“ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ.”

ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ.

“ನೋಡೇ-ನಾನು ರೈಲಿನ ಇಂಜಿನ್ನು, ನೀನು ಡ್ರೈವರ್”

“ಇಲ್ಲಪ್ಪ. ನಾನು ಇಂಜಿನ್ನು.”

“ನಿನಗೆ ಕೂಗೋದಕ್ಕಾಗೋಲ್ಲಮ್ಮ, ನೋಡಿದ್ಯಾ-ನಾನು ಇಂಜಿನ್ನು . ನೀನು ನನ್ನ ಹಿಂದೆ ಬರಬೇಕು. ಈ ಗೇಟು ಮೈಸೂರು. ಮಲ್ಲಿಗೆ ಇದೆಯಲ್ಲ ಅದು ಮದ್ರಾಸು-ಆಂ”

“ಊಂ”

ರೈಲು ಹೊರಟಿತು. ಇಂಜಿನ್ನಿನ ಜತೆಗೆ ಡ್ರೈವರ್ ಕೂಡ ಕೂಗಿದುದಾಯಿತು. ಮಕ್ಕಳಿಬ್ಬರೂ ಆಟದಲ್ಲಿ ಮೈಮರೆತಂತೆ ತಾಯಿ ಅವರ ಕಡೆಗೇ ನೋಡುತ್ತಾ ನಿಂತಿದ್ದಳು. ಬಾಗಿಲಿಗೆ ಒರಗಿಕೊಂಡು ನಿಂತು ಅವರ ಆಟದಲ್ಲೇ ಮಗ್ನಳಾಗಿದ್ದಳು.

ಚಂದ್ರುಗಿನ್ನೂ ಆರು ವರ್ಷ ಆದರೂ ಎಷ್ಟು ಚುರುಕು. ಎಷ್ಟು ಬುದ್ದಿವಂತ ಎಂದುಕೊಂಡಳು. ಮುದ್ದಾಗಿ, ಗುಂಡಾದ ಮುಖ. ಹಾಲುಗೆನ್ನೆ, ತುಂಬುಗಲ್ಲ. ವಿಶಾಲವಾದ ಹಣೆ, ಕಣ್ಣುಗಳಲ್ಲಿ ಚಕಮಕಿ. ಅದೇ ಬಗೆಯ ಹೊಳಪು, ಎಲ್ಲ ಅವರಂತೆಯೇ! ಅವರು! ಸರಸಿಯ ಕಣ್ಣು ತೇಲುಗಣ್ಣಾಯಿತು, ಹನಿಯಾಡಿತು!

ಮಲೆ ಇದ್ದಕ್ಕಿದ್ದಂತೆ ಆರಂಭವಾಯಿತು. ಎದುರು ಮನೆಯ ಜಿಂಕ್ ಷೀಟಿನ ಮೇಲೆ ಕವಣೆ ಕಲ್ಲು ಬೀರಿದಂತೆ ಸದ್ದು ಆಗುತ್ತಿತ್ತು. ಪಟಪಟನೆ- ಹನಿಗಳುದುರಿದುವು. ಸರಸಿ ಕಣ್ಣೊರೆಸಿಕೊಂಡು ಕೂಡಲೇ ಮಕ್ಕಳಿಬ್ಬರನ್ನು ಒಳಕ್ಕೆ ಕರೆದಳು.

“ಆಗಲೇ ಹೇಳಿದೆ, ಬೇಡವೋ ಅಂತ. ಹೋಗಿ ಒಳಗೆ ಆಡಿ ಕೊಳ್ಳಿ”

ಚಂದ್ರು ತನ್ನ ಜತೆಗಾತಿ ವೇದಳೊಂದಿಗೆ ಒಳಕ್ಕೊಡಿದ, ತನ್ನ ಹತ್ತಿರವಿರುವ ಆಟದ ಸಾಮಾನನ್ನು ಅವಳಿಗೆ ತೋರಿಸಲು – ಸರಸಿ ಮಾತ್ರ ಅಲ್ಲಿಯೇ ನಿಂತು ನೋಡುತ್ತಿದ್ದಳು. ಅವಳ ದೃಷ್ಟಿ ಮಳೆಯ ಹನಿಗಳ ಮೂಲಕ ಮತ್ತೆಲ್ಲೋ ಹೋಗಿ ನಟ್ಟಂತಿತ್ತು.

“ಸರಸಿ! ಸರಸಿ! ಅಬ್ಬ, ಎಂತಹ ಮಳೆಯಪ್ಪ! ಕೊಡೆಯಿದ್ದರೂ ಏನೂ ಪ್ರಯೋಜನವಾಗಲಿಲ್ಲ.”

“ಅಯ್ಯೋ! ಎಷ್ಟು ನೆನೆದಿದೀರಿ. ಹೋಗಿ ಬಟ್ಟೆ ಬದಲಾಯಿಸಿ ಕೊಳ್ಳೀಂದ್ರೆ. ಮೊದಲು ಈ ಒದ್ದೆ ಬಟ್ಟೆ ತೆಗೆದು ಹಾಕಿ, ಕಾಫಿ ಬಿಸಿ ಮಾಡ್ತೀನಿ”

“ಸದ್ಯ! ಮಹರಾಯತಿ. ಒಂದಿಷ್ಟು ಬಿಸಿ ಕಾಫಿ ಬಿದ್ದರೆ ಸಾಕು. ಆಫೀಸಿನಿಂದ ಹೊರಟಾಗ ಏನೂ ಇರಲಿಲ್ಲ. ಇದ್ದಕ್ಕಿದ್ದ ಹಾಗೆ ಒಳ್ಳೆ ಕವಣೆ ಕಲ್ಲು ಉದುರಿದ ಹಾಗೆ ಶುರುವಾಯ್ತು.”

“ದಾರೀಲೇ ಎಲ್ಲಾದರೂ ನಿಂತುಕೋಬಹುದಾಗಿತ್ತು”

“ಬಹಳ ಹೊತ್ತಾಗಿ ಹೋಗಿತ್ತು. ಇದೂ ಅಲ್ಲದೆ ಛತ್ರಿ ಕೂಡ ಇತ್ತು. ನೀನು, ಪಾಪ ಮನೇಲಿ ಕಾದಿರ್‍ತೀಯ ಅಂತ…”

“ಅಯ್ಯೋ ಪಾಪ! ನನ್ನ ಮೇಲೆ ಎಷ್ಟೊಂದು ಕರುಣೆ! ಥಂಡಿಯಾಗ್ತಿತ್ತು. ಕಾಫಿ ಬೇಕಾಗಿತ್ತು. ಅದಕ್ಕೋಸ್ಕರ ಬಂದಿರಿ, ನಮಗೇನು ಗೊತ್ತಿಲ್ಲವೇ?

ಸರಸಿ ಹುಸಿ ಮುನಿಸಿನಿಂದ ಅಂದ ಮಾತಿಗೆ ಅವಳ ಗಂಡ ಜೋರಾಗಿ ನಕ್ಕುಬಿಟ್ಟ, ಸರಸಿಯೂ ದನಿಗೂಡಿಸಿದಳು. ಸಂಜೆಯಾಯಿತೆಂದರೆ ಅವನ ಬರವಿಗಾಗಿ ಕಾದು ಬಾಗಿಲ ಹತ್ತಿರವೇ ನಿಂತು ಅಷ್ಟು ದೂರದವರೆಗೂ ದಿಟ್ಟಿಸುವುದು ಅವಳ ಪರಿಪಾಠ. ದೂರದಲ್ಲಿ ಅವನು ಕಂಡ ಕೂಡಲೇ ಕಾಫಿ ಬಿಸಿಗಿಟ್ಟು ಓಡಿ ಬರುವುದು, ಬಾಗಿ ಅವನನ್ನೆದುರುಗೊಳ್ಳುವುದು.

ಕಾಫಿ ಕುಡಿಯುತ್ತಾ ರಾಮು ಕುರ್ಚಿಯ ಮೇಲೆ ಕುಳಿತಿದ್ದ. ಸರಸಿ ಅವನ ಭುಜದ ಮೇಲೆ ಕೈ ಹಾಕಿಕೊಂಡು ಕುರ್ಚಿಯ ಎಡಗೈ ಮೇಲೆ ಕುಳಿತಿದ್ದಳು. ಇಬ್ಬರೂ ಹೊರಗೆ ಮಳೆಯ ಆಟೋಪವನ್ನು ನೋಡುತ್ತಿದ್ದರು.

“ಸರಸಿ, ಅಲ್ಲಿ ನೋಡು.”

“ಏನೂಂದ್ರೆ?”

“ಆ ಗುಬ್ಬಚ್ಚಿ ಮರಿ, ಈ ಮಳೆಯಲ್ಲಿ ಕೂಡ ಇಲ್ಲಿ ಬಂದು ಒದ್ದಾಡುತ್ತಿದೆ. ಮಲ್ಲಿಗೆ ಬಳ್ಳಿಯಲ್ಲಿ ಒಣಗಿದ ಕಡ್ಡಿಯನ್ನು ಕೊಕ್ಕಿನಲ್ಲಿ ಕಚ್ಚಿ ಕೀಳಲು ಯತ್ನಿಸಿದೆ. ಪಾಪ! ಆದರೆ…”

“ಹುಂ”

ಸರಸಿಯ ಮುಖ ಗಂಭೀರವಾಯಿತು. ರಾಮು ಕೂಡ ಒಂದು ನಿಮಿಷ ಮುಂದೆ ಮಾತಾಡಲಿಲ್ಲ.

“ಆದರೆ-ಅದಕ್ಕೆ ಅದರಲ್ಲೊಂದು ಸಂತೋಷವಿದೆ. ಗೂಡಿನಲ್ಲಿರುವ ಮರಿಗೆ ಬೆಚ್ಚಗಿರುವಂತೆ, ಹನಿ ಬೀಳದಂತೆ ಗೂಡು ಭದ್ರಪಡಿಸಬೇಡವೇ?”

“ಹೂಂ …”

“ಎಲ್ಲರೂ ಹಾಗೆಯೇ ಅಲ್ಲವೇ ಸರಸಿ ? ಗೂಡಿನಲ್ಲಿ ಯಾವುದಾದರೂ ನಮ್ಮದೆನ್ನುವ ಮಮತೆಯಿದ್ದರೆ ಏನು ಮಾಡಲೂ ಸಿದ್ದ. ನೋಡು, ನೀನು ಮನೆಯಲ್ಲಿ ಕಾದಿದ್ದೀಯಾ ಅಂತ ನಾನು ಓಡಿಬರಲಿಲ್ಲವೇ?”

ರಾಮು ನಕ್ಕು ಸರಸಿಯ ಕೆನ್ನೆ ನೇವರಿಸಿದ. ಸರಸಿಯ ಮನಸ್ಸು ಗಂಭೀರವಾಗಿತ್ತು.

“ಮರಿ-ಮಗು! ಗುಬ್ಬಚ್ಚಿಯಂತಹುದೇ ಮರಿಗಾಗಿ ಇಷ್ಟು ಮಾಡುವಾಗ, ಮನುಷ್ಯ ಏನು ತಾನೇಮಾಡುವುದಿಲ್ಲ!” ಅವರಿಗೆ ಈಗಲೇ ಹೇಳಿಬಿಡಲೇ-ಬೇಡವೇ? ಆಮೇಲೆ ನನಗೇ ಇನ್ನೂ ಖಂಡಿತವಾಗಿಲ್ಲ; ಆದರೂ ಹೇಗೆತಾನೇ ಹೇಳಲಿ-ಅವರೇನೆನ್ನುವರೋ!”

ಸರಸಿಯ ಮುಖ ಗಂಭೀರವಾಗಿತ್ತು. ರಾಮುವಿನ ನಗೆಗೆ ಅವಳು
ನಗಲಿಲ್ಲ.

“ಯಾಕೆ, ಸರಸಿ?”

ಸರಸಿಗೆ ನಾಚಿಕೆಯಾಗಿ ಕೆನ್ನೆ ರಂಗೇರಿತು.

“ಏನೂ ಇಲ್ಲ”

“ಏನೋ ಯೋಚನೆ ಆ ಪುಟ್ಟ ತಲೇಲಿ, ನಮಗೆ ಹೇಳಬಾರದೋ?”

“ಏನೂ ಇಲ್ಲ ಅಂದ್ರೆ”

ಸರಸಿ ಹೇಗಾದರೂ ಮಾಡಿ ಮಾತು ತಿರುಗಿಸಬೇಕೆಂದು ಆ ಕಡೆ ನೋಡಿದಳು. ಮೂಲೆಯಲ್ಲಿ ಜಿಮ್ಮಿ-ನಾಯಿಮರಿ ಮಲಗಿತ್ತು. ಛಳಿಯಲ್ಲಿ ನಡುಗುತ್ತಿತ್ತು.

“ನೋಡೀಂದ್ರೆ, ಷೀಬಾ ನಾಯಿ ಬರಲೇ ಇಲ್ಲ. ಪಾಪ! ಜಿಮ್ಮಿ ಒಂದೇ ಸಮನಾಗಿ ಒದ್ದಾಡಿತು. ಕಿರಿಚಿಕೊಳ್ಳುತ್ತಿತ್ತು ಆದರೆ ಷೀಬಾ ಕೇಳದಂತೆ ಓಡಿಹೋಯಿತು. ನಿನ್ನೆ ಮಧ್ಯಾಹ್ನ ಹೋದುದು ಇನ್ನೂ ಬಂದಿಲ್ಲ. ಮರಿಯನ್ನು ಬಿಟ್ಟು ಎಲ್ಲಿಗೆ ಹೋಯಿತೋ ಏನೋ!” ಎಂದಳು.

“ಸರಿ, ಷೀಬಾ ಇನ್ನೇನು ಹೋದಹಾಗೆಯೇ, ಮನೆಬಿಟ್ಟು ಕದಲುತ್ತಿರಲಿಲ್ಲ. ಈಗ ಹೀಗೆ ಬರಲಿಲ್ಲವೆಂದರೆ-”

“ಪಾಪ! ಮರಿ ಎಷ್ಟು ಒದ್ದಾಡಿತು ನಿನ್ನೆಯಿಂದ ರಾತ್ರಿಯೆಲ್ಲಾ ಒಂದೇ ಸಮನಾಗಿ ಅಳುತ್ತಿತ್ತು.”

ಸರಸಿ ಮಾತನ್ನೇನೋ ತಿರುಗಿಸಿದ್ದಳು. ಆದರೆ ಮರಿಯಸಂಕಟದಿಂದ ಅವಳಿಗೂ ಮನಸ್ಸು ಕೊಂಚ ನೊಂದಿತು. ಕೊಂಚ ಸಂಕಟ ಗೊಂಡಿತ್ತು. ಎದ್ದು ಹೋಗಿ ಜಿಮ್ಮಿಗೆ ಗೋಣಿಯ ತಾಟನ್ನು ಹೊದಿಸಿ ಬಂದಳು, ಹೊರಗೆ ಮಳೆ ಒಂದೇಸಮನಾಗಿ ಬೀಳುತ್ತಿತ್ತು.

“ಅಮ್ಮ, ಅಮ್ಮ”

ಸರಸಿ ಬೆಚ್ಚಿದಳು. ಕನಸೊಡೆಯಿತು. ಚಂದ್ರು ಜೋರಾಗಿ ಕೂಗುತ್ತಿದ್ದ.

“ಅಮ್ಮ ನಾಯಿಮರಿ ಯಾಕೋ ಸುಮ್ಮನೆ ಒದ್ದಾಡುತ್ತಿದೆ. ಏನುಮಾಡಿದರೂ ಸುಮ್ಮನಾಗುವುದಿಲ್ಲ.”

ಸರಿಸಿ ನೆನಪಿನ ಕಣ್ಣೀರನ್ನೊರಸಿಕೊಂಡು ಚಂದ್ರುವಿನ ಜತೆಗೆ ಹಿತ್ತಲಿನ ಕಡೆಗೆ ಹೋದಳು. ನಾಯಿಮರಿ ಒದ್ದಾಡುತ್ತಿತ್ತು. ವೇದ, ಐದು ವರ್ಷದ ಹುಡುಗಿ ಗಾಬರಿಯಿಂದ ಕಕ್ಕಾವಿಕ್ಕಿಯಾಗಿ ಕಣ್ಣನ್ನು ಅಗಲವಾಗಿ ಬಿಟ್ಟುಕೊಂಡು ನೋಡುತ್ತಾ ನಿಂತಿದ್ದಳು. ನಾಯಿಮರಿಯ ಒದ್ದಾಟ ಕಂಡು ಅವಳಿಗೆ ಏನೋ ಗಾಬರಿ, ಹೆದರಿಕೆ. ಕಣ್ಣೀರಿನಕಟ್ಟೆ ಈಗಲೋ ಆಗಲೋ ಒಡೆಯುವಂತ್ತಿತ್ತು. ಸರಸಿ ಬಂದೊಡನೆಯೇ ಚಂದ್ರುವಿನ ಕೈಹಿಡಿದು ನಿಂತಳು ವೇದ. ಚಂದ್ರು-ವೇದ ಇಬ್ಬರೂ ನಾಯಿಯ ಕಡೆಗೇ ದಿಟ್ಟಿಸುತ್ತಾ ನಿಂತಿದ್ದರು. ಪಾಪ! ನಾಯಿಮರಿಗೆ ಎಷ್ಟು ನೋವಾಗುತ್ತಿದೆಯೋ ಏನೋ ಎಂದು ಅವರಿಬ್ಬರ ಎಳೆಮನಸ್ಸು ತುಡಿಯುತ್ತಿತ್ತು. ಸರಸಿ ನಾಯಿಮರಿಯನ್ನು ಸಮಾಧಾನಗೊಳಿಸಲು ಯತ್ನಿಸಿದಳು. ಆದರೆ ಮರಿ ಒಂದೇ ಸಮನಾಗಿ ಮಿಲವಿಲನೆ ಒದ್ದಾಡಿತು. ಆಗಿಂದ ಹೀಗೆ ಒಂದೇ ಸಮನಾಗಿ ಹೊರಳುತ್ತಿತ್ತು. ಬಾಯಿಂದ ನೊರೆ ಸುರಿಯುತ್ತಿತ್ತು. ಕಣ್ಣು ಮೇಲುಗಣ್ಣಾಗಿತ್ತು. ಸರಸಿ ಏನು ಮಾಡಿದರೂ ಮರಿಯ ಸಂಕಟ ತಗ್ಗಲಿಲ್ಲ. ಅದರ ಒದ್ದಾಟ, ಹೊರಳಾಟ, ಕಿರಲುವುದು ಹೆಚ್ಚಾಯಿತು. ಮಕ್ಕಳಿಬ್ಬರನ್ನು ಒಳಕ್ಕೆ ಹೋಗಿ ಆಡಿಕೊಳ್ಳಿರೆಂದು ಕಳುಹಿಸಿ ಸರಸಿ ಅಲ್ಲಿಯೇ ನಿಂತಳು.

ಮರಿಯ ಒದ್ದಾಟ ತಗ್ಗಲೇ ಇಲ್ಲ. ಒಂದೇ ಸಮನಾಗಿ ಕಿರುಲುತಿತ್ತು. ಅದಕ್ಕೇನು ಮಾಡಬೇಕೋ ಏನೋ ಸರಸಿಗೆ ತಿಳಿಯಲಿಲ್ಲ! ಕತ್ತಿಗೆ ಹಾಕಿದ್ದ ಸರಪಳಿಯನ್ನು ತೆಗೆದುಹಾಕಿದಳು. ಮರಿ ಕೋಣೆಯಲ್ಲೆಲ್ಲ ಹೊರಳಾಡುತ್ತಿತ್ತು. ಈ ಸಮಯದಲ್ಲಿ ಮನೆಯಲ್ಲಿ ಜವಾನರೂ ಯಾರೂ ಇಲ್ಲವಲ್ಲ ಎಂದು ಸರಸಿ ಅಂದುಕೊಂಡಳು. ಅವಳ ಅಣ್ಣನೊಂದಿಗೆ ಜವಾನರಿಬ್ಬರೂ ಪೇಟೆಗೆ ಹೊರಟು ಹೋಗಿದ್ದರು. ಮನೆಯಲ್ಲಿ ಉಳಿದವರೆಂದರೆ ಅವಳು, ಅವಳಗಂಡ ರಾಮು ತನ್ನ ಪ್ರತಿಬಿಂಬವಾಗಿ ಬಿಟ್ಟುಹೋದ ಮಗು ಚಂದ್ರು!

ಕ್ಷಣಕ್ಷಣಕ್ಕೂ ಮರಿಯ ಸ್ಥಿತಿ ಕೆಡುತ್ತಾ ಬಂತು. ಈಗಲೋ ಆಗಲೋ ಅದರ ಅವಸ್ಥೆ ಮುಗಿದು ಹೋಯಿತು ಎಂದು ಸರಸಿಗೆ ಖಚಿತವಾಗಿ ಹೋಯಿತು. ಆದರೆ ಸಾಯುವ ಮರಿಯನ್ನು ಹಾಗೆಯೇ ಬಿಟ್ಟು ಹೋಗುವುದಾದರೂ ಹೇಗೆ? ಅಲ್ಲಿಯೇ ಹಾಗೆಯೇ ನಿಂತಿದ್ದಳು.

ಹೊರಬಾಗಿಲು ಸದ್ದಾಯಿತು. ಸರಸಿ ಆ ಕಡೆ ತಿರುಗಿದಳು, ನಾಯಿ, ಜಿಮ್ಮಿ ಬೆಳಿಗ್ಗೆ ಹೋದುದು ಈಗ ಬಂದಿತ್ತು. ಬಾಗಿಲು ತೆರೆದಿರಲಿಲ್ಲ. ಅದರಿಂದಾಗಿ ಸದ್ದು ಮಾಡುತ್ತಿತ್ತು.

“ಚಂದ್ರು, ಜಿಮ್ಮಿ ಬಂದಿದೆ. ಬಾಗಿಲು ತೆಗೆಯಮ್ಮ, ಜಾಣ” ಎಂದು ಕೂಗಿದಳು ಸರಸಿ.

ಚಂದ್ರು ಬಾಗಿಲು ತೆರೆದ. ಜಿಮ್ಮಿ ಒಳಬರುತ್ತಾ ಹೊರಗೆ ಮತ್ತೊಮ್ಮೆ ನೋಡಿ ಒಳಕ್ಕೆ ಬಂತು.

“ಹೂ, ಹೋಗು, ಹೋಗು” ಎಂದ ಚಂದ್ರು.

“ಏನು ಮಗು?”

“ಜಿಮ್ಮಿಯ ಜತೆಗೆ ಬೇರೆ ಯಾವುದೋ ನಾಯಿ ಬಂದಿದೆ ಅಮ್ಮ, ಬಾಗಿಲಿಂದೊಳಕ್ಕೆ ನುಗ್ಗುತ್ತಿದೆ”

“ಬಂದೆ” ಎಂದು ಸರಸಿ ಬಾಗಿಲ ಬಳಿ ಬಂದಳು.

“ಜಿಮ್ಮಿ, ಒಳಗೆ ಹೋಗು” ಎಂದು ಗದರಿಕೊಂಡಳು, ಜಿಮ್ಮಿ ಬಾಲ ಮುದುರಿಕೊಂಡು ತನ್ನ ಜಾಗದ ಕಡೆಗೆ ಹೊರಟಿತು. ಬಾಗಿಲ ಬಳಿ ಬಂದಿದ್ದ ಗಂಡುನಾಯಿಯನ್ನು ಓಡಿಸಿ ಬಾಗಿಲು ಹಾಕಿಕೊಂಡು ಸರಸಿ ಒಳಕ್ಕೆ ಬಂದಳು. ನಾಯಿಮರಿಯ ಪಕ್ಕದಲ್ಲಿ ಜಿಮ್ಮಿ ನಿಂತಿತ್ತು. ಜಿಮ್ಮಿಯ ಕಣ್ಣಿನಿಂದ ನೀರು ಹರಿಯಿತು. ಮರಿಯ ಒದ್ದಾಟ ಅದೇ ತಾನೇ ನಿಂತಿತ್ತು, ಸರಸಿ ಬರುವ ವೇಳೆಗೆ ಮರಿ ತಣ್ಣಗಾಗಿತ್ತು. ತೆಪ್ಪಗಾಗಿತ್ತು, ಮೂಕವಾಗಿ ನಿಂತು ಕಣ್ಣೀರು ಹನಿಸುತ್ತಿತ್ತು ಜಿಮ್ಮಿ. ಆದರೆ ಒಂದು ಜೀವ ಹೋಯಿತು. ಬಾಳಿನ ವಿಷಚಕ್ರ ಸಾಗಲು ಹಲವಾರು ಜೀವಗಳ ಸಿದ್ಧತೆಯನ್ನು ತನ್ನಲ್ಲಿ ಮಾಡಿಕೊಂಡು ಬಂದಿತ್ತು, ಜಿಮ್ಮಿ. ಸರಸಿ ಗೋಣಿಯ ತಾಟನ್ನೆ ಮರಿಯ ಶವದ ಮೇಲೆ ಸಂಪೂರ್ಣವಾಗಿ ಹೊದಿಸಿದಳು. ಜಿಮ್ಮಿಯ ಕತ್ತಿಗೆ ಸರಪಳಿ ಹಾಕಿ ಕೈ ತೊಳೆದುಕೊಳ್ಳಲು ಒಳಕ್ಕೆ ಬಂದಳು. ಅವಳ ಜೀವಕ್ಕೆ ಇಂಬಾಗಿ ಅವಳ
ವಿಷಚಕ್ರ ಅಳಿದ ಗಂಡ ರಾಮುವಿನ ಪ್ರತೀಕ ಚಂದ್ರು ಆಟದ ಸಾಮಾನಿಟ್ಟು ಕೊಂಡು ವೇದಳ ಜತೆಯಲ್ಲಿ ಅಮ್ಮನಾಟ ಆಡುತ್ತಿದ್ದ! ಸರಸಿಯ ಹೃದಯ ತುಂಬಿ ಬಂತು, ಕಣ್ಣಿನಿಂದ ಪಳಪಳನೆ ಎರಡು ಹನಿ ಉರುಳಿತು ! ಚಂದ್ರು, ವೇದ ತಮ್ಮಂತೆ ತಾವು ಅಮ್ಮನಾಟದಲ್ಲಿ ಮುಳುಗಿದ್ದರು!
*****