ ೨೫ ರ ಹರೆಯಾರೀ, ಅವರೆಂದೂ ಕೀರ್ತಿಶನಿಯ ಬೆನ್ನು ಬಿದ್ದವರಲ್ಲ ನೋಡ್ರಿ. ಮಠಗಳ ಬಗ್ಗೆ, ಮಠಾಧೀಶರ ಬಗ್ಗೆ ಗುಮಾನಿ ಐತ್ರಿ ಅವರ್‍ಗೆ. ಹಂಗೆ ಗೌರವಾನೂ ಇಟ್ಟುಕೊಂಡ ವಿಚಾರವಾದಿರೀ ನಮ್ ಮಾ.ನಾ.ಸು. ಹಣದ ಆಮಿಷಕ್ಕೆ ಎಂದೂ ಒಳಗಾಗದ ಈತ ಸಮಾಜದ ಬಗ್ಗೆ ಕಾಳಜಿ ಇಟ್ಟು ಬರೆದ ಕ್ರಾಂತಿಕಾರಿ, ದಲಿತರ ದನಿ ಇಂವಾ. ಮಠದಿಂದ ಏನನ್ನೂ ಅಪೇಕ್ಷಿಸಿದವರಿ, ನಾವಾಗಿ ಕೊಡ್ತೀವೆಂದೂ ಒಲ್ಲೆ ಅಂದ ಧೀಮಂತ ಸಾಹಿತಿ ಕಣ್ರಿ ನಂ ಮಾ.ನಾ.ಸು. ಮಹಾಸ್ವಾಮಿಗಳ ಶ್ಲಾಘನೆ ಹೀಗೆ ಸಾಗುತ್ತದೆ. ಮಾ.ನಾ.ಸು. ಬಗ್ಗೆ ಎಲ್ಲರೂ ಈವರೆಗೂ ಹೇಳಿದ್ದು ಬರಿ ಸುಳ್ಳೆ, ಸಾಮಾನ್ಯರ ಮನೆ ಹಾಳಾಗಲಿ ಜಗದ್ಗುರುಗಳಂಥೋರು ಎಷ್ಟು ಚೆಂದ ಸುಳ್ಳು ಹೇಳ್ತಾರಲ್ಲ! ಅಸಹ್ಯವಾಗುತ್ತದೆ. ಮಹಾಸ್ವಾಮಿಗಳ ಹಿತನುಡಿಗಳು ಮುಗಿಯುತ್ತಿದ್ದಂತೆಯೇ ಎಲ್ಲೆಡೆ ಗುಜುಗುಜು ಗದ್ದಲ. ನನಗೇಕೋ ಭಯ ಕಾಡುತ್ತದೆ. ಕಣ್ಣರಳಿಸಿ ಜನ ಸಮೂಹದ ನೋಡುತ್ತೇನೆ.

“ಮಾ.ನಾ.ಸು. ಅವರ ಶ್ರೀಮತಿಯವರು ಮಾತಾಡಬೇಕು” ಹಲವರು ಕೂಗೆಬ್ಬಿಸಿದ್ದಾರೆ. ಮಹಿಳೆಯರೂ ಎದ್ದು ನಿಲ್ಲುತ್ತಾರೆ. “ಶ್ರೀಮತಿ ಮಾ.ನಾ.ಸು. ಒಂದೆರಡು ಮಾತಾಡ್ಲಿ” ಕೈ ಎತ್ತಿ ಕೂಗಾಡುತ್ತಾರೆ. “ಜಗದ್ಗುರುಗಳು ಮಾತನಾಡಿದ ಮೇಲೆ ಯಾರೂ ಮಾತಾಡೋ ಹಂಗಿಲ್ಲ” ಮಾ.ನಾ.ಸು. ಅವರೇ ಗುಡುಗುತ್ತಾರೆ. ಆದರೆ ಅದೇಕೋ ಜನಗಳು ಕೇಳುವುದೇ ಇಲ್ಲ. ಪ್ರತಿಭಟಿಸುತ್ತಾರೆ. ನನಗೋ ಕೈಕಾಲುಗಳಲ್ಲಿ ಸಣ್ಣಗೆ ಕಂಪನ, ಹೃದಯದ ಗತಿ ತಪ್ಪುತ್ತದೆ. ನಾಲಿಗೆಯೋ ಒಣಗಿದ ತರಗೆಲೆ. ‘ಸದ್ದು’ ಜಗದ್ಗುರು ಗದರಿದಾಗ ಸದ್ದಡಗುತ್ತದೆ.

“ಆಯಿತ್ರಪಾ…… ಸುಮ್ಗಿರಿ, ಶ್ರೀಮತಿ ಮಾ.ನಾ.ಸು. ಅವರನ್ನು ನಾವೆಲ್ಲಾ ಮರೆತು ದೊಡ್ಡ ತಪ್ಪು ಮಾಡೇವಿ. ಶಿವೆಯಿಲ್ಲದೆ ಶಿವನಿಲ್ಲ, ರಮೆ ಇಲ್ಲದೆ ರಮಾರಮಣನಿಲ್ಲ. ಹೆಣ್ಣಿನ ಸಹಕಾರವಿಲ್ಲದ ಗಂಡಿನ ಸಂಸಾರದಲ್ಲಿ ಗೆಲುವಿಲ್ಲ. ಇವತ್ತು ಮಾ.ನಾ.ಸು. ಜೀವನ್ದಾಗೆ ಗೆದ್ದವರೇ ಅಂದ್ರೆ ಅದಕ್ಕೆ ಕಾರಣ ಅವರ ಶ್ರೀಮತಿ” ಪುಟ್ಟ ಭಾಷಣ ಬಿಗಿದ ಮಹಾಸ್ವಾಮಿ, ‘ಮಾತಾಡು ತಾಯಿ…… ಹಾಂ’ ಅಂತ ಕೈ ಸನ್ನೆ ಮಾಡುತ್ತಾರೆ. ನನ್ನ ಮೈ ಬೆಚ್ಚಗಾಗುತ್ತದೆ. ಬೆವರೊಡೆಯುತ್ತದೆ. ಎದ್ದು ನಿಲ್ಲುತ್ತೇನೆ. ಕಂಪನ, ಮೈಕ್ ನಾನಿದ್ದಲ್ಲಿಗೆ ಬರುತ್ತದೆ. ಇವರೆಲ್ಲಾ ಇನ್ನೊಂದು ಗುಣಗಾನ ಮಾಡಿದ ಮೇಲೂ ನಾನಾಡುವುದೇನಿದೆ?’ ಇವರಂತೂ ಸುಟ್ಟು ಬಿಡುವಂತೆ ನೋಡುತ್ತಾರೆ. ತುಟಿಗಳು ತರತರನೆ ನಡುಗುತ್ತವೆ. ಮಾತಿನ ಬದಲು ಕಣ್ಣೀರು ಕೆನ್ನೆಗಳ ಮೇಲಿಳಿಯುತ್ತದೆ. “ಪತಿಗೆ ದೊರೆತ ಗೌರವಾದರಗಳಿಂದ ಆ ತಾಯಿ ಆನಂದತುಂದಿಲಳಾಗ್ಯಾಳ್ರ” ಅನ್ನುತ್ತಾರೆ ಮಹಾಸ್ವಾಮಿಗಳು. ಇಡೀ ಸಭೆ ಸ್ತಬ್ಧ. ಕಣ್ಣುಗಳು ಮಂಜುಮಂಜಾಗುತ್ತವೆ. ನನಗೇನೂ ಕಾಣದಂತಾಗುತ್ತದೆ. ಕೇಳದಂತಾಗುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವ್ಯಾಮೋಹ
Next post ಅನ್ಯೋನ್ಯ

ಸಣ್ಣ ಕತೆ

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…