ಅದೆಷ್ಟು ಸಾರಿ ಕ್ಷಮಿಸೆನ್ನ ಜೀವ
ಉಳಿಸಿರುವೆಯೋ ಕಾಣೆ, ದೇವಾ|
ನಿನ್ನದಯೆ ಇರಲಿ ಸದಾ ಹೀಗೆ
ಬದುಕಿ ಮತ್ತೆ ಮತ್ತೆ ಸ್ತುತಿಸಿ ನಿನ್ನ
ನಮಿಸಿ ಸ್ಮರಿಸುತ್ತಿರುವೆ ಹೀಗೆ||

ಮತಿಗೆಟ್ಟು ನಾಲಿಗೆ ಎಡವಿ
ಮಹಾ ಪ್ರಮಾದವಾಗಿಬಿಡಹುದು|
ದೃಷ್ಟಿ ದೋಷ ಪೂರಿತನಾಗಿ ನಾ
ನಿಂದನೆಗಳಿಗೊಳಗಾಗಬಹುದು|
ದಿನ ನೂರು ಇಂಥ ಅಪರಾಧ
ಸಂಭವಿಸಿ ಬಿಡಬಹುದು, ಆದರೂ…||

ಚಂಚಲ ಮನಸ್ಸು
ಮನಬಂದಂತೆ ವರ್ತಿಸಿ
ಮಾನಾಪಮಾನವಾಗಬಹುದು|
ಚಪಲ ನಾಲಿಗೆ ಕಂಡದ್ದನ್ನೆಲ್ಲಾ
ಸವಿಯ ಬಯಸಿ ದೇಹ ಕೃಶವಾಗಬಹುದು|
ನಾ ಮುಂದೆಂಬ ವಿಪರೀತ ಬುದ್ಧಿ
ವಿಪತ್ತನ್ನೇ ತಂದಿಡಲುಬಹುದು|
ಕ್ಷಣಮಾತ್ರದಲಿ ಅವಘಡ
ಬಂದೆರಗಿ ಪ್ರಾಣಪಕ್ಷಿ
ಹಾರಿಬಿಡಬಹುದು, ಆದರೂ…||
*****