ವೈದ್ಯ ಮತ್ತು ಅವನ ರೋಗಿ

ವೈದ್ಯ ಮತ್ತು ಅವನ ರೋಗಿ

ಕರಿಯಪ್ಪಗೌಡ-ಡಾಕ್ಟರ್ ಕರಿಯಪ್ಪಗೌಡ ಬಡತನದಲ್ಲಿ ಬೆಳೆದ. ತಾಯಿ ಮುದುಕಿ, ಗಂಡನನ್ನು ಕಳೆದುಕೊಂಡ ಅನಾಥೆ, ಹೇಗೋ ಹುಡುಗ ಓದಿದ; ಡಾಕ್ಟರ್ ಆದ. ಸ್ವಂತವಾಗಿ ಗಳಿಸಿ ಶ್ರೀಮಂತನಾಗುತ್ತೇನೆ, ಎಂದು ಔಷಧ ಮತ್ತು ವೈದ್ಯಶಾಲೆಯೊಂದನ್ನು ತೆರೆದ.

ಮುಖ ಮಾಟವಾಗಿದೆ; ಬಣ್ಣ ಕಪ್ಪು, ತಾಯಿ ತಂದೆ ಏಕೆ ಕರಿಯಪ್ಪನೆಂದು ಕರೆದರೊ? ಚಿಕ್ಕವನಾಗಿದ್ದಾಗ ಇವನ ಜೊತೆಯವರು ಆ ಬಣ್ಣವನ್ನು ನೋಡಿ, “ಬಣ್ಣಕ್ಕೆ ತಕ್ಕ ಹೆಸರು ; ಹೆಸರಿಗೆ ತಕ್ಕ ಬಣ್ಣ,” ಎನ್ನುತ್ತಿದ್ದರು. ಬಡವನಾಗಿ, ಅನಾಥೆಯ ಮಗನಾಗಿ ಮತ್ತೆ ಜೊತೆಯವರ ಕುಚೋದ್ಯಕ್ಕೆ ಎಳೆತನದಲ್ಲಿ ಪಕ್ಕಾಗುವುದು ಒಂದು ದೌರ್‍ಭಾಗ್ಯ. ಮಗನನ್ನು ಅರಿತ ಹೃದಯದ ತಾಯಿ ಸಂತವಿಸುವಳು, ‘ಮಗನೆ, ನಾನು ಕಪ್ಪು; ಅದರಂತೆ ನೀನು,’ ಎನ್ನುವಳು.

ತಾಯಿಯನ್ನು “ಅಮ್ಮ ನನಗೇಕೆ ಹೀಗೆ ಹೆಸರಿಟ್ಟೆ?” ಎಂದು ಕೇಳುವನು; ತಾಯಿಗೆ ಇದಕ್ಕೆ ಸಮಾಧಾನ ಹೇಳಲು ತಿಳಿಯದು.

ಲೋಕದಲ್ಲಿ ಇನ್ನಾರೂ ಬಂಧುವಿಲ್ಲ. ತಾಯೊಬ್ಬಳೆ. ಅವಳ ಮೇಲೆ ಭಕ್ತಿ ಬಲಿಯಿತು. ತಾಯಿಯ ಪ್ರಭಾವ ಇವನ ಮೇಲೆ ಬಹಳ, ಅದೊಂದು ಸತ್ಪ್ರಭಾವ.

ಈಗಿನ ವಿದ್ಯೆಯನ್ನು ಬಡವರು ಸಾಂಗವಾಗಿ ಪೂರೈಸಿದರೆ ಅದೊಂದು ಕೌತುಕ. ಈ ದುಬಾರಿ ವಿದ್ಯೆಯನ್ನು ಎಲ್ಲರೂ ಹೇಗೆ ಪಡೆಯಬಲ್ಲರು? ಈಗ ಕರಿಯಣ್ಣನಿಗೆ ಆಶ್ಚರ್‍ಯ, ತಾನು ಹೇಗೆ ಓದಿದೆನೋ, ಎಂದು. ತಾನೀಗ ದುಡಿಯುತ್ತಾನೆ; ಔಷಧಿಗಳಲ್ಲಿ ವ್ಯಾಪಾರ ನಡೆಸುತ್ತಾನೆ. ಅನೇಕ ಬಗೆಯ ರೋಗಗಳಿಗೆ ಯಶಸ್ವಿಯಾಗಿ ಚಿಕಿತ್ಸೆ ಮಾಡುತ್ತಾನೆ.

ಆದರೂ ಪ್ರಪಂಚದ ಕಪಟವನರಿಯ. ದುಡ್ಡು ಕೊಡದೆ ಹೋದವರಿಗೆ, ‘ತಾನು ಪರರ ದುಡ್ಡಿನಿಂದ ಓದಿದೆ; ಅದಕ್ಕೆ ಇದು ಸಾಟಿ,’ ಎನ್ನುತ್ತಾನೆ. ನಾಲ್ಕಾರು ವಿದ್ಯಾರ್‍ಥಿನಿವಾಸಗಳಿಗೆ ಇವನು ಸಹಾಯಕ. ಕೆಲವರು ಇವನೊಂದು ಮಂಕು ಎನ್ನುತ್ತಾರೆ ಅವನ ಮುಗ್ಧ ಸ್ವಭಾವ ನೋಡಿ.

ಹೆಂಡತಿಯ ವಿಚಾರ ಬಂದಾಗ ಇವನಿಗೆ ಇಲ್ಲದ ಸಂದೇಹ ಬರುವುದು. ತಾನು ಕಂದುಬಣ್ಣದವ, ಎಂಬ ದಿಗಿಲು. ಎಂಥ ಬೆಪ್ಪು?-ಎನ್ನಿಸುತ್ತದೆ ನಮಗೆ ಪ್ರಪಂಚದ ಗಂಡಸರೆಲ್ಲ ಸುರೂಪಿಗಳೆ? ಅದು ತಿಳಿಯಬಾರದೆ? ಹಿಂದೂಸ್ತಾನದ ಜನರೆಲ್ಲ ಕರಿಯರೆ!

ಯೂರೋಪಿನ ಬಿಳಿಯನೊಬ್ಬನೊಂದಿಗೆ ನಿಲ್ಲಿಸಿದಾಗ ನಮ್ಮಲ್ಲಿನ ಎಂತಹ ಗೌರಾಂಗನೂ ಕಂದುಬಣ್ಣದವನಾಗಿ ಕಾಣುವನು. ಅದಕ್ಕೇಕೆ ಚಿಂತೆ? ಅಂತರಾಳದ ಆಶೆ, ತಾನೊಬ್ಬ ಗೌರಾಂಗಿಯನ್ನು ಮದುವೆಯಾಗ ಬೇಕೆಂದು. ಇವನ ಮಗನಿಗೆ ತನಗಾಡಿಕೊಂಡಂತೆ ಜನರಾಡಬಾರದು. ಆದರೆ ಹೆಂಡತಿ ಬೆಳ್ಳಗಿದ್ದ ಮಾತ್ರಕ್ಕೆ ಮಕ್ಕಳ ಬಣ್ಣಕ್ಕೆ ಅದು ಭರವಸೆಯೆ? ತಾನು ವೈದ್ಯನಾಗಿಯೂ ಈರೀತಿ ನಂಬುವುದೆ? ಏನೋ ಛಾನ್ಸ್, ಆಗಬಾರದೇಕೆ?

ಒಂದು ದಿನ ಇಬ್ಬರು ಗಂಡಸರು-ಅವರು ಕರ್‍ನೂಲು ಜಿಲ್ಲೆಯವರು ರೋಗಿಷ್ಟ ಹೆಂಗಸೊಬ್ಬಳನ್ನು ಚಿಕಿತ್ಸೆಗಾಗಿ ಇವನಲ್ಲಿಗೆ ಕರೆತಂದರು. ಕೆಲವರು ಅವಳಿಗೆ ಮಲೇರಿಯ ಎಂದಿದ್ದರು; ಕೆಲವರು ಹಿಸ್ಟೀರಿಯ ಎಂದರು; ಮತ್ತೆ ಕೆಲವರು ಕ್ಷಯ ಎಂದರು. ಆ ಹೆಂಗಸಿನ ಸ್ಥಿತಿಯನ್ನು ನೋಡಿದರೆ ಮತ್ತೆ ಆ ಕಡೆಗೆ ನೋಡಲು ಮನಸ್ಸಾಗುವುದಿಲ್ಲ.

ಹೆಂಗಸು ಬಿಳಿಚಿಕೊಂಡುಹೋಗಿದ್ದಾಳೆ; ತುಟಿ-ಕೆಳತುಟಿ ಒಡೆದು ರಕ್ತ ಸವರಿದಂತಿದೆ. ಮೇಲ್ದುಟಿ ಸಿಪ್ಪೆ ಎದ್ದಿದೆ. ಕೆನ್ನೆ, ಕಣ್ಣು, ಮೈ ಎಲ್ಲಾ ಒಣಗಿ, ಬತ್ತಿ ಹೋಗಿವೆ. ಧ್ವನಿಯೇ ಇಲ್ಲ. ಎದೆ ಒಳಕ್ಕೇ ಸೇದಿಕೊಂಡು ಸ್ತ್ರೀತ್ವದ ಗುರುತೇ ಅಳಿಸಿಹೋದಂತಿದೆ. ಎದೆಯ ಗೂಡು, ಪಕ್ಕದ ಎಲುಬುಗಳು, ಕಾಲು, ಕೈ ಬೆರಳು ಎಲ್ಲ ಕೇವಲ ಎಲುಬಿನ ಅಸ್ತಿಪಂಜರ, ಇಂಥ ಜೀವಕ್ಕೆ ಏನು ಇಲಾಜು? ಮುಖ ನೋಡಿದರೆ ಇದು ಹುಡುಗಿಯೋ ಹೆಂಗಸೋ ಹೇಳುವಂತಿಲ್ಲ. ಅದಕ್ಕೆ ವರ್‍ಷ ಅವರ ಲೆಕ್ಕದಂತೆ ಹತ್ತೊಂಭತ್ತು, ಇದು ಏನೋ ರೋಗ! ಎಂದರು ಅವರ ಜನ.

ಡಾಕ್ಟರು ಪರೀಕ್ಷೆ ನಡೆಸಿದ. ಏನೂ ಹೇಳಲಿಲ್ಲ. ಅವಳ ಜನ “ಏನು ಸ್ವಾಮಿ?” ಎಂದರು.
“ಏನೂ ಇಲ್ಲ” ಎಂದ.
“ಇವಳ ಕಾಯಿಲೆ?”
“ಔಷಧ ಕೊಡಿಸಿ.”
“ರೋಗ ಗುಣವಾದೀತೆ?”
“ರೋಗ ವಾಸಿಮಾಡುವುದೆ ನಮ್ಮ ಕಸುಬು”
“ಫೀಜು ಏನಾದೀತು?”
“ಇರಲಿ, ನೋಡೋಣ.”
“ಏನೋ ಸ್ವಾಮಿ, ತಮ್ಮ ಮಗಳು ಅಂತ ತಿಳಿದು ಆರೋಗ್ಯದಾನ ಮಾಡಬೇಕು” – ಅವರಲ್ಲಿ ವಯಸ್ಸಿನವನು ಹೇಳಿದ.

ಡಾಕ್ಟರ್ ಇದಕ್ಕೆ ಮಾತನಾಡಲಿಲ್ಲ.
ಚಿಕಿತ್ಸೆ ಆರಂಭವಾಯಿತು. ಡಾಕ್ಟರನ ಮನಸ್ಸಿನಲ್ಲಿ ಸಂದೇಹ ಭರವಸೆಗಳ ತುಯ್ಯಲಾಟ. ಅದೊಂದು ಯುದ್ಧ. ಕೈ ಬಿಡುವಂತಿಲ್ಲ. ಆದರೂ ಯಶಸ್ವಿಯಾದೇನೆಂಬ ನಂಬಿಕೆ.

ವೈದ್ಯಶಾಸ್ತ್ರದ ಸಾಧ್ಯವಿದ್ದ ಎಲ್ಲ ಪ್ರಯೋಗಗಳನ್ನೂ ಅಭ್ಯಾಸಮಾಡಿದ ಇವಳಿಗಾಗಿ. ವಿವಿಧಬಗೆಯ ಚಿಕಿತ್ಸಾ ವಿಧಾನಗಳು, ಪ್ರಕೃತಿ ವಿಧಾನಗಳು, ಆಹಾರ ವಿಧಾನಗಳು ಇವನ್ನೆಲ್ಲ ನೋಡಿಕೊಂಡ. ಅಂತೂ ಮನಸ್ಸಿಗೆ ನಿರ್‍ಣಯ ಆದ ಮೇಲೆ ಪ್ರಯೋಗಕ್ಕೆ ತೊಡಗಿದನು. ಹಿಂದೆ ಅಲೆಕ್ಸಾಂಡರ್ ವಿಜಯ ಯಾತ್ರೆ ನಡೆಸುವಾಗ, ಗಾರ್‍ಡಿಯನ್ ನಾಟ್ಸ್ ಎಂಬ ಗಂಟನ್ನು ಬಿಚ್ಚಿದವನು ಜಗದ್ವಿಜಯಿಯಾಗುತ್ತಾನೆ, ಎಂಬ ಪ್ರತೀತಿ ಕೇಳಿ ಅದನ್ನು ಕತ್ತಿಯಿಂದ ಕತ್ತರಿಸಿ, ಬಿಟ್ಟಿದೆನೆಂಬ ಖ್ಯಾತಿಗೆ ಗುರಿಯಾದನು. ಅದು ಅವನಿಗೆ ಸರಿಹೋಯಿತು. ಈ ರೋಗ ಒಂದು ಕಗ್ಗಂಟು; ಅಲ್ಲ ನೂರು ಕಗ್ಗಂಟುಗಳು. ಒಂದೊಂದನ್ನೂ ಬಿಚ್ಚಬೇಕು. ತಾಳ್ಮೆ, ವಿವೇಕ, ಅನುಭವ ಮತ್ತು ಪ್ರಯೋಗ ಎಲ್ಲವೂ ತೀವ್ರ ಪರೀಕ್ಷೆಗೆ ಗುರಿಯಾಗಬೇಕಾಯಿತು.

ದೇಶೀಯ ವೈದ್ಯ ವಿಧಾನಗಳನ್ನೂ ಉಪೇಕ್ಷೆಮಾಡಲಿಲ್ಲ ಕರಿಯಪ್ಪ. ಜಲ ಚಿಕಿತ್ಸೆ, ಮೃಣ್ಮಯನ್ಮಾನ, ಸೂರ್‍ಯರಶ್ಮಿ ಅಂಗಾಂಗಗಳನ್ನು ನೀವುವುದು ಎಲ್ಲ ಮಾಡತೊಡಗಿದನು.

ಸಾವು ಉಳಿವುಗಳ ನಡುವಿನ ಹೋರ್‍ಆಟದಂತಿತ್ತು. ಅಪಾಯದ ಗಡಿಯನ್ನು ದಾಟಿದ ನಂತರ ದೀರ್‍ಘ ಉಸಿರೆಳೆದ.

ಮಣ್ಣಿನಲ್ಲಿ ಬೊಂಬೆ ಮಾಡುವವನು ಅಲ್ಲಲ್ಲಿ ಮಣ್ಣು ಮೆತ್ತುತ್ತಾನೆ. ರೂಪರೇಷೆಗಳನ್ನು ತಿದ್ದುತ್ತಾನೆ; ಆಕಾರಗಳನ್ನು ಏರ್‍ಪಡಿಸುತ್ತಾನೆ. ಇದು ಎಲುಬು ಚಕ್ಕಳದ ವಿಕೃತವಾದ ಕುಟುಕು ಜೀವದ ವಸ್ತು. ಅದರಲ್ಲಿ ಉಸಿರು ತುಂಬಿ, ಮಾಂಸ ಮಜ್ಜಗಳನ್ನು ತುಂಬಿ, ಆಕಾರ ತರುವುದು ಒಂದು ಸರಳ ಸಾಧನೆ!

ಇವನಿಗೆ ಇದೊಂದು, ತನ್ನ ಉದ್ಯೋಗದಲ್ಲಿ ಬಂದೊದಗಿದ ಪರೀಕ್ಷಾ ಕಾಲ-ಸತ್ವ ಪರೀಕ್ಷಾ ಕಾಲ ಎಂದಂತಾಯಿತು. ಇದೇ ಯೋಚನೆ- ಇದೇ ಚಿಂತನ, ಇದರ ಪರಿಣಾಮವೇ ಆದ್ಯ ಕಾರ್‍ಯ.

ಏನೋ ಮನಸ್ಸಿನಲ್ಲಿ ಭರವಸೆಯುದಯಿಸುವುದು. ಅತ್ಯಂತ ದಯಾದ್ರ ದೃಷ್ಟಿಯಿಂದ ಆ ಜೀವಚ್ಛವವನ್ನು ನೋಡುವನು. ಅವಳ ಮುಖದಲ್ಲಿ ಕಿಂಚಿತ್ ನಗುವಿನ ಛಾಯೆ ಕಂಡಾಗಲೂ ಇವನ ಮನಸ್ಸಿನ ಭರವಸೆ ಅಪಾರವಾಗಿ ಬೆಳೆಯುವುದು. ಮನಸ್ಸಿನಲ್ಲಿ ಏನೋ ಬಲಿಯತೊಡಗಿತು, ತಾನೀ ಕುಟುಕು ಜೀವದ ಜೀವಿಗೆ ಪ್ರಾಣ ಕೊಡುವುದಲ್ಲದೆ ಆರೋಗ್ಯವನ್ನೂ ಕೊಡಬಲ್ಲೆನಲ್ಲವೆ? ಇದನ್ನೊಂದು ಜೀವಿಯನ್ನಾಗಿ ಪ್ರತಿಸೃಷ್ಟಿ ಮಾಡಬಲ್ಲೆನಲ್ಲವೆ ? ರೋಗಿ ಮತ್ತು ಚಿಕಿತ್ಸಕರ ಮಮತೆ ಅತ್ಯಂತ ಆಂತರಿಕವಾಗಿ ಬೆಳೆಯ ಬಹುದು. ವೈದ್ಯ ಅನೇಕ ವೇಳೆ ತನ್ನ ವಶಕ್ಕೆ ಪೋಷಣೆಯಾಗಲು ಬಂದ ಜೀವಿಗಳ ಮೇಲೆ ಮರುಕ ಪ್ರೇಮಗಳನ್ನು ತೋರಿಸುವುದೂ ಜಗತ್ತಿನಲ್ಲಿ ನಡೆದಿದೆ.

ಒಂದು ದಿನ ಕರಿಯಪ್ಪಗೌಡನಿಗೆ ಮನಸ್ಸಿನಲ್ಲಿ ಏನೋ ಸ್ಪುರಿಸಿದಂತಾಯಿತು. ತನ್ನ ಅಂತರಂಗವನ್ನು ತಾನು ಅರಿತುಕೊಂಡಂತೆ ಭಾಸವಾಗಿ ಆಶ್ಚರ್‍ಯವೆನಿಸಿತು-ಸ್ಫೂರ್ತಿಯುಳ್ಳನನಿಗೆ ಫಕ್ಕನೆ ಒಂದು ದಿನ ತನ್ನ ಪ್ರತಿಭೆಯ ಪ್ರಬೆ ಮಿಂಚಿದಂತೆ.

ಆಹಾರ, ಔಷಧ, ಚಿಕಿತ್ಸೆ, ವಿಶ್ರಾಂತಿ ಮತ್ತು ಇವುಗಳನ್ನು ಒಳಗೊಂಡ ಇವನ ಔದಾರ್‍ಯಮಯವಾದ ಉಪಚಾರ ಇದೆಲ್ಲದರಿಂದ ರೋಗಿಯ ರೋಗ ಹರಿಯಬಂತು; ಚೇತನ ಬರತೊಡಗಿತು. ತೂಕ, ಮಾಂಸ, ಅಂಗಾಗಗಳ ಬೆಳವಣಿಗೆ ಎಲ್ಲ ಪುಸ್ಟಸ್ಥಿತಿಗೆ ಮಾರ್‍ಪಾಡಾಗುತ್ತ ಬಂತು. ಆದರೂ ಇದೆಲ್ಲ ನಿಧಾನಕ್ರಿಯೆ. ದಿನಗಳೆಷ್ಟೊ, ತಿಂಗಳುಗಳೆಷ್ಟೊ ಹೀಗೇ ಉರುಳಿದವು.

ಅಂಗಾಂಗಗಳನ್ನು ವಿದೇಶಿ ಮೀನೆಣ್ಣೆ ಹಚ್ಚಿ ಉಜ್ಜುತ್ತಿದ್ದ ಕೈ, ಎದೆ, ಕಾಲು, ತೊಡೆ -ಎಲ್ಲ. ಈಗ, ಬತ್ತಿಹೋದ ಗಿಡ ಚಿಗುರತೊಡಗಿದಂತೆ, ಅಲ್ಲೆಲ್ಲ
ಬೆಳವಣಿಗೆ ಬಂದಿತು. ಬತ್ತಿಹೋದ ಎದೆಗಳು ಈಗ ಮಾಂಸಲವಾಗಿ, ಗೋಲಾಕಾರವಾಗಿ ರೂಪುಗೊಳ್ಳತೊಡಗಿದವು. ಎಲುಬಿನ ಗೂಡನಿಸಿದ್ದ ಮುಖ ತುಂಬಿತು ; ಬಣ್ಣಬಂತು, ಸಿಪ್ಪೆಯೊಡೆದು ಒಣಗಿದ ತುಟಿಗಳು ಪೂರ್‍ಣವಾಗಿ, ನೆನೆದ ಹವಳದ ರಂಗಿಗೇರಿದವು.

ಈ ಹಿಂದೆ, ತಲೆಯ ಕೂದಲು ಕೆದರುವಾಗ ಅದನ್ನು ಸರಿಮಾಡದಿದ್ದವಳು ಈಗ ಬಾಚಿ ಎಣ್ಣೆ-ಹೂವಿನಿಂದ ಅಲಂಕರಿಸತೊಡಗಿದಳು. ಡಾಕ್ಟರು ಎದೆಯನ್ನು ಉಜ್ಜುವಾಗ-ತಿಕ್ಕುವಾಗ ಈಗ ಅವಳಿಗೆ ಲಜ್ಜೆಯೆನಿಸುತ್ತದೆ. ಡಾಕ್ಟರು ಕೌತುಕದಿಂದ ಈ ಪರಿವರ್ತನೆಯನ್ನು ನೋಡುತ್ತಾನೆ. ಮನಸ್ಸಿಗೆ ಏನೊಂದೂ ವಿಕಾರವೆನಿಸದೆ ತನ್ನ ರೋಗಿಯ ಎದೆಯಮೇಲೆ ಬೆರಳಾಡಿಸುತ್ತಾನೆ. ಒಂದೊಂದು ವೇಳೆ ಅನ್ಯಮನಸ್ಕನಾಗುತ್ತಾನೆ. ಬೆಳೆವ ನಿತಂಬಕ್ಕೆ ಸೂಜಿ ಚುಚ್ಚಿ ಔಷಧವನ್ನು ರಕ್ತದೊಳಗೆ ಸೇರಿಸುವಾಗ ಅವಳು ನಾಚುತ್ತ ಡಾಕ್ಟರನ ಕೈ ಸರಿಸುತ್ತಾಳೆ. ಇದು ರೋಗಿಗಳಿಗೆ ಪ್ರಯೋಗಿಸುವ ಅವನ ದಿನಚರಿ ಕರ್‍ಮ. ಅವನು ಗದರಿಕೊಂಡು ಔಷಧಿಸೂಜಿ ಚುಚ್ಚಿ ಕೊನೆಯಲ್ಲಿ-“ಪೆದ್ದು ಹುಡುಗಿ, ನನ್ನಲ್ಲಿ ನಿನಗೆ ನಾಚಿಕೆಯೇ?” ಎನ್ನುತ್ತಾನೆ.

ಅವಳ ಸಮಸ್ತ ದೇಹವೇ ಇವನ ಚಿಕಿತ್ಸಾ ಪ್ರಯೋಗಕ್ಕೆ ಒಳಪಟ್ಟಿದೆ.

ಅವನು ಆದರ್‍ಶವಾದಿ. ಸ್ತ್ರೀಯನ್ನು ಗೌರವಿಸಿದವನು. ತಾಯಿಯೇ ಇವನು ಮೊದಲು ಕಂಡ ಹೆಂಗಸು. ಸ್ತ್ರೀ ಬಗ್ಗೆ ಗೌರವ; ಸ್ತ್ರೀತ್ವದ ಬಗ್ಗೆ ಗೌರವ. ಲಘುವಾದ ರಾಗ-ಭಾವಗಳಿಗೆ ಮನಸ್ಸು ತುಯ್ಯಲಾಡುವಂತದುದಲ್ಲ.

ಈಗವಳು ರೋಗಿಯಲ್ಲ! ರೋಗವನ್ನು ಹರಿದುಕೊಂಡು ಗುಣಮುಖಳಾಗುತ್ತಿರುವವಳು. ದೇಹದಲ್ಲಿ ಆರೋಗ್ಯ ಹರಿಯತೊಡಗಿತು; ಆರೋಗ್ಯ ಹರಿದಂತೆಲ್ಲ ಬತ್ತಿದ್ದ ಜೀವ ಬೆಳೆದು ಯೌವನ ಚಲಿಸತೊಡಗಿತು; ಯೌವನ ಚಲಿಸಿದಂತೆಲ್ಲ ಚೆಲುವು ತುಂಬತೊಡಗಿತು; ಚೆಲುವು ತುಂಬಿದಂತ್ತೆಲ್ಲ ವ್ಯಕ್ತವಾಗದಿದ್ದ ಭಾವರಾಗಗಳು, ತೃಪ್ತವಾಗದಿದ್ದ ವಯೋ ಉದ್ವೇಗಗಳು ಜ್ವಲಿಸ ತೊಡಗಿದವು!

ದಿನ ಕಳೆದವು.

ಈಚೆಗೆ ಡಾಕ್ಟರನ ಸ್ಪರ್‍ಶಕ್ಕೆ ಅವಳ ಮುಖಕ್ಕೆ ರಕ್ತವೇರುವುದು ಕಾಣುತ್ತದೆ. ತುಂಬಿದೆದೆಯಿಂದ ವೈದ್ಯನು ತನ್ನ ರೋಗಿಯ ಕೂದಲನ್ನು ಬೆರಳಲ್ಲಿ ಸುತ್ತುತ್ತ ಅವಳನ್ನು ನೋಡತೊಡಗುವನು. ತಾನು ಸೃಷ್ಟಿಸಿದ ಜೀವವಿದು! ಎಂದು ಮನಸ್ಸಿನಲ್ಲಿ ಅಭಿಮಾನವೇಳುವುದು. ಇದು ತನ್ನದೇ? ಎಂದು ಒಂದೊಂದುವೇಳೆ ಭ್ರಮೆಯಾಗುವುದು; ಹಾಗೆಯೆ ರತಿರಾಗ ಬೆಳೆಯುವುದು. ರೋಗ ಕಳೆದ ಆ ತುಟಿಗಳನ್ನು ತನ್ನ ತುಟಿಯಿಂದ ಸೋಂಕುವ ಮನಸ್ಸಾಗುವುದು. ಮೃದಕೆನ್ನೆಗಳ ಮೇಲೆ ಕೈಯಾಡಿಸುತ್ತ ತನ್ನ ಕೆನ್ನೆಗೆ ಇವು ಹೊಂದಿ ಕೊಳ್ಳುವುದು ಯಾವಾಗ? ಎನ್ನುವನು. ಅವಳ ಎದೆಯನ್ನು ಪರೀಕ್ಷಿಸುವಾಗ ತನ್ನ ಮುಖವನ್ನು ಅಲ್ಲಿ ಹುದುಗಿಸಲೇ? ಅರಿಯದಿದ್ದ ಸುಖವನ್ನು ಆ ಮೃದುತ್ವದಲ್ಲಿ ಕಾಣಲೆ ? ಎಂದು ಭ್ರಮಿಷ್ಠನಾಗುವನು.

ಆ ರೂಪ, ಆ ಪೂರ್‍ಣಗೊಂಡ ರೂಪ, ಆ ಕಳೆ ಕಳೆದ ರೂಪ, ಆ ವಿಕಸಿತವಾದ ಸ್ತ್ರೀತ್ವದ ರೂಪ, ಅನಾಘ್ರತಪುಷ್ಪ ಎಂದು ಕವಿ ವರ್‍ಣಿತವಾದ ಕನ್ನೆ ರೂಪ-ದೈವಕೃಪೆಯಿಂದ ತಾನು ಸೃಷ್ಟಿ ಮಾಡಿದೆನೆ? ಅಕಾಮಿತಳಾದ ಈ ಕಾಮಿನಿಯನ್ನು ತಾನು ರೂಪಿಸಿದೆನೆ? ಇವಳು ತನ್ನವಳು! ದೈನದುಜ್ಞೆಯಿಂದ ತನ್ನವಳು! ಈ ಭಾವ ಬಲಿಯುವುದು. ಮೋಹಿತನಾಗಿ, ಅವಳನ್ನು ತಬ್ಬಿಕೊಳ್ಳಲು ಆಶೆಪಡುವನು.

ಆದರೆ ತನ್ನ ವೃತ್ತಿ, ತನ್ನ ಶೀಲ, ತನ್ನ ಸೇವಾಕ್ಷೇತ್ರ, ತನ್ನ ಆದರ್‍ಶ ಇವು ದೊಡ್ಡವು. ಒಂದು ವಾಸನೆಗಿಂತ, ಒಂದು ರಾಗಕ್ಕಿಂತ ಇವು ಸ್ಠಾಯಿಯಾದವು. ಇವಳನ್ನು ಪ್ರೀತಿಸುತ್ತೇನೆ; ಇವಳನ್ನು ಮದುವೆಯಾಗುತ್ತೇನೆ ಎಂದು ನಿರ್‍ಣಯಿಸಿಕೊಂಡನು.

ಅವಳ ಹಿಂದಿನ ಬಿಂಬಚಿತ್ರವನ್ನು ಈಗಿನ ಬಿಂಬಚಿತ್ರವನ್ನು ಎದುರಿಗಿಟ್ಟುಕೊಂಡು ತುಲನೆಮಾಡುವನು. ತಾನಿದೊಂದು ಸಾಧಿಸಿದ ಮಹಾ ವಿಜಯ ಎಂಬ ಹರ್‍ಷ. ಈ ಹರ್‍ಷ ಜೀವನದ ಕೊರತೆಯನ್ನು ಪೂರ್‍ಣ ಮಾಡಿದರೆ ಅದೆಂಥ ಸುಖ! ತನ್ನ ಬಯಕೆ ಸಫಲತೆಯನ್ನು ಪಡೆದರೆ, ತಾನಿದು ತನಕ ಒಂಟಿಯಾದುದು ಇಷ್ಟು ಸುಖಮಯವಾಗಿ ಪರ್‍ಯಯವಸಾನಗೊಂಡರೆ, ಪ್ರಾಣದಾನ ಮಾಡಿದವನೆಂದು ಅವಳು ಯಾವಜ್ಜೀವವೂ ಕೃತಜ್ಞಳಾಗಿ, ಜೀವಸಹಚರಿಯೂ ಪ್ರೇಯಸಿಯೂ ಆದರೆ ತನ್ನ ಸುಖಕ್ಕೆ ಪಾರವುಂಟೆ?

ಕವಿಯು ತನ್ನ ಕೃತಿಯನ್ನೇ ಕಂಡು ಅಚ್ಚರಿಪಡುವಂತೆ ಇವಳ ಯೌವನ-ರೂಪ ವಿಕಾಸವನ್ನು ಕಂಡು ಅಚ್ಚರಿಪಡುವನು. ಇವನ ಹಸಿದ ಕಣ್ಣನೋಟದ ಕಾವಿಗೆ ಅವಳ ಮೈಯಲ್ಲಿ ಕಾವೇಳುವುದು ; ಮುಖ ಕೆಂಪಾಗುವುದು – ಮಲಗಿದ್ದ ಹಾವನ್ನು ಹೊಡೆದು ಭುಸುಗುಟ್ಟಿಸಲು ಅನುವುಮಾಡಿದಂತಾಗುವುದು. ಆದರೆ ಈ ಮನಃಕ್ರಿಯೆ ವೈದ್ಯನಿಗೆ ತಿಳಿದಿರಲಾರದು!

ಎಷ್ಟೋ ದಿನ ಧೈರ್‍ಯಮಾಡಿ ಅವಳೆದುರು ತನ್ನ ಪ್ರಣಯರಾಗವನ್ನು ಹಾಡಬೇಕೆಂದು ಸಂಕಲ್ಪ ಮಾಡುವನು. ಆದರೆ ಅವಳೆದುರಿನಲ್ಲಿ ಅದು ಕರಗಿ ಹೋಗುವುದು, ಅವಳನ್ನು ಏನೆಂದು ಕೇಳುವುದು?

ಒಂದು ದಿನ ಸಾಹಸಗೊಂಡು, “ನಿನಗೆ ಮದುವೆ ಆಗಿದೆಯೆ?” ಎಂದು ಕೇಳಿದ. ಎದೆ ಎಷ್ಟು ಹೊಡೆದುಕೊಂಡಿತೊ ಆಗ! ಏನೆಂದು ಉತ್ತರ ಬರುವುದೋ? ತನ್ನ ಭವಿಷ್ಯ ಒಂದು ಶಬ್ದವನ್ನು ಅವಲಂಬಿಸಿದೆ, ಎಂಬ ಕಳವಳ, ದುಗುಡ.

ಆಕೆ “ಇಲ್ಲ!” ಎಂದಳು ಮಾತ್ರ. ಇದಿಷ್ಟರಿಂದ ಒಂದು ನಿರ್‍ಧಾರವಾಯಿತು. ಆದರೆ ಇನ್ನೇನೂ ಹೆಚ್ಚು ವಿಷಯ ತಿಳಿದಂತಾಗಲಿಲ್ಲ.

ಆಕೆಯ ಜೊತೆಗೆ ಬರುತ್ತಿದ್ದ ಒಬ್ಬ ಗಂಡಸು-ಅವನು ಆಕೆಯ ಅಣ್ಣ-ಅವನನ್ನು ಕೇಳಿದನು. “ಈ ವರ್ಷ ಮಾಡುತ್ತೇವೆ ; ನೀವು ಆಕೆಯ ಹಡೆದ ತಂದೆ ; ಪ್ರಾಣದಾನ ಮಾಡಿದಿರಿ” ಏನೇನೋ ಹರಟಿದ. ಅದಿವನಿಗೆ ಬೇಡವಾದ ಮಾತು.

ತಾನು ಡಾಕ್ಟರು; ತಾನು ಅವಳನ್ನು ಉಳಿಸಿದ್ದೇನೆ. ಅವಳ ಮೇಲೆ ತನ್ನ ಹಕ್ಕು, ಅವಳ ಪೋಷಕರು, ತಾನು ಕೇಳಿದರೆ ಅವಳ ಕೈಯನ್ನು ತನ್ನ ಕೈಯೊಂದಿಗೆ ಕೂಡಿಸಲಾರರೆ? ಇದಕ್ಕೇಕೆ ಇಂಥ ಕಳವಳ!

ಹಿಂದೊಬ್ಬ ಗ್ರೀಕರ ಶಿಲ್ಪಿ ಒಂದು ಸ್ತ್ರೀ ಪ್ರತಿಮೆಯನ್ನು ಸೃಷ್ಟಿಸಿದ. ಅದರ ಸೌಂದರ್‍ಯಕ್ಕೆ ತಾನೆ ಮೋಹಿತನಾಗಿಬಿಟ್ಟ, ಗತಿಕಾಣದೆ ದೇವತೆಗಳನ್ನು ಬೇಡಿದ ಅದಕ್ಕೆ ಪ್ರಾಣದಾನಮಾಡಿರೆಂದು. ಅದರ ಕಥೆ ಮುಂದೆ ಇನ್ನೇನೊ ಇದೆ.

ಈ ಜೀವ ತುಂಬುವ ಶಿಲ್ಪಿ ಅದರಂತೆ ತನ್ನ ಕೃತಿಯಲ್ಲಿ ಮೋಹಗೊಂಡ. ಆದರೆ ಪ್ರಣಯವನ್ನು ಬೇಡಲು ಬಾಯಿಂದ ಬಾರದು. ಕಣ್ಣಿಂದ ನೋಡುವನು. ಅದನ್ನು ಅವಳು ಅರಿತಿದ್ದಳೊ ಏನೊ? ಪ್ರಚೋದಿತವಾಗದಿದ್ದ ರತಿ ಈಗ ಅವಳಲ್ಲಿ ಮೈಗೂಡಿತ್ತೋ? ಏನೋ ?

ಬರಬರುತ್ತ ಇವನನ್ನು ಕಂಡರೆ ಆಕೆ ಲಜ್ಜೆಗೊಳ್ಳುವಳು. ಕರೆದರೆ ಹತ್ತಿರ ಬಾರಳು. ಮುಟ್ಟಲೀಸಳು. ಇವನು, ಇವನಿಗೆ ತಾನೀಗ ಸ್ತ್ರೀ ಆದೆನೆಂಬ ಪೂರ್‍ಣ ಅರಿವು ಬಂದಿದೆ ; ಅದಕ್ಕಿರಬೇಕು ಎಂದುಕೊಳ್ಳುವನು.

ಆದರೂ ಚಿಕಿತ್ಸೆ ಇನ್ನೂ ನಡೆದಿತ್ತು. ಅವಳು ಪೂರ್‍ಣ ಆರೋಗ್ಯ ಗಳಿಸಬೇಕು. ಸ್ವಯಂ ಡಾಕ್ಟರನ ಹೆಂಡತಿ, ರೋಗದಿಂದ ದೂರವಿರಬೇಕು. ಅಲ್ಲದೆ ಇವನ ಆಂತರಿಕ ಆಶೆ ಇವಳ ಚಿಕಿತ್ಸಾ ನೆಪದಲ್ಲಿ ಇನ್ನು ಆದಷ್ಟು ದಿನ ಕಳೆಯಲಿ ಎಂದು.

ಈಗ ಅವಳು ಓಡಾಡಬಲ್ಲಳು. ತನ್ನವರ ಜೊತೆಗೆ ಸಂಚಾರಕ್ಕೆ ಹೋಗುತ್ತಾಳೆ. ಇವನು, ಒಂದು ದಿನ ಅವಳು ಆ ಇನ್ನೊಬ್ಬಾತನೊಂದಿಗೆ ಪಾರ್‍ಕಿನಲ್ಲಿ ಸುತ್ತುವುದನ್ನು ನೋಡಿ ಹತ್ತಿರ ಹೋದ.

ಇವನನ್ನು ಕಂಡು ಅವಳಿಗೆ ನಾಚಿಕೆಯೆನಿಸಿದರೂ ಏನೋ ಕಳವಳದುಗುಡ, ಮುಖದಮೇಲೆ ಅದು ಕಾಣುತ್ತದೆ. ಅದನ್ನೆಲ್ಲ ಗಮನಿಸದೆ ಡಾಕ್ಟರು ಮಾತಾಡಿಸಿ ಹೊರಟುಬಂದ.

ಈಚೆಗೆ ಅವಳಿಗೊಂದು ಹೊಸ ಬಾಧೆ, ಹೊಟ್ಟೆಯಲ್ಲಿ ಏನೋ ಆಗಿದೆ, ವಾಂತಿ-ವಾಕರಿಕೆ, ಹೊಟ್ಟೆಯೊಳಗೆ ಏನೋ ಗಂಟು ಆಗಿದೆ. ಅನ್ನ ತಿನ್ನಲಾಗದು. ಡಾಕ್ಟರು ಬೆದರಿದ, ಎಲ್ಲಾ ರೋಗದ ಗಂಟುಗಳನ್ನು ಬಿಚ್ಚಿದ್ದ. ಇದು ಯಾವ ಹೊಸ ಗಂಟು ?

ತನಗೆ ತೋರಿದ ವಿಧಾನದಿಂದೆಲ್ಲ ಪರೀಕ್ಷೆ ನಡೆಸಿದ. ಹೊಳೆಯಲಿಲ್ಲ. ಅಜೀರ್‍ಣಕ್ಕೆ ಔಷಧಿ ಆಯಿತು; ಹೊಟ್ಟೆ ನೀವುವುದು ಆಯಿತು. ಕೊನೆಗೆ ಎಕ್ಸ್‌ರೇ ತೆಗೆಸಲು, ಬಿಳಿ ಮಣ್ಣಿನ ಹಾಲು ಕುಡಿಸಿ ಇಲ್ಲದ ಅವಸ್ಥೆ ಬೀಳಿಸಿ ಫೋಟೋ ತೆಗೆದುದೂ ಆಯಿತು. ಆಗಲೂ ಏನೂ ತಿಳಿಯಲಿಲ್ಲ.

ಒಳಗೆ ಏನೋ ಎದ್ದಿದೆ ಹಿಡಿಗಾತ್ರ, ಹೊಟ್ಟೆಯ ಕ್ಯಾನ್ಸರ್ ಹುಣ್ಣೆ ಇರಬಹುದೆ ? ಅದನ್ನು ಆಪರೇಷನ್ ಮೂಲಕ ತೆಗೆದುಹಾಕಬೇಕೆಂದು ಇತರ ಡಾಕ್ಟರರ ಸಲಹೆ.

ಸರಿ, ಆಪರೇಷನ್ಗೆ ಸಿದ್ಧ ಮಾಡಿದುದಾಯಿತು. ಬಡ ಪ್ರಾಣಿ, ಕಳವಳ ದಿಂದ ಕಾದಿದ್ದಾನೆ. ಇದರಲ್ಲಿ ಏನಾದರೂ ಆಗಿಹೋದರೊ? ಅದೇ ಅವಳಿಗೆ ಮೃತ್ಯುವಾದರೋ? ದೈವ ಹಾಗೆ ಮೋಸಮಾಡೀತೆ ? ಏನೇನೋ ಭ್ರಮೆ ಗೊಂಡ ಭೀತಿ.

ಅವಳ ಜನರೂ, ಆ ಇಬ್ಬರು ಗಂಡಸರು ಕಾದಿದ್ದರು. ಇವನಿಗೆ ಆ ಇನೋಬ್ಬನಾರು ಎಂಬುದು ಗೊತ್ತಿರಲಿಲ್ಲ. ಅವನಾರು ಎಂಬುದನ್ನು ಕೇಳಲೇ ಇಲ್ಲವಲ್ಲ? ಎಂದುಕೊಂಡಿದ್ದ. ಅದು ಏತಕ್ಕೆ ತನಗೆ? ಎಂದು ಸುಮ್ಮನಾದ

ಸ್ತ್ರೀ ಡಾಕ್ಟರು ಹೊರಗೆ ಬಂದು, “ನನಗೇನೋ ಸಂದೇಹ ಬಂದಿದೆ. ಅದನ್ನು ಇನ್ನೂ ಪೂರ್‍ಣ ಪರೀಕ್ಷೆಮಾಡಿ ಆಮೇಲೆ ಆಪರೇಷನ್ ನಡೆಸಬೇಕೆಂದಿದ್ದೇನೆ. ಅಲ್ಲಿಯತನಕ ಇಲ್ಲಿಯೇ ವಾರ್‍ಡಿನಲ್ಲಿ ನಿರೀಕ್ಷಣೆಯಲ್ಲಿಟ್ಟಿರಲಿ. ಆಮೇಲೆ ನೋಡೋಣ,” ಎಂದಳು.

ರೋಗಿಯ ಜನರಿಗಿಂತ ಇವನ ಆಸಕ್ತಿಯೇ ಹೆಚ್ಚು. ಎರಡು ಮೂರು ದಿನಗಳಾದಮೇಲೆ ಹೋದ ಆಸ್ಪತ್ರೆಗೆ ಡಾಕ್ಟರು-ಆಕೆ, ಇವನೊಂದಿಗೆ ಮಾತನಾಡುತ್ತ ರೋಗಿಗೆ ಯಾವ ಯಾವುದಕ್ಕೆ ಚಿಕಿತ್ಸೆ ನಡೆಸಿರುವುದಾಗಿದೆ? ಎಂದು ಇವನನ್ನು ಕೇಳಿದಳು.

ಇವನು ಅವಳ ಮೊದಲಸ್ಥಿತಿ, ತನ್ನ ಚಿಕಿತ್ಸೆ ಎಲ್ಲ ಹೇಳಿದ. ಇಷ್ಟೇ ಅಲ್ಲ. ಉತ್ಸಾಹದಿಂದ ಅವಳ ಆ ಎರಡು, ರೋಗದ ಮತ್ತು ಗುಣಹೊಂದಿದ ಭಾವಚಿತ್ರಗಳನ್ನು ತೋರಿಸಿದ.

ಈ ಕಥೆಯೆಲ್ಲವನ್ನು ಕೇಳಿದ ಆ ವಯಸ್ಕ ಸ್ತ್ರೀ ವೈದ್ಯೆ, “ಇದೆಲ್ಲ ಅದಕ್ಕೆ ಸಂಬಂಧಿಸಿದುದಲ್ಲ. ಅದೇನಿರಬೇಕೆಂಬುದು ನಿಮಗೆ ಹೊಳೆಯಲೇ ಇಲ್ಲ?” ಎಂದು ಕೇಳಿದಳು.

“ಇಲ್ಲ.”
“ಈಕೆಗೆ ಮದುವೆಯಾಗಿದೆಯೆ?”
“ಇಲ್ಲ.”

ಆ ಸ್ತ್ರೀ ಡಾಕ್ಟರು ಅವನ ಮುಖವನ್ನು ನಟ್ಟ ನೋಟದಿಂದ ನೋಡಿದಳು. ಅದರ ಮೂಲಕ ಏನನ್ನೊ ಭೇದಿಸುವಂತೆ ನೋಡಿದಳು.

ಅವನ ಮನಸ್ಸಿನಲ್ಲಿ ಕೊಂಚ ಆಶಾಂತಿಯೆದ್ದಿತು. ಅವಳ ಮನಸ್ಸಿನಲ್ಲಿರುವುದೇನೊ?-ಎಂದುಕೊಂಡ.

ಒಂದೇಮಾತು ಹೇಳಿದಳು: “ಇವಳು ಮೂರು ತಿಂಗಳು ಬಸುರಿ!”

ಈ ಮಾತು ಇವನಿಗೆ ಸಿಡಿಲು ಹೊಡೆದಂತಾಯಿತು. ‘ಹಾ!’ ಎಂದ.

ಆಕೆ ಕೇಳಿದಳು, “ನಿಮಗೆ ಗೊತ್ತಾಗಲಿಲ್ಲವೆ? ನಾವು ಆಪರೇಷನ್ ಮಾಡಿದ್ದರೆ ಎಂಥ ಅನರ್‍ಥವಾಗುತ್ತಿತ್ತು! ಅವಳ ಜನರಿಗೆ ತಿಳಿಸಿ, ಅವಳನ್ನು ಕರೆದುಕೊಂಡು ಹೋಗಲಿ.”

ಯಾವುದೋ ಕಳೆದುಳಿದಿದ್ದ ದೇಹಶಕ್ತಿ ಇವನನ್ನು ಹೊರಕ್ಕೆಳೆದು ಕೊಂಡುಬಂದಿತು.

ಬಂದವನು ಹೊರಗೆ ನಿಂತಿದ್ದ ಆಕೆಯ ಅಣ್ಣ, ಮತ್ತೆ ಆ ಇನ್ನೊಬ್ಬಾತ, ಅವರಿಗೆ-“ನಿಮ್ಮ ಹುಡುಗಿ ಬಸುರಿಯಂತೆ; ಕರೆದುಕೊಂಡುಹೋಗಿ,” ಎಂದ. ಅಷ್ಟು ಹೇಳಿದವನು ಅವರ ಮುಖಭಾವವನ್ನು ಇವನು ಪರೀಕ್ಷಿಸಲಿಲ್ಲ. ಲಜ್ಜೆಗೊಂಡ ಅವರೂ ಇವನ ಮುಖ ನೋಡಲು ಮನಸ್ಸು ಮಾಡಲಿಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಿರಿಗೆರೆಯ ಸಿರಿದೇವಿ
Next post ಕನ್ನಡಿಗರು ನಾವು

ಸಣ್ಣ ಕತೆ

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…