ಚಿತ್ರ: ಕಿಶೋರ್‍ ಚಂದ್ರ

ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ… ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ… ಕಂಡು ತುಂಬಾ ಆಶ್ಚರ್ಯವಾಯಿತು.

ರೋಡಿನ ಈ ಕಡೆ ಕಾರು ನಿಂದಿರಿಸಿ ಬಾಳೇ ಹಣ್ಣು ತಗೊಂತಿದ್ದ ನನಗೆ ಅವಳನ್ನು ನೋಡಿದ ಮೇಲೂ ಸಂದೇಹ ಬಿಡಲಿಲ್ಲ. ಯಾಕೆಂದರೆ ೨೫ ವರ್ಷಗಳ ಸುದೀರ್ಘಕಾಲದ ಅವಧಿಯಲ್ಲಿ ಎಂದೂ ಅವಳನ್ನ ನಾನೀ ರೀತಿ ಕಂಡಿದ್ದಿಲ್ಲ. ಭ್ರಮರ ಅಂದರೆ ಫಳಫಳಾಂತ ಲಾಂಡ್ರೀಯಿಂದ ಬಂದ ಸೀರೆಯಲ್ಲಿ ಆಕ್ಟಿವ್ ಆಗಿರುವ ಮಹಿಳೆಯ ಜ್ಞಾಪಕವೇ ಬರುವುದು. ರೋಡು ಕ್ರಾಸ್ ಮಾಡಿ ಈಚೆ ಬಂದು… ಭ್ರಮರಾ ಅಂತ, ಇನ್ನೇನು ಕರಿಯುವುದರಲ್ಲಿದ್ದೆ, ಅವಳೇ ನನ್ನ ನೋಡಿದಳು. ‘ಇಂದೂ! ನೀನಿಲ್ಲಿ…” ಅಂತ ಆಶ್ಚರ್ಯದಿಂದ ಕೇಳಿದಳು.

ಅವಳು ಬರುವ ವೇಗವನ್ನು ನೋಡಿದ ಮೇಲೆ ಸಮಾಧಾನ ಆಯಿತು, ಅವಳೇ ಎಂದು ನಿಶ್ಚಯವಾಯಿತು. ಐವತ್ತು ವರ್ಷಗಳ ಪ್ರಾಯದಲ್ಲಿಯು ಇಂಥಾ ವೇಗ ಅವಳಲ್ಲೇ ನೋಡಬಹದು.

‘ನಿನ್ನಗೋಸ್ಕರ ನಿಮ್ಮನಿಗೇ ಹೊರಟಿದ್ದೆ’ ಎಂದೆ.

ಮನಿಗೆ ಹೋಗಿ ಬೀಗ ತೆಗೆದ ಮೇಲೆ ನಾನು ಸೋಫಾದಲ್ಲಿ ಕುಳಿತರೆ, ತಾನು ಹೋಗಿ ಕುಡಿಯಲು ನೀರು ತಂದುಕೊಟ್ಟಳು. ಆ ಮೇಲೆ ಅಡುಗೆಮನೆ ಬಾಗಿಲು ಪಕ್ಕದಲ್ಲೆ ಕುರ್ಚಿ ಹಾಕಿ ‘ಬಾ ಇಲ್ಲಿ ಕೂತು ಮಾತಾಡು. ನಂಗೆ ಸ್ವಲ್ಪ ಕೆಲಸ ಇದೆ. ತಿಂಡಿ ಮಾಡುತ್ತೇನೆ.’ ಅಂದಳು.

ನೀರು ಕುಡಿದು ಭ್ರಮರಳ ರೂಮಿಗೆ ಹೋಗೋಣ ಎಂದುಕೊಂಡವಳು ನಾನು ನಿಂತುಬಿಟ್ಟೆ. ನನಗೆ ಭ್ರಮರಳ ರೂಮ್ ಸ್ವರ್ಗ ಇದ್ದಾಗಿರುತ್ತೆ. ಮಂದ್ರ ಸ್ಥಾಯಿಲಿ ಕೇಳಿಸುವ ಸಂಗೀತ, ಕಿಟಿಕೀ ಆಚೆ ಪಾರಿಜಾತ ಗಿಡದಿಂದ ಬರುವ ಪರಿಮಳ, ಒಳ್ಳೆಯ ಡಿಜೈನ್ ನ ಹಾಸಿಗೆ, ಆ ಕಡೆ ಮೇಜಿನ ಮೇಲೆ ಹೊಸದಾಗಿ ಮಾರುಕಟ್ಟೆಯಿಂದ ಬಂದ ಪುಸ್ತಕಗಳು….. ಇದೆಲ್ಲಾ ಆ ರೂಮಿನ ಸೊಬಗು, ಎಂದು ಇಲ್ಲಿಗೆ ಬಂದರೂ, ಹಿಂದೆಲೇ ಆ ರೂಮಿಗೆ ಹೋಗಿ.. ಆ ಮಂಚದ ಮೇಲೆ ಅಡ್ಡಬಿದ್ದು, ಆ ಸಂಗೀತವ ಕೇಳುತ್ತಾ, ಆ ಪುಸ್ತಕಗಳ ಮೇಲೆ ಒಂದು ನೋಟ ಬೀರುತ್ತಾ… ಆಹಾ..!!

ಭ್ರಮರಳ ಮಾತು ನನಗೆ ನೆಚ್ಚಲಿಲ್ಲ. ಅವಳ ರೂಮಿಗೆ ಹೋಗದೆ, ಅಡುಗೆ ಮನಿ ಬಾಗಲಲ್ಲಿ ಹೋಗಿ ಕೂಡುವುದೇ?

‘ಈಗ ತಿಂಡಿ ಏನೂ ಬೇಡ. ನಡಿ ನಿನ್ನ ರೂಮಿಗೆ ಹೋಗಿ ಕೂಡೋಣ’ ಅಂದೆ. ‘ಸರಿ ನೀನು ಹೋಗಿ ಕೂಡು, ನಾನು ಐದೇ ನಿಮಿಷದಲ್ಲಿ ಬರುತ್ತೇನೆ. ಮಕ್ಕಳು ಹಸುಕೊಂಡು ಬರುತ್ತಾರಲ್ವಾ’ ಅಂದಳು.

‘ಮಕ್ಕಳಿಗೇನೂ ನೀನು ಮಾಡುವುದು…. ತಿಂಡಿ?’

ಭ್ರಮರ ನಸುನಗುತ್ತಾ ‘ನಿನಗೂ ಸೇರಿ’ ಅಂದಳು ನನ್ನ ಕೋಪವ ತಿಳಿದಂತೆ.

‘ಸರಿ, ಆಗಲೀ ಬೇಗ,’ ಎಂದು ಮತ್ತೆ ಸೋಫಾದಲ್ಲೇ ಆಸೀನಳಾದೆ. ‘ಎಷ್ಟುಗಂಟೆಗೆ ಮನೇ ಸೇರುವುದು ಆನಂದ್?’ ಎಂದು ಕೇಳಿದೆ. ಪಕೋಡಿ ಹಾಕಲು ಹಿಟ್ಟು ಕಲುಸುತ್ತಿದ್ದವಳು, ‘ಅವನಾ? ಅವನಿಗೊಂದು ಟೈಮಿಲ್ಲ. ಒಂದು ದಿನ ಏಳು, ಎಂಟು ಆಗುತ್ತೆ, ಅವನಿಷ್ಟ.’ ಮತ್ತೆ.. ಟಿಫಿನ್ ಗೆ ಏನೇ ಅವಸರ? ಈಗ ಐದೇ ಅಲ್ವೇನೇ ಆಗಿದ್ದು!’ ಎಂದೆ ಆಶ್ಚರ್ಯದಿಂದ.

‘ಅವನಗೀಗಲೇ ಅವಸರ ಇಲ್ಲ’ ಅಂದಳು. ‘ನನ್ನ ಸೊಸೆ, ಮೊಮ್ಮಗ ಬರುತ್ತಾರೆ.’ ಅವಳ ಮಾತು ಪೂರ್ತಿಯಾಗಲೇ ಇಲ್ಲ, ಸುಗುಣ ಒಳಗೆ ಬಂದಳು. ನನ್ನ ಮಾತಾಡಿಸಿದಳು. ನಾನೂ ಬದಲು ಕೊಟ್ಟೆ. ನನ್ನಗೇಕೋ ಅವಳನ್ನು ಕಂಡರೆ ತುಟಿಯ ಮೇಲೆ ನಗು ಕೂಡ ಬರುವುದಿಲ್ಲ. ಅವಳ ಹಿಂದೆ ಬಂದ ಅವಳ ಮಗನ್ನ ಮಾತಾಡಿಸಲು ಆ ಕಡೆ ತಿರುಗಿದೆ.

ಚೆಪ್ಪಲಿ ಬಿಟ್ಟು, ಕೈಕಾಲು ತೊಳೆದು, ಸೋಫಾದಲಿ ಕುಳಿತ ಸುಗುಣಾಳಿಗೆ ಮತ್ತು ಅವಳ ಮಗನಿಗೆ- ಕೈಯಲ್ಲಿ ಕೆಲಸ ಬಿಟ್ಟು, ಕುಡಿಯುವ ನೀರು ತಂದುಕೊಟ್ಟು, ಮೊಮ್ಮಗನಿಗೆ ಬಟ್ಟೆ ಬದಲಾಯಿಸಿ, ಕೈಕಾಲು ತೊಳೆಸಿ, ಎಲ್ಲರಿಗೂ ಪಕೋಡಿ ಪ್ಲೇಟಲ್ಲಿಟ್ಟಳು. ಅವಳು ಕೆಲಸ ಮಾಡುತ್ತಿರುವ ಅಷ್ಟೊತ್ತೂ ಸುಗುಣ ಕಾಲು ಟೀಪಾಯ್ ಮೇಲಿಟ್ಟು, ತಲೆಯನ್ನು ಸೋಫಾಗೆ ಆತು ಕೂತಿದ್ದವಳು ಎದ್ದಿಲ್ಲ. ಸೊಸೆಗೆ ಭ್ರಮರ ಮಾಡುವ ಸೇವೆ ನೋಡಲು ಆಗಲಿಲ್ಲ ನನಗೆ. ಈ ವಯಸ್ಸಲ್ಲಿ ಅವಳಿಷ್ಟು ಕಷ್ಟಬಿದ್ದು ಕೆಲಸ ಮಾಡುವುದು ನೋಡಿ ನನ್ನ ಕಣ್ತುಂಬಿ ಬಂದವು.

ಜೀವನ ಪರ್ಯಂತ ಇವಳಿಗೆ ಕಷ್ಟವೇಕೆ? ಮದುವೆ ಯಾದ ಒಂದು ವರ್ಷಕ್ಕೇ ಗಂಡ ಆಕ್ಸಿಡೆಂಟಲ್ಲಿ ತೀರಿಕೊಂಡ. ಆ ಮೇಲೆ ಎರಡು ತಿಂಗಳಿಗೆ ಹುಟ್ಟಿದವನು ಆನಂದ್.

ಇಷ್ಟುದಿನ… ಇಷ್ಟುವರ್ಷ… ಒಬ್ಬಳಾಗಿ ತನ್ನ ಮಗನ್ನ ನೋಡಿಕೊಂತಾ ಜೀವಂತವಾಗಿದ್ದಳು. ಅವನ್ನ ಓದಿಸಿದಳು. ಒಳ್ಳೆಯ ಉದ್ಯೋಗಸ್ಥನ ಮಾಡಿದಳು. ಮದುವೆ ಮಾಡಿದಳು. ಹೋಗಲಿ, ಇನ್ನಾದರೂ ಸುಖಬೀಳುತ್ತಾಳೆಂದರೇ ಈಗಲೂ ಇಲ್ಲ. ಭ್ರಮರ ತಂದುಕೊಟ್ಟ ಕಾಫೀ ಗ್ಲಾಸು ತಗೊಂಡು, ಸುಗುಣ “ಅಡುಗೆ ಮಾಡಬೇಕೀಗ. ಫೋನ್ ಮಾಡಿದ್ದರು, ಫ್ರೆಂಡ್ ಜೊತೆ ಬರ್ತಾರಂತೆ.” ಅಂತಿದ್ದಳು. ಸುಗುಣಾಳಿನ ಸ್ವಗತ ಕೇಳಿ ನನಗೆ ಅರ್ಥವಾಗಿಲ್ಲ ಯಾರಿಗೇ ಹೇಳ್ತಿರುವಳಿವಳು? ಭ್ರಮರಗೆ ಅಡುಗೆ ಕೆಲಸ ಹಾಕುವುದೇನು ಪದ್ಧತಿ ಇದು? ಅಂತ ಅನಿಸಿತು. ‘ನಿನ್ನ ಜೊತೆ ಮಾತಾಡೋಣ ಅಂತ ಬಂದಿದ್ದೇನೆ. ನಡಿ ನಿನ್ನ ರೂಮಿಗೆ’ ಎಂದೆ ಸಿಡುಕು ಧ್ವನಿಯಲ್ಲಿ. ಅದು ಗಮನಿಸಿದ ಭ್ರಮರ ಕಿರುನಗೆಯಿಂದ ಸುಗುಣಾಳನ್ನ ನೋಡಿ ‘ತರ್ಕಾರಿ ಏನು ಹೆಚ್ಚಬೇಕೋ ಹೇಳು, ನಾನು ಮಾಡ್ತೀನಿ.’ ಅಂದಳು. ತಂದಿಟ್ಟ ತರ್ಕಾರಿ ಸುಗುಣಾ ತೆಗಿಯುತ್ತಿದ್ದರೆ, ಭ್ರಮರ ಅಡುಗೆ ಮನೆಯಲ್ಲಿ ಏನೋ ಕೆಲಸ ಮಾಡುತ್ತಿದ್ದಳು. ನಾನೂ ಹೋಗಿ ಅಲ್ಲೇ ನಿಂತೆ. ಮತ್ತೆ ಹಾಲು, ಡಿಕಾಕ್ಷನ್ ಬೆರೆಸುವುದು ನೋಡಿ, ಮತ್ಯಾರಿಗೆ ಕಾಫೀ? ಅಂದೆ. ‘ನಿಂಗೆನೇ. ಆಮೇಲೆ ಕುಡಿತೀಯಲ್ವಾ?’ ಗಂಟೆಗೊಂದು ಕಾಫೀ ನನ್ನ ಅಭ್ಯಾಸ.

‘ಕುಡಿದರೇ? ಬೇಕೆಂದಾಗ ಮಾಡಿದರಾಯಿತು.’ ಅಂದೆ. ‘ಇಲ್ಲ, ತಯಾರು ಮಾಡಿಟ್ಟರೆ, ಸುಗುಣ ಬಿಸಿ ಮಾಡಿ ತರ್ತಾಳಲ್ವಾ’ ಅಂದು ಸಕ್ಕರೆ ಹಾಕಿದಳು.

ಆಮೇಲೆ ಸುಗುಣ ಕೊಟ್ಟ ತರ್ಕಾರಿ, ಚಾಕು ತಗೊಂಡು ನನ್ನ ಜೊತೆ ರೂಮಿಗೆ ಬಂದಳು. ನಾನು ಮಂಚದಮೇಲೆ ಕುಳಿತರೆ ಅವಳು ಟೆಬಿಲ್ ಮೇಲೆ ಆಲೂ ಸಿಪ್ಪೆ ತೆಗಯುತ್ತಿದ್ದಳು.

ಪರಿಮಳ, ಸಂಗೀತಗಳಿಂದ ಹೊಸದೊಂದು ಲೋಕದಂತಿರುವ ಆ ರೂಮಲ್ಲಿ ಅವಳು ತರ್ಕಾರಿ ಸಿಪ್ಪೆ ಹಾಕುತ್ತಿದ್ದರೆ ನನ್ನ ಮನವೇನೋ ಸಂಕಟಕ್ಕೊಳಗಾಯಿತು. ‘ಊಟಕ್ಕೆ ಒಬ್ಬರು ಬಂದರೆ ಮಾಡಲು ಆಗಲ್ವೇನೇ, ನಿನ್ನ ಸೊಸಿಗೆ’ ಅಂತ ಕೇಳಿದೆ ಸಿಡುಕುತ್ತಾ. ‘ಯಾಕೆ? ಮಾಡುತ್ತಿದ್ದಾಳಲ್ವಾ?’

‘ಎಲ್ಲಿ? ನೀನೇ ಅರ್ಧ ಕೆಲ್ಸ ಮಾಡುತ್ತಿದ್ರೇ?’

ಭ್ರಮರ ನನ್ನ ಕಡೆ ದಿಢೀರಂತ ತಿರಿಗಿ ನೋಡಿ ‘ಸರಿ ಸರಿ, ನಾನೆಲ್ಲೇ ಮಾಡಿದೆ? ತರ್ಕಾರಿ ಸಿದ್ಧಮಾಡುವುದಷ್ಟೆ ತಾನೆ?’

‘ಆಕೆ ಬಂದಾಗಿಂದಾ ಅಡುಗೆ ಮನೆಗೆ ಹೆಜ್ಜೆ ಹಾಕಲಿಲ್ಲ. ಸೋಫಾದಲ್ಲಿ ಕಾಲುಚಾಚಿ ಕುಳಿತು, ಅಡುಗೆ ಮಾಡಬೇಕು ಅನ್ನುವದೇ ಸರಿ.’ ಕಠಿಣವಾಗಿತ್ತು ನನ್ನ ಸ್ವರ.

ಭ್ರಮರ ಆಶ್ಚರ್ಯದಿಂದ ನನ್ನ ಕಡೆ ನೋಡಿ ‘ಯಾಕೇ ಅವಳಂದ್ರೆ ನಿಂಗೆ ಆಗಲ್ಲ?’ ಅಂತ ಕೇಳುತ್ತಾ ‘ಅಡುಗೆಮನೆ ಒಳಗೆ ಹೋಗದಿದ್ದರೆ ಅಡುಗೆ ಹೇಗೆ ಆಗುವುದು? ಹೋಗ್ತಾಳೆ, ಅಡುಗೆ ಮಾಡೇ ಮಾಡ್ತಾಳೆ. ಈಗ ಅವನು ಫ್ರೆಂಡ್ ಜೊತೆ ಬಂದರೆ… ಮಾತಾಡುತ್ತಾ ಅವರು ನಡುರಾತ್ರಿಯವರೆಗೂ ಊಟ ಮಾಡಿದರೆ, ಸಹನೆಯಿಂದ ಕಾದಿದ್ದು ಬಡಿಸಬೇಕು.

ಆಮೇಲೆ ಎಲ್ಲಾ ಕ್ಲೀನ್ ಮಾಡಬೇಕು, ಮತ್ತು ಬೆಳಗಾದರೇ ಆಫೀಸ್‍ಗೆ ಓಡಬೇಕು. ಇನ್ನೊಂದು ಕಡೆ ಕೂಸನ್ನ ನೋಡಿಕೊಳ್ಳುವುದು, ಅವನಿಗೆ ಬೇಕಾದ್ದು ಮಾಡುವುದು ಇದ್ದೇ ಇರುತ್ತೆ.’
ಮಾತಾಡುತ್ತಾನೇ ಒಂದುಕಡೆ ಕೆಲಸ ಮುಗಿಸಿ ಸುಗುಣಾಳಿಗೆ ಕೊಟ್ಟು ಬಂದಳು. ‘ಅವನು ಬರೋ ಹೊತ್ತಾಯಿತು’ ಅಂದು ಸಿಪ್ಪೆ ಎಲ್ಲಾ ಕ್ಲೀನ್ ಮಾಡಿಕೊಂಡಳು.
ಆರಾಮಾಗಿ ಬಂದು ಕುಳಿತು ಇನ್ನೇನು ಸಮಾಚಾರ, ಹೇಳು? ಅಂದಳು. ವಿಸ್ಮಯದಿಂದ ನಾನು ಕೇಳಿದೇ, ‘ಏನೇ ಇದೆಲ್ಲಾ? ನೀನ್ಯಾಕೇ ಆನಂದ್ ಗೆ ಹೆದರುತ್ತೀಯಾ?
ನಕ್ಕಳು ಭ್ರಮರ.’ ಅದೇನಿಲ್ವೇ, ಅವನಿದ್ದಾಗ ನಾನು ಸ್ವಲ್ಪ ಕೆಲ್ಸ ಮಾಡಿದರೆ ಸಾಕು, ಅವನು ಇನ್ನೊಂದು ನಾಲ್ಕುದಿನ ಸುಗುಣನ ಪ್ರಾಣತಿಂತಾನೆ. ಅಮ್ಮನಿಂದ ಕೆಲ್ಸ ಮಾಡಿಸಿದೆಯಾ ಅಂತ. ಅದಕ್ಕೇ ನಾನು ಏನೇ ಸಹಾಯ ಮಾಡಿದರೂ ಅವನು ಮನೆ ಸೇರೋ ಮುಂಚೇನೇ. ಇನ್ನು ಮೇಲೆ ಎಲ್ಲಾ ಅವಳೇ ನೋಡಿಕೊಂತಾಳೆ ಪಾಪ.’

ನನಗೆ ಸಿಟ್ಟು ಬಂತು. ‘ಅದೇನು? ಗಂಡ್ ಮತ್ತು ಮಕ್ಕಳಿಗೆ ಮಾಡುವದು ಏನಷ್ಟು ಮಹಾ? ಅಷ್ಟು ಅನುಕಂಪವೇತಕೆ? ಹಾಗೆ ನೋಡಿದರೇ ನೀನೆಷ್ಟು ಕಷ್ಟ ಬಿದ್ದಿರಬೇಕು ಜೀವನಪರ್ಯಂತವು?’

ಭ್ರಮರ ನಕ್ಕು ಅಂದಳು ‘ನೀನೂ ಹಾಗೇ ಅಂತೀಯೇನೇ?…. ಆನಂದ್ ಇಂಥಾ ಮಾತಾಡಿದರೇನೇ ನಂಗೆ ಹಿಡಿಸುವುದಿಲ್ಲ. ನೀನಿಷ್ಟು ನಂಗೆ ಸನ್ನಿಹಿತವಾದರೂ ನೀನೂ ಅದೇ ಮಾತಾಡ್ತೀಯಾ, ನಾನು ಕಷ್ಟಬಿದ್ದೀನಿ ಅಂತ! ನನ್ನ ಅರ್ಥ ಮಾಡಿಕೋಳ್ಳಲೇ ಇಲ್ವೇ? ಇನ್ನು ಅವನಿಗೇನು ಹೇಳಲಿ?’

ಭ್ರಮರ ಮಾತು ನನಗರ್ಥವಾಗಿಲ್ಲ. ‘ಅದೇನೇ? ನೀನು ಕಷ್ಟಬಿದ್ದಿದ್ದೆಲ್ಲಾ ನೋಡಿಲ್ವ ನಾನು? ನೋಡುವುದೇ ಅಲ್ಲ, ಚೆನ್ನಾಗಿ ಅರ್ಥಮಾಡಿಕೊಂಡೇ ಹೇಳಿದೆ.’
‘ಏನೇ ನೀನರ್ಥಮಾಡಿಕೊಂಡಿದ್ದು? ಒಂದಿಷ್ಟೂ ಅರ್ಥ ಮಾಡಿಕೊಂಡಿಲ್ಲ ನನ್ನ. ಇಷ್ಟುದಿನದಿಂದಾ ನನ್ನನ್ನು, ನನ್ನ ಜೀವನವಿಧಾನವನ್ನು, ಯೋಚನೆ ಗಳನ್ನು, ದೀಕ್ಷೆಯನ್ನು, ಯಾವುದನ್ನೂ ನೀನು ಸರಿಯಾಗಿ ನೋಡಲೇ ಇಲ್ಲ ಅಂತ ನನಗೀಗ ಅರ್ಥವಾಯಿತು. ‘ಹಾಗಂದ್ರೇನು? ನಿನಗೆ ಕಷ್ಟಗಳೇ ಬಂದಿದ್ದಿಲ್ಲಾಂತಿಯಾ?’

ನನ್ನ ಆಶ್ಚರ್ಯ ನೋಡಿ ಅವಳ ತುಟಿ ಮೇಲೆ ಒಂದು ಕಿರುನಗೆ. ‘ಎಷ್ಟು ನಂಬಿದ್ದೆ ಕಣೋ, ನಾನು ಕಷ್ಟ ಬಿದ್ದೇನೆಂದು? ಆನಂದೂ ಇದೇ ರೀತಿ. ಅಮ್ಮ ಬಹಳ ಕಷ್ಟ ಬಿದ್ದಾಳೆ, ಅಮ್ಮ ಕಷ್ಟ ಬಾಳಾ ಬಿದ್ದಳೆಂದು ಪಾರಾಯಣ ಮಾಡುತ್ತಾನೇ ಇರ್ತಾನೆ. ಏನೇ ಸಣ್ಣ ಕೆಲಸ ಮಾಡ್ತಾ ಇರುವುದು ಅವನ ಕಣ್ಣಿಗೆ ಬಿದ್ದರೆ ಸಾಕು, “ಅಮ್ಮಾ, ನೀನು ಬಿಡು, ನೀನು ಕೂಡು” ಅಂತ ಒಂದೇ ಹಠ. ಹೆಂಡತಿಯನ್ನು ಕರೆದು ಅಮ್ಮ ಇಷ್ಟು ವರ್ಷ ಕಷ್ಟ ಬಿದ್ದಿದ್ದೇ ಸಾಕು. ಇನ್ನು ಮೇಲೆ ಕಷ್ಟ ಬೀಳದಾಗಿ ನೋಡಿಕೋಬೇಕು ಅಂತ ಬುದ್ಧಿ ಹೇಳಲು ಹೊರಡುತ್ತಾನೆ. ಏನಿದು? ಅವಳೂ ಎಷ್ಟೊಂದು ಕಷ್ಟ ಬೀಳುತ್ತಾಳೆ ಗೊತ್ತೇ? ಬೆಳಾಗಾದಾಗಿಂದಾ ರಾತ್ರಿ ಮಲಗುವವರೆಗೂ ಬುಗರಿ ತಿರಿಗಿದಾಗ ತಿರುಗುತ್ತಾನೇ ಇರುತ್ತಾಳೆ. ಅಷ್ಟೊಂದು ಕಷ್ಟ ಎಲ್ಲಾ ಅವನಿಗೆ ಕಾಣಿಸುವುದೇ ಇಲ್ಲ. ನೀನಂದಾಗೇ ಅಂತಾನೆ. ಗಂಡು ಮಕ್ಕಳಿಗೆ ಮಾಡುವುದೂ ಕಷ್ಟವೇ? ಅಂತಾನೆ. ಹಾಗೆ ನೋಡಿದರೆ ನಾನು ಅದಿಷ್ಟು ಕಷ್ಟವೂ ಬಿಳಲಿಲ್ವೇ? ಗಂಡನೂ ಇದ್ದಿಲ್ಲ. ಏನಷ್ಟು ಕಷ್ಟ ಬಿದ್ದೀನಂತ ಮಾತುಮಾತಿಗೇ ಅಂತಾನೋ ನಂಗರ್ಥವಾಗಲ್ಲ. ಅಷ್ಟು ಸಹಾನುಭೂತಿ ನಾನು ಭರಿಸಲಾರೆ.’

ನಾನವಳನ್ನೇ ನೋಡಿದೆ. ‘ಗಂಡ ಇಲ್ಲದೆ… ಸಂಸಾರ ಸುಖಗಳಿಗೆಲ್ಲಾ ದೂರಾಗಿ, ಯಾವ ಬಯಕೆಯೂ ತೀರದೇ ಬದುಕುವುದು ಕಷ್ಟವಲ್ಲೇನೇ?’ ಪ್ರಶ್ನಿಸಿದೆ.

‘ಆ ವಿಷಯ ಅವನು ಮಾತಾಡಿದರೆ ಅದನ್ನ ಸಹಿಸುವುದು ಇನ್ನಷ್ಟು ಕಷ್ಟ.’

ಮೂಕಳಾದೆ ನಾನು. ಹೌದು, ಆ ವಿಷಯಗಳು ಮಗ ಮಾತಾಡಿದರೆ ಸಹಿಸಲಾರದು. ಆದರೇ ಇನ್ನ ಬೇರೇನೂ ಕಷ್ಟ ಬಿದ್ದಿಲ್ವಾ ಅವಳು?

ಅವಳ ದನಿ ಕೇಳಿ ಈ ಲೋಕಕ್ಕೆ ಬಂದೆ. ‘ನೀವೆಲ್ಲರು ಅಂದುಕೊಂಡಾಗೆ ನಾನೇನೂ ಕಷ್ಟಬೀಳಲಿಲ್ಲ. ನನ್ನ ಜೀವನದಲ್ಲಿ ಒಂದು ಕ್ಲೇಶ ಬಂದಿದ್ದೇನೋ ನಿಜ. ಆದರೇ ಅದರ ಚಿಂತೆಯಲ್ಲೇ ಮುಳುಗಿರಲು ನಾನಿಷ್ಟಪಡಲಿಲ್ಲ. ನಾನು ಆನಂದವಾಗಿ ಜೀವನ ನಡಸಬೇಕು ಅಂತ ತೀರ್ಮಾನ ತಗೊಂಡರೇ ಮತ್ತಾವುದೋ ನನ್ನ ಬಾಧೆಗೊಳಸಲು ಸಾಧ್ಯವಾಗುತ್ತೇನೋ? ನನ್ನ ತುಟಿಯಲ್ಲಿ ನಗುವಿರಬೇಕಂತ ನಾನಂದುಕೊಂಡರೆ ಅದನ್ನ ತಡೆಯುವುದು ಯಾರಿಗೆ ತಾನೆ ಸಾಧ್ಯ? ನಗುನಗುತ್ತಾ ಇರಬೇಕೆನ್ನುವುದು ನನ್ನ ಮನೋನಿಶ್ಚಯ. ನನ್ನ ಮನಸ್ಸಿಗೂ, ನನ್ನ ತುಟಿಗಳಿಗೂ ನಡುವೆ ಯಾರೂ ಇಲ್ಲಾಂದ ಮೇಲೆ ನನ್ನಿಂದ ನನ್ನ ನಗುವನ್ನ ದೂರಮಾಡಲು ಯಾರಿಗೆ ತಾನೆ ಸಾಧ್ಯ?’

ನಿಟ್ಟುಸಿರು ಬಿಟ್ಟು ‘ಶ್ರೀಧರ್ ಹೋದ ಸುದ್ದಿ ತಿಳದು ನನಗೆ ಷಾಕ್ ಆಯಿತು. ಆದರೆ ನನ್ನ ನಿಭಾಯಿಸು ಕೊಳ್ಳಲು ನಾನು ಹೆಚ್ಚು ಟೈಮ್ ತಗೊಂಡಿಲ್ಲ. ನನಗೆ ನಾನೇ ಕಷ್ಟವ ಕೊಡಬಾರದೆಂದೂ, ಮತ್ತೊಬ್ಬರ ಸಹಾನುಭೂತಿಗೊಳಗಾಗುವ ಸ್ಥಿತಿಯಲ್ಲಿ ನನ್ನ ಇಟ್ಟುಕೋಬಾರದೆಂದೂ ನಿಶ್ಚಯಮಾಡಿಕೊಂಡೆ. ನನ್ನ ಜೀವನವ ಹಾದಿ ಬದಲಾಯಿಸಿ ಸಂಗೀತ, ಸಾಹಿತ್ಯ… ಒಂದೇನು? ಜಗತ್ತಿನಲ್ಲಿರುವ ಆನಂದಗಳನ್ನೆಲ್ಲವನ್ನೂ ನನ್ನ ಅಂಗಣಗೆ ತಂದುಕೊಂಡು ಆನಂದವಾಗಿದ್ದೆ. ನನ್ನ ಕಷ್ಟವ ಜಯಿಸಿದೆ. ಆ ನನ್ನ ವಿಜಯವನ್ನು ನೀವ್ಯಾರೂ ನೋಡಲೇ ಇಲ್ಲ. ಗುರ್ತಿಸಲೇ ಇಲ್ಲ. ಮಾತಿಮಾತಿಗೆ ನಾನು ಕಷ್ಟಬೀಳುತ್ತಿದ್ದೀನಂತಲೇ ಸಹಾನುಭೂತಿ ತೋರಿಸುವುದು ನಂಗೆ ಆನಂದವ ಕೊಡುವುದಿಲ್ಲ. ಅವಮಾನವಾಗುತ್ತದೆ.”

ಖಿನ್ನಳಾದ ನಾನು ತಲೆ ಎತ್ತಿ ನೋಡಿದೆ ಅವಳನ್ನ.

ಎಲ್ಲಾ ನಿಜವೇ. ಭ್ರಮರ ಜೀವನವೆಲ್ಲಾ ನೆನಪು ಮಾಡಿಕೊಂಡರೆ ಅರ್ಥವಾಗುತ್ತಿದೆ ನನಗೀಗ. ಅವಳೆಂದಿಗೂ ಕಷ್ಟ ಬಿಳಲಿಲ್ಲ. ಕಷ್ಟಗಳಿದ್ದವು. ಆದರೆ ಅವಳು ಕಷ್ಟಬೀಳಲಿಲ್ಲ. ಅವಳಲ್ಲಿರುವ ಸಾಮರ್ಥ್ಯವನ್ನು ಅವಳಿಗೆ ಪ್ರಿಯಳಾದ ನಾನೇ ಗುರ್ತಿಸಲಿಲ್ಲ, ತಪ್ಪೇ. ‘ಸಾ…ರೀ.. ಅಂದೆ.’ ನಾನಷ್ಟು ದೂರ ಯೋಚನೆ ಮಾಡಲಿಲ್ಲ. ಕಷ್ಟ ಬರಲಿಕ್ಕೂ, ಕಷ್ಟ ಬಿಳಲಿಕ್ಕೂ ಇಷ್ಟು ಭೇದ ಇರುತ್ತೆ ಅಂತ ತಿಳಿಯಲಿಲ್ಲ.’ ಮತ್ತೆ ಅದೇ ಕಿರುನಗೆ ಅವಳ ಮುಖದಲ್ಲಿ. ‘ಗೊತ್ತಿತ್ತು ಕಣೆ! ನೀನು ಕಾಜುವಲ್ ಆಗಿ ಅಂದಿರಬಹುದು ಅಂತ. ಅದಕ್ಕೇ ನಂಗೆ ನಿನ್ನ ಮಾತಿನಿಂದಾ ಅಷ್ಟು ಬಾಧೆ ಆಗಿಲ್ಲ. ಆದರೇ ಆನಂದ್ ಅಂದರೆ ಮಾತ್ರ ಅವನಿಗೆ ಇಷ್ಟೆಲ್ಲಾ ಗೊತ್ತಿರದಾಗಿ ಇರಬಹುದು ಎನ್ನುವುದಿದ್ದರೂ, ಅವನ ಸ್ವಾರ್ಥವೂ ಕಾಣುಸುತ್ತೆ ನನಗೆ. ಅದಕ್ಕೆ ಅವನು ಅಮ್ಮ ಕಷ್ಟಬಿದ್ದಾಳೆ ಅಂದಾಗೆಲ್ಲಾ ನನಗೆ ಅವಮಾನ ಆದಾಗೆ ಅನಿಸುತ್ತದೆ.’

‘ಸ್ವಾರ್ಥವೇ?’ ನನಗೆ ತುಂಬಾ ಆಶ್ಚರ್ಯ.

‘ಊಂ.. ಹೆಂಡತಿಯ ಪ್ರೀತಿಸುವುದು ದೌರ್ಬಲ್ಯವೆಂದೂ, ತಾಯಿನ ಪ್ರೀತಿಸುವುದು ಒಳ್ಳೆಯತನವೆಂದೂ ನಂಬುವುದು ಲೋಕರೀತಿ. ಅವನು ಅದಕ್ಕೆ ಅತೀತನಲ್ಲ. ಅದಕ್ಕೇ ಹೆಂಡತಿ ಎಷ್ಟು ಕಷ್ಟಬಿದ್ರೂ, ಅವನಿಂದ ಸಹಾನುಭೂತಿ ಆಶಿಸಿದರೂ ಸಹ ಸಿಗೊಲ್ಲ. ಅವನಿಗೆ ಹಿಡಿಸುವುದೇ ಇಲ್ಲ. ಹೆಂಡತಿ ಕಷ್ಟಕ್ಕೆ ಸಾಂತ್ವನವಾಗಿ ಒಂದು ಮಾತೂ ಆಡಲ್ಲ. ತಾಯಿ ಬೇಡ ಅಂದರೂ ಸಹಾನುಭೂತಿ ತೋರಿಸುತ್ತಾನೆ. ಒಳ್ಳೆಯದು ನೆನೆಸಿಕೊಳ್ಳಬೇಕು ಎನ್ನುವ ಕಾತರವೇ ಹೊರತು ಯಾರಿಗೆ ಬೇಕೋ ಅವರಿಗೆ ಕೊಡಬೇಕನ್ನುವುದಲ್ಲ ಅವನಿಗೆ.’

ಭ್ರಮರ ಹತ್ತಿರಕ್ಕೆ ನಾನು ಬಂದಾಗೆಲ್ಲಾ ಹೀಗೇನೆ. ವಾಚಾಳಿಯಾಗಿ ಮಾತಾಡುತ್ತಾ ಬಂದಿರುವೆ- ಅವಳ ವಿಶ್ಲೇಷಣ, ವಿಜ್ಞಾನಪೂರ್ವಕವಾದ ಚರ್ಚೆಯ ನಂತರ ಮೂಕಳಾಗಿ ಕಂಠ ರುದ್ಧವಾಗಿ, ಮಾತಾಡಲಾರದ ಒಂದು ಸ್ಥಿತಿಯಲ್ಲಿ ಸೇರುತ್ತೇನೆ. ಇವತ್ತೂ ಅದೇ ಸ್ಥಿತಿಯಲ್ಲಿ ‘ಹೋಗ್ಬರ್ತೀನಿ’ ಅಂತ ಎದ್ದೆ. ರೂಮಿನಿಂದಾ ಹೊರಗೆ ಬರುವಾಗ ‘ಆಂಟೀ ಒಂದು ನಿಮಿಷ… ಕಾಫೀ ತರ್ತೀನಿ.’ ಅಂತ ಸುಗುಣ ಕೂಗಿದಳು.

ನನಗೆ ಸುಗುಣ ಇಷ್ಟು ಸುಂದರಿ ಅಂತ ಎಂದೂ ಅನಿಸಿಲ್ಲ. ಅವಳು ಓಡಿ ಬರುವದರಲ್ಲೂ, ಟ್ರೇ ಹಿಡಿಯುವುದರಲ್ಲೂ…. ಕಿರುನಗೆಯಲ್ಲೂ… ಹೊಳೆಯುವ ಕಣ್ಣಲ್ಲೂ ಏನೋ ಒಂದು ಸೊಬಗು. ಅವಳನ್ನೇ ನೋಡುತ್ತಾ… ‘ತಡ ಆಯಿತು. ಈಗೇನು ಕಾಫೀ? ಬೇಡಮ್ಮಾ. ನಾ ಹೊರಡುತೇನೆ’ ಅಂದೆ. ‘ಅಯ್ಯೋ, ಮಾತಲ್ಲಿ ಬಿದ್ದು ಮರತೇ ಹೋಯ್ತು. ಆಗಲೇ ಕೊಡಬೇಕಿತ್ತು’ ಅಂದಳು ಭ್ರಮರ. ‘ಹೋಗಲಿ ಬಿಡು. ಸ್ವಲ್ಪ ಆದರೂ ತಗೋ. ತಂದಿದ್ದಾಳೆ ಪಾಪ’ ಅನ್ನುತ್ತಾ ನನಗೊಂದು ಕೊಟ್ಟು ತಾನೂ ತಗೊಂಡಳು.

‘ಆಗಲೇ ತಂದಿದ್ದೆ ಅತ್ತೇ, ನಿಮ್ಮ ಮಾತು ಕೇಳಿ ಇಲ್ಲಿ ಬಾಗಿಲು ಹತ್ತಿರ ಹಾಗೇ ನಿಂತುಬಿಟ್ಟೆ ಕೇಳುತ್ತಾ.’ ಸುಗುಣ ಮಾತಿಗೆ ನಾನು ಷಾಕ್ ಆದೆ. ‘ನಮ್ಮ ಕಷ್ಟವ ನೆನೆಸಿಕೊಂಡು ನಾವೇ ಬಾಧೆಬೀಳುವುದು ಅನಾವಶ್ಯಕವಾದದ್ದು; ಆದರೆ ನಮ್ಮ ಕಷ್ಟ ನೋಡುವವರು ಬಾಧೆಬೀಳಬೇಕು, ಸಹಾನುಭೂತಿ ತೋರಿಸಬೇಕು ಎಂದು ನೆನೆಯುವುದು ಅಸಹ್ಯವಾದದ್ದು ಅಂತ ನಿಮ್ಮ ಮಾತುಗಳಿಂದ ಅರ್ಥವಾಯಿತು. ಅಷ್ಟು ದೊಡ್ಡ ಸತ್ಯವನ್ನ ಅರಿಯುವ ಸಂದರ್ಭದಲ್ಲಿ… ನಕ್ಕಳವಳು, ‘ಕಾಫೀ ಆರಿಬಿಟ್ಟಿದೆ. ಅದಕ್ಕೇ ಮತ್ತೂ ಬಿಸಿ ಮಾಡಲು ಹೋದೆ.’

ಆ ಮಾತನ್ನು ಹೇಳಿ ಸುಗುಣ ಅಡುಗೆಮನೆಗೆ ಹೋಗುತ್ತಿದ್ದರೇ… ಇದ್ದಕ್ಕಿದ್ದಾಗೇ ಅವಳು ಅಷ್ಟು ಚೆಲುವಾಗಿ ಹೇಗೆ ಕಾಣಸಿದಳೋ ಅರ್ಥವಾಯಿತು. ಪರರ ಸಹಾನುಭೂತಿ ಬೇಕಿಲ್ಲದವರ ತೇಜಸ್ಸು ಏನು ಎನ್ನುವುದು ಅನುಭವವಾಯಿತು.
*****

ತೆಲುಗು ಮೂಲ : ಟಿ ಶ್ರೀವಲ್ಲೀ ರಾಧಿಕ

ಬುಸಿರಾಜು ಲಕ್ಷ್ಮೀದೇವಿ ದೇಶಾಯಿ
Latest posts by ಬುಸಿರಾಜು ಲಕ್ಷ್ಮೀದೇವಿ ದೇಶಾಯಿ (see all)