ಗಗನವು ಯಾರದೊ ಕುಸುಮವು ಯಾರದೊ
ಬಯಸುತಿರುವ ಹೃದಯಕೆ

ರಂಗವು ಯಾರದೊ ಗೀತವು ಯಾರದೊ
ಕುಣಿಯುತಿರುವ ಪಾದಕೆ

ಹಲಗೆ ಯಾರದೊ ಬಳಪವು ಯಾರದೊ
ಬರೆಯುತಿರುವ ಹಸ್ತಕೆ

ತಂಬುರ ಯಾರದೊ ತಾಳವು ಯಾರದೊ
ಹಾಡುತಿರುವ ಕಂಠಕೆ

ಹೂವು ಯಾರದೊ ದಾರವು ಯಾರದೊ
ಕೋಯುತ್ತಿರುವ ಮಾಲೆಗೆ

ದೋಣಿಯು ಯಾರದೊ ನದಿಯು ಯಾರದೊ
ಸಾಗುತಿರುವ ಯಾನಕೆ

ಮನಸು ಯಾರದೊ ಕನಸು ಯಾರದೊ
ಕಾಣುತಿರುವ ಕಣ್ಣಿಗೆ

ಹುಟ್ಟು ಯಾರದೊ ಸಾವು ಯಾರದೊ
ಬದುಕುತಿರುವ ಜೀವಕೆ

ನಿನ್ನೆಯು ಯಾರದೊ ನಾಳೆ ಯಾರದೊ
ಬೆಸೆಯುತ್ತಿರುವ ಭಾವಕೆ
*****