ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು ಮುದಿ ದಂಪತಿಗಳು. “ನೋಡೇ ಪಾರೂ, ತೋಟದಲ್ಲಿ ಹುಲ್ಲು ಹಾಗೂ ಬೇಡದ ಗಿಡಗಳು ತುಂಬಿ ಹೋಗಿವೆ. ಕಾಲಿಡಲು ಭಯವಾಗುತ್ತಿದೆ. ಹೀಗಾದರೆ ತೋಟದಲ್ಲಿ ಸ್ಪ್ರಿಂಕ್ಲರ್ ಚಾಲು ಮಾಡುವುದು ಹೇಗೆ? ಹೇಗೂ “ಸೋನಾ” ತಿಂಗಳು ಬಂತು. ಶೀನನಿಗೆ ಹೇಳಿ ಕಳುಹಿಸಿ, ಕಂಗಿನ ಮರಗಳ ಬುಡ ಬಿಡಿಸಲು ಹೇಳು. ಕಳೆದ ವರ್ಷ ಏನೂ ಗೊಬ್ಬರ ಹಾಕಿಲ್ಲ ನೋಡು” ಹೆಂಡತಿಯಿಂದ ಏನೂ ಉತ್ತರ ಬರದ್ದನ್ನು ನೋಡಿ ಶಿವರಾಮ ಜೋಶಿಯವರು ನೆಟ್ಟಗೆ ನಿಂತುಕೊಂಡು ಒಮ್ಮೆ ಕೂಲಂಕುಶವಾಗಿ ಪತ್ನಿಯತ್ತ ಗಮನ ಹರಿಸಿದರು. ಗಂಡನ ಮಾತು ಅವಳಿಗೆ ಕೇಳಿಸಿದೆಯಾದರೂ ಯಾಕೋ ಉತ್ತರಿಸುವಷ್ಟು ಮನಸ್ತಿತಿಯಿರಲಿಲ್ಲ. ಕೆಲಸವೇನೋ ಯಾಂತ್ರಿಕವಾಗಿ ನಡೆಯುತ್ತಿದ್ದರೂ ಅವಳ ಗಮನ, ಮನಸ್ಸೆಲ್ಲಾ ಎತ್ತಲೋ ಹಾರಿ ಹೋಗಿತ್ತು. ಪಾರುವಿನ ಗುಣ, ನಡತೆಯನ್ನು ನಲ್ವತ್ತು ವರ್ಷದಿಂದ ಬಲ್ಲ ಜೋಷಿಯವರಿಗೆ ಅವಳ ಮೌನಧಾರಣೆಯ ಕಾರಣ ಅರಿವಾಗಿತ್ತು. “ಯಾಕೆ ಆಲೋಚಿಸುತ್ತೀಯಾ ಪಾರೂ, ಇವತ್ತು ಆನ್‌ಲೈನ್ನಲ್ಲಿ ಮಗಳು, ಮೊಮ್ಮಗನೊಂದಿಗೆ ಮಾತಾಡುವಾ. ಹೇಗೂ ವೆಬ್ ಕ್ಯಾಮರಾ ಇದೆ. ನಮ್ಮ ಮೊಮ್ಮಗ ಏನು ಮಾಡುತ್ತಾನೆ ನೋಡುವಾ” ಜೋಷಿಯವರು ಹೆಂಡತಿಯನ್ನು ಪುಸಲಾಯಿಸುತ್ತಾ ಖುಷಿ ಪಡುತ್ತಿದ್ದಂತೆ ಪಾರ್ವತಮ್ಮನ ಮುಖದಲ್ಲಿ ನಗೆಯೊಂದು ತೇಲಿ ಬಂತು. ಅಪರೂಪವಾಗುತ್ತಿರುವ ಪಾರ್ವತಮ್ಮನ ನಗುವನ್ನು ಮನತುಂಬಿ ನೋಡುತ್ತಿರುವಂತೆ ಜೋಷಿಯವರ ಕಣ್ಣಾಲಿಗಳು ತುಂಬಿ ಬಂತು. ಮನಸ್ಸು ಹಿಂದಕ್ಕೋಡ ತೊಡಗಿತು. ನಲ್ವತ್ತು ವರ್ಷ ಹಿಂದೆ, ಈ ಬೊಗಸೆ ಕಣ್ಣಿನ ಹಳ್ಳಿ ಹುಡುಗಿಯನ್ನು ಮನೆ – ಮನ ತುಂಬಿಸಿಕೊಂಡಾಗ, ಸಂಬಂಧಿಕರು, ಊರವರು ಹುಡುಗಿಯನ್ನು ಹೊಗಳಿದ್ದೇ ಹೊಗಳಿದ್ದು. ಅವಳ ಎತ್ತರ, ಬಣ್ಣ, ಸೌಂದರ್ಯ ಮೇಲಾಗಿ ಅಚ್ಚುಕಟ್ಟಾಗಿ ಮಾಡಿ ಮುಗಿಸುವ ಮನೆ ಕೆಲಸ, ತೋಟದ ಕೆಲಸ, ಜವಾಬ್ಧಾರಿತನ ಎಲ್ಲವನ್ನೂ ಕೂಲಂಕುಶವಾಗಿ ಪರಿಶೀಲಿಸುತ್ತಿದ್ದ ಶಿವರಾಮನ ಹೆತ್ತವರು “ಶಿವೂ, ನೀನು ಪುಣ್ಯವಂತ. ಬದುಕಲ್ಲಿ ನಿನಗೆ ಒಳ್ಳೆಯದೇ ಆಗುತ್ತದೆ. ನೀನೆಂದೂ ಸೋಲುವುದಿಲ್ಲ” ಅಂದಿದ್ದರು. ಅವರ ಮಾತು ನಿಜವಾಗಿತ್ತು. ಪಾರ್ವತಿ ಈ ಮನೆಗೆ ಲಕ್ಷ್ಮಿಯಾದಳು. ಭಾಗ್ಯಲಕ್ಷ್ಮಿಯಾದಳು. ಮುದ್ದಾದ ಎರಡು ಮಕ್ಕಳು. ಮೊದಲ ಗಂಡು ನಂತರ ಹೆಣ್ಣು. ಇಬ್ಬರು ಮಕ್ಕಳ ಮಧ್ಯೆ ಸುಮಾರು ಆರು ವರ್ಷದ ಅಂತರ. ಅಡ್ಡ ಹೆಸರು ಪುಟ್ಟ, ಪುಟ್ಟಿ. ಮೂರನೆಯದಕ್ಕೆ ಜೋಷಿಯವರು ಅವಕಾಶ ಕೊಡಲಿಲ್ಲ. ಶಿಸ್ತು ಬದ್ಧ ಜೀವನ ಅವರದ್ದು. ಶಿಸ್ತು, ಸಂಸ್ಕೃತಿ ಮೈಗೂಡಿಸಿಕೊಂಡ ಅವರು ಮನೆಯಲ್ಲೂ ಅದನ್ನ ಜಾರಿ ಮಾಡಿದ್ದರು. ಆದರೆ ಪಾರ್ವತಮ್ಮನಿಗೆ ಮನೆ ತುಂಬಾ ಮಕ್ಕಳು ಓಡಿಯಾಡಬೇಕೆಂಬ ಆಸೆ.

“ಏನ್ರೀ” ಎರಡಕ್ಕೆ ನಮ್ಮ ವಂಶದ ಕುಡಿಗಳನ್ನು ನಿಲ್ಲಿಸುವುದು ಬೇಡ. ನಾಲ್ಕೈದು ಮಕ್ಕಳು ಇರಲಿ. ಮನೆ ತುಂಬಾ ಓಡಾಡುತ್ತಾ ಇದ್ದರೆ ಅದಕ್ಕಿಂತ ದೊಡ್ಡ ಸ್ವರ್ಗ ಏನಿದೆ? ನಿಮ್ಮ ದಮ್ಮಯ್ಯ. ಇದೊಂದರಲ್ಲಿ ನಾನು ನಿಮ್ಮೊಂದಿಗೆ ರಾಜಿ ಮಾಡಿಕೊಳ್ಳಲಾರೆ”. ಪಾರು ಖಡಾ ಖಂಡಿತವಾಗಿ ಹೇಳಿದ್ದಳು.

“ನೋಡು ಪಾರು, ಊರಿಗೆ ಉಪದೇಶ ಮಾಡುವವನು ನಾನು. ನನ್ನ ಸಿದ್ಧಾಂತವನ್ನು ನಾನೇ ಪಾಲಿಸದಿದ್ದರೆ ನಾಲ್ಕು ಜನರ ಎದುರು ನಗೆಪಾಟಲಿಗೆ ಗುರಿಯಾಗಬೇಕಾಗುತ್ತದೆ. ಇರುವ ಇಬ್ಬರು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡುವಾ. ಅವರ ಎಲ್ಲಾ ಬೇಕು – ಬೇಡಗಳನ್ನು ನೆರವೇರಿಸಬಹುದು. ನಾವು ಒಂದು ಹಂತಕ್ಕೆ ಬರುವಾಗ ನಮ್ಮ ಸಮಸ್ಯೆಗಳನ್ನೆಲ್ಲಾ ಮುಗಿಸಿ ಹಾಯಾಗಿರಬಹುದು. ಅಷ್ಟು ಹೊತ್ತಿಗೆ ಅವರು ದಡ ಸೇರಿರುತ್ತಾರೆ. ಇಲ್ಲದಿದ್ದರೆ ಹೀಗೆ ಮಕ್ಕಳು ಹುಟ್ಟಿಸುತ್ತಾ ಹೋದರೆ, ನಮ್ಮ ಮುದಿ ವಯಸ್ಸಿನಲ್ಲಿ ಸಮಸ್ಯೆಗಳು ಉಲ್ಬಣಿಸುತ್ತಾ ಹೋಗುತ್ತದೆ. ಕೊನೆಗೆ ಉಳಿದ ಈ ಐದು ಎಕ್ರೆ ಜಮೀನನ್ನೂ ಮಾರಿ ಬಾಡಿಗೆ ಮನೆಯಲ್ಲಿ ಇರಬೇಕಾಗುತ್ತದೆ. ಸ್ವಲ್ಪ ಯೋಚಿಸು.” ಜೋಷಿಯವರು ಪತ್ನಿಗೆ ಸಮಜಾಯಿಷ ತೊಡಗಿದರು. ಪಾರ್ವತಮ್ಮ ಒಪ್ಪಲಿಲ್ಲ.

“ನಿಮಗೆ ಎರಡು ಮಕ್ಕಳು- ನಿಮ್ಮ ಮಕ್ಕಳಿಗೆ ಒಂದು ಮಗು. ಹೀಗಾದರೆ ಮುಂದಿನ ಜನಾಂಗಕ್ಕೆ ಚಿಕ್ಕಮ್ಮ, ದೊಡ್ಡಮ್ಮ, ಚಿಕ್ಕಪ್ಪ, ದೊಡ್ಡಪ್ಪ, ಅತ್ತೆ, ಮಾವ ಎಂದು ಯಾರಿರುತ್ತಾರೆ. ಈ ಸಂಸ್ಕೃತಿಯೇ ಮುಂದುವರಿದರೆ ಮುಂದೊಂದು ದಿನ ಒಂಟಿ ಜೀವನ ಬಂದೇ ಬರುತ್ತದೆ. ಇದು ಬದುಕಲ್ಲರೀ. ಒಂದು ಒಳ್ಳೇ ಕಾರ್ಯಕ್ಕೆ ಬಂಧು – ಬಳಗ ಸಿಗುವುದಿಲ್ಲ. ಆಗ ಬದುಕು ಬರಡಾಗಿ ಕಾಣುತ್ತದೆ. ಮುಂದೆ ನಮ್ಮ ಪಾಲಿಗೆ ಬರಬಹುದಾದ ಅನಾಹುತವನ್ನು ಕಲ್ಪಿಸಿಕೊಂಡು ಈ ರೀತಿ ಹೇಳುತ್ತಿದ್ದೇನೆ. ದಯವಿಟ್ಟು ಯೋಚಿಸಿ ನಿಮ್ಮ ಮಾತಿಗೆ ಎದುರು ಮಾತು ಆಡುತ್ತಿಲ್ಲ. ಒಂದು ವಿಜ್ಞಾಪನೆ ಅಷ್ಟೇ.” ಕೂಡು ಕುಟುಂಬದಲ್ಲಿ ಬೆಳೆದ ಪಾರ್ವತಿಯ ಹೇಳಿಕೆ ಒಂದು ನೋಟಕ್ಕೆ ಸರಿ ಎಣಿಸಿದರೂ ಜೋಶಿಯವರು ತನ್ನ ಸಿದ್ಧಾಂತ ಬಿಟ್ಟುಕೊಡಲಿಲ್ಲ. “ನಾಲ್ಕೈದು ಮಕ್ಕಳಾದರೆ ಅವರಿಗೆ ಹೇಗೆ ವಿದ್ಯಾಭ್ಯಾಸ ಕೊಡುತ್ತೀಯಾ? ಈ ತೋಟದಲ್ಲಿ ಬರುವ ಉತ್ಪತ್ತಿ ಬಿಟ್ಟರೆ ಬೇರೆ ಏನಿದೆ ಮಣ್ಣು” ಜೋಶಿಯವರು ಸ್ವಲ್ಪ ಖಾರವಾಗಿ ಒತ್ತಿ ಹೇಳಿದರು.

“ನಮ್ಮ ಮಕ್ಕಳೇನೋ ದೊಡ್ಡ ಡಾಕ್ಟರೋ, ಇಂಜಿನಿಯರೋ, ವಿಶ್ವೇಶ್ವರಯ್ಯನೋ ಆಗುವ ಅಗತ್ಯವಿಲ್ಲ. ತಲೆ ಎತ್ತಿ ತಿರುಗುವಷ್ಟು, ವ್ಯವಹಾರ ಮಾಡುವಷ್ಟು ವಿದ್ಯೆ ಇದ್ದರೆ ಸಾಕು. ಎಲ್ಲರೂ ಇಂಜಿನಿಯರೋ, ಡಾಕ್ಟರಾದರೆ, ವ್ಯಾಪಾರ ಮಾಡುವವರು ಯಾರು? ಕೃಷಿ ಮಾಡುವವರು ಯಾರು? ಹತ್ತಿರದಲ್ಲಿ ಸರಕಾರಿ ಶಾಲೆಯಿದೆ ಕಲಿಯಲಿ. ನಂತರ ಏನೋ ವ್ಯಾಪಾರವೋ ಕೃಷಿಯೋ ಮಾಡಿ ಊರಲ್ಲಿರಲಿ. ಆಗಾಗ್ಗೆ ಬರುತ್ತಾ ಹೋಗುತ್ತಾ ಇದ್ದರೆ ಮುದಿ ವಯಸ್ಸಿನಲ್ಲಿ ನಮಗೂ ನೆಮ್ಮದಿಯಾಗುತ್ತದೆ. ಆಸರೆಯೂ ಆಗುತ್ತದೆ.” ಪಾರ್ವತಿಯ ಮಾತು ಸರಿ ಎಂದು ಕಂಡರೂ, ಜೋಶಿಯವರಿಗೆ ತನ್ನ ಮಕ್ಕಳು ಊರಿಗೆ ಹೆಸರು ತರಬೇಕು. ತನಗೂ ಕೀರ್ತಿ ಬರಬೇಕು ಎಂದು ಬಯಸಿದ್ದರೂ ಕೊನೆಗೂ ತನ್ನ ಛಲ ಸಾಧಿಸಿಯೇ ಬಿಟ್ಟರು. ಜೋಶಿಯವರು ಪಾರ್ವತಿಯ ಮಾತಿಗೂ, ದೇಹಕ್ಕೂ ಕತ್ತರಿ ಇಟ್ಟರು. ಎರಡು ಮಕ್ಕಳಲ್ಲಿ ಸಂತಾನ ನಿಲ್ಲಿಸಿ ಬಿಟ್ಟರು. ಪುಟ್ಟಿ ಇಂಜಿನಿಯರ್ ಆಗಿ ಅಮೇರಿಕದಲ್ಲಿ, ಪುಟ್ಟ ಡಾಕ್ಟರಾಗಿ ಬೆಂಗಳೂರಿನಲ್ಲಿ. ಪುಟ್ಟಿ ಸಹಜವಾಗಿಯೇ ಇಂಜಿನಿಯರ್‌ನನ್ನು ಕೈ ಹಿಡಿದು ಕೆಲವು ವರ್ಷ ಗಂಡನೊಂದಿಗೆ ಮುಂಬೈಯಲ್ಲಿ ವಾಸಿಸಿದ್ದಳು. ತದನಂತರ ಅವಳ ಗಂಡನಿಗೆ ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿ ಕೆಲಸ ಸಿಕ್ಕಿತು. ಈಗ ಪುಟ್ಟಿ ಅಮೇರಿಕಾಕ್ಕೆ ಲಗ್ಗೆ ಹಾಕಿ ಒಂದೂವರೆ ವರ್ಷ ಆಯಿತು. ಆರು ತಿಂಗಳ ಮಗುವಿದೆ. ಬಾಣಂತನಕ್ಕೂ ಬರಲಿಲ್ಲ. ತನಗೆ ಕಂಪನಿಯಿಂದ ಫ್ರೀ ಸೌಲಭ್ಯವಿದೆ. ಆದುದರಿಂದ ಹೆರಿಗೆಯನ್ನು ಅಮೇರಿಕಾದಲ್ಲೇ ಮಾಡಿಸುತ್ತೇನೆ ಎಂದ. ಅಳಿಯಂದಿರ ಮಾತಿಗೆ ಜೋಷಿಯವರಿಗೆ ಮರು ಉತ್ತರಿಸಲಾಗಲಿಲ್ಲ. ಪಾರ್ವತಿಗೆ ತನ್ನ ಮೊಮ್ಮಗನನ್ನು ಕೈಯಲ್ಲಿ ಹಿಡಿದು ಆಡಿಸಲಿಲ್ಲವೆಂಬ ಕೊರಗು. ಇನ್ನು ಪುಟ್ಟನ ಕಥೆ. ಬೆಂಗಳೂರಿನಲ್ಲಿ ಮೆಡಿಕಲ್ ಕಲಿಯುವಾಗಲೇ ದೊಡ್ಡ ದೊಡ್ಡ ನೆಂಟಸ್ತಿಕೆಗಳು ಮನೆ ಬಾಗಿಲಿಗೆ ಬರತೊಡಗಿದವು. ಪಾರ್ವತಿಗೆ ಮಗನಿಗೆ ಊರಲ್ಲಿರುವ ಯಾವುದೋ ಮರ್ಯಾದಸ್ಧ ಕುಟುಂಬ ಒಂದರ ಹೆಣ್ಮಗಳನ್ನು ತರುವಾಸೆಯಿತ್ತು. ಇಲ್ಲಿಯೇ ಹತ್ತಿರದ ಊರಿಂದ ಹೆಣ್ಣನ್ನು ತಂದರೆ, ಮಗನೂ ಮೆಡಿಕಲ್ ಮುಗಿಸಿ ಇಲ್ಲಿಯೇ ಒಂದು ಡಿಸ್ಪನ್ಸರಿ ಇಟ್ಟುಕೊಂಡರೆ, ತಮ್ಮ ಕೊನೆಗಾಲದಲ್ಲಿ ಆಸರೆಯಾಗಬಹುದೆಂಬ ಕನಸು. ಆದರೆ ಪುಟ್ಟ ಮೆಡಿಕಲ್ ಮುಗಿಸಿ, ಕೆಲವು ವರ್ಷ ಕಳೆದ ಮೇಲೆ ಬೆಂಗಳೂರು ನಿವಾಸಿಯಾದ ತನ್ನ ಸಹ ವಿದ್ಯಾರ್ಥಿಯನ್ನೇ ಬಾಳ ಸಂಗಾತಿ ಮಾಡಿಕೊಂಡು, ತಂದೆ – ತಾಯಿಗೆ ಒಂದು ಸಣ್ಣ ಶಾಕ್ ಕೊಟ್ಟ. ಪತ್ನಿ ಸಮೇತ ತಿಂಗಳು ತಿಂಗಳೂ ಬರುತ್ತಿದ್ದ ಪುಟ್ಟ, ಮಗುವಾದ ಮೇಲೆ ಊರಿಗೆ ಬರುವುದು ಅಪರೂಪವಾಗತೊಡಗಿತು. ಹೆತ್ತು – ಹೊತ್ತ ಮುದಿಗೂಬೆಗಳಿಗೆ ಕೊನೆಗೆ ದೊರೆತದ್ದು ತೋಟದಲ್ಲಿನ ಹಣ್ಣಾಗಿ ಉದುರಿದ ಅಡಿಕೆಗಳು ಮಾತ್ರ.

ಜೋಶಿಯವರು ಮತ್ತೊಮ್ಮೆ ಪಾರ್ವತಮ್ಮನನ್ನು ನೋಡಿದರು. ನಲ್ವತ್ತು ವರ್ಷ ತನ್ನೊಂದಿಗೆ ಹೆಗಲು ಕೊಟ್ಟು ತೋಟದಲ್ಲಿ ದುಡಿದ ಜೀವ ಈಗ ಮಾಗಿ ಹಣ್ಣಾಗಿದೆ. ಕೆನ್ನೆಗಳು ಗುಳಿ ಬಿದ್ದಿವೆ. ಕಪ್ಪು ಕಲೆಗಳು ಮುಖ ತುಂಬಾ ಆವರಿಸಿದೆ. ಹಣೆಯಲ್ಲಿ ನೆರಿಗೆಯ ರಾಶಿಗಳು. ತಲೆ ತುಂಬಾ ಬಿಳಿ ಕೂದಲು. ಗುಳಿ ಬಿದ್ದ ಕಣ್ಣುಗಳು ಕುತ್ತಿಗೆಯಡಿಯಲ್ಲಿ ಕಂಡುಬರುವ ಜೋತು ಬಿದ್ದ ಚರ್ಮಗಳು ಒಣಗಿ ಹಿಪ್ಪೆಯಾದ ಕಬ್ಬಿನ ಜಲ್ಲೆಯಂತಹ ಎರಡು ಕೈಗಳು. ಪಾದದ ಹಿಮ್ಮಡಿ ಸುತ್ತ ಬಿರುಕು ಬಿಟ್ಟು, ಒಡೆದ ಚರ್ಮಗಳು. ಆ ಬಿರುಕುಗಳಲ್ಲಿ ಸೇರಿಕೊಂಡ ತೋಟದ ಕೆಸರುಗಳು. ಇವಳೇ ಏನು ನನ್ನ ನಲ್ವತ್ತು ವರ್ಷದ ಹಿಂದಿನ ಪಾರೂ? ಜೋಶಿಯವರು ಹೆಂಡತಿಗೆ ಕಾಣದಂತೆ ಕಣ್ಣೀರು ಒರೆಸಿಕೊಂಡರು. ಅಷ್ಟು ಹೊತ್ತಿಗೆ ಮೊಬೈಲ್ ಗುಣ ಗುಟ್ಟ ತೊಡಗಿತು. ಜೋಶಿಯವರ ಕೈಯಲ್ಲಿ ಮೊಬೈಲ್ ಯುವಾಗಲೂ ತಪ್ಪುವುದಿಲ್ಲ. ಯಾಕೆಂದರೆ ಮಕ್ಕಳ ಮೆಸೇಜ್ ಆಗಾಗ್ಗೆ ಬರುತ್ತಾ ಇದೆ. ಆದುದರಿಂದ ಅವರ ಮೊಬೈಲ್ ಅವರಿಗೆ ಮಕ್ಕಳು ಮರಿ – ಮಕ್ಕಳಾಗಿವೆ. ಜೋಶಿಯವರು ಮೊಬೈಲ್ ಓದತೊಡಗಿದರು. ಅವರ ಮುಖ ಮಂದಹಾಸಗೊಂಡಿತು.

“ಏ, ಪಾರೂ, ಪುಟ್ಟಿಯ ಮೆಸೇಜ್. ಆನ್‌ಲೈನ್‌ಗೆ ಬರಬೇಕಂತೆ”. ಇಷ್ಟು ಕೇಳಿದ್ದೇ ತಡ, ಪಾರೂ ಕೈಯಲ್ಲಿದ್ದ ಹಣ್ಣಡಕೆಯನ್ನು ಅಲ್ಲಿಯೇ ಬಿಸಾಡಿ ಎದುರು ನಿಂತಳು. ತುಂಬಾ ಹೊತ್ತು ಬಾಗಿ ಕುಳಿತಿದ್ದು, ಒಮ್ಮೆಲೇ ಎದ್ದು ನಿಂತುದರಿಂದಲೋ ಏನೋ ಸೊಂಟ ಹಿಡಿದುಕೊಂಡಂತಾಗಿ “ಅಮ್ಮಾ” ಎಂದು ಚೀರಿದಳು ಆದರೂ ಸಾವರಿಸಿಕೊಂಡು ಏದುಸಿರು ಬಿಡುತ್ತಾ ಮನೆಯ ಕಡೆ ಸಾಗಿದಳು. “ನಿಧಾನ” “ನಿಧಾನ” ಎಂದು ಜೋಶಿಯವರು ಎಚ್ಚರಿಸುತ್ತಿದ್ದರೂ, ಪಾರ್ವತಮ್ಮನಿಗೆ ಅದಾವುದು ಕೇಳಿ ಬರಲಿಲ್ಲ. ಮನೆಯೊಳಗೆ ಬಂದು ಕಂಪ್ಯೂಟರ್ ಸ್ವಿಚ್ ಹಾಕಿದಾಗಲೇ ಗೊತ್ತಾದುದು ಕರೆಂಟು ಇಲ್ಲವೆಂದು. ಅವಳಿಗೆ ನಿರಾಸೆಯಾಯಿತು. ಕರೆಂಟು ಬಂದೊಡನೆ ಆನ್‌ಲೈನ್‌ಗೆ ಬರುತ್ತೇನೆಂದು ಮೆಸೇಜ್ ಕೊಡಲು ಗಂಡನಿಗೆ ತಿಳಿಸಿ, ಅಲ್ಲಿಯೇ ಕಂಪ್ಯೂಟರ್ ಹತ್ತಿರ ಕುಳಿತುಕೊಂಡಳು. ಫ್ಯಾನಿನ ಗಾಳಿ ಜೋರಾಗಿ ಬೀಳತೊಡಗಿದಾಗ ನಿದ್ದಯಿಂದ ಅವಳಿಗೆ ಎಚ್ಚರವಾಗಿ, ಕಂಪ್ಯೂಟರ್ ಸ್ವಿಚ್ ಹಾಕಿ ಅನ್‌ಲೈನಿಗೆ ಬಂದಳು. ಮಗಳೊಡನೆ ಮನಸಾರೆ ಮಾತನಾಡಿದಳು. ವೆಬ್‌ಕೆಮರಾದಲ್ಲಿ ಮೊಮ್ಮಗನನ್ನು ನೋಡಿದಳು. ಗಂಡನನ್ನು ಕರೆದು ತೋರಿಸಿದಳು. ಜೋಶಿಯವರು ಮಗಳೊಡನೆ ಊರಿಗೆ ಬರುವ ವಿಷಯ ಪ್ರಸ್ತಾಪಿಸಿದರು. ಸದ್ಯಕ್ಕೆ ಊರಿಗೆ ಬರುವ ಅವಕಾಶ ಇಲ್ಲವೆಂದು ತಿಳಿದಾಗ ಅವರಿಗೆ ನಿರಾಶೆಯಾಯಿತು.

“ನೋಡ್ರೀ, ಮಗು ಹೇಗೆ ಕವಚಿ ಬೀಳುತ್ತಾ ಇದ್ದಾನೆ. ಒಮ್ಮೆ ಎತ್ತಿ ಕೊಳ್ಳುವಾ ಅನಿಸುತ್ತೆ. ಏನು ಮಾಡುವುದು ಆ ಭಾಗ್ಯ ನಮಗಿಲ್ಲವಲ್ಲ” ಎಂದು ಹಲುಬಿದಳು ಪಾರು. ಜೋಶಿಯವರು ಮೂಗನಂತೆ ಸುಮ್ಮನೆ ಕೇಳಿಸಿಕೊಳ್ಳುತ್ತಿದ್ದರೇ ಹೊರತು ಚಕಾರವೆತ್ತಲಿಲ್ಲ.

“ವೀಸಾ ಕಳುಹಿಸುತ್ತೇವೆ, ಅಮ್ಮ – ಅಪ್ಪ ಬನ್ನಿ. ಒಂದು ಮೂರು ತಿಂಗಳು ಇದ್ದು ಹೋಗಬಹುದು ಎಂದು ಪುಟ್ಟಿ ಹೇಳುತ್ತಿದ್ದಾಳೆ. ಈ ತೋಟ ಬಿಟ್ಟು ಹೇಗೆ ಹೋಗುವುದು? ಮೇಲಾಗಿ ಮಂಡಿ ನೋವು. ಎಡಕಾಲು ಮಡಚಲು ಆಗುತ್ತಿಲ್ಲ. ಆಷ್ಟು ದೀರ್ಘ ಪ್ರಯಾಣ ಮಾಡಲು ನಮ್ಮಿಂದಲೂ ಸಾಧ್ಯವಿಲ್ಲ. ಅಯ್ಯೋ ದೇವರೇ ಮೊಮ್ಮಗನನ್ನು ಕಣ್ತುಂಬಾ ನೋಡಲು, ಎತ್ತಿ ಕೊಳ್ಳಲು ಭಾಗ್ಯವಿಲ್ಲವಲ್ಲ “ಪಾರ್ವತಮ್ಮಾ ಮುಖ ಮುಚ್ಚಿ ಅಳ ತೊಡಗಿದಳು. ಜೋಶಿ ಅಪರಾಧಿಯಂತೆ ಸ್ವಲ್ಪ ಹೊತ್ತು ನಿಂತವರು ಅಲ್ಲಿಂದ ಕಾಲ್ತೆಗೆದರು. ಅತ್ತು ಅತ್ತು ಸಮಾಧಾನವಾದ ಮೇಲೆ ತಾನೇ ಎದ್ದು ಬರುತ್ತಾಳೆ ಎಂದು ಅವರಿಗೆ ಗೊತ್ತಿತ್ತು.

ದಿನಗಳು ಉರುಳತೊಡಗಿದವು. ಮಳೆಗಾಲ ಮುಗಿಯುತ್ತಾ ಬಂತು. ಶೀನ ಬಂದು ಅಡಕೆ ಮರಗಳ ಬುಡ ಬಿಡಿಸಿ, ಗೊಬ್ಬರ ಹಾಕಿ ಹೋದ. ಇನ್ನು ಸ್ಟ್ರಿಂಕ್ಲರ್ ಚಾಲೂ ಮಾಡಬೇಕು. ಒಂದು ಸಮಯದಲ್ಲಿ ಹಟ್ಟಿಯಲ್ಲಿ ಮೂರು ಹಸುಗಳಿದ್ದವು. ಈಗ ಒಂದಕ್ಕೆ ಬಂದು ನಿಂತಿದೆ. ಕೈಕಾಲಿನಲ್ಲಿ ಬಲ ಇರುವಾಗ ಎಲ್ಲಾ ಕೆಲಸ ಮಾಡುವ ಹುಮ್ಮಸ್ಸಿತ್ತು. ತಾಕತ್ತಿತ್ತು. ಈಗ ದೇಹ ದಣಿದಿದೆ. ಕೆಲಸಕ್ಕೆ ಸ್ಪಂದಿಸುವುದಿಲ್ಲ. ವಿಶ್ರಾಂತಿ ಮಾಡಬೇಕು ಎನಿಸುತ್ತದೆ. ಪುಟ್ಟ ಹಾಗೂ ಪುಟ್ಟಿಯ ಮಗುವನ್ನು ನೋಡದೆ ವರ್ಷ ಎರಡು ಸಂದವು. ಇತ್ತ ಪುಟ್ಟ ಹಾಗೂ ಅವನ ಹೆಂಡತಿ, ಮಗು ಬರದೆ ಸುಮಾರು ಆರು ತಿಂಗಳು ಕಳೆದು ಹೋದುವು. ಜೋಶಿಯವರಿಗೆ ಮೊದ ಮೊದಲು ಏನೋ ಕಳೆದುಕೊಂಡ ಅನುಭವ ಆಗುತ್ತಿದ್ದು, ಈಗ ಎಲ್ಲಾ ಒಗ್ಗಿ ಹೋಗಿದೆ. ಅವರು ಒಂದು ತರಹ ನಿರ್ಲಿಪ್ತನಂತೆ ಇದ್ದು ಬಿಡುತ್ತಿದ್ದರು. ಜಗತ್ತಿನಲ್ಲಿ ಏನನ್ನು ಕಳೆದು ಕೊಂಡಿಲ್ಲವೋ ಅವನು ಏನನ್ನೂ ಪಡೆದಿಲ್ಲ. “ತನಗೆ ಎಲ್ಲವೂ ಇದೆ” ಎಂದು ಭಾವಿಸುವವನಿಗೆ ಕೊರತೆಯ ಪ್ರಶ್ನೆ ಏಳುವುದಿಲ್ಲ. ಜೋಶಿಯವರಿಗೆ ಬದುಕಿನ ಅವಧಿ ಮುಖ್ಯವಾಗಿಲ್ಲ. ಬದುಕಿನ ರೀತಿ ಮುಖ್ಯವಾಗಿದೆ. ಆದರೆ ಪಾರ್ವತಮ್ಮನಿಗೆ ಮಾತ್ರ ತಾನು ಎಲ್ಲವನ್ನೂ ಕಳೆದುಕೊಂಡೆ ಇನ್ನು ಯಾಕೆ ಬದುಕಬೇಕು ಎಂದು ಎಣಿಸತೊಡಗಿದಂತೆ ಅವರ ಆರೋಗ್ಯ ಹದಗೆಟ್ಟತೊಡಗಿತು. ಮಾತು ಕಡಿಮೆಯಾಗತೊಡಗಿತು. ‘ನಗು’ ಮುಖದಲ್ಲಿ ಸುಳಿಯದೆ ತಿಂಗಳುಗಳೇ ಉರುಳಿದವು. ಮಧ್ಯರಾತ್ರಿ ಎಚ್ಚರವಾದರೆ ಮತ್ತೆ ಮಲಗುತ್ತಿರಲಿಲ್ಲ. ನಿದ್ದೆ ಮಾಡುತ್ತಿದ್ದ ಗಂಡನನ್ನು ಎಬ್ಬಿಸಿ ‘ನಿದ್ರೆ ಮಾಡುತ್ತಿದ್ದೀರಾ’ ಎಂದು ಕೇಳತೊಡಗಿದಳು ಕೊನೆಗೆ ಇಬ್ಬರೂ ಮಧ್ಯರಾತ್ರಿಯಲ್ಲಿ ಗತಕಾಲದ ನೆನಪುಗಳನ್ನು ಮೆಲಕು ಹಾಕುತ್ತಿದ್ದರು. ಜೋಶಿಯವರು ಅಡುಗೆ ಕೋಣೆಗೆ ಹೋಗಿ ಬಿಸಿ ಬಿಸಿ ಎರಡು ಕಪ್ ಕಾಫಿ ಮಾಡಿಕೊಂಡು ಬಂದು ಒಟ್ಟಿಗೆ ಹೀರುತ್ತಾ ಸಮಯ ಕೊಲ್ಲುತ್ತಿದ್ದರು- ಹೀಗೆ ಇದೇ ರೀತಿ ತುಂಬಾ ತಿಂಗಳಿಂದ ನಡೆಯುತ್ತಾ ಬಂತು. ಒಂದು ದಿನ ಪಾರ್ವತಿ ಏನೋ ಆಲೋಚಿಸಿಕೊಂಡು ಗಂಡನಲ್ಲಿ ಒಂದು ಬೇಡಿಕೆಯನ್ನಿಟ್ಟಳು.

“ನೀವು ಕೋಪ ಮಾಡುವುದಿಲ್ಲವಾದರೆ ಒಂದು ಮಾತು ಹೇಳುತ್ತೇನೆ” ಪಾರ್ವತಿ ಹೆದರುತ್ತಾ ಅಂದಳು. ಜೋಷಿಯವರು ಹೆಂಡತಿಯ ಮುಖ ನೋಡುತ್ತಾ ಏನು ಎಂಬಂತೆ ಪ್ರಶ್ನಿಸಿದರು.

“ನೋಡಿ. ಮಕ್ಕಳು ಬೆಳೆದು ದೊಡ್ಡವರಾಗಿ ಅವರ ದಾರಿ ನೋಡಿಕೊಂಡಿದ್ದಾರೆ. ನೀವು ಆಗಾಗ್ಗೆ ಊರಿನ ಪಂಚಾಯತು, ಮೀಟಿಂಗ್, ಅಂತ ಹೊರಗೆ ಹೋಗುತ್ತಾ ಇರುತ್ತೀರಿ. ನಾನೊಬ್ಬಳೇ ಈ ಐದು ಎಕ್ರೆ ಜಾಗೆಯಲ್ಲಿ ಮುದಿ ಕೊರಡಿನಂತೆ ಬಿದ್ದುಕೊಳ್ಳಲು ಕಷ್ಟವಾಗುತ್ತಾ ಇದೆ. ಆರೋಗ್ಯವೂ ಸರಿಯಿಲ್ಲ. ಮಂಡಿನೋವಿನಿಂದ ನಡೆಯಲು ತ್ರಾಸವಾಗುತ್ತಿದೆ. ಮಕ್ಕಳು, ಮೊಮ್ಮಕ್ಕಳಂತೂ ಈ ಮನೆಯಲ್ಲಿ ಓಡಾಡುವುದು ಇನ್ನು ಕನಸೇ ಸರಿ. ದಿನ ಕಳೆದಂತೆ ಒಂದು ರೀತಿಯ ಭಯ ನನ್ನನ್ನು ಅವರಿಸುತ್ತಿದ. ಸಾವಿನ ಭಯ ನನಗಂತೂ ಇಲ್ಲ. ಆದರೆ ಸಾವು ಆದರೂ ಚೆಂದದಲ್ಲಿ ಬಂದು ಹೋದರೆ ಬೇಸರವಿಲ್ಲ. ಆದರೆ ತೋಟದಲ್ಲಿಯೋ, ಅಂಗಳದಲ್ಲಿಯೋ ಬಿದ್ದು ನರಳಾಡುತ್ತಿದ್ದರೆ, ನಿಮಗೆ ಸುದ್ದಿ ತಲುಪಿಸಲಾದರೂ ಯಾರಾದರೂ ಬೇಡವೇ? ಅದಕ್ಕಾಗಿ ನಮ್ಮ ಮನೆಗೆ ತಾಗಿರುವ ಆ ಹಂಚಿನ ಶೆಡ್ ಖಾಲಿ ಇದೆಯಲ್ಲಾ, ಅದನ್ನು ಯಾರಿಗಾದರೂ ಸಣ್ಣ ಕುಟುಂಬಕ್ಕೆ ಬಾಡಿಗೆ ಇಲ್ಲದೆ, ಉಳಕೊಳ್ಳಲು ಕೊಟ್ಟರೆ ನನಗೂ ಒಂದು ಆಸರೆಯಾಗುತ್ತದೆ ಧೈರ್ಯವಾಗುತ್ತದೆ.”

ಜೋಷಿಯವರ ಮನ ಕರಗಿತು. ಮದುವೆಯಾಗಿ ಇಂದಿನವರೆಗೆ ಒಂದು ಬೇಡಿಕೆ ಇಟ್ಟವಳಲ್ಲ ಪಾರು. ನಾನು ಹೇಳಿದುದನ್ನು ಶಿರಸಾ ವಹಿಸಿದವಳು. ಈಗ ಬದುಕಿನ ಅಂತಿಮ ಘಟ್ಟದಲ್ಲಿ, ಹೆದರಿಕೊಂಡು, ಅದೂ ಮಕ್ಕಳ ಆಸರೆ ತಪ್ಪಿತೆಂದು ನಿಶ್ಚಯವಾದ ಮೇಲೆ ಒಂದು ಬೇಡಿಕೆಯಿಟ್ಟಿದ್ದಾಳೆ. ಅದು ಸರಿಯಾದುದೇ ಎಂದು ಜೋಶಿಯವರಿಗೆ ಗೊತ್ತಾಯಿತು. “ನೀನು ಹೇಳುವುದು ಸರಿ ಪಾರು. ಹಿಂದಿನ ಧೈರ್ಯ, ಗತ್ತು ನನ್ನಲ್ಲೂ ಉಳಿದಿಲ್ಲ. ರಾತ್ರಿಯಾದ ಮೇಲೆ ಮನೆಯ ಹೊರಗೆ ಬರಲು ಭಯವಾಗುತ್ತಿದೆ. ಶೀನನಲ್ಲಿ ಹೇಳಿ ವ್ಯವಸ್ಥೆ ಮಾಡುವ. ಆದರೆ ನಮ್ಮವರೇ ಸಿಕ್ಕಿದರೆ ಬಹಳ ಒಳ್ಳೇದಿತ್ತು”.

“ಯಾರೂ ಆಗಬಹುದು, ಎಲ್ಲರೂ ಮನುಷ್ಯರೇ. ಅಲ್ಲೇ ಬೇಯಿಸಿ ತಿನ್ನುತ್ತಾರೆ. ನಮಗೇನು ತೊಂದರೆಯಿಲ್ಲ.” ಪಾರ್ವತಮ್ಮ ಅಂದಳು.

“ಹಾಗಲ್ಲ ಪಾರು. ಸ್ವಲ್ಪ ಶುಚಿತ್ವ ಕಾಪಾಡಿಕೊಂಡರೆ ಒಳ್ಳೇದು ಮೇಲಾಗಿ ಸಸ್ಯಹಾರಿಗಳಾಗಿರಬೇಕು. ಮಕ್ಕಳೂ ಜಾಸ್ತಿಯಾಗಿರಕೂಡದು. ನಮ್ಮ ಮನೆಗೆ ಸಂಪರ್ಕ ಇರಬಾರದು. ಏನಿದ್ದರೂ ಹೊರಗೇನೇ” ಜೋಷಿಯವರು ಕಂಡೀಶನ್ ಅತಿಯಾಯಿತೇನೋ ಎಂದು ಹೆಂಡತಿ ಮುಖ ನೋಡಿದರು. ಪಾರ್ವತಿ ಒಮ್ಮೆ ಅನುಮತಿ ಸಿಕ್ಕಿತಲ್ಲಾ ಎಂಬ ಖುಷಿಯಿಂದ ತಲೆ ಅಲ್ಲಾಡಿಸಿದಳು.

ಕೆಲವು ವಾರ ಕಳೆದ ಮೇಲೆ, ಶೀನ ಒಬ್ಬನನ್ನು ಕರಕೊಂಡು ಬಂದ.

“ಧನೀ. ಇವನು ಶೇಖರ. ಇಲ್ಲಿಯೇ ಕೂಲಿ ಕೆಲಸಕ್ಕೆ ಹೋಗುತ್ತಾ ಇದ್ದಾನೆ. ಬಾಡಿಗೆಗೆ ಮನೆ ಹುಡುಕುತ್ತಾ ಇದ್ದ. ನಾನೇ ಕರೆಕೊಂಡು ಬಂದೆ. ಒಂದೇ ಮಗು. ಒಟ್ಟು ಮೂರು ಜನ ಧನೀ”

ಜೋಶಿಯವರು ಅವನನ್ನು ಒಮ್ಮೆ ದೀರ್ಘವಾಗಿ ನೋಡಿದರು. ಸುಮಾರು ೩೦-೪೦ ವರ್ಷದ ಕಟ್ಟು ಮಸ್ತು ಆಳು. ಅಗತ್ಯ ಬಿದ್ದಾಗ ನಮ್ಮ ತೋಟದ ಕೆಲಸಕ್ಕೂ ಸಿಕ್ಕಿಯಾನು ಎಂದು ಮನದಲ್ಲೇ ಭಾವಿಸಿದರು.

“ನೋಡಪ್ಪ, ಶೇಕರ, ನನ್ನ ಕೆಲವು ಶರ್ತಯಿದೆ. ಕುಡಿಯಬಾರದು. ಕುಡಿದದ್ದು ಏನಾದರೂ ಗೊತ್ತಾದರೆ, ಮರುದಿವಸವೇ ಮನೆ ಖಾಲಿ ಮಾಡಿಸುತ್ತೇನೆ. ತೋಟದ ಮನೆಯ ಯಾವುದೇ ವಸ್ತುವನ್ನು ಕದಿಯಬಾರದು. ನಿಯತ್ತಿನಲ್ಲಿರೆಬೇಕು. ಹೆಚ್ಚಾಗಿ ಮನೆ, ಅಂಗಳ ಕ್ಲೀನ್ ಇಡಬೇಕು, ಎಲ್ಲಾ ವಿಷಯ ಶೀನನಿಗೆ ಹೇಳಿದ್ದೇನೆ. ಬಾಡಿಗೆ ಬೇಡ. ಕರೆಂಟು ಬಿಲ್ಲು ನೀನು ಕಟ್ಟಿದರೆ ಸಾಕು” ಜೋಶಿಯವರು ಇರುವ ವಿಷಯವನ್ನು ಮನದಟ್ಟು ಮಾಡಿದರು. “ಆಯಿತು ಧನೀ. ಶೀನ ಎಲ್ಲಾ ಹೇಳಿದ್ದಾನೆ ಧನೀ” ಶೇಖರ ಕೀರಲು ಸ್ವರದಲ್ಲಿ ಹೇಳಿದ.

“ಸರಿ” ಎಂದು ಹೇಳಿ ಜೋಷಿಯವರು ಒಳಗೋದರು. ಪಾರ್ವತಮ್ಮನಿಗೆ ತುಂಬಾ ಸಂತೋಷವಾಯಿತು. ಮರುದಿನವೇ ಶೇಖರನ ಕುಟುಂಬ ಮತ್ತು ಪಾತ್ರೆ ಪಗಡಿಗಳು ರಿಕ್ಷಾದಲ್ಲಿ ಬಂದಾಯಿತು.

ಶೇಖರ ಅಂಗಳದಲ್ಲಿ ನಿಂತವನೇ ತನ್ನ ಹೆಂಡತಿಯನ್ನು ಪಾರ್ವತಮ್ಮನಿಗೆ ತೋರಿಸಿದ. ಶೇಕರನ ಹೆಂಡತಿ ವಂದನೆಯ ರೀತಿಯಲ್ಲಿ ತಲೆಬಾಗಿ “ನಮಸ್ಕಾರ ಅಮ್ಮ” ಅಂದಳು. ಕಂಕುಳದಲ್ಲಿ ಸುಮಾರು ಎರಡು ವರ್ಷದ ಹೆಣ್ಣು ಮಗು. ಹರಿದ ಫ್ರಾಕ್, ಸೊಂಟದ ಕಳಗೆ ಬತ್ತಲೆ, ಕೆದರಿದ ಗುಂಗುರು ತಲೆಕೂದಲು, ಮುಖ ಕೈಕಾಲುಗಳೆಲ್ಲಾ ಧೂಳಿನಿಂದ ಆವೃತ್ತವಾಗಿತ್ತು. ತೊಡೆ, ಕಾಲಿನ ಸಂಧಿಯಲೆಲ್ಲಾ ನಿಂತು ಹೊಯ್ದ ಉಚ್ಚೆಯ ಗುರುತುಗಳು. ಮಗು ಮಾತ್ರ ದಷ್ಟಪುಷ್ಟವಾಗಿದ್ದು ಲವಲವಿಕೆಯಿಂದ ಇದ್ದ ಹಾಗೆ ಕಾಣುತ್ತಿತ್ತು. ತೋಟದ ಮನೆಗೆ ಬಂದ ದಂಪತಿಗಳು ಮನೆ ಶುಚಿತ್ವಕ್ಕೆ ತೊಡಗಿದರು. ಮನೆಯ ಒಳಗೆಲ್ಲಾ ಶೇಖರ ಗುಡಿಸಿ, ಧೂಳು ಜಾಡಿಸಿ ಶುಚಿ ಮಾಡುತ್ತಿದ್ದರೆ, ಅಂಗಳವನ್ನು ಶೇಖರನ ಹೆಂಡತಿ ಗುಡಿಸುತ್ತಿದ್ದಳು. ಮಗು ನೆಲದಲ್ಲಿ ಕುಳಿತು ಮಣ್ಣಿನಲ್ಲಿ ಅಟವಾಡುತ್ತಿತ್ತು. ಪಾರ್ವತಮ್ಮ ಮನೆಯ ಕಿಟಕಿಯಿಂದ ಎಲ್ಲವನ್ನೂ ನೋಡುತ್ತಿದ್ದಳು. “ಪರವಾಗಿಲ್ಲ” ಎಂದುಕೊಂಡರು. ರಾತ್ರಿ ಊಟ ಮುಗಿಸಿ, ಜೋಶಿ ದಂಪತಿಗಳು ಮನೆಯಲ್ಲಿ ಹರಟೆ ಹೊಡೆಯುತ್ತಿದ್ದರು. ತೋಟದ ಮನೆಯಿಂದ ಮಾತು, ನಗು ಕೇಳಿ ಬರುತ್ತಿತ್ತು. ಪಾರ್ವತಮ್ಮನಿಗೆ ತುಂಬಾ ಸಂತೋಷವಾಯಿತು. ಬಹಳ ಹತ್ತಿರದಲ್ಲಿ ನಮ್ಮವರು ಇದ್ದಷ್ಟು ಖುಷಿಯಾಗುತ್ತಿತ್ತು. ಸ್ವಲ್ಪ ಹೊತ್ತಾದ ಮೇಲೆ ಕೊಳಲಿನ ಗಾಯನ ಅಲೆ ಅಲೆಯಾಗಿ ಗಾಳಿಯಲ್ಲಿ ತೇಲಿ ಬಂತು. ಪಾರ್ವತಮ್ಮ ಕಿಟಕಿ ಬಾಗಿಲು ಓರೆ ಮಾಡಿ ನೋಡಿದಳು ಶೇಖರ ಹೊರ ಬಾಗಿಲಿನ ಮೆಟ್ಟಿಲಲ್ಲಿ ಕುಳಿತು, ತೋಟದ ಕಡೆಗೆ ಮುಖಮಾಡಿಕೊಂಡು ಕೊಳಲು ಭಾರಿಸುತಿದ್ದ. ಇಂಪಾದ ಗಾಯನ. ಹಳ್ಳಿಯ ಆ ಮೌನ ವಾತಾವರಣದಲ್ಲಿ ಶೇಖರನ ಕೊಳಲು ವಾದನ ಮನಸ್ಸಿಗೆ ಹಿತ ನೀಡಿತು. ಈ ಕೂಲಿಯವನಲ್ಲೂ ಪ್ರತಿಭೆ ಅಡಗಿದೆಯಲ್ಲಾ ಎಂದು ಪಾರ್ವತಮ್ಮನಿಗೆ ಅಶ್ಚರ್ಯವಾಯಿತು.

ದಿನಗಳು ಉರುಳಿದವು. ಪಾರ್ವತಮ್ಮ ತಮ್ಮ ಮನೆಯಲ್ಲಿ ಉಳಿದ ಫಲಾಹಾರ, ಅನ್ನ ಸಾಂಬಾರುಗಳನ್ನು ಶೇಖರನ ಹೆಂಡತಿಗೆ ಕರೆದು ನೀಡುತ್ತಿದ್ದಳು. ಅಗಾಗ್ಗೆ ಮಗುವಿಗೆ ಕೂಡಾ ಬಿಸ್ಕಿಟು, ಹಣ್ಣು ಕೊಡುತ್ತಿದ್ದಳು. ಅ ಮಗು ಕೂಡಾ ಪಾರ್ವತಮ್ಮನ ಕಂಡ ಕೂಡಲೇ “ಅಮ್ಮ, ಅಮ್ಮ” ಎಂದು ಓಡಿ ಬರುತ್ತಿತ್ತು. ಪಾರ್ವತಮ್ಮನಿಗೆ ಮಗು ಎತ್ತಿ ಕೊಳ್ಳಲು ಆಸೆಯಾಗುತ್ತಿದ್ದರೂ, ಎಲ್ಲಿ ಪತಿಯ ಬೈಗಳನ್ನು ಕೇಳಬೇಕಾದಿತೋ ಎಂದು ಹೆದರಿಕಯಾಗುತ್ತಿತ್ತು. ತನ್ನ ಮನಸ್ಸಿನ ಆಸೆಯನ್ನು ಅದುವಿಟ್ಟುಕೊಳ್ಳುತ್ತಿದ್ದಳು. ಪ್ರತೀ ದಿನ ಬೆಳಗ್ಗೆ ಮನೆಯ ಹಿಂಬಾಗಿಲನ್ನು ತೆರೆದೊಡನೆ ಆ ಮಗು ಓಡಿಕೊಂಡು ಬರ ತೊಡಗಿತು. ಪಾರ್ವತಮ್ಮ ಆ ಮಗುವನ್ನು ಪುಟ್ಟೀ ಎಂದು ಕರೆಯುತ್ತಿದ್ದರು. ಅಂಗಳದಲ್ಲಿದ್ದ ತಮ್ಮ ಚಪ್ಪಲಿಯನ್ನು ಕಾಲಿಗೆ ಸಿಕ್ಕಿಸಿಕೊಂಡು, ಬೀಳುತ್ತಾ ಏಳುತ್ತಾ ಮಗು ಓಡಾಡುವುದನ್ನು ನೋಡಿದಾಗ ಪಾರ್ವತಮ್ಮನಿಗೆ ನಗು ಬರುತ್ತಿತ್ತು. ಒಮ್ಮೊಮ್ಮೆ ಸೀದಾ ಓಡಿಕೊಂಡು ಬಂದು “ಅಮ್ಮ” ಎಂದು ಪಾರ್ವತಮ್ಮನ ಸೆರಗು ಎಳೆದು, ಸೀರೆಗೆ ಜೋತುಬಿದ್ದಾಗ ಎತ್ತಿ ಕೊಳ್ಳದೆ ಇರಲು ಸಾಧ್ಯವಾಗಲಿಲ್ಲ. ಪತಿಯ ಕಣ್ಣು ತಪ್ಪಿಸಿ ಪಾರ್ವತಮ್ಮ ಮಗುವನ್ನು ಎತ್ತಿ, ಮುದ್ಧಿಸಿ, ಬಿಸ್ಕಿಟು ಕೊಟ್ಟು ಕಳುಹಿಸುತಿದ್ದರು. ಬರು ಬರುತ್ತಾ ಪುಟ್ಟಿ ಮನೆಯ ಒಳಗೆ ಬಂದು ಅಡುಗೆ ಕೋಣೆಗೆ, ಕಾಲಿಡತೊಡಗಿತು. ಪತಿ ಎಲ್ಲಿ ನೋಡಿ ಬಿಡುತ್ತಾರೋ ಎಂದು ಹೆದರಿ ಪಾರ್ವತಮ್ಮ ಬೇಗ ಬಿಸ್ಕಿಟು ಕೊಟ್ಟು ಸಾಗ ಹಾಕುತ್ತಿದ್ದರು. ಒಮ್ಮೊಮ್ಮೆ ಸೀದಾ ಮಗು ಒಳಗೆ ಬಂದು ಅಡುಗೆ ಕೋಣೆಯ ನೆಲದಲ್ಲಿ ಕುಳಿತುಕೊಂಡು “ಅಮ್ಮಾ” ಎನ್ನುತ್ತಿತ್ತು. ತೀರಾ ಹಸಿವಾದಾಗ ಮಗು ಈ ರೀತಿ ಮಾಡುತ್ತಿತ್ತು. ಪಾರ್ವತಮ್ಮ ಬಾಗಿಲು ಓರೆ ಮಾಡಿ, ತಿನಿಸು ಕೊಟ್ಟು ಕಳುಹಿಸಿಕೊಡುತ್ತಿದ್ದರು. ಒಮ್ಮೆ ಈ ರೀತಿ ಮಾಡುವುದು ಜೋಶಿಯವರ ಕಣ್ಣಿಗೆ ಕಂಡಿತು. ಅವರು ಕೋಪದಿಂದ ಕೆಂಡಮಂಡಲವಾದರು. ಪಾರ್ವತಮ್ಮನಿಗೆ ಬಾಯಿಗೆ ಬಂದಂತೆ ಬೈದರು. “ನೀನು ರೀತಿ ರಿವಾಜು ಎಲ್ಲಾ ಮರೆತು ಬಿಟ್ಟಿದ್ದಿಯಾ. ಈ ರೀತಿ ಆಗುತ್ತದೆ ಎಂದು ಮನೆ ಕೊಟ್ಟಾಗಲೇ ನನಗೆ ತಿಳಿದಿತ್ತು. ಆದರೂ ನಿನ್ನ ಅವಸ್ಥೆ ನೋಡಲಿಕ್ಕಾಗದೆ ಒಪ್ಪಿ ಬಿಟ್ಟೆ. ಈಗ ನೀನು ಅಂತಸ್ತು ಶುಚಿತ್ವ, ಎಲ್ಲಾ ಮರೆತುಬಿಟ್ಟು ನಡಕೊಳ್ಳುತ್ತೀಯಾ.” ಜೋಶಿಯವರ ಕೋಪ ತಣಿಯಲಿಲ್ಲ. ಅಡುಗೆ ಕೋಣೆಯಿಂದ ಹಾಲಿಗೆ, ಹಾಲಿನಿಂದ ಅಡುಗೆ ಕೋಣೆಗೆ ಶತಪಥ ತಿರುಗುತ್ತಿದ್ದರು. ಮಗು ಅವರ ಕೂಗಾಟಕ್ಕೆ ಹೆದರಿ ಗೋಡೆಗೆ ಅವಿತುಕೊಂಡು ನಿಂತಿತು. ಮಗುವನ್ನು ಕಂಡ ಜೋಶಿಯವರು ತನ್ನ ಎಡಗೈಯಲ್ಲಿ ಮಗುವಿನ ರಟ್ಟೆ ಹಿಡಿದು ದರ ದರ ಎಳೆದುಕೊಂಡು ಬಾಗಿಲ ಹೊರಗೆ ಮಾಡಿ “ಅನಿಷ್ಟದ್ದು” ಎಂದು ವಟಗುಟ್ಟುತ್ತಾ ಬಾಗಿಲು ಹಾಕಿ ಚಿಲಕ ಹಾಕಿ ಬಿಟ್ಟರು. ಪಾರ್ವತಮ್ಮ ಹೆದರಿ ಚಕಾರವೆತ್ತಲಿಲ್ಲ. ಇದಾದ ನಂತರ ಪಾರ್ವತಮ್ಮ ಮಗುವಿನೊಂದಿಗೆ ಅಂಗಳದಲ್ಲಿಯೇ ಮಾತಾಡಿಸಿ, ಏನಾದರೂ ಕೊಡುವುದನ್ನು ಅಲ್ಲಿಯೇ ಕೊಟ್ಟು ಒಳಗೆ ಬಂದು ಬಾಗಿಲು ಹಾಕಿ ಬಿಡುತ್ತಿದ್ದರು. ಮಗು ಅಗಾಗ್ಗೆ ಬಂದು ಬಾಗಿಲು ತಟ್ಟಿದರೂ ಅವರು ಗಟ್ಟಿ ಮನಸ್ಸು ಮಾಡಿಕೊಂಡು ಸುಮ್ಮನೆ ಕುಳಿತಿರುತ್ತಿದ್ದರು. ಮಗು ಬಾಗಿಲು ತಟ್ಟಿ, “ಅಮ್ಮಾ” ಎಂದು ಕರೆದು, ಸುಸ್ತಾಗಿ ಹಿಂದೆ ಹೋಗುತ್ತಿತ್ತು.

ಪುಟ್ಟಿ ಅಮೇರಿಕಾದಿಂದ ಬರುವುದು ಮರೀಚಿಕೆಯಾದ ಮೇಲೆ, ಪಾರ್ವತಮ್ಮನಿಗೆ ಪುಟ್ಟಿಯ ಮಗು ನೋಡುವ ಆಸೆಯೂ ಕಮ್ಮಿಯಾಗತೊಡಗಿತು. ‘ಪಾಲಿಗೆ ಬಂದದ್ದು ಪಂಚಾಮೃತ’ ಎಂದುಕೊಂಡು ದಿನ ದೂಡುತ್ತಿದ್ದರು. ಮನಸ್ಸಾದಾಗಲೆಲ್ಲಾ ‘ಆನ್ ಲೈನ್’ ನಲ್ಲಿ ಮಾತಾಡಿಕೊಂಡು ತೃಪ್ತಿ ಪಡುತ್ತಿದ್ದರು. ಮಗ ಬೆಂಗಳೂರಿಂದ ಬರುವುದು ಕೂಡಾ ಕಡಿಮೆಯಾಗತೊಡಗಿತು. ಪುಟ್ಟ ಕೂಡಾ ಬೆಂಗಳೂರಿಗೆ ಸೀಮಿತವಾದ ಎಂದು ಮನದಟ್ಟಾಗಲು ಪಾರ್ವತಮ್ಮನಿಗೆ ತುಂಬಾ ಸಮಯ ಹಿಡಿಯಲಿಲ್ಲ. ಈ ಎಲ್ಲಾ ನೋವನ್ನು ಗಂಡನೊಡನೆ ಹೇಳಿಕೊಳ್ಳಲೂ ಆಗದೆ, ಮನಸ್ಸಲ್ಲಿ ಇಟ್ಟುಕೊಳ್ಳಲೂ ಆಗದೆ ಚಡಪಡಿಸುತ್ತಿದ್ದರು. ಈ ಎಲ್ಲಾ ನೋವುಗಳು ಜೋಶಿಯವರಿಗೂ ಇತ್ತು. ಆದರೆ ಅವರು ತನ್ನ ಹೆಂಡತಿಗೆ ತೋರ್ಪಡಿಸುತ್ತಿರಲಿಲ್ಲ. ತಾನೂ ಕೂಡಾ ಅಳುತ್ತಾ, ದುಃಖವನ್ನು ಹೇಳಿಕೊಂಡು ಕೂತರೆ ಅದರ ದುಷ್ಪರಿಣಾಮ ಹೆಂಡತಿಯ ಮೇಲೆ ಆಗುತ್ತದೆ ಎಂದು ಅವರಿಗೆ ಗೊತ್ತಿತ್ತು. ತನ್ನ ಸಿದ್ಧಾಂತ ತನಗೇ ಮುಳುವಾಯಿತೇ ಎಂದು ಅನೇಕ ಬಾರಿ ಅವರಿಗೆ ಅನ್ನಿಸಿತು. ಆದರೂ ತಾನು ಬಲವಾಗಿ ನಂಬಿಕೊಂಡ ನೀತಿಗೆ ಅಂಟಿಕೊಂಡು ಹೋಗಲೇಬೇಕು ಎಂಬುದು ಅವರ ವಾದ. ಮೊಮ್ಮಕ್ಕಳನ್ನು ಆಡಿಸುವ, ಎತ್ತಿಕೊಳ್ಳುವ ಭಾಗ್ಯ ತಮಗಿಬ್ಬರಿಗೂ ಇಲ್ಲವಾದರೂ, ಪಾರ್ವತಮ್ಮನ ಮನೋಸ್ಥಿತಿಯನ್ನು ಅವರಿಂದ ಅಳೆಯಲಾಗಲಿಲ್ಲ. ಹೇಗಾದರೂ ಮಾಡಿ ಪುಟ್ಟನ ಸಂಸಾರವನ್ನು ಸ್ವಲ್ಪ ತಿಂಗಳ ಮಟ್ಟಿಗಾದರೂ ಊರಿಗೆ ಕರೆಸಿಕೊಂಡರೆ ಹೇಗೆ? ಇದರಿಂದ ಪಾರ್ವತಿಗೆ ಸಂತೋಷವಾಗಿ, ಅವಳ ಅರೋಗ್ಯವೂ ಸುಧಾರಿಸಬಹುದು ಎಂದುಕೊಂಡರು. ಈ ವಿಷಯವನ್ನು ಹೆಂಡತಿಗೆ ತಿಳಿಸಿದರಾದರೂ, ಪಾರ್ವತಮ್ಮನಿಗೆ ಇದು ಪೂರ್ತಿ ಫಲಕಾರಿಯಾಗುವ ಭರವಸೆ ಇರಲಿಲ್ಲ.

“ಬರುವ ವಾರ ಪುಟ್ಟನ ಮಗನ ಹುಟ್ಟಿದ ದಿನ ಬರುತ್ತದೆ. ಹುಟ್ಟಿದ ಹಬ್ಬವನ್ನು ಊರಲ್ಲಿ ಆಚರಿಸಲು ಕುಟುಂಬ ಸಮೇತ ಬರಲು ತಿಳಿಸಿ ಬಿಡಿ. ಊರಿಗೆ ಬಂದ ಮೇಲೆ ಸೊಸೆ ಹಾಗೂ ಮೊಮ್ಮಗನನ್ನು ಸ್ವಲ್ಪ ತಿಂಗಳು ಇಲ್ಲಿಯೇ ಉಳಿಸಿಕೊಳ್ಳಿಸುವ.” ಕ್ಕಾಲೆಂಡರನ್ನು ನೋಡುತ್ತಾ ಪಾರ್ವತಮ್ಮ ಗಂಡನಿಗೆ ಹೇಳಿದರು. ಜೋಶಿಯವರಿಗೂ ಇದು ಸರಿ ಕಂಡಿತು. ಈ ಸಂತೋಷದಲ್ಲಿ ಮಗನಿಗೆ ಪೋನು ಮಾಡಿಯೇ ಬಿಟ್ಟರು. ಪುಟ್ಟನ ಉತ್ತರ ಅವರನ್ನು ಕಕ್ಕಾಬಿಕ್ಕಿ ಮಾಡಿತು.

“ಇಲ್ಲಪ್ಪಾ, ಈ ಸಾರಿ ಬದಲಾಗುವುದಿಲ್ಲ. ಅವಳ ತಾಯಿ ತಂದೆ ಬೆಂಗಳೂರಿನ ಹೋಟೆಲಿನಲ್ಲಿ “ಬರ್ತ್‌ಡೇ” ಆಚರಿಸುವ ಎಂದಿದ್ದಾರೆ. ನಾವಿಬ್ಬರು ಹಳ್ಳಿಗೆ ಬಂದರೆ ನನ್ನ ಮಿತ್ರರಿಗೆ ಹಾಗೂ ಅವಳ ಸಂಬಂಧಿಕರಿಗೆ ಬರಲಿಕ್ಕೆ ಕಷ್ಟ. ಅಲ್ಲದೆ ಊಟ, ತಿಂಡಿ, ಕೇಕ್, ಎಲ್ಲಾ ಹಳ್ಳಿಯಲ್ಲಿ ಮಾಡಲು ಸಾಧ್ಯವಿಲ್ಲ. ಅಲ್ಲಿ ಏನಿದೆ ಹೇಳಿ” ಎಲ್ಲದಕ್ಕೂ ಸಿಟಿಗೆ ಓಡಾಡಬೇಕು. ನೀವು ಮೂರು ದಿನ ಮೊದಲೇ ತಾಯಿಯೊಂದಿಗೆ ಬೆಂಗಳೂರಿಗೆ ಬಂದು ಬಿಡಿ”. ಮಗನ ಮಾತಿನ ಒಳಾರ್ಥ ಜೋಶಿಯವರಿಗೆ ತಿಳಿಯಿತು.

‘ಅಲ್ಲವೇ ಪಾರೂ, ತೋಟ ಬಿಟ್ಟು ನಮಗೆ ದೂರ ಹೋಗಲು ಸಾಧ್ಯವಿಲ್ಲವೆಂದು ಅವನಿಗೆ ಗೊತ್ತಿದ್ದೂ ಈ ರೀತಿ ಹೇಳುತ್ತಾನಲ್ಲ. ಅದರ ಅರ್ಥ ನೀವು ‘ಬರ್ತ್‌ಡೇ’ ಗೆ ಬರುವ ಅಗತ್ಯವಿಲ್ಲ ಎಂದಾಗಿದೆ. ಹೋಗಲಿ ಬಿಡು ಅವರಿಗೆ ಒಳ್ಳೆದಾಗಲಿ ನಾವು ಒಳ್ಳೆಯದನ್ನೇ ಹಾರೈಸುವಾ’ ದುಃಖವನ್ನು ತಡೆದುಕೊಂಡು ಜೋಶಿಯವರು ಗೋಡೆ ನೋಡುತ್ತಾ ಹೆಂಡತಿಗೆ ಹೇಳಿದರು. ಪಾರ್ವತಮ್ಮ ಮೊದಲ ಬಾರಿ ಗಂಡನ ಕಣ್ಣಲ್ಲಿ ಕಣ್ಣೀರು ಕಂಡರು. ಹೌದು. ಬಹಳ ಪ್ರೀತಿ, ನಿರೀಕ್ಷೆ ಇಟ್ಟ ಮಗನಲ್ಲಿ ಅವರು ಈ ಉತ್ತರ ನಿರೀಕ್ಷಿಸಿರಲಿಲ್ಲ.

“ಏನೇ ಆಗಲಿ ನನಗಂತೂ ಬರಲು ಸಾಧ್ಯವಿಲ್ಲ. ಈ ಮಂಡಿನೋವು ನಿತ್ಯವೂ ನನ್ನನ್ನು ಕೊಲ್ಲುತ್ತಿದೆ. ನೀವು ಹೋಗಿ ಬನ್ನಿ. ಬರ್ತ್‌ಡೇ ಮುಗಿಸಿ, ಸೊಸೆ ಮತ್ತು ಮೊಮ್ಮಗನನ್ನು ಒಂದು ವಾರದ ಮಟ್ಟಿಗೆ ಕರೆದುಕೊಂಡು ಬನ್ನಿ. ಪುಟ್ಟಿಯ ಮಗುವಂತೂ ನೋಡಲಿಲ್ಲ. ಮಗನ ಮಗುವಾದರೆ ಒಮ್ಮೆ ಕಣ್ತುಂಬಾ ನೋಡಬೇಕು. ಎತ್ತಿ ಆಡಿಸಬೇಕು. ನಿಮಗೆ ದಮ್ಮಯ್ಯ. ಎಷ್ಟೇ ಕಪ್ಟವಾದರೂ ತೊಂದರೆಯಿಲ್ಲ. ಮಕ್ಕಳು ತಪ್ಪು, ಮಾಡಿದಾಗ ತಿದ್ದುವುದು ನಮ್ಮ ಧರ್ಮ. ನನಗೆ ಬೇಕಾಗಿಯಾದರೂ ಹೋಗಿ ಬನ್ನಿ.” ಪಾರ್ವತಮ್ಮನ ಬೇಡಿಕೆಯನ್ನು ಜೋಷಿಯವರಿಗೆ ಸಾರಾ ಸಗಟಾಗಿ ತಿರಸ್ಕರಿಸಲು ಆಗಲಿಲ್ಲ. “ಸರಿ” ಎಂದು ಜೋಶಿಯವರು ಕೆಲವೇ ದಿನಗಳಲ್ಲಿ ಬೆಂಗಳೂರು ಬಸ್ ಹತ್ತಿದರು.

ಬಸ್ಸಿನಲ್ಲಿ ಜೋಶಿಯವರಿಗೆ ಮೊಮ್ಮಗನದೇ ಚಿಂತೆ. ಮಗುವಿನ ಮೊದಲನೇ ವರ್ಷದ ಬರ್ತ್‌ಡೇಗೂ ಮಗ ಇದೇ ಕಾರಣ ಹೇಳಿ ತಪ್ಪಿಸಿದ್ದ. ಈಗ ಮಗುವನ್ನು ನೋಡದೆ ವರ್ಷ ದಾಟಿತು. ಎರಡು ವರ್ಷದ ನನ್ನ ಮೊಮ್ಮಗ ಈಗ ಸರಿಯಾಗಿ ನಡೆಯುತ್ತಿರಬಹುದು. ಯಾವಾಗಲಾದರೂ ಒಮ್ಮೆ ಫೋನಿನಲ್ಲಿ ‘ತಾತಾ, ಅಮ್ಮ ಎಂದು ಹೇಳುತ್ತಾನೆ.’ ನಾಳೆ ಮನೆ ಸೇರಿದೊಡನೆ ನಾನೇ ಕಣೋ ನಿನ್ನ ತಾತ ಎಂದು ಹೇಳುತ್ತಾ ಎತ್ತಿ ಮುದ್ದಿಸಬೇಕು. ಕೂಡಲೇ ಹತ್ತಿರ ಬರಲಿಕ್ಕಿಲ್ಲ. ಚಾಕಲೇಟು ತೋರಿಸಿ ನಿಧಾನ ಹತ್ತಿರ ಮಾಡಿಸಬೇಕು. ಹೆಗಲಿನಲ್ಲಿ ಕೂರಿಸಿ, ಪ್ಲಾಟಿನ ಕೆಳಗೆಲ್ಲಾ ತಿರುಗಬೇಕು ಮಂಡಿಯೂರಿ ಬೆನ್ನಲ್ಲಿ ಕುಳ್ಳಿರಿಸಿ “ಆನೆ ಬಂತು ಆನೆ” ಆಟ ಆಡಿಸಬೇಕು. ಅಡಗಿಕೊಂಡು ‘ಕೂ..’ ಹೇಳುತ್ತಾ ಕಳ್ಳ – ಪೋಲೀಸ್ ಆಟ ಆಡಿಸಬೇಕು. ಮತ್ತೆ ಅವನ ಅಪ್ಪನ ಕಾರಿನ ಒಳಗೆ ಕೂರಿಸಿ ಸ್ಟೇರಿಂಗ್ ತಿರುಗಿಸಲು ಕೊಡಬೇಕು. ಸಂಜೆ ಮೊಮ್ಮಗನನ್ನು ಎತ್ತಿ ಕೊಂಡು, ಗತ್ತಿನಲ್ಲಿ ಪಾರ್ಕ್‌ನಲ್ಲಿ ತಿರುಗಬೇಕು. ರಾತ್ರಿ ದಿನಾಲೂ ಮಕ್ಕಳ ಕತೆ ಹೇಳಬೇಕು. ನಾನು ಇರುವವರೆಗೂ ರಾತ್ರಿ ನನ್ನ ಪಕ್ಕದಲ್ಲೇ ಮಲಗಿಸಬೇಕು. ಜೋಶಿಯವರಿಗೆ ಏನೇನೊ ಆಸೆಗಳು ಮನಃಪಟಲದಲ್ಲಿ ಹಾದುಬಂದು, ಗಕ್ಕನೆ ನಗಾಡಿದರು. ಪಕ್ಕದಲ್ಲಿ ಕುಳಿತ ಸಹ ಪ್ರಯಾಣಿಕ ಇವರತ್ತ ದೃಷ್ಟಿ ಹಾಯಿಸಿದಾಗ ಗಂಭೀರವಾಗಿ ಕುಳಿತರು. ನೂರಾರು ಸುಂದರ ನೆನಪುಗಳನ್ನು ಸವಿಯುತ್ತಾ ಜೋಶಿಯವರು ಮಗನ ಮನೆ ತಲುಪಿದರು. ಮನೆ ತಲುಪಿದ ಜೋಶಿಯವರ ಕಣ್ಣು ಮನೆ ಒಳಗೆಲ್ಲಾ ತಿರುಗುತ್ತಿತ್ತು. ಮೊಮ್ಮಗನ ಸುಳಿವಿಲ್ಲ. ಸೊಸೆಯನ್ನು ವಿಚಾರಿಸಿದರು. ಮಗ ರೂಮಿನೊಳಗೆ ಮಲಗಿದ್ದಾನೆ ಎಂದು ತಿಳಿದಾಕ್ಷಣ ರೂಮಿನ ಬಾಗಿಲು ತೆರೆದರು. ಜೋಶಿಯವರಿಗೆ ಮೊಮ್ಮಗನನ್ನು ನೋಡುವ ತವಕ. ತಾನು ತಂದ ಚಾಕಲೇಟು, ಬರ್ತ್‌ಡೇ ಡ್ರೆಸ್ ಮೊಮ್ಮಗನ ಕೈಯಲ್ಲೇ ಕೊಡುವ ಅಸೆ. “ಮಾವ, ಬಾಗಿಲು ಜೋರಾಗಿ ದೂಡಬೇಡಿ. ಮಗು ಎದ್ದು ಬಿಟ್ಟರೆ, ಮತ್ತೆ ಮಲಗುವುದಿಲ್ಲ, ಹಠ ಮಾಡುತ್ತಾನೆ” ಸೊಸೆಯ ಮಾತು ಕೇಳಿ ಒಮ್ಮೆ ಬೇಸರವಾದರೂ ಜೋಶಿಯವರು ಅದನ್ನು ಮುಖದಲ್ಲಿ ವ್ಯಕ್ತಪಡಿಸಲಿಲ್ಲ. ತಾನು ದೂರ ನಿಂತು ಮಲಗಿದ ಮಗುವನ್ನು ಒಮ್ಮೆ ಕೂಲಂಕುಶ ನೋಡಿ ತೃಪ್ತಿ ಪಟ್ಬುಕೊಂಡರು. ತಾನು ತಂದ ಚಾಕಲೇಟು ಕಟ್ಟು, ಬಟ್ಟೆಬರೆಯನ್ನು ಸೊಸೆಯ ಕೈಯಲ್ಲಿ ಕೊಟ್ಟು ವರಾಂಡದಲ್ಲಿ ಕುಳಿತುಕೊಂಡರು. ಮಗ ಊರಿನ ಸುದ್ದಿ ವಿಚಾರಿಸಿದ. ಅಮ್ಮನ ಯೋಗಕ್ಷೇಮ ವಿಚಾರಿಸಿ ಕ್ಲಿನಿಕ್‌ಗೆ ಹೊರಟು ಹೋದ. ಸೊಸೆ ಯಾಂತ್ರಿಕವಾಗಿ ಫಲಾಹಾರ, ಕಾಫಿ ತಂದಿಟ್ಟು ತನ್ನ ಮನೆ ಕೆಲಸದಲ್ಲಿ ಮಗ್ನಳಾದಳು. ಸ್ವಲ್ಪ ಹೊತ್ತಿನ ನಂತರ ಜೋಶಿಯವರು ಎದ್ದು ನಿಂತು, ರೂಮಿನಲ್ಲಿ ಇಣಕಿ ನೋಡುತ್ತಾ, ಮೊಮ್ಮಗ ಏಳುವುದನ್ನೇ ಕಾಯುತ್ತಿದ್ದರು. ಮಗುವಿನ ಅಳು ಕೇಳಿದಾಕ್ಷಣ ರೂಮಿಗೆ ಓಡಿ ಹೋಗಿ ಮಗುವನ್ನು ಎತ್ತಿ ಕೊಂಡು ಹೊರಬಂದು, ಮುದ್ದಿಸತೊಡಗಿದರು. ಮಗು ಅಪರಿಚಿತ ಮುಖ ನೋಡಿ ಅಳುಮೋರೆ ಹಾಕಿತು. ಮಗುವನ್ನು ಓಲೈಸಲು ತಾನು ತಂದ ಚಾಕೋಲೇಟುಗಾಗಿ ಸೊಸೆಯನ್ನು ಕೇಳಿದರು.

“ಬೇಡ ಮಾವ, ಅ ಚಾಕ್ಲೇಟು ಅಷ್ಟು ಒಳ್ಳೇದಿಲ್ಲ. ನಾನೀಗ ಅವನಿಗೆ ತಿಂಡಿ ಕೊಡುತ್ತೇನೆ” ಎಂದು ಹೇಳುತ್ತಾ ಮಗುವನ್ನು ಎತ್ತಿ ಕೊಂಡು ಅಡುಗೆ ಕೋಣೆಯತ್ತ ನಡೆದಳು. ಜೋಶಿಯವರಿಗೆ ಸ್ವಲ್ಪ ಬೇಸರವಾಯಿತು. ನಾನೇನು ರಸ್ತೆ ಬದಿಯಲ್ಲಿ ಮಾರುವ ಚಾಕ್ಲೇಟು ತರಲಿಲ್ಲ. ಅದೂ ಒಳ್ಳೇ ಕಂಪೆನಿಯ ಚಾಕ್ಲೇಟು. ಸೊಸೆಯ ವರ್ತನೆ ಅವರಿಗೆ ಸರಿ ತೋರಲಿಲ್ಲ. ಅದರೆ ಅವರು ಅದನ್ನು ತೋರ್ಪಡಿಸದೆ, ವಿಷಯವನ್ನು ಮರೆಯಲು ಹತ್ತಿರದ ಟೀಪಾಯಿ ಮೇಲಿದ್ದ ದಿನಪತ್ರಿಕೆ ಓದತೊಡಗಿದರು. ಸ್ವಲ್ಪ ಸಮಯ ಕಳೆದ ಮೇಲೆ ಮಗು ಆಟದ ಸಾಮಾನು ಹಿಡಕೊಂಡು ವರಾಂಡಕ್ಕೆ ಬಂತು. ತಾತನನ್ನು ನೋಡಿ ಒಮ್ಮೆ ನಕ್ಕಿತು. ಜೋಶಿಯವರಿಗೆ ಮಗುವನ್ನು ಮತ್ತೊಮ್ಮೆ ಎತ್ತುವ ಮನಸ್ಸಾಯಿತು. ಹತ್ತಿರ ಬಂದು ಮಗುವನ್ನು ಎರಡೂ ಕೈಯಿಂದ ಅಪ್ಪಿ ಹಿಡಿದು, ಹಣೆ, ಕೆನ್ನೆ ಗಲ್ಲವನ್ನು ಮುದ್ದಿಸ ತೊಡಗಿದರು. ಎತ್ತಿ ಕೊಂಡು ಹೊರ ನಡೆದರು. ‘ಮಾವ, ಅವನನ್ನು ಅತಿಯಾಗಿ ಎತ್ತಿ ಕೊಳ್ಳಬೇಡಿ. ಮತ್ತೆ ನೀವಿಲ್ಲದಾಗ ಎತ್ತಿಕೊಳ್ಳಲು ಅಳುತ್ತಾನೆ. ನನಗೆ ಮನೆ ಕೆಲಸ ಮಾಡಲು ಕಷ್ಪವಾಗುತ್ತದೆ’ ಸೊಸೆಯ ಮಾತು ಕೇಳಿ ಜೋಶಿಯವರು ಮಗುವನ್ನು ಕೆಳಗಿಳಿಸಿದರು. ಅವರ ಸಂತೋಷ ನಿಧಾನವಾಗಿ ಕಣ್ಮರೆಯಾಗತೊಡಗಿತು. ಸೊಸೆ ತನ್ನ ಮಾತನ್ನು ಮುಂದುವರಿಸಿದಳು. “ಮೊನ್ನೆ ಏನಾಯಿತು ಮಾವ ನಿಮಗೆ ಗೊತ್ತಾ, ಅವರ ಗೆಳೆಯರು ಇಲ್ಲಿ ಬಂದಿದ್ದರು. ಆಗಾಗ್ಗೆ ಮಗುವನ್ನು ಎತ್ತಿ ಮುದ್ದಿಸ ತೊಡಗಿದರು. ಮರುದಿನ ಮಗುವಿನ ಕೆನ್ನೆಯಲ್ಲಿ ಏನೋ ಕೆಂಪಗೆ ಆಗಿತ್ತು. ಡಾಕ್ಟರಲ್ಲಿ ವಿಚಾರಿಸಿದಾಗ ಅದು ಎಲರ್ಜಿ ಅಂದರು. ಜೊಲ್ಲು ಸೊಂಕಿದರೆ ಹೀಗಾಗಲೂಬಹುದು ಎಂದರು.’ ಜೋಶಿಯವರಿಗೆ ಸೊಸೆಯ ಮಾತಿನ ಇಂಗಿತ ಅರ್ಥವಾಯಿತು. ತಾನು ಮಗುವನ್ನು ಮುದ್ದಿಸಬಾರದು ಎಂದು ನೇರವಾಗಿ ಹೇಳಲಿಕ್ಕಾಗದೆ, ಪರೋಕ್ಷವಾಗಿ ತನ್ನ ಸೊಸೆ ತನಗೆ ಪಾಠ ಕಲಿಸಿದಳು ಎಂದು ತಿಳಿಯಿತು. ಜೋಶಿಯವರಿಗೆ ತಾನು ತನ್ನ ಮನೆಯಲ್ಲೇ ಪರಕೀಯನಾಗಿ ಬಿಟ್ಟೆನಲ್ಲಾ ಎಂದೆನಿಸಿ, ದುಃಖವಾಯಿತು. ಪಾರ್ವತಿ ಬರದಿದ್ದದ್ದು ಒಳ್ಳೆಯದೇ ಆಯಿತು ಎಂದು ಮನದಲ್ಲೇ ಭಾವಿಸಿಕೊಂಡರು.

ಬರ್ತ್‌ಡೇ ದಿನ ಬರಿತು. ಗಂಡ ಹೆಂಡತಿ ಮಾತುಕತೆಯಿಂದ ಬರ್ತ್‌ಡೇ ಪಾರ್ಟಿ ಬರ್ಜರಿಯಾಗಿಯೇ ನಡೆಯುತ್ತಿದೆ ಎಂದು ತಿಳಿಯಿತು ಜೋಶಿಯವರಿಗೆ. ಯಾವುದೋ ಪೈವ್ ಸ್ಪಾರ್ ಹೋಟೆಲಿನ ಹಾಲ್. ಸುಮಾರು ೪೦-೫೦ ಜನರು ಸೇರಬಹುದು ಎಂದು ತಿಳಿದುಕೊಂಡ ಜೋಶಿಯವರಿಗೆ ಇವರ ಮಧ್ಯ ತನ್ನ ಇರುವಿಕೆಯನ್ನು ನೆನೆದು ಮುಜುಗರವಾಯಿತು. ತಾನೇಕೆ ಬಂದೆ ಎಂದು ಎನಿಸಿದರೂ, ಸೊಸೆ-ಮೊಮ್ಮಗನನ್ನು ಹಳ್ಳಿಗೆ ಕರಕೊಂಡು ಹೋಗುತ್ತೇನೆಂಬ ಸಂತೋಷದಲ್ಲಿ ತನ್ನ ನೋವನ್ನು ಮರೆತರು. ಏನೇ ಆಗಲಿ ಒಂದು ವಾರ ಎಂದು ಒಂದು ತಿಂಗಳು ಕೂತುಕೊಳ್ಳಿಸಬೇಕು. ಪಾರ್ವತಿಗೂ ಖುಷಿಯಾಗುತ್ತದೆ ಎಂದು ಮನಸ್ಸಿನಲ್ಲಿ ಮಂಡಿಗೆ ತಿಂದರು. ಬರ್ತ್‌ಡೇದಿನ ಮಗು ಹಾಕುವ ಡ್ರೆಸ್ಸಿನ ಬಗ್ಗೆ ಚರ್ಚೆಯಾಯಿತು. ಪುಟ್ಟ ತಂದೆ ತಂದ ಡ್ರೆಸ್ ಹಾಕುವ ಎಂದು ಹೇಳಿದ. ಸೊಸೆಗೆ ಇಪ್ಟವಾಗಲಿಲ್ಲ. “ಅದು ಸ್ವಲ್ಪ ಹಳೇ ಕಾಲದ ಡ್ರೆಸ್ ಎಂದು ಸೊಸೆ ಮೆಲ್ಲನೆ ಹೇಳಿದ್ದನ್ನು ಜೋಶಿಯವರು ಕೇಳಿಸಿಕೊಂಡರು. ಕೊನೆಗೆ ಅವಳೇ ಇಷ್ಪಪಟ್ಟ ಡ್ರೆಸ್ ಹಾಕಿ ಹೋಟೆಲಿಗೆ ಹೊರಟರು. ರಾತ್ರಿ ೧೨ ಗಂಟೆಯವರೆಗೆ ಬರ್ತ್‌ಡೇ ನಡೆಯಿತು. ನೆರೆದವರ ಮಧ್ಯೆಯೇ ಮಗು ಓಡಾಡುತ್ತಿತ್ತೇ ಹೊರತು ಜೋಶಿಯವರಿಗೆ ಮಗುವನ್ನು ಎತ್ತಿ ಕೊಳ್ಳಲಾಗಲಿಲ್ಲ. ಮುದ್ದಿಸುವ ಹಾಗೂ ಇಲ್ಲ. ಈ ಎಲ್ಲಾ ಮನಸ್ಸಿನ ಕಸಿವಿಸಿಯನ್ನು ಹೊತ್ತುಕೊಂಡು ಜೋಶಿಯವರು ಹಾಲಿನ ಮೂಲೆಯಲ್ಲಿ ಕುರ್ಚಿಯಲ್ಲಿ ಆಸೀನರಾದರು. ಎದ್ದದ್ದು ಹಾಲ್ ಬಿಟ್ಟು ಹೊರಡುವ ಹೊತ್ತಿಗೇನೇ.

ಬರ್ತ್‌ಡೇ ಮುಗಿದ ಮರುದಿನ ಜೋಶಿಯವರು ಮಗನಲ್ಲಿ ಪಾರ್ವತಮ್ಮನ ಬೇಡಿಕೆಯನ್ನು ಮುಂದಿಟ್ಟರು.

‘ಪುಟ್ಟಾ ಒಂದು ವಾರದ ಮಟ್ಟಿಗೆ ಸೊಸೆ ಹಾಗೆ ಮೊಮ್ಮಗನನ್ನು ಹಳ್ಳಿಗೆ ಕರಕೊಂಡು ಹೋಗುತ್ತೇನೆ. ನಿನಗೆ ಪುರುಸೊತ್ತು ಇದ್ದರೆ ನೀನೇ ಬಂದು ಕರಕೊಂಡು ಹೋಗು, ಇಲ್ಲದಿದ್ದರೆ ನಾನೇ ಕರಕೊಂಡು ಬಂದು ತಲುಪಿಸುತ್ತೇನೆ. ನಿನ್ನ ತಾಯಿಗೆ ಮೊಮ್ಮಗನನ್ನು ನೋಡದೆ ಹುಚ್ಚು ಹಿಡಿದು ಬಿಟ್ಟಿದೆ, ಪುಟ್ವಿಯಂತೂ ವಿದೇಶಿಯವಳಾಗಿ ಬಿಟ್ಟಳು. ನಿನ್ನಮ್ಮನ ಆರೋಗ್ಯವೂ ಸರಿಯಿಲ್ಲ. ಅವಳಂತೂ ಬೆಂಗಳೂರಿಗೆ ಬರುವ ಹಾಗಿಲ್ಲ. ನಿನಗಂತೂ ಪುರುಸೊತ್ತು ಇಲ್ಲ. ಅವಳ ಒಂದು ಆಸೆಯನ್ನಾ ಈಡೇರಿಸಪ್ಪಾ.’ ಮಗನ ಮುಂದೆ ಮೊದಲ ಬಾರಿ ಅಂಗಲಾಚಿದರು ಜೋಶಿಯವರು. ಪುಟ್ಟನಿಗೆ ಏನು ಮಾಡಬೇಕೆಂದು ತೋಚಲಿಲ್ಲ. ಎಲ್ಲಾ ಜವಾಬ್ದಾರಿಯನ್ನು ತಂದೆಯೇ ಹೊರುತ್ತಾರೆಂದು ಹೇಳಿದ ಮೇಲೆ, ಒಪ್ಪಿಕೊಳ್ಳದ ನಿರ್ವಾಹವಿಲ್ಲ. ಪುಟ್ಟ ಹೆಂಡತಿಯ ಮುಖ ನೋಡಿದ. ಅವಳು ಅಡುಗೆ ಕೋಣೆಯ ಗೋಡೆ ನೋಡಿ ಅಂದಳು. “ಈಗ ಮಗು ಸಣ್ಣವ, ರಾತ್ರಿ ಇಡೀ ಬಸ್ಸಿನಲ್ಲಿ ಪ್ರಯಾಣಿಸಿದರೆ ಮಗುವಿಗೆ ನೆಗಡಿ, ಜ್ವರ ಬರಬಹುದು. ಮೇಲಾಗಿ ನನ್ನ ಆರೋಗ್ಯವೂ ಸರಿಯಿಲ್ಲ. ಇವರಿಗೆ ಪುರುಸೋತ್ತು ಆದಾಗ ನಾವೇ ಕಾರಿನಲ್ಲಿ ನೇರವಾಗಿ ಬಂದು ಬಿಡುತ್ತೇವೆ ಮಾವಯ್ಯ” ಜೋಶಿಯವರು ಮುಂದೆ ಮಾತಾಡಲಿಲ್ಲ. ಮಾತಿನ ಮಲ್ಲನಿಗೆ ಮುಂದೆ ಮಾತಾಡುವ ಅವಕಾಶವೂ ಸಿಗಲಿಲ್ಲ. ಊರಿನ ಎಷ್ಟೋ ಪಂಚಾಯಿತಿಯನ್ನು ನಡೆಸಿಕೊಟ್ಟವರಿಗೆ ತನ್ನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಲಿಲ್ಲ. ಊರಿನ ಗುರಿಕಾರನಾಗಿ, ಕೈಕಟ್ಟಿ ಬಾಗಿ ನಿಂತ ಜನರಿಗೆ ತೀರ್ಪು ನೀಡುವ ಜೋಶಿಯವರು ಮಗ ಹಾಗೂ ಸೊಸೆಯೆದುರು ಮೌನಿಯಾದರು. ಭಾರವಾದ ಹೃದಯದಿಂದ, ದೂರದಿಂದಲೇ ಮೊಮ್ಮಗನಿಗೆ ‘ಟಾ-ಟಾ’ ಮಾಡಿ ಊರಿನ ಬಸ್ಸು ಹತ್ತಿದರು. ಕಣ್ಣು ಮಂಜಾದುದು ಅವರೊಬ್ಬರಿಗೆ ಮಾತ್ರ ಗೊತ್ತು. ದೇಹಕ್ಕೆ ಪೆಟ್ಟು ಬಿದ್ದರೆ ವಾಸಿಯಾಗುತ್ತದೆ. ಆದರೆ ಮನಸ್ಸಿಗೆ ಪೆಟ್ಬು ಬಿದ್ದರೆ? ಮನೆ ತಲುಪಿದಾಗ ಜೋಶಿಯವರು ಮಂಕಾಗಿ ಹೋಗಿದ್ದರು.

ಒಬ್ಬನೇ ಬಂದ ಪತಿಯನ್ನು ಪಾರ್ವತಮ್ಮ ನೋಡಿದರು. ತಮ್ಮ ಪತಿಯ ಮುಖವನ್ನು ೪೦ ವರ್ಷದಿಂದ ನೋಡುತ್ತಾ ಬಂದ ಪಾರ್ವತಮ್ಮನಿಗೆ ಪರಿಸ್ಥಿತಿ ಅರ್ಥ ಮಾಡಲು ತುಂಬಾ ಹೊತ್ತು ಹಿಡಿಯಲಿಲ್ಲ. ಬಿಸಿ ಬಿಸಿ ಕಾಫಿ ಮಾಡಿ ತರಲು ಅಡುಗೆ ಕೋಣೆಗೆ ಕುಂಟುತ್ತಾ ನಡೆದರು.

ಜೋಶಿಯವರು ಮುಖ ತೊಳೆದುಕೊಂಡು ಫ್ಯಾನ್ ಹಾಕಿದರು. ಬೆತ್ತದ ಕುರ್ಚಿಯಲ್ಲಿ ಆಸೀನರಾದರು. ತಂಪಾದ ಗಾಳಿ ಅವರಿಗೆ ಹಿತವೆನಿಸಿತು. ರಾತ್ರಿಯಿಡೀ ಬಸ್ಸಿನಲ್ಲಿ ಆಲೋಚಿಸುತ್ತಾ ಬೆಳಗು ಮಾಡಿದ ಅವರಿಗೆ ಈಗ ಕಣ್ಣು ತೂಕಡಿಸತೊಡಗಿತು. ಬಾಗಿಲು ‘ಕಿರ್’ ಎಂದ ಶಬ್ದಕ್ಕೆ ಜೋಶಿಯವರು ಕಣ್ಣು ತೆರೆದರು. ಎದುರಿಗೆ ಶೇಖರನ ಮಗು ಪುಟ್ಟ ಪುಟ್ಟ ಹೆಜ್ಜೆಯಿಡುತ್ತಾ “ಅಮ್ಮಾ” “ಅಮ್ಮಾ” ಅಂದುಕೊಂಡು ಅಡುಗೆ ಕೋಣೆಯತ್ತ ಹೋಗುತಿದ್ದು ಅನಿರೀಕ್ಷಿತವಾಗಿ ಜೋಶಿಯವರನ್ನು ಕಂಡು ಹೆದರಿ ಹಿಂದಕ್ಕೆ ತಿರುಗಿ ಬಾಗಿಲ ಕಡೆಗೆ ಓಡಲು ಅಣಿಯಾಯಿತು. ಜೋಶಿಯವರು ಒಮ್ಮೆ ಮಗುವನ್ನು ನೋಡಿದರು. ಕೂತಲ್ಲಿಂದ ನಿಧಾನವಾಗಿ ಎದ್ದು ಮಗುವಿನ ಹತ್ತಿರ ಹೋಗಿ ಚಾಕಲೇಟು ಕೊಟ್ಟರು. ಮಗುವನ್ನು ಎತ್ತಿ ಕೊಂಡು ‘ಲೊಚ ಲೊಚ’ ಮುತ್ತಿಟ್ಟರು, ಒಮ್ಮೆ ಬಲಕ್ಕೂ ಎಡಕ್ಕೂ ಎತ್ತಿ ಕೊಂಡು ಆಡಿಸಿದರು. ಮಗುವಿನ ಹಣೆ, ಕೆನ್ನೆ, ಗಲ್ಲಕ್ಕೆ ಮುತ್ತಿನ ಮಳೆಗರೆದರು. ಪಾಪೂ ಅಂದರು. ಮತ್ತೆ ಕೆಳಗಿಳಿಸಿದರು. ತನ್ನ ಎರಡೂ ಕಾಲಿನ ಮಂಡಿಯನ್ನು ನೆಲಕ್ಕೆ ಊರಿ, ಕೈಯನ್ನು ನೆಲಕ್ಕೆ ತಾಗಿಸಿ, ಬಗ್ಗಿ ನಿಂತು, ಹೆಂಡತಿಯನ್ನು ಕರೆದರು.

“ಪಾರೂ, ಪಾರೂ, ಇಲ್ಲಿ ಬಾ, ಪಾಪುವನ್ನು ಎತ್ತಿ ನನ್ನ ಬೆನ್ನ ಮೇಲೆ ಕೂರಿಸು..” ಅಡುಗೆ ಕೋಣೆಯಿಂದ ಇವೆಲ್ಲವನ್ನು ನೋಡುತ್ತಿದ್ದ ಪಾರ್ವತಮ್ಮ, ಸಂತೋಷದಿಂದ ಕುಂಟುತ್ತಾ ಬಂದು ಮಗುವನ್ನು ಎತ್ತಿ ಮುದ್ದಿಸಿ, ಗಂಡನ ಬೆನ್ನ ಮೇಲೆ ಕೂತುಕೊಳ್ಳಿಸಿದಳು. ಮಗು ಹೆದರಿ ಜೋಶಿಯವರ ಕುತ್ತಿಗೆಯನ್ನು ಎರಡು ಕೈಯಿಂದ ಬಲವಾಗಿ ತಬ್ಬಿಕೊಂಡಿತು. ಜೋಶಿಯವರು ಆಂಬೆಗಾಲಿನಲ್ಲಿ ಮುಂದೆ ಮುಂದೆ ನಡೆಯ ತೊಡಗಿದರು. ಅವರ ಬಾಯಿಯಿಂದ “ಆನೆ ಬಂತು ಆನೆ… ಅನೆ ಬಂತು ಆನೆ…” ಎಂಬ ಪದ ಕೇಳಿ ಬರುತ್ತಿತ್ತು.
*****

Latest posts by ಅಬ್ದುಲ್ ಹಮೀದ್ ಪಕ್ಕಲಡ್ಕ (see all)