ಮೂಲ: ಗಾಯ್ ಡಿ ಮೊಪಾಸಾ
ಗಗನಚುಂಬಿತವಾದ ಬೀಚ್ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿತ್ತು. ಎರಡು ದಿನದ ಹಿಂದಿನ ಮಳೆಯಿಂದಾದ ತಂಪು ಇನ್ನೂ ಆರಿದ್ದಿಲ್ಲ. ಹಣ್ಣಿನ ಭಾರದಿಂದ ಬಾಗಿದ ಟೊಂಗೆಗಳಿಂದ ಕೆಲಕೆಲವು ಹಣ್ಣುಗಳು ಅಲ್ಲಲ್ಲಿ ಉದುರಿ ಬಿದ್ದಿದ್ದವು. ದಿನವೂ ಹೆಣಬೀಳ ದುಡಿದ ಹೋರೆಗಾರರು ಬೇಸತ್ತು ಮನೆಯ ಕಡೆಗೆ ಮುಖವನ್ನು ಹೊರಳಿಸಿದ್ದಾರೆ.
ಇಂಥ ಸಮಯದಲ್ಲಿ ಸೂರ್ಯನು ಬಣ್ಣಗುಂದಿ ಪಶ್ಚಿಮ ಕಡಲಲ್ಲಿ ಮುಳುಗಲು ಹೊರಟಿದ್ದಾನೆ. ಜನರಿಗೆ ಬೇರೆ ದಾರಿ ಯಾವುದಾದರೂ ಇದೆಯೇ? ಇರಬಹುದು. ತೋರಿಸುವವರಾರು! ಎಲ್ಲರೂ ತಂತಮ್ಮ ಬಿಡಾರಗಳಿಗೆ ತೆರಳುವ ಮನಸ್ಸಿನವರು. ದಿನವೂ ಹೊತ್ತಾರೆದ್ದು ಒಂದೆ ಸವನೆ ದುಡಿದು ಬೆವರು ಸುರಿಸಿ, ಬೇಸತ್ತು, ವಿಶ್ರಾಂತಿಯನ್ನು ಪಡೆಯಲು ಆಧಾರವಾದ ಮನೆಗಳಿಗೆ ಯಾವಾಗ ಮುಟ್ಟುವೆವೋ ಎಂಬ ವಿಚಾರದಿಂದ ಕಾಲುಗಳನ್ನು ಮುಂದೆ ಚಲ್ಲುತ್ತಿದ್ದಾರೆ.
ಇಳಿಬಿದ್ದ ಮೊಗ ; ಬಾಗಿದ ದೇಹ; ಒಂಟೆಯ ಹೆಜ್ಜೆ; ನೀಳವಾದ ತೋಳುಗಳು. ಇವುಗಳಿಂದ ಒಡೆದು ಕಾಣುವ ವಯಸ್ಸು ಅರುವತ್ತಕ್ಕೆ ಮಿಕ್ಕಿರಬಹುದೆಂದು ತೋರುವದು; ಆದರೂ ಆದ ವಯಸ್ಸು ಇನ್ನೂ ನಾಲ್ವತ್ತು. ಇಂಥ ಮನುಷ್ಯನೊಬ್ಬನು ಹೊರಬಾಗಿಲನ್ನು ದೂಡಿದನು. ಅದಾರೋ ಒಳಬಂದರೆಂಬ ಸದ್ದಾಯ್ತು ಅಲ್ಲಿಯೇ ಹೊರಬದಿಗೆ ಕಟ್ಟಿ ಹಾಕಿದ ನಾಯಿಯು ಬೊಗುಳಲಾರಂಭಿಸಿತು; ಸುರುವು ಮಾಡಿದ್ದೇ ತಡ-ಒಮ್ಮೆಲೆ ತೆಪ್ಪಗಾಗಿ, ಚಿನ್ನಾಟದಿಂದ ಬಾಲವನ್ನು ಅಲುಗಾಡಿಸುತ್ತ ಮೈಮೇಲೆ ಬೀಳಲು ಹವಣಿಸತೊಡಗಿತು. ಒಡೆಯನ ಗುರುತು ಹತ್ತಿ ತೆಂದೋ ಏನೋ – ‘ಏ ಫೈನಾಟ್’ ಎಂಬ ಹೆಸರು ಕಿವಿಗೆ ಬಿದ್ದೊಡನೆ ಅದು ಕಟ್ಟಿದ ಸ್ಥಳದಲ್ಲಿಯೆ ಸುಮ್ಮನೆ ಬಿದ್ದುಕೊಂಡಿತು.
ಮನೆಯಲ್ಲೊಬ್ಬ ಹೆಣ್ಣು ಮಗಳು; ಒಂಟೆಲುಬಿನ ದೇಹ, ಉದ್ದವಾದ ಗೋಣು, ಉಟ್ಟ ತೊಟ್ಟ ಉಡಿಗೆ ತೊಡಿಗೆಗಳು ಮೈಯಲ್ಲಿ ನೆಟ್ಟಂತೆ ಕಾಣುವದರಿಂದ ತೆಳ್ಳನ್ನ ದೇಹವು ಬಹು ಸ್ಪಷ್ಟವಾಗಿ ಕಾಣುತ್ತಿತ್ತು. ಹಳ್ಳಿಗಾಡು ಹೆಣ್ಣು ಮಗಳಂತೆ ಕೂದಲುಗಳು ತಲೆತುಂಬ ಕೆದರಿದ್ದುವು. ಬಣ್ಣಗೆಟ್ಟಿದ್ದರಿಂದ ಮುಖವು ಸಪ್ಪೆಯಾಗಿದ್ದಿತು. ಯಾರಾದರೂ ಅವಳ
ಆಗ ಕಂಡಿದ್ದರೆ ಅಂದಗೇಡಿ ಹೆಣ್ಣು ಮಗಳೆಂದು ಸಹಜವಾಗಿ ಹೇಳ ಬಹುದಾಗಿದ್ದಿತು.
‘ಏನು-ಹೇಗಿದೆ?’ ಎಂದು ಅವನು ಅವಸರವಸರದಿಂದ ಹೆಂಡತಿಯನ್ನು ಹತ್ತಿರ ಕರೆದು ಕೇಳಿದನು.
‘ರಾತ್ರಿ ಕಳೆಯಲಾರ; ವೈದ್ಯರೂ ಮುಚ್ಚು ಮರೆಯಿಲ್ಲದೆ ಹೇಳಿದ್ದಾರೆ. ಲಕ್ಷಣಗಳೂ ಅವಲಕ್ಷಣಗಳಾಗಿ ಬಿಟ್ಟಿವೆ’ ಎಂದು ಅವಳು ವಿಷಣ್ಣ ಮುಖಭಾವದಿಂದ ಹೇಳಿದಳು.
ಇಬ್ಬರೂ ಒಳಹೊಕ್ಕು ಅಡುಗೆ ಮನೆಯೊಳಗಿಂದ ಹಾಯ್ದು ಮಲಗುವ ಕೋಣೆಗೆ ಬಂದರು. ಇಳಿಜಾರಾದ ನೆಲ; ಕತ್ತಲುಗವಿ, ಮಿಣುಕು ಮಿಣುಕಾಗಿ ಉರಿಯುವ ಚಿಕ್ಕ ದೀವಿಗೆಯೊಂದು ಕಿಡಿಕಿಯಲ್ಲಿಟ್ಟಿದೆ. ಗಾಳಿ ಒಳಗೆ ಬರದಂತೆ ಕಿಡಿಕಿಯ ಹೊರಬದಿಗೆ ಖಾಕಿಯರಿವೆಯನ್ನು ಬಡಿದಿದ್ದಾರೆ. ಎಷ್ಟು ವರ್ಷದ ಹಳೆಯ ಮನೆಯೋ ಏನೋ-ತೊಲೆ ಜಂತೆಗಳೆಲ್ಲವೂ ಇಲ್ಲಣದಿಂದ ಹೊದಿಸಿವೆ. ಹೊಗೆಯಿಂದ ಕಪ್ಪಾಗಿ ಡಾಂಬರಿನಿಂದ ಸಾರಿಸಿದಂತಿವೆ. ಹಗಲೆ ಇರುಳಾಗಿದ್ದುದರಿಂದ ಇಲಿಗಳ ಕಾಟ ಕಿರುಚಾಟ ಹಗಲು ಹಾಡೇ ಹೆಚ್ಚಾಗಿಬಿಟ್ಟಿದೆ. ಕೋಣೆಯು ನೆಲ್ಲಕ್ಕಿ ಯನ್ನು ಕಾಣದ್ದರಿಂದ ಗೊಟಿಗುಣಿಗಳಿಗೇನು ಕಡಿಮೆಯಿರಲಿಲ್ಲ. ತಗ್ಗು, ದಿನ್ನೆಯಾದ ನೆಲ-ನಡೆಯುವದೆಂದರೆ ಎಷ್ಟು ಎಚ್ಚರಪಟ್ಟರೂ ಎಡವಿ ಬೀಳಲು ತಡವಾಗುತ್ತಿದ್ದಿಲ್ಲ. ಇಂಥದರಲ್ಲಿಯೇ ಒಂದು ಮುರುಕು ಹೊರಸಿನ ಮೇಲೆ ಹರಹರಕಾದ ಹಾಸಿಗೆ ಹಾಸಿದೆ. ಹಾಸಿಗೆಯಿಂದ ‘ಘೊರ್ ಘೊರ್’ ಎಂಬ ಧ್ವನಿಯು ಮಾತ್ರ ಕೇಳಬರುತ್ತಿದೆ. ಆ ಮೆತ್ತಗಿನ ಧ್ವನಿ ಉಸಿರು ಉಳಿದೊಬ್ಬ ಮುದುಕನದು-ಆ ಹೆಣ್ಣು ಮಗಳ ತಂದೆ. ಮೇಲುಸಿರಿಟ್ಟ ಶಬ್ದವು ಇನ್ನೂ ಇಹಲೋಕದ ಯಾತ್ರೆಯು ತೀರಿಲ್ಲೆಂದು ಸಾಕ್ಷಿ ಕೊಡುತ್ತಿದೆ.
ಗಂಡಹೆಂಡರಿಬ್ಬರೂ ಹಾಸಿಗೆ ಹತ್ತಿರ ಹೋದರು. ಕುತೂಹಲ ಮುಖಭಾವದಿಂದ ನೋಡಿದರು-ಬೇನೆಯಿಂದ ಬಳಲುವ ಆ ಮುದುಕನನ್ನು.
‘ಈಗ ಎಲ್ಲ ತೀರಿಬಿಟ್ಟಿದೆ; ಆಶೆ ಹಿಡಿಯುವಂತಿಲ್ಲ ರಾತ್ರಿ ಪಾರಾಗುವದು ಅಸಾಧ್ಯ’ ಎಂದು ಅಳಿಯನು ತೀರ ಮೆಲುದನಿಯಿಂದ ನುಡಿದನು.
‘ಮಧಾಹ್ನ ಹನ್ನೆರಡು ಗಂಟೆಯಿಂದ ಈ ಸಪ್ಪಳವು ಸುರುವಾಗಿದೆ’ ಎಂದು ಹೆಂಡತಿಯು ಮಾತನಾಡಿದಳು.
ಇಬ್ಬರೂ ಪಿಟ್ಟೆಂದು ಮಾತನಾಡಲಿಲ್ಲ. ತೆಪ್ಪಗೆ ನಿಂತು ಕಣ್ಣು ಅರಳಿಸಿ ನೋಡುತ್ತಿದ್ದರು ಆ ಮುದುಕನ ಕಣ್ಣುಗಳು ಮುಚ್ಚಿದ್ದವು. ಮಣ್ಣಿನ ಹಾಗೆ ಮುಖವು ಕಪ್ಪಿಟ್ಟಿದ್ದಿತು. ಯಾವ ಅರಿವೂ ಇರಲಿಲ್ಲ. ಎಲುಬಿನ ಹಂದರದ ದೇಹವು ಒಣಕಲ ಕಟ್ಟಿಗೆಯಂತೆ ಬಿದ್ದಿದೆ. ಬಾಯಿ ಮಾತ್ರ ಅರ್ಧ ತೆರೆದಿದ್ದಿತು. ಎಂತಲೆ ‘ಘೋರ್ ಘೋರ್’ ಎಂಬ ಶಬ್ದವು ಎಡೆಬಿಡದೆ ಹೊರಡುತ್ತಿತ್ತು. ಎದೆಯ ಮೇಲಿನ ಕಂಬಳಿ ಮಾತ್ರ ಉಸಿರಾಟದ ಏರಿಳಿತಕ್ಕೆ ಸ್ವಲ್ಪ ಕೆಳಗೆ ಮೇಲಾಗುತ್ತಿತ್ತು.
‘ಅವನು ಹೋಗುವವನೇ. ಋಣವು ತೀರಿದಂತೆ. ಸಾವಿಗೆ ಯಾರೇನು ಮಾಡುವುದು? ಈಗ ಎಂಥ ಸಮಯವಿದೆಯೆಂಬುದು ನಿನಗೆ ಗೊತ್ತೆ? ಸಸಿಗಳನ್ನು ಕಿತ್ತು ಹಚ್ಚುವ ಹದವಾದ ಹಂಗಾಮು, ಹಂಗಾಮು ಸಾಧಿಸಿಕೊಳ್ಳದಿದ್ದರೆ ನಾವು ವರುಷದ ಗಂಜಿಗೇ ಎರವಾಗ ಬೇಕಾದೀತು. ಈ ಹೊತ್ತಿಗೆ ಶಪಿಸಿದರೆ ಬರುವುದಾದರೂ ಏನು ನಮಗೆ?’ ಎಂದು ಕೀಳುದನಿಯಲ್ಲಿ ಗಂಡನೆಂದನು.
ಗಂಡನ ಈ ಸ್ವಾರ್‍ಥಪೂರ್‍ಣವಾದ ವಿಚಾರದಿಂದ ಹೆಂಡತಿಗೆ ಬಹು ಕೆಡುಕೆನಿಸಿತು. ಕಣ್ತುಂಬ ನೀರು ತಂದು ತುಸು ವೇಳೆ ವಿಚಾರಮಾಡಿ ಎಂದಳು :
‘ಹೌದು, ನನಗೂ ಗೊತ್ತಿದೆ. ಅವನ ದಿನ ತುಂಬಿವೆ. ಶನಿವಾರ ದೊಳಗಾಗಿ ಮಣ್ಣು ಕೊಡುವ ವಿಧಿಯು ಮುಗಿಯಲಾರದು. ನಿನಗೆ ನಾಳೆ ಹೇಗೂ ಉಳಿದಿನವಿದೆ. ಸಸಿಗಳನ್ನು ಹಚ್ಚಬಹುದು.’
ಗಂಡನು ಅವಳ ಸೂಚನೆಯನ್ನು ಮನ್ನಿಸಿ ಎಂದನು:
‘ಅಹುದು; ಆದರೆ ಅಂತ್ಯವಿಧಿಗಾಗಿ ಆಪ್ತೇಷ್ಟರಿಗೆ ಆಮಂತ್ರಣ ಕೊಟ್ಟು ಬರಲು ನಾನು ಅತ್ತಿತ್ತ ಹೋಗಬೇಕಾಗುವದಲ್ಲವೇ? ಸುತ್ತು ಮುತ್ತಲಿನವರಿಗೆಲ್ಲ ಈ ಸುದ್ದಿಯನ್ನು ಮುಟ್ಟಿಸಿಬರಲು ೪-೫ ತಾಸಾದರೂ ಬೇಡವೇ?’
ಹೆಂಡತಿಯು ಮತ್ತೆ ವಿಚಾರಮಗ್ನಳಾಗಿ ಮಾತನಾಡಿದಳು :
‘ಅಷ್ಟೇಕೆ ? ಮೂರು ತಾಸು ಸಾಕಾಗಲಿಕ್ಕಿಲ್ಲವೇ? ಇಂದಿನ ರಾತ್ರಿಯೇ ಈ ಪೂರ್ವಭಾಗವನ್ನು ಮುಗಿಸಬಹುದು. ತಂದೆಯು ಸಾಯಂಕಾಲದೊಳಗಾಗಿ ತೀರಬಹುದು- ಅದೇಕೆ ತೀರಿಯೇ ಹೋದನೆಂದು ಹೇಳಿಬಿಟ್ಟರೂ ಸರಿ.’
ಅವಳ ಗಂಡನು ಕೆಲಹೊತ್ತು ಗೊಂದಲದಲ್ಲಿ ಬಿದ್ದೆದ್ದು, ಸೂಚನೆಯ ಅನುಕೂಲ- ಪ್ರತಿಕೂಲತೆಗಳನ್ನು ಮನಸಿನಲ್ಲಿಯೇ ತೂಗಿ ನೋಡಿದನು. ಹೋಗುವವರ ಹಾದಿ ಬೇರೆ, ಇದ್ದವರದು ಬೇರೆ ಎಂದೆಂದು ‘ಹೂ’ ಆಗಲೆಂದನು ಹೊರಹೊರಟವನು ಗಡಿಬಿಡಿಯಿಂದ ತಿರುಗಿ ಬಂದು ಹೆಂಡತಿಯನ್ನು ವಿಚಾರಿಸಿದನು.
‘ಈಗ ನಿನಗೇನೂ ಕೆಲಸವಿರುವದಿಲ್ಲ. ಹಣ್ಣಾದ ಕೆಲವು ಸೇಬುಗಳನ್ನು ಕೆಡವು; ೪ಂ-೫ಂ ಉಂಡಿಗಳನ್ನು ಕಟ್ಟು, ಅಂತ್ಯವಿಧಿಯನ್ನು ನೆರವೇರಿಸಲು ಬರುವ ಅತಿಥಿಗಳಿಗಾಗಿ ಬೇಕು. ಕೆಲಸವಾದೊಡನೆ ಸಿಹಿ ಬಾಯಿ ಮಾಡಲು ಇಂಥದೊಂದು ನಡುವೆ ಆವಶ್ಯವಿದೆ. ದನದ ಮನೆಯ ಮೂಲೆಯಲ್ಲಿ ಒಣಗಿದ ಸೌದೆ ಬೇಕಾದಷ್ಟಿದೆ; ಅದನ್ನು ಪ್ರಯೋಗಿಸು ಆ ದೊಡ್ಡ ಒಲೆಯನ್ನು ಹೊತ್ತಿಸು.’
ಇಷ್ಟು ಹೇಳಿ, ಅಡುಗೆಯ ಮನೆಗೆ ಬಂದು ಕಪಾಟಿನ ಬಾಗಿಲನ್ನು ತೆರೆದನು. ಎರಡು ಪೌಂಡಿನ ದೊಡ್ಡ ರೊಟ್ಟಿಯನ್ನು ತೆಗೆದು ಕೊಯ್ತದಿಂದ ಸಣ್ಣ ಸಣ್ಣ ಚೂರುಗಳನ್ನು ಮಾಡಿದನು. ಬೆಣ್ಣೆ ತೊಡೆದು, ಉಪ್ಪು ಹಚ್ಚಿ ಹೊಟ್ಟೆ ತುಂಬ ತಿಂದು ತೇಗಿದನು. ಚೂರು ಮಾಡುತ್ತಿರುವಾಗ ಮೇಜಿನ ಮೇಲೆ ಬಿದ್ದ ತುಣುಕುಗಳೆಲ್ಲವನ್ನು ವ್ಯರ್‍ಥಕಳೆಯಬಾರದೆಂದು ಒಟ್ಟುಗೂಡಿಸಿ ಮುಕ್ಕಿದನು. ಮೇಲೊಂದು ಲೋಟ ನೀರನ್ನು ಕುಡಿದು ಕೆಲಸಕ್ಕಾಗಿ ಹಾದಿಯನ್ನು ಹಿಡಿದನು. ಸಿಳ್ಳನ್ನು ಹಾಕಿ ನಾಯಿಯನ್ನು ಕರೆದನು. ಚಿನ್ನಾಟದಿಂದ ಬಾಲವನ್ನು ಅಲ್ಲಾಡಿಸುತ್ತ, ಕುಂಯಿಗುಡುತ್ತ ಅದು ಕಟ್ಟಿದಲ್ಲಿಯೇ ನಿಂತಿತು. ಅದರೊಡನೆ ಆಟಕ್ಕೆ ನಿಲ್ಲದೆ ಮುಂದೆ ಸಾಗಿಯೇ ಬಿಟ್ಟನು. ಕಾಣುವವರೆಗೆ ಮನೆಯ ಕಡೆಗಿರುವ ದೃಷ್ಟಿಯನ್ನು ಅವನು ಬದಲಾಯಿಸಿರಲಿಲ್ಲೆಂದು ಆತನ ನಡಿಗೆಯಿಂದ ಹೇಳಬಹುದಾಗಿದ್ದಿತು.
ಆ ಹೆಣ್ಣು ಮಗಳು ಕೆಲಸಕ್ಕೆ ಮೊದಲು ಮಾಡಿದಳು. ಮುಚ್ಚಿಟ್ಟಿದ್ದ ಹಿಟ್ಟಿನ ಬುಟ್ಟಿಯನ್ನು ಹೊರತಂದು ದೊಡ್ಡದೊಂದು ಪರಾತದಲ್ಲಿ ಹಿಟ್ಟನ್ನು ಸುರುವಿಕೊಂಡಳು. ನೀರು ಹಾಕಿ ಕಲಿಸಿದಳು. ಹದವಾಗುವ ವರೆಗೆ ನಾದಿಯೇ ನಾದಿದಳು. ಆಮೇಲೆ ಕಾಲುಚಂಡಿನಂಥ ದೊಡ್ಡ ಮುದ್ದೆಯನ್ನೊಂದು ಮಾಡಿ ಮೇಜಿನ ಒಂದು ತುದಿಗಿರಿಸಿ, ಹಣ್ಣು ಗಳನ್ನುತರಲು ಗಿಡಗಳ ಕಡೆಗೆ ಹೊರಟಳು. ಕೋಲಿನಿಂದ ಹಣ್ಣುಗಳನ್ನು ಕೆಡವುವುದನ್ನು ಬಿಟ್ಟು, ಸ್ಟೂಲಿನ ಸಹಾಯದಿಂದ ಗಿಡವನ್ನು ಮೆಲ್ಲನೇರಿದಳು. ಜಾಗರೂಕತೆಯಿಂದ ಹಣ್ಣಾದವುಗಳನ್ನಷ್ಟೇ ಆಯ್ದು ಕೊಂಡು ಹೆಣಿಕೆಯ ಚೀಲದಲ್ಲಿ ತುಂಬಿದಳು.
ದಾರಿಯ ಆ ಬದಿಯಿಂದ ಅದಾರೋ ತನ್ನನ್ನು ಕೂಗಿದರೆಂದು ಅವಳು ಆ ಕಡೆಗೆ ಮುಖವನ್ನು ತಿರುಗಿಸಿದಳು. ತನ್ನ ನೆರೆಹೊರೆಯವನೂ, ಗ್ರಾಮದ ಮುಖ್ಯಾಧಿಕಾರಿಯೂ ಆದ ಪ್ಯಾವೆಟ್‌ನನ್ನು ಕಂಡಳು. ಆತನೂ ಹಂಗಾಮಿಗನುಸರಿಸಿ ತನ್ನ ಹೊಲಗಳಿಗೆ ಗೊಬ್ಬರ ಕಾಣಿಸ ಬೇಕೆಂದು ಉದ್ದಿಗೆಯ ಒಂದು ಬದಿಗೆ ಕಾಲುಚಾಚಿ ಕುಳಿತುಕೊಂಡು ಬಂಡಿಯನ್ನು ಹೊಡೆಯುತ್ತ ಸಾಗಿದ್ದನು.
‘ಹೊಲದ ಕಡೆಗೆ ಹೊರಟಿದ್ದೀರಾ?’
‘ಹೌದು, ನಿನ್ನ ತಂದೆಗೆ ಹೇಗಿದೆ?’
‘ಈಗಾಗಲೇ ಅವನು ಸತ್ತಂತೆ. ಅಂತ್ಯ ಸಂಸ್ಕಾರವು ಶನಿವಾರ ಏಳು ಗಂಟೆಗೆ ಗೊತ್ತಾಗಿದೆ’ ಎಂದು ಗಟ್ಟಿಯಾಗಿ ಅವನಿಗೆ ಕೇಳಿಸುವಂತೆ ಹೇಳಿದಳು.
‘ನಡೆಯಲಿ, ಇನ್ನೇನು ಮಾಡುವುದು. ನಿಮ್ಮನ್ನಾದರೂ ದೇವರು ರಕ್ಷಿಸಲಿ’ ಎಂದು ‘ಹಲೇ’ ಯೆನ್ನುತ್ತ ಬಂಡಿಯನ್ನು ಗ್ರಾಮಾಧಿಕಾರಿಯು ಮುಂದಕ್ಕೆ ಸಾಗಿಸಿದನು.
‘ಆಗಲಿ, ನಿಮ್ಮನ್ನೂ ದೇವರು ಕಾಯಲಿ’ ಎಂದು ಅವಳು ಮರು ಮಾತನಾಡಿದಳು.
ಆ ಮೇಲೆ ಹಣ್ಣಿನ ಚೀಲವನ್ನು ಹೊತ್ತುಕೊಂಡು ಮನೆಯೊಳಕ್ಕೆ ಬಂದಳು. ಕರುಳು ಬಲು ಕೆಟ್ಟುದು ನೋಡಿ ಅವಳಿಗೆ ತಂದೆಯದೇ ಧ್ಯಾನ. ಅವನಿದ್ದಲ್ಲಿಗೆ ಹೋಗುವದಕ್ಕೆ ಬಂದಳು. ದೂರಿಂದಲೇ ಆ ಸಪ್ಪಳವು ಕಿವಿಗೆ ಬಿದ್ದಿತು. ಅಲ್ಲಿಂದಲೇ ತಿರುಗಿಬಿಟ್ಟಳು-ಇನ್ನೂ ಬದುಕಿದ್ದಾನೆಯೆಂದಂದುಕೊಂಡು ಉಂಡಿ ಕಟ್ಟುವ ಕೆಲಸಕ್ಕೆ ತೊಡಗಿಬಿಟ್ಟಳು.
ಹಿಟ್ಟಿನ ಉಳ್ಳಿಯಲ್ಲಿ ಹಣ್ಣನ್ನು ಹಾಕಿ ಮೇಜಿನ ಇನ್ನೊಂದು ಬದಿಗಿರಿಸಿದಳು. ಹನ್ನೆರಡು ಹಣ್ಣುಗಳ ನಾಲ್ಕು ಸಾಲು ಮಾಡಿ ನೀಟಾಗಿರಿಸಿ ರಾತ್ರಿಯ ಅಡಿಗೆಗಾಗಿ ತೆರಳಿದಳು. ಕಬ್ಬಿಣ ಪಾತ್ರೆಯಲ್ಲಿ ಬಟಾಟಿಗಳನ್ನು ಹಾಕಿ ಒಲೆಯ ಮೇಲೆ ಕುದಿಯಲಿಕ್ಕಿಟ್ಟಳು. ನಾಡದಿನ ವ್ಯವಸ್ಥೆಗಾಗಿ ಅವಳು ವಿಚಾರಮಾಡುತ್ತ ಕುಳಿತಿರುವಷ್ಟರಲ್ಲಿ ಗಂಡನು ಮನೆಗೆ ಬಂದನು. ಹೊಸ್ತಿಲದಲ್ಲಿ ಕಾಲಿಟ್ಟವನೇ ‘ಸತ್ತಿರುವನೇ’ ಎಂದು ದುಡುಕಿನಿಂದ ಹೆಂಡತಿಯನ್ನು ಕೇಳಿದನು.
‘ಇಲ್ಲ; ಇನ್ನೂ ಇಲ್ಲ. ನಮ್ಮಪ್ಪನ ಜೀವವು ಟುಕುಟುಕು ಅಂದರೂ ನಾಲ್ಕು ಗಳಿಗೆ ಹೆಚ್ಚು ಬಾಳುವ ಹಾಗಿದೆ ’ ಎಂದಳು.
ಇಬ್ಬರೂ ಕೂಡಿಯೇ ಮುದುಕನನ್ನು ನೋಡಲು ಮತ್ತೆ ಹೋದರು. ಆದರೆ ಮೊದಲಿನ ಸ್ಥಿತಿಯಲ್ಲಿ ಏನೂ ಬದಲಾವಣೆಯಾಗಿರಲಿಲ್ಲ. ಕ್ಷಣಸೂತ್ರವು ಹೊಯ್ದಾಡುತ್ತಿರುವಂತೆ ಉಸಿರಾಡುವದು ಎಡೆ ಬಿಡದೆ ನಡೆದಿತ್ತು. ಸೂರ್ಯ-ಚಂದ್ರರು ಸಮನಾಗಿ ಸಾಗಿದ್ದರು. ಚಿಕೋಟನು ಮಾವನನ್ನು ನೋಡಿ ‘ದೊಡ್ಡದಾಗುವ ದೀಪದಂತೆ ಕಡೆ ಯುಸಿರು ಫಕ್ಕನೆ ಹೊರಬೀಳುವದೆಂದೋ-ಏನೋ’ ಎಂದು ನಿಟ್ಟುಸಿರಿಟ್ಟನು.
ರಾತ್ರಿ ಹೆಚ್ಚಾದ್ದರಿಂದ ಇಬ್ಬರೂ ಊಟಕ್ಕೆ ಕುಳಿತರು. ಪಿಟ್ಟೆಂದು ಒಬ್ಬರೂ ಮಾತಾಡಲಿಲ್ಲ. ಬೆಣ್ಣೆ-ಬಕ್ಕರಿಯಿಂದ ಊಟವನ್ನು ತೀರಿಸಿದರು. ಪಾತ್ರೆಗಳನ್ನು ಗಲಬರಿಸಿ ಗೊತ್ತು ಮಾಡಿದ ಸ್ಥಳದಲ್ಲಿರಿಸಿದರು. ಮನಸ್ಸಿನ ಶಾಂತತೆ ಕದಡಿದ್ದರಿಂದ ಮಲಗುವ ಮೊದಲು ಮಗುದೊಮ್ಮೆ ಮುದುಕನನ್ನು ನೋಡಲೇಬೇಕೆಂದು ಕೋಣೆಯ ಕಡೆಗೆ ಸಾವಕಾಶವಾಗಿ ಅವರಿಬ್ಬರೂ ಸಾಗಿದರು.
ಫೆಮಿಯು ಹೊಗೆಯನ್ನು ಕಾರುತ್ತಿರುವ ಚಿಮಣಿಯೊಂದನ್ನು ತಂದೆಯ ಮುಖದ ಮುಂದೆ ನಿಚ್ಚಳಾಗಿ ಕಾಣಿಸಲೆಂದು ಹಿಡಿದಳು. ಟುಕು ಟುಕುವೆನ್ನುವ ಜೀವದುಸಿರೊಂದನ್ನು ಗುರುತಿಸದೆ ಹೋದರೆ ಸತ್ತವ ನೆಂದೇ ಭಾವಿಸಲು ಯಾವ ಸಂಶಯವೂ ಬರುವಂತಿರಲಿಲ್ಲ.
ಅದೇ ಕೋಣೆಯ ಮತ್ತೊಂದು ಮೂಲೆಗೆ ಚಿಕೋಟನ ಹಾಸಿಗೆ ಹಾಸಿತ್ತು. ಏನೂ ಮಾತಾಡದೆ ಗಪ್ಪು ಚಿಪ್ಪಾಗಿ, ದೀಪವಾರಿಸಿ ತೆಪ್ಪಗೆ ಮಲಗಿಕೊಂಡರು. ಕೂಡಲೇ ಗಂಡಹೆಂಡರಿಬ್ಬರ ಘೋರಗುಡುವ ಹೆಚ್ಚಿನ ಸಪ್ಪಳದಲ್ಲಿ ಮೆತ್ತಗೆ ಕೇಳಬರುವ ಮುದುಕನ ಸಪ್ಪಳವು ಎಲ್ಲಿಯೋ ಅಡಗಿ ಮಾಯವಾಗಿತ್ತು. ಇಲಿಗಳ ಕಿರುಚಾಟವೂ ಮಿತಿಮೀರಿ ಸಾಗಿಯೇ ಇತ್ತು.
* * *
ಒಂದೇ ನಿದ್ದೆ ಯಲ್ಲಿ ಚುಮುಚುಮು ನಸುಕಾಯಿತು. ಗಂಡನು ಎದ್ದನು. ಮಾವನ ಹರಣವು ಹಾಗೆಯೇ ಸ್ತಬ್ಧವಾದುದನ್ನು ತಿಳಿದು ಕೊಂಡು, ಮರಣದ ಜೀನತನಕ್ಕೆ ಬೇಸರಗೊಂಡು, ಹೆಂಡತಿಯನ್ನು ಅಲುಗಾಡಿಸಿ ಎಚ್ಚರಿಸಿದನು.
‘ಫೆಮಿ, ಇನ್ನೂ ತುಂಬಿ ಬಂದಿಲ್ಲ-ನಿಮ್ಮಪ್ಪನದು. ಏನು ಹೀಗಾದರೆ-ನಿನ್ನೆ ನಾವಾರಿಗೂ ಹೇಳಿಬರಬಾರದಾಗಿತ್ತು’ ಎಂದು ಮೂದಲಿಸುವ ದನಿಯಿಂದ ಕೇಳಿದನು.
‘ಇಂದಂತೂ ಪಾರಾಗುವುದು ಎಲ್ಲಿಯ ಮಾತೋ, ಹೆದರುವ ಕಾರಣವಿಲ್ಲ. ನಾಳೆ ಅಂತ್ಯವಿಧಿಯಾದರೂ ಗ್ರಾಮಾಧಿಕಾರಿಯು ನಮಗೆ ತೊಂದರೆಪಡಿಸಲಾರನು. ಆ ರೆನಾಲ್ಡ ಮುದುಕನು ತೀರಿದಾಗ ಈಗಿನಂತೆ ನಟಿಯ ಹಂಗಾಮಿದ್ದರೂ ಅವನೇ ಅಪ್ಪಣೆ ಕೊಟ್ಟಿದ್ದನು ’ ಎಂದು ಶಾಂತರೀತಿಯಿಂದ ಗುಣಗುಟ್ಟಿದಳು.
ಇದನ್ನು ಕೇಳಿ ಕಾಯದೆಯ ಕಾಟವಿಲ್ಲೆಂದು- ‘ಆಗಲಿ’ ಎಂದು ಅವನು ಹೊಲಕ್ಕೆ ಹೊರಟುಹೋದನು. ಫೆಮಿಯು ಮನೆಗೆಲಸಗಳನ್ನು ತೀರಿಸಿ, ಇನ್ನುಳಿದ ಬೇರೆ ಚೂರುಚಾರು ಕೆಲಸಗಳನ್ನೂ ಮಾಡಿದಳು. ಸೂರ್ಯನು ನಡುನೆತ್ತಿಯವರೆಗೇರಿದರೂ ಯಮನ ಕಟಾಕ್ಷ ಬೀಳಲಿಲ್ಲ. ಕೆಲಸಕ್ಕೆ ಬಂದ ಕೂಲಿಗಳೆಲ್ಲರೂ ಸಾಯಲಾರದ ಮುದುಕನನ್ನು ಕಾಣುವ ಕುತೂಹಲದಿಂದ ಯಜಮಾನರ ಅಪ್ಪಣೆ ಪಡೆದುಕೊಂಡು ಒಳಬಂದರು. ಉಳಿದಿರುವದಾದರೂ ಏನು?-ಪಾಪ, ಇಂದಿಲ್ಲ ನಾಳೆಯಾದರೂ ಹೋಗುವವನೇ ಎಂದುಕೊಳ್ಳುತ್ತ ಕಡೆಯ ದರ್ಶನಲಾಭ ಪಡೆದು, ಕೂಲೀ ಆಳುಗಳೂ ತಿರುಗಿದರು. ಹೊಲದ ಹೋರೆಯನ್ನು ಮುಗಿಯಿಸಿ ದೀಪ ಹಚ್ಚುವ ಹೊತ್ತಿಗೆ ಚಿಕೋಟನು ಹೆಂಡತಿಯೊಂದಿಗೆ ಮನೆಯನ್ನು ಸೇರಿದನು.
‘ಈಗಾದರೂ ಮಾಡುವದೇನು ಹೇಳು, ಫೆಮಿ’ ಎಂದು ಕಕ್ಕಾ ವಿಕ್ಕಿಯಾಗಿ ಗಂಡನು ವಿಚಾರಿಸಿದನು.
‘ಅಸಾಧ್ಯವಾದ ಮಾತಿಗೆ ಯಾರೂ ಏನೂ ಮಾಡಲಾರರು’ ಎಂದು ಎನ್ನುತ್ತ ಇಬ್ಬರೂ ಗ್ರಾಮಾಧಿಕಾರಿಯ ಮನೆಗೆ ಸಾಗಿದರು. ವಸ್ತು ಸ್ಥಿತಿಯನ್ನು ನಿವೇದಿಸಿಕೊಂಡರು ನಿಶ್ಚಯವಾಗಿಯೇ ಅವನಿಷ್ಟು ತಡೆಯಲಾರನೆಂದು ಅವನಿಂದ ಅಪ್ಪಣೆ ಪಡೆದುಕೊಂಡಿದ್ದರು. ದಯವಿಟ್ಟು ಆಚೆಯ ನಾಡದು ಕೆಲಸವನ್ನು ತೀರಿಸಲು ಅಪ್ಪಣೆ ಕೊಡಬೇಕೆಂದು ಗ್ರಾಮಾಧಿಕಾರಿಗೆ ದೈನಾಸಬಟ್ಟು ಬೇಡಿಕೊಂಡರು. ಪರೋಪಕಾರಿ ಯಾದ ಗ್ರಾಮಾಧಿಕಾರಿಯು ಅವರ ಮಾತಿಗೊಪ್ಪಿ ಹಾಗೆಯೇ ಆಗಲೆಂದು ಅಪ್ಪಣೆಯನ್ನಿತ್ತನು. ಮನಸ್ಸಿನ ದುಗುಡವು ಕಳೆದು-ಭಾರವು ಕಡಿಮೆಯಾಗಿ ಇಬ್ಬರೂ ಮನೆಗೆ ಬಂದರು. ಹಗುರಾದ ಮನಸ್ಸಾದ್ದರಿಂದ ಅಂದಿನ ರಾತ್ರಿ ಗಾಢವಾದ ನಿದ್ರೆ ಮಾಡಿದರು. ಬೆಳಗಾಗುತ್ತಲೇ ನೋಡುತ್ತಾರೆ ‘ಯಥಾ ಪೂರ್ವ ಮಕಲ್ಪಯತ್’ ಎಂದು.
* * *
ಚಿಕೋಟ-ಫೆಮಿಯರಿಬ್ಬರೂ ಗೊಂದಲಗೆಟ್ಟರು. ತಲೆಯ ಕಡೆ ಗೊಬ್ಬರು, ಕಾಲ್ದೆಸೆಗೊಬ್ಬರು ನಿಂತು ವಿಸ್ಮಯದೃಷ್ಟಿಯಿಂದ ಮುದುಕನನ್ನು ನೋಡಿಯೇ ನೋಡಿದರು. ಮುದುಕನು ತಮ್ಮನ್ನು ಮೋಸ ಗೊಳಿಸಬೇಕೆಂದು ಹಂಚಿಕೆಹಾಕಿ ಈ ಸೋಗಿನಿಂದ ಮಲಗಿರಬೇಕೆಂದು ಅವರು ಕಲ್ಪಿಸಿದರು. ಏನೇ ಇದ್ದರೂ ಈ ಸ್ಥಿತಿಯಿಂದ ಪಾರಾಗಲಾರ, ಕೈ ಬಿಟ್ಟು ಹೋಗುವವನೇ! ಎಂಬ ಕನಿಕರವು ಅವರ ಹೃದಯವನ್ನು ಕರಗಿಸದೆ ಬಿಟ್ಟಿರಲಾರದು.
‘ಮುಂದೆ ಏನು ಮಾಡೋಣ, ಫೆಮಿ’ ಚಿಕೋಟನು ಸೊಟ್ಟ ಮೊರೆಯಿಂದ ಕೇಳಿದನು.
ಮನೋವೇದನೆಯನ್ನು ಹತ್ತಿಕ್ಕಿ ಹೆಂಡತಿಯೆಂದಳು : ಬಲು ಕಷ್ಟಕ್ಕೀಡಾಗಬೇಕಾಯಿತು. ಉಪಾಯವೇ ಇಲ್ಲ.’
‘ಆಮಂತ್ರಿತರಾದ ಅತಿಥಿಗಳು ತಪ್ಪದೆ ಸರಿಯಾಗಿ ವೇಳೆಗೆ ಬರ ತಕ್ಕವರು. ಅವರಿಗೆ ಹೀಗಾದುದನ್ನು ಹೇಳುವದು ಬಲು ಬಿರಿಯಾದ ಕೆಲಸ. ಆಯ್ತು-ಬರಲಿ-ಬಂದಮೇಲೆ ಎಲ್ಲರಿಗೂ ಕೈಮುಗಿದು ಬಿನ್ನವಿಸಿ ಕೊಂಡರಾಯಿತು’ ಎಂದು ಗಂಡಹೆಂಡರಿಬ್ಬರೂ ಗೊತ್ತು ಮಾಡಿಕೊಂಡರು.
ಏಳಕ್ಕೆ ಹತ್ತು ನಿಮಿಷವಿತ್ತು. ಜನರು ಉದ್ದವಾದ ಕರಿಯಂಗಿಗಳನ್ನು ಧರಿಸಿಕೊಂಡು ಬರಲಾರಂಭಿಸಿದರು. ವೇಷದಿಂದಲೇ ದುಃಖದ ಆವರಣವೂ ಮನಸಿನ ಮೇಲೆ ಮೂಡಿದ್ದಿತೋ ಏನೋ ಯಾರು ಬಲ್ಲರು!
ಅತಿಥಿಗಳು ಬಂದಬಂದಂತೆ ದುಃಖವನ್ನೂ, ವ್ಯಸನವನ್ನೂ ಮನಸ್ಸಿನಲ್ಲಿ ಹತ್ತಿಕ್ಕಿಕೊಂಡು ಅವರನ್ನು ಸ್ವಾಗತಿಸಿ ಬರಮಾಡಿಕೊಂಡರು. ಭಯಭೀತಿಯಿಂದ ಕೈ ಕಾಲುಗೆಟ್ಟವರಷ್ಟು ಸೋತಿದ್ದರು. ತಮ್ಮ ಭವಿಷ್ಯವು ಹೀಗೆ ಸುಳ್ಳಾಯಿತೆಂದು ಕನಸು-ಮನಸಿನಲ್ಲಿಯೂ ಕಲ್ಪಿಸಿರಲಿಲ್ಲೆಂದು ಹೇಳಹತ್ತಿದರು. ಫೆಮಿಯ ಕಣ್ಣುಗಳಲ್ಲಿ ನೀರು ದಳದಳನೆ ಉದುರುತ್ತಿದ್ದವು. ಎಲ್ಲ ಕಥೆಯನ್ನು ವಿವರಿಸಿ ತೋಡಿಕೊಂಡರು. ಪ್ರತಿ
ಯೊಬ್ಬರಿಗೂ ಬೇಡಿಕೊಂಡರು. ವಸ್ತುಸ್ಥಿತಿಯನ್ನು ಚಾಚೂ ತಪ್ಪದೆ
ಹೇಳಿದ್ದರಿಂದ ಅತಿಥಿಗಳಿಗಾರಿಗೂ ಅನ್ಯಥಾ ಭಾವಿಸಲು ಆಸ್ಪದವು ಸಿಕ್ಕದೆ ಹೋಯಿತು. ಇಂಥ ಉದಾಹರಣೆಯೊಂದು ಸಂಭವಿಸಿತೆಂದು ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಂಡರು.
‘ಟುಕುಟುಕುವೆನ್ನುತ್ತಿದ್ದ ಜೀವವು ಈ ಹೊತ್ತಿನ ವರೆಗೂ ಬದುಕಿರುವದೆಂದರೆ ತೀರ ಅತ್ಯಾಶ್ಚರ್ಯಕರವಾದ ಸಂಗತಿ’ ಎಂದು ಎಲ್ಲರ ಬಾಯಿಂದ ಉದ್ಗಾರವು ಹೊರಟಿತು.
ತಾವೊಂದು ವಿಧಿಯನ್ನು ನೆರವೇರಿಸಲು ಬಂದಿರುವ ಉದ್ದೇಶವು ನಿರರ್ಥಕವಾಯಿತೆಂಬ ಅಸಮಾಧಾನವು ಅತಿಥಿಗಳಿಗೆ ಕೊರೆಯಹತ್ತಿತು. ತಾವಿಂಥ ಹೊತ್ತಿಗಾದುದು ನಾಚಿಕೆಗೇಡುತನವೆಂದೂ ಆಡಿಕೊಂಡರು. ಇನ್ನೇತಕ್ಕಿಲ್ಲಿರುವುದು-ಹೊರಟು ಹೋಗೋಣವೆಂದು ಕೆಲವರು ಸಿಟ್ಟಿನ ದನಿಯಲ್ಲಿ ಒಬ್ಬರಿಗೊಬ್ಬರು ಮಾತನಾಡತೊಡಗಿದರು. ಇಷ್ಟೆಲ್ಲ ಅನರ್‍ಥಕ್ಕೆ ತಾವೇ ಕಾರಣವೆಂದು ಹೇಳಿಕೊಂಡು ತೀರ ನಿಸ್ಸಹಾಯಕರಾದವರ ಭಾವದಿಂದ ಗಂಡಹೆಂಡರಿಬ್ಬರೂ ಕೈಮುಗಿದು :-
‘ಆದುದಾಯ್ತು. ಕಾಲಕ್ಕೆ ಯಾರೇನು ಮಾಡುವದು? ನಾವೆಲ್ಲರೂ ಅಸಮರ್‍ಥರೇ ಅಲ್ಲವೆ?-ಮುಂದಾಗುವದು ತಿಳಿಯುವ ಬಗೆ ಮಾನವನಿಗೆ ಸಾಧ್ಯವೇ? ಆ ವಿಧಿಗೆಂದೇ ನಾವು ಸೇಬು ಹಣ್ಣಿನ ಉಂಡಿಗಳನ್ನು ತಯಾರಿಸಿದ್ದೇವೆ. ಅವುಗಳನ್ನು ತಾವು ಸ್ವೀಕರಿಸಬೇಕು’ ಎಂದು ಹಸನ್ಮುಖದಿಂದ ಬೇಡಿಕೊಂಡರು.
ಈ ಶಬ್ದವು ಕಿವಿಗೆ ಬಿದ್ದೊಡನೆ ಅತಿಥಿಗಳ ಮುಖಗಳು ವಿಕಸಿತವಾದುವು. ಬಂದ ತಪ್ಪಿಗೆ ದಂಡವು ಲಾಭದಾಯಕವಾಯಿತೆಂದು ಮೊದಲು ಬಂದವರು, ತಡಮಾಡಿ ಬಂದವರು-ಎಲ್ಲರೂ ಉಂಡಿಯ ನಿರೀಕ್ಷಣದಲ್ಲಿಯೇ ಮಗ್ನರಾದಂತೆ ಕಾಣುತ್ತಿದ್ದರು. ಹೆಂಗಸರು ಮಾತ್ರ ಮುದುಕನ ಹತ್ತಿರಕ್ಕೆ ಹೋಗಿ ಕಣ್ಣು ಅರಳಿಸಿ ನೋಡಿದರು. ಕೈಯಿಂದ ಸಿಲುಬೆಯ ಚಿನ್ಹವನ್ನು ಮಾಡಿ ಕೊನೆಯ ಪ್ರಾರ್ಥನೆಯನ್ನು ಹೇಳಿ ಹೊರಟು ಹೋದರು. ಗಂಡಸರು ಹೊರಗೆ ನಿಂತುಕೊಂಡೇ ಕಿಡಿಕಿಯ ಅರಿವಿಯನ್ನು ಸರಿಸಿ ಇಣಿಕಿ ನೋಡಿದರು. ಚಿಕೋಟನ ಅರ್ಧಾಂಗಿಯು ಸಾಯದ ತಂದೆಯ ಕಥೆಯನ್ನು ಉದ್ವೇಗ-ಆಶ್ಚರ್‍ಯ ದಿಂದ ಒಂದೇಸವನೆ ಹೇಳುತ್ತ ನಿಂತಿದ್ದಳು.
ಅಲ್ಲಿ ಬಂದ ಮಹನೀಯರೆಲ್ಲರೂ ಈ ದೃಶ್ಯವನ್ನು ಕಣ್ಣಾರೆ ಕಂಡ ಮೇಲೆ ತಮ್ಮ ತಮ್ಮ ವಿಚಾರಲಹರಿಗಳನ್ನು ಬದಲಾಯಿಸಿಕೊಂಡರು.
* * *
ಇಷ್ಟು ಜನಸಮುದಾಯಕ್ಕೆ ಸಂಕೋಚವಿಲ್ಲದೆ ಅಡುಗೆಯ ಮನೆಯು ಸಾಲದೆಂದು ಮೇಜುಗಳನ್ನು ಅಂಗಳದಲ್ಲಿ ಸಾಲಾಗಿ ಹಾಕಿದರು. ಎರಡು ದೊಡ್ಡ ಪರಾತಗಳಲ್ಲಿ ನಾಲ್ಕು ಡಝನ್ ಉಂಡಿಗಳನ್ನು ತಂದಿಡಲಾಗಿತ್ತು. ಎಲ್ಲರ ಬಾಯಲ್ಲಿ ನೀರು ಒಡೆದಿತ್ತು. ಇನ್ನು ಸುಮ್ಮನ ತಡಮಾಡುವದು ಅಯೋಗ್ಯವೆಂದು ಒಬ್ಬೊಬ್ಬರೊಂದೊಂದು ಉಂಡಿಯನ್ನು ಕೈಚಾಚಿ ತೆಗೆದುಕೊಂಡರು. ಪರಾತದಲ್ಲಿ ನಾಲ್ಕು ಮಿಕ್ಕಿದವು. ತುಂಬಿದ ಬಾಯಿಂದ ಚಿಕೋಟನು ಅಸ್ಪಷ್ಟ ವಿಚಾರದಿಂದ ‘ಆಕಯ ತಂದೆಯು ಇವುಗಳನ್ನು ನೋಡಿದ್ದರೆ ಪ್ರಾಣ ಕಳೆದುಕೊಳ್ಳುತ್ತಿದ್ದನು. ಅವನು ಈ ಉಂಡಿಗಳ ಮೇಲೆ ಬಲು ಜೀವ’ ಎಂದು ಎಲ್ಲರಿಗೂ ಕೇಳುವ ದನಿಯಲ್ಲಿ ಕೂಗಿದನು.
‘ಇರಬಹುದು. ಈಗೇನು ಅವನು ಬರುವಹಾಗಿಲ್ಲವಲ್ಲ! ಅವನು ಜೀವಿಸಿರುವಾಗಲೆ ಅವನ ಜೀವಪ್ರಸಾದವು ಪ್ರತಿಯೊಬ್ಬರಿಗೂ ಮುಟ್ಟಿರುವದಲ್ಲವೆ?’ ಎಂದು ಅವರಲ್ಲೊಬ್ಬನೆಂದನು.
ಎಲ್ಲರೂ ಈ ವಾಕ್ಯವನ್ನು ಕೇಳಿ ತಣ್ಣಗಾದರು. ಅವರವರ ಭಾಗ ಅವರವರಿಗೆ ಎಂದಂದುಕೊಂಡು ಉಂಡಿಯನ್ನು ನುಂಗಹತ್ತಿದರು.
ಚಿಕೋಟನ ಹೆಂಡತಿಯು ವ್ಯರ್ಥ ಖರ್ಚಿಗಾಗಿ ಬಲು ಮಿಡುಕಿದಳು. ಪ್ರಸಂಗಕ್ಕೆ ಹಿಂಜರಿಯುವದುಚಿತವಲ್ಲೆಂದು ಧೈರ್ಯವನು ತಂದುಕೊಂಡಳು. ಬಾಟಲಿಗಳ ಮೇಲೆ ಬಾಟಲಿ ತೆರವಾದುವು. ಪೇಲೆಗಳು ತುಂಬಿದವೆನ್ನುವಷ್ಟರಲ್ಲಿ ಬರಿದಾಗುತ್ತಿದ್ದವು. ಆರು ತಿಂಗಳಿನ ಗಂಜಿಯು ನಿಮಿಷಮಾತ್ರದಲ್ಲಿ ಚಟ್ಟನೆ ಹಾರಿಹೋಯಿತು. ಜನರ ಉತ್ಸಾಹಿತ ಮುಖಗಳು ನಗಲಾರಂಭಿಸಿದವು. ಸಂತೃಪ್ತರಾದವರಂತೆ ದೇಹಸ್ಮೃತಿಯನ್ನು ಮರೆತರು. ಮಾತಿನಮಳೆಯನ್ನು ವಿಲಾಸಮಂದಿರದ ಸದಸ್ಯರಂತೆ ಸುರಿಸಿದರು. ಬಂದವರೆಲ್ಲರೂ ಚಿಕೋಟ-ಫೆಮಿಯರಿಬ್ಬರನ್ನೂ ಅತಿಥಿಸೇವೆಗಾಗಿ ಮನವಾರೆ ಕೊಂಡಾಡಿದರು.
ಇತ್ತ ಇದೆಲ್ಲ ತಮಾಷೆ ನಡೆದಾಗ, ಮುದುಕನ ಕಾಲುದೆಸೆಯಲ್ಲಿ ಹಣ್ಣಾದ ಮುದುಕಿಯೊಬ್ಬಳು ವಿಷಣ್ಣ ಭಾವದಿಂದ ಮುದುಕನನ್ನು ಏಕ ದೃಷ್ಟಿಯಿಂದ ನೋಡುತ್ತ ನಿಂತಿದ್ದಳು. ಇವನಂತೆಯೇ ತನ್ನ ಹಣೆಯ ಬರಹವು ಬೇಗನೆ ಒದಗಬಹುದೆಂಬ ಯೋಚನೆಯಲ್ಲಿ ಅವಳು ಮೈಮರೆತು ಬಿಟ್ಟಿದ್ದಳು. ಫಕ್ಕನೆ ಎಚ್ಚೆತ್ತವಳಾಗಿ ಬಿರಿಬಿರಿ ಕಣ್ಣು ಬಿಡುತ್ತ ಮುದುಕನನ್ನು ಮುಟ್ಟಿಯೇ ನೋಡಿದಳು. ಆ ಕ್ಷಣದವರೆಗೆ ತಡೆದಿದ್ದ ಹರಣವು ಹಾರಿಹೋದುದನ್ನು ಕಂಡು ಕಿಡಿಕಿಯೊಳಗೆ ಮುಖವನ್ನು ಹಾಕಿ ತೇಕುತ್ತ ‘ಅವನು ಹೋ… ದ್… ನು… ಹೋ… ದ… ನು…’ ಎಂದು ಭಯ ಚಕಿತಳಾಗಿ ಒಂದೇ ಸ್ವರದಲ್ಲಿ ಗಟ್ಟಿಯಾಗಿ ಚೀರಿಕೊಂಡಳು.
ಎಲ್ಲರೂ ಕಿವಿಯಾರೆ ಕೇಳಿದರು. ಎಲ್ಲವೂ ಶಾಂತವಾಯಿತು ಯಾವದೊಂದರ ಪರಿವೆಯಿಲ್ಲದೆ ಸಾಗಿರುವ ಗಲಾಟೆಯು ಅಲ್ಲಿಂದ ಇದ್ದ ಹಾಗೆ ನಿಂತುಬಿಟ್ಟಿತು. ಹೆಂಗಸರು ಮಾತ್ರ ನಿಜವೇ ಎಂಬದನ್ನು ನಿರೀಕ್ಷಿಸಲು ಅತ್ತ ಕಡೆಗೆ ಓಡಿದರು.
ಅಹುದು, ನಿಜ, ಅವನು ಸತ್ತಿದ್ದಾನೆ. ಸಾವಿನ ಸೂಚನೆಯು ಗಂಟಲದಿಂದ ಹಾರಿತ್ತು. ಇನ್ನೂ ಬಾಯಲ್ಲಿ ಉಂಡಿಯನ್ನು ನುರಿಸಿ ತಿನ್ನುವ ಕೆಲವರು ಒಬ್ಬರನ್ನೊಬ್ಬರು ಹುಳುಹುಳು ನೋಡುತ್ತ ಕಣ್ಣು ಮುಚ್ಚಿಕೊಂಡು ನೀಚ ಮುದುಕ ಈ ಹೊತ್ತಿಗೇ ತೀರಿಕೊಂಡ ನೆಂದಂದುಕೊಳ್ಳಹತ್ತಿದರು.
ಗಂಡ-ಹೆಂಡರಿಬ್ಬರೂ ಒಂದೆಸವನೆ ಹರಿದು ಬರುವ ಕಂಬನಿಗಳನ್ನು ಒರಿಸಿಕೊಂಡು ಶಾಂತರಾದರು. ಅವರು ಕೆಲಹೊತ್ತು ನಿಶ್ಚಲವಾಗಿ ನಿಂತು ಬಿಟ್ಟರು.
ಆತನು ಹೆಚ್ಚು ಹೊತ್ತು ಬದುಕಲಾರನೆಂದು ನಮಗೆ ಗೊತ್ತಿತ್ತು. ನಿನ್ನೆಯೇ ಅವನು ತನ್ನ ಮನಸನ್ನು ಕೊಂದುಕೊಂಡು ಬಿಟ್ಟಿದ್ದರೆ ಈ ಪ್ರಸಂಗವೊದಗದೆ-ಎಲ್ಲವೂ ಎಷ್ಟು ಸುಸೂತ್ರವಾಗಬಹುದಾಗಿದ್ದಿತು! ಈ ತೊಂದರೆ ಎಲ್ಲಾಗುತ್ತಿತ್ತೆಂದು ಎಲ್ಲರೂ ಕೈ ಮಾಡಿ ಮಾತಾಡ ಹತ್ತಿದರು.
ಆದರೇನು, ಒಮ್ಮೆ ಎಲ್ಲವೂ ಮುಗಿಯಿತು. ಅಂತ್ಯವಿಧಿಯು ಇನ್ನು ಸೋಮವಾರ, ಇಷ್ಟೆ ಮತ್ತೇನು ಹೇಳುವದು? ಇನ್ನೊಂದು ಬಾರಿ ಮಾತ್ರ ತಿನ್ನಲು ಉಂಡಿಗಳು ಬೇಕಾದುವು.
ಅತಿಥಿಗಳು ತಮ್ಮ ಹಾದಿಯನ್ನು ಹಿಡಿದರು. ಅವರು ಅದೇ ಮಾತನ್ನು ತಿರುಗೂ-ಮುರುಗೂ ಆಡುತ್ತ ಹೊರಬಿದ್ದರು. ತಾವು ಯಾವುದನ್ನು ಮಾಡಬೇಕೆಂದು ಬಂದಿದ್ದರೋ ಅದನ್ನು ಕಂಡುದಕ್ಕಾಗಿ ಆನಂದಭರಿತರಾದರು. ಚಿಕೋಟನನ್ನು ಇನ್ನೂ ಒಮ್ಮೆ ಕೊಂಡಾಡುವ ಯೋಗವಿರುವದೆಂದು ನಗೆಯಾಡುತ್ತ ಅವರು ಮರೆಯಾದರು.
ಗಂಡಹೆಂಡರಿಬ್ಬರೇ ಉಳಿದ ಮೇಲೆ ಅತ್ಯಂತ ಖಿನ್ನತೆಯಿಂದ ಫೆಮಿಯು ಬಡಬಡಿಸಹತ್ತಿದಳು.
‘ಮತ್ತೆ ನಾಲ್ವತ್ತೆಂಟು ಉಂಡಿಗಳನ್ನು ಕುದಿಸಬೇಕು. ನಿನ್ನೆಯೇ ಅವನು ಮನಸುಮಾಡಿ ಸತ್ತಿದ್ದರೆ ಈ ….’
‘ಇದೊಮ್ಮೆ ನೀನು ಮಾಡಿಬಿಟ್ಟಿಯೆಂದರೆ ತೀರಿತು. ಮಗುದೊಮ್ಮೆ ಮಾಡುವ ಹೊತ್ತು ಬರುವದೆಂದೇಕೆ ಕಲ್ಪಿಸುವಿ? ಇನ್ನೂ ಸಂಶಯವೇ?….’ ಎಂದು ಅವಳನ್ನು ಸಮಾಧಾನಪಡಿಸುವದಕ್ಕಾಗಿ ಗಂಡನು ಆಧ್ಯಾತ್ಮಿಕ ವಿಚಾರಗಳ ಮಳೆಗರೆದನು.
ಇನ್ನೂ ಏನನ್ನೂ ಹೇಳಬೇಕೆಂದಿರುವಷ್ಟರಲ್ಲಿಯೇ ಗಂಟಲ ಸಿರಗಳುಬ್ಬಿದಂತಾಗಿ ಅವನಿಗೆ ಮಾತಾಡಲು ಬಾಯಿ ಬರಲಿಲ್ಲ. ಅವನು ಮಿಕಿ ಮಿಕಿ ಹೆಂಡತಿಯ ಮುಖವನ್ನು ನೋಡುತ್ತ ನಿಂತುಬಿಟ್ಟನು.
*****


















