ನಿದ್ರೆಯಲ್ಲಿ ಏನೋ ಕಂಡಂತೆ ನಾಗಪ್ಪ ದಿಗ್ಗನೆ ಎದ್ದು ಕುಳಿತು ಮಂಚದ ಹಾಸಿಗೆ ಮೈಯ ಹೊದಿಕೆಯನ್ನು ಹೌವನೆ ಓಸರಿಸಿ ಕಣ್ಣುಜ್ಜಿಕೊಂಡ. ಒಂದು ಗಂಟೆ ಹಿಂದೆಯೇ ಕೈಕಾಲು-ದೇಹದ ವ್ಯಾಯಾಮ ಮಾಡಿ, ಮೈನೀರು ಇಳಿಸಿ ಮಲಗಿಕೊಂಡ ಅವನಿಗೆ ಮೈಮನಸ್ಸಿನ ಸಡಿಲತನದಿಂದ ಹಾಯಾಗಿ ನಿದ್ರೆ ಬಂದಿತ್ತು. ಪಕ್ಕಕ್ಕೆ ಕೈ ಚೆಲ್ಲುವ ಚಪಲವೂ ಈ ದಿನಗಳಲ್ಲಿ ಕಡಿಮೆಯಾದುದರಿಂದ ಅವನು ತನ್ನೊಳಗೆಯೆ, ಒಂದು ತಲೆದಿಂಬಿನ ಸಹಾಯ ಪಡೆಯುತ್ತ ನಿದ್ರಾಂಗನೆಯ ಮನವೊಲಿಸಲು ಪ್ರಯತ್ನಿಸುತ್ತಿದ್ದ. ಕಣ್ತೆರೆದಾಗ ಕೋಣೆಯಲ್ಲಿ ಇನ್ನೂ ಕತ್ತಲಿತ್ತು. ಯಾರೋ ಒಳಬಂದಂತೆ ಅವನಿಗನಿಸಲು ಮನಸ್ಸಿನ ಕಾರಣವಾಗಿರಬೇಕೆಂದು ಊಹಿಸಲು ಅವನಿಗೆ ಹೆಚ್ಚು ಹೊತ್ತು ತಗಲಲಿಲ್ಲ. ಮೊಬೈಲ್ ತೆಗೆದು ಸಮಯ ನೋಡಿದ. ಇನ್ನೂ ೪ರ ಹೊತ್ತು. ಇನ್ನು ನಿದ್ರೆ ಬರುವ ಹಾಗಿಲ್ಲ. ಮನೆಯಲ್ಲಿ ಎರಡು ಮುದಿ ಜೀವ ಮಾತ್ರ. ಬೇರೆ ಯಾರೂ ಇರದ ಕಾರಣ ಹೃದಯದಲ್ಲಿ ಹೆಚ್ಚು ತಲ್ಲಣ. ಎದ್ದು ವಾಶ್ ರೂಮಿಗೆ ಹೋದ. ಬಂದವನು ಮತ್ತೆ ಎಸಿ ಹಾಕಿಕೊಂಡು ಚಾದರವನ್ನು ಮುಖದವರೆಗೂ ಎಳೆದುಕೊಂಡು ಮಲಗುವಾಗ ನಿದ್ರೆ ಬರಲೊಲ್ಲದು. ‘ಈಗ ನಿಮಗೆ ಎಸಿ ಯಾಕೆ?’ ಯಾರನ್ನೋ ಕಂಡ ಹಾಗಾಯಿತಲ್ಲ. ಭ್ರಮೆ ಮಾತ್ರವೇ? ಒಂಟಿತನದ ಅಳುಕೆ? ವಯಸ್ಸಾಗುತ್ತಿರುವಾಗ ನಿದ್ರೆಯಲ್ಲಿ, ಅಂಧಕಾರದಲ್ಲಿ ಏಕಾಂತದಲ್ಲಿ ಉಂಟಾಗುವ ಮನಸಿನ ವಿಕಾರಗಳಿವು. ಇವುಗಳಿಂದ ಪಾರಾಗುವುದು ಹೇಗೆ? ಎನ್ನುವಂತೆಯೇ ನಿದ್ರೆ ಹತ್ತಿತು. ಅರೆನಿದ್ರೆಯೇ ಆಗಿರಬಹುದು, ಆ ಹೊತ್ತಿಗೆ ಕಾಗೆಯ ಕೂಗು, ಈ ಕಾಗೆ ದಿನ ಬಿಡದೆ ಬರುತ್ತದೆ. ಗಾಜಿನ ಕಿಟಕಿ ತೆರೆದ ಗೆಲರಿಯಲ್ಲಿ ಕುಳಿತು ಕೂಗುತ್ತಿರುತ್ತದೆ. ಕೆಲವೊಮ್ಮೆ ಜೋಡಿಯಲ್ಲಿ, ಅವನಿಗೆ ಕಾಗೆಯ ಸ್ವರ ಕೇಳಿದಂತಾಯಿತು. ಮುಖದ ಚಾದರವನ್ನು ಅರಿವಿಲ್ಲದಂತೆಯೇ ಸರಿಸಿ ಗೆಲರಿಯ ಹೊರಗೆ ದೃಷ್ಟಿ ಹಾಕಿದ. ಕಾಗೆ ಮತ್ತೆ ಮತ್ತೆ ಕೂಗುವ ಸ್ವರ. ಈ ಕುರಿತು ಅವನು ಹಿರಿಯರನ್ನು ಕೇಳಿ ಅರಿತದ್ದು- ‘ನೀನು ತಿಂಡಿ ಹಾಕುತ್ತಿದ್ದರೆ, ಅದಕ್ಕಾಗಿ ನಿನ್ನ ತೀರಿದ ಹಿರಿಯರು ಬಂದು ನೆನಪು ಮಾಡುವುದು, ನಿನ್ನ ಯಾರಾದರೂ ಗೆಳೆಯರು, ನೆಂಟರು ಮನೆಗೆ ಬರುವುದನ್ನು ಸೂಚಿಸುವುದು. ಒಟ್ಟಿನಲ್ಲಿ ಅನಿಷ್ಟವೇನಲ್ಲ. ನಿನ್ನನ್ನು ಕರೆಯಲು ಬರುವುದಲ್ಲ… ನಿನ್ನನ್ನು ಪ್ರೀತಿಸುತ್ತಿದ್ದ ಸಂಬಂಧಿಕರೂ ಆಗಿರಬಹುದು….’ ಈ ತಿಳುವಳಿಕೆಯಿಂದ ತನಗೇನೂ ಸಮಾಧಾನವಾಗಿರದಿದ್ದರೂ ಚಿತ್ತಗ್ಲಾನಿಯಾಗುತ್ತಿರಲಿಲ್ಲ.

‘ನೀನು ಪೂರ್ಣ ನಿದ್ರೆಯಲ್ಲಿ ಇಲ್ಲ. ಹೀಗೇ ಅರ್ಧ ಜಾಗೃತವಾಗಿರು. ನನಗೆ ತುಂಬಾ ವಿಷಯ ಹೇಳುವುದಿದೆ ನಿನಗೆ, ನಾನು ನಿನಗೆ ತುಂಬಾ ಆಪ್ತನಾದವನು. ಎಷ್ಟೋ ಸಲ ಇಲ್ಲಿ ಬಂದು, ನಿನಗೆ ಕಾಣಿಸುವ ಪ್ರಯತ್ನ ಮಾಡುತ್ತಿದ್ದೆ. ನನ್ನ ಇಬ್ಬರು ಗೆಳೆಯರನ್ನೂ ಪ್ರಾತಃಕಾಲದಲ್ಲಿ ನಿನ್ನನ್ನು ಎಚ್ಚರಿಸಲಿಕ್ಕೆ ಕಳುಹಿಸುತ್ತಿದ್ದೆ. ನಾನು ಸ್ವತಃ ಒಂದೆರಡು ಸಲ ಬಂದೆ. ಆದರೆ ಮಸಕಾಗಿ ಪ್ರತ್ಯಕ್ಷನಾದ ನನ್ನ ಮುಖ ಪರಿಚಯವೇ ಆಗಲಿಲ್ಲ ನಿನಗೆ. ನಾನು ಎಷ್ಟೋ ಸಲ ಬಂದಿದ್ದೇನೆ. ಎಷ್ಟೋ ವರ್ಷಗಳಿಂದ ಬರುತ್ತಿದ್ದೇನೆ. ನಮ್ಮದು ತುಂಬಾ ಹಳೆಯ ಸಂಬಂಧ. ನಿನಗೆ ಅರಿವಾಗಲೇ ಇಲ್ಲ. ನನ್ನ ನೆನಪನ್ನು ನೀನೂ ಮಾಡಲೇ ಇಲ್ಲ. ಬಹಳ ಕೆಟ್ಟದೆನಿಸುತ್ತದೆ. ನೋವಾಗುತ್ತದೆ. ಸತ್ತ ಮೇಲೇನು ನೋವು, ದುಃಖ ಎಂದು ನೀನು ಕೇಳಬಹುದು. ನೋವು ಎನ್ನುವುದು ಅಗೋಚರ. ಅದು ಕಾಣಿಸುವುದಿಲ್ಲ. ಅದೊಂದು ವ್ಯಥೆ. ಮನುಷ್ಯನ ಶರೀರ ಮಣ್ಣು ಸೇರಿದ ಮೇಲೆ, ಎದೆಯ ಒಳಗಿದ್ದ ಉಸಿರು ನಿಂತು ಹೊರಗೆ ಗಾಳಿಯಲ್ಲಿ ಸೇರಿಕೊಂಡಾಗ ಈ ‘ವ್ಯಥೆ’ ಎನ್ನುವುದು ಒಂದು ಶಬ್ದದ ರೂಪದಲ್ಲಿ ಸುತ್ತ ಮುತ್ತ ಚಲಿಸುತ್ತಿರುತ್ತದೆ. ಅದು ಜೀವಂತ ಇರುವ ನಿಮಗೆ ಸಾಮಾನ್ಯವಾಗಿ ಕೇಳಿಸುವುದಿಲ್ಲ. ಅದರ ಅನುರಣನ ಗಾಳಿಯ ಅಲೆಯಲ್ಲಿ ಸದ್ದು ಮಾಡುತ್ತಿರುತ್ತದೆ. ಕೆಲವು ಸಲ ಹಿರಿಯರು ಪ್ರಕೃತಿಯ ಸೂಕ್ಷ್ಮಕ್ರಿಯೆಗಳ ಸ್ಪಂದನದ ಅನುಭವ ಮಾಡಿಕೊಳ್ಳುತ್ತಾರೆ. ಸ್ಪರ್ಶೇಂದ್ರಿಯದ ಮೂಲಕ ದೇಹಕ್ಕೆ ಒಲಿಸಿಕೊಂಡಿರುತ್ತಾರೆ. ಆಗ ‘ಯಾರೊ ಅಳುತ್ತಾರೆ, ಯಾರದೊ ಮೊರೆ, ವ್ಯಥೆಯ ಧ್ವನಿ; ಕೇಳಿಸುತ್ತಾ ಇದೆಯೇ’ ಎಂದು ನಮ್ಮನ್ನು ಆಕಸ್ಮಾತ್ ಕೇಳುವುದುಂಟು. ನಿನಗೆ ಇದೆಲ್ಲ ಗೊತ್ತಿಲ್ಲ. ನಿನ್ನ ಒಟ್ಟಿಗೆ ಹಿರಿಯರು ಸಂಸಾರ ಮಾಡಿದ್ದು ಕಡಿಮೆ. ನಿನ್ನ ತಾಯಿ ಬದುಕಿರುವವರೆಗೆ ನಿನ್ನ ಜೊತೆ ಇದ್ದಳು. ಏನಿದ್ದರೂ ನಿನಗವಳ ನೋವು, ನಲಿವು ಗೊತ್ತಿತ್ತು. ವರ್ಷಂಪ್ರತಿ ನೀನವಳ ತಿಥಿಯನ್ನು ಮಠದಲ್ಲಿ ಮಾಡಿಸುತ್ತಿ; ನೀವೆಲ್ಲರೂ ಆಕೆಯ ನೆನಪು ಮಾಡಿಕೊಳ್ಳತ್ತೀರಿ. ನಿಜವಾಗಿಯೂ ಒಳ್ಳೆಯ ವಿಷಯ. ಮನೆಯ ಗೋಡೆಯಲ್ಲಿ ಆಕೆಯ ಭಾವಚಿತ್ರ ಇದೆ. ಪ್ರತಿದಿನ ಬೆಳಗ್ಗೆ ಅದಕ್ಕೆ ಅಗರಬತ್ತಿ ಇಟ್ಟು, ಒಂದೆಸಳು ಹೂವಿಡುತ್ತೀರಿ. ಅವಳಿಗಿಂತ ಮೊದಲೇ ಕೆಲವು ವರ್ಷಗಳ ಹಿಂದೆ ಅವಳ ಗಂಡ ಸತ್ತಿದ್ದಾನೆ. ಆದರೂ ಈ ಮನೆಯಲ್ಲಿ, ನಿಮ್ಮ ಮನಸ್ಸಿನಲ್ಲಿ ಅವನ ಸುಳಿವಿಲ್ಲ, ನೆನಪಿಲ್ಲ, ಭಾವಚಿತ್ರ ಇಲ್ಲ. ನಿಮ್ಮಲ್ಲಿ ಯಾರೂ ಅವನ ನೆನಪು ಮಾಡಿದ್ದು ನನಗೆ ಗೊತ್ತಿಲ್ಲ. ಯಾಕೆ ಈ ಬಗೆಯ ಪರಿಭೇದ. ಅವನಿಂದ ನಿಮಗೆ, ಈ ಕುಟುಂಬಕ್ಕೆ ಯಾವುದೇ ರೀತಿಯ ಪ್ರಯೋಜನ ಆಗಿದ್ದಿಲ್ಲವೆ? ಅವನು ನಿಮಗಾಗಿ ಯಾವುದೇ ತ್ಯಾಗವನ್ನು ಮಾಡಲಿಲ್ಲವೆ? ಅನ್ಯಾಯ ಮಾಡಿದ್ದಾನೆಯೆ? ನಿಮ್ಮನ್ನು ಬೀದಿಗೆಳೆದಿದ್ದಾನೆಯೇ? ಇಲ್ಲ, ನಿಮಗಾಗಿ ಸತ್ತಿದ್ದಾನೆ. ಹುಳದಂತೆ ಹುಟ್ಟಿಸಿದ ಆ ದೇವರು ಕೊಟ್ಟ ಕಷ್ಟಗಳನ್ನೆಲ್ಲ ಸಹಿಸುತ್ತ, ಹೋರುತ್ತ ದಿನ ಕಳೆಯುತ್ತಿದ್ದ. ಅವನ ಹೆಂಡತಿ ಪೆದ್ದಿ, ಅಂದರೆ ನಿನ್ನ ತಾಯಿ ಮನೆಯಿಂದ ಹೊರಬಂದು ಕೆಲಸ ಮಾಡಿದವಳಲ್ಲ. ಗದ್ದೆಯಲ್ಲಿ ನಟ್ಟಿ, ಧನಿಗಳ ಮನೆಗೆಲಸಗಳನ್ನು ಅರೆಮನಸ್ಸಿನಿಂದ ಮಾಡಿ ಅಕ್ಕಿಯೋ, ತೆಂಗಿನಕಾಯಿಯೋ, ಮೆಣಸೋ ತಂದು ಮನೆಗೆ ಹಾಕಿದ್ದರಿಂದ ಮನೆ ನಡೆಯುತ್ತಿರಲಿಲ್ಲ. ಒಂದು ನಾಲ್ಕೈದು ರೂಪಾಯಿ ಹಣವು ಮನೆಯಲ್ಲಿ ಇರದಿದ್ದರೆ ಸಂಸಾರ ನಡೆಯದು. ಜೊತೆಗೆ ನೀವೆಲ್ಲ, ಬಡತನದ ಕೂಪದಲ್ಲಿ ಒಂದರ ನಂತರ ಇನ್ನೊಬ್ಬರು ಹುಟ್ಟಿದಿರಿ ದಾರಿದ್ರವನ್ನು ಹೆಚ್ಚಿಸಲು, ಮಣ್ಣಿನ ಕೆಲಸ, ಬೇಯುವ ಕೆಲಸ, ಮಾರ್ಗದ ಕೆಲಸ, ಒಂದಿಷ್ಟು ನಗದು ಹಣ ಸಿಗುವ ಯಾವುದೇ ಕೆಲಸವನ್ನು ಮಾಡಿ ನಿಮಗೆಲ್ಲ ಮೀನನ್ನೋ, ವಸ್ತ್ರವನ್ನೂ ತಂದು ಹಾಕುತ್ತಿದ್ದ. ಮರ್ಯಾದೆಯಿಂದ ಬದುಕಲು ಅವನು ಪಡುತ್ತಿದ್ದ ಪಾಡನ್ನು ಯಾರೂ ತಿಳಿಯಲಿಲ್ಲ. ಆ ಕಾಲದಲ್ಲಿ ಬದುಕಿನ ಪಾಡೇ ಹಾಗಿತ್ತು. ಬಡತನವನ್ನು ನೀಗಿಸುವ, ಸಂಪತ್ತು-ಜಮೀನು ಇದ್ದವರಿಂದ ಸುರಕ್ಷಿತವಾಗಿ ಬದುಕುವ ಮಾರ್ಗವೇ ಇರಲಿಲ್ಲ. ನಿನಗೆ ಗೊತ್ತಿದೆಯೋ ಇಲ್ಲವೊ… ಊರಿನಲ್ಲಿ ಒಬ್ಬ ಜಂಬದ ಗುರಿಕಾರ ಇದ್ದ. ಅವನ ಮನೆಯಲ್ಲಿ ಆಳಿನಂತಲ್ಲ ನಾಯಿಯಂತೆ, ಪಶುವಿನಂತೆ ತಿಳಿಯುತ್ತಿದ್ದ. ಅವನ ಎಲ್ಲ ಕೆಲಸ ಮಾಡುತ್ತಿದ್ದಾಗ ದರ್ಪದಿಂದ ಬೈಯುತ್ತ ತುಳಿಯುತ್ತಿದ್ದ. ಒಂದು ದಿನ ಇವನು ಸಿಟ್ಟಿನಿಂದ ಉಗ್ರನಾಗಿ ಗುರ್ಕಾರವನ್ನು ಕಂಡಾಬಟ್ಟೆ ಬೈದ. ‘ನಮ್ಮ ಮನೆಯಾಚೆ ಬಂದರೆ ಕಾಲು ಮುರಿಯುತ್ತೇನೆ. ಹಡಬೆಗೆ ಹುಟ್ಟಿದವನೆ’ ಎಂದಿದ್ದ. ನಂತರ ಅವನೆ ಒಂದು ರಾತ್ರಿಯಲ್ಲಿ ಇವನು ಲಿಂಗಪ್ಪಯ್ಯ ಕಾಡಿನಿಂದ ಸ್ವಲ್ಪ ಕುಡಿದು ಒಬ್ಬನೇ ಬರುತ್ತಿದ್ದಾಗ ಹಿಂದಿನಿಂದ ತಲೆ ಹೊಡೆದು, ಸೊಂಟ ಮುರಿದು ಸಾಯಿಸಿದ. ನೀವೆಲ್ಲ ಕಾಡಿನ ಹಿಂಸ್ರಪಶುಗಳು ಆಕ್ರಮಿಸಿ ಕೊಂದಿರಬಹುದು ಎಂದು ಗ್ರಹಿಸಿ ಯಾವ ವಿಚಾರಣೆಯನ್ನೂ ಮಾಡಲು ಹೋಗಲಿಲ್ಲ. ಆಗ ಬ್ರಿಟಿಷರ ರಾಜ್ಯ, ಹಗಲಿನಲ್ಲಿ ಪೊಲೀಸರು ಪೇಟೆಯ ಬೀದಿಗಳಲ್ಲಿ ತಿರುಗಾಡುತ್ತಿದ್ದರು. ಲಿಂಗಣ್ಣ ಅಂತ ಒಬ್ಬ ಪೊಲೀಸರು ಪೇಟೆಯ ಬೀದಿಗಳಲ್ಲಿ ತಿರುಗಾಡುತ್ತಿದ್ದರು. ಲಿಂಗಣ್ಣ ಅಂತ ಒಬ್ಬ ಪೊಲೀಸನ ಪರಿಚಯ ನಮಗಿತ್ತು. ಆದರೇನು, ಮನುಷ್ಯ ಸತ್ತ ಮೇಲೆ ಅವನ ಕತೆ ಮುಗಿಯಿತು. ದಾತುವಾರಿ ಇಲ್ಲದವರ ವಿಚಾರಣೆ ಇಲ್ಲ. ಅಂದು ಆ ಪರಿಸ್ಥಿತಿಯಲ್ಲಿ ಸತ್ತವನನ್ನು ಮರುದಿನ ಪತ್ತೆಹಚ್ಚಿ ಸುಡುವ ಕೆಲಸವನ್ನು ಮುಂಬಯಿಗೆ ಹೊರಟಿದ್ದ ದೊಡ್ಡ ಮಗ ಮಾಡಿ ಮುಗಿಸಿದ್ದ. ಈಗ ೬೦ ವರ್ಷಗಳ ನಂತರ ಅವನ ನೆನಪನ್ನು ನಿನಗೆ ಮಾಡಿಕೊಡುತ್ತಿದ್ದೇನೆ….’

ಹಾಲಿನಲ್ಲಿ ಕರೆಗಂಟೆ ಕೇಳಿಸಿತು. ಕಾಗೆ ಗೆಲರಿಯಲ್ಲಿ ಕೂಗುತ್ತಿತ್ತು. ಕಣ್ಣಿನ ಅರೆನಿದ್ರೆಯನ್ನು ಕಣ್ಣು ತಿಕ್ಕಿ ಬಿಡಿಸಿ ಅವನೂ ಆಚೀಚೆ ನೋಡಿದ. ಕಾಗೆಯನ್ನು ಸೂ ಎಂದು ಓಡಿಸಿದ. “ಇನ್ನು ಏಳಿ, ಎಂಟು ಗಂಟೆಯಾಯಿತು.”

ಗೆಲರಿಯಿಂದ ಮುಂಬೆಳಕು ಹರಿದು ಒಳಗೆ ಬಂತು. ಕತ್ತಲೆಯ ಛಾಯೆ ಹರಿದು ದೂರ ಹೋದದ್ದು ತಿಳಿಯಲಿಲ್ಲ. ಇಷ್ಟು ಹೊತ್ತು ತನ್ನೊಡನೆ ಯಾರೋ ಮಾತಾಡುತ್ತಿದ್ದ ಭಾಸವಾಯಿತು. ಇಲ್ಲಿಯೇ ತೂಗು ಕುರ್ಚಿಯಲ್ಲಿ ಯಾರೊ ಕುಳಿತು ಏನೋ ರಹಸ್ಯವನ್ನು ಬಿತ್ತಿದಂತೆ ಅನಿಸಿತು. ಸ್ಪಷ್ಟವಾಗಲಿಲ್ಲ. ಯಾವ ಆಕೃತಿಯೂ ಕಾಣದಿರುವಂತೆ… ಹೆಂಡತಿ ಏನಾದರೂ ಬಂದು ಮಾತಾಡುತ್ತಿದ್ದಳೆ? ಎದ್ದು ನೇರ ಕಿಚನ್‌ಗೆ ಬಂದ. “ಯಾರು ಬಂದರು ಇಷ್ಟು ಬೆಳಿಗ್ಗೆ, ಸೊಸೈಟಿಯವರೆ” ಹೆಂಡತಿಯನ್ನು ಕೇಳಿದ. “ಯಾರೂ ಇಲ್ಲ. ಕಾಗೆ ನಿಮ್ಮನ್ನು ಕರೆಯುತ್ತಿತ್ತು. ಹಾಲಿನವ ಬಂದು ಹಾಲು ಕೊಟ್ಟು ಹೋದ. ಮುಖ ತೊಳೆಯಿರಿ, ಚಾ, ತಿಂಡಿ ರೆಡಿ ಇದೆ.”

“ಹಾಗಾದರೆ ಮಾತಾಡುತ್ತಿದ್ದುದು ಯಾರು, ಸ್ಪಷ್ಟವಾಗದ ಮಾತುಗಳು. ಯಾರೋ ಸತ್ತವನ ವಿಷಯ, ಅವನನ್ನು ಯಾರೋ ಕೊಂದಿದ್ದರಂತೆ”

“ನಿಮಗೆ ಅರೆಮುಸುಕಿನಲ್ಲಿ ಕನಸು ಬೀಳುವುದು ಹೆಚ್ಚು ಅದರಲ್ಲಿಯೂ ರಾತ್ರಿ ಪೆಗ್ ತಗೊಂಡಿದ್ದರೆ ಖಂಡಿತ. ಯಾರದು ಮಾತಾಡುತ್ತಿದ್ದವರು”

“ಯಾರೋ ನನ್ನ ಹತ್ತಿರದ ಬೇಕಾದವರಂತೆ ಮಾತಿನಲ್ಲಿ ಕಳಕಳಿ, ತತ್ಪರತೆ ಇತ್ತು. ತುಂಬಾ ಸಮಯದಿಂದ ಬರುತ್ತಿದ್ದರಂತೆ. ನನಗೆ ಏನೋ ಮಹತ್ವದ ವಿಷಯ ತಿಳಿಸುವ ಆತುರ, ಹಂಬಲ ಕಂಡಿತು. ಇನ್ನು ಮುಂದೆಯೂ ಬರಬಹುದು”

“ನಿಮಗೆ ಅರೆನಿದ್ರೆಯಲ್ಲಿ ಸತ್ತವರು, ಹಳೆಯ ಗೆಳತಿಯರು ಕಾಣಿಸಿಕೊಳ್ಳುವುದು, ಮಾತಾಡುವುದು ಹೆಚ್ಚು…. ನಿಮ್ಮ ಮನಸ್ಸು ಈಗಲೂ ಚಂಚಲ, ಅಧೀರ…”

“ತಮಾಷೆಯಲ್ಲ… ಇದು ಗಂಭೀರ ವಿಷಯ, ನನ್ನ ಮೇಲೆ ಏನೋ ಆರೋಪ ಹೊರಿಸುತ್ತಿದ್ದ….. ನನ್ನ ತಪ್ಪನ್ನು ಹೇಳುತ್ತಿದ್ದ. ಈ ಪ್ರಾಯದಲ್ಲಿ ಆರೋಪ ಹೊತ್ತು ಸಾಯಲೆ….?”

“ಯಾರು ಬಂದಿದ್ದು, ಯಮನೆ?”

“ಅಲ್ಲ ಅಲ್ಲ…. ಯಾರೋ ವ್ಯಕ್ತಿ… ಸತ್ತ ಮನುಷ್ಯ…”

“ನಿಮಗೆ ಎಷ್ಟೋ ಸಾರಿ ಹೇಳಿದ್ದೇನೆ. ಮಲಗುವಾಗ ದೇವರ ನಾಮ ಹೇಳುತ್ತ, ನಿದ್ರೆ ಬೀಳುವವರೆಗೂ ‘ಹರಿ‌ಓಂ’ ಎನ್ನುತ್ತಾ ಮಲಗಿರಿ ಎಂದು ನೀವು ಯಾರಾರನ್ನೋ ನೆನೆಯುತ್ತ ಮಲಗುತ್ತೀರಿ, ನಂತರ ನಿದ್ರೆಯಲ್ಲಿ ಅದೆಲ್ಲ ಬರುತ್ತದೆ….”

“ಕೆಲವು ಸಾರಿ ಪೋರ್ ಎ ಚೇಂಜ್ ಅಂತ ದೇವರ ನಾಮದೊಂದಿಗೆ ಮಲಗುವ ಪ್ರಯತ್ನ ಮಾಡಿದ್ದೇನೆ. ಒಂದು ರಾತ್ರಿ ತಪ್ಪಿಯೂ ‘ಆ ದೇವರು’ ನನ್ನೆದುರು ಬಂದದ್ದಿಲ್ಲ. ಮಾತಾಡಿಸಿದ್ದಿಲ್ಲ. ಏನನ್ನುತ್ತೀ?”

“ದೇವರೆಂದರೆ ನಿಮಗೆ ಅಷ್ಟೆ….”

“ಈವತ್ತು ಬಿಗ್ ಬಜಾರಿಗೆ ಹೋಗಿ ಬರುವ… ಆ ಸಮಾಧಾನ ಇಲ್ಲದವನು ಮತ್ತೆ ಬರಬಹುದು. ಆಗ ಎಲ್ಲವನ್ನೂ ಸರಿಯಾಗಿ ಕೇಳಿ ತಿಳಿಯಿರಿ….”

“ಅವನು ಬರುವುದು ಮುಂಜಾನೆ. ನೀನು ಕರೆಯಲು ಶುರು ಮಾಡುತ್ತಿ… ರವಿವಾರ ಇಷ್ಟು ಬೇಗ ಯಾರು ಏಳುತ್ತಾರೆ?”

“ನೀವು ಹೆಚ್ಚು ಮಲಗಿದರೆ ನಿದ್ರೆಯಲ್ಲಿ ನಿಮ್ಮನ್ನು ಕಾಡುವವರು ಹೆಚ್ಚು… ನಿಮಗೆ ಆ ಲೋಕದ ಸಂಬಂಧ ಸ್ವಲ್ಪ ಹೆಚ್ಚೇ ಎಂದು ಕಾಣುತ್ತದೆ…” ಚಾದ ಟೇಬಲಿನಲ್ಲಿ ಕುಳಿತು ಇಬ್ಬರು ಅಲ್ಲಸಲ್ಲದ ಮಾತುಗಳನ್ನು ಆಡುತ್ತಿದ್ದರು. ಅವರ ಸಂವಾದದಲ್ಲಿ ಸಲಿಗೆ, ದೀರ್ಘ ಸಹಜೀವನದ ಸಹನೆ, ಒಲವುಗಳು ಸಾಮಾನ್ಯವಾಗಿ ಇರುತ್ತಿದ್ದವು….

ಬಿ.ಆರ್. ಸುರ್ವರ್‍ಣರ ಮರಣಕ್ಕೆ ಹೋಗಿ ಬಂದ ಮೇಲೆ ನಾಗಪ್ಪನ ಮನಸ್ಸು ತಳಮಳಗೊಂಡಿತ್ತು. ಎರಡು ದಿನಗಳ ಹಿಂದೆ ಹೆದ್ದಾರಿಯಲ್ಲಿ ಮೋಟಾರ್ ಬೈಕಿನ ಹಿಂದಿನ ಸೀಟಿನಲ್ಲಿ ಕುಳಿತು ಆಚೀಚೆ ನೋಡುತ್ತ ಹಬ್ಬಿನ (ಗೋರೆಗಾಂ) ಎದುರುಗಡೆಯಲ್ಲಿ ಸಿಗ್ನಲ್‌ಗೆ ನಿಂತ ಸುವರ್ಣರನ್ನು ಎಷ್ಟೋ ದಿನಗಳ ನಂತರ ನೋಡಿ ಅವರು ಕೈಯಾಡಿಸಿದ್ದರು. ಅದೇ ರೀತಿಯ ಮೈಕಟ್ಟು, ಮೀಸೆ, ಕಪ್ಪು ಮಾಡಿ ನೀಟಾಗಿ ಬಾಚಿದ ಕೂದಲು, ಚಂಚಲತೆ, ಲವಲವಿಕೆ, ಎಪ್ಪತ್ತರ ಮೇಲಿನ ವಯಸ್ಸು, ಮರಣ ಕ್ರಿಯೆಯಲ್ಲಿ ಎಲ್ಲರೂ ಅವರ ದೀರ್ಘಕಾಲದ ಸ್ನೇಹ, ಹೋರಾಟ, ವ್ಯಕ್ತಿತ್ವದ ಕುರಿತು ಮಾತಾಡುವುದೆ… “ಸಾವು ಏನ್ರಿ, ಯಾವಾಗಲಾದರೂ ಬರುವುದೆ. ಈಗ ನೋಡಿದ ವ್ಯಕ್ತಿ ನಾಳೆ ಇಲ್ಲ. ಒಂದು ಉಸಿರು ಕಟ್ಟಿದರೆ ಸಾಕು. ಆತ್ಮ ಪರಮಾತ್ಮ… ಏನು ಈ ಎರಡೂ… ಕಲ್ಪನೆ, ಗ್ರಹಿಕೆ, ಒಂದು ತತ್ವ ಮಾತ್ರ”

ರಾತ್ರಿ ಇಡೀ ನಿದ್ರೆ ಬಾರದೆ ಹೆಣಗಾಡುತ್ತಿದ್ದವನನ್ನು ಹೆಂಡತಿ “ಇನ್ನು ನೀವು ಮರಣಕ್ಕೆ ಹೋಗುವುದು ಬೇಡ. ನಿಮಗೆ ಸಹನೆಯಾಗುವುದಿಲ್ಲ. ಗಾಬರಿಯಾಗುತ್ತೀರಿ. ಈಗ ನೀವು ಕೋಂಬ್ಲೆ ಅಲ್ಲ…”

“ಸುಮ್ಮನಿರು, ಹೋಗದಿರುವುದು ಹೇಗೆ, ನನಗೆ ೫೦ ವರ್ಷಗಳ ಪರಿಚಯ. ಪೋರ್ಟಿನಲ್ಲಿ ಒಡನಾಟದಲ್ಲಿ ಬೆಳೆದವರು…”

“ಮಲಗಿರಿ. ಕಣ್ಣುಮುಚ್ಚಿಕೊಂಡು ಶ್ರೀ ಹರಿಯನ್ನು ಧ್ಯಾನಿಸಿರಿ….”

“ಗುರುವಾರ ಒಂದು ಪುಣ್ಯ ತಿಥಿ (ಉತ್ತರಕ್ರಿಯೆ) ಇದೆ, ಪೇಜಾವರ ಮಠದಲ್ಲಿ. ಸಂಜೀವ ಕಟಕರೆಯವರು ಅಚಾನಕ್ ತೀರಿಕೊಂಡದ್ದು. ಒಂದು ವಾರದ ಹಿಂದೆ ಕರ್ನಾಟಕ ಸಂಘದಲ್ಲಿ ಭೇಟಿಯಾಗಿತ್ತು. ನನಗಿಂತ ಕಿರಿಯರು, ವಕೀಲರು, ಎಲ್ಲರಿಗೂ ಖೇದ ಮತ್ತು ಆಶ್ಚರ್ಯ….”

“ಮರಣ, ಉತ್ತರ ಕ್ರಿಯೆಗಳಿಗೆ ನೀವು ಇನ್ನು ಹೋಗುವುದು ಬೇಡ. ನಿಮ್ಮಲ್ಲಿ ಈಗೀಗ ಮನೋಬಲ ಕಡಿಮೆಯಾಗಿದೆ. ನಾನೂ ಅಷ್ಟೇನೂ ಗಟ್ಟಿಯಿಲ್ಲ. ಇನ್ನು ನಮ್ಮ ಪಾಡು ಯಾರು ಬಲ್ಲರು…” ಮಾತಾಡುತ್ತಿದ್ದಂತೆ ನಾವಿಬ್ಬರೂ ಮಲಗಿಕೊಂಡೆವು. ಕಣ್ಣಿಗೆ ನಿದ್ರೆ ಹತ್ತಿತ್ತು.

ಬೆಳಗಿನ ಜಾವ ಇರಬೇಕು. ಅರ್ಧ ಎಚ್ಚರದಲ್ಲಿ ಮಗ್ಗಲಿಗೆ ಕೈ ಹಾಕಿದೆ. ಹೆಂಡತಿ ಮಲಗಿದ್ದಳು. ಒಂದು ಸದ್ದಾಯಿತು. ಪಕ್ಕದಲ್ಲಿದ್ದ ಈಸಿ ಕುರ್ಚಿ ಅಲ್ಲಾಡಿದ ಕಿರ್‌ಕಿರ್ ಎಂಬ ಸಣ್ಣ ಸದ್ದು ಎಂದು ಕಾಣುತ್ತದೆ. ಒಂದು ಪ್ರತಿಛಾಯೆ, ತೂಗುವ ಮಾದರಿಯಲ್ಲಿ, ನನ್ನ ಮಾತು ಮುಗಿದಿರಲಿಲ್ಲ. ಮೊನ್ನೆ ಅರ್ಧಕ್ಕೆ ನಿನ್ನ ಹೆಂಡತಿ ತಡೆದಳು. ಇನ್ನೂ ಮುಖ್ಯ ವಿಷಯ ಹೇಳುವುದಿದೆ. ನೀನು ಎಚ್ಚರಗೊಳ್ಳಬೇಡ. ನಿನ್ನ ಒಳಮನಸ್ಸಿಗೆ ಕೇಳಿಸುತ್ತಿರಲಿ… ನಾನು ಗೊತ್ತು ಗುರಿಯಿಲ್ಲದೆ ಅಲೆದಾಡುತ್ತಿರುವ, ನೆಲೆಕಾಣದ ಆತ್ಮ, ಇಂಥವರನ್ನು ಇಂಗ್ಲಿಷರು ಪ್ರೇತ (ಗೋಷ್ಟ) ಅನ್ನುತ್ತಾರೆ. ನಾನು ಹೇಳುತ್ತಿದ್ದೆನಲ್ಲ ದೇಜು ಶೆಟ್ಟಿ ಕೊಲ್ಲಿಸಿದ ವ್ಯಕ್ತಿಯ ಕತೆ. ಅವನು ನಾನು. ಪ್ರೇತಾತ್ಮ…. ಕುಟುಂಬದವರಿಗೆ ತೊಂದರೆ ಕೊಡುತ್ತದಂತೆ. ನಾನು ಹಾಗೆ ಮಾಡಿದ್ದೇನೆಯೆ… ಎಷ್ಟೋ ಕಾಲದಿಂದ ಅಲೆಯುತ್ತಿದ್ದೇನೆ. ಮುಕ್ತಿಯಿಲ್ಲ. ಹತ್ತಿರದ ಸಂಬಂಧಿಕರಿದ್ದೂ ಇಲ್ಲದಂತೆ ಯಾರೂ ಗತಿ ನೀಡಲು ಮುಂದೆ ಬಂದಿಲ್ಲ…. ಎಷ್ಟು ಕಾಲ, ಸುಮಾರು ಆರು ದಶಕಗಳು, ಹತಾಶೆ ಮತ್ತು ಸಿಟ್ಟಿನಿಂದ ನನ್ನ ಕೆಲವರಿಗೆ ಹಾನಿಯಾಗಿರಬಹುದು. ಜೇಷ್ಠ ಮಗ ಬೆಂಕಿ ಕೊಟ್ಟಮೇಲೆ ಸಂಪೂರ್ಣ ಮರೆತು ಬಿಟ್ಟ. ಮುಂಬಯಿ ಹೆಣ್ಣನ್ನು ಮದುವೆಯಾಗಿ ಸ್ವಧರ್ಮವನ್ನು ಕಡೆಗಣಿಸಿದ. ತನ್ನ ಪರಿವಾರದ ಜಂಜಡದಲ್ಲಿ ಸಿಲುಕಿ ಪರಿಪರಿಯ ಕಷ್ಟ ನಷ್ಟಗಳಿಗೆ ಒಳಗಾಗಿ ದೂರ ಹೋಗಿ ಆತ್ಮಹತ್ಯೆ ಮಾಡಿಕೊಂಡ. ಎರಡನೆಯ ಮಗನಿಗೆ ಹೊಟ್ಟೆಯ ಕೆಂಸರ ಆಗಿ ಚಿಕ್ಕ ಪ್ರಾಯದಲ್ಲಿ ಅವನೂ ಸತ್ತ. ಮಗಳಿಗೆ ಮುಂಬಯಿ ಗಂಡನಿಂದ, ಮಕ್ಕಳ ಉತ್ಕರ್ಷೆಯಿಂದ ಬಂದ ಸಂಪತ್ತು ತಲೆಗೇರಿತು… ಭೂತಕಾಲದ ನೆನಪಾಗಲಿಲ್ಲ. ಅವಳು ಮಧುಮೇಹ ಅತಿಯಾಗಿ ಕಾಲು ಕಡಿದುಕೊಂಡು ಸಾಯಬೇಕಾಯಿತು. ನಿನಗೂ ಎಷ್ಟು ಕಷ್ಟ ಬಂತಲ್ಲ! ಮಗನ ಕಿಡ್ನಿ ಕೆಟ್ಟಿತು. ಹೃದಯದಲ್ಲಿ ತೂತು ಬಿತ್ತು. ಮರಣಮುಖದಲ್ಲಿರುವಾಗ ನಿನ್ನ ಹೆಂಡತಿ ಮಗನಿಗೆ ಕಿಡ್ನಿ ಕೊಟ್ಟು ಎರಡನೆಯ ಜನ್ಮ ನೀಡಿದಳು.

ಇದೆಲ್ಲ ನನ್ನಿಂದ ಎಂದು ನಾನು ಹೇಳಲಾರೆ. ಆದರೆ ಪ್ರಾರಬ್ದಕ್ಕೆ ಇದು ಕಾರಣವಾಗಿರಬಹುದು. ಇಷ್ಟೆಲ್ಲಾ ಆಗಿಯೂ ನಿಮ್ಮಲ್ಲಿ ಯಾರಿಗೂ ನನ್ನನ್ನು ಸದ್ಧತಿಗೆ ಸೇರಿಸುವ ಜ್ಞಾನ ಬರಲಿಲ್ಲ, ನೆನಪಾಗಲಿಲ್ಲ. ಮನುಷ್ಯನಿಗೆ ಜೀವಂತ ಇರುವಾಗ ಸೇಡು, ತಿರಸ್ಕಾರ, ವಿಸ್ಮರಣೆಗಳು ಒಳ್ಳೆಯದಲ್ಲ. ಇವು ನಾಶಕ್ಕೆ ಹಾನಿಗೆ ಕಾರಣವಾಗುತ್ತವೆ. ಅಲೆಯುತ್ತಿರುವ ದೇಜು ಶೆಟ್ಟಿಯ ಪ್ರೇತವೂ (ಆತ್ಮ) ಅಕಸ್ಮಾತ್ ನನಗೆ ಸಿಕ್ಕಿತು. ಅವನಿಗೆ ಅವನ ಜನರು ಎಲ್ಲವನ್ನು ಮಾಡಿಯೂ ನೆಲೆ ಸಿಗಲಿಲ್ಲವಂತೆ. ಹೀಗೇ ಒಮ್ಮೆ ಸಿಕ್ಕಿದ ಅವನು ಹೇಳಿದ.

ವಿಸ್ಮರಣೆಯಿಂದ ಎಚ್ಚರವಾಗು. ನಾನು ಯಾರೆಂದು ತಿಳಿ, ನನ್ನನ್ನು ಈ ಪ್ರೇತಲೋಕದ ಬಂಧನದಿಂದ ಬಿಡಿಸು. ನಾನು ಕೊರಗಣ್ಣ, ನಿನ್ನ ತಂದೆ. ದರಿದ್ರನಾಗಿ ಹುಟ್ಟಿ, ಅದೇ ರೀತಿಯಲ್ಲಿ ಬೆಳೆದು, ಸಂಸಾರ ಕಟ್ಟಿಕೊಂಡು, ಅನಾಥನಂತೆ ಸತ್ತವನು. ನನಗೆ ಯಾವ ಸ್ವರ್ಗ-ನರಕವೂ ದಕ್ಕಲಿಲ್ಲ. ನೀನು ತುಂಬಾ ಕಲಿತವನು, ಜನನ-ಮರಣ, ಗತಿಸದ್ಧತಿಗಳ ಕುರಿತು ಬಲ್ಲವನು. ನಿನ್ನನ್ನು ಹುಟ್ಟಿಸಿದವನೊಬ್ಬ ಇದ್ದ. ಅವನು ಹೇಗಿದ್ದ. ಹೇಗೆ ಸತ್ತ ಎನ್ನುವ ಜ್ಞಾನವೂ ಇಲ್ಲವೆ? ನೀವೆಲ್ಲರೂ ಮನೆ ಮಾಡಿಕೊಂಡು ಅಲ್ಲಲ್ಲಿ ಇದ್ದೀರಿ. ಸುಖವಾಗಿಯೂ ಇದ್ದೀರಿ. ನಿಮ್ಮ ಯಾರ ಮನೆಯಲ್ಲಿಯೂ ನನ್ನದೊಂದು ಭಾವಚಿತ್ರ ಇಲ್ಲ. ಎಂದೆಂದೂ ಯಾರೂ ನೆನಪು ಮಾಡಿಕೊಳ್ಳುವುದಿಲ್ಲ. ಎಷ್ಟೋ ಕಾಲವಾಯಿತು. ನನಗೆ ಸದ್ಗತಿ ಕಾಣಿಸಿರಿ.

ನನಗೊಂದು ನೆಲೆ ಸಿಗಲಿ, ಬ್ರಾಹ್ಮಣರ ಮಠದಲ್ಲಿ ಒಂದು ಪುಣ್ಯ ತಿಥಿ ಮಾಡಿಸಿರಿ. ಸತ್ತ ದಿನದ, ವರ್ಷದ ನೆನಪು ಯಾರಿಗೂ ಇರದು, ಬ್ರಾಹ್ಮಣರಿಂದ ಒಂದು ದಿನ ಕೇಳಿ ನನ್ನ ತಿಥಿ ಮಾಡಿ, ನಾಲ್ಕು ಜನರಿಗೆ ಪ್ರಸಾದ ಕೊಡಿ. ಆಮೇಲೆ ನಾನು ನನ್ನ ನೆಲೆಯಲ್ಲಿರುತ್ತೇನೆ. ಎಲ್ಲಿಯೂ ಹೋಗಲಾರೆ. ಯಾರನ್ನೂ ಕಾಡಲಾರೆ…..”

ಹೆಂಡತಿ ಮೈಮುಟ್ಟಿ ಎಬ್ಬಿಸಿದಳು. “ದೋಸೆ, ಚಾ ತಯಾರಾಗಿದೆ ಏಳಿ” ಎಂದಳು. ಮೈಮುರಿ ತೆಗೆದು ಕಣ್ಣು ತೆರೆದಾಗ ಬಾಲ್ಕನಿಯಿಂದ ಬೆಳಕು ಒಳಬಂದಿತು. ಈಸಿಚೇರಿನ ಕಿರ್ ಎಂಬ ಸದ್ದು ಒಮ್ಮೆಲೆ ನಿಂತಿತ್ತು. ಕಾಗೆ ಒಂದು ಸಾರಿ ಕಾಕಾ ಎಂದು ಹಾರಿ ಹೋಯಿತು.

ಚಾ ಕುಡಿಯುವಾಗ ನಾಗಪ್ಪನಿಗೆ ಆಲೋಚನೆ ಶುರುವಾಯಿತು. ಇಷ್ಟೊಂದು ದೀರ್ಘವಾಗಿ ಮಾತಾಡಿದ, ಕಾಣಿಸದ ವ್ಯಕ್ತಿ ಯಾರು? ನಮ್ಮ ತಂದೆಯೆ? ನಾನವನನ್ನು ಸರಿಯಾಗಿ ನೋಡಿದ್ದೇ ಇಲ್ಲ. ಅವನು ಸಾಯುವಾಗ ನಾನು ಸಣ್ಣವ, ಬುದ್ಧಿ ಇರಲಿಲ್ಲ. ಎಳೆ ಪ್ರಾಯದಲ್ಲಿಯೆ ಮುಂಬಯಿಗೆ ಬಂದು ಅವನ (ತಂದೆಯ) ಕಲ್ಪನೆಯನ್ನೆ ಮಾಡದ, ತನ್ನಷ್ಟಕ್ಕೆ ‘ಏನೂ ಇಲ್ಲ’ ಎನ್ನುವಂತೆ ಸಂಸಾರ ಕಟ್ಟಿಕೊಂಡು ಬಾಳಿದವನು. ನನ್ನ ಹಿರಿಯರಾದರೂ ಈ ವಿಷಯ ಹೇಳಬೇಕಿತ್ತಲ್ಲ. ಅವನು ಹೇಗಿದ್ದ, ಸ್ವಭಾವ ಹೇಗಿತ್ತು? ರೂಪ ಹೇಗಿತ್ತು. ಮಾತು ಹೇಗಿತ್ತು? ಎಂದು ಏನೂ ಗೊತ್ತಿಲ್ಲದ ನನಗೊಂದು ಲಾನತ್ತು ಎನ್ನುತ್ತಾ ಯೋಚಿಸಿದ, ಶಪಿಸಿಕೊಂಡ.

“ಅರೆ ಎಚ್ಚರದಲ್ಲಿ ನನ್ನೊಂದಿಗೆ ಬಂದು ಮಾತಾಡಿದವನು ಯಾರು ಗೊತ್ತೆ…. ನನ್ನ ತಂದೆ, ಹುಟ್ಟಿಸಿದವನು”

“ನಮಗೆ ಮದುವೆಯಾಗಿ ೪೫ ವರ್ಷವಾಯಿತು. ಈವರೆಗೆ ಇಲ್ಲದವರು ಈಗೆಲ್ಲಿಂದ ಬಂದರು” ಹೆಂಡತಿ ಕೇಳಿದಳು.

“ಗೊತ್ತಿಲ್ಲ, ನಮ್ಮ ಮಕ್ಕಳಿಗೆ ಸಂಜೆ ಬರಲಿಕ್ಕೆ ಹೇಳು, ಅಗತ್ಯ ನಮಗೊಂದು ಮಠದಲ್ಲಿ ಪೂಜೆ ಮಾಡಿಸಬೇಕಾಗಿದೆ. ತಂದೆ ಪ್ರೇತವಾಗಿ ಈಗಲೂ ಅಲೆದಾಡುತ್ತಿದ್ದಾರೆ. ಅವರಿಗೊಂದು ನೆಲೆಗಾಣಿಸಬೇಕು. ಆ ಆತ್ಮ ನನಗೆ ಅದನ್ನೆ ಹೇಳುತ್ತಿತ್ತು. ಒಂದು ಪುಣ್ಯ ತಿಥಿ ಮಾಡಿಸಿ ‘ಸದ್ಗತಿ’ಗಾಗಿ ಪ್ರಾರ್ಥಿಸಿಕೊಳ್ಳಿರಿ ಎಂದು….”

“ಹೂಂ” ಎಂದಳು ಹೆಂಡತಿ, ಹೀಗೂ ಇದೆಯೇ! ಎಂದು ಉದ್ಗರಿಸಿದಳು, ದೋಸೆ ತಿನ್ನುವಾಗ!!
*****

ಡಾ || ವಿಶ್ವನಾಥ ಕಾರ್ನಾಡ
Latest posts by ಡಾ || ವಿಶ್ವನಾಥ ಕಾರ್ನಾಡ (see all)