ಆಹುತಿ

ಆಹುತಿ

ನಾನು ಎಂ.ಎ ಪಾಸಾಗಿದ್ದೆ. ನನ್ನ ತಂದೆ ತಾಯಿಯವರು ನನಗೆ ಮದುವೆ ಮಾಡಬೇಕೆಂದು ಹೆಣ್ಣು ಹುಡುಕುತ್ತಿದ್ದರು. ಅಂತೂ ಕಡೆಗೆ ಹುಡುಗಿಯೂ ನಿಶ್ಚಯವಾದಳು. ನಮ್ಮ ಮನೆಯಿಂದ ಹನ್ನೆರಡು ಮೈಲಿ ದೂರದಲ್ಲಿದ್ದ ಒಂದು ಹಳ್ಳಿಯಲ್ಲಿ ಅವಳ ಮನೆ, ಆವಳಿಗೂ ತಂದೆತಾಯಿ ಇದ್ದರು. ಆದರೆ ಅವರು ಬಹಳ ಬಡವರಂತೆ, ನನಗೇನೋ ಐಶ್ವರ್ಯವಂತರ ಅಳಿಯನಾಗಬೇಕೆಂದು ಬಹಳ ಆಸೆಯಿತ್ತು. ಇಂಗ್ಲೆಂಡಿಗೆ ಹೋಗಿ ಬ್ಯಾರಿಸ್ಟರನಾಗಬೇಕೆಂದು ಬಲವಾದ ಇಚ್ಚೆ. ಇಂಗ್ಲೆಂಡಿಗೆ ಹೋಗಬೇಕಾದರೆ ಹಣಬೇಕು, ನನಗಾಗಿ ತುಂಬಾ ಹಣ ಖರ್ಚು ಮಾಡುವಷ್ಟು ಅನುಕೂಲವು ನನ್ನ ತಂದೆಗಿರಲಿಲ್ಲ. ಐಶ್ವರ್ಯವಂತರ ಅಳಿಯನಾದರೆ ನಾನು ಇಂಗ್ಲೆಂಡಿಗೆ ಸುಲಭವಾಗಿ ಹೋಗಬಹುದಾಗಿತ್ತು, ಆದುದರಿಂದ ಈ ಬಡವರ ಹುಡುಗಿಯನ್ನು ಮದುವೆಯಾಗಲು ನನಗೆ ಮನಸ್ಸಿರಲಿಲ್ಲ.

ಸಯಂಕಾಲವಾಗಿತ್ತು. ತಿರುಗಾಡಲು ಹೋಗಿದ್ದವನು ಆಗ ತಾನೆ ಮನೆಗೆ ಬಂದಿದ್ದೆ. ನನ್ನ ತಂದೆ ತುಂಬ ಆಚಾರವಂತರು, ಪ್ರತಿದಿನವೂ ತಪ್ಪದೆ ಸಂಧ್ಯಾವಂದನಾದಿಗಳನ್ನು ಮಾಡುತ್ತಿದ್ದರು. ನಾನೂ ಮಾಡಬೇಕೆಂದು ಅವರ ಬಯಕೆ, ತಿರುಗಾಡಲು ಹೋದಲ್ಲಿ ಸ್ನೇಹೀರತೊಡನೆ ಮಾತನಾಡುವ ಸಂಭ್ರಮದಲ್ಲಿ ಸಂಧ್ಯಾವಂದನೆಯ ಸಮಯವಾದುದೂ ನನಗೆ ಗೊತ್ತಾಗಲಿಲ್ಲ. ನಾನು ಮನೆಗೆ ಬಂದಾಗ ತಂದೆಯವರು ಒಳಗೆ ಜಪ ಮಾಡುತ್ತಿದ್ದರು. ನಾನು ಬಟ್ಟೆಯನ್ನು ತೆಗೆದಿರಿಸುವುದಕ್ಕೆ ನನ್ನ ರೂಮಿಗೆ ಹೋದೆ. ನನ್ನ ತಂಗಿ ವಿಜಯ ಅಲ್ಲಿ ಕುಳಿತುಕೊಂಡು ಓದುತ್ತಿದ್ದಳು. ನಾನವಳನ್ನು ‘ವಿ’ ಎಂದು ಕರೆಯುತ್ತಿದ್ದೆ. ಯಾವೊತ್ತೂ ಸಂಜೆಯ ಹೊತ್ತಿನಲ್ಲಿ ಅವಳು ದೇವರ ಕೀರ್ತನೆಗಳನ್ನು ಹಾಡುತ್ತಾ ದೇವರ ಮನೆಯಲ್ಲಿರುವುದು ವಾಡಿಕೆ. ಇಂದು ನನ್ನ ರೂಮಿನಲ್ಲಿ ಕುಳಿತದ್ದು ಕಂಡು ‘ಏನು ಓದುತ್ತಿರುವೆ, ವಿ? ಎಂದು ಕೇಳಿದೆ. ಓದುತ್ತಿದ್ದ ಪುಸ್ತಕವನ್ನು ಮೇಜಿನ ಮೇಲೆಸೆದು ‘ಓದುತ್ತಲೂ ಇರಲಿಲ್ಲ ಏನೂ ಇಲ್ಲ. ಈ ಹಾಳು ಪುಸ್ತಕದಲ್ಲಿ ಓದುವುದಕ್ಕೇನಿದೆ?’ ಎಂದಳು. ‘ಇದೇನು ವಿ? ನೀನು ಹಾಡುವದಿಲ್ಲವೇ?’ ಎಂದೆ. ‘ಆಗಲೇ ಆಗ್ಹೋಯ್ತು’ ಎಂದಳು ಅವಳು. ನಾನು ಕೋಟನ್ನು ಬಿಚ್ಚಿಟ್ಟು ಟೈಯನ್ನು ಬಿಚ್ಚುತ್ತಿದ್ದೆ. ಆಗ ಅವಳು : ‘ಅಣ್ಣ ನಿನಗೆ ಒಪ್ಪಿಗೆಯೇ?’ ಎಂದು ಕೇಳಿದಳು. ನಾನು ‘ಏನು ಒಪ್ಪಿಗೆ’ ಎಂದೆ.

ಅವಳು ‘ಏನೂ ಗೊತ್ತೇಯಿಲ್ಲ ಪಾಪ! ಆ ಹುಡುಗಿಯನ್ನು ಮದುವೆಯಾಗಲು ಒಪ್ಪಿಗೆಯೇ ಎಂದರೆ ಏನು ಎನ್ನುತ್ತಿ’ ಎಂದಳು. ನಾನೆಂದೆ: ‘ನೀನು ಅವಳನ್ನು ನೋಡಿಯೇ ಇಲ್ಲ. ನಾನು ಏನೆಂದು ಉತ್ತರ ಕೊಡಲಿ?’ ಆಗ ವಿಜಯ ಎಂದಳು : ಅಣ್ಣ, ನಾನು ಅವಳನ್ನು ನೋಡಿರುವೆ. ಅವಳು ಎಲ್ಲಾ ತರದಲ್ಲೂ ನಿನಗೆ ಯೋಗ್ಯಳಾಗಿದ್ದಾಳೆ. ಓದುಬರಹ ಗೊತ್ತಿದೆ. ನೋಡುವುದಕ್ಕೆ ಅತಿ ಚೆಲುವೆ’. ನಾನಾಗ ಕೇಳಿದೆ; ‘ವರದಕ್ಷಿಣೆ ಎಷ್ಟು ಕೊಡುತ್ತಾರೆ?’

ವಿಜಯ ಹೇಳಿದಳು; ‘ಅಣ್ಣ, ಅಪ್ಪನಿಗೆ ವರದಕ್ಷಿಣೆಯನ್ನು ತೆಗೆದುಕೊಳ್ಳಲಿಕ್ಕೆ ಇಷ್ಟವಿಲ್ಲ. ಅವರು ಬಹಳ ಬಡವರು, ಆದರೆ ಹುಡುಗಿ ರತಿದೇವಿಯಂತೆ ಇದ್ದಾಳೆ. ಅವರೇ ಐನೂರು ರೂಪಾಯಿ ಕೊಡುವೆನೆಂದು ಹೇಳಿದ್ದಾರೆ. ಅದನ್ನು ತೆಗೆದುಕೊಳ್ಳುವುದಕ್ಕೂ ಅಪ್ಪನಿಗೆ ಒಪ್ಪಿಗೆ ಇಲ್ಲ. ನಾನು ಹೇಳಿದೆ: ‘ವಿ, ನನಗೆ ಲಂಡನ್ನಿಗೆ ಹೋಗಿ ಲಾ ಕಲಿಯಬೇಕೆಂದು ಇಚ್ಛೆಯಿದೆ, ಆದಕ್ಕಾಗುವ ಖರ್ಚನ್ನು ಕೊಡುವದಾದರೆ ಮಾತ್ರ ನಾನು ಆ ಹುಡುಗಿಯನ್ನು ಮದುವೆಯಾಗುತ್ತೇನೆ. ಇಲ್ಲದಿದ್ದರೆ ಇಲ್ಲ. ಆಗ ವಿಜಯ: ‘ಅಣ್ಣ, ನೀನು ಎಂ.ಎ, ನಿನ್ನ ಬಾಯಿಂದ ಇಂತಹ ಮಾತು ಹೊರಡಬಹುದೇ? ನಿನ್ನನ್ನು ನೀನು ಮಾರಿಕೊಳ್ಳಬಯಸುವಿಯೇಕೆ?’ ಎಂದು ಸ್ವಲ್ಪ ಕೋಪದಿಂದಲೇ ಹೇಳಿದಳು. ನಾನು ಉತ್ತರವೀಯಲಿಲ್ಲ. ಕೋಪಿಸಿಕೊಂಡು ಅವಳು ಒಳಗೆ ಹೊರಟು ಹೋದಳು.

-೨-
ಜಪಮಾಡಿ ಹೊರಗೆ ಬಂದು ಕುಳಿತಿದ್ದೆ. ನಮ್ಮ ತಂದೆಯೂ ಜಪತೀರಿಸಿ ಹೊರಗೆ ಬಂದರು. ಏನೊ, ನೀನು ವಿಜಯ ಹತ್ತಿರ ಏನೆಂದೆ?’ ಎಂದು ಕೇಳಿದರು. ನಾನು ಮಾತನಾಡಲಿಲ್ಲ. ‘ನೀನು ಮುಂದೆ ಓದಿನ ಖರ್ಚಿಗೆ ಹಣ ಕೊಟ್ಟರೆ ಮದುವೆಯಾಗುತ್ತೇನೆಂದಯಂತೆ. ಅವರು ಬಡವರು, ಆರೇಳು ಜನ ಹೆಣ್ಣು ಮಕ್ಕಳು ಇದ್ದಾರೆ. ಎಲ್ಲಿಂದ ತಾನೇ ಹಣ ತರಬಲ್ಲರು? ನೀನೇನೂ ತಿಳಿಯದ ಚಿಕ್ಕ ಮಗುವಲ್ಲ. ಹುಡುಗಿ ಲಕ್ಷಣವಾಗಿದ್ದಾಳೆ, ನೀನು ದೊಡ್ಡವರ ಅಳಿಯನಾಗಿ ಲಂಡನ್ನಿಗೆ ಹೋಗುವುದಕ್ಕೆ ನನಗೆ ಒಪ್ಪಿಗೆ ಇಲ್ಲ. ಈ ಹುಡುಗಿಯನ್ನು ಮದುವೆಯಾದರೆ ಇಲ್ಲಿ ಲಾ ಓದುವ ಖರ್ಚನ್ನು ಹೇಗಾದರೂ ಮಾಡಿ ನಾನು ಕೊಡುತ್ತೇನೆ, ನನ್ನ ಮಾತು ಕೇಳದಿದ್ದರೆ ನೀನು ನನ್ನ ಮಗನೇ ಅಲ್ಲ, ಆಲೋಚಿಸಿ ನಾಳೆ ಹೇಳು’ ಎಂದು ಹೇಳಿ ಒಳಗೆ ಹೊರಟುಹೋದರು. ಸ್ವಲ್ಪ ಹೊತ್ತಿನ ಮೇಲೆ ಅಮ್ಮ ಊಟಕ್ಕೆ ಕರೆದಳು, ನನಗೆ ಸ್ವಲ್ಪವೂ ಬೇಡವೆಂದು ಹೇಳಿದೆ.

ಅಂದಿನ ರಾತ್ರಿ ಎಲ್ಲರೂ ಮಲಗಿದ ಮೇಲೆ ನಾನು ಹೊರಗೆ ಹೊರಟೆ, ನನ್ನ ಮನಸು ಸಿಟ್ಟಿನಿಂದ ಚಂಚಲವಾಗಿತ್ತು. ಆ ಹುಡುಗಿಯನ್ನು ಮದುವೆಯಾಗುವ ಇಚ್ಛೆ ನನಗೆ ಸ್ವಲ್ಪವೂ ಇರಲಿಲ್ಲ. ತಂದೆಯಿದಿರು ನಿಂತು ಹಾಗೆ ಹೇಳುವ ಧೈರ್ಯ ನನಗಿರಲಿಲ್ಲ. ಆದುದರಿಂದ ಅಂದಿನ ರಾತ್ರಿಯೇ ಮನೆ ಬಿಟ್ಟು ಹೊರಟೆ. ನಮ್ಮ ಹಳ್ಳಿಯಿಂದ ರೇಲ್ವೆ ಸ್ಟೇಶನಿಗೆ ನಾಲ್ಕು ಮೈಲಿ, ನಾನಲ್ಲಿಗೆ ತಲುಪುವಾಗ ಹನ್ನೆರಡು ಗಂಟೆಯಾಗಿತ್ತು. ನಮ್ಮ ಊರಿನಿಂದ ರೈಲು ಹೊರಡುವುದಕ್ಕೆ ಇನ್ನೂ ಹತ್ತು ನಿಮಿಷವಿತ್ತು. ಅಷ್ಟರೊಳಗೆ ಮದರಾಸಿಗೆ ಒಂದು ಟಿಕೆಟನ್ನು ತೆಗೆದುಕೊಂಡು ಒಂದು ಕಂಪಾರ್ಟ್ ಮೆಂಟಿನಲ್ಲಿ ಹೋಗಿ ಕುಳಿತೆ. ನಾನು ಕುಳಿತಲ್ಲಿ ಬೇರೆ ಯಾರೂ ಇರಲಿಲ್ಲ. ಮುಂದಿನ ಗತಿಯೇನೆಂದು ಆಲೋಚಿಸುತ್ತ ಕುಳಿತಿದ್ದಂತೆಯೇ ನಿದ್ರೆ ಬಂದುಬಿಟ್ಟಿತು. ಏನೋ ಶಬ್ಬವಾದಂತಾಗಿ ನನಗೆ ನಿದ್ರಾಭಂಗವಾಯಿತು. ಕಣ್ಣು ತೆರೆದು ನೋಡಿದೆ. ಹುಣ್ಣಿಮೆಯ ಚಂದ್ರನು ಕಿಟಕಿಯ ಮೂಲಕ ಒಳಗೆ ಇಣಿಕಿ ನೋಡುತ್ತಿದ್ದನು. ಬೆಳದಿಂಗಳಿನ ಪ್ರಕಾಶದಲ್ಲಿ ಇದಿರಿನ ಬೆಂಚಿನ ಮೇಲೆ ಇನ್ನೊಬ್ಬರು ಕುಳಿತದ್ದನ್ನು ನೋಡಿದೆ, ನಮ್ಮೂರಿನಿಂದ ಹೊರಡುವಾಗ ನಾನೊಬ್ಬನೇ ಇದ್ದೆ. ಮಧ್ಯದಲ್ಲಿ ಯಾರೋ ಹತ್ತಿ ಕುಳಿತಿರಬೇಕೆಂದು ಯೋಚಿಸುತ್ತಾ ಮಲಗಿದಲ್ಲಿಂದ ಎದ್ದು ಕುಳಿತೆ. ನನ್ನಿದಿರು ಕುಳಿತಿದ್ದ ಮನುಷ್ಯ ಮುದುಕ, ಮುದುಕನಾದರೂ ಹುಡುಗರಂತೆ ಡ್ರೆಸ್ ಮಾಡಿಕಂಡಿದ್ದ. ನೋಡಿದ ಕೂಡಲೆ ಮುದುಕನೆಂದು ಗೊತ್ತಾಗುತ್ತಿರಲಿಲ್ಲ. ಅವನು ಹಣವಂತನಾಗಿರಬೇಕೆಂದು ಅವನ ವೇಷಭೂಷಣಗಳಿಂದ ವ್ಯಕ್ತವಾಗುತ್ತಿತ್ತು. ಅವನು ಐಶ್ವರ್‍ಯವಂತನಾಗಿರಬಹುದೆಂಬ ಭಾವನೆಯುಂಟಾದ ಕೂಡಲೇ ಇವನ ಪರಿಚಯ ಮಾಡಿಕೊಳ್ಳಬೇಕೆಂದು ಆಸೆಯಾಯಿತು. ಅವನು ನನ್ನನ್ನ ನೋಡುತ್ತಾ ಕುಳಿತಿದ್ದರೂ ಮಾತನಾಡುವಂತೆ ತೋರಲಿಲ್ಲ. ನಾನೇ ಮಾತನಾಡಬೇಕಾಗಿ ಬಂತು, ‘ಸ್ವಾಮಿ, ದಯಮಾಡಿ ಗಂಟೆ ಎಷ್ಟೆಂದು ಹೇಳುವಿರಾ?’ ಎಂದು ಕೇಳಿದೆ. ಅವನು ಕೈಗಡಿಯಾರವನ್ನು ನೋಡಿ ‘ಎರಡು ಗಂಟೆಗೆ ಹತ್ತು ನಿಮಿಷವಿದೆ’ ಎಂದು ಹೇಳಿದ. ಆ ಮುದುಕ ತುಂಬಾ ಮಾತುಗಾರ. ನಾನು ಮೊದಲು ಮಾತನಾಡಿದ ಮೇಲೆ ಅವನೂ ಮಾತಿಗೆ ಪ್ರಾರಂಭಿಸಿದ. ಅಂತೂ ಮದರಾಸಿಗೆ ತಲುಪುವಷ್ಟರಲ್ಲಿ ನಾವಿಬ್ಬರೂ ಸ್ನೇಹಿರತಾಗಿ ಬಿಟ್ಟಿದ್ದೆವು.

ಆ ಮುದುಕ ಒಬ್ಬ ರತ್ನ ವ್ಯಾಪಾರಿ, ನಾನು ಯಾರೆಂದು ಕೇಳಿದುದಕ್ಕೆ – ನಾನೊಬ್ಬ ಬಡವರ ಮಗನೆಂದೂ ಎಂ.ಎ ಪಾಸಾಗಿದೆಯೆಂದೂ ಕೆಲಸ ಹುಡುಕುವುದರ ಸಲುವಾಗಿ ಮದರಾಸಿಗೆ ಹೊರಟಿದ್ದೇನೆಂದೂ ಹೇಳಿದೆ. ಕೆಲಸವೇನೂ ಸಿಕ್ಕದಿದ್ದಲ್ಲಿ ಬಂದು ತನ್ನನ್ನು ಕಾಣಬೇಕೆಂದು ಹೇಳಿದ. ಅಷ್ಟು ಹೊತ್ತಿನಲ್ಲೇ ಮದರಾಸನ್ನು ತಲುಪಿದ್ದೆವು, ನಾನು ಓದುವಾಗ ವಾಸವಾಗಿದ್ದ ವೈ.ಎಂ.ಸಿ.ಎ.ಗೆ ಹೋದೆ, ಲಾ ಕಲಿಯುತ್ತಿದ್ದ ನನ್ನ ಸ್ನೇಹಿತರನೇಕರು ಅಲ್ಲಿದ್ದರು. ಅವರೊಡನೆ ಮಾತನಾಡುತ್ತಾ ಅಂದು ಅಲ್ಲೇ ಉಳಿದೆನು.

-೩-
ಮರುದಿನದಿಂದ ಕೆಲಸ ಹುಡುಕಲು ಪ್ರಾರಂಭಿಸಿದೆ. ನನ್ನ ದುರದೃಷ್ಟದಿಂದ ಎಲ್ಲಿಯೂ ಕಲಸ ಸಿಗಲಿಲ್ಲ. ನಾನು ಮದರಾಸಿಗೆ ಬಂದು ಎರಡು ವಾರ ಕಳೆದಿದ್ದವು. ಕೈಯಲ್ಲಿದ್ದ ಕೆಲವು ರೂಪಾಯಿಗಳೂ ಖರ್ಚಾಗಿದ್ದವು. ಊಟಕ್ಕೇ ತೊಂದರೆಯಾಯಿತು, ಬೇರೇನೂ ದಿಕ್ಕು ತೋರದೆ ರೈಲಿನ ಸ್ನೇಹಿತನ ಮನೆಗೆ ಹೋದೆ. ದೇವರ ದಯದಿಂದ ನಾನಲ್ಲಿಗೆ ಹೋಗುವ ಹೊತ್ತಿಗೆ ಆತನೂ ಮನೆಯಲ್ಲಿದ್ದನು. ನಾನು ಬಂದುದನ್ನು ನೋಡಿ ಅವನಿಗೆ ಬಲು ಸಂತೋಷವಾಯಿತು. ಅವನಿಗೊಬ್ಬ ಮಗಳೂ ದೂರ ಸಂಬಂಧದ ಸೊಸೆಯೂ ಇದ್ದರು. ಅವರಿಬ್ಬರಿಗೂ ಪಾಠ ಹೇಳಿಕೊಡಲು ಆಗುತ್ತದೆಯೇ ಎಂದು ನನ್ನನ್ನು ಕೇಳಿದ. ಏನೂ ಕೆಲಸವಿಲ್ಲದ ನನಗೆ ಅದೇ ಬಲು ದೊಡ್ಡ ಕೆಲಸವೆಂದಾಯಿತು ಹೇಳಿಕೊಡುವುದಾಗಿ ಒಪ್ಪಿಕೊಂಡೆ.

ಮರುದಿನದಿಂದ ಪಾಠ ಹೇಳಲುಪಕ್ರಮಿಸಿದೆ. ಅವನ ಮಗಳಿಗೆ ಸುಮಾರು ಹದಿನಾಲ್ಕು ವರ್ಷ; ಸೊಸೆಗೆ ಹದಿನಾರು ವರ್ಷ. ಆತನ ಮಗಳು ಲಕ್ಷಣವಾಗಿದ್ದಳು. ಆದರೆ ಸೊಸೆ ಅತಿ ಚೆಲುವೆಯಾಗಿದ್ದಳು. ಪಾಠದಲ್ಲೂ ಹಾಗೆಯೇ. ಮಗಳು ತಕ್ಕಮಟ್ಟಿಗೆ ಕಲಿಯುತ್ತಿದ್ದಳು. ಸೊಸೆಗೂ ಒಂದು ಸಾರಿ ಹೇಳುವದೇ ತಡ ಕಲಿತುಬಿಡುತ್ತಿದ್ದಳು. ಮಗಳಿಗೆ ಮಾತು ಬಹಳ. ಸೊಸೆ ಕೇಳಿದ ಪ್ರಶ್ನೆಗೆ ಉತ್ತರವಲ್ಲದೆ ಬೇರೆ ಮಾತನಾಡುತ್ತಿರಲಿಲ್ಲ. ಮಗಳಿಗೆ ಸದಾ ನಗುಮುಖ, ಸೊಸೆಯ ಸುಂದರವಾದ ಮುಖವು ಯಾವುದೋ ಚಿಂತೆಯಿಂದ ಬಾಡಿರುತ್ತಿತ್ತು. ಚಿಂತೆಯಿಂದ ಬಾಡಿದ್ದರೂ ಆ ಮುಖದಲ್ಲಿ ಅದೊಂದು ಬಗೆಯ ಎಷ್ಟು ನೋಡಿದರೂ ಸಾಲದೆನ್ನುವ ತರದ -ಸೌಂದರ್‍ಯ. ಮಗಳ ಹೆಸರು ಸೀತೆ, ಶಾಂತಿ ಎಂದು ಸೊಸೆಯ ಹೆಸರು.

ನಾನು ಪಾಠ ಹೇಳಲು ಮೊದಲು ಮಾಡಿ ಆರು ತಿಂಗಳುಗಳು ಸಂದಿದ್ದವು. ಹುಡುಗಿಯರಿಬ್ಬರೂ ಚೆನ್ನಾಗಿಯೇ ಪಾಠ ಕಲಿಯುತ್ತಿದ್ದರು. ಶಾಂತಿಯ ಸೌಂದರ್‍ಯ ಸೌಂದರ್ಯವನ್ನಾವರಿಸಿದ್ದ ದುಃಖ, ವಿದ್ಯೆಯಲ್ಲಿ ಅವಳಿಗಿದ್ದ ಅಭಿರುಚಿ, ಮಿತವಾದ ಮಾತು ಇವೆಲ್ಲವೂ ಸೇರಿ ನನ್ನ ಮನಸ್ಸನ್ನು ಅವಳೆಡೆಗೆ ಎಳೆಯತೊಡಗಿದವು. ಎಷ್ಟು ನೋಡಿದರೂ ಅವಳನ್ನು ಇನ್ನೊಮ್ಮೆ ನೋಡಬೇಕೆನಿಸುತ್ತಿತ್ತು. ಅವಳು ಹೈಕೋರ್ಟು ಜಡ್ಜಿನ ತಂಗಿಯ ಮಗಳಾದರೂ ಅವಳ ತಂದೆ ತಾಯಿಯರು ಅಷ್ಟೇನೂ ಅನುಕೂಲಸ್ಥರಾಗಿರಲಿಲ್ಲ. ಮಗಳ ಮದುವೆಗೆ ಬಹಳ ಪ್ರಯತ್ನ ಮಾಡುತ್ತಿದ್ದರು. ಬಡತನದ ದೆಸೆಯಿಂದ ವರದಕ್ಷಿಣೆ ಕೊಡಲಾರದೆ ಇನ್ನೂ ಮಗಳಿಗೆ ಮದುವೆಯಾಗಿರಲಿಲ್ಲ. ನನಗಂತೂ ಯಾವಾಗಲೂ ಶಾಂತಿಯ ಜಪವೇ ಆಯಿತು. ಮದುವೆಯಾದರೆ ಲಂಡನ್ನಿಗೆ ಹೋಗಲಾಗುತ್ತಿರಲಿಲ್ಲ. ಆದುದರಿಂದ ಅವಳನ್ನು ಮರೆಯಲು ಪ್ರಯತ್ನಿಸತೊಡಗಿದೆ. ಎಷ್ಟೆಷ್ಟು ಪ್ರಯತ್ನಿಸಿದರೂ ಅವಳ ಸದ್ದುಗಳು ನನ್ನ ಮನಸ್ಸನ್ನು ಅವಳೆಡೆಗೆ ಎಳೆಯತೊಡಗಿದವು. ನಾನು ಸೀತೆಯನ್ನು ಮದುವೆಯಾಗಬಹುದಿತ್ತು. ಎಷ್ಟೋ ಸಾರಿ ಅವಳ ತಂದೆಯೇ ನನ್ನನ್ನು ಹಾಸ್ಯಕ್ಕಾಗಿ ಅಳಿಯ ಎಂದು ಕೂಗುತ್ತಿದ್ದರು. ಅವರಿಗೆ ಸೀತೆಯೊಬ್ಬಳೇ ಮಗಳು. ನನಗವಳನ್ನು ಮದುವೆಮಾಡಿ ನನ್ನನ್ನು ಮನೆ ಅಳಿಯನನ್ನಾಗಿ ಮಾಡಿಕೊಳ್ಳಬೇಕೆಂಬ ಬಯಕೆಯೂ ಅವರಿಗಿತ್ತು. ನಾನವರ ಅಳಿಯನಾದರೆ ಸುಲಭವಾಗಿ ಲಂಡನ್ನಿಗೆ ಹೊಗಬಹುದಿತ್ತು. ಆದರೆ ಎಂದಿನಿಂದ ಶಾಂತಿಯನ್ನು ಪ್ರೀತಿಸತೊಡಗಿದೆನೋ ಅಂದಿನಿಂದ ಹಣಕ್ಕಾಗಿ ಪ್ರೇಮವನ್ನು ಬಲಿಗೊಡಬೇಡವೆಂದು ನನ್ನ ಮನಸ್ಸು ಹೇಳುತ್ತಲಿತ್ತು. ನನಗೆ ಲಂಡನ್ನಿಗೆ ಹೋಗುವ ಆಸೆ ಕಮ್ಮಿಯಾಗಿರಲಿಲ್ಲ. ಆದುದರಿಂದ ಶಾಂತಿಯ ತಂದೆ-ತಾಯಿಯೊಡನೆ ಭಿಕ್ಷೆಯನ್ನು ಬೇಡಲು ನಾನಿನ್ನೂ ಸಿದ್ಧನಾಗಿರಲಿಲ್ಲ.

-೪-
ಒಂಭತ್ತು ಗಂಟೆಯಾಗಿತ್ತು. ನಾನು ಪಾಠದ ಕೋಣೆಯಲ್ಲಿ ಕುಳಿತು ನನ್ನ ಶಿಷ್ಯರಿಬ್ಬರನ್ನು, ಇದಿರು ನೋಡುತ್ತಿದ್ದೆ. ಸತ್ಯವನ್ನು ಹೇಳುವುದಾದರೆ ನಾನಿದಿರು ನೋಡುತ್ತಿದ್ದುದು ಶಾಂತಿಯನ್ನು. ಶಾಂತಿಯನ್ನು ಸ್ಮರಿಸುತ್ತಿರುವಾಗಲೇ ಬಾಗಿಲು ತೆರೆದ ಶಬ್ದವಾಯಿತು. ತೆರೆದ ಬಾಗಿಲಿನಿಂದ ಒಳಹೊಕ್ಕಳು ಸೀತೆ. ಯಾವಾಗಲೂ ಅವಳೊಡನೆಯೇ ಬರುತ್ತಿದ್ದ ಶಾಂತಿಯ ಸುಳಿವಿಲ್ಲ. ಅವಳನ್ನು ಕಾಣದೆ ಮನಸ್ಸಿಗೆ ವಿಷಾದವಾಯಿತು, ಒಮ್ಮೆಯೇ ‘ಶಾಂತಿ ಎಲ್ಲಿ?’ ಎಂದು ಕೇಳಲು ಸ್ವಲ್ಪ ಸಂಕೋಚವಾಯಿತು. ಆದರೆ ನಾನು ಕೇಳುವ ಮೊದಲೇ ಅವಳೆ ‘ನೋಡಿ ಮೇಷ್ಟ್ರೆ ನಿನ್ನೆ ರಾತ್ರಿ ಶಾಂತಿಯ ತಂದೆ ಬಂದು ಅವಳನ್ನು ಊರಿಗೆ ಕರೆದುಕೊಂಡು ಹೋಗಿಬಿಟ್ಟರು. ಯಾಕೆಂತಗೊತ್ತಿದೆಯೇ? ಮದುವೆಗೆ!’ ಎಂದಳು.

ಆಗ ನನಗೆ ತಿಳಿಯಿತು. ಶಾಂತಿ ಇಲ್ಲದೆ ನಾನು ಬದುಕಲಾರನೆಂದು. ಮೊದಲೇ ಅವಳ ತಂದೆ ತಾಯಿಯರನ್ನು ಕೇಳದಿದ್ದುದಕ್ಕಾಗಿ ನನ್ನನ್ನು ನಾನೇ ಹಳಿದುಕೊಂಡೆ. ಏನು ಮಾಡಿದರೆ ತಾನೆ ಈಗೇನು ಪ್ರಯೋಜನ? ಹಣದಾಶೆಯಿಂದ ನನ್ನ ಜೀವನವನ್ನು ನಾನೇ ಮಣ್ಣುಗೂಡಿಸಿಕೊಂಡ ಮೇಲೆ ಗೊತ್ತಾಯಿತು. ಶಾಂತಿವಿಹೀನ ಪ್ರಪಂಚದಲ್ಲಿ ಜೀವಿಸುವದು ನನ್ನಿಂದ ಸಾಧ್ಯವೆಂದು. ಶಾಂತಿಯನ್ನು ಕಳೆದುಕೊಂಡು ಅಂದಿನ ದಿನವೆಲ್ಲ ಅಶಾಂತಿಯಲ್ಲಿ ಕಳೆದೆನು. ಮರುದಿನ ಪಾಠದ ಹೊತ್ತಿನಲ್ಲಿ ಸೀತೆ ನನಗೊಂದು ಕಾಗದ ತೋರಿಸಿದಳು, ಅಂದಿನ ಬೆಳಗಿನ ಹೊತ್ತು ಅಂಚೆಯ ಮೂಲಕ ಸೀತೆಗೆ ಶಾಂತಿಯಿಂದ ಬಂದ ಪತ್ರವದು.

“ಸ್ನೇಹಮಯಿ ಸೀತಾ, ಸಂತೋಷದಲ್ಲಿರುವ ನಿನ್ನನ್ನು ಈ ಕಾಗದದ ಮೂಲಕ ದುಃಖಕ್ಕೀಡುಮಾಡುತ್ತಿದ್ದೇನೆ; ಕ್ಷಮಿಸು, ನಿನಗೆ ನನ್ನ ವ್ಯಥೆಯನ್ನು ಬರೆಯುತ್ತಿರಲಿಲ್ಲ. ಆದರೆ ಈ ಪ್ರಪಂಚದಲ್ಲಿ ನನಗೆ ನಿನಗಿಂತಲೂ ಬೇರೆ ಯಾವ ಸ್ನೇಹಿತರೂ ಇಲ್ಲ. ನಿನ್ನೊಡನೆ ಹೇಳದೆ ನಾನು ಇಂದಿನವರೆಗೂ ಯಾವ ಕೆಲಸವನ್ನೂ ಮಾಡಿಲ್ಲ. ಈಗ ಮಾಡುವ ಈ ಕೆಲಸವನ್ನೂ ನಿನಗೆ ಹೇಳದೆ ಮಾಡುವುದಿಲ್ಲ.

ಅಣ್ಣ ನನ್ನ ಮದುವೆ ನಿಶ್ಚಯಮಾಡಿದ್ದಾರೆ, ಅಣ್ಣನಿಗಿಂತಲೂ ವಯಸ್ಸಾದ ವರ. ಮೂರನೆಯ ಮದುವೆಗೆ ನಾನು ವಧು, ನಾಲ್ಕು ಜನ ಮೊಮ್ಮಕ್ಕಳು ವರನಿಗಿರುವರಂತೆ. ವರದಕ್ಷಿಣೆಯನ್ನು ಕೊಡಲು ಶಕ್ತಿಯಿಲ್ಲದುದಕ್ಕಾಗಿ ನನಗೆ ಮೊದಲು ನಿಶ್ಚಿತವಾದ ವರನು ನನ್ನನ್ನು ಮದುವೆಯಾಗಲು ಒಪ್ಪುದಿಲ್ಲವಂತೆ. ಸೀತಾ, ಆ ಮುದುಕನ ಮಡದಿಯಾಗಿ ಸತ್ತ ಹೆಣದಂತೆ ಜೀವನವನ್ನು ಕಳೆಯುವದಕ್ಕಿಂತಲೂ ನನಗೆ ಸಾವೇ ಲೇಸೆಂದು ತೋರುವುದು. ಲೇಸಾದ ಕಾರ್ಯವನ್ನೇಕೆ ಮಾಡಬಾರದು? ಆತ್ಮಹತ್ಯೆಯು ಪಾಪವೆಂದು ಜನರನ್ನುವರು. ಮುದುಕನ ಕೊರಳಿಗೆ ಚಿಕ್ಕ ಬಾಲಿಕೆಯನ್ನು ಕಟ್ಟುವುದು ಪುಣ್ಯವಾದರೆ ನನಗಾ ಪುಣ್ಯಕ್ಕಿಂತಲೂ ಆತ್ಮಹತ್ಯೆಯ ಪಾಪವೇ ಲೇಸೆಂದು ತೋರುವುದು. ನಿನಗೆ ಈ ಕಾಗದವು ತಲುಪಿದಾಗ ನಿನ್ನ ವಿರ್ಭಾಗ್ಯ ಸಹೋದರಿಯು ಈ ಪ್ರಪಂಚದಿಂದ ಹೊರಟುಹೋಗಿರುವಳು, ಆತ್ಮಹತ್ಯೆಯನ್ನು ಮಾಡಿಕೊಂಡ ಪಾಪಿಯೆಂದು ನೀನೊಬ್ಬಳಾದರೂ ಜರಿಯುವದಿಲ್ಲವೆಂದು ನನಗೆ ಗೊತ್ತಿದೆ. ಕ್ಷಮಿಸು.

ನಿನ್ನ -ಶಾಂತಿ”

ಶಾಂತಿಯ ಕಾಗದವನ್ನು ಓದಿದೆ. ಶಾಂತಿಯಂತಹ ಸ್ವರ್ಣ ಪುತ್ಥಳಿಯನ್ನು ಕೊಡುವುದೂ ಅಲ್ಲದೆ ಅವಳೊಡನೆ ವರದಕ್ಷಿಣೆಯನ್ನೂ ಕೊಡಬೇಕು ಎಂದು ಕೇಳಿದ ನೀಚನನ್ನು ಶಪಿಸಿದ. ಹಿಂದೊಂದು ಬಾರಿ ನಾನು ಬಡವರ ಹುಡುಗಿಯನ್ನು ಮದುವೆಯಾಗಲು ತಿರಸ್ಕರಿಸಿದ್ದುದು ದುಃಖಭರದಲ್ಲಿ ಮರೆತೇ ಹೋಗಿತ್ತು. ವಿಧಾತನನ್ನು ಹಳಿದೆ. ವಿಧಾತನನ್ನು ದೂರುವ ಬದಲು ನಾನೇ ನನ್ನ ದುರಾಸೆಯನ್ನು ಬಿಟ್ಟು ಶಾಂತಿಯನ್ನು ಮದುವೆಯಾಗಿದ್ದರೆ ಆ ಮುದ್ದು ಬಾಲೆಯು ಈಗ ಸುಖದಲ್ಲಿರುತ್ತಿದ್ದಳು. ನನ್ನ ತಪ್ಪಿಗಾಗಿ ನನ್ನನ್ನು ನಾನೇ ಜರಿದುಕೊಂಡೆ, ವರದಕ್ಷಿಣೆ ಎಂಬ ಪಿಶಾಚಿಯು ಎಷ್ಟು ಸುಕುಮಾರಿಯರನ್ನು ಬಲಿ ತೆಗೆದುಕೊಳ್ಳುವದೋ ದೇವರೇ ಬಲ್ಲ. ಆದರೆ ನನ್ನ ಶಾಂತಿಯನ್ನು ಅದು ಬಲಿ ತೆಗೆದುಕೊಂಡ ಮೇಲೆ ನನಗದರ ನಿಜಸ್ವರೂಪವು ಗೊತ್ತಾಯಿತು.

-೫-
ಅಂದಿನ ರಾತ್ರಿಯ ಊರಿಗೆ ಹೊರಟೆ. ಮರುದಿನ ಬೆಳಗಿನ ಹೊತ್ತಿನಲ್ಲಿ ಮನೆಗೆ ತಲುಪಿದೆ. ನಾನು ಹೋಗುವಾಗ ಅಮ್ಮ ಅಂಗಳ ಸಾರಿಸಿ ರಂಗವಲ್ಲಿ ಇಡುತ್ತಿದ್ದಳು. ನನ್ನ ತಂದೆಯೂ ‘ವಿ’ಯೂ ಒಳಗಿದ್ದರು. ನನ್ನ ನೋಡಿದೊಡನೆಯೇ ಅಮ್ಮ ಸಂತೋಷದಿಂದ ಮುಂದೆ ಬಂದು ಅಪ್ಪಿಕೊಂಡಳು. ಅಮ್ಮನೊಡನೆ ಮಾತುಕತೆಯಾಡಿ ಒಳಗೆ ಹೋದೆ. ನನ್ನ ತಂದೆ ನಡುಮನೆಯಲ್ಲಿ ಕುಳಿತಿದ್ದರು. ನನ್ನನ್ನು ನೋಡಿದರೂ ಮಾತಾಡಲಿಲ್ಲ. ನಾನು ಅಲ್ಲಿ ನಿಲ್ಲದೆ ನನ್ನ ಕೊಠಡಿಗೆ ಹೋದೆ. ಅಲ್ಲಿ ವಿಜಯ ಒಂದು ಚಿತ್ರವನ್ನು ನೋಡುತ್ತಾ ನಿಂತಿದ್ದಳು. ನನ್ನನ್ನು ಕಂಡು ಆ ಚಿತ್ರವನ್ನು ಬಚ್ಚಿಟಳು. ಆಶ್ಚರ್‍ಯದಿಂದ ಪೇಪರನ್ನು ನನ್ನಿದಿರು ಎಸೆದು…. ‘ನೋಡುತ್ತಿದ್ದುದು ನೀನು ಕೊಂದ ಹುಡುಗಿಯನ್ನು’ ಎಂದಳು. ನನಗೆ ಬಹಳ ಆಶ್ಚರ್ಯವಾಯಿತು. ಪತ್ರಿಕೆಯನ್ನು ಆತುರದಿಂದ ತೆಗೆದು ನೋಡಿದೆ

ಶಾಂತಿಯ ಚಿತ್ರ- ಅದರ ಕೆಳಗಡೆ ‘ವರದಕ್ಷಿಣೆಗೆ ಆಹುತಿ.’
ಶಾಂತಿಯೆ ನಾನು ಮೊದಲು ಕೈಬಿಟ್ಟ ಕನ್ಯೆ?
ಈಗ… ಏನು ಪ್ರಯೋಜನ!….
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೀಸಲಾತಿ
Next post ಜ್ಞಾನಯೋಗಿ

ಸಣ್ಣ ಕತೆ

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…